ಕಲ್ಲು ಸಕ್ಕರೆ ಕೊಳ್ಳಿರೋ

 



ಕೆಮ್ಮು ನನ್ನ ಬಾರೀ ಒಳ್ಳೆಯ ಹಾಗೂ ಬಹಳ ಹಳೆಯ ಫ್ರೆಂಡ್.. ಬಾಲ್ಯದಿಂದ ಅಂತ ಹೇಳಿದರೂ ತಪ್ಪಾಗಲಿಕ್ಕಿಲ್ಲ. 


ವರ್ಷದಲ್ಲಿ ಆವಾಗವಾಗ ಬಂದು ನನ್ನನ್ನು ತಬ್ಬಿ ಮುದ್ದಾಡಿ ಹಿಂಡಿ ಹಿಪ್ಪೆ ಮಾಡಿ ಹೋಗದಿದ್ದರೆ ಅದಕ್ಕೂ ಸಮಾಧಾನವಿಲ್ಲ.


ಆದುದರಿಂದ ಈ ಕೆಮ್ಮಿನ ಕಾರಣದಿಂದಾಗಿ ನನಗೂ ಮತ್ತು ಕಲ್ಲು ಸಕ್ಕರೆಗೂ ಅವಿನಾಭಾವ ಸಂಬಂಧವೊಂದು ಬಹಳ ಚಿಕ್ಕಂದಿನಲ್ಲಿಯೇ ಬೆಳೆದು ಬಿಟ್ಟಿತ್ತು. 


ಚಿಕ್ಕಂದಿನಲ್ಲಿ ಕೆಮ್ಮು ಬಂದ ಕೂಡಲೇ ಕಲ್ಲು ಸಕ್ಕರೆ ತಿನ್ನಲು ಕೊಡುತ್ತಿದ್ದರು.ನನಗೂ ಕಲ್ಲುಸಕ್ಕರೆ ಮೆಲ್ಲಲು ಬಹಳ ಇಷ್ಟವಾಗುತ್ತಿತ್ತು.ಆದ್ದರಿಂದ ಆವಾಗ ನನಗೆ ಕೆಮ್ಮು ಬಂದುದಕ್ಕೆ ಬೇಜಾರ್ ಆದದ್ದಕ್ಕಿಂತಲೂ ಖುಷಿ ಆಗಿದ್ದೆ ಜಾಸ್ತಿ.


ಆ ನಂತರದ ದಿನಗಳಲ್ಲಿ ಕಫ, ಕೆಮ್ಮು ನಿಧಾನಕ್ಕೆ ನನ್ನಿಂದ ನಿಧಾನಕ್ಕೆ ಮಾಯವಾಗಿ ಹೋಗುತ್ತಿತ್ತು. ನಂತರ ನನ್ನ ಕೈಗೆ ಕಲ್ಲು ಸಕ್ಕರೆ ಬರುತ್ತಿದ್ದುದು ಮುಂದಿನ ದಿನಗಳಲ್ಲಿ ಯಾವಾಗಲಾದರೂ ಕೆಮ್ಮು ಬಂದಾಗಲೇ.


ಈ ರೀತಿಯಾಗಿ ವರ್ಷಕ್ಕೆ ಮೂರ್ನಾಲ್ಕು ಸಲ ಆದರೂ ಕಲ್ಲು ಸಕ್ಕರೆ ಸವಿಯು ಭಾಗ್ಯ ನನಗೆ ಸಿಗುತ್ತಿತ್ತು. ನವರಾತ್ರಿ,ಚೌತಿ ಸಂದರ್ಭದಲ್ಲಿ ಕೂಡ ದೇವರ ಪ್ರಸಾದದಲ್ಲಿ ಕಲ್ಲುಸಕ್ಕರೆ ತಿನ್ನಲು ಸಿಗುತ್ತಿತ್ತು. 


ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಕಫ ನನಗೆ ಕಾಣಿಸಿಕೊಂಡಿದ್ದೇ ಇಲ್ಲ.ಹಾಗಾಗಿ ಅಪರೂಪಕ್ಕೆ ಕೂಡ ಕಲ್ಲು ಸಕ್ಕರೆ ಅಷ್ಟಾಗಿ ಸವಿಯುವ ಭಾಗ್ಯ ಸಿಕ್ಕಿರಲಿಲ್ಲ.ಅದನ್ನು  ಹುಡುಕಿಕೊಂಡು ಹೋಗಿ ತಿನ್ನುವುದು ನಮ್ಮಲ್ಲಿ ಕಮ್ಮಿ ನೋಡಿ ಹಾಗಾಗಿ. 


ಆದರೆ ಈಗ ಮೊನ್ನೆಯಿಂದ ಪುನಃ ತುಂಬಾನೇ ಹೆವೀ ಕಫ  ಕೆಮ್ಮು ಎರಡೂ ನನ್ನೊಳಗೆ ಸೇರಿ ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬಿಟ್ಟಿತು.ವೈದ್ಯರು ಶಿಫಾರಸ್ಸು ಮಾಡಿದ  ಶಿರಪು ಬಾಟಲ್ ಒಂದೆರಡು ಹಾಗೇ ಕುಡಿದು ಕುಡಿದು ಖಾಲಿ ಆಗಿ ಹೋಯಿತೇ ವಿನಹ ಯಾವುದೇ ಪ್ರಯೋಜನವಿಲ್ಲ.


ಕೊನೆಗೆ ನನಗೆ ನೆನಪಾಗಿದ್ದೆ ಕೆಮ್ಮಿಗೆ  ನನ್ನ ಹಳೆಯ ಮದ್ದು ಆದಂತಹ,ನನ್ನೊಳ್ಳೆಯ ಮಿತ್ರ ಆದಂತಹ ಕಲ್ಲು ಸಕ್ಕರೆಯೇ. ರಪ್ಪ ಅಂತ ಅಂಗಡಿಗೆ ಓಡಿ ಕಲ್ಲುಸಕ್ಕರೆ ಕಟ್ಟಿಸಿಕೊಂಡು ಬಂದೆ. ಬರುವಾಗಲೇ ದಾರಿಯಲ್ಲಿ ಕೂಡ  ತಿನ್ನುತ್ತಾ ಬಂದಿದ್ದೆ ಅದು ಬೇರೆ ವಿಷಯ. 


ಈ ರೀತಿಯಾಗಿ ಒಂದು ಕಾಲು ಕೆಜಿ ಕಲ್ಲು ಸಕ್ಕರೆ  ಮೊನ್ನೆಯಿಂದ ತಿಂದಿದ್ದೇ ತಿಂದಿದ್ದು. ಕಲ್ಲು ಸಕ್ಕರೆ ತಿನ್ನುತ್ತಲೇ ಅಪ್ಪನಿಗೆ ಒಮ್ಮೆ ಹೀಗೆಯೇ  ಕೇಳಿದ್ದು.. " ಅಪ್ಪ.. ಹೀಗೆ ಕಲ್ಲು ಸಕ್ಕರೆ ತಿಂದರೆ ಕಫ Confirm ಕರಗ್ತದೆ ಅಲ...". ಅದಕ್ಕೆ ಅವರು ಹೇಳುದು " ಕಫ ಕರಗ್ತದ ಇಲ್ಲ ಗೊತ್ತಿಲ್ಲ ಮರಾಯ ... ಕಾಲು ಕೆಜಿ ಕಲ್ಲುಸಕ್ಕರೆ ಕರಗ್ತ ಇರುವುದು ಮಾತ್ರ ಮೊನ್ನೆಯಿಂದ ಕಾಣ್ತಾ ಉಂಟು..." 


ಇರಲಿ... ಇರಲಿ... ಕಾಲು ಕೆಜಿ ಅಲ್ಲ, ಅರ್ಧ ಕೆಜಿಯೇ ಖಾಲಿ ಆಗಿ ಹೋಗಲಿ. ಒಟ್ಟಿನಲ್ಲಿ ಕಫ ನೀರಾಗಿ ಹೋಗುವವರೆಗೂ ನನ್ನ ಬಾಯೊಳಗೆ ಕಲ್ಲುಸಕ್ಕರೆಯೊಂದು ಹಾಗೇ ಕರಗಿ ನೀರಾಗುತ್ತಲೇ ಇರಬೇಕು.ಕಫ ಬಿಡಿ,ಅದು ಅಪರೂಪದ ಅತಿಥಿ,ಖಂಡಿತ ಓಡಿ ಹೋಗುತ್ತದೆ. ಸದ್ಯಕ್ಕೆ ನನಗದು ಕಲ್ಲುಸಕ್ಕರೆ ಮೆಲ್ಲಲು ಒಂದು ಸವಿಯಾದ  ನೆಪ ಆಗಿದೆ ಅಷ್ಟೇ... 


ಈ ಕಲ್ಲು ಸಕ್ಕರೆಯ  ಘನತೆ ನಮ್ಮ ಮಾಮೂಲಿ ಸಕ್ಕರೆಗಿಂತ ತುಸು ಹೆಚ್ಚೇ ಇದೆ.ಸಾಮಾನ್ಯ ಸಕ್ಕರೆಯನ್ನೇ ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ಮಾಡಲಾಗುತ್ತದೆ. ಹಾಗಾಗಿ ಸಿಹಿಯ ಅಂಶ ಸ್ವಲ್ಪ ನಾಶವಾಗಿ ಸಾಮಾನ್ಯ ಸಕ್ಕರೆಗಿಂತ ಇದು ಸ್ವಲ್ಪ ಕಮ್ಮಿಯೇ  ಸಿಹಿ ಇರ್ತದೆ.ಆದರೆ ಆರೋಗ್ಯದ ದೃಷ್ಟಿಯಿಂದ ಕಲ್ಲುಸಕ್ಕರೆ  ಸಕ್ಕರೆಯನ್ನೇ ಮೀರಿಸಿ ಬಿಡುತ್ತದೆ. ಇದರ ಉಪಯೋಗ ಒಂದಾ.. ಎರಡಾ.. ನಿಜವಾಗಿಯೂ ಬಹುಪಯೋಗಿ ಈ ಕಲ್ಲುಸಕ್ಕರೆ. 


ಹೌದು ಕಲ್ಲುಸಕ್ಕರೆ ಆರೋಗ್ಯಕ್ಕೆ ಒಳ್ಳೆಯದು,ಮನೆ ಬಳಕೆಯಲ್ಲಿ ಇದು ಎಂದೂ ಇರಬೇಕಾದದ್ದೆ.ಒಂದು ರೀತಿಯಲ್ಲಿ ಮನೆ ಮದ್ದು ಅಂತ ಹೇಳಬೇಹುದು. ಸಕ್ಕರೆಗೂ ಇಲ್ಲದ ರಾಜಮರ್ಯಾದೆ ಆಯುರ್ವೇದದಲ್ಲಿ ಕಲ್ಲುಸಕ್ಕರೆ ಗೆ ಇದೆ.


ದಣಿದ ದೇಹಕ್ಕೆ ಒಂದು ತುಂಡು ಕಲ್ಲು ಸಕ್ಕರೆ ಚೈತನ್ಯ ವೃದ್ಧಿ ಮಾಡುವ ಕೆಲಸ ಮಾಡುತ್ತದೆ,ದೇಹಕ್ಕೆ ಶಕ್ತಿ ನೀಡುತ್ತದೆ,ಆಯಾಸ ಪರಿಹರಿಸುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕೂಡ ತಕ್ಕ ಮಟ್ಟಿಗೆ ಕಡಿಮೆ ಮಾಡುತ್ತದೆ.ಶಾಲೆಯ ಮಕ್ಕಳಿಗೆ ರಾತ್ರಿ ಬಿಸಿ ಹಾಲಿಗೆ ಒಂದು ತುಂಡು ಕಲ್ಲು ಸಕ್ಕರೆ ಹಾಕಿ ಕೊಟ್ಟರೆ ನೆನಪಿನ ಶಕ್ತಿಗೂ ಒಳ್ಳೆಯದಂತೆ.


ಮಹಿಳೆಯರ ಆರೋಗ್ಯಕ್ಕೂ ಕಲ್ಲುಸಕ್ಕರೆ ಒಳ್ಳೆಯದು. ಶೀತ  ಕೆಮ್ಮುವಿಗೆ ಕಲ್ಲು ಸಕ್ಕರೆಯಂತು  ರಾಮ ಭಾಣ ಇದ್ದಂತೆ. ಹಾಗೇ ತಿನ್ನಬಹುದು ಇಲ್ಲವೇ ಬಿಸಿ ನೀರಿಗೆ ಸ್ವಲ್ಪ ಜಜ್ಜಿದ ಕರಿಮೆಣಸು ಹುಡಿ ಮತ್ತು ಕಲ್ಲು ಸಕ್ಕರೆ ಹಾಕಿಕೊಂಡು ಕುಡಿಯುವುದು ಸಹ ಉಳ್ಳೆಯದೇ. ಅಜೀರ್ಣತೆ ಸಮಸ್ಯೆಗೆ ಕೂಡ ಇದೂ ಸಹಕಾರಿ.


ಬಾಯಿಯ ದುರ್ಗಂಧ ನಿವಾರಿಸಲು ಮತ್ತು ಬಾಯಿಯ ತಾಜಾತನಕ್ಕೂ ಕೂಡ ಇದು ಒಳ್ಳೆಯದು. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಕಲ್ಲು ಸಕ್ಕರೆ ಸೇವನೆ ಮಾಡಿದರೆ ಉತ್ತಮ. ಗಂಟಲು ನೋವು ನಿವಾರಣೆ, ಜೀರ್ಣ ಕ್ರೀಯೆಗೆ ಇದು ಸಹಕಾರಿ. 


ಔಷಧಿಯಾಗಿ ಕಲ್ಲು ಸಕ್ಕರೆಯ ಹೆಚ್ಚಿನ ಬಳಕೆ ಇದ್ದರೂ.. ಕಾಫಿಗೆ ಮಾತ್ರವಲ್ಲ ಸಿಹಿ ತಿಂಡಿಯ ಬಳಕೆಯಲ್ಲೂ ಸಕ್ಕರೆಗಿಂತ ಕಲ್ಲು ಸಕ್ಕರೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಅಚ್ಚ ಬಿಳಿಯ ಬಣ್ಣದ ಕಲ್ಲು ಸಕ್ಕರೆಗಿಂತಲೂ ಸ್ವಲ್ಪ ಬೂದು ಹಳದಿ ಮಿಶ್ರಿತ ಬಣ್ಣದ ಕಲ್ಲು ಸಕ್ಕರೆ ರುಚಿ ಜಾಸ್ತಿ ಅಂತೆ.


ಕೃಷ್ಣನಿಗೂ ಕಲ್ಲು ಸಕ್ಕರೆ ಅಂದರೆ ಬಹಳ ಪ್ರೀಯವಂತೆ. ದ್ವಾಪರ ಯುಗದಲ್ಲಿ ಕೃಷ್ಣ ಕಲ್ಲು ಸಕ್ಕರೆಯನ್ನು ಕದ್ದು ತನ್ನ ಗೆಳೆಯರೊಡನೆ ತಿನ್ನುತ್ತಿದ್ದನಂತೆ ಎಂದು ಕಥೆಗಳು ಇವೆ. ಲಕ್ಷೀ ದೇವಿಗೂ ಕಲ್ಲುಸಕ್ಕರೆ ಬಳಸಿದ ಪಾಯಸದ ನೈವೇದ್ಯ ಇಷ್ಟವಂತೆ. 


ನಮ್ಮ ದಾಸ ಶ್ರೇಷ್ಠ ಪುರಂದರ ದಾಸರು ಸಹ,ತಮ್ಮ ಆರಾಧ್ಯ ಕೃಷ್ಣನನ್ನು ಕೊಂಡಾಡುವಾಗಲೂ ಕಲ್ಲು ಸಕ್ಕರೆಯೊಂದನ್ನು ಹೇಗೆ  ದೇವರನಾಮದಲ್ಲಿ ಸೇರಿಸಿಕೊಂಡು ಬಿಟ್ಟಿದ್ದಾರೆ ನೋಡಿ.. 


"  ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ

   ಕಲ್ಲು ಸಕ್ಕರೆ ಕೊಳ್ಳಿರೋ

   ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು

   ಪುಲ್ಲ ಲೋಚನ ಶ್ರೀ ಕೃಷ್ಣ ನಾಮವೆಂಬ

   ಕಲ್ಲು ಸಕ್ಕರೆ ಕೊಳ್ಳಿರೋ..... " 


ದಾಸರು ಇಲ್ಲಿ ಕಲ್ಲುಸಕ್ಕರೆಯ ಬಗ್ಗೆ ಪ್ರಸ್ತಾಪಿಸಿದರೂ ಅವರು ಹೇಳಿದ್ದು ತಿನ್ನುವ ಕಲ್ಲು ಸಕ್ಕರೆಯ ಬಗ್ಗೆ ಅಲ್ಲ,ಭಕ್ತರ ನಾಲಿಗೆಗೆ ಸವಿ ಕೊಡುವ  ಕೃಷ್ಣನಾಮವೆಂಬ ಕಲ್ಲು ಸಕ್ಕರೆಯ ಬಗ್ಗೆ ಅವರು ಇಲ್ಲಿ ಹೇಳಿದ್ದು.ಇರಲಿ ನಮ್ಮ ಮನದಲ್ಲಿ ಕೃಷ್ಣನಾಮದ ಕಲ್ಲು ಸಕ್ಕರೆಯೂ ಇರಲಿ ಅದರ ಜೊತೆಗೆ ಮನೆಯ ಡಬ್ಬದಲ್ಲಿ ಬಾಯಲ್ಲಿ ಕರಗಿ ನೀರಾಗುವ ಸವಿಯಾದ ಕಲ್ಲುಸಕ್ಕರೆಯೂ ಸಹ  ಇರಲಿ. ಆಧ್ಯಾತ್ಮ ಮತ್ತು ಆರೋಗ್ಯ ಎರಡೂ ತನು ಮನ ದ ಸುಖಕ್ಕೆ ಬಹಳ ಮುಖ್ಯ..


ಮನೆಯ ಡಬ್ಬದಲ್ಲಿ ಕಲ್ಲುಸಕ್ಕರೆ ಇರದಿದ್ದರೆ ನಾಳೆಯೇ ಹೋಗಿ ಇಡೀ  ಡಬ್ಬವನ್ನು ಕಲ್ಲು ಸಕ್ಕರೆಯೊಂದಿಗೆ ಭರ್ತಿ ಮಾಡಿ ಬಿಡಿ. ಬಾಯಿ ಸಿಹಿ ಮಾಡಿಕೊಳ್ಳಬೇಕು ಅಂತ ಅನ್ನಿಸಿದ್ದಾಗ  ಪ್ರತೀ ಬಾರಿಯೂ ನಮಗೆ ಕ್ಯಾಡ್ ಬರಿಯಂತಹ ಚಾಕೋಲೇಟೇ ನೆನಪಿಗೆ ಬರಬೇಕಾಗಿಲ್ಲ..ಕೆಲವೊಮ್ಮೆ ನಮ್ಮನೆಯ ಡಬ್ಬದಲ್ಲಿರುವ  ತುಂಡು ಕಲ್ಲುಸಕ್ಕರೆಯೂ ಸಹ ಬೇರೆ ಯಾವುದಕ್ಕಿಂತಲೂ ಯಾವುದರಲ್ಲೂ  ಕಡಿಮೆಯೇನಲ್ಲ 😋😊


..................................................................................... 


#ಏನೋ_ಒಂದು..


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ