ನೀರಲ್ಲಾದರು ಹಾಕು ಹಾಲಲ್ಲಾದರು ಹಾಕು
ಜೀವನದಲ್ಲಿ ಹಣ ಎಲ್ಲರ ಬಳಿ ಇರುವುದಿಲ್ಲ. ಆದರೂ ಅವರಾರು ಬಡವರಲ್ಲ.
ಅದೇ ರೀತಿ ಶ್ರೀಮಂತರಾಗಿದ್ದರೂ ಕೂಡ ಕೆಲವರು ನಿಜವಾಗಿಯೂ ಶ್ರಿಮಂತರಲ್ಲ. ಹೃದಯ ಶ್ರೀಮಂತಿಕೆಯೇ ಇಲ್ಲದೆ ಹೋದರೆ ಅವರಷ್ಟು ಕಡು ಬಡವರು ಈ ಜಗತ್ತಿನಲ್ಲಿಯೇ ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ..!
ನಂದಿನಿ ತನ್ನ ತಂದೆ ತಾಯಿಯ ಮೂರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು.ತಾರ ಮತ್ತು ರಾಣಿ ನಂದಿನಿಯ ಇಬ್ಬರು ಪ್ರೀತಿಯ ತಂಗಿಯರು.
ಮಗ ಅನ್ನುವ ಗಂಡು ಸಂತಾನ ರಾಮಣ್ಣ ಮತ್ತು ಸೀತಕ್ಕ ದಂಪತಿಗೆ ಇರದ ಕಾರಣ ಅವರ ಪಾಲಿನ ಮಗ ಮಗಳು ಎಲ್ಲವೂ ನಂದಿನಿಯೇ ಆಗಿದ್ದಳು.
ಸೀತಕ್ಕ ಹುಟ್ಟು ಪೋಲಿಯೊ ಪೀಡಿತೆ.ಒಂದು ಕಾಲನ್ನು ಸದಾ ಕುಂಟುತ್ತಲೇ ಅತ್ತಿಂದಿತ್ತ ಕಷ್ಟ ಪಟ್ಟು ನಡೆಯುವ ಅವರ ಪಾಲಿನ ಊರುಗೋಲು ಕೂಡ ಸ್ವತಃ ನಂದಿನಿಯೇ ಆಗಿದ್ದಳು.
ರಾಮಣ್ಣ ಪೇಟೆಯಲ್ಲಿ ತರಕಾರಿ ಮಾರುತ್ತಾರೆ.ಹೆಚ್ಚಿನ ದಿನ ಅವರಿಗೆ ಏನೂ ವ್ಯಾಪಾರ ಆಗುವುದೇ ಇಲ್ಲ.ತಕ್ಕ ಮಟ್ಟಿಗೆ ವ್ಯಾಪಾರ ಆದ ದಿನ ಮನೆಗೆ ಬನ್ನು,ಹಣ್ಣು ಒಯ್ಯುತ್ತಾರೆ.ಆದರೆ ಇಡೀ ಮನೆಯ ಜವಾಬ್ದಾರಿಯನ್ನು ತನ್ನ ಅಪ್ಪನ ಹೆಗಲ ಮೇಲೆ ಇರಿಸಲು ಮನಸ್ಸಾಗದೆ ತಾನೂ ಕೂಡ ರಾಮಣ್ಣನಿಗೆ ಕುಟುಂಬದ ಭಾರ ಹೊರಲು ಹೆಗಲು ನೀಡಿ ಬಿಟ್ಟಳು ನಂದಿನಿ.
ಎಲ್ಲರಿಗಿಂತ ಬೇಗ ಏಳುವ ನಂದಿನಿ,ಅಮ್ಮ ಅಪ್ಪನಿಗೆ ತಿಂಡಿ ಚಹಾ ಮಾಡಿಟ್ಟು,ಆ ನಂತರ ಹಟ್ಟಿಯಲ್ಲಿರುವ ಎರಡು ದನಗಳ ಹಾಲು ಕರೆದು,ಅದನ್ನು ಕ್ಯಾನ್ ನಲ್ಲಿ ಹಾಕಿಕೊಂಡು ಡೈರಿಗೆ ಹೋಗಿ ದಿನಾಲೂ ಹಾಲು ಹಾಕುತ್ತಾಳೆ.
ದನ ಸಾಕಾಣಿಕೆ ಎಲ್ಲವೂ ಅವಳದ್ದೇ. ದನಗಳನ್ನು ಚೆನ್ನಾಗಿ ತೊಳೆಯುವುದು,ಬೆಳಿಗ್ಗೆ ಹಿಂಡಿ, ನೀರು ಎಲ್ಲಾ ಕೊಟ್ಟು ಗದ್ದೆ ಬದಿಯಲ್ಲಿ ಮೇಯಲು ಕಟ್ಟಿ ಬರುವುದು,ಸಂಜೆ ಎರಡು ಕಟ್ಟು ಹುಲ್ಲು ತೋಟದಿಂದ ಕೆತ್ತಿ ತರುವುದು,ಹಟ್ಟಿಗೆ ಗೊಬ್ಬರಕ್ಕಾಗಿ ಗುಡ್ಡದಿಂದ ಸೊಪ್ಪು ಕೊಯ್ದು ತರುವುದು,ಆದಿತ್ಯವಾರದ ಒಂದು ದಿನ ತನ್ನ ತಂದೆಯೊಂದಿಗೆ ಹಟ್ಟಿ ಗೊಬ್ಬರ ತೆಗೆಯುವುದು.. ಹೀಗೆ ದನದ ಎಲ್ಲಾ ಕೆಲಸವನ್ನು ಮಾಡಿ ಹಾಲಿನಿಂದ ಹಾಗೂ ಹಟ್ಟಿ ಗೊಬ್ಬರದಿಂದ ಬಂದ ಎಲ್ಲಾ ಹಣವನ್ನು ತನ್ನ ತಂದೆಯ ಕೈಯಲ್ಲಿ ಇಟ್ಟು ಬಿಡುತ್ತಿದ್ದಳು ನಂದಿನಿ.
ರಾಮಣ್ಣ ತಮಗೆ ಒಬ್ಬ ಗಂಡು ಮಗ ಹುಟ್ಟಿಯೇ ಇಲ್ಲ ಎಂದು ಯಾವತ್ತೂ ಅಂದುಕೊಳ್ಳಲೇ ಇಲ್ಲ. ಬಹುಶಃ ಗಂಡು ಹುಟ್ಟಿದ್ದರೂ ಕೂಡ ಅವನು ನಂದಿನಿಯಂತೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮನೆಗೂ ಆಧಾರ ಆಗುತ್ತಿದ್ದನೋ ಎಂದು ಅವರಿಗದು ಗೊತ್ತಿಲ್ಲ.
ಇಷ್ಟೆಲ್ಲ ಕೆಲಸ ಮಾಡಿ, ದನದ ಕೆಲಸ ಮಾಡಿ, ಬೆಳಿಗ್ಗಿನ ತಿಂಡಿ ಮಾಡಿ, ಅಮ್ಮನಿಗೆ ಕಷ್ಟ ಆಗಬಾರದು ಎಂದು ಮಧ್ಯಾಹ್ನದ ಅಡುಗೆ ಕೂಡ ಮಾಡಿಟ್ಟು ಆ ನಂತರ ಗೇರುಬೀಜದ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಳು ನಂದಿನಿ.ನಂತರ ರಾತ್ರಿ ಬಂದು ಪುನಃ ತನ್ನ ಬಟ್ಟೆ ಹೊಲಿಯುವ ಮಿಷನ್ ಎದುರು ಕುಳಿತುಕೊಂಡು ಟೈಲರಿಂಗ್ ಕೆಲಸ ಮಾಡುತ್ತಿದ್ದಳು.
ಕಷ್ಟ ಪಟ್ಟು ಒಬ್ಬನೇ ದುಡಿಯುವ ಅಪ್ಪನನ್ನು ಕಂಡು,ಅಮ್ಮನ ಅಸಹಾಯಕತೆಯನ್ನು ಕಂಡು ಕಾಲೇಜ್ ಮೆಟ್ಟಿಲು ಎಂದೂ ಹತ್ತಲೇ ಇಲ್ಲ ನಂದಿನಿ.
ತಾನು ಕಲಿಯದಿದ್ದರೂ ತನ್ನ ತಂಗಿಯಂದಿರು ಚೆನ್ನಾಗಿ ಕಲಿಯಬೇಕು ಎಂದು ತನ್ನನ್ನು ತಾನು ಹೆಚ್ಚಿನ ದುಡಿಮೆಯಲ್ಲಿ ತೊಡಗಿಸಿಕೊಂಡು ತಾರ ಹಾಗೂ ರಾಣಿಯನ್ನು ಚೆನ್ನಾಗಿ ಕಲಿಸಿದಳು ನಂದಿನಿ. ಅವರಿಗೆ ಕಷ್ಟ ಎಂದರೆ ಏನೆಂದೆ ಗೊತ್ತಾಗದಂತೆ ಅವರಿಬ್ಬರನ್ನು ಕೇವಲ ಒಬ್ಬ ಅಕ್ಕನಂತೆ ಅಲ್ಲ.. ಅಮ್ಮನಂತೆ ಪೋಷಿಸಿ, ಅಪ್ಪನಂತೆ ಬೆಳೆಸಿ ಬಿಟ್ಟಳು.
ಹೆಣ್ಣುಮಕ್ಕಳು ಮದುವೆ ವಯಸ್ಸಿಗೆ ಬಂದಾಗ ಮದುವೆ ಮಾಡಿಕೊಡುವುದು ಅನಿವಾರ್ಯ ಹಾಗೂ ತಂದೆ ತಾಯಿಗಳ ಕರ್ತವ್ಯ ಕೂಡ.ಆದರೆ ನಂದಿನಿಗೆ ಮದುವೆ ಮಾಡುವವರಾರು. ಅವಳಂತು ತನ್ನ ತಂದೆಯ ತಾಯಿಯ ಸ್ಥಿತಿಯನ್ನು ನೋಡಿ ನನಗೆ ಮದುವೆ ಮಾಡಿ ಕೊಡಿ ಎಂದು ಬಾಯಿ ಬಿಟ್ಟು ಕೇಳಲಾರಳು.ಹಾಗಾಗಿ ತಾನಾಯಿತು ತನ್ನ ಕೆಲಸ ಆಯಿತು ಎಂದು ಸಂಸಾರದ ಭಾರ ಹೊತ್ತ ಅವಳಿಗೆ ಮದುವೆ ವಯಸ್ಸು ದಾಟಿದ್ದು ಗೊತ್ತೇ ಆಗಲಿಲ್ಲ.ಅವಳ ಮನಸ್ಸಿನಲ್ಲಿ ಇದ್ದದ್ದು ಒಂದೇ ತನ್ನ ತಂಗಿಯಂದಿರ ಬಾಳು ಹಸನು ಮಾಡಬೇಕು ಎಂದು.ಒಂದೆರಡು ಬಾರಿ ಮನೆಯಲ್ಲಿ ಅಪ್ಪ ಅಮ್ಮ ನಂದಿನಿಯ ಮದುವೆ ವಿಷಯ ಪ್ರಸ್ತಾಪಿಸಿದಾಗ ಅಲ್ಲಿಂದ ಎದ್ದು ಸೀದಾ ತನ್ನ ಕೋಣೆಗೆ ನಡೆದಿದ್ದಳು ನಂದಿನಿ.
ತಾರ ಮತ್ತು ರಾಣಿಯ ಕಾಲೇಜ್ ಮುಗಿದು ಅವರು ಕೂಡ ಮದುವೆಯ ವಯಸ್ಸಿಗೆ ಬಂದರು.ತಾನು ಮದುವೆ ಆಗದೇ ಇದ್ದರು ಒಂಚೂರು ಸ್ವಾರ್ಥಿಯಾಗದೇ ಅವರಿಗೊಂದು ಬೆಚ್ಚನೆಯ ಬಾಳು ಕಟ್ಟಿಕೊಡುವುದು ಅಕ್ಕನಾದ ನನ್ನ ಕರ್ತವ್ಯ ಎಂದು ತಿಳಿದ ನಂದಿನಿ ಇದ್ದ ಬದ್ದ ಕಡೆ ಸಾಲ ಮಾಡಿ ಹೇಗೋ ಒಂದು ಶ್ರಿಮಂತರ ಮನೆಗೆಯೇ ತಾರಳನ್ನು ಸೊಸೆಯನ್ನಾಗಿ ಕಳುಹಿಸಿ ಕೊಟ್ಟಿದ್ದಳು.
ಆ ಸಾಲ ತೀರಿಸಲು ಅವಳು ಮತ್ತಷ್ಟು ದುಡಿಯಬೇಕಿತ್ತು. ಅದಕ್ಕಾಗಿ ಪುನಃ ಅವಳದ್ದೊಂದು ದುಡಿಮೆ ಎಂದಿನಂತೆ ಮುಂದುವರಿದಿತ್ತು.
ಕೊನೆಗೆ ರಾಣಿಗೂ ಕೂಡ ಮದುವೆ ಮಾಡುವ ಜವಾಬ್ದಾರಿ ಹೊತ್ತುಕೊಂಡಳು. ಪುನಃ ಮತ್ತಷ್ಟು ಸಾಲ ಮಾಡಿದಳು. ರಾಣಿಯನ್ನು ಕೂಡ ಒಳ್ಳೆಯ ಮನೆಗೆಯೇ ಕಳುಹಿಸಿ ಕೊಟ್ಟಳು.
ಸಾಲ ತೀರಿಸಲು ಪುನಃ ಅವಳದ್ದೊಂದು ಅನವರತ ದುಡಿಮೆ ಮತ್ತಷ್ಟು ಮುಂದುವರಿದಿತ್ತು.
ಆದರೆ ಮಾಡಿದ ಎರಡೂ ಸಾಲ ಅವಳ ಜನ್ಮದಲ್ಲಿಯೇ ತೀರಿಸದಷ್ಟು ದೊಡ್ಡದಿತ್ತು.
ಇಬ್ಬರೂ ತಂಗಿಯಂದಿರು ಶ್ರೀಮಂತರ ಮನೆಗೆ ಸೇರಿದ್ದರೂ ಕೂಡ, ತವರು ಮನೆಯ ಹಾಗೂ ತಮ್ಮ ಮದುವೆಗಾಗಿ ಅಕ್ಕ ಮಾಡಿದ್ದ ಸಾಲ ಬಗ್ಗೆ ಗೊತ್ತಿದ್ದರೂ ಕೂಡ ತಾರ ಆಗಲಿ ರಾಣಿ ಆಗಲಿ ನಂದಿನಿಗೆ ಸಹಾಯ ಮಾಡುವುದು ಬಿಡಿ... ಆಮೇಲೆ ಅವರಿಬ್ಬರೂ ತಮ್ಮ ಬಡ ತವರು ಮನೆಗೆ ಬರಲೇ ಇಲ್ಲ..!
ಒಮ್ಮೆ ರಾಮಣ್ಣ ಮನಸ್ಸು ತಡೆಯಲಾರದೇ ಮನೆಯಲ್ಲಿ ಯಾರಿಗೂ ಹೇಳದೆ.. ಸೀದಾ ಅವರಿಬ್ಬರ ಮನೆಗೆ ಹೋಗಿ... ನಂದಿನಿ ಊರೆಲೆಲ್ಲಾ ಸಾಲ ಮಾಡಿಕೊಂಡು ತುಂಬಾ ಕಷ್ಟದಲ್ಲಿದ್ದಾಳೆ, ನೀವೇ ಅವಳಿಗೆ ಸಹಾಯ ಮಾಡದಿದ್ದರೆ... ಇನ್ನು ಯಾರು ಮಾಡುತ್ತಾರೆ.. ಸಹಾಯ ಅಂತ ಅಲ್ಲದಿದ್ದರೂ ಸ್ವಲ ಹಣವನ್ನು ಸಾಲವಾಗಿ ಕೊಟ್ಟರೂ ಕೂಡ ಅದರಿಂದ ಅವಳಿಗೀಗ ತುಂಬಾನೇ ಸಹಾಯವಾಗುತ್ತದೆ ಎಂದು ಹೇಳಿದ್ದಕ್ಕೆ..ತಾರ ಮತ್ತು ರಾಣಿ ಹೇಳಿದ್ದರು - ಮದುವೆ ಮಾಡಿಕೊಡುವುದು ತವರು ಮನೆಯ ಕೆಲಸ, ಅದನ್ನು ಲೆಕ್ಕ ಹಾಕಿ ಹಿಂದಿರುಗಿಸಲು ನಮಗೇನು ಹುಚ್ಚು ಹಿಡಿದಿಲ್ಲ.. ಅಷ್ಟು ಕಷ್ಟ ಆಗುವುದಾದರೆ ನಮಗೆ ಮದುವೆ ಯಾಕೆ ಮಾಡಿಸಬೇಕಿತ್ತು ಅವಳು..!! ಎಂದು ಖಾರವಾಗಿ ಹೇಳಿದ್ದರು.
ಅದನ್ನು ರಾಮಣ್ಣ ಮನೆಗೆ ಬಂದು ಸೀತಕ್ಕ ಹಾಗೂ ನಂದಿನಿಯ ಎದುರು ಹೇಳಿಕೊಂಡು ಕಣ್ಣೀರಾಗಿದ್ದರು.
ಅಪ್ಪ... ಬೇಜಾರು ಮಾಡಬೇಡಪ್ಪ... ಯಾರು ಸಹಾಯ ಮಾಡದಿದ್ದರೂ ನಿನಗೆ ಹಾಗೂ ಅಮ್ಮನಿಗೆ ಕೊನೆಯವರೆಗೂ ನಾನಿದ್ದೇನೆ ಅಪ್ಪ.. ಎಂದು ರಾಮಣ್ಣನ ಕಣ್ಣೀರು ಒರೆಸಿದ್ದಳು ಮಗಳು ನಂದಿನಿ.
ನಂದಿನಿಗೆ ಜೀವನದಲ್ಲಿ ಸೋಲಲು ಮನಸ್ಸಿರಲಿಲ್ಲ. ಅದಕ್ಕಾಗಿ ಅವಳೂ ಎಂದೂ ತನ್ನ ತಂಗಿಯಂದಿರಲ್ಲಿ ಸಹಾಯ ಮಾಡಿ ಎಂದು ಬಾಯಿ ಬಿಟ್ಟು ಕೂಡ ಕೇಳಲಿಲ್ಲ.ಎಷ್ಟಾದರೂ ಸ್ವಾಭಿಮಾನಿ ಅವಳು.
ಈ ರೀತಿ ಫಾಕ್ಟರಿ ಕೆಲಸಕ್ಕೆ ಹೋದರೆ ನನ್ನಿಂದ ಏನೂ ಮಾಡಲೂ ಸಾಧ್ಯವಿಲ್ಲ, ಕೇವಲ ಸಾಲ ತೀರಿಸುವುದೇ ನನ್ನ ಜೀವನವಾಗಿಬಿಡುತ್ತದೆ ಎಂದು ಅರಿತ ನಂದಿನಿ ಫ್ಯಾಕ್ಟರಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಬಿಟ್ಟಳು.
ಅವಳಿಗೆ ಗೊತ್ತಿತ್ತು... ತಾನು ಸ್ವಂತ ಏನಾದರೂ ಉದ್ಯೋಗ ಮಾಡುವುದಾದರೆ ಖಂಡಿತವಾಗಿಯೂ ಹೈನುಗಾರಿಕೆ ತನ್ನ ಕೈ ಹಿಡಿಯಬಲ್ಲದು ಎಂದು.ಏಕೆಂದರೆ ಆದಾಗಲೇ ಒಂದೆರಡು ದನ ಸಾಕಿ ಅವಳಿಗೆ ಅಭ್ಯಾಸ ಕೂಡ ಇತ್ತು.
ಹೆಚ್ಚು ಯೋಚನೆ ಮಾಡದೆ "ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ.." ಎಂದು ತನ್ನ ಆರಾಧ್ಯ ರಾಘವೇಂದ್ರ ಸ್ವಾಮಿಯನ್ನು ಮನಸ್ಸಿನಲ್ಲಿಯೇ ನೆನೆದು,ನಂದಿನಿ ಒಳ್ಳೆಯ ಹಾಲು ಕೊಡುವ ಐದಾರು ಜೆರ್ಸಿ ದನಗಳನ್ನು ಲೋನ್ ಮಾಡಿ ಖರೀದಿಸಿಯೇ ಬಿಟ್ಟಳು.ಅದಕ್ಕಾಗಿ ಬೇಕಾಗುವ ಹುಲ್ಲನ್ನು ಕೂಡ ನೆಟ್ಟಳು.ಯಾರೂ ಕೈ ಕೊಟ್ಟರೂ ಅವಳನ್ನು ಚಿಕ್ಕಂದಿನಿಂದಲೂ ಕೈ ಹಿಡಿದು ಮೇಲೆತ್ತಿದ್ದ ದನಗಳು ಅವಳ ಕೈ ಬಿಡಲಿಲ್ಲ.ನೋಡ ನೋಡುತ್ತಿದ್ದಂತೆ ಒಳ್ಳೆಯ ಆದಾಯ ಬರತೊಡಗಿತು.
ಡೈರಿಯವರೇ ಅವಳ ಉತ್ಸಾಹ,ಅವಳ ಪರಿಶ್ರಮ ಕಂಡು ಮಿನಿ ಡೈರಿ ಮಾಡುವಂತೆ ಹೆಚ್ಚಿನ ಪ್ರೋತ್ಸಾಹ ನೀಡಿದರು.
ಕೊನೆಗೆ ಇನ್ನೂ ಐದು ದನಗಳನ್ನು ಖರೀದಿಸಿ, ಹೆಚ್ಚಿನ ಕೆಲಸ ನಿಭಾಯಿಸಲು ಇಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡು ದಿನಕ್ಕೆ ಹೆಚ್ಚು ಕಡಿಮೆ ನೂರು ಲೀಟರ್ ಗೂ ಅಧಿಕ ಹಾಲು ಡೈರಿಗೆ ಹಾಕತೊಡಗಿದಳು.
ಅವಳ ಶ್ರಮ ಹಾಗೂ ಅವಳ ಶ್ರದ್ಧೆ ನಿಜಕ್ಕೂ ಅವಳ ಕೈ ಬಿಡಲಿಲ್ಲ.. ಆ ನಂತರ ನಿಧಾನವಾಗಿ ಹಟ್ಟಿಯಲ್ಲಿ ದನಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗತೊಡಗಿತು. ಅದರೊಟ್ಟಿಗೆ ಹಟ್ಟಿಯ ಗಾತ್ರವೂ ದೊಡ್ಡದಾಗುತ್ತಾ ಹೋಯಿತು.. ಹಾಲು ಉತ್ಪಾದನೆಯೂ ಹೆಚ್ಚಾಯಿತು.. ಕೆಲಸಗಾರರು ಕೂಡ ಅಧಿಕವಾಗತೊಡಗಿದರು.
ಹಾಲು ಉತ್ಪಾದನೆಯಲ್ಲಿ ನಂದಿನಿ ಮಾಡಿದ ಕ್ಷೀರ ಕ್ರಾಂತಿಗೆ ಅವಳನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದವು,ನ್ಯೂಸ್ ಪೇಪರ್ ಗಳಲ್ಲಿ, ಟಿವಿ ಮಾಧ್ಯಮದಲ್ಲಿ ಕೂಡ ಅವಳ ಸಾಧನೆಯ ಬಗ್ಗೆ ಸುದ್ದಿಯಾಯಿತು.ರಾಮಣ್ಣ ಸೀತಕ್ಕ ಮಾತ್ರವಲ್ಲ ಊರವರು ಕೂಡ ತಮ್ಮೂರಿನ ಮಗಳ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡರು.
ನಂದಿನಿ ತಾನು ಮಾಡಿದ ಎಲ್ಲಾ ಸಾಲ ತೀರಿಸಿದಳು,ಹೊಸ ಮನೆ ಕೂಡ ಕಟ್ಟಿದಳು.. ಅವಳ ಬದುಕು ಬದಲಾಯಿತು.
ಒಂದು ದಿನ ಅವಳ ಅಮ್ಮ ಅಪ್ಪ ಕೂಡ ತೀರಿಕೊಂಡು ಬಿಟ್ಟರು.
ಮದುವೆಯಾಗದ ಬಾಳು ತುಂಬಾ ಒಂಟಿ ಎಂದೆನಿಸಿತು ಅವಳಿಗೆ.
ಆದರೆ ಅದು ಕ್ಷಣ ಕಾಲ ಮಾತ್ರ ಅವಳಿಗೆ ಹಾಗೆ ಅನ್ನಿಸಿದ್ದು.
ಮತ್ತೆ ಎಂದೂ ಮದುವೆ ಯೋಚನೆ ಮಾಡದ ಅವಳು ಮತ್ತಷ್ಟು ಹೈನುಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು,ತನ್ನಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಉತ್ತಮ ಉದಾಹರಣೆ ಆದಳು.
ಹೈನುಗಾರಿಕೆಯಲ್ಲಿ ಮಾದರಿ ಹೆಣ್ಣು ಎಂದು ಅನ್ನಿಸಿಕೊಂಡಳು ನಂದಿನಿ.
ಈಗೀಗ ಅವಳನ್ನು ಭಾಷಣ ಮಾಡಲು ಜನರು ಕರೆಯುತ್ತಲೇ ಇರುತ್ತಾರೆ.
ವೇದಿಕೆ ಏರಿದ ನಂದಿನಿ ಪ್ರತೀ ಸಲ ಮಾತು ಮುಗಿಸುವಾಗ ಇದೊಂದು ಮಾತನ್ನು ತಪ್ಪದೇ ಹೇಳುತ್ತಾಳೆ..
" ಜೀವನದಲ್ಲಿ ಹಣ ಎಲ್ಲರ ಬಳಿ ಇರುವುದಿಲ್ಲ.ಆದರೂ ಅವರಾರು ಬಡವರಲ್ಲ..
ಅದೇ ರೀತಿ ಶ್ರೀಮಂತರಾಗಿದ್ದರೂ ಕೂಡ ಕೆಲವರು ನಿಜವಾಗಿಯೂ ಶ್ರಿಮಂತರಲ್ಲ. ಹೃದಯ ಶ್ರೀಮಂತಿಕೆಯೇ ಇಲ್ಲದೇ ಹೋದರೆ ..ಅವರಷ್ಟು ಕಡು ಬಡವರು ಈ ಜಗತ್ತಿನಲ್ಲಿಯೇ ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ..!!"
ಬಹುಶಃ.. ಆವಾಗೆಲ್ಲ ಅವಳಿಗೆ ಅವಳ ಸಿರಿವಂತ ತಂಗಿಯಂದಿರೇ ಅತಿಯಾಗಿ ನೆನಪಾಗಿದ್ದರು ಎಂದು ಕಾಣುತ್ತದೆ!
ಆದರೆ ನಂದಿನಿ ಮಾತ್ರ ಮುಂದೆಯೂ ಸಾಧನೆಯ ಮೇಲೆ ಸಾಧನೆ ಮಾಡುತ್ತಲೇ ಹೋದಳು.ಯಾರೂ ಕೈ ಬಿಟ್ಟರೂ ಅವಳು ನಂಬಿದ ರಾಘವೇಂದ್ರ ಸ್ವಾಮಿ ಹಾಗೂ ಅವಳ ದನಗಳು ಅವಳ ಕೈ ಎಂದೂ ಬಿಡಲೇ ಇಲ್ಲ.
.....................................................................................
#ಇಷ್ಟೇ... !
ab pacchu
moodubidire
Comments
Post a Comment