ಕಿಲಾಡಿ ಮಾವ
ವಿವೇಕ್ ಒಬ್ಬ ಖಡಕ್ & ಖತರ್ನಾಕ್ ಪೋಲಿಸ್ ಆಫೀಸರ್.
ನಗರದ ರೌಡಿಗಳಿಗೆ ಅವನೊಂತರ ರಾತ್ರಿಯ ಸಕ್ಕತ್ ನಿದ್ದೆಯನ್ನು ಹಾಳು ಮಾಡುವ ದುಃಸ್ವಪ್ನ ಮತ್ತು ಸಿಂಹಸ್ವಪ್ನ ಇದ್ದಂತೆ... ಪುಡಿ ರೌಡಿಗಳಿಗೆ ಪಾಲಿಗೆ ಅವನೂ ನಿಜವಾಗಿಯೂ ಸಿಂಹವೇ.. ಹುಲಿಯೇ, ಒಂಟಿ ಸಲಗವೇ ಮತ್ತು ಉದ್ದ ಉಗುರಿನ ಕರಡಿಯೇ ಆಗಿದ್ದ.
ಗೂಂಡಾಗಳ ಪಾಲಿನ ಬೇಟೆಗಾರ,ಕಾಮುಕರ ಪಾಲಿನ ರಣ ಬೇಟೆಗಾರ,ಕೆಟ್ಟ ಕುಡುಕರ ಪಾಲಿನ ಕೆಡುಕ,ಭ್ರಷ್ಟರಿಗೆ & ದುಷ್ಟರಿಗೆ ಬೆಂಕಿ, ಬಿರುಗಾಳಿ,ಸುನಾಮಿ ಚಂಡಮಾರುತ ಎಲ್ಲವೂ ಅವನೊಬ್ಬನೇ ಆಗಿದ್ದ. ಬೇರೆ ಪೋಲಿಸ್ ಇದ್ದರೂ ಇವ ಮಾತ್ರ ಎಲ್ಲವೂ ಆಗಿದ್ದ.
ಅಬಲೆಯರ ಪಾಲಿನ ರಕ್ಷಕ,ಮನುಷ್ಯರಂತೆ ಕಾಡು,ಮರ, ವನ್ಯಜೀವಿ ಗಳ ರಕ್ಷಣೆ ಕೂಡ ಆಗಬೇಕು ಎಂದು ಪ್ರತಿಪಾದಿಸುವ ಪರಿಸರ ಪ್ರೇಮಿ,ಭಿಕ್ಷುಕರ ಪಾಲಿನ ಅನ್ನದಾತ, ಸಮಾಜ ಸೇವೆಗೆ ಕೊಡುಗೈ ದಾನಿ,ಬಡವರ ಪಾಲಿನ ಉದರ ದಾನಿ,Sorry.. ಉದಾರದಾನಿ,ರೋಡ್ ಬದಿಯಲ್ಲಿ ಮಾರುವ ಪೇರಳೆ,ಸೌತೆಕಾಯಿ,ಮಾವಿನಕಾಯಿಯನ್ನು ಉಪ್ಪು ಮೆಣಸಿನ ಪುಡಿ ಹಾಕಿಕೊಂಡು ತಿಂದು ಕೃಷಿಗೆ ಪ್ರೋತ್ಸಾಹ ನೀಡುವ ರೈತ ಬಂದು, ರೈತ ಮಿತ್ರ, ರೈತ ಪ್ರೇಮಿ ಕೂಡ ಅವನು ಆಗಿದ್ದ.
ಅವನು ಸರೆ ಹಿಡಿದು ಹೆಡೆಮುರಿ ಕಟ್ಟಿ ಏರೋಪ್ಲೇನ್, ಹೆಲಿಕಾಪ್ಟರ್, ಡ್ರೋನ್ ಎಲ್ಲವನ್ನೂ ಹತ್ತಿಸಿದ್ದ ನಗರದ ಪ್ರಖ್ಯಾತ ಹಾಗೂ ಕುಖ್ಯಾತ ಕೇಡಿಗಳ ಲೆಕ್ಕ ಸ್ವತಃ ಅವನಿಗೆಯೇ ಇರ್ಲಿಲ್ಲ.ಅವನಿಗಿರದಿದ್ದರೂ ಡಿಪಾರ್ಟ್‌ಮೆಂಟ್ ಗೆ ಇತ್ತು ಬಿಡಿ. ಮುಂದೆ ಮೆಡಲ್ ಎಲ್ಲಾ ಕೂಡ್ಲಿಕ್ಕೆ ಬೇಕು ಅಲ್ವ ಹಾಗಾಗಿ..ತಪ್ಪದೇ ಲೆಕ್ಕ ಇಟ್ಟಿದ್ದರು.
ಅಂತಹ ಅತ್ಯಧ್ಭುತ ಸಾಹಸಿ ಪೋಲಿಸ್ ಆಫೀಸರ್ ವಿವೇಕ್ ನ ಎರಡನೆಯ ಹೆಂಡತಿಯೇ ಸೌಜನ್ಯ. Of course ಖಾಕಿ, ಕಾನೂನು, ನ್ಯಾಯ, ನೀತಿ,FIR,ಪೋಲೀಸ್ ಸ್ಟೇಷನೇ.. ಅವನ ಮೊದಲ ಹೆಂಡತಿಯರು ಆಗಿದ್ದರು.ಆದರೂ ಅವನು ಅಗ್ನಿ ಸಾಯಿಕುಮಾರ್ ಅಭಿಮಾನಿ ಅಲ್ಲ,ಏಕೆಂದರೆ ಇವನಿಗೆಯೇ ಅಷ್ಟೊಂದು ಹಭಿಮಾಣಿಗಳು ಅದಾಗಲೇ ನಗರದಲ್ಲಿ ಇದ್ದರು.ಇವನೇ ಬೇರೆ.. ಇವನ ಸ್ಟೈಲೇ ಬೇರೆ..ಇವನದ್ದೊಂದು ಹವಾ ಕೂಡ ಬೇರೆಯೇ.
ಮನೆಗೆ ಹೋದರೆ ಸೌಜನ್ಯದ್ದೊಂದು ನಿರಂತರವಾದ ಞಕ್ಕ್ ಞೈ (ಹೇಳಿದ್ದನ್ನೇ ಹೇಳುವುದು) ಯಾವಾಗಲೂ ಇದ್ದದ್ದೇ. ಮದುವೆ ಆಗಿ ಒಂದು ವರ್ಷ ಆಯಿತು,ಇನ್ನೂ ಒಮ್ಮೆ ಕೂಡ ನನ್ನ ತವರು ಮನೆಗೆ ನಾವಿಬ್ಬರು ಒಟ್ಟಿಗೆ ಹೋಗಿಯೇ ಇಲ್ಲ ಎಂದು...ಡೈಲಿ ಪಿರಿಪಿರಿ(ಕಿರಿಕಿರಿ) ಮಾಡುತ್ತಿದ್ದಳು ಪೋಲಿಸನ ಹೆಂಡತಿ ಸೌಜನ್ಯ.
ಅವಳು ಹೇಳಿದಾಗ ಏನಾದರೊಂದು ಕಾಂಜಿಪಿಂಜಿ ನೆಪ ಹೇಳಿ ಕಿಲಾಡಿಯಂತೆ ತಪ್ಪಿಸಿಕೊಳ್ಳುತ್ತಿದ್ದ ವಿವೇಕ್. ಎಷ್ಟಾದರೂ ಅವನು ಬುದ್ಧಿವಂತ...ಬಲೇ ಚತುರ...ಒಟ್ರಾಸಿ ಚಾಲಾಕಿ ಮನುಷ್ಯ.
ಕೊನೆಗೂ ಅವನ ಹಿರಿಯರ ಅಧಿಕಾರಿ ಒಬ್ಬರು ವಿವೇಕ್ ನ ಮನೆಗೆ,ಹೀಗೆ ಪ್ರೀ ಇರುವಾಗ ಜ್ಯೂಸ್ ಕುಡಿಯಲು ಬಂದಿರುವ ಟೈಂ ಅಲ್ಲಿ,ಸೌಜನ್ಯ ಸಿಕ್ಕಿದ್ದೇ ಚಾನ್ಸ್ ಅಂತ ವಿವೇಕ್ ಗೆ ಸ್ವಲ್ಪವೂ ಹಿಂಟ್ ಕೊಡದೇ ನೇರವಾಗಿ ಅವರ ಬಳಿಯೇ ತನ್ನ ಕಷ್ಟವನ್ನು ಅವರಲ್ಲಿ ತೋಡಿಕೊಂಡು ಬಿಟ್ಟಿದ್ದಳು.
ಆ ಹಿರಿಯ ಅಧಿಕಾರಿ ಆ ಕೂಡಲೇ..ಎರಡು ವಾರಗಳ ರಜೆಯನ್ನು ಕಡ್ಡಾಯವಾಗಿ ತೆಗೆದುಕೊಂಡು ಒಮ್ಮೆ ನಿಮ್ಮ ಹೆಂಡತಿಯೊಂದಿಗೆ ಊರೆಲ್ಲಾ ಸುತ್ತು ಬನ್ನಿ ವಿವೇಕ್, ಡ್ಯೂಟಿ ಬಗ್ಗೆ ಚಿಂತೆ ಮಾಡಬೇಡಿ.. ವಿಶ್ರಾಂತಿ, ಫ್ಯಾಮಿಲಿ ಕೂಡ ಅಷ್ಟೆ ಮುಖ್ಯವಾದದ್ದು.. ಎಂದು ಸುಗ್ರೀವಾಜ್ಞೆಯಂತಹ ಆದೇಶ ನಿಂತಲ್ಲೇ ಹೊರಡಿಸಿಯೇ ಬಿಟ್ಟಿದ್ದರು.
ಕೊನೆಗೂ ವಿಧಿ ಇಲ್ಲದೇ ಲಗೇಜು ಹಿಡಿದುಕೊಂಡು ಹೆಂಡತಿಯ ಊರಿಗೆ ಹೋಗಲು ಸಿದ್ಧನಾಗಿ ನಿಂತು ಬಿಟ್ಟ ವಿವೇಕ್.
ಸೌಜನ್ಯ ಮೊದಲೇ ವಿವೇಕ್ ಗೆ ಹೇಳಿದ್ದಳು... ನೋಡಿ ಊರಿಗೆ ಹೋದ ಮೇಲೆ,ಎಲ್ಲರನ್ನೂ ಸಹಜವಾಗಿ ಮಾತಾಡಿಸಿ.ಅಷ್ಟು ಮಾತ್ರವಲ್ಲ ಕನಿಷ್ಠ ಪಕ್ಷ ಎರಡು ವಾರಗಳ ಕಾಲ ಆದರೂ ನೀವೊಬ್ಬ ಪೋಲಿಸ್ ಎನ್ನುವುದನ್ನು ಮರೆತು ನಗು ನಗುತ್ತಾ ಅವರೊಂದಿಗೆ ಬೆರೆತು ಬಿಡಿ.. ಅಲ್ಲಿ ಹೋಗಿ ಇನ್ನು ಬೆಪ್ಪನಂತೆ ಇರಬೇಡಿ,ಅದೇ ಗಂಭೀರ ಮುಖ ಹೊತ್ತುಕೊಂಡು, ಪೋಲಿಸ್ ಬುದ್ಧಿಯನ್ನೇ ಎಲ್ಲಾ ಕಡೆ ಅಪ್ಲೈ ಮಾಡುವುದಿದ್ದರೆ ಖಂಡಿತವಾಗಿಯೂ ನಾವು ಹೋಗುವುದೇ ಬೇಡ.. ಎಂದು ಖಾರವಾಗಿ ಮೊದಲೇ ಹೇಳಿ ಬಿಟ್ಟಿದ್ದಳು ಸೌಜನ್ಯ.
ಆಯಿತು ಮಾರಾಯ್ತಿ... ಎಂದು ತನ್ನ ಹೋಮ್ ಮಿನಿಸ್ಟರ್ ಆರ್ಡರ್ ಅನ್ನು ಕೂಡ ಬಹಳ ಗಂಭೀರವಾಗಿ ತೆಗೆದುಕೊಂಡು, ಅಭ್ಯಾಸ ಇರದಿದ್ದರೂ ನಗು ನಗುತ್ತಲೇ ಕೊನೆಗೂ ಸೌಜನ್ಯಳ ಊರು ತಲುಪಿದ್ದ ವಿವೇಕ್. ಕಾರ್ ನಲ್ಲಿ ಹೋಗುವಾಗ ಕೂಡ ಅವನಷ್ಟಕ್ಕೇ ನಗುತ್ತಾ.. ಮನೆಗೆ ಹೋದ ಮೇಲೆ ಅಲ್ಲಿ ಹೇಗೆ ನಗಬೇಕು ಎಂಬುದನ್ನು ದಾರಿ ಪೂರ್ತಿ ಅಭ್ಯಾಸಿಸಿದ್ದ ವಿವೇಕ್.ಏಕೆಂದರೆ ಸದಾ ರೌಡಿಗಳ ನಡುವೆ ರೌದ್ರ ತಾಂಡವ ನೃತ್ಯ ಮಾಡುತ್ತಿದ್ದ ವಿವೇಕ್ ಬಾಳಿನಲ್ಲಿ ನಗು ಎನ್ನುವುದೇ ಬಹಳ ಅಪರೂಪದ ವಿಷಯವಾಗಿತ್ತು. ಅವನು ರೌಡಿಗಳನ್ನು ಯಮಪುರಿಗೆ ಅಟ್ಟಿ ಜಸ್ಟ್ ಅಟ್ಟಹಾಸ ಮಾಡುತ್ತಿದ್ದ ಅಷ್ಟೇ.
ಸೌಜನ್ಯಳ ಊರು ಅದೊಂದು ಪುಟ್ಟ ಗ್ರಾಮ ಎಂದು ಹೇಳಿದರೆ ನಿಜವಾಗಿಯೂ ಬಹಳ ತಪ್ಪಾಗುತ್ತದೆ.. ಕುಗ್ರಾಮ ಅಂತ ಒತ್ತಿ ಒತ್ತಿ ಹೇಳಿದರೆ ಮಾತ್ರ ಅದು ಪರ್ಪೆಕ್ಟ್ ಆಗಿರುತ್ತದೆ. ಆ ತರಹ ಇತ್ತು ಆ ಹಳ್ಳಿ..
ಮಾವ ಸಂಜೀವಣ್ಣ ಮತ್ತು ಗಿರಿಜಾ ಅತ್ತೆಗೆ ವಿವೇಕನನ್ನು ನೋಡಿ ಬಹಳ ಆನಂದವಾಯಿತು. ಸೌಜನ್ಯಳ ತಂಗಿ ಗೀತಾ ಹಾಗೂ ತಮ್ಮ ರವಿಗೂ ಕೂಡ ಬಾವ ಬಂದಿದ್ದು ಭಯಂಕರ ಖುಷಿ.
ಹೋದ ಕೂಡಲೇ ಒಂದೆರಡು ಬೊಂಡ(ಎಳನೀರು) ಸೇವೆ ಕೂಡ ಆಯಿತು. ಒಂದೇ ಸಾಕು ಎರಡು ಬೇಡ ಅಂತ ವಿವೇಕ್ ಹೇಳಿದ್ದಕ್ಕೆ.. ಅಯ್ಯೋ ಅಳಿಯಂದಿರು ಇಷ್ಟು ನಾಚಿಕೆ ಪಟ್ಟುಕೊಂಡರೆ ಹೇಗೆ ... ನಮ್ಮ ಊರಿನಲ್ಲಿಯೇ ಒಳ್ಳೆಯ ನೀರು ಇರುವ ಬೊಂಡ ಅಂದರೆ ನಮ್ಮ ತೋಟದ್ದೇ.. ಹಹ್ಹಾ.. ಹಹ್ಹಾ ಕುಡಿಯಿರಿ.. ಕುಡಿಯಿರಿ..ಬೇಕಾದಷ್ಟು ಕುಡಿಯಿರಿ.. ಎಂದು ಮತ್ತೊಂದು ಬೊಂಡ ಕೆತ್ತಿ ವಿವೇಕನಿಗೆ ಕುಡಿಸಿದ್ದರು ಮಾವ ಸಂಜೀವಣ್ಣ. ಕುಡಿಯದಿದ್ದರೆ ಬಾಯಿ ತೆರೆಸಿ ಅಕ್ಷರಶಃ ಗಂಟಲಿಗೆ ಸುರಿದೇ ಬಿಡುತ್ತಿದ್ದರೋ ಏನೋ ಅವರು.. ಅವರ ಈ ಭಯಾನಕ ಪ್ರೀತಿ ಕಂಡು ವಿವೇಕನಿಗೆ ನಿಜವಾಗಿಯೂ ಭಯ ಆಗಿದ್ದಂತು ಮಾತ್ರ ಸತ್ಯ.
ಅವರ ಮನೆಯೋ.. ಅಬ್ಬಾ ಎಲ್ಲೆಲ್ಲೂ ಕಾಷ್ಠ ಶಿಲ್ಪದ(ಮರದ ಕೆತ್ತನೆ)ವೈಭವೇ ಹೇರಳವಾಗಿತ್ತು. ಆ ಕಂಬಗಳು, ಆ ಛಾವಣಿ ಎಲ್ಲದಕ್ಕೂ ಒಳ್ಳೆಯ ಜಾತಿಯ ಮರವನ್ನೇ ಬಳಸಿದ್ದರು. ಬಹಳ ಹಳೆಯ ಕಾಲದ ಮನೆ ಆದರೂ ಹೊಸದಾಗಿ ಮರಕ್ಕೆ ಎಣ್ಣೆ ಎಲ್ಲಾ ಬಳಿದು ನಳ ನಳಿಸುವಂತೆ ಮಾಡಿ ಇಟ್ಟುಕೊಂಡಿದ್ದರು ಸಂಜೀವಣ್ಣ.
ಮದುವೆಯ ಸಂದರ್ಭದಲ್ಲಿ ವಿವೇಕ್ ಹೆಣ್ಣು ನೋಡಲು ಬಂದಾಗ ಇದ್ದ ಹಳೆಯ ಸವೆದು ಹೋಗಿದ್ದ ಮರದ ಕಂಬ ಹಾಗೂ ಛಾವಣಿಯ ಮುಚ್ಚಣಿಗೆಯ ಹಲಗೆಗಳನ್ನು ಕೂಡ ಬದಲಾಯಿಸಿ ಅಲ್ಲಿಗೆ ಹೊಸದನ್ನು ಹಾಕಿಸಿದ್ದರು.ಇನ್ನು ಕೆಲವೆಡೆ ಹೊಸ ಕೆತ್ತನೆಗಳನ್ನು ಅಳವಡಿಸಿಕೊಂಡಿದ್ದರು.
ವಿವೇಕ್ ಮನೆಯನ್ನೇ ಬಿಟ್ಟ ಕಣ್ಣುಗಳಿಂದ ಸಮಗ್ರವಾಗಿ ತಿರುಗಿ ನೋಡುತ್ತಿರುವಾಗ ಹಿಂದಿನಿಂದ ಬಂದ ಮಾವ.. ಹಹ್ಹಾ.. ಹಹ್ಹಾ ಅಳಿಯಂದಿರೇ.. ಸುತ್ತ ಹತ್ತು ಹಳ್ಳಿಯಲ್ಲೂ ಕೂಡ ಈ ಸಂಜೀವನ ಈ ವೈಭವದ ಅರಮನೆಯಂತಹ ಮನೆ ಎಲ್ಲೂ ಕೂಡ ಇಲ್ಲ...ನೋಡಿ..ನೋಡಿ..ಹಹ್ಹಾ.. ಹಹ್ಹಾ.. ಗರ್ವದಿಂದ ನಗುತ್ತಾ ಹೇಳಿದ್ದರು.ಎಂತಹ ಕಿರಿ ಕಿರಿ ನಗು ಮರ್ರೆ ಈ ಮಾವನದ್ದು ಎಂದು ಬಾಯಿ ಬಿಟ್ಟು ಹೇಳಲು ಧೈರ್ಯವಿಲ್ಲದೆ,ಮನಸ್ಸಿನಲ್ಲಿಯೇ ಅಂದುಕೊಂಡು ವಿವೇಕ ಮನೆ ನೋಡುವುದನ್ನು ಮುಂದುವರಿಸಿದ್ದ.ಸೌಜ್ಯನಳ ತಮ್ಮ ರವಿಯಂತು ವಿವೇಕ್ ಬೇಡ ಬೇಡ ಅಂದರೂ ಮನೆಯ ಅಟ್ಟ ಹತ್ತಿಸಿ ಅಲ್ಲೂ ಕೂಡ ಎಲ್ಲವನ್ನೂ ಇಂಚು ಇಂಚು ತೋರಿಸಿದ್ದ.
ವಿವೇಕ್ ಬಂದಿದ್ದಕ್ಕೆ ಒಂದೆರಡು ನಾಟಿ ಕೋಳಿಗಳ ಜೀವನಕ್ಕೆ ಅಂತಿಮ ಶುಭ ವಿಧಾಯ ಕೋರಿ,ಕೋಳಿ ಗಸಿ ಮಾಡಿದ್ದರು ಗಿರಿಜಾ ಅತ್ತೆ. ರಾತ್ರಿ ಊಟ ಬಡಿಸುವಾಗ ಎಷ್ಟು ಬೇಡ ಬೇಡ ಎಂದು ಹೇಳಿದರೂ.. ಬಟ್ಟಲು ಪೂರ್ತಿ ಕೋಳಿ ಗಸಿ ಬಡಿಸಿದ್ದರು ಅವರು. ವಿವೇಕ್ ಬೇಡ ಅಂತ ಹೇಳಿದರೂ... ತಿನ್ಲಿಕ್ಕೆ ಎಲ್ಲಾ ದಾಕ್ಷಿಣ್ಯ ಮಾಡಬಾರದು ಅಳಿಯಂದಿರೇ.. ಇದು ನಾಟಿ ಕೋಳಿ.. ನಿಮ್ಮ ಸಿಟಿಯ ಫಾರಂ ಕೋಳಿಗಿಂತಲೂ ಟೇಸ್ಟ್ ಜಾಸ್ತಿ.. ತಿನ್ನಿ ತಿನ್ನಿ.. ನಿಮಗೆಂದೇ ಮಾಡಿದ್ದು.. ಎಂದು ಅವನ ಒಪ್ಪಿಗೆ ಇಲ್ಲದೆಯೂ ಬೇಡ ಬೇಡ ಎಂದು ವಿವೇಕ್ ತನ್ನ ತಟ್ಟೆಗೆ ಅಡ್ಡ ಹಿಡಿದಿದ್ದ ಅವನ ಎರಡೂ ಕೈಯನ್ನು ಸರಿಸಿ ಮತ್ತೊಂದಿಷ್ಟು ಕೋಳಿ ಗಸಿ ಸುರಿದಿದ್ದರು ಗಿರಿಜಾ ಅತ್ತೆ.
ಮಾವ ಸಂಜೀವಣ್ಣ ಕೂಡ.... ಅಳಿಯಂದಿರೇ.
ನಮ್ಮ ಗಿರಿಜಾ ಕೋಳಿ ಗಸಿ ಮಾಡುವುದರಲ್ಲಿ ಎತ್ತಿದ ಕೈ..ನಮ್ಮ ಕುಟುಂಬದಲ್ಲಿಯೇ ಅವಳಷ್ಟು ಚೆನ್ನಾಗಿ ಕೋಳಿ ಅಡುಗೆ ಮಾಡುವವರಿಲ್ಲ.. ಚೆನ್ನಾಗಿ ಬಾರಿಸಿ.. ಹಹ್ಹಾ.. ಹಹ್ಹಾ.. ಎಂದು ಹೇಳಿ ಗಿರಿಜಮ್ಮನಿಗೆ ಮತ್ತಷ್ಟು ಬಡಿಸಲು ಪ್ರೋತ್ಸಾಹ ಹಾಗೂ ಉತ್ತೇಜನ ನೀಡಿದ್ದರು. ಅದು ಕೇಳಿ ಮತ್ತಷ್ಟು ಜೋಶ್ ನಿಂದ ಕೇವಲ ವಿವೇಕ್ ಒಬ್ಬನಿಗೆ ಅವನ ತಟ್ಟೆ ಖಾಲಿಯಾದಂತೆ ಶ್ರದ್ಧೆಯಿಂದ ಬಡಿಸುತ್ತಲೇ ಇದ್ದರು ಗಿರಿಜಮ್ಮ.ಕೊನೆಗೊಮ್ಮೆ ಕೋಳಿ ಗಸಿ ಮಾಡಿದ್ದ ಪಾತ್ರೆಯಲ್ಲಿ ಕೋಳಿ ಗಸಿ ಸಂಪೂರ್ಣ ಖಾಲಿ ಆದಾಗಲೇ ಅವರು ಬಡಿಸುವುದನ್ನು ನಿಲ್ಲಿಸಿದ್ದು.
ಅತ್ತೆ ಮಾಡಿದ ಕೋಳಿ ಗಸಿ ಚೆನ್ನಾಗಿದ್ದರೂ ಖಾರ ಖಾರವಾಗಿ ಇದ್ದುದರಿಂದ ವಿವೇಕ್ ತಟ್ಟೆಗೆ ಬಿದ್ದ ಅಷ್ಟೂ ಕರಿಯನ್ನು ತಿನ್ನಲೂ ಆಗದೇ.. ಅತ್ತ ಬಿಸಾಡಲೂ ಆಗದೆ ಪಡುತ್ತಿದ್ದ ಕಷ್ಟವನನ್ನು ನೋಡಿ ಸೌಜನ್ಯಳ ತಮ್ಮ ರವಿ ಹಾಗೂ ತಂಗಿ ಗೀತಾ ತಲೆ ತಗ್ಗಿಸಿಕೊಂಡು ಮುಸಿ ಮುಸಿ ನಕ್ಕಿದ್ದರು.
ಮರುದಿನವೇ ಊರು ತಿರುಗಲು ಮಾವನೊಂದಿಗೆ ಹೊರಟು ನಿಂತ ವಿವೇಕ್. ನಿಜ ಹೇಳಬೇಕೆಂದರೆ ಅವನಿಗೆ ಹೋಗಲು ಅಂತಹ ಉಮೇದು ಏನೂ ಇರಲಿಲ್ಲ,ಆದರೆ ಸಂಜೀವಣ್ಣ ಬಿಡಬೇಕಲ್ಲ.ತನ್ನ ಮಾವನ ಒಟ್ರಾಸಿ ಒತ್ತಾಯಕ್ಕೆ ಗಂಟು ಬಿದ್ದು ಕೊನೆಗೂ ಅವರೊಡನೆ ಹೊರಟು ನಿಂತ ವಿವೇಕ್.
ಎಲ್ಲರೂ ತಮ್ಮ ಹಳ್ಳಿಯ ಪ್ರಮುಖ ಸ್ಥಳಗಳನ್ನು, ದೇವಸ್ಥಾನವನ್ನು ಊರಿಗೆ ಬಂದವರಿಗೆ ಮೊದಲು ತೋರಿಸಲು ಉತ್ಸುಕರಾದರೆ..ಈ ಸಂಜೀವಣ್ಣ ಮೊದಲು ವಿವೇಕ್ ನನ್ನು ಕರೆದುಕೊಂಡು ಹೋಗಿದ್ದೇ ಊರಿನ ಪ್ರಖ್ಯಾತ & ಕುಖ್ಯಾತವಾದ ಒಂದು ಶೇಂದಿ ಅಂಗಡಿಗೆ.
ನಾನು ಬರಲ್ಲ ಮಾವ.. ಅಂತ ವಿವೇಕ ಎಷ್ಟೇ ಹೇಳಿದರೂ..ಅವನನ್ನು ಸಂಜೀವಣ್ಣ ಬಿಡಲಿಲ್ಲ.
ಬಿಯರ್ ಕುಡಿಯುವುದರಿಂದ ಏನು ಸಿಗುತ್ತದೆ ಅಳಿಯಂದಿರೇ .. ಇದನ್ನು ಒಮ್ಮೆ ಕುಡಿದು ನೋಡಿ ಆಮೇಲೆ ನೀವೇ ಇದನ್ನು ಹುಡುಕಿಕೊಂಡು ನಗರದಿಂದ ಇಲ್ಲಿಗೆ ಡೈಲಿ ಬರ್ತೀರಾ ನೋಡಿ.. ಹಹ್ಹಾ.. ಹಹ್ಹಾ..ಹತ್ತು ಊರಿನಲ್ಲೂ ಇಂತಹ ಶೇಂದಿ ಸಿಗಲ್ಲ..
ಎಂದು ಹೇಳಿದವರೇ ಶೇಂದಿ ಅಂಗಡಿಯವನಿಗೆ ತನ್ನ ಅಳಿಯನನ್ನು ಪರಿಚಯಿಸಿ.. ಇವರಿಗೆ ಒಳ್ಳೆಯ ಕ್ವಾಲಿಟಿ ಶೇಂದಿ ಕೊಡು ಎಂದು ತಾಕೀತು ಮಾಡಿದರು ಸಂಜೀವಣ್ಣ.
ಆ ನಂತರ ವಿವೇಕ್ ಗೆ.. ನೀವು ಇಲ್ಲೇ ಕುಡೀತಾ ಇರಿ ಅಳಿಯಂದಿರೇ, ಸ್ವಲ್ಪ ಬೇರೆ ಕೆಲಸ ಇದೆ.. ಹತ್ತು ನಿಮಿಷದಲ್ಲಿಯೇ ಬರ್ತೇನೆ.. ಎಂದು ಹೇಳಿ ಅಲ್ಲಿಂದ ಶೇಂದಿ ಅಂಗಡಿಯ ಹಿಂದೆ ಹೋಗಿ ಅಲ್ಲಿದ್ದ ಗುಡ್ಡದ ಕಡೆಗೆ ನಡೆದು ಬಿಟ್ಟರು ಸಂಜೀವಣ್ಣ.
ಶೇಂದಿ ಅಂಗಡಿಯವನು ಕೊಟ್ಟ ಶೇಂದಿ ಫ್ರೆಶ್ ಆಗಿದ್ದ ಕಾರಣ ಸಿಹಿಯಾಗಿಯೇ ಇತ್ತು.
ಶೇಂದಿ ಅಂಗಡಿಯವನು ಆ ನಂತರ ನಿಧಾನವಾಗಿ ಬಂದು ವಿವೇಕ್ ಬಳಿ ಬಂದು... ಸಾ.. ನಿಮಗೆ ಸ್ವಲ್ಪ ಅದು ಕೊಡುವನಾ.. ಕೇಳಿದ.
ಶೇಂದಿ ಕುಡಿಯುತ್ತಿದ್ದ ವಿವೇಕ್ ಗೆ.. ಅದು ಎಂದರೆ ಏನೆಂದು ಗೊತ್ತಾಗಲಿಲ್ಲ..
ಅದು ಅಂದರೆ.. ಏನು.? ಕೇಳಿದ.
ಅದೇ ಸಾ.. ಒಮ್ಮೆ ತಗೊಳ್ಳಿ.. ಆಮೇಲೆ ಈ ಶೇಂದಿ ಎಲ್ಲಾ ಯಾವ ಲೆಕ್ಕ ಅದರ ಎದುರು... ಅಂದ.
ಅದೇ ಅದು ಅಂದರೆ ಯಾವುದು... ಕುತೂಹಲದಿಂದ ಮತ್ತೆ ವಿವೇಕ ಕೇಳಿದ.
ಅಂಗಡಿಯವನು ಮೆಲ್ಲನೆ ಹೇಳಿದ.. ಅದೇ ಸಾರ್ ಎಲ್ಲರೂ ಕೇಳುವ ಕಂಟ್ರಿ ಸಾರಾಯಿ..
ಅಂದರೆ ಕಳ್ಳ ಬಟ್ಟಿ ಸಾರಾಯಿ ನಾ? ವಿವೇಕ ಆಶ್ಚರ್ಯದಿಂದ ಕೇಳಿದ.
ಹಾನ್ ಏನೋ ಒಂದು... ಬಹುಶಃ ಎಜ್ಯಾಟ್ಲಿ ಅದೇ ಇರ್ಬೇಕು.. ಅಂದ ಇಂಗ್ಲಿಷ್ ಅನ್ನು ಕೂಡ ಸೇರಿಸಿ ಅಂಗಡಿಯವ.
ಅವನಿಗೆ ವಿವೇಕ್ ಒಬ್ಬ ಫೋಲಿಸ್ ಎಂದು ಗೊತ್ತಿಲ್ಲ.
ವಿವೇಕ್ ಕೂಡ ತಾನೊಬ್ಬ ಪೋಲಿಸ್ ಎಂದು ಗೊತ್ತುಪಡಿಸದೇ ಕೇಳಿದ... ಕಳ್ಳ ಭಟ್ಟಿ ಸಾರಾಯಿ ಮಾಡುವುದು ಅಪರಾಧ ಅಲ್ವಾ..?! ಗೊತ್ತಾದರೆ ನಿಮ್ಮನ್ನೆಲ್ಲಾ ಜೈಲಿಗೆ ಹಾಕ್ತಾರೆ...!
ಅದಕ್ಕೆ ಅಂಗಡಿಯವನು ಹೇಳಿದ... ಹೋಗಿ ಸಾ ನೀವು... ಇಲ್ಲಿ ಎಲ್ಲರೂ ಅದನ್ನೇ ಕುಡಿಯುವುದು... ಆದ್ರೆ ನಾವು ಯಾರಿಗೂ ಗೊತ್ತೇ ಮಾಡಲ್ಲ...ಪೋಲಿಸ್ ಅಂತು ನಮ್ಮ ಹಳ್ಳಿಗೆ ಬಂದದ್ದೇ ಇಲ್ಲ.. ನಿಮಗೆ ಒಂದು ವಿಷಯ ಗೊತ್ತುಂಟಾ ...ಈ ಊರಿನಲ್ಲಿ ಕಳ್ಳ ಭಟ್ಟಿ ಮಾಡುವುದರಲ್ಲಿ ಸ್ಪೆಷಲಿಸ್ಟ್ ಯಾರೂ ಹೇಳಿ... ಅದೇ ಊರಿನ ಗಣ್ಯ ವ್ಯಕ್ತಿ ಹಾಗೂ ನಿಮ್ಮ ಮಾವ ಸಂಜೀವಣ್ಣ ...
ಸ್ವಲ್ಪ ಹೊತ್ತಿನ ಮುಂಚೆ ಅವರು ನಿಮ್ಮ ಬಳಿ ಈಗ ಬರ್ತೇನೆ ಎಂದು ಹೇಳಿ ಹೋದ್ರಲ್ಲ.. ಅದು ಅಲ್ಲಿಗೆಯೇ ಹೋಗಿದ್ದು... ಕಳ್ಳ ಭಟ್ಟಿ ಮಾಡುವಲ್ಲಿಗೆ..ಸಂಜೀವಣ್ಣ ದೊಡ್ಡ ಕಿಲಾಡಿ... ಯಾವ ಗುಡ್ಡೆಯಲ್ಲಿ ಎಲ್ಲಿ ಕಳ್ಳ ಭಟ್ಟಿ ಸರಾಯಿ ಮಾಡ್ತಾರೋ ಎಂದು ದೇವರಿಗೂ ಕೂಡ ಗೊತ್ತಾಗಲ್ಲ .. ಇನ್ನು ಪೋಲಿಸರಿಗೆ ಗೊತ್ತಾಗುತ್ತಾ ಹೇಳಿ...ಹಹ್ಹಾ.. ಹಹ್ಹಾ..
ವಿವೇಕ್ ಶೇಂದಿ ಕುಡಿಯುವುದನ್ನು ಒಮ್ಮೆಲೇ ನಿಲ್ಲಿಸಿ.. ಯಾರು.. ಮಾವನ..!? ಎಂದು ಕಣ್ಣರಳಿಸಿ ಕೇಳಿದ..
ಅದಕ್ಕೆ ಅಂಗಡಿಯವನು... ಹೌದು ಸಾ..ಅವರೇ.. ನಿಜ ಹೇಳಬೇಕೆಂದರೆ ಅವರೇ ನಮ್ಮ ಊರಿನ ದೊಡ್ಡ ಸಾಹಸಿ... ನಮ್ಮ ಈ ಸಂಜೀವಣ್ಣ ಎಷ್ಟು ಬೇಟೆ ಆಡಿದ್ದಾರೆ ಗೊತ್ತಾ ನಿಮಗೆ...ಅವರು ಬೇಟೆ ಆಡಿದ್ದಕ್ಕೆ ಲೆಕ್ಕವೇ ಇಲ್ಲ... ಅವರು ಬರೀ ಮೊಲ, ಹಂದಿ ಎಲ್ಲ ಬೇಟೆಯಾಡೋ ಸಾಮಾನ್ಯ ಬೇಟೆಗಾರ ಅಲ್ಲ ಸಾ... ಅವರು ದೊಡ್ಡ ದೊಡ್ಡ ಹುಲಿ, ಸಿಂಹಗಳನ್ನೇ ಬೇಟೆ ಆಡೋ ರಣ ಬೇಟೆಗಾರ.. ಈ ಕಾಡಿನ ಎಷ್ಟೋ ಹುಲಿ ಸಿಂಹಗಳಂತ ದುಷ್ಟ ಮೃಗಗಳನ್ನು ಕೊಂದ ಅವರೇ ನಿಜವಾದ ನಾಡಿನ ರಕ್ಷಕ ಸಾರ್..
ಅದಕ್ಕೆ ವಿವೇಕ್... ಸಿಂಹ ಕೊಂದಿದ್ದಾರ..? ಆದ್ರೆ ಸಿಂಹ ಇರುವುದು ಗುಜರಾತ್ ನಲ್ಲಿ ಮಾತ್ರ ಅಲ..!
ಅಂಗಡಿಯವ... ಅದು ಸಾ.. ಸಂಜೀವಣ್ಣನ ಸಾಹಸ ಕಥೆಗಳನ್ನು ಉತ್ಸಾಹದಿಂದ ಹೇಳುವಾಗ ಹೀಗೆ ತಪ್ಪಿ ಬಾಯಲ್ಲಿ ಬಂದು ಬಿಡ್ತು.. ಆದ್ರೆ ಕಾಡಿನ ಹೆಚ್ಚಿನ ಪ್ರಾಣಿ ಕೊಂದು ಶೌರ್ಯ ಮೆರೆದಿದ್ದು ಗ್ಯಾರಂಟಿ ಸಾರ್...ಅದಕ್ಕೆ ನಾನೇ ಸಾಕ್ಷಿ. ಏನು ಗುರಿ ಸಾರ್ ಅವರದ್ದು.. ಅವರನ್ನು ಸರ್ಕಾರ ಗುರುತಿಸಿ ಒಲಂಪಿಕ್ ಗೆ ಕಳುಹಿಸಿದ್ದೆ ಆದ್ರೆ ಶೂಟ್ ಮಾಡುವುದರಲ್ಲಿ ನಮಗೆ ಹತ್ತು ಹದಿನೈದು ಚಿನ್ನದ ಪದಕ ಗ್ಯಾರಂಟಿ ಸಾರ್... ಮತ್ತೆ.. ನಿಮ್ಮ ಮಾವ ಅಂದ್ರೆ ಏನು ಸಾಮಾನ್ಯದವರು ಅಂತ ತಿಳಿದುಕೊಂಡ್ರ ನೀವು..ಇನ್ನೂ ಸಮಾಜದ ಕಣ್ಣಿಗೆ ಬೀಳದ ಬಹುಮುಖ ಪ್ರತಿಭೆಯ ಎಲೆ ಮರೆಯ ಕಾಯಿ ಸಾರ್ ಅವರು.
ವಿವೇಕ್ ಕೇಳಿದ... ಮತ್ತೆ ಹುಲಿ ಚರ್ಮ, ಜಿಂಕೆ ಕೊಂಬು, ಆನೆ ದಂತ ಎಲ್ಲಾ ತೆಗೀತಾರ ಅವರು?
ಅಂಗಡಿಯವ ಹೇಳಿದ... ಮತ್ತೆ ಎಂತ.. ಎಲ್ಲಾ ಅಂದ್ರೆ ಎಲ್ಲಾ ತೆಗ್ದು ಮಾರ್ತಾರೆ ಅವರು.. ಅವರ ಕುತ್ತಿಗೆಯಲ್ಲಿ ಹುಲಿ ಉಗುರಿನ ಒಂದು ಚೈನ್ ಉಂಟು ನೋಡಿ, ಅದರ ಉಗುರನ್ನು ಕೂಡ ಅವರು ಕೊಂದ ಹುಲಿಯಿಂದಲೇ ತೆಗೆದದ್ದು ಹಾಕಿದ್ದು.
ವಿವೇಕ್ ಏನೂ ಹೇಳದೆ ಸುಮ್ಮನಿದ್ದ..
ಅಂಗಡಿಯವನೇ ಮತ್ತೆ ಮುಂದುವರಿಸಿ ಹೇಳಿದ... ಅವರ ಮನೆಯಲ್ಲಿ ಮರದ ಕೆತ್ತನೆ ಎಲ್ಲಾ ನೋಡಿದ್ರಾ ಸಾರ್.. ಅದು ಮರ ಎಲ್ಲ ಎಲ್ಲಿಂದ ತಂದದ್ದು ಅಂತ ತಿಳಿದುಕೊಂಡ್ರಿ... ಇದೇ ನಮ್ಮ ಕಾಡಿನ ದೊಡ್ಡ ದೊಡ್ಡ ಸಾಗುವಾನಿ, ಬೀಟೆ ಮರಗಳು ಸಾರ್... ಸುಮ್ಮನೆ ಹಾಳಾಗಿ ಕೆಳಗೆ ಬಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗಬಾರದು ಎಂದು ಅವರೇ ಅದನ್ನೆಲ್ಲಾ ಜಾಗರೂಕತೆಯಿಂದ ಕಡಿದು ಅವರ ಮನೆಯಲ್ಲಿ ಕಲೆಯನ್ನು ಅರಳಿಸಿದ ಕಲಾವಿದ ಸಾರ್ ಅವರು..
ವಿವೇಕ ಕೇಳಿದ... ಮತ್ತೆ ಶ್ರೀಗಂಧ ಎಲ್ಲಾ?
ಅಂಗಡಿಯ ಹೇಳಿದ... ಶ್ರೀಗಂಧ, ರಕ್ತ ಚಂದನ ಎಲ್ಲಾ ಕಡಿದು ಮಾರಿ ಖಾಲಿ ಆಗಿದೆ ಸಾರ್...ಹಾಗಾಗಿ ಈಗ ಉಳಿದದ್ದನ್ನು ಮಾತ್ರ ನಿರಂತರವಾಗಿ ಕಡಿದು ಸಾಗಿಸ್ತಾರೆ ಇದ್ದಾರೆ... ರಾತ್ರಿ ವೇಳೆಯಲ್ಲಿ ಮರ ಕಡಿಲಿಕ್ಕೆ ಅಂತಾನೇ ಹತ್ತು ಹದಿನೈದು ಜನರನ್ನು ಇಟ್ಟುಕೊಂಡು ಅವರಿಗೆಲ್ಲಾ ಕೆಲಸ ಕೊಟ್ಟಿರುವ ನಿಮ್ಮ ಮಾವ ನಮ್ಮ ಸಂಜೀವಣ್ಣ ಒಂದು ಅರ್ಥದಲ್ಲಿ ನಿಜವಾಗಿಯೂ ಬಡವರ ಬಂಧು ಸಾರ್...
ವಿವೇಕ್ ಏನೂ ಹೇಳಲಿಲ್ಲ..
ಅಂಗಡಿಯವೇ ಹೇಳಿದ..ಹಾನ್.. ಇನ್ನೊಂದು ವಿಷಯ ಇದನ್ನೆಲ್ಲಾ ನಾನು ನಿಮಗೆ ಹೇಳಿದೆ ಅಂತ ಅವರಿಗೆ ಹೇಳ್ಬೇಡಿ ಇನ್ನು... ಅವರು ಹಳ್ಳಿಯ ಗಣ್ಯ ವ್ಯಕ್ತಿ. ಅವರ ಮರ್ಯಾದೆ ಹೋಗ್ಬಾರ್ದು ಸಾ.... ನಾನು ನಿಮಗೆ ಸುಮ್ಮನೆ ಮಾತಿಗೆ ಇರ್ಲಿ ಅಂತ, ನಿಮ್ಮ ಮಾವ ಎಂತಹ ಸಾಹಸಿ ಅಂತ ಹೇಳಿದ್ದು ಅಷ್ಟೇ... ಅಂದ ಹಾಗೆ ನಿಮಗೆ ಒಂದು ಬಾಟಲ್ ಅದು ಕೊಡುವುದಾ...ಒಳ್ಳೆ ಕಿಕ್ ಸಾ... ಅಂಗಡಿಯವ ಹೇಳಿದ.
ಬೇಡ.. ಬೇಡ.. ಎಂದು ಹೇಳಿದ ವಿವೇಕ ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಶೇಂದಿಯನ್ನು ನಿಧಾನವಾಗಿ ಮತ್ತೆ ಕುಡಿಯತೊಡಗಿದ.
ಕೆಲವೇ ಕ್ಷಣಗಳಲ್ಲಿ ಅಂಗಡಿಯ ಹಿಂದೆ ಎಲ್ಲೋ ಗುಡ್ಡಕ್ಕೆ ಹೋಗಿದ್ದ ಮಾವ ಸಂಜೀವಣ್ಣ ಶೇಂದಿ ಕುಡಿಯುತ್ತಿದ್ದ ವಿವೇಕ್ ನ ಎದುರು ಪ್ರತ್ಯಕ್ಷವಾಗಿ... ಹಹ್ಹಾ... ಅಳಿಯಂದಿರಿಗೆ ಶೇಂದಿ ಬಹಳ ಇಷ್ಟ ಆಗಿರಬೇಕು.. ಅದಕ್ಕೆ ಬಹಳ ಶ್ರದ್ಧೆಯಿಂದ ಕುಡಿಯುತ್ತಿದ್ದಾರೆ... ಕುಡಿಯಿರಿ ಕುಡಿಯಿರಿ.. ಇನ್ನು ಎರಡು ವಾರ ನಾವು ಇನ್ನೂ ಅಧ್ಭುತವಾದುದ್ದನ್ನು ಕುಡಿಯಲಿದ್ದೆವೆ ಎಂದು ನಗು ನಗುತ್ತಾ ಹೇಳಿ.. ತಾವೊಂದು ಶೇಂದಿ ಪಾತ್ರೆಯನ್ನು ಹಿಡಿದುಕೊಂಡು ವಿವೇಕನ ಎದುರೇ ಕುಳಿತುಕೊಂಡು ಶೇಂದಿಯನ್ನು ಹೀರ ತೊಡಗಿದರು ಸಂಜೀವಣ್ಣ.
ಒಬ್ಬ ನಿಷ್ಠಾವಂತ ಪೋಲಿಸ್ ಆಗಿ ಈ ಕಳ್ಳಭಟ್ಟಿ ತಯಾರಿಸುವ ನನ್ನ ಈ ಕಾಡುಗಳ್ಳ ಮಾವನಿಗೆ ಏನೂ ಮಾಡುವುದು ಎಂದು ಗೊತ್ತಾಗದೇ ವಿವೇಕ್ ತಲೆಕೆರೆದುಕೊಂಡು ಇರುವಾಗಲೇ...
ಸಂಜೀವಣ್ಣ ಅಂಗಡಿಯವನಿಗೆ ಹೇಳಿದರು... ನನ್ನ ಅಳಿಯಂದಿರಿಗೆ ಕೇಳಿ ಕುಡಿಯಲು ನಾಚಿಕೆ ಜಾಸ್ತಿ... ಕೊಡೋ ಅವರಿಗೆ ಇನ್ನೊಂದು ಪಾತ್ರೆಯಲ್ಲಿ ಫ್ರೆಶ್ ಶೇಂದಿ... ಹಹ್ಹಾ.. ಹಹ್ಹಾ..
ವಿವೇಕ್ ಎಷ್ಟು ಬೇಡ ಬೇಡ ಅಂದರೂ... ಅಂಗಡಿಯವನು ನಗುತ್ತಲೇ... ಕುಡಿಯಿರಿ ಸಾ... ಏನಾಗಲ್ಲ.. ಎಂದು ಹೇಳಿ ಮತ್ತೊಂದು ಶೇಂದಿ ಪಾತ್ರೆಯನ್ನು ವಿವೇಕನೆದರು ಇಟ್ಟು ಹೋದ..
ಶೇಂದಿ ಕುಡಿಯುತ್ತಿದ್ದ... ಸಂಜೀವಣ್ಣ ನಗು ನಗುತ್ತಲೇ ತನ್ನ ಶೇಂದಿ ಪಾತ್ರೆಯನ್ನು ಮೇಲೆತ್ತಿ ಇಂಗ್ಲಿಷ್ ನಲ್ಲಿ ಚಿಯರ್ಸ್ ಅಂದರು...
ಈ ನನ್ನ ಮಾಮನಿಗೆ ಏನೂ ಮಾಡುವುದೆಂದು ಯೋಚಿಸುತ್ತಿದ್ದ ವಿವೇಕ್...ಸೌಜನ್ಯ ಹೇಳಿದ್ದ ಎಲ್ಲರೊಂದಿಗೆ ನಗುತಾ ನಗುತ್ತಾ ಮಾತಾಡಬೇಕು ಎಂದು ನೆನಪಾಗಿ... ತಾನೂ ಕೂಡ ಪ್ರಯತ್ನ ಪೂರ್ವಕವಾಗಿ ನಗುತ್ತಲೇ ಅವರ ಶೇಂದಿ ಪಾತ್ರೆಗೆ ತನ್ನ ಪಾತ್ರೆಯನ್ನು ತಾಗಿಸಿ ಚಿಯರ್ಸ್ ಎಂದು ಹೇಳಿ...
ಮತ್ತೆ ನನ್ನ ಈ ಕಿಲಾಡಿ ಕಳ್ಳಭಟ್ಟಿ ಸಂಜಿವ ಮಾವನಿಗೆ ಏನೂ ಮಾಡುವುದು ಎಂಬ ಯೋಚನೆಗೆ ಬಿದ್ದುಬಿಟ್ಟ ವಿವೇಕ್.
.....................................................................................
#ಇಷ್ಟೇ...
(ಕಾಲ್ಪನಿಕ ಕಥೆ)
ab pacchu
moodubidire

Comments
Post a Comment