ಎರಡು ಕೆಜಿ ಕೊತ್ತಂಬರಿ ಸೊಪ್ಪು

 

ಓ ನೀಲು... ಒಂದು ವಾರ ಲಾಕ್ ಡೌನ್ ಉಂಟು ಅಂತೆ ಮಾರಾಯ,ಬೇಗ ಹೋಗಿ ಮನೆಗೆ ಬೇಕಾಗಿರುವ ದಿನಸಿ ಹಾಗೂ  ತರಕಾರಿ ಸಾಮಾನು ಗಳನ್ನು ತಾ.. ಎಂದು ಅಪ್ಪ ಬೆಳಿಗ್ಗೆ ಬೆಳಿಗ್ಗೆಯೇ ರಾಗ ಎಳೆಯಲು ಶುರು ಮಾಡಿದರು.


ಅವರು ಒಮ್ಮೆ ಏನಾದರೂ ಹೇಳಿದರೆ ಅದನ್ನೇ ಇಡೀ ದಿನ ಹೇಳ್ತಾನೆ ಇರ್ತಾರೆ.


ಬೇಗ ಬೇಗ ಯಾಕೆ.. ನಿಧಾನಕ್ಕೆ ಹೋದರೆ ಅಂಗಡಿಯವನು ಸಾಮಾನು ಕಟ್ಟಿ ಕೊಡುವುದಿಲ್ಲವಾ.. ಎಂದು ಕೇಳಿದೆ.


ಓ ಅಣ್ಣಾ... ಟಿವಿಯಲ್ಲಿ ಹೇಳ್ತಾ ಇದ್ರು,ಅಗತ್ಯ ವಸ್ತುಗಳನ್ನು ಲೆಕ್ಕಕ್ಕಿಂತ ಜಾಸ್ತಿ ಮೊದಲೇ ತಂದು ಇಟ್ಟುಕೊಳ್ಳಿ ನಂತರ ಸುಮ್ಮನೆ ತಾಪತ್ರಯ ಪಟ್ಟುಕೊಳ್ಳಬೇಡಿ ಎಂದು..


ನನ್ನ ಅಪ್ಪ ಹಾಗೇ ಒಮ್ಮೊಮ್ಮೆ ಅತೀ ಪ್ರೀತಿಯಿಂದ " ಓ ಅಣ್ಣಾ.." ಎಂದು ಕರೆಯುತ್ತಾರೆ. ನಾನು ಕೂಡ  ಅವರಿಗೆ ಪ್ರೀತಿಯಿಂದ ಸಲಿಗೆಯಿಂದ  ಕೆಲವೊಮ್ಮೆ "ಹೇಯ್ ನೀಲ್ ಬ್ರೋ.."  ಅಂತ ಕರೆಯುವುದು ಇದೆ. ಅವರ  ನಿಜವಾದ ಹೆಸರು ನೀಲಣ್ಣ ಅಂತ ಆಯ್ತಾ. 


ಒಂದು ವಾರ ಲಾಕ್ ಡೌನ್ ಅಂತ, ಒಂದು ಇಡೀ ವಾರಕ್ಕೆ ಬೇಕಾಗುವ ಎಲ್ಲಾ  ಸಾಮಾನು ಮೊದಲೇ ತಂದು ರಾಶಿ ಹಾಕುವುದಕ್ಕಾಗಿ very veey  important ಅನ್ನಿಸೋ ಎಲ್ಲವನ್ನೂ  ಪೆನ್ ಪೇಪರ್ ತಗೊಂಡು  ಪಟ್ಟಿ ಮಾಡುತ್ತಾ ಹೋದೆ.. 


ಕೊನೆಗೂ ಲೀಸ್ಟ್ ಸಿದ್ದವಾಯಿತು.


ಆ ಲೀಸ್ಟ್ ಹೀಗಿತ್ತು..


1.ಹದಿನೈದು ತೆಂಗಿನಕಾಯಿ(ಚಟ್ನಿ ಗೆ ಕೂಡ, ತಿಂಡಿಗೆ ಕೂಡ ಮತ್ತೆ  ಎಂದಿನಂತೆ ಪಲ್ಯ, ಪದಾರ್ಥ,ಉಪ್ಪುಕರಿಗೆ ಕೂಡ ).


2.ಹತ್ತು ಕೆಜಿ ಟೊಮೆಟೊ(ಸಾಂಬಾರ್ ಕೆ ಕೂಡ, ಪಲಾವ್ ಗೆ ಕೂಡ)


3.ಏಳು ಕೆಜಿ ಪೊಟಾಟೋ(ಬಾಜಿ ಗೆ ಕೂಡ, ಪೋಡಿಗೆ ಕೂಡ). 


4.ಬಾಳೆಹಣ್ಣು ಒಂದು ಗೊನೆ(ಬನ್ಸ್ ಗೆ ಕೂಡ.. ಬೋರ್ ಆದಾಗ ತಿನ್ಲಿಕ್ಕೆ ಕೂಡ)


5.ಎರಡು ಕೆಜಿ ಕೊತ್ತಂಬರಿ ಸೊಪ್ಪು(ಹಾಗೇ ಮಾಡಿದ್ದಕ್ಕೆ ಎಲ್ಲ ಮೇಲಿನಿಂದ ಉದುರಿಸಲು.. ಹೆಲಿಕಾಪ್ಟರ್ ನಿಂದ ಅಲ್ಲ ಕೈಯಿಂದಲೇ)


6.ಒಂದು ಕೆಜಿ ಹಸಿ ಮೆಣಸಿನಕಾಯಿ(ಮಜ್ಜಿಗೆ. ಗಿಜ್ಜಿಗೆ.. ಸರ್ವ ಪಾಕಕ್ಕೂ)


7. ಒಂದು ಕೆಜಿ ಶುಂಠಿ(ಬೇಕಾಗ್ತದೆ ಅಂತ. ) 


8.ಒಂದು ಕೆಜಿ ಬೆಳ್ಳುಳ್ಳಿ(ಸುಮ್ಮನೆ ಪಟ್ಟಿಯಲ್ಲಿ ಇರ್ಲಿ ಅಂತ..ಇಲ್ಲದಿದ್ದರೆ ಶುಂಠಿ ಗೆ ಬೇಜಾರು ಆಗ್ಬಹುದು ಅಂತ) 


ಹೀಗೆ ಇನ್ನು ಹತ್ತು ಇಪ್ಪತ್ತು ಐಟಂಗಳ, ಕೆಜಿ ಲೆಕ್ಕದ ಪಟ್ಟಿ ಮಾಡಿಕೊಂಡು ರಿಕ್ಷಾ ಹಿಡಿದೇ ಮಾರ್ಕೆಟ್ ಗೆ ಹೋದೆ.


ಎಲ್ಲಾ ಸಿಕ್ಕಿತು, ಆದರೆ ಕೊತ್ತಂಬರಿ ಸೊಪ್ಪನ್ನು ಒಂದನ್ನು ಬಿಟ್ಟು. ಅಷ್ಟು ದೊಡ್ಡ ತರಕಾರಿ ಮಾರ್ಕೆಟ್ ನಲ್ಲಿ ಎಲ್ಲಾ ಕಡೆ ನೋಡಿದರೂ ಕೊತ್ತಂಬರಿ ಸೊಪ್ಪು ಒಂದು ಇಲ್ಲವೇ ಇಲ್ಲ.


ಕೊನೆಗೆ ನಮ್ಮ ಗುರ್ತದ ಗೋಪಾಲಣ್ಣನ ತರಕಾರಿ ಅಂಗಡಿಗೆ ಹೋದೆ.


ಓಹ್.. ನೀಲಮೇಘ.. ಏನಾ ಬಾರಿ ಅಪರೂಪ.. ಬಾರಿ ಸಮಯ ಆಯ್ತು ಈ ಕಡೆ ಬಾರದೆ.. ಭಯಂಕರ busy ಜನ.. ದೊಡ್ಡ ಜನ ಅಲ್ವಾ ಮರ್ರೆ ನೀನು.. ಯಾವಾಗ ನೋಡಿದರೂ ಫೇಸ್ಬುಕ್ ನಲ್ಲಿ ಸಾಯ್ತಾ ಇರ್ತಿ ಅಲಾ.. ಮತ್ತೆ ಏನು ಈ ಕಡೆ ಪಯಣ, ಏನು ಬೇಕಿತ್ತು actually .. ಅಂದರು  ಗೋಪಾಲಣ್ಣ. 


ಅದೇ ಕೊತ್ತಂಬರಿ ಸೊಪ್ಪು ಎರಡು ಕೆಜಿ ಬೇಕಿತ್ತು .. ಅಂದೆ.


ನಿನಗೆ ಮಂಡೆ ಸಮ ಉಂಟನಾ ನೀಲು..


ಯಾಕೆ ಗೋಪಾಲಣ್ಣ.. 


ನಿನಗೆ  ಲಾಕ್ ಡೌನ್ ಅಂತ  ಗೊತ್ತಿಲ್ವಾ ಮಾರಾಯ..


ಗೊತ್ತು..ಆದರೆ ಅದಕ್ಕೂ ಈ ಕೊತ್ತಂಬರಿ ಸೊಪ್ಪಿಗೂ ಏನು ಸಂಬಂಧ


ಅಲಾ.. ಆಗಲೇ  ಜನ ಎಲ್ಲ ಬಂದು ಮುಗಿ ಬಿದ್ದು ಕೊತ್ತಂಬರಿ ಸೊಪ್ಪು ತಗೊಂಡು ಹೋಗಿ ಆಯಿತು, ನೀನು ಈಗ ಬರುವುದನಾ.. 


ಇಷ್ಟು ಬೇಗ ಖಾಲಿ ಆಯಿತಾ?


ಹೌದು ಮತ್ತೆ,ನಮ್ಮ ಮೂಲೆ ಮನೆ  ಶಂಕರಣ್ಣ ಮೂರು ಕೆಜಿ, ನಿಮ್ಮ ಪಕ್ಕದನೆ ಮನೆ ಪದ್ಮಕ್ಕ ನಾಲ್ಕು ಕೆಜಿ ಕೊತ್ತಂಬರಿ ಸೊಪ್ಪು ತಗೊಂಡು ಹೋಗಿ ಆಯಿತು ಆವಾಗಲೇ. ನೀನು ಟಿವಿ ನ್ಯೂಸ್ ಎಲ್ಲಾ ನೋಡುವುದಿಲ್ಲ ಅಂತ ಕಾಣ್ತದೆ ಅಲಾ.. ವಾರಕ್ಕೆ ಬೇಕಾಗುವ ಎಲ್ಲಾ ಸಾಮಾನು ಈಗಲೇ ಬೇಕಾಗುವಷ್ಟು ಖರೀದಿಸಿ ಅಂತ  ಪದೇ ಪದೇ ಹೇಳ್ತಾ ಇದ್ರಲ್ಲ


ಹೌದಲ್ಲಾ.. ನಾನು ಸ್ವಲ್ಪ ಲೇಟ್ ಮಾಡಿದೆ.. ಅಂದೆ.


ಸ್ವಲ್ಪ ಅಲ್ಲ ತುಂಬಾನೇ ಲೇಟ್  ಮಾಡಿದೆ ನೀನು.. ತಲೆಗೆ ಕೈ ಚಚ್ಚಿಕೊಂಡು ಅಂದರು..


ಮತ್ತೆ ಗೋಪಾಲಣ್ಣ ಈಗ ಏನು ಮಾಡುವುದು..


ನಿಲ್ಲು ಗೋಣಿಯಲ್ಲಿ ಏನಾದರೂ ಉಳಿದಿದೆಯಾ ಅಂತ ನೋಡ್ತೇನೆ..ಅಂದರು


ಅದು ಆದರೂ ಕೊಡಿ... ಐದು ರೂಪಾಯಿದ್ದು ಅಂದೆ.


ಕೊನೆಗೂ  ಇದ್ದ ಬದ್ದ ಎಲ್ಲವನ್ನೂ  ಒಟ್ಟು ಮಾಡಿ ನನ್ನಿಂದ  ಐದು ರೂಪಾಯಿ ತಗೊಂಡು ನನಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ನೀಡಿದರು ಗೋಪಾಲಣ್ಣ.


ಮನೆಗೆ ಬರುವಾಗ ಮನಸ್ಸಿನಲ್ಲಿ ಇದ್ದದ್ದು ಒಂದೇ, ಹೇಗಾದರೂ ಮಾಡಿ ದಿನಕ್ಕೆ ಒಂದೊಂದೇ ಎಲೆ ಹಾಕಿ ಆದರೂ ಈ ಒಂದು ವಾರ ಮಾತ್ರ ಹಾಗೇ ದೂಡಿ ಬಿಡಬೇಕು... 


ಅಲಾ.. ನಾನಾದರೂ ಕೇವಲ ಎರಡು ಕೆಜಿ ಕೊತ್ತಂಬರಿ ಸೊಪ್ಪು ತಗೊಂಡು ಹೋಗ್ಲಿಕ್ಕೆ ಬಂದದ್ದು, ಆದರೆ ಈ ಶಂಕರಣ್ಣ, ಪದ್ಮಕ್ಕ ಯಾಕೆ ಮರ್ರೆ ಅಷ್ಟೊಂದು ಮೂರು ಕೆಜಿ, ನಾಲ್ಕು ಕೆಜಿ ಅಂತ ಕೊತ್ತಂಬರಿ ಸೊಪ್ಪು ತಗೊಂಡು ಹೋಗಿದ್ದು.


ಬಹುಶಃ ದನಕ್ಕೆ ಸ ಅದನ್ನೇ ತಿನ್ಲಿಕ್ಕೆ ಹಾಕ್ತಾರಾ ಅಂತ..


ಇದೆ.. ಇದೆ.. ಅವರ ಇಬ್ಬರ ಮನೆಯಲ್ಲೂ  ಎರಡೆರಡು ಜೆರ್ಸಿ ಹಸುಗಳಿವೆ.. ಹಾಕಿದರೂ ಹಾಕಬಹುದು ಯಾರಿಗೆ ಗೊತ್ತು.. 


ಹೀಗೆ ಏನೇನೋ ಯೋಚಿಸುತ್ತಿರುವಾಗಲೇ ಮನೆ ಬಂತು.


ರಿಕ್ಷಾದವನಿಗೆ ಹಣ ಕೊಟ್ಟು,ಒಂದು ಕೈಯಲ್ಲಿ ತರಕಾರಿ ಸಾಮಾನುಗಳ ಗೋಣಿ ಹಿಡಿದು,ಇನ್ನೊಂದು ಕೈಯಲ್ಲಿ ಜಾಗ್ರತೆಯಾಗಿ ಭದ್ರವಾಗಿ ಅತೀ ಅಮೂಲ್ಯ ಕೊತ್ತಂಬರಿ ಸೊಪ್ಪು ಕಟ್ಟು ಹಿಡಿದು ಮನೆಯ ಒಳಗೆ ಹೋದೆ. 


ಮನೆಯಲ್ಲಾ ಅಪ್ಪ ಟಿವಿ ನೋಡ್ತಾ ಇದ್ದರು. ಟಿವಿಯಲ್ಲಿ ಪುನಃ ಅದೇ ಬರ್ತಾ ಇತ್ತು.. "ಅಗತ್ಯ ವಸ್ತುಗಳನ್ನು ಲೆಕ್ಕಕ್ಕಿಂತ ಜಾಸ್ತಿ ಮೊದಲೇ ತಂದು ಇಟ್ಟುಕೊಳ್ಳಿ ನಂತರ ಸುಮ್ಮನೆ ತಾಪತ್ರಯ ಪಟ್ಟುಕೊಳ್ಳಬೇಡಿ.. " ಎಂದು


ಸಾವ್ ಇವರದ್ದು .. ಇವರು ಹೀಗೆ ಹೇಳಿ ಹೇಳಿಯೇ ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ಖಾಲಿ ಆಗಿದ್ದು.. ಎಂದು ಹಿಡಿಶಾಪ ಹಾಕುತ್ತಾ ಅಡುಗೆ ಕೋಣೆ ಕಡೆ ನಡೆದೆ.


.....................................................................................


#ನೀಲಮೇಘ 💙


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ