ಸೋತು ಗೆದ್ದ ರಾಣಿ
.
#ರಾಣಿ..!
ಎಲ್ಲರ ಮನೆಯ ಅಜ್ಜಿ ಹೇಳುವ ಕಥೆ,ಹೆಚ್ಚು ಕಡಿಮೆ ಹೀಗೆಯೇ ಇರುತ್ತೆ.. ' ಒಂದು ಊರಲ್ಲಿ ಒಬ್ಬ ರಾಜ ಇದ್ದ,ಅವನಿಗೊಬ್ಬಳು ರಾಣಿ ಇದ್ಳು..ಅವರಿಗೊಂದು ದೊಡ್ಡ ಅರಮನೆ ..'
ಆದರೆ ನನ್ನ ಕಥೆಯಲ್ಲಿ ನಾನೇ ರಾಣಿ ಮತ್ತು ನನ್ನ ಹೆಸರು ಕೂಡ ರಾಣಿಯೇ!
ಅರಮನೆ ಅಲ್ಲದಿದ್ದರೂ ಅರಮನೆಯಂತಹ ಮನೆಯ ಬಯಕೆ ನನಗಿತ್ತು,ಆದರೆ ರಾಜ...? ಇಲ್ಲ ನನಗವ ಬೇಕಾಗಿರಲಿಲ್ಲ.ಯಾರ ಅಡಿಯಾಳಾಗಿಯು ಬಾಳುವ ಮನಸ್ಸು ನನಗಿರಲಿಲ್ಲ. ಕನಸಿನಲ್ಲೂ ಕೂಡ ಅಂತಹ ದೃಶ್ಯಗಳು ನನಗೆ ಬರುವುದಿಲ್ಲ!
ಒಬ್ಬಳೇ ಮಗಳು ನಾನು.ಮನೆಯಲ್ಲಿ ಕೂಡ ರಾಣಿಯಂತೆ ಬೆಳೆಸಿಬಿಟ್ಟರು ಹೆಸರು ಕೂಡ ರಾಣಿ ಎಂದೆ ಇಟ್ಟು ಬಿಟ್ಟರು.
ನನಗೆ ಎಷ್ಟೊಂದು ಹಠ ಇತ್ತು ಎಂದರೆ,ನಾನು ಹೇಳಿದ್ದೆ ಮನೆಯಲ್ಲಿ ನಡೆಯಬೇಕಿತ್ತು. ಅಪ್ಪ ಅಮ್ಮ ಕೂಡ ನಾನು ಹೇಳಿದ್ದಕ್ಕೆ ಇಲ್ಲ ಎಂದು ಹೇಳಿದವರಲ್ಲ.
ಎಲ್ಲವೂ ಸರಿ ಇತ್ತು,ಆದರೆ ಸ್ವಲ್ಪ ವರ್ಷಗಳವರೆಗೆ ಮಾತ್ರ!
ನಂತರ ತಂಗಿ ಹುಟ್ಟಿದಳು.ಅವಳಿಗೆ ರಾಧ ಎಂದು ಹೆಸರಿಟ್ಟರು.
ಮನೆಯಲ್ಲಿ ಹೆತ್ತವರಿಗೆ ನನ್ನ ಮೇಲಿನ ಪ್ರೀತಿ ನಿಧಾನಕ್ಕೆ ಕಡಿಮೆ ಆಗತೊಡಗಿತು.ಬದಲಿಗೆ ರಾಧಳ ಮೇಲಿನ ಅಕ್ಕರೆ ಜಾಸ್ತಿ ಆಯಿತು.ಇದು ನನಗೆ ಸಹಿಸಲು ಆಗಲಿಲ್ಲ.ಏಕೆಂದರೆ ನಾನು ಎಲ್ಲೇ ಇದ್ದರೂ ರಾಣಿಯಂತೆಯೇ ಇರಬೇಕಿತ್ತು,ಮೆರೆಯಬೇಕಿತ್ತು!
ಜೀವನದಲ್ಲಿ ಮಾತ್ರವಲ್ಲ ಆಟದಲ್ಲೂ ಕೂಡ ನಾನು ಸೋಲಲು ಇಷ್ಟ ಪಟ್ಟವಳಲ್ಲ.ಒಂದು ದಿನ ತಂಗಿ ರಾಧ ನನ್ನನ್ನು ಕೇರಂ ಆಟದಲ್ಲಿ ಸುಲಭವಾಗಿ ಸೋಲಿಸಿ ಬಿಟ್ಟಳು.ನನಗದನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ!
ಅದೊಂದು ಸಂಜೆ ತಿರುಪತಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ನಾವೆಲ್ಲರೂ ಇದ್ದೆವು.ಅಪ್ಪ ಅಮ್ಮ ಅಲ್ಲೇ ಫ್ಲಾಟ್ ಫಾರ್ಮ್ ನ ಒಂದು ಅಂಗಡಿಯಲ್ಲಿ ವಾಟರ್ ಬಾಟಲ್ ಹಾಗೂ ಬಿಸ್ಕೆಟ್ ತರಲು ಹೋಗಿದ್ದರು.ಅದೇ ಕ್ಷಣ ಏನೋ ಒಂದು ಹೊಳೆಯಿತು ನನಗೆ. ತಂಗಿ ರಾಧಳ ಕೈಯನ್ನು ಹಿಡಿದುಕೊಂಡು ಅವಳನ್ನು ನಿಂತಿದ್ದ ಒಂದು ಬೇರೆಯೇ ರೈಲಿಗೆ ಕರೆದುಕೊಂಡು ಹೋಗಿ ಅದರಲ್ಲಿ ಅವಳನ್ನು ಕುಳ್ಳಿರಿಸಿ ಈಗ ಬರುವೆ ಎಂದು ಅವಳಲ್ಲಿ ಹೇಳಿ ಆ ರೈಲಿನಿಂದ ಕೆಳಗಿಳಿದು ಬಂದಿದ್ದೆ..!!
ಆ ರೈಲು ಕೆಲವೇ ಕ್ಷಣಗಳಲ್ಲಿ ಚಾಲನೆಗೊಂಡು ಹಾಗೇ ಕಣ್ಣೆದುರಿನಿಂದಲೇ ಮರೆಯಾಗಿ ಹೋಯಿತು..!! ಅದೇ ರೀತಿ ರಾಧ ಕೂಡ ಶಾಶ್ವತವಾಗಿ ಮರೆಯಾಗಿ ಹೋದಳು! ಆ ದಿನ ನನಗೆ ಬಹಳ ಖುಷಿ ಆಯಿತು.ಅಪ್ಪ ಅಮ್ಮ ಎಷ್ಟು ಹುಡುಕಾಡಿದರೂ ಮತ್ತೆ ಎಂದಿಗೂ ಅವರಿಗೆ ರಾಧ ಸಿಗಲೇ ಇಲ್ಲ.ನಾನು ಮನೆಯಲ್ಲಿ ಮತ್ತೆ ರಾಣಿ ಆದೆ!
ಸ್ಕೂಲ್ ನಲ್ಲಿ ಆಗಲಿ ಆಗಲಿ ಕಾಲೇಜ್ ನಲ್ಲಿ ಆಗಲಿ ಯಾರನ್ನೂ ಕೂಡ ನಾನು ಗೆಳೆಯರನ್ನಾಗಿ ಮಾಡಿಕೊಳ್ಳಲಿಲ್ಲ.ಏಕೆಂದರೆ ನನಗೆ ಯಾರೂ ಇಷ್ಟ ಆಗುತ್ತಿರಲಿಲ್ಲ.
ಕಾಲೇಜ್ ನಲ್ಲಿ ನನ್ನ ಕ್ಲಾಸಿನ ಹುಡುಗ ವಿಕ್ರಾಂತ್ ಒಮ್ಮೆ ಕೈಯಲ್ಲಿ ರೋಸ್ ಹಿಡಿದು ನನಗೆ ಪ್ರಪೋಸ್ ಮಾಡಿದ್ದ. ಅಲ್ಲೇ ಇದ್ದ ಒಂದು ಮರದ ತುಂಡಿನಿಂದ ಅವನ ತಲೆಯನ್ನೇ ನಾನು ಒಡೆದು ಹಾಕಿದ್ದೆ.ಏಕೆಂದರೆ ನಾನು ಆಳುವ ರಾಣಿ ಆಗಬೇಕೆಂದು ಕೊಂಡವಳು,ನನ್ನನ್ನು ಆಳುವ ರಾಜ ನನಗೆ ಎಂದಿಗೂ ಬೇಕಾಗಿರಲಿಲ್ಲ..!
ಕಲಿಯುವುದರಲ್ಲೂ ಬಹಳ ಮುಂದಿದ್ದೆ.ಅದೇ ರೀತಿ ಚೆಸ್ ಆಡುವುದರಲ್ಲೂ. ಚೆಸ್ ನಲ್ಲಿ ಕಾಲೇಜಿಗೆ ನಾನು ಗೆದ್ದು ಕೊಟ್ಟ ಕಪ್, ಪದಕಗಳಿಗೆ ಲೆಕ್ಕವೇ ಇರಲಿಲ್ಲ.
ಚೆಸ್ ಆಟದ ಮಣೆಯಲ್ಲಿ ಹೆಸರಿಗೆ ಮಾತ್ರ ಪವರ್ ಫುಲ್ ರಾಜ ಇರ್ತಿದ್ದ. ಆದರೆ ನನ್ನ ರಾಣಿಯನ್ನು ನನಗೆ ಬೇಕಾದಂತೆ ಆಟ ಆಡಿಸುತ್ತಾ ಎಲ್ಲರ ರಾಜರನ್ನು ಸೋಲಿಸಿ ಬಿಸಾಕಿ ಬಿಡುತ್ತಿದ್ದೆ ನಾನು. ಎಂತಹ ಬಲಶಾಲಿ ಪುರುಷನನ್ನು ಕೂಡ ಸೋಲಿಸುವ ಈ ಚೆಸ್ ಆಟ ನನಗೆ ಆಟಕ್ಕಿಂತಲೂ ಹೆಚ್ಚು ಪ್ರತಿಷ್ಠೆಯ ವಿಷಯವಾಗಿತ್ತು. ನಾನು ಎಂದಿಗೂ ಚೆಸ್ ನಲ್ಲಿ ಸೋತವಳೇ ಅಲ್ಲ.ಅದರಲ್ಲೂ ಪುರುಷರನ್ನು ಹೀನಾಯವಾಗಿ ಸೋಲಿಸಿದಾಗ ನನಗೆ ಸಿಗುತ್ತಿದ್ದ ನೆಮ್ಮದಿಯೇ ಬೇರೆ ಲೆವೆಲ್ಲಿನದ್ದು.
ಕಾಲೇಜ್ ಮುಗಿದು ಕೆಲಸ ಕೂಡ ಗಿಟ್ಟಿಸಿಕೊಂಡೆ.ಬಾಳಿಗೆ ರಾಜ ಎನ್ನುವವನು ನನಗೆ ಬೇಡವಾಗಿದ್ದರೂ ನನ್ನ ಅಪ್ಪ,ಗಂಡ ಎನ್ನುವ ಪ್ರಾಣಿಯನ್ನು ನನ್ನ ಕೊರಳಿಗೆ ಕಟ್ಟಿ ಬಿಟ್ಟ.
ನನ್ನ ಪತಿ ಪ್ರವೀಣ್ ಬಹಳ ಶ್ರೀಮಂತ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ. ಆದರೆ ನನಗೆ ಜೀವನದಲ್ಲಿ ಏನು ಇಷ್ಟ ಆಗುತ್ತಿರಲಿಲ್ಲವೋ ಅದುವೇ ಅವನಲ್ಲಿ ಅತ್ಯಧಿಕವಾಗಿ ಇತ್ತು. ಅದೇ ಅಹಂಕಾರ, ಮದ, ದರ್ಪ, ಗಂಡಿಗೆ ಇರಬೇಕಾದ ಎಲ್ಲವೂ. ನನ್ನ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸುವ ಅವ ನನಗೆ ಇಷ್ಟ ಆಗಲಿಲ್ಲ. ದಿನಾಲೂ ಜಗಳ ಆಗುತ್ತಿತ್ತು.ನನಗೆ ಅವನು ಹೊಡೆಯಲು ಬಂದಾಗಲೆಲ್ಲ ಎಷ್ಟೋ ಬಾರಿ ನಾನೇ ಅವನ ಕಾಲರ್ ಪಟ್ಟಿ ಹಿಡಿದು ನನ್ನ ರೂಮಿನಿಂದ ಹೊರದಬ್ಬಿದ್ದೆ. ಆದರೂ ಇದರ ನಡುವೆ ಎರಡು ಮಕ್ಕಳು ಆಗಿ ಹೋಗಿತ್ತು.
ಬದುಕು ನನಗೆ ಬೇಕಾದಂತೆ ಇರಲಿಲ್ಲ.ಒಂದು ದಿನ ಕುಡಿದು ಬಂದು ಗಲಾಟೆ ಮಾಡಿದ ಪ್ರವೀಣನ ತಲೆಗೆ ಬಿಯರ್ ಬಾಟಲ್ ನಲ್ಲಿಯೇ ಹೊಡೆದು ಬಿಟ್ಟಿದ್ದೆ ನಾನು.ಅಷ್ಟೇ.. ಒಂದೇ ವಾರದಲ್ಲಿ ನನಗೆ ಡಿವೊರ್ಸ್ ನೋಟಿಸ್ ಕೊಟ್ಟು ಬಿಟ್ಟ ಪ್ರವೀಣ. ನನಗೂ ಅದೇ ಬೇಕಿತ್ತು.ಅಂತವನೊಂದಿಗೆ ಜೀವನ ನನಗಂತು ಮೊದಲೇ ಬೇಕಾಗಿರಲಿಲ್ಲ!
ನನ್ನ ಬಾಳಿನಿಂದ ಹೊರನಡೆಯುವಾಗ ಜೀವನಕ್ಕೆ ಬೇಕಾದ ಜೀವನಾಂಶವನ್ನು ಅಗತ್ಯಕ್ಕಿಂತ ಹೆಚ್ಚೇ ಕೊಟ್ಟು ಬಿಟ್ಟ ಪ್ರವೀಣ. ಮಕ್ಕಳು ಇನ್ನೂ ಚಿಕ್ಕದಾಗಿರುವ ಕಾರಣ ನನ್ನ ಬಳಿಯೇ ಉಳಿದುಕೊಂಡರು. ಗಂಡು ಮಗನ ಹೆಸರು ರೇವಂತ್,ಹೆಣ್ಣು ಮಗಳ ಹೆಸರು ಸನ್ನಿಧಿ.
ಬದುಕು ಬೋರ್ ಅನಿಸತೊಡಗಿತು.ಕೈಯಲ್ಲಿ ಸಿಗರೇಟು ಸದಾ ಉರಿದು ಬುದಿಯಾಗ ತೊಡಗಿತು. ಕೆಲವೊಮ್ಮೆ ಮದಿರೆಯ ಪಾತ್ರೆ ಕೂಡ ನನ್ನ ಕೈಯನ್ನು ಅಲಂಕರಿಸುತ್ತಿತ್ತು.
ಇನ್ನಷ್ಟು ಶೂನ್ಯ ಭಾವ ಆವರಿಸುವ ಮೊದಲೇ ಚೆಸ್ ಕ್ಲಬ್ ಗೆ ಸೇರಿಕೊಂಡೆ. ಮತ್ತೆ ನಿರಂತರ ಗೆಲುವು... ಒಂದರ ನಂತರ ಒಂದು ಗೆಲುವು ಕಾಣುತ್ತಲೇ ಹೋದೆ. ನಾನು ಸೋಲಲೇ ಇಲ್ಲ.ಆದರೆ ಜೀವನದಲ್ಲಿ?
ಹೌದು.. ಜೀವನದಲ್ಲಿ ಮತ್ತೆ ಸೋತೆ ನಾನು.!
ಮಗ ರೇವಂತ್ ಒಬ್ಬಳನ್ನು ಪ್ರೀತಿಸಿದರೆ,ಮಗಳು ಸನ್ನಿಧಿ ಕೂಡ ಇನ್ನೊಬ್ಬನ ಪ್ರೀತಿಯ ಬಲೆಗೆ ಬಿದ್ದಳು..!
ವಿಷಯ ಗೊತ್ತಾದ ನಾನು ಸ್ಪಷ್ಟವಾಗಿ ಬೇಡ ಎಂದು ನಿರಾಕರಿಸಿದೆ..!
ಅವರಿಬ್ಬರು ನನ್ನಲ್ಲಿ ಅತ್ತು ಗೋಗರೆದರು.ಈ ಮನೆಯಲ್ಲಿ ನಾನು ಹೇಳಿದ್ದೇ ನಡೆಯುವುದು ಎಂದು ಅವರಿಬ್ಬರ ಕೆನ್ನೆಗೆ ಸರಿಯಾಗಿ ಬಿಗಿದೆ.
ಅಷ್ಟೇ... ಇನ್ನು ಎಂದಿಗೂ ನಾವು ನಿನ್ನೊಂದಿಗೆ ಇರಲಾರೆವು ಮಮ್ಮಿ.. ಎಂದು ತಂದೆ ಪ್ರವೀಣನ ಬಳಿಗೆಯೇ ಅವರಿಬ್ಬರು ನಡೆದರು.
ನಾನು ಮತ್ತೆ ಒಂಟಿ ಆದೆ.ಅಮ್ಮ ಅಪ್ಪ ಎಂದೋ ತೀರಿ ಹೋಗಿದ್ದರು.
ಪ್ರವೀಣ ನನ್ನನ್ನು ಬಿಟ್ಟು ಹೋಗುವಾಗ ಅವನ ಬಂಗಲೆಯಂತಹ ಮನೆಯನ್ನೇ ನನಗೆ ಬರೆದು ಕೊಟ್ಟು ಹೋಗಿದ್ದ.ಚಿಕ್ಕಂದಿನ ಕನಸಿನಂತೆ... ನನ್ನ ಅರಮನೆಯಂತಹ ಮನೆಯಲ್ಲಿ ನಾನೇ ಈಗ ರಾಣಿ ಆಗಿದ್ದೆ!! ಆದರೆ ಸುತ್ತಮುತ್ತ ಯಾರೂ ಇಲ್ಲದ ಒಬ್ಬಂಟಿ ರಾಣಿ ನಾನು..!
ನಿಜ ಹೇಳಬೇಕೆಂದರೆ ಯಾರೂ ನನ್ನ ಕೈ ಬಿಡಲಿಲ್ಲ,ನಾನೇ ಎಲ್ಲರನ್ನೂ ದೂರ ತಳ್ಳಿದ್ದೆ.
ಆ ನಂತರ ನನ್ನ ಮಕ್ಕಳು ಒಮ್ಮೆಯೂ ನನ್ನ ಬಳಿಗೆ ಬರಲೇ ಇಲ್ಲ.
ಕೊನೆಗಾಲದಲ್ಲಿ ಯಾರೂ ನನ್ನ ಕೈ ಹಿಡಿಯದಿದ್ದರೂ ಚೆಸ್ ಬೋರ್ಡ್ ಒಂದೇ ನನ್ನನ್ನು ಕೈಯನ್ನು ಬಲವಾಗಿ ಹಿಡಿದದ್ದು.
ಚೆಸ್ ಆಟ ಆಡಲು ಕುಳಿತುಕೊಳ್ಳುವಾಗ ಎದುರಾಳಿಯ ಮುಖ ಕೂಡ ನಾನು ನೋಡುತ್ತಿರಲಿಲ್ಲ. ಸುಮ್ಮನೆ ತಲೆತಗ್ಗಿಸಿ ಗಂಭೀರವಾಗಿ ಚೆಸ್ ಆಡುತ್ತಿದ್ದೆ.ಆದರೆ ಎದುರಾಳಿಯನ್ನು ಸೋಲಿಸಿದ ನಂತರ ತಪ್ಪದೇ ಅವರ ಸೋತ ಸಪ್ಪೆ ಮುಖವನ್ನು ಬಿಟ್ಟು ಬಿಡದೇ ನೋಡುತ್ತಿದ್ದೆ.ಏಕೆಂದರೆ ಅದರಿಂದ ನನಗೊಂದು ವಿಚಿತ್ರವಾದ ಆನಂದ ಸಿಗುತ್ತಿತ್ತು.ಗೆದ್ದ ಅಹಂಕಾರದ ಜೊತೆಗೆ ಆಗೆಲ್ಲ ನನಗೆ ಅನಿಸುತ್ತಿತ್ತು.. ಇಲ್ಲ ನಾನು ಜೀವನದಲ್ಲಿ ಕೂಡ ಇನ್ನೂ ಸೋತಿಲ್ಲ ಎಂದು.
ನಾನು ಅದೆಂತಹ ಚೆಸ್ ಪಟು ಆಗಿದ್ದೆ ಎಂದರೆ ಪೇಪರ್ ಗಳಲ್ಲಿ, ಮೀಡಿಯಾಗಳಲ್ಲಿ ಕೂಡ ನನ್ನದೊಂದು ಹೆಸರು,ಇನ್ನಿಲ್ಲದಂತೆ ಹೆಸರುವಾಸಿ ಆಗಿ ಬಿಟ್ಟಿತ್ತು.
ಕ್ಲಬ್ ನಲ್ಲಿ ಅದೊಂದು ದಿನ ಫೈನಲ್ ಮ್ಯಾಚ್. ಎದುರಾಳಿ ಅದಾಗಲೇ ಬಂದು ಕೂತು ಆಗಿತ್ತು.ನಾನೂ ಹೋಗಿ ಕುಳಿತುಕೊಂಡೆ.ಎದುರಾಳಿ ಹ್ಯಾಂಡ್ ಶೇಕ್ ಮಾಡಲು ಕೈ ಚಾಚಿದರೂ ಕೈ ಚಾಚದೇ ಅವರತ್ತ ಗಮನಕೊಡದೇ ನನ್ನ ಆಟ ಶುರು ಮಾಡಿದೆ.
ಸುತ್ತಲೂ ನಿಂತು ಮ್ಯಾಚ್ ನೋಡುತ್ತಿದ್ದ ಹೆಚ್ಚಿನವರಿಗೆ ಗೊತ್ತಿತ್ತು ನಾನೇ ಗೆಲ್ಲುವುದು ಎಂದು.ಅದರಲ್ಲೇನೂ ಸಂದೇಹವೇ ಇರಲಿಲ್ಲ..
ಆದರೆ ನಾನು ಸೋತಿದ್ದೆ..!!
ಹೌದು ಜೀವನದಲ್ಲಿ ಮೊದಲ ಬಾರಿಗೆ ಚೆಸ್ ನಲ್ಲಿ ಸೋತಿದ್ದೆ.
ನನ್ನ ರಾಣಿ ಕೆಳಗುರುಳಿದ್ದಳು..!!
ನೋಡ ನೋಡುತ್ತಲೇ ನನ್ನ ರಾಜ ಚೆಕ್ ಮೇಟ್ ಆಗಿ ಬಿಟ್ಟಿದ್ದ!
ನಾನು ಕುಸಿದು ಹೋಗಿದ್ದೆ!
ತಲೆ ಎತ್ತಿ ಎದುರಾಳಿಯ ಮುಖ ನೋಡುವ ಯಾವ ಧೈರ್ಯವೂ ನನ್ನಲ್ಲಿ ಇರಲಿಲ್ಲ.
ಪ್ರತೀ ಬಾರಿ ಎದುರಾಳಿಯ ಸೋತ ಸಪ್ಪೆ ಮುಖ ನೋಡಿ ಖುಷಿ ಪಡುತ್ತಿದ್ದವಳು ನಾನು..ಆದರೆ ಈ ಬಾರಿ ಅಂತಹ ನಾನೇ ಹೀನಾಯವಾಗಿ ಸೋತಿದ್ದೆ.
" ರಾಣಿ ಅಕ್ಕ... ನೀನು ಮತ್ತೆ ಸೋತೆ.."!
ಎದುರಾಳಿ ಮಾತು ಕೇಳಿ ಆಶ್ಚರ್ಯದಿಂದ ತಲೆಎತ್ತಿ ನೋಡಿದೆ..
ಗುರುತು ಸಿಗಲಿಲ್ಲ..
ಪುನಃ ಅವರೇ ಹೇಳಿದರು... ನಾನಕ್ಕ.. ಗುರುತು ಸಿಗಲಿಲ್ಲವೇ.. ನಿನ್ನ ಪ್ರೀತಿಯ ತಂಗಿ ರಾಧ..!
ಎಲ್ಲವೂ ನೆನಪಾಯಿತು..!
ನನಗರಿವಿಲ್ಲದೇ ಕಣ್ಣುಗಳಿಂದ ಹನಿಗಳುದುರಿದವು..!
ಅದನ್ನು ಕಂಡು ರಾಧ ಹಾಗೇ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಳು.
ತುಂಬಾ ಹೊತ್ತು ನಾವಿಬ್ಬರೂ ಹಾಗೇ ಇದ್ದೆವು.
ನನ್ನ ತಪ್ಪುಗಳ ಆರಂಭ ಆಗಿದ್ದೆ ರಾಧಳಿಗೆ ನಾನು ಚಿಕ್ಕಂದಿನಲ್ಲಿ ಮಾಡಿದ ಬಹಳ ದೊಡ್ಡ ಮೋಸದಿಂದ.
ನನ್ನ ತಪ್ಪಿನ ಅರಿವಾಗಿ ತಡೆಯಲಾರದೆ ಅತ್ತೆ..
ಅವಳ ಕೈ ಹಿಡಿದು ಕ್ಷಮೆ ಕೇಳಿದೆ..
ನನ್ನ ಕಣ್ಣೀರು ಒರೆಸಿದ ರಾಧ.. ನನಗೆ ಸಮಾಧಾನ ಹೇಳಿದಳು..
ಕೊನೆಗೂ ನಾನು ಅತ್ತು ಅತ್ತು ಹಗುರವಾಗಿ ಬಿಟ್ಟೆ.
ಎಲ್ಲರನ್ನೂ ಕಳೆದುಕೊಂಡಿದ್ದ ನಾನು ಕೊನೆಗೂ ಬಹಳ ದೊಡ್ಡದನ್ನು ಗಳಿಸಿಕೊಂಡಿದ್ದೆ.ಅವಳೇ ನನ್ನ ತಂಗಿ ರಾಧ.
ಖುಷಿಯಿಂದ ರಾಧಳ ಕೈ ಹಿಡಿದು ಅಲ್ಲಿಂದ ಹೊರಗೆ ನಡೆದೆ.
' ಅಕ್ಕಾ... ಹೀಗೆ ಕೈ ಕೈ ಹಿಡಿದುಕೊಂಡು ರೈಲ್ವೇ ಸ್ಟೇಷನ್ ನಲ್ಲಿ ಒಮ್ಮೆ ನಾವಿಬ್ಬರು ಒಟ್ಟಿಗೆ ನಡೆದಿದ್ದೆವು ಅಲ್ವಾ..' ಅಂತ ರಾಧ ಮುಗ್ಧವಾಗಿ ಹೇಳಿದಾಗ ಹೃದಯಕ್ಕೆ ಘಾಸಿ ಆದ ಅನುಭವ.
ತಂಗಿ ಸಿಕ್ಕ ಖುಷಿಯಲ್ಲಿ ಅವಳಿಗೆ ಬೇರೆನೂ ಹೇಳಲು ಹೋಗದೆ ಹಾಗೇ ನಕ್ಕು ಮತ್ತಷ್ಟು ಗಟ್ಟಿಯಾಗಿ ಅವಳ ಕೈ ಹಿಡಿದು ಮನೆಯ ಕಡೆಗೆ ನಡೆದೆ..
.....................................................................................
#ಇಷ್ಟೇ...
ab pacchu
moodubidire

Comments
Post a Comment