ಚಳಿಗಾಲದ ದಿನಗಳು

 

ಬೆಳಿಗ್ಗೆ ಬೆಳಿಗ್ಗೆ ಅಪರೂಪಕ್ಕೆ ಒಮ್ಮೆ ಅಪ್ಪ ಚಹಾ ಮಾಡಿದರೂ ಖಡಕ್ ಆಗಿಯೇ ಇರ್ತದೆ,ಹುಡಿ ಸ್ವಲ್ಪ ಲೆಕ್ಕಕ್ಕಿಂತ ಜಾಸ್ತಿ ಅವರಿಗೆ,ಹಾಗಾಗಿ. 


ಅಮ್ಮ ಮಾಡುವ ಪ್ರತೀ ದಿನದ ನೀರುದೋಸೆ ಎಷ್ಟು ಬೇಕೋ ಅಷ್ಟೇ ತೆಳು,ಒಂದು mm ಕೂಡ ದಪ್ಪ ಆದದ್ದು ಯಾವತ್ತೂ ನಾನು ಗಮನಿಸಿಲ್ಲ.ಎರಡು ಮೂರು ಅಲಾರಂ ಆಗದೇ ಮೊದಲ ಅಲರಾಂಗೆನೇ ಎದ್ದ ಉದಾಹರಣೆಗಳು ಬಹಳ ಕಡಿಮೆ,ಇಲ್ಲದಿದ್ದರೆ  ಮೊಬೈಲ್ ನಲ್ಲಿ ಹತ್ತು ನಿಮಿಷಗಳ ಅಂತರದಲ್ಲಿ ಒಂದರ ನಂತರ ಒಂದಾಗಿ  ಇಟ್ಟ ಆ ಮೂರು ಸರಣಿ ಅಲರಾಂ ಗೂ ಬೆಲೆ ಬರುವುದಿಲ್ಲ.


ಮನೆಯಲ್ಲಿ ಬೇರೆಯವ ಟೂತ್ ಬ್ರಷ್ ನ ಎಳೆಗಳು ಈಗಲೂ ಊರ್ಧ್ವ ಮುಖವಾಗಿ 'ಹ್ಯಾಂಡ್ಸ್ ಅಪ್' ಮಾಡಿ ಸೆಟೆದು ನಿಂತಿದೆ,ನನ್ನದು ಉಜ್ಜಿ ಉಜ್ಜಿ ಹಾಗೇ ಅರಳಿಕೊಂಡ ವೈಟ್ ಸೂರ್ಯಕಾಂತಿ.ನೀರುದೋಸೆ ತಿನ್ನಲು ತಟ್ಟೆಯಲ್ಲಿ ಓಡಾಡುವ ಸಾರು ಬೇಡ,ಬಂಗುಡೆ ಗಸಿಯೇ ಬೇಕು ಇಲ್ಲ ಫಿಶ್ ಪುಳಿಮುಂಚಿಯಂತಹ ಗಟ್ಟಿ ಗಸಿಯೇ ಬೇಕು ಎನ್ನುವ ನನ್ನ ಹಳೆಯ  ಹಠ ಈಗ ಬದಲಾಗಿದೆ,ಕೆಲವೊಮ್ಮೆ ಸಕ್ಕರೆ ಇನ್ನು ಕೆಲವೊಮ್ಮೆ ಬೆಲ್ಲ ಕಾಯಿಯೂ ನಡೆಯುತ್ತದೆ.ಅದರ ರುಚಿಯೇ ಬೇರೆ. 


ತಿಂಡಿ ತಿಂದು ಡ್ರೆಸ್ ಹಾಕಿ ಕೆಲಸಕ್ಕೆ ಹೊರಡುವ ಮೊದಲು ಕನ್ನಡಿ ಎದುರು ನಿಂತರೆ ತಲೆ ಕೂದಲು ಬಾಚಲು ಬಾಚಣೆಗೆಯ ಅವಶ್ಯಕತೆ ನನಗಿಲ್ಲ,ಪೊದೆಯಂತೆ ಬೆಳೆದಿರುವ ಕರ್ಲಿ ಹೇರ್ ಅನ್ನು ಅಲ್ಲೊಂದು ಸ್ವಲ್ಪ ಇಲ್ಲೊಂದು ಸ್ವಲ್ಪ ಕೈ ಹಾಕಿ ಎಳೆದು ಸೆಟ್ ಮಾಡಿ ಬಿಟ್ಟರೆ ಅದೇ ದಿನದ ಫರ್ಪೆಕ್ಟ್ ಹೇರ್‌ಸ್ಟೈಲ್ ನನ್ನದು.


ಬಸ್ಸು ಸ್ಟ್ಯಾಂಡ್ ಗೆ ಹೋಗುವ ಗುಡ್ಡದ ದಾರಿಯಲ್ಲಿ ಹುಲ್ಲಿನ ನಡು ನಡುವೆ ಬಲೆ ಕಟ್ಟಿಕೊಂಡ ಜೇಡಗಳಿಗೆ ಇಬ್ಬನಿಯ ದಾಳಿ ನವೆಂಬರ್ ನಿಂದ ಅಧಿಕವಾಗಿದೆ. ಬಸ್ ಸ್ಟ್ಯಾಂಡ್ ನಲ್ಲಿ ಹಿಂದಿನಂತೆ ಈಗ ಜನ ಇಲ್ಲ. ಇದ್ದವರೂ ಕೂಡ ಲೋಕದ ಆಗು ಹೋಗುಗಳ ತಮ್ಮ ಎಂದಿನ ಜಗದ ಚರ್ಚೆ,ಞಕ್ಕ್ ಞೈ(ಪುನರಾವರ್ತಿತ ಮಾತುಗಳು)ನಿಲ್ಲಿಸಿಲ್ಲ...ಚಳಿಗಾಲ ಎಷ್ಟೇ ಉದಾಸೀನ ಹಿಡಿಸಿದರೂ ಅವರು  ಮಾತಾಡುವಾಗ ಬಾಯಯಲ್ಲಿ ಬರುವ ಹೊಗೆ ನೋಡುವುದರಲ್ಲಿಯೇ ನನಗೆ ಕುತೂಹಲ ಜಾಸ್ತಿಯೇ ಹೊರತು ಅವರ ಮಾತುಗಳಲ್ಲಿ ಅಲ್ಲ, ಸಿಗರೇಟೇ ಸೇದದವರ ಬಾಯಲ್ಲಿ ಕೂಡ ನವೆಂಬರ್ ಡಿಸೆಂಬರ್ ಚಳಿ ಹೊಗೆ ಬರುವಂತೆ ಮಾಡುತ್ತದೆ. 


ಬಸ್ ವೀಂಡೋ ಪಕ್ಕ ಕುಳಿತುಕೊಂಡರೆ ಕೆಲವರು ಮೈಂದ್(ಮಂಜು)ಮೆತ್ತಿಕೊಂಡಿರುವ ಗ್ಲಾಸ್ ನಲ್ಲಿ ತಮ್ಮ ಕೈ ಬೆರಳಿಂದ Sanju ❤️ Sanjana, Praveena ❤️ Pallavi  ಅಂತ ತಮ್ಮ ಹೆಸರಿನ ಮುಂದೆ ತಮ್ಮ ತಮ್ಮ ಪ್ರೇಯಸಿ ಹೆಸರುಗಳನ್ನು ಬರೆಯುತ್ತಿದ್ದರೆ ನಾನು ಮಾತ್ರ ಶ್ರದ್ಧೆಯಿಂದ  ನೀಲಮೇಘ ❤️ ಅಂತ  ಬರೆದು....ಅದರ ಮುಂದೆ ಅನುರಾಧ ಬರೆಯಲೋ, ರುಕ್ಕು ಅಂತ ಬರೆಯಲೋ ಇಲ್ಲ ಭಾಮ ಎಂದು ಬರೆದು ಬಿಡಲೇ ಎಂದು ತಡವರಿಸುತ್ತಿರುವಾಗಲೇ ."ಪಚ್ಚು.. ಚಳಿ ಜೋರು ಉಂಡು ಅತ" (ಪಚ್ಚು.. ಚಳಿ ಜಾಸ್ತಿ ಆಗಿದೆ ಅಲ..) ಅಂತ ಪರಿಚಯದ ಬಸ್ ಕಂಡಕ್ಟರ್ ನಗುತ್ತಾ ಹೇಳುವಾಗಲೇ.. ಹೌದು ಪ್ರತೀ ವರ್ಷದಂತೆ  ಈ ಬಾರಿಯೂ ಚಳಿ ಜೋರೇ ಇದೆ ಅಲ ಎಂದು ನೆನಪಾಗಿ,ಆ ಕೂಡಲೇ ಚಳಿ ಸ್ವಲ್ಪ ಹೆಚ್ಚಾದ  ಅನುಭವವಾಗಿ.. ನನಗರಿವಿಲ್ಲದೇ ಹಲ್ಲು ಕಟ ಕಟ ಮಾಡಿಬಿಡುತ್ತೇನೆ. 


ಬೆಳಗಿನ ಮಂಜು ಸೀಳಿಕೊಂಡು ಬಸ್ ಹಾಗೇ ಮುಂದೆ ಓಡುತ್ತಿದ್ದರೆ ನಾನು ನನ್ನ ಬಾಯಿಂದ ಕೂಡ ಹೊಗೆ ಬರಿಸುವ ಸಲುವಾಗಿ ಗಾಳಿ ಊದಲು ಶುರು ಮಾಡುತ್ತೇನೆ. ಬೆರಳು ಮಾತ್ರ ವೀಂಡೋ ಗಾಜಿನ ಮಂಜು ಖಾಲಿ ಆಗುವವರೆಗೂ ಏನೇನೋ  ಗೀಚುತ್ತಲೇ ಇರುತ್ತದೆ...


#ಚಳಿಗಾಲದ_ದಿನಗಳು.


.....................................................................................


#ಏನೋ_ಒಂದು... 


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ