ಅಡುಗೆ ಮನೆಯ ಅನ್ನಪೂರ್ಣೆ

 

ಅಡುಗೆ ಕೋಣೆಗೆ ಹೋಗಿ  ತುರಿಮಣೆಯಲ್ಲಿ ತೆಂಗಿನಕಾಯಿ ಪೆರೆಯುವುದನ್ನು (ಹೆರೆಯುವುದನ್ನು ) ಯಾರೂ ಕೂಡ  ಮಾಡ್ಬಹುದು. ಅದೇನೋ ದೊಡ್ಡ ವಿಷಯ ಅಲ್ಲ. That is not a rocket science.ಆದರೆ ಸ್ವಲ್ಪವೂ ತೆಂಗಿನತುರಿ ಉಳಿಯದಂತೆ, ಅಡಿ ಭಾಗದ ಗೆರಟೆಯನ್ನು  ಸ್ವಲ್ಪವೂ ಟಚ್ ಆಗದಂತೆ ನೀಟಾಗಿ ಹೆರೆಯಲಿಕ್ಕೆ ಮಾತ್ರ ನಿಜವಾಗಿಯೂ ಟ್ಯಾಲೆಂಟ್ ಬೇಕೆ ಬೇಕು. ಅದು ನಮ್ಮೆಲ್ಲರ ತಾಯಂದಿರಿಗೆನೇ ಒಲಿದ ಕಲೆ. ನಮ್ಮಂತವರು ಅಮಾವಾಸ್ಯೆ ಗೆ ಒಮ್ಮೆ ಹುಣ್ಣಿಮೆಗೆ ಒಮ್ಮೆ ಅಡುಗೆ ಕೋಣೆ ಗೆ ಹೋಗಿ ತಾರಾಯಿ ಪೆರೆದರೆ ಹೀಗೇ ಆಗುವುದು.. ನಾನು ಇದಕ್ಕಾಗಿಯೇ ಅಮ್ಮನಿಂದ ತುಂಬಾ ಸಲ ಬೈಗುಳ ತಿಂದಿದ್ದೆ 🤦🏻‍♂


Cooking is an Art,ಒಂದೇ ದಿನ ಅದು ಬರುವಂತಹದ್ದಲ್ಲ,ಅದೇ ರೀತಿ ಅಲ್ಲಿಯ ಕಲೆಗಳು ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವಂತಹದ್ದು ಕೂಡ ಅಲ್ಲ. ನಾವೆಲ್ಲ ಒಂದು ದಿನ ,ಎರಡು ದಿನ ಹೆಚ್ಚೆಂದರೆ ಒಂದು ವಾರ ದಿನಾಲೂ ಅಡುಗೆ ಮಾಡಿ ಬಿಸಾಕಿಬಿಡಬಹುದು. ಆಮೇಲೆ ಉದಾಸೀನ ಬಂದು ಬಿಡುತ್ತದೆ, ನಮ್ಮನ್ನು ಅದು ಹಾಗೇ ಅವರಿಸಿಕೊಂಡು ಬಿಡುತ್ತದೆ. This is not my cup of tea ಅಂತ ಅನಿಸೋದು ಆವಾಗಲೇ.ಆದರೆ ಒಂದು ವಿಷಯ ಗಮನಿಸಿ ದಿನಾಲೂ ಒಂದು ಚೂರು ರುಚಿ ತಪ್ಪದೇ ಬದುಕಿನ ಉದ್ದಕ್ಕೂ ಅಡುಗೆ ಮಾಡುತ್ತಲೇ ಕಾಲ ಕಳೆದು ಬಿಡುವ, ಹಾಗೇ ಉಳಿದು ಬಿಡುವ ನಮ್ಮ ನಿಮ್ಮೆಲ್ಲರ ತಾಯಂದಿರು ಯಾವತ್ತಾದರೂ  ಅಡುಗೆ ಬೋರ್ ಆಗುತ್ತೆ ಅಂತ ಕಂಪ್ಲೈಂಟ್ ಮಾಡಿದ್ದು ನೀವೆಂದಾದರೂ ಕೇಳಿದ್ದೀರಾ?


ನಿಮಗೆ ದಿನಾಲೂ ಹೋಟೆಲ್ ಊಟ ಸಪ್ಪೆ ಎನಿಸಬಹುದು, ಹಾಸ್ಟೆಲ್ ಮೆಸ್ ಊಟ ವಾಕರಿಕೆ ತರಿಸಬಹುದು, PG ಊಟ ಬೋರ್ ಹೊಡಿಸಬಹುದು. ಆದರೆ  ನಿಮ್ಮ ಅಮ್ಮ ಮಾಡುವ ಮನೆ ಊಟಕ್ಕೆ ಇದ್ಯಾವುದೇ ಕಂಪ್ಲೈಂಟ್ ಗಳು  ಎಂದಿಗೂ ಬಂದೇ ಇಲ್ಲ. ಅವಳು ಹೇಗೆ ಅಡುಗೆ ಮಾಡಿದರೂ ರುಚಿಯೇ. ಮಾತ್ರವಲ್ಲ ಅವಳು ಎಷ್ಟು ಚೂರು ಬಡಿಸಿದರೂ ಹೊಟ್ಟೆ ಫುಲ್ ಆಗಿ ಬಿಡುತ್ತದೆ. ಅಮ್ಮ ಬೇಡಮ್ಮ ಸಾಕು ಅಂತ ಎದ್ದೇಳಿ ಬಿಡುತ್ತೇವೆ. ಆದರೆ ಅವಳಿಗೆ ನೀವು ಸರಿಯಾಗಿ ಗಡದ್ದಾಗಿ ಊಟ ಮಾಡಿ ಎದ್ದರೆನೇ ಸಮಾಧಾನ, ಅದಕ್ಕಾಗಿ ಇನ್ನಷ್ಟು ತಟ್ಟೆಗೆ ಸುರಿದು ಬಿಡುತ್ತಾಳೆ. ಅವಳು ಅಡುಗೆ ಮಾಡುವುದಾದರೂ ಯಾರಿಗಾಗಿ ನಮಗಾಗಿಯೇ ಅಲ್ಲವೇ. ಮಾತ್ರವಲ್ಲ ಅವಳು ಬಡಿಸಿದಷ್ಟನ್ನೂ ಊಟ ಮಾಡಿ ಎದ್ದರೆ ಅವಳಿಗೆ ಅವಳೇ ಹೊಟ್ಟೆ ತುಂಬುವಷ್ಟು ಊಟ ಮಾಡಿದಷ್ಟು ಸಂತೃಪ್ತಿ. ಆದರೆ ಒಂದು ನೆನಪಿಟ್ಟುಕೊಳ್ಳಿ ಅವಳು ಎಷ್ಟೋ ಸಂದರ್ಭಗಳಲ್ಲಿ ಅವಳಿಗೆ ಬೇಕಾಗುವಷ್ಟು ಊಟ ಮಾಡಿಯೇ ಇಲ್ಲ. ಹಿಂದಿನ ದಿನಗಳಲ್ಲಿ ಕಾಡುವ ಬಡತನ ಒಂದು ಕಾರಣವಾಗಿದ್ದರೆ ಈ ದಿನಗಳಲ್ಲಿ ನಮ್ಮಮ್ಮನಿಗೆ  ಸರಿಯಾಗಿ ಊಟ ಮಾಡುವಷ್ಟು ಕೂಡ ಸಮಯವಿಲ್ಲ! 


ಅವಳ ಬಳಿ ಯಾವತ್ತೂ ಅಡುಗೆ ಮೆನುಗಳ ಒಂದು bucket list  ಇರುತ್ತದೆ. ಆದರೆ ಅದು ಯಾವತ್ತೂ ಅವಳದಲ್ಲ. ಅದು ನಿಮ್ಮ ಇಷ್ಟದ್ದು, ನಿಮ್ಮ ಅಕ್ಕನ ಇಷ್ಟದ್ದು, ನಿಮ್ಮ ತಮ್ಮನ ಇಷ್ಟದ್ದು, ನಿಮ್ಮ ತಂದೆಯ ಇಷ್ಟದ ಅಡುಗೆಯದ್ದು. ಆದರೆ ಗಮನಿಸಿ ನಮ್ಮೆಲ್ಲಾ ಇಷ್ಟದ ಅಡುಗೆ ಮಾಡಿ ಬಡಿಸುವ ಅವಳ ಇಷ್ಟದ ಅಡುಗೆಯನ್ನು ಮನೆಯಲ್ಲಿ ಮಾಡಿಸುವ ಇಲ್ಲವೇ ಕನಿಷ್ಠ ಪಕ್ಷ ಅದನ್ನು ಅವಳಲ್ಲಿ ಕೇಳುವ ವ್ಯವಧಾನ ಕೂಡ ನಮಗೆ ಯಾರಿಗೂ ಇಲ್ಲ. ಆದರೆ ತಾಯಿ ಗೆ ಅದು ಯಾವುದೂ ಬೇಕಾಗಿಯೂ ಇಲ್ಲ. ಅಡುಗೆ ಮಾಡಿ ಬಡಿಸುವುದು ಅವಳ ಕರ್ತವ್ಯ ಎಂದು ಅವಳು ತಿಳಿದುಕೊಂಡಿದ್ದಾಳೆ ಮತ್ತು ಅವಳು ಯಾವತ್ತೂ ಆ ಕರ್ತವ್ಯಕ್ಕೆ ಚ್ಯುತಿ ಬರುವಂತೆ ವರ್ತಿಸಿಯೇ ಇಲ್ಲ. ಅವಳ ಪಾಲಿಗೆ ಮನೆಯಲ್ಲಿ ಅಡುಗೆ ಮನೆಯೊಂದೇ ಅವಳ ಅರಮನೆ.ಪಾತ್ರೆ ಪಗಡೆ ಸೌಟು ಗಳೇ ಅವಳ ಸಂಗಾತಿಗಳು. 


ಅವಳು ಅದಷ್ಟೇ ಸಿಂಪಲ್ ಆಗಿ ಊಟ ಮಾಡಿ ಬಡಿಸಿದರೂ ಆಹಾ ಅದೆಂತಹ ರುಚಿ.ಅವಳು ಹಾಕುವ ಒಗ್ಗರಣೆ ಗೆ ಊಟದ ಹಸಿವು ಹೆಚ್ಚು ಮಾಡುವ ಶಕ್ತಿ ಇದೆ. ಅವಳು ಮಾಡುವ ಪಾಯಸ ಅಮೃತಕ್ಕಿಂತಲೂ ರುಚಿ. ಬಹುಶಃ ಪ್ರೀತಿ ಮಮತೆ ಎಲ್ಲವನ್ನೂ ಮೊಗೆ ಮೊಗೆದು ಸುರಿದು ಅಡುಗೆ ಮಾಡುವವಳು ಈ ಜಗತ್ತಿನಲ್ಲಿ ತಾಯಿ ಒಬ್ಬಳೇ ಇರಬೇಕು, ಅದಕ್ಕೆ ಆ ರುಚಿ. ಈ ವಿಷಯ ಬಂದಾಗ ಪ್ರಸಿದ್ಧ ಬಾಣಸಿಗರಾದ ನಳ ಮಹಾರಾಜ, ಭೀಮಸೇನರು ಕೂಡ ಅವಳ ಮುಂದೆ ಮಂಕಾಗಿ ಬಿಡುತ್ತಾರೆ.


ಬೇಕಿದ್ದರೆ ನೀವೇ ನೋಡಿ, ಎಲ್ಲಿಯೇ ಹೋಗಿ ಊಟ ಮಾಡಿ ಅದು ಎಷ್ಟೇ ರುಚಿಯಾಗಿದ್ದರೂ ಅದು ನಿಮ್ಮ ಅಮ್ಮ ಮಾಡಿದ ಅಡುಗೆಗಿಂತ ರುಚಿ ಅಂತ ಅನ್ನಿಸುವುದೇ ಇಲ್ಲ. ಅವಳ ಆ ಕೈ ರುಚಿ, ಅವಳ ಕೈ ತುತ್ತಿಗಿರುವ ಹಸಿವು ನೀಗಿಸುವ ಶಕ್ತಿ ಬಹುಶಃ ಯಾವುದೇ ದೇವರಿಗೂ ಕೂಡ ಇಲ್ಲವೇನೋ, ಆವಾಗಲೇ ಅನಿಸುವುದು ನಮ್ಮೆಲ್ಲರ ಮನೆಯ ಸಾಕ್ಷಾತ್ ಅನ್ನಪೂರ್ಣೆ ಅಂದರೆ.. ಅದು ಅವಳೇ.. ನಮ್ಮ ಅಮ್ಮ 😊🙏🏻


                           " #ಮಾತೃ_ದೇವೋ_ಭವ " ❤️


AB Pacchu 

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ