ಒಮ್ಮೆ ಅನುಭವಿಸಿ ಬಿಡಿ..
ಕೊರಕಲಿನಲ್ಲಿ ಹರಿಯುವ ನೀರು ಮಾತ್ರ ಜುಳು ಜುಳು ಅಂತ ಸೌಂಡ್ ಮಾಡುತ್ತೆ.
ಹೆಸರಿಲ್ಲದ ಕಾಡು ಹೂವು ಕೂಡ ಒಂದು ಕ್ಷಣ ಮನಸ್ಸಿಗೇನೋ ಮುದ ನೀಡುತ್ತೆ. ಬರಿಗಾಲಲ್ಲಿ ಇಬ್ಬನಿ ಕುಳಿತಿರುವ ಹುಲ್ಲುಗಾವಲಿನಲ್ಲಿ ಒಮ್ಮೆ ಹಾಗೇ ನಡೆದು ನೋಡಿ...
ತೋಟದ ಅಂಚಲ್ಲಿ ಹರಿಯುವ ಹೊಳೆಯಲ್ಲಿ ಹೋಗಿ ಒಮ್ಮೆ ಸುಮ್ಮನೆ ನಿಂತುಕೊಂಡರೆ ಸಾಕು ಪಾದದಡಿಯ ಮರಳಿಗೆ ಹಾಗೇ ಬೆರಳುಗಳೆಡೆಯಿಂದ ಸರಿದು ಹೋಗಿ ಸರಸವಾಡಬೇಕೆನ್ನುವ ಅವಸರ , ಪುಟಾಣಿ ಮೀನುಗಳಿಗೆ ನಿಮ್ಮ ಪಾದಗಳಿಗೆ ಅಚ್ಚುಕಟ್ಟಾಗಿ ಸ್ಪಾ ಸೇವೆಯನ್ನು ಒದಗಿಸಬೇಕೆನ್ನುವ ಹಂಬಲ, ಆತುರ, ತವಕ . ಹಾಗೇ ಬಗ್ಗಿ ಹೊಳೆಯಿಂದ ಒಂದು ಚಪ್ಪಟೆ ಯಾದ ಕಲ್ಲು ಎತ್ತಿಕೊಂಡು ನೀರ ಮೇಲ್ಮೈ ಮೇಲೆ horizontal ಆಗಿ ಎಸೆದರೆ ಕಲ್ಲು ಕೂಡ ಹೊಳೆ ನೀರ ಮೇಲೆ ಜಿಗಿದು ನಲಿದು ಚಿಮ್ಮುತ್ತ ಚಿಮ್ಮುತ್ತ ನಾಟ್ಯವಾಡಿ ಬಲು ದೂರ ಸಾಗಿ ಬಿಡುತ್ತದೆ...
ಬೇಲಿ ಬದಿ, ಮನೆಯ ಹಿತ್ತಲಿನ ಗೋಡೆ, ಮಣ್ಣಿನ ಕಾಂಪೌಂಡ್ ಮೇಲೆ ಬೆಳೆಯುವ ಹುಲ್ಲು ಪತ್ರೆಗಳ ಹೆಸರು ಬಲ್ಲವರಾರು.ಆದರೂ ಅದೆಷ್ಟು ಚಂದ, ಹೋದಾಗಲೆಲ್ಲ ಹಾಗೇ ಅದರ ಮೇಲೊಮ್ಮೆ ಹಿತವಾಗಿ ಕೈಯಾಡಿಸಿ ಮೈ ಸವರಿ ಬನ್ನಿ..
ಆಲದ ಮರದ ಬೀಳಲಿನಲ್ಲಿ ಹಾಗೇ ಸ್ವಲ್ಪ ಆಚೆಯಿಂದ ಈಚೆಗೆ, ಈಚೆಯಿಂದ ಆಚೆಗೆ ನೇತಾಡಿ ಬಿಡಿ. ಹೊಳೆಯಲ್ಲಿ ನೋಟ್ ಬುಕ್ ಪೇಜ್ ಹರಿದು ದೋಣಿ ಮಾಡಿ ಬಿಟ್ಟು ಬಿಡಿ.ಅಪ್ಪನ ಪಂಚೆ ತಂದು ಮೀನು ಹಿಡಿಯಲು ಶುರು ಮಾಡಿ. ತಾವರೆ ದಂಟಿನಲ್ಲಿ ಕೊಳದ ನೀರು ಹೀರಬಹುದು
ಕೆಫೆ ಗಳ ದುಬಾರಿ ಕಾಫಿ ಯೇನೋ ಚೆನ್ನಾಗಿಯೇ ಇರುತ್ತೆ. ಆದರೆ ಮನೆಯ ಹಟ್ಟಿಯಲ್ಲೇ ಇರೋ ದೇಸಿ ದನದ ದಪ್ಪನೆಯ ಹಾಲನ್ನು ಚೆನ್ನಾಗಿ ಕಾಸಿ, ಬೆಲ್ಲ ಹಾಕಿ ಅಮ್ಮ ಸಂಜೆ ಹೊತ್ತಲ್ಲಿ ಮಾಡಿ ಕೊಡೋ ಬಿಸಿ ಬಿಸಿಯಾದ ಕಾಫಿ,ಜೊತೆಗೆ ಒಂದೆರಡು ಹುರಿದ ಹಲಸಿನ ಹಪ್ಪಳ ಇದ್ದರೆ ನಮ್ಮ ಕಡೆಗೆ ಸ್ವರ್ಗ ಅಂತಿವೀ..
ಅಮ್ಮ ಒಗ್ಗರಣೆ ಹಾಕಲು ಕರಿಬೇವು, ಕಡುಬು(ಗಟ್ಟಿ) ಮಾಡಲು ಅರಿಶಿನ ದ ಎಲೆ.. ತೋಟದಿಂದ ಕಿತ್ತುಕೊಂಡು ಬಾ ಎಂದರೆ ತಡಮಾಡದೇ ತೋಟಕ್ಕೆ ಓಡಿ ಬೀಡಿ.
ಕರಿಬೇವಿನ ಎಲೆಯನ್ನಾಗಲಿ, ಅರಿಶಿನ ಎಲೆಯನ್ನಾಗಲಿ ಸೀದಾ ಹಾಗೇ ತರದೇ, ಸ್ವಲ್ಪವೇ ಎಲೆಯ ತುದಿ ಹರಿದು, ಮೂಗಿನ ತುದಿಗೆ ಹಾಗೇ ತಂದು ಕಣ್ಣು ಮುಚ್ಚಿ ಆ ಎಲೆಗಳ ಪರಿಮಳವನ್ನು ಹಾಗೇ ಆಘ್ರಾಣಿಸಿ ಬಿಡಿ....
ತುಳುವೇ ಹಲಸನ್ನು ಒಬ್ಬರೇ ಹಾಗೇ ತಿನ್ನಬಹುದು, ಜೇನಿ ನೊಂದಿಗೆ ಕೂಡ ನೆಂಚಿಕೊಂಡು ಮೆಲ್ಲಬಹುದು. ಹಳ್ಳಿಯಲ್ಲಿ ವಿವಿಧ ಮರಗಳ ಎಲೆಗಳಿಂದ ಮಾಡುವ ಕಡುಬುಗಳ ರುಚಿಯೇ ಬೇರೆ.
ಬೆಟ್ಟ ಗುಡ್ಡ ಗಳಿಂದ ಹೊಳೆಗೆ ಬರುವ ನೀರನ್ನು ಹಾಗೇ ಬೊಗಸೆಯಲ್ಲಿ ಎತ್ತಿಕೊಂಡು ಕುಡಿದು ಬಿಡಬಹುದು. ಯಾವುದೇ ಪರಿಶುದ್ಧತೆಯ ಸರ್ಟಿಫಿಕೇಟ್ ಆಗಲಿ ಫಿಲ್ಟರ್ ಗಳಾಗಲಿ ಬೇಕಾಗಿಲ್ಲ..
ಇದೆ. ಇವೆಲ್ಲವೂ ಇದೆ. ಇನ್ನೂ ಇದೆ. ಸಂಪೂರ್ಣವಾಗಿ ಇನ್ನೂ ಯಾವುದೂ ಮರೆಯಾಗಿಲ್ಲ. ಆದರೆ ನಗರದೊಳಗೆ ಹುಡುಕಿದರೆ ಸಿಗುವುದಿಲ್ಲ. ಹಳ್ಳಿಗಳಿಗೆ ಇಳಿಯಬೇಕು, ಕಾಡು ಹತ್ತಬೇಕು, ಗುಡ್ಡ ಏರಬೇಕು. ನದಿಯಲ್ಲಿ ಈಜಾಡಬೇಕು.. ಹಳ್ಳಿ ಜೀವನ, ಕೃಷಿ ಬದುಕು ನಮ್ಮದಾಗಿಸಿಕೊಳ್ಳಬೇಕು ಅಷ್ಟೇ.
ಈ ಜಂಜಡ, ಬ್ಯುಸಿ ಆದ ಲೈಫ್, work stress ಗಳಿಂದ ಬಿಡುಗಡೆಗಾಗಿ.. ವಾರಾಂತ್ಯ ವೋ, ತಿಂಗಳ ಕೊನೆಗೊ ರೆಸಾರ್ಟ್ ಲೋಕಕ್ಕೆ ನಮ್ಮನ್ನು ನಾವು ಶರಣಾಗತಿ ಮಾಡಿಕೊಳ್ಳುವ ಬದಲು,ಸ್ವತಃ ಹಳ್ಳಿಯೇ ಆಗಿರುವ ನಮ್ಮ ನಮ್ಮ ಊರಿಗೋ,ಇನ್ನೂ ಹಳ್ಳಿ ಜೀವನ,ಕೃಷಿ ಜೀವನ ಕಾಣ ಸಿಗೋ ಅಜ್ಜಿ ಮನೆಗೋ ಒಮ್ಮೆ ಹೋಗಿ ಬನ್ನಿ.
ನಗರ ಪಟ್ಟಣಗಳಿಂದ ಊರಿಗೆ, ಮನೆಗೆ ಎಲ್ಲರೂ ಬರುತ್ತಾರೆ. ರಜೆ ಸಿಕ್ಕಿದಾಗ, ಅಥವಾ ರಜೆ ಹಾಕಿ ಆದರೂ ಊರಿಗೇ ಬಂದೇ ಬರುತ್ತಾರೆ. ಆದರೆ ನಮ್ಮೂರಲ್ಲಿರುವ, ನಮ್ಮ ಹಳ್ಳಿಯ ಒಳಗಿರುವ ಮೇಲೆ ಹೇಳಿದ ಹಳ್ಳಿ ಸೊಬಗನ್ನು ಸವಿಯುವ, ಆ ಅನುಭವವನ್ನು ನಮ್ಮದಾಗಿಸಿಕೊಳ್ಳುವ ಮನಸ್ಸು ನಾವು ಮಾಡಬೇಕು ಅಷ್ಟೇ..
ಒಂದು ಮಗ್ ಬಿಯರ್, ಒಂದು ಪೆಗ್ ವಿಸ್ಕಿ ಗಿಂತಲೂ.. ಬೆಂಕಿ ಹಾಕಿ, ಹುಳು ಓಡಿಸಿ ತಿನ್ನುವ ಹಳ್ಳಿಯ ಮರದ ಬೊಡ್ಡೆಯಲ್ಲಿ ಇರೋ ತಾಜಾ ಜೇನು ಯಾವತ್ತೂ ಜಾಸ್ತಿ ರುಚಿ.
ನಗರ ಜೀವನ ತುಂಬಾನೇ frustrated ಅಂತ ಅನಿಸಿದಾಗ ಒಮ್ಮೆ ಹಳ್ಳಿ ಗೆ ಹೋಗಿ ಬನ್ನಿ.
ಅಲ್ಲಿಯ ಮರ ಗಿಡ ಬಳ್ಳಿ ಪತ್ರೆ ಹುಲ್ಲು ಹೊಳೆ ಮಾತಾಡದೇ ಇರಬಹುದು, ಅಲ್ಲೋಂದು ಗುಂಯ್ಯ್ ಗುಡುವ ನಿಶ್ಶಬ್ದ ವೇ ತುಂಬಿರಬಹುದು.. ಅದರೇ ಒಮ್ಮೆ ಆ ಪ್ರಕೃತಿ ಯೊಂದಿಗೆ ಒಂದಷ್ಟು ಕ್ಷಣ ಹಾಗೇ ಎಲ್ಲವನ್ನೂ ಮರೆತು ಬೆರೆತು ಹೋಗಿಬಿಡಿ. ಪ್ರಾಮಿಸ್ ಮಾಡಬಲ್ಲೆ, ಪ್ರಕೃತಿಗೆ ನಿಮ್ಮ ಮನಸ್ಸಿನ ನೋವುಗಳನ್ನು ಹೀಲ್ ಮಾಡಬಲ್ಲ ಅದ್ಭುತ ಶಕ್ತಿ ಇದೆ. ಮತ್ತೊಂದಷ್ಟು ಹೊಸ ಉಲ್ಲಾಸ ವನ್ನು ತುಂಬಿಯೇ ಅದು ನಿಮ್ಮನ್ನು ವಾಪಸ್ ಕಳಿಸಿಬಿಡುತ್ತದೆ.
ಹವಾನಿಯಂತ್ರಿತ ಐಷಾರಾಮಿ ಬಿಲ್ಡಿಂಗ್ ಗಳು, ಪ್ಲೈ ಓವರ್ ಗಳು, ರಾತ್ರಿ ಹೊತ್ತಿನಲ್ಲಿ ವಿದ್ಯುತ್ ದೀಪಗಳಿಂದ ಜಗ ಮಗಿಸೋ ನಗರ ಪಟ್ಟಗಳು ಯಾವತ್ತೂ ಸ್ವರ್ಗ ಅಂತ ಅನ್ನಿಸಿಕೊಳ್ಳೋದೇ ಇಲ್ಲ.
ನಿಜವಾದ ಸ್ವರ್ಗ ಹಳ್ಳಿಯ ಇಳಿಜಾರಿನಲ್ಲಿ, ಹೊಳೆ ನೀರು ಹರಿಯುವ ಕೊರಕಲಿನಲ್ಲಿ,ಕೆಸುವಿನ ಎಲೆಯ ಮೇಲೆ ಬಿದ್ದು ಜಾರುವ ನೀರ ಬಿಂದು ಹೊಳೆದು ಬೆಳ್ಳಿ ಮಣಿ ಆಗುವ ಬಗೆಯಲ್ಲಿ,ಕಿವಿಗೆ ಗಾಳಿ ಹೊಕ್ಕು ಮನಬಂದಂತೆ ಓಡಾಡೋ ಪುಟ್ಟ ಕರುವಿನಲ್ಲಿ, ಹೂವಿನ ಸಿಹಿಯಲ್ಲಿ,ಹಾರುವ ಅಜ್ಜನ ಗಡ್ಡದಲ್ಲಿ, ಗದ್ದೆ ಯ ಬದುವಿನಲ್ಲಿ, ಹಳ್ಳಿಗರ ಬದುಕಿನಲ್ಲಿ..
ನಿಜವಾದ ಸ್ವರ್ಗ ಅಡಗಿದೆ.
ಒಮ್ಮೆಯೂ ಅನುಭವಿಸಿಲ್ಲದಿದ್ದರೆ, ದಯವಿಟ್ಟು..
#ಒಮ್ಮೆ_ಅನುಭವಿಸಿ_ಬಿಡಿ...
.....................................................
#ಏನೋ_ಒಂದು
AB Pacchu,
Moodbidri

Comments
Post a Comment