ಕಾಲೆ ಮತ್ತು ಬೊಲ್ಲೆ
ನಗರದ ಮಾಲ್ ಗಳ ಹಾಯೆನಿಸುವ ಏರ್ ಕಂಡೀಷನ್,ಪಾರ್ಲರ್ ನ ತಣ್ಣನೆಯ ಐಸ್‌ಕ್ರೀಂ - ಕುಲ್ಫಿ ,ಅಂಗಾತ ಮಲಗಿರುವ ನುಣುಪಾದ ರೋಡುಗಳು,ಅಲ್ಲಿನ ಜಗಮಗಿಸುವ ರಾತ್ರಿಗಳು,ಅಕಾಶ ಮುಟ್ಟ ಬಯಸುವ ಗಗನಚುಂಬಿ ಕಟ್ಟಡಗಳು.... ಆನಂದಣ್ಣನಿಗೆ ಎಂದೂ ಇಷ್ಟವಾಗಿದ್ದೇ ಇಲ್ಲ.
ಮಗ ಹರೀಶ ಮತ್ತು ಸೊಸೆ ಸುನೀತಾ.. ಸಿಟಿಗೆ ಬಂದು ನಮ್ಮೊಡನೆಯೇ ಇರಿ ಎಂದು ಎಷ್ಟು ಕರೆದರೂ ಆನಂದಣ್ಣ ಮತ್ತು ಸುನಂದಕ್ಕ ಹಳ್ಳಿ ಬಿಟ್ಟು ಸಿಟಿಗೆ ಹೋಗಲೇ ಇಲ್ಲ.
ಬೇಕಾದರೆ ನೀವೇ ಇಲ್ಲಿಗೆ ಬನ್ನಿ,ನಾವಂತು ಹಳ್ಳಿ ಬಿಟ್ಟು ಎಲ್ಲಿಗೂ ಬರಲಾರೆವು ಎಂದು ತಮ್ಮ ಕೃಷಿ ಬದುಕಿಗೆನೇ ಗಟ್ಟಿಯಾಗಿ ಅಂಟಿಕೊಂಡಿದ್ದರು ಆನಂದಣ್ಣ.
ಆನಂದಣ್ಣನ ಉಸಿರು ಇದ್ದದ್ದೇ ಅವರ ಹಳ್ಳಿಯಲ್ಲಿ,ಅವರ ದಿನ ನಿತ್ಯದ ಕೃಷಿ ಬದುಕಿನಲ್ಲಿ.
ಹಳ್ಳಿಯ ಅವರ ತಣ್ಣನೆಯ ಬೈಲು ಗದ್ದೆಯಲ್ಲಿ,ಪಚ್ಚನೆಯ ಬಾಳೆ ತೋಟದಲ್ಲಿ,ಜುಳು ಜುಳು ಎಂದು ಅವಳಷ್ಟಕ್ಕೆ ಹಾಡುತ್ತಾ ಹರಿಯುವ ಫಲ್ಗುಣಿಯಲ್ಲಿ.. ಅವರದ್ದೊಂದು ಉಚ್ಛ್ವಾಸ ನಿಶ್ವಾಸ ಸದಾ ಜೀವಂತವಾಗಿತ್ತು.
ಅವರು ಹುಟ್ಟಿದ್ದು ಬೆಳೆದದ್ದು ಎಲ್ಲಾ ಹಳ್ಳಿಯಲ್ಲೇ.... ಆಡಿದ್ದೇ ಗದ್ದೆಯ ಆ ಹಸಿ ಮಣ್ಣಿನಲ್ಲಿ.. ತಿಂದಿದ್ದು ಬರೀ ತಾಜಾ ಹಣ್ಣು ತರಕಾರಿಗಳನ್ನೇ,ಕುಡಿದಿದ್ದು ಅದೇ ಹಳ್ಳಿಯ ಸ್ವಚ್ಛ ಶುದ್ಧ ಸಿಹಿಯಾದ ನೀರನ್ನು.
ಸುತ್ತಲೂ ಗುಡ್ಡಗಳಿಂದ ಆವೃತ್ತವಾದ ಹತ್ತು ಎಕರೆ ಕೃಷಿ ಭೂಮಿ ಅವರದ್ದು.ಎಲ್ಲಕ್ಕಿಂತ ತುಂಬಾ ಕೆಳಗಿನದ್ದು ಸದಾ ನೀರಿನ ಪಸೆಯಿಂದ ಕೂಡಿರುವ ಬೈಲು ಗದ್ದೆ.ಅದರ ಪಕ್ಕವೇ ಫಲ್ಗುಣಿ ವರ್ಷ ಪೂರ್ತಿ ತಣ್ಣನೆ ಹರಿದು ಹೋಗುತ್ತಿದ್ದಳು. ಆನಂದಣ್ಣ ಕೆಳಗಿನ ಬೈಲು ಗದ್ದೆಯಲ್ಲಿ ವರ್ಷದಲ್ಲಿ ಮೂರೂ ಭತ್ತದ ಬೆಳೆಗಳಾದ ಎನೆಲ್(ಮಳೆಗಾಲದ ಬೆಳೆ),ಸುಗ್ಗಿ(ಬೇಸಿಗೆಯ ಬೆಳೆ) ಹಾಗೂ ಕೊಳಕೆ(ಮಳೆಗಾಲ ಪೂರ್ವದ ಬೆಳೆ)ಬೆಳೆಗಳನ್ನು ಸೊಂಪಾಗಿ ಬೆಳೆಯುತ್ತಿದ್ದರು.ಮೂರೂ ಬೆಳೆಗೂ ಹೆಚ್ಚು ಕಡಿಮೆ ನಾಲ್ಕು ತಿಂಗಳ ಅಂತರ.ಫಲ್ಗುಣಿಯ ನೀರೇ ಬೈಲು ಗದ್ದೆಗೆ ವರ್ಷ ಪೂರ್ತಿ ಸಾಕಾಗುತ್ತಿತ್ತು.ಗದ್ದೆ ಪಕ್ಕವೇ ಬೆಂಡೆ, ಅಲಸಂಡೆ,ಸೌತೆ, ಮುಳ್ಳು ಸೌತೆಯಂತಹ ತರಕಾರಿಗಳನ್ನು ಸಹ ಯಥೇಚ್ಛವಾಗಿ ಬೆಳೆದು ಕೆಲವೊಮ್ಮೆ ಹೆಚ್ಚಿನ ತರಕಾರಿಗಳು ಕೈಗೆ ಬಂದಾಗ ಅದನ್ನು ಮಾರ್ಕೆಟ್ ನಲ್ಲಿ ಮಾರಿ ಕೂಡ ತಕ್ಕ ಮಟ್ಟಿನ ಲಾಭ ಮಾಡಿಕೊಳ್ಳುತ್ತಿದ್ದರು ಆನಂದಣ್ಣ.
ಬೈಲು ಗದ್ದೆಗಿಂತ ಸ್ವಲ್ಪ ಎತ್ತರದ ಮಜಲ್ ಗದ್ದೆಯಲ್ಲಿ ಮಳೆಗಾಲದಲ್ಲಿ ಮಳೆನೀರು ಹಾಗೂ ಉಳಿದ ಸಮಯದಲ್ಲಿ ತಮ್ಮ ಕೆರೆ ನೀರು ಬಳಸಿ ಎನೆಲ್ ಮತ್ತು ಸುಗ್ಗಿಯ ಎರಡು ಬೆಳೆ ತೆಗೆಯುತ್ತಿದ್ದರು...ಹಾಗೂ ಎಲ್ಲದಕ್ಕಿಂತಲೂ ಎತ್ತರದಲ್ಲಿ ಗುಡ್ಡದ ಬುಡದಲ್ಲಿ ಇದ್ದ ಬೊಟ್ಟು ಗದ್ದೆಯಲ್ಲಿ ಮಳೆಗಾಲದ ಸಮಯಕ್ಕೆ ಒಂದು ಎನೆಲ್ ಬೆಳೆ ಮಾತ್ರ ತೆಗೆಯುತ್ತಿದ್ದರು ಆನಂದಣ್ಣ.
ಎರಡು ಬೆಳೆ ತೆಗೆಯುವ ಮಜಲ್ ಗದ್ದೆಯಲ್ಲಿ ಕಟಾವಿನ ನಂತರ..ಮತ್ತೊಮ್ಮೆ ಗದ್ದೆಯನ್ನು ಉತ್ತು ಹಾಕಿ ಉದ್ದು ಕೂಡ ಬಿತ್ತಿ ಬಿಡುತ್ತಿದ್ದರು. ಎಂದಿನಂತೆ ಅವರ ಹೆಚ್ಚಿನ ತೆಂಗಿನ ಮರವನ್ನು ಕರಿ ಮೆಣಸಿನ ಬಳ್ಳಿಗಳು ಅಪ್ಪಿ ಹಿಡಿದು ಅವರಿಗೊಂದು ಹೆಚ್ಚಿನ ಆದಾಯದ ಮೂಲವನ್ನು ಕಲ್ಪಿಸಿದ್ದವು.
ದನದ ಹಟ್ಟಿಯಲ್ಲಿ ಎರಡು ಮೂರು ದನಗಳು ಸದಾ ಇದ್ದುದರಿಂದ ಸೆಗಣಿ, ಹಟ್ಟಿಗೊಬ್ಬರವೇ ತೋಟಕ್ಕೆ ಮತ್ತು ಗದ್ದೆಗೆ ಗೊಬ್ಬರವನ್ನು ಒದಗಿಸುತ್ತಿದ್ದವು.ಯಾವುದೇ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡಿದವರಲ್ಲ ಆನಂದಣ್ಣ.ಒಂದು ರಾಸಾಯನಿಕ ಗೊಬ್ಬರದಿಂದ ಮಾಡಿದ ಯಾವುದೇ ಕೃಷಿ, ತರಕಾರಿಗಳು ರುಚಿಯಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದ್ದರೆ ಮತ್ತೊಂದು ಭೂಮಿತಾಯಿಯನ್ನು ರಾಸಾಯನಿಕಗಳನ್ನು ಬಳಸಿ ಸಾರಹೀನ ಮಾಡಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ ಹಾಗಾಗಿ ತಮ್ಮ ಗುಡ್ಡೆಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಹಸಿರು ಸೊಪ್ಪು,ಒಣ ತರಗೆಲೆಗಳನ್ನು,ಹಟ್ಟಿಯ ದನದ ಸೆಗಣಿಯೊಂದಿಗೆ ಸೇರಿಸಿ ಮಾಡಿದ ಸಾವಯವ ಗೊಬ್ಬರವನ್ನೇ ಅವರು ಸದಾ ನೆಚ್ಚಿಕೊಂಡಿದ್ದರು.
ಮನೆಯಲ್ಲಿಯೇ ದನ ಇದ್ದುದರಿಂದ ದಪ್ಪನೆಯ ಚಹಾ,ಬೆಲ್ಲ ಹಾಕಿ ಸುನಂದಕ್ಕ ಮಾಡುವ ಕಾಫಿ ಬಹಳ ರುಚಿ. ಮನೆಯಲ್ಲಿ ಮಜ್ಜಿಗೆ, ಮೊಸರು ಎಂದೂ ತಪ್ಪಿದ್ದಿಲ್ಲ.ಇಬ್ಬರೇ ಇರುವುದು ಆದರೂ ಬಿಸಿಲಿಗೆ ಮಜ್ಜಿಗೆ ಕುಡಿಯಲು ಹಿತವಾಗುತ್ತದೆ ಎಂದು ಸುನಂದಕ್ಕ ಮೊಸರು ಕಡೆದು ಮಜ್ಜಿಗೆ ಮಾಡುವುದನ್ನು ಎಂದೂ ನಿಲ್ಲಿಸಿರಲಿಲ್ಲ.ಜೀರಿಗೆ ಮೆಣಸು ಹಾಕಿ ಅವರು ಮಾಡುವ ಖಾರ ಖಾರ ಮಜ್ಜಿಗೆ ಎರಡು ಗ್ಲಾಸ್ ಆದರೂ ಕುಡಿಯದೇ ಇರಲು ಮನಸ್ಸು ಬರುತ್ತಿರಲಿಲ್ಲ.
ಮನೆಯ ಹಿತ್ತಿಲಲ್ಲಿ ಘಮ್ಮನೆಯ ಶಂಕರಪುರ ಮಲ್ಲಿಗೆ ವಾಣಿಜ್ಯ ಬೆಳೆಯಾಗಿ ಅವರ ಕುಟುಂಬವನ್ನು ಸದಾ ಪೊರೆಯುತಿತ್ತು.ಅದನ್ನು ಮಕ್ಕಳಂತೆ ಆರೈಕೆ ಮಾಡಿ ಅದರ ಪಾಲನೆ ಪೋಷಣೆಯನ್ನು ಸಹ ಅಚ್ಚುಕಟ್ಟಾಗಿ ಮಾಡಿ ದಿನಾಲೂ ಎಲ್ಲಾ ಮೊಗ್ಗುಗಳನ್ನು ಬಿಡದೆ ಕಿತ್ತು, ಬಾಳೆಯ ನೂಲಿನಲ್ಲಿ ಶ್ರದ್ಧೆಯಿಂದ ಅವುಗಳನ್ನು ಕಟ್ಟಿ,ಕಟ್ಟಿದ ಆ ಮಲ್ಲಿಗೆ ಚೆಂಡುಗಳನ್ನು ಅಟ್ಟೆಯನ್ನಾಗಿ ಮಡಚಿಟ್ಟು ಬಾಳೆ ಎಲೆಯಲ್ಲಿ ಸುತ್ತಿ,ಎಂಟು ಗಂಟೆಯ ಒಳಗೆ ಮಲ್ಲಿಗೆ ಕಟ್ಟೆಗೆ ತಲುಪಿಸುವ ಕೆಲಸ ಸುನಂದಕ್ಕನದ್ದು.
ಒಂದು ಅಟ್ಟೆಗೆ ನಾಲ್ಕು ಚೆಂಡು ಮಲ್ಲಿಗೆ ಬೇಕು. ಒಂದು ಚೆಂಡಿಗೆ ಅಂದಾಜು 800 ಮೊಗ್ಗು ಮಲ್ಲಿಗೆ ಅಂದರೂ ಸರಿ ಸುಮಾರು 3200 ಮಲ್ಲಿಗೆ ಆದರೂ ಒಂದು ಅಟ್ಟೆಗೆ ಬೇಕು.ಅದಕ್ಕಿಂತ ಹೆಚ್ಚೇ ಮಲ್ಲಿಗೆ ಮನೆಯಲ್ಲಿ ಅರಳುತ್ತಿತ್ತು. ಅದನ್ನು ಕೊಯ್ದು ಕಟ್ಟುವುದೇ ದೊಡ್ಡ ಕೆಲಸ. ದಿನ ದಿನದ ಮೊಗ್ಗುಗಳನ್ನು ಕೊಯ್ದು ಕಟ್ಟದಿದ್ದರೆ ಅದು ಹಾಳಾಗಿ ಹೋಗುವುದು,ನಿಜವಾಗಿಯೂ ಮಲ್ಲಿಗೆ ಕಟ್ಟುವುದು ಅಪಾರ ಶ್ರದ್ಧೆ ಬೇಡುವ ಕೆಲಸವೇ.
ಅದಕ್ಕಾಗಿ ಸುನಂದಕ್ಕ ಒಂದಿಬ್ಬರು ಕೆಲಸದ ಹೆಂಗಸರನ್ನು ಕೂಡ ಬೆಳಿಗ್ಗಿನ ಜಾವ ಮಲ್ಲಿಗೆ ಕಟ್ಟುವ ಕೆಲಸಕ್ಕಷ್ಟೇ ಇಟ್ಟುಕೊಂಡಿದ್ದರು. ಅದರಲ್ಲೂ ಹಬ್ಬದ ಸೀಸನ್ ಗಳಲ್ಲಿ ಮಲ್ಲಿಗೆಗೆ ಅದರಲ್ಲೂ ಬಾಳೆ ನೂಲಿನಲ್ಲಿ ಕಟ್ಟಿದ್ದ ಮಲ್ಲಿಗೆಗೆ ವಿಪರೀತ ಬೇಡಿಕೆ.ದೈವ ದೇವರಿಗಂತು ನೂಲಿನಲ್ಲಿ ಕಟ್ಟಿದ ಮಲ್ಲಿಗೆಯನ್ನು ಬಳಸಲು ಜನರು ಕೂಡ ಇಷ್ಟ ಪಡುವುದಿಲ್ಲ. ಎಷ್ಟೇ ಬೆಲೆ ಇದ್ದರು ಊರಿನ ಜನ ಬಾಳೆ ನೂಲಿನಲ್ಲಿ ನೈಯ್ದ ಮಲ್ಲಿಗೆಗೆಯೇ ಮುಗಿ ಬೀಳುತ್ತಿದ್ದರು.
ಮನೆಯ ಹಿತ್ತಿಲಲ್ಲಿ ಮಲ್ಲಿಗೆ ಮಾತ್ರವಲ್ಲ ಬಸಳೆ ಚಪ್ಪರದಲ್ಲಿ ಬಸಳೆ ದಂಟುಗಳು ದಷ್ಟಪುಷ್ಟವಾಗಿ ಚಪ್ಪರದ ತುಂಬೆಲ್ಲಾ ಹರಡಿಕೊಂಡಿದ್ದರೆ,ತೊಂಡೆಕಾಯಿಗಳು ಚಪ್ಪರದಿಂದ ತುಂಬಿ ತುಳುಕಿ ಹಾಗೇ ನೇತಾಡುತ್ತಿದ್ದವು. ಬಸಳೆ ಇದ್ದ ಮೇಲೆ ಗಂಡುಕಾಯಿ (ಪಪ್ಪಾಯಿ) ಇರಲೇ ಬೇಕು.ಅದು ಯಾರೂ ಮಾಡಿದ ನಿಯಮವೋ,ಆದರೆ ಊರಿನ ಎಲ್ಲರೂ ಅದೊಂದು ಅಲಿಖಿತ ನಿಯಮವನ್ನು ತಪ್ಪದೇ ಪಾಲಿಸಿದರ ಫಲವಾಗಿ, ಪ್ರತೀ ಮನೆಯ ಬಸಳೆ ಚಪ್ಪರದ ಪಕ್ಕ ಗಂಡುಕಾಯಿ ಗಿಡವೊಂದು ತಲೆ ಎತ್ತಿ ಗಂಡಿನಂತೆ ಗತ್ತಿನಿಂದಲೇ ನಿಂತುಕೊಂಡು ಬಿಡುತ್ತಿತ್ತು.ಮಾವಿನ ಮರ, ಹಲಸಿನ ಮರಗಳು ಕೂಡ ಆನಂದಣ್ಣನ ಜಾಗದಲ್ಲಿ ಹೇರಳವಾಗಿದ್ದವು. ಮನೆಯಲ್ಲಿ ತಿನ್ನುವವ ಮಕ್ಕಳಿಲ್ಲದೇ ಮಂಗಗಳ ಪಾಲಾಗುತ್ತಿದ್ದವು.
ಆನಂದಣ್ಣನವರಿಗೆ ಅಡಿಕೆ ತೋಟ,ತೆಂಗಿನ ತೋಟ, ಬಾಳೆ ತೋಟ ಮತ್ತು ಮೇಲಿನ ಗುಡ್ಡೆಯಲ್ಲಿ ಸಾಕಷ್ಟು ಗೇರು ಮರಗಳು ಇದ್ದ ಕಾರಣ ರಮೇಶ ಮತ್ತು ಸುರೇಶ ಎಂಬ ಇಬ್ಬರು ಕೆಲಸಗಾರನ್ನು ಖಾಯಂ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದರು.
ಬೆಳಿಗ್ಗೆ ಬೇಗ ಆರು ಗಂಟೆಗಿಂತ ಮೊದಲೇ ಎದ್ದು,ಎದ್ದ ಕೂಡಲೇ ತಮ್ಮ ಮನೆಯಂಗಳದಲ್ಲಿ ಇದ್ದ ಪಂಜುರ್ಲಿ ದೈವಕ್ಕೊಂದು ಭಕ್ತಿಯಿಂದ ಕೈ ಮುಗಿದು,ತಲೆಗೊಂದು ಬೈರಾಸು ಕಟ್ಟಿಕೊಂಡು,ಕೈಗೊಂದು ಗೇರುಬಿಜದ ಎಲೆಯೊಂದನ್ನು ಮರದಿಂದ ಕಿತ್ತು ತೆಗೆದುಕೊಂಡು ಅದರ ನಾರು ತೆಗೆದು ಅದರ ಎಲೆಯಲ್ಲಿ ಹಲ್ಲು ಉಜ್ಜುತ್ತಾ ಒಂದು ಬಾರಿ ತೋಟದ ಕಡೆಗೆ ಹೋಗಿ ಎಷ್ಟು ತೆಂಗಿನಕಾಯಿ ಬಿದ್ದಿದೆ,ಎಲ್ಲಿ ಅಡಿಕೆ ಉದುರಿದೆ ಎಂದು ನೋಡಿಕೊಂಡು,ಆ ನಂತರ ಗದ್ದೆಯ ಬದಿಗೆ ಹೋಗಿ ನೀರಿನ ಮಟ್ಟ ಹಾಗೂ ಪೈರಿನ ಬೆಳವಣಿಗೆಯನ್ನು ಸಹ ನೋಡಿ ಕೊನೆಯಲ್ಲಿ ಫಲ್ಗುಣಿಯಲ್ಲಿ ಮುಖ ತೊಳೆದುಕೊಂಡು ಬಂದರೆನೇ ಅವರಿಗೆ ಸಮಾಧಾನ.
ನಂತರ ಮನೆಗೆ ಬಂದು ಸ್ನಾನ ಮಾಡಿ ಮನೆ ದೇವರಿಗೆ ದೀಪ, ದೈವಕ್ಕೆ ನೀರು ಇಟ್ಟು ಮತ್ತೊಮ್ಮೆ ಭಕ್ತಿಯಿಂದ ಕೈ ಮುಗಿದು,ಆ ನಂತರ ಸುನಂದಕ್ಕ ಮಾಡಿ ಕೊಡುವ ದೇಸಿ ದನದ ಹಾಲಿನಲ್ಲಿ ಒಂದು ಖಡಕ್ ಚಹಾ ಕುಡಿದು... ಉಪ್ಪಿನಕಾಯಿ ಹಾಕಿಕೊಂಡು ಬಿಸಿ ಬಿಸಿ ಗಂಜಿ ಊಟ ಮಾಡಿ...ಕೆಲಸಗಾರರು ಬರುವ ಮೊದಲೇ ಹಾರೆ, ಪಿಕ್ಕಾಸುಗಳನ್ನು ಹೆಗಲಿಗೆ ಏರಿಸಿಕೊಂಡು,ಕೈಯಲ್ಲೊಂದು ಹರಿತವಾದ ಕತ್ತಿ ಹಿಡಿದುಕೊಂಡು,ತಲೆಗೆ ಮುಟ್ಟಾಳೆಯನ್ನು (ಅಡಿಕೆ ಹಾಳೆಯ ಕ್ಯಾಪು)ಏರಿಸಿಕೊಂಡು, ಸೊಂಟಕ್ಕೊಂದು ಬೈರಾಸು ಕಟ್ಟಿಕೊಂಡು ತೋಟದ ಮತ್ತು ಗದ್ದೆಯ ಕೆಲಸಕ್ಕೆ ಹೋದರೆ.. ಮತ್ತೆ ಹೊಟ್ಟೆಗೆ ತಿಂಡಿ ಅಂತ ಬೀಳುತ್ತಿದ್ದದ್ದು ಅವರಿಗೆ ಹತ್ತು ಗಂಟೆಗೆಯೇ.ಇಬ್ಬರು ಕೆಲಸಗಾರರಿಗೆ ಮತ್ತು ಆನಂದಣ್ಣನಿಗೆ ಸುನಂದಕ್ಕನೇ ಪುಂಡಿಯೋ,ಬಾಳೆ ಎಲೆ ಗಟ್ಟಿಯೋ(ಕಡುಬು) ಏನಾದರೊಂದು ಮಾಡಿ ತೋಟಕ್ಕೆ ತಾವೇ ತೆಗೆದುಕೊಂಡು ಬರುತ್ತಿದ್ದರು.
ನಂತರ ಮಧ್ಯಾಹ್ನದ ಊಟಕ್ಕೆ ಮನೆಗೆಯೇ ಬರಬೇಕು. ಭೂಮಿತಾಯಿಯ ಮೇಲೆ ಆನಂದಣ್ಣನಿಗೆ ಎಷ್ಟು ಪ್ರೀತಿಯೋ ಹಾಗೆಯೇ ಕಡಲಿನ ಭೂತಾಯಿ(ಮೀನು)ಕೂಡ ಅವರಿಗೆ ಅಷ್ಟೇ ಇಷ್ಟ.ಅದಕ್ಕಾಗಿಯೇ ಮಧ್ಯಾಹ್ನದ ಊಟಕ್ಕೆ ಭೂತಾಯಿಯ ಪದಾರ್ಥವನ್ನೋ, ಪುಳಿಮುಂಚಿಯನ್ನೋ ಮಾಡಿ ಸುನಂದಕ್ಕ ಖಾರ ಖಾರವಾಗಿ ಮಾಡಿ ಆನಂದಣ್ಣನಿಗೂ ಕೆಲಸದವರಿಗೂ ಮಾಡಿ ಬಡಿಸುತ್ತಿದ್ದರು.ಕೆಲವೊಮ್ಮೆ ಚಿಕನ್ ಸುಕ್ಕ ದಂತಹ ಕೋಳಿ ಪದಾರ್ಥಗಳೂ ಕೂಡ ಮಧ್ಯಾಹ್ನದ ಊಟಕ್ಕೆ ಕೆಲಸದವರ ಹೊಟ್ಟೆಯನ್ನು ಪೊರೆಯುತ್ತಿದ್ದವು. ಆದರೂ ಆನಂದಣ್ಣನಿಗೆ ಭೂತಾಯಿ ಮೀನೇ ಬಹಳ ಇಷ್ಟ. ಅದನ್ನು ಅವರು ಚಪ್ಪರಿಸಿ ತಿನ್ನುತ್ತಿದ್ದರು.ಬೇಸಿಗೆ ಕಾಲದಲ್ಲಿ ಕೆಲಸದ ಮಧ್ಯೆ ಮಧ್ಯೆ ಕೆಲಸದವರಿಗೆ ಮತ್ತು ಆನಂದಣ್ಣನಿಗೆ ಮಜ್ಜಿಗೆ ಸೇವೆ ಸುನಂದಕ್ಕನಿಂದ ಆಗುತ್ತಿತ್ತು. ಮನೆಯಲ್ಲಿ ಏನೇ ತಿಂಡಿ ಮಾಡಿದ್ದರೂ ಅಷ್ಟನ್ನೂ ಪ್ರೀತಿಯಿಂದ ಕೆಲಸದವರಿಗೆಯೇ ಬಡಿಸುತ್ತಿದ್ದರು ಸುನಂದಕ್ಕ. ಬಡಿಸುವಾಗ ಅವರು ಯಾವತ್ತೂ ಚಿಕ್ಕದು ಮಾಡಿಯೇ ಇಲ್ಲ.
ಮಧ್ಯಾಹ್ನದ ಊಟ ಹಾಗೂ ಅರ್ಧ ಗಂಟೆಯ ವಿಶ್ರಾಂತಿಯ ನಂತರ ಪುನಃ ತೋಟಕ್ಕೆ ಕೆಲಸಕ್ಕೆ ಹೋದವರಿಗೆ ನಾಲ್ಕು ಗಂಟೆಗೆ ಒಂದು ಬಿಸಿ ಬಿಸಿ ಚಹಾ ಸೇವೆ ಆಗುತ್ತಿತ್ತು.ಕೆಲಸಗಾರರೆಲ್ಲ ಐದು ಗಂಟೆಗೆ ಕೆಲಸ ಮುಗಿಸಿ ಹೋದರೂ.. ಆನಂದಣ್ಣ ಮನೆ ಸೇರುತ್ತಿದದ್ದು ಮಾತ್ರ ಆರೂವರೆಯ ಮೇಲೆಯೇ.
ಕೆಲಸ ಎಲ್ಲಾ ಆದ ನಂತರ ಫಲ್ಗುಣಿಯಲ್ಲಿ ಒಮ್ಮೆ ಕೈ ಕಾಲು ಮುಖ ತೊಳೆದುಕೊಂಡು ಮನೆಗೆ ಬಂದು ಬಚ್ಚಲು ಮನೆಯ ಹಂಡೆಯಲ್ಲಿ ಸುನಂದಕ್ಕ ಕಾಯಿಸಿ ಇಟ್ಟಿರುವ ಹಬೆಯೇಳುವ ಬಿಸಿ ನೀರಲ್ಲಿ ಅರ್ಧ ಗಂಟೆಗಳವರೆಗೂ ಸ್ನಾನ ಮಾಡಿದರೆನೇ ಆನಂದಣ್ಣನಿಗೆ ಸಮಾಧಾನ ಹಾಗೂ ದುಡಿದು ದಣಿದ ಅವರ ದೇಹ ಹಗುರವಾಗುವುದು. ರಾತ್ರಿ ಹೊಟ್ಟೆಗೆ ಏನಾದರೂ ಬಿದ್ದ ನಂತರ ಒಂದು ನೆಮ್ಮದಿಯ ನಿದ್ದೆ ಮಾಡಿ ಬಿಟ್ಟರೆ ಆನಂದಣ್ಣನಿಗೆ ಆ ದಿನದ ಮುಕ್ತಾಯವಾಗುವುದು. ಮರುದಿನದಿಂದ ಯಥಾ ಪ್ರಕಾರ ಇದೇ ದಿನಚರಿ. ಕೆಲಸ ಮಾಡುವ ಜಾಗಗಳು ಬದಲಾಗುತ್ತಿದ್ದವು.. ಕೆಲವೊಮ್ಮೆ ಬೈಲು ಗದ್ದೆ.. ಕೆಲವೊಮ್ಮೆ ಅಡಿಕೆ ತೋಟ.. ಇನ್ನು ಕೆಲವೊಮ್ಮೆ ಗುಡ್ಡದ ಗೇರುಬೀಜದ ಜಾಗ..ಗುಡ್ಡದ ಕೆಳಗಿನ ಬೊಟ್ಟು ಕಂಡ(ಗದ್ದೆ)ಹೀಗೆ...ಆದರೆ ಚಹಾ ತಿಂಡಿ ಮತ್ತು ಊಟದ ಸಮಯ ಮಾತ್ರ ಅದೇ ಆಗಿತ್ತು.
ಅಂತಹ ಯಾವುದೇ ದುರಾಭ್ಯಾಸ ಇಲ್ಲದ ಆನಂದಣ್ಣನ ಬಾಯಿಯನ್ನು ಎಲೆ ಅಡಿಕೆಯೊಂದನ್ನು ಮಾತ್ರ ಸದಾ ಕೆಂಪು ಮಾಡುತ್ತಿತ್ತು. ಅದನ್ನು ಜಗಿಯಲು ಅವರಿಗೆ ಬಹಳ ಇಷ್ಟ. ಒಳ್ಳೆಯ ತಳಿಯ ವೀಳ್ಯದೆಲೆ ಕೂಡ ಅವರ ಮನೆಯಲ್ಲಿಯೇ ಆಗುತ್ತಿತ್ತು.
ಕೋರಿದ ಕಟ್ಟ(ಕೋಳಿ ಅಂಕ)ಎಂದರೂ ಅವರಿಗೆ ಇಷ್ಟವೇ, ತಮ್ಮ ಮನೆಯಲ್ಲಿಯೇ ಸಾಕಿದ್ದ ಉರಿಯೆ, ಮೈಪೆ, ನೀಲೆ,ಕಡ್ಲೆ(ಬಣ್ಣದ ಆಧಾರದ ಮೇಲೆ ಕೋಳಿಗಳ ಹೆಸರು) ಮುಂತಾದ ಕಟ್ಟದ ಕೋಳಿಗಳನ್ನು ಹಿಡಿದು ಕೊಂಡು ಆದಿತ್ಯವಾರದ ದಿನದ ಕೋರಿದ ಕಟ್ಟಕ್ಕೆ ಹೋದರೆಂದರೆ ಮರುದಿನ ಕೆಲಸಗಾರರಿಗೆ ರುಚಿ ರುಚಿಯಾದ ಕಟ್ಟದ ಕೋಳಿಯ ಪುಳಿಮುಂಚಿಯೋ.. ಕೋಳಿ ಸುಕ್ಕವೋ ಇದೆ ಎಂದೇ ಲೆಕ್ಕ.
ಕಟ್ಟದ ಕೋಳಿಯ ರುಚಿಯೇ ಬೇರೆ ಬಿಡಿ. ಆ ರುಚಿ ಬೇರೆ ಯಾವ ಕೋಳಿಯಿಂದ ಸಿಗಲು ಸಾಧ್ಯವೇ ಇಲ್ಲ.ತಿಂದವನಿಗೆ ಮಾತ್ರ ಗೊತ್ತು ಅದು. ಆನಂದಣ್ಣ ಮತ್ತು ಸುನಂದಕ್ಕ ಅಷ್ಟಾಗಿ ಕೋಳಿ ತಿನ್ನಲು ಇಷ್ಟ ಪಡದೇ ಇದ್ದುದರಿಂದ ಅವರ ಕೆಲಸದವರು ಈ ವಿಷಯದಲ್ಲಿ ಭಾಗ್ಯವೇ ಮಾಡಿದ್ದರು. ಅಷ್ಟು ಮಾತ್ರವಲ್ಲ ಸುನಂದಕ್ಕ ಭೂತಾಯಿ ಪದಾರ್ಥ ಆಗಲಿ ಕಟ್ಟದ ಕೋಳಿ ಪುಳಿಮುಂಚಿ ಆಗಲಿ ಬಹಳ ರುಚಿ ರುಚಿಯಾಗಿ ಮಾಡುತ್ತಿದ್ದರು.
ಆದರೆ ಆನಂದಣ್ಣನಿಗೆ ಎಲ್ಲದಕ್ಕಿಂತಲೂ ಅತೀ ಪ್ರೀಯವಾದದ್ದು ಒಂದೇ.. ಅದುವೇ ಕಂಬಳವೇ.ಅದಕ್ಕಾಗಿ ಕಾಲೆ,ಬೊಲ್ಲೆ ಎಂಬ ಎರಡು ಬಲಿಷ್ಠ ಕಂಬಳದ ಎತ್ತುಗಳನ್ನು ಸಾಕಿದ್ದರು ಅವರು .ಕಾಲೆ ಎಂದರೆ ಕಪ್ಪು,ಬೊಲ್ಲೆ ಅಂದರೆ ಸ್ವಲ್ಪ ಬಿಳಿ ಬಣ್ಣದ್ದು, ಅಂದರೆ ತಿಳಿ ಕಪ್ಪು ಬಣ್ಣದ್ದು ಎಂದು ಅರ್ಥ.ಅವುಗಳ ಮೈ ಬಣ್ಣವನ್ನೇ ಅವುಗಳಿಗೆ ಇಟ್ಟಿದ್ದರು. ಅವುಗಳ ಬಂಡೆಯಂತಹ ದೇಹವನ್ನು ಎಣ್ಣೆಯಿಂದ ತಿಕ್ಕಿ ತಿಕ್ಕಿ ಅದರ ಮೈಯನ್ನು ಫಳ ಫಳ ಹೊಳೆಯುವಂತೆ ಮಾಡಿದ್ದರು ಆನಂದಣ್ಣ.
ಕಂಬಳವಿಲ್ಲದ ಸಮಯದಲ್ಲಿ ಗದ್ದೆ ಉಳುಮೆ ಮಾಡಲು ಸಹಾಯ ಮಾಡುತ್ತಿದ್ದ ಕಾಲೆ ಬೊಲ್ಲೆ ಎತ್ತುಗಳು ಆ ನಂತರ ಕಂಬಳದ ಕೆಸರು ಗದ್ದೆಯಲ್ಲಿ ವೇಗವಾಗಿ ಓಡಿ ಸಾಕಷ್ಟು ಚಿನ್ನದ ಮೆಡಲ್ ಗಳನ್ನು ಗೆದ್ದು ಆನಂದಣ್ಣನಿಗೆ ಊರಿನಲ್ಲಿ ವಿಶೇಷ ಗೌರವ ಆದರಗಳನ್ನು ತಂದುಕೊಟ್ಟಿದ್ದವು.ಕಾಲೆ ಬೊಲ್ಲೆಯ ಮೇಲೆ ತಮ್ಮ ಜೀವವನ್ನೇ ಇಟ್ಟಿದ್ದ ಆನಂದಣ್ಣ ಅವುಗಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ಸಾಕಿದ್ದ ಅವರಿಗೆ ನಿಜ ಅರ್ಥದಲ್ಲಿ ಕಾಲೆ ಮತ್ತು ಬೊಲ್ಲೆ ಇಬ್ಬರೂ ಅವರ ಮಕ್ಕಳಂತೆಯೇ ಇದ್ದರು.
ಅವುಗಳನ್ನು ಲಾರಿಯೇರಿಸಿ ಅವಿಭಜೀತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಎಲ್ಲೇ ಕಂಬಳ ಇದ್ದರೂ ಬಿಡದೇ ಎಲ್ಲಾ ಕಂಬಳಕ್ಕೆ ಕರೆದುಕೊಂಡು ಹೋಗುವುದು ಎಂದರೆ ಆನಂದಣ್ಣನಿಗೆ ಮದುವೆಯ ದಿಬ್ಬಣಕ್ಕೆ ಹೋಗುವಂತಹ ಸಂಭ್ರಮ ಮತ್ತು ಕಂಬಳದ ಸೀಸನ್ ನಲ್ಲಿ ಪ್ರತೀ ಆದಿತ್ಯವಾರವೂ ಅವರಿಗೆ ದಿಬ್ಬಣದ ಸಂಭ್ರಮವೇ.
ಮನೆಯಿಂದ ಕಂಬಳಕ್ಕೆ ಹೊರಡುವಾಗ ಕೊಂಬು ವಾಧನ,ಡೋಲು ಬ್ಯಾಂಡ್ ಎಲ್ಲವೂ ಇರುತ್ತಿತ್ತು. ಚೆನ್ನಾಗಿ ಸಿಂಗರಿಸಿಕೊಂಡು ನೆತ್ತಿಯಲ್ಲಿ ದೈವ ದೇವರ ಗಂಧ ಕುಂಕುಮ ಏರಿಸಿಕೊಂಡು ಲಾರಿಯಲ್ಲಿ ನಿಂತು ಸುತ್ತೆಲ್ಲಾ ರಾಜರಂತೆ ಗತ್ತು ಗಾಂಭೀರ್ಯದಿಂದ ನೋಡುತ್ತಾ ಊರೆಲ್ಲಾ ಮೆರವಣಿಗೆಯಂತೆ ಹೋಗಿ ಕಂಬಳದ ಕರೆಗೆ (ಎತ್ತುಗಳು ಓಡುವ ಟ್ರ್ಯಾಕ್) ಇಳಿಯುತ್ತಿದ್ದವು ಕಾಲೆ ಬೊಲ್ಲೆ.
ನಿರಂತರವಾಗಿ ಮೆಡಲ್ ಗೆಲ್ಲುತ್ತಿದ್ದ ಕಾಲೆ ಬೊಲ್ಲೆಯವರು ಆನಂದಣ್ಣನ ಮಾತ್ರವಲ್ಲ,ಊರವರ ಹೆಮ್ಮೆ ಕೂಡ ಆಗಿದ್ದವು. ಅವರು ಕೂಡ ಆನಂದಣ್ಣನ ಎತ್ತುಗಳೊಂದಿಗೆ ಮೆರವಣಿಗೆ ಹೊರಡುತ್ತಿದ್ದರು ಮತ್ತು ಕಂಬಳದ ಕರೆಯಲ್ಲಿ ಕಾಲೆ ಮತ್ತು ಬೊಲ್ಲ ಮಿಂಚಿನ ಗತಿಯಲ್ಲಿ ಕೆಸರು ಎರಚುತ್ತಾ ವೇಗವಾಗಿ ಓಡುವಾಗ ಅವರದ್ದೊಂದು ಎಂತಹ ಪ್ರೋತ್ಸಾಹ. ಹೆಚ್ಚಿನವರು ಕಾಲೆ ಬೊಲ್ಲೆಯವರ ಓಟ ನೋಡಲೆಂದೇ ಬರುತ್ತಿದ್ದರು. ಎರಡೂ ಜಿಲ್ಲೆಗಳಲ್ಲಿ ಆ ಎರಡು ಎತ್ತುಗಳಿಗೆಂದೇ ಪ್ರತ್ಯೇಕವಾದ ಅಭಿಮಾನ ವರ್ಗವೊಂದು ಕೂಡ ಇತ್ತು.
ಕಾಲೆ ಬೊಲ್ಲೆ ಕಂಬಳದಲ್ಲಿ ಗೆಲ್ಲದೇ ಹಿಂದೆ ಮರಳಿದ ಉದಾಹರಣೆಗಳೇ ಇಲ್ಲ. ಆದ್ದರಿಂದ ಪ್ರತೀ ಕಂಬಳದ ದಿನವೂ ತಮ್ಮೊಂದಿಗೆ ಬಂದ ಎಲ್ಲರಿಗೂ ಆನಂದಣ್ಣನ ಲೆಕ್ಕದಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿತ್ತು. ಕಂಬಳದ ಕರೆಯಿಂದ ಮತ್ತೆ ಮನೆಗೆ ಕೊಂಬು, ಬ್ಯಾಂಡ್ ಗಳೊಂದಿಗೆ ವಿಜಯೋತ್ಸವದ ಮೆರವಣಿಗೆ ಹೊರಡುತ್ತಿತ್ತು. ಜನರಿಗೆ ರೋಡಿನಲ್ಲಿ ಹೋಗುವ ಈ ವಿಜಯೋತ್ಸವ ನೋಡಿಯೇ ಗೊತ್ತಾಗುತ್ತಿತ್ತು ಇದು ಖಂಡಿತವಾಗಿಯೂ ನಮ್ಮ ಆನಂದಣ್ಣನವರ ಕಾಲೆ ಬೊಲ್ಲೆ ಎತ್ತುಗಳು ವಿನ್ ಆಗಿ ಮರಳುತ್ತಿರುವುದು ಎಂದು.
ಆನಂದಣ್ಣನಿಗೆ ಈ ಕಂಬಳ ಅಂದರೆ ಅದೆನೋ ಖುಷಿ, ತೀರದ ಸಂಭ್ರಮ. ಅವರಿಗೆ ಕಂಬಳದಿಂದ ಖರ್ಚೇ ಹೊರತು ಲಾಭವೇನೂ ಇಲ್ಲ.ಆದರೂ ಆ ಎತ್ತುಗಳಿಗಾಗಿ ಅವರು ಎಷ್ಟೇ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ ಅವರು.ಅದೊಂದು ಅವರಿಗೆ ಪ್ರತಿಷ್ಟೆಯ ವಿಷಯವಾಗಿತ್ತು. ಏಕೆಂದರೆ ತುಳುನಾಡಿನ ಪ್ರಸಿದ್ಧವಾದ ಈ ಜನಪದ ಕ್ರೀಡೆಯಲ್ಲಿ ಅವರ ಹೆಸರನ್ನು ತಮ್ಮ ಊರಲ್ಲಿ ಮಾತ್ರವಲ್ಲ ಸುತ್ತ ಹತ್ತು ಊರಿನಲ್ಲಿ ಹೆಸರುವಾಸಿ ಮಾಡಿದ್ದೇ ಈ ಕಾಲೆ ಮತ್ತು ಬೊಲ್ಲೆ ಎತ್ತುಗಳು.ಕೇವಲ ಕಂಬಳದಲ್ಲಿ ಮಾತ್ರವಲ್ಲ, ಈ ಕಂಬಳದಿಂದಾಗಿ ದೊರೆತ ಪ್ರಸಿಧ್ಧಿಯಿಂದ ಅವರು ಮುಂದೆ ಪ್ರತಿಯೊಂದರಲ್ಲೂ ಗುರುತಿಸಿಕೊಳ್ಳುವಂತಾಯಿತು. ಕಾಲೆ ಮತ್ತು ಬೊಲ್ಲೆಯವರ ಮೇಲೆ ಅವರದ್ದೊಂದು ಎಂದಿಗೂ ತೀರಿಸಲಾಗದ ಋಣವಿತ್ತು.
ಕೆಲಸಗಾರರದ ರಮೇಶ, ಸುರೇಶ ಕಾಲೆ ಬೊಲ್ಲೆಯವರನ್ನು ನೋಡಿಕೊಳ್ಳುತ್ತಿದ್ದರೂ ಹೆಚ್ಚಿನ ಆರೈಕೆಯನ್ನು ತಾವೇ ಮುಂದೆ ನಿಂತು ಮಾಡುತ್ತಿದ್ದರು. ಕಂಬಳದ ಕರೆಯಲ್ಲಿ ಅವುಗಳನ್ನು ಓಡಿಸಲು ಉಮೇಶ ಎಂಬ ವೇಗದ ಓಟಗಾರನನ್ನು ದುಬಾರಿ ಬೆಲೆಗೆ ವರ್ಷದ ಗುತ್ತಿಗೆಯ ಆಧಾರದಲ್ಲಿ ನೇಮಿಸಿಕೊಂಡಿದ್ದರು ಆನಂದಣ್ಣ. ಉಮೇಶ ಮತ್ತು ಕಾಲೆ-ಬೊಲ್ಲೆ ಜೋಡಿ ಅವಿಭಜೀತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳದ ಕರೆಯಲ್ಲಿ ಬಹಳ ಪ್ರಸಿದ್ಧವಾದ ಜೋಡಿಯಾಗಿತ್ತು.
ಗದ್ದೆಯಲ್ಲಿ,ತೋಟದಲ್ಲಿ ಕಾಲೆ ಬೊಲ್ಲೆಯವರು ಎಲ್ಲೇ ಮೇಯುತ್ತಿದ್ದರೂ ಆನಂದಣ್ಣ ಕಣ್ಣಿಗೆ ಬಿದ್ದೊಡನೆ ತಮ್ಮ ಮೂಗಿನ ಹೊಳ್ಳೆಗಳನ್ನು ಅರಳಿಸಿಕೊಂಡು ಅವರೆಡೆಗೆ ಓಡಿ ಬರುತ್ತಿದ್ದವು. ಕಂಬಳ ಎತ್ತುಗಳು ಬರೀಯ ಪ್ರಾಣಿಗಳಲ್ಲ. ಅವುಗಳಿಗೂ ಬಹಳ ಬುದ್ದಿ ಇರುತ್ತಿದ್ದವು. ತಮ್ಮ ಒಡೆಯನನ್ನು ಅವುಗಳು ಬಹಳ ಬೇಗ ಗುರುತು ಹಿಡಿಯುವುದು ಮಾತ್ರವಲ್ಲ ಅವನು ಹೇಳಿದಂತೆ ಕೇಳುತ್ತಿದ್ದವು ಮತ್ತು ತಮ್ಮ ಪ್ರೀತಿಯನ್ನು ಮೂಕವಾಗಿ, ಮುಗ್ಧವಾಗಿ ಪ್ರಕಟಿಸುತ್ತಿದ್ದವು. ಊರಿಗೆ ಬರಲು ಪುರುಸೊತ್ತು ಇಲ್ಲದ ಮಗ ಒಂದು ಕಡೆ ಆದರೆ ಸದಾ ತನ್ನೊಂದಿಗೆ ಒಡನಾಡಿ ಆಗಿದ್ದ ಕಾಲೆ ಮತ್ತು ಬೊಲ್ಲೆಯರು ಇನ್ನೊಂದು ಕಡೆ ಇದ್ದು,ಆನಂದಣ್ಣನಿಗೆ ಮಗ ಪಕ್ಕದಲ್ಲೇ ಇಲ್ಲವಲ್ಲ ಎಂಬ ನೋವನ್ನೇ ದೂರ ಮಾಡಿದ್ದವು.
ಫಲ್ಗುಣಿಯಲ್ಲಿ ನೀರ ಹರಿವು ಕಡಿಮೆ ಆದರೆ ಆನಂದಣ್ಣ ಕಾಲೆ ಬೊಲ್ಲೆಯವರನ್ನು ಅಲ್ಲೇ ಕರೆದುಕೊಂಡು ಹೋಗಿ ಅವುಗಳಿಗೆ ಸ್ನಾನ ಮಾಡಿಸುತ್ತಿದ್ದರು.. ಆದರೆ ನೀರಿನಲ್ಲಿ ಇರಲು ಇಷ್ಟ ಪಡುತ್ತಿದ್ದ ಅವುಗಳು ಅಲ್ಲಿಂದ ಮತ್ತೆ ಹಿಂದೆ ಬರಲು ಕೇಳುತ್ತಲೇ ಇರಲಿಲ್ಲ.ಹಾಗೇ ನೀರಿನಲ್ಲಿ ಬಿದ್ದುಕೊಂಡು ಮೂಗಿನ ಹೊಳ್ಳೆಗಳಿಂದ ನೀರು ಹೊರ ಚೆಲ್ಲುತ್ತಿದ್ದವು.
ಬೇಸಿಗೆಕಾಲದಲ್ಲಿ ತೋಟದಲ್ಲಿನ ಪೈಪಿನ ಮೂಲಕ ಕಾಲೆ ಬೊಲ್ಲೆಯ ಬೆನ್ನಿಗೆ ಆನಂದಣ್ಣ ರಭಸವಾಗಿ ನೀರು ಬಿಡುತ್ತಿದ್ದರೆ.. ಒಂದು ಚೂರು ಅಲ್ಲಾಡದೇ ಹಾಗೇ ನಿಂತುಕೊಂಡು ಅವುಗಳು ತಮ್ಮ ಮೈಯನ್ನು ತಣ್ಣನೆ ಮಾಡಿಕೊಳ್ಳುತ್ತಿದ್ದವು.
ಬೇಯಿಸಿದ ಹುರುಳಿ ಕೂಡ ಅವುಗಳಿಗೆ ಬಾರೀ ಇಷ್ಟ.ಆನಂದ ಯಥೇಚ್ಛವಾಗಿ ಅದನ್ನು ಅವುಗಳಿಗೆ ತಿನ್ನಲು ಕೊಡುತ್ತಿದ್ದರು.ಅಷ್ಟು ಮಾತ್ರವಲ್ಲ ಆನಂದಣ್ಣನಿಗೂ ಕುಚಲಕ್ಕಿ ಅನ್ನಕ್ಕೆ ಒಗ್ಗರಣೆ ಹಾಕಿದ ಹುರುಳಿಯ ಬಿಸಿ ಸಾರು ಹಾಗೂ ಮಧ್ಯಾಹ್ನದ ಗಂಜಿ ಊಟಕ್ಕೆ ಹುರುಳಿಯ ಚಟ್ನಿ ಕೂಡ ತುಂಬಾ ಇಷ್ಟವಾಗುತ್ತಿತ್ತು.ಹೀಗಾಗಿ ಕಾಲೆ ಬೊಲ್ಲೆಗೆ ಬೇಯಿಸಿ ಹಾಕಲು ಎಂದು ಹುರುಳಿ ತಂದರೂ ಅವರಿಗೂ ಹುರುಳಿಯಿಂದ ಅವರಿಷ್ಟದ್ದನ್ನು ಸುನಂದಕ್ಕ ಮಾಡಿಕೊಡುತ್ತಿದ್ದರು.
ಹೀಗಿರಲು ಒಂದು ದಿನ ಕಾಲೆ ಎತ್ತು ಕಾಲಿಗೊಂದು ಗಾಯವಾಗಿ ಕೊಟ್ಟಿಗೆ ಸೇರಿದ್ದ ಅವನು ಆಮೇಲೆ ಅಲ್ಲಿಂದ ಮೇಲೆಳಲಿಲ್ಲ. ಯಾವುದೇ ರೀತಿಯ ನಾಟಿ ಔಷಧವೂ ಉಪಯೋಗವಾಗಲಿಲ್ಲ. ಜ್ವರವೂ ಕೂಡ ನಿಧಾನವಾಗಿ ಹೆಚ್ಚಾಗುತ್ತಲೇ ಹೋಯಿತು.
ಅಡಿಕೆ ಮಂಡಿಗೆ ಒಮ್ಮೆ ಗೋಣಿಗಳಲ್ಲಿ ಅಡಿಕೆಯನ್ನು ಪೇರಿಸಿಕೊಂಡು ಮಾರಾಟ ಮಾಡಲು ಪೇಟೆಗೆ ಹೋಗಿದ್ದ ಆನಂದಣ್ಣ ಮನೆಗೆ ಹಿಂದಿರುಗುವಾಗ ಕಾಲೆ ತನ್ನ ಉಸಿರನ್ನೇ ಚೆಲ್ಲಿ ಕೊಟ್ಟಿಗೆಯಲ್ಲಿ ತಣ್ಣಗೆ ಮಲಗಿದ್ದ.ಆ ದಿನ ಆನಂದಣ್ಣ ತನ್ನ ಎತ್ತನ್ನು ಕಳೆದುಕೊಂಡಿರಲಿಲ್ಲ. ಅವರ ಪಾಲಿಗೆ ಅವರ ಒಬ್ಬ ಮಗನೇ ಇಲ್ಲವಾಗಿ ಬಿಟ್ಟಿದ್ದ!
ಕಾಲೆ ಎಷ್ಟಾದರೂ ಕಂಬಳದ ಎತ್ತು.. ಕೊಂಬು ಕಹಳೆಗಳ ಮೂಲಕವೇ ರಾಜ ಮರ್ಯಾದೆಯನ್ನು ಸಲ್ಲಿಸಿ ಅವನನ್ನು ಮಣ್ಣು ಮಾಡಲಾಯಿತು.ಸುದ್ದಿ ತಿಳಿದ ಊರವರೆಲ್ಲರೂ ಬಂದು ಕಾಲೆನಿಗಾಗಿ ಕಣ್ಣೀರು ಹರಿಸಿದ್ದರು.
ಕಾಲೆಯ ಜೊತೆಗಾರ ಬೊಲ್ಲೆ ಒಂದು ಬರೀ ಎತ್ತೇ ಆಗಿರಬಹುದು, ಆದರೆ ಆ ದಿನ ತನ್ನ ಜೊತೆಗಾರನನ್ನು ಕಳೆದುಕೊಂಡದಕ್ಕಾಗಿ ಕಣ್ಣೀರು ಸುರಿಸಿ ಅವನು ಮಾಡಿದ್ದ ಮೂಕ ರೋಧನೆ ಆನಂದಣ್ಣನಿಗೆ ಎಂದಿಗೂ ಸಹಿಸಲು ಅಸಾಧ್ಯವಾಗಿತ್ತು.
ಎಲ್ಲರೂ ಮಾಡುವಂತೆ.. ಒಂಟಿ ಕಂಬಳದ ಕೋಣವಿದ್ದರೆ ಅದಕ್ಕೊಂದು ಇನ್ನೊಂದು ಜೊತೆಯನ್ನು ಹುಡುಕುವ ಕೆಲಸ ಆನಂದಣ್ಣ ಮಾಡಲೇ ಇಲ್ಲ.ಅಷ್ಟು ಮಾತ್ರವಲ್ಲ ಆ ನಂತರ ಅತಿಯಾದ ನೋವಿನಿಂದ ಅವರು ತಮ್ಮ ಪ್ರೀತಿಯ ಕಂಬಳಕ್ಕೆ ಹೋಗುವುದನ್ನೇ ಬಿಟ್ಟು ಬಿಟ್ಟರು.
ಸ್ವಲ್ಪ ಸಮಯ ಮಾತ್ರ ಬೊಲ್ಲೆ ಅವರೊಂದಿಗೆ ಇದ್ದ.. ಆ ನಂತರ ಒಬ್ಬಂಟಿಯಾದ ಅವನೂ ಕೂಡ ಅಕಾಲಿಕ ಮರಣಕ್ಕೀಡಾಗಿ ಬಿಟ್ಟ.ಆನಂದಣ್ಣನ ಮತ್ತೊಬ್ಬ ಮಗ ಕೂಡ ಈ ರೀತಿ ಇಲ್ಲವಾಗಿ ಹೋದ.
ನಂತರ ಹಲವಾರು ಸಲ ಮಗ ಹರೀಶ ಊರಿಗೆ ಬಂದು ಹೋದರೂ ಕೂಡ..ಆನಂದಣ್ಣನಿಗೆ ತನ್ನ ಮಕ್ಕಳಂತಿದ್ದ ಕಾಲೆ ಬೊಲ್ಲೆಯವರನ್ನು ಕಳೆದುಕೊಂಡ ನೋವನ್ನು ಯಾರಿಂದಲೂ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ.ಕೊಟ್ಟಿಗೆಗೆ,ತೋಟಕ್ಕೆ,ಗದ್ದೆಗೆ, ಫಲ್ಗುಣಿಯ ತೀರಕ್ಕೆ.. ಎಲ್ಲಿಯೇ ಹೋದರೂ ತಾವು ಬಂದಾಗಲೆಲ್ಲ ತಲೆ ಎತ್ತಿ ಮೂಗರಳಿಸಕೊಂಡು ತನ್ನನ್ನೇ ನೋಡುತ್ತಿರುವ ಕಾಲೆ ಬೊಲ್ಲೆಯರೇ ಅವರಿಗೆ ಅಲ್ಲೆಲ್ಲ ಇರುವಂತೆ ಭಾಸವಾಗುತ್ತಿತ್ತು.
ಇದರ ನಡುವೆ ತಮ್ಮ ದೈನಂದಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಆನಂದಣ್ಣನಿಗೂ ಅನಿವಾರ್ಯವಾಗಿತ್ತು.ನಂತರ ಮಳೆಗಾಲ ಕೂಡ ಶುರುವಾಯಿತು ಅದರೊಂದಿಗೆ ಮತ್ತೆ ಬೈಲು, ಮಜಲು ಹಾಗೂ ಬೊಟ್ಟು ಗದ್ದೆಯಲ್ಲಿ ಆನಂದಣ್ಣನವರ ಕೃಷಿ ಚಟುವಟಿಕೆ ಚುರುಕುಗೊಂಡವು.
ಗದ್ದೆ ಬದಿಯಲ್ಲಿ ಸುನಂದಕ್ಕ ತಂದುಕೊಟ್ಟ ಬಿಸಿ ಚಹಾ ಹೀರುತ್ತಾ,ಕಾಲೆ ಬೊಲ್ಲೆಯವರ ಅನುಪಸ್ಥಿತಿಯಲ್ಲಿ ಟ್ರ್ಯಾಕ್ಟರ್ ತಮ್ಮ ಗದ್ದೆಯನ್ನು ಉಳುವುದನ್ನು ಕಂಡಾಗ, ಆನಂದಣ್ಣನಿಗೆ ಮತ್ತೊಮ್ಮೆ ಒಂದು ಕಾಲದಲ್ಲಿ ನೇಗಿಲು ಹಿಡಿದು ಕಾಲೆ ಬೊಲ್ಲೆಯವರೊಂದಿಗೆ ಗದ್ದೆ ಉಳುತ್ತಿದ್ದ ದಿನಗಳು ನೆನಪಾಗದೇ ಇರಲಿಲ್ಲ.
ಪ್ರಾಣಿಗಳಿಗೆ ಬಾಯಿ ಬರಲ್ಲ, ಅವುಗಳು ಮನುಷ್ಯರಲ್ಲ ನಿಜ.. ಆದರೆ ಅವುಗಳನ್ನು ಮನುಷ್ಯರಂತೆ ಪ್ರಿತಿಸಿ ಬಿಟ್ಟರೆ... ಅವುಗಳ ಅಗಲಿಕೆಯ ನೋವು ಮನುಷ್ಯರ ಅಗಲಿಕೆಯ ನೋವಿಗಿಂತ ಕಡಿಮೆಯೇನಲ್ಲ..!
ಚಹಾ ಕುಡಿದು,ತಿಂಡಿ ತಿಂದಾದ ಮೇಲೆ,ಗದ್ದೆ ಬದು ಕೆತ್ತಿ ಸರಿ ಮಾಡಲು ತಲೆಗೆ ಕೈಯಲ್ಲಿದ್ದ ಮುಟ್ಟಾಳೆ ಏರಿಸಿಕೊಂಡು ಕೆಲಸದವರಾದ ರಮೇಶ, ಸುರೇಶನೊಂದಿಗೆ ಹಾರೆ ಹಿಡಿದುಕೊಂಡು ಗದ್ದೆಗೆ ಇಳಿದ ಆನಂದಣ್ಣ ಮನಸ್ಸಿನಲ್ಲಿ ಆಗಲೂ... ಕಂಬಳದ ಗದ್ದೆಯಲ್ಲಿ ವೇಗವಾಗಿ ಗುರಿ ಮುಟ್ಟಿ ನಿರಂತರವಾಗಿ ಮೆಡಲುಗಳನ್ನು ಗೆದ್ದು ತನಗೆ ಹೆಸರು,ಕೀರ್ತಿ ತಂದ ತನ್ನ ಮಕ್ಕಳಂತಿದ್ದ ಕಾಲೆ ಬೊಲ್ಲೆಯರೇ ಅಪಾರವಾಗಿ ತುಂಬಿಕೊಂಡಿದ್ದರು.
.....................................................................................
#ಇಷ್ಟೇ...
ab pacchu
moodubidire

Comments
Post a Comment