ನೀಲಣ್ಣನ ಮಗ

 

"Excuse me...."  ಅಂದೆ.


ನನ್ನ ಧ್ವನಿಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. 


"Yess......." ಅನ್ನುತ್ತಾ ಕುಳಿತಲ್ಲಿಂದಲೇ ನನ್ನತ್ತ ತಿರುಗಿ ನೋಡಿದಳು ಅವಳು.


ಗೋಧಿ ಮೈ ಬಣ್ಣ, ಕೋಲು ಮುಖ,ಅಸಾಧಾರಣ ಚೆಲುವಿನ,ದೊಡ್ಡ ಕಣ್ಣುಗಳ ಸುಂದರಿ ಅವಳು. 


Yess ಎಂದು ಹೇಳಿದ ಆ  ಧ್ವನಿಯಲ್ಲಿ ಮಾತ್ರ ಅದ್ಯಾಕೋ ನನಗೆ  ಉಡಾಫೆಯೇ ಅಧಿಕವಾಗಿ ಎದ್ದು ಕಾಣುತ್ತಿತ್ತು.


ತಿರುಗಿದವಳೇ ನನ್ನನ್ನು ಒಮ್ಮೆ ಮೇಲಿನಿಂದ ಕೆಳಗೆ ನೋಡಿದಳು.

ಅದೊಂದು ಕಣ್ಣಿನಲ್ಲಿಯೇ ಎಲ್ಲವನ್ನೂ scan ಮಾಡುವ ನೋಟ. 


" ನಿಮ್ಮ ಪಕ್ಕದಲ್ಲಿಯೇ ಒಂದು ಸೀಟ್ ಖಾಲಿ ಇದೆ, ನಿಮ್ಮ ಪಕ್ಕವೇ ಕುಳಿತುಕೊಂಡು ನಾನು ಕೂಡ  ಡೀಪಾಗಿ ಭವಿಷ್ಯದ ಬಗ್ಗೆ ಚಿಂತನ ಮಂಥನ ಮಾಡುತ್ತಾ, ನಾನಲ್ಲಿ ಕುಳಿತು ಕೊಂಡರೆ ನಿಮಗೇನಾದರೂ ಪ್ರಾಬ್ಲಂ..... ಇದೆಯಾ..." ಎಂದೆ ನಗುತ್ತಲೇ. 


ತಲೆ ಮೇಲೆ ಕುಳಿತು ಕೊಂಡ್ರೆ ಮಾತ್ರ ಪ್ರಾಬ್ಲಂ ಆಗೋದು ಸೀಟ್ ಮೇಲೆ ಕುಳಿತುಕೊಂಡರೆ ಅಲ್ಲ.. ಮಿಸ್ಟರ್... ಅಂದಳು.


ಓಹ್ ಬಹಳ ಚೂಟಿ ಇದ್ದಾಳೆ ಹುಡುಗಿ  ಅಂದುಕೊಂಡೆ.


ನಿಮಗೆ ಈ ಪುಳಿಮಂಚಿ, spicy,ಯಥೇಚ್ಛವಾಗಿ black pepper ಬಳಸಿದ... ಖಾರ ಖಾರದ ತಿನಿಸುಗಳೇ  ಬಹಳ ಇಷ್ಟ ಅಂತ ಕಾಣುತ್ತೆ ಅಲ್ವಾ .. ಅವಳ ಪಕ್ಕವೇ ಕುಳಿತುಕೊಳ್ಳುತ್ತಾ ಹೇಳಿದೆ


Why?.. ಯಾಕೆ ಹಾಗೆ ಹೇಳ್ತಿರಾ... ಅಂದಳು ದುರುಗುಟ್ಟಿ. 


ಅಲ್ಲ ಇಷ್ಟೊಂದು ಖಾರವಾಗಿ ಮಾತಾಡೋದು ನೋಡಿದ್ರೆ ಯಾರಿಗಾದರೂ ಹಾಗೇ ಅನ್ನಿಸುತ್ತೆ ಬಿಡಿ ಅಂದೆ.


ಅವಳಿಗೆ ಅದು ಇಷ್ಟ ಆಗಿಲ್ಲ ಎಂದು ಕಾಣುತ್ತೆ.. 


ಏನು ಕಾಮೆಡಿ ಮಾಡ್ತಾ ಇದ್ದಿರಾ. ..ಕೇಳಿದಳು. 


ಏನೂ ಕೆಲಸ ಸಿಗದಿದ್ರೆ Stand up comedy ನೇ ಮಾಡ್ಬೇಕು ಅಂತ ಅನ್ಕೊಂಡಿದ್ದಿನಿ..ನಿಮಗೆ ಏನು ಅನ್ನಿಸುತ್ತೆ. ನನ್ನ stand up comedy ಒಟ್ರಾಸಿ ಕ್ಲಿಕ್ ಆಗಿ,ನನ್ನ ಪ್ಯೂಚರ್ ಸಕ್ಕತ್   bright ಆಗಿ ಇರ್ಬಹುದು.. ಅಂತ ನಿಮಗೇನಾದರೂ ಅನ್ನಿಸುತ್ತಾ.


ನನ್ನನ್ನೇ ಮತ್ತೆ ಮೇಲೆ ಕೆಳಗೆ ನೋಡಿದಳು. ನಂತರ ಮುಖ ತಿರುಗಿಸಿ ಅವಳ ಕೈಯಲ್ಲಿದ್ದ ಪೈಲ್ ಓಪನ್ ಮಾಡಿ,ಒಂದೊಂದೇ ಡಾಕ್ಯುಮೆಂಟ್ಸ್ ನೋಡತೊಡಗಿದಳು. 


ನನ್ನ ಅಪ್ಪನಿಗೆ ಯಾವಾಗಲೂ ನನ್ನದೇ ಚಿಂತೆ. ಇಂಜಿನಿಯರಿಂಗ್ ಮುಗಿದರೂ ಸರಿಯಾದ ಕೆಲಸದವಿಲ್ಲ.ಎಷ್ಟೇ ಕಷ್ಟ ಪಟ್ಟರೂ ಈ ಇಂಜಿನಿಯರ್ ಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಅಲ್ಲಿಯೇ ಸೆಲೆಕ್ಟ್ ಆಗಿ ಕೆಲಸ ಸಿಗದೇ ಹೋದರೆ ಹೊರಗಡೆ ಕೆಲಸ ಸಿಗುವುದು ಅಂತೂ ಸದ್ಯಕ್ಕೆ ಸ್ವಲ್ಪ ಕಷ್ಟವೇ. ಎಲ್ಲಾ ಕಡೆ ಸಿಕ್ಕಾಪಟ್ಟೆ ನಾಯಿಕೊಡೆಗಳಂತೆ ಗಲ್ಲಿ ಗಲ್ಲಿ ಗಳಲ್ಲಿ ಎಂಜಿನಿಯರ್ಸ್ ಇದ್ದಾರೆ ಇಂದು. 


ಹೊರಗಡೆ ಕೆಲಸಕ್ಕೆ ಅಂತ ಹೋದರೆ Experience ಕೇಳ್ತಾರೆ.ಎಲ್ಲಿಂದ ತರೋದು. ಯಾರಾದರೂ ಕರೆದು ಕೆಲಸ  ಕೊಟ್ರೆ ಅಲ್ವಾ experience ಅನ್ನೋದು ಬರೋದು.

ಇಲ್ಲ ಅಂದ್ರೆ ಸಿಕ್ಕಿದ ಯಾವದೇ ಕೆಲಸ,ಕಡಿಮೆ ಸಂಬಳ ಆದ್ರೂ ಓಕೆ ಪರವಾಗಿಲ್ಲ, ಸದ್ಯಕ್ಕೆ ಇದೇ ಮಾಡ್ತೀನಿ.. ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.


ಹೆಚ್ಚಾಗಿ ಇಂಜಿನಿಯರ್ ಅನ್ನಿಸಿಕೊಂಡವ  ಅವನು ಓದಿದ್ದು ಬಿಟ್ಟು ಬಾಕಿ ಎಲ್ಲಾ ಕೆಲಸ ಮಾಡೋದೇ ಹೆಚ್ಚು. ಆದ್ರೂ ತುಂಬಾ ಜನ ಸಕ್ಸೆಸ್ ಕೂಡ ಕಂಡಿದ್ದಾರೆ. ಈಗ ನಮ್ಮ ಅನಿಲ್ ಕುಂಬ್ಳೆ, ಶ್ರೀನಾಥ್,ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಅಲ್ಲಿ ಸಕ್ಸಸ್ ಕಂಡಿಲ್ವಾ. ಮಾಧವನ್,ಸೋನು ಸೂದ್, ಸುಶಾಂತ್ ಸಿಂಗ್ ರಜಪೂತ್ ಮೂವಿ ಇಂಡಸ್ಟ್ರೀಸ್ ಅಲ್ಲಿ ಸಕ್ಸಸ್ ಕಂಡಿಲ್ವಾ.. ವೆರಿ ಫೇಮಸ್ ಮಿಸ್ಟರ್ ಬಿನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ಕೂಡ ಒಬ್ಬ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನ್ಲಲೇ ಪದವಿ ಪಡೆದವ.ಸಿಂಗರ್ ಶಂಕರ್ ಮಹಾದೇವನ್ ಕೂಡ ಒಬ್ಬ ಇಂಜಿನಿಯರ್. ಅಷ್ಟೇ ಏಕೆ ನಮ್ಮ ಕನಡದ ಅಧ್ಬುತ ನಟ ದತ್ತಣ್ಣ ಕೂಡ ಮೂಲದಲ್ಲಿ ಒಬ್ಬ ಇಂಜಿನಿಯರ್ ಅಲ್ವಾ.. ಈ ರೀತಿಯ  ಇಂಜಿನಿಯರ್ ಗಳ ಪಟ್ಟಿ ತುಂಬಾ ದೊಡ್ಡದೇ ಉಂಟು.


ಇದೆಲ್ಲ ಯೋಚನೆಗಳು ಬಂದಾಗ ನನಗೆ ಅನಿಸೋದು ನಾನು ಯಾಕೆ ಬೇರೆ ಏನೋ ಒಂದು ಆಗ್ಬಾರ್ದು. ಯಾಕೆ ಸುಮ್ಮನೆ ಈ ಕಂಪನಿ ಕೆಲಸಕ್ಕೆ ಹೋಗ್ಬೇಕು ಎಂದು.


ಅಪ್ಪನ ಹತ್ತಿರ ಹೇಳ್ತ ಇದ್ದೆ - ಅಪ್ಪ ನಾನು ಕೆಲಸಕ್ಕೆ ಹೋಗಲ್ಲ, ಬೇರೆ ಏನೋ ಒಂದು ಆಗ್ತಿನಿ.


ಬೇರೆ ಏನೋ ಒಂದು?! ಏನು ಆಗ್ತೀಯಾ ಬೇರೆ ಏನೋ ಒಂದು..ಅಂತ ಅಪ್ಪ ಕೇಳಿದ್ರೆ..


ನನಗೆನೇ ಗೊತ್ತಿರಲಿಲ್ಲ. ಯಾಕೆಂದರೆ ನನ್ನ ಬಳಿ ಅದು ಮಾಡ್ಬೇಕು, ಇದು ಮಾಡ್ಬೇಕು.. ಹಾಗೆ ಆಗ್ಬೇಕು, ಹೀಗೆ ಆಗ್ಬೇಕು ಅನ್ನೋ ಬರೀ ಐಡಿಯಾ ಗಳಿದ್ದವು ಅಷ್ಟೇ. But ಏನೂ ಮಾಡುತ್ತಿರಲಿಲ್ಲ ನಾನು.


ಕಾಲೇಜಿನಲ್ಲಿ ಕೂಡ ಲಾಸ್ಟ್ ಬೆಂಚ್ ನಲ್ಲಿ ಕುಳಿತುಕೊಂಡು ಇದೇ ಯೋಚನೆ ಮಾಡಿದ್ದೇ ಮಾಡಿದ್ದು ... ಕಾಲೇಜ್ ಮುಗಿದ ಮೇಲೆ ಅದು ಬ್ಯುಸಿನೆಸ್ ಮಾಡ್ತೇನೆ, ಇದು ಬ್ಯುಸಿನೆಸ್ ಮಾಡ್ತೇನೆ ಎಂದು. ಆದ್ರೆ ಕಾಲೇಜ್ ಮುಗಿದು ಒಂದು ವರ್ಷ ಆದರೂ ಮಣ್ಣಾಂಗಟ್ಟಿನೂ ಮಾಡಿರಲಿಲ್ಲ. ಅದು ಮಾಡ್ಬೇಕು ಇದು ಮಾಡ್ಬೇಕು ಅಂತ ಜಸ್ಟ್ ಥಿಂಕ್ ಮಾಡ್ತಾ ಇದ್ದೆ ಅಷ್ಟೇ.

ಬಹುಶಃ ನಾನು ಆ ಥಿಂಕ್ ಮಾಡುವುದನ್ನು stop ಮಾಡಿ ಸೀರಿಯಸ್ ಆಗಿ ಏನೋ ಒಂದು ಮಾಡಿದ್ರೆ.. ಏನೋ ಒಂದು ಆಗ್ತಿದ್ದೆನೋ ಏನೋ.. 


First ನನ್ನ ಮರ್ಯಾದೆ ಉಳಿಸ್ಲಿಕ್ಕೆ ಒಂದು  ಕೆಲಸ ಹುಡುಕು ಮಾರಾಯ. ಬಾಕಿದ್ದು ಅಧಿಕ ಪ್ರಸಂಗ ಎಲ್ಲಾ ಆಮೇಲೆ ಮಾಡು ಅಂತ ಹೇಳುವವರು ಅಪ್ಪ.


ಪಕ್ಕದ ಮನೆ ಆಂಟಿ ದಿನಾಲೂ ಕೇಳೋರು.. ಎಂತದ ಕೆಲಸ ಏನಾದರೂ ಸಿಕ್ಕಿದೆಯಾ ನಿನಗೆ ಎಂದು.


ಕುಟುಂಬದ ಸಂಬಂಧಿಕರು ಕೇಳೋರು.. ಎಂತದ ಈ ವರ್ಷ ಆದರೂ ಕೆಲಸ ಸಿಗುವ ಲಕ್ಷಣ ಉಂಟಾ ನಿನಗೆ ಅಂತ.


ಈ ಊರಿನ ಹೆಂಗಸರು, ಸಂಬಂಧಿಕರು ವಿಶಿಷ್ಟವಾದ ಜೀವಿಗಳು ಮರ್ರೆ. ಕಲಿಯುವಾಗ ಕೇಳ್ತಾರೆ ಯಾವಾಗ ಮಾರಾಯ ನಿನ್ನದೊಂದು ಕಲಿತು ಮುಗೀಲಿಕ್ಕೆ ಅಂತ ,

ಕಲಿತು ಕೆಲಸ ಸಿಗದಿದ್ದರೆ ಇನ್ನೂ ಕೆಲಸ ಸಿಕ್ಕಿಲ್ವಾ ಅಂತ ಕೇಳ್ತಾರೆ..

ಕೆಲಸ ಸಿಕ್ಕಿದರೆ ತಿಂಗಳಿಗೆ ಎಷ್ಟು ಸಂಬಳ ಎಂದು ಬಾಯಿ ಬಿಟ್ಟು ಕೇಳ್ತಾರೆ,per annum ಲೆಕ್ಕದಲ್ಲಿ ಹೇಳಿದ್ರೆ.. ಹಾಗಾದರೆ ತಿಂಗಳಿಗೆ ಕರೆಕ್ಟ್ ಆಗಿ ಎಷ್ಟು ಆಗ್ತದೆ ಎಂದು ಹೇಳು ಅಂತ ಹೇಳ್ತಾರೆ,

ಏನೋ ಒಂದು ಸಿಗುತ್ತೆ ಅಂತ ಹೇಳಿದ್ರೆ.. ಅದೇ exactly ಆಗಿ ಎಷ್ಟು ಅಂತ ಹೇಳು.. ಅಂತ ಸಾಯ್ತಾರೆ. ಒಟ್ಟಿನಲ್ಲಿ ತಿಂಗಳ  ಸಂಬಳದ  ಒಂದು proper ನಂಬರ್, ರೌಂಡ್ ಫಿಗರ್ ನಾವು  ಹೇಳುವವರೆಗೂ ಅವರು ಬಿಡೋದು ಇಲ್ಲ, ಅವರಿಗೆ ಸಮಾಧಾನ ಆಗೋದು ಕೂಡ ಇಲ್ಲ.


ಹುಡುಗಿಯರ ಬಳಿ ಏಜ್ ಕೇಳಬಾರ್ದು, ಗಂಡಸರ ಬಳಿ ಸಂಬಳ ಕೇಳಬಾರ್ದು ಅನ್ನುವುದನ್ನು ಈ Government ಗಳು ಆದರೂ ಸರಿಯಾಗಿ strictly ಆಗಿ ಜಾರಿಗೆ ತರಬಾರದೇ.


ನಮ್ಮದೇ ಒಂದು ಸಮಸ್ಯೆ ಆದರೆ, studies ಆದ ಮೇಲೆ ಇಂತವರನ್ನು  manage ಮಾಡೋದೇ ಇನ್ನೂ  ಒಂದೂ ದೊಡ್ಡ ಸಮಸ್ಯೆ.


ಕೆಲಸ ಸಿಕ್ಕಿ ಒಂದೆರಡು ವರ್ಷ ಆದ ಮೇಲೆ ಇವರೆಲ್ಲಾ ಪುನಃ ಒಡೋಡಿ  ಬಂದು ಇನ್ನು ಮದುವೆ ಯಾವಾಗ.. ಮದುವೆ ಆದರೆ ಸಿಹಿ ಸುದ್ದಿ ಯಾವಾಗ,ಹೆಂಡತಿಗೆ  ಸೀಮಂತ ಯಾವಾಗ,ಮಕ್ಕಳು ಆಗುವುದು  ಯಾವಾಗ.. ನಾಮಕರಣ ಯಾವಾಗ.. ಮಕ್ಕಳ ಮದುವೆ ಯಾವಾಗ... ನೀವು ಸಾಯೋದು ಯಾವಾಗ.. ಅನ್ನೋದು ಕೂಡ ಕೇಳದೇ ಇರಲ್ಲ ಈ ಜನರು, ಒಟ್ಟಿನಲ್ಲಿ ಈ ಸಮಾಜ ಸರಿ ಇಲ್ಲ ಬಿಡಿ.


ಆದರೂ ಸದ್ಯಕ್ಕೆ ಕೆಲಸದ್ದು ಒಂದು ಕಿರಿಕಿರಿ ಬಿಟ್ಟರೆ, ಅದಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಬಿಟ್ಟರೆ ಬೇರೆ ಯಾವುದೇ ಪ್ರಶ್ನೆಗಳನ್ನು ಈ ಭವ್ಯ ಸಮಾಜ ನನಗೆ ಇನ್ನೂ ತನಕ ಕೇಳಿಲ್ಲ. May be ಮುಂದೆ ಹೋಗ್ತಾ ಹೋಗ್ತಾ ಖಂಡಿತವಾಗಿಯೂ ಕೇಳ್ತದೆ. ಏನೂ ಮಾಡಕ್ಕಾಗಲ್ಲ ಸಮಾಜನೇ ಹಾಗೆ ಬಿಡಿ. .. 


ಒಟ್ಟಿನಲ್ಲಿ ಕೆಲಸಕ್ಕಾಗಿ ನಾನಂತು ನನ್ನ ಭಗೀರಥ ಪ್ರಯತ್ನ ಮಾಡುತ್ತಿದ್ದೆ, ಆದರೆ ಗುರಿ ಮುಟ್ಟುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.ನನಗೂ ವಿಶ್ವಾಸ ಇರಲಿಲ್ಲ. ನನ್ನ ಅಪ್ಪನಿಗಂತೂ ಮೊದಲೇ ಇರಲಿಲ್ಲ.


ಇಂದು  ಕೂಡ ಅದೇ ಪ್ರಯತ್ನದಲ್ಲಿ ಈ Interview ಗೆ ಫೈಲ್, resume ಸಹಿತ ಬಂದಿದ್ದೆನೆ. 


Interview ಗಳು ನನಗೇನೂ ಹೊಸದಲ್ಲ. ಇದನ್ನು ಸೇರಿ ಲೆಕ್ಕ ಮಾಡಿದರೆ ಬಹುಶಃ ಇಪ್ಪತ್ತನೆಯದ್ದು ಇರಬೇಕು,sorry sorry ...ಇಪ್ಪತ್ತೈದನೆಯದ್ದು ಇದು. ನಾನು ಲೆಕ್ಕದಲ್ಲಿ ಬಾರಿ ಹುಶಾರು. ಇಂತಹ ಲೆಕ್ಕವನ್ನು ಎಂದಾದರೂ ಮರೆಯಲು ಸಾಧ್ಯವೇ. 


Interview ಗಳನ್ನು attend ಮಾಡಿ ಒಂದು ಒಳ್ಳೆಯ ಕೆಲಸ ಗಳಿಸಿ ಕೊಳ್ಳುವುದಕ್ಕಿಂತಲೂ ನಿರಂತರವಾಗಿ interview ಗೆ ಹೋಗುವುದು, ಬರುವುದೇ ನನ್ನ ಸದ್ಯದ ಅತೀ ದೊಡ್ಡ ಕೆಲಸವಾಗಿತ್ತು.


ಯಾರಾದರೂ ಏನು ಕೆಲಸ ಮಾಡ್ಕೊಂಡಿದ್ದಿಯಾ ಅಂತ  ಕೇಳಿದ್ರೆ ಹೆಮ್ಮೆಯಿಂದ ಹೇಳ್ತಾ ಇದ್ದೆ interview attend ಮಾಡೋದು ಅಂತ.


ಮತ್ತೆ ಹೊಟ್ಟೆಗೆ ತಿನ್ಲಿಕ್ಕೆ ಏನು ಮಾಡ್ತೀಯಾ.. ಅಂತ ಸೀರಿಯಸ್ ಆಗಿ ಭವಿಷ್ಯದ ಬಗ್ಗೆ ಭಯಾನಕ ಕಾಳಜಿ ವ್ಯಕ್ತಪಡಿಸಿ ಪ್ರಶ್ನೆ ಕೇಳಿದ್ರೆ... ಪ್ರೈಡ್ ರೈಸ್, ಗೋಬಿ ಮಂಚೂರಿಯನ್ ಎಲ್ಲಾ ತಿಂತಿನಿ, ಮ್ಯಾಗಿ ತಿಂತೀನಿ, ಜ್ಯೂಸ್ ಕುಡೀತಿನಿ,ಮಿಲ್ಕ್ ಶೇಕ್ ಕುಡಿತೀನಿ ಅಂತ ಹೇಳಿ ಅವರ ಬಾಯಿ ಮುಚ್ಚಿಸುತ್ತಿದ್ದೆ. 


Resume ಅನ್ನೋ ನನ್ನ ಕುಂಡಲಿಯನ್ನು ಯಾವುದೇ ಸ್ಟೈಲ್ ನಲ್ಲಿ, ಯಾವುದೇ format ಅಲ್ಲಿ ತಯಾರಿ ಮಾಡಿಕೊಂಡು  ಹೋದರು ನನಗೆ ಕೆಲಸ ಅನ್ನುವುದು ಮರೀಚಿಕೆ ಆಗಿತ್ತು.ಕೇವಲ  Interview ಮಾಡುವವ ನನ್ನ ತಲೆ ತಿಂದು ನನ್ನ ಅತ್ಯಮೂಲ್ಯ ಸಮಯ ತಿಂದು ಹಾಕುತ್ತಿದ್ದ,sorry..ನಾನು ಅವರ ಸಮಯ ವೇಸ್ಟ್ ಮಾಡ್ತಾ ಇದ್ದೆ. 


ನಾನು ಇಷ್ಟು ಚಿಕ್ಕ ವಯಸ್ಸಿಗೆನೇ ಒಂದು ರೇಂಜಿಗೆ ಅದೆಷ್ಟೋ ಭಿನ್ನ ವಿಭಿನ್ನ ಶೈಲಿಯ  interview ಗಳನ್ನು, interview ಮಾಡುವವರನ್ನು ಅದಾಗಲೇ ನೋಡಿ ಆಗಿತ್ತು. Interview ನ ಒಳ ಹೊರಗು ಎಲ್ಲವೂ ನನಗೆ ಚೆನ್ನಾಗಿ ಗೊತ್ತಿತ್ತು. Interview ಅಂದರೆ ನಾನು ಹೆದರೋ ಮಗನೇ ಅಲ್ಲ. Interview ಅಂದ ಕೂಡಲೇ ನನ್ನಲ್ಲಿ ಆಟೋಮ್ಯಾಟಿಕ್ ಆಗಿ confidence ಹೆಚ್ಚಾಗುವುದು. ಆದರೂ ನನಗೆ ಮಾತ್ರ ಕೆಲಸ ಸಿಕ್ಕಿಲ್ಲ.


ಒಟ್ಟಿನಲ್ಲಿ work experience ಗಿಂತಲೂ ನನ್ನಲ್ಲಿ interview experience ಅಗಾಧವಾಗಿತ್ತು. ಈ experience ಎಲ್ಲಾ  ಕಾಲೇಜಿನ ಭಯಂಕರ ಬ್ರಿಲಿಯಂಟ್ ಸ್ಟೂಡೆಂಟ್ ಅಂತ ಅನ್ನಿಸಿಕೊಳ್ಳುವವನಿಗೆ ಕೂಡ  ಸಿಗೋದೇ ಇಲ್ಲ. ಯಾಕೆಂದರೆ ಅವನು campus drive ನಲ್ಲಿ ಯಾವೊದೋ ಒಂದು ದೊಡ್ಡ ಕಂಪನೆಯಲ್ಲಿ ಕೆಲಸ ಹಿಡಿದಿರುತ್ತಾನೆ ಅಲ್ವಾ.. ಇಂತಹ ಅನುಭವಗಳೆಲ್ಲಾ exclusive ಆಗಿ ನಮ್ಮಂತ unemployed graduate ಗಳಿಗೆ ಮಾತ್ರ ಸಿಗೋದು.


ಸಾಧ್ಯ ಆದರೆ ಮುಂದೊಂದು ದಿನ ನನ್ನ ಅನುಭವಗಳನ್ನು ಒಟ್ಟು ಸೇರಿಸಿ ಒಂದು ಪುಸ್ತಕವನ್ನೇ  ಬರೀ ಬೇಕು ಅಂತ ಇದ್ದೇನೆ  " #Interview_ಎಂಬ_ಚಕ್ರವ್ಯೂಹಗಳನ್ನು_ಭೇದಿಸುವುದು_ಹೇಗೆ.."


ಬಹುಶಃ ನನ್ನಂತ ವಿದ್ಯಾರ್ಥಿ ಮುಗಿಬಿದ್ದು  ಆ ಪುಸ್ತಕ ಕೊಂಡು ಕೊಳ್ಳಬಹುದು. ಬಿಸಿ ಬಿಸಿ ಮಸಾಲೆ ದೋಸೆ ಖರ್ಚಾದಂತೆ ಪ್ರಿಂಟ್ ಆದ ಪುಸ್ತಕ ಎಲ್ಲವೂ ಖಾಲಿ ಆದರೆ.. ನನಗೆ ಸಕತ್ ದುಡ್ಡು ಬರಬಹುದು ಅಲ್ವಾ ಅಂತ ಯೋಚಿಸುತ್ತಿದ್ದೆ. 


ಅಲಾ.. ನಾನು ಯಾಕೆ  ಈ field ಗೆ ಕೂಡ  ಕೈ ಹಾಕಿ ಒಮ್ಮೆ ನೋಡ್ಬಾರ್ದು.. ಬರಹಗಾರ ಆಗಿ ಪುಸ್ತಕ ಎಲ್ಲಾ ಬರ್ದು ಸಕ್ಕತ್ ಕಾಸು ಮಾಡಬಾರದು... ಅಂತ ಧೀರ್ಘವಾಗಿ ಆಲೋಚಿಸುವಾಗಲೆಲ್ಲ.. 


" ಓಹ್ ಮರ್ಲಾ(ಹುಚ್ಚ) .. Interview ಗಳ ಬಗ್ಗೆ ಬರೆಯಬಲ್ಲೆ ನಿನು,ಆದರೆ interview ಗಳನ್ನು ಹೇಗೆ ಭೇದಿಸುವುದು,Crack ಮಾಡುವುದು ಎಂದು ನಿನಗೆ ಗೊತ್ತಿದ್ದರೆ.. ನೀನು ಈ ರೀತಿಯ  ನಿರುದ್ಯೋಗಿಯೇ ಆಗಿರುತ್ತಿರಲಿಲ್ಲ.ಅದೂ ಅಲ್ಲದೇ ಬರಹಗಾರ ಆಗ್ಲಿಕ್ಕೆ.. ಬೇರೆ ವಿಷಯ ಗಳ ಬಗ್ಗೆ ಬರೀಲಿಕ್ಕೆ ನಿನಗೆಂತ ಅಜ್ಜಿ ಶುಂಠಿ ಗೊತ್ತುಂಟು .." ಎಂದು ಮನಸ್ಸು ಎಚ್ಚರಿಸಿ ನನ್ನ ಬರಹಗಾರ ಆಗುವ ಕನಸಿಗೆ ತೀಲಾಂಜಲಿ ನೀಡುತ್ತಿತ್ತು.


ಅದು ಕೂಡ ಹೌದು, ಹಾಗೆಲ್ಲ ಒಟ್ರಾಸಿ ಬರೆಯುವವನಾಗಿದ್ದರೆ ಸರಿಯಾಗಿ ಕಾಲೇಜ್ ನಲ್ಲಿ ಓದಿ ಕಲಿತು ಎಕ್ಸಾಂನಲ್ಲಿ  ಕ್ಲಾಸ್ ಗೆ ಟಾಪರ್ ಆಗಿ VTU ನಲ್ಲಿ(university) ಗೋಲ್ಡ್ ಮೆಡಲ್ ಏನೋ ಒಂದು ಪಡೆದುಕೊಳ್ಳುತ್ತಿದ್ದೆ. ಹೌದು ಹೌದು ಈ ಬರೆಯುವುದು ಎಲ್ಲಾ ನಮ್ದುಕೆ ಆಗ್ಬರಲ್ಲ ಸಾಮೆ.. ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. 


ಈ interview ಅಂದರೆ ಅದೊಂದು ಭಯಂಕರವಾದ ಸಿದ್ದತೆ, ಯುದ್ಧದ ತಯಾರಿ,ಯುಧ್ಧೊನ್ಮಾದ ದ ಮನಸ್ಥಿತಿ.


ನಾನು ಕೂಡ ಪ್ರತೀ interview ಅಂದರೆ ಮದುವೆಗೆ ಹೋಗಲು ಹುಡುಗಿಯರು ಹೇಗೆ ಶ್ರದ್ಧೆಯಿಂದ ಸಿದ್ದರಾಗುತ್ತಾರೋ ಹಾಗೆ ಫಾರ್ಮಲ್ ಡ್ರೆಸ್,ಫಾರ್ಮಲ್ ಶೂ, ಟೈ, ಕ್ಲೀನ್ ಶೇವ್, proper ಹೇರ್ ಕಟ್ಟಿಂಗ್ ಎಲ್ಲಾ ಮಾಡ್ಕೊಂಡು ಸಿದ್ದವಾಗುತ್ತಿದ್ದೆ.


ಸರಾಯಾಗಿ ಟೈ ಕಟ್ಟಲು ಕಲಿತಿದ್ದೆ ನಾನು ಐದನೇ interview ಆದ ನಂತರವೇ. ನನ್ನಂತ interview ಪ್ರೇಮಿ ನನ್ನ ಕ್ಲಾಸ್ ಮೇಟ್ ಗಳು ಸಹಾಯ ಮಾಡುತ್ತಿದ್ದರು ಇಲ್ಲವೇ ಮನೆಯಲ್ಲಿ youtube ನಲ್ಲಿ ನೋಡುತ್ತಿದ್ದೆ, ಸರಿಯಾಗಿ ಬಹಳ ಸುಲಭವಾಗಿ ಟೈ ಕಟ್ಟುವುದು ಹೇಗೆ ಎಂಬ ವಿಡಿಯೋಗಳ ಮೂಲಕ. ಅದರಲ್ಲೂ ಎಷ್ಟು ವಿಧದ ವಿಡಿಯೋ ಗಳು ಮರ್ರೆ.ತಲೆ ಕೆಟ್ಟು ಹೋಗುತ್ತಿತ್ತು. ಕೊನೆಗೂ ಸರಾಯಾಗಿ ಟೈ ಕಟ್ಟಲು ಕಲಿಸಿದ್ದು ನಮ್ಮ ಕ್ಲಾಸಿನ ಒಬ್ಬಳು  ಹುಡುಗಿಯೇ. 


ನಾನು Resume ಪ್ರಿಂಟ್ ಹೊಡೆಸಿ ಹೊಡೆಸಿ xerox ಅಂಗಡಿಯವನಿಗೆ ನನ್ನಿಂದ ಒಂದು ನಿರಂತವಾದ ಕೆಲಸ ಸಿಗುವಂತೆ ಮಾಡಿದ್ದೆ. ಆದರೆ ನನಗೆ ಯಾವುದೇ ಲೈಫಿನಲ್ಲಿ ಕೆಲಸ ಸಿಗುವ ಲಕ್ಷಣ ಗೋಚರಿಸುತ್ತಿಲ್ಲ.


ಇವತ್ತು ಕೂಡ ಅದೆಲ್ಲಾ ಸಿದ್ದತೆಯೊಂದಿಗೆನೇ ಇಲ್ಲಿಗೆ ಬಂದಿದ್ದೆನೆ.


ಒಬ್ಬೊಬ್ಬರಾಗಿ interview ಮುಗಿಸಿಕೊಂಡು ಹೋಗುತ್ತಿದ್ದರು. ನನ್ನನ್ನು ಹಾಗೂ ನನ್ನ ಪಕ್ಕ ಕುಳಿತಿದ್ದ ಹುಡುಗಿಯನ್ನು ಬಿಟ್ಟು ಇನ್ನೂ ಮಿನಿಮಮ್ ಅಂದ್ರೂ ಹತ್ತು ಮಂದಿ ಇದ್ದಾರೆ. ಇನ್ನೂ ಹತ್ತು ಮಂದಿ ಅಂದ್ರೆ.. ಇನ್ನೂ ಅದೆಷ್ಟೋ ಟೈಂ..


ಪಕ್ಕದಲ್ಲಿ ಕೂತಿದ್ದ ಆ  ಸೀರಿಯಸ್ ಹುಡುಗಿ ಜೊತೆಗೆ ಏನಾದರೂ ಬದುಕಿನ ಬಗ್ಗೆ ಸೀರಿಯಸ್ ಆಗಿ ಮಾತಾಡುವ ಅಂತ ಅನ್ನಿಸಿತು.


ಪಕ್ಕದ ಕುಳಿತಿದ್ದವಳ resume ಮೆಲ್ಲ ಇಣುಕಿ ನೋಡಿದೆ. ಭೂಮಿ ಎಂದು ಅದರಲ್ಲಿ  ಬರೆದಿತ್ತು.


ಕೊನೆಗೂ ಮಾತಿಗೆ ಇಳಿದೆ.. 


ನೋಡಿ ಭೂಮಿ ಅವರೆ .. ಈ ಕೆಲಸ ನಿಮಗೆ ಸಿಕ್ಕೆ ಸಿಗುತ್ತೇ ಅನ್ನೋ confidence ನಿಮಗೆ ಏನಿದೆ... ಎಂದು ಕೇಳಿದೆ. 


ಅವರೆ, ತೊಗರಿ ಅಲ್ಲ... ಜಸ್ಟ್ ಭೂಮಿ. ಅಂದಳು ಸಿಡುಕುತ್ತಾ..


Oh sorry.. ಹೇಳಿ ಭೂಮಿ.. ಈ ಕೆಲಸ ನಿಮಗೇ  ಸಿಗುತ್ತೇ ಅನ್ನೋ ಆತ್ಮವಿಶ್ವಾಸ ಇದೆಯಾ. 


ನಿಮಗೆ ಸಿಗದಿದ್ದರೂ ನನಗೆ ಸಿಗುತ್ತೆ ಅನ್ನೋ ನಂಬಿಕೆ ಇದೆ ಅಂದಳು.


ನೀವು ಹೇಳಿದ್ದು ಸತ್ಯ. ನನಗಂತು ನಿಜವಾಗಿಯೂ ಸಿಕ್ಕೆ ಸಿಗುತ್ತೆ ಅನ್ನುವ ನಂಬಿಕೆನೇ ಇಲ್ಲ, ಮನೆಯಲ್ಲಿ ಇನ್ನು ಹತ್ತು ಸೆಟ್ resume copy ಗಳಿವೆ, ಮುಂದಿನ interview ಗಳಿಗೆ ಬೇಕೆಂದು ಈಗಲೇ ಫುಲ್ ರೆಡಿ ಮಾಡಿ ಇಟ್ಟುಕೊಂಡಿದ್ದೆನೆ. ಅಂತಹ confidence ನನ್ನದು... ಅಂದೆ. 


ಸ್ವಲ್ಪ ಹೊತ್ತು ನನ್ನನ್ನೇ ಹಾಗೇ ನೋಡಿದಳು.ನಂತರ ಹಾಗೇ  ನಕ್ಕಳು.


ಆಹಾ ಎಷ್ಟು ಚೆನ್ನಾಗಿ ನಗುತ್ತಾಳೆ ಇವಳು. ಹುಡುಗಿ ಕೂಡ ಅಷ್ಟೇ ಚಂದ. ಚಂದ ಇದ್ದದ್ದಕ್ಕೆ ಅಲ್ವಾ ನಾನು ಅವಳ ಪಕ್ಕವೇ ಹೋಗಿ ಕುಳಿತುಕೊಂಡಿದ್ದು.


ಅವಳು ನಗುತ್ತಲೇ - ನಿಮಗೆ ನನ್ನ ಹೆಸರು ಹೇಗೆ  ಗೊತ್ತಾಯಿತು, ಮೆಲ್ಲಗೆ ಕಳ್ಳನಂತೆ  resume ಕಡೆಗೆ ಇಣುಕಿ ನೋಡಿದ್ದಾ.. ಎಂದು ಕೇಳಿದಳು.


ನಾನು ಕೂಡ ನಗುತ್ತಾ.. ನಿಮ್ಮ ಹೆಸರು ಚೆನ್ನಾಗಿದೆ, ನಿಮ್ಮ ತರಹನೇ ಅಂದೆ.


ಅವಳು ಪುನಃ ನನ್ನನ್ನೇ ನೋಡಿದಳು. ತುಸುವೇ ನಸುನಗು ಬೀರಿದಳು. ನಾಚಿಕೆ ಸ್ವಲ್ಪ ಜಾಸ್ತಿ ಇತ್ತು. 


ನಿಮ್ಮ ಹೆಸರೇನು..


#ನೀಲಮೇಘ... ಅಂದೆ.


ಅಂದ್ರೆ ನೀಲ ಮೇಘ ಶ್ಯಾಮ.... ಕೃಷ್ಣ ಎನ್ನುವ ಅರ್ಥ ಅಲಾ..?


ಇಲ್ಲ ಇಲ್ಲ ಅಷ್ಟೆಲ್ಲ ಡೀಪ್ ಆಗಿ ಥಿಂಕ್ ಮಾಡ್ಬೇಡಿ. ನನ್ನ ಅಪ್ಪ ಅಮ್ಮ ಕೂಡ ಇಷ್ಟೆಲ್ಲ ಥಿಂಕ್ ಮಾಡಿರ್ಲಿಕ್ಕಿಲ್ಲ..


ನೀಲಣ್ಣ ಅಂಥ ಅಪ್ಪನ ಹೆಸರು, ಮೇಘಕ್ಕ ಅಂತ ಅಮ್ಮನ ಹೆಸರು, ಎರಡೂ ಹೆಸರುಗಳಿಂದ ಒಂದೊಂದೇ ಪದವನ್ನು ಕಟ್ ಮಾಡಿ..ಒಂದೇ  ಹೆಸರು ಮಾಡಿದ್ರೆ, ನೀಲಣ್ಣ-ಮೇಘಕ್ಕರ ಏಕಮಾತ್ರ ಸುಪುತ್ರ.. ಅದುವೇ ನೀಲಮೇಘ.. ಅಂದರೆ ಅದು  ನಾನು ಅಂದೆ.


ಅವಳು ಜೋರಾಗಿ ನಕ್ಕಳು.


ಯಾಕೆ ಕೇಳಿದೆ.


ನೀಲಣ್ಣ, ಮೇಘಕ್ಕ ಎಂತ.. ಅಣ್ಣ ಮತ್ತು ತಂಗಿಯಾ.. ನಿಮ್ಮ ತಲೆ.. ಎಂದು ಪುನಃ ಜೋರಾಗಿ ನಕ್ಕಳು.


ಹಾಗಲ್ಲ ಅದು, ನೀಲೇಶ್ ಮತ್ತು ಮೇಘ ಅಂತ ಅವರ ಹೆಸರು. ಊರಲ್ಲಿ ಎಲ್ಲಾ ನೀಲಣ್ಣ.. ನೀಲಣ್ಣ ಅಂತ ಅಪ್ಪನನ್ನು, ಮೇಘಕ್ಕ.. ಮೇಘಕ್ಕ ಅಂತ ಅಮ್ಮನನ್ನು ಕರೆದು.. ಊರು ತುಂಬಾ ಅವರು ಹಾಗೇ ಫೇಮಸ್ ಆಗಿ ಬಿಟ್ಟಿದ್ದಾರೆ ಅಂದೆ.


ಅವಳು ಮತ್ತೊಮ್ಮೆ ನಗುತ್ತಾ.. ನೀವು ಕೂಡ ನಿಮ್ಮಪ್ಪನಿಗೆ ನೀಲಣ್ಣ ಅಂತಾನೇ ಕರೆಯುವುದಾ ಕೇಳಿದಳು.


ಇಲ್ಲ ನೀಲ್ ಬ್ರೋ ಅಂತಿನಿ.. ಅಂದೆ  ನಗುತ್ತಾ.


ಅವಳು ನಾನು ಸೇರಿ ಜೋರಾಗಿ ಬಿದ್ದು ಬಿದ್ದು ನಕ್ಕೆವು, interview ಗೆ ಬಂದವರೆಲ್ಲ ನಮ್ಮನೇ ನೋಡುತ್ತಿದ್ದರು, ಅಲ್ಲಿ ನಾವು interview ಗೆ ಅಂತ ಬಂದಿದ್ದ  ಕಂಪೆನಿಯ ಒಬ್ಬ excicutive manager ಅಂತ ಕಾಣುತ್ತೆ, ಏನೋ ಒಂದು ಆಗಿದ್ದ ಆತ.. ಆತ ಬಂದು silence ಪ್ಲೀಸ್ ಅಂದ ಜೋರಾಗಿ. ಮತ್ತೇ ಜೋರಾಗಿ ನಗುತ್ತಿದ್ದ ನಮ್ಮನೇ ದುರುಗುಟ್ಟಿ ನೋಡಿ.ಒಳಗೆ ಹೋದ. ನಂಗೆ confirm ಆಯಿತು, ಈ ಕೆಲಸ ಕೂಡ ಡಮಾರ್ ಅಂತ.


ನಾನು ಭೂಮಿ ಗೆ ಹೇಳಿದೆ - ನೋಡಿ ಆ ಆಸಾಮಿ ನಾವು ಹೀಗೆ ಎದ್ದು ಬಿದ್ದು ಮರ್ಲರ ಹಾಗೆ ನಗುವುದನ್ನು ನೋಡಿದ್ದಾನೆ.. ನಾನಂತು ಕೆಲಸದ ಆಸೆ ಬಿಟ್ಬು ಬಿಟ್ಟಿದ್ದಿನಿ.. ನೀವು ಕೂಡ ಈ ಕೆಲಸದ ಆಸೆ ಬಿಡೋದೆ ಒಳ್ಳೆದು ಅಂತ ಅಂದೆ.


ಹೋದ್ರೆ ಹೋಗ್ಲಿ ಬಿಡ್ಲಿ ನೀಲಮೇಘ್ ಅಂದಳು ನಗುತ್ತಾ..


ಪರವಾಗಿಲ್ಲ ಈ ಹುಡುಗಿ ಕೂಡ ನನ್ನ category ನೇ. ಪರಸ್ಪರ  Wave length, frequency ಎಲ್ಲಾ ಕರೆಕ್ಟ್ ಆಗಿ ಮ್ಯಾಚ್ ಆಗ್ತಾ ಇದೆ,synchronization ಆಗುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ಎದ್ದು ಕಾಣ್ತಾ ಇದೆ..


ನೀವು ಒಂದೋ EEE (Electrical & Electronics Engineering) ಇಲ್ಲ EC (Electronics & Communication Engineering) ಅಲ್ವಾ... ಅಂದೆ.


ಅಲ್ಲಾ CS(Computer Science Engineering).. But ಯಾಕೆ ಹಾಗೆ ಗೆಸ್ ಮಾಡಿ ಹೇಳ್ತಾ ಇದ್ರಿ.. ಅಂದಳು ಭೂಮಿ.


ನೋಡಿ ನಿಮ್ಮ ನಮ್ಮ wave length, perfect ಆಗಿ ಮ್ಯಾಚ್ ಆಗ್ತ ಇದೆ, ನಾನು ಏನೋ ತಿಳ್ಕೊಂಡಿದ್ದೆ ನಿಮ್ಮ ಬಗ್ಗೆ. ಆದರೆ ನೀವು ಕೂಡ ನನ್ನಂತೆ ಅದೆಷ್ಟು ಬಿಂದಾಸ್ ಇದ್ದಿರಿ ಅಂತ ಈಗ ಗೊತ್ತಾಯಿತು..ಇಷ್ಟು ಬೇಗ comfort zone ಗೆ ನೀವು ಕೂಡ ಬಂದ್ರಿ ಅಲ್ವಾ ಅದಕ್ಕೆ ಹಾಗಂದೆ.. ಅದೂ ಅಲ್ಲದೇ ನಾನು EEE Kid... ಹಾಗಾಗಿ ಮೆದುಳಿನ circuit ನ ಒಳಗೆ frequency, wave length ಗಳೇ ತುಂಬಿರುತ್ತದೆ ಅಂದೆ ನಗುತ್ತಾ.. 


ಅವಳು ಕೂಡ ಓಹ್ ಹಾಗೆಯಾ..  ನೀವು ಭಯಂಕರ ಇದ್ದಿರಿ ನೀಲಮೇಘ್ ಅಂದಳು.


ನೋಡಿ ನಿಮಗೆ ನೀಲಮೇಘ ಅಂತ ಹೇಳೋದು ಕಷ್ಟ ಆದ್ರೆ ನೀಲು ಅನ್ನಿ, ನನ್ನ ಅಪ್ಪ ನನ್ನನ್ನು ಹಾಗೇ ಕರೆಯೋದು.. ನಾನು ಮಾತ್ರ ಅವರಿಗೆ  ನೀಲ್ ಬ್ರೋ ಅಂತಾನೇ ಕರೆಯೋದು ಅಂದೆ.


ಅವಳು ಮತ್ತಷ್ಟು ನಗುತ್ತಾ.. ಓಕೆ ಡನ್ ನೀಲು ಅಂದಳು.


Actually ಏನು ಗೊತ್ತಾ ನನ್ನ ಹೆಸರಿಗೂ ಮೀನಿಂಗ್ ಇದೆ ಆಯ್ತಾ.. ನೀಲ ಮೇಘ ಅಂದರೆ, ನೀಲಿ ಮೇಘ ಅಂತ ಅರ್ಥ.. ಒಟ್ಟಿನಲ್ಲಿ ಹೇಳಬೇಕೆಂದರೆ ನೀಲಿ ಕಲರ್ ನ  ಮೋಡ ನಾನು.. ಅಂದೆ


ಆದ್ರೆ ಕಪ್ಪು ಮೋಡ, ಬಿಳಿ ಮೋಡ ಎಲ್ಲಾ ನೋಡಿದ್ದೆನೆ.. ನೀಲಿ ಆಕಾಶ ಕೂಡ ನೋಡಿದ್ದಿನಿ ಆದ್ರೆ ಈ ನೀಲಿ ಮೋಡ ಎಲ್ಲೂ ನೋಡೆ ಇಲ್ವಲ್ಲಾ ಅಂದಳು.


ಅವಳು ಲಾಜಿಕ್ ಕೂಡ ಸರಿಯಾಗಿ ಇತ್ತು. ಈ angle ನಲ್ಲಿ ನಾನು ಕೂಡ ಥಿಂಕ್ ಮಾಡಿರಲಿಲಲ್ಲ. ನಿಜ ಹೇಳಬೇಕೆಂದರೆ ನಾನು ಕೂಡ ನೀಲಿ ಮೋಡ ನೋಡಿಲ್ಲ.


ಅದು ವಿಶೇಷವಾದ ಮೋಡ.. ಕವಿ ಕಲ್ಪನೆ.. ಅದಕ್ಕಾಗಿ ಈ ಎಲ್ಲಾ ವಿಶೇಷ ಹೆಸರು.. ವಿಶೇಷ ವ್ಯಕ್ತಿಗಳಿಗೆ ಇಡ್ತಾರೆ.. ನಿಮ್ಮಂತವರಿಗೆ ಅದೆಲ್ಲ ಗೊತ್ತಾಗಲ್ಲ ಬಿಡಿ  ಅಂದೆ


ಅವಳು ನನ್ನ ಮಾತು ಕೇಳಿ ಮತ್ತಷ್ಟು ನಕ್ಕಳು. 


ನಮ್ಮ ಮುಂದಿನ ಹೆಚ್ಚಿನವರ interview ಮುಗಿದಾಗಿತ್ತು. ನಮ್ಮನ್ನು ಬಿಟ್ಟು ಒಬ್ಬ ಇದ್ದ. ಅವನು ಕೂಡ ಒಳಗೆ ಹೋದ. ಈಗ ನಾವಿಬ್ಬರೇ.


ನಾನು ಅವಳಿಗೆ ಹೇಳಿದೆ, ನೋಡಿ next ನಾನು ಹೋಗ್ತಿನಿ.. ನನಗೆ ಕೆಲಸ ಸಿಗೋದು ಡೌಟು, interview ಕೊಟ್ಟು ಬಂದು ಇಲ್ಲೇ ನಿಮ್ಗೆ wait ಮಾಡ್ತಾ ಇರ್ತಿನಿ ಮತ್ತು ದೇವರಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸ್ತಾ ಇರ್ತಿನಿ.. ನಿಮಗೆ ಕೂಡ ಕೆಲಸ ಸಿಗೋದು ಬೇಡಾ ಅಂತ ಅಂದೆ.


ಅವಳು ಜೋರಾಗಿ ನಕ್ಕಳು..


ಏನು ಅನ್ನಿಸಿತೋ ಗೊತ್ತಿಲ್ಲ.. 


ಪ್ರೆಂಡ್ಸ್... ಎಂದು  ಕೈ ಚಾಚಿದೆ.


ಅವಳು ಕೂಡ ನಗುತ್ತಾ ಕೈ ಕುಲುಕಿ.. ಓಕೆ ಡನ್ ಅಂದಳು.


ನನ್ನ ಸರದಿ ಬಂತು. Interview ಮಾಡುವವ  ಏನೇನೋ ಕೇಳ್ತಾ ಇದ್ದ. ನಾನು ಏನೇನೋ ಹೇಳ್ತಿದ್ದೆ. ಕೆಲಸ ಸಿಗಲಿ ಎನ್ನುವ ಆಸಕ್ತಿ ಕೂಡ ನನಗಿರಿಲಿಲ್ಲ.


ಕೊನೆಗೂ interview ಮುಗಿಸಿ ಹೊರಬಂದೆ. ಭೂಮಿ interview ಕೊಡಲು ಕುಳಿತಲ್ಲಿಂದ ಮೇಲೆ ಎದ್ದು, interview ರೂಮ್ ನಿಂದ ಹೊರ ಬರುತ್ತಿದ್ದ ನನ್ನ ಬಳಿ ಬಂದು ಹೇಗಾಯ್ತು ಎಂದು ಕೇಳಿದಳು.


ನಂಗಂತು Confirm ಸಿಗಲ್ಲ.. ಅಂದೆ ನಗುತ್ತಾ..


ಅವಳು ಕೂಡ ನಕ್ಕಳು..


All the best, ನಿಂಗೂ ಕೂಡ ಸಿಗದೇ ಹೋಗಲಿ.. ಅಂದೆ.


ಅವಳು ಕೂಡ ನಗುತ್ತಾ.. ಥ್ಯಾಂಕ್ಸ್  ಎಂದು ಹೇಳಿ ಒಳಗೆ ಹೋದಳು.


ನಾನು ಒಬ್ಬನೇ ಅಲ್ಲಿ ಕುಳಿತು ಮೀನ ಮೇಷ ಎಣಿಸ್ತಾ ಇದ್ದೆ.


ಕೊನೆಗೂ ಒಳ ಹೋದವಳು, ಅಷ್ಟೇ ಬೇಗ ಹೊರಗೆ ಬಂದಳು ಭೂಮಿ.


ಹೇಗೆ ಆಗಲ್ಲ ತಾನೇ ಅಂದೆ..


ನೂರು ಪ್ರತಿಶತ ಈ ಕೆಲಸ ನನಗೆ ಸಿಗೋದೇ ಇಲ್ಲ,ಹಾಗೇ interview ಕೊಟಿದ್ದೆನೆ... ಅಂದಳು ಖುಷಿ ಖುಷಿ ಯಿಂದ.


ನನಗೂ ಬಹಳ ಖುಷಿ ಆಯಿತು. ಇಬ್ಬರೂ ಸೇರಿ ನಕ್ಕೆವು.


ಈ ಖುಷಿ ಗೆ ಏನಾದರೂ ಸೆಲೆಬ್ರೇಶನ್ ಬೇಡವಾ ಕೇಳಿದೆ.


ಏನು ಸೆಲೆಬ್ರೇಶನ್.. ಕೇಳಿದಳು ಭೂಮಿ.


ಅಂತಹದ್ದು ಏನಿಲ್ಲ ಚಿಕ್ಕ ಟ್ರೀಟ್..


ಆದರೆ ನನ್ನ ಲೆಕ್ಕದಲ್ಲಿ ಅಂದಳು ಭೂಮಿ.


ಆಯ್ತು ನೀವು ಇಷ್ಟು ಕೇಳ್ತೀರಿ ಅಂದ್ರೆ ನಾನು ಯಾಕೆ ಬೇಡ ಅನ್ನಲಿ ಅಂದೆ.ಆದ್ರೆ ಟೆನ್ಶನ್ ಮಾಡ್ಬೇಡಿ ನಾನು ನಿಮ್ಮಿಂದ ಹಾಗೇ ಈ ಮೊದಲ ದಿನವೇ  ಒಟ್ರಾಸಿ ಖರ್ಚು ಮಾಡಿಸಲ್ಲ ಅಂದೆ. 


ನಂತರ ನಾವಿಬ್ಬರು ಹೊರಗೆ ಬಂದು ರೋಡ್  ಪಕ್ಕದ ಒಂದು ಗೂಡಂಗಡಿ( ಪೆಟ್ಟಿಗೆ ಅಂಗಡಿ) ಯಲ್ಲಿ ಟೀ ಕುಡಿದು, ಸಮೋಸ ತಿನ್ಕೊಂಡು ಬಸ್ ಸ್ಟ್ಯಾಂಡ್ ಕಡೆ ಹೆಜ್ಜೆ ಹಾಕಿದೆವು.


ನಡೆಯುತ್ತಲೇ ನಾನು ಕೇಳಿದೆ - ಅಲಾ ನೀಲಮೇಘ ಅಂದ್ರೆ  ನಿಜವಾಗಿಯೂ ಕೃಷ್ಣ ನಾ ?


ನೀಲಮೇಘ ಅಂದ್ರೆ ಕೃಷ್ಣ ಅಲ್ಲಾ... ಆದ್ರೆ ನೀಲಮೇಘ ಶ್ಯಾಮ ಅಂದ್ರೆ ಕೃಷ್ಣ, ಆ ರೀತಿ ಹಾಡು ಕೂಡ ಉಂಟಲ್ಲಾ ಅಂದಳು. 


ಯಾವ ಹಾಡು... ಕೇಳಿದೆ.


" ನೀಲ ಮೇಘ ಶ್ಯಾಮ... ನಿತ್ಯಾನಂದ ಧಾಮ... " ಈ ಹಾಡು ಕೇಳ್ಲಿಲ್ಲವಾ, ನೀಲಮೇಘ ಶ್ಯಾಮ ಅಂದರೆ ನೀಲಿ ಬಣ್ಣದ ಕೃಷ್ಣ ಅಂತ ಅರ್ಥ..


ಕೃಷ್ಣ ಅಂದರೆ ನೀಲಿ ಬಣ್ಣವಾ... ಮತ್ತೆ ಮಹಾಭಾರತ ಸೀರಿಯಲ್ ನಲ್ಲಿ ವೈಟ್ ಬಣ್ಣದಲ್ಲಿ ಕೃಷ್ಣ ಇದ್ದಾನೆ.. ಅಂದೆ.


ಓಹ್ ದೇವರೆ.. .. ಕೃಷ್ಣ ಅಂದ್ರೆ ಕಪ್ಪು ಬಣ್ಣ, ಗಾಢ ಬಣ್ಣ ಅಂತ ಕೂಡ ಅರ್ಥ ಉಂಟು .. ಅಂದಳು.


ಹೌದಾ.. ಅಪ್ಪನಿಗೆ ಹೋಗಿ ಇದೆಲ್ಲ ವಿಷಯ ಹೇಳ್ಬೇಕು. ನಿಲಮೇಘ ಅಂತ ಹೆಸರಿನಿಂದ ಹಿಂದೆ ಎಷ್ಟೆಲ್ಲಾ ವಿಷಯ ಇದೆ ಎಂದು ಅಂದೆ.


ನೀವು ಎಲ್ಲಾ ವಿಷಯ ಅಪ್ಪನ ಬಳಿ discussion ಮಾಡ್ತೀರಾ..


ಹೌದು ನಮ್ಮ ಮನೆಯಲ್ಲಿ ನಾನು ಅಪ್ಪ ಇಬ್ಬರೇ ಇರೋದು,


ಮತ್ತೆ ಅಮ್ಮ..?


ಅಮ್ಮ ಈಗ ಇಲ್ಲ. ತೀರಿ ಹೋಗಿ ಬಹಳ ವರ್ಷ ಆಯಿತು. ನಂಗೆ ಈಗ ಅಪ್ಪನೇ ಎಲ್ಲ.ನನ್ನ ಅಪ್ಪನೇ ನನ್ನ best freind. ಅವರಿಗೆ ನಾನು best friend. ನಾನು ಅವರ ಪಾಲಿನ  ನೀಲು... ನನ್ನ ಪಾಲಿಗೆ ಅವರು ನೀಲ್ ಬ್ರೋ.. ಅಂದೆ ನಗುತ್ತಲೇ.


ಅವಳು ಕೂಡ  ಹಾಗೇ ನಕ್ಕು ಬಿಟ್ಟಳು. 


ಅವಳ ನಗು ಚಂದ. ಅವಳು ಕೂಡ ಒಂಥರಾ ನನ್ನಂತೆಯೇ. 


ಮನಸ್ಸಲೇ ಅಂದು ಕೊಂಡೆ ಭೂಮಿ-ನೀಲಮೇಘ ಜೋಡಿ ಯಾಕೋ ಒಂಥರಾ ಚೆನ್ನಾಗಿದೆಯಲ್ಲ, ಆಕಾಶ - ಭೂಮಿ ಇದ್ದ ಹಾಗೆ.


ಅವಳ ಬಸ್ ಬಂತು, ಬಸ್ ಹತ್ತಿದಳು, ಕೈಯಲ್ಲೇ ಸನ್ನೇ ಮಾಡಿ ಹೇಳಿದಳು... ಮತ್ತೆ ಕಾಲ್ ಮಾಡ್ತಿನಿ ಆಯ್ತಾ.. ಎಂದು.

ನಂಬರ್ ಈ ಮೊದಲೇ ಪರಸ್ಪರ exchange ಮಾಡಿಕೊಂಡಿದ್ದೆವು. 


ಆಕಾಶದಲ್ಲಿ  ನೀಲಮೇಘ ಇರಲಿಲ್ಲ. ನೀಲಿ ಆಕಾಶದಲ್ಲಿ ಎಂದಿನಂತೆ ಇದ್ದ  ಕಾರ್ಮೋಡ ಕರಗಿತು ,ಮಳೆ ಧೋ ಎಂದು ಸುರಿಯಿತು.. ಈ ನೀಲಮೇಘ ನನ್ನು ಒದ್ದೆ ಮಾಡಿ ಬಿಟ್ಟಿತು. ದೇಹ ಮಾತ್ರವಲ್ಲ ಮನಸ್ಸು ಹೃದಯ ಅದ್ಯಾಕೋ ತುಂಬಾನೇ ತಂಪಾಗಿತ್ತು.ಕೆಲಸವೆನೋ ಎಂದಿನಂತೆ ಸಿಕ್ಕಿರಲಿಲ್ಲ, ಆದರೆ ನನ್ನಂತೆಯೇ ಇರೋ ಒಬ್ಬಳು ಗೆಳತಿ ಸಿಕ್ಕಿದ್ದಳು. ಮನಸ್ಸಿಗೊಂದು ನೆಮ್ಮದಿ.. ಖುಷಿ.. ಎರಡೂ ಇತ್ತು ☺️


.....................................................................................


#ನೀಲಮೇಘ 💙


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ