ಕಲಿ Point

 

 


ಪ್ರತಿಯೊಂದು ಜಾಗವನ್ನೂ ಅದಕ್ಕೊಪ್ಪುವ  ಹೆಸರಲ್ಲೇ ಕರೆದರೆನೇ ಚಂದ ಮತ್ತು ಪ್ರತಿಯೊಂದಕ್ಕೂ ನಮ್ಮಲ್ಲಿ ವಿಶಿಷ್ಟವಾದ ಹಾಗೂ ಅಷ್ಟೇ ಆಪ್ತವಾದ ಹೆಸರು ನಮ್ಮಲ್ಲಿ ಇದೆ. 


ಹೆಚ್ಚಾಗಿ ಈ ಕೆಳಗಿನ ಕೆಲವು ಹೆಸರುಗಳನ್ನು ನೀವು ಕೇಳಿಯೇ ಇರ್ತೀರ.ಬರೀ ತಿಂಡಿ ಸಿಗುವ ಹೋಟೆಲ್ ಗಳಿಗೆ ಉಪಹಾರ ಗೃಹ,ಊಟ ಸಿಗುವ ಹೋಟೆಲ್ ಗೆ ಲಂಚ್ ಹೋಮ್,Self Service ಇರುವ ಪುಟ್ಟ ಹೋಟೆಲ್ ಗಳಿಗೆ ದರ್ಶಿನಿ,ಜ್ಯೂಸ್ ಅಂಗಡಿಗೆ ಜ್ಯೂಸ್ ಜಂಕ್ಷನ್, ಸೋಡಾ ಶರಬತ್ತು ಸಿಗುವ ಅಂಗಡಿಗೆ ಸೋಡಾ ಶಾಪ್,ತರಹೇವಾರಿ ದೋಸೆ ಮಾಡಿ ಕೊಡುವ ಫುಡ್ ಟ್ರಕ್ ಗೆ ದೋಸ ಕಾರ್ನರ್... ಹೀಗೆ ಇತ್ಯಾದಿ ಇತ್ಯಾದಿ ಹೆಸರುಗಳು ನಮ್ಮಲ್ಲಿ ಹೆಸರುವಾಸಿಯಾಗಿದೆ. 


ಇದೇ ರೀತಿಯ ಒಂದು ಹೆಸರೇ ಈ " ಕಲಿ  Point ". 


ಕಲಿ ಪಾಯಿಂಟ್ ಅಲ್ಲಿ ಕಲಿ ಸಿಗ್ತದೆ ಹಾಗಾಗಿ ಅದು ಕಲಿ ಪಾಯಿಂಟ್.


ಕಲಿ ಅಂದರೆ  ಕನ್ನಡದಲ್ಲಿ ಶೇಂದಿ ಅಥವಾ ನೀರಾ ಎಂದು ಅರ್ಥ.ಇಂಗ್ಲಿಷ್ ನಲ್ಲಿ Toddy. ತುಳು ಭಾಷೆಯಲ್ಲಿ ನಾವು ಅದಕ್ಕೆ ಕಲಿ ಎಂದು ಹೇಳುವುದು. 


ನಮ್ಮ ಕಾಲೇಜ್ ಕೆಳಗೆಯೇ ಇತ್ತೊಂದು ಅಂತಹ  ಕಲಿ ಗಡಂಗ್(ಅಂಗಡಿ).ಊರವರಿಗೆ ಅದು ಜಸ್ಟ್ ಕಲಿ ಗಡಂಗ್ ಆಗಿದ್ದರೂ ಕೂಡ  ನಮ್ಮಂತಹ ಕಾಲೇಜ್ ಹುಡುಗರ ಬಾಯಿಯಲ್ಲಿ ಮಾತ್ರ ಅದು ಎಂದಿಗೂ  ಕಲಿ ಪಾಯಿಂಟ್ ಎಂದೇ ಹೆಸರುವಾಸಿ ಆಗಿತ್ತು.


ಈಗ ಈ ಕಲಿ ಗಡಂಗ್ ಗಳು ಅಲ್ಲಲ್ಲಿ Toddy Shop, Toddy Cafe, Toddy Bar ಗಳಾಗಿ ನವ ನವೀನವಾಗಿ ರೂಪುಗೊಂಡು ಕಲಿ ಪ್ರೀಯರ ಬಾಯಿ ಮತ್ತು ಮನಸ್ಸು ಎರಡನ್ನೂ ತಣಿಸುತ್ತಿದೆ. ಆದರೂ ನನಗೆ ಯಾವುದೇ Toddy Bar ಗಳು ಇಲ್ಲವೇ Toddy cafe ಗಳು ಕಣ್ಣಿಗೆ ಬಿದ್ದರೂ ಸಹ  ನಾನು ಅದಕ್ಕಿಡುವ ಹೆಸರು ಕಲಿ ಪಾಯಿಂಟ್ ಎಂದೇ.. ಅಂದ ಕಾಲತ್ತಿಲ್ ಕಾಲೇಜ್ ಪಕ್ಕ ಕಂಡ ಆ ಗಡಂಗ್ ನದ್ದೇ  ಅತಿಯಾದ ನೆನಪಾಗುವುದು ನನಗೆ. 


ಕಾಲೇಜ್ ಗೆ ನಡೆದುಕೊಂಡು ಹೋಗುವ ದಾರಿಯಲ್ಲಿ ಇತ್ತು ಅದು. ಅದೇನೋ ಬಿಟ್ಟು ಬಿಡದ ಕುತೂಹಲ ನನಗೆ. ಪ್ರತೀ ಸಾರಿಯೂ ಅದರತ್ತ ಒಮ್ಮೆ ಕಣ್ಣು ಹಾಯಿಸಿಯೇ ಕಾಲೇಜ್ ಗೆ ಹೋಗುವುದು ಮತ್ತು ಕಾಲೇಜ್ ನಿಂದ ಬರುವಾಗ ಕೂಡ ಅದರತ್ತ ಒಮ್ಮೆ ಅಟೋಮ್ಯಾಟಿಕ್ ಆಗಿ ನನ್ನ ಕಣ್ಣು ತಿರುಗುವುದು. 


ನಮ್ಮ ಕಾಲೇಜ್ ಪಕ್ಕ ಸಿಗುತ್ತಿದ್ದ ಆ ಕಲಿ ಪಾಯಿಂಟ್ ನಮ್ಮ ಪರಿಚಯದ ಗೆಳೆಯರೊಬ್ಬರದ್ದೇ ಆಗಿತ್ತು.ಕೆಲವೊಮ್ಮೆ ಅಲ್ಲಿಗೆ ಹೋಗುತ್ತಿದ್ದೆವು.ಕುಡಿಯಲು ಅಲ್ಲ.. ಸುಮ್ಮನೆ ಮಾತಾಡಿಸಲು. ಅಲ್ಲಿ ಕಲಿ ಪ್ರೀಯರು ಕುಜಿಲಿ(ಮಣ್ಣಿನ ಪಾತ್ರೆ)ಯಲ್ಲಿ ಬೆಳ್ಳಗಿನ ಕಲಿಯನ್ನು ಹಾಕಿಕೊಂಡು ಈ ಲೋಕದ ಪರಿಜ್ಞಾನವೇ ಇಲ್ಲದಂತೆ ಕುಡಿಯುತ್ತಿದ್ದರು.ಸಾಲಾಗಿ ಜೋಡಿಸಿಟ್ಟಿರುವ ಆ ಮಣ್ಣಿನ ಪಾತ್ರಗಳನ್ನು ನೋಡುವುದೇ ಬಾರೀ ಚಂದ. ನಿಮಗೆ ಕಲಿ ಬೇಕಾದರೆ ಆ ಮಣ್ಣಿನ ಕುಜಿಲಿಯಲ್ಲಿ ಮಜ್ಜಿಗೆಯಂತೆ ಬಳುಕಾಡುವ ಕಲಿ ಹಾಕಿ ಕೊಡುತ್ತಾರೆ. ಆ ಸಮಯದಲ್ಲಿ ಒಂದು ಕುಜಿಲಿಗೆ ಇಪ್ಪತ್ತು ರೂಪಾಯಿ ಇತ್ತು ಎಂದು ಕಾಣುತ್ತೆ. ಸರಿಯಾಗಿ ನೆನಪಿಲ್ಲ. 


ನನಗೆ ಈ ಕಲಿ ಪಾಯಿಂಟ್ ಗಳ ಕಲಿಗಿಂತಲೂ ಹೆಚ್ಚಿನ ಆಸಕ್ತಿ ಹುಟ್ಟಿಸುತ್ತಿದ್ದದ್ದು ಅಲ್ಲಿ ಸಿಗುತ್ತಿದ್ದ ರುಚಿಕರ  ಫುಡ್ ಗಳು. 


ಚಿಕ್ಕಂದಿನಿಂದಲೂ ತುಂಬಾನೇ Foodie ಆಗಿರುವ ನನಗೆ ಕೇವಲ ಫುಡ್ ಮಾತ್ರವಲ್ಲ ಅದನ್ನು ಅಂದವಾಗಿ ಜೋಡಿಸಿರುವುದು,ಒಪ್ಪವಾಗಿ ಪೇರಿಸಿ ಇಡುವುದು,ಅಲಂಕಾರದ   ಒಗ್ಗರಣೆ,ಅದರ ಘಮ ಎಲ್ಲವೂ ಬಾರೀ ಇಷ್ಟ. ಕೇವಲ ಫುಡ್ ಗಳನ್ನು ನೋಡಿದರೂ,ಕಣ್ಣು ಮುಚ್ಚಿ ಆ ಪರಿಮಳವನ್ನು ಆಘ್ರಾಣಿಸಿದರೂ ನನಗೆ ಹೊಟ್ಟೆ ಫುಲ್ ಆಗಿ ಬಿಡುವುದು. 


ಅಂತಹ ನಾನು ಕಲಿ ಪಾಯಿಂಟ್ ಗೆ ಹೋದಾಗಲೆಲ್ಲ ನನಗೆ ಬಹಳವಾಗಿ ಇಷ್ಟವಾಗುತ್ತಿದ್ದದ್ದು  ಅಲ್ಲಿನ ಖಾರ ಖಾರವಾದ ಫುಡ್ ಗಳೇ. ಅದನ್ನು ತಿನ್ನುವ ಸಲುವಾಗಿಯೇ PG ಗೆಳೆಯರೊಂದಿಗೆ ಕಲಿ ಪಾಯಿಂಟ್ ಗೆ ನಾವು ಹೋಗುತ್ತಿದ್ದೆವು. 


ನಿಜ ಹೇಳ್ತೇನೆ ನಿಮಗೆ ತುಂಬಾನೇ Spicy ಫುಡ್ ತಿನ್ನಬೇಕಾ... ಹಾಗಾದರೆ ನೀವು ಒಮ್ಮೆ ಕಲಿ ಪಾಯಿಂಟ್ ಗಳಿಗೆ ಒಮ್ಮೆ ವಿಸಿಟ್  ಕೊಡಲೇಬೇಕು..ಕಲಿ ಕುಡಿಯಲೇ ಬೇಕೆಂದಿಲ್ಲ.ಆ ಫುಡ್ ಗಳನ್ನು ಮನಸ್ಸೋಯಿಚ್ಛೆ ಸವಿದು ಬರಬಹುದು. 


ಬೇರೆ ಎಲ್ಲಾ ಕಡೆಯೂ ಈ ಕಲಿ ಪಾಯಿಂಟ್ ಗಳು ಇದ್ದರೂ ಕೂಡ ನೀವು ನಿಜವಾದ ಕಲಿ ಫುಡ್ ನ ಸ್ವಾದ ಅನುಭವಿಸಲು ಕುಡ್ಲ ದ(ಮಂಗಳೂರು) ಕಲಿ ಪಾಯಿಂಟ್ ಗಳಿಗೆಯೇ  ಬರಬೇಕು. ಏಕೆ ಗೊತ್ತಾ.. ಬಾಯಲ್ಲಿ ನೀರೂರಿಸುವ ಇಲ್ಲಿರುವ ವೆರೈಟಿ ಫುಡ್ ಗಳೇ ಅಂತಹದ್ದು. ನಿಮಗೆ ಬೇರೆ ಕಡೆ ಕಲಿ ಯೊಂದಿಗೆ ತಿನ್ನಲು ಚಕ್ಕುಲಿ,ಉಪ್ಪಿನಕಾಯಿ, ಮಸಾಲೆ ಕಡಲೆ, ಕೆಲವು Spicy ಚಿಕನ್ ಐಟಂ ಗಳು ಇದ್ದರೆ ನಮ್ಮ ಕುಡ್ಲದ ಕಲಿ ಪಾಯಿಂಟ್ ಗಳಲ್ಲಿ ಇಲ್ಲಿಯದ್ದೇ ವಿಶೇಷಗಳಾದ  ಚಿಕನ್ ಪುಳಿಮುಂಚಿ, ಚಿಕನ್ ಸುಕ್ಕ, ಇನ್ನು ಕೆಲವೊಮ್ಮೆ ಇಡ್ಲಿ ಮತ್ತು ಪಂಜಿ ಕಜಿಪು(ಹಂದಿ ಕರಿ) ಎಲ್ಲ ಇರ್ತದೆ.ಎಲ್ಲಕ್ಕಿಂತ ವಿಶೇಷ ಯಾವುದು ಗೊತ್ತಾ ಫಿಶ್ ಖಾದ್ಯಗಳು. ಹೌದು ನಿಮಗೆ  ಮಂಗಳೂರಿನ ಕಲಿ ಪಾಯಿಂಟ್ ಗಳಲ್ಲಿ ಸಿಗುವ ವೆರೈಟಿ ಫಿಶ್ ಐಟಂ ಗಳು ರಾಜ್ಯದ ಬೇರೆ ಕಡೆಗೆ ಸಿಗುವುದು ಸ್ವಲ್ಪ ಕಷ್ಟವೇ.. ಅದಕ್ಕೆ ಹೇಳಿದ್ದು ಅವುಗಳಿಗಾಗಿ ನೀವು ಇಲ್ಲಿಗೇ ಬರಲೇ ಬೇಕು ಎಂದು.


ತುಂಬಾ ಹಿಂದಿನ ಕಾಲದ ನಮ್ಮ ಕಲಿ ಪಾಯಿಂಟ್ ಗಳಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಎರಡೇ ಐಟಂ ಗಳಂತೆ. ಒಂದು ಪೊಡಿ ಎಟ್ಟಿಯ ಚಟ್ನಿ(ಒಣ ಸಿಗಡಿಯ ಡ್ರೈ ಚಟ್ನಿ) ಮತ್ತು ಕಾಯಿಸಿದ ಒಣ ಮೀನು. ಈ ನುಂಗೆಲ್, ಕುರ್ಚಿ ಮುಂತಾದ ಒಣ ಮೀನುಗಳನ್ನು ಬೆಂಕಿಯಲ್ಲಿ ಸುಟ್ಟು ಕೊಂಡು..ಕಲಿ ಕುಡಿಯುತ್ತಾ.. ಆಹಾ.ಎನ್ನುತ್ತಾ ತೇಗು ಬರುವಂತೆ ತಿನ್ನುತ್ತಿದ್ದರಂತೆ ಆ ಕಾಲದವರು..ತಿಳಿದವರು,ಆ ರೀತಿ ತಿಂದವರು ಹೇಳುವಾಗಲೇ ಬಾಯಲ್ಲಿ ನೀರೂರುತ್ತದೆ.ಆ ರೀತಿ ಸುಟ್ಟ ಒಣ ಮೀನು ಈಗ  ಸಿಗದಿದ್ದರೂ ರುಚಿಯಾದ ಎಟ್ಟಿ ಚಟ್ನಿ  ಈಗಲೂ ಸಿಗುತ್ತದೆ.ಈ ಒಣ ಮೀನು ಉಂಟಲ್ಲಾ ಅದರ ಟೇಸ್ಟೇ ಬೇರೆ ಆಯ್ತಾ. ಕೆಲವರಿಗೆ ಹಸಿ ಮೀನಿಗಿಂತಲೂ ಬೆಂಕಿಯಲ್ಲಿ ಕಾಯಿಸಿದ ಇಲ್ಲವೇ ತೆಂಗಿನ  ಎಣ್ಣೆಯಲ್ಲಿ ಪ್ರೈ ಮಾಡಿದ ಒಣ ಮೀನು ಎಂದರೆನೇ  ಬಾರೀ ಇಷ್ಟ.ಅದರ ಚಟ್ನಿ, ಅದರ ಸಾರು ಕೂಡ ಬಹಳ ಪರಿಮಳ. ಒಣ ಮೀನಿನ ಖಾದ್ಯಗಳಿಗೂ ಕೂಡ ಸಪರೇಟ್ ಆದ ಫ್ಯಾನ್ ಬೇಸ್ ಇದೆ. ಕೆಲವರಿಗಿಂತು ಈ ಕಡ್ಲೆ ಬಲ್ಯಾರ್ ಪದಾರ್ಥ ಅಂದರೆ ಜೀವ.


ಈ ಭೂತಾಯಿ ಮೀನು(Sardine/ಮತ್ತಿ) ಉಂಟಲ್ಲ ಅದರಲ್ಲಿ ಅತೀ ಸಣ್ಣ ಮೀನು ಒಂದು ಬರ್ತದೆ. ಅದಕ್ಕೆ ನಮ್ಮಲ್ಲಿ ತರು ಭೂತಾಯಿ ಎಂದೇ ಹೇಳುವುದು. ಈ ತರು ಭೂತಾಯಿಗೆ ಮಸಾಲೆ ಹಚ್ಚಿ(ಉಪ್ಪು, ಮೆಣಸು, ಹುಳಿ) ಎಣ್ಣೆ ಕಾದಿರುವ ಬಾಣಲೆಯಲ್ಲಿ Deep Fry ಮಾಡಿ ಬೆಚ್ಚ ಬೆಚ್ಚ (ಬಿಸಿ ಬಿಸಿ) ತೆಗೆದು ಕೊಡ್ತಾರೆ ನೋಡಿ.. ಆಹಾ... ಆ crispy ಭೂತಾಯಿ ಫ್ರೈಗೆ ನಿಮ್ಮ ಯಾವುದೇ ಪಾಪ್ ಕಾರ್ನ್ ಕೂಡ  ಸರಿ ಸಮ ಆಗ್ಲಿಕ್ಕಿಲ್ಲ ಬಿಡಿ. ಅಂತಹ ಚಿಕ್ಕ ಚಿಕ್ಕ ತರು ಭೂತಾಯಿ ಫ್ರೈಗಳು ನಿಮಗೆ ಕಲಿ ಪಾಯಿಂಟ್ ಗಳಲ್ಲಿ ಸಿಗ್ತದೆ. ಕಲಿ ಕುಡಿಯುತ್ತಾ ಒಂದೊಂದೇ ತರು ಭೂತಾಯಿ ಚಕ್ಕುಲಿಯಂತೆ ಕರ್ರುಂ ಕುರ್ರಂ ಮಾಡುತ್ತಾ ಮುಳ್ಳು ಸಮೇತ ತಿನ್ನುವ ಮಜಾನೇ ಬೇರೆ. ತಿಂದವರಿಗೆ ಗೊತ್ತು ಆ ಸುಖ. ಮಂಗಳೂರಿನಲ್ಲಿ ಎಲ್ಲರ ಮನೆಯಲ್ಲಿ ಇದನ್ನು ಅಂತು ಮಾಡಿಯೇ ಮಾಡ್ತಾರೆ. ಭೂತಾಯಿ ಫ್ರೈ ಇದ್ದರೆ ಪಕ್ಕದಲ್ಲಿ ಟೊಮೆಟೊ ಸಾರ್ ಇಲ್ಲವೇ ಒಣ ಮೆಣಸಿನ ಒಗ್ಗರಣೆ ಹಾಕಿದ ಪುನರ್ ಪುಳಿ ಸಾರ್ (ಕೋಕಂ) ಇರಲೇಬೇಕು. ಇತ್ತೀಚೆಗೆ ಮಂಗಳೂರಿನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಈ ತರು ಭೂತಾಯಿ ಫ್ರೈ ತಿಂದಿದ್ದೆ... ಅದಕ್ಕೆ ಅವರು ಅಲ್ಲಿ ಇಟ್ಟ  ಹೆಸರು ಎಂತ ಗೊತ್ತುಂಟಾ.. " ಭೂತಾಯಿ ಕುರುಕುರ್ರೆ ". ಆಹಾ... ನಿಜವಾಗಿಯೂ ಬಾಯಲ್ಲಿ ಕರ್ ಕುರ್ ಎಂದು ಹಾಗೇ ಕರಗಿ ಹೋಗುವ ಅದಕ್ಕೆ ಒಪ್ಪುವ ಹೆಸರೇ ಅದು. ಹಿಂದೇ ಎಲ್ಲ ಇಪ್ಪತ್ತು ರೂಪಾಯಿ, ಮೂವತ್ತು ರೂಪಾಯಿಗಳಲ್ಲಿ ಸಿಗುತ್ತಿದ್ದ ಈ ತರು ಭೂತಾಯಿ ಫ್ರೈ ಈಗ ರೆಸ್ಟೋರೆಂಟ್ ಗಳಲ್ಲಿ ನೂರು ರೂಪಾಯಿ ಆಗಿದೆ. 


ತರು ಭೂತಾಯಿ ಫ್ರೈ ಮಾತ್ರವಲ್ಲ ಈ ಕಲಿ ಪಾಯಿಂಟ್ ಗಳಲ್ಲಿ ಮುಲ್ಲು ಮುಟ್ಟೆ ಅಂತ ಒಂದು ಸಿಗ್ತದೆ.ಮುಲ್ಲು ಮುಟ್ಟೆ ಅಂದ್ರೆ ಈ ದೊಡ್ಡ ದೊಡ್ದ ಮೀನುಗಳ ತಲೆ ಉಂಟಲ್ಲ ಅದನ್ನು ಈ ಪುಳಿಮುಂಚಿ ಮಸಾಲೆಯಲ್ಲಿ ಖಾರ ಖಾರವಾಗಿ ದಪ್ಪ ಗಸಿ ಪದಾರ್ಥ ಮಾಡಿ ಕೊಡುವುದು. ಯೆಬೆ.. ಈ ಫಿಶ್ ತಲೆಯಲ್ಲಿ ಎಂತ ಇರ್ತದೆ.. ಎಂದು ಮೂಗು ಮುರಿಯಬೇಡಿ. ಫಿಶ್ ನ  ತಲೆಯಲ್ಲಿಯೇ ಅದರ  ಎಲ್ಲಾ ರುಚಿ ಇರುವುದು. ಕೆಲವರಿಗೆ ಅದು ಬಾರೀ ಇಷ್ಟ. ಒಂದು ಕುಜಿಲಿ ಕಲಿ ಪಕ್ಕ ಇದ್ದರೆ ಕೈಯಲ್ಲಿ ಒಂದು ಪ್ಲೇಟ್ ಮುಳ್ಳು ಮುಟ್ಟೆ ಇದ್ದರೆ ಸಾಕು.. ಅವರಿಗೆ ಅದು ಒಂದು ಗಂಟೆಯ ಸರಕು. ಪಿರಿ ಪಿರಿ ಮಾತಾಡುತ್ತಾ ಊರಿನ ವಿಷಯಗಳನ್ನು ಞಕ್ಕ್ ಞೈ (ಪದೇ ಪದೇ) ಮಾಡುತ್ತಾ ಸಮಯ ಕಳೆದು ಬಿಡುತ್ತಾರೆ.ಹೆಚ್ಚಾಗಿ ಬಂಗುಡೆ,ಅಂಜಲ್,ಕೇದಾರ್(ಕುಟ್ಯಂಜಲ್,ಟ್ಯೂನ), ಮೆಲುಗು ಫಿಶ್ ಗಳ ತಲೆಯಿಂದ ಈ ಮುಳ್ಳು ಮುಟ್ಟೆ ಕರಿ ಮಾಡ್ತಾರೆ. ಫಿಶ್ ತಲೆ ತಿನ್ನಲು ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ್ದು. ಕೆಲವರಿಗೆ ಇಷ್ಟ ಆಗದೇ ಇರಬಹುದು. ಉದಾಹರಣೆಗೆ ಮನೆಯಲ್ಲಿ ಕೂಡ  ಒಂದು ಇಡೀ ಬಂಗುಡೆಯನ್ನು ಮೂರು ತುಂಡು ಮಾಡಿದರೆ ಕೆಲವರಿಗೆ ನಡುವಿನ ತುಂಡೇ ಬಾರೀ ಇಷ್ಟ. ಇನ್ನು ಕೆಲವರಿಗೆ ಕೆಳಗಿನ ತ್ರೀಕೋನ ಆಕಾರದ ಬಾಲದ ಭಾಗ ಇಷ್ಟ. ಆದರೆ ಮೀನಿನ ತಲೆ ಮನೆಯಲ್ಲಿ ಮಕ್ಕಳಿಗೆ ಯಾರಿಗೂ ಇಷ್ಟ ಆಗುವುದೇ ಇಲ್ಲ. ಆದರೆ ದೊಡ್ಡವರಿಗೆಲ್ಲ ಕೇಳಿ ನೋಡಿ.. ಅವರಿಗೆ ಆ ತಲೆಯ ಭಾಗವೇ ಅತೀ ಇಷ್ಟ.ಆಹಾ.. ಎಂದು ಅದನ್ನೇ  ಕಚ್ಚಿಕೊಂಡು ಶ್ರದ್ಧೆಯಿಂದ ತಿನ್ತಾರೆ. ಹೌದು ಮುಳ್ಳು ಮುಟ್ಟೆ ತಿನ್ನಲು ಮತ್ತು ಏಡಿ ಕರಿ(Crab) ತಿನ್ನಲು ಸಮಯದ ಜೊತೆ ಜೊತೆಗೆ ಒಂದೊಳ್ಳೆಯ ಶ್ರದ್ಧೆ ಹಾಗೂ ಕಲೆ ಬೇಕು. ಎಲ್ಲರಿಗೂ ಇದು ಎರಡನ್ನೂ ಅಷ್ಟು ಸುಲಭವಾಗಿ ಸಂಪೂರ್ಣವಾಗಿ ಅಚ್ಚುಕಟ್ಟಾಗಿ ತಿನ್ನಲು ಸಾಧ್ಯವಿಲ್ಲ. 


ಇನ್ನು ಕಲಿ ಪಾಯಿಂಟ್ ಅಲ್ಲಿ ಸಿಗುವ ಇನ್ನೊಂದು ಮೆನು ಅಂದರೆ ಅದು ಪಂಜಿ ಕರಿ. ಎಲ್ಲರೂ ತಿನ್ನುವುದಿಲ್ಲ. ಆದರೆ ಕೆಲವರಿಗೆ ಈ ಪಂಜಿ ಕರಿ ಎಂದರೆ ಬಹಳನೇ ಇಷ್ಟ.ಅದರಲ್ಲೂ ಕಾಡು ಪಂಜಿ  ಎಂದರೆ ಕೆಲವರಿಗೆ ಪಂಚ ಪ್ರಾಣ. ಅದಕ್ಕಾಗಿ ಕೋವಿ ಹಿಡಿದು ಕೊಂಡು ಶಿಕಾರಿಗೆ ಹೋಗುವವರು ಕೂಡ ಇದ್ದಾರೆ. ರಾತ್ರಿಯೆಲ್ಲಾ ಕಾಡಿನಲ್ಲಿ ಗುರುತು ಮಾಡಿಕೊಂಡ  ಹಂದಿಯ ಹಿಂದೆ ಒಂದು ಹತ್ತು ಹದಿನೈದು ಜನರ ಗುಂಪು ಬೆನ್ನು ಬೀಳುವುದು, ಅಟ್ಟಿಸಿಕೊಂಡು ಹೋಗುವುದು ಬಹಳ ರೋಚಕ ಕಥೆಗಳು. 

ಇಂತಹ ಕಥೆಗಳನ್ನು ಕೇಳಲು ನೀವು ಕಲಿ ಪಾಯಿಂಟ್ ಗಳಿಗೆಯೇ ಹೋಗಬೇಕು. ಆ ಪಂಜಿ ಕರಿಯೊಂದಿಗೆ ಇಡ್ಲಿಯನ್ನು ಮೆಲ್ಲುತ್ತಾ ಅವರು ಹೇಳುವ ಕಥೆಯೇ ಅವರ ಪಾಲಿನ ಒಂದು ಯುದ್ಧ ಗೆದ್ದ ಸಂಭ್ರಮ. ಈ ಕಲಿ ಪಾಯಿಂಟ್ ಗಳಲ್ಲಿ ಪಂಜಿ ಕರಿಗೆ ಬಳಸುವ ಇಡ್ಲಿ ನಮ್ಮ ಹೋಟೇಲ್ ನ ರವಾ ಇಡ್ಲಿ ಅಲ್ಲ. ಎಲ್ಲಾ ಕಲಿ ಪಾಯಿಂಟ್ ಗಳಲ್ಲಿ ಇರುವುದು ನಮ್ಮ ಪೊರ್ಬುಲೆನ ಈಸ್ಟ್ ಹಾಕಿದ ಇಡ್ಲಿ ಅಥವಾ ಕಲಿಯನ್ನೇ ಹಾಕಿ ಮಾಡಿದ ಇಡ್ಲಿಯೇ ಇರುವುದು.ಪೊರ್ಬುಲು ಅಂದರೆ ತುಳು ಭಾಷೆಯಲ್ಲಿ ಕ್ರಿಶ್ಚಿಯನ್ನರು.ಅವರ ಆ ಇಡ್ಲಿಗೆ Sanna ಎಂದು ಕೂಡ ಹೇಳ್ತಾರೆ.  ಚಿಕನ್ ಪುಳಿ ಮುಂಚಿಗೆ, ಫಿಶ್ ಕರಿಗೆ ಅದರಲ್ಲೂ ಈ ಪಂಜಿ ಕರಿಗೆ ಹೇಳಿ ಮಾಡಿಸಿದ್ದು ಈ ಪೊರ್ಬುಲೆನ ಇಡ್ಲಿ. 


ಈ ಚಕ್ಕುಲಿ,ಮಸಾಲೆ ಕಡ್ಲೆ, ಉಪ್ಪಿನಕಾಯಿ ಜೊತೆ ಈ ಮೇಲಿನ ಖಾದ್ಯಗಳು ಹೆಚ್ಚಾಗಿ ನಮ್ಮ ಕಲಿ ಪಾಯಿಂಟ್ ಗಳಲ್ಲಿ ಕಂಡು ಬರುತ್ತಿದ್ದವು. ಆದರೆ ಈಗೀನ ಹೊಸ ಶೈಲಿಯ Toddy Bar, Toddy Cafe ಗಳಿಗೆ ಹೋದರೆ ನಿಮಗೆ ಮಂಗಳೂರಿನ ಇನ್ನಿತರ ರೆಸ್ಟೋರೆಂಟ್ ಗಳಲ್ಲಿ ಸಿಗುವ ಹೆಚ್ಚಿನ ಖಾದ್ಯಗಳನ್ನು ಕೂಡ  ಸವಿಯಬಹುದು.ಅಂಜಲ್ ತವಾ ಫ್ರೈ, ಬೊಂಡಾಸ್ ಚಿಲ್ಲಿ, ಚಿಕನ್ ಘೀ ರೋಸ್ಟ್, ನೀರು ದೋಸೆ, ಇತ್ಯಾದಿ ಇತ್ಯಾದಿ ಎಲ್ಲವೂ ಸಿಗ್ತದೆ.ಅದೇ ಮಂಗಳೂರಿನಲ್ಲಿ ಯಥೇಚ್ಛವಾಗಿ ಬಳಸುವ  ತೆಂಗಿನೆಣ್ಣೆಯನ್ನೇ ಬಳಸಿ ರುಚಿ ರುಚಿಯಾಗಿ ಫಿಶ್ ಪ್ರೈಗಳನ್ನು ಬಿಸಿ ಬಿಸಿ ಅಲ್ಲಿಯೇ ಮಾಡಿ ಕೊಡ್ತಾರೆ. ಪಕ್ಕದಲ್ಲಿ ಗ್ಲಾಸ್ ನಲ್ಲಿ ಕಲಿ. ಹೌದು ಕೆಲವು ಕಡೆ ಮಣ್ಣಿನ ಕುಜಿಲಿ ಹೋಗಿ ಗ್ಲಾಸಿನ ಲೋಟಗಳು ಬಂದಿದೆ. 


ಕಲಿ ಯನ್ನು ಹೆಚ್ಚಾಗಿ ನಮ್ಮ ಕಡೆ ತೆಂಗಿನ ಮರದಿಂದ, ಈಂದ್(ಬೈನೆ) ಮರದಿಂದ, ಮತ್ತು ತಾರಿ(ತಾಳೆ) ಮರದಿಂದ ತೆಗೆಯುತ್ತಾರೆ. ಮೊದಲು ಹೆಚ್ಚಾಗಿ ಕಲಿ  ತೆಗೆಯುತ್ತಿದ್ದದ್ದು ಈ ತಾರಿಯ ಮರದಿಂದಲೇ.ಈಗ ಹೆಚ್ಚಾಗಿ ತೆಂಗಿನ ಮರದಿಂದ ತೆಗೆಯುವುದನ್ನು ಕೂಡ ಕಾಣಬಹುದು.ಆದರೂ ತಾರಿಯ ಕಲಿಗೆ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಅದುವೇ ಬಹಳ ರುಚಿ. 


ಈ ಕಲಿ ತೆಗೆಯುವುದಕ್ಕಿಂತ ಮೊದಲು ಈ ತೆಂಗಿನ ಇಲ್ಲವೇ ತಾರಿಯ ಕೊಂಬನ್ನು(ಗೊನೆ) ಕಡಿದು ಅದಕ್ಕೆ ಕರವನ್ನು(ಮಡಿಕೆ)ಇಟ್ಟು ಬರುತ್ತಾರೆ.ಅದರಲ್ಲಿ ಈ ಕಲಿ ಹನಿ ಹನಿಯಂತೆ ಬಿದ್ದು  ಸಂಗ್ರಹವಾಗಿ ಅಲ್ಲೇ ಮರದ ಮೇಲೆಯೇ ಇರುತ್ತದೆ.ಕಲಿ ತೆಗೆಯುವುದು ಕಲಿ ಕುಡಿದಷ್ಟು ಸುಲಭ ಅಲ್ಲ. ಅದಕ್ಕೆ ಅನುಭವ ಬೇಕು, ಪರಿಣತಿ ಬೇಕು, ಒಂದೊಳ್ಳೆಯ ಶ್ರದ್ಧೆ ಬೇಕು ಮಾತ್ರವಲ್ಲ ಇದೊಂದು ತರಹದ ಸಾಹಸ ಕೆಲಸವೇ ಸರಿ.


ಬೆಳಿಗ್ಗೆ ಬೇಗನೆ ಎದ್ದು ಮೂರು ಗಂಟೆ, ನಾಲ್ಕು ಗಂಟೆಗೆ ಎಲ್ಲ ಕಲಿ ತೆಗೆಯಲು ಹೋಗಬೇಕು, ಹೋಗಿ ಮರ ಹತ್ತ ಬೇಕು.ತಮ್ಮ ಪಾತ್ರೆಗೆ ಮರದ ಮೇಲಿನ ಕರದಲ್ಲಿ ಸಂಗ್ರಹವಾದ ಕಲಿಯನ್ನು ಸುರಿದು ಮತ್ತೆ ಆ ಕರವನ್ನು ಗೊನೆಯ ಮೇಲೆ ಇಟ್ಟು ಬರಬೇಕು. ಆ ನಂತರ ಮತ್ತೆ ಹತ್ತು ಗಂಟೆಗೆ ಒಮ್ಮೆ ಹೋಗಿ ಕಲಿ ತೆಗೆಯಬೇಕು, ನಂತರ ಮಧ್ಯಾಹ್ನ ಮೂರು ಗಂಟೆಗೆ ಪುನಃ ಹೋಗಿ ಕಲಿ ತೆಗೆಯಬೇಕು.ಒಟ್ಟಿನಲ್ಲಿ ದಿನಕ್ಕೆ ಮೂರು ಬಾರಿ ಆದರೂ  ಹೋಗಬೇಕಾಗುತ್ತದೆ.


ತಾರಿ ಮರದಿಂದ ಹೆಚ್ಚು ಕಡಿಮೆ ಒಂದು ತಿಂಗಳವರೆಗೆ ನಾವು ನಿರಂತರವಾಗಿ ಕಲಿ ತೆಗೆಯಬಹುದು. ಈರೋಳ್(ತಾಳೆಹಣ್ಣು) ಇರುವ ಗೊನೆ ಆದರೆ ಎರಡು ತಿಂಗಳವರೆಗೂ ಕಲಿ ತೆಗೆಯಬಹುದು. ಕೇವಲ ಗೊನೆ ಆದರೆ ಹೆಚ್ಚೆಂದರೆ ಒಂದು ತಿಂಗಳು ಅಷ್ಟೇ.ಅದೇ ತೆಂಗಿನ ಮರದಿಂದ ಮೂರು ತಿಂಗಳವರೆಗೆ ತೆಗೆಯಬಹುದು. ಈಂದ್ ಮರದಿಂದ ಹೆಚ್ಚು ಕಡಿಮೆ ನಾಲ್ಕು ತಿಂಗಳವರೆಗೆ ಕಲಿ ತೆಗೆಯಬಹುದು. ಇಷ್ಟೇ ಸಮಯ ಕಲಿ ತೆಗೆಯಬಹುದು ಎಂದು ನಿರ್ಧಿಷ್ಟವಾಗಿ ಹೇಳಲಾಗದು.. ಅದೆಲ್ಲವೂ ಪ್ರಾಕೃತಿಕವಾಗಿ ಕಲಿ ಬಂದಂತೆ ಸಂಗ್ರಹಿಸುತ್ತಾ ಹೋಗುವ ಪ್ರಕ್ರಿಯೆ. ಕೇವಲ ಅನುಭವದ ಅಂದಾಜಿನಲ್ಲಿ ಇಷ್ಟು ಸಮಯ ತೆಗೆಯಬಹುದು ಎಂದಷ್ಟೇ ಹೇಳಬಹುದು. 


ತಾರಿ ಮರದ ಗೊನೆಯಲ್ಲಿ ಈರೋಳ್ ಇದ್ದರೆ ನಿರಂತರವಾಗಿ ಐದಾರು ದಿನ ಆ ಗೊನೆಯನ್ನು ಗುದ್ದಬೇಕಾಗುತ್ತದೆ. ಆ ನಂತರವೇ ನಮಗೆ ಕಲಿ ಸಿಗುವುದು. ಖಾಲಿ ಗೊನೆಯಾದರೆ ಈ ರೀತಿಯಾಗಿ ಗುದ್ದಬೇಕಾಗಿಲ್ಲ. ಇನ್ನು ಈಂದ್ ಮರ ಆದರೆ ಸುಮಾರು 45 ದಿನಗಳವರೆಗೂ ಅದರ ಚೌರಿಯನ್ನು(ಗೊಂಚಲು)ಆ ಕಡೆ ಈ ಕಡೆ ತಿರುಗಿಸುತ್ತಾ ದಿನಾಲೂ ನೈಯುತ್ತಲೇ ಇರಬೇಕಾಗುತ್ತದೆ. ತೆಂಗಿನ ಮರದ ಗೊನೆಗೆ ಪ್ರತೀ ಸಲ ಕಲಿ ತೆಗೆಯುವಾಗಲೂ ಗುದ್ದುತ್ತಲೇ  ಇರಬೇಕಾಗುತ್ತದೆ. 


ಈ ಕಲಿ ಸಂಗ್ರಹಕ್ಕಾಗಿ ಇಟ್ಟು ಬರುವ ಮಡಿಕೆಯತ್ತ ಈ ಕಂಚಿಕರ,ಪಿಲಿ ಕುಂಡೇಲು, ಜೇನು ಹುಳ, ಚಿಟ್ಟೆಗಳು ಕೂಡ ಆಕರ್ಷಿತವಾಗುತ್ತದೆ. ಅವುಗಳು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಕಲಿ ಕುಡಿದು ಅಮಲು ಆಗಿ ಅಲ್ಲೇ  ತಲೆ ತಿರುಗಿ ಬೀಳುತ್ತವೆ. ಕೆಲವೊಮ್ಮೆ ಮಡಿಕೆಗೆ ಕೂಡ ಅವುಗಳು ಅಮಲೇರಿ ಬಿದ್ದು ಬಿಡುತ್ತದೆ.ಅದಕ್ಕಾಗಿ ಮಡಿಕೆಯಿಂದ ಪ್ರತೀ ಸಲ ಕಲಿ ತೆಗೆಯುವಾಗಲೂ ಸೋಸುತ್ತಾರೆ. ಬೆರು(ಮರಬೆಕ್ಕು)ಅಂತ ಪ್ರಾಣಿ ಇದೆ, ಅದು ಮರಕ್ಕೆ ಹೋಗಿ ಈ ಕಲಿ ಕುಡಿದು ತನ್ನ ಹೊಟ್ಟೆ ಉಬ್ಬರಿಸಿಕೊಂಡು ಡುಬ್ಬ ಅಂತ ಕೆಲವೊಮ್ಮೆ ಕೆಳಕ್ಕೆ ಬೀಳುವುದೂ ಇದೆ. ಆಗ ಅದನ್ನು ಸುಲಭವಾಗಿ ಹಿಡಿಯಬಹುದು. 


ಬೆಳಿಗ್ಗೆ ಬೆಳಿಗ್ಗೆ ತೆಗೆಯುವ ಕಲಿ ಬಹಳ ಸಿಹಿ. ಅದಕ್ಕೆನೇ ಮುಗಿ ಬೀಳುವ ಜನರು ಇದ್ದಾರೆ. ಬೆಳಿಗ್ಗೆ ಕಲಿ ತೆಗೆಯುವ ಸಮಯದಲ್ಲಿ ನೇರವಾಗಿ ಕಲಿ ತೆಗೆಯುವ ಮರದ ಕೆಳಗೆಯೇ ಒಂದು ಬಾಟಲ್ ಹಿಡಿದುಕೊಂಡು ನಿಂತು ಬಿಡುತ್ತಾರೆ. ಸಮಯ ಹೊದಂತೆ ಸಿಹಿ ಕಲಿ,ಪುಳಿ(ಹುಳಿ) ಕಲಿ ಆಗಿ ಬದಲಾಗುತ್ತದೆ. ಸಂಜೆಯ ನಂತರ ಅದು ಅಡುಗೆಗೆ ಬಳಸ ಬಹುದಾದ ಈಸ್ಟೇ ಆಗಿ ಬಿಡುವುದು. 


ಮಳೆಗಾಲದಲ್ಲಿ ಕಲಿ ತೆಗೆಯಬಹುದಾದರು ಕಲಿ ಆವಾಗ ನೀರು ಸೇರಿ ನೀರಾಗಿ ಇರುತ್ತದೆ ಎಂಬ ಕಾರಣಕ್ಕೆ ಅಷ್ಟಾಗಿ ತೆಗೆಯುವುದಿಲ್ಲ. ಬೇಸಿಗೆ ಕಾಲದಲ್ಲಿ ಕಲಿ ಹೆಚ್ಚಾಗಿ ಆವಿಯಾಗುತ್ತದೆ. ಒಳ್ಳೆಯ ಸಮಯ ಎಂದರೆ ಅದು ಚಳಿಗಾಲವೇ. ಚಳಿಗಾಲದಲ್ಲಿ ಯಥೇಚ್ಛವಾಗಿ ಕಲಿ ಸಿಗುತ್ತದೆ.


ಸಿಹಿ ಕಲಿ ಕುಡಿಯಲು ಒಳ್ಳೆಯದು,ಪುಳಿ(ಹುಳಿ) ಕಲಿ ಅಮಲು ಬರಿಸುತ್ತದೆ.ಕಲಿಯನ್ನು ಈ ಇಡ್ಲಿಗೆ, ದೋಸೆಗೆ ಹುದುಗು ಬರಲು(fermentation process) ಕೂಡ ಉಪಯೋಗಿಸುತ್ತಾರೆ. ನಾಲ್ಕೈದು ತಿಂಗಳು ಈ ಕಲಿಯನ್ನು ಹಾಗೇ ಇಟ್ಟು ಮಾಡುವ "ಸಿರ್ಕ" ವನ್ನು ವಿನಿಗರ್ ನಂತೆ ಅಡುಗೆಗೆ ನಿರಂತರವಾಗಿ ಬಳಸಬಹುದು.ಅದರಿಂದ ಮಾಡಿದ ಅಡುಗೆ ಕೂಡ ಬಲು ರುಚಿ.ಅಷ್ಟೇ ಏಕೆ ತುಳುನಾಡಿನ ವೇರಿ ಫೇಮಸ್ ಓಲೆ ಬೆಲ್ಲ ಮಾಡುವುದು ಕೂಡ ಈ ಕಲಿಯಿಂದಲೇ. ಬೆಳಿಗ್ಗಿನ ಜಾವದ ಸಿಹಿ ಕಲಿಯನ್ನು ಹಾಗೇ ಪಾಕ ಬರುವಂತೆ ಕಟ್ಟಿಗೆ ಒಲೆಯಲ್ಲಿ ಕುದಿಸಿ... ನಂತರ ತಾಳೆ ಮರದ ಎಲೆಯ ರಿಂಗು ಗಳಿಗೆ ಆ ಪಾಕ ಹೊಯ್ದರೆ ರುಚಿ ರುಚಿಯಾದ ಓಲೆ ಬೆಲ್ಲ ಸಿದ್ದವಾಗಿ ಬಿಡುತ್ತದೆ. ಬಹಳ ದುಬಾರಿ ಕೂಡ ಇದು. ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಬಹಳ  ಒಳ್ಳೆಯದು. 


ಉತ್ತಮ ಗುಣಮಟ್ಟದ ಕಲಿ ಆರೋಗ್ಯಕ್ಕೂ ಒಳ್ಳೆಯದಂತೆ. ಮೂತ್ರಕೋಶದಲ್ಲಿ ಕಲ್ಲು ಇದ್ದರೆ ಅದನ್ನು ಕರಗಿಸಲು ಇದು ಸಹಾಯಕ ಎಂಬ ಒಂದು ನಂಬಿಕೆ ಇದೆ. ಮಾತ್ರವಲ್ಲ ಚಿಕ್ಕ ಮಕ್ಕಳು ಕಲ್ಲು ಮಣ್ಣು ತಿಂದಾಗಲೂ ಇದನ್ನು ಕೊಡುವುದಿದೆ. 


ತುಳುನಾಡಿನ ಮೂಲ ಸಂಸ್ಕೃತಿಯಲ್ಲಿ ಕೂಡ ಈ ಕಲಿ ಗೆ ವಿಶೇಷ ಪ್ರಾಶಸ್ತ್ಯ ಉಂಟು.ನಮ್ಮಲ್ಲಿ ಭೂತರಾಧನೆಯಲ್ಲಿ ದೈವಗಳಿಗೆ ಇದನ್ನು ಇಡುವ ಕ್ರಮ ಕೂಡ ಇದೆ. ತುಳುನಾಡಿನ ಪಾಡ್ದೊನ (ಹಾಡು) ದಲ್ಲಿ ಇದನ್ನು ಅಮೃತ ಎಂದೇ ಸಂಭೋಧಿಸಿದ್ದು ಇದೆ.ಸತ್ತವರಿಗೆ ಬಡಿಸುವಾಗ ಕೂಡ ಕಲಿಯನ್ನೇ ಇಡುತ್ತಿದ್ದ ಕ್ರಮ ಇತ್ತು.ಈಗ ಎಲ್ಲ ಆ ಜಾಗವನ್ನು ಗಂಗಸರ(ಆಲ್ಕೋಹಾಲ್) ಆವರಿಸಿಕೊಂಡಿದೆ. 


ನಮ್ಮಲ್ಲಿ ಆಲ್ಕೋಹಾಲ್ ಕುಡಿಯದವರು ಕೂಡ ಕಲಿ ಕುಡಿಯುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೆ ಅಂತಹದ್ದೇನು ಪ್ರಾಬ್ಲಂ ಇಲ್ಲ. ಚಿಕ್ಕ ಮಕ್ಕಳು, ಪಿಟ್ಟೆಗಳು ಕೂಡ ಕಲಿ ಕುಡಿದರೆ ಮನೆಯಲ್ಲಿ ಹೆಚ್ಚಾಗಿ ಯಾರೂ ಬೈಯುವುದಿಲ್ಲ. ಹೇಗೆ ವೈನ್ ಕುಡಿಯುತ್ತೆವೋ ಹಾಗೆ ನಮಗೆ ಕಲಿ. ಅದೊಂದು ಆಲ್ಕೋಹಾಲಿಕ್ ಪಾನೀಯ ಆಗಿರುವುದರಿಂದ ಜಾಸ್ತಿ ಕಲಿ ಕುಡಿದರೆ " ಪಿಲಿ ನಲಿಪುನ" (ಹುಲಿ ಕುಣಿತ ಮಾಡುವ) ಎಲ್ಲಾ  ಸಾಧ್ಯತೆಗಳ ದಟ್ಟವಾಗಿ ಇರುತ್ತದೆ.ಹಿತ ಮಿತವಾಗಿ ಇದ್ದರೆ ಎಲ್ಲವೂ ಒಳ್ಳೆಯದೇ.


ಆದರೂ ನಾನು ನಿಮಗೆ  ಕಲಿ ಕುಡಿಯಿರಿ ಎಂದು ಖಂಡಿತವಾಗಿಯೂ  ಪ್ರೋತ್ಸಾಹ ಮಾಡಲಾರೆ,ಆದರೆ ನೀವೊಬ್ಬರು  ಖಡಕ್ ಆಗಿ ಖಾರ ಖಾರವಾಗಿ ತಿನ್ನುವವರಾದರೆ... ಖಂಡಿತವಾಗಿಯೂ ಕಲಿ ಪಾಯಿಂಟ್ ಗೆ ಹೋಗಿ ರುಚಿ ರುಚಿಯಾದ ಫಿಶ್ ಐಟಂ ಗಳನ್ನು,ತರು ಭೂತಾಯಿ ಪ್ರೈ ಅನ್ನು,ಕೋರಿ ಪುಳಿಮುಂಚಿ, ಸುಕ್ಕಗಳನ್ನು ಮರೆಯದೇ ಸವಿಯಿರಿ ಎಂದು ಹೇಳಲು ನಾನು ಮರೆಯಲಾರೆ ಅಷ್ಟೇ. 


.....................................................................................


#ಏನೋ_ಒಂದು 


ab pacchu 

moodubidire

(photo-internet)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ