Vellam
#Vellam
ದಿನವಿಡೀ ಬೆವರು ಸುರಿಸಿ ದುಡಿದು ಸಂಜೆ ಮನೆಗೆ ಹೋಗುವಾಗ ಮಗುವಿಗಾಗಿ ಏನಾದರೂ ಬೇಕರಿಯಿಂದ ತಿಂಡಿ ಕಟ್ಟಿಕೊಂಡು,ಹೆಂಡತಿಗೆ ಮುಡಿಯಲು ಒಂದಷ್ಟು ತಾಜಾ ಮಲ್ಲಿಗೆ,ಮನೆಗೆ ಹಾಲು,ತರಕಾರಿ,ಒಂದು ತೊಟ್ಟೆ ಮೀನು.. ಇಷ್ಟನ್ನು ದಿನವೂ ಕೈಯಲ್ಲಿ ಹಿಡಿದುಕೊಂಡು,ಅಪರೂಪಕ್ಕೆ ಒಮ್ಮೆ ಲಿಮಿಟ್ ನಲ್ಲಿ ಕುಡಿದು ಕತ್ತಲೆ ಆಗುವುದಕ್ಕಿಂತ ಮೊದಲೇ ಮನೆ ಸೇರುವಂತಹ ನಾಯಕ.... ಅವನು ಅಲ್ಲವೇ ಅಲ್ಲ!
ಅವನೊಬ್ಬ ಕುಡುಕ.
ಸಾಮಾನ್ಯ ಅಲ್ಲ... ಅಸಮಾನ್ಯ ಕುಡುಕ ಅವನು.
ಎಷ್ಟು ಕುಡಿತಾನೇ ಅಂದರೆ ಮೂವಿ ತುಂಬಾ ಬರೀ ಕುಡಿತಾನೇ ಇರ್ತಾನೆ.
ಅವನು ಕುಡಿಯುವುದು ಹೋದಲ್ಲಿ ಬಂದಲ್ಲಿ ಪೆಟ್ಟು ತಿನ್ನುವುದು...ಮನೆಯಿಂದ ಸಾಮಾನುಗಳನ್ನು ಕದ್ದು ಮಾರಿ ಕುಡಿಯುವುದು,ಎಲ್ಲಾದರೂ ಯಾರಾದರೂ ಕುಡಿದು ಉಳಿಸಿದ್ದರೆ ಆ ಲೋಟವನ್ನು ನೆಕ್ಕುವುದು,ಮಗಳ ಸ್ಕೂಲ್ ನ ಎದುರು ಕುಡಿದು ಬೀಳುವುದು, ಅಲ್ಲಲ್ಲಿ, ರೋಡ್ ಅಲ್ಲಿ, ಮನೆಯ ಎದುರಲ್ಲಿ ಬಿದ್ದು ಹೊರಳಾಡುವುದು...ಮನೆಯವರು ಅವನು ಮನೆಯ ಸಾಮಾನು ಕದಿಯಬಾರದು ಎಂದು ಅಡಗಿಸಿಡುವುದು,ಮಗುವಿನ ಚೇರ್ ಅನ್ನು ಕೂಡ ಸಂಕೋಲೆಯಿಂದ ಕಂಬಕ್ಕೆ ಕಟ್ಟಿ ಹಾಕುವುದು,ಕೊನೆಗೊಮ್ಮೆ ಹೆಂಡತಿ ಕೈಯಿಂದ ಕೂಡ ಅವನು ಪೆಟ್ಟು ತಿನ್ನುವುದುನ್ನು ನೋಡುವಾಗಲೆಲ್ಲ ತುಂಬಾನೇ ಬೇಜಾರು ಹಿಡಿದು ಹೋಗುತ್ತದೆ.
ಅವನ ಬಡ ಪರಿವಾರದ ಆ ಮನೆಯಲ್ಲಿ ಅವನಿಗೊಬ್ಬಳು ಮುದ್ದಾದ ಹೆಂಡತಿ ಮತ್ತು ಒಬ್ಬಳು ಹೆಣ್ಣು ಮಗಳು.. ಅದೇ ರೀತಿ ಒಟ್ಟಿಗೆ ವಯಸ್ಸಾದ ತಂದೆ ತಾಯಿ ಕೂಡ ಇರುತ್ತಾರೆ. ಹೆಂಡತಿ ಹೊಟ್ಟೆ ಪಾಡಿಗಾಗಿ ಮನೆಯಲ್ಲಿಯೇ ಬಟ್ಟೆ ಹೊಲಿಯುತ್ತಾಳೆ.ಅದೇ ಮನೆಯ ಪ್ರಮುಖ ಸಂಪಾದನೆ. ಆದರೆ ಇವನ ಕೆಲಸ ಕುಡಿಯುವುದು ಮಾತ್ರ. ದಿನವಿಡೀ ಕುಡಿಯುವುದು ಮತ್ತು ಕುಡಿಯುವುದಕ್ಕಾಗಿ ಹಣ ಹೊಂದಿಸಲು ಏನು ಮಾಡುವುದು,ಮನೆಯಲ್ಲಿ ಯಾವುದನ್ನು ಮಾರಿದರೆ ಎಷ್ಟು ಸಿಗುತ್ತದೆ ಎಂದು ದಿನವಿಡೀ ಆಲೋಚನೆ ಮಾಡುವುದು ಅಷ್ಟೇ.. ಹೌದು ಬರೀ ಅಷ್ಟೇ.
ಸಮಾಜ ಅವನನ್ನು ಕೆಟ್ಟವನು ಅನ್ನುತ್ತೆ,ಮಾಡದ ತಪ್ಪಿಗೆ ಕಳ್ಳ ಎಂದು ಹೇಳುತ್ತೆ, ದಿನ ನಿತ್ಯ ಕುಡಿಸಿದ ಗೆಳೆಯರೂ ಕೂಡ ಕೊನೆಯಲ್ಲಿ ಕೆಟ್ಟವ ಎಂದು ಅವನನ್ನು ದೂರ ಇಡುತ್ತದೆ,ಕಟ್ಟಿ ಕೊಂಡ ಹೆಂಡತಿ ಸಂಬಂಧ ಕಡಿದು ಕೊಂಡು ಹೋಗುತ್ತಾಳೆ,ಅಪ್ಪ ಅಮ್ಮ ಮುಖ ತಿರುಗಿಸುತ್ತಾರೆ... ಆದರೂ ಅವನು ಅಂತಹ ಕೆಟ್ಟವನೇನು ನಿಜವಾಗಿಯೂ ಆಗಿರುವುದಿಲ್ಲ.ಅವನು ಜಸ್ಟ್ ಕುಡಿತಾನೆ ಅಷ್ಟೇ..
ಸಾಮಾನ್ಯ ಜನರು ಕುಡಿಯುವ ನೀರಿನಂತೆ,ಉಸಿರಾಡುವ ಗಾಳಿಯಂತೆ... ಅವನು ಕುಡೀತಾನೆ.ಅದು ಬಿಟ್ಟರೆ ಅವನಿಗೆ ಬದುಕಲು ಗೊತ್ತಿಲ್ಲ,ಅದಿಲ್ಲದಿದ್ದರೆ ಅವನು ನೀರಿನಿಂದ ಮೇಲೆ ಬಂದ ವಿಲ ವಿಲ ಒದ್ದಾಡುವ ಮೀನು.ಇಡೀ ಚಿತ್ರದಲ್ಲಿ ಅವನು ನೀರಿಗಿಂತ ಜಾಸ್ತಿ ಕುಡಿದದ್ದು ಬರೀ ಎಣ್ಣೆಯನ್ನೇ. ಕುಡಿಯಲು ಎಣ್ಣೆ ಸಿಗದೇ ಇದ್ದಾಗ ಆಲ್ಕೋಹಾಲ್ ಅಂಶ ಇರುವ ಯಾವುದೇ ಸಿಕ್ಕಿದರೂ ಅದನ್ನು ಗಟ ಗಟನೇ ಕುಡಿದು ಬಿಡುತ್ತಾನೆ ಅವನು.. ಮನೆಯ ಮಗುವಿನ ಸಿರಫ್ ಆಗಲಿ, ಆಸ್ಪತ್ರೆಯಲ್ಲಿ ಸೂಚಿ ಚುಚ್ಚಲು ಬಳಸುವ ಸ್ಪಿರಿಟ್ ಆಗಲಿ, ಗುಜಿರಿಗೆ ಹಾಕಿರುವ ಖಾಲಿ ಮಧ್ಯದ ಬಾಟಲ್ ನ ಅಡಿಯಲ್ಲಿ ಉಳಿದಿರುವ ಸ್ವಲ್ಪವೇ ಸ್ವಲ್ಪ ಪಸೆ ಆಗಲಿ.. ಅವನ ಕ್ಷಣ ಮಾತ್ರದ ಬಾಯಾರಿಕೆಯನ್ನು ಕಡಿಮೆ ಮಾಡಬಲ್ಲದು.
ಕೊನೆಗೊಮ್ಮೆ ಎಲ್ಲರೂ ಅವನನ್ನು ಬಿಟ್ಟು ಹೋದ ಮೇಲೆ ಅವನಿಗೂ ಅವನ ಕುಡಿತದ ಮೇಲೆ ಬೇಜಾರು ಬಂದು ಬಿಡುತ್ತದೆ. ಅಳುತ್ತಾನೆ.. ತುಂಬಾನೇ ಅತ್ತು ಕಣ್ಣೀರಾಗಿ ಬಿಡುತ್ತಾನೆ.ತಾನು ತಪ್ಪು ಮಾಡಿದೆ ಎಂದು ಬಹಳನೇ ಮರುಗುತ್ತಾನೆ,ಕೊರಗುತ್ತಾನೆ..
ನಿಮಗೆ ಅನ್ನಿಸಬಹುದು ಅವನು ಇನ್ನು ಮುಂದೆ ಕುಡಿಯುವುದನ್ನು ನಿಲ್ಲಿಸಬಹುದು ಎಂದು.
ಇಲ್ಲ..
ಅವನು ಪುನಃ ಕುಡಿತಾನೇ..!!
ಕುಡಿದು ಪುನಃ ಅಲ್ಲಲ್ಲಿ ಬೀಳುತ್ತಾನೆ..
ಮುಂದೆ ಯಾವುದಾದರೂ ಒಂದು ದಿನ ಕುಡಿತ ನಿಲ್ಲಿಸುತ್ತಾನಾ..? ಅಥವಾ ಕುಡಿದು ಕುಡಿದು ಅವನಿಗೆ ಏನಾಗುತ್ತದೆ? ಕಥೆಯಲ್ಲಿ ನಿಜವಾಗಿಯೂ ಬೇರೆ ಏನಾದರೂ ಸಂಭವಿಸುತ್ತಾ..? ಅದನ್ನು ನೀವು ಮೂವಿಯಲ್ಲಿಯೇ ನೋಡಬೇಕು.
ನೈಜ ಘಟನೆ ಆಧಾರಿತ ಹೊಸ ಮಲಯಾಳಂ ಮೂವಿ ಇದು.
ಜಯಸೂರ್ಯನದ್ದು ಅತ್ಯಧ್ಭುತ ಅಭಿನಯ ಇಲ್ಲಿ.
ಅವನು ಕುಡಿದೇ ಅಭಿನಯಿಸಿದ್ದಾನೋ ಅಥವಾ... ಅಥವಾ ಅವನ ಅಭಿನಯವೇ ಅಂತಹದ್ದೋ ಎಂದು ನಮ್ಮನ್ನು ಒಮ್ಮೆ ದಂಗು ಬಡಿಸಿ ಬಿಡುತ್ತಾನೆ ಈ ಚಂದದ ಗಡ್ಡದ ಜಯಸೂರ್ಯ .
ಸಂಯುಕ್ತ ಮೆನನ್, ಶ್ರೀಲಕ್ಷ್ಮೀ, ಸಿದ್ದಿಕ್ಕಿ ಮೊದಲಾದವರು ಇದ್ದಾರೆ...
ಮೂವಿಯ ಲೋಕೆಷನ್ ಬಗ್ಗೆ ಎಂದಿನಂತೆ ಹೇಳುವುದೇ ಬೇಕಾಗಿಲ್ಲ.ನೀವು ಪ್ರಕೃತಿ ಪ್ರೀಯರಾಗಿದ್ದರೆ ಖಂಡಿತವಾಗಿಯೂ ನಿಮಗಿಲ್ಲಿದೆ ರಸದೌತಣ.ಹೆಚ್ಚಿನ ಮಲಯಾಳಂ ಮೂವಿಗಳಂತೆ ಇಲ್ಲಿಯೂ ಅದೇ ಪಕ್ಕಾ ಹಳ್ಳಿಯ ಚಿತ್ರಣ.ಮಂಗಳೂರಿನ ಯಾವುದೋ ರಿಮೋಟ್ ಹಳ್ಳಿಯ ನಡುವೆ ಮೂವಿ ಪೂರ್ತಿ ನಾವು ಕೂಡ ನಡೆದಾಡಿದಂತೆ,ಓಡಾಡಿದಂತೆ ಭಾಸವಾಗುತ್ತದೆ.ನಿಧಾನಕ್ಕೆ ಹರಿಯುವ ಹೊಳೆಯ ಪಕ್ಕ ಒಂದು ಕಲಿ ಗಡಂಗ್(ಶೇಂದಿ ಅಂಗಡಿ),ಪುಟ್ಟದಾದ ಹೆಂಚಿನ ಹಳ್ಳಿ ಹೋಟೆಲ್,ಊರ ತುಂಬಾ ರಿಕ್ಷಾ ಸವಾರಿ,ತೋಟದ ಬದಿಯ ಮಣ್ಣಿನ ಒಂಟಿ ದಾರಿ..ಹಳೆಯ ಕಾಲದ ಅವನ ಮನೆ.. ಮನೆಯ ಹಿಂದುಗಡೆ ತೆಂಗಿನಕಾಯಿ ಸಿಪ್ಪೆ ಸುಲಿಯುವ ಕಬ್ಬಿಣದ ಸಲಾಕೆ,ಮನೆಯ ಮುಂದೊಂದು ಹುಳಿ ಮಾವಿನಕಾಯಿ ಕೊಡುವ ಗಿಡ,ಆಳವಾದ ಬಾವಿ,ಊರಿನ ದೊಡ್ಡ ಕೆರೆ,ಮತ್ತು ಗುಡ್ಡದ ಮೇಲೊಂದು ಕೆಂಪು ಕಲ್ಲಿನ ಕೋರೆ..ಎಲ್ಲವೂ ಇದೆ. ಮಾತ್ರವಲ್ಲ ಎಲ್ಲದಕ್ಕೂ ಕಥೆಯೊಂದಿಗೆ ಒಂದು ಬೆಸುಗೆ ಗಾಢವಾಗಿ ಇದೆ.ಅವುಗಳೂ ಕಥೆ ಹೇಳಲು ನಿಂತು ಬಿಡುತ್ತವೆ.
ಪಕ್ಕದಲ್ಲಿ ಖಾರದ ಹುಳಿ ಹುಳಿ ಉಪ್ಪಿನಕಾಯಿ ಪ್ಯಾಕೇಟ್ ಇಲ್ಲದಿದ್ದರೂ... ಚೆನ್ನಾಗಿ ಕುಡಿಯುವರಿಗೆ,ಅಷ್ಟೇ ಏಕೆ ಕುಡಿಯದವರಿಗೂ ಕೂಡ ನಶೆ ಏರಿಸಬಲ್ಲ ಮೂವಿ ಇದು.
ಮೂವಿ ತುಂಬಾ ಅವನು ಕುಡಿಯುವುದೇ ಆದರೆ ಮೂವಿ ಏಕೆ ನೋಡಬೇಕು ಅಂತೀರಾ..?
ಅದಕ್ಕೆ ಹೇಳಿದ್ದು... ನೀವು ಮೊದಲು ನೋಡಿ... ಆಮೇಲೆ ಹೇಳಿ...
ನಿಮಗೂ ಇಷ್ಟ ಆಗಬಹುದು 👉#Vellam
Movie_Review
ab
Comments
Post a Comment