ಗೂಡುದೀಪ



ಅವನು ಶಾಲೆಯಲ್ಲಿ ಕಲಿಯುವುದರಲ್ಲಿ ಸ್ವಲ್ಪ ಹಿಂದೆ ಅಲ್ಲ,ಯಾವಾಗಲೂ ತುಂಬಾನೇ ಹಿಂದೆ ಇರ್ತಿದ್ದ.ಎಲ್ಲರಂತೆ ಅಷ್ಟೊಂದು ಬುದ್ಧಿವಂತ ಅವನಲ್ಲ. 


ಶಾಲೆಯಲ್ಲಿ ಹೆಚ್ಚಾಗಿ ನಿದ್ದೆಯನ್ನೇ  ಮಾಡುತ್ತಿದ್ದ ಅವನ ಹೆಸರು  ನವೀನ.ಐದನೇ ತರಗತಿಯ ಪುಟ್ಟ ವಿದ್ಯಾರ್ಥಿ. 


ಕ್ಲಾಸ್ ಟೆಸ್ಟ್ ಗಳಲ್ಲೂ ಕೂಡ ಪದೇ ಪದೇ  ಅನುತ್ತೀರ್ಣರಾಗುತ್ತಿದ್ದ ಅವನ ಮನೆಗೊಂದು ದೂರು  ನಿರಂತರವಾಗಿ  ಹೋಗುತ್ತಲೇ ಇತ್ತು.


ನವೀನನ ಇಬ್ಬರು ಅಣ್ಣಂದಿರು ಕಲಿಕೆಯಲ್ಲಿ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ,ಆಟ ಕ್ರೀಡೆಯಲ್ಲಿ ಎಲ್ಲದರಲ್ಲೂ ಸದಾ ಮುಂದು.


ಶಾಲೆಯಿಂದ ದೂರು ಬಂದಾಗಲೆಲ್ಲ ತಂದೆ ನವೀನನಿಗೆ..ನಿನ್ನ ಅಣ್ಣಂದಿರನ್ನು ನೋಡಿ ಕಲಿ....ನೀನು ಕೇವಲ ನನ್ನ ಮರ್ಯಾದೆ ತೆಗೀಲಿಕ್ಕೆ ಎಂದೇ ನಮಗೆ ಮಗನಾಗಿ ಹುಟ್ಟಿದ್ದೀಯಾ.. ಎಂದು ಬೈದು ನವೀನನಿಗೆ ಮಂಗಳಾರತಿ ಮಾಡುತ್ತಿದ್ದರು.


ಓದುವುದರಲ್ಲಿ ಮಾತ್ರವಲ್ಲ ತಿನ್ನುವುದರಲ್ಲಿಯೂ ನವೀನ  ಬಹಳ ಹಿಂದೆ,ಅಮ್ಮ ಹಾಕಿ ಕೊಟ್ಟ ಲಂಚ್ ಬಾಕ್ಸ್ ಅನ್ನು ಓಪನ್ ಕೂಡ ಮಾಡದೇ ಹಾಗೇ ಮನೆಗೆ ಹಿಂದೆ ತರುತ್ತಿದ್ದ.ಅದಕ್ಕಾಗಿ ಅಮ್ಮನಿಂದ ಕೂಡ ಅವನಿಗೆ ಚೆನ್ನಾಗಿ ಬೈಗುಳ ಸಿಗುತ್ತಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ನವೀನ ಆನಂದನ ಬುತ್ತಿಯ ಊಟವನ್ನು ಹಂಚಿಕೊಂಡು ತಿನ್ನುತ್ತಿದ್ದ.ಅದೂ ಕೂಡ ಸ್ವಲ್ಪವೇ. 


ಹೌದು ಇಂತಹ ನವೀನನಿಗೆ ಶಾಲೆಯಲ್ಲಿ ಇದ್ದ ಏಕೈಕ ಗೆಳೆಯ ಅಂತ ಅದು ಆನಂದನೇ. 


ನವೀನನಿಗೆ ಶಾಲೆಗೆ ಹೋಗುವ ಮನಸ್ಸೇ ಇರಲಿಲ್ಲ.ಆದರೂ ಆನಂದ ಜೊತೆಗಿರುವ ಕಾರಣದಿಂದಾಗಿ ಶಾಲೆಗೆ ಹೋಗುತ್ತಿದ್ದ. ಶಾಲೆಗಿಂತಲೂ ಅವನಿಗೆ ಶಾಲೆಗೆ ಹೋಗುವ ದಾರಿಯಲ್ಲಿ ಆಸಕ್ತಿ ಇತ್ತು. 


ಅದು ದೀಪಾವಳಿಯ ಸಮಯ.ದೀಪಾವಳಿಗೆ ಇನ್ನೂ ಮೂರು ದಿನ ಬಾಕಿ ಇತ್ತು.ಪೇಟೆಯಲ್ಲಿ ದೀಪಾವಳಿಯ ವ್ಯಾಪಾರದ  ಗೌಜು ಗದ್ದಲ ಜೋರಿತ್ತು.ಅದೊಂದು ದಿನ ಶಾಲೆಯಿಂದ ಮನೆಗೆ  ಬರುತ್ತಿರಬೇಕಾದರೆ ಪೇಟೆಯ ಹೊರ ಭಾಗದಲ್ಲಿ ಗೂಡುದೀಪಗಳನ್ನು ಮಾರುವ ತಳ್ಳು ಗಾಡಿಯೊಂದನ್ನು ಅವರಿಬ್ಬರು ದೂರದಿಂದಲೇ ನೋಡುತ್ತಾರೆ. 


ಎಲ್ಲಾ ಅಂಗಡಿಗಳಲ್ಲಿ ಮಾರುತ್ತಿದ್ದ ಚೀನೀ ಗೂಡುದೀಪಗಳನ್ನು ನೋಡಿದ್ದ ನವೀನನಿಗೆ,ಆ ದೇಸಿ ಗೂಡುದೀಪಗಳನ್ನು ನೋಡಿ ಅದರ ಕಡೆಗೆ ಆಸಕ್ತಿ ಹೆಚ್ಚಾಯಿತು. 


ತಡಿ ಆನಂದ ಈಗ ಬಂದೆ... ಎಂದು ಆನಂದನಿಗೆ ಹೇಳಿದ ನವೀನ ಸೀದಾ ಆ ತಳ್ಳುಗಾಡಿಯತ್ತಾ ಬರುತ್ತಾನೆ.


ಅವು ಪುಟ್ಟ ಪುಟ್ಟ ಗೂಡುದೀಪಗಳು, ಬಿದಿರು ಕಡ್ಡಿಗಳಿಗೆ ಗೋಂದು ಹಚ್ಚಿ, ನೂಲುಗಳಿಂದ ಒಂದಕ್ಕೊಂದು ಕಡ್ಡಿಯನ್ನು ಗಟ್ಟಿಯಾಗಿ ಬಿಗಿದು ಕಟ್ಟಿ,ಆ ನಂತರ ಬಣ್ಣದ ಕಾಗದಗಳನ್ನು ಅಂಟಿಸಿ  ಮಾಡಿದ ಹ್ಯಾಂಡ್ ಮೇಡ್ ಗೂಡು ದೀಪ ಅದು. 


ಅದನ್ನು ಕಂಡು ನವೀನನಿಗೆ ಬಹಳ ಖುಷಿಯಾಯಿತು.ಒಂದು ಗೂಡು ದೀಪವನ್ನು ಕೈಗೆತ್ತಿಕೊಂಡು ಅದನ್ನೇ ಹಾಗೇ ಬೆರಗು ಕಣ್ಣುಗಳಿಂದ ನೋಡ ತೊಡಗಿದ.ಆಗಲೇ ಆನಂದನಿಗೆ ನೆನಪಾಗಿದ್ದು ಯಾಕೆ ಇಲ್ಲಿ ಇದನ್ನು ಮಾರುವವರು ಯಾರು ಇಲ್ಲ ಎಂದು. ಸುತ್ತ ಮುತ್ತ ತಿರುಗಿ ನೋಡಿದ.. ಇಲ್ಲ.. ಅಲ್ಲಿ ಯಾರು ಇರಲಿಲ್ಲ.


ಆಗ ನವೀನನಿಗೆ ಒಂದು ಕ್ಷೀಣವಾದ ನರಳುವ ಧ್ವನಿ ಕೇಳಿ ಬಂತು ಮತ್ತು ಆ ಧ್ವನಿ ತಳ್ಳುಗಾಡಿಯ ಕೆಳಗಿನಿಂದಲೇ ಬರುತ್ತಿತ್ತು. ನವೀನ ಹಾಗೇ ಕೆಳಗೆ ಬಗ್ಗಿ ಆ ತಳ್ಳುಗಾಡಿಯ ಕೆಳಗೆ ನೋಡಿದ, ಆಗ ಅಲ್ಲೊಬ್ಬಳು ಅಜ್ಜಿ ತಲೆ ತಿರುಗಿ ಬಿದ್ದಿದ್ದಳು. 


ಅದನ್ನು ಕಂಡ ನವೀನ ಕೂಡಲೇ ದೂರದಲ್ಲಿ ನಿಂತಿದ್ದ ತನ್ನ ಫ್ರೆಂಡ್ ಆನಂದನನ್ನು ಕೂಗಿ ಕರೆದ.ಆನಂದನೂ ಅಲ್ಲಿಗೆ ಓಡೋಡಿ ಬಂದ. ಆನಂದನನ  ಬ್ಯಾಗ್ ನಲ್ಲಿದ್ದ ವಾಟರ್ ಬಾಟಲ್ ಅನ್ನು ಕೈಗೆ ತೆಗೆದುಕೊಂಡು ಆ ಬಾಟಲಿಯಲ್ಲಿದ್ದ ನೀರನ್ನು ಆ ಅಜ್ಜಿಯ ಮುಖದ ಮೇಲೆ ನವೀನ ಸಿಂಪಡಿಸಿದ. ಅವಳು ಸಾವರಿಸಿಕೊಂಡು ಎದ್ದು ಕುಳಿತ ನಂತರ ಅಜ್ಜಿಗೆ ನವೀನ ನೀರು ಕೊಡಿಯಲು ಕೊಟ್ಟ. ನಂತರ ನವೀನ ಆನಂದನಿಗೆ.. ಆನಂದ ನಾವೀಗ ಅಜ್ಜಿಗೆ ಗಾಳಿ ಬೀಸಬೇಕು.. ಎಂದು ಹೇಳಿದ.ಇಬ್ಬರೂ ಗಾಳಿ ಬೀಸಿದ ನಂತರ ಅಜ್ಜಿ ಸ್ವಲ್ಪ ಚೇತರಿಸಿಕೊಂಡಳು. 


ಆ ನಂತರ ನವೀನ ಅಜ್ಜಿಯ ಬಳಿ ಕೇಳಿದ.. ಯಾಕೆ ಅಜ್ಜಿ.. ಏನಾಯಿತು ನಿಮಗೆ ಎಂದು..


ಅಜ್ಜಿ ಹೇಳಿದಳು..  ಬಿಸಿಲಿಗೆ ಗೂಡು ದೀಪ ಮಾರಿ ಮಾರಿ ಸುಸ್ತಾಗಿ ಹೋಗಿತ್ತು ಮಗ.. ಮಧ್ಯಾಹ್ನ  ಊಟ ಬೇರೆ  ಮಾಡಿರಲಿಲ್ಲ..ಹಾಗಾಗಿ ತಲೆ ತಿರುಗಿ ಬಿದ್ದೆ.. ಯಾರೂ ಕೂಡ ಹತ್ತಿರ ಬರಲಿಲ್ಲ..ಆದರೆ ಮಕ್ಕಳು ನೀವು ದೇವರಂತೆ ಬಂದಿರಿ... ಎಂದು ಮಕ್ಕಳಿಬ್ಬರ ತಲೆ ಸವರುತ್ತಾ ಹೇಳಿದಳು ಅಜ್ಜಿ. 


ಅದನ್ನು ಕೇಳಿ ನವೀನನಿಗೆ ಬಹಳ ಬೇಜಾರು ಆಯಿತು ಮತ್ತು ಆ ಕೂಡಲೇ ಅವನಿಗೆ ಬ್ಯಾಗ್ ನಲ್ಲಿದ್ದ ಮಧ್ಯಾಹ್ನ ತಿನ್ನದೇ ಹಾಗೇ ಇಟ್ಟಿದ್ದ ಲಂಚ್ ಬಾಕ್ಸ್ ನೆನಪಾಯಿತು. ಅದರಲ್ಲಿ ಉಪ್ಪಿಟ್ಟು ಇತ್ತು. ಕೂಡಲೇ ಬ್ಯಾಗ್ ನಿಂದ ಲಂಚ್ ಬಾಕ್ಸ್ ತೆಗೆದು.. ಅಜ್ಜಿಯ ಕೈಗಿತ್ತು.. ಅಜ್ಜಿ ಇದರಲ್ಲಿ ಉಪ್ಪಿಟ್ಟು ಇದೆ... ತಗೊಳ್ಳಿ ಇದು ನಿಮಗೆ.. ತಿನ್ನಿ. ಎಂದು ಹೇಳಿದ ನವೀನ. 


ಅಜ್ಜಿ ಸಂತೋಷದಿಂದ ಅಷ್ಟೂ ಉಪ್ಪಿಟ್ಟು ತಿಂದಳು... ನಂತರ ನವೀನ ಪುನಃ ಅವಳಿಗೆ ನೀರು ಕುಡಿಯಲು ಕೊಟ್ಟ.ಹೊಟ್ಟೆ ತುಂಬಾ ನೀರು ಕುಡಿದ ಅಜ್ಜಿ... ನಿಮ್ಮಿಬ್ಬರನ್ನು ದೇವರು ಚೆನ್ನಾಗಿ ಇಟ್ಟಿರಲಿ ಮಕ್ಕಳೇ ಎಂದು ಮನಸಾರೆ ಹರಸಿದಳು. 


ಆನಂದ  ಅಜ್ಜಿಯ ಬಳಿ ಕೇಳಿದ.... ಅಜ್ಜಿ ನೀನು ಈ ಯಾಕೆ ಗೂಡುದೀಪ ಎಲ್ಲಾ ಮಾರ್ತಾ ಇದ್ದೀಯಾ.. ನಿನಗೆ ಮನೆಯಲ್ಲಿ ಯಾರೂ ಇಲ್ವಾ..? 


ಅಜ್ಜಿ ಹೇಳಿದಳು.. ಇಲ್ಲ ಮಗ... ನಾವು ತುಂಬಾ ಬಡವರು..ಅದಕ್ಕಾಗಿ ಈ ದೀಪಾವಳಿಯ ಸಂಧರ್ಭ ಬಂದಾಗ ಗೂಡು ದೀಪಗಳನ್ನು ನಾವೇ ಮಾಡಿ ಮಾರುತ್ತೇವೆ. ನಾನು ಮತ್ತು ನನ್ನ ಯಜಮಾನರು ಇಬ್ಬರೇ ಇರುವುದು. ನಮಗೆ ಮಕ್ಕಳು ಅಂತ ಯಾರಿಲ್ಲ.. ನನ್ನ ಗಂಡನಿಗೂ ಕೂಡ ಅನಾರೋಗ್ಯ..ಹಾಗಾಗಿ ಸಂಸಾರದ ಜವಾಬ್ದಾರಿ ಎಲ್ಲಾ ನನ್ನ ಮೇಲೆಯೇ ಇದೆ...ಏನಾದರೂ ಚಿಕ್ಕ ಪುಟ್ಟ ಕೆಲಸ ಮಾಡಿ... ಹಬ್ಬಗಳು ಬಂದಾಗ ಇಂತಹದ್ದೆಲ್ಲಾ ಏನಾದರೂ ಮಾರಾಟ ಮಾಡಿ,ಉಳಿದ ಸಮಯದಲ್ಲಿ ಸೊಪ್ಪು ತರಕಾರಿ ಎಲ್ಲಾ ಮಾರಿ ಹೇಗೋ ಜೀವನ ಸಾಗಿಸಿ ಬಿಡ್ತೇನೆ... ನನಗೂ ವಯಸ್ಸಾಗಿದೆ ಆದರೆ ಹಾಗೇ ಸತ್ತು ಹೋಗಲು ಮನಸ್ಸು ಬರುವುದಿಲ್ಲ ಮಗ....! 


ಅಜ್ಜಿಯ ಮಾತುಗಳು ಬಾಲಕ ನವೀನನ ಮೇಲೆ ತುಂಬಾ ಪ್ರಭಾವ ಬೀರಿತು. 


ನಂತರ ಅಜ್ಜಿಗೆ ಟಾಟಾ ಹೇಳಿ ನವೀನ ಮತ್ತು  ಆನಂದ ಇಬ್ಬರೂ ತಮ್ಮ ತಮ್ಮ ಮನೆ ಸೇರಿದರು. 


ಆ ರಾತ್ರಿ ನವೀನನಿಗೆ ನಿದ್ದೆಯೇ ಬರಲಿಲ್ಲ.. ಮನಸ್ಸಿನಲ್ಲಿ ಇದ್ದದು ಕೇವಲ ಗೂಡು ದೀಪ ಮಾರುವ ಅಜ್ಜಿಯೇ.


ಬೆಳಿಗ್ಗೆ ಎದ್ದ ನವೀನ ಮನಸ್ಸಿನಲ್ಲಿಯೇ ಒಂದು ನಿರ್ಧಾರ ಮಾಡಿ ಆಗಿತ್ತು. ಅಮ್ಮನ ಬಳಿ ಹೋದ ನವೀನ ಹೇಳಿದ...ಅಮ್ಮ ನನಗಿವತ್ತು ಎರಡು ಲಂಚ್ ಬಾಕ್ಸ್ ನಲ್ಲಿ ಊಟ ಕೊಡಮ್ಮ.


ಅದನ್ನು ಕೇಳಿ ಅಮ್ಮನಿಗೆ ಆಶ್ಚರ್ಯವಾಯಿತು. ಯಾಕೆ ಎಂದಿನಂತೆ ಇವತ್ತು ಜಾಸ್ತಿಯೇ ಊಟ ಬಿಸಾಡ್ಲಿಕ್ಕೆ ಮನಸ್ಸಾಗಿದೆಯಾ ನಿನಗೆ..?


ಅದಕ್ಕೆ ನವೀನ ಹೇಳಿದ.. ಇಲ್ಲ ಅಮ್ಮ,ನನ್ನ ಫ್ರೆಂಡ್ ಆನಂದನಿಗೆ ನೀನು ಮಾಡುವ ಎಲ್ಲಾ ಊಟ, ತಿಂಡಿ ಬಹಳ ಇಷ್ಟ ಆಗಿದೆ.. ಕೆಲವೊಮ್ಮೆ ಅವನ ಲಂಚ್ ಬಾಕ್ಸ್ ನಲ್ಲಿ ಇದ್ದುದ್ದನ್ನು ನಾನು ಕೂಡ ತಿನ್ತೇನೆ..ಹಾಗಾಗಿ ಇವತ್ತು ಅವನಿಗೆ ನೀನು ಮಾಡಿದ ಫುಲ್ ಲಂಚ್ ಬಾಕ್ಸ್ ಅನ್ನೇ ಕೊಡ್ಬೇಕು ಅಂತ ಇದ್ದೇನೆ... ಆದ್ದರಿಂದ ನನಗಿವತ್ತು ಎರಡು ಲಂಚ್ ಬಾಕ್ಸ್ ನಲ್ಲಿ ಊಟ ಹಾಕಿ ಕೊಡು.. ಎಂದು ನವೀನ ಹೇಳಿದ. 


ಆ ನಂತರ ಅಮ್ಮ ರೆಡಿ ಮಾಡಿ ಇಟ್ಟ ಎರಡೂ ಲಂಚ್ ಬಾಕ್ಸ್ ಅನ್ನು ತನ್ನ ಬ್ಯಾಗ್ ನಲ್ಲಿಟ್ಟು ನವೀನ ಶಾಲೆಗೆ ಹೊರಟ. ದಾರಿ ಮಧ್ಯದಲ್ಲಿ ಆನಂದ ಕೂಡ ಎಂದಿನಂತೆ ಅವನನ್ನು ಸೇರಿಕೊಂಡ.


ನವೀನ ಆನಂದನನ್ನು ಒಂದು ಕಡೆ ನಿಲ್ಲಿಸಿ.. ರೋಡ್ ಪಕ್ಕ ಕರೆದುಕೊಂಡು ಹೋಗಿ ಹೇಳಿದ.... ನೋಡು ಆನಂದ,ನನಗೆ ಆ  ಅಜ್ಜಿಯನ್ನು ಕಂಡರೆ ಯಾಕೋ.. ಅಯ್ಯೋ ಪಾಪ ಅಂತ ಅನಿಸುತ್ತದೆ.. ನಾವಿಬ್ಬರು ಯಾಕೆ ಆ ಅಜ್ಜಿಗೆ ಗೂಡುದೀಪ ಮಾರಲು ಸಹಾಯ ಮಾಡಬಾರದು..


ಅದಕ್ಕೆ ಆನಂದ ಹೇಳಿದ... ಸಹಾಯ ಮಾಡಬಹುದು ನವೀನ.. ಆದರೆ ಶಾಲೆ ಇದೆಯಲ್ಲಾ..?!


ನವೀನ ಹೇಳಿದ... ಶಾಲೆ ಯಾವತ್ತೂ ಇದ್ದೇ ಇರುತ್ತದೆ....ನೀನು ಬೇರೆ ನನಗಿಂತಲೂ ಕಲಿಯುವುದರಲ್ಲಿ ಹುಷಾರ್ ಇದ್ದೀಯಾ, ನಿನಗೆ ಏನೂ ಸಮಸ್ಯೆ ಆಗದು.. ನನಗಂತು ನನ್ನ ಬಗ್ಗೆ ಚಿಂತೆಯಿಲ್ಲ.. ಪ್ರತೀ ಸಲ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದಾಗ ಶಾಲೆಯಲ್ಲಿ ಮತ್ತು ಅಪ್ಪನಿಂದ ಬೈಯಿಸಿಕೊಂಡು ಬೈಯಿಸಿಕೊಂಡು ಅಭ್ಯಾಸ ಆಗಿ ಹೋಗಿದೆ ನನಗೆ. ರಜೆ ಆದರೆ ಒಂದು ದಿನ ಅಷ್ಟೇ ತಾನೇ.. ಆದರೆ ಪಾಪ ಆ ಅಜ್ಜಿಗೆ ಮಾತ್ರ ನಾವು ಸಹಾಯ ಮಾಡಲೇ ಬೇಕು ಆನಂದ..


ನವೀನನ ಒತ್ತಾಯಕ್ಕೆ ಮಣಿದು ಕೊನೆಗೂ ಆನಂದ ಒಪ್ಪಿದ.


ಇಬ್ಬರೂ ಹಿಂದಿನ ದಿವಸ ಅಜ್ಜಿ ಗೂಡುದೀಪ ಮಾರುತ್ತಿದ್ದ ಜಾಗಕ್ಕೆನೇ  ನಡೆದರು. 


ಅಜ್ಜಿ ಅದಾಗಲೇ.. ಬಂದು ತಳ್ಳುಗಾಡಿಯ ಬಳಿ ಗೂಡುದೀಪ ಮಾರಲು ನಡುಗುತ್ತಾ ನಿಂತಿದ್ದಳು.ಅವಳು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. 


ಆನಂದ, ನವೀನನ್ನು ನೋಡಿ ಅವಳಿಗೆ ಬಹಳ ಖುಷಿ ಆಯಿತು. 


ನವೀನ ಹೇಳಿದ.. ಅಜ್ಜಿ ನಾವು ಇವತ್ತು ನಿಮಗೆ ಗೂಡುದೀಪ ಮಾರಲು ಸಹಾಯ ಮಾಡುತ್ತೇವೆ.. ನೀವು ಹಿಂದೆ  ಇರುವ ಮರದ  ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.. 


ಆದರೆ ಮಕ್ಕಳೇ... ನಿಮಗೆ ಶಾಲೆ ಇಲ್ಲವೇ? ಅಜ್ಜಿ ಕೇಳಿದಳು.


ನವೀನ ಹೇಳಿದ.. ಅಜ್ಜಿ ನೀವು  ಶಾಲೆಯ ಬಗ್ಗೆ ಚಿಂತೆ ಮಾಡಬೇಡಿ ... ನಾವು ಕಲಿಯುವುದರಲ್ಲಿ ಬಹಳ ಹುಷಾರಿದ್ದೇವೆ. ಶಾಲೆಯನ್ನು ನಾವು ಹೇಗೋ ಅಡ್ಜಸ್ಟ್ ಮಾಡಿಕೊಳ್ತೇವೆ.. ಆದರೆ ಒಂದು ದಿನ ರಜೆ ಆಗಬಹುದು ಅಷ್ಟೇ. ನೀವು ಅದರ ಬಗ್ಗೆ ಜಾಸ್ತಿ ಚಿಂತೆ ಮಾಡಬೇಡಿ... ನಿಮ್ಮ ದಣಿದ ದೇಹಕ್ಕೆ ಇನ್ನೂ ವಿಶ್ರಾಂತಿಯ ಅವಶ್ಯಕತೆ ಇದೆ, ಆದ್ದರಿಂದ ನೀವು ಹೋಗಿ ಆ ಮರದ ನೆರಳಲ್ಲಿ ವಿಶ್ರಾಂತಿ ಪಡೆದುಕೊಳ್ಳಿ, ಇವತ್ತು ಗೂಡುದೀಪ ನಾವು ಮಾರುತ್ತೇವೆ. 


ನವೀನನ  ಒತ್ತಾಯಕ್ಕೆ ಮಣಿದು ಕೊನೆಗೂ ಅಜ್ಜಿ ನೆರಳಿನಡಿಯಲ್ಲಿ ಹೋಗಿ ವಿಶ್ರಾಂತಿ ಪಡೆದಳು. 


ನವೀನ ಮತ್ತು ಆನಂದ ಇಬ್ಬರೂ ತಮ್ಮ ಬ್ಯಾಗ್ ಗಳನ್ನು ನೆರಳಿನಲ್ಲಿದ್ದ ಅಜ್ಜಿಯ ಕೈಗೆ ಕೊಟ್ಟು ಬಂದು ಗೂಡು ದೀಪ ಮಾರಲು ನಿಂತುಕೊಂಡರು.. 


ನವೀನ ಆ ರೋಡಿನಲ್ಲಿ ಹೋಗಿ ಬರುವವರನ್ನೆಲ್ಲಾ ಜೋರಾಗಿ ಕರೆದು.... ಗೂಡು ದೀಪ... ತಗೊಳ್ಳಿ ಅಣ್ಣಾ.. ಗೂಡುದೀಪ ತಗೊಳ್ಳಿ.. ಎಂದು ಜೋರಾಗಿ ಬೊಬ್ಬೆ ಹಾಕುತ್ತ ಹೇಳುತ್ತಲೇ ಇದ್ದ. 


ಶಾಲೆಯ ಪುಟ್ಟ ಮಕ್ಕಳಿಬ್ಬರು ಸಮವಸ್ತ್ರ ಧರಿಸಿ ಗೂಡುದೀಪ ಮಾರುವುದನ್ನು ನೋಡಿ  ಕೆಲವರಿಗೆ ಇವರ ಬಗ್ಗೆ ಆಸಕ್ತಿ ಹುಟ್ಟಿತು. 


ಕೆಲವರು ಬಂದು ಈ ಮಕ್ಕಳಿಗಾಗಿಯೇ ಗೂಡು ದೀಪ ಖರೀದಿಸಿದರು. 


ಮಧ್ಯಾಹ್ನದ ಹೊತ್ತಾಯಿತು... ನವೀನ ಮತ್ತು ಆನಂದ ಅಜ್ಜಿಯ ಬಳಿಗೆ ಹೋಗಿ ತಮ್ಮ ಬ್ಯಾಗ್ ನಲ್ಲಿದ್ದ ಲಂಚ್ ಬಾಕ್ಸ್ ಕೈಗೆತ್ತಿಕೊಂಡರು.ನವೀನ ತಾನು ತಂದಿದ್ದ ಎರಡು ಲಂಚ್ ಬಾಕ್ಸ್ ನಲ್ಲಿ ಒಂದು ಲಂಚ್ ಬಾಕ್ಸ್ ಅನ್ನು ಅಜ್ಜಿಯ ಕೈಗಿತ್ತ.. ಅಜ್ಜಿ ಸಂತೋಷದಿಂದಲೇ ಆ ಇಬ್ಬರು ಮಕ್ಕಳ ಒಟ್ಟಿಗೆ ರೋಡ್ ಪಕ್ಕದ ಮರದಡಿಯಲ್ಲಿ ಕುಳಿತು ಊಟ ಮಾಡಿದಳು.


ಊಟದ ನಂತರ ಪುನಃ ನವೀನ ಮತ್ತು ಆನಂದ ಗೂಡುದೀಪ ಮಾರುವುದನ್ನು ಮುಂದುವರಿಸಿದರು. ಆನಂದ ಗೂಡುದೀಪ ಮಾರಾಟವಾಗಿ ಬಂದ ಹಣವನ್ನು ಲೆಕ್ಕ ಮಾಡಿ ಮಾಡಿ ಜೋಪಾನವಾಗಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ.ಅವನು ಶಾಲೆಯಲ್ಲಿ ಗಣಿತದಲ್ಲಿ ಎಲ್ಲ ಬಹಳ ಹುಷಾರ್ ಇದ್ದ. ನವೀನನಿಗೆ  ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಅದರಲ್ಲಿಯೇ ಅವನು ಯಾವಾಗಲೂ ಫೈಲ್ ಆಗ್ತಾ ಇದ್ದ. 


ಸಂಜೆಯ ಹೊತ್ತಿಗೆ ತಳ್ಳುಗಾಡಿಯಲ್ಲಿದ್ದ  ಮುಕ್ಕಾಲು ವಾಸಿ  ಗೂಡುದೀಪ ಖಾಲಿ ಆಗಿ ಬಿಟ್ಟಿತ್ತು. 


ಆ ದಿನ ಒಟ್ಟಾದ ದುಡ್ಡನ್ನೆಲ್ಲಾ ನವೀನ ಅಜ್ಜಿಗೆ ನೀಡಿದ.. ಅಜ್ಜಿಗೆ ಅದನ್ನು ಕಂಡು ಬಹಳ ಸಂತೋಷವಾಯಿತು. 


ನವೀನ ಕೇಳಿದ... ಅಜ್ಜಿ ಮನೆಯಲ್ಲಿ ಇನ್ನೂ ಗೂಡುದೀಪಗಳು  ಇದೆಯಾ..? 


ಅದಕ್ಕೆ ಅಜ್ಜಿ ಹೇಳಿದಳು...ಇನ್ನೂ ಎರಡು ತಳ್ಳು ಗಾಡಿ ಆಗುವಷ್ಟು ಗೂಡು ದೀಪಗಳು ಇದೆ ಮಗ... 


ನವೀನ ಹೇಳಿದ... ಎಲ್ಲಾ ಗೂಡುದೀಪ ನಾಳೆಯೇ ತೆಗೆದುಕೊಂಡು ಬನ್ನಿ ಅಜ್ಜಿ... ಏನಾದರೊಂದು ಮಾಡಿ...ನಾವು ನಿಮ್ಮ ಎಲ್ಲಾ ಗೂಡುದೀಪ ಮಾರಾಟ ಮಾಡಲು ಪ್ರಯತ್ನ  ಪಡೋಣ. 


ಅದನ್ನು ಕೇಳಿ ಅಜ್ಜಿಗೆ ಬಹಳ ಸಂತೋಷವಾಯಿತು. 


ಅವತ್ತು ನವೀನನಿಗೆ ಮಾತ್ರವಲ್ಲ,ಅಜ್ಜಿಗೆ ಸಹಾಯ ಮಾಡಿದ್ದಕ್ಕಾಗಿ ಆನಂದನಿಗೂ ಬಹಳ ಸಂತೋಷವಾಗಿತ್ತು.ಅವನೂ ಕೂಡ ಮರುದಿವಸ ಶಾಲೆ ತಪ್ಪಿಸಿ ಅಜ್ಜಿಗೆ ಸಹಾಯ ಮಾಡಲು ಒಪ್ಪಿಕೊಂಡ. 


ಆ ದಿನ ರಾತ್ರಿ ಮಲಗುವಾಗ ಆನಂದನಿಗೆ ಒಂದು ಐಡಿಯಾ ಹೊಳೆಯಿತು. ಕೂಡಲೇ.. ಡ್ರಾಯಿಂಗ್ ಶೀಟ್ ಒಂದನ್ನು ತೆಗೆದು ಕೊಂಡು.. ಅದರಲ್ಲಿ  ಕಲರ್ ಪೆನ್ ನಲ್ಲಿ ಈ ರೀತಿಯಾಗಿ ಬರೆದ.. 


" ಈ ದೀಪಾವಳಿಗೆ ಚೀನಾದ ಪ್ಲಾಸ್ಟಿಕ್ ಗೂಡು ದೀಪಗಳನ್ನು ಬಹಿಷ್ಕರಿಸಿ.. ದೇಸಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ... ನಾವು ಒಬ್ಬರು ವಯಸ್ಸಾದ ಅಜ್ಜಿಗೆ ಸಹಾಯ ಮಾಡುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದೇವೆ.. ದಯವಿಟ್ಟು ನಮ್ಮಿಂದ ಗೂಡುದೀಪ ಖರೀದಿಸಿ ಅಜ್ಜಿಗೆ ಸಹಾಯ ಮಾಡಿ... " ಎಂದು ಬರೆದ. 


ನಂತರ ಆ ಡ್ರಾಯಿಂಗ್ ಶೀಟ್ ಅನ್ನು ಸುರುಳಿ ಸುತ್ತಿ ತನ್ನ ಬ್ಯಾಗ್ ನಲ್ಲಿ ಇಟ್ಟು ಬಿಟ್ಟ. 


ಮರುದಿನವೂ ಕೂಡ ಮನೆಯಿಂದ ಎರಡು ಲಂಚ್ ಬಾಕ್ಸ್ ತೆಗೆದುಕೊಂಡು ಹೋದ ನವೀನ. 


ನಂತರ ನವೀನ ಆನಂದ ಇಬ್ಬರೂ ಹಿಂದಿನ ದಿನದಂತೆ ಗೂಡು ದೀಪ ಮಾರಲು ಅಜ್ಜಿ ಇದ್ದಲ್ಲಿಗೆ ಹೋದರು. 


ಅಜ್ಜಿ ತಳ್ಳುಗಾಡಿಯಲ್ಲಿ ಗೂಡುದೀಪ ತುಂಬಿಸಿ ಇಟ್ಟಿದ್ದಳು. ಜೊತೆಗೆ ಎರಡು  ದೊಡ್ಡ ಗೋಣಿ ತಂದಿದ್ದಳು.. ಒಂದರಲ್ಲಿ ಮನೆಯಲ್ಲಿ ಮಾಡಿದ  ಕೆಲವು ಗೂಡುದೀಪ ಇದ್ದರೆ, ಇನ್ನೊಂದರಲ್ಲಿ ಗೂಡು ದೀಪ ಮಾಡುವ ಬಿದಿರು ಕಡ್ಡಿ, ನೂಲು,ಬಣ್ಣದ ಕಾಗದ, ಗೋಂದು,ಕತ್ತರಿ ಇನ್ನಿತರ ವಸ್ತುಗಳು ಇದ್ದವು. 


ಮಕ್ಕಳನ್ನು ಕಂಡ ಅಜ್ಜಿ ಹೇಳಿದಳು... ಮಕ್ಕಳೇ ಎರಡು ಗಾಡಿ ಆಗುವಷ್ಟು ಗೂಡುದೀಪ ಮನೆಯಲ್ಲಿ ಇರಲಿಲ್ಲ.. ಹಾಗಾಗಿ ಗೂಡುದೀಪ ಮಾಡುವ ಸಾಮಾಗ್ರಿಗಳನ್ನು ಒಂದು ಗೋಣಿಯಲ್ಲಿ ಹಾಕಿ ಇಲ್ಲಿಗೆಯೇ  ತಂದಿದ್ದೇನೆ.. ಸಾಧ್ಯ ಆದಷ್ಟು ಇಲ್ಲಿಯೇ ಗೂಡುದೀಪ ಮಾಡುತ್ತೇನೆ... 


ಅದಕ್ಕೆ ನವೀನ ಹೇಳಿದ... ಆಯಿತು ಅಜ್ಜಿ ಹಾಗೇ ಮಾಡಿ... ನಿಮಗೆ ಸಹಾಯ ಮಾಡಲು ಆನಂದ  ಕೂಡ ಬರುತ್ತಾನೆ.ನೀವಿಬ್ಬರು ನೆರಳಿನಲ್ಲಿ ಕುಳಿತುಕೊಂಡು ಗೂಡುದೀಪ ಮಾಡುತ್ತಿರಿ.. ನಾನು ಇಲ್ಲಿ ಗೂಡುದೀಪ ಮಾರಾಟ ಮಾಡುತ್ತೇನೆ.. ಎಂದು ಹೇಳಿದ.


ಅದಕ್ಕೆ ಅಜ್ಜಿ ಮತ್ತು ಆನಂದ ಇಬ್ಬರೂ ಒಪ್ಪಿ..  ಗೂಡುದೀಪ ಮಾಡಲು ಬೇಕಾಗುವ ಸಾಮಗ್ರಿ ಇರುವ ಗೋಣಿ ಚೀಲವನ್ನು ಹಿಡಿದುಕೊಂಡು ಮರದಡಿಗೆ ಹೋಗಿ ಇಬ್ಬರೂ ಬಹಳ ಶ್ರದ್ಧೆಯಿಂದ ಗೂಡುದೀಪ ಮಾಡಲು ಶುರು ಮಾಡಿದರು. ಆನಂದ ಅಜ್ಜಿ ಹೇಳಿಕೊಟ್ಟಂತೆಯೇ ಗೂಡುದೀಪ ಮಾಡುತ್ತಿದ್ದ. ಅವನು ಎಲ್ಲವನ್ನೂ ಬಹಳ ಬೇಗ ಕಲಿತು ಬಿಡುತ್ತಾನೆ. 


ಇಲ್ಲಿ ಹಿಂದಿನ ದಿನದಂತೆಯೇ ನವೀನ ಗೂಡುದೀಪ ಮಾರಲು ಶುರು ಮಾಡಿದ.ಅಷ್ಟು ಮಾತ್ರವಲ್ಲ ಇವತ್ತು ತನ್ನ ಡ್ರಾಯಿಂಗ್ ಶೀಟ್ ಮೇಲೆ ಬರೆದಿರುವುದನ್ನು ತಳ್ಳುಗಾಡಿಯ ಮುಂದೆ ಎಲ್ಲಿರಿಗೆ ಕಾಣುವಂತೆ ಇಟ್ಟ. 


ಅದನ್ನು ನೋಡಿ ಆ ದಿನ ಲೆಕ್ಕಕ್ಕಿಂತ ಜಾಸಿಯೇ ಜನ ಗೂಡುದೀಪ ಕೊಳ್ಳಲು ಬಂದರು.. ಒಂದು ಅಜ್ಜಿಗಾಗಿ ಮತ್ತೊಂದು ದೇಸಿ ಗೂಡು ದೀಪಕ್ಕಾಗಿ ಪ್ರೋತ್ಸಾಹ ಕೊಡಿ ಎಂದು ನವೀನ ಆ ಮಾರುಕಟ್ಟೆಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದುದನ್ನು ಕೇಳಿ.. ಎಲ್ಲರೂ ಅದರಿಂದ ಆಕರ್ಷಿತರಾಗಿ ಅವರ ತಳ್ಳು ಗಾಡಿಯ ಕಡೆಗೆಯೇ ಬರುತ್ತಿದ್ದರು. 


ಮಧ್ಯಾಹ್ನದ ಒಳಗೆ  ಗಾಡಿಯಲ್ಲಿದ್ದ ಪೂರ್ತಿ ಗೂಡು ದೀಪ ಖಾಲಿಯಾಗಿತ್ತು. 


ಮಧ್ಯಾಹ್ನ ಅಜ್ಜಿಗೆ ನವೀನನೇ ಲಂಚ್ ಬಾಕ್ಸ್ ಕೊಟ್ಟು,ಅವನು  ಮತ್ತು ಆನಂದ ಇಬ್ಬರೂ ಅವಳೊಟ್ಟಿಗೆಯೇ ಮತ್ತೆ ಮರದಡಿಯಲ್ಲಿ ಊಟ ಮುಗಿಸಿಕೊಂಡು ಬಿಟ್ಟರು. 


ಖಾಲಿಯಾದ ಗಾಡಿಗೆ ಅಜ್ಜಿ ತನ್ನ ಮನೆಯಿಂದ ಗೋಣಿಯಲ್ಲಿ ತಂದಿದ್ದ ಸ್ವಲ್ಪ ಗೂಡುದೀಪ ಹಾಗೂ ಬೆಳಿಗ್ಗೆಯಿಂದ ಆನಂದ ಮತ್ತು ಅಜ್ಜಿ ಮರದಡಿಯಲ್ಲಿ ಕುಳಿತುಕೊಂಡು ಮಾಡಿದ್ದ ಗೂಡುದೀಪ ಎಲ್ಲವನ್ನೂ ಗಾಡಿಯಲ್ಲಿಟ್ಟು ಮತ್ತೆ ಗೂಡುದೀಪ ಮಾರಾಟ ಮಾಡಲು ಶುರು ಮಾಡಿದ.. ಆನಂದ ಮತ್ತೆ ಅಜ್ಜಿ ಮತ್ತೆ ಸಾಧ್ಯವಾದಷ್ಟು ಗೂಡುದೀಪ ಮಾಡಿ ಕೊಡುತ್ತಲೇ ಇದ್ದರು.


ಅಂತು ಇಂತು ಸಂಜೆ ಆಗುವುದರ ಒಳಗೆ ತಳ್ಳುಗಾಡಿಯಲ್ಲಿದ್ದ ಎಲ್ಲಾ ಗೂಡುದೀಪ ಹಾಗೂ ಅಜ್ಜಿ ಮತ್ತು  ಆನಂದ ಸ್ಥಳದಲ್ಲಿಯೇ ಮಾಡಿ ಕೊಡುತ್ತಿದ್ದ ಗೂಡುದೀಪಗಳೂ ಸಹ  ಸಂಪೂರ್ಣವಾಗಿ ಖಾಲಿಯಾಗಿ ಹೋಯಿತು.


ಇದರ ಮಧ್ಯೆ ಪೇಟೆಯ ಬದಿಯಲ್ಲಿ ಇಬ್ಬರು ಶಾಲಾ ಹುಡುಗರು ಅಜ್ಜಿಗಾಗಿ ಗೂಡು ದೀಪ ಮಾರುತ್ತಿರುವುದು...ಅದರಲ್ಲೂ ಚೀನಾ ಉತ್ಪನ್ನಗಳನ್ನು ಖರೀದಿಸ ಬೇಡಿ... ದೇಸಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ಎಂಬ ಸಂದೇಶ ನೀಡುತ್ತಿರುವ ವಿಷಯ ಗೊತ್ತಾಗಿ... ಪೇಪರ್ ನವರು ಬಂದು ಇವರುಗಳ ಪೋಟೋ ಹೊಡೆದುಕೊಂಡು ಹೋದರು.. ಹಾಗೆಯೇ ಟಿವಿ ಮಾಧ್ಯಮದವರು ಬಂದು ವಿಡಿಯೋ ಚಿತ್ರೀಕರಣ ಕೂಡ ಮಾಡಿ ಹೋದರು. 


ಸಂಗ್ರಹವಾದ ಹಣವನ್ನೆಲ್ಲಾ ನವೀನ ಮತ್ತು ಆನಂದ ಅಜ್ಜಿಗೆ  ನೀಡಿದರು. 


ಅಜ್ಜಿಯ ಕಂಗಳು ತುಂಬಿ ಬಂದವು.. ಯಾವ ಜನ್ಮದ ಋಣವೋ.. ನನಗೆ ಮಕ್ಕಳಿರಲಿಲ್ಲ.. ಆದರೆ ನೀವು ಇಬ್ಬರು ನನಗೆ ಮೊಮ್ಮಕಳಂತೆ ಬಂದು ಸಹಾಯ ಮಾಡಿದಿರಿ.. ನನ್ನ ಬಾಳಿನಲ್ಲಿ ಇದಕ್ಕಿಂತ ದೊಡ್ಡ ದೀಪಾವಳಿ ಬರಲು ಸಾಧ್ಯವೇ ಇಲ್ಲ.. ಎಂದು ಹೇಳಿ ಕಣ್ಣೀರಾಗಿ ಬಿಟ್ಟಳು ಅಜ್ಜಿ. 


ಆನಂದ, ನವೀನ ಮುಗ್ಧವಾಗಿ ಅಜ್ಜಿಯ ಸಂತೋಷ ಕಂಡು ತಾವೂ ಸಂತೋಷ ಪಟ್ಟರು. 


ಅಜ್ಜಿ ಸಂಗ್ರಹವಾದ ಹಣದಲ್ಲಿ ಸ್ವಲ್ಪ ಹಣವನ್ನು... ನವೀನ ಮತ್ತು ಆನಂದನಿಗೆ ಕೊಡಲು ಮುಂದೆ ಬಂದರೂ ಅವರಿಬ್ಬರೂ ಅದನ್ನು ಸ್ವೀಕರಿಸಲಿಲ್ಲ. ಅಜ್ಜಿಯ ಕಾಲು ಮುಟ್ಟಿ ಆಶೀರ್ವಾದ ಪಡೆದು ಇಬ್ಬರೂ ತಮ್ಮ ತಮ್ಮ ಮನೆಗೆ ಮರಳಿದರು.ಆ ದಿನ ಇಬ್ಬರಿಗೂ  ಜೀವನದಲ್ಲಿ ಎಂದಿಗೂ ಆಗಿರದಷ್ಟು ಸಂತೋಷವಾಯಿತು. 


ಮನೆಯಲ್ಲಿ ಎಲ್ಲರೊಂದಿಗೆ ಟಿವಿ ನೋಡುತ್ತಿರುವಾಗ.. ಶಾಲೆಯ ಸಮವಸ್ತ್ರ ಧರಿಸಿ ಗೂಡು ದೀಪ ಮಾರುತ್ತಿದ್ದ ತಮ್ಮ ಮಗನನ್ನು ಕಂಡು ನವೀನನ ಅಪ್ಪ ಅಮ್ಮನಿಗೆ ಆಶ್ಚರ್ಯವಾದರೂ... ಟಿವಿಯವರು ತಮ್ಮ ಮಗನನ್ನು ಹೊಗಳುವುದನ್ನು ನೋಡಿ ಅವರೂ ಕೂಡ ನವೀನನ ಬಗ್ಗೆ ಹೆಮ್ಮೆ ಪಟ್ಟುಕೊಂಡರು ...ಸದಾ  ತಮ್ಮ ಮಗನನ್ನು ಬೈಯುತ್ತಿದ್ದ ನವೀನನ ಅಪ್ಪನ ಕಣ್ಣಲ್ಲೂ ನವೀನನ ಬಗ್ಗೆ ಮೊದಲ ಬಾರಿಗೆ ಮೆಚ್ಚುಗೆಯ ಹೊಳಪಿತ್ತು. ಅಣ್ಣಂದಿರು ಕೂಡ ಈ ಒಳ್ಳೆಯ ಕೆಲಸಕ್ಕಾಗಿ ನವೀನನಿಗೆ ಶಭಾಷ್ ಹೇಳಿದರು.ನವೀನನ ಅಮ್ಮ ಖುಷಿಯಿಂದ  ಹಾಗೇ ಬಂದು ತನ್ನ ಮಗನನ್ನು ತಬ್ಬಿಕೊಂಡರು. ಹೆಚ್ಚು ಕಡಿಮೆ ಆನಂದನ ಮನೆಯಲ್ಲೂ ಅದೇ ಪರಿಸ್ಥಿತಿ ಇತ್ತು. 


ಮರುದಿನದ ಪೇಪರ್ ನಲ್ಲಿ ಕೂಡ ಅಜ್ಜಿಯೊಂದಿಗೆ ಗೂಡು ದೀಪ ಮಾರುತ್ತಿರುವ ನವೀನ ಮತ್ತು ಆನಂದನ ಪೋಟೋ ಸಹಿತ  ಸುದ್ದಿ ಪ್ರಕಟವಾಗಿತ್ತು.ಅದರಲ್ಲಿ ಅವರಿಬ್ಬರು ಕಲಿಯುತ್ತಿದ್ದ ಶಾಲೆಯ ಹೆಸರು ಕೂಡ ಪ್ರಕಟಿಸಿದ್ದರು.. ಯಾವ ಶಾಲೆಯ ಮಕ್ಕಳು ಎಂದು. 


ಆ ದಿನ ತಾವು ಕಲಿತ ಶಾಲೆಗೆ ನವೀನ ಮತ್ತು ಆನಂದ ಕೀರ್ತಿ ತಂದಿದ್ದರು. 


ಶಾಲೆಯಲ್ಲಿ ಎಲ್ಲಾ ಮಕ್ಕಳ ಸಮ್ಮುಖದಲ್ಲಿ ನವೀನ ಮತ್ತು ಆನಂದನಿಗೆ ಸನ್ಮಾನ ಕೂಡ ಮಾಡಲಾಯಿತು.


ಮೊದಲ ಬಾರಿಗೆ ಅಜ್ಜಿಯ ಗೂಡುದೀಪದಿಂದ ನವೀನನಿಗೆ ಮನೆಯಲ್ಲಿ,ಶಾಲೆಯಲ್ಲಿ ಎಲ್ಲಾ ಕಡೆ ಗೌರವ ದೊರೆಯಿತು.. 


ಅದೇ ರೀತಿ ಅಜ್ಜಿಗೆ ಮಕ್ಕಳ ಸಹಾಯದಿಂದಾಗಿ ಈ ದೀಪಾವಳಿ, ಅವಳ ಪಾಲಿನ ಎಂದಿಗೂ ಮರೆಯಲಾಗದ ಸಂತೋಷದ ದೀಪಾವಳಿಯಾಗಿ ಬದಲಾಗಿತ್ತು. 


.....................................................................................


 #ಇಷ್ಟೇ.. 


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ