ಒಂದು ದಿವ್ಯ ದೃಷ್ಟಿಯ ಕಥೆ

 



ಸರಿಯಾಗಿ ನೆನಪಿದೆ, ಅವತ್ತು ಬೆಳಿಗ್ಗೆ ನಾನು ಪರ್ಪಲ್ ಕಲರ್ ಶರ್ಟು, ಬ್ಲ್ಯಾಕ್ ಪ್ಯಾಂಟ್ ಹಾಕಿ ಮೂಡುಬಿದೆರಿಯಿಂದ ಮಂಗಳೂರಿಗೆ ಹೋಗುವ ನನ್ನ ಬಸ್ ಹತ್ತಿದ್ದೆ. ನನ್ನ ಬಸ್ ಅಂದ್ರೆ ನನ್ನದೇ ಬಸ್ ಎಂದು ಅರ್ಥ ಅಲ್ಲ , ಓನರ್ ಬೇರೆ ಇದ್ದಾರೆ ಆಯ್ತ.

ಬಾಯಿಮಾತಿನಲ್ಲಿ ನಮ್ಮದು, ನನ್ನದು ಅಂತ ಬರ್ತದೆ ಅಲ್ವಾ ಹಾಗೆ ಅದು ಡೈಲಿ ನನ್ನ ಬಸ್. ಎಕ್ಸ್‌ಪ್ರೆಸ್ ಬಸ್ ಅದು. ದಿನ ನಿತ್ಯದ ನನ್ನ ಸವಾರಿ ಹೋಗುವುದು ಅದರಲ್ಲೇ .

ಬೆಳಿಗ್ಗೆ ಮೂಡುಬಿದಿರೆಯಿಂದ- ಮಂಗಳೂರಿಗೆ ,ಸಂಜೆ ಮಂಗಳೂರಿನಿಂದ ಮೂಡುಬಿದಿರೆ ಗೆ , ಇದು ನನ್ನ ದಿನ ನಿತ್ಯದ ಜರ್ನಿ.
ನಾನು ಹೋಗುವ ನಮ್ಮ ಮಾಮೂಲಿ ಬಸ್ ನಲ್ಲಿ ಹಲವಾರು ಘಟನೆಗಳು ನಡೆಯುತ್ತದೆ,ಆದರೆ ಸರಿಯಾಗಿ ಗಮನಿಸಿದರೆ ಮಾತ್ರ ಅರಿವಿಗೆ ಬರುತ್ತದೆ. 
ನಾನಂತೂ ಎಲ್ಲವನ್ನೂ ಲೆಕ್ಕಕ್ಕಿಂತ ಜಾಸ್ತಿಯೇ ಗಮನಿಸುತ್ತೇನೆ. ಆದುದರಿಂದ ಬಸ್ ನ ಒಳಗೆ ಹೊರಗೆ ಆಗುವುದು ಎಲ್ಲವೂ ನನ್ನ ಗಮನಕ್ಕೆ ಬಂದೇ  ಬರುತ್ತದೆ. ಅಂದ ಹಾಗೆ ಗಮನಿಸುವುದು, observation, .. ಇವೆಲ್ಲವೂ ನನಗಿಷ್ಟ.

ನನ್ನ ಹಾಗೆಯೇ ನಮ್ಮ ಬಸ್ ಗೆ ಡೈಲಿ ಬರುವ ಹಲವಾರು ಪ್ರಯಾಣಿಕರಿದ್ದಾರೆ. ಅವರಲ್ಲಿ ಅವನು ಮತ್ತು ಅವಳು ಕೂಡ ಇದ್ದಾರೆ!

ಅವರಿಬ್ಬರು ಪರಸ್ಪರ ಮಾತಾಡಲ್ಲ, ಮಾತಾಡಿದ್ದೇ  ನೋಡಿಲ್ಲ. ಆದರೆ ಕಣ್ಣಲ್ಲೇ ಏನೋ ಮಾತಾಡ್ತಾರೆ. ಅವಳು ಬಸ್ ನ ಡ್ರೈವರ್ ಸೀಟ್ ನ ಹಿಂದಿನ ಸೀಟಿನಲ್ಲಿ ನಿಂತುಕೊಂಡರೆ, ಇವನು ಬಸ್ ನ ಕೊನೆಯಲ್ಲಿ ನಿಂತುಕೊಂಡಿರುತ್ತಾನೆ. ಸೀಟ್ ಸಿಗುವುದಿಲ್ಲ ಹಾಗಾಗಿ ನಿಂತುಕೊಂಡಿರುತ್ತಾರೆ. ಕೆಲವೊಮ್ಮೆ ಅವನಿಗೆ ಸೀಟು ಸಿಕ್ಕಿದರೂ, ಅವಳು ನಿಂತುಕೊಂಡಿದ್ದರೆ ಇವನು ಕೂಡ ಬೇಕಂತಲೇ ನಿಂತುಕೊಳ್ಳುತ್ತಾನೆ. ಒಳ್ಳೆಯ ಹುಡುಗ ನ ಹಾಗೆ ಸೀಟನ್ನು ಬೇರೆಯವರಿಗೆ ಬಿಟ್ಟು ಕೊಟ್ಟು ದಾನಶೂರ ಕರ್ಣ ನ ಹಾಗೆ ಫೋಸು ಕೊಡುತ್ತಾನೆ. ಆದರೆ ನಾನೇನು ಹಾಗೆ ತಿಳಿದು ಕೊಳ್ಳುವುದಿಲ್ಲ ಯಾಕೆಂದರೆ ನನಗೆ ಗೊತ್ತು ಆ ಮರ್ಲ ನ ಮರ್ಲು(ಹುಚ್ಚಾಟ) .

ನಾನು ಇದನ್ನು ದಿನಾ ನೋಡುತ್ತೆನೆ. ಆದರೆ ಅವರು ಕಣ್ಣಲ್ಲೇ ಅಷ್ಟು ಹೊತ್ತು ಏನು ಮಾತಾಡ್ತಾರೆ ಅಂತ ನಿಜವಾಗಿಯೂ ನನಗೆ ಗೊತ್ತಿಲ್ಲ. ಆದರೆ ತಿಳಿಯುವ ಕುತೂಹಲ ಇತ್ತು.

ಅವರಿಬ್ಬರೂ ಬೇರೆ ಬೇರೆ ಕಾಲೇಜು. ಕಾಲೇಜು ಹೆಸರು ಇಲ್ಲಿ reveal ಮಾಡಲಾರೆ, ಸುಮ್ಮನೆ ಯಾಕೆ ಅಲಾ.

ಆ ದಿನ ಕೂಡ ಅದೇ ರೀತಿ ಆಯಿತು. ನಾನು ಬಸ್ ಸ್ಟ್ಯಾಂಡ್ ನಲ್ಲಿ ಬಂದು ನನ್ನ ಮಾಮೂಲಿ ಸೀಟು ಹಿಡಿದೆ. ಡ್ರೈವರ್ ನ ಹಿಂದಿನ ಸಾಲಿನಲ್ಲಿ ಕೊನೆಯ ಸೀಟಿಗಿಂತ ಮುಂದಿನ ಸೀಟು. ಹೆಚ್ಚು ಕಡಿಮೆ ಬಸ್ ಸ್ಟ್ಯಾಂಡ್ ನಲ್ಲಿಯೇ ಬಸ್ ಫುಲ್ ಆಗಿ ಬಿಡುತ್ತೆ. ಬೆಳಗ್ಗಿನ  ಜಾವ ಅಲ್ಲ, ಕೆಲಸಕ್ಕೆ ಹೋಗುವವರು, ಕಾಲೇಜಿಗೆ ಹೋಗುವವರು ಹೀಗೆ ಎಲ್ಲಾ ಇರ್ತಾರೆ.

ಬಸ್, ಬಸ್ ಸ್ಟ್ಯಾಂಡ್ ಬಿಟ್ಟು ಹೊರಟಿತು. ಮುಂದಿನ ಸ್ಟಾಪ್ ನಲ್ಲಿ ಅವನು ಬಸ್ ಹತ್ತಿದ. ಬಂದು ನನ್ನ ಪಕ್ಕವೇ ನಿಂತುಕೊಂಡ,ಹಿಂದುಗಡೆ  ಬಸ್ ನ ಕೊನೆಯ ಸಾಲಿನಲ್ಲಿ . ಅದರ ಮುಂದಿನ ಸ್ಟಾಪ್ ನಲ್ಲಿ ಅವಳು ಬಂದಳು. ಡ್ರೈವರ್ ನ ಹಿಂಬದಿಯ ಸೀಟಿನ ಬಳಿ ನಿಂತುಕೊಂಡಳು. ಆಗಲೇ ಶುರುವಾಗುವುದು ಅವರ "ಕಣ್ ಕಣ್ ಸಲಿಗೆ... ಸಲಿಗೆ ಅಲ್ಲಾ ಸುಲಿಗೆ "

ಅವನು ಕಣ್ಣಲ್ಲೇ ಏನು ಕೇಳುತ್ತಿದ್ದ. ಅವಳು ಅದಕ್ಕೆ ಕಣ್ಣಲ್ಲೇ ಉತ್ತರಿಸುತ್ತಿದ್ದಳು. 
ಸಂದೇಶಗಳು ಗಾಳಿಯಲ್ಲಿ ಸಾಗುತ್ತಿದ್ದವು.ಅವನಿಂದ ಅವಳಿಗೆ, ಅವಳಿಂದ ಅವನಿಗೆ ಮಾತ್ರ ಅದು ತಲುಪುತ್ತಿತ್ತು. ನನಗೂ ಕೂಡ ಆ ಸಂದೇಶ ಓದುವ ಮನಸಾಯಿತು.

ಅವ ಕಣ್ಣಲ್ಲೇ ಪುನಃ ಏನೋ ಕೇಳಿದ, ಸಂದೇಶ ಗಾಳಿಯಲ್ಲಿ ಸಾಗುತ್ತಿತ್ತು. ಅವಳಿಗೆ ತಲುಪುವ ಮೊದಲೇ ನಾನದನ್ನು ನನ್ನ ಕಣ್ಣಿನ ದಿವ್ಯ ದೃಷ್ಟಿಯಲ್ಲಿ ಹಿಡಿದು ನಿಲ್ಲಿಸಿದೆ. ನನಗೆ ಕೆಲವು ಅತಿಮಾನುಷ ಶಕ್ತಿ ಗಳಿವೆ. ಹಿಮಾಲಯ ದಲ್ಲಿ ಹೋಗುವಾಗ ಬಾಬ ಒಬ್ಬರು ಕರುಣಿಸಿದ್ದು. ಅದನ್ನು ಇನ್ನೊಂದು ದಿನ ಚರ್ಚಿಸುವ.🙄🙄🤔🤔😉😉

ನಾನು ಕೂಡ ಕಣ್ಣಲ್ಲೇ ಅವನ ಆ coded ಸಂದೇಶವನ್ನು, decode ಮಾಡಿ  ಓದ ತೊಡಗಿದೆ.

ಅವರ ಸಂಭಾಷಣೆ ತುಳು ಭಾಷೆಯಲ್ಲಿ ಇತ್ತು. ಆದರೆ ಎಲ್ಲರಿಗೂ ಅರ್ಥವಾಗಲಿ ಎಂಬ ಕಾರಣಕ್ಕಾಗಿ ಇಲ್ಲಿ ನಮ್ಮ ಮಂಗಳೂರು ಕನ್ನಡವನ್ನು ಬಳಸುತ್ತಿದ್ದೆನೆ.

ಅವನ ಸಂದೇಶ ಈ ರೀತಿ ಇತ್ತು. 
" ಹೇಯ್ ಇಕನಾ, ನಿಂದು ಚಾ ಆಯ್ತ ನ.. "

ಸಾವ್ ಈ ಮರ್ಲನಿಗೆ ಬೇರೆ ಕೆಲಸ ಇಲ್ವಾ, ಏನೋ ರೊಮ್ಯಾಂಟಿಕ್ ಸಂಭಾಷಣೆ ಇರಬಹುದು ಅಂತ ನಾನು ನನ್ನ ದಿವ್ಯ ದೃಷ್ಟಿಯನ್ನು ಪ್ರಯೋಗಿಸಿ ಓದಲು ಪ್ರಯತ್ನಿಸಿದರೆ ಇವ ಇಲ್ಲಿ, ಚಾ ಕಾಫಿ ತಿಂಡಿ ತೀರ್ಥ ಗಳ ಬಗ್ಗೆ ಕೇಳಿ ಸಾಯ್ತ ಇದ್ದಾನೆ.

ಇರಲಿ ಇರಲಿ, ಮುಂದೆ ರೊಮ್ಯಾಂಟಿಕ್ ಸಾಲುಗಳು ಬರಬಹುದು.ಕಾದು ನೋಡುವ. ಕಾಯುವಿಕೆ ಗಿಂತ ತಪವು ಇನ್ನಿಲ್ಲ ಅಂತ ಮನಸ್ಸು ಹೇಳಿತು. ಸಾವ್ ಈ ಮನಸ್ಸೇ ನನಗೆ ಇಂತಹದ್ದೆಲ್ಲ ಹೇಳಿ ಕೊಟ್ಟು ನನ್ನನ್ನು ಅರ್ಧ ಲಗಾಡಿ ತೆಗೆದದ್ದು.

ಇವನ ಈ ಪೊಟ್ಟು ಸಂದೇಶಕ್ಕೆ ಅವಳ reply ಏನಿರಬಹುದು ಎಂಬ ಕುತೂಹಲ ಕ್ಕೆ ದಿವ್ಯ ದೃಷ್ಟಿಯಲ್ಲಿ ತಡೆಹಿಡಿದಿದ್ದ ಅವನ  ಗಾಳಿ ಸಂದೇಶವನ್ನು ಬಿಟ್ಟು ಬಿಟ್ಟೆ. ಈಗ ಇದು ನೇರವಾಗಿ ಅವಳನ್ನು ತಲುಪಿತು.

ಈಗ ಅವಳ ಸೈಡ್ ನಿಂದ  ಕಣ್ಣ ಸಂದೇಶ ಬಂತು. ಅದನ್ನು ಕೂಡ ಬ್ಲಾಕ್ ಮಾಡಿ, ದಿವ್ಯ ದೃಷ್ಟಿಯಲ್ಲಿ ಓದಿದೆ. ಅವಳ ಉತ್ತರ ಹೀಗಿತ್ತು. 
" ಚಾ ಆಯ್ತು. .. ನನಗೆ ತಿಂಡಿ  ಪುಂಡಿ(rice ball ಮಂಗಳೂರು ಕಡೆಯ ಒಂದು ತಿಂಡಿ) , ನಿನಗೆ ಎಂತವಾ  "

ಅವನು ಪಿರ್ಕಿ ಆದರೆ, ಇವಳು ಅಂಡೆ ಪಿರ್ಕಿ.ಎಂತ ಸಾವ, ಎಷ್ಟೊಂದು ನೀರಸ ಸಂಭಾಷಣೆ. ಕೇವಲ  ಚಾ ಆಯ್ತಾ, ತಿಂಡಿ ಎಂತ ಅಂತ ಡೈಲಿ ಇವರು ಕಣ್ಣಲ್ಲಿ ಇಷ್ಟು ಹೊತ್ತು ಇದನ್ನೇ  ಮಾತಾಡುವುದಾ..

ಇರಲಿ ಇರಲಿ.. ಇನ್ನೂ ಸ್ವಲ್ಪ ಕಾಯ್ಬೇಕು ನಾನು. ಇದು ಸಂಭಾಷಣೆ ಯ  ಜಸ್ಟ್ ಆರಂಭ ಅಲ್ವಾ.. ಚಾ, ಕಾಫಿ ತಿಂಡಿ ತೀರ್ಥ ದ ಪ್ರಸ್ತಾಪ ಆಗಬೇಕಾದದ್ದೇ. ಮುಂದೆ ಮೈನ್ ಮೆನು ಖಂಡಿತವಾಗಿಯೂ ಬರುತ್ತೆ.

ಬ್ಲಾಕ್ ಮಾಡಿದ್ದ ಅವಳ ಸಂದೇಶವನ್ನು ರಿಲೀಸ್ ಮಾಡಿದೆ.ಈಗ ಅದು ಅವನಿಗೆ ತಲುಪಿತು.

ಇದೆಲ್ಲವು, ಅಂದರೆ ಅವನು ಅವಳಿಗೆ ಕಣ್ಣಿನಲ್ಲಿ ಸಂದೇಶ ಕಳುಹಿಸುವುದು ಅದನ್ನು ನಾನು  ದಾರಿ ಮಧ್ಯದಲ್ಲಿಯೇ ಬ್ಲಾಕ್ ಮಾಡಿ ಓದಿ ಪುನಃ ರಿಲೀಸ್ ಮಾಡಿ ಅವಳಿಗೆ ಕಳುಹಿಸುವುದು. ಅವಳು ಅವನಿಗೆ ರಿಪ್ಲೈ ಮಾಡುವುದು, ಪುನಃ ನಾನದನ್ನು ತಡೆದು ನಿಲ್ಲಿಸಿ ಓದಿ ಅವನಿಗೆ ಕಳುಹಿಸುವುದು..ಇದೆಲ್ಲವೂ  ಅರ್ಧ ಸೆಕೆಂಡ್ ಗಳಿಗಿಂತಲೂ ಕಡಿಮೆ ಅವಧಿಯಲ್ಲಿಯೇ ನಡೆಯತ್ತಿತ್ತು. ಮತ್ತು ಅವರಿಬ್ಬರಿಗೂ ಮಾತೇ ಇರದ  ನಮ್ಮ ಈ ಕಣ್ಣ ಸಂದೇಶವನ್ನು ಡೀಕೋಡ್ ಮಾಡಿ ಯಾರೋ ಒಬ್ಬರು ತಮ್ಮ ದಿವ್ಯ ದೃಷ್ಟಿಯಿಂದ ಓದುತ್ತಿದ್ದಾರೆ ಎಂಬ ಸಣ್ಣ ಅನುಮಾನ ಕೂಡ ಬಂದಿರಲಿಲ್ಲ. ಬರುವುದಾದರೂ  ಹೇಗೆ ಹೇಳಿ. ಅಂತಹದ್ದೆಲ್ಲ ಶಕ್ತಿ ಯಾರಾದರೂ ಹುಲು ಮಾನವನಿಗೆ  ಇರಲು ಸಾಧ್ಯವೇ ..ಹಾನ್ ನನ್ನನ್ನು ಒಬ್ಬನನ್ನು ಬಿಟ್ಟು!

ಮುಂದೆ ಬರುವ ಸಂದೇಶ ಗಳ ಸಂಭಾಷಣೆ ಗಳೆಲ್ಲಾ ನಾನು ಇದೇ ರೀತಿ ದಿವ್ಯ ದೃಷ್ಟಿಯಿಂದ ಬ್ಲಾಕ್ ಮಾಡಿ ಓದಿ, ಒಮ್ಮೆ ಆ ಸೈಡಿಗೆ, ಮತ್ತೊಮ್ಮೆ ಈ ಸೈಡಿಗೆ ಕಳುಹಿಸಿದ್ದೆ ಆಗಿರುತ್ತದೆ. ಆದುದರಿಂದ ನಾನು ಪದೇ ಪದೇ ಸಂದೇಶ ಬ್ಲಾಕ್ ಮಾಡಿದೆ, ಓದಿದೆ,ಆಚೆ  ಕಳುಹಿಸಿದೆ. ಪುನಃ ರಿಸೀವ್ ಮಾಡಿದೆ, ಓದಿದೆ, ಈಚೆ ಕಳುಹಿಸಿದೆ ಎಂಬಾ ಸಾಲುಗಳನ್ನು ಮತ್ತೆ ಮತ್ತೆ ಇಲ್ಲಿ  ಪುನರುಚ್ಛರಿಸುತ್ತಾ ಹೋಗುವುದಿಲ್ಲಾ ಆಯ್ತಾ, ಜಸ್ಟ್ ಅವರಿಬ್ಬರ ಸಂಭಾಷಣೆ ಮಾತ್ರ ಹೇಳ್ತಾ ಹೋಗ್ತೆನೆ ಅಷ್ಟೇ . ಆದರೆ ನೆನಪಿರಲಿ ಪ್ರತೀ ಸಂದೇಶವನ್ನು ನಾನು ಮೇಲಿನ procedure ಅನ್ನು use ಮಾಡಿಯೇ ಓದಿರುತ್ತೆನೆ.ಅದರಲ್ಲಿ ಡೌಟ್ ಬೇಡ.

ಅವನ ರಿಪ್ಲೈ  ಹೀಗಿತ್ತು.. 
"ನನಗೆ ಸೇಮೆದಡ್ಡೆ(ಒತ್ತು ಶ್ಯಾವಿಗೆ)... "

ಅವಳ ಪ್ರಶ್ನೆ " ಸೇಮೆದಡ್ಡೆ ಯಾರು ಒತ್ತಿದ್ದು,ನೀನೆಯಾ?? "

ಅವನ ಉತ್ತರ " ನಾನಲ್ಲ , ನನ್ನ ಅಪ್ಪ ಸೇಮೆದಡ್ಡೆ ಒತ್ತಿದ್ದು "

ನನಗೆ ಸೇಮೆದಡ್ಡೆ ಯ ಮಣೆ ಯಲ್ಲಿಯೇ ಒಮ್ಮೆ ಹೊಡೆದುಕೊಂಡು ಸಾಯುವ ಅಂತ ಆಯಿತು.

ಅವಳ ಪ್ರಶ್ನೆ" ಸೇಮೆದಡ್ಡೆ ಗೆ  ಎಂತ , ತೆಂಗಿನಕಾಯಿ ಯ ಸ್ವೀಟ್ ಹಾಲಾ ? ಅಥವಾ ಚಿಕನ್ ಕರಿ ಯಾ? "

ಅವನ ಉತ್ತರ "ಅಲ್ಲ , ಫಿಶ್ ಕರಿ" 
🙄🙄🙄

ಈಗ ಇವನ ಪ್ರಶ್ನೆ " ನಿನ್ನೆ  ಅಗ್ನಿಸಾಕ್ಷಿ ನೋಡಿದೆಯಾ ?"

ವಾ ಮರ್ಲ ಮರ್ರೆ, ಹುಡುಗಿಗೋಸ್ಕರ ಸಿರಿಯಲ್ ಕೂಡ ನೋಡ್ತಾನೆ, ಎಂತ ಸಾವ ಇವನು..

ಅವಳು ಹೇಳಿದಳು " ನಿನ್ನೆ  ಕರೆಂಟ್ ಇರ್ಲಿಲ್ಲ,ಹಾಗೇ ನಾನು  ಮೊಬೈಲ್ ಅಲ್ಲಿ ಗೇಮ್ ಆಡಿದ್ದು.. "

ಅವ ಕೇಳಿದ " ಎಂತ  ಪಬ್ಜಿ ಯಾ? "

ಅವಳು ಉತ್ತರಿಸಿದಳು " ಅಲ್ಲವಾ, ಲುಡೋ ಕಿಂಗ್" 
🙄🙄

ಇವರಿಬ್ಬರಿಗೆ ರಸಿಕತನವೇ ಇಲ್ಲ, ಇಬ್ಬರು ಡೊಡ್ಡ ಬೋರಿಗಳು(ಹೋರಿ ತರಹ) . ಕೇವಲ ತಿನ್ನುವುದು,ಗೇಮ್ ಆಡುವುದರ ಬಗ್ಗೆಯೇ ಮಾತಾಡ್ತಿದ್ದಾರೆ ಸಾವ್,ಯಾಕಾದರೂ ನಾನು ನನ್ನ ದಿವ್ಯ ದೃಷ್ಟಿಯನ್ನು ಇವರ ಮರ್ಲ್ ಸಂಭಾಷಣೆ ಕೇಳಲು use ಮಾಡ್ತಿದ್ದೇನಾ.. Sorry,ವೇಸ್ಟ್ ಮಾಡ್ತಿದ್ದೇನಾ  ಅಂತ ಅನ್ನಿಸತೊಡಗಿತು.

ಅವಳು ಹೇಳಿದಳು  " ಎಂತ ಗೊತ್ತಾ, ನನಗೆ ನಿನ್ನ ಬಳಿ ಒಂದು ವಿಷಯ ಹೇಳ್ಲಿಕ್ಕೆ ಇತ್ತಾ.. "

ಅವ " ನನಗೆ ಸ ನಿನ್ನ ಹತ್ತಿರ ಒಂದು ವಿಷಯ ಹೇಳ್ಲಿಕ್ಕೆ ಇತ್ತು "

ಅವಳು " ಹಾಗಾದರೆ ನೀನೇ ಹೇಳು .."

ಅವ " ಬೇಡ  ಫಸ್ಟ್ ನೀನೇ ಹೇಳು, ಆಮೇಲೆ ನಾನು ಹೇಳ್ತೇನೆ "

ಒಹೋ.. ಈಗ ಮ್ಯಾಟರ್ ಬಂತು ದಾರಿಗೆ, ಇವರ ಎಲ್ಲಾ ಗೋಳಿಬಜೆ ಮ್ಯಾಟರ್ ಹೊರಗೆ ಬರ್ತದೆ, ಅವಳು ಲವ್ ವಿಷಯ ಎಲ್ಲಾ ತೆಗಿತಾಳೆ, ಇವನ ಕೂಡ ರೊಮ್ಯಾಂಟಿಕ್ ಆಗಿ ರಸಿಕ ನ ಹಾಗೆ ಮಾತಾಡ್ತಾನೆ..ನಾನು ಕಾದಿದ್ದು ಸಾರ್ಥಕ ಆಯ್ತು ಅಂತ ಅಂದುಕೊಂಡೆ.

ಅವ ಪುನಃ ಹೇಳಿದ " ಏನು ಹೇಳ್ಲಿಕ್ಕೆ ಇದ್ದದ್ದು ,ಹೇಳು.. "

ಅವಳು " ಎಂತ ಗೊತ್ತುಂಟಾ, ಅಲ್ಲಿ ಹಿಂದೆ ನಿನ್ನ ಬದಿಯಲ್ಲಿ ಪರ್ಪಲ್ ಕಲರ್ ಶರ್ಟ್ ಹಾಕಿ ಕೆಳಗೆ ಸೀಟ್ ಅಲ್ಲಿ ಕುಳಿತುಕೊಂಡಿದ್ದಾನೆ ಅಲ್ಲಾ, ಗುಂಗುರು ಕೂದಲಿನವ, ಅವ ಮೂರುಕಾಸಿನವ ಯಾಕೇಯ   ಯಾವಾಗಲೂ ನಮ್ಮನ್ನೇ observe ಮಾಡುವುದು, ಈಗ ಸ ಕಳ್ಳ ನ ಹಾಗೆ ನಮ್ಮನ್ನೇ ನೋಡ್ತಾ ಇದ್ದಾನೆ.. "

ಅದಕ್ಕವನು " ಹೌದಾ ಸಾವ್, ನಾನು ಸ ಅದನ್ನೇ ಹೇಳ್ಬೇಕು ಅಂತ ಇದ್ದದ್ದು ನಿನ್ನತ್ರ ಈಗ. ಯಾವ  ಮರ್ಲ ಮರ್ರೆ ಅವ. ಅವನಿಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ವಾ.. "

ಅವಳು " ಅವನಿಗೆ ಒಂದು ಗತಿ ಕಾಣಿಸಬೇಕು ನಾವು, ಇಲ್ಲದಿದ್ದರೆ ಆಗ್ಲಿಕ್ಕಿಲ್ಲ.. "

ಅವನು " ಹೌದು ಏನಾದರು ಮಾಡ್ಬೇಕು.ನೀನೇ ಹೇಳು. ನಿನಗೆ ಒಳ್ಳೆ ಕ್ರಿಮಿನಲ್ ಐಡಿಯಾ ಎಲ್ಲಾ ಬರ್ತದೆ. ನೀನೇ ಹೇಳು ಅವನನ್ನು ಏನು ಮಾಡುವ... "

ಅವಳು "ಅವನ ಕೈ ಕಾಲನ್ನು ಹಗ್ಗದಲ್ಲಿ ಕಟ್ಟಿ , ಮುಂದೆ ಸಿಗುವ ಗುರುಪುರ ದ ನದಿ ಗೆ  ಬಿಸಾಡುವ.. "

ನಂತರ ನಾನು ನನ್ನ ದಿವ್ಯ ದೃಷ್ಟಿ ಯನ್ನು OFF  ಮಾಡಿ ಬಸ್ಸಿನಿಂದ ಹೊರಗೆ ನೋಡುತ್ತಾ ಜರ್ನಿ ಯನ್ನು ಮುಂದುವರಿಸಿದೆ.

ಯಾಕೆಂದರೆ ಅವರಿಬ್ಬರು ಕೈ ಕಾಲು ಕಟ್ಟಿ ಗುರುಪುರ ದ ಪಲ್ಗುಣಿ ನದಿಗೆ ಬೀಸಾಡಬೇಕಿದ್ದ ಆ ಗುಂಗುರು ಕೂದಲಿನ, ಪರ್ಪಲ್ ಶರ್ಟಿನ ಅಮಾಯಕ ಅಸಾಮಿ ನಾನೇ ಆಗಿದ್ದೆ 😭😭
😂😅🤣

" ಒಂದು ದಿವ್ಯ_ದೃಷ್ಟಿಯ ಕಥೆ  "

...............................................

story by - AB Pacchu,
                 Moodbidri
                 Mangalore(D.K)
                (facebook - AB Pacchu)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ