ಸಂದರ್ಶನದ ಸಮೋಸ

 

ಕೆಲಸ ಇಲ್ಲದವರಿಗೆ ಕೆಲಸ ಹುಡುಕೊದೇ ಒಂದು ದೊಡ್ಡ ಕೆಲಸ ಆಗಿ ಬಿಟ್ಟರೆ...


ಆ experience ಗಳು ಹೇಗೆ ಇರುತ್ತದೆ ಅನ್ನುವುದನ್ನು ತಿಳಿದುಕೊಳ್ಳಬೇಕಾದರೆ,ನೀವು ಮೊದಲು ಬಂದು ನನ್ನೆದುರು ಕುಳಿತುಕೊಂಡು  ನನ್ನನ್ನೇ interview ಮಾಡಬೇಕು ಎಂಬುವುದು ನನ್ನ ಅಭಿಪ್ರಾಯ. 


ಆಹಾ..ಅಂತಹ,ಅಧ್ಭುತ,ಅಮೋಘ,ನಿರಾಶಜನಕ,ಕರುಣಾಜನಕ,ರಕ್ತಕಣ್ಣೀರಿನ ಕಹಾನಿ ನನ್ನದು... Interview ಗೆ ಸಂಬಂಧಪಟ್ಟಂತೆ. 


ಕಾಲೇಜು ಮುಗಿದು ಹೆಚ್ಚು ಕಡಿಮೆ ಒಂದೂವರೆ ವರ್ಷದ ಮೇಲೆ ಆಯಿತು.ಸರಿಯಾಗಿ ಲೆಕ್ಕ ಹಾಕಿದರೆ ಎರಡು ವರ್ಷ ಕೂಡ ಜಾಸ್ತಿ ಆಗ್ತದಾ ಅಂತ. ಆದ್ರೆ ಯಾರಾದರೂ ಕೇಳಿದರೆ.. ಜಸ್ಟ್ ಈ ವರ್ಷ ಮುಗಿದದ್ದು ಅಂತ ಹೇಳೋದು ನಾನು. 


ನನ್ನ ಜ್ಯೂನಿಯರ್ ಗಳಿಗೆ ಕೂಡ ಕೆಲಸ  ಸಿಕ್ಕಿ ಅವರು ಸ್ಟೈಲ್ ಆಗಿ ನನ್ನೆದುರು ತಲೆಎತ್ತಿಕೊಂಡು, ಮೀಸೆ ತಿರುವಿಕೊಂಡು ಒಡಾಡಿಕೊಂಡಿರುವುದನ್ನು ಸಹ ನೋಡಿದ್ದೇನೆ.

ಕೆಲವರೆಲ್ಲ ಬೇಕಂತಲೇ ತುಂಬಾ  ಓವರ್ ಆಗಿ ಮಾಡ್ತಾರೆ. ಅದೆಲ್ಲ ಬಿಡಿ, ಏನೂ ಮಾಡ್ಲಿಕ್ಕೆ ಆಗಲ್ಲ,ನಮ್ಮ ಗ್ರಹಚಾರ ದೋಷ ವಕ್ರ ವಕ್ರವಾಗಿ ಇದ್ದಾಗ ಇದನ್ನೆಲ್ಲಾ ಅವುಡುಗಚ್ಚಿಕೊಂಡು ನೋಡಿ ಸಹಿಸಿಕೊಳ್ಳಲೇಬೇಕು ನಾವು. 


ಕೆಲವು ಕ್ಲಾಸ್ ಮೇಟ್ ಹುಡುಗಿಯರಿಗೆ ಕಾಲೇಜು ಮುಗಿದು ಕಾಲೇಜು ಮೆಟ್ಟಿಲು ಇಳಿದ ಕೂಡಲೇ ಮದುವೆ ಕೂಡ ಆಗಿ ಹೋಯಿತು,ಮಕ್ಕಳು ಕೂಡ ಆಯಿತು. ಎಷ್ಟು urgent ಮರ್ರೆ ಇವರಿಗೆಲ್ಲಾ..ಅಂತ ಒಮ್ಮೊಮ್ಮೆ ಅನ್ನಿಸುತ್ತೆ.. ಆದರೆ ಹೇಳಲ್ಲ ಅಷ್ಟೇ.


ಇರಲಿ ಇರಲಿ... ಅವರಿಗೆ ಮದುವೆಯಾದರೂ ಆಗಲಿ,ಅಥವಾ ನಾಲ್ಕು ನಾಲ್ಕು ಮಕ್ಕಳು ಕೂಡ ಬೇಕಾದರೂ ಆಗಲಿ.. ನನಗೆ ಮಾತ್ರ ಕನಿಷ್ಟ ಪಕ್ಷ  ಹೇಳಲಿಕ್ಕೆ ಒಂದು ಆದರೂ ಕೆಲಸ,ಆದಷ್ಟು ಬೇಗ ಆಗಲಿ... ಇದೇ ನನ್ನ ಸದ್ಯದ ಭಗೀರಥ ಪ್ರಯತ್ನ.


ಆಮೇಲೆ ಬೇಕಾದರೆ ನಾವು ಕೂಡ ಒಂದೆರಡು ಮದುವೆ.. Sorry, sorry.. ಮದುವೆ ಒಂದೇ ಇರಲಿ, ಮಕ್ಕಳು ಮನೆ ತುಂಬಾ ಇರಲಿ..ಎನ್ನುವ ಪ್ರಯತ್ನಕ್ಕೆ ಧೈರ್ಯವಾಗಿ ಕೈ ಹಾಕುವ  ಅಂತ ನನ್ನ ಅಂತರಾತ್ಮ ಮತ್ತು ಅದರೊಳಗಿನ ಪರಮಾತ್ಮ ಪದೇ ಪದೇ ಹೇಳುತ್ತಲೇ ಇರುತ್ತಾನೆ.


Yessss.. ಅದಕ್ಕಾಗಿ ನಾನು interview ಗೆ ಹೋಗುವುದನ್ನು ಇನ್ನೂ  ನಿಲ್ಲಿಸಿಯೇ ಇಲ್ಲ.


ಡೈಲಿ ಹೇಗೆ ಮನೆಗೆ ಹೇಗೆ ಪೇಪರ್ ನವನು ಪೇಪರ್ ಎಸೆದು ಹೋಗುತ್ತಾನೋ ಹಾಗೇ ನಾನು.. ದಿನಕ್ಕೊಂದು ಕಂಪನಿಗೆ resume ಎಸೆದು ಬರ್ತಾನೇ  ಇರ್ತೇನೆ.


ಆದರೆ No use, ಇನ್ನೂ ಕೆಲಸ ಸಿಕ್ಕಿಲ್ಲ..ಬಹುಶಃ ನಾನು ಬಂದ ನಂತರ  ಕಂಪೆನಿಯವರು ಕೂಡ  ನನ್ನ resume ಅನ್ನು ಕಸದ ಬುಟ್ಟಿಗೆ ಎಸೆಯುತ್ತಾರೋ ಏನೋ..ಎಸೆಯುತ್ತಾರೆ ಏನು, ಎಸೆದೇ ಎಸೆಯುತ್ತಾರೆ ಅನ್ನುವ ನಂಬಿಕೆ ನನಗೆನೇ ಇದೆ. 


ಆದರೂ ನಾನು ಕೆಲಸಕ್ಕಾಗಿ ಪ್ರಯತ್ನ ಪಡುವುದನ್ನು ನಿಲ್ಲಿಸಿಲ್ಲ.


ಎಷ್ಟೊಂದು resume ಪ್ರಿಂಟ್ ಹೊಡಿಸಿದ್ದೇನೆ, xerox ತೆಗೆದಿಟ್ಟುಕೊಂಡಿದ್ದೇನೆ ಅಂದರೆ,ದಿನಾಲೂ ಒಂದೊಂದು interview ಗೆ ಅಂತ ಹೋದರೂ ಇನ್ನೂ ನಾಲ್ಕೈದು ತಿಂಗಳಿಗೆ ಆಗುವಷ್ಟು resume ಉಂಟು ನನ್ನ ಬಳಿ. 


ಮೊದಲು ಅಷ್ಟೂ resume ಖಾಲಿ ಆಗುವಷ್ಟು interview ಕೊಡ್ಬೇಕು. ನಂತರ ಖಾಲಿ ಆದ ಮೇಲೆ ಇನ್ನಷ್ಟು resume ಪ್ರಿಂಟ್ ಹೊಡಿಸ್ಬೇಕು.


ಕೈ ಕೆಸರಾದರೆ ಬಾಯಿ ಮೊಸರು ಎನ್ನುವುದನ್ನು ನೀವು ಕೇಳಲಿಲ್ಲವೇ.. ಹಾಗಾಗಿ ನಿಲ್ಲದ ಪ್ರಯತ್ನ ನನ್ನದು.ಅಲಾ..ಕೈ ಕೆಸರಾದರೆ ಬಾಯಿ ಮೊಸರು ಕೇಳ್ಲಿಕ್ಕೆ,ಹೇಳ್ಲಿಕ್ಕೆ ಏನೋ ಚೆನ್ನಾಗಿಯೇ ಇದೆ. ಆದರೆ ಕಷ್ಟ ಪಟ್ಟ ಮೇಲೆ,ಈ ಬಾಯಿ ಮೊಸರು ಮಾಡುವುದು ಯಾಕೆ ಅಂತ..? ನೀವೇ ಹೇಳಿ ಮೊಸರು ಹುಳಿ ಅಲ್ವಾ.. ಲಸ್ಸಿ ಆದ್ರೆ ಆದರೆ  ಸ್ವೀಟ್ ಇರುತ್ತೆ.. ಅಷ್ಟು ಕಷ್ಟ ಪಟ್ಟುಕೊಂಡು ಮೈ ಕೈ ಕೆಸರು ಮಾಡಿಕೊಂಡು ಬಾಯಿ ಹುಳಿ ಮಾಡುವುದು ಅಂದರೆ.. ನನಗೆ ಏನೋ  ಸರಿ ಕಾಣಲ್ಲಪ್ಪ ಇದು.ಇರಲಿ ಇರಲಿ.. ನನಗೆ ಕೆಲಸ ಸಿಕ್ಕಿದರೆ ಮಾತ್ರ ಉಂಟಲ್ಲಾ... ಏನೇನೋ ಸ್ವೀಟ್ಸ್ ಬಾಯಿಗೆ ಸುರಿದು ಬಾಯಿ ಸಿಹಿ ಮಾಡೋದೆಯಾ.


ಮೊದಲು ನಾನು ಕೆಲಸ ಗಿಟ್ಟಿಸಿಕೊಂಡು ಬಾಯಿ ಮುಚ್ಚಿಸಬೇಕಾಗಿರುವುದು... ನಮ್ಮ ಪ್ರೂಟ್ಸ್ ಅಂಗಡಿ ಪುರ್ಸಣ್ಣನದ್ದು, ವನಜ ಆಂಟಿಯ ಮಗಳು ನನ್ನ ಪ್ರೈಮರಿ ಕ್ಲಾಸ್ ಮೇಟ್ ಇಂಚು(ಇಂಚರ)ನದ್ದು, ವಿಪರೀತ ಕಿರಿಕಿರಿ ಅನ್ನಿಸೋ ನೆರೆಕರೆ(ನೆರೆಹೊರೆ)ಯವರದ್ದು..ಹಾಗೂ ಅನುಕಂಪದ ಹೊಳೆ,ಕರುಣೆಯ ಸುನಾಮಿ ಹರಿಸಿ.. ಇನ್ನೂ ಕೆಲಸ ಆಗ್ಲಿಲ್ವಾ.. ಇನ್ನೂ ಕೆಲಸ ಆಗ್ಲಿಲ್ವಾ.. ಅಂತ ಜೀವ ಹಿಂಡುವ ಜೀವನದ ಸಂಬಂಧಿಕರದ್ದು... ನಾನು ಮೊದಲು ಬಾಯಿ ಮುಚ್ಚಿಸಬೇಕಾಗಿದೆ.


ಊರ ಹೆಂಗಸರ ಬಗ್ಗೆ ನಾನು ಜಾಸ್ತಿ ಹೇಳಲ್ಲ.ಭಗವಂತನಿಗೂ ಅವರ ಬಾಯಿ ಮುಚ್ಚಿಸಲು ಕಷ್ಟವೇ ಬಿಡಿ. ಅವರದ್ದು ಅಂತು ಯಾವಾಗಲೂ ಮುಗಿಲು ಮುಟ್ಟಿದ ಆಕ್ರಂದನವೇ... ನಮ್ಮ ಶರತ್ ಗೆ ಕೆಲಸ ಆಯಿತು... ಕಾವ್ಯಳಿಗೆ ಕೆಲಸ ಆಯಿತು...ಸುರೇಶನಿಗೆ ಆಯಿತು... ರಮೇಶನಿಗೆ ಆಯಿತು.. ಅಯ್ಯೋ ನಿಂಗೆ ಇನ್ನೂ ಕೆಲಸ ಆಗ್ಲೇ ಇಲ್ವಾ....ಅಂತ ಅವರದ್ದೊಂದು ಗೋಳು ನೋಡಿ ನಾನು  ಯಾಕಾಗಿ ಇನ್ನೂ  ಬದುಕಿದ್ದೆನೋ ಅಂತ ನನಗೆಯೇ ಅನ್ನಿಸಿದ್ದಿದೆ. 


ಎಂದಾದರೂ ಒಂದು ದಿನ ನನಗೂ ಕೆಲಸ ಸಿಕ್ಕೆ ಸಿಗುತ್ತದೆ,ನಾನೂ  ಏನಾದರೂ ಒಂದು ಲೈಫಿನಲ್ಲಿ ಸಾಧಿಸಿಯೇ ಸಾಧಿಸುತ್ತೇನೆ...ನನಗೆ ಕೆಲಸವಿಲ್ಲ ಎಂದು ಮಕ್ಕರ್ ಮಾಡಿದ ಈ  ಭವ್ಯ ಸಮಾಜದ ಬಾಯಿ ಮುಚ್ಚಿಸಿಯೇ ಮುಚ್ಚಿಸುತ್ತೇನೆ.. ಎಂದು ನಾನು  ಇನ್ನೂ ಕೂಡ  ಸ್ಟ್ರಾಂಗ್ ಆಗಿ ನಂಬಿದ್ದೇನೆ.ಹಾಗೂ ಆ ನಂಬಿಕೆಯಲ್ಲಿಯೇ ಜೀವಿಸುತ್ತಿದ್ದೇನೆ ಇನ್ನೂ. 


ಆದರೂ ಏನು ಸಾಧಿಸಬೇಕು ಎಂದು ಮಾತ್ರ ನನಗೆ ನಿಜವಾಗಿಯೂ ಗೊತ್ತಿಲ್ಲ..


ಏನಾದರರೊಂದು ಸಾಧಿಸ್ಬೇಕು ಅಷ್ಟೇ..


Yes.. ನನಗೆ ಗೊತ್ತಿರುವುದು ಅಷ್ಟೇ.


ಈಗ ಸದ್ಯಕ್ಕೆ ನಾನು,ಇನ್ನೊಂದು interview ಗಾಗಿ interview ರೂಮಿನ ಹೊರಗಡೆ ಕುಳಿತುಕೊಂಡಿದ್ದೇನೆ. 


ಕೈ ಬೆರಳು, ಕಾಲು ಬೆರಳು ಎಲ್ಲಾ ಎರಡೆರಡು ಸಲ ಲೆಕ್ಕ ಮಾಡಿದರೂ ಕೂಡ, ಇದು mostly ನನ್ನ ನಲ್ವತ್ತೈದನೆಯ interview ಇರಬೇಕು ಅಂತ ಅನ್ನಿಸುತ್ತೆ... ಅಮೋಘ ಅರ್ಧ ಶತಕದತ್ತ ದಾಪುಗಾಲು. ಕ್ರಿಕೆಟ್ ನಲ್ಲಿ ಆದರೆ ಪ್ರೇಕ್ಷಕರು ಎದ್ದು ನಿಂತು ಫಿಫ್ಟಿ ಆದಾಗ ಕರತಾಡನ ಮಾಡುತ್ತಾರೆ.. ಆದರೆ ಈ ಸಮಾಜ ನನ್ನ ಒಂದೊಂದೇ interview ಗಳ ಸಂಖ್ಯೆ ಹೆಚ್ಚಾದಂತೆ ನನ್ನನ್ನು ಗೇಲಿ ಮಾಡುತ್ತಿದೆ. ಇರಲಿ ಇರಲಿ... ಎಲ್ಲದಕ್ಕೂ ಸಮಯ ಅಂತ ಬರಬೇಕು..ಅಲ್ಲಿಯವರೆಗೆ ಸುಮ್ಮನೆ ಸಹಿಸಿಕೊಳ್ಳಬೇಕು ಇದನ್ನೆಲ್ಲ. 


ಒಬ್ಬೊಬ್ಬರೇ interview ರೂಮ್ ಗೆ ಹೋಗಿ interview ಕೊಟ್ಟು ಬರ್ತಾ ಇದ್ದಾರೆ.


ಕೊನೆಗೆ ನನ್ನ ಸರದಿ ಬಂತು. ಎಲ್ಲರಿಗಿಂತ ಕೊನೆಯಲ್ಲಿ ಇದ್ದವನು ನಾನೇ. 


ನಾನು ಕೂಡ ಕೂಲ್ & ಕಾಮ್ ಆಗಿ ಒಳಗೆ ಹೋದೆ.


Interview ಅಂದ್ರೆ ನನಗೇನು ಬೇರೆಯವರ ರೀತಿ ಭಯ ಇಲ್ಲ. ಇಂತಹ ಎಷ್ಟು interview ಗಳನ್ನು ನೋಡಿಲ್ಲ ನಾನು.ಎಲ್ಲವನ್ನೂ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನಾ ಮಾಡಿ ಬಿಸಾಕಿ ಬಂದಿದ್ದೀನಿ. ಆದರೂ ಕೆಲಸ ಸಿಕ್ಕಿಲ್ಲ. ಅವರೇ ನನ್ನ resume ಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಅಷ್ಟೇ. 


ಹೋದ ಕೂಡಲೇ ಸೀಟಿನಲ್ಲಿ ಕುಳಿತುಕೊಳ್ಳಲು ಹೇಳಿದರು.


ನಾನು ಕುಳಿತುಕೊಂಡೆ.


Technical round ಮುಗಿದಾಗಿತ್ತು, ಇದು ಈಗ HR ರೌಂಡ್. ಅಂದರೆ ಅಧಿಕಪ್ರಸಂಗಿಗಳು,ಅಧಿಕಪ್ರಸಂಗದ questions ಕೇಳುವವರ ರೌಂಡ್. 


Interview ಮಾಡುವವರು ಇಬ್ಬರು ಇದ್ದರು.

ಇಬ್ಬರೂ ಧಡೂತಿಗಳೇ. 


ಹೆಸರು ಗೊತ್ತಿಲ್ಲ,ಅವರ ಹೆಸರುಗಳೆಲ್ಲ ಯಾರಿಗೆ ಗೊತ್ತಿರುತ್ತೇ.


ಬೇಕಾದರೆ ಅವರ ಬಗ್ಗೆ ಹೇಳಲು ಸುಲಭ ಆಗಲು ಒಬ್ಬನಿಗೆ Mister A ಅಂತ, ಇನ್ನೊಬ್ಬನಿಗೆ Mister B ಅಂತ ಹೆಸರಿಟ್ಟು ಬಿಡೋಣ. ಏನಿಲ್ಲ ಇಬ್ಬರನ್ನೂ differentiate ಮಾಡ್ಲಿಕ್ಕೆ easy ಆಗ್ತದೆ ಅಂತ ಅಷ್ಟೇ. 


ಅವರಿಬ್ಬರನ್ನು ನೋಡಿದರೆನೇ ಗೊತ್ತಾಗುತ್ತೆ, ಅವರು ಬೇರೆ state ನವರು, ನಮ್ಮವರು ಅಲ್ಲ ಎಂದು.


Interview ಶುರುವಾಯಿತು.


ವಾಸ್ತುಪ್ರಕಾರವೇ ಶುರುವಾಯಿತು...ಅದುವೇ ಮಾಮೂಲಿ Self   Introduction ಮೂಲಕ.


Mr.A ಅಂದ - Tell me about yourself.


ಈ ಪ್ರಶ್ನೆಗೆ ಉತ್ತರಿಸಿ ಉತ್ತರಿಸಿ ಲೈಫ್ ನಲ್ಲಿ ಬೋರ್ ಬಂದು ಬಿಟ್ಟಿದ್ದೆ ನನಗೆ. 


ಆದರೂ ಈ ಪ್ರಶ್ನೆಗೆ ನನ್ನಲ್ಲಿ ಒಂದು ರೆಡಿಮೆಡಿ answer ಸದಾ  ಉಂಟು. ಈ ಜನ್ಮಕ್ಕೆ ಮರೆತು ಹೋಗುವಂತಹದ್ದಲ್ಲ. ಅಷ್ಟು ಬಾರಿ ಎಲ್ಲಾ ಕಡೆ ಹೇಳಿದ್ದೇನೆ ಕೂಡ.. 


ಅದನ್ನೇ ಇಲ್ಲೂ ಹೇಳಿದೆ - " Myself Neelamegha, i am from Mangalore.... So n so.. ಹೀಗೆ ಉದ್ದಕ್ಕೆ ಹೇಳುತ್ತಾ ಹೋದೆ.


ನನ್ನಷ್ಟಕ್ಕೆ ಹೇಳುತ್ತಲೇ ಇದ್ದೆ ಇನ್ನೂ .. 


ಅವರಿಬ್ಬರಿಗೂ ನಾನು ಹೇಳುವುದರಲ್ಲಿ ಆಸಕ್ತಿಯೇ ಇಲ್ಲ. ಅವರಿಗೂ ಗೊತ್ತು ಎಲ್ಲರೂ ಇಂತಹದ್ದನ್ನೇ ಬಾಯಿಪಾಠ ಹೊಡೆದುಕೊಂಡು ಬಂದು ಇಲ್ಲಿ ಏನೇನೋ ರೀಲ್ ಬಿಡ್ತಾ ಇರ್ತಾರೆ ಎಂದು.


 Mr.A ಮತ್ತು Mr.B  ತದೇಕಚಿತ್ತದಿಂದ ನನ್ನ resume ಯನ್ನೇ ನೋಡುತ್ತಿದ್ದಾರೆ.


Mr.A ನನ್ನನ್ನು ಮಧ್ಯದಲ್ಲಿಯೇ ತಡೆದು ನಿಮ್ಮ ಫ್ಯಾಮಿಲಿ ಬಗ್ಗೆ ಸ್ವಲ್ಪ ಹೇಳಿ ಅಂದ.


ನಾನು ಶುರು ಮಾಡಿದೆ... ಸಾರ್ ನನ್ನ ಅಪ್ಪ ನೀಲಣ್ಣ ಅಂತ.. ಅಮ್ಮ ಮೇಘಕ್ಕ ಅಂತ... ಇಬ್ಬರ ಹೆಸರನ್ನು ಜೋಡಿಸಿ ನಾನು "ನೀಲಮೇಘ" ಅಂತ ಆದೆ ಸಾರ್. ಫ್ರೆಂಡ್ಸ್ ಎಲ್ಲಾ ನೀಲು... ನೀಲು.. ಅಂತ ಕರೀತಾರೆ ಸಾರ್,ನೀವು ಕೂಡ ಬೇಕಾದರೆ ಹಾಗೇ ಕರೆಯಬಹುದು  ಸಾರ್.. I don't mind sir.. ಅಂತ ಅಂದೆ ಪಟಪಟನೇ.


ಇಬ್ಬರೂ ನನ್ನನ್ನೇ ನೋಡಿದರು.


ಬಹುಶಃ ಅವರಿಗೆ ನನ್ನ confidence ಇಷ್ಟು ಆಯಿತು ಅಂತ ಕಾಣುತ್ತೆ.


Mr.B ಹೇಳಿದ... ನೋಡಿ Mr Neelu, ಒಂದು nonsense question ಕೇಳ್ತೀನಿ.. Answer ಮಾಡ್ತೀರಾ.


ನನಗೂ ಗೊತ್ತು ಈ ರೌಂಡ್ ಅಲ್ಲಿ ಇಂತಹ question ಕೇಳದಿದ್ದರೆ.. Interview ಮಾಡುವವರ ಆತ್ಮಕ್ಕೆ ಸಮಾಧಾನ ಆಗೋದೇ ಇಲ್ಲ ಎಂದು.


ಆದ್ದರಿಂದಲೇ ನಾನು ಹೇಳಿದೆ-  ಒಂದು ಯಾಕೆ ಸಾರ್... ಹತ್ತು nonsense question ಕೇಳಿ, nonsense ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ... ನನಗಂತು  nonsense ಅಂದ್ರೆ ತುಂಬಾನೇ ಇಷ್ಟ ಸಾರ್.. ಜೀವನದಲ್ಲಿ ಜಾಸ್ತಿಯಾಗಿ ಮಾಡಿದ್ದು ಅದನ್ನೇ ಸಾರ್.. ಅಂದೆ ತುಂಬಾನೇ confidence ನಲ್ಲಿ.


ನಾನು interview ನಲ್ಲಿ ಎಲ್ಲಾ ಮಾತಾಡೋದೇ ಹೀಗೆ.. ಫುಲ್ ಓಪನ್.. ಯಾವುದೇ ಮುಚ್ಚುಮರೆ ಇಲ್ಲವೇ ಇಲ್ಲ...interview ಗಳಲ್ಲಿ ಹೀಗೆಯೇ ಮಾತನಾಡಬೇಕು ಎಂದು ಹೇಳಿಕೊಟ್ಟವನು ನನ್ನ ಒಬ್ಬ ಫ್ರೆಂಡ್. ನಾನು ಹೀಗೆ ಮಾತಾಡಿ ಮಾತಾಡಿಯೇ ನನಗಿನ್ನೂ ಕೆಲಸ ಆಗಿಲ್ಲ.. ಆದರೆ ಅವನಿಗೆ ಮೊದಲ ಪ್ರಯತ್ನದಲ್ಲಿಯೇ ಕೆಲಸ ಸಿಕ್ಕಿದೆ. Mostly ಅವನು ನನಗೆ ಮಾತ್ರ ಹಾಗೆ ಮಾಡ್ಲಿಕ್ಕೆ ಹೇಳಿ,ನನ್ನ ಹಾಗೇ ಅವನು ಮಾಡ್ಲಿಲ್ಲವೋ ಏನೋ.. ಅದಕ್ಕೆ ಅವನಿಗೆ ಕೆಲಸ ಸಿಕ್ಕಿದ್ದು ಅಂತ ನನ್ನ ಮನಸ್ಸು ಈಗಲೂ ಹೇಳುತ್ತಿದೆ. 


Mr.B ಶುರು ಮಾಡಿದ.. ಓಕೆ Mr Neelu, ನೀವು ಈಗ ಒಂದು ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಇದ್ದೀರಾ ಅಂತ ತಿಳ್ಕೊಳ್ಳಿ.ಜಸ್ಟ್ ತಿಳ್ಕೊಳ್ಳಿ.. ನೀವು ಈಗ ಒಂದು product ತಗೊಂಡು ಒಂದು ಮನೆಗೆ ಸೇಲ್ ಮಾಡ್ಲಿಕ್ಕೆ ಅಂತ ಹೋಗ್ತೀರಾ.. ಆದ್ರೆ ಅಲ್ಲಿ ಒಂದು ಡೊಡ್ಡ ನಾಯಿ ಇದೆ. ಆದ್ರೆ ಅದು ಬೊಗಳಲ್ಲ..ಖಂಡಿತವಾಗಿಯೂ ಕಚ್ಚಿಯೇ ಕಚ್ಚುತ್ತೆ. ಈಗ ನೀವು ಹೋಗಿ ಡೋರ್ knock ಮಾಡಿದ್ರೆ ಮಾತ್ರ, ಆ ಮನೆಯವರು ಅವರ ಮನೆಯ  ಬಾಗಿಲು ತೆಗೆಯೋದು.ಹೊರಗಿನಿಂದ ಕರೆದ್ರೆ ಆ ಮನೆಯವರಿಗೆ ಕೇಳಿಸಲ್ಲ, cause ಅವರು high volume sound ಇಟ್ಕೊಂಡು ಟಿ.ವಿ ನೋಡ್ತಾ ಇದ್ದಾರೆ. ಹೇಳಿ ಇಂತಹ situation ಅಲ್ಲಿ ನೀವು ಆದ್ರೆ ಏನು ಮಾಡ್ತೀರಾ...ಹೇಗೆ ಹೋಗಿ ಆ ಮನೆಯ ಡೋರ್ knock ಮಾಡ್ತೀರಾ..


ಇಂತಹ ಪಿರ್ಕಿ ಪ್ರಶ್ನೆಗಳನ್ನು ಎಷ್ಟು ಕೇಳಿಲ್ಲ ನಾನು.. ಇಂತಹ ಪ್ರಶ್ನೆಗಳಿಗೆ ಲಾಜಿಕ್ ಎಲ್ಲಾ ಹುಡುಕಿ ಟೈಂ ವೇಸ್ಟ್ ಮಾಡ್ಬಾರ್ದು.. ಮನಸ್ಸಿಗೆ ಬಂದದ್ದನ್ನು  ಹೇಳಿಬಿಡಬೇಕು ಅನ್ನುವುದು ನನ್ನ ಪಾಲಿಸಿ ಮತ್ತು ಸಿದ್ಧಾಂತ. 


Its very simple sir.. ಅಂದೆ.


ಅದೇ ಹೇಗೆ ಮಾಡ್ತೀರಾ.. ಅಂದರು Mr.B


 ನಾನು ಹೇಳಿದೆ- ಇದನ್ನು ಸಿನಿಮಾ ನೋಡುವ ಚಿಕ್ಕ ಮಗುವೂ ಕೂಡ ಕೂಡ ತುಂಬಾ easy ಆಗಿ ಮಾಡಬಹುದು ಸಾರ್..ತುಂಬಾ old technique ಇದು, but very useful. ಮೊದಲು ನಾವು ಅಂಗಡಿಗೆ ಹೋಗಿ ನಾಯಿ ಬಿಸ್ಕೆಟ್ ತಗೋ ಬೇಕು ಸಾರ್. ಅದನ್ನು ಮನೆಯ ಮುಂದಿರೋ ಬೊಗಳದೇ ಬರೀ ಕಚ್ಚೋ ಆ ನಾಯಿಗೆ ಹಾಕ್ಬೇಕು. ಆಗ ನಾಯಿ ಬಿಸ್ಕೆಟ್ ತಿನ್ನುತ್ತೆ. ತಿಂದೇ ತಿನ್ನುತ್ತೇ ಸಾರ್.. ಡೌಟೇ ಬೇಡ. ನಾಯಿ ಬಿಸ್ಕೆಟ್ ಇರೋದೇ  ನಾಯಿಗೆ ತಿನ್ಲಿಕ್ಕೆ ಅಲ್ವಾ ಸಾರ್..so ನಾಯಿ ಒಂದೆರಡು ಬಿಸ್ಕೆಟ್ ತಿಂದ ಮೇಲೆ, ಮತ್ತು ಬರಿಸೋ ಮದ್ದು ಹಾಕಿರುವ special ಆಗಿ ಆ ನಾಯಿಗೆಂದೇ ಸಿದ್ದಪಡಿಸಾರುವ ನಾಯಿ ಬಿಸ್ಕೆಟ್ ಗಳನ್ನು ಕೂಡ ಆ ನಾಯಿಗೆ  ಹಾಕ್ಬೇಕು ಸಾರ್.. ಅಷ್ಟೇ ಸಾರ್..ಅಷ್ಟೇ.. ಸ್ವಲ್ಪ ಹೊತ್ತಲ್ಲೇ ನಾಯಿ, ನಾಲಗೆ ಎಲ್ಲಾ ಹೊರಗೆ ಹಾಕಿ ಅಡ್ಡ ಬೀಳುತ್ತೆ ಸಾರ್.. ನಂತರ ನಾವು ನಾಯಿಯನ್ನು ಪಕ್ಕಕ್ಕೆ ಎಳೆದು ಹಾಕಿ.. ಸೀದಾ ಹೋಗಿ ಮನೆಯ ಕಾಲಿಂಗ್ ಬೆಲ್ ಪ್ರೆಸ್ ಮಾಡಿದರೆ ..ಮನೆಯವರು ಮನೆಯ ಬಾಗಿಲು ತೆಗಿದೇ ತೆಗಿತಾರೇ  ಸಾರ್... ಅಂದೆ. 


Mr.A ಮತ್ತು Mr.B ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಆದರೆ ಏನು ಹೇಳ್ಲಿಲ್ಲ.. ಯಾಕೆ ಅಂತ ನಂಗೆ ಸ ಗೊತ್ತಾಗ್ಲಿಲ್ಲ ಅದು. 


Resume ಅನ್ನು ನೋಡಿ Mr.A ಕೇಳಿದ, Mr Neelamegha,ನಿಮ್ಮ ಲೈಫ್ ಅಲ್ಲಿ  ಹೇಳಿಕೊಳ್ಳುವಂತಹ  achievements ಏನಾದರೂ ಇದೆಯಾ..


ಸದ್ಯಕ್ಕೆ ಏನೂ ಇಲ್ಲ ಸಾರ್.. ಆದ್ರೆ ಮುಂದೆ ತುಂಬಾ ಮಾಡ್ಬೇಕು ಅಂತ ಇದ್ದೀನಿ..


ಏನು ಮಾಡ್ಬೇಕು ಅಂತ ಇದ್ದೀರಾ..


ನಾನು ಸಾಧನೆ ಮಾಡ್ತೀನಿ ಸಾರ್... ಸಾಧನೆ..


ಅದೇ.. ಏನು ಸಾಧನೆ ಮಾಡ್ಬೇಕು ಅಂತ ಇದ್ದೀರಾ..


ಅದೇ ಸಾರ್,ನಾನು...ನಾನು...ಹಾಳಾಗಿರೋ  ಡ್ರೋನ್ ಗಳನ್ನು ಬಳಸಿಕೊಂಡು  ಮಿಕ್ಸರ್, ಗ್ರೈಂಡರ್  ಎಲ್ಲಾ ಮಾಡ್ಬೇಕು ಅಂತ ಇದ್ದೀನಿ ಸಾರ್..ಇದು ವರ್ಲ್ಡ್ ಅಲ್ಲಿ ಫಸ್ಟ್ ಟೈಮ್ ಸಾರ್.. ಇಂತಹ ಸಾಧನೆ ಯಾರೂ ಮಾಡಿರ್ಲಿಕ್ಕಿಲ್ಲ ಸಾರ್.. ಅಂದೆ.


Mr.A ಮತ್ತು Mr.B ಒಬ್ಬರು ಇನ್ನೊಬ್ಬರ ಮುಖ ನೋಡಿಕೊಂಡರು.. ಬಹುಶಃ ಮನಸ್ಸಿನಲ್ಲಿಯೇ ಅಂದುಕೊಂಡಿರಬೇಕು... ಹೌದೌದು.. ಖಂಡಿತವಾಗಿಯೂ ಇಂತಹ ಸಾಧನೆ ಎಲ್ಲಾ ಬೇರೆ ಯಾರೂ ಮಾಡಿರ್ಲಿಕ್ಕಿಲ್ಲ ಎಂದು.

ಆದರೆ ಅವರು ಬಾಯಿಬಿಟ್ಟು ನನ್ನನ್ನು appreciate ಮಾಡ್ಲಿಲ್ಲ ಅಷ್ಟೇ. 


ಆದರೂ ಕೂತುಹಲ ತಡೆಯಲಾರದೆ Mr.A  ಕೇಳಿದ... ಅಲಾ ಡ್ರೋನ್ ತುಂಬಾ costly ಇರುತ್ತೆ, ಹಾಳಾದ ಡ್ರೋನ್, ಹಾಗೆ ಅಷ್ಟು easy ಆಗಿ ಈ ತರಹ ಮಿಕ್ಸರ್ ಗ್ರೈಂಡರ್ ಮಾಡ್ಲಿಕ್ಕೆ ಎಲ್ಲಾ ಸಿಗುತ್ತಾ..


ನಾನು ಈಗ ಒಟ್ರಾಸಿ active ಆದೆ. ನಾನು interview ಅಂದರೆ ಹಾಗೆನೇ active ಮಾತ್ರ ಅಲ್ಲ.. ಹೈಪರ್ ಆಕ್ಟೀವ್ ಆಗಿ ಬಿಡುವೆನು.. 


ನಾನು ಹೇಳಿದೆ - ಸಿಗುತ್ತೆ ಸಾರ್... ಸಿಗುತ್ತೆ, ಯಾಕೆ ಸಿಗಲ್ಲ.. ಕಷ್ಟ ಪಟ್ಟಿ ಹುಡುಕಿದ್ರೆ ಗುಜರಿ ಅಂಗಡಿಯಲ್ಲಿ ಆದ್ರೂ  ಖಂಡಿತವಾಗಿಯೂ ಸಿಕ್ಕೇ ಸಿಗುತ್ತೆ.ಯಾವುದಕ್ಕೆ ಆಗ್ಲಿ ಸಾರ್ ಮೊದಲು ಮನಸ್ಸು ಮಾಡ್ಬೇಕು ಸಾರ್.. ಮನಸ್ಸು ಮಾಡಿದ್ರೆ ಸಬಳನೂ ನುಂಗಬಹುದು ಅಂತ ಮಾತೇ ಇದೆಯಲ್ಲಾ ಸಾರ್... ಅಂದೇ ಮಾತಿನ ರಭಸದಲ್ಲಿ..


ಅದು ಅವರಿಗೆ ಅಷ್ಟು ಇಷ್ಟ ಆಗ್ಲಿಲ್ಲವೋ ಏನೋ.. ಅವರ ಮುಖ ನೋಡಿಯೇ ಗೊತ್ತಾಯಿತು. ಆದರೂ ಅವರು  ಏನೂ ಹೇಳ್ಲಿಲ್ಲ ಮಾತ್ರ.. 


Mr. A ಕೇಳಿದ -  Mr ನೀಲು ಅವರೆ....


ನಾನು ಮಧ್ಯದಲ್ಲಿ ಬಾಯಿ ಹಾಕಿ ಹೇಳಿದೆ, ಸಾರ್ ನೀಲು ಅವರೆ ಅಂತ ಎಲ್ಲಾ ಹೇಳ್ಬೇಡಿ ಸಾರ್.. ನೀಲು or ನೀಲಮೇಘ.. ಅಷ್ಟೇ ಸಾಕು .. ನೀವು "ಅವರೆ.." ಅಂತ ಹೇಳಿದರೆ ನಂಗೆ ಅವರೆಕಾಳೇ  ನೆನಪಾಗುತ್ತದೆ ಸಾರ್ ಅಂದೆ.


ಓಕೆ.. ಓಕೆ.. Mr Neelu, ನೀವು ನಿಮ್ಮ resume ಯಲ್ಲಿ ಕುಕಿಂಗ್ ಬಗ್ಗೆ ಕೂಡ ಬರೆದಿದ್ದೀರಿ, ನಿಮಗೆ ನಿಜವಾಗಿಯೂ ಕುಕಿಂಗ್ ಬರುತ್ತಾ...


ಬರುತ್ತೆ ಸಾರ್..ಯಾಕೆ ಬರಲ್ಲ.. ಎಲ್ಲಾ ಬರುತ್ತೆ.. ಮಂಗಳೂರಿನ ಅಡುಗೆಗಳಲ್ಲಿ ನನ್ನದು ಯಾವಾಗಲೂ  ಎತ್ತಿದ ಕೈ ಅಂದೆ.


ಅದಕ್ಕೆ Mr. A - ಹೌದಾ ನನಗೂ ಮಂಗಳೂರು ಫುಡ್ ಅಂದ್ರೆ ತುಂಬಾ ಇಷ್ಟ,ನಿಮ್ಮದು ಅದು ಉಂಟಲ್ಲಾ....


ಯಾವುದು ಸಾರ್ ಅದು..? ಅಂದೆ. 


ಅದೇ..ನಿಮ್ಮ "ನೀರ್ ದೋಷ" ಉಂಟಲ್ಲಾ...


ಒಮ್ಮೆಯೇ ನನ್ನನ್ನು ಯಾರೋ ಕತ್ತು ಹಿಸುಕಿ ಕೊಂದ  ಅನುಭವ.. 


ಆದರೂ ಸಾವರಿಸಿಕೊಂಡು ಹೇಳಿದೆ - ಸಾರ್.. ಅದು ದೋಷ ಅಲ್ಲ ಸಾರ್.. ನಮ್ಮಲ್ಲಿ ದೋಷ ಅಂದ್ರೆ.. ನಾಗ ದೋಷ, ರಾಹು - ಕೇತು ದೋಷ ಆ ತರಹ ಎಲ್ಲಾಇದೆ.. ನೀವು ಹೇಳ್ತಾ ಇರೋದು ನಮ್ಮ ನೀರುದೋಸೆ... ಸಾರ್ ಅಂದೆ.


ಯೆಸ್ ಯೆಸ್.. ಅದೇ ಅದೇ.. ನನಗೆ, ನನ್ನ ಮಿಸೆಸ್ ಗೆ ಕೂಡ ಅದು  ಬಾರೀ ಇಷ್ಟ... ಅಂದು ಬಿಟ್ಟರು.


ಈಗ  Mr.B ಶುರು ಮಾಡಿದ.. ನಿಮಗೆ ಅದು "ಪತ್ತರ್ ಕ ವಡಾ" ಮಾಡ್ಲಿಕ್ಕೆ ಬರುತ್ತಾ..


"ಪತ್ತರ್ ಕ ವಡಾ.."?!! ಯಾವುದು ಮರ್ರೆ ಇದು, ನಾನು ಎಂದೂ ಕೇಳಿರದ ಮಂಗಳೂರಿನ ಹೊಸ ತಿಂಡಿ,.. ನನಗೆ ನಾನೇ ಮನಸ್ಸಿನಲ್ಲಿ  ಪ್ರಶ್ನೆ ಹಾಕಿಕೊಂಡೆ.


ಸಾರ್.. ಆ ತರಹ ಯಾವುದೇ ಡಿಶ್ ನಮ್ಮಲ್ಲಿ ಮಾಡಲ್ಲ ಅಂದೆ.


ಅದೇ Colocasia(ಕೆಸು) ಎಲೆಗಳನ್ನು ರೋಲ್ ಮಾಡಿ steam ನಲ್ಲಿ ಕುಕ್ ಮಾಡಿ ತಿನ್ತೀರಿ ಅಲಾ ಅದು..


ಮನಸ್ಸಿನಲ್ಲೇ Mr.B ಗೆ ಸಕ್ಕತ್ ಆಗಿ ಬೈದುಬಿಟ್ಟೆ... ಬಡ್ಡಿಮಗನೇ, ಅಷ್ಟು ಚಂದದ "ಪತ್ರೋಡೆ" ಎಂಬ ಹೆಸರಿದೆ ನಮ್ಮ ಆ ರುಚಿಕರ ತಿಂಡಿಗೆ.. ಪತ್ತರ್ ಕ ವಡಾ ಅಂತ ಹೇಳ್ತೀಯಾ ಎಂದು...

ನನಗೆ ನಾನೇ ಒಂದು ದೊಡ್ಡ ಪತ್ತರ್ ತೆಗೆದುಕೊಂಡು ನನ್ನ ತಲೆಯ ಮೇಲೆಯೇ ಎತ್ತಿಹಾಕಿದಂತಹ  ಫೀಲ್ ಆಯಿತು ಒಮ್ಮೆ.


Mr. B ಗೆ ಹೇಳಿದೆ- ಸಾರ್.. ಅದು ಪತ್ತರ್ ಕ ವಡಾ ಅಲ್ಲ ಸಾರ್.. ಅದು ಪತ್ರೋಡೆ ಅಂತ.. ಅಂದೆ.


ಯಾ..ಯಾ..ಅದೇ ಅದೇ.. ಅಂತ ಹೇಳಿಬಿಟ್ಟ ಇಷ್ಟು ವರ್ಷ ಹೆಸರು ಗೊತ್ತಿಲ್ಲದೇ ಕಲ್ಲಿನ ವಡೆಯನ್ನು ತಿಂದಿದ್ದ Mr.B


ಅದೇ ಟೈಂ ಅಲ್ಲಿ ಅವರಿಗೆ ಕಾಫಿ ಮತ್ತು snacks ಬಂತು.


ನಾನು ಬೇರೆ ಕೊನೆಯ interview candidate ಅಲ್ಲಾ... ಹಾಗಾಗಿ interview ಮಾಡಿ ಮಾಡಿ Mr.A and Mr.B ಗೆ ಸುಸ್ತು ಆಗಿರಬಹುದು ಎಂದು refreshment ಬಂದಿತ್ತು.


ನಾನು ಅವರ ತಟ್ಟೆಯನ್ನೇ ನೋಡಿದೆ. 


ಏನಿಲ್ಲ.. ಅಲ್ಲಿ ಅವರಿಬ್ಬರಿಗೆ  ಎರಡು ಕಾಫಿ..ಹಾಗೂ ಎರಡು ಸಮೋಸ ಇತ್ತು ಅಷ್ಟೇ. 


Mr.A  ನನ್ನಲ್ಲಿ Just for formality ಗೆ ಕಾಫಿ ಕುಡಿತೀರಾ Mr. Neelamegha.. ಎಂದು ಕೇಳಿದರು.


ನನಗೆ ಗೊತ್ತು ಎಲ್ಲಾ ಕಡೆ ಈ ರೀತಿ ನಡುವಲ್ಲಿ snacks, coffee ಏನಾದರೂ ಬಂದಾಗ, ತಮ್ಮ ಮುಂದಿರುವ ಸಂದರ್ಶನದ ಅಭ್ಯರ್ಥಿಯಲ್ಲೂ ಕೂಡ ಸೌಜನ್ಯಕ್ಕಾಗಿ ಕಾಫಿ ಬೇಕಾ.. ಜ್ಯೂಸ್ ಬೇಕಾ.. ಎಂದು ಕೇಳಿಯೇ ಕೇಳುತ್ತಾರೆ ಎಂದು. ಫ್ರೆಂಡ್ಸ್ ಎಲ್ಲಾ ಹೇಳ್ತಾರೆ, ನಾವು ಆವಾಗ  ಬೇಡ.. No thanks ಅಂತ ಹೇಳ್ಬೇಕಂತೆ.. ಬಹುಶಃ ಅದಕ್ಕೆ ಅವರಿಗೆಲ್ಲ  ಕೆಲಸ ಆಗಿರೋದು. 


ಆದರೆ ನಾನು.... No way.. ಹಾಗೆ ಕೇಳಿದ ಕಡೆ ಬೇಡ ಎಂದು ಹೇಳಿದ ಉದಾಹರಣೆಯೇ ಇಲ್ಲ. 


Oh sure..ಖಂಡಿತವಾಗಿಯೂ. ಆದ್ರೆ ಕಾಫಿ ಬೇಡ ಸಾರ್....ಟೀ ಆಗ್ಬಹುದು.. ಹಾಗೆಯೇ ಎರಡೂ ಸಮೋಸ ನೂ ಜೊತೆಗೆ ಇರ್ಲಿ ಸಾರ್ ಅಂದೆ.


Mr.A ಅವರು Mr.B ಅವರಿಗೆ ಹೇಳಿದ್ರು... ಇವರಿಗೂ snacks, coffee ತರ್ಲಿಕ್ಕೆ ಹೊರಗಡೆಯವರಿಗೆ ಹೇಳ್ರಿ ಎಂದು.


ನಂತರ Mr.B ಅವರು ಹೊರಗೆ ಇದ್ದ ಅವರ assistant ಗೆ ಕಾಲ್ ಮಾಡಿ ಇನ್ನೆರಡು ಸಮೋಸ, ಹಾಗೂ ಟೀ ತರಿಸಿದರು ನನಗಾಗಿ.


Assistant ಟೀ ಮತ್ತು ಸಮೋಸ ತಂದು ನನ್ನ ಎದುರು ಇಟ್ಟ. 


ಸಾಸ್.. ಇಲ್ವಾ.. ಟೊಮೆಟೋ ಸಾಸ್.. ಅಂದೆ ನಾನು ಅವನಿಗೆ. 


ಸಮೋಸ ತಂದಿಟ್ಟವನು ನನ್ನನ್ನು ಒಮ್ಮೆ ಮೇಲೆ ಕೆಳಗೆ ನೋಡಿದ, ಬಹುಶಃ ಅವನು ಅಂದುಕೊಂಡಿರ್ಬಹುದು.. ಇವನು interview ಗೆ ಬಂದದ್ದಾ ಅಥವಾ ತಿನ್ಲಿಕ್ಕೆ ಹೋಟೆಲಿಗೆ ಬಂದದ್ದಾ ಎಂದು.ಅಂದುಕೊಂಡ್ರೆ ಅಂದುಕೊಳ್ಳಿ ನಂಗೇನು ಬಿಡಿ..


ಅವ ಪುನಃ ಹೊರಗೆ ಹೋಗಿ ಸಾಸ್ ಬಾಟಲ್ ತಂದು ನನ್ನ ಎದುರು ಇಟ್ಟ, sorry ಟೇಬಲ್ ಮೇಲೆ ಹಾಗೇ ಕುಕ್ಕಿದ..


ನಾನು ಆರಾಮ್ ಸೇ ಟೀ  ಕುಡಿಯುತ್ತಾ, ಸಮೋಸ ತಿನ್ನತೊಡಗಿದೆ..


ಈಗ Mr.B ಕೇಳಿದ.. ನೀವು ನಿಮ್ಮ resume ಯಲ್ಲಿ ತುಂಬಾ straight forward ಅಂತ ಬರೆದಿದ್ದೀರಿ, ಹೌದಾ.. ನೀವು ನಿಜ 

ಜೀವನದಲ್ಲೂ ಅಷ್ಟೊಂದು ನೇರಾ ನೇರವಾ?


ಹೌದು ಸಾರ್ ನಮ್ಮ ಊರಲ್ಲಿ . ನೇರ, ದಿಟ್ಟ, ನಿರಂತರ..ಅಂದರೆ ಅದು ನಾನೇ...ಹಾಗೆಯೇ ನಾನು ಅಂದರೆನೇ ನೇರ, ದಿಟ್ಟ, ನಿರಂತರ... ಅಂದೆ ಸಮೋಸ ತಿನ್ನುತ್ತಾ cool ಆಗಿ.. 


ಮೊದಲು ಆ ಸಮೋಸ ತಿಂದು ಖಾಲಿ ಮಾಡಿ.. ಆಮೇಲೆ ನಿಜ ಜೀವನದಲ್ಲಿ ಹೇಗೆ ಅಷ್ಟೊಂದು straight forward ಆಗಿರುವಿರಿ ಎಂದು example ಮೂಲಕ explain ಮಾಡಿ ಎಂದರು Mr.B 


ನಾನು ಎರಡೂ ಸಮೋಸವನ್ನು ರಪರಪನೇ ಮುಗಿಸಿ... ಅವರ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದೆ. 


ಸಾರ್ for example, ನಾನು ನಿಮ್ಮ ಕಂಪನಿಯಲ್ಲಿ ಒಂದು ಐದು ವರ್ಷ ಕೆಲಸ ಮಾಡಿದೆ ಅಂತ ತಿಳ್ಕೊಳ್ಳಿ, ನನ್ನಿಂದಾಗಿ ನಿಮ್ಮ  ಕಂಪನಿ ಸಕ್ಕತ್ ಲಾಭ ಗಳಿಸುತ್ತೆ.ಆದರೂ  ನಿಮ್ಮ ಕಂಪನಿ ನನಗೆ salary ಏನು ಸಿಕ್ಕಾಪಟ್ಟೆ ಜಾಸ್ತಿ ಕೊಡಲ್ಲ ಸಾರ್. ಆವಾಗ ನನಗೆ ಇನ್ನೊಂದು ಚಿಕ್ಕ ಕಂಪನಿ ನನಗೆ ಗಾಳ ಹಾಕಿ, ನನಗೆ ಜಾಸ್ತಿ salary ಕೊಡುವ ಆಫರ್ ನೀಡಿ, ನನ್ನನ್ನು ನಿಮ್ಮ ಕಂಪನಿ ಬಿಡುವಂತೆ ಒತ್ತಾಯಿಸುತ್ತದೆ. ಆವಾಗ ನಾನು ಏನು ಮಾಡ್ತೀನಿ ಗೊತ್ತಾ ಸಾರ್.. ಈ ಕಂಪನಿಗೆ resignation letter ಬರೆದು, ಸಂಬಂಧ ಪಟ್ಟವರ ಮುಖಕ್ಕೆ ಹಾಗೇ ಬಿಸಾಕಿ ಬಿಟ್ಟು, ಆ ಕಂಪನಿಗೆ ಹೋಗಿ join ಆಗ್ತೀನಿ. ನೀವು ಆದ್ರೂ ಹೀಗೆ ಅಲ್ಲಾ ಸಾರ್ ಮಾಡೋದು, ನಮಗೆ ನಮ್ಮ ಲೈಫ್  ಮುಖ್ಯ ಅಲ್ವಾ  ಸಾರ್.. ಕಂಪನಿ ಮುಖ್ಯ ಅಲ್ಲ.


ಅದ್ರೆ ನಾನು ಅಲ್ಲಿ ಹೋಗಿ ಜಸ್ಟ್ ಕೆಲಸ ಮಾಡಲ್ಲ ಸಾರ್.. ಆ ಚಿಕ್ಕ ಕಂಪನಿಯನ್ನು ಕಷ್ಟಪಟ್ಟು ಮೇಲೆತ್ತಿ, ನಿಮ್ಮ ಕಂಪನಿ ಲಗಾಡಿ ಆಗುವಂತಹ ಐಡಿಯಾ ಗಳನ್ನು ಕೊಟ್ಟು, ನಿಮ್ಮ ಕಂಪನಿಯೇ  ಬರ್ಬಾದ್ ಆಗುವಂತೆ ಮಾಡ್ತೀನಿ ಸಾರ್.. ಅಂದೆ.


Mr.A ಮತ್ತು Mr.B ಒಬ್ಬರು ಇನ್ನೊಬ್ಬರ ಮುಖ ಹಾಗೇ ನೋಡಿಕೊಂಡರು. ಬಹುಶಃ ಅವರಿಗೆ ನನ್ನ ಒಟ್ರಾಸಿ straight forward ಕೂಡ ಬಹಳನೇ ಇಷ್ಟ ಆಗಿರಬೇಕು ಅಂತ ನಾನು  ಅಂದ್ಕೊಂಡೆ.


ನೋಡಿ ಸಾರ್... ನಾನು  ಎಷ್ಟೊಂದು straight forward ಮಾತಾಡ್ತಿವಿ, ಫಿಲ್ಟರೇ ಇಲ್ಲ ಸಾರ್..ಮನಸ್ಸಿನಲ್ಲಿ ಇದ್ದದ್ದೇ ಬಾಯಿಗೆ ಬರೋದು.. ನಾನು ಇರೋದೇ ಹೀಗೆ ಸಾರ್.. ಅಂತ ಅಂದೆ.


ಆವಾಗ Mr.A, Mr B ಯ  ಕಿವಿ ಬಳಿ ಬಂದು ಏನೋ ಹೇಳಿದ.


ತುಂಬಾ ಹೊತ್ತು ಏನೇನೋ ಹೇಳ್ತಾನೆ ಇದ್ದ.


ನಂತರ Mr.A ಹೇಳಿದ, ಆಯ್ತು Mr.Neelu.. ನೀವಿನ್ನು ಹೋಗಬಹುದು.


ಸೆಲೆಕ್ಟ್ "ಆದರೆ" ನಿಮ್ಗೆ ನಮ್ಮ ಕಂಪನಿ ಕಡೆಯಿಂದ ಮೇಲ್ ಬರುತ್ತೆ ಅಂದ.


ನಂತರ ನಾನು ಅಲ್ಲಿಂದ ಎದ್ದು ಹೊರಬಂದೆ.


ಅವನು "ಆದರೆ.." ಅಂತ ಹೇಳುವಾಗಲೇ, ಅವನ ಬಾಡಿ ಲ್ಯಾಂಗ್ವೇಜ್ ನೋಡಿಯೇ ನಾನು ಗೆಸ್ ಮಾಡಿದೆ.. ಈ ಕೆಲಸ ಕೂಡ ಅಲಕ್ಕಾ(ಗ್ಯಾರಂಟಿ) ಲಗಾಡಿ  ಹೋಯಿತು ಎಂದು.


ಸಾಯ್ಲಿ... ಇನ್ನು ಸ resume ತುಂಬಾ ಉಂಟು ಮನೆಯಲ್ಲಿ.. Apply ಮಾಡ್ತಾನೇ ಇರುವ... ಇವತ್ತಲ್ಲದಿದ್ದರೆ ನಾಳೆ.. ನಾಳೆ ಅಲ್ಲದಿದ್ದರೆ ನಾಳೆಯದ್ದು.. ಯಾವುದಾದರೂ ಕಂಪನಿಯಲ್ಲಿ, ಒಂದಲ್ಲ ಒಂದು ದಿನ ಕೆಲಸ ಅಂತು ಸಿಕ್ಕೇ ಸಿಗುತ್ತೆ... ಅಮಾವಾಸ್ಯೆ ಆದ ಮೇಲೆ ಹುಣ್ಣಿಮೆ ಬಂದೇ ಬರುತ್ತೆ..Saturday ಆದ ಮೇಲೆ Sunday ಬಂದೇ ಬರುತ್ತೆ..45 ಆದ ಮೇಲೆ 46 ಬಂದೇ ಬರುತ್ತೇ... ಬರ್ಲೇ ಬೇಕು.. ಅದೇ ರೀತಿ ನನಗೂ ಕೆಲಸ ಸಿಕ್ಕೇ ಸಿಗುತ್ತೆ ಅಂತ ನನಗೆ ನಾನೇ ಸಮಾಧಾನ ಹೇಳಿಕೊಂಡು ಹೊರಗೆ ಬಂದಾಗ.. ಹೊರಗಡೆ ಜೋರು ಮಳೆ ಸುರಿಯುತ್ತಿತ್ತು. ಅಲ್ಲೇ ಎದುರುಗಡೆ ಇದ್ದ ಒಂದು ಗೂಡಂಗಡಿಗೆ ಕಡೆಗೆ ಓಡಿದೆ ನಾನು. 


ನನಗೆ ಒಳಗಡೆ ತಿಂದ ಆ ಎರಡು ಚಿಕ್ಕ ಸಮೋಸ ಎಲ್ಲಿಗೂ ಸಾಕಾಗಿರಲಿಲ್ಲ.ಹಾಗಾಗಿ ಆ ಮಳೆಗೆ ಆ ಗೂಡಂಗಡಿಯಲ್ಲಿಯೇ   ಒಂದು ಬಿಸಿ ಟೀ ತಗೊಂಡು ಹಾಗೂ ಒಂದಷ್ಟು ಸಮೋಸವನ್ನು ಕೂಡ ತಗೊಂಡು, ಟೀ ಕುಡಿಯುತ್ತಾ ಸಮೋಸ ತಿನ್ನುತ್ತಾ... ಹೊರಗಿನ ಮಳೆಯನ್ನೇ ನೋಡತೊಡಗಿದೆ. 


ಸಮೋಸ ತಿನ್ನುವಾಗ ಕೂಡ ಮನಸ್ಸಿನಲ್ಲಿ ಇದ್ದದ್ದು ಅದೇ..Mr. A ಮತ್ತು Mr. B ಹೇಳಿದ.. ಪತ್ತರ್ ಕ ವಡಾ.. ಮತ್ತು ನೀರು ದೋಷ...


ಅಲಾ.. ಇವರೆಲ್ಲಾ ಎಲ್ಲಿಂದ ಬರ್ತಾರೆ ಮರ್ರೆ ..ಅಂತ ನನಗೆ ನಾನೇ ಮನಸ್ಸಿನಲ್ಲಿಯೇ ಹೇಳಿಕೊಂಡು  ಹಾಗೇ  ಜೋರಾಗಿ ನಕ್ಕುಬಿಟ್ಟೆ...


.....................................................................................


#ನೀಲಮೇಘ💙


ab pacchu

moodubidire

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!