ತುಳುನಾಡಿನ ಎಲೆ ಗಟ್ಟಿಗಳು
ತುಳುನಾಡಿನಲ್ಲಿ ಮಾಡುವ ಕೆಲವೊಂದು ತಿನಿಸುಗಳು ತುಂಬಾನೇ ವಿಶಿಷ್ಟವಾದದ್ದು ಮತ್ತು ಅಷ್ಟೇ ಆರೋಗ್ಯಕರವಾದದ್ದು. ಇದು ಇಲ್ಲಿ ಬಿಟ್ಟರೆ ಇತರ ಭಾಗಗಳಲ್ಲಿ ನಿಮಗೆ ದೊರೆಯುವುದು ತುಂಬಾನೇ ವಿರಳ, ಮತ್ತು ಹೋಟೆಲ್ ಗಳಲ್ಲಿ ಇದನ್ನು ನೀವು ಖಂಡಿತವಾಗಿಯೂ ಕಾಣಲು ಸಾಧ್ಯವೇ ಇಲ್ಲ.ಆದರೆ ಮಲೆನಾಡು ಹಾಗೂ ಇನ್ನಿತರ ಕರಾವಳಿಯ ಭಾಗಗಳಲ್ಲಿ ನೀವು ಕೆಲವೊಮ್ಮೆ ಇಂತಹದ್ದೇ ತಿಂಡಿಗಳನ್ನು ಕಾಣಬಹುದು.
ಪ್ರಕೃತಿ ಯೊಂದಿಗೆನೇ ನಮ್ಮ ತುಳುನಾಡಿನ ತಿಂಡಿ ತಿನಿಸುಗಳು ತಳುಕು ಹಾಕಿಕೊಂಡಿ ಬಿಟ್ಟಿವೆ. ಇಲ್ಲಿ ಮಾತ್ರವೇ ಸಿಗಲು ಸಾಧ್ಯವಿರುವ ತಿಂಡಿ ತಿನಿಸುಗಳಿಗೆ ಈ ಮಣ್ಣಿನ ಘುಮ, ನೀರಿನ ರುಚಿ,ಹಾಗೂ ಆಚಾರ ವಿಚಾರ, ಹಬ್ಬ ಹರಿದಿನಗಳ ಲೇಪನವಿದೆ.
ತುಳುನಾಡಿನಲ್ಲಿ ಆರೋಗ್ಯಕ್ಕೆ ಹಿತವಾದ ಸ್ಟೀಮ್ (ಆವಿ/ಹಬೆ) ನಲ್ಲಿ ಬೇಯಿಸುವ ತಿಂಡಿಗಳು ಸ್ವಲ್ಪ ಜಾಸ್ತಿ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ. ನಿಮಗೆಲ್ಲರಿಗೂ ಹಬೆಯಲ್ಲಿ ಬೇಯಿಸಿ ಮಾಡುವ ಇಡ್ಲಿ, ಪುಂಡಿ, ಒತ್ತು ಶ್ಯಾವಿಗೆ ಗೊತ್ತು. ಆದರೆ ನಮ್ಮಲ್ಲಿ ಇನ್ನೂ ಹಲವಾರು ರೀತಿಯ ಹಬೆಯಿಂದ ಬೇಯಿಸಿ ಮಾಡುವ ವಿಶಿಷ್ಟ ತಿನಿಸುಗಳಿವೆ. ವಿಶೇಷ ಏನೆಂದರೆ ಈ ರೀತಿಯ ತಿನಿಸುಗಳನ್ನು ಮಾಡಲು ನಾವು ಇಲ್ಲಿ ಯಾವುದೇ ಸ್ಟೀಲ್ ಇಲ್ಲವೇ ಪ್ಲಾಸ್ಟಿಕ್ mould/cup ಗಳನ್ನು ಬಳಸದೇ ಪ್ರಾಕೃತಿಕವಾಗಿ ಸಿಗುವ ಮರದ ಎಲೆಗಳನ್ನೇ ಬಳಸುತ್ತೇವೆ.
ಈ ರೀತಿಯ ಎಲೆಗಳನ್ನು ಬಳಸಿ ಮಾಡುವ ತಿನಿಸುಗಳಿಗೆ ತುಳುವಲ್ಲಿ ಗಟ್ಟಿ(ಕಡುಬು) ಎಂದು ಹೆಸರು.
ಈ ರೀತಿಯಾಗಿ ಮರದ ಎಲೆಗಳನ್ನು ಬಳಸಿ, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬುಗಳು ಒಂದು ಆರೋಗ್ಯ ಕ್ಕೆ ತುಂಬಾನೇ ಹಿತವಾಗಿದ್ದರೆ.. ಇನ್ನೊಂದು ಆ ಕಡುಬುಗಳಿಗೆ ಎಲೆಯ ಪರಿಮಳವೆಲ್ಲ transfer ಆಗಿ ಕಡುಬುಗಳಲ್ಲಿ ತುಂಬಾನೇ ಸ್ವಾದಿಷ್ಟವಾಗಿರುತ್ತದೆ. ಅತ್ಯಂತ ಹೆಚ್ಚು ಪರಿಮಳದಿಂದ ಕೂಡಿರುವುದು ಮತ್ತು ಸ್ವಾದಿಷ್ಟವಾಗಾರುವುದು ಮಂಜಲ್ ದ ಇರೆ ತ(ಅರಶಿನದ ಎಲೆ) ಕಡುಬೇ 😋
ನಮ್ಮಲ್ಲಿ ಕಡುಬು ಗಳನ್ನು ಮಾಡಲು ಹೆಚ್ಚಾಗಿ ಬಳಕೆ ಮಾಡುವ ಎಲೆಗಳು ಎಂದರೆ..ಪೆಲ( ಹಲಸು),ಮಂಜಲ್(ಅರಶಿನ), ತೆಕ್ಕಿ(ಸಾಗುವಾನಿ), ಪೆಜ(ಹೆಬ್ಬಲಸು), ಪೊಂಗರ್, ಮೂಡೆ ಒಲಿ(ಕೇದಗೆ), ಬಾರೆ(ಬಾಳೆ) ,ಸೇವು/ತೇವು/ಚೇವು(ಕೆಸು) ಕೆಸು, ಮರಕೆಸು, ಬಾದಾಮ್, ಪೊನ್ನೆ(ಹೊನ್ನೆ) , ಉಪ್ಪಳಿಗೆ , ಗೋಸಂಪೈ(ಗೋಸಂಪಿಗೆ) , ಗೋಳಿ(ಆಲ).ಇನ್ನೂ ಬೇರೆ ತುಂಬಾ ಎಲೆಗಳು ಇರಬಹುದು, ಆದರೆ ಸದ್ಯಕ್ಕೆ ನಾನು ಯಾವ ಎಲೆಗಳ ಕಡುಬುಗಳನ್ನು ಸವಿದಿದ್ದೆನೋ ಅದರ ಬಗ್ಗೆ ಮಾತ್ರ ಇಲ್ಲಿ ಬರೆದಿದ್ದೇನೆ. ಕಡುಬು ಗೆ ಬಳಕೆ ಮಾಡುವ ಬೇರೆ ಎಲೆ ಗಳು ಕೂಡ ಇದ್ದರೆ ದಯಮಾಡಿ ತಿಳಿಸಿ.
ಹೆಚ್ಚಾಗಿ ಈ ಎಲೆಗಳಲ್ಲಿ ಎರಡು ರೀತಿಯ ಕಡುಬುಗಳನ್ನು ಮಾಡುತ್ತಾರೆ. ಒಂದು ಪೊಟ್ಟು ಗಟ್ಟಿ(ಸಪ್ಪೆ ಕಡುಬು ). ಇನ್ನೊಂದು ಸೀಪೆ/ಚೀಪೆ ಗಟ್ಟಿ(ಸಿಹಿ ಕಡುಬು). ಸಪ್ಪೆ ಕಡುಬು ಗೆ ಅಕ್ಕಿಯನ್ನು ರುಬ್ಬಿ ತೆಳುವಾಗಿ ಎಲೆಯ ಮೇಲೆ ಸವರಿ, ನಂತರ ಎಳೆಯನ್ನು ಮಡಚಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು, ಹಬೆಯಲ್ಲಿ ಬೇಯಿಸಿ ಕಡುಬು ಮಾಡುತ್ತಾರೆ. ಸಿಹಿ ಕಡುಬು ಹೆಚ್ಚು ಕಡಿಮೆ ಹೀಗೇ ಮಾಡುತ್ತಾರೆ, ಅದರೆ ಇದರಲ್ಲಿ ಎಲೆ ಮೇಲೆ ರುಬ್ಬಿದ ಅಕ್ಕಿ ಹಿಟ್ಟು ಸವರಿದ ಮೇಲೆ, ಬೆಲ್ಲ, ತೆಂಗಿನಕಾಯಿ, ಎಲಕ್ಕಿಯಿಂದ ಮಾಡಿದ ಸಿಹಿ ಹೂರಣವನ್ನು ಇಟ್ಟು ಕಡುಬು ಮಾಡುತ್ತಾರೆ. ಹಿಟ್ಟಿಗೆ ಕೆಲವರು ಬೆಳ್ತಿಗೆ ಅಕ್ಕಿ ಬಳಸಿದರೆ ಇನ್ನು ಕೆಲವರು ಕುಚಲಕ್ಕಿ ಬಳಸುವುದು ಉಂಟು.
ಇದೇ ರೀತಿ ಮರದ ಎಲೆಗಳನ್ನು ಬಳಸಿ ಇನ್ನೂ ಕೆಲವೊಂದು ತಿಂಡಿಗಳನ್ನು ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಒಂದು ಪೆಲಕಾಯಿ ಗಟ್ಟಿ (ಹಲಸಿನ ಹಣ್ಣಿನ ಕಡುಬು) ಮತ್ತೊಂದು ಪತ್ರೊಡೆ. ಸಾಗುವಾನಿ ಮರದ ಎಲೆ ಬಳಸಿ ಪೆಲಕಾಯಿ ಗಟ್ಟಿ ಮಾಡಿದರೆ.. ಆ ಗಟ್ಟಿ ಕೆಂಪು ಕೆಂಪಾಗಿ ಇರುತ್ತದೆ😋😋. ಇನ್ನು ಎಲೆಗಳ ಮೇಲೆ ಎಲೆಗಳನ್ನು ಇಟ್ಟು ಮಾಡುವ ಪತ್ರೋಡೆ ಗೆ ಬೇರೆ ಯಾವುದೇ ಎಲೆಗಳನ್ನು ಬೇಯಿಸಲು ಉಪಯೋಗಿಸುವುದಿಲ್ಲ. ಆದರೆ ಕೆಸುವಿನ ಎಲೆಗಳನ್ನು ಚೆನ್ನಾಗಿ ಕೊಚ್ಚಿ ಮಾಡುವ ಪತ್ರೊಡೆಗೆ ಬೇಯಿಸಲು ಬೇರೆ ಎಲೆಗಳನ್ನು ಬಳಸಬೇಕಾಗುತ್ತದೆ . ಹೆಚ್ಚಾಗಿ ಸಾಗುವಾನಿ ಮರದ ಎಲೆಯನ್ನೇ ಬಳಸುತ್ತಾರೆ.ಇನ್ನು ಕೆಲವರು ತುಳುವಲ್ಲಿ ಉಪ್ಪಳಿಗೆ/ತಂದೇವು ಎನ್ನುವ ಎಳೆಯನ್ನು ಕೂಡ ಬಳಸುತ್ತಾರೆ. ಇದೇ ತಂದೇವು ಎಲೆಯನ್ನು ಹಳ್ಳಿಯ ಹೋಟೆಲ್ ಗಳಲ್ಲಿ ತಿಂಡಿ ಕಟ್ಟಲು ಮಾತ್ರ ವಲ್ಲ, ಮನೆಯಲ್ಲಿ ತಿಂಡಿ ತಿನ್ನಲು ಕೂಡ ಬಳಸುವುದು ಉಂಟು.
ಮೊದಲೇ ಹೇಳಿದಂತೆ ನಮ್ಮಲ್ಲಿಯ ತಿಂಡಿ ತಿನಿಸುಗಳು ಗಳು ಇಲ್ಲಿಯ ಹಬ್ಬ ಹರಿದಿನ ಗಳೊಂದಿಗೆ ಬೆಸೆದುಕೊಂಡಿದೆ. ಇದೇ ಹಬ್ಬಕ್ಕೆ, ಇದೇ ಎಲೆಯಿಂದ ಮಾಡಿದ ಕಡುಬು ಮಾಡಿ ತಿಂದರೇನೇ ನಮ್ಮವರಿಗೇನೋ ಸಮಾಧಾನ.
ಉದಾಹರಣೆಗೆ ನಾಗರಪಂಚಮಿಗೆ ಅರಶಿನದ ಎಲೆಯ ಸಿಹಿ ಕಡುಬು,ಅಷ್ಟಮಿ ಗೆ ಮೂಡೆ(ಕೇದಗೆ ಯ ಎಲೆಯಿಂದ ಮಾಡುವುದು), ಚೌತಿ ಗೆ ಮೂಡೆ ಮತ್ತು ಗುಂಡ(ಹಲಸಿನ ಎಲೆಯಿಂದ ಮಾಡುವುದು), ಇನ್ನು ದೀಪಾವಳಿ ಗೆ ಹೆಬ್ಬಲಸು ಎಲೆಯ ಕಡುಬು,ಬಾಳೆ ಎಲೆಯ ಕೊಟ್ಟಿಗೆ, ಗೋ ಪೂಜೆಗೆ ಗೋಸಂಪಿಗೆ ಮರದ ಎಲೆಯ ಕಡುಬು,ಆಟಿ ತಿಂಗಳಲ್ಲಿ ಕೆಸುವಿನ ಎಲೆಯ ಪತ್ರೋಡೆ.. ಹೀಗೆ ಹಬ್ಬ, ಪ್ರಕೃತಿ, ತಿಂಡಿ ತಿನಿಸುಗಳು ಇಲ್ಲಿಯ ಸಂಸ್ಕೃತಿ ಯನ್ನು ಸಮೃದ್ಧಿಗೊಳಿಸಿ ಬಿಟ್ಟಿವೆ.
ಇಷ್ಟು ಮಾತ್ರವಲ್ಲ ಗೋಳಿ(ಆಲ), ಬಾಳೆ, ಹೊಂಗೆ ಹಾಗೂ ಇತರ ಮರದ ಎಲೆಗಳ ಸಪ್ಪೆ ಗಟ್ಟಿಗಳು(ಕಡುಬುಗಳು), ಮೂಡೆ, ಗುಂಡ ಗಳು ಕೂಡ ಮಾಂಸಾಹಾರಿಗಳಿಗೆ ಬಲು ಪ್ರೀಯ. ಅದರಲ್ಲೂ ಬಂಗುಡೆ ಫಿಶ್ ಕರಿ, ಹಾಗೂ ಚಿಕನ್ ಪುಳಿ ಮುಂಚಿ ಇದ್ದರೆ ಸಪ್ಪೆ ಕಡುಬುಗಳು ಕೂಡ ಬಾಯಲ್ಲಿ ನೀರೂರಿಸಿಬಿಡುತ್ತದೆ.😋😋
ಎಲೆಯ ಕಡುಬುಗಳಲ್ಲಿ ನಮ್ಮ ಬಾಲ್ಯದ ನೆನಪುಗಳಿವೆ.ಅಮ್ಮ ಹೇಳುತ್ತಿದ್ದಳು, ನೋಡು ಇವತ್ತು ಇಂತಿಂತಹ ಕಡುಬು ಮಾಡ್ಲಿಕ್ಕೆ ಉಂಟು, ಇದಕ್ಕೆ ಸಂಬಂಧ ಪಟ್ಟ ಎಲೆ ತಾ ಎಂದು. ನಾವು ಎಲೆ ತರಲು ಓಡುತ್ತಿದ್ದವು. ಕೆಸುವಿನ ಎಲೆ ತರಲು ನೀರು ಸಮೃದ್ಧವಾಗಿರುತ್ತಿದ್ದ ಪಕ್ಕದ ಮನೆಯ ತೋಟಕ್ಕೆ ಹೋಗುತ್ತಿದ್ದರೆ, ಮರ ಕೆಸುವಿನ ಎಲೆ ತರಲು ಗುಡ್ಡದ ದೊಡ್ಡ ದೊಡ್ಡ ಮರಗಳನ್ನು ಹತ್ತಬೇಕಾಗುತ್ತಿತ್ತು.ಇನ್ನಿತರ ಎಲೆಗಳು ನಮ್ಮ ಮನೆಯ ಹಿತ್ತಿಲಲ್ಲಿ ಸಿಗುತ್ತಿತ್ತು. ವೀಳ್ಯದೆಲೆ ಬಳ್ಳಿಯ ಜೊತೆ ನೆಡುವ ಪೊಂಗಾರಿನ ಗಿಡದಲ್ಲಿ ಪೊಂಗಾರಿನ ಎಲೆ ಸಿಗುತ್ತಿತ್ತು, ಗದ್ದೆ ಬದುವಿನ ಬಳಿ ಹೋದರೆ ಪೊನ್ನೆ(ಹೊನ್ನೆ) ಎಲೆ ಸಿಗುತ್ತಿತ್ತು,ಊರಿನ ಹೊರ ವಲಯದ ದೊಡ್ಡ ಗೋಳಿ(ಆಲ) ಮರದಿಂದ ಗೋಳಿ ಎಲೆ ಸಿಗುತ್ತಿತ್ತು. ಅಲ್ಲಿಗೆ ಹೋದರೆ ಅದರ ಗಾಳಿ ಬೇರುಗಳಲ್ಲಿ ಸ್ವಲ್ಪ ಹೊತ್ತು ಜೋಕಾಲಿ ಜೀಕಿ ಬರದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ. ಹಿತ್ತಲಲ್ಲೇ ಇರುವ ಅರಶಿನದ ಎಲೆ ತರುವಾಗ ಅದರ ಎಲೆಯನ್ನು ಸ್ವಲ್ಪವೇ ಹರಿದು ಮೂಗಿನ ಬಳಿ ಎಲೆಯನ್ನು ತಂದು ಅದರ ಪರಿಮಳನ್ನು ಹಾಗೆಯೇ ಆಘ್ರಾಣಿಸದಿದ್ದರೆ ಅದೆಂತಹ ಬಾಲ್ಯ. ಅದರ ಎಲೆಯ ಪರಿಮಳಕ್ಕೆ ಮೈ ಮನಸ್ಸು ಅರಳುತ್ತಿತ್ತು.
ಕೆದಗೆಯ ಎಲೆಗಳಿಂದ ಮಾಡುವ ಮೂಡೆ, ಹಲಸಿನ ಎಲೆಯಿಂದ ಮಾಡುವ ಗುಂಡ ಕ್ಕೆ, ಖಾಲಿ ಎಲೆ ಮಾತ್ರ ಸಾಕಾಗುವುದಿಲ್ಲ. ಆ ಎಲೆಗಳಿಂದ ಹಿಟ್ಟು ಹೊಯ್ಯಲು ಬೇಕಾದ mould ತಯಾರಿಸುವ ಕಲೆ ಕೂಡ ಗೊತ್ತಿರಬೇಕಾಗುತ್ತಿತ್ತು. ಇದಕ್ಕೆ ತುಂಬಾ ದೀರ್ಘಾವಾದ ತಯಾರಿಯೇ ಬೇಕು. ಅದರಲ್ಲೂ ಮೂಡೆ ಮಾಡಲು ಸ್ವಲ್ಪ ಸಮಯವೂ ಜಾಸ್ತಿ, ಕೆಲಸವೂ ಜಾಸ್ತಿ..ಗದ್ದೆ, ಹೊಳೆ ನದಿ ಬದುಗಳಿಂದ ಮೂಡೆ ಎಲೆಯನ್ನು ತರಬೇಕು, ಮುಳ್ಳುತೆಗೆಯಬೇಕು, ಎಲೆಯನ್ನು ಬಾಡಿಸಬೇಕು,ಎಲೆ flexible ಆಗುವಂತೆ ಮಾಡಲು ಚೆನ್ನಾಗಿ ಸುತ್ತಿ ಚಂದ್ರಿಕೆ ಮಾಡಿ ಇಡಬೇಕು. ನಂತರ ಎಲೆಯಿಂದ ಮೂಡೆ ಮಾಡಲು ಗುಡ್ಡಕ್ಕೆ ಮುಳ್ಳು ತರಲು ಹೋಗಬೇಕು ಇಲ್ಲವೇ, ಬಿದಿರಿನಿಂದ ಮುಳ್ಳುಗಳನ್ನು ತಯಾರಿ ಮಾಡಬೇಕು. ನಂತರ ಶ್ರದ್ಧೆಯಿಂದ ಒಂದೊಂದಾಗಿ ಮೂಡೆಯನ್ನು ಸಿದ್ಧ ಪಡಿಸಿಕೊಳ್ಳಬೇಕು.ಒಂದು ಗುಂಡ ಮಾಡುವುದಾದರೆ ಹಲಸಿನ ನಾಲ್ಕು ಎಲೆ ಬೇಕು, ಅದನ್ನು ಕೂಡ ಮುಳ್ಳು ಇಲ್ಲವೇ ಬಿದಿರಿನ ಕಡ್ಡಿ ಬಳಸಿಯೇ ಗುಂಡ ರಚನೆ ಮಾಡುತ್ತಾರೆ. ಅಷ್ಟಮಿ, ಚೌತಿ ಬಂತೆಂದರೆ ನಮ್ಮ ಮನೆಗಳಲ್ಲಿ ಹಬ್ಬದಷ್ಟೇ ಖುಷಿ ಈ ಮೂಡೆ, ಗುಂಡ ಮಾಡುವುದರಲ್ಲಿ. ರಾತ್ರಿಯೆಲ್ಲ ಕುಳಿತು ಅಜ್ಜಿ ಕಥೆ ಮಾತನಾಡುತ್ತಾ ಮನೆಯವರೊಂದಿಗೆ ಕೂತು ಗುಂಡ, ಮೂಡೆ ಮಾಡಿದ ನೆನಪು ಯಾವತ್ತೂ ಮರೆತು ಹೋಗುವಂತದ್ದಲ್ಲ. ಕೇದಗೆಯ ಎಲೆಯ ಮೂಡೆ ಯ ಪರಿಮಳವೇ ಅದ್ಭುತವಾದದ್ದು.
ಅದರಲ್ಲೂ ಎಲ್ಲಾ season ನಲ್ಲೂ ಎಲ್ಲಾ ಎಲೆಗಳು ಸಿಗುವುದಿಲ್ಲ, ಅರಶಿನದ ಎಲೆ ಗೆ, ಮರ ಕೆಸುವಿಗೆ ಮಳೆಗಾಲವೇ ಬೇಕು. ಆದರೂ ಆ ಕಾಲಕ್ಕೆ ಸಿಗುವ ಆಯಾ ಎಲೆಗಳಿಂದ ಒಮ್ಮೆಯಾದರೂ ಕಡುಬು ಮಾಡಿ ಚಪ್ಪರಿಸದಿದ್ದರೆ ನಮ್ಮವರಿಗೆ ಸಮಧಾನವೆ ಇಲ್ಲ. ಅದರಲ್ಲೂ ಅಷ್ಟಮಿ ಗೆ ಇಲ್ಲವೇ ಚೌತಿ ಗೆ ಒಮ್ಮೆಯಾದರೂ ನಮ್ಮ ತುಳುನಾಡಿನವರಿಗೆ ಮೂಡೆ ತಿನ್ನಲೇಬೇಕು.ಮನೆಯಲ್ಲಿ ಮಾಡದಿದ್ದರೆ ಮಾರ್ಕೆಟ್ ನಲ್ಲಿ ದುಪ್ಪಟ್ಟು ಬೆಲೆಗೆ ಹಣ ತೆತ್ತು ಮೂಡೆ ಯನ್ನು ತಮ್ಮ ತಮ್ಮ ಮನೆಗೆ ತರುವವರು ಈಗಲೂ ನಮ್ಮಲ್ಲಿ ಇದ್ದಾರೆ.
ತುಳುನಾಡಿನ ನಗರ ಪ್ರದೇಶಗಳಲ್ಲಿ ಇದೆಲ್ಲವೂ ಕಾಣೆಯಾಗಿದ್ದರೂ, ಹಳ್ಳಿಗಳಲ್ಲಿ ಇನ್ನೂ ಇದೆ. ಇನ್ನು ಮುಂದೆಯೂ ಇದು ಇರಬೇಕಾದರೆ ಇಲ್ಲಿಯ ಪ್ರಕೃತಿ ಹೊಳೆ ನದಿ ಉಳಿಯಬೇಕು. ಸರಿಯಾದ ಪ್ರಕೃತಿ ಇದ್ದರೆ ಮಾತ್ರ ಅಲ್ಲ ಮರ ಗಳು ಬೆಳೆಯುವುದು, ಎಲೆಗಳನ್ನು ಕೊಡುವುದು. ಪರಿಸರ ದ ನಾಶದಿಂದ ಇಂದು ಹಲವಾರು ಎಲೆಗಳ ಮರಗಳು ಕಣ್ಮರೆಯಾಗುತ್ತಾ ಬಂದಿದೆ. ಈಗ ಹುಟ್ಟಿದ ಮಕ್ಕಳಿಗೆ ಏನಾದರೂ ಈ ರೀತಿಯ ಎಳೆಗಳಿಂದ ಮೊನ್ನೆ ಮೊನ್ನೆವರೆಗೂ ಕಡುಬು ಮಾಡುತ್ತಿದ್ದರಪ್ಪ ಅಂತ ಹೇಳಿದರೆ ಅವರು ನಕ್ಕು ಬಿಡುತ್ತಾರೆ. ಅವರಿಗೆ ಜಾಸ್ತಿ ಅಂದರೆ ಪತ್ರೋಡೆ, ಅರಶಿನದ ಎಲೆಯ ಕಡುಬು ಮಾತ್ರ ಗೊತ್ತಿರುತ್ತದೆ.
ಇಂದಿನ ಫಿಜ್ಜಾ ಬರ್ಗರ್ ಫಾಸ್ಟ್ ಫುಡ್ ಗಳ ನಡುವೆ ಈ ಎಲೆಗಳ ಕಡುಬುಗಳು ಉಸಿರಾಡಲು ತುಂಬಾನೇ ಕಷ್ಟಪಡುತ್ತಿದೆ. ಮನೆಯಲ್ಲೂ ಮಾಡುವವರಿಲ್ಲ. ಮೊದಲನೆಯದಾಗಿ ಗೊತ್ತಿಲ್ಲ, ಅದಕ್ಕಿಂತ ಹೆಚ್ಚಾಗಿ ಅಷ್ಟು ಪುರುಸೊತ್ತು ನಮ್ಮವರಿಗಿಲ್ಲ. ಆದರೂ ಹಿರಿಯರು ವಯಸ್ಸಾದವರು ಇರುವ ಮನೆಯಲ್ಲಿ ಈಗಲೂ ಎಲೆಯ ಕಡುಬುಗಳು ಅರಳುತ್ತವೆ..ಮಾಡಿದರೆ ತಿಂದು ಸವಿಯಿರಿ, ದೇಹಕ್ಕೂ ತಂಪು.. ಆರೋಗ್ಯಕ್ಕೂ ಒಳ್ಳೆಯದು.. 😋😋☺️🙏
AB Pacchu
Moodubidire














Comments
Post a Comment