ದೇವರು ಇದ್ದಾನೆ!

 

         

ಕೆಲವರು ದೇವರನ್ನು ನಂಬುತ್ತಾರೆ.ಆದರೆ ಇನ್ನು ಕೆಲವರು ಇಲ್ಲ.


ದೇವರನ್ನು ಸರ್ವ ಶ್ರೇಷ್ಟನೆಂದು ಒಪ್ಪಿಕೊಂಡು ಅಪ್ಪಿಕೊಂಡವರನ್ನು ಆಸ್ತಿಕರು ಎಂದೂ.. ದೇವರನ್ನೂ ಒಪ್ಪದೇ ಅದಕ್ಕೆ ಬದಲಾಗಿ ವಿಜ್ಞಾನ, ವಿಚಾರ,ತಮ್ಮ ಶ್ರಮ,ದುಡಿಮೆ ಮುಂತಾದವುಗಳೇ ಶ್ರೇಷ್ಟವೆಂದು ನಂಬಿ ಬದುಕುವವರನ್ನು  ನಾಸ್ತಿಕರು ಎಂದು ವರ್ಗೀಕರಿಸಬಹುದು. 


ಎರಡೂ ಜನರಿಗೂ ತಾವು ಆಸ್ತಿಕರಾಗಿರುವುದಿಂದ ತಮಗೆ ಸಿಕ್ಕ ನೆಮ್ಮದಿ ಏನು, ತಾವು ನಾಸ್ತಿಕರಾಗಿದ್ದುದರಿಂದ ತಾವು ಕಂಡು ಕೊಂಡ ಸತ್ಯ ಏನು ಎಂಬುವುದರ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ ಹಾಗಾಗಿ ತಾವು ನಂಬಿದ್ದನ್ನೇ ಅನುಸರಿಸುತ್ತಾರೆ ಮತ್ತು ಅದನ್ನೇ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. 


ದಾಮಣ್ಣ ಮತ್ತು ಕುಸುಮಕ್ಕ ದಂಪತಿಗಳು ದೇವರ ಪರಮ ಭಕ್ತರು.ಮಕ್ಕಳಾಗದೇ ಇದ್ದಾಗ ಕೊನೆಗೆ ದೇವರ ಹರಕೆಯಿಂದಲೇ ಹುಟ್ಟಿದವನು ಮಹೇಶ. 


ಆದರೆ ಮಹೇಶ ದೇವರ ಅಸ್ತಿತ್ವವನ್ನು ಎಂದೂ ನಂಬಿದವನಲ್ಲ.


ಅವನು ಪ್ರಶ್ನಿಸುತ್ತಿದ್ದ... ದೇವರು ಇದ್ದರೆ ಏಕೆ ಅವನು ನೀವುಗಳು ಇಟ್ಟ ನೈವೇದ್ಯ ತಿನ್ನುವುದಿಲ್ಲ...? ಅವನು ಏಕೆ ತನ್ನ ಬಡ ಭಕ್ತರಿಗೆ ಸಹಾಯ ಮಾಡಲು ಓಡೋಡಿ ಬರುವುದಿಲ್ಲ..? ಸತ್ತವರಿಗೆ ಶ್ರಾದ್ಧ ಏಕೆ ಮಾಡಬೇಕು..? ಅವರಿಗೆ ವಡೆ ಪಾಯಸವೇ ಏಕೆ ಬಡಿಸಬೇಕು? ಅದನ್ನು ಕಾಗೆಯೇ ಏಕೆ ಬಂದು ತಿನ್ನಬೇಕು..? ಗಿಳಿ ಪಾರಿವಾಳಗಳು ಬಂದು ತಿಂದರೆ ಏನಾಗುತ್ತದೆ..?! ಇದೆಲ್ಲವೂ ಬರೀ ಸುಳ್ಳು...ಮೂಡನಂಬಿಕೆ ಅಷ್ಟೇ. ನಮ್ಮ ಜೀವನ ಸುಖವಾಗಿರಬೇಕು ಎಂದರೆ ನಾವು ದುಡಿದು ತಿನ್ನಬೇಕು ಅಷ್ಟೇ. ದೇವರು ಅನ್ನುವುದು ಕೇವಲ ಕಲ್ಪನೆ, ಭ್ರಮೆ ಅಷ್ಟೇ ಎಂದು ಹೇಳುತ್ತಿದ್ದ..


ತಮ್ಮ ಮಗ ಈ ರೀತಿ ದೇವರ ಬಗ್ಗೆ ಹೇಳುತ್ತಿರುವುದನ್ನು ನೋಡಿ ನಿಜವಾಗಿಯೂ ದಾಮಣ್ಣ ಮತ್ತು ಕುಸುಮಕ್ಕ ದಂಗಾಗಿ ಹೋದರು. ಅವರು ಅವನಿಗೆ ಎಷ್ಟೇ ತಿಳಿ ಹೇಳಿದರೂ ಅವನಿಗದು ಅರ್ಥವಾಗುತ್ತಿರಲಿಲ್ಲ. 


ಒಂದು ದಿನ ಅವರ ಮನೆಗೆ ಒಬ್ಬ ವೃದ್ಧ ಭಿಕ್ಷುಕ ದೇವರ ಪೋಟೋ ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಿದ್ದ.


ಅವನಿಗೆ ಧರ್ಮಾತ್ಮ ಹಾಗೂ ದೈವ ಭಕ್ತರಾದ ದಾಮಣ್ಣ ಮತ್ತು ಕುಸುಮಕ್ಕ.. ಅಕ್ಕಿ, ಬೇಳೆ, ಬಟ್ಟೆ ಬರೆ ಎಲ್ಲಾ ಕೊಟ್ಟು ಹೊಟ್ಟೆ ತುಂಬುವಂತೆ ಊಟ ಕೂಡ ಹಾಕಿದರು. 


ಹೋಗುವಾಗ  ಭಿಕ್ಷುಕ ಅಂದ... ಖುಷಿಯಾಯಿತು ತಾಯಿ... ನಿನ್ನನ್ನು ಹಾಗೂ ನಿನ್ನ ಪರಿವಾರವನ್ನು ಆ ಶಿವ ಸುಖವಾಗಿ  ಇಟ್ಟಿರಲಿ.


ಅಲ್ಲೇ ಇದ್ದ ಮಹೇಶ ಇದೆಲ್ಲವನ್ನೂ ನೋಡುತ್ತಿದ್ದ.ಅವನಿಗೆ ಗೊತ್ತು ತನ್ನ ತಾಯಿ ಯಾರೇ ದೇವರ ಫೋಟೋ ಹಿಡಿದುಕೊಂಡು ಮನೆಗೆ ಬಂದರೂ ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು.ಅವರ ದೇವರ ಭಕ್ತಿಯ ದೃಷ್ಟಿಯಿಂದ ಅವನಿಗಿದು ಇಷ್ಟವಿಲ್ಲದಿದರೂ  ಮಾನವೀಯತೆ ದೃಷ್ಟಿಯಿಂದ ಅವನು ಎಂದೂ ಯಾರೇ ಬಡವರಿಗೆ,ಹಸಿದವರಿಗೆ ಏನೇ ಕೊಡುವುದನ್ನು ವಿರೋಧಿಸಿದವನಲ್ಲ.


ಆದರೆ ಯಾವಾಗ ಭಿಕ್ಷುಕ... ದೇವರು ನಿಮ್ಮನ್ನು ಸುಖವಾಗಿ ಇಟ್ಟಿರಲಿ.. ಎಂದು ಹೇಳಿದನೋ.. ಅಲ್ಲೇ ಇದ್ದ ಮಹೇಶ ತಡೆಯಲಾರದೆ ಆ ಭಿಕ್ಷುಕನಿಗೆ ಒಂದು ಪ್ರಶ್ನೆ ಕೇಳಿದ..


ನೀವು ದೇವರನ್ನು ನಂಬುತ್ತೀರಾ..?


ಅದಕ್ಕೆ ಭಿಕ್ಷುಕ ಹೇಳಿದ... ಹೌದು ನಂಬುತ್ತೇನೆ..ದೇವರನ್ನು ಎಲ್ಲರೂ ನಂಬಲೇ ಬೇಕು, ಅವನಿಂದಲೇ ಅಲ್ಲವೇ ಎಲ್ಲರೂ  ಸುಖವಾಗಿರುವುದು.


ಅದಕ್ಕೆ ಮಹೇಶ ಕೇಳಿದ... ಹಾಗಾದರೆ ದೇವರನ್ನು ನಂಬುವ ನೀವು ಏಕೆ ಅಷ್ಟೊಂದು ಸುಖವಾಗಿಲ್ಲ?


ದಾಮಣ್ಣ ಹಾಗೂ ಕುಸುಮಕ್ಕ ಇವರಿಬ್ಬರನ್ನೇ ನೋಡುತ್ತಿದ್ದರು.


ಭಿಕ್ಷುಕ ಮಹೇಶನ ಪ್ರಶ್ನೆಗೆ ನಗುತ್ತಾ ಹೇಳಿದ...ಮಗು,ನಾನು ಸುಖವಾಗಿಲ್ಲ ಎಂದು ನಿನಗೆ ನಾನು ಯಾವಾಗ ಹೇಳಿದೆ..


ಅದನ್ನು ಕೇಳಿ ಮಹೇಶನಿಗೆ ಆಶ್ಚರ್ಯವಾಯಿತು. 


ಹಾಗಾದರೆ ನೀವು ಸುಖವಾಗಿ ಇರುವಿರೇ..? ಮಹೇಶ ಪುನಃ ಕೇಳಿದ. 


ಅದಕ್ಕೆ ಭಿಕ್ಷುಕ ನಗುತ್ತಾ ಹೇಳಿದ...ನಿನ್ನ ಪ್ರಕಾರ ಸುಖವಾಗಿರುವುದು ಅಂದರೆ ಏನು ಮಗು? 


ಮಹೇಶ ತಡವರಿಸಿದ.. ಆದರೂ ಹೇಳಿದ... ನೆಮ್ಮದಿಯಾಗಿ ಇರುವುದು. 


ನಾನು ನೆಮ್ಮದಿಯಾಗಿಯೇ ಇದ್ದೆನೆ... ಭಿಕ್ಷುಕ ಶಾಂತವಾಗಿ ಹೇಳಿದ. 


ಹಾಗಾದರೆ ಭಿಕ್ಷೆ ಏಕೆ ಬೇಡುತ್ತಿರುವಿರಿ..? 


ಭಿಕ್ಷುಕ ಮತ್ತೆ ನಗುತ್ತಾ ಹೇಳಿದ.... ನಾನು ಭಿಕ್ಷೆ ಬೇಡಿದರೂ ನೆಮ್ಮದಿಯಾಗಿಯೇ ಇದ್ದೆನೆ. 


ಭಿಕ್ಷೆ ಬೇಡಿದರೂ ನೆಮ್ಮದಿಯಾಗಿ ಇರುವಿರೇ...? ಮಹೇಶ ಕೇಳಿದ.


ಹೌದು...ಭಿಕ್ಷುಕ ಶಾಂತವಾಗಿ ಉತ್ತರಿಸಿದ. 


ಆದರೆ ಅದು ಹೇಗೆ.. ಯಾವ ತರಹದ ನೆಮ್ಮದಿಯದು ? ಮಹೇಶ ಕೇಳಿದ.


ಭಿಕ್ಷುಕ ನಗುತ್ತಾ ಹೇಳಿದ.. ಮನಸ್ಸಿನ ನೆಮ್ಮದಿ.


ನಂತರ ಭಿಕ್ಷುಕ ಮುಂದುವರಿಸಿ ಹೇಳಿದ... 


- ನನ್ನ ಬಳಿ ಏನೂ ಇಲ್ಲ ... ಮನೆ ಇಲ್ಲ..ಹೆಂಡತಿ ಮಕ್ಕಳು ಯಾರೂ ಇಲ್ಲ. 


ಹಿಂದೆ ಆಗಿ ಹೋಗಿದ್ದುದರ ಬಗ್ಗೆ ನನಗೆ ಚಿಂತೆ ಇಲ್ಲ.. ಮುಂದೆ ಆಗುವುದರ ಬಗ್ಗೆಯೂ ನನ್ನಲ್ಲಿ ಚಿಂತನೆಗಳಿಲ್ಲ. 


ಆದರೆ ದಿವ್ಯವಾದ ನೆಮ್ಮದಿ ಇದೆ. 


ಹೇಗೆ ಗೊತ್ತೇ... ನನ್ನ ಮೇಲಿನ ಜೀವನದ  ಎಲ್ಲಾ ಭಾರವನ್ನು ಆ ಶಿವನ ಮೇಲೆಯೇ ಹಾಕಿ ನಾನು ನೆಮ್ಮದಿಯಾಗಿದ್ದೇನೆ.


ಜೀವನದಲ್ಲಿ ಯಾವ ಭಾರವನ್ನು ಆದರೂ ಸುಲಭವಾಗಿ ಮತ್ತೊಬ್ಬರ ಹೆಗಲಿಗೆ ವರ್ಗಾಯಿಸಬಹುದು.. ಆದರೆ ಮನಸ್ಸಿನ ನೋವು, ಆತಂಕಗಳನ್ನು ಯಾರಿಗೂ ವರ್ಗಾಯಿಸಲು ಸಾಧ್ಯವೇ ಇಲ್ಲ. 


ಆದರೆ ಯಾವಾಗಲೆಲ್ಲ .. ಏನೇ ಆಗಲಿ ದೇವರು ಕೈ ಬಿಡಲ್ಲ ಎಂಬ ನಂಬಿಕೆಯಿಂದ ಅವನ ಮೇಲೆ ಭಾರ ಹಾಕಿ ನಮ್ಮ ಎಲ್ಲಾ ಸಮಸ್ಯೆಗಳನ್ನು ಅವನಲ್ಲಿ ಹೇಳಿಕೊಂಡು ನಿರ್ಮಲ ಮನಸ್ಸಿನಿಂದ ಪ್ರಾರ್ಥನೆ ಮಾಡಿ,ಹಾಗೇ ಕಣ್ಣು ಮುಚ್ಚಿ ದೀರ್ಘ ಧ್ಯಾನಕ್ಕೆ ಇಳಿದು  ಬಿಡುತ್ತೇವೆ ನೋಡು .. ಮನಸ್ಸು ಅದೆಷ್ಟೋ ನಿರಾಳ ಆಗಿ ಬಿಡುವುದು.ಇದೇ ದೇವರನ್ನು ನಂಬುವುದರಿಂದ ಆಗುವ ಲಾಭ ಕಣ್ಣಪ್ಪಾ.. 


ನಾನೇನು ಅವನು ನನಗೆ ನೇರವಾಗಿ ಬಂದು ನನ್ನ ಈ ಭಿಕ್ಷೆ ತಟ್ಟೆಗೆ ಚಿನ್ನದ ನಾಣ್ಯಗಳನ್ನು ಹಾಕಲಿ ಎಂದು ಕನಸು ಕಂಡವನಲ್ಲ...ಜೀವನದಲ್ಲಿ ಯಾರೂ  ಇಲ್ಲದ ನನ್ನಂತವನಿಗೂ ಯಾರ ಬಳಿ ಆದರೂ ನನ್ನ ನೋವು ಹೇಳಿಕೊಂಡು ಸಮಾಧಾನ ಆಗಿ ಬಿಡಬೇಕು ಎಂದು ಅನ್ನಿಸುತ್ತದೆ ನೋಡು.. ಆವಾಗ ನನ್ನಂತವನಿಗೆ ದೇವರಿಗಿಂತ ಒಳ್ಳೆಯ ಗೆಳೆಯನೇ ಇಲ್ಲ.. ಮತ್ತು ನನ್ನಂತೆ ಈ ರೀತಿಯಾಗಿ ಅವನನ್ನು ಶ್ರದ್ಧೆಯಿಂದ ಭಕ್ತಿಯಿಂದ ನಂಬುವವರು ಈ ಜಗತ್ತಿನಲ್ಲಿ ಹಲವಾರು ಮಂದಿ ಇದ್ದಾರೆ. 


ನಿನಗೆ ಗೊತ್ತಾ... ಆಗರ್ಭ ಶ್ರೀಮಂತ ಕೂಡ ತನ್ನ ಅರಮನೆಯಂತ ಬಂಗಲೆಯಲ್ಲಿ ಇದ್ದರೂ ಕೂಡ ಬೀದಿ ಬದಿಯ ಭಿಕ್ಷುಕನಾದ ನನ್ನಷ್ಟು ಸುಖಿಯಾಗಿ..ನೆಮ್ಮದಿಯಾಗಿ ಇರುತ್ತಾನೆ ಎಂದು ನಾನು ಹೇಳಲಾರೆ.. ಆದರೆ ನಾನು ಏನೂ ಇಲ್ಲದಿದ್ದರೂ ಇಷ್ಟೊಂದು ನೆಮ್ಮದಿಯಾಗಿ ಇದ್ದೆನೆ ಎಂದರೆ ಅದಕ್ಕೆ ಕಾರಣ ಆ ಭಗವಂತ ಒಬ್ಬನೇ.. 


ಅಷ್ಟು ಹೇಳಿ ಆ ಭಿಕ್ಷುಕ ಅಲ್ಲಿಂದ ನಡೆದು ಹೋಗಿದ್ದ. 


ಯಾರೂ ಏನೇ ಭಗವಂತನ ಬಗ್ಗೆ ಹೇಳಿದ್ದರೂ ಮಹೇಶನಿಗೆ ಎಂದೂ  ದೇವರ ಬಗ್ಗೆ ಅಂತಹ ಆಸಕ್ತಿ  ಬಂದಿರಲಿಲಲ್ಲ.


ಆದರೆ ಭಿಕ್ಷುಕನ ಮಾತು.. ಅವನ ಆ ಸಂತೋಷ ನೆಮ್ಮದಿ ಕಂಡು.. ಮೊದಲ ಬಾರಿಗೆ ಮಹೇಶನಿಗೆ ದೇವರ ಬಗ್ಗೆ ಕುತೂಹಲ ಹೆಚ್ಚಾಯಿತು. 


ಆದರೆ ಅದನ್ನು ಅವನು ತನ್ನ ತಂದೆ ತಾಯಿ ಬಳಿ ಹೇಳಿಕೊಳ್ಳಲಿಲ್ಲ.. ಬದಲಿಗೆ ನೇರವಾಗಿ ಊರಿನಲ್ಲಿದ್ದ ಮಠಕ್ಕೆ ಹೋದ. 


ಅಲ್ಲಿ ವಿದೇಶಿಯರೂ ಕೂಡ  ಇರುವುದನ್ನು  ಮಹೇಶ ಗಮನಿಸಿದ. 


ಕೈಯಲ್ಲೊಂದು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಕಣ್ಣು ಮುಚ್ಚಿ ಕೊಂಡು ಧ್ಯಾನ ಮಾಡುತ್ತಿದ್ದ.. ಅವರ ಬಳಿಯೇ ಮಹೇಶ ಕೇಳಿದ.. 


- ಹೇಳಿ.. ದೇವರಿಂದ ನಿಮಗೆ ಏನು ಲಾಭ ಆಗಿದೆ..? 


ಅದಕ್ಕವರು ಹೇಳಿದರು.. ನಾವು ಇಲ್ಲಿಗೆ ಬಂದು ಈ ದೇಶದ ದೇವರು..ಮತ್ತು ಇಲ್ಲಿನ ಸಾಧು ಸಂತರ ಬಗ್ಗೆ ತಿಳಿದುಕೊಂಡಿದ್ದೇವೆ ಮತ್ತು ಅಧ್ಯಯನ ಮಾಡಿದ್ದೇವೆ.ಧಾನ್ಯ, ಆಧ್ಯಾತ್ಮಿಕ ಸಾಧನೆಗಳಂತಹ ಪರಮ ಸುಖ ಈ ಭಾರತದ ಪವಿತ್ರ ಮಣ್ಣಿನಲ್ಲಿ ಬಿಟ್ಟರೆ ಬೇರೆ ಯಾವ ದೇಶದಲ್ಲಿ ಸಿಗಲು ಸಾಧ್ಯವೇ ಇಲ್ಲ... ಈ ದೇಶದಲ್ಲಿ ಹುಟ್ಟಿದ ನೀವೇ ಪುಣ್ಯವಂತರು.. ಎಂದು ಹೇಳಿ ಬಿಟ್ಟಿದ್ದರು ಆ ವಿದೇಶಿಯರು. 


ಅದಕ್ಕೆ ಮಹೇಶ ಕೇಳಿದ.. ನಿಮಗೆ ಧ್ಯಾನ, ಆಧ್ಯಾತ್ಮ ದಿಂದ ಸುಖ ಸಿಕ್ಕಿದೆಯೇ... 


ಅದಕ್ಕವರು ಹೇಳಿದರು.. ಬರೀ ಸುಖವಲ್ಲ...ಆತ್ಮ ತೃಪ್ತಿಯೇ  ಆಗಿದೆ.


ಅದನ್ನು ಕೇಳಿ ಮಹೇಶನಿಗೂ ತಾನೂ ಒಮ್ಮೆ ಈ ಧಾನ್ಯ ಮಾಡಬೇಕು ...ಮತ್ತು ವಿದೇಶಿಯರನ್ನೂ ಸೆಳೆಯುವ ಇದರಲ್ಲಿ ಅಂತಹದ್ದು ಏನಿದೆ ಎಂದು ತಿಳಿಯಲು  ನಿರ್ಧರಿಸಿದ.


ಆ ದಿನದಿಂದ ಮಹೇಶ... ದಿನಾಲೂ ಮಠಕ್ಕೆ ಹೋಗಿ ಧಾರ್ಮಿಕ ಪ್ರವಚನ,ಸತ್ಸಂಗ, ಪುರಾಣ ಕಥೆ ಕೇಳಲು ಹಾಗೂ ಕೊನೆಯಲ್ಲಿ ಎಲ್ಲರೊಡನೆ ಧ್ಯಾನ ಮಾಡಲು ಕೂಡ ಶುರು ಮಾಡಿದ. 


ಕೊನೆ ಕೊನೆಗೆ ಅವನಿಗಾಗುತ್ತಿದ್ದ ಧ್ಯಾನದ  ಸುಖ ಎಷ್ಟಿತ್ತು ಎಂದರೆ ಎಲ್ಲರೂ ಧ್ಯಾನ ಮುಗಿಸಿ ಅಲ್ಲಿಂದ ಎದ್ದು ಹೋದರೂ ಮಹೇಶ ಮಾತ್ರ ಅಲ್ಲಿಯೇ ಕುಳಿತು ಬಿಡುತ್ತಿದ್ದ.


ಇದು ಯಾವುದೂ ಮನೆಯಲ್ಲಿ ಗೊತ್ತೇ ಇಲ್ಲ. ತಾನು ನಿಧಾನವಾಗಿ ಭಗವಂತನನ್ನು ಒಪ್ಪಿಕೊಂಡಿದ್ದೇನೆ ಎಂದು ಮಹೇಶ  ತನ್ನ ತಂದೆ ತಾಯಿಗೆ ತೋರಿಸಿಕೊಳ್ಳಲೂ ಇಲ್ಲ.. ಹೇಳಲೂ ಇಲ್ಲ.


ಭಗವಂತನ ಕಡೆಗಿನ ಅವನ ಆಸಕ್ತಿ...ಅವನ ಧ್ಯಾನದ ಪರಿಧಿ.. ಯಾವ ಎಲ್ಲೆ ಮೀರಿತ್ತು ಎಂದರೆ ಅವನ ಆಧ್ಯಾತ್ಮಿಕ ಸಾಧನೆಗೆ ತನ್ನ ಮನೆ,ತನ್ನ ಆ ಊರಿನ ಮಠವೇ ಅವನಿಗೆ ಚಿಕ್ಕದಾಯಿತು. 


ಒಂದು ದಿನ ಯಾರಿಗೂ ಹೇಳದೇ ಮನೆ ತೊರೆದ ಮಹೇಶ, ಸಾಧುಗಳೊಂದಿಗೆ ಹಿಮಾಲಯದ ಹಾದಿ ಹಿಡಿದೇ ಬಿಟ್ಟಿದ್ದ!!


ಅಲ್ಲಿಯ ಗುಹೆಗಳಲ್ಲಿ ಸುಧೀರ್ಘ ಧ್ಯಾನಕ್ಕೆ ಜಾರಿ ಬಿಡುತ್ತಿದ್ದ ಅವನು.ಹೊಟ್ಟೆ ಹಸಿವು ಆದಾಗ ಮಾತ್ರ ಕೆಲವೊಮ್ಮೆ ಭಿಕ್ಷೆ ಪಾತ್ರೆ ಹಿಡಿದು ಭಿಕ್ಷೆ ಬೇಡಲು ಹೋಗುತ್ತಿದ್ದ, ಆದರೆ ಹೊಟ್ಟೆ ಹಸಿವಿಗಿಂತಲೂ  ಭಗವಂತನನ್ನು ತನ್ನಲ್ಲೇ ಕಂಡುಕೊಳ್ಳಬೇಕು ಎಂಬ ಸಾಧನೆಯ ಹಸಿವೇ ಅವನಲ್ಲಿ ಜಾಸ್ತಿಯಾಗಿತ್ತು.


ಭಗವಂತನೆಂಬ ಸುಖ ಏನು ಎಂದು ಅವನಿಗೀಗ ಲೆಕ್ಕಕಿಂತ ಜಾಸ್ತಿಯೇ ಅರಿವಾಗಿತ್ತು,ಅವನು ಆ ಸುಖ ನೆಮ್ಮದಿಗಳನ್ನು  ಕಳೆದುಕೊಳ್ಳಲು ಇಷ್ಟ ಪಡಲಿಲ್ಲ... ಅದಕ್ಕಾಗಿ ಅವನು ಎಂದಿಗೂ ಮನೆಗೆ ಹಿಂದಿರುಗಲೇ ಇಲ್ಲ! ಮಾತ್ರವಲ್ಲ ತನಗೊಬ್ಬರು ತಂದೆ ತಾಯಿಯರು ಇದ್ದರು ಎಂಬುದನ್ನೇ ನಿಧಾನವಾಗಿ ಮಹೇಶ ಮರೆತು ಬಿಟ್ಟ! 


ಮನೆ ಬಿಟ್ಟು ಹೋದ ಮಗನಿಗಾಗಿ ದಾಮಣ್ಣ ಕುಸುಮಕ್ಕ ಕಂಡ ಕಂಡ ದೇವರಿಗೆ ಹರಕೆ ಹೊತ್ತರು...ವ್ರತ ಪೂಜಾಧಿಗಳನ್ನು ಬಿಡದೇ ಮಾಡಿದರು.. ಪುಣ್ಯ ಕ್ಷೇತ್ರಗಳಿಗೆ ನಿರಂತರವಾಗಿ ತೀರ್ಥಯಾತ್ರೆ ಹೋದರು.. ಆದರೆ ಏನೂ ಪ್ರಯೋಜನ ಆಗಲೇ ಇಲ್ಲ. ಹೋದ ಮಹೇಶ ಹಿಂದಿರುಗಿ ಬರಲೇ ಇಲ್ಲ. ಅವನು ಏತಕ್ಕಾಗಿ ಹೋದ, ಎಲ್ಲಿಗೆ ಹೋದ ಎಂಬುವುದು ಕೂಡ ಅವರಿಗೆ ಗೊತ್ತಿಲ್ಲ. 


ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳೇ ಕಳೆದಿದ್ದವು..ಅದೊಂದು ದಿನ  ಅವರಿಬ್ಬರೂ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿದ್ದರು. 


ವಿಶ್ವನಾಥನಿಗೆ ಕುಸುಮಕ್ಕ ಕೈ ಮುಗಿದ್ದು ಕಣ್ಣೀರು ಸುರಿಸಿಯೇ ಹೇಳಿದ್ದರು - ಹೇಯ್ ವಿಶ್ವನಾಥ.. ದೇವರಿಲ್ಲ ದೇವರಿಲ್ಲ.. ಎಂದು ಸದಾ ನಿನ್ನನ್ನು ಅಪಮಾನಿಸುತ್ತಿದ್ದ ನನ್ನ ಮಗನಿಗೆ ನೀನು ಏನು ಶಿಕ್ಷೆ  ಕೊಟ್ಟೆಯೋ ನನಗದು ಗೊತ್ತಿಲ್ಲ ತಂದೆ...ಆದರೆ ಈ ಕೊನೆಗಾಲದಲ್ಲಿ ಆದರೂ ನನಗೆ ನನ್ನ  ಮಗನನ್ನು ಕರುಣಿಸು ವಿಶ್ವನಾಥ.... 

 


ಆ  ಸಂಜೆಯೇ ಕಾಶಿಗೆ ಉತ್ಸವಕ್ಕೆಂದು ಉತ್ತರ ಭಾರತದ ಸಾಧುಗಳೊಂದಿಗೆ ಬಂದು, ಆ ನಂತರ ಅಲ್ಲಿಂದ ಅವರೊಂದಿಗೆಯೇ ನಡೆದುಕೊಂಡು ಹೊರ ಹೋಗುತ್ತಿದ್ದ ಮಹೇಶನನ್ನು ಕುಸುಮಕ್ಕ ಕೊನೆಯ ಘಳಿಗೆಯಲ್ಲಿ ನೋಡಿಯೇ ಬಿಟ್ಟರು... ಹೌದು ಇಪ್ಪತ್ತು ವರ್ಷಗಳ ನಂತರ!! 


ಎಷ್ಟಾದರೂ ಕರುಳ ಕುಡಿ.. ಕರುಳು ತನ್ನ ಸಂಬಂಧವನ್ನು ಗುರುತಿಸದೇ ಇರುತ್ತದೆಯೇ..ಪಕ್ಕದಲ್ಲಿಯೇ ಇದ್ದ ದಾಮಣ್ಣನಿಗೆ ತನ್ನ ಕೈಯಿಂದ ಕುಟ್ಟಿ,ನಡೆದು ಹೋಗುತ್ತಿದ್ದ ಅವನತ್ತಲೇ  ಬೊಟ್ಟು ಮಾಡಿ ತೋರಿಸಿ... ಅದು... ಅದು ನಮ್ಮ ಮಗ.. ಮಹೇಶ.. ಎಂದು ಹೇಳಿ ಕಣ್ಣೀರಾಗಿ ಬಿಟ್ಟರು ಕುಸುಮಕ್ಕ.! 


ಗುರುತು ಸಿಗದಷ್ಟು ಗಡ್ಡ ಬಿಟ್ಟುಕೊಂಡು,ಗಂಧ ವಿಭೂತಿ ಯಥೇಚ್ಛವಾಗಿ ಬಳಿದುಕೊಂಡು,ಖಾವಿ ತೊಟ್ಟು ಸಂನ್ಯಾಸಿ  ಆಗಿದ್ದ ಅವನನ್ನು ಆ ರೀತಿ ನೋಡಿದ ಅವರಿಬ್ಬರೂ ಒಂದು ಕ್ಷಣ ದಂಗಾಗಿ ಬಿಟ್ಟಿದ್ದರು! 


ಇಬ್ಬರೂ ಅವನತ್ತಲೇ  ಓಡುತ್ತಾ.. ಮಹೇಶಾ.. ಮಹೇಶಾ .. ಎಂದು ಜೋರಾಗಿ ಕೂಗಿದರು... ಕೂಗುತ್ತಲೇ ಮತ್ತಷ್ಟು ಕಣ್ಣೀರಾಗಿದ್ದರು.


ಎಷ್ಟಾದರೂ ಒಬ್ಬನೇ ಮಗ.. ಹೇಗೆ ತಡೆದುಕೊಳ್ಳುತ್ತದೆ ಜೀವ. 


ಮಹೇಶ... ನಾನು  ಕಣೋ ನಿನ್ನ ಅಪ್ಪ... ಎಂದು ನಡೆದು ಹೋಗುತ್ತಿದ್ದ ಮಹೇಶನ ಎದುರು ಬಂದು ದಾಮಣ್ಣ ಹೇಳಿದಾಗ... 


ಮಹೇಶ ಸುಮ್ಮನೆ ಅವರಿಬ್ಬರನ್ನೂ  ದಿಟ್ಟಿಸಿ ನೋಡಿದ್ದ.. ಅಷ್ಟೇ!


ಇಬ್ಬರೂ ಕೂಡ.. ಬಾ ಮಹೇಶ... ಮನೆಗೆ ಹೋಗುವ, ಬಾ.. ಎಂದು ಗೋಗರೆದು ಕೇಳಿದ್ದರು.


ಆದರೆ ಅವರಿಗೆ ಜಾಸ್ತಿ ಏನೂ ಹೇಳಲು ಹೋಗದ ಮಹೇಶ... ತನ್ನ ಕೈಯಲ್ಲಿದ್ದ ಒಂದು ರುದ್ರಾಕ್ಷಿ ಮಾಲೆಯನ್ನು ಕುಸುಮಕ್ಕನ ಕೈಗಿತ್ತು... ನಿಮ್ಮಿಬ್ಬರನ್ನು ಆ ದೇವರು ಸುಖವಾಗಿ ಇಟ್ಟಿರಲಿ ತಾಯಿ... ಎಂದು ಹೇಳಿ ಮತ್ತೆ ಒಮ್ಮೆಯೂ ಹಿಂದಿರುಗಿ ನೋಡದೆ  ಅಲ್ಲಿಂದ ಆ ಸಂನ್ಯಾಸಿಗಳೊಂದಿಗೆ ನಡೆದೇ ಬಿಟ್ಟಿದ್ದ!


ತಮ್ಮ ಮಗ ದೇವರನ್ನು ಕೊನೆಗೂ ನಂಬಿ ಬಿಟ್ಟ ಎಂದು ಸಂತೋಷ ಪಡುವುದೋ.. ಅಥವಾ  ತಮ್ಮ ಕರುಳ ಕುಡಿ  ತಮ್ಮಿಂದ ಈ ರೀತಿಯಾಗಿ ದೂರವಾಗಿ ಬಿಟ್ಟಿತ್ತಲ್ಲ.. ಎಂದು ದುಃಖ ಪಡುವುದೋ ಎಂದು ಗೊತ್ತಾಗದೇ ದಾಮಣ್ಣ ತಮ್ಮಿಂದ ದೂರ ನಡೆದು ಹೋಗುತ್ತಿರುವ ಮಹೇಶನನ್ನೇ ನೋಡುತ್ತಾ ಹಾಗೇ ಅಲ್ಲೇ ಉಳಿದು ಬಿಟ್ಟರು..!


ಆದರೆ ತಾಯಿ ಎಂಬುವವಳಿಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತದೆ... ದಾಮಣ್ಣನನ್ನು ಗಟ್ಟಿಯಾಗಿ ಹಿಡಿದುಕೊಂಡು.. ಮಹೇಶಾ.. ಮಹೇಶಾ... ಎಂದು ಆ ನಡು ಬೀದಿಯಲ್ಲಿಯೇ ಕಣ್ಣೀರ ಕೋಡಿ ಹರಿಸಿ ಬಿಟ್ಟಿದ್ದರು ಕುಸುಮಕ್ಕ..!! 


.....................................................................................


#ಇಷ್ಟೇ..! 


ab pacchu 

moodubidire

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!