ನಾನು ಮತ್ತು ರೌಡಿಸಂ ದಿನಗಳು
ನನ್ನ ಎರಡೂ ಕೈಯನ್ನು ಸೇರಿಸಿ ಕೋಳ ಹಾಕಿದ್ದರು!!
ನನ್ನ ಆಚೆ ಈಚೆ ಹಾಗೂ ಎದುರುಗಡೆಯ ಸೀಟಿನಲ್ಲಿ ಪೋಲಿಸರು ಗನ್ ಹಿಡಿದುಕೊಂಡು ಕುಳಿತಿದ್ದರು!
ಹೌದು ನಾನೀಗ ಪೋಲಿಸ್ ವ್ಯಾನ್ ನಲ್ಲಿ ಕುಳಿತ್ತಿದ್ದೆನೆ.!
ಎಲ್ಲಾ ಸಾಕ್ಷ್ಯ ಗಳನ್ನು ಪರಿಶೀಲಿಸಿದ ಕೋರ್ಟ್ ನನ್ನನ್ನು ಅಪರಾಧಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿಯಾಗಿತ್ತು!
ಕೋರ್ಟ್ ನಿಂದ ನೇರವಾಗಿ ಕಾರಾಗೃಹ ಕಡೆಗೆ ಸಾಗುತ್ತಿದ್ದ ಪೋಲಿಸ್ ವ್ಯಾನ್, ಸಿಗ್ನಲ್ ನಲ್ಲಿ ರೆಡ್ ಲೈಟ್ ಬಿದ್ದೊಡನೆ ಸರ್ಕಲ್ ನಲ್ಲಿ ಹಾಗೇ ನಿಂತುಕೊಂಡು ಬಿಟ್ಟಿತ್ತು.
ವ್ಯಾನ್ ಏನೋ ಸಿಗ್ನಲ್ ನಲ್ಲಿ ನಿಂತಿತ್ತು ಆದರೆ ಅಲ್ಲಿಯ ತನಕ ತಲೆತಗ್ಗಿಸಿಕೊಂಡೇ ಕೂತಿದ್ದ ನನ್ನ ಆಲೋಚನೆಗಳು ಮಾತ್ರ ವೇಗವಾಗಿ ಹಿಂದೆ ಓಡಲು ಶುರು ಮಾಡಿತು. Yes flashback ಗೆ!!
ನನಗೆ ಚಿಕ್ಕಂದಿನಿಂದಲೂ ಹೀರೋ ಗಿಂತ ವಿಲನ್ ಗಳೇ ಜಾಸ್ತಿ ಇಷ್ಟ.ಅವರ ಕಡೆಗಿನ ನನ್ನ ಆಕರ್ಷಣೆ ಯಾವತ್ತೂ ಕಮ್ಮಿ ಆಗಿದ್ದೇ ಇಲ್ಲ.ವಿಲನ್ ಗಳು stylish ಆಗಿರ್ತಾರೆ. ವಿಲನ್ ಅಂದ್ರೆ ಒಂದು ಬೇರೆಯದ್ದೇ ಲುಕ್ ಇರುತ್ತೆ, ಖದರ್ ಇರುತ್ತೆ ಮತ್ತು... ಗತ್ತು ಗಮ್ಮತ್ತು ಇರುತ್ತೆ!
ವಿಲನ್ ಗಳು ಫಿಲಂ ಅಲ್ಲಿ ಹೀರೋ ಗೆ ಚೆನ್ನಾಗಿ ಹೊಡಿಯುವಾಗ ನಾನು ಒಬ್ಬನೇ ನಿಂತ್ಕೊಂಡು ಥಿಯೇಟರ್ ನಲ್ಲಿ ವಿಷಲ್ ಹೊಡೆತಿದ್ದೆ. ಹೀರೋ ನ ಪ್ಯಾನ್ಸ್ ಎಲ್ಲಾ ಸೇರಿ ಅಲ್ಲೇ ನನಗೆ ಸರಿಯಾಗಿ ಹೊಡೆಯುತ್ತಿದ್ದರು. ನಾನು ಅವತ್ತೇ ಡಿಸೈಡ್ ಮಾಡಿದ್ದೆ.
ಲೈಫ್ ಅಲ್ಲಿ ವಿಲನ್ ಆಗ್ತಿನೋ ಬಿಡ್ತಿನೋ ಗೊತ್ತಿಲ್ಲ, ಆದರೆ ಹೀರೋ ಮಾತ್ರ ಖಂಡಿತ ಆಗಲ್ಲ ಅಂತ!
ಪ್ರೈಮರಿ ಸ್ಕೂಲ್ ಅಲ್ಲಿ ಟೀಚರ್ ಒಂದು ದಿನ ಕೇಳಿದ್ರು "ಮಕ್ಕಳೇ ನೀವು ದೊಡ್ಡವರಾದ ಮೇಲೆ ಏನಾಗ್ಬೇಕು ಅಂತ ಅನ್ಕೊಂಡಿದ್ರಾ.." ಎಂದು.
ಎಲ್ಲಾ ಮಕ್ಕಳು ಇಂಜಿನಿಯರ್, ಡಾಕ್ಟರ್, ವಕೀಲರು, ಪೋಲಿಸ್, IAS ಅಧಿಕಾರಿ, ವಿಜ್ಞಾನಿ ಇನ್ನು ಏನೇನೋ ಹೇಳಿದರು.
ಆದರೆ ನನ್ನ ಪಕ್ಕ ಕೂತಿದ್ದ ರಮೇಶ ಮಾತ್ರ "ನಾನು ಫಿಲಂ ನಲ್ಲಿ ಫೇಮಸ್ ಹೀರೋ ಆಗ್ಬೇಕು.." ಅಂದ್ಬಿಟ್ಟ.
ಹೀರೋ ಗಳನ್ನು ನಖಶಿಖಾಂತ ದ್ವೇಷಿಸುವ ನನಗೆ ಯಾಕೋ ಅವತ್ತು ತಡೆದು ಕೊಳ್ಳಲಿಕ್ಕೇನೇ ಆಗಲಿಲ್ಲ. ಎದ್ದು ನಿಂತವನೇ " ನಾನು ರಿಯಲ್ ಲೈಫ್ ನಲ್ಲಿಯೇ ವಿಲನ್ ಆಗ್ತಿನಿ..ದೊಡ್ಡ ವಿಲನ್ ಆಗ್ತಿನಿ " ಎಂದವನೇ ಜೋರಾಗಿ ವಿಲನ್ ತರವೇ ಗಹಗಹಿಸಿ ನಕ್ಕೆ. ಇಡೀ ಕ್ಲಾಸ್ ಒಂದು ನಿಮಿಷ ಸ್ಥಬ್ಧ ವಾಗಿತ್ತು,ಟೀಚರ್ ಕೂಡ...!!
ಟೀಚರ್ ನನಗೆ ಬುದ್ಧಿ ಮಾತು ಹೇಳಿದರು. ನನ್ನನ್ನು ಹೆಡ್ ಮಾಸ್ಟರ್ ಬಳಿಗೆ ಕರೆದುಕೊಂಡು ಹೋಗಿ ಅವರಿಂದಲೂ ಪ್ರವಚನ ಮಾಡಿಸಿದರು.
ವಿಷಯ ಮನೆಗೆ ಕೂಡ ಮುಟ್ಟಿತ್ತು. ಅಮ್ಮ ನನಗೆ ನಾಯಿಗೆ ಹೊಡೆದ ಹಾಗೆ ಹೊಡಿದರು. ರಾತ್ರಿ ಮನೆಗೆ ಬಂದ ಅಪ್ಪ ಕೂಡ ಹೊಡೆದ.ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ ಅಣ್ಣಾ ನನ್ನನ್ನು ನೋಡಿ, ನನ್ನ ambition ಬಗ್ಗೆ ಕೇಳಿ ಗೇಲಿ ಮಾಡಿದ. ಅದರ ಮರುದಿನವೇ ನಾನು ಮನೆ, ಊರು ಎರಡನ್ನೂ ಬಿಟ್ಟದ್ದು! ಉಟ್ಟ ಬಟ್ಟೆಯಲ್ಲಿಯೇ
ಉಡುಪಿಯಿಂದ ಮಂಗಳೂರಿಗೆ ಬಂದಿದ್ದೆ!
ಹೊಟ್ಟೆ ಹಸಿವು ಜಾಸ್ತಿ ಆಗಿತ್ತು. ಇರ್ಲಿಕ್ಕೆ ಮನೆ, ಹಾಕೋಕೆ ಬಟ್ಟೆ ಎರಡು ಕೂಡ ಇರ್ಲಿಲ್ಲ. ಎರಡನ್ನೂ ಕೊಡಿಸಿದವರು ನಮ್ಮ ಧಣಿ,ನನ್ನ ಪಾಲಿನ ದೇವರು ಭಾಷಾ ಭಾಯ್!
ನಮ್ ಜೊತೆ ಇರ್ತಿಯಾ.. "ಅಂತ ಕೇಳಿದರು.
" ನೀವು ಕೊಡೋ ಒಂದು ತುಂಡು ರೊಟ್ಟಿ ಗೆ ಈ ಜೀವ, ಜೀವನ ಎರಡೂ ನಿಮ್ದೇ ಭಾಯ್..ನಿಯತ್ತಲ್ಲಿ ನಾನು ಒಂಥರಾ ನಾಯಿ ಇದ್ದ ಹಾಗೆ , ನಾಯಿ ಯಾವತ್ತಾದರೂ ವಿಶ್ವಾಸ ದ್ರೋಹ ಮಾಡಿದ್ದು ಗೊತ್ತಾ ಭಾಯ್.. " ಅಂದೆ
"ಶಹಬ್ಬಾಸ್.. ಚೆನ್ನಾಗಿ ಮಾತಾಡ್ತೀಯಾ. ಫಿಲಂ ಎಲ್ಲಾ ಜಾಸ್ತಿ ನೋಡ್ತಿ ಅಂತ ಕಾಣುತ್ತೆ.." ಅಂದರು.
"ಫಿಲಂ ನೋಡ್ತಿನಿ, ಆದರೆ ನನಗೆ ಹೀರೋ ಗಿಂತ ವಿಲನ್ ಅಂದ್ರೆನೇ ಜಾಸ್ತಿ ಇಷ್ಟ.. " ಅಂದೆ.
ನನ್ನನ್ನು ಒಮ್ಮೆ ಮೇಲಿನಿಂದ ಕೆಳಗೆ ನೋಡಿದ ಭಾಷಾ ಬಾಯ್ " ನೀನು ತುಂಬಾನೇ ಬೆಳೆತೀಯಾ.. ಎಷ್ಟು ಬೆಳೆತೀಯಾ ಅನ್ನುವ ಅಂದಾಜು ನಿನಗೂ ಇಲ್ಲ..ನನಗೂ ಇಲ್ಲ..!!
ನಿನ್ನ ಹೆಸರೇನು.. " ಕೇಳಿದರು.
" ಪಚ್ಚು... " ಅಂದೆ.
" ಪಚ್ಚು, ಕಚ್ಚು ಎಲ್ಲಾ ನಿಂಗೆ ಸೂಟ್ ಆಗಲ್ಲ. ಇನ್ಮುಂದೆ ನಿನ್ನ ಹೆಸರು 'ದಾದ.. ಪಚ್ಚು ದಾದ' ... " ಅಂದ್ಬುಟ್ರು.
ಈ ರೀತಿಯಾಗಿ ನಾನು ಭಾಷಾ ಭಾಯ್ ಜೊತೆಗೆ ಗುರುತಿಸಿಕೊಂಡಿದ್ದು, ಅವರ ಕೈ ಕೆಳಗೆ ಕೆಲಸ ಮಾಡಲು ಆರಂಭಿಸಿದ್ದು. ಆವಾಗ ನನಗೆ ವಯಸ್ಸು ಜಸ್ಟ್ ಹದಿಮೂರು.
ಹುಡುಗರು ಗೋಲಿ, ಮರಕೋತಿ, ಚಿನ್ನಿ ದಾಂಡು ಆಡೋ ವಯಸ್ಸಿನಲ್ಲಿ ನಾನು ಗುಂಡು, ಗನ್ನು, ಲಾಂಗ್ ಗಳ ಕನಸು ಕಣ್ತಾ ಇದ್ದೆ!
ನಾನು ಭಾಷಾ ಭಾಯ್ ಕೈ ಕೆಳಗಡೆ ಏನೋ ದುಡಿತಾ ಇದ್ದೆ. ಆದರೆ ನಾನು ಸ್ವತಂತ್ರವಾಗಿ ಫೀಲ್ಡ್ ಗೆ ಇಳಿಯಲು ಬಯಸಿದ್ದೆ , ಅದಕ್ಕಾಗಿ
ನನ್ನ ಕೈಚಳಕ ತೋರಿಸಲು ಒಂದೊಳ್ಳೆಯ ಅವಕಾಶಕ್ಕಾಗಿ ಭಕಪಕ್ಷಿ ಯಂತೆ ಕಾಯುತ್ತಿದ್ದೆ. Urgent ಆಗಿ ಒಂದೆರಡು ಮಂಡೆ ಹೊಡೆದು, ರೌಡಿಸಂ ಲೋಕಕ್ಕೆ official ಆಗಿ ಹೆಜ್ಜೆ ಇಡಲು ಕಾತರಿಸುತ್ತಿದ್ದ ದಿನಗಳು ಅವು. ಹೌದು, ಆವಾಗ ಮುಂದೆ ನನ್ನ ರೌಡಿಸಂ ದಿನಗಳು ಆ ರೀತಿ ಇರುತ್ತೆ ಈ ರೀತಿ ಎಂದು ನಾನು ನನ್ನಷ್ಟಕ್ಕೆ ಕನಸು ಕಾಣುತ್ತಿದ್ದೆ..!
ಮುಂದೆ ನಡೆಯಲಿರುವ ಘನಘೋರ ದುರಂತಗಳ ಬಗ್ಗೆ ನನಗೆ ಅರಿವಿರಲಿಲ್ಲ.ಆದರೆ ಆ ಕಥೆಗಳ ಅಧ್ಯಾಯ ದಲ್ಲಿ ನನ್ನೊಂದು ಹೆಸರು ಮಾತ್ರ ಯಾವತ್ತೂ ಇರುತ್ತೆ. ಚರಿತ್ರೆ ನನ್ನನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಕಾರಣ ನಾನು ಮಾಡಿದ ಕೆಲಸ ಈ ಚರಿತ್ರೆ ಮರೆಯುವಂತದ್ದಲ್ಲ...!!!
. . . . . . . . . . . . .
ಸರಿಯಾಗಿ ನೆನಪಿದೆ. ನಾನು ಭಾಷಾ ಭಾಯ್ ಬಳಿ ಕೆಲಸಕ್ಕೆ ಸೇರಿದ ಒಂದು ವಾರದಲ್ಲೇ ಲೈಫ್ ನಲ್ಲಿ ಮೊದಲ ಬಾರಿಗೆ ಕೈಗೆ ಮಚ್ಚು ತೆಗೆದುಕೊಂಡಿದ್ದೆ...ಬಲ್ಲೆ(ಪೊದೆ) ಕೆತ್ತಲಿಕ್ಕೆ!
ಬಾಷಾ ಭಾಯ್ ಒಳ್ಳೆಯ ಜನ. ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಸಮಾಜ ಸೇವಕ. ಒಳ್ಳೆಯ ರೀತಿಯಲ್ಲಿ ಅದರಲ್ಲೂ ಕಾನೂನು ರೀತಿಯಲ್ಲಿ ಯೇ ತನ್ನ ಎಲ್ಲಾ ಬ್ಯುಸಿನೆಸ್ ಮಾಡ್ಕೊಂಡಿದ್ದರು. ನಾಲ್ಕು ಗೇರುಬೀಜ ಫ್ಯಾಕ್ಟರಿ ಯ ಒಡೆಯ . ಮಾತ್ರವಲ್ಲ ಅವರಿಗೆ ನಗರದ ಹೊರಬಾಗದಲ್ಲಿ ತುಂಬಾ ದೊಡ್ಡದಾದ ತೋಟ ಕೂಡ ಇತ್ತು.
ಭಾಷಾ ಭಾಯ್ ನನ್ನನ್ನು ಹಾಕಿದ್ದೆ ತೋಟದ ಕೆಲಸಕ್ಕೆ !!
ಅಡಿಕೆ, ತೆಂಗು ಗಿಡಗಳ ಬುಡ ಬಿಡಿಸುವುದು. ಸೊಪ್ಪು ಹಾಕುವುದು, ಗೊಬ್ಬರ ಹಾಕುವುದು, ಮದ್ದು ಹಾಕುವುದು, ಕಳೆ ಕೀಳುವುದು, ಮರದಿಂದ ತೆಂಗು ಕಂಗು ತೆಗೆಯುವುದು,ಹಸು ಮೇಯಿಸುವುದು, ಹಾಲು ಕರೆಯುವುದು, ಗದ್ದೆ ಕೆಲಸ ಕೆಲವೊಮ್ಮೆ ಮನೆ ಕೆಲಸ ಹೀಗೆ ಎಲ್ಲವೂ.
ಅಲ್ಲೇ ನನಗೆ ಮಂಜ ನ ಪರಿಚಯ ಆಗಿದ್ದು!
ಮಂಜ ನನಗಿಂತ ವಯಸ್ಸಿನಲ್ಲಿ ದೊಡ್ಡವ.ಅವನಿಗೆ ಸ ಪೆಟ್ಟ್ ಲಡಾಯಿ(action) ಫಿಲಂ ಗಳೆಂದರೆ ಬಾರೀ ಇಷ್ಟ. ಮನೆಯಲ್ಲಿ ಫಿಲಂ ನೋಡ್ಕೊಂಡು ಬಂದು ನನಗೆ ಸ್ಟೋರಿ ಹೇಳ್ತಾ ಇದ್ದ. ಅವ ಹೀರೋ ನ ವರ್ಣಿಸ್ತಾ ಇದ್ದರೆ ನಾನು ಆ ಫಿಲಂ ನ ವಿಲನ್ ಹೇಗಿದ್ದಾ ಅಂತ ಕೇಳುತ್ತಿದ್ದೆ.
ಒಂದು ದಿನ ನಾನು ಮಂಜನಿಗೆ ನನ್ನ ಆಸೆ ಹೇಳಿದೆ..
"ಮಂಜ ನಾನು ಕೂಡ ದೊಡ್ಡ ವಿಲನ್ ಆಗ್ಬೇಕು, ಡಾನ್ ಆಗ್ಬೇಕು, ರೌಡಿ ಆಗ್ಬೇಕು, ಗ್ಯಾಂಗ್ ಸ್ಟಾರ್ ಆಗ್ಬೇಕು etc etc ಆಗ್ಬೇಕು " ಅಂದೆ.
ಅವನು ಜೋರಾಗಿ ನಕ್ಕ "ವಿಲನ್, ಗ್ಯಾಂಗ್ ಸ್ಟಾರ್ ಆಗುವುದು ಅಂದರೆ ಕಡ್ಲೆ ಪುರಿ ತಿಂದಷ್ಟು easy ಇದೆ ಅಂತ ತಿಳ್ಕೊಂಡಿದ್ದೀಯಾ.." ಅಂದ.
"ಮತ್ತೆ... "
" ವಿಲನ್ ಆಗ್ಬೇಕಾದರೆ, ಗ್ಯಾಂಗ್ ಸ್ಟಾರ್ ಆಗಬೇಕಾದರೆ... ಮೊದಲು ಒಂದು ನಿನ್ನದೇ ಗ್ಯಾಂಗ್ ಬೇಕು.. ಸುತ್ತಾ ಮುತ್ತಾ ಹುಡುಗರು ಬೇಕು.. ಹವಾ ಇಟ್ಟಿರಬೇಕು.. ಹೆಸರು ಮಾಡಿರ್ಬೇಕು.. ಆ ಹೆಸರಿಗೆ ಭಯ ಹುಟ್ಟಿಸೋ ತಾಕತ್ ಇರ್ಬೆಕು.. ಹೆಸರು ಕೇಳಿದ್ರೆ ಊರಿಗೇ ಊರೇ ಗಡ ಗಡ ಎಂದು ನಡುಗ್ಬೇಕು..." ಅಂದ.
"ಹೂಂ... " ಅಂದೆ.
" ಅಷ್ಟು ಮಾತ್ರವಲ್ಲ..'ಪಚ್ಚು' ಅಂತ ಹೆಸರಿಟ್ಟುಕೊಂಡರೆ ಏನೂ ಪ್ರಯೋಜನವಿಲ್ಲ. ಮೊದಲು ಸರಿಯಾಗಿ 'ಮಚ್ಚು' ಹಿಡೀಲಿಕ್ಕೆ ಗೊತ್ತಿರ್ಬೇಕು... " ಅಂದ.
" ಮಂಜ ನಿಂಗೆ ಮಚ್ಚು ಹಿಡಿಲೀಕ್ಕೆ ಬರುತ್ತಾ ... "ಕೇಳಿದೆ.
" ಅದು... ಅದು.. ನಂಗೆ ಮಚ್ಚು ಹಿಡೀಲಿಕ್ಕೆ ಬರಲ್ಲಾ.. ಆದರೆ ಜೋಗಿ ಫಿಲಂ ಅಲ್ಲಿ ನಮ್ಮ ಶಿವಣ್ಣ ಲಾಂಗ್ ಹಿಡ್ದಿದ್ದನ್ನು ನಾನು ಯಾವತ್ತೂ ಮರೆಯಲ್ಲ.ನಾನು ಶಿವಣ್ಣ ಪ್ಯಾನ್.." ಅಂದ.
" ಮಂಜ ನಂಗೆ ಮಚ್ಚು ಹಿಡಿಯುವುದನ್ನು ಕಲಿಸ್ತೀಯಾ.. "ಅಂದೆ.
" ಇದನ್ನು ಯಾಕೇ ಈ ರೀತಿ ಬಿರಿಯಾನಿ ರೇಂಜ್ ಗೆ ಕೇಳ್ತೀಯಾ.. ಮಚ್ಚು ಹಿಡಿಯುವುದು ಅಷ್ಟೇ ತಾನೇ..ನಿನಗೆ ನಾನು ಕಲಿಸಿಕೊಡ್ತೀನಿ.. " ಅಂದ.
ಅವತ್ತು ನಮಗೆ ತೋಟದಲ್ಲಿ ಬಲ್ಲೆ (ಪೊದೆ) ಕೆತ್ತಲಿಕ್ಕೆ ಕೆಲಸ ಇತ್ತು. ಮಂಜ ಒಂದು ಉದ್ದವಾದ ಮಚ್ಚು ತಂದಿದ್ದ, ಮತ್ತು ಹೇಳಿದ..
" ನೋಡು ಪಚ್ಚು ಇದನ್ನು ಹೀಗೆ.... " ಎಂದು ಅವ ಹೇಳುವಷ್ಟರಲ್ಲೇ ನಾನು ಅವನನ್ನು ತಡೆದು.
" ಖಾಲಿ ಪಚ್ಚು ಹೇಳ್ಬೇಡ.. ಪಚ್ಚು ದಾದ ಎಂದು ಹೇಳು.. " ಅಂದೆ.
ಒಂದು ಕ್ಷಣ ನನ್ನನ್ನು ಮೇಲೆ ಕೆಳಗೆ ನೋಡಿದ, ಆಮೇಲೆ ಮಾತು ಮುಂದುವರಿಸಿದ..
" ನೋಡು ಪಚ್ಚು ದಾದ,ಹೀಗೆ ಇದನ್ನು ಈ ರೀತಿ ಹಿಡಿದು ಬೀಸಿದರೆ ಬಲ್ಲೆ, ಪೊದೆ, ಗಿಡ ಗಂಟಿಗಳನ್ನು ಕತ್ತರಿಸಬಹುದು. ಅದೇ ಇದನ್ನು ಇನ್ನೊಂದು angle ನಲ್ಲಿ ಅಂದರೆ ಈ ರೀತಿ ಹಿಡಿದು ಬೀಸಿದರೆ ಎದುರಾಳಿ ಯ ರುಂಡ ಮುಂಡಗಳನ್ನು ಚೆಂಡಾಡಬಹುದು.. " ಎಂದು ನನಗೆ ಯಾವ ರೀತಿ ಮಚ್ಚು ಬೀಸಬೇಕೆಂದು ಮಂಜ ಹೇಳಿಕೊಟ್ಟ.
ಈ ರೀತಿಯಾಗಿ ನಾನು ತೋಟಕ್ಕೆ ಸೊಪ್ಪು ತರಲೆಂದು ಗುಡ್ಡಕ್ಕೆ ಹೋದಾಗ, ಇಲ್ಲವೇ ತೋಟದಲ್ಲಿರುವ ಬಲ್ಲೆ ಪೊದೆಗಳನ್ನು ಕಡಿಯುವಾಗ ಮಚ್ಚನ್ನು different angle ನಿಂದ ಬೀಸಿ ಬೀಸಿ ಮಚ್ಚು ಬೀಸುವುದನ್ನು ಸರಿಯಾಗಿ ಅಭ್ಯಾಸ ಮಾಡಿಕೊಂಡೆ.
ಇದಾಗಿ ಹೆಚ್ಚು ಕಡಿಮೆ ಹತ್ತು ವರ್ಷ ಗಳು ಕಳೆದವು. ನನಗೆ 23 ತುಂಬಿತ್ತು! ಚಿಗುರು ಮೀಸೆಯ ಯುವಕ.
ಆದರೆ ಆಗಲೂ ಕೂಡ ಬಾಷಾ ಭಾಯ್ ಯ ತೋಟದಲ್ಲಿ ಜಸ್ಟ್ ಬಲ್ಲೆ ಕೆತ್ತುವ ಕೆಲಸವನ್ನೇ ನಾನು ಮಾಡ್ತಿದ್ದೆ.
ಫೀಲ್ಡ್ ಗೆ ಇಳಿಯಲು ಇನ್ನೂ ಒಳ್ಳೆಯ ಮುಹೂರ್ತ ಕೂಡಿ ಬರಲಿಲ್ಲ!
ನಾನು ಮಂಜ ಮಾತ್ರ ಅಲ್ಲ ಇನ್ನೂ ಹಲವಾರು ಮಂದಿ ನಮ್ಮೊಂದಿಗೆ ತೋಟ ದ ಕೆಲಸಕ್ಕೆ ಬರ್ತಾ ಇದ್ದರು. ಮಂಜ ಹೇಳಿದ್ದು ಯಾವಾಗಲೂ ತಲೆಯಲ್ಲಿ ಕೊರೆಯುತ್ತಿತ್ತು." ಗ್ಯಾಂಗ್ ಸ್ಟಾರ್ ಆಗ್ಬೇಕಾದರೆ ಮೊದಲು ಒಂದು ಸ್ವಂತ ಗ್ಯಾಂಗ್ ಕಟ್ಕೋಬೇಕು" ಅನ್ನುವುದು. ನನಗೀಗ ಅವರಲ್ಲಿ ನನ್ನ ಕೆಲಸಕ್ಕೆ ಸೂಟ್ ಆಗುವ ಖಡಕ್ ಹಾಗೂ ಯಾವುದೇ ಕೆಲಸ ಮಾಡಲು ಹಿಂಜರಿಯದ ನಾಲ್ಕೈದು ಮಂದಿ ಒರಟು ಹುಡುಗರು ಬೇಕಿದ್ದರು.
ಯಾಕೆಂದರೆ ನನಗೆ ಅದಾಗಲೇ ಅರ್ಜೆಂಟಾಗಿ ಆಗಿ ಗ್ಯಾಂಗ್ ಒಂದು ಕಟ್ಟಿ ಫೀಲ್ಡ್ ಗೆ ಇಳಿಯುವ ಹಪಾಹಪಿ ಹೆಚ್ಚಾಗಿತ್ತು. . ಅಷ್ಟು ಜನರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಬಾಬು, ರಾಜ, ನಾಗ, ಚೇತನ್ ಮತ್ತು ಸುರೇಶ. ಲೋಕಲ್ ಏರಿಯಾದಲ್ಲಿ ನಡೆಯುವ ಸಣ್ಣ ಪುಟ್ಟ ಪೆಟ್ಟ್ ಲಡಾಯಿ ಗಳಲ್ಲಿ ಅವರೆಲ್ಲರೂ ಸಕ್ರೀಯವಾಗಿ ಭಾಗವಹಿಸಿದವರೇ. ಒಂದೆರಡು ಸಲ ಅವರು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದವರು ಕೂಡ ಹೌದು.
ಮಂಜ ಮೋದಲೇ ಹೇಳಿದ್ದ ನಿನ್ನ ಯಾವುದೇ ಸಾಹಸದಲ್ಲಿ ನಾನಿಲ್ಲ, ನನ್ನನ್ನು ಎಳೆದು ತರಬೇಡ ಎಂದು.
ಒಂದು ದಿನ ಬಾಬು, ರಾಜ,ನಾಗ, ಚೇತನ್, ಸುರೇಶ ಎಲ್ಲರನ್ನೂ ಒಟ್ಟಿಗೆ ಕೂತುಕೊಳಿಸಿ ತೋಟದ ನಡುವೆ ಇರುವ ಕೆರೆ ಯ ಕಟ್ಟೆಯ ಬಳಿ ಒಂದು ಮೀಟಿಂಗ್ ಮಾಡಿದೆ. ಅವರುಗಳಿಗೆ ನನ್ನ ಕನಸುಗಳನ್ನು ವಿವರಿಸಿದೆ. ನಾನು ರೌಡಿ ಆಗ್ತೆನೆ ಎಂದು ಹೇಳಿದೆ.
ಅವರಿಗೇನು ಭಯ ಆಗಲಿಲ್ಲ ಎಲ್ಲರೂ ಒಕ್ಕೊರಲಿನಿಂದ ಒಂದೇ ಧ್ವನಿ ಯಲ್ಲಿ ಕೇಳಿದ್ದರು " ಇದರಿಂದ ನಮಗೆ ಏನು ಲಾಭ?"
"ನನಗೆ ರೌಡಿ ಆಗಿ ಒಳ್ಳೆಯ ಹೆಸರು ಬರುತ್ತೆ. ನಿಮ್ಗೆ ದುಡ್ಡು ಬರುತ್ತೆ.." ಅಂದೆ.
"ಈ ತೋಟದ ಕೆಲಸ ಮಾಡಿ ನಾವೇನು ಅರಮನೆ ಕಟ್ಟೋಕೆ ಆಗುತ್ತಾ. ನಮ್ಮನ್ನು ಉದ್ಧಾರ ಮಾಡ್ತಿ ಅಂದರೆ ನಾವ್ಯಾಕೆ ಬೇಡ ಎಂದು ಹೇಳ್ತೀವಿ"..ಎಲ್ಲರೂ ಓಕೆ ಎಂದು ಹೇಳಿದರು.
ಚೇತನ್ ಕೇಳಿದ "ಅದಕ್ಕೆ ನಾವೇನು ಮಾಡ್ಬೇಕು ಈಗ..."
"ಫೀಲ್ಡ್ ಗೆ ಇಳಿಬೇಕು... " ಅಂದೆ.
" ಎಲ್ಲಿ.. ಯಾವಾಗ..ಏನು ಮಾಡ್ಬೇಕು..? " ಎಂದು ಕೇಳಿದ ಬಾಬು.
" ಹಾಗೇ ಫೀಲ್ಡ್ ಗೆ ಇಳಿದ್ರೆ ಮಜಾ ಇರಲ್ಲ.ಎಲ್ಲಾ ಕಡೆ ನಮ್ದು ಹವಾ ಇರ್ಬೇಕು ಖದರ್ ಇರ್ಬೇಕು .. " ಅಂದೆ.
" ಅದಕ್ಕೀಗ ಏನು ಮಾಡ್ಬೇಕು ಅಂತ ಇದ್ದೀಯಾ... " ಸುರೇಶ ಕೇಳಿದ.
" ನಿಮ್ಮ ಹೆಸರು ಚೇಂಜ್ ಮಾಡ್ತೀನಿ... " ಅಂದೆ.
ನನಗೆ ಮಂಜ ಹೇಳಿದ್ದು ನೆನಪಾಗಿತ್ತು " ಫೀಲ್ಡ್ ಗೆ ಇಳಿಬೇಕಾದರೆ ಹೆಸರು ಮಾಡಿರ್ಬೇಕು.. ಆ ಹೆಸರಿಗೆ ಭಯ ಹುಟ್ಟಿಸೋ ತಾಕತ್ ಇರ್ಬೆಕು.. ಆ ಹೆಸರು ಕೇಳಿದ್ರೆ ಊರಿಗೇ ಊರೇ ಗಡ ಗಡ ಎಂದು ನಡುಗ್ಬೇಕು..."
ಹೌದು ಅದಕ್ಕಾಗಿ ನಾನು ಅವರ ಹೆಸರು ಚೇಂಜ್ ಮಾಡಲು ನಿರ್ಧರಿಸಿದೆ.
" ಹೇಗೆ?.. " ನಾಗ ಕೇಳಿದ.
" ಇನ್ನು ಮುಂದೆ ನೀವು ಕೇವಲ ಬಾಬು, ರಾಜ, ನಾಗ,ಚೇತನ್, ಸುರೇಶ್ ಅಲ್ಲಾ...
ಬಾಬು, ಅಲಿಯಾಸ್ ಬ್ಲೇಡ್ ಬಾಬು...
ರಾಜ, ಅಲಿಯಾಸ್ ಆಸಿಡ್ ರಾಜ..
ನಾಗ,ಅಲಿಯಾಸ್ ಬುಸ್ ನಾಗ,
ಚೇತನ್, ಅಲಿಯಾಸ್ ಚೈನ್ ಚೇತನ್,
ಸುರೇಶ,ಅಲಿಯಾಸ್ ಸಬ್ಬಲ್ ಸುರೇಶ್ .. " ಅಂದೆ.
"ನಂಗೆ ಬ್ಲೇಡ್ ಬಾಬು ಇಷ್ಟ ಆಗ್ತಿಲ್ಲ.. ಬಿಸತ್ತಿ ಬಾಬು ಕೊಡು... " ಬಾಬು ಕೇಳಿದ.
" ಬಿಸತ್ತಿ ಬಾಬು ಆದ್ರೆ ನೀನು ಕೇವಲ ಮಂಗಳೂರಿಗೆ ಫೇಮಸ್ ಆಗ್ತಿಯಾ.. ಅದೇ ಬ್ಲೇಡ್ ಬಾಬು ಅಂತ ಇಟ್ಕೊಂಡ್ರೆ ಮುಂದೊಂದು ದಿನ ಇಂಟರ್ನ್ಯಾಷನಲ್ ರೌಡಿ ಆದಾಗ ನಿನಗೂ ಒಂದು ಖದರ್ ಬರುತ್ತೆ.. ಮಾತ್ರವಲ್ಲ ಆಗ ಬ್ಲೇಡ್ ಬಾಬು ಎಂಬ ಹೆಸರು ಕೂಡ ಒಳ್ಳೆ ಸೌಂಡು ಮಾಡುತ್ತೆ ಅಂದೆ "
ಬೇರೆಯವರಿಗೆ ಯಾರಿಗೂ ತಮ್ಮ ಅಡ್ಡ ಹೆಸರುಗಳ ಬಗ್ಗೆ ತಕರಾರು ಇರಲಿಲ್ಲ.ಆದರೆ ಸುರೇಶ್ ಸುಮ್ಮನಿರಲಿಲ್ಲ.
" ಹಾಗಾದರೆ ನನಗ್ಯಾಕೆ ಸಬ್ಬಲ್ ಸುರೇಶ್...ನನಗೆ ಇನ್ನೂ ಚೆನ್ನಾಗಿರುವ ಒಂದು ಕರಾಬ್ ಹೆಸರು ಕೊಡು.. " ಅಂದ.
ಇವನ ಹೆಸರಿಗೆ ಯಾವುದು ಅಷ್ಟೊಂದು ಕರಾಬ್ ಹೆಸರು ಸೂಟ್ ಆಗ್ಬಹುದು ಎಂದು ಯೋಚಿಸಿದೆ.
" ಹಾಗಾದರೆ ನಿನಗೆ ಸೈನೈಡ್ ಸುರೇಶ ಇರಲಿ.. " ಎಂದೆ.
" ಸೈನೈಡ್.. " ಬೇಡ ಅಂದ.
" ಮತ್ತೇ ಏನು ಬೇಕು " ಕೇಳಿದೆ.
" ಅದು... ಅದು.... ನಂಗೆ ಸೈಲೆನ್ಸರ್ ಸುರೇಶ್ ಕೊಡು... "ಅಂದ.
ಇವರೇನು ಜೆರ್ಸಿ ನಂಬರ್ ಸೆಲೆಕ್ಟ್ ಮಾಡಿದ ಹಾಗೆ ಕರಾಬ್ ಹೆಸರುಗಳನ್ನು ಖುಷಿ ಖುಷಿ ಯಿಂದಲೇ ಸೆಲೆಕ್ಟ್ ಮಾಡ್ತ ಇದ್ದಾರಲ್ಲ ಮಾರಿಗಳು ಅಂತ ಒಮ್ಮೆ ಅನಿಸಿತು.
ಇರಲಿ ಇರಲಿ ನನ್ನ ಗ್ಯಾಂಗ್ ನಲ್ಲಿ ಎಲ್ಲರಿಗೂ ಪ್ರೀಡಂ ಇದೆ. ಆದರೆ ಗ್ಯಾಂಗ್ ಲೀಡರ್ ಮಾತ್ರ ಯಾವತ್ತೂ ನಾನೇ.. ಮನಸ್ಸಿನಲ್ಲೇ ಅಂದುಕೊಂಡೆ.
ನಾನೇನೋ ಫಿಲಂ ನೋಡಿ,ಅದರಲ್ಲಿಯ ರೌಡಿಗಳ ಸ್ಟೈಲ್ ನೋಡಿ, ಡೈಲಾಗ್ಸ್ ಕೇಳಿ, ಹೀರೋ ಗಳನ್ನ ಹೇಟ್ ಮಾಡಿ ರೌಡಿ ಆಗಬೇಕೆಂದು ಹೊರಟವನು. ಅದರಲ್ಲೂ ಚಿಕ್ಕಂದಿನಿಂದಲ್ಲಿ ಸಿನೇಮಾ ಥಿಯೇಟರ್ ನಲ್ಲಿ ನಡೆದಿದ್ದ ಘಟನೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತ್ತು.ಅದಕ್ಕಾಗಿ ಕೂಡ ನಾನು ವಿಲನ್ ಆಗಲು ಬಯಸುತ್ತಿದ್ದೆ. ನೋಡ್ಲಿಕ್ಕೇನೋ ಖಡಕ್ ಆಗಿ ಬಿರುಸಾಗಿ ರೌಡಿ ತರಹನೇ ಇದ್ದೆ.ನಾನು ಹೇಗಿದ್ದೆ ಅನ್ನೊದನ್ನು ಒಂದೇ ಮಾತಿನಲ್ಲಿ ಹೇಳ್ಬೇಕಾದರೆ, ನೋಡಿದವರು ಯಾರೇ ಇರ್ಲಿ ಇವನು ರೌಡಿ ತರಹ ಅಲ್ಲ.. ರೌಡಿ ನೇ ಅಂತ ಹೇಳ್ಬೇಕು.. ಆ ತರಹ ಇದ್ದೆ. ಆ ಬಾಡಿ ಲ್ಯಾಂಗ್ವೇಜ್, ಆ ಲುಕ್, ನಡೆಯವ ಬಗೆ, ನನ್ನ ಒರಾಟದ ಮಾತು, ಗಡಸು ಧ್ವನಿ, ನಾನು ಹೊಡೆಯುವ ಪಂಚಿಂಗ್ ಡೈಲಾಗ್ಸ್ .. ಎಲ್ಲವೂ ನನ್ನನ್ನು ರೌಡಿಯನ್ನಾಗಿಯೇ ಮಾಡಿತ್ತು.
ಆದರೆ Deep inside , ನನಗೆ ಒಬ್ಬ ರೌಡಿಗೇ ಇರಬೇಕಾದ ಯಾವುದೇ ಧೈರ್ಯ ವೇ ಇರಲಿಲ್ಲ!!
ಚಿಕ್ಕಂದಿನಲ್ಲಿ ಮಾರ್ಕೆಟ್ ಗೆ ಹೋದಾಗ ಚಿಕನ್, ಮಟನ್ ಸ್ಟಾಲ್ ಗಳ ಮುಂದೆ ಹೋಗುತ್ತಿರಲಿಲ್ಲ..ಅದರ ಮುಂದೆ ಪಾಸ್ ಆಗುವಾಗ ಕಣ್ಣ ಮುಂದೆ ಕೈ ಅಡ್ಡ ಹಿಡಿಯುತ್ತಿದ್ದೆ. ನನಗೆ ಅಲ್ಲಿ ಹರಿಸುವ ರಕ್ತ ನೋಡಿದರೆ ತಲೆ ಸುತ್ತು ಬರುತ್ತಿತ್ತು.ಕೆಲವೊಮ್ಮೆ ತಲೆತಿರುಗಿ ಬಿದ್ದದ್ದು ಕೂಡ ಇದೆ. ಹೌದು ನನಗೆ ರಕ್ತ ಅಂದರೆ ಆಗ್ತಾ ಇರ್ಲಿಲ್ಲ. ಮಾಂಸ ಕೊಚ್ಚುವುದು, ಕಡಿಯುವುದು ಕಂಡ್ರೆ ಆಗ್ತಾ ಇರ್ಲಿಲ್ಲ. ಆದರೂ ನನಗೆ ರೌಡಿ ಆಗಬೇಕು ಅಂತ ಮನಸ್ಸಲ್ಲಿ ಇತ್ತು.
ಅಷ್ಟು ಏಕೇ ನನಗೆ ಕೆಂಪು ಬಟ್ಟೆ ಕಂಡರೆ ಕೂಡ ಆಗುತ್ತಿರಲಿಲ್ಲ. ತರಕಾರಿ ಗಳಲ್ಲಿ ಬಿಟ್ರೂಟ್ ಪಲ್ಯ ಆಗ್ತ ಇರ್ಲಿಲ್ಲ. ಪ್ರೂಟ್ಸ್ ಅಲ್ಲಿ ದಾಳಿಂಬೆ ಆಗ್ತಾ ಇರ್ಲಿಲ್ಲ.ಹೂವು ಗಳಲ್ಲಿ ಕೆಂಪು ದಾಸವಾಳ, ಕೆಂಪು ಗುಲಾಬಿ.. ಟೊಮೆಟೊ ಸಾಸ್, ರೆಡ್ ಚಿಲ್ಲಿ ಸಾಸ್ ಹಾಕಿದ ಚೈನೀಸ್ ಫಾಸ್ಟ್ ಫುಡ್ ಇಷ್ಟ ಆಗ್ತಾ ಇರ್ಲಿಲ್ಲ. ಏಕೆಂದರೆ ನನಗೆ ಕೆಂಪು ಆಗ್ತಾ ಇರ್ಲಿಲ್ಲ. ಕೆಂಪು ಏಕೇ ಆಗ್ತಾ ಇರ್ಲಿಲ್ಲ ಅಂದರೆ ನನಗೆ ಬ್ಲಡ್ ಕಂಡರೆ ಆಗ್ತಾ ಇರ್ಲಿಲ್ಲ. ಆದರೂ ನಾನು ರೌಡಿ ಆಗ್ಬೇಕು ಅಂತ ಇದ್ದೆ!
ಕೆಲವರು ಹೇಳ್ತಾರಲ್ಲ ಲೈಫ್ ಅಲ್ಲಿ ಎಲ್ಲವನ್ನೂ ಒಮ್ಮೆ experience ಮಾಡ್ಬೇಕು like ಕುಡಿಯುವುದು, ಸಿಗರೇಟು ಸೇದುವುದು, ಇನ್ನಿತರ ಸಾಹಸ ಮಾಡುವುದು.. etc etc.. ಹಾಗೇ ನಾನು ಎಲ್ಲರಿಗಿಂತ ಡಿಫರೆಂಟ್ ಆಗಿ ಇರ್ಬೇಕು ಅಂತ ರೌಡಿ ಆಗ್ಲಿಕ್ಕೆ ಹೊರಟಿದ್ದು.
ನನಗೆ ಈ ಪೆಟ್ಟ್ ಲಡಾಯಿ ಆಗಿ ಬರುವುದಿಲ್ಲ ಅಂತ ಮೊದಲೇ ಗೊತ್ತಿತ್ತು. ಆದರೆ ಫಿಲಂ ಅಲ್ಲಿ ದೊಡ್ಡ ದೊಡ್ಡ ರೌಡಿಗಳು ಕೂಡ ಅಷ್ಟಾಗಿ ಡೈರೆಕ್ಟ್ ಆಗಿ ಪೈಟ್ ಮಾಡದೇ ತಮ್ಮ ಕೈಕೆಳಗಿನ ಗೂಂಡಾ ಗಳ ಕೈಯಲ್ಲಿ ಎಲ್ಲವನ್ನೂ ಮಾಡಿ ಮುಗಿಸಿ ತಮ್ಮ ಕೈಗೆ ರಕ್ತ ದ ಕಲೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ನಾನು ಕೂಡ ಆ ಲಾಜಿಕ್ ಅನ್ನೇ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ನಾನು ಕೂಡ ಹಾಗೇ ಮಾಡಿ ಈ ರೌಡಿಸಂ ಕ್ಷೇತ್ರದಲ್ಲಿ ಆರಾಮವಾಗಿ ಹವಾ maintain ಮಾಡ್ಬೇಕು ಅಂತ ಇದ್ದೆ. ಆದರೆ ವಿಧಿ ಲಿಖಿತ ಬೇರೆಯೇ ಇತ್ತು!
ಬ್ಲೆಡ್ ಬಾಬು, ಆಸಿಡ್ ರಾಜ,ಬುಸ್ ನಾಗ, ಚೈನ್ ಚೇತನ್, ಸೈಲೆನ್ಸರ್ ಸುರೇಶ ಎಲ್ಲರೂ ಪದೇ ಪದೇ ಕೇಳ್ತಾ ಇದ್ದರು, ಚೊರೆ ಮಾಡುತ್ತಿದ್ದರು 'ಪಚ್ಚು ದಾದ.. ನಮ್ಮ ಮೊದಲ ಡೀಲ್ ಯಾವಾಗ..ನಮ್ಮ ಮೊದಲ ಡೀಲ್ ಯಾವಾಗ ' ಎಂದು.
ಹುಡುಗರು ಹಸಿದ ಹೆಬ್ಬುಲಿ ಆಗಿದ್ದರು. ನಾನು ಮಾತ್ರ ರಾಜಹುಲಿ ಆಗಿದ್ದೆ.
ನಿಜ ಹೇಳಬೇಕೆಂದರೆ ನನಗೆ ಈ ಫೀಲ್ಡ್ ಗೆ ಇಳಿಯುವುದು ಹೇಗೆ ಅಂತ ಗೊತ್ತಿರಲಿಲ್ಲ. ನಾವಾಗಿ ಹೋಗಿ ಡೀಲ್ ಕೇಳ್ಬೇಕಾ, ಅಥವಾ ಡೀಲ್ ಬೇಕಾದವರೇ ನಮ್ಮ ಬಳಿ ಬರ್ಬೇಕಾ.. Confusion ಇತ್ತು.
ಅಂತು ಇಂತೂ ಕೊನೆಗೂ one fine day ಒಂದು ಡೀಲ್ ನನ್ನ ಎದುರಿಗೆ ಬಂದು ನಿಂತಿತ್ತು!!
. . . . . . . . . . . . . .
ಆ ದಿನ ಆದಿತ್ಯವಾರ. ಬ್ಲೇಡು ಬಾಬು, ಆಸಿಡ್ ರಾಜ, ಬುಸ್ ನಾಗ, ಚೈನ್ ಚೇತನ್, ಸೈಲೆನ್ಸರ್ ಸುರೇಶ ಎಲ್ಲರೂ ಹೊರಗಡೆ ಮೂವಿ ನೋಡ್ಲಿಕ್ಕೆ ಹೋಗಿದ್ದರು. ನಾನು ತೋಟದ ಪಕ್ಕವೇ ಇದ್ದ ನಮ್ಮ ರೂಮಿನಲ್ಲಿ ಒಬ್ಬನೇ ಕುತ್ಕೊಂಡಿದ್ದೆ. ಆಗ ಅಲ್ಲಿಗೆ " ದಾದ... ದಾದ..." ಅಂತ ಅಳುತ್ತಾ ಒಡೋಡಿ ಬಂದಿದ್ದ ಕಿಶೋರ್!!
ಅವನು ಆ ದಿನ ಅಲ್ಲಿಗೆ ಯಾಕಾಗಿ ಬಂದನೋ, ಬರದೇ ಇದ್ದಿದ್ದರೆನೇ ಚೆನ್ನಾಗಿರ್ತಿತ್ತು ಅಂತ ತುಂಬಾ ಸಲ ಆಮೇಲೆ ಅನ್ಕೊಂಡೆ! ಅವ ಆ ದಿನ ಬಂದುದರಿಂದಾಗಿಯೇ ನಾನು ಮುಂದೊಂದು ದಿನ ಜೀವನ ಪೂರ್ತಿ ಕೊರಗಬೇಕಾದಿತು ಎಂದಾಗಲಿ.. ನನ್ನ ಜೀವನವೇ ಆ ದಿನದಿಂದ ಬದಲಾಗಬಹುದು ಎಂದಲಾಗಲಿ.. ನನಗೆ ನಿಜವಾಗಿಯೂ ಆ ದಿನ ಅನಿಸಿಯೇ ಇರಲಿಲ್ಲ !
ಕಿಶೋರ್ ಪಿಯುಸಿ ಹುಡುಗ. ಅವ ಕೂಡ ನಮ್ಮ ಏರಿಯಾದ ಹುಡುಗನೇ. ಅಲ್ಲೇ ಭಾಷಾ ಭಾಯ್ ತೋಟದ ಪಕ್ಕವೇ ಇರುವ ಗ್ರೌಂಡ್ ಗೆ ಸಂಜೆ ಡೈಲಿ ಕ್ರಿಕೆಟ್ ಆಡ್ಲಿಕ್ಕೆ ಬರ್ತಿದ್ದ. ಆವಾಗಲೆಲ್ಲ ನಾನು ಅವನಿಗೆ ಮಾತಾಡಿಸ್ತಿದ್ದೆ.
ಸಿಕ್ಕಿದ್ದಾಗಲೆಲ್ಲ ಅವನಿಗೆ ಹತ್ತು ರೂಪಾಯಿ ಯೋ, ಇಪ್ಪತ್ತು ರೂಪಾಯಿ ಯೋ ಖರ್ಚಿಗೆ ಅಂತ ಕೊಡ್ತಿದ್ದೆ. ಮತ್ತೆ ಹೇಳ್ತಾ ಇದ್ದೆ... "ಕಾಲೇಜಿನಲ್ಲಿ ಏನಾದರೂ ಸಮಸ್ಯೆ ಆದರೆ ನಂಗೆ ಹೇಳು. ನಿಂಗೆ ಪ್ರಾಬ್ಲಂ ಮಾಡೋ ಹುಡುಗರ ಬೆಂಡ್ ನಾನು ಎತ್ತುತ್ತೀನಿ. ನೀನು ಈ ಪಚ್ಚು ದಾದ ಕಡೆಯ ಹುಡುಗ. ನಾನು ಇರೋ ತನಕ ನಿನಗೆ ಯಾರ ಭಯನೂ ಇಲ್ಲ, ನಿನ್ನನ್ನು ಜಸ್ಟ್ ಟಚ್ ಮಾಡೋಕೂ ಯಾರಿಂದಲೂ ಆಗಲ್ಲ .." ಅಂತ ಜಸ್ಟ್ ಹವಾ maintain ಮಾಡೋಕೆ ಅವನತ್ರ ಡೈಲಾಗ್ ಹೊಡೆದು ಬಿಲ್ಡ್ ಅಪ್ ತಗೋತ ಇದ್ದೆ.
ನಾನು ನನ್ನ ರೌಡಿಸಂ ಕ್ಷೇತ್ರದ ಫಸ್ಟ್ ಡೀಲ್ ಗೆ ಇನ್ನೂ ಕೈ ಹಾಕಿಯೇ ಇಲ್ಲ, ಆದರೆ ಆಟ ಆಡೋಕೆ ಬರುವ ಎಲ್ಲಾ ಹುಡುಗರ ಎದುರು ಬಿಟ್ಟಿ ಬಿಲ್ಡ್ ಅಪ್ ತಗೊಳೋದು ಮಾತ್ರ ನಿಲ್ಲಿಸಿರಲಿಲ್ಲ,ಯಾಕೆಂದರೆ ಯಾವತ್ತಾದರೂ ಒಂದು ದಿನ ನಾನು ರೌಡಿ ಆಗಿಯೇ ಆಗ್ತೀನಿ ಎಂಬ ಅಗಾಧವಾದ confidence ನನ್ನಲ್ಲಿ ಯಾವತ್ತೂ ಇತ್ತು.
ಆದರೆ ಹುಡುಗ ಕಿಶೋರ್ ಗೆ ಏನು ಗೊತ್ತು ನಾನು ಇನ್ನೂ officially ರೌಡಿ ಆಗಿಯೇ ಇಲ್ಲ ಎಂದು. ನಾನು ಹೇಳಿದ್ದೇ ಸತ್ಯ ಎಂದು "ಆಯ್ತು ಪಚ್ಚು ದಾದ.. ಏನಾದರೂ ಪ್ರಾಬ್ಲಂ ಇದ್ರೆ ನಿಂಗೆ ಖಂಡಿತವಾಗಿಯೂ ಹೇಳ್ತೇನೆ.." ಅಂತ ಹೇಳ್ತಿದ್ದ.
ಆ ದಿನ ಸಂಜೆ ಅವನು ನನ್ನ ಬಳಿ ಒಡೋಡಿ ಬಂದಿದ್ದ ರೀತಿ ನೋಡಿಯೇ ಗೊತ್ತಾಯಿತು ಇವನು ಏನೋ ಕಿತಾಪತಿ ಮಾಡಿಕೊಂಡೇ ಬಂದಿದ್ದಾನೆ ಎಂದು.
ಸ್ವಲ್ಪ ಸುಧಾರಿಸಲು ಕೊಳ್ಳಲು ಹೇಳಿದೆ. ಕುಳಿತುಕೊಳ್ಳಲು ಒಂದು ಸ್ಟೂಲ್ ಕೊಟ್ಟೆ. ಕುಡಿಯಲು ಒಂದು ಗ್ಲಾಸ್ ನೀರು ಕೊಟ್ಟೆ.
ಕಿಶೋರ್ ನೀರು ಕುಡಿದ. ಆದರೆ ಅಳುತ್ತಲೇ ಇದ್ದ!
"ಏನಾಯ್ತು.. " ಕೇಳಿದೆ.
" ಅದು.. ಇವತ್ತು ಪಕ್ಕದ ಊರಿನಲ್ಲಿ ಕ್ರಿಕೆಟ್ ಮ್ಯಾಚ್ ಇತ್ತು. ಅದಕ್ಕೆ ನಮ್ಮ ಟೀಮ್ ಕೂಡ ಹೋಗಿತ್ತು. ಮ್ಯಾಚ್ ನಡುವೆ ಜಗಳ ಆಯಿತು... " ಅಂತ ಅಳು ಮುಂದುವರಿಸಿದ.
" ಆಮೇಲೆ ಏನಾಯಿತು.. " ಕೇಳಿದೆ.
" ನಾವು ಜಗಳ ಮಾಡಿಕೊಂಡ ಟೀಮ್ ,ರೌಡಿ ಕಾಳಿಂಗನ ಟೀಮ್ ಆಗಿತ್ತು!! . ಆ ಕಾಳಿಂಗನ ಕಡೆಯ ಹುಡುಗ ನನಗೆ ಗ್ರೌಂಡ್ ನಲ್ಲೇ ಸರಿಯಾಗಿ ಹೊಡೆದ ದಾದ.. " ಅಂತ ಪುನಃ ಜೋರಾಗಿ ಅಳಲು ಶುರು ಮಾಡಿದ ಕಿಶೋರ್.
ಮಾರಿ, ಹೋಗಿ ಹೋಗಿ ಅಷ್ಟು ದೊಡ್ಡ ರೌಡಿ ಯ ಹುಡುಗ ರ ಬಳಿ ಜಗಳ ಮಾಡಿಕೊಂಡು ಬಂದಿದ್ದಾನೆ ಸಾವ್..ಇವನಿಗೆ ಜಗಳ ಮಾಡ್ಲಿಕ್ಕೆ ಬೇರೆ ಯಾರೂ ಸಿಗ್ಲೇ ಇಲ್ವಾ.. ಸ್ವಲ್ಪ ಟೆನ್ಶನ್ ಆಯಿತು. ಆದರೂ ಅದನ್ನು ತೋರಿಸಿ ಕೊಳ್ಳದೇ..
" ಮತ್ತೇ ಏನಾಯಿತು... " ಗಡುಸಾದ ಧ್ವನಿಯಲ್ಲಿ ಕೇಳಿದೆ.
" ದಾದ. ನೀನು ಯಾವಾಗಲೂ ಹೇಳ್ತಾ ಇದ್ದೆ ಅಲ್ಲಾ '.. ನೀನು ಈ ಪಚ್ಚು ದಾದ ಕಡೆಯ ಹುಡುಗ. ನಾನು ಇರೋ ತನಕ ನಿನಗೆ ಯಾರ ಭಯನೂ ಇಲ್ಲ, ನಿನ್ನನ್ನು ಜಸ್ಟ್ ಟಚ್ ಮಾಡೋಕೂ ಯಾರಿಂದಲೂ ಆಗಲ್ಲ..' ಅಂತ ಅದೇ ಧೈರ್ಯ ದಲ್ಲಿ ಕಾಳಿಂಗನ ಕಡೆಯ ಹುಡುಗನಿಗೆ ಸರಿಯಾಗಿ ಆವಾಜ್ ಹಾಕಿಯೇ ಬಂದಿದ್ದೆನೆ..ಮತ್ತೆ ನಾನು ಬಿಡ್ತೀನಾ.. ನಾನು ಪಚ್ಚು ದಾದ ಕಡೆಯ ಹುಡುಗ.. ಪಚ್ಚು ದಾದ ಅಂದ್ರೆ ಸುಮ್ನೆನಾ.. " ಅಂದ.
ಓ ದೇವರೇ ಈ ಹುಡುಗ ಯಾಕೇ ನಾನು ಹೇಳಿದ್ದನು ಇಷ್ಟು ಸೀರಿಯಸ್ ಆಗಿ ತಗೊಂಡಿದ್ದಾನೆ ಎಂದು ವಿಪರೀತ ಸಿಟ್ಟು ಬಂತು.
" ಅದು..ಅದು.. ಏನು ಆವಾಜ್ ಹಾಕಿ ಬಂದೆ " ಅಂತ ಕೇಳಿದೆ.
" ನೀನು ಹುತ್ತದಲ್ಲಿರೋ ಹಾವನ್ನ..ಮಲಗಿರೋ ಹುಲಿನಾ..ನೀರಿನಲ್ಲಿರೋ ಮೊಸಳೆ ನಾ.. ಸೈಲೆಂಟ್ ಆಗಿ ಇರೋ ಮುಳ್ಳು ಹಂದಿನಾ.. ರೋಡ್ ಅಲ್ಲಿ ನಡ್ಕೊಂಡು ಹೋಗ್ತಿರೋ ಹುಚ್ಚು ನಾಯಿ ನ ಕೆಣಕ್ಕಿದ್ದೀಯಾ...ಬಡಿದು ಎಬ್ಬಿಸಿದ್ದೀಯಾ... ನಿನಗೆ ನಾನು ಯಾರ ಕಡೆಯ ಹುಡುಗ ಅಂತ ಇನ್ನೂ ಗೊತ್ತಿಲ್ಲ..ಗೊತ್ತಾದ್ರೆ ನಿನ್ನ ಚಡ್ಡಿ ಚಂಡಿ ಆಗುತ್ತೆ.....ನಾನು ಪಚ್ಚು ದಾದ ಹುಡುಗ ಕಣೋ.. ನಂಗೆ ಹೊಡೆದು ತುಂಬಾನೇ ದೊಡ್ಡ ತಪ್ಪು ಮಾಡಿದ್ದೀಯಾ.. ಈಗಲೇ ಕ್ಷಮೆ ಕೇಳಿದರೆ ಇಲ್ಲೇ ಬಿಟ್ ಬಿಡ್ತೀನೀ.. ಇಲ್ಲಾಂದ್ರೆ ಮುಂದೆ ತುಂಬಾನೇ ಪಶ್ಚಾತಾಪ ಪಡ್ತೀಯಾ..ಪಚ್ಚು ದಾದ ಫಿಲ್ಡ್ ಗೆ ಬಂದ್ರೆ ನಿಂಗೆ ಕುಡಿಯೋಕೆ ನೀರೂ ಸಿಗಲ್ಲ.. sorry ಕೇಳೋಕೆ ನಾಲಗೆನೇ ಇರಲ್ಲ... " ಅಂದ.
ಮೇಲಿನಿಂದ ಕೆಳಗೆ ಅವನನ್ನೇ ನೋಡಿದೆ. ಭಯ ಆಯಿತು. ಸರಿಯಾಗಿ ನನಗೆ ಆಫು ಇಟ್ಟವ್ನೇ ಮಾರಿ ಎಂದು ಇನ್ನೂ ಜೋರು ಸಿಟ್ಟು ಬಂತು.
ಆದರೂ ತೋರಿಸದೆ " ಅದಕ್ಕೆ ಅವನು ಏನು ಹೇಳಿದಾ.. "ಅಂದೆ.
" ಹೇಯ್ ಹೋಗೋ ಹೋಗೋ.. ಪಚ್ಚು ದಾದ ಅಂತೆ.. ಪಚ್ಚು ದಾದ. ಪಚ್ಚು ನೋ ಗಿಚ್ಚು ನೋ. ಹೋಗೋ ಧಮ್ ಇದ್ರೆ ನಿನ್ನ ಪಚ್ಚು ದಾದ ನ ಬರೋಕೆ ಹೇಳೋ. ಇವತ್ತೇ ಬರೋಕೆ ಹೇಳೋ.. ಕಾಳಿಂಗ ನ ಮನೆಯಲ್ಲೇ ಇರ್ತಿನೀ..ಅಲ್ಲೇ ನಿಮ್ಮಿಬ್ಬರಿಗೇನೇ ಕಾಯ್ತಾ ಇರ್ತಿನೀ.. ನಿನ್ನ ಪಚ್ಚು ದಾದ ಏನು ಮಾಡ್ತನೋ ನಾನು ನೋಡೆ ಬಿಡ್ತೀನೀ, ನಿಮಗಿದೆ ಇವತ್ತು ಮಾರಿ ಹಬ್ಬ . " ಅಂತ ಹೇಳಿದ ಪಚ್ಚು ದಾದ.. ಎಂದು ಹೇಳಿ ಮುಗಿಸಿದ ಕಿಶೋರ್.
ಅಯ್ಯೋ ವಿಧಿಯೇ.. ಹೋಗಿ ಹೋಗಿ ಕಾಳಿಂಗ ನ ಹುಡುಗನಿಗೆ ಅದೂ.. ಅವನ ಮನೆಗೇ ಹೋಗಿ ಅಲ್ಲೇ ಫೈಟ್ ಮಾಡೋ ಸೀನ್ create ಮಾಡಿ ಬಂದಿದ್ದಾನೆ.. ನನಗೆ ಈ ಜನ್ಮಕ್ಕೆ ಬೇರೆ ಯಾರೂ ಶತ್ರು ಬೇಕಿಲ್ಲ. ಇವನೊಬ್ಬನೇ ಸಾಕು ಅಂತ ಮನಸ್ಸು ಹೇಳಿತು.
" ಬಾ ದಾದ..ಹೊರಡು.. ಅವನಿಗೆ ಸರಿಯಾಗಿ ಪಾಠ ಕಲಿಸು ಇವತ್ತು.. " ಅಂದ ಕಿಶೋರ್.
" ಅದು.. ಅದು.. ಹುಡುಗರು ಬೇರೆ ಇಲ್ಲಾ.. ಫಿಲಂ ಗೆ ಹೋಗಿದ್ದಾರೆ. ನಾಳೆ ಹೋಗಿ ಅವನಿಗೆ ಸರಿಯಾಗಿ ಹೊಡಿಯುವ.. " ಅಂದೆ.
" ನಾಳೆ ಬೇಡ ಇವತ್ತೇ, ಈಗಲೇ ಹೊಡಿಬೇಕು. ಎಲ್ಲಾ ಬಿಸಿ ಬಿಸಿ ಇರುವಾಗಲೇ ನಡೆದು ಹೋಗಲಿ.. ಅದೂ ಅಲ್ಲದೇ ಆ ಕಾಳಿಂಗ ನಿಮ್ಮ ದೇವರಂತ ಭಾಷಾ ಭಾಯ್ ಗೂ ತುಂಬಾ ಕಿರಿಕ್ ಮಾಡ್ತಾನೆ ಅಂತ ಊರಿಗೇ ಗೊತ್ತು, ಆ ಕಾಳಿಂಗನಿಗೂ ಕೂಡ ಒಂದು ಸರಿಯಾದ ಪಾಠ ಕಲಿಸಿ ಉಂಡ ಮನೆಯ ಋಣ ತೀರಿಸು ಪಚ್ಚು ದಾದ.. " ಅಂದ ಕಿಶೋರ್.
ಈವ ಎಲ್ಲಿಂದಲೋ ಎಲ್ಲಿಗೆ ಕನೆಕ್ಟ್ ಮಾಡಿ ನನಗೆ ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾನೆ.! ಅಂತ ಅನಿಸಿತು.
ಆದರೆ ಮನಸ್ಸು ಬೇರೆಯದ್ದೆ ಯೋಚನೆ ಮಾಡಲು ತೊಡಗಿತ್ತು......" ಕಾಡಲ್ಲಿ ಎಗ್ರಾಡೋ ನೂರಾರು ತೋಳ, ನರಿ ಗಳನ್ನು ಹೆದ್ರಿಸೋಕೆ,
ಅಷ್ಟೂ ತೋಳ ನರಿಗಳನ್ನೇ ಟಚ್ ಮಾಡ್ಬೇಕಾಗಿಲ್ಲ . ಜಸ್ಟ್ ಒಂದು ಸಿಂಹ ನ ಹೊಡ್ದಾಕ್ ಬಿಟ್ರೆ ಸಾಕು, ಬಾಕಿದ್ದೆಲ್ಲವೂ ಆಟೋಮ್ಯಾಟಿಕ್ ಆಗಿ ಸೈಲೆಂಟ್ ಆಗ್ಬಿಡ್ತಾವೆ, ಮಾತ್ರವಲ್ಲ ಇಡೀ ಕಾಡೇ ನಂದಾಗಿ ಬಿಡುತ್ತೆ!!.. "
ಹೌದು ಯಾಕೇ ನಾನು ಈ ನೆಪದಲ್ಲಾದರೂ ನಗರ ದ ದೊಡ್ಡ ರೌಡಿ ಕಾಳಿಂಗನ ಹೊಡೆದು ಹಾಕ್ಬಾರ್ದು. ಹೊಡೆದ್ರೆ ಸಿಂಹ ನೇ ಹೊಡಿಬೇಕು. ಮೊದಲ ಡೀಲೇ ಇಷ್ಟು ದೊಡ್ಡದು ಇದ್ರೆ ನನ್ನ ಹವಾ ನೂ ಜೋರಾಗಿಯೇ ಇರುತ್ತೆ. ಏನೇ ಆಗಲಿ ಒಂದು ಕೈ ನೋಡೇ ಬಿಡುವ ಅಂತ ಭಂಡ ಧೈರ್ಯದಿಂದ ನಿರ್ಧಾರ ಮಾಡಿಬಿಟ್ಟೆ,sorry..ಈ ರೀತಿ ನಿರ್ಧಾರ ನಾನು ತಗೊಳ್ಳುವಂತೆ ಕಿಶೋರ್ ಮಾಡಿ ಬಿಟ್ಟ!
"ದಾದ ತಗೋ ಮಚ್ಚು.. "ಅಂತ ಅಲ್ಲೇ ರೂಮಿನ ಒಂದು ಕಡೆ ಬಿದ್ದಿದ್ದ ನನ್ನ ಬಲ್ಲೆ ಕೆತ್ತುವ ಮಚ್ಚು ತಂದು ಕೈಗಿತ್ತ ಕಿಶೋರ್.
ಅವನ ಉತ್ಸಾಹ ಕಂಡು ನನಗೆ ಭಯ ಜಾಸ್ತಿ ಆಯಿತು.
ಮಚ್ಚನ್ನು ಶರ್ಟ್ ನ ಒಳಗೆ ಬೆನ್ನಿನ ಹಿಂದೆ ಸಿಕ್ಕಿಸಿಕೊಂಡು ನನ್ನ RX 100 ಬೈಕ್ start ಮಾಡಿದೆ. ರಪ್ಪನೇ ಬಂದು ಹಿಂದಿನ ಸೀಟಿನಲ್ಲಿ ಕೂತ್ಕೊಂಡ ಕಿಶೋರ್.
" ರೈಟ್ ಹೋಗುವ.... " ಅಂದ.
ಅವನ ಖುಷಿ ನೋಡಿದರೆ ಮಕ್ಕಳು ಯಾವುದೋ ಶಾಲಾ ಪ್ರವಾಸ ಕ್ಕೆ ಹೋಗುವಂತೆ ಇತ್ತು.
ಏನೋ ಒಂದು ನೆನಪಾಗಿ " ಒಂದು ನಿಮಿಷ ಇರು.. "ಅಂದವನೇ start ಮಾಡಿದ್ದ RX100 ಅನ್ನು off ಮಾಡಿ , ಸೀದಾ ರೂಮ್ ನ ಒಳಗೆ ಹೋಗಿ ಬುಸ್ ನಾಗ ನ ಕಪ್ಪು Rayban ಗ್ಲಾಸ್ ಏರಿಸಿಕೊಂಡು ಹೋರ ಬಂದೆ.
ಬೈಕ್ ಅಲ್ಲಿ ಕುಳಿತಲ್ಲಿಂದಲೇ ಜೋರಾಗಿ ವಿಷಲ್ ಹೊಡೆದು ".. ದಾದ ಈಗ ನಿನ್ನ ಗತ್ತೇ ಬೇರೆ.. ಗಮ್ಮತ್ತೇ ಬೇರೆ.. " ಅಂದ.
ದೇವರನ್ನು ಒಮ್ಮೆ ಮನಸ್ಸಿನಲ್ಲೇ ಬೇಡಿಕೊಂಡು ದೇವರೇ ಆದಷ್ಟು ಕಡಿಮೆ ಏಟು ಬೀಳುವಂತೆ ಮಾಡಪ್ಪ ಅಂತ ಹರಕೆ ಕಟ್ಟಿಕೊಂಡು ಬೈಕ್ start ಮಾಡಿ ಕಾಳಿಂಗನ ಏರಿಯಾ ಕಡೆಗೆ ನಾನು ಕಿಶೋರ್ ಹೊರಟೆವು.
ನೇರವಾಗಿ ಬಂದವನೇ ಬೈಕ್ ಅನ್ನು ಕಾಳಿಂಗನ ಮನೆ ಮುಂದೆ ನಿಲ್ಲಿಸಿದ್ದೆ. ಅವನ ಮನೆ ಮುಂದೆ ವಾಲಿಬಾಲ್ ಕೋರ್ಟ್ ನಷ್ಟು ಜಾಗ ಇತ್ತು. ಅವನ ಮನೆ ಪಕ್ಕವೇ ಚಿಕ್ಕ ಚಿಕ್ಕ ಅವನದ್ದೇ ಗೋಡಾನ್ ಗಳು. ಹಾಗೂ ಇನ್ನಿತರರ ಮನೆಗಳಿದ್ದವು. ಮನೆಯ ಎದುರಲ್ಲಿ ಅಂದರೆ ನಾವು ನಿಂತಿದ್ದ ಸೈಡ್ ನಲ್ಲಿ ಚಿಕ್ಕ ಪುಟ್ಟ ಅಂಗಡಿಗಳು, ಗೂಡಂಗಡಿಗಳು ಇದ್ದವು.
ಈ ಏರಿಯಾದಲ್ಲಿ ಮಾತ್ರ ಅಲ್ಲ,ಇಡೀ ನಗರದಲ್ಲಿಯೇ ಕಾಳಿಂಗನ ಹವಾ ಜೋರಾಗಿಯೇ ಇತ್ತು.ಅವ ಎಲ್ಲೇ ಹೋದರು ಅವನಿಗೆ ಜನ ಹೆದರುತ್ತಿದ್ದರು. ಇದು ಅವನ ಏರಿಯಾ, ಇಲ್ಲಿ ಭಯ ಎನ್ನುವುದು ಲೆಕ್ಕಕ್ಕಿಂತ ಜಾಸ್ತಿಯಾಗಿಯೇ ಇತ್ತು.
ಕಾಳಿಂಗ ಮನೆಯಿಂದ ಹೊರಗೆ ಬಂದು ಜಸ್ಟ್ ಬೀದಿಗೆ ಕಾಲಿಟ್ಟರೆ ಸಾಕು,ಅವನ ಮನೆಯ ಎದುರುಗಡೆ ಇದ್ದ ಅಷ್ಟೂ ಅಂಗಡಿಯವರು ಅಂಗಡಿಯ ಶಟರ್ ಎಳೆದು ಅಂಗಡಿಗಳನ್ನು ಬಂದ್ ಮಾಡಿ ಬಿಡುತ್ತಿದ್ದರು .
ಆ ಅಂಗಡಿಗಳು ಶಟರ್ ತೆರೆದು ಓಪನ್ ಆಗುತ್ತಿದ್ದುದೇ ಒಂದೋ ಕಾಳಿಂಗ ಮನೆ ಯ ಒಳಗೆ ಇರಬೇಕಾಗಿತ್ತು ಇಲ್ಲವೇ ಆ ಏರಿಯಾ ದಿಂದ ಹೊರಗೆಲ್ಲೋ ಹೊಗಿರಬೇಕಾಗಿತ್ತು!! ಇದು ಕಾಳಿಂಗ ಆ ಏರಿಯಾದಲ್ಲಿ ಇಟ್ಟಿದ್ದ ಭಯ!!
ಕಾನೂನು ಭಾಹಿರ ಅಂತ ಅನಿಸುವ ಎಲ್ಲಾ ಕೆಲಸಗಳನ್ನು ಕಾಳಿಂಗ ಮಾಡ್ತ ಇದ್ದ. ಆಯಿಲ್ ದಂಧೆ ಅದರಲ್ಲಿಯೂ ಮೈನ್ ಆಗಿ ಸೀಮೆಎಣ್ಣೆ ದಂಧೆ. ಸೀಮೆಎಣ್ಣೆ ಯನ್ನು ಬ್ಲ್ಯಾಕ್ ಅಲ್ಲಿ ಮಾರ್ತಾ ಇದ್ದ ಕಾಳಿಂಗ ! ಮನೆಯ ಸುತ್ತಮುತ್ತಾನೇ ಗೋಡಾನ್ ಮಾಡ್ಕೊಂಡು ಅಲ್ಲೇ ಸೀಮೆಎಣ್ಣೆ stock ಇಟ್ಕೊಂಡಿದ್ದ. ಸೀಮೆಎಣ್ಣೆ ಕಲಬೆರಕೆ ಮಾಡಿ ಮಾರ್ತ ಇದ್ದ.
ಕಾಳಿಂಗನಿಗೆ ದೊಡ್ಡ ದೊಡ್ಡ ರಾಜಕಾರಣಿಗಳ, ರಾಜಕೀಯ ಪಕ್ಷಗಳ, ಪೋಲಿಸರ, ಅಧಿಕಾರಿಗಳ ಬೆಂಬಲ ಇತ್ತು. ಹಾಗಾಗಿ ಇಷ್ಟೊಂದು ರಾಜರೋಷವಾಗಿ ನಿರ್ಭಯವಾಗಿ ಎಲ್ಲವನ್ನೂ ಮಾಡ್ತ ಇದ್ದ.ಬೇಕಾದಷ್ಟು ಪುಡಿ ರೌಡಿಗಳು, ಗೂಂಡಾಗಳು ಅವನ ಕೈ ಕೆಳಗೆ ಕೆಲಸ ಮಾಡುತ್ತಿದ್ದರು. ಆ ಕಾಲದಲ್ಲಿ ರೌಡಿಸಂ ಅಂದರೆ ಕಾಳಿಂಗ. ಕಾಳಿಂಗ ಅಂದರೆ ರೌಡಿಸಂ!
ಅಂತಹ ಕಾಳಿಂಗನ ಮನೆ ಮುಂದೆ ನಾವು ನಿಂತಿದ್ದೆವು.
ಕಾಳಿಂಗನ ಮನೆಯ ಮುಂದೆಯೇ ಕಾಳಿಂಗನ ಕಡೆಯ ಹುಡುಗ ಮಚ್ಚು ಹಿಡ್ಕೊಂಡು ಕೂತಿದ್ದ. ಅವನ ಮಚ್ಚು ಹಿಡಿದ ಸ್ಟೈಲ್ ನೋಡಿದರೇನೇ ಗೊತ್ತಾಗುತ್ತೆ ಅವ ಕೂಡ ಫೀಲ್ಡ್ ಅಲ್ಲಿ ಎಷ್ಟು ಪಳಗಿದ್ದಾನೆ ಎಂದು. ಹಾಗಾದರೆ ಇನ್ನು ಕಾಳಿಂಗ ಹೇಗಿರಬೇಡ!!
ಬೈಕ್ ನಿಂದ ಕೆಳಗೆ ಇಳಿದವನೇ ಕಿಶೋರನಲ್ಲಿ " ಅವನೇನಾ ನಿಂಗೆ ಹೊಡೆದವನು..." ಕೇಳಿದೆ.
"ಹೌದು ಅವನೇ... " ಎಂದು ಹೇಳಿದ ಕಿಶೋರ್ ಆ ಹುಡುಗನ ಕಡೆಗೆ ತಿರುಗಿ..." ಧಮ್ ಇದ್ದರೆ,ನಿನ್ನ ಅಪ್ಪ ಕಾಳಿಂಗನನ್ನು ಕೂಡ ಕರೆಯೋ.. ಬಂದಿರೋದು ಪಚ್ಚು ದಾದ.. " ಅಂದ!!
ಉಸಿರಾಟ ಒಮ್ಮೆಲೇ ನಿಂತಂತಾಯಿತು.ಇವನು ಕಾಳಿಂಗನ ಮಗ ನಾ? ಕಿಶೋರ್ ಜಸ್ಟ್ ಹುತ್ತಕ್ಕೆ ಕೈ ಹಾಕಿರಲಿಲ್ಲ. ಹಾವನ್ನು ಜೋರಾಗಿ ಚಿವುಟಿ ಯೇ ಬಂದಿದ್ದಾನೆ ಅಂತ ಒಮ್ಮೆ ಅನಿಸಿತು. ಕಾಳಿಂಗನ ಮಗ ನಿಗೆ ಏನಾದರೂ ಆದರೆ ಕಾಳಿಂಗ ನನ್ನನ್ನು ಸುಮ್ಮನೆ ಬಿಡುವನೇ? No chance! ಕಾಳಿಂಗನ ಮಗ ಎಂದು ಹೇಳದೇ ಕಾಳಿಂಗನ ಕಡೆಯ ಹುಡುಗ ಎಂದು ಕಿಶೋರ್ ನನಗೆ ಸುಳ್ಳು ಹೇಳಿದ್ದ ಎಂದು ಗೊತ್ತಾಗಲು ಜಾಸ್ತಿ ಸಮಯ ಬೇಕಾಗಿರಲಿಲ್ಲ.
ಕಿಶೋರ್ ನನ್ನೇ ಸಿಟ್ಟಿನಿಂದ ಒಮ್ಮೆ ಗುರಾಯಿಸಿ ಮೇಲಿನಿಂದ ಕೆಳಗೆ ನೋಡಿದೆ.
"sorry ದಾದ, ಕಾಳಿಂಗನ ಕಡೆಯ ಹುಡುಗ ಎಂದು ಬೇಕಂತಲೇ ಸುಳ್ಳು ಹೇಳಿದೆ..ಆದ್ರೆ ನಮ್ಗೆ ಯಾರಾದರೇನು. ಕಾಳಿಂಗನ ಕಡೆಯವರನ್ನು ಹೊಡೆದರೆ ಒಂದು ಹವಾ ಆದರೆ.. ಕಾಳಿಂಗನ ಮಗನನ್ನು ಇಲ್ಲವೇ ಸ್ವತಃ ಕಾಳಿಂಗ ನನ್ನೇ ಹೊಡೆದರೆ ಅದು ಬೇರೆಯದ್ದೇ ಒಂದು ಹವಾ..ನೀನು ಎಲ್ಲಿಗೋ ಹೋಗಿ ಬಿಡ್ತೀಯಾ..ನಿನ್ನ ರೇಂಜೇ ಬೆರೆ ಆಗ್ಬಿಡುತ್ತದೆ. ನನಗೆ ಕೂಡ ಇದೇ ಬೇಕಾಗಿದ್ದುದು. ಈಗ ಆಟಕ್ಕೆ ಮಜಾ ಬಂತು.. " ಅಂದ
ಕಾಳಿಂಗನ ಮಗ ನನ್ನನ್ನೇ ನೋಡಿದ " ಓಹ್ ಇವನೇನಾ ಪಚ್ಚು ದಾದ... " ಅಂದ.
Actually ಆ ಸೀನಿನಲ್ಲಿ ಮೈನ್ ರೌಡಿ ಆದ ನಾನು ಡೈಲಾಗ್ ಹೊಡಿಬೇಕಾಗಿತ್ತು. ಆದರೆ ಕಿಶೋರ್ ನಾನು ಹೇಳಬೇಕಾದ, ಹೇಳಬಾರದೆಂದು ಇದ್ದ ಎಲ್ಲಾ ಡೈಲಾಗುಗಳಿಗೆ ಉಪ್ಪು,ಹುಳಿ ಖಾರ,ಗರಂ ಮಸಾಲ, ಚಾಟ್ ಮಸಾಲ ಎಲ್ಲಾ ಹಾಕಿ ಅವನೇ ಒಂದರ ಮೇಲೆ ಒಂದು ಅವನದ್ದೇ ಡೈಲಾಗ್ ಗಳನ್ನು ಬಿಡ್ತಿದ್ದ. ಅವನು ನನ್ನನ್ನು ಯಾವ ರೇಂಜ್ ರೌಡಿ ಅಂತ ತಿಳಿದುಕೊಂಡಿದ್ದನೋ ಆ ದೇವರಿಗೇ ಗೊತ್ತು. ನೆನಪಿಸಿಕೊಂಡಾಗಲೇ ಒಮ್ಮೆ ಭಯ ಆವರಿಸಿತು.
"ನಮ್ಮ ಪಚ್ಚು ದಾದ, ಬಚ್ಚಾ ಗಳ ಬಳಿ ಫೈಟ್ ಮಾಡಲ್ಲ. ಧೈರ್ಯ ಇದ್ರೆ ನಿನ್ನ ಅಪ್ಪ ಕಾಳಿಂಗನನ್ನು ಕರೆಯೋ... " ಅಂದ ಕಿಶೋರ್.
ದೇವರಾಣಿಗೂ ನಾನು ಏನಾದರೂ ಡೈಲಾಗ್ ಹೊಡಿತಿದ್ದರೆ ಇದೊಂದು ಡೈಲಾಗ್ ಬಾಯಿತಪ್ಪಿಯೂ ಹೇಳ್ತಾ ಇರ್ಲಿಲ್ಲ. ಸಿಂಹ ದ ಮರಿಗೆ ಹೊಡಿಲಿಕ್ಕೆ ಅಂತ ಬಂದವರು ನಾವು. ಆದರೆ ಕಿಶೋರ್ ನನ್ನ ಧೈರ್ಯದಲ್ಲಿ ಡೈರೆಕ್ಟ್ ಆಗಿ ಸಿಂಹ ವನ್ನೇ ಫೈಟ್ ಮಾಡ್ಲಿಕ್ಕೆ ಕರೀತಾ ಇದ್ದಾನೆ ಪಾಪಿ😭😭
ಮನೆಯ ಹೊರಗೆ ನಡೀತಾ ಇದ್ದ ಡೈಲಾಗ್ ಡೆಲಿವರಿ, ಸದ್ದುಗದ್ದಲ ಕೇಳಿ ಕಾಳಿಂಗನ ಮನೆಯ ಬಾಗಿಲು ನಿಧಾನವಾಗಿ ಓಪನ್ ಆಯಿತು. ಆಗ ಅಲ್ಲಿ ನಿಂತಿದ್ದ ಅಜಾನುಬಾಹು ಕಾಳಿಂಗ !
ನಾನು ಕಾಳಿಂಗನ ಬಗ್ಗೆ ತುಂಬಾನೇ ಕೇಳಿದ್ದೆ. ಆದರೆ ಡೈರೆಕ್ಟ್ ಆಗಿ ನೋಡಿದ್ದು ಆವತ್ತೇ. ನಾನು ಕೂಡ ರೌಡಿಸಂ ಕ್ಷೇತ್ರದಲ್ಲಿ ತುಂಬಾನೇ ಸಕ್ರಿಯವಾಗಿ ಇದ್ದಿದ್ದರೆ ನೋಡುತ್ತಿದ್ದೆನೋ ಏನೋ. ಆದರೆ ಮಚ್ಚು ಹಿಡಿದು ತೋಟದಲ್ಲಿ ಸರಿಯಾಗಿ ಬಲ್ಲೆ ಕೆತ್ತಲಿಕ್ಕೆ ಕೂಡ ನನಗೆ ಸಮಯ ಸಾಕಾಗುತ್ತಿರಲಿಲ್ಲ..ಇನ್ನು ಮಚ್ಚು ಹಿಡಿದು ಎದುರಾಳಿ ಯ ರುಂಡ ಮುಂಡಗಳನ್ನು ಚೆಂಡಾಡಲು ನನಗೆ ಎಲ್ಲಿ ಸಮಯ ಇತ್ತು.. ಅದೂ ಅಲ್ಲದೆ ಅಷ್ಟೊಂದು ಧೈರ್ಯ ನನಗೆಲ್ಲಿ ಇತ್ತು.
ಕಾಳಿಂಗನನ್ನೇ ನೋಡಿದೆ. ಅವನನ್ನು ನೋಡಿದರೆ ಮಕ್ಕಳು ಹೆದರಿಕೆಯಿಂದ ಉಟ್ಟ ಬಟ್ಟೆಯಲ್ಲೇ ಒಂದು ಎರಡು ಎಲ್ಲಾ ಮಾಡ್ಕೋಬೇಕು. ಆ ತರಹ ಇದ್ದ ರೌಡಿ ಕಾಳಿಂಗ.
ಕಾಳಿಂಗ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ನಮ್ಮ ಹಿಂದೆ ಇದ್ದ ಅಂಗಡಿಯವರೆಲ್ಲಾ ರಪ ರಪ ಅಂತ ಒಂದರ ಮೇಲೆ ಒಂದು ಅಂಗಡಿಯ ಶಟರ್ ಗಳನ್ನು ಎಳೆದು ಅಂಗಡಿ ಬಂದ್ ಮಾಡಲು ಮುಂದಾದರು !
ಅದನ್ನು ನೋಡುತ್ತಿದ್ದಂತೆ ಕಿಶೋರ್ ಒಮ್ಮೆಲೇ ಹಿಂದೆ ತಿರುಗಿ ಅಲ್ಲಿದ್ದ ಒಂದು ಕಟ್ಟೆಯನ್ನು ಹತ್ತಿ " ಯಾರೂ ಭಯ ಪಡ್ಬೇಕಾಗಿಲ್ಲ.. ಯಾರೂ ನಿಮ್ಮ ಅಂಗಡಿಗಳನ್ನು ಮುಚ್ಚಬೇಕಾಗಿಲ್ಲ. ಬಂದಿರೋದು ಕಾಂಜಿ ಪೀಂಜಿ ಜನ ಅಲ್ಲ. ದಾದ.... ಪಚ್ಚು ದಾದ. ಇವತ್ತಿನಿಂದ ನಿಮ್ಮ ಕಷ್ಟ ಪರಿಹಾರ ಆಯಿತೆಂದೇ ತಿಳಿಯಿರಿ. ನೀವು ನೆಮ್ಮದಿಯಿಂದ ಇರಿ.. ಪಚ್ಚು ದಾದ ಇರುವುದೇ ನಿಮಗಾಗಿ.. ಬಂದಿರುವುದೇ ನಿಮಗಾಗಿ .." ಅಂದ ಕಿಶೋರ್.
ಅಂಗಡಿ ಬಂದ್ ಮಾಡ್ಬೇಕು ಎಂದು ಹೊರಟವರು,ಶಟರ್ ಎಳೆಯುವುದನ್ನು ಅರ್ಧಕ್ಕೆ ನಿಲ್ಲಿಸಿ. ದೇಹವನ್ನು ಬಾಗಿಸಿ ಕೈ ಕಟ್ಟಿ ನನ್ನನ್ನೇ ನೋಡತೊಡಗಿದರು. ಅವರ ಕಣ್ಣು ಗಳನ್ನು ನೋಡಿದೆ. ಯಾವುದೋ ಆಶಾ ಕಿರಣ ಹೊಳೆದಂತೆ ಭಾಸವಾಯಿತು.ರೌಡಿ ಆಗಬೇಕೆಂದು ಹೊರಟ ನನ್ನನ್ನು ಅವರು ಹೀರೋ ತರಹ ನೋಡಿದ ಫೀಲ್ ಆಯಿತು. ಇರಲಿ ಇರಲಿ ಮುಗ್ಧ ಅಮಾಯಕರ ಪಾಲಿಗೆ ಬೇಕಾದರೆ ನಾನು ಹೀರೋ ನೇ ಆಗಿರ್ತಿನಿ. ಆದರೆ ಕೆಟ್ಟವರ ಪಾಲಿಗೆ ಮಾತ್ರ ನಾನು ಯಾವತ್ತೂ ರೌಡಿನೇ ಅಂತ ಮನಸ್ಸಿನಲ್ಲಿ ಅಂದುಕೊಂಡೆ.
ಅವರು ಬಾಯಿ ಬಿಟ್ಟು ಹೇಳಲಿಲ್ಲ, ಅದರೆ "ಒಡೆಯಾ.. ನೀನೇ ನಮ್ಮನ್ನು ಕಾಪಾಡಬೇಕು ಇನ್ನು "ಎಂದು ಹೇಳಿದಂತಿತ್ತು ಅವರೆಲ್ಲರ ಆ ನೋಟ.
ಆದರೆ ಕಿಶೋರ ಅದನ್ನು ಬಾಯಿ ಬಿಟ್ಟೇ ಹೇಳಿದ" ಇನ್ನು ಮುಂದೆ ನಿಮ್ಗೆಲ್ಲಾ ನಮ್ಮ ದಾದ ನೇ ಒಡೆಯ.. "!
ನಾನೆಲ್ಲವನ್ನೂ ಸುಮ್ಮನೆ ಕೇಳುತ್ತಾ, ನೋಡುತ್ತಾ ನಿಂತಿದ್ದೆ. ಆದರೆ ಅಲ್ಲಿಯವರೆಗೆ ಸುಮ್ಮನಿದ್ದ ಕಾಳಿಂಗ ಹೆಡೆ ಎತ್ತಿ ಆರ್ಭಟಿಸಲು ಶುರು ಮಾಡಿದ!
" ಹೇಯ್ ಯಾರೋ ನೀನು, ಕಾಳಿಂಗನ ಎದುರಾಕ್ಕೊಂಡು ಅದೂ ಕಾಳಿಂಗನ ಮನೆ ಮುಂದೆನೇ ಫೈಟ್ ಮಾಡೋಕೆ ಅಂತ ಬಂದ್ದಿದ್ದಿಯಲ್ಲಾ..... " ಅಂತ ಕಾಳಿಂಗ ಹೇಳುತ್ತಿದ್ದ ಮಾತನ್ನು ಕಿಶೋರ ಅರ್ಧದಲ್ಲಿಯೇ ಕಟ್ ಮಾಡಿದ.
" ಹೇಯ್ ಕಾಳಿಂಗ, ಯಾರ್ ಜೊತೆ ಮಾತಾಡ್ತಿದ್ದಿ ಅಂತ ಸ್ವಲ್ಪ ನೋಡ್ಕೊಂಡು ಮಾತಾಡು. ನಿನ್ನೆ ತನಕ ಒಂದು ಲೆಕ್ಕ. ಆದರೆ ಇವತ್ತಿನಿಂದ ಬೇರೆಯದ್ದೇ ಒಂದು ಲೆಕ್ಕ..! ದಾದ style ಇಲ್ಲದೇ swag ಇಲ್ಲದೇ ಯಾವ ಕೆಲಸನೂ ಮಾಡಲ್ಲ. ನೀನು ಏನೇ ಮಾತಾಡೋದು ಇದ್ರೂ , ದಾದ ಮಾತಾಡಿದ ಮೇಲೆನೇ ಮಾತಾಡ್ಬೇಕು. ಆದರೆ ದಾದ ಮಾತಾಡ್ಬೇಕು ಅಂದ್ರೆ ದಾದ ಬಾಯಿ ತುದಿಯಲ್ಲಿ ಹಾಗೇ ಹೊಗೆ ಆಡ್ತಾ ಇರ್ಬೇಕು . ಅದು ದಾದ style..ದಾದ ನ swag.. ಜಸ್ಟ್ ಎ ಮಿನಿಟ್ ಅಮ್ಮಾ..ಸ್ವಲ್ಪ wait ಮಾಡು " ಎಂದು ಕಾಳಿಂಗನಿಗೆ ಹೇಳಿದ ಕಿಶೋರ್ ಹಿಂದೆ ತಿರುಗಿ ಅಂಗಡಿ ಕಡೆಗೆ ನೋಡಿದ.
ಅಲ್ಲೊಬ್ಬ ಫ್ಲ್ಯಾಟ್ ಮಂಡೆಯ ಅಂಗಡಿಯವ, ಅಂಗಡಿಯ ಅರ್ಧ ಶಟರ್ ಎಳೆದು ಭಯದಿಂದ ನಿಂತಿದ್ದ.
ಅವನನ್ನೇ ನೋಡಿ ಕಿಶೋರ್..
"ಹೇಯ್ ಬಾಂಡ್ಲಿ.. ದಾದ ಗೆ ಒಂದು ಬೀಡಿ ಕೊಡೋ.. " ಅಂದ.
ನಾಯಿ ಕಿಶೋರ್. at least ಒಂದು ಸಿಗರೇಟ್ ಆದರೂ ಕೇಳಬಾರದಿತ್ತೆ. ಅಷ್ಟೆಲ್ಲಾ ಬಿಲ್ಡ್ ಅಪ್ ಕೊಟ್ಟು ಈಗ ನನ್ನ ಮಾನ ಮರ್ಯಾದೆ ತೆಗೆದು ಬಿಟ್ಟ .
ಅಂಗಡಿಯವ ಕಿಶೋರ್ ಗೆ ಸಿಗರೇಟು ಕೊಟ್ಟ. ಅದನ್ನು ಅಲ್ಲಿಂದಲೇ ಅಂಗಡಿಯ ಬಳಿ ನಿಂತುಕೊಂಡೇ, ನನ್ನ ಬಳಿಗೆ ಅಂದರೆ ಬೈಕ್ ಪಕ್ಕ ನಿಂತುಕೊಂಡಿದ್ದ ನನಗೆ ಸಿಗುವಂತೆ ಎಸೆದು" ದಾದ.. ಕ್ಯಾಚ್ " ಅಂದ.
ಬೈಕ್ ಬಳಿಯೇ ನಿಂತುಕೊಂಡು ಬಾರೀ ಕಷ್ಟದಲ್ಲಿ ಕ್ಯಾಚ್ ಹಿಡಿದೆ. ಮಾರಿ ಸರಿಯಾಗಿಯೇ ಎಸೆದಿದ್ದ. ಸ್ವಲ್ಪ ಆಚೆ ಈಚೆ ಎಸೆದಿದ್ದರೂ ಕೂಡ ನಾನು ಪುನಃ ಬಗ್ಗಿ ಬಿದ್ದಿದ್ದ ಬೀಡಿ ಹೆಕ್ಕಬೇಕಾಗಿತ್ತು ಮತ್ತು ನಾನು ಆ ರೀತಿ ಮಾಡಿದ್ದರೆ ಅಷ್ಟು ಜನ ಅಂಗಡಿಯವರ ಮುಂದೆ ಹಾಗೂ ಕಾಳಿಂಗ ಮತ್ತು ಕಾಳಿಂಗನ ಮಗನ ಮುಂದೆ ನನ್ನ ಮರ್ಯಾದೆ ಯೇ ಹೋಗುತ್ತಿತ್ತು. ಬಚಾವ್ ದೇವರು ದೊಡ್ಡವನು ನನ್ನ ಮಾನ ಮರ್ವಾದೆ ಉಳಿಸಿದ್ದ. ಬೀಡಿಯನ್ನು ಸರಿಯಾಗಿ ಯೇ ಕ್ಯಾಚ್ ಹಿಡಿದಿದ್ದೆ.
" ಲೈಟರ್ ಎಲ್ಲಿ.... " ಅಂಗಡಿಯವನ ಬಳಿ ಕಿಶೋರ್ ಕೇಳಿದ.
" ಲೈಟರ್ ಇಲ್ಲ... " ಅಂದ ಅಂಗಡಿಯವ.
" ಏನು ದಾದ ಗೆ ಬೀಡಿ ಹೊತ್ತಿಸಲು ಲೈಟರ್ ಇಲ್ವಾ..😡😡" ಎಂದು ಹೇಳಿದವನೇ ಕೋಪದಿಂದ ಅಂಗಡಿಯ ಎದುರು ತೂಗುಹಾಕಿದ್ದ ಮಿಕ್ಷರ್, ಚಕ್ಕುಲಿ,ಬೋಟಿ ಇನ್ನಿತರ ತಿಂಡಿ ಪ್ಯಾಕೇಟ್ ಗಳನ್ನು ಕೈಯಿಂದ ಕಿತ್ತು ಬಿಸಾಕಿ ಚೆಲ್ಲಾ ಪಿಲ್ಲಿ ಮಾಡಿದ ಕಿಶೋರ್.
ಅಂಗಡಿಯವನು ಹೆದರಿದ. " ಅದು.. ಅದು.. ಬೆಂಕಿ ಪೆಟ್ಟಿಗೆ ಮಾತ್ರ ಇದೆ " ಅಂದ ತೊದಲುತ್ತಾ ಅಂಗಡಿಯವ.
ರಪ್ಪ ಅಂತ ಅಂಗಡಿಯವನ ಕೊರಳಪಟ್ಟಿ ಹಿಡಿದು " ಬದ್ಮಾಶ್.. ದಾದ ಗೆ ಬೀಡಿ ಸೇದಲು ಮ್ಯಾಚ್ ಬಾಕ್ಸ್ ಕೋಡ್ತಿಯಾ.. ಎಷ್ಟು ಧೈರ್ಯ ನಿಂಗೆ. ಬೇರೆ ಏನಿದೆ ಬೆಂಕಿ ಹೊತ್ತಿಸುವಂತಹದ್ದು.. ದೊಡ್ಡದು.." ಅಂದ ಕಿಶೋರ್.
"ಅದು.. ಅದು.. ದೀಪಾವಳಿ ಗೆ ಅಂತ ತಂದಿಟ್ಟ ಲಕ್ಷ್ಮಿ ಬಾಂಬ್ ಮತ್ತು ಸುರುಸುರು ಕಡ್ಡಿ(ಸುರುಸುರು ಬತ್ತಿ/ನಕ್ಷತ್ರ ಕಡ್ಡಿ) ಇದೆ .. " ಅಂದ ಅಂಗಡಿಯವ.
ಸ್ವಲ್ಪ ಹೊತ್ತು ಯೋಚಿಸಿದವನೇ " ಬಾಂಬ್ ಯಾಕೇ, ದಾದ ನ ಬಾಯಿಗೆ ನೇ ಹೊಗೆ ಹಾಕಿಸ್ಬೇಕು ಅಂತ ಇದ್ದೀಯಾ ..! ! ಹೂಂ...ಅದು ಬೇಡ. ಆ ಸುರುಸುರು ಕಡ್ಡಿಯನ್ನೇ ಹೊತ್ತಿಸಿ ಇತ್ತ ಕೊಡು... " ಅಂದ ಕಿಶೋರ್.
ಅಂಗಡಿಯವ ಸುರುಸುರು ಕಡ್ಡಿಯನ್ನು ಅನ್ನು ಬೆಂಕಿಪೆಟ್ಟಿಗೆಯಿಂದ ಹೊತ್ತಿಸಿ, ಕಿಶೋರ್ ಗೆ ನೀಡಿದ.ಮತ್ತು ತೊದಲುತ್ತಲೇ ಹೇಳಿದ..
" ನಾನೊಂದು ಕೇಳ್ಬಹುದಾ.... "
" ಹೂಂ, ಏನು ಬೇಗ ಬೊಗಳು.. ಲೇಟ್ ಆಗ್ತಾ ಇದೆ. ಇಷ್ಟೊತ್ತಿಗಾಗಲೇ ಫೈಟಿಂಗ್ start ಆಗ್ಬೇಕಾಗಿತ್ತು... " ಅಂದ ಕಿಶೋರ್.
" ಅದು... ಅದು.... ನಿಮ್ಮ ದಾದ ದೊಡ್ಡ ಡಾನ್ ಅಂತಿಯಾ... ಡಾನ್ ಆದವರು ಯಾರಾದರೂ ಬೀಡಿ ಸೆದ್ತಾರಾ.. " ಅಂದ ಅಂಗಡಿಯವ.
ಕಿಶೋರ್ ಗೆ ಅವನ ಮೇಲೆ ಭಯಂಕರ ಸಿಟ್ಟು ಬಂತು. ಅವನನ್ನೇ ಮೇಲಿನಿಂದ ಕೆಳಗೆ ನೋಡುತ್ತಾ.." ಕಿಂಡಲಾ.... ಆಯ್ತು ಮಗನೇ, ಫೈಟ್ ಎಲ್ಲಾ ಮುಗಿದ್ ಮೇಲೆ ನಿನ್ನನ್ನು ಒಂದು ಕೈ ನೋಡ್ಕೋತ್ತಿನಿ.. " ಅಂದ ಕಿಶೋರ್ ನನ್ನ ಕಡೆಗೆ ತಿರುಗಿ ಅಂಗಡಿಯಿಂದಲೇ ಉರಿಯುತ್ತಿರುವ ಸುರುಸುರು ಕಡ್ಡಿಯನ್ನು ನನ್ನ ಕಡೆಗೆ ಎಸೆದು" ದಾದ... ಕ್ಯಾಚ್ " ಅಂದ.
ಇವ ಸುರುಸುರು ಕಡ್ಡಿಯನ್ನು ಕೂಡ ಹೀಗೆ ಎಸಿತಾನೇ ಮಾರಿ ಎಂದು ಮೊದಲೇ ಅಂದಾಜಿಸಿದ್ದೆ ಹಾಗಾಗಿ ಈಗ ಭಯಕಂರ careful ಆಗಿ ಸುರುಸುರು ಕಡ್ಡಿಯನ್ನು ಕ್ಯಾಚ್ ಹಿಡಿದಿದ್ದೆ. ಇಲ್ಲದಿದ್ದರೆ ಉರಿಯುತ್ತಿದ್ದ ಸುರುಸುರು ಕಡ್ಡಿ ನನ್ನ ತಲೆಗೆ ಬಿದ್ದು ನನ್ನ ಗುಂಗುರು ಕೂದಲು ಸುಟ್ಟು ಹೋಗುತ್ತಿತ್ತು ಇಲ್ಲವೇ ನನ್ನ ಬಟ್ಟೆ ಗೆ ಬಿದ್ದು ಬಟ್ಟೆಯೇ ಸುಟ್ಟು ಹೋಗಿ ನಾನಲ್ಲಿ ಬೆಗ್ಗರ್ ತರಹ ನಿಲ್ಲಬೇಕಾಗುತ್ತಿತ್ತು.
ಕೈಗೆ ಮೊದಲೇ ಬೀಡಿ ಬಂದಾಗಿತ್ತು. ಈಗ ಉರಿಯುತ್ತಿರುವ ಸುರುಸುರು ಕಡ್ಡಿ ಕೂಡ ಬಂದು ಸೇರಿದೆ.
ಹಾಗೇ stand ಹಾಕಿ ನಿಲ್ಲಿಸಿದ್ದ ಬೈಕ್ ಮೇಲೆ ಅಡ್ಡಕ್ಕೆ ಕಾಳಿಂಗ ನೋಡುವಂತೆ ಕುಳಿತುಕೊಂಡು, ಕುಳಿತಲ್ಲಿಂದಲೇ ತಲೆತಗ್ಗಿಸಿ ನಿಧಾನವಾಗಿ ಸುರುಸುರು ಕಡ್ಡಿಯಿಂದ ಬೀಡಿಯನ್ನು ಉರಿಸಲು ಶುರುಮಾಡಿದೆ .
ಆಗಲೇ ಹಿಂದಿನಿಂದ ಬಂದಿದ್ದ ಕಿಶೋರ್ "Daaaadaaaaaa...." ಎಂದು ಬೊಬ್ಬೆ ಹಾಕಿ ಬೈಕ್ ನಿಂದ ನನ್ನನ್ನು ಜೋರಾಗಿ ದೂಡಿದ್ದು!!
ಆಗ ಅಲ್ಲಿ ಎರಡು ಘಟನೆಗಳು ಒಂದೇ ಕ್ಷಣಕ್ಕೆ ನಡೆದು ಹೋಗಿತ್ತು!
ಘಟನೆ 1.
ಕಾಳಿಂಗ ನ ಮಗ ಅವನ ಮನೆಯಿಂದಲೇ ನನ್ನ ಕಡೆಗೆ ಗುರಿ ಇಟ್ಟು ಬಲವಾಗಿ ಗಾಳಿಯಲ್ಲೇ ಮಚ್ಚು ಬೀಸಿದ್ದ..ಅದನ್ನು ನಾನು ಗಮನಿಸಿರಲಿಲ್ಲ. ಆದರೆ ಅದನ್ನು ಮೊದಲೇ ದೂರದಿಂದಲೇ ಗಮನಿಸಿದ್ದ ಕಿಶೋರ್ ನನಗೆ ಮಚ್ಚು ಬೀಳಬಾರದೆಂದು ಅಂಗಡಿಯಿಂದ ವೇಗವಾಗಿ ಓಡಿ ಬಂದು ನನ್ನನ್ನು ಬೈಕ್ ನಿಂದ ದೂಡಿ ನನ್ನನ್ನು ಸೇವ್ ಮಾಡಿದ್ದ.
ಘಟನೆ 2.
ಆ ರೀತಿ ಕಿಶೋರ್ ನನ್ನನ್ನು ದೂಡಿದ್ದುದರ ಕಾರಣದಿಂದಾಗಿ ನನ್ನ ಕೈಯಲ್ಲಿ ಉರಿಯುತ್ತಿದ್ದ ಸುರುಸುರು ಕಡ್ಡಿ ನನ್ನ ಕೈಯಿಂದ ಜಾರಿ ಗಾಳಿಯಲ್ಲಿ ಎಷ್ಟೋ ದೂರಕ್ಕೆ ಹಾರಿತ್ತು. ಮಾತ್ರವಲ್ಲ ಕಿಶೋರ್ ಎಷ್ಟು ಜೋರಾಗಿ ದೂಡಿದ್ದ ಎಂದರೆ ಗಾಳಿಯಲ್ಲಿ ಹಾರಿಕೊಂಡು ಹೋದ ಆ ಸುರುಸುರು ಕಡ್ಡಿ ಸೀದಾ ಹೋಗಿ ಕಾಳಿಂಗ ಮನೆಯ ಪಕ್ಕ ಪೇರಿಸಿಟ್ಟಿದ್ದ ಸೀಮೆಎಣ್ಣೆ ಬ್ಯಾರಲ್ ಗಳ ಮಧ್ಯೆ ಅದರಲ್ಲೂ ಬಾಯಿ ಓಪನ್ ಆಗಿದ್ದ ಬ್ಯಾರಲ್ ಒಂದರ ಒಳಗೆನೇ ಬಿತ್ತು!!ಅದರ ಸುತ್ತಲೂ ಕೇವಲ ಸೀಮೆಎಣ್ಣೆ ಮಾತ್ರವಲ್ಲ ಪೆಟ್ರೋಲ್ ಡೀಸೆಲ್ ನ ಬ್ಯಾರಲ್ ಗಳು ಕೂಡ ಇದ್ದವು!!
ಅಷ್ಟೇ...!! ಮತ್ತೆ ನಡೆದಿದ್ದೆಲ್ಲವೂ ಆಹುತಿ ಮತ್ತು ಇತಿಹಾಸ.!
ಬೆಂಕಿ ಎಲ್ಲವನ್ನೂ ಭಸ್ಮ ಮಾಡಿ ಬಿಟ್ಟಿತ್ತು! ಕುಖ್ಯಾತ ರೌಡಿ ಆಗಿದ್ದ ಕಾಳಿಂಗನ ಆ ಮನೆಯಲ್ಲಿ ಆವತ್ತು ಕೇವಲ ಸೀಮೆಎಣ್ಣೆ, ಪೆಟ್ರೋಲ್, ಡೀಸೆಲ್ ಮಾತ್ರ ವಲ್ಲ ಇತರ ಸ್ಫೋಟಕ ಸಾಮಗ್ರಿಗಳು ಕೂಡ ಇದ್ದವು ಎಂದು ಕಾಣುತ್ತೆ! ಆದುದರಿಂದಲೇ ಆ ಬೆಂಕಿ ಸ್ಫೋಟ ಕ್ಕೆ ಆ ತೀವ್ರತೆ ಇದ್ದದ್ದು!
ಬೆಂಕಿ ಗೆ ಒಂದಕ್ಕೊಂದು ಬ್ಯಾರಲ್ ಗಳು ಹೊತ್ತಿಕೊಂಡು ಕಾಳಿಂಗನ ಮನೆ, ಗೋಡಾನ್ ಮಾತ್ರವಲ್ಲ ಕ್ಷಣಮಾತ್ರದಲ್ಲಿ ಆ ಬ್ಯಾರಲ್ ಗಳಿಗೆ ಸಮೀಪದಲ್ಲೇ ನಿಂತುಕೊಂಡಿದ್ದ ಕಾಳಿಂಗ ನ ಮಗ ಹಾಗೂ ಸ್ವತಃ ಕಾಳಿಂಗನೇ ಸುಟ್ಟು ಕರಕಲಾಗಿ ಹೋಗಿದ್ದ.!!
ಈ ರೀತಿ ನಗರದ ದೊಡ್ಡ ರೌಡಿಯ ಅಧ್ಯಾಯವೊಂದು ಚರಿತ್ರೆಯ ಪುಟಗಳಲ್ಲಿ ಸೇರಿತ್ತು!!
ಅಂಗಡಿಯ ಜನರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ನಿಬ್ಬೆರಗಾಗಿ ನೋಡುತ್ತಿದ್ದರು!
ನಾನು ಕಿಶೋರ್ ಆ ಬೆಂಕಿಯ ಸ್ಫೋಟಕ್ಕೆ ಯಾವುದೋ ಒಂದು ಕಡೆ ಹೋಗಿ ಬಿದ್ದವರು ಎಷ್ಟೋ ಹೊತ್ತಿನ ನಂತರ ಸಾವರಿಸಿಕೊಂಡು, ನಿಧಾನವಾಗಿ ಎದ್ದು ಬೆಂಕಿಯ ಮಧ್ಯದಿಂದಲೇ ನಡೆದುಕೊಂಡು ಈ ಕಡೆಗೆ ಬಂದೆವು.
ನೋಡುವವರಿಗೆ ಆ ದೃಶ್ಯ ಎಷ್ಟು ಸೊಗಸಾಗಿ ಇತ್ತು ಎಂದರೆ ಅಲ್ಲಿನವರಿಗೆ ನಾನು ಆಪ್ತರಕ್ಷಕ ನಂತೆ ಕಂಡೆ. ಬೆಂಕಿಯಲ್ಲಿ ಅರಳಿದ ಹೀರೋ ತರಹ ಕಂಡೆ. ಅವರ ಕಣ್ಣುಗಳಲ್ಲಿ ಧಾರಕಾರ ನೀರು ಹರಿಯಿತು.ಎಲ್ಲರೂ ಮಂಡಿಯೂರಿ ಕುಳಿತು ಕೊಂಡಿದ್ದರು. ಅವರ ಪಾಲಿಗೆ ಹೊಸ ಒಡೆಯನ ಉಗಮ ಆಗಿತ್ತು.ಅವರ ಕಷ್ಟಗಳೆಲ್ಲಾ ದೂರವಾಗಿತ್ತು. ಬಹುಶಃ ನಾನು ಅವತ್ತು ಅವರಿಗೆ ಹಾಡಲು ಒಂದು ಚಾನ್ಸ್ ಕೊಟ್ಟಿದ್ದರೆ "ನಮ್ಮೂರ ನ್ಯಾಯ ದೇವರು... ಈ ಚಿಕ್ಕ ಯಜಮಾನರು..." ಹಾಡು ಹಾಡುತ್ತಿದ್ದರೋ ಏನೋ ಗೊತ್ತಿಲ್ಲ.
ಕಿಶೋರ್ ಅಲ್ಲಿಂದಲೇ ಬೊಬ್ಬೆ ಹಾಕಿದ... " ದಾದ ನಿಗೆ ಜೈ.... ಪಚ್ಚು ದಾದ ನಿಗೆ ಜೈ..."
ಎಲ್ಲರೂ ಜೈ ಎಂದು ಖುಷಿಯಿಂದ ಹರ್ಷೋದ್ಗಾರ ಮಾಡಿದರು. ಅವರ ಜೈಕಾರ ಮುಗಿಲು ಮುಟ್ಟಿತು.ಅದರಲ್ಲೂ ನಮಗೆ ಸುರುಸುರು ಕಡ್ಡಿ ಹಾಗೂ ಬೀಡಿ ಕೊಟ್ಟಿದ್ದ ಆ ಬಾಂಡ್ಲಿ ತಲೆಯ ಅಂಗಡಿಯವ ಮಾತ್ರ ಜೋರಾಗಿ ಗಾಳಿಯಲ್ಲಿ ಹಾರುತ್ತ ಜಿಗಿಯುತ್ತಾ 'ಪಚ್ಚು ದಾದ ನಿಗೆ ಜೈ.. ' ಎಂದು ಬೊಬ್ಬೆ ಹಾಕುತ್ತಿದ್ದ. ಅವನನ್ನು ಅನುಸರಿಸಿ ಉಳಿದವರು ಕೂಡ ಜೋರಾಗಿಯೇ ಜೈ ಎಂದು ಹೇಳುತ್ತಿದ್ದರು. ನನಗೆ ಒಂಥರಾ ಗಾಳಿಯಲ್ಲಿ ತೇಲಿದ ಅನುಭವ.
ಕಿಶೋರ್ ಜೋರಾಗಿ ವಿಷಲ್ ಹೊಡೆದ. ಅಲ್ಲಿ ಅಂಗಡಿ ಹಿಂದಿನಿಂದ ಸೈಡ್ ಅಲ್ಲಿ ಅಲ್ಲಿಯತನಕ ಅಡಗಿಕೊಂಡು ನಿಂತಿದ್ದ ನಾಸಿಕ್ ಬ್ಯಾಂಡ್, ಡೋಲು, ಚಂಡೆ ಯವರು ಎಲ್ಲಾ ಬಂದು ಉತ್ಸಾಹ ದಿಂದ ಜೋರಾಗಿ ಬಡಿಯಲು ಶುರುಮಾಡಿದರು. ಕೀಲು, ಕುದುರೆ, ನವಿಲು, ಗೊಂಬೆ ಮೇಳದ ಗೊಂಬೆಗಳು ಎಲ್ಲಾ ಸಾಲಾಗಿ ಬಂದು ಬಡಿತಕ್ಕೆ, ತಾಳಕ್ಕೆ ತಕ್ಕಂತೆ ಕುಣಿಯಲು ಹೆಜ್ಜೆ ಹಾಕಲು ಶುರು ಮಾಡಿದರು.
"ಇದೆಲ್ಲಾ ಹೇಗೋ... " ಅಂತ ಹುಬ್ಬೇರಿಸಿ ಕಿಶೋರ್ ಗೆ ಕೇಳಿದೆ.
" ದಾದ.. ವಿಕ್ಟರಿ ನಮ್ಮದೇ ಅಂತ ಮೊದಲೇ ಗೊತ್ತಿತ್ತು. ಅದಕ್ಕೆ ಮೊದಲೇ ಇವರನ್ನು ಫಿಕ್ಸ್ ಮಾಡಿ ಇಲ್ಲಿಗೆ ಬರಲು ಹೇಳಿದ್ದೆ. ಕೊನೆಗೆ ಬಾಡಿಗೆ ಎಲ್ಲಾ ದಾದನ ಕೈಯಿಂದಲೇ ತೆಗೆಸಿಕೊಡ್ತೀನಿ ಅಂತ ಕೂಡ ಅವರಿಗೆ ಮಾತು ಕೊಟ್ಟಿದ್ದೆ. ಆದ್ದರಿಂದ ನೀನೇ ಅವರಿಗೆ ಹಣ ಕೊಡ್ಬೇಕು... " ಅಂದ ನಗುತ್ತಾ.
ಇಬ್ಬರೂ ಒಟ್ಟಿಗೆ ನಗುತ್ತಾ ಕೈ ಕೈ ಹಿಡಿದುಕೊಂಡು ಮುಂದೆ ಮುಂದೆ ನಡೆದುಕೊಂಡು ಹೋಗುತ್ತಿದ್ದರೆ, ಕಿಶೋರ್ arrange ಮಾಡಿದ್ದ ಮೆರವಣಿಗೆ ಯ ತಂಡ ಕುಣಿದು ಕುಪ್ಪಳಿಸಿ ನಮ್ಮ ಹಿಂದೆಯೇ ಬರುತ್ತಿತ್ತು.
ಮರುದಿನವೇ ಪೇಪರ್ ನಲ್ಲಿ ಫ್ರಂಟ್ ಪೇಜಿನಲ್ಲಿ ದಪ್ಪ ಅಕ್ಷರಗಳಲ್ಲಿ ನ್ಯೂಸ್ ಬಂದಿತ್ತು.
" ಕಾಳಿಂಗ ನ ಮರ್ಧನ.. ಉದಯಿಸಿದ ದಾದ! "
ನನ್ನ ಗ್ಯಾಂಗ್ ಹುಡುಗರಿಗೆ ಇದನ್ನು ನಂಬಲು ಸಾಧ್ಯವೇ ಆಗಲಿಲ್ಲ. ಒಬ್ಬನೇ ಹೋಗಿ ಮಾಡಿದ ಸಾಧನೆಯನ್ನು ಕೊಂಡಾಡಿದರು. ಭೂಗತ ಜಗತ್ತು ಒಮ್ಮೆ ಕತ್ತು ತಿರುಗಿಸಿ ನನ್ನ ಕಡೆಗೆ ನೋಡಿತ್ತು. ಇಡೀ ನಗರವೇ ನನ್ನ ಕೈಯಲ್ಲಿತ್ತು. ಈ ರೀತಿಯಾಗಿ ನನ್ನ ರೌಡಿಸಂ ನ ದಿನಗಳು ಶುರುವಾಗಿದ್ದು. ಆದರೆ ಶುರುವಾದ ದಿನವೇ ಕೊನೆಯಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ! . ಏಕೆಂದರೆ ವಿಧಿ ಲಿಖಿತವೇ ಬೇರೆ ಇತ್ತು. ಅದು ನನಗೆ ಒಂದೆರಡು ದಿನ ಬಿಟ್ಟು ಗೊತ್ತಾಯಿತು!
ಆ ದಿನ ಕಾಳಿಂಗನ ಮನೆ, ಕಾಳಿಂಗನ ಮಗ,ಕಾಳಿಂಗ ಮಾತ್ರ ಭಸ್ಮ ಆಗಿರಲಿಲ್ಲ.. ಕಾಳಿಂಗನ ಮನೆಗೇ ಹೊಂದಿಕೊಂಡಿದ್ದ ಪಕ್ಕದಲ್ಲಿಯೇ ಇದ್ದ ಅಸಂಖ್ಯಾತ ಮುಗ್ಧ ಅಮಾಯಕರ ಮನೆಗಳು ಕೂಡ ಸುಟ್ಟು ಭಸ್ಮ ವಾಗಿತ್ತು. ಕೆಲವರು ಕೈಕಾಲು ಕಳೆದು ಕೊಂಡಿದ್ದರು. ಅಪಾರವಾದ ಆಸ್ತಿ ಪಾಸ್ತಿ ನಾಶವಾಗಿತ್ತು. ಯಾಕೆಂದರೆ ಸ್ಫೋಟದ ತೀವ್ರತೆ ಆ ರೀತಿ ಇತ್ತು.ಹೌದು ಅದೊಂದು ರಣಬೀಕರ ದೃಶ್ಯ!
ತೊಂದರೆಗೊಳಗಾದ ಆ ಏರಿಯಾದ ಎಲ್ಲಾ ಜನರು ಸೇರಿ ಕೋರ್ಟ್ ಗೆ ಹೋಗಿದ್ದರು. ನ್ಯಾಯ ಕೊಡಿಸಿ.. ಪರಿಹಾರ ಕೊಡಿಸಿ.. ಇದಕ್ಕೆ ಕಾರಣರಾದವರನ್ನು ಶಿಕ್ಷಿಸಿ ಎಂದು!
ಘಟನೆ ನಡೆದ ಎರಡನೇ ದಿನವೇ ಪೋಲಿಸರು ಬಂದು ನನಗೆ ಹಿಗ್ಗಾ ಮುಗ್ಗ ಬಡಿದು, ನನ್ನನ್ನು ಹಿಡಿದು ಕೊಂಡು ಹೋಗಿದ್ದರು!!
ವಾದ ಪ್ರತಿವಾದ ಗಳನ್ನು ಆಲಿಸಿದ ಕೋರ್ಟ್ ನನಗೆ ಜೈಲು ಶಿಕ್ಷೆ ವಿಧಿಸಿತ್ತು!!!
ಸಿಗ್ನಲ್ ಗ್ರೀನ್ ಲೈಟ್ ಗೆ ಬಿತ್ತು.ಸರ್ಕಲ್ ನಲ್ಲಿ ನಿಂತಿದ್ದ ಪೋಲಿಸ್ ವ್ಯಾನ್ ನಿಧಾನವಾಗಿ ಮುಂದೆ ಚಲಿಸಲು ಶುರು ಮಾಡಿತು. ನನ್ನ ಆಲೋಚನೆಗಳಿಗೆ ಬ್ರೇಕ್ ಬಿತ್ತು.ಫ್ಲ್ಯಾಶ್ ಬ್ಯಾಕ್ ನಿಂದ ವಾಪಸ್ ವರ್ತಮಾನದ ವಾಸ್ತವ ಜಗತ್ತಿಗೆ ಬಂದೆ.
ಪೋಲೀಸ್ ವ್ಯಾನ್ ಮುಂದೆ ಮುಂದೆ ಸಾಗುತ್ತಿತ್ತು.
ಭಾಷಾ ಭಾಯ್ ಹೇಳಿದ್ದ ಒಂದು ಮಾತು ನೆನಪಾಯಿತು "ನೀನು ತುಂಬಾನೇ ಬೆಳೆತೀಯಾ.. ಆದರೆ ಎಷ್ಟು ಬೆಳೆತೀಯಾ ಅನ್ನುವ ಅಂದಾಜು ನಿನಗೂ ಇಲ್ಲ. ನನಗೂ ಇಲ್ಲ.."
ಕಣ್ಣಿನಿಂದ ಒಂದು ತೊಟ್ಟು ಹನಿ ಕೆಳಗೆ ಬಿತ್ತು. ಬಹುಶಃ ನಾನು ಈ ರೀತಿ ಬೆಳಿತೀನೀ ಅನ್ನುವ ಅಂದಾಜು ನನಗೂ ಇರಲಿಲ್ಲ! ಭಾಷಾ ಬಾಯಿಗೂ ಇರಲಿಲ್ಲ!
ದೇವರಂತಹ ಮನುಷ್ಯ ಭಾಷಾ ಭಾಯ್, ಒಳ್ಳೆಯ ಉದ್ದೇಶ ದಿಂದ, ನಂಬಿಕೆಯಿಂದ ಒಳ್ಳೆಯ ರೀತಿಯಲ್ಲಿಯೇ ನಾನು ತುಂಬಾ ಬೆಳಿತೀನೀ ಅಂತ ಹೇಳಿದ್ದರು. ಆದರೆ ನಾನು ಅವರ ಮಾತನ್ನು ಉಳಿಸಿಕೊಳ್ಳದೇ ಅವರು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅವರಿಗೆ ಅಪಮಾನ ಆಗುವ ಕೆಲಸ ಮಾಡಿದೆ.! ದೇವರು ಕ್ಷಮಿಸಿದರೂ ನಾನು ಮಾಡಿದ್ದ ಕೆಲಸಕ್ಕೆ ಭಾಷಾ ಭಾಯ್ ನನ್ನನ್ನು ಎಂದಿಗೂ ಕ್ಷಮಿಸಲಾರ! ಪುನಃ ಒಂದು ಹನಿ ಕಣ್ಣೀರು, ಕಣ್ಣಿನಿಂದ ಜಾರಿತ್ತು.!
ಮುಂದೆ ಭೂಗತ ಲೋಕದ ಚರಿತ್ರೆಯಲ್ಲಿ ನನ್ನ ರೌಡಿಸಂ ನ ದಿನಗಳು ದಾಖಲಾಗಬಹುದು. ಆದರೆ ನನ್ನ ಕಥೆ ಒದುವ ಎಲ್ಲರಿಗೂ ನನ್ನ ಒಂದೇ ಒಂದು ಮನವಿ ಏನೆಂದರೆ ಯಾರೂ ಕೂಡ ದಯವಿಟ್ಟು ರೌಡಿಸಂ ಗೆ ಬರಬೇಡಿ. ಅದೂ ನನ್ನಂತೆ.. ಅದರಲ್ಲೂ ಈ ರೀತಿಯ ರೌಡಿ ಮಾತ್ರ ಯಾರೂ ಆಗಲೇಬೇಡಿ..😢
ಹೂಂ.. ಅದು ಹೌದು ಜೈಲಿನಲ್ಲಿ ಮುದ್ದೆ ಊಟ ಕೊಡ್ತಾರೆ ಅಂತ ಕೇಳಿದ್ದೆ. ಆದರೆ ನಾನು ಮಂಗಳೂರಿನವ. ನನಗೂ ಮುದ್ದೆ ಗೂ ಅಷ್ಟಾಗಿ ಆಗ್ಬರಲ್ಲಾ, ಡೈಲಿ ಕೋರಿರೊಟ್ಟಿ (ಕೋಳಿರೊಟ್ಟಿ) ಕೊಟ್ಟರೆ ಚೆನ್ನಾಗಿರ್ತಿತ್ತು. ನೋಡುವ ಒಳಗೆ ಹೋದ ಮೇಲೆಒಂದು request ಮಾಡಿ ನೋಡುವ😌☺
ಕೊನೆಗೂ ಜೈಲು ಬಂತು. ಪೋಲಿಸ್ ವ್ಯಾನ್ ಈಗ ಮೈನ್ ರೋಡ್ ನಿಂದ ನಿಧಾನವಾಗಿ ಜೈಲು ಆವರಣದ ಒಳಗೆ ಹೋಗಲು ಶುರುಮಾಡಿತು. . ಆಗಲೂ ನನ್ನ ಮನಸ್ಸಿನಲ್ಲಿ ಇದ್ದದ್ದು ಒಂದೇ.. ಆ ಬಡ್ಡಿಮಗ ಕಿಶೋರ್ ಒಮ್ಮೆ ಕೈಗೆ ಸಿಗ್ಬೇಕಿತ್ತು...!😡😡
ಇಷ್ಟಕ್ಕೆಲ್ಲಾ ನೇರ ಕಾರಣ ಆ ಕಿಶೋರ್ 😡.ಆರಾಮ್ ಸೇ ಎಷ್ಟೋ ವರ್ಷಗಳಿಂದ ನನ್ನಷ್ಟಕ್ಕೆ ನಾನು ತೋಟದಲ್ಲಿ ಬಲ್ಲೆ ಕಡಿಯುತ್ತಿದ್ದೆ. ಅವನ ಒಟ್ರಾಸಿ(ಸಿಕ್ಕಾಪಟ್ಟೆ) ಪ್ರೋತ್ಸಾಹದ ಕಾರಣದಿಂದಾಗಿಯೇ ನಾನು ಈಗ ಜೈಲಿನಲ್ಲಿ ಕಂಬಿಯ ಹಿಂದೆ ನಿಲ್ಲುವ ಪರಿಸ್ಥಿತಿ ಬಂದಿದೆ😭😢. ಅವನನ್ನು ಮಾತ್ರ ಜೈಲಿನಿಂದ ಬಂದ ಮೇಲೆ ನಾನು ಅಟ್ಟಾಡಿಸಿಕೊಂಡು ಹೊಡಿದೇ ಹೊಡಿಯುತ್ತೆನೆ. 😡😡
ನಿಜಹೇಳಬೇಕೆಂದರೆ ನಾನು ಆ ದಿನ ಏನೂ ಮಾಡಿರಲಿಲ್ಲ,ಅತಿಯಾದ ಜೋಶ್ ನಿಂದ ಎಲ್ಲವನ್ನೂ ಮಾಡಿದ್ದು ಆ ಕಿಶೋರನೇ..😭
ಪಾಪಿ ಕಿಶೋರ... ನನ್ನ ಜೀವನವನ್ನೇ ಬರ್ಬಾದ್ ಮಾಡಿಬಿಟ್ಟ..😭😢 ಸತ್ಯ ಹೇಳ್ತೇನೆ ನಾನು ಅಮಾಯಕ... ನಾನು ಸೀರಿಯಸ್ ರೌಡಿ ಅಲ್ಲವೇ ಅಲ್ಲ .. 😭😭
" #ನಾನು_ಮತ್ತು_ನನ್ನ_ರೌಡಿಸಂ_ದಿನಗಳು!... "
(ಒಂದು ಕಾಲ್ಪನಿಕ ಕಥೆ)
#ಶುಭಂ
..................................................................
story by - AB Pacchu,
Moodbidri
Mangalore(D.K)
( Pratilipi - AB Pacchu)

Comments
Post a Comment