ಕ್ರಿಕೆಟ್ ಮತ್ತು Law 36

 









           

ಮೊದಲ ಪಂದ್ಯದ ಸೋಲಿನ ನಂತರ,ಭಾರತ ಕ್ರಿಕೆಟ್ ತಂಡ  ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಅನ್ನು ಅಮೋಘವಾಗಿ ಗೆದ್ದುಕೊಂಡು ಸರಣಿಯಲ್ಲಿ ಮತ್ತೆ  ಕಮ್ ಬ್ಯಾಕ್ ಮಾಡಿದೆ.ನಮ್ಮ ಭಾರತ ತಂಡ ಇಂತಹ ಕಮ್ ಬ್ಯಾಕ್ ಗಾಗಿ ಸದಾ ಹೆಸರುವಾಸಿ. 


ಅದರ ಜೊತೆ ಜೊತೆಯಲ್ಲಿಯೇ ಎರಡು ವಿಷಯಗಳಿಗೆ ಈ ಟೆಸ್ಟ್ ಪಂದ್ಯ ಆರಂಭದ ದಿನದಿಂದಲೇ ವಿಪರೀತ ಸದ್ದು ಮಾಡಿದೆ. 


ಒಂದು  ಕಳಪೆ ತೀರ್ಪು ನೀಡಿದ ಥರ್ಡ್ ಅಂಪೈರ್ .. ಮತ್ತೊಂದು ಚೆನ್ನೈ ಪಿಚ್ ಬಗ್ಗೆ ಹಿರಿಯ ನಿವೃತ್ತ ಇಂಗ್ಲಿಷ್ ಆಟಗಾರರ ಮುಗಿಯದ ತೀವ್ರವಾದ ಅಸಮಾಧಾನ.


ಮೊದಲನೆಯದ್ದು ನಿಜವಾಗಿಯೂ ತಪ್ಪೇ.ರಹಾನೆಯದ್ದು ಸ್ಪಷ್ಟವಾದ ಕ್ಯಾಚ್ ಔಟ್ ಇದ್ದರೂ ಕೂಡ ಸರಿಯಾಗಿ ಮೂರನೇ ಅಂಪೈರ್ ವೀಡಿಯೊವನ್ನು ಸಂಪೂರ್ಣವಾಗಿ ಗಮನಿಸಿದೇ  ಇದ್ದದ್ದು.. ಮತ್ತು ರೋಹಿತ್ ಶರ್ಮಗೆ ಸ್ಟಂಪ್ ಔಟ್ ಕೊಡದೇ ಇದ್ದದ್ದು ಕೂಡ ಸರಿಯಾದ ತೀರ್ಮಾನ ಆಗಿರಲಿಲ್ಲ.


ವೀಡಿಯೋದ ಕೊನೆಯ ಪ್ರೇಮ್ ನಲ್ಲಿ ರಹಾನೆಯ ಬ್ಯಾಟ್ ಗೆ ಬಾಲ್ ತಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಮತ್ತು ರೋಹಿತ್ ಶರ್ಮ ಸ್ಟಂಪ್ ವಿಷಯದಲ್ಲಿ ಕೀಪರ್ ಬೇಲ್ಸ್ ಎಗರಿಸುವಾಗ ರೋಹಿತ್ ಕಾಲು ಲೈನಿನ ಮೇಲೆಯೇ ಇತ್ತು ಹೊರತು ಲೈನಿನಿಂದ ಒಳಗೆ ಇರಲಿಲ್ಲ.ರೂಲ್ ಪ್ರಕಾರ ಕಾಲು 'On the line' ಇದ್ದರೂ ಕೂಡ ಅದು ಔಟೇ ಎಂದು ಪರಿಗಣಿಸಲ್ಪಡುತ್ತದೆ. ಆದರೆ ಅಂಪೈರ್ ಅದನ್ನು ಔಟೆಂದು ತೀರ್ಪು ನೀಡಿರಲಿಲ್ಲ.ಆದರೆ ಎರಡನೆಯ ಇನಿಂಗ್ಸ್ ನಲ್ಲಿ ಇದೇ ರೀತಿ ಆದಾಗ ರೋಹಿತ್ ಶರ್ಮ ಗೆ ಅಂಪೈರ್ ಔಟ್ ನೀಡಲು ಮರೆಯಲಿಲ್ಲ. 


ಇದೆರಡೂ ತೀರ್ಪಿಗೆ ಅಂದರೆ ರೋಹಿತ್ ಶರ್ಮನ ಮೊದಲ ಇನಿಂಗ್ಸ್ ನ ಸ್ಟಂಪ್ ಔಟ್ ಮತ್ತು ರಹಾನೆಯ ಕ್ಯಾಚ್ ಔಟ್ ಗೆ ತಪ್ಪು ತೀರ್ಮಾನ ಬಂದಾಗ ಇಂಗ್ಲೆಂಡ್ ನಾಯಕ ಜೋ ರೂಟ್  ಗ್ರೌಂಡಿನಲ್ಲಿಯೇ ಅಸಮಾಧಾನ ವ್ಯಕ್ತ ಪಡಿಸಿದ್ದ. ಇಂಗ್ಲಿಷ್ ಹಿರಿಯ ಆಟಗಾರರು ಮಾತ್ರವಲ್ಲ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಇದನ್ನೇ ಬೆಟ್ಟು ಮಾಡಿ ತೋರಿಸಿದ್ದ.


ಇಂತಹ ಸುದ್ದಿಗಳಿಗೆಲ್ಲ ಆಸ್ಟ್ರೇಲಿಯಾ ಹಾಗೂ ಇಂಗ್ಲೀಷ್ ಮಾಧ್ಯಮಗಳು ರಣ ಹದ್ದುಗಳಂತೆ  ಕಾಯುತ್ತಾನೇ ಇರುತ್ತವೆ. ಈ ಬಾರಿ ಅದಕ್ಕೆ ನಮ್ಮ ಅಂಪೈರ್ ಗಳು ಆಹಾರವಾದರು.ಆದರೆ ಪುಣ್ಯಕ್ಕೆ ಈ ಎರಡು ತಪ್ಪು ತೀರ್ಪುಗಳು ಬಂದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಆಟಗಾರರು ಔಟ್ ಆಗಿದ್ದು ಕೂಡ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅಂಪೈರ್ ಸಹಾಯದಿಂದ ಭಾರತೀಯ ತಂಡ ಗೆದ್ದಿತು ಎಂದು ರೈಲು ಬಿಡುವ ಜನರಿಗೇನು ಆ ಪಾಳಯದಲ್ಲಿ ಕಡಿಮೆ ಇರಲಿಲ್ಲ. ಈ ಕಾರಣಗಳಿಗಾಗಿಯೇ Neutral Umpires ಇರುವುದೇ ಯಾವತ್ತೂ ಒಳ್ಳೆಯದು. 


ಮತ್ತೆರಡು ವಿವಾದಾತ್ಮಕ ತೀರ್ಪು ಗ್ರೌಂಡ್ ಅಂಪೈರ್  ಕಡೆಯಿಂದ ಕೂಡ ಬಂದಿತ್ತು.ಇದರಲ್ಲಿ ಎರಡೂ ಕಡೆಯ ಆಟಗಾರರಿದ್ದರು. ಅದುವೇ ರೋಹಿತ್ ಶರ್ಮ ಮತ್ತು ಜೋ ರೂಟ್ ಎಲ್.ಬಿ.ಡಬ್ಲ್ಯು ತಿರ್ಪು. ಇದಕ್ಕೂ ಎರಡೂ ಕಡೆಯ ನಾಯಕರುಗಳು ತಮ್ಮ ಅಸಮಾಧಾನವನ್ನು ಗ್ರೌಂಡಿನಲ್ಲಿಯೇ ತೋರಿಸಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನವನ್ನು ತೀವ್ರವಾಗಿಯೇ ವ್ಯಕ್ತಪಡಿಸಿದ್ದರು.


ಎಲ್ಲಿ ಎರಡೂ ಕಡೆ ಬಾಲ್ Out side the Off Stump ಇತ್ತು. ಪ್ಯಾಡಿಗೆ ಕೂಡ ಬಾಲ್ ಬಡಿದಿತ್ತು. ಆದರೆ ಫೀಲ್ಡ್ ಅಂಪೈರ್ ಔಟ್ ಕೊಡಲಿಲ್ಲ. Review ಗೆ ಹೋದಾಗ ಥರ್ಡ್ ಅಂಪೈರ್ ಕೂಡ ಅದೇ ತಿರ್ಪನ್ನು ಎತ್ತಿ ಹಿಡಿದರು.


ನಮ್ಮಲ್ಲಿ ಕೆಲವರಿಗೆ ಆದರೂ ಸಂದೇಹ ಇರಬಹುದು ಅದೇನೆಂದರೆ.. ಬಾಲ್ Out side the Off Stump ಬಿದ್ದರೆ ಪ್ರತೀ ಬಾರಿಯೂ ಎಲ್.ಬಿ.ಡಬ್ಲ್ಯು ಔಟೇ? ಅಥವಾ ಯಾವಾಗ ಯಾವಾಗ ಆಫ್ ಸೈಡಲ್ಲಿ ಬಾಲ್ ಬಿದ್ದರೆ ಅದು  ಔಟ್  ತೀರ್ಪು ನೀಡಲಾಗುವುದಿಲ್ಲ  ಎಂದು...ಇದನ್ನು ತಿಳಿದು ಕೊಳ್ಳ ಬೇಕಾದರೆ ನಾವು ಮತ್ತೆ  ICC ಯ ರೂಲ್ ಬುಕ್ ಅನ್ನು ಓಪನ್  ಮಾಡಲೇ ಬೇಕಾಗುತ್ತದೆ.


ICC ತನ್ನ ಕ್ರಿಕೆಟ್ ರೂಲ್ ಗಳನ್ನು Law ಎಂದು ಕರೆಯುತ್ತದೆ. ಇದನ್ನು ಲಂಡನ್‌ನಲ್ಲಿರುವ Marylebone Cricket Club(MCC) ಕಾಲ ಕಾಲಕ್ಕೆ ಹಳೆಯ Law ಗಳಲ್ಲಿ ಬದಲಾವಣೆ ತಂದು, Law  ಗೆ ಹೊಸ ಹೊಸ ನಿಯಮಗಳನ್ನು ಸೇರಿಸುತ್ತಾ Update ಮಾಡುತ್ತಾ ಬಂದಿದೆ.


ಸದ್ಯಕ್ಕೆ ನಮ್ಮ  ಕ್ರಿಕೆಟ್ ನಲ್ಲಿ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 42 Law ಗಳಿವೆ.


#Setting_up_the_game

1. The Players   2.The Umpires  3.The Scorers

4.The Ball.          5.The bat.           6.The pitch

7.The creases.  8.The Wickets.  

9.Preparation and maintenance of the playing area

10.Covering the pitch                  11.Intervals

12.Start of play; cessation of play


#Innings_and_Result

13.Innings.       14.The follow-on

15.Declaration and forfeiture.     16.The result


#Overs_scoring_dead_ball_and_extras

17.The over.    18.Scoring runs.  19.Boundaries

20.Dead ball.   21.No ball

22.Wide ball.    23.Bye and Leg Bye


#Players_substitutes_and_practice

24.Fielders' absence; Substitutes

25.Batsman's innings; Runners

26.Practice on the field.          27.The wicket-keeper

28.The fielder


#Appeals_and_dismissals

29.The wicket is down. 

30.Batsman out of his/her ground    31.Appeals

32.Bowled.       33.Caught.         34.Hit the ball twice

35.Hit wicket.   36.Leg Before Wicket(LBW)

37.Obstructing the field.            38.Run out

39.Stumped.     40.Timed out


#Unfair_play

41.Unfair play    42.Players' conduct.


ಇಷ್ಟು 42 Law ಗಳಲ್ಲಿ ಬಾಲ್ ನ ಸೈಜಿನಿಂದ ಹಿಡಿದು.. ಬ್ಯಾಟ್ ನ ಅಗಲ,ವಿಕೆಟ್ ನ ಉದ್ದ, ಪಿಚ್ ನ ಅಳತೆ ಹೀಗೆ ಎಲ್ಲವೂ ಸವಿವರವಾಗಿಯೇ  ಇದೆ.ಇದರಲ್ಲಿ ನಾವು ಸದ್ಯಕ್ಕೆ ವಿಶೇಷವಾಗಿ  Law 36 ಬಗ್ಗೆ ಮಾತ್ರ ಗಮನ ಹರಿಸುವ.ಅಂದರೆ ಎಲ್.ಬಿ.ಡಬ್ಲ್ಯು ಔಟ್(Leg before wicket) ಗೆ ಸಂಬಂಧಿಸಿದ ನಿಯಮಗಳ ಬಗ್ಗೆ.


ಕ್ರಿಕೆಟ್ ನಲ್ಲಿ ಹಿಂದಿನಿಂದಲೂ ಎಷ್ಟೇ ನಿಯಮಗಳು ಬಂದರೂ, ಎಂತಹ ತೀರ್ಪು ಗಳು ಇದ್ದರೂ ಸಹ ಬಹಳ ಚರ್ಚೆಗೆ ಗ್ರಾಸವಾದಂತಹ  ತೀರ್ಪು ಎಂದರೆ ಅದು LBW.


ಈ LBW ತೀರ್ಪುಗಳು ಬೆಳೆದ ಬಂದ ಕಥೆಯೂ ಬಹಳ ರೋಚಕವಾಗಿದೆ.


ಈ LBW ತೀರ್ಪು MCC ಯ ರೂಲ್ ಬುಕ್ ಒಳಗೆ ಬಂದದ್ದು 1774 ರಲ್ಲಿ. ಅದಕ್ಕಿಂತ ಮೊದಲು ಈ ಬ್ಯಾಟ್ಸ್‌ಮನ್ ಗಳು ತಮಗೆ ಇಷ್ಟ ಬಂದಂತೆ ವಿಕೆಟ್ ಎದುರುಗಡೆ ಅಡ್ಡ ನಿಂತುಕೊಂಡು ಆಡುತ್ತಿದ್ದರು.


ಈ ನಿಯಮ ಬಂದ ನಂತರವೂ ಹಲವಾರು ಸಲ ಇದರಲ್ಲಿ ಬದಲಾವಣೆಗಳು ಬಂದವು. ಮೊದಲು ಬಾಲ್ ವಿಕೇಟ್ ನೇರಕ್ಕೆ ಇದ್ದರೆ ಮಾತ್ರ ಔಟ್ ಎಂಬುದರಿಂದ  ಹಿಡಿದು, ಬ್ಯಾಟ್ಸ್‌ಮನ್ ಉದ್ದೇಶ ಪೂರ್ವಕ ವಿಕೆಟ್ ಗೆ ಅಡ್ಡ ನಿಂತಾಗ ದೇಹದ ಯಾವ ಭಾಗ ತಾಗಿದರೂ ಕೂಡ ಔಟ್ ಎಂಬ  ನಿಯಮಗಳು ಕೂಡ  ಬಂದವು. 


1880 ರವರೆಗೆ ಕಾಲಿಗೆ ಪ್ಯಾಡುಗಳನ್ನು ಕಟ್ಟಿಕೊಳ್ಳುತ್ತಿದ್ದದ್ದು ಕೇವಲ ರಕ್ಷಣೆಗಾಗಿ ಮಾತ್ರವಂತೆ. ಅದು ಬಿಟ್ಟು ಬೇರೆ ಯಾವುದೇ ಕಾರಣಗಳಿಗಾಗಿ  ಪ್ಯಾಡ್ ಅನ್ನು ಬಾಲ್ ವಿಕೆಟ್ ಗೆ ಬೀಳದಂತೆ ತಡೆದರೆ, ಅಂದರೆ ಈಗ Out Side the leg stump  ಬೀಳುವ ಬಾಲ್ ಗೆ ಬ್ಯಾಟ್ಸ್‌ಮನ್ ಉದ್ದೇಶ ಪೂರ್ವಕವಾಗಿ ಪ್ಯಾಡ್ ಒಡ್ಡುತ್ತಾನೆ ಅಲ್ಲವೇ ಹಾಗೆ ಏನಾದರೂ ಮಾಡಿದರೆ ಆವಾಗ ಅದು ಕ್ರೀಡಾಸ್ಪೂರ್ತಿಗೆ ವಿರುದ್ಧ ಎಂದೇ ತಿಳಿದಿದ್ದರಂತೆ.


LBW ನಿಯಮದಲ್ಲಿ ಬದಲಾವಣೆ ಆದ ನಂತರ, ಅದರಲ್ಲೂ Out side the leg stump ಬೀಳುವ ಬಾಲ್ ಗೆ ಔಟ್ ಇಲ್ಲ ಎಂಬ ನಿಯಮ ಬಂದ ನಂತರ ಮೊದಲ ಬಾರಿಗೆ Arthur Shrewsbury ಎನ್ನುವವ,ಪ್ಯಾಡ್ ಅನ್ನು ಈ ರೀತಿ ಕೂಡ ಬಾಲ್ ಗೆ ಅಡ್ಡ ಒಡ್ಡಿ ವಿಕೆಟ್ ಗೆ ಬೀಳದಂತೆ ಔಟಾಗುವುದನ್ನು ತಪ್ಪಿಸಬಹುದು ಎಂದು ತೋರಿಸಿಕೊಟ್ಟ. ಆಮೇಲೆ ಎಲ್ಲರೂ ಈ ರೀತಿಯ ಕಾರಣಕ್ಕಾಗಿಯೂ  ಪ್ಯಾಡ್ ಅನ್ನು ಬಳಸಲು ಶುರು ಮಾಡಿದರು.


ಆದರೆ ಈ ರೀತಿ Out side the leg stump ಬೌಲಿಂಗ್, Body Line ಬೌಲಿಂಗ್ ಎಂಬುದಕ್ಕೆ ಕಾರಣವಾಗಿ ಹೋಯಿತು. ಅಂದರೆ ಬೌಲಿಂಗ್ ತಂಡ ಮ್ಯಾಚ್ ಸೋಲುವ ಸಂಧರ್ಭದಲ್ಲಿ  ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳುವುದಕ್ಕಾಗಿ ಸುಮ್ಮನೆ Out side the leg stump ಬೌಲಿಂಗ್ ಮಾಡುತ್ತಾ ಹೋಗುವುದು. ಬ್ಯಾಟ್ಸ್‌ಮನ್ ಗೆ ಲೆಗ್ ಸೈಡ್  Blind Spot ಆಗಿರುವುದರಿಂದ ಅವನು ಹೆಚ್ಚಾಗಿ ಆ ಬಾಲ್ ಅನ್ನು ಆಡದೇ ಇರುವುದರಿಂದ ಬ್ಯಾಟ್ಸ್‌ಮನ್ ರನ್ ಗಳಿಸಲು ಕಷ್ಟವಾಗಿ ಪಂದ್ಯ ಕೊನೆಗೆ ಡ್ರಾ ದಲ್ಲಿಯೇ ಕೊನೆಗೊಳ್ಳುತ್ತಿತ್ತು. 1933 ರಲ್ಲಿ ಡಾನ್ ಬ್ರಾಡ್ಮನ್ ಗೆ ಇಂಗ್ಲಿಷ್ ಬೌಲರ್ ಗಳು ಈ ರೀತಿಯಾಗಿ ಬಾಡಿ ಲೈನ್ ಬೌಲಿಂಗ್ ಮಾಡಿ ವಿವಾದ ಕೂಡ ಉಂಟಾಗಿತ್ತು.ಆವಾಗ ಬ್ರಾಡ್ಮನ್ ಈ ನಿಯಮದಲ್ಲಿ ಬದಲಾವಣೆ ತರಬೇಕು ಎಂದು MCC ಗೆ ಪತ್ರ ಬರೆದು ಮನವಿ ಕೂಡ  ಮಾಡಿದ್ದರು.


ಅದೇ ರೀತಿ ಆವಾಗ ವಿಕೆಟ್ ನ ಲೈನ್ ನಲ್ಲಿ(ಎರಡೂ ಬದಿಯ ವಿಕೆಟ್ ಗಳ ನಡುವೆ ಎಳೆಯಬಹುದಾದ ಒಂದು ಕಾಲ್ಪನಿಕ ಲೈನ್, LBW ಗೆ ಬಾಲ್ ಅಲ್ಲಿ ಪಿಚ್ ಆಗಬೇಕು ) ಬಾಲ್ ಬೀಳದೆ, ಲೈನ್ ನಿಂದ ಹೊರಗೆ ಅಂದರೆ Out side the Off stump ಬಾಲ್ ಬಿದ್ದರೆ ಔಟ್ ಇರಲ್ಲಿಲ್ಲ. ಆ ಕಾರಣಕ್ಕಾಗಿ ಬ್ಯಾಟಿಂಗ್ ತಂಡದ ಬ್ಯಾಟ್ಸ್‌ಮನ್ ಗಳು ಸೋಲುವ ಪಂದ್ಯವನ್ನು ಡ್ರಾ ಮಾಡಲು ಏನು ಮಾಡುತ್ತಿತ್ತು ಎಂದರೆ Out side the off stump ಬಾಲ್ ಗೆ ಪ್ರತೀ ಬಾರಿ ಪ್ಯಾಡ್ ಕೊಟ್ಟು ತಡೆಯೊಡ್ಡುತ್ತಿದ್ದರು, ಹೇಗೆ ಲೆಗ್ ಸೈಡಿಗೆ ಮಾಡುತ್ತಿದ್ದರೋ ಹಾಗೆ.


ಆದರೆ ಇದರಿಂದ ಆಟ ಸ್ಪರ್ಧಾತ್ಮಕವಾಗಿ ಇರುವುದಿಲ್ಲ ಎಂದು ಅರಿತ MCC 1935 ರಲ್ಲಿ LBW ತೀರ್ಪಿನಲ್ಲಿ ಮಹತ್ತರವಾದ ಬದಲಾವಣೆ ತಂದಿತು. ಅದು ಏನೆಂದರೆ ಬಾಲ್ ಲೈನಿನಲ್ಲಿ ಬೀಳದೆಯೂ Out Side the off stump ಇದ್ದರೂ ಕೂಡ Impact(ಬಾಲ್ ಪ್ಯಾಡ್ ಅನ್ನು ತಾಗುವ ಜಾಗ) ಲೈನಿನಲ್ಲಿ ಇದ್ದರೆ ಆಗ ಔಟ್ ಎಂದು. ಆದರೆ ಇಲ್ಲಿ Impact ಮಾತ್ರ ಕಡ್ಡಾಯವಾಗಿ ಲೈನಿನಲ್ಲಿಯೇ ಇರಬೇಕಾಗಿತ್ತು. ಈ ಹೊಸ ನಿಯಮವನ್ನು LBW "N" ಎಂದೇ ಕರೆದರು.


ಆದರೆ ಕೆಲವು ಆಟಗಾರರಿಗೆ ಈ ಬದಲಾವಣೆ ಇಷ್ಟ ಆಗಲಿಲ್ಲ.ಅವರಿಗೆ ಹಿಂದಿನ ನಿಯವೇ ಬೇಕಿತ್ತು. Bob Wyatt ಎನ್ನುವವ ಇದನ್ನು ಎಷ್ಟೊಂದು ವಿರೋಧಿಸಿದ್ದ ಎಂದರೆ ಅವನು 1995 ರಲ್ಲಿ ಸಾಯುವವರೆಗೂ ಕೂಡ ನಿರಂತರವಾಗಿ ಇದರ ವಿರುದ್ದ ಅಭಿಯಾನ ಮಾಡಿದ್ದನಂತೆ.


1970 ರಲ್ಲಿ ಮತ್ತೆ 1935 ರ ನಿಯಮಕ್ಕೆ ಬದಲಾವಣೆ ಬಂತು. ಇದರ ಪ್ರಕಾರ ಬಾಲ್ ಲೈನಿನಲ್ಲಿ ಬೀಳದೆ Out side the off stump ಬಿದ್ದಾಗ ಬ್ಯಾಟ್ಸ್‌ಮನ್ Shot offer ಮಾಡದಿದ್ದರೆ ಅಂದರೆ ಬ್ಯಾಟ್ ನಿಂದ ಹೊಡೆಯಲು ಮುಂದಾಗದಿದ್ದರೆ ಆವಾಗ ಪ್ಯಾಡ್ ಏನಾದರೂ ಬಾಲ್ ಗೆ ತಾಗಿದರೆ.. Impact ಲೈನಿನಲ್ಲಿ ಇರದಿದ್ದರೂ(1935 ರಲ್ಲಿ ಕಡ್ಡಾಯವಾಗಿ Impact ಲೈನಿನಲ್ಲಿ ಇರಬೇಕಿತ್ತು) ಬಾಲ್ ಹೋಗಿ ವಿಕೆಟ್ ಗೆ ಬಡಿಯುವಂತಿದ್ದರೆ ಆಗ ಅದು ಔಟ್ ಎಂದು ಹೊಸ ನಿಯಮ ಬಂತು.


ಸದ್ಯಕ್ಕೆ ಇದೇ ನಿಯಮ ಜಾರಿಯಲ್ಲಿದೆ.ಇದರ ಪ್ರಕಾರ ಬ್ಯಾಟ್ಸ್‌ಮನ್ Shot Offer  ಮಾಡದೇ ಇದ್ದಾಗ, ಬ್ಯಾಟ್ ಕನಿಷ್ಟ ಪಕ್ಷ ಪ್ಯಾಡ್ ಪಕ್ಕ ಆದರೂ ಇರಲೇ ಬೇಕು ಒಂದು ವೇಳೆ ಪ್ಯಾಡ್ ನ ಹಿಂದೆ ಬ್ಯಾಟ್ ಬಂದರೂ ಕೂಡ ಆವಾಗ ಬ್ಯಾಟ್ಸ್‌ಮನ್ ಔಟ್ ಎಂದು ತೀರ್ಪು ನೀಡಲಾಗುತ್ತದೆ. ಆದರೆ ಇಲ್ಲಿ ಕೆಲವೊಮ್ಮೆ ಫೀಲ್ಡ್ ಅಂಪೈರ್ ಗೆ ಬ್ಯಾಟ್ಸ್‌ಮನ್ ಪ್ಯಾಡು,ಬ್ಯಾಟ್ ಎರಡೂ ಒಟ್ಟಿಗೆ ತಂದಾಗ Shot Offer ಮಾಡಿದ್ದಾನೆಯೋ ಇಲ್ಲವೋ ಎಂದು Confusion ಆಗುವುದಿದೆ. ಆದರೆ Out side the off stump ಬಾಲ್ ಬಿದ್ದಾಗ LBW ತೀರ್ಪು ನೀಡಲು ಗಮನವಹಿಸಬೇಕಾದ ಮುಖ್ಯ ಅಂಶ ಇದೇ ಆಗಿದೆ. 


ಅಂಪೈರ್ ಗಳಿಗೆ LBW ತೀರ್ಪು ನೀಡಲು ಇನ್ನಷ್ಟು ಸಹಕಾರಿ ಆಗಲಿ ಎಂದು 2009 ರಲ್ಲಿ DRS (Umpire Decision Review System) ಬಂತು.ಪಂದ್ಯದ ಥರ್ಡ್ ಅಂಪೈರ್ ಟೆಕ್ನಾಲಜಿಯನ್ನು ಬಳಸಿಕೊಂಡು Ball Tracking ಸಹಾಯದಿಂದ ತೀರ್ಪು ನೀಡುವ ವಿಧಾನ.


ಇದಕ್ಕಾಗಿ Hawk-Eye, Snicko, Ultra Edge,Hot Spot ಎಲ್ಲವೂ ಬಂದವು.


ಈ Hawkeye ಕ್ರಿಕೆಟ್ ನಲ್ಲಿ 2001 ರಲ್ಲಿಯೇ ಬಂದಿತ್ತು.Paul Hawkins ಇದನ್ನು ಮೊದಲಿಗೆ ಪರಿಚಯಿಸಿದ್ದು,ಮುಂದೆ DRS ನಲ್ಲಿ ಇದನ್ನೇ ಉಪಯೋಗಿಸಲಾಯಿತು.ಕೇವಲ ಕ್ರಿಕೆಟ್ ಮಾತ್ರವಲ್ಲ ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ರಗ್ಬಿಯಲ್ಲಿ ಕೂಡ Hawkeye ನ ಬಳಕೆ ಇದೆ.

ಟೆನಿಸ್ ನ Hawkeye ನಲ್ಲಿ ಹತ್ತು ಕ್ಯಾಮೆರಾಗಳನ್ನು ಬಳಸುತ್ತಾರೆ. 


ಈ ಕ್ರಿಕೆಟ್ ನ Hawkeye ನಲ್ಲಿ Ball Tracking ಮಾಡಲು 6 ಕ್ಯಾಮೆರಾಗಳನ್ನು ಬಳಸುತ್ತಾರೆ. ಅದನ್ನು ಮೈದಾನದ ಬೇರೆ ಬೇರೆ ಕಡೆಗಳಲ್ಲಿ ಸ್ಥಿರವಾಗಿ ಮೊದಲೇ ಪಿಕ್ಸ್ ಮಾಡಿ ಇರುತ್ತಾರೆ. ವಿಕೆಟ್ ನ ಎರಡೂ ಬದಿಗೂ ಮೂರು ಮೂರು ಕ್ಯಾಮೆರಾ ಇರುವಂತೆ ನೋಡಿಕೊಳ್ಳುತ್ತಾರೆ. ಈ ಆರೂ ಕ್ಯಾಮೆರಗಳು 300 FPS(frames per second)ಸಾಮರ್ಥ್ಯ ಹೊಂದಿರುತ್ತದೆ,ಅಂದರೆ ಒಂದು ಸೆಕೆಂಡಗೆ ಮುನ್ನೂರು ಫ್ರೇಮ್ ಗಳನ್ನು Capture ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ಮ್ಯಾಚ್ ಕ್ಯಾಮೆರಾ 20 ರಿಂದ 50 ಫ್ರೇಮ್ ಗಳನ್ನು ಅಷ್ಟೇ ಒಂದು ಸೆಕೆಂಡ್ ಗೆ Capture ಮಾಡಬಲ್ಲವು. 


ಈ High Performance ಆರು ಕ್ಯಾಮೆರಾಗಳ ಕೆಲಸ ಇಷ್ಟೇ ವೇಗವಾಗಿ ಹೋಗುವ ಬಾಲ್ ನ Trajectory motion ಅನ್ನು ಬೇರೆ ಬೇರೆ Angle ಗಳಿಂದ ಸೆರೆಹಿಡಿಯುವುದು ನಂತರ  ಅದರ Visual Image ಮತ್ತು Timing Data ವನ್ನು  Computer Screen ಗೆ ವರ್ಗಾಯಿಸಿ  Combined ಆದ ಒಂದೇ Trajectory Motion ಅನ್ನು ಉಂಟು ಮಾಡುವುದು.ಇದು "Principal of triangulation" ತತ್ತ್ವದ ಅಡಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ ಇದರಲ್ಲಿ ಎರಡು ಲಭ್ಯವಿರುವ ಕ್ಯಾಮೆರಾಗಳು ತ್ರಿಕೋನದ ರೀತಿಯಲ್ಲಿ ಮೂರನೆಯ ಪಾಯಿಂಟ್ ಅನ್ನು ರೂಪಿಸುತ್ತಾ ಹೋಗುವುದು.ಇಲ್ಲಿ Multiple camera ಇರುವುದರಿಂದ ಆ ತ್ರಿಕೋನದ ಮೂರನೇ ಪಾಯಿಂಟ್ ಅನ್ನು ಎಲ್ಲಾ Angle ಗಳಿಂದ ಕವರ್ ಮಾಡುತ್ತಾ ಮಾಡುತ್ತಾ ಗ್ರೌಂಡ್ ನ ಎಲ್ಲಾ Angle ಗಳಿಂದ ಬಾಲ್ ನ Trajectory Motion point ಅನ್ನು ನಿರ್ಮಿಸುವುದು. ನಾವು ಟಿವಿ ರಿಪ್ಲೈ ಅಲ್ಲಿ ನೋಡುತ್ತೇವೆ ಅಲ್ವಾ.. ಒಂದು Imaginary Red ball ಬೌಲರ್ ಸೈಡಿನಿಂದ ಪಿಚ್ ನಲ್ಲಿ ಹಾಗೇ ಮೂವ್ ಆಗಿ ಬ್ಯಾಟ್ಸ್‌ಮನ್ ನ ಪ್ಯಾಡ್ ಗೆ ತಾಗಿದ ನಂತರವೂ ಮೂವ್ ಆಗುತ್ತಾ  ಹೋಗಿ ವಿಕೆಟ್ ಗೆ ಬಡಿಯುವುದನ್ನು, ಹೌದು ಅದನ್ನೇ ಈ ಕ್ಯಾಮೆರಾ Out put ಗಳಿಂದ ಕಂಪ್ಯೂಟರ್ ಸ್ಕ್ರೀನ್ ನಲ್ಲಿ ನಿರ್ಮಿಸುತ್ತಾ  ಹೋಗುವುದು. ಇದು ಒಂದು ರೀತಿ ಗ್ರಾಪ್ ನಲ್ಲಿ ಪಾಯಿಂಟ್ ಗಳನ್ನು ಜೋಡಿಸುತ್ತಾ ಹೋದಂತೆ. ನಿಮಗೆ ಇಲ್ಲಿ  ಅಧಿಕ ಪ್ರೇಮ್ ನ High performance camera ಗಳು  ಇರುವುದರಿಂದ ಹೆಚ್ಚಿನ ಪಾಯಿಂಟ್ ಗಳು ಸಿಗುತ್ತದೆ. ಹಾಗಾಗಿ ಹೆಚ್ಚಿನ ಪಾಯಿಂಟ್ ಗಳು ಇದ್ದಾಗ ಹೇಗೆ ನಾವು ಒಂದು Curvey ಗ್ರಾಫ್  ಸುಲಭವಾಗಿ ಬರೆಯುತ್ತೆವೆಯೋ ಹಾಗೇ ಇಲ್ಲಿ ನಾವು  Trajectory Motion Point ಅನ್ನು ನಿರ್ಮಿಸುತ್ತಾ ಹೋಗಬಹುದು. ಹೌದು Ball Tracking ಅನ್ನು ಇನ್ನೂ ಸುಲಭವಾಗಿ ಸರಳವಾಗಿ ಹೇಳಬೇಕೆಂದರೆ ಇರುವ ದತ್ತಾಂಶಗಳನ್ನು ಬಳಸಿಕೊಂಡು ಮಾಡುವ ಒಂದು ಗ್ರಾಫ್ ಅಷ್ಟೇ.. ಬಾಲ್ ಬ್ಯಾಟ್ಸ್‌ಮನ್ ನ ಪ್ಯಾಡಿಗೆ ಬಡಿದ ನಂತರ ವಿಕೆಟ್ ವರೆಗೆ ತಲುಪುವ Imaginary Projection Line ಅನ್ನು ಟಿವಿ ಸ್ಕ್ರೀನ್ ನಲ್ಲಿ ರೂಪಿಸುವಾಗ, ಬಾಲ್ ನ Speed  ಹಾಗೂ ಬಾಲ್ ನ Angle ಅನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.


DRS ನಲ್ಲಿ ಇನ್ನೊಂದು ಇರುವುದು Snicko Meter Technology. ಇದಕ್ಕಾಗಿ ಸ್ಟಂಪ್ ಮೈಕ್ ಅನ್ನು ಬಳಸುತ್ತಾರೆ. ಅದೇ ರೀತಿ Snicko Sensor ಗಳನ್ನು ಕೂಡ ಬಳಸುತ್ತಾರೆ. ಈ Sensor ಗ್ರೌಂಡಿನ ಎಲ್ಲಾ Noise(ಶಬ್ಧ)ಗಳನ್ನು Cancel ಮಾಡಿ ಕೇವಲ ಬ್ಯಾಟ್,ಪಾಡ್ ಹಾಗೂ ಬಾಲ್ ನ ಶಬ್ಧವನ್ನು ಗ್ರಹಿಸುವಂತೆ ಮಾಡುತ್ತದೆ. Ultra Edge Technology ಈ Snicko Meter ನ Out put ಆಗಿದ್ದು, ಈಗ ನೇರವಾಗಿ Ultra Edge ಅನ್ನೇ ಬಳಸುತ್ತಾರೆ.


Hot Spot ಅನ್ನು ಬಾಲ್ ನಿರ್ಧಿಷ್ಟವಾಗಿ ಎಲ್ಲಿಗೆ ಬಡಿದಿದೆ ಎಂದು ನೋಡಲು ಬಳಸುತ್ತಾರೆ. ಇದಕ್ಕೂ Snicko meter ಬಳಸುತ್ತಾರೆ.ಆಸ್ಟ್ರೇಲಿಯಾದವರು ಈಗಲೂ Hot Spot ಬಳಸುತ್ತಾರೆ. ಆದರೆ ಭಾರತ ಯಾಕೋ ಇದರತ್ತ ಹೆಚ್ಚಿನ ಒಲವು ಹೊಂದಿಲ್ಲ. ಅಷ್ಟು ಮಾತ್ರವಲ್ಲ ಭಾರತ ಮೊದಲಿನಿಂದಲೂ ಈ DRS ನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರಲೇ ಇಲ್ಲ. ಆದರೂ ಸದ್ಯಕ್ಕೆ ಭಾರತ ಆಡುವ ಎಲ್ಲಾ ಪಂದ್ಯಗಳಲ್ಲಿ DRS ಇದೆ. ಭಾರತವೂ ಕೂಡ ಇದಕ್ಕೆ ಒಪ್ಪಿಕೊಂಡು ಬಿಟ್ಟಿದೆ.


ಓಕೆ.. ಇದೆಲ್ಲ LBW ಗೆ ಸಂಬಂಧಿಸಿದ ಕಥೆ ಮತ್ತು ಪುರಾಣಗಳು..


ಈಗ ನಾವು ನೇರವಾಗಿ ಇಷ್ಟೆಲ್ಲಾ ಟೆಕ್ನಾಲಜಿ ಇದ್ದು ಸದ್ಯಕ್ಕೆ LBW ತಿರ್ಪು ನೀಡುವಾಗ ಯಾವ ಎಲ್ಲಾ ಅಂಶವನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ ಎಂದು ನೋಡೋಣ. 


1.ಬಾಲ್ ಯಾವತ್ತೂ ಲೀಗಲ್ ಡೆಲಿವರಿ ಆಗಿರಬೇಕು. ಅಂದರೆ ನೋ ಬಾಲ್ ಆಗಿರಲೇಬಾರದು. ಹಿಂದೆ ಅದನ್ನು DRS ನಲ್ಲಿ ಮೊದಲು ನೋಡುತ್ತಿದ್ದರು. No ball ಆಗಿದ್ದರೆ ಅಲ್ಲಿಗೆಯೇ Review ಕ್ಯಾನ್ಸಲ್ ಆಗುತ್ತದೆ. ಆದರೆ ಈಗ ಹಾಗಿಲ್ಲ,ಬೌಲರ್ No ball ಹಾಕಿದ ಕೂಡಲೇ ಗ್ರೌಂಡಿನಲ್ಲಿಯೇ ಎಲ್ಲರಿಗೂ ಕೇಳುವಂತೆ  ದೊಡ್ಡದಾಗಿ ಬೀಪ್ ಸೌಂಡ್ ಬರುವ ವ್ಯವಸ್ಥೆ ಇದೆ.


2. Out side the leg stump ಬಾಲ್ ಪಿಚ್ಚಿಂಗ್ ಆದರೆ ಯಾವ ಕಾರಣಕ್ಕೂ ಔಟ್ ನೀಡಲು ಆಗುವುದಿಲ್ಲ.


DRS ಗೆ ಹೋದ ಕೂಡಲೇ ಎಲ್ಲದಕ್ಕಿಂತ ಮೊದಲು ಬಾಲ್ ಎಲ್ಲಿ ಪಿಚ್ ಆಗಿದೆ ಅಂದರೆ In Line(ಪಿಚ್ ನ ಎರಡೂ ಸೈಡಿನ ವಿಕೆಟ್ ಗಳ ನಡುವೆ ಇರುವ ನೇರವಾದ ಲೈನ್),Out side the Off stump, Out side the Leg Stump ನಲ್ಲಿ ಬಾಲ್ ಪಿಚ್ಚಿಂಗ್ ಆಗಿದೆಯೋ ಎಂದು ನಿರ್ಧರಿಸಲಾಗುತ್ತದೆ. ಮೇಲ್ನೋಟಕ್ಕೆ ಕಣ್ಣಿಗೆ ಕಾಣುವಂತೆ ಯಾವುದಾದರೂ ಒಂದು ಸೈಡಿಗೆ ಬಾಲ್ ಬಿದ್ದಿರುತ್ತದೆ. ಆಗ ಎಲ್ಲಿ ಬಾಲ್ ಬಿದ್ದಿದೆ ಎಂದು ಮೊದಲೇ ಗೊತ್ತಾಗಿ ಬಿಡುತ್ತದೆ,ಆ ಕೇಸ್ ನಲ್ಲಿ ಅಂತಹ ಗೊಂದಲ ಏನೂ ಇರುವುದಿಲ್ಲ. ಆದರೆ ಕೆಲವೊಮ್ಮೆ Line ಮೇಲೆಯೇ ಅರ್ಧಂಬರ್ದ ಆಚೆಯೂ ಇಲ್ಲ,ಈಚೆಯೂ ಅಲ್ಲ ಬಾಲ್ ಬೀಳುವುದು ಉಂಟು.ಇಂತಹ ಕೇಸಿನಲ್ಲಿ  ಬಾಲ್ ನ ಎಷ್ಟು ಭಾಗ ಯಾವ ಸೈಡ್ ಬಿದ್ದಿದೆ ಎಂಬುದನ್ನು Ball Tracking ನ ಮೊದಲು ತೀರ್ಮಾನಿಸುತ್ತಾರೆ.ಯಾವ ಬದಿಗೆ 50% ಕ್ಕೂ ಹೆಚ್ಚು ಬಾಲ್ ಬಿದ್ದಿರುತ್ತದೋ ಅದನ್ನೇ ಬಾಲ್ ನ Pitching ಎಂದು ನಿರ್ಧರಿಸು ಬಿಡುತ್ತಾರೆ. ಇಲ್ಲಿ ಎಲ್ಲವೂ Percentage ಗಳದ್ದೇ ಆಟ. ಇವುಗಳೇ ಕೆಲವೊಮ್ಮೆ ಬ್ಯಾಟ್ಸ್‌ಮನ್ ನ ಭಾಗ್ಯವನ್ನು ನಿರ್ಧರಿಸುವುದು ಇದೆ.ಆಚೆಯೂ ಅಲ್ಲ ಈಚೆಯೂ ಅಲ್ಲ ಬಾಲ್ ಪಿಚ್ಚಿಂಗ್ ಆದಾಗ ನಮ್ಮ ಅಂಪೈರ್ ಗೆ ಬರೀ ಕಣ್ಣಿನಲ್ಲಿ ಕೆಲವೊಮ್ಮೆ ಇದನ್ನು ಗುರುತಿಸಲು ಕಷ್ಟವೇ ಆಗುವುದು. DRS ಈ ವಿಷಯಕ್ಕೆ ನಿಜಕ್ಕೂ ಬಹಳ ಅನುಕೂಲಕಾರಿ ಎಂದೇ ಹೇಳಬಹುದು.


3.ಬಾಲ್ ಯಾವತ್ತೂ ಬ್ಯಾಟ್ ಅನ್ನು ಮಿಸ್ ಮಾಡಿರಬೇಕು. ಬ್ಯಾಟ್ ಮಾತ್ರವಲ್ಲ ಗ್ಲೌಸ್ ಮತ್ತು ಬ್ಯಾಟ್ ಅನ್ನು ಹಿಡಿದ ಕೈಯ ಗ್ರಿಪ್ಪಿಗೂ ತಾಗಿರಬಾರದು. ಅದನ್ನು ಕೂಡ ಬ್ಯಾಟ್ ನ ಭಾಗ ಎಂದೇ ಪರಿಗಣಿಸುತ್ತಾರೆ.


4.LBW ಔಟ್ ತೀರ್ಪು ನೀಡಬೇಕಾದರೆ ಕಡ್ಡಾಯವಾಗಿ ಬಾಲ್  ಬ್ಯಾಟ್ಸ್‌ಮನ್ ನ ಪ್ಯಾಡ್ ಗೆ ಇಲ್ಲವೇ ದೇಹಕ್ಕೆ ತಾಗಿರಬೇಕು. 1999-2000 Adelaide ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ ಸಚಿನ್ ತೆಂಡುಲ್ಕರ್, ಮೆಗ್ರಾಥ್ ಬೌನ್ಸರ್ ಒಂದಕ್ಕೆ ಕೆಳಗೆ ಬಗ್ಗಿದಾಗ ಬಾಲ್ ಜಾಸ್ತಿ ಬೌನ್ಸ್ ಆಗದೆಯೇ ಸಚಿನ್ ನ ಭುಜಕ್ಕೆ ಬಾಲ್ ಬಡಿದುದನ್ನು,ಅಂಪೈರ್ Daryl Harper ಸಚಿನ್ ಗೆ Shoulder Before Wicket ತೀರ್ಪು ನೀಡಿದ ಅಪರೂಪದ ಪ್ರಸಂಗ ಕೂಡ ಇದೆ.. ಆಟಗಾರನ ದೇಹದ ಯಾವುದೇ ಭಾಗ ನೇರವಾಗಿ ವಿಕೆಟ್ ಗೆ ಅಡ್ಡವಿದ್ದರೆ ಆಗ ಅದು  ಔಟ್ ಎಂಬ  ನಿಯಮವೇ ಇದಕ್ಕೆ ಕಾರಣ.


5.Impact - ಇದು ಕೂಡ ತುಂಬಾ ಮುಖ್ಯವಾದದ್ದು. Out side the off stump ಬಾಲ್ ಬಿದ್ದಾಗ ಬ್ಯಾಟ್ಸ್‌ಮನ್ Shot ಆಫರ್ ಮಾಡದೇ ಇದರೆ... Impact ನೋಡಬೇಕಾಗಿಲ್ಲ. ವಿಕೆಟ್ ಗೆ ಹೋಗಿ ತಾಗುವಂತಿದ್ದರೆ ಆಗ ಅದು ಔಟ್.

ಆದರೆ ಒಂದು ವೇಳೆ ಬ್ಯಾಟ್ಸ್‌ಮನ್ ಬಾಲ್ ಆಡಿದ್ದರೆ ಆಗ Impact ಕೂಡ ವಿಕೆಟ್ ಲೈನಿನಲ್ಲಿಯೇ ಇರಲೇಬೇಕು.ಆದರೆ ಇದಕ್ಕೆ ಸಂಬಂಧಿಸಿದಂತೆ ಒಂದು ಕೆಟ್ಟ ನಿದರ್ಶನವೂ ಕೂಡ ಒಂದು ಉಂಟು. 2005ರಲ್ಲಿ South Africa ದ Ashwell Prince ಗೆ ಶೇನ್ ವಾರ್ನ್ ಬೌಲಿಂಗ್ ನಲ್ಲಿ ಈ ರೀತಿ Out side the off stump ಬಿದ್ದ ಬಾಲ್ ಅನ್ನು Ashwell Prince, Shot offer ಮಾಡದೇ ಇದ್ದುದಕ್ಕಾಗಿ ಅಂಪೈರ್ Billy Bowden ಔಟ್ ನೀಡಿದ್ದು ಇಂದಿಗೂ ತುಂಬಾನೇ ವಿವಾದಾತ್ಮಕ ತೀರ್ಪು ಆಗಿದೆ. ಕಾರಣ ಅಲ್ಲಿ ಬಾಲ್ ವಿಕೆಟ್ ಅನ್ನು ಹಿಟ್ ಮಾಡದೇ ಕಂಪ್ಲೀಟ್ ಆಗಿ ಮಿಸ್ ಆಗಿತ್ತು.


6. Interception ಅಂತ ಒಂದು ಆದೆ. ಇದರಲ್ಲಿ ಬಾಲ್ ಮೊದಲು ಎಲ್ಲಿಗೆ ಬಡಿಯುತ್ತದೋ ಅದನ್ನೇ Interception point ಅಂತ ಹೇಳ್ತಾರೆ. ಅದನ್ನೇ  ಈ DRS ಗೆ ತೆಗೆದುಕೊಳ್ಳಬೇಕು. ಅದು ಬೇಕಿದ್ದರೆ ಬ್ಯಾಟ್ ಆಗಿರಬಹುದು, ಇಲ್ಲವೇ ಪ್ಯಾಡು ಅಥವಾ ಬ್ಯಾಟ್ಸ್‌ಮನ್ ನ ದೇಹ ಆಗಿರಬಹುದು. 


7.wicket Hitting - ಯಾವುದೇ ಬಾಲ್ ನ Trajectory ವಿಕೆಟ್ ಗೆ ಹಿಟ್ ಆಗಲೇಬೇಕು. ಒಂದು ವೇಳೆ ವಿಕೆಟ್ ಹಿಟ್ಟಿಂಗ್ ಆಗದೆ  ಮಿಸ್ ಆದರೆ ಆಗ ಅದು ನೇರವಾಗಿ ನಾಟ್ ಔಟ್ ಆಗುತ್ತದೆ.ಇದರಲ್ಲಿ ಬಾಲ್ 50% ಆದರೂ Wicket Zone ಗೆ ಹಿಟ್ ಆಗಲೇಬೇಕು. Hitting the stump ಅಂದರೆ ಅದೇ Wicket Zone.


ಈಗ ಮೊದಲು Wicket Zone ಯಾವುದು ಅಂತ ನೋಡುವ..ಈ ಆಫ್ ಸೈಡ್ ವಿಕೆಟ್ ನ ಹೊರ ಬದಿ, ಲೆಗ್ ಸೈಡ್ ವಿಕೆಟ್ ನ ಹೊರಬದಿ, ಮತ್ತು ಬೇಲ್ಸ್ ಲೈನ್ ನ ಕೆಳಬದಿ(ಬೆಲ್ಸ್ ನ ಮೇಲಿನ ಬದಿ ಅಲ್ಲ..) ಇದು Wicket Zone.

ಹಿಂದೆ Half of the outside of off stump,half of the outside of the leg stump ಎಲ್ಲಾ ನೋಡುತ್ತಿದ್ದರು ಹಾಗಾಗಿ 50% ಹಿಟ್ ಆಗಲೇಬೇಕು ಎಂಬ ನಿಯಮ ಇರಲಿಲ್ಲ. ವಿಕೆಟ್ ಗೆ ಹಿಟ್ ಆಗುವಂತಿದ್ದರೆ ಅದು  ಔಟೇ. ಆದರೆ ಈಗ ball tracking ತಂತ್ರಜ್ಞಾನ ಸುಧಾರಾಸಿದ ಕಾರಣ ಹಿಂದಿನ ನಿಯಮ Expand ಆಗಿ outside the stumps ವರಗೆ Wicket Zone ಬಂದಿರುವುದರಿಂದ ಕಂಪಲ್ಸರಿ 50%  ಬಾಲ್ wicket zone ಗೆ ಹಿಟ್ ಆಗಲೇಬೇಕು. ಇಲ್ಲಿ ಕೂಡ ಬೇಲ್ಸ್ ನ ಮೇಲಿನ ಬದಿಯ   ಹಿಟ್ಟಿಂಗ್ ಅನ್ನು ಪರಿಗಣಿಸುವುದಿಲ್ಲ.ಆ ಮೇಲಿನ ಭಾಗ ಸೇರಿ 70% ಹಿಟ್ಟಿಂಗ್ ಝೋನ್ ಆದರೂ ಕೂಡ ಅದು ಪರಿಗಣನೆಗೆ ಬರುವುದಿಲ್ಲ. 


ಇದೆಲ್ಲ LBW ನ ಹಿಂದಿರುವ ಪ್ರಮುಖ ಅಂಶಗಳು.


ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು,ಯಾವುದೇ ತಂಡ DRS ಮೊರೆ  ಹೋದಾಗ ನಮಗೆ ಕೇವಲ ನಾಲ್ಕು ಅಂಶಗಳನ್ನು ಪ್ರಮುಖವಾಗಿ ಟಿವಿ Screen ನಲ್ಲಿ ತೋರಿಸುತ್ತಾರೆ, ಅದುವೇ.. 


1.Pitching (In line or not) 

2 Impact (In line or not) 

3 Wicket Hitting(50% hitting or not) 


4.Original Decision(out or not) 


ಅಂಪೈರ್ ಔಟ್ ಕೊಟ್ಟಾಗ,ಬ್ಯಾಟ್ಸ್‌ಮನ್ Review ತೆಗೆದರೆ.. ಮೊದಲ ಎರಡು ಪಾಯಿಂಟ್(Pitching & Impact) ಅವನ ವಿರುದ್ಧವಾಗಿದ್ದು ಮೂರನೇ ಪಾಯಿಂಟ್ ಅಂದರೆ Wicket Hitting 50% ನಷ್ಟು ಇರದಿದ್ದರೂ ಆತ ಔಟೇ ಆಗುತ್ತಾನೆ. ಏಕೆಂದರೆ ಆವಾಗ Umpires Call ಇಲ್ಲಿ ತೀರ್ಪು ನೀಡುತ್ತದೆ.


ಅದೇ ರೀತಿ ಅಂಪೈರ್ ನಾಟ್ ಔಟ್ ಕೊಟ್ಟಾಗ.. ಫೀಲ್ಡಿಂಗ್ ತಂಡ Review ತೆಗೆದುಕೊಂಡರೆ ಮೊದಲ ಎರಡು ಪಾಯಿಂಟ್ ಅವರ ಪರವಾಗಿದ್ದರೂ ಮೂರನೇ ಪಾಯಿಂಟ್ ಅಂದರೆ Wicket Hitting 50% ಗಿಂತ ಕಮ್ಮಿ ಇದ್ದರೆ ಆಗ ಬ್ಯಾಟ್ಸ್‌ಮನ್ ಔಟ್ ಆಗುವುದಿಲ್ಲ.. ಏಕೆಂದರೆ ಆವಾಗಲೂ Umpires Call ಇಲ್ಲಿ ಪ್ರಧಾನವಾಗುತ್ತದೆ. ಇದಿಷ್ಟು LBW ಹಾಗೂ Review ಗೆ ಸಂಬಂಧಿಸಿದ ವಿಷಯಗಳು. 


ಈಗ ಮತ್ತೊಮ್ಮೆ ರೋಹಿತ್ ಶರ್ಮ ಹಾಗೂ ಜೋ  ರೂಟ್ LBW ವಿಷಯಕ್ಕೆ ಬರುವ ಎರಡೂ ಸಂಗತಿಗಳಲ್ಲಿ ಬಾಲ್  ಲೈನಿನಿಂದ ಹೊರಗಿದ್ದರೂ.. ಅವರು ಇಬ್ಬರೂ ಶಾಟ್ ಆಫರ್ ಮಾಡಿರಲಿಲ್ಲ. ಮತ್ತು ಬಾಲ್ ನೇರವಾಗಿ ಹೋಗಿ ವಿಕೆಟ್ ಅನ್ನು ಮುತ್ತಿಕ್ಕುವ ದೃಶ್ಯ ಬಾಲ್ ಟ್ರಾಕಿಂಗ್ ನಲ್ಲಿ ಸ್ಪಷ್ಟವಿತ್ತು. ಆದರೆ ಇಲ್ಲಿ ಥರ್ಡ್ ಅಂಪೈರ್,ಫೀಲ್ಡ್ ಅಂಪೈರ್ ನಾಟ್ ಔಟ್ ಕೊಟ್ಟ ಕಾರಣದಿಂದಾಗಿ.. "Umpires Call" ತೀರ್ಪನ್ನೇ ಎತ್ತಿ ಹಿಡಿದರು. ಫೀಲ್ಡ್ ಅಂಪೈರ್ ನಾಟ್ ಔಟ್ ನೀಡಲು ಪ್ರಮುಖ ಕಾರಣ ಫೀಲ್ಡ್ ಅಂಪೈರ್ ಗೆ ಬ್ಯಾಟ್ಸ್‌ಮನ್ ಶಾಟ್ ಆಫರ್ ಮಾಡಿದಂತೆ ಕಂಡಿತು ಮತ್ತು ಬ್ಯಾಟ್ಸ್‌ಮನ್ ಶಾಟ್ ಆಫರ್ ಮಾಡಿದಾಗ ಮಾಮೂಲಿ ನಿಯಮದಂತೆ ಎಂದಿನಂತೆ Impact ಕಡ್ಡಾಯವಾಗಿ ಲೈನಿನಲ್ಲಿಯೇ ಇರಬೇಕು ಆದರೆ ಅಂಪೈರ್ ಗೆ ಇಲ್ಲಿ Impact ಲೈನಿನಲ್ಲಿ ಇರುವಂತೆ ಕಾಣಲಿಲ್ಲ. ಹಾಗಾಗಿ ಔಟ್ ನೀಡಲಿಲ್ಲ. Impact ಇಲ್ಲಿ Umpires call ಆಗಿದ್ದರಿಂದ ಥರ್ಡ್ ಅಂಪೈರ್ ಕೂಡ Review ನಲ್ಲಿ ಔಟ್ ನೀಡಲು ಹೋಗಿಲ್ಲ. ಒಂದು ವೇಳೆ ಇಲ್ಲಿ ಫೀಲ್ಡ್ ಅಂಪೈರ್ ಔಟ್ ಕೊಟ್ಟಿದ್ದರೆ.. ಆಗ ಅದು ಖಂಡಿತವಾಗಿಯೂ ಔಟಾಗಿ ಬದಲಾಗುತ್ತಿತ್ತು.


ಈ ಎಲ್.ಬಿ.ಡಬ್ಲ್ಯು ಗೆ ಸಂಬಂಧಿಸಿದಂತೆ ಆಫ್ ಸೈಡಿನಿಂದ ಬರುವ ಬಾಲ್ ಗೆ ಬ್ಯಾಟ್ಸ್‌ಮನ್ ಶಾಟ್ ಆಫರ್ ಮಾಡಿದ್ದಾನೋ ಇಲ್ಲವೋ ಎಂಬುದನ್ನು ಫೀಲ್ಡ್ ಅಂಪೈರ್ ಗಳು ಗುರುತಿಸುವುದರಲ್ಲಿ ಹಾಗೂ DRS ಗೆ ಮನವಿ ಮಾಡಿದಾಗ  "Umpires   Call" ಎನ್ನುವುದಕ್ಕೆ ಹೆಚ್ಚಿನ ಮಾನ್ಯತೆ ಇರುವುದು  ಪದೇ ಪದೇ ಹೆಚ್ಚಿನವರ ಅಸಮಾಧಾನಕ್ಕೆ ಕಾರಣವಾಗಿದೆ.ತುಂಬಾ ಜನ ಮುಕ್ತವಾಗಿ ಇದನ್ನು ಟೀಕೆ ಮಾಡಿದ್ದಾರೆ. ಆದರೆ ಅದರಲ್ಲಿ ತುಂಬಾನೇ ಸರಿಯಾದದ್ದು ಅಂತ ಅನಿಸುವುದು  "Umpires Call" ಬಗ್ಗೆ ಕ್ರಿಕೆಟ್ ದಂತಕಥೆ ಆಗಿರುವ ಸಚಿನ್ ತೆಂಡೂಲ್ಕರ್ ಹೇಳಿರುವ ಕೆಲವು ಮಾತುಗಳು.


ಸಚಿನ್ ಏನು ಹೇಳುತ್ತಾರೆ ಎಂದರೆ ".. ನೀವು ಥರ್ಡ್ ಅಂಪೈರ್ ಗೆ Review ಮನವಿ ಮಾಡುವುದು ಏಕೆಂದರೆ, ನಿಮಗೆ ಫೀಲ್ಡ್ ಅಂಪೈರ್ ತೀರ್ಪಿನಲ್ಲಿ ಅಸಾಮಾಧಾನ ಇದ್ದಾಗ ಮಾತ್ರ. ಆದರೆ ಒಮ್ಮೆ ನೀವು  ಥರ್ಡ್ ಅಂಪೈರ್ ತೀರ್ಪಿಗೆ ಹೋದಾಗ ಪುನಃ ಅಲ್ಲಿ ನಿಮಗೆ ಏಕೆ ಫೀಲ್ಡ್ ಅಂಪೈರ್ ನಿರ್ಧಾರಗಳು(umpires call) ಕಾಣಿಸಿಕೊಳ್ಳಬೇಕು? ಅದರಲ್ಲೂ 50% Wicket Zone ಗೆ ಬಾಲ್ ತಾಗಿದೆಯೋ ಇಲ್ಲವೋ ಎಂಬುದನ್ನು ನೋಡುವುದಕ್ಕೆ ಏತಕ್ಕಾಗಿ Umpires call ಮಹತ್ವ ಪಡೆಯಬೇಕು? ಹೀಗೆ ನಾರ್ಮಲ್ ಆಗಿ ಆಡುವಾಗ ಬಾಲ್ ಕೇವಲ 1% ವಿಕೆಟ್ ಗೆ ಬಡಿದರೂ ಅದು ಬೌಲ್ಡ್ ಅಲ್ಲವೇ..? ಹಾಗಾಗಿ ಪುನಃ DRS ನಲ್ಲಿ ಏತಕ್ಕಾಗಿ ಎಷ್ಟು Percentage ಬಾಲ್ Wicket Zone ಗೆ ಬಡಿದಿದೆ ಎಂದು ನೋಡುತ್ತಾ ಕುಳಿತುಕೊಳ್ಳುತ್ತೀರಿ? ಅದಕ್ಕಾಗಿ ಪುನಃ Umpires call ಯಾಕೆ? DRS ನಲ್ಲೂ ಚೂರೇ ಚೂರು ವಿಕೆಟ್ ಗೆ  ತಾಗುವಂತಿದ್ದರೆ ನೇರವಾಗಿ ಔಟ್ ಕೊಟ್ಟು ಬಿಡಿ.ಟೆನ್ನಿಸ್ ನಲ್ಲೂ DRS ಇದೆ, ಅದರಲ್ಲಿ ಬಾಲ್ ಕೋರ್ಟ್ ನಿಂದ ಹೊರಗೆ ಬಿದ್ದಿದೆಯೋ ಇಲ್ಲವೋ ಎಂದು ನೋಡಲು In or Out ಎರಡನ್ನು ಮಾತ್ರ ನೋಡುತ್ತಾರೆಯೋ ಹೊರತು.. ಮೂರನೇ ಯಾವುದೇ ವಿಷಯಕ್ಕೆಅಲ್ಲಿ ಆಸ್ಪದವಿಲ್ಲ.ಅದೇ ರೀತಿ ಕ್ರಿಕೆಟ್ ನಲ್ಲೂ ಕೂಡ DRS ಗೆ ಹೋದಾಗ ನೇರವಾಗಿ ಬಾಲ್ ವಿಕೆಟ್ ತಾಗುವಂತಿದ್ದರೆ ಅದು ಬೇಕಿದ್ದರೆ ಎಷ್ಟೇ Percentage ಇರಲಿ ಅದನ್ನು ಔಟ್ ಎಂದೇ ಪರಿಗಣಿಸಿ, ವಿಕೆಟ್ ಮಿಸ್ ಆದರೆ ನಾಟ್ ಔಟ್ ಎಂದು ಪರಿಗಣಿಸಿ.. " ಎಂದು ಹೇಳುತ್ತಾರೆ ಕ್ರಿಕೆಟ್ ದೇವರು. ಇದೇ ಅಭಿಪ್ರಾಯ ಶೇನ್ ವಾರ್ನ್ ಹಾಗೂ ಹರ್ಭಜನ್ ಸಿಂಗ್ ಅವರದ್ದು ಕೂಡ ಹೌದು.


ನೋಡಿ ಇಲ್ಲಿ ಸಚಿನ್ ತೆಂಡುಲ್ಕರ್ ಲಾಜಿಕ್ ಸರಿಯಾಗಿದೆ, ನಾರ್ಮಲ್ ಕ್ರಿಕೆಟ್ ಆಡುವಾಗ ಸ್ವಲ್ಪವೇ ಸ್ವಲ್ಪ ಬಾಲ್ ವಿಕೆಟ್ ಗೆ ತಾಗಿ ಬೇಲ್ಸ್ ಉರುಳಿದರೂ ಅದು ಬೌಲ್ಡ್ ಎಂದೇ ಪರಿಗಣಿಸಲ್ಪಡುತ್ತದೆ,ಅಲ್ಲಿ ಎಷ್ಟು Percentage ತಾಗಿದೆ ಎಂದು ಯಾರೂ ನೋಡುತ್ತಾ ಕುಳಿತುಕೊಳ್ಳುವುದಿಲ್ಲ,ಹಾಗಾಗಿ  DRS ನಲ್ಲಿ 50% ತಾಗಿದೆಯೋ ಇಲ್ಲವೋ ಯಾಕೇ..? ಅದನ್ನು ನಿರ್ಣಯಿಸಲು ಪುನಃ Umpires call ಪರಿಗಣನೆ ಯಾಕೆ? ಎಂಬ ಸಚಿನ್ ಮಾತಿನಲ್ಲಿ ತರ್ಕವಿದೆ. ಆದರೆ ಸಚಿನ್ ಗೆ ಗೊತ್ತಿರುವುದು ICC ಗೆ ಗೊತ್ತಿಲ್ಲವೇ ಎಂದು ಕೇಳಿದರೆ... ಖಂಡಿತವಾಗಿಯೂ ಗೊತ್ತಿದೆ,ಆದರೆ ICC ಬೇಕೆಂದೇ ಇದನ್ನು Implement ಮಾಡುವುದಿಲ್ಲ.


ICC ಇದನ್ನು Implement ಮಾಡದೇ ಇರುವ ಮುಖ್ಯ ಕಾರಣ ಏನೆಂದರೆ... ಒಂದು ವೇಳೆ DRS ನಲ್ಲಿಯೂ ಕೂಡ ಬಾಲ್  ಚೂರೇ ಚೂರು ವಿಕೆಟ್ ಗೆ ತಾಗುವಂತಿರುವುದನ್ನು ಔಟ್ ಎಂದು ಕೊಟ್ಟು ಬಿಟ್ಟರೆ, ಆಗ ಪ್ಯಾಡ್ ಗೆ ಬಡಿದ ಹೆಚ್ಚಿನ ಎಲ್ಲಾ ತೀರ್ಪು ಔಟೇ ಆಗುತ್ತದೆ. ಇದರಿಂದ ತಂಡವೊಂದು ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿ ಬಿಡುವ ಸಾಧ್ಯತೆಯೇ ಹೆಚ್ಚು. ನಿಯಮವೊಂದು ಈ ರೀತಿ ಬೌಲರ್ ಪ್ರೆಂಡ್ಲಿ ಆದಾಗ ಕ್ರಿಕೆಟ್ ನ ಆಕರ್ಷಣೆ ಸಹಜವಾಗಿ ಕಡಿಮೆ ಆಗುತ್ತದೆ. ಏಕೆಂದರೆ ಜನರು ಕ್ರಿಕೆಟ್ ಯಾವತ್ತೂ ಬೌಲರ್ ಪ್ರೆಂಡ್ಲಿ ಆಗಿ ತಂಡ ಕಡಿಮೆ ಕಡಿಮೆ ರನ್ ಗೆ ಆಲ್ ಔಟ್ ಆಗುವುದನ್ನು ನೋಡಲು ಬಯಸುವುದಿಲ್ಲ.


ಸದ್ಯಕ್ಕೆ ಕ್ರಿಕೆಟ್ ಎಷ್ಟು ಆಟವೋ ಅಷ್ಟೇ ಮನೋರಂಜನೆ ಕೂಡ ಹೌದು. ಕ್ರಿಕೆಟ್ ನ ಆಕರ್ಷಣೆ ಇರುವುದೇ ನಿಯಮಗಳು ಬ್ಯಾಟ್ಸ್‌ಮನ್ ಪ್ರೆಂಡ್ಲಿ ಇದ್ದಾಗ.. ಬ್ಯಾಟ್ಸ್‌ಮನ್ ಇಲ್ಲವೇ ತಂಡಗಳು ದೊಡ್ಡ ದೊಡ್ದ ಮೊತ್ತ ಕಲೆ ಹಾಕಿದಾಗ.. ಅದನ್ನು ಮತ್ತೊಂದು ತಂಡವೂ ಚೇಸ್ ಮಾಡಿದಾಗ.. ಬಿಗ್ ಬಿಗ್ ಸಿಕ್ಸರ್ ಗಳು ಗ್ರೌಂಡ್ ತುಂಬಾ ಕಂಡು ಬಂದಾಗ... ಹೀಗೆ ಇದ್ದಾಗ ಮಾತ್ರ ಜನರಿಗೆ ಕ್ರಿಕೆಟ್ ರೋಮಾಂಚಕವಾಗಿರುತ್ತದೆ. ಅದರ ಹೊರತು  ಕಡಿಮೆ ರನ್ನಿಗೆ ತಂಡ ಆಲ್ ಔಟ್ ಆಗಿ.. ಮತ್ತೊಂದು ತಂಡವೂ ಕಡಿಮೆ ರನ್ನಿಗೆ ಆಲ್ ಔಟ್ ಆಗಿ.. ಬಹಳ ಬೇಗ ಆಟ ಮುಗಿದಾಗ ಆಟ ನೋಡಲು ಬಂದ ಸಾವಿರಾರು ಅಭಿಮಾನಿಗಳಿಗೆ ಕ್ರಿಕೆಟ್ ಬೋರಿಂಗ್ ಆಗಿ ನಿರಾಸೆಯೇ ಆಗುವುದು. ಬೌಲರ್ ಐದು ವಿಕೆಟ್ ತೆಗೆಯಲಿ, ಅಥವಾ ಹತ್ತೂ ವಿಕೆಟ್ ತೆಗೆಯಲಿ ಪ್ರೇಕ್ಷಕರಿಗೆ ಅದಕ್ಕಿಂತ ಜಾಸ್ತಿ ಇಷ್ಟ ಆಗುವುದು ಬ್ಯಾಟ್ಸ್‌ಮನ್ ಒಬ್ಬ 100,200,300 ಹೊಡೆದಾಗ ಮಾತ್ರ.ಸಚಿನ್ ಹೇಳಿದ ನಿಯಮಗಳನ್ನು DRS ನಲ್ಲಿ ತಂದರೆ ಆವಾಗ ಹೆಚ್ಚಿನ ಎಲ್ಲಾ ತೀರ್ಪುಗಳು ಔಟ್ ಆಗಿ... ತಂಡಗಳು ಬೇಗ ಬೇಗ ಆಲ್ ಔಟ್ ಆಗಿ ಆಟದ ಆಕರ್ಷಣೆ ಕಡಿಮೆ ಆಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಅದಕ್ಕಾಗಿಯೇ ICC ಕೂಡ ಜನರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು..ಮತ್ತು ಕ್ರಿಕೆಟ್ ನ ಲಾಭದ ದೃಷ್ಟಿಯಿಂದಲೂ DRS ಅನ್ನು ಈ ರೀತಿಯಾಗಿಯೇ ಇಟ್ಟಿರುವುದು. 


ಆದರೆ ಎಲ್.ಬಿ.ಡಬ್ಲ್ಯು ನಲ್ಲಿ ಹಾಗೂ DRS ಆವಾಗವಾಗ ಅಲ್ಪ ಸ್ವಲ್ಪ ಬದಲಾವಣೆ ನಿರಂತರವಾಗಿ ಆಗುತ್ತಲೇ ಬಂದಿದೆ,ಇಲ್ಲವೆಂದಲ್ಲ .ಮುಂದೆಯೂ ಇನ್ನಷ್ಟು ನಿಯಮಗಳಲ್ಲಿ  ಖಂಡಿತವಾಗಿಯು ಬದಲಾವಣೆ ಆಗುತ್ತದೆ ಅನ್ನುವುದರಲ್ಲಿ ಕೂಡ ಯಾವುದೇ ಸಂಶಯವಿಲ್ಲ.. ಬದಲಾವಣೆ ಅನಿವಾರ್ಯ. 


ಇದಿಷ್ಟು ಭಾರತ ಮತ್ತು ಇಂಗ್ಲೆಂಡ್ ನ ಎರಡನೆಯ ಟೆಸ್ಟ್ ಪಂದ್ಯದ ಫೀಲ್ಡ್ ಅಂಪೈರ್ ಹಾಗೂ ಥರ್ಡ್ ಅಂಪೈರ್ ಗೆ ತೀರ್ಪಿಗೆ ಸಂಬಂಧಿಸಿದ ವಿಚಾರವಾದರೆ,ಮುಂದಿನದ್ದು ಪಿಚ್ ಗೆ ಸಂಬಂಧಿಸಿದಂತೆ ಇಂಗ್ಲಿಷ್ ಹಿರಿಯ ಆಟಗಾರರ ತೀವ್ರವಾದ ಅಸಮಾಧಾನದ್ದು... 


ಮೈಕಲ್ ವಾನ್ ಇದೊಂದು ಕೆಟ್ಟ ಪಿಚ್ ಎಂದು ಮುಕ್ತವಾಗಿ ತನ್ನ ಅಸಾಮಾಧಾನ ತೋರ್ಪಡಿಸಿದ್ದ. ಅದರೆ ಅದನ್ನು ಇಂಗ್ಲೆಂಡ್ ನ ಗ್ರೇಮ್ ಸ್ವಾನ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಪಿಚ್ ಕೆಟ್ಟದಾಗಿದ್ದರೆ ರೋಹಿತ್ ಶರ್ಮ, ಪಂತ್, ಅಶ್ವಿನ್ ಮೊದಲಾದವರು ಹೇಗೆ ಚೆನ್ನಾಗಿ ಆಡಿದರು..? ಪಿಚ್ ಗಿಂತಲೂ ಇಂಗ್ಲೆಂಡ್ ತಂಡವೇ ಅತೀ ಕೆಟ್ಟದಾಗಿ ಆಡಿದೆ ಎಂದು ಹೇಳಿ ಮೈಕಲ್ ವಾನ್ ನ ಬಾಯಿ ಮುಚ್ಚಿಸಿದ್ದರು. 


ಅದರಲ್ಲೂ ಸುನೀಲ್ ಗವಾಸ್ಕರ್ ಈ ರೀತಿಯ ಟೀಕೆಗೆ ಬಹಳ ಸೊಗಸಾಗಿ ಉತ್ತರಿಸಿದ್ದಾರೆ.ಸುನೀಲ್ ಗವಾಸ್ಕರ್ ಹೇಳುತ್ತಾರೆ.. " ಇಂಗ್ಲೆಂಡ್ ಗೆ ಭಾರತೀಯ ತಂಡ ಹೋದಾಗ ಅಲ್ಲಿಯ ಗ್ರೀನ್ ಪಿಚ್ ಗಳಲ್ಲಿ ಕೆಲವೊಮ್ಮೆ ಎಷ್ಟು ಹುಲ್ಲು ಇರುತ್ತದೆ ಎಂದರೆ..ತಕ್ಕ ಮಟ್ಟಿಗೆ ದನವನ್ನು ಕೂಡ ಅದರಲ್ಲಿ ಮೇಯಿಸಬಹುದು.. ಆದರೆ ಯಾವತ್ತೂ ಭಾರತೀಯ ಆಟಗಾರರು ಇಂಗ್ಲೆಂಡ್ ಆಗಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌತ್ ಆಫ್ರಿಕಾ ಪಿಚ್ ಗಳ ಬಗ್ಗೆ ಈ ರೀತಿ ಅಸಮಾಧಾನ ತೋರಿಸಿಲ್ಲ.. ಬದಲಾಗಿ ಆಡಿ ಗೆದ್ದು ತೋರಿಸಿದ್ದಾರೆ. ಇಂಗ್ಲೆಂಡ್ ನವರು ಹೇಗೆ ಸ್ಪಿನ್ ಪಿಚ್ ಗಳನ್ನು ಮಾಡಿ ನಮಗೆ ಕೊಡುವುದಿಲ್ಲವೋ ಹಾಗೇ ನಾವು ಕೂಡ ಅವರ ವೇಗದ ಬೌಲಿಂಗ್ ಗೆ ಸೂಕ್ತವಾದ ಪಿಚ್ ಮಾಡಿ ಕೊಡುವುದಿಲ್ಲ..ಇಂಗ್ಲೆಂಡ್ ಒಂದೊಳ್ಳೆಯ ತಂಡವೇ ಆದರೆ  ಇದರಲ್ಲೂ ಕೂಡ ಅವರು ಗೆದ್ದು ತೋರಿಸಲಿ.. " ಎಂದು ಉಡಾಫೆ ಹಾಗೂ ಅಷ್ಟೇ ಖಡಕ್ ಆಗಿ ಹೇಳಿ ಮುಗಿಸಿದ್ದಾರೆ ಸುನೀಲ್ ಗವಾಸ್ಕರ್. 


ಎರಡು ಪ್ರಬಲ ತಂಡ ಮುಖಾಮುಖಿ ಆದಾಗ ತಂಡದ ಆಟಗಾರರು ಗ್ರೌಂಡಿನಲ್ಲಿ ಜಿದ್ದಿಗೆ ಬಿದ್ದು ಹೋರಾಡುವಾಗ, ತಂಡದ ನಿವೃತ್ತ ಹಿರಿಯ ಆಟಗಾರರು ಈ ರೀತಿ ಟಾಂಗ್ ಕೊಡುತ್ತಾ ಕಾಲು ಎಳೆಯುವುದು ಸರ್ವೇ ಸಾಮಾನ್ಯ. ಹಿಂದೆ ಎಲ್ಲಾ ಸುಮ್ಮನೆ ಇರುತ್ತಿದ್ದ ಭಾರತೀಯ ನಿವೃತ್ತ ಆಟಗಾರರು ಈಗ ತಾವು ಕೂಡ ಬೇರೆ ದೇಶಗಳ ಹಿರಿಯ ಆಟಗಾರರ ಬಾಯಿ ಮುಚ್ಚಿಸಲು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಕೂಡ ಒಂಥರಾ ಖುಷಿ ಕೊಡುತ್ತೆ. ಅದರಲ್ಲೂ ಗವಾಸ್ಕರ್, ಸೆಹ್ವಾಗ್, ವಾಸಿಂ ಜಾಫರ್, ಹರ್ಭಜನ್, ಗಂಗೂಲಿ.. ಬಹಳ ಖಾರವಾಗಿಯೇ ಪ್ರತಿಕ್ರೀಯಿಸುತ್ತಾರೆ. 


ಇನ್ನು ಎರಡನೆಯ ಟೆಸ್ಟ್ ನಲ್ಲಿ ಭಾರತದ ಕಮ್ ಬ್ಯಾಕ್ ಬಗ್ಗೆ ಮಾತಾಡುವುದಾದರೆ,ನಿಜವಾಗಿಯೂ ಚಾಂಪಿಯನ್ ತಂಡದಂತೆ ಆಡಿತ್ತು ಭಾರತ. ಟೆಸ್ಟ್ ನ ಮೊದಲ ದಿನವೇ ಪಿಚ್ ಐದನೇ ದಿನದ ಪಿಚ್ ನಂತೆ ವರ್ತಿಸಿದ್ದು ಸುಳ್ಳಲ್ಲ. ರೋಹಿತ್ ಶರ್ಮಾ ನದ್ದು ಒಂದೊಳ್ಳೆಯ ಶತಕ. ಅದರಲ್ಲೂ ಸ್ಪಿನ್ ಗೆ ಸ್ವೀಪ್ ಶಾಟ್ ಗಳನ್ನು ಕೂಡ ಹೆಚ್ಚು ಹೆಚ್ಚು ಬಾರಿಸಿ ರನ್ ಗಳಿಸಿದ್ದು ಖುಷಿ ನೀಡಿತು.ರಹಾನೆಯದ್ದು ಕೂಡ ಒಂದೊಳ್ಳೆಯ ಕಮ್ ಬ್ಯಾಕ್ ಆಟ. ಪಂತ್ ನದ್ದು ಎಂದಿನಂತೆ ಹೊಡೆ ಬಡಿಯ ಆಟ. ಈ ಬಾರಿ ಕೀಪಿಂಗ್ ನಲ್ಲಿ ವಿಕೆಟ್ ಹಿಂದುಗಡೆ ಎರಡು ಸುಂದರ ಡೈವಿಂಗ್ ಕ್ಯಾಚ್ ಗಳು ಕೂಡ ಮನಮೋಹಕ ವಾಗಿತ್ತು. 


ಆದರೆ ಎಲ್ಲರಿಗಿಂತಲೂ ದೊಡ್ಡ ಹೀರೋ ಆಗಿ ಹೊರಹೊಮ್ಮಿದ್ದು ಈ ಪಂದ್ಯದಲ್ಲಿ ನಮ್ಮ ಆರ್.ಅಶ್ವಿನ್. ಆಹಾ.. ಶತಕದೊಂದಿಗೆ ಒಟ್ಟು ಎಂಟು ವಿಕೆಟ್ ಗಳ ಗೊಂಚಲು. ಅರ್ಹವಾಗಿಯೇ ಪಂದ್ಯಶ್ರೇಷ್ಟವೂ ಅಶ್ವಿನ್ ಗೆ ಸಿಕ್ಕಿದೆ. ನಿಜವಾಗಿಯೂ ಭಾರತದ ಬೌಲಿಂಗ್ ಹಾಗೂ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್ ನ ಆಧಾರ ಸ್ತಂಭ ಈ ಅಶ್ವಿನ್.ಆತ  ಒಂದೊಳ್ಳೆಯ ಬೌಲಿಂಗ್ ಆಲ್ ರೌಂಡರ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. 


ಈ ಜಯದೊಂದಿಗೆ ಟೆಸ್ಟ್ ಚಾಂಪಿಯನ್ ನ ಫೈನಲ್ ನಲ್ಲಿ ಆಡುವ ಭಾರತದ ಕನಸು ಮತ್ತೆ ಗರಿಗೆದರಿದೆ. ಇನ್ನು  ಮುಂದಿನ ಎರಡು ಮ್ಯಾಚ್ ಗಳಲ್ಲಿ ಯಾವುದನ್ನೂ ಸೋಲದೆ ಒಂದನ್ನು ಗೆದ್ದರೂ ಸಾಕು.. ಭಾರತ ಟೆಸ್ಟ್ ಚಾಂಪಿಯನ್ ನ ಫೈನಲ್ ಗೆ ಹಾಗೇ  ತಲುಪಲಿದೆ. ಭಾರತೀಯ ತಂಡದ ಹೆಚ್ಚಿನ ಅಭಿಮಾನಿಗಳ ಆಶಯ ಕೂಡ ಅದೇ..


#Congratulations_Team_India 🎉🎊

Ind Vs Eng

2nd Test 2021

Chennai


.....................................................................................


#Cricket_Review


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ