ಅವನೂ ಮಾಟಗಾರ
ಸಮಸ್ಯೆ ಎನ್ನುವುದು ಮನುಷ್ಯ ಹುಟ್ಟುವಾಗಲೇ ತಾನೂ ಹುಟ್ಟಿ ಬಿಡುತ್ತದೆ.
ಕೆಲವೊಮ್ಮೆ ಸಮಸ್ಯೆಗಳು ಜೀವನವನ್ನೇ ಅಲ್ಲಾಡಿಸಿ ಬಿಡುತ್ತದೆ.
ಜೀವನ ಸಾಕು ಎಂದೆನಿಸುವುದು ಆವಾಗಲೇ.
ದೇವರು,ವೈದ್ಯರು, ಕೋರ್ಟು,ಸ್ನೇಹಿತ,ಮನಶಾಸ್ತ್ರಜ್ಞರಿಂದಲೂ ಪರಿಹಾರ ಸಿಗದೇ ಇದ್ದಾಗ ಜನರು ಪರಿಹಾರಕ್ಕಾಗಿ ಮಾರ್ತಾಂಡನ ಬಳಿಗೆ ಬರುತ್ತಿದ್ದರು.
ಮಾರ್ತಾಂಡ ಅಂತಹ ಎಲ್ಲರಿಗೂ ಪರಿಹಾರ ನೀಡುತ್ತಿದ್ದ.
ಈ ಮಾರ್ತಾಂಡ ಒಬ್ಬ ಮಾಟ ಮಂತ್ರ ಮಾಡುವ ತಾಂತ್ರಿಕ.ಇನ್ನೂ ಸರಳವಾಗಿ ಹೇಳಬೇಕೆಂದರೆ ಒಬ್ಬ ಮಾಟಗಾರ!
ಅವನಿಗೊಬ್ಬ ಸಹಾಯಕ ಪ್ರಕಾಶ.
ಪ್ರಕಾಶ ಇಷ್ಟವಿದ್ದು ಮಾರ್ತಾಂಡನೊಡನೆ ಸೇರಿದ್ದು ಅಲ್ಲ... ಆಸಕ್ತಿಯಂತು ಮೊದಲೇ ಇರಲಿಲ್ಲ.
ಮನೆ ಮಠ ಯಾವುದೂ ಇಲ್ಲದೇ ಅನಾಥನಾಗಿದ್ದ ಪ್ರಕಾಶ ಹೆಚ್ಚಾಗಿ ಮಲಗುತ್ತಿದ್ದುದೇ ಸ್ಮಶಾನದಲ್ಲಿ. ಅಪ್ಪ ಅಮ್ಮ ಯಾರೂ ಇರಲಿಲ್ಲ ಎಂದಲ್ಲ, ಎಲ್ಲರೂ ಇದ್ದರು.. ಆದರೆ ಅವರಿಬ್ಬರೂ ಒಟ್ಟಿಗೆ ತೀರಿಕೊಂಡ ಮೇಲೆ ನಿಜವಾಗಿಯೂ ಅನಾಥನಾಗಿ ಬೀದಿಗೆ ಬಿದ್ದಿದ್ದ...ಎಲ್ಲೆಲ್ಲೂ ಸಣ್ಣಪುಟ್ಟ ಕೆಲಸ ಮಾಡಿದ ನಂತರ ರಾತ್ರಿಗೆ ಬೆಚ್ಚಗೆ ಮಲಗಲು ಸ್ಮಶಾನದ ಗೋರಿಗಳನ್ನೇ ಆಯ್ದುಕೊಳ್ಳುತ್ತಿದ್ದ ಪ್ರಕಾಶ.
ಅಂತಹ ಒಂದು ಅಮಾವಾಸ್ಯೆಯ ಮಧ್ಯರಾತ್ರಿ ಪ್ರಕಾಶನ ಕಣ್ಣಿಗೆ ಸ್ಮಶಾನದ ಮಧ್ಯದಲ್ಲಿ ಹೆಣಗಳ ಮುಂದೆ ತಾಂತ್ರಿಕ ಸಾಧನೆ ಮಾಡುತ್ತಿದ್ದ ಮಾರ್ತಾಂಡ ಕಣ್ಣಿಗೆ ಬಿದ್ದಿದ್ದ.
ಮಾರ್ತಾಂಡನ ಬಹಳ ಹತ್ತಿರಕ್ಕೆ ಬಂದು ಅವನು ಅಲ್ಲಿ ಏನು ಮಾಡುತ್ತಿದ್ದನೋ ಅದನ್ನು ಎವೆಯಿಕ್ಕದೇ ನೋಡಿದ್ದ ಪ್ರಕಾಶ.
ತನ್ನ ಕೆಲಸ ಎಲ್ಲಾ ಮುಗಿದು ಹೊರಡುವಾಗ.. ಮಾರ್ತಾಂಡ ಅಲ್ಲೇ ಇನ್ನೂ ಇದ್ದ ಪ್ರಕಾಶನ ಬಳಿ ಕೇಳಿದ್ದ... ನನ್ನ ಜೊತೆ ಬರ್ತಿಯಾ...?
ಮರು ಮಾತಾಡದೇ ಅವನನ್ನೇ ಹಿಂಬಾಲಿಸಿದ್ದ ಪ್ರಕಾಶ.
ಈ ಮಾರ್ತಾಂಡನ ಬಳಿಗೆ ಬರುವವರ ಬಹು ಮುಖ್ಯ ಸಮಸ್ಯೆಯೇ ಮಾಟ!
ಅವನಲ್ಲಿಗೆ ಎರಡು ರೀತಿಯ ಜನ ಬರುತ್ತಿದ್ದರು.
ಒಂದು ತಮಗೆ ಯಾರಾದರೂ ಆಗದೇ ಇದ್ದವರು ಮಾಟ ಮಾಡಿದ್ದರೆ ಅದನ್ನು ತೆಗಿಸಲು ಅವನಲ್ಲಿಗೆ ಬರುತ್ತಿದ್ದರು.
ಎರಡನೆಯದ್ದು ತಮಗೆ ಯಾರಾದರೂ ಆಗದಿದ್ದರೆ ಅವರಿಗೆ ಮಾಟ ಮಾಡಿಸಿ ಅವರ ಬಾಳು ಹಾಳು ಮಾಡಲಿಕ್ಕೆ ಅವನ ಬಳಿಗೆ ಬರುತ್ತಿದ್ದರು!
ಹೆಚ್ಚಾಗಿ ಈ ಎರಡನೆಯ ಕಾರಣಕ್ಕಾಗಿಯೇ ಜಾಸ್ತಿ ಜನ ಬರುತ್ತಿದ್ದದ್ದು.
ಅದನ್ನೆಲ್ಲ ನೋಡಿ ಪ್ರಕಾಶನಿಗೆ ಅನಿಸುತ್ತಿದ್ದದ್ದು.. ಮತ್ತೊಬ್ಬರಿಗೆ ಕೇಡು ಬಯಸುವುದರಲ್ಲಿ ಜನರಿಗೆ ಅದೇನು ಸುಖವೋ ಎಂದು.
ಮಾರ್ತಾಂಡನೊಡನೆ ಸೇರಿ ತಾನೂ ಕೂಡ ಮಾಟ ವಿಧ್ಯೆಗಳನೆಲ್ಲ ಬಹಳ ಚೆನ್ನಾಗಿಯೇ ಕಲಿತಿದ್ದ ಪ್ರಕಾಶ.ಆದರೆ ಅದನ್ನು ಯಾರ ಮೇಲೂ ಆತ ಪ್ರಯೋಗಿಸಲು ಹೋಗಿರಲಿಲ್ಲ ಅಷ್ಟೇ.
ಅವರಿವರಿಗೆ ಮಾಟ ಮಾಡುವುದನ್ನು,ಮಾಟ ತೆಗೆಯುವುದನ್ನು ಬಿಟ್ಟರೆ ಮಾರ್ತಾಂಡ ಮಾಡುತ್ತಿದ್ದ ಇನ್ನೊಂದು ಕೆಲಸ ಎಂದರೆ ವಶೀಕರಣ.
ಪುರುಷರಿಗೆ ಸ್ತ್ರೀಯರನ್ನು... ಸ್ತ್ರೀಯರಿಗೆ ಪುರುಷನ್ನು ವಶೀಕರಣ ಮಾಡಿ ಕೊಡುತ್ತಿದ್ದ ಮಾರ್ತಾಂಡ.
ಯಾರಿಗಾದರೂ ಮಾಟ ಮಾಡಲು ಇಲ್ಲವೇ...ಯಾರನ್ನಾದರು ವಶೀಕರಣಕ್ಕೊಳಪಡಿಸಲು ಇದ್ದರೆ.. ಅವರ ಉಗುರು, ತಲೆಕೂದಲು,ಬಟ್ಟೆ ತುಂಡು,ಪೋಟೋ,ಕಾಲಡಿಯ ಮಣ್ಣು ಇಂತವುಗಳನ್ನೆಲ್ಲ ತಂದು ಕೊಡಲು ತನ್ನ ಬಳಿಗೆ ಬಂದವರಿಗೆ ಹೇಳುತ್ತಿದ್ದ ಮಾರ್ತಾಂಡ.
ಅವರು ಅದನ್ನೆಲ್ಲ ತಂದು ಕೊಟ್ಟ ಮೇಲೆ ಅವುಗಳೊಂದಿಗೆ ಸ್ಮಶಾನಕ್ಕೆ ಹೋಗಿ ಅವುಗಳ ಮೇಲೆ ಪ್ರಯೋಗ ಮಾಡಿ... ಯಾರ ಮೇಲೆ ಮಾಟ ಆಗಬೇಕೋ, ವಶೀಕರಣ ಆಗಬೇಕೋ ಅದನ್ನು ಅತೀ ಘೋರವಾಗಿಯೇ ಮಾಡುತ್ತಿದ್ದ ಮಾರ್ತಾಂಡ.
ಮುಂದೆ ಅದನ್ನು ನಿವಾರಣೆ ಮಾಡಲು ಯಾರಿಗೆ ಮಾಟ ಆಗಿದೆಯೋ, ವಶೀಕರಣ ಆಗಿದೆಯೋ ಅವರು ಸ್ವತಃ ಮಾರ್ತಾಂಡನ ಬಳಿಯೇ ಬರಬೇಕಿತ್ತು...ಉಳಿದ ಯಾರ ಕೈಯಿಂದಲೂ ಅದನ್ನು ತೆಗೆಯಲು ಸಾಧ್ಯವಿರಲಿಲ್ಲ.. ಮತ್ತು ಅವರು ತನ್ನ ಬಳಿಗೆಯೇ ಬರುವಂತೆಯೇ ಮಾಟ ಮಾಡಿ ಕರೆಸಿಕೊಳ್ಳುತ್ತಿದ್ದ ಈ ಮಾಟಗಾರ ಮಾರ್ತಾಂಡ..!!
ಅವರು ತನ್ನ ಬಳಿ ಬಂದ ಮೇಲೆ... ಅವರಿಗೆ ನಿಮಗೆ ಇಂತವರು ಮಾಟ ಮಾಡಿದ್ದಾರೆ, ವಶೀಕರಣ ಮಾಡಿದ್ದಾರೆ ಎಂದು ಅವರಿಗೆ ಹೇಳಿ... ನಂತರ ಇವರು ಪುನಃ ತಮಗೆ ಮೊದಲು ಮಾಟ ಮಾಡಿಸಿದವರ ಮೇಲೆಯೇ ಮಾಟ ಪ್ರಯೋಗ ಮಾಡುವಂತೆ ಮಾಡುತ್ತಿದ್ದ ಮಾರ್ತಾಂಡ..!
ನಂತರ ಇದು ನಿರಂತರವಾಗಿ ಮುಂದುವರಿಯುತ್ತಿತ್ತು...
ಇವರಿಂದ ಅವರಿಗೆ... ಅವರಿಂದ ಇವರಿಗೆ..!
ಸಮಸ್ಯೆ ಎಂದೂ ಮುಗಿಯುತ್ತಲೇ ಇರಲಿಲ್ಲ... ಮತ್ತು ಮಾರ್ತಾಂಡನಿಗೆ ತನ್ನ ಈ ಮಾಟ ಮಂತ್ರಗಳ ತಾಂತ್ರಿಕ ಸಾಧನೆಗೆ ಈ ಸಮಸ್ಯೆ ನಿವಾರಣೆಯಾಗುವುದೇ ಬೇಕಾಗಿರಲಿಲ್ಲ.
ಒಮ್ಮೆ ಈ ಮಾಟದ ಜಾಲದ ಒಳಗೆ ಹೋದರೆ ಸಾಕು... ನಂತರ ಮಾರ್ತಾಂಡ ಮನಸ್ಸು ಮಾಡದೇ ಯಾರೇ ಆಗಲಿ ಅದರಿಂದ ಹೊರ ಬರಲು ಸಾಧ್ಯವೇ ಇರುತ್ತಿರಲಿಲ್ಲ ಮತ್ತು ಮಾರ್ತಾಂಡ ಅಂತಹ ಮನಸ್ಸು ಎಂದೂ ಮಾಡಿದವನೇ ಅಲ್ಲ...ಅವನದ್ದೊಂದು ಮಾಟ ನಿರಂತರವಾಗಿ ಮುಂದುವರಿದಿತ್ತು.
ಮಾರ್ತಾಂಡ ಬಳಿಗೆ ಬರದ ಜನರೇ ಇಲ್ಲ... ಊರಿನ ಅತೀ ಬಡವರಿಂದ ಹಿಡಿದು, ಅತೀ ಗಣ್ಯರು ಕೂಡ ಅವನಲ್ಲಿಗೆ ಬರುತ್ತಿದ್ದರು. ಅಷ್ಟೇ ಏಕೆ ರಾಜಕಾರಣಿಗಳು ಕೂಡ ಅವನ ಬಳಿ ನಿರಂತರವಾಗಿ ಬರುತ್ತಿದ್ದರು.
ಸಮಸ್ಯೆಗೆ ಪರಿಹಾರ ನೀಡುವ, ಇಲ್ಲವೇ ಬೇರೆ ಯಾರೋ ಮಂತ್ರವಾದಿ ಮಾಡಿದ ಮಾಟ ನಿವಾಳಿಸಿ ತೆಗೆಯುವ ತಾಂತ್ರಿಕ ವಿಧ್ಯೆಗೆ ಪ್ರಕಾಶನದ್ದು ಎಂದೂ ವಿರೋಧ ಇರಲಿಲ್ಲ. ಯಾವುದೇ ವಿಧ್ಯೆ ಇರಲಿ ಅದರಿಂದ ಸಮಸ್ಯೆ ನಿವಾರಣೆ ಆಗಬೇಕೇ ಹೊರತು... ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಬಾರದು ಎಂದೇ ಅವನ ಅಭಿಪ್ರಾಯವಾಗಿತ್ತು. ಆದರೆ ಮಾರ್ತಾಂಡ ತನ್ನ ಬಳಿ ಮಾಟಕ್ಕಾಗಿ ಬಂದವರನ್ನು ಹಾಗೂ ತನ್ನಿಂದ ಮಾಟ ಹೊಂದಿದವರನ್ನು ನಿರಂತರವಾಗಿ ಅವರವರೇ ತನ್ನ ಮೂಲಕವೇ ಮಾಟ ಮಾಡಿಸಿಕೊಳ್ಳುವಂತೆ ಮಾಡುತಿದ್ದ ಅವನ ದುಷ್ಟ ಬುದ್ಧಿ ಅವನಿಗೆ ಎಂದೂ ಇಷ್ಟ ಆಗಿದ್ದೇ ಇಲ್ಲ.
ಅಷ್ಟು ಮಾತ್ರವಲ್ಲ ಪ್ರಕಾಶ ಮಾರ್ತಾಂಡನ ಇನ್ನೊಂದು ವಿಷಯವನ್ನು ಕಟುವಾಗಿ ಅವನ ಎದುರಲ್ಲೇ ಹಲವಾರು ಬಾರಿ ವಿರೋಧಿಸಿದ್ದ..
ಅದವೇ ಮಾರ್ತಾಂಡನ ಸ್ತ್ರೀ ಹುಚ್ಚು!
ತನ್ನ ಬಳಿ ಜನರು ಬಂದಾಗ.. ವಶೀಕರಣ ಇಲ್ಲವೇ ಮಾಟ ಆಗ ಬೇಕಾದ ಹುಡುಗಿ ಚೆನ್ನಾಗಿದ್ದರೆ ಮಾರ್ತಾಂಡನ ಲಂಪಟತನ ಜಾಗೃತವಾಗುತ್ತಿತ್ತು.. ಮತ್ತು ಅವನು ತನಗೆ ಬೇಕಾದಂತೆ ವಶೀಕರಣ ಮಾಡಿಕೊಂಡು ತಾನು ಕೂಡ ಆ ಹುಡುಗಿಯನ್ನು ಅನುಭವಿಸಿ ಬಿಡುತ್ತಿದ್ದ!
ಎಷ್ಟೋ ಸಲ ಮಾರ್ತಾಂಡನಲ್ಲಿ ಈ ವಿಷಯವಾಗಿ ಪ್ರಕಾಶನಿಗೆ ಜಗಳವಾಗಿತ್ತು... ಆದರೆ ಅದನ್ನೆಲ್ಲ ಮಾರ್ತಾಂಡ ಎಂದಿಗೂ ಕಿವಿಗೆ ಹಾಕಿಕೊಂಡವನೇ ಅಲ್ಲ.ಅವನ ಮಾಟ ಮಂತ್ರ ವಶೀಕರಣ ಎಂದಿನಂತೆ ಭಯಾನಕವಾಗಿಯೇ ಮುಂದುವರಿದಿತ್ತು.
ಆ ದಿನ ಮಾರ್ತಾಂಡನ ಬಳಿಗೆ ಒಬ್ಬಳು ಹೆಂಗಸು ಬಂದಿದ್ದಳು.ಒಬ್ಬಳೇ ಬಂದಿರಲಿಲ್ಲ ಜೊತೆಗೆ ಅವಳ ಗಂಡನೂ ಬಂದಿದ್ದ.
ಆ ಹೆಂಗಸಿನ ಬೇಡಿಕೆ ಇಷ್ಟೇ ಇದ್ದದ್ದು. ಮನೆಯ ದೊಡ್ಡ ಸೊಸೆ ಅಂದರೆ ತನ್ನ ಗಂಡನ ಅಣ್ಣನ ಹೆಂಡತಿಗೆ(ಅತ್ತಿಗೆ) ಮಾಟ ಮಾಡಿ ಮತಿ ಭ್ರಾಂತಿ ಮಾಡಬೇಕು, ಆ ಮೂಲಕ ತನ್ನ ಭಾವ ಅಂದರೆ ಗಂಡನ ಅಣ್ಣನನ್ನು ಜೀವನ ಪೂರ್ತಿ ಕೊರಗುವಂತೆ ಮಾಡ ಬೇಕು ಎಂದು..!
ಅದನ್ನು ಕೇಳಿ ಮಾರ್ತಾಂಡ ಅವರ ಬಳಿ ಮಾಟ ಮಾಡಲು ಬೇಕಾಗುವ ಅವರ ಏನಾದರೂ ವಸ್ತುಗಳು ಇದ್ದರೆ ಕೊಡಿ ಎಂದು ಕೇಳಿದ್ದ.
ಅವರ ಬಳಿ ಪೋಟೋ ಬಿಟ್ಟರೆ ಬೇರೆ ಏನೂ ಇರಲಿಲ್ಲ.
ಅವರು ಪೋಟೋ ಕೊಟ್ಟರು.
ಆ ಹೆಂಗಸಿನ ಪೋಟೋ ನೋಡಿದ ಮಾರ್ತಾಂಡನ ಮುಖದಲ್ಲಿ ವಿಕೃತ ನಗು ಮೂಡಿತ್ತು.ಅದನ್ನು ಅಲ್ಲೇ ಇದ್ದು ಗಮನಿಸಿದ ಪ್ರಕಾಶ ಮಾರ್ತಾಂಡನ ಉದ್ದೇಶ ಅರ್ಥ ಮಾಡಿಕೊಂಡು ಬಿಟ್ಟ..
ನಂತರ ಮಾರ್ತಾಂಡ ತನ್ನ ಬಳಿಗೆ ಬಂದಿದ್ದ ಆ ದಂಪತಿಗೆ ಯಾರಿಗೆ ಮಾಟ ಮಾಡ ಬೇಕೋ ಅವರ ಏನೇನು ವಸ್ತುಗಳು ಬೇಕು ಎಂದು ಸ್ಪಷ್ಟವಾಗಿ ಸೂಚಿಸಿದ.. ಮಾತ್ರವಲ್ಲ ಅವರಿಗೆ ಒತ್ತಿ ಒತ್ತಿ ಅರ್ಥ ಮಾಡಿಸಿದ.. ಇದೆಲ್ಲವೂ ಬೇಕೆ ಬೇಕು ಎಂದ..
ಪ್ರಕಾಶನಿಗೆ ಸಂಪೂರ್ಣವಾಗಿ ಗೊತ್ತಾಗಿ ಹೋಯಿತು... ಮಾರ್ತಾಂಡನ ಲಂಪಟತನ ಮತ್ತೆ ಜಾಗೃತಗೊಂಡಿದೆ ಎಂದು!
ದಂಪತಿಗಳು ಅಲ್ಲಿಂದ ಹೋದ ಮೇಲೆ ತನ್ನ ಕೋಣಿಯಲ್ಲಿ ಆ ಹೆಂಗಸಿನ ಪೋಟೋವನ್ನು ಭದ್ರವಾಗಿ ಇಟ್ಟು, ತಾನೂ ಹೊರಗೆ ಎಲ್ಲೋ ಹೋದ ಮಾರ್ತಾಂಡ.
ಪ್ರಕಾಶನಿಗೆ ಒಂದು ಕೆಟ್ಟ ಅಭ್ಯಾಸ ಇತ್ತು. ಯಾರದ್ದೇ ಪೋಟೋ ಇರಲಿ, ಆ ಪೋಟೋದಲ್ಲಿರುವ ಹೆಂಗಸಿನ ಮೇಲೆ ಮಾರ್ತಾಂಡ ಹೆಚ್ಚಿನ ಕಾಳಜಿ ತೋರಿದರೆ... ಮಾರ್ತಾಂಡ ಇರದ ಸಮಯದಲ್ಲಿ ತಾನು ಹೋಗಿ ಆ ಪೋಟೋದಲ್ಲಿರುವವರು ಯಾರು ಎಂದು ನೋಡಿ,ಅವರ ದುರ್ವಿಧಿಗೆ ಮರುಗಿ ಮತ್ತೆ ಅಲ್ಲೇ ಪೋಟೋ ಇಟ್ಟು ಬಿಡುತ್ತಿದ್ದ.
ಆ ದಿನವೂ ಮಾರ್ತಾಂಡ ಹೊರಗೆ ಹೋದ ಮೇಲೆ... ಪ್ರಕಾಶ ಆ ಪೋಟೋ ತೆಗೆದು ನೋಡಿದ್ದ.
ಆದರೆ ಈ ಬಾರಿ ಅವನ ಕೈಗಳು ಅದುರಿ ಬಿಟ್ಟವು... ಅವನಿಗೆ ಗೊತ್ತಿಲ್ಲದೆ ಹಣೆಯಲ್ಲಿ ಬೆವರುಗಳು ಮೂಡಿಬಿಟ್ಟಿದ್ದವು!
ಆ ಹೆಂಗಸು ಬೇರೆ ಯಾರೂ ಆಗಿರದೆ... ರೇವತಿ ಆಗಿದ್ದಳು!
ತಾನು ಚಿಕ್ಕಂದಿನಲ್ಲಿ ತನಗೇ ಗೊತ್ತಿಲ್ಲದೇ ತುಂಬಾನೇ ಪ್ರೀತಿಸಿದ್ದ ರೇವತಿ!!
ರೇವತಿ ಮತ್ತು ಪ್ರಕಾಶ ಒಂದೇ ವಯಸ್ಸಿನವರು.
ಅವಳು ಚಿಕ್ಕಂದಿನಲ್ಲಿ ಇವರ ಮನೆಯ ಮುಂದೆಯೇ ಶಾಲೆಗೆ ಹೋಗುತ್ತಿದ್ದಳು.
ಅವಳಿಗಾಗಿ ತನ್ನ ಮನೆಯ ಜಗಲಿಯಲ್ಲಿ ದಿನಾಲೂ ಬಂದು ನಿಂತುಕೊಳ್ಳುತ್ತಿದ್ದ ಪ್ರಕಾಶ.
ಅವಳು ಇವನತ್ತ ನೋಡಿ ಒಮ್ಮೆ ಹಾಗೇ ನಕ್ಕು ಬಿಟ್ಟರೆ ಪ್ರಕಾಶನ ಹೃದಯ ಬಡಿತವೇ ಏರು ಪೇರಾಗುತ್ತಿತ್ತು.ನಂತರ ಆ ದಿನವಿಡೀ ಅವನ ಪಾಲಿಗೆ ಬಹಳ ಸುಂದರವಾಗಿ ಇದ್ದು ಬಿಡುತ್ತಿತ್ತು.
ನಂತರ ಅಪ್ಪ ಅಮ್ಮ ತೀರಿಕೊಂಡ ಮೇಲೆ,ಮನೆ ಬಿದ್ದು ಹೋದ ಮೇಲೆ,ಅವನು ಬೀದಿಗೆ ಬಿದ್ದು ಮಾರ್ತಾಂಡನ ಬಳಿ ಸೇರಿಕೊಂಡ. ಆ ನಂತರ ಅವಳನ್ನು ಪ್ರಕಾಶ ನೋಡಿದ್ದೆ ಬಲು ಅಪರೂಪ. ಕೆಲವೊಮ್ಮೆ ಬಸ್ ಸ್ಟ್ಯಾಂಡ್ ನಲ್ಲಿ ಅವಳನ್ನು ನೋಡಿ ಅವಳ ಕಣ್ಣಿಗೆ ಬೀಳಲು ಇಷ್ಟವಿಲ್ಲದೇ ಹಿಂದಿರುಗಿದ್ದ.
ನಂತರ ಅವಳ ಮದುವೆಯಾಯಿತು.ಆ ನಂತರ ಅವಳು ಪ್ರಕಾಶನ ಕಣ್ಣಿಗೆ ಬಿದ್ದದ್ದೇ ಮಾರ್ತಾಂಡನ ಕೈಗೆ ಬಂದಿದ್ದ ಈ ಫೋಟೋದಲ್ಲಿಯೇ..!!
ತನಗೆ ಅವಳು ಸಿಗದಿದ್ದರೂ.. ಅವಳ ಬಾಳು ಈ ರೀತಿ ಮಾಟದ ಕಾರಣದಿಂದಾಗಿ ಹಾಳಾಗುವುದು,ಅದರಲ್ಲೂ ಮಾರ್ತಾಂಡನ ಕೆಟ್ಟ ವಾಂಛೆಗೆ ಬಲಿಯಾಗಿ ಹೋಗುವುದು ಅವನಿಗೆ ಒಂಚೂರು ಇಷ್ಟವಿರಲಿಲ್ಲ,ಅದನ್ನು ನೆನೆದೇ ಅವನ ಹೃದಯ ಒಡೆದಂತಾಯಿತು!
ತುಂಬಾ ಹೊತ್ತು ಯೋಚಿಸಿದ ಪ್ರಕಾಶನಿಗೆ ಹೊಳೆದಿದ್ದೇ ಒಂದು ಉಪಾಯ...!
ಅದನ್ನೇ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ ಪ್ರಕಾಶ, ಕೆಲವೊಂದು ವಸ್ತುಗಳನ್ನು ಆ ಇಡೀ ದಿನ ಸಂಗ್ರಹಿಸಿ ಆ ರಾತ್ರಿಯೇ ಸ್ಮಶಾನದತ್ತ ನಡೆದಿದ್ದ..!
ಸ್ಮಶಾನದಲ್ಲಿ ಕುಳಿತುಕೊಂಡು ಮೊದಲ ಬಾರಿಗೆ ತಾನೇ,ತನ್ನ ಗುರು ಮಾರ್ತಾಂಡನ ಬಳಿ ಕಲಿತಿದ್ದ ಘೋರವಾದ ಮಾಟವನ್ನೇ ಪ್ರಯೋಗ ಮಾಡಿ, ಒಬ್ಬರ ಬಾಳು ಸರ್ವನಾಶ ಮಾಡಲು ನಿರ್ಧರಿಸಿದ್ದ ಪ್ರಕಾಶ..!
ಮತ್ತು ಆ ಒಬ್ಬ ಬೇರೆ ಯಾರೂ ಆಗಿರದೇ.. ಸ್ವತಃ ಮಾರ್ತಾಂಡನೇ ಆಗಿದ್ದ!!
ಹಾಗೂ ಆ ರಾತ್ರಿ ಸ್ಮಶಾನದಲ್ಲಿ ಅವನೆದುರು ಇದ್ದ ಆ ತಲೆಕೂದಲು,ಬಟ್ಟೆ ತುಂಡು, ಉಗುರು, ಪಾದದಡಿಯ ಮಣ್ಣು... ಎಲ್ಲವೂ ಮಾರ್ತಾಂಡನದ್ದೇ ಆಗಿತ್ತು!
ಅಮಾವಾಸ್ಯೆಯ ಆ ಕಡುಗತ್ತಲಿನ ರಾತ್ರಿಯಲ್ಲಿ ಪ್ರಕಾಶನದ್ದೊಂದು ಮಾಟ ಪ್ರಯೋಗ ಮತ್ತಷ್ಟು ತೀವ್ರವಾಗಿ,ಇನ್ನಷ್ಟು ಭೀಕರವಾಗಿ ಹಾಗೇ ಮುಂದುವರಿದಿತ್ತು...!!!
.....................................................................................
#ಇಷ್ಟೇ...!
ab pacchu
moodubidire
(photo-internet)

Comments
Post a Comment