ಇಳಿಸಂಜೆಯ ಜೀವಗಳು

 


ಕೆಲವೊಮ್ಮೆ ಎಲ್ಲಾ ಇದ್ದು ಯಾವುದೋ ಒಂದು ಪ್ರಮುಖವಾದದ್ದೇ  ಇರದಿದ್ದರೆ ಬಾಕಿ ಎಲ್ಲವೂ ನಗಣ್ಯವಾಗಿ ಬಿಡುತ್ತದೆ.


ಎಲ್ಲವನ್ನೂ ಹಣ ಕೊಟ್ಟೇ ದಿನಸಿ ಅಂಗಡಿಯಲ್ಲಿ ಕೊಳ್ಳಲು ಸಾಧ್ಯವಿಲ್ಲ. 


ಅಂತವುಗಳಲ್ಲಿ ಒಂದು ನೆಮ್ಮದಿ! 


ರಾಮಣ್ಣ ಮತ್ತು ಸೀತಕ್ಕ  ಪ್ರೀತಿಸಿ ಮದುವೆ ಆದವರಲ್ಲ. . 


ಆದರೆ ಚಿಕ್ಕಂದಿನಿಂದಲೂ ಪರಸ್ಪರ ನೋಡಿಕೊಂಡೇ ಬೆಳೆದವರು.


ರಾಮಣ್ಣನಿಗೆ ಸೀತಕ್ಕ ಹೇಳಿ ಮಾಡಿಸಿದ ಜೋಡಿ.


ಪತಿಯೇ ಪರದೈವ ಎಂದು ನಂಬಿ ಹಾಗೆಯೇ  ಬಾಳಿ ಬದುಕಿದವರು.


ಅಂತಹ ಅವರಿಬ್ಬರಿಗೆ ಹುಟ್ಟಿದ ಒಬ್ಬನೇ ಮಗ ಕೇಶವ. 


ಅವನಿಗಾಗಿ ತಮ್ಮ ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿ ಅವನಿಗೆ ಬೇಕಾದಷ್ಟು ಖರ್ಚು ಮಾಡಿ ಅವನನ್ನು ಓದಿಸಿದರು. 


ಅವನು ಹಾಸ್ಟೆಲ್ ನಲ್ಲಿ ಇದ್ದುಕೊಂಡೇ ಓದುತ್ತಿದ್ದ. 


ತಿಂಗಳು ತಿಂಗಳು ಇಷ್ಟು ದುಡ್ಡು ಬೇಕು ಅಷ್ಟು ದುಡ್ಡು ಬೇಕು ಎಂದು ತಪ್ಪದೇ ಕೇಳುತ್ತಿದ್ದ. 


ನಮ್ಮಂತೆ ನಮ್ಮ ಮಗ ಆಗುವುದು ಬೇಡ ಎಂದು ಇದ್ದ ಬದ್ದ ಒಡವೆಗಳನ್ನು ಅಡವಿಟ್ಟು, ಸಾಲ ಸೂಲ ಮಾಡಿ ಹೇಗೋ ಅವನನ್ನು ಇಂಜಿನಿಯರ್ ಓದಿಸಿದರು. 


ಮನೆಯಲ್ಲಿ ಸೀತಕ್ಕ ಹರಿದ ಸೀತೆ ಉಟ್ಟುಕೊಂಡರು ಕೂಡ ಸಮಯ ಸಮಯಕ್ಕೆ ಮಗನಿಗೆ ಹೊಸ ಬಟ್ಟೆ ಕೊಡಿಸಲು ರಾಮಣ್ಣನಿಗೆ ನೆನಪು ಹುಟ್ಟಿಸುವುದನ್ನು ಎಂದೂ ಮರೆಯಲಿಲ್ಲ. 


ಎಷ್ಟೋ ರಾತ್ರಿ ಖಾಲಿ ಹೊಟ್ಟೆಗೆ ಕೇವಲ ಗಂಜಿ ಕುಡಿದೇ ಇಬ್ಬರೂ ಮಲಗಿದ್ದರು.


ಒಬ್ಬರ ಮುಖವನ್ನು ಮತ್ತೊಬ್ಬರು ಕಂಡರೆ ಸಾಕು.. ಅವರ ಹೊಟ್ಟೆ ತುಂಬಿ ಹೋಗುತ್ತಿತ್ತು. ಆಮೇಲೆ ಇಬ್ಬರ ಬಾಯಿಯಿಂದಲೂ ಬರುತ್ತಿದ್ದ ಮಾತು ಒಂದೇ.. "ಇವತ್ತು ಯಾಕೋ ಹಸಿವಿಲ್ಲ ಕಣೆ  ಸೀತಾ..", " ನನಗೂ ಯಾಕೋ ಇವತ್ತು ಹಸಿವಿಯೇ ಇಲ್ಲ ಕಣ್ರಿ"! 


ಕೊನೆಗೂ ಮಗನ ಇಂಜಿನಿಯರಿಂಗ್ ಮುಗಿದು ಅವನಿಗೆ ಕೆಲಸ ಕೂಡ ಸಿಕ್ಕಿತು. 


ಆದರೆ ಬೆಂಗಳೂರು ಸೇರಿದ ಮಗ.. ಊರಿಗೆ ಬರುತ್ತಲೇ ಇರಲಿಲ್ಲ!


ಕೇವಲ ಅಲ್ಲಿಂದ ಹಣ ಕಳುಹಿಸುತ್ತಿದ್ದ ಅಷ್ಟೇ. 


ಯಾವ ರಜೆ ಇದ್ದರೂ ಇದ್ದರೂ ಕೇಶವನಿಗೆ ತನ್ನ ಊರಿನ ಹಳ್ಳಿಯ ದಾರಿ ನೆನಪಾಗಲಿಲ್ಲ. 


ದೀಪಾವಳಿ ಹಬ್ಬ ಬಂದಾಗ ರಾಮಣ್ಣ ಅವನಿಗೆ ಟೆಲಿಫೋನ್ ಕಾಲ್ ಮಾಡಿ... ಒಮ್ಮೆ ಬಂದು ಹೋಗು ಕೇಶವ.. ನಿನ್ನನ್ನು ನೋಡಿ ಎಷ್ಟು ಸಮಯವಾಗಿದೆ... ಸೀತಾಳಿಗೂ ನಿನ್ನನ್ನು ನೋಡಬೇಕು ಎಂದು ಆಸೆ.. ಒಮ್ಮೆ ಬಂದು ಹೋಗಪ್ಪ.. ಎಂದು ಅಂಗಲಾಚಿಯೇ ಕೇಳಿದ್ದರು. 


ನಾನು ಇಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗೆಲ್ಲ ಬಂದು ಹೋಗಲು ಸಾಧ್ಯವಿಲ್ಲ, ನಿಮಗೇನು ಅಂತ ಕಷ್ಟ.. ತಿಂಗಳು ತಿಂಗಳು ಹಣ ಕಳುಹಿಸುತ್ತಿದ್ದೇನೆ ಅಲ್ವಾ..ಅದೂ ಅಲ್ಲದೇ ನೀವು ನನಗಾಗಿ ಮಾಡಿದ ಸಾಲ ಕೂಡ ಇದಾಗಲೇ ನಾನೇ ದುಡಿದು ತೀರಿಸಿದ್ದೇನೆ. ಅಂತಹದ್ದು ಏನು ಇದೆ ಎಂದು ನಾನು ಆ ಹಳ್ಳಿಗೆ ಬರ್ಲಿ.. ಅಲ್ಲೊಂದು ಸರಿಯಾಗಿ ಪೋನ್ ನೆಟ್‌ವರ್ಕ್ ಕೂಡ ಇಲ್ಲ . ..ಇನ್ನು ಮುಂದೆ ಊರಿಗೆ ಬಾ ಎಂದು ಕರೆಯುವುದಾರೆ ದಯವಿಟ್ಟು ನನ್ನಗೆ ಪೋನ್ ಕಾಲ್ ಮಾಡಬೇಡಿ... ಎಂದು ಹೇಳಿ  ಕಾಲ್ ಮಾಡಿ ಬಿಟ್ಟಿದ್ದ ಕೇಶವ. 


ರಾಮಕ್ಕ ಸೀತಕ್ಕ ದಂಪತಿಗೆ ಹಣ ಬೇಕಾಗಿರಲಿಲ್ಲ.. ಅವರಿಗೆ ಅವರ ಮಗ ಬೇಕಿತ್ತು. ಆದರೆ ಮಗನಿಗೆ ಕೇವಲ ನಗರ ಜೀವನ ಬೇಕಿತ್ತು.


ಕೇಶವ ಊರಿಗೆ ಬರಲಿಲ್ಲ ಅಂತ ಏನಿಲ್ಲ.. ಬಹಳ ವರ್ಷಗಳ ನಂತರ ಒಮ್ಮೆ ಬಂದಿದ್ದ.


ಅವನು ಬರುತ್ತಾನೆ ಎಂದು ಗೊತ್ತಾದ ಸೀತಕ್ಕ ಅವನಿಗಿಷ್ಟದ  ಚಕ್ಕುಲಿ.. ಕಡಲೆ ಬೇಳೆ ಪಾಯಸ, ಒತ್ತು ಶ್ಯಾವಿಗೆ ಕಾಯಿ ಹಾಲು ಎಲ್ಲಾ ಮಾಡಿಟ್ಟಿದ್ದರು. 


ಆದರೆ ಮನೆಗೆ ಬಂದ ಕೇಶವ ಹೇಳಿದ್ದ... ನಾನು ಒಂದು ಹುಡುಗೀನಾ ಇಷ್ಟ ಪಟ್ಟಿದ್ದೇನೆ,ಮುಂದೆ ನಿಂತು ಮದುವೆ ಮಾಡಿಕೊಡಬೇಕು ನೀವು! 


ಅವರ ಒಪ್ಪಿಗೆಯನ್ನು ಕೂಡ ಕೇಶವ ಕೇಳಿರಲಿಲ್ಲ....


ಆ ದಿನ ಸೀತಕ್ಕ ಅಷ್ಟು ಇಷ್ಟ ಪಟ್ಟು ಮಗನಿಗಾಗಿ ಮಾಡಿದ ಕಡಲೆಬೇಳೆ ಪಾಯಸ ಸ್ವತಃ ಸೀತಕ್ಕನಿಗೆಯೇ ಕಹಿ ಕಹಿ ಅನಿಸಿತು..!


ಹುಡುಗಿ ಯಾವ ಜಾತಿ ಯಾವ ಊರು ಎಂದು ಕೂಡ ಕೇಶವ ಹೇಳಲಿಲ್ಲ... ರಾಮಣ್ಣ ದಂಪತಿಗಳೂ ಕೂಡ ಬಾಯಿ ಬಿಟ್ಟು ಕೇಳಲಿಲ್ಲ.. ಅವನ ಇಷ್ಟದ ಸಲುವಾಗಿ ವರನ ತಂದೆ ತಾಯಿಯಾಗಿ ಮದುವೆ ಮಂಟಪದಲ್ಲಿ ಕುಳಿತು.. ಮಗನ ಮದುವೆ ಮಾಡಿ ಕೊಟ್ಟಿದ್ದರು. ಕೇಶವನಿಗೂ ಅಷ್ಟೇ ಬೇಕಿದ್ದದ್ದು.. ಮದುವೆ ಆಗಲು ತನ್ನ ಕಡೆಯಿಂದ ಒಬ್ಬರು ತಂದೆ ತಾಯಿ ಅಷ್ಟೇ. 


ಮದುವೆ ಆದ ಮರುದಿನವೇ ಕೇಶವ ತನ್ನ ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಹೋಗಿಯೇ ಬಿಟ್ಟ. 


ರಾಮಣ್ಣನೇ ಸೀತಕ್ಕನಿಗೆ ಸಮಾಧಾನ ಹೇಳಿದರು ... ಅಷ್ಟು ಕಷ್ಟ ಪಟ್ಟು ಇಂಜಿನಿಯರಿಂಗ್ ಮಾಡಿಸಿದ್ದೇವೆ.. ತುಂಬಾ ಕೆಲಸ ಇರುತ್ತೆ ಅಲ್ವಾ... ಅವನ ಬದುಕು ಅವನು ಕಟ್ಟಿ ಕೊಳ್ಳಲಿ ಸೀತಾ... ನಿನಗೆ ನಾನು... ನನಗೆ ನೀನು ಹೇಗೋ ಇದ್ದೇವೆ.. ಬದುಕು ನಡೆಯುತ್ತೆ ಬಿಡು. 


ಕೇಶವನಿಗೆ ಒಂದಲ್ಲ.. ಎರಡು ಮಕ್ಕಳು ಆಯಿತು.. 


ಆದರೂ ಅವನು ತನ್ನ ಮಕ್ಕಳೊಂದಿಗೆ ಮಕ್ಕಳ ಅಜ್ಜ ಅಜ್ಜಿ ಬಳಿ ಬರಲಿಲ್ಲ. 


ರಾಮಣ್ಣ ತನ್ನ ಮೊಮ್ಮಕ್ಕಳನ್ನು ನೋಡಲು ಆಸೆ ಆಗುತ್ತಿತ್ತು.. ಆವಾಗಲೆಲ್ಲ ಸೀತಕ್ಕನೇ ರಾಮಣ್ಣನಿಗೆ ಸಮಾಧಾನ ಮಾಡುತ್ತಿದ್ದರು.. ಮಕ್ಕಳು ...ಮೊಮ್ಮಕ್ಕಳು ಎಂದು ಬೇಜಾರು ಮಾಡ್ಬೇಡಿ... ನನಗೆ ಈಗಲೂ ನೀವೇ ಮಗು ತರಹ..ಎಂದು ಕಣ್ಣು ತುಂಬಿಕೊಂಡು ಹೇಳಿದ್ದರು. 


ಅದನ್ನು ಕೇಳಿ ರಾಮಣ್ಣ... ನನಗೂ ಕೂಡ ನಿನ್ನ ಬಿಟ್ಟು ಬೇರೆ ಯಾರಿದ್ದಾರೆ ಸೀತಾ.. ಎಂದು ಹೇಳಿ ತನ್ನ ಕಣ್ಣೀರು ಒರೆಸಿಕೊಂಡಿದ್ದರು. 


ವರ್ಷಗಳು ಒಂದರ ನಂತರ ಒಂದು ಉರುಳುತ್ತಲೇ ಹೋಯಿತು. 


ರಾಮಣ್ಣ ಸೀತಕ್ಕನಿಗೆ ವಯಸ್ಸಾಯಿತು. 


ವಯಸ್ಸಿನಲ್ಲಿ ಸೀತಕ್ಕನಿಗಿಂತ ಸ್ವಲ್ಪ ದೊಡ್ಡವರಾದ ರಾಮಣ್ಣನಿಗೆ ಈಗ ಸೀತಕ್ಕನೇ ಊರುಗೋಲು ಆಗಿದ್ದರು. .. 


ಎಲ್ಲಿಗೆ ಹೋದರೂ ಒಟ್ಟಿಗೆ ಹೋಗುತ್ತಿದ್ದರು..ರಾಮಣ್ಣ .ಸೀತಕ್ಕನ ಕೈಯೇ ಬಿಡುತ್ತಿರಲಿಲ್ಲ. 


ಸೀತಕ್ಕ ಕೂಡ ಹಾಗೇ ಹೆಜ್ಜೆ ಹೆಜ್ಜೆಗೂ ತನ್ನ ಗಂಡನ ಕೈಯನ್ನು ಭದ್ರವಾಗಿ ಹಿಡಿದುಕೊಳ್ಳುತ್ತಿದ್ದರು.


ಕೇಶವ ಕೊನೆಗೂ ಬರಲೇ ಇಲ್ಲ! 


ಆದರೆ ತಿಂಗಳು ತಿಂಗಳು ಹಣ ಕಳುಹಿಸುತ್ತಲೇ ಇದ್ದ. 


ಹೆತ್ತವರನ್ನು ನೋಡಿ ಕೊಳ್ಳುವುದು ಎಂದರೆ...ತಿಂಗಳ ಹಣ ಕಳುಹಿಸಿ ತನ್ನ ಜವಾಬ್ದಾರಿ ಕಳೆದುಕೊಳ್ಳುವುದು ಎಂದು ಅವ ತಿಳಿದುಕೊಂಡಿದ್ದ. 


ಆದರೆ ಅವನಿಗಾಗಿ,ಅವನ ಮಕ್ಕಳಿಗಾಗಿ ವೃದ್ಧ ಜೀವಗಳೆರಡು ತಮ್ಮ ಗುಟುಕು ಜೀವ ಹಿಡಿದುಕೊಂಡು ಊರ ಹಳ್ಳಿಯಲ್ಲಿ ದಿನ ದೂಡುತ್ತಿದ್ದಾವೆ ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ ವಿದ್ಯಾವಂತ ಕೇಶವನಿಗೆ. 


ಬ್ಯಾಂಕಿನ ಖಾತೆಯಲ್ಲಿ ತಿಂಗಳು ತಿಂಗಳು ಕೇಶವ ಕಳುಹಿಸಿದ  ಹಣ... ರಾಮಣ್ಣ ಜಾಸ್ತಿ ಖರ್ಚು ಮಾಡದೇ ಹಾಗೇ ಉಳಿದು ದೊಡ್ಡ ಮೊತ್ತವೇ ಆಗಿತ್ತು.


ತಮ್ಮ ಕೊನೆಗಾಲದಲ್ಲಿ ಬ್ಯಾಂಕ್ ನಲ್ಲಿದ್ದ ಹೆಚ್ಚಿನ ಹಣವನ್ನು  ತಮ್ಮ ಹಳ್ಳಿಯ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಓದಿಗಾಗಿ ಅವರ  ಹೆತ್ತವರ ಕೈಯಲ್ಲಿ ಕೊಟ್ಟು ಬಂದಿದ್ದರು ರಾಮಣ್ಣ.


ಮರು ದಿನವೇ ರಾಮಣ್ಣನಿಂದ ಸಹಾಯ ಪಡೆದುಕೊಂಡ ಅಷ್ಟೂ ಮಕ್ಕಳು.. ರಾಮಣ್ಣ ಮಾಡಿದ ಸಹಾಯಕ್ಕಾಗಿ ಧನ್ಯವಾದ ಹೇಳಲು ಮನೆಗೇ ಬಂದಿದ್ದರು. 


ಆ ಮಕ್ಕಳಲ್ಲಿ ರಾಮಣ್ಣ ಸುಮ್ಮನೆ ಹೀಗೆ ಕೇಳಿದ್ದರು.. ಮಕ್ಕಳೇ ಕಲಿತು ಏನು ಆಗ್ಬೇಕು ಎಂದು ಇದ್ದೀರಾ... 


ಹೆಚ್ಚಿನ ಮಕ್ಕಳು ಹೇಳಿದ್ದು ಒಂದೇ... ಇಂಜಿನಿಯರಿಂಗ್ ಮಾಡಿ..ಬೆಂಗಳೂರಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರ್ತೇನೆ ರಾಮಜ್ಜ.. ಎಂದು..! 


ಅದನ್ನು ಕೇಳಿ ಅಲ್ಲೇ ಇದ್ದ ಸೀತಕ್ಕನಿಗೆ ಏನೋ ನೆನಪಾಗಿ ಕಣ್ಣಂಚು ಒದ್ದೆ ಮಾಡಿಕೊಂಡು ಮನೆಯೊಳಗೆ ನಡೆದಿದ್ದರು!! 


ಇಳಿಸಂಜೆಗೆ  ಮನೆಯಲ್ಲಿ ಕೂತು ಬೋರ್ ಆಗುವುದಕ್ಕೆ ಇಬ್ಬರೂ.. ಕೈ ಕೈ ಹಿಡಿದು ಮನೆಯ ಮುಂದಿನ ಬೆಟ್ಟ ನಿಧಾನವಾಗಿ ಹತ್ತಿ,ಬೆಟ್ಟದ ನೆತ್ತಿಯಲ್ಲಿರುವ ಕಲ್ಲು ಬೆಂಚಿನಲ್ಲಿ ಕುಳಿತುಕೊಂಡು ಸೂರ್ಯಾಸ್ತ ನೋಡಿ ಮತ್ತೆ ಬೆಟ್ಟ ಇಳಿದು ಮನೆ ಸೇರುತ್ತಿದ್ದರು.


ಒಂದು ದಿನ ಸೂರ್ಯಾಸ್ತ ನೋಡುತ್ತಾ...ರಾಮಣ್ಣ ತನ್ನ ಪಕ್ಕದಲ್ಲಿಯೇ ಇದ್ದ ಸೀತಕ್ಕನಿಗೆ ಹೇಳಿದರು..ಸೀತಾ..ಇನ್ನು ನಮ್ಮ ದಿನಗಳು ಕೂಡ ಜಾಸ್ತಿ ಏನಿಲ್ಲ..ನಾವು ಕೂಡ ಆ ಬಾನಿನಲ್ಲಿ ಮುಳುಗುವ  ಸೂರ್ಯನಂತೆ ನಮ್ಮ ಬಾಳಿನಲ್ಲಿ  ಅಸ್ತಂಗತರಾಗಿ ಹೋಗುತ್ತೇವೆ ಸೀತಾ...ಬಹುಶಃ ನಿನಗಿಂತ ಮೊದಲು ನಾನೇ ಈ ಲೋಕ ಬಿಟ್ಟು ಹೋಗುತ್ತೇನೋ ಏನೋ..! 


ಅದನ್ನು ಕೇಳಿ ತನ್ನ ಕಣ್ಣಲ್ಲಿ ನೀರು ತುಂಬಿಕೊಂಡು.. ಸೀತಕ್ಕ ಹೇಳಿದ್ದರು... ಆ ತರಹ ಏನಾದರೂ ಆದರೆ ಅದರ ಮರುಕ್ಷಣವೇ ನನ್ನ ಜೀವ ಕೂಡ ಹೋಗಿರುತ್ತದೆ ಬಿಡಿ..ನೀವೇ ಇಲ್ಲದೆ... ನಾನಾದರೂ ಯಾರಿಗಾಗಿ ಬದುಕಲಿ..! 


ರಾಮಣ್ಣನ ಕಣ್ಣಲ್ಲಿ ನೀರು ಜಿನುಗಿತ್ತು ..! 


ಆದರೂ ಕಷ್ಟ ಪಟ್ಟು ಕೇಳಿದ್ದರು.. ಸೀತಾ... ಒಂದು ವೇಳೆ ನೀನೇ  ನನ್ನನ್ನು ಒಬ್ಬಂಟಿಯನ್ನಾಗಿ ಮಾಡಿ ನನ್ನ ಬಿಟ್ಟು ಹೋದರೆ..ಆಗ.. ಆಗ ನಾನು ಏನು ಮಾಡಲಿ..?!


ಸೀತಕ್ಕನಿಗೆ ಮಾತು ಹೊರಡಲಿಲ್ಲ..!! 


ಗಂಟಲು ಕಟ್ಟಿತ್ತು... ಬಾಯಿ ಮೂಕವಾಯಿತು.. ಕಣ್ಣೀರು ಧಾರಕಾರ! 


ಕತ್ತಲು ದಟ್ಟವಾಯಿತು... ರಾಮಣ್ಣ ಸೀತಕ್ಕನ ಕೈ ಹಿಡಿದುಕೊಂಡು ನಿಧಾನವಾಗಿ ಹಾಗೇ ಬೆಟ್ಟ ಇಳಿಯ ತೊಡಗಿದರು!


ಮಗ ಎನಿಸಿಕೊಂಡ ಕೇಶವ ತನ್ನ ಹೆತ್ತವರಿಗೆ ಹಣ ಸೇರಿದಂತೆ ಎಲ್ಲವನ್ನೂ ಕೊಟ್ಟಿದ್ದ.


ಆದರೆ ಒಂದನ್ನು ಬಿಟ್ಟು... 


ಅದುವೇ ಅವರ ಕೊನೆಗಾಲದಲ್ಲಿ ಅವರು ಬಯಸಿದ್ದ  ನೆಮ್ಮದಿಯ ಬದುಕು..!!


ಎಲ್ಲವನ್ನೂ ದುಡ್ಡು ಕೊಟ್ಟು  ಕೊಳ್ಳಬಹುದು... ಆದರೆ ಹೆತ್ತವರನ್ನು ಕೊಂಡು ಕೊಳ್ಳಲು ಸಾಧ್ಯವೇ ಇಲ್ಲ.


ಅದರ ಬೆಲೆ ಗೊತ್ತಾಗವುದು ಅವರನ್ನು ಒಂದು ದಿನ  ಕಳೆದುಕೊಂಡಾಗಲೇ!! 


.....................................................................................


#ಇಷ್ಟೇ....! 


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ