ಪತ್ರೋಡೆ ಎಂಬ ಖಾದ್ಯವು ಮರಕೆಸು ಎಂಬ ಅನರ್ಘ್ಯವು

 





ತುಳುನಾಡು ಅನ್ನುವುದು ಹಲವು ವೈಶಿಷ್ಟ್ಯಗಳ ಹಲವು ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಆಚರಣೆಗಳ ತವರೂರು.ಅದನ್ನು ಹೇಳುತ್ತಾ ಹೋದರೆ ಅದೇ ಒಂದು ಅಧ್ಯಯನದ ಅತೀ ದೊಡ್ಡ ವಿಷಯವಾಗುತ್ತದೆ.


ಈ ವೈಶಿಷ್ಟ್ಯಗಳೇ ತುಳುನಾಡನ್ನು ಬೇರೆ ಪ್ರಾಂತ್ಯಗಳಿಂದ ತುಸು  ವಿಶೇಷವನ್ನಾಗಿಸುವುದು  ಮತ್ತು ಎಂದಿಗೂ ಈ ಪ್ರದೇಶ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿಯೇ ಉಳಿದಿದೆ.ಹೆಚ್ಚಾಗಿ ಬೇರೆ ಭಾಗದ ಜನರಿಗೂ ತುಳುನಾಡು ಅಂದರೆ ಅದೇನೋ ಆಸಕ್ತಿ,ಅಭಿಮಾನ, ಕುತೂಹಲ ಖಂಡಿತವಾಗಿಯೂ ಇದೆ.

"ಬಡಕಾಯಿ ಬಾರ್ಕೂರು ಗಡೀರ್ದ್, ತೆನ್ಕಾಯಿ ನೀಲೇಶ್ವರ ಗಡಿಮುಟ್ಟ, ಮೂಡಾಯಿ ಪಚ್ಚೆ ಘಟ್ಟಡ್ದ್, ಪಡ್ಡಾಯಿದ ನೀಲಿ ಕಡಲ್ಡ ಕರೆ ಮುಟ್ಟ ಉಂಡು ಎಂಕ್ಲೆನ ಮೋಕೆದ  ತುಳುವನಾಡು.." ಎಂದು ಪ್ರತೀ ತುಳುವನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಂದರೆ ಇದರ ಅರ್ಥ ಉತ್ತರ ದಿಕ್ಕಿನಲ್ಲಿ ಬಾರ್ಕೂರು ತನಕ(ಉಡುಪಿ), ದಕ್ಷಿಣ ದಿಕ್ಕಿನಲ್ಲಿ ನೀಲೇಶ್ವರ(ಕಾಸರಗೋಡು)ದ ವರೆಗೆ, ಪೂರ್ವದಲ್ಲಿ ಘಟ್ಟ ಪ್ರದೇಶಗಳ ಗಡಿಯವರೆಗೆ ಹಾಗೂ ಪಶ್ಚಿಮದ ವಿಸ್ತಾರ ಕಡಲ ಕಿನಾರೆ ವರೆಗೆ ತುಳು ಭಾಷಿಗರ,ತುಳು ಸಂಸ್ಕೃತಿಯ ತುಳುನಾಡು ಹರಡಿಕೊಂಡಿದೆ ಎಂದು.

ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇಂದಿನ ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಸದ್ಯಕ್ಕೆ ಕೇರಳ ಸೇರಿರುವ ಒಂದು ಸಮಯದಲ್ಲಿ ನಮ್ಮ ರಾಜ್ಯದ ಭಾಗವೇ ಆಗಿದ್ದ ಕಾಸರಗೋಡು ಪ್ರದೇಶಗಳನ್ನು ತುಳುನಾಡು ಎಂದು ಹೇಳಬಹುದು.

ನಿಮಗೆ ತುಳುನಾಡು ಅಂದ ಕೂಡಲೇ ಇಲ್ಲಿಯ ಭಾಷೆ, ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯ, ದೇವಸ್ಥಾನ, ದೈವಸ್ಥಾನ, ಭೂತಾರಾಧನೆ, ನಾಗಾರಾಧನೆ,ಕಂಬಳ, ಯಕ್ಷಗಾನಗಳ ಒಟ್ಟಿಗೆ ಇನ್ನೊಂದು ವಿಚಾರ ವಿಶೇಷ ಆಸಕ್ತಿಯನ್ನು ಹುಟ್ಟಿಸಿಯೇ ಹುಟ್ಟಿಸುತ್ತದೆ, ಅದುವೇ ಇಲ್ಲಿಯ ರುಚಿ ರುಚಿಯಾದ ತಿನಿಸುಗಳು.

ತುಳುನಾಡಿನ ಆಹಾರಗಳನ್ನು ಸವಿದವನೇ ಬಲ್ಲ ಅದರ ರುಚಿಯ. ಉಡುಪಿ ಅಡುಗೆ ಎಂಬ ಜಗದ್ವಿಖ್ಯಾತಿಯ
ಸಸ್ಯಾಹಾರದಿಂದ ಹಿಡಿದು,ಇಲ್ಲಿಯ ಮತ್ಸ್ಯಹಾರದ ಭೋಜನ ಎಲ್ಲರಿಗೂ ಅತೀ ಪ್ರೀಯ.

ಧಾರವಾಡದ ಪೇಡ, ಮೈಸೂರು ಪಾಕ್, ಬೆಳಗಾವಿ ಕುಂದ,ದಾವಣಗೆರೆ ಬೆಣ್ಣೆ ದೋಸೆ, ಗೋಕಾಕದ ಕರದಂಟು,ಉತ್ತರ ಕರ್ನಾಟಕದ ಜೋಳದ ರೊಟ್ಟಿ .. ಹೀಗೆ ಹಲವಾರು ಪ್ರಾಂತ್ಯಗಳು ತಮ್ಮ ವಿಶಿಷ್ಟವಾದ ತಿನಿಸುಗಳಿಗೆ ತುಂಬಾನೇ ಪ್ರಸಿದ್ಧವನ್ನು ಪಡೆದು ಕೊಂಡಿವೆ. ಹಾಗೂ ಆ ತಿನಿಸುಗಳ ಹೆಸರುಗಳು ಆ ಊರಿನೊಂದಿಗೆ ಶಾಶ್ವತವಾಗಿ ಬೆಸೆದುಕೊಂಡಿದೆ.

ಆದರೆ ನೀವು ತುಳುನಾಡು ಎಂಬ ಪ್ರಾಂತ್ಯದ ಒಂದು ತಿನಿಸಿನ ಬಗ್ಗೆ ಹೇಳಿ, ಇಲ್ಲವೇ ಮಂಗಳೂರು ಉಡುಪಿಯನ್ನು ಒಳಗೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ವಿಶೇಷ ತಿಂಡಿಯ ಬಗ್ಗೆ ಹೇಳಿ ಎಂದು ಹೇಳಿ ಎಂದು ಕೇಳಿದರೆ.. ನನಗೆ ಯಾವ ತಿಂಡಿಯನ್ನು ಮೊದಲು ಹೇಳಬೇಕೆಂದೆ ಗೊಂದಲವಾಗಿ ಬಿಡುತ್ತದೆ.ಕಷ್ಟ ಸಾಧ್ಯ ಅದು.ಯಾಕೆಂದರೆ ಈ ಭಾಗಗಳ ತಿಂಡಿ ತಿನಿಸುಗಳ ಖಾದ್ಯ ಖಜಾನೆಯ ಕೊಡುಗೆ ಒಂದೇ ಎರಡೇ..

ಜಗತ್ತಿನೆಲ್ಲೆಡೆ ಫೇಮಸ್ ಆಗಿರುವ ಮಸಾಲೆ ದೋಸೆಯ ಉಗಮ ಆಗಿದ್ದು ಇದೇ ತುಳುನಾಡಿನಲ್ಲಿ,ಈಗ ಎಲ್ಲರೂ ಸವಿಯುವ ನೀರುದೋಸೆ ನಮ್ಮದೇ, ಮಂಗಳೂರು ಬಜೆ ಎಂದು ಬೇರೆ ಕಡೆ ಗುರುತಿಸಿಕೊಳ್ಳುವ ಗೋಳಿಬಜೆ ಕೂಡ ನಮ್ಮದೇ, ಮಂಗಳೂರು ಬನ್ ಎಂದು ಕರೆಸಿಕೊಳ್ಳುವ ಬನ್ಸ್ ಕೂಡ ನಮ್ಮದೇ.. ಇನ್ನೂ ಹಲವಾರು ತಿಂಡಿ ತಿನಿಸುಗಳಿವೆ ಪುಂಡಿ,ಮೂಡೆ, ಗುಂಡ,ಸೇಮೆದಡ್ಡೆ, ಎಲೆಗಳ ಗಟ್ಟಿ,ಹಲಸಿನ ಕಡುಬು, ಪೆಲಕಾಯಿ ಗಾರ್ಯ, ಉಪ್ಪಡ್ ಪಚ್ಚಿರ್, ತಿಮರೆ ಚಟ್ನಿ,ತಜಂಕ್, ಕಲ್ತಪ್ಪ, ನೈಯಪ್ಪ, ಗಟ್ಟಿ,ಪೋಡಿ,ಕುಚಲಕ್ಕಿ ಅನ್ನ(boiled rice) ಕಪ್ಪರೊಟ್ಟಿ,ಕೋರಿ ರೊಟ್ಟಿ,ಬಂಗುಡೆ ಪುಳಿಮುಂಚಿ, ಕೋರಿ ಸುಕ್ಕ,ಮರುವಾಯಿ ಪುಂಡಿ, ಒಣಮೀನು ಚಟ್ನಿ... ಇನ್ನೂ ಹಲವಾರು ಐಟಂ ಗಳು ಬಾಯಲ್ಲಿ ನೀರೂರಿಸುತ್ತದೆ. ಹೇಳುತ್ತಾ ಹೋದರೆ ಲೀಸ್ಟ್ ದೊಡ್ಡದೇ ಉಂಟು.

ಅದು ಒಂದು ರೇಂಜ್ ಆದರೆ, ಇನ್ನು ನೀವು ಮಳೆಗಾಲದ ಅದರಲ್ಲೂ ಆಟಿ (ಆಷಾಢ) ತಿಂಗಳಿನ ತಿಂಡಿ ತಿನಿಸುಗಳ ರೇಂಜೇ ಬೇರೆ. ಅದನ್ನು ನೀವು ಮಂಗಳೂರು ಉಡುಪಿಗೆ ಹೋಗಿಯೇ ಸವಿಯಬೇಕು. ಯಾಕೆಂದರೆ ಅವುಗಳು ಅಂತು ಯಾವುದೇ ಹೊಟೇಲ್ ಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಆಟಿ ತಿಂಗಳ ಖಾದ್ಯ ಸವಿಯಲು ನೀವು ಒಮ್ಮೆ ತುಳುನಾಡಿಗೆ ಇಳಿಯಲೇ ಬೇಕು..

ಎಲ್ಲಾ ಖಾದ್ಯಗಳ ನಡುವೆ ಒಂದು ತಿನಿಸಿನ ಬಗ್ಗೆ ನಾನು ಇನ್ನೂ ಹೇಳಿಯೇ ಇಲ್ಲ. ಅದುವೇ ತುಳುನಾಡಿನವರ ಪ್ರೀತಿಯ ಪತ್ರೋಡೆ❤️😊

ಇದು ತುಳುನಾಡಿನವರ  ಅತೀ ಪ್ರೀಯವಾದ ಖಾದ್ಯ. ಅದರಲ್ಲೂ ಆಟಿ ತಿಂಗಳಿನಲ್ಲಿ ಇದನ್ನು ಒಮ್ಮೆ ಆದರೂ ಇಲ್ಲಿಯವರು ಅತೀ ಆಸೆಯಿಂದ ತಿಂದೇ ತಿನ್ನುತ್ತಾರೆ. ಮಳೆ ಹನಿಗೆ  ತೋಟದಲ್ಲಿ, ಗದ್ದೆ ಬದುವಿನಲ್ಲಿ ಕೆಸುವಿನ ಎಲೆಗಳು ಚಿಗುರಿಕೊಂಡಾಗ ಪತ್ರೋಡೆ ಎಂಬ ಜಿಹ್ವಾ ಚಾಪಲ್ಯ ತಣಿಸುವ ಖಾದ್ಯ ವೊಂದು ನಮ್ಮಲ್ಲೂ ಚಿಗುರಿಕೊಂಡು ಹಾಗೇ ನಿಧಾನವಾಗಿ ಬೆಳೆಯಲು ತೊಡಗುತ್ತದೆ.ದಿನಾಲೂ ಹೋಗವಾಗ ಬರುವಾಗಅದನ್ನೇ ನೋಡುವುದು ಎಲೆ ಎಷ್ಟು ದೊಡ್ಡದಾಗಿದೆ ಎಂದು.

ಆ ಆಸೆ ಬಲಿತು ದೊಡ್ಡದು ಆದಾಗ..ಕೆಸುವಿನ ಎಲೆ ಸಾಕಷ್ಟು ಅಗಲವಾದಾಗ ಮನೆಯಲ್ಲಿ ಒಂದು ಬಾರಿ ಆದರೂ ಪತ್ರೋಡೆ ಆಗಲೇ ಬೇಕು. ಮಳೆಗಾಲದಲ್ಲಿ ಪತ್ರೋಡೆ ಪ್ರೀಯರ ಮನೆಯಲ್ಲಿ ಎಷ್ಟು ಬಾರಿ ಪತ್ರೋಡೆ ಆಗುತ್ತೋ ಅದಕ್ಕೆ ಲೆಕ್ಕವೇ ಇರುವುದಿಲ್ಲ.ನಾನು ಕೂಡ ಇದೇ ಕೆಟಗರಿಯಲ್ಲಿ ಬರುತ್ತೇನೆ.

ಪತ್ರೋಡೆ ಎಂಬ ಚಂದದ ಹೆಸರು ಇದ್ದರೂ ಬೇರೆ ಕಡೆ ಇದನ್ನು ಮಂಗಳೂರಿನ  ಪತ್ರ ವಡೆ, ಪತ್ತರ್ ವಡಾ.. ಎಂದು ಏನೇನೋ ಹೆಸರಿನಿಂದ ಕರೆಯುವಾಗ ಪತ್ರೋಡೆ ಪ್ರೀಯರಾದ ನಮಗೆ ಅತೀವ ನೋವಾಗುವುದು ಕೂಡ ಇದೆ.

ಪತ್ರೋಡೆಯೇ ಒಂದು ತೂಕವಾದರೆ... ಮರಕೆಸುವಿನ ಪತ್ರೋಡೆಯ ತೂಕವೇ ಬೇರೆ. ಅದಕ್ಕಂತು ಸಪರೇಟ್ ಪ್ಯಾನ್ ಬೇಸ್ ಇದೆ ನಮ್ಮಲ್ಲಿ.ನಾನಂತು ಅದರಲ್ಲಿ ಮೊದಲಿಗ.

ಕೆಸುವುಗಳಲ್ಲಿ ಎರಡು ವಿದ. ನೆಲ ಕೆಸು ಮತ್ತು ಮರ ಕೆಸು.ನೆಲ ಕೆಸು ನೆಲದಲ್ಲಿ ಆಗುತ್ತದೆ. ಮರ ಕೆಸು ಮರದಲ್ಲಿ ಆಗುತ್ತದೆ ಅಷ್ಟೇ.

ಕೆಸುವಿಗೆ ತುಳುವಿನಲ್ಲಿ ಬೇರೆ ಬೇರೆ ಭಾಗಗಳಲ್ಲಿ ತೇವು, ಚೇವು, ಸೇವು ಎಂಬ ಹೆಸರುಗಳಿಂದ ಕರೆಯುತ್ತಾರೆ. ನೆಲಕೆಸುವಿನಲ್ಲಿ ಪುದ್ದರ್ ತೇವು, ಕರಿಯ ತೇವು(ಕಪ್ಪು ಬಣ್ಣದ್ದು), ಪೇರ್ ತೇವು(ಬಿಳಿಯ ಬಣ್ಣದ್ದ) ,ಪಚ್ಚೊಡಿ ತೇವು, ಬಟ್ಟಲ್ ತೇವು ಇನ್ನೂ ಹಲವಾರು ವಿವಿಧ ಪ್ರಕಾರಗಳಿವೆ.ಕೆಲವೊಂದು ಜಾತಿಯ ಕೆಸುವುಗಳು ಇಂದು ಸಿಗುವುದೇ ಅಪರೂಪ. ಪುದ್ದರ್ ತೇವು ಅನ್ನು ತುಳುನಾಡಿನವರ ಪುದ್ದರ್ ಹಬ್ಬ ಅಂದರೆ ಹೊಸ ಅಕ್ಕಿಯಲ್ಲಿ ಅದರಲ್ಲಿ ವಿಶೇಷವಾಗಿ ಕುಚಲಕ್ಕಿಯ ಅನ್ನದ ಊಟ ಮಾಡುವ ದಿನ ಹೆಚ್ಚಾಗಿ ಬಳಸುತ್ತಾರೆ.

ಕೆಸುಗಳ ಎಲೆ, ಡಂಟು(ಕಾಂಡ) ಮಾತ್ರವಲ್ಲ ಗಡ್ಡೆಯನ್ನು ಕೂಡ ಅಡುಗೆಗೆ ಬಳಸುತ್ತಾರೆ. ಎಲೆಯಿಂದ ಪತ್ರೋಡೆ ಮಾತ್ರವಲ್ಲ ಚಟ್ನಿ ಕೂಡ ಮಾಡುತ್ತಾರೆ, ಹಾಗೆಯೇ ಸುರುಳಿ ಸುತ್ತಿ ತೇಟ್ಲ ಎನ್ನುವ ಪಲ್ಯವನ್ನು ಕೂಡ ಮಾಡುತ್ತಾರೆ.

ನೆಲ ಕೆಸು ಆದರೆ ನಿರಂತರವಾಗಿ ನೀರು ಬೀಳುವ ತೋಟಗಳಲ್ಲಿ ವರ್ಷವಿಡೀ ಆಗುತ್ತದೆ,ಆದರೆ ಮರಕೆಸು ಕೇವಲ ಮಳೆಗಾಲದಲ್ಲಿ ಮಾತ್ರ ಆಗುತ್ತದೆ.ನೀವು ಅದರ ಪತ್ರೋಡೆ ತಿನ್ನಲು ಮಳೆಗಾಲದವರೆಗೆ ಬಕ ಪಕ್ಷಿಯಂತೆ ಕಾಯಲೇಬೇಕು. ವರ್ಷವಿಡೀ ಮರದ ಪೊಟರೆಗಳಲ್ಲಿ ಅಡಗಿರುವ ಗೆಡ್ಡೆಗಳು ಮಳೆ ಬಿದ್ದಂತೆ ಚಿಗುರಲು ಶುರುವಾಗಿ,ಆಷಾಡ ಬಂದಾಗ ಪುಷ್ಟಿಯಾಗಿ ಹಸಿರು ಹಸಿರಾಗಿ ಬೆಳೆಯುತ್ತದೆ. ಇದರ ಎಲೆಗಳು ನೆಲ ಕೆಸುವಿಗಿಂತ ಸ್ವಲ್ಪ ದಪ್ಪವಾಗಿ ಇದ್ದು, ಬೇಗನೇ ಹರಿಯುವುದಿಲ್ಲ.

ಹಿಂದೆ ತುಳುನಾಡಿನಲ್ಲಿ ಸಮೃದ್ಧವಾಗಿ ಕಾಡು ಗುಡ್ಡೆಯಲ್ಲಿ ಕಂಡು ಬರುತ್ತಿದ್ದ ಇದು ಇಂದು ಅಳಿವಿನಂಚಿನಲ್ಲಿ ಇದೆ. ಈಗ ಇಲ್ಲಿ ಸಿಗುವುದೇ ಅತೀ ವಿರಳವಾಗಿದೆ.

ಆದರೆ ಮಾರ್ಕೆಟ್ ನಲ್ಲಿ ಆಟಿ ತಿಂಗಳಿನಲ್ಲಿ ಮರಕೆಸು ಹೇರಳವಾಗಿ ಸಿಗುತ್ತದೆ. ವ್ಯಾಪಾರಿಗಳು ಘಟ್ಟ ಪ್ರದೇಶಗಳಿಂದ,ಮಲೆನಾಡಿನಿಂದ,ಕೊಪ್ಪ, ತೀರ್ಥಹಳ್ಳಿ,ಆಗುಂಬೆ,ಮೂಡಿಗೆರೆ,ಚಿಕ್ಕಮಗಳೂರು,ಕೂರ್ಗಿನ ವಿರಾಜಪೇಟೆ ಗಳ ಕಾಡುಗಳಲ್ಲಿ ಇಂದಿಗೂ ಸಾಕಷ್ಟು ಪ್ರಮಾಣದಲ್ಲಿ ಸಿಗುವ ಈ ಮರಕೆಸುವಿನ ಎಲೆಯನ್ನು ಟೇಂಪೋಗಳಲ್ಲಿ ಹಾಕಿಕೊಂಡು ಬಂದು ಕಟ್ಟುಗಳನ್ನಾಗಿ ಮಾಡಿ ಇಲ್ಲಿ ಮಾರುತ್ತಾರೆ.ಯಾಕೆಂದರೆ ಅವರಿಗೆ ಗೊತ್ತು ನಮ್ಮ ಪತ್ರೋಡೆ ಪ್ರೀತಿ.

ಒಂದು ಕಟ್ಟಿಗೆ ಕೆಲವೊಮ್ಮೆ ಮೂವತ್ತು ರೂಪಾಯಿ ಇದ್ದರೆ, ಡಿಮ್ಯಾಂಡು ಜಾಸ್ತಿ ಆಗುತ್ತಾ ಹೋದಾಗ ಐವತ್ತು ರೂಪಾಯಿಗಳವರೆಗೆ ಹೋದದ್ದೂ ಇದೆ.
ಒಂದು ಕಟ್ಟಿನಲ್ಲಿ ಹಿಂದೆ ಹೆಚ್ಚು ಕಡಿಮೆ ಹತ್ತು ಎಲೆಗಳು ಬರುತ್ತಿದ್ದವು, ಈಗ ಅವುಗಳ ಸಂಖ್ಯೆ ಏಳರಿಂದ ಆರಕ್ಕೆ ಇಳಿದಿದೆ.ಆದರೂ ನಮ್ಮವರು ಮುಗಿಬಿದ್ದು ಕೊಳ್ಳುತ್ತಾರೆ.
ಆಷಾಡ ಮುಗಿದ ನಂತರ ಮಾರ್ಕೆಟ್ ನಲ್ಲಿ ಬೆಲೆ ಕೂಡ ಇಳಿಯುತ್ತದೆ. ಶ್ರಾವಣಮಾಸದಲ್ಲಿ ಬಳಕೆ ಕಡಿಮೆಯೇ ಆದರೂ ಪತ್ರೋಡೆ ಪ್ರೀಯರಿಗೆ ಇದು ಯಾವುದೇ ರೂಲ್ಸ್ ಅಪ್ಲೈ ಆಗುವುದಿಲ್ಲ.

ನೆಲಕೆಸು ಸ್ವಲ್ಪ ತುರಿಕೆ ಗುಣವನ್ನು ಹೊಂದಿದ್ದರೆ ಮರಕೆಸು ನೆಲಕೆಸುವಿನಷ್ಟು ತುರಿಕೆ ಗುಣ ಹೊಂದಿರುವುದಿಲ್ಲ.

ಮರಕೆಸುವಿನಲ್ಲಿ ಆಷಾಢ ಮಾಸದಲ್ಲಿ ಔಷಧಿಯ ಗುಣಗಳು ಅಧಿಕವಾಗಿದ್ದು ಹೊಟ್ಟೆಯೊಳಗಿನ ನಂಜು ಹಾಗೂ ಇತರ ವಿಷಕಾರಿ ಅಂಶಗಳ ನಿರ್ಮೂಲನೆಗೆ ಇದು ಬಹಳ ಸಹಕಾರಿ ಎಂಬ ನಂಬಿಕೆ ನಮ್ಮಲ್ಲಿ ಇದೆ. ಒಟ್ಟಿನಲ್ಲಿ ದೇಹದೊಳಗೆ ಸ್ವಚ್ಛವಾಗಲು ಇದು  ಒಳ್ಳೆಯದು ಎಂದು ಹಿರಿಯರ ಅಭಿಪ್ರಾಯ.

ಇದು ಶಿಥಿಲವಾದ ಮರದ ಹ್ಯೂಮಸ್ ಸಾರದಲ್ಲಿ ಬೆಳೆಯುತ್ತದೆ.ಮರದ  ಪೊಟರೆಗಳಲ್ಲಿ,ತೂತುಗಳಲ್ಲಿ, ಮರದ ಸಂಧಿಯಲ್ಲಿ ಇದು ಬೆಳೆಯುತ್ತದೆ.
ಯಾವ ಮರದಲ್ಲಿ ಪಾಚಿ ಕಟ್ಟಿರುತ್ತದೋ, ಜರಿ ಗಿಡ ಬೆಳೆದಿರುತ್ತದೋ, ಗೋಳಿ ಸಸ್ಯ (ಆಲ) ಹುಟ್ಟಿಕೊಂಡಿರುತ್ತೋ, ಬಂದಣಿಕೆ(ಬದನಿಕೆ) ಮರವನ್ನು ಆವರಿಸಿಕೊಂಡಿರುತ್ತೋ ಆ ಮರದಲ್ಲಿ ಇದು ಹೆಚ್ಚಾಗಿ ಇರುತ್ತದೆ. ಕೆಲವೊಮ್ಮೆ ಬೀಜ ಕೆಳಗೆ ಬಿದ್ದು, ಮರದ ಬುಡದಲ್ಲಿಯೂ ಗಿಡ ಹುಟ್ಟುವುದು ಇದೆ.

ಇದನ್ನು ನೆಲದಲ್ಲಿ ಬೆಳೆಸಬಹುದಾದರೂ ಮರದಲ್ಲಿಯೇ ಬೆಳೆಸಿದರೆ ಮಾಡಿದ ಪತ್ರೋಡೆಗೆ ರುಚಿ ಜಾಸ್ತಿ, ಆರೋಗ್ಯಕ್ಕೂ ಒಳ್ಳೆಯದು.

ಇದರ ದಂಟು ಹಾಗೂ ಗೆಡ್ಡೆಯನ್ನು ಕೂಡ ಇಲ್ಲಿ ಖಾದ್ಯ  ತಯಾರಿಕೆಗೆ ಬಳಸುತ್ತಾರೆ. ಬಹುಶಃ ಹಾಗೆ ಗೆಡ್ಡೆಗಳನ್ನು ಮರದಿಂದ  ಕಿತ್ತು ಕಿತ್ತು ನಮ್ಮ ಭಾಗದಲ್ಲಿ ಈ ಮರಕೆಸು ವಿರಳವಾಗುತ್ತಿರುವುದು ಎಂದು ಕಾಣುತ್ತದೆ. ಇದರ ಗಡ್ಡೆ ಕಾಲಿನಲ್ಲಿ ಮುಳ್ಳು ಚೂಚ್ಚಿದ್ದರೆ ಅದನ್ನು ತೆಗೆಯಲು ಬಹಳನೇ ಸಹಕಾರಿ. ಇದರ ಬೇರಿನ ಬಳ್ಳಿಯಲ್ಲಿ ಗಡ್ಡೆಗಳು ಹುಟ್ಟಿಕೊಂಡು ನಂತರ ಗಾಳಿಯಲ್ಲಿ ಪ್ರಸಾರವಾಗಿ ಇತರ ಮರಗಳಲ್ಲಿ ಬಿದ್ದು,ಆ ಮರದ ಹ್ಯೂಮಸ್ ಸಾರದಲ್ಲಿ ಬೆಳೆಯುತ್ತದೆ. ಹಕ್ಕಿಗಳಿಂದಾಗಿಯೂ ಮರಗಳಿಂದ ಮರಕ್ಕೆ ಸಸ್ಯಾಭಿವೃದ್ಧಿ ಆಗುವ ಸಾಧ್ಯತೆಗಳೂ ಇದೆ.

ಪತ್ರೋಡೆಯನ್ನು ಎರಡು ರೀತಿಯಲ್ಲಿ ಮಾಡುತ್ತಾರೆ ಒಂದು ಎಲೆಗಳ ಮೇಲೆ ಇನ್ನೊಂದು ಎಲೆಯನ್ನು ಇಟ್ಟು(ಐದರಿಂದ ಆರು ಎಲೆ),ಪ್ರತೀ ಎಲೆಗೂ ಮಸಾಲೆಯನ್ನು ನಯವಾಗಿ ಹಿತವಾಗಿ ತೆಳುವಾಗಿ ಸವರಿ,ಎರಡೂ ಬದಿಯನ್ನು ಮಡಚಿ, ಚಾಪೆ ಸುತ್ತಿದಂತೆ ಸುತ್ತಿ, ಪತ್ರೋಡೆ ಮಾಡುತ್ತಾರೆ. ಇನ್ನು ಕೆಲವರು ಎಲೆಯನ್ನು ಚೆನ್ನಾಗಿ ಕೊಚ್ಚಿ ಅದನ್ನು ರುಬ್ಬಿದ ಮಸಾಲೆಗೆ ಹಾಕಿ ಉಂಡೆ ಕಟ್ಟಿಯೋ ಇಲ್ಲ ಸಾಗುವಾನಿ ಅಥವಾ ಉಪ್ಪಳಿಗೆ(ತಂದೇವು) ಎಲೆಯಲ್ಲಿ ಕಡುಬು ಕಟ್ಟಿದಂತೆ ಕಟ್ಟಿ ಪತ್ರೋಡೆ ಮಾಡುತ್ತಾರೆ.

ಎರಡೂ ವಿಧದ ಪತ್ರೋಡೆಯನ್ನು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿಯೇ ಮಾಡುತ್ತಾರೆ. ಮಸಾಲೆಗಾಗಿ ಅಕ್ಕಿ,ಹುಳಿ, ಬೆಲ್ಲ ಹಾಗೂ ಇತರ ಸಾಂಬಾರ ಪದಾರ್ಥಗಳನ್ನು ಅವರ ಇಷ್ಟಕ್ಕೆ ತಕ್ಕಂತೆ ಹಾಕುತ್ತಾರೆ. ಕೆಲವರು ಹೆಸರು ಕಾಳು, ಉದ್ದಿನಬೇಳೆ, ತೊಗರಿಬೇಳೆ, ಕಡಲೆ ಬೇಳೆ ಎಲ್ಲಾ ಹಾಕುವುದು ಇದೆ.

ಪತ್ರೋಡೆ ಮಾಡಿ ಹಾಗೇ ತಿನ್ನುವುದು ಕೂಡ ಕಡಿಮೆಯೇ. ಅದನ್ನು ಪುನಃ ಮಸಾಲ ಮಾಡಿ ಅದಕ್ಕೆ ಹಾಕಬೇಕು. ನಮ್ಮಲ್ಲಿ ಅದನ್ನು ಅರೆಪಿನಲ್ಲಿ ಹಾಕುವುದು ಎಂದು ಹೇಳುತ್ತಾರೆ. ಆ ಮಸಾಲಕ್ಕೆ ತೆಂಗಿನತುರಿ, ಒಣಮೆಣಸು, ಉಪ್ಪು, ಹುಳಿ ಎಲ್ಲಾ ಹಾಕುತ್ತಾರೆ. ನಂತರ ಒಂದು ಚಂದದ ನೀರುಳ್ಳಿ ಸಾಸಿವೆ ಒಗ್ಗರಣೆ.

ಒಂದರ ಮೇಲೆ ಇನ್ನೊಂದು ಎಲೆಯನ್ನು ಇಟ್ಟು ಮಾಡಿದ ಪತ್ರೋಡೆಯನ್ನು slice ಗಳನ್ನಾಗಿ ಕಟ್ ಮಾಡಿ.. ತವಾ ಫ್ರೈ ಮಾಡಿ ಪತ್ರೋಡೆ ಪೋಡಿ ಎಂದು ಮಾಡುತ್ತಾರೆ. ಅದು ಕೂಡ ಬಹಳ ಚೆನ್ನಾಗಿರುತ್ತದೆ. ಇನ್ನು ಕೆಲವರು ಪತ್ರೋಡೆ ಯನ್ನು ಚಿಕ್ಕ ತುಂಡುಗಳನ್ನಾಗಿ ಕಟ್ ಮಾಡಿ ತೆಂಗಿನತುರಿ ಬೆಲ್ಲ ಹಾಕಿ ಒಗ್ಗರಣೆ ಕೂಡ ಕೊಡುತ್ತಾರೆ.

ನಮ್ಮ ಕಡೆ ಈಗ ಬೇರೆ ಎಲ್ಲಾ ಕೆಸು ಸಿಕ್ಕರೂ ಮರಕೆಸು ವಿರಳವಾಗಿದೆ. ಚಿಕ್ಕಮ್ಮನ ಮನೆ ಕಾರ್ಕಳದ ಬಳಿ, ಅಲ್ಲಿಯ ದಟ್ಟ ಕಾಡಿನಲ್ಲಿ  ಹೇರಳವಾಗಿ ಆಗುತ್ತದೆ ಇದು. ಒಂದೆರಡು ಸಲ ತಂದು ಕೊಟ್ಟದ್ದೂ ಇದೆ ಅವರು. ಇಲ್ಲದಿದ್ದರೆ ನಮ್ಮ ಮಂಗಳೂರಿನ ಸ್ಟೇಟ್ ಬ್ಯಾಂಕ್ ಮಾರ್ಕೆಟ್ ಅಥವಾ ಮೂಡುಬಿದಿರೆಯ ತರಕಾರಿ ಮಾರ್ಕೆಟ್ ನಿಂದ ಮರಕೆಸು  ತಂದು ನನ್ನ ಜಿಹ್ವಾ ಚಾಪಲ್ಯವನ್ನು ಅಂತು  ತಣಿಸಿಯೇ ತಣಿಸುತ್ತೇನೆ ನಾನು.

ನನಗಂತು ಚಿಕ್ಕಂದಿನಿಂದಲೂ ಒಂದೇ ಆಸೆ, ಕಾಡು ಗುಡ್ಡಗಳ ಮರ ಕೆಸುವನ್ನು ಯಾಕೆ ನಮ್ಮ ಜಾಗದಲ್ಲಿಯೇ ಬೆಳೆಸಬಾರದು ಎಂದು. ನನ್ನ ಕುತೂಹಲಗಳು ಇಂತಹದ್ದೇ.

ಅದಕ್ಕಾಗಿ  ಮೂರು ವರ್ಷದ ಹಿಂದೆ ನಮ್ಮ ಊರಿನಲ್ಲಿ ಗಣೇಶಣ್ಣ ಅಂತ ಒಬ್ಬರು ಇದ್ದಾರೆ, ಅವರೊಂದಿಗೆ ಸೇರಿ ಗುಡ್ಡಕ್ಕೆ ಹೋಗಿ ಮರ ಹತ್ತಿ ಒಂದಷ್ಟು ಮರಕೆಸುವಿನ ಗೆಡ್ಡೆ ಗಳನ್ನು ತಂದು ನಮ್ಮ ಜಾಗದಲ್ಲಿ ಎಷ್ಟು ಮರವಿದೆಯೋ  ಆ ಎಲ್ಲಾ ಮರಗಳ ಪೊಟರೆಗಳಲ್ಲಿ ಆ ಗೆಡ್ಡೆಗಳನ್ನು ಹಾಕಿದ್ದೆ.

ನೋಡಿ ಈಗ ಒಂದೆರಡು ಮರಗಳಲ್ಲಿ ಮರಕೆಸು ಸ್ವಾಭಾವಿಕವಾಗಿ ನಮ್ಮ ಜಾಗದಲ್ಲಿಯೇ ಚಿಗುರಿಕೊಂಡು ಹೇಗೆ ನಿಂತಿದೆ. ಖುಷಿಯಿಂದ ನಳನಳಿಸುತ್ತಿದೆ. ಮನಸ್ಸಿಗೆ ಮಾತ್ರವಲ್ಲ ಆತ್ಮಕ್ಕೂ ಆಗುವ ಸಂತೋಷ ಅಂದರೆ ಇದು.ಇಂತಹ ಸಂತೋಷಗಳೇ ವಿಪರೀತ ಆನಂದ ಕೊಡುವುದು. ದುಡ್ಡು ಕೊಟ್ಟರೂ ಸಿಗದ ಆನಂದವಿದು.. ನಾವೇ ನೆಟ್ಟ ಗಿಡ ಹೂವು ಕೊಡುವುದು, ಕಾಯಿ ಬಿಡುವುದು.. ಹಣ್ಣಾಗುವುದು.. ಇದನ್ನೆಲ್ಲಾ ಅನುಭವಿಸಿದವರಿಗೆ ಮಾತ್ರ ಗೊತ್ತು.

ಈಗಲೂ ಮಳೆಗಾಲದಲ್ಲಿ ಬೆಟ್ಟ ಗುಡ್ಡದಲ್ಲಿ ತಿರುವಿನಲ್ಲಿ ಬಸ್ ತಿರುಗುವಾಗ ನನ್ನ ಕಣ್ಣು ಆ ಮರದ ಪೊಟರೆಯಲ್ಲಿ ಮರಕೆಸು ಇದೆಯೇ.. ಕೊಂಬೆಯಲ್ಲಿ ಸೀತಾಳೆ ಅರಳಿ ನಿಂತಿದ್ದಾಳೆಯೇ  ಎಂದೇ ಗಮನಿಸುತ್ತಿರುತ್ತದೆ.

ಮಳೆಗಾಲದಲ್ಲಿ ಕೆಸುವಿನ ಎಲೆಗಳ ಮೇಲೆ ನೀರ ಮಣಿಗಳು ಮುತ್ತಿನಂತೆ ಹೊಳೆಯದಿದ್ದರೆ, ಮನಸ್ಸೋಇಚ್ಛೆ ಪತ್ರೋಡೆ ತಿನ್ನದಿದ್ದರೆ.. ನನಗಂತು ಅದು ಒಂದು ಮಳೆಗಾಲ ಅಂತ ಎಂದಿಗೂ  ಅನ್ನಿಸುವುದೇ ಇಲ್ಲ 😋😋❤️

.....................................................................................

Ab Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ