ಬಡಿಸುವವನು, ಬಾರಿಸುವವನು ಮತ್ತು ಬದುಕಿಸುವವನು..

 


ವಿಷಯ ಎಂತ ಗೊತ್ತುಂಟಾ... ನನಗೆ ಮೊದಲಿನಿಂದಲೂ ಯಾವುದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಕೊನೆಯಲ್ಲಿ "ಕಾರ್ಯಕ್ರಮದ ಕೊನೆಯಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಇರುವುದು.." ಅಂತ ದಪ್ಪ ಅಕ್ಷರಗಳಲ್ಲಿ ಬರೆದಿದ್ದರೆ,ಆ ಆಹ್ವಾನ ಪತ್ರಿಕೆ ನನಗೆ ಯಾವಾಗಲೂ ಭಯಂಕರ ಇಷ್ಟ ಆಯಿತಾ..


ಚೆನ್ನಾಗಿ ಬಾರಿಸಲು ಕೂಡ ಹೌದು ಅದಕ್ಕಿಂತ ಮೊದಲು ಎಲ್ಲಾ ಐಟಂಗಳ ರುಚಿ ನೋಡುತ್ತಾ ನೋಡುತ್ತಾ ಹಾಗೇ ಎಲ್ಲವನ್ನೂ ಅಚ್ಚುಕಟ್ಟಾಗಿ "ಮೈಂಟೇನ್ " ಮಾಡುತ್ತಲೇ ಬಡಿಸಲು ಕೂಡ ಹೌದು.ನನಗೆ ಬಡಿಸುವುದೆಂದರೆ ಅದೆನೋ ಬಾರೀ ಇಂಟ್ರೆಸ್ಟ್. 



ಊಟದ ಚಪ್ಪರದ ಅಡಿಯಲ್ಲಿ ಇಲ್ಲವೇ ಊಟದ ಹಾಲ್ ನಲ್ಲಿ ಬಹಳ ಸ್ವಾರಸ್ಯಕರ ಘಟನೆಗಳು ನಡೆಯುತ್ತದೆ.ಕೆಲವಂತು  ಹೋಳಿಗೆ ಪಾಯಸಕ್ಕಿಂತಲೂ ಸೊಗಸಾಗಿರುತ್ತದೆ.


ಇಲ್ಲಿ ಮುಖ್ಯವಾಗಿ ಎರಡು ಕಥೆಗಳು.ಒಂದು ಬಡಿಸುವವರದ್ದೇ ಒಂದು ಮಹಾನು  ಕಥೆ ಆದರೆ.. ಮತ್ತೊಂದು ಪಂಕ್ತಿ ಊಟದಲ್ಲಿ ಕುಳಿತುಕೊಂಡು, ಹಾಗೇ ಊಟ ಮಾಡುತ್ತಾ ಪಕ್ಕದಲ್ಲಿ ಕುಳಿತವರೊಂದಿಗೆ ಊರಿನ ಅಧಿಕ ಪ್ರಸಂಗ ಮಾತಾಡುವವರದ್ದೊಂದು ಞಕ್ಕ್ ಞೈ ಯ ಕಥೆ. 


ಮೊದಲು ನಾವು ಬಡಿಸುವ ಕ್ಷೇತ್ರದ ಕಥೆಯತ್ತ ಒಮ್ಮೆ ಕಣ್ಣು ಹಾಯಿಸುವ.. 


ನೋಡಿ ನೀವು ಗಂಡು ಮಕ್ಕಳಾಗಿ ಹುಟ್ಟಿದ ಮೇಲೆ... ಊಟದ ಪಂಕ್ತಿಯಲ್ಲಿ ಸೌಟು ಹಿಡಿದುಕೊಂಡು ಬಡಿಸುವ ಆಸಕ್ತಿ ತೋರಿಸದಿದ್ದರೆ ಊರಿನಲ್ಲಿ ನಿಮಗೆ ನಯಾ ಪೈಸೆ ರೆಸ್ಪೆಕ್ಟೇ  ಇರುವುದಿಲ್ಲ..ಅದರಲ್ಲೂ ಕುಟುಂಬದ ಫಂಕ್ಷನ್ ಗಳಲ್ಲಿ ಬಡಿಸಲು ನೀವು ನಿಲ್ಲದಿದ್ದರೆ ರೆಸ್ಪೆಕ್ಟ್, ಗೌರವ,ಮರ್ಯಾದೆ ಈ ಮೂರು ಕೂಡ  ನಿಮಗಲ್ಲಿ ಇರುವುದಿಲ್ಲ.


ಊಟ ಶುರು ಆದ ಕೂಡಲೇ ಒಬ್ಬೊಬ್ಬರು ಒಂದೊಂದು ಬಾಲ್ದಿ ಸಾರು, ಕೊದ್ದೆಲ್, ಪಲ್ಯ ಹೀಗೆ ಸಿಕ್ಕಿದ್ದನ್ನು ಹಿಡಿದುಕೊಂಡು ವೀರ ಯೋಧರಂತೆ  ಸಭೆಗೆ ಮುನ್ನುಗ್ಗಲೇ ಬೇಕು. ಆಗಲೇ ಅವನು ನಿಜವಾದ ಪುರುಷ ಪುಂಗವ ಎನ್ನಿಸಿಕೊಳುವುದು.ಎಲ್ಲವನ್ನೂ ಬಿಟ್ಟು ಮೊದಲ ಪಂಕ್ತಿಯಲ್ಲೇ ಊಟಕ್ಕೆ ಕುಳಿತುಕೊಂಡರೆ.. ಆವಾಗ ಅವಮಾನ, ಅಪಮಾನ,ಛೀಮಾರಿ, ತೀವ್ರವಾದ ಮುಖಭಂಗ ತಪ್ಪಿದ್ದಲ್ಲ.


ನಾನು ಚಿಕ್ಕಂದಿನಲ್ಲಿ ಬಡಿಸುವಾಗ.. ಬಹಳ ಸುಲಭವಾಗಿ ಬಡಿಸಿ ಎಸ್ಕೇಪ್ ಆಗಬಹುದಾದ ಹಪ್ಪಳ, ಪೋಡಿ,ಲಾಡು..ಗಳನ್ನು ಸೆಲೆಕ್ಟ್ ಮಾಡಿಕೊಂಡು "ಹೇಯ್.. ಹಪ್ಪಳ ನಾನು ಬಡಿಸುವುದು" "ಪೋಡಿ ನಾನು ಬಡಿಸುವುದು.." ಅಂತ ಮೊದಲೇ ರಿಜಿಸ್ಟರ್ ಮಾಡುತ್ತಿದ್ದೆ. ಏಕೆಂದರೆ ಅದನ್ನು  ಒಂದೊಂದೇ ಕೊಟ್ಟು ಬರುವುದು ಅಲ್ವ ಹಾಗಾಗಿ. 


ನಿಜ ಹೇಳಬೇಕೆಂದರೆ ಮೊದಲು ಮೊದಲು ಬಡಿಸುವ ಅಂತಹ ಭಯಂಕರ ಉಮೇದು ನನಗೂ  ಏನು ಇರಲಿಲ್ಲ.ನನ್ನ ಒಬ್ಬ ದೊಡ್ಡ ಮಂಡೆಯ ಫ್ರೆಂಡ್ ಯಾವಾಗಲೂ ಹೇಳ್ತಾ ಇದ್ದ...ಊಟಕ್ಕೆ ಯಾವಗಾಲೂ ಮೊದಲ ಪಂಕ್ತಿಯಲ್ಲಿಯೇ ಕುಳಿತ್ಕೋಬೇಕು.. ಆಗ ಎಲ್ಲಾ ಐಟಂ ಸಿಗ್ತದೆ.. ಕೊನೆಯಲ್ಲಿ ಮೈನ್ ಮೈನ್ ಐಟಂ ಖಾಲಿ ಆಗಿ ಬಿಡ್ತದೆ.. ಎಂದು ಹೇಳಿದ್ದ.


ಅವನು ಜಾಣ,ಹೋದಲ್ಲಿ ಬಂದಲ್ಲಿ ಹಾಗೇ ಮಾಡ್ತ ಇದ್ದ.ಆದರೆ ನನಗೆ  ಆ ತರಹ ಮಾಡುವ ಅವಕಾಶವೇ ಇರಲಿಲ್ಲ, ಏಕೆಂದರೆ ಊಟಕ್ಕೆ ಮೊದಲಿನ ಪಂಕ್ತಿಯಲ್ಲಿ ಕುಳಿತುಕೊಂಡರೆ ಅಮ್ಮ ಕಣ್ಣು ದೊಡ್ಡದು ಮಾಡಿ ಗದರುತ್ತಿದ್ದಳು.. ಹೋಗು ಮೊದಲು ಅಣ್ಣನವರೊಟ್ಟಿಗೆ ಬಡಿಸ್ಲಿಕ್ಕೆ ಸೇರು... ಅಂತ. 


ಮೊದಲಿಗೆ ಆಸಕ್ತಿ ಹುಟ್ಟಿಸದೇ ಇದ್ದರೂ,ಆ ನಂತರ ಬಡಿಸುವುದು ನನ್ನ ಆಲೋಚನೆಯ ದೃಷ್ಟಿಯನ್ನೇ ಬದಲಾಯಿಸಿ ಬಿಟ್ಟಿತು ಮತ್ತು ಬಡಿಸುವುದೇ ಬಹಳ ಇಷ್ಟವಾಗಿ ಬಿಟ್ಟಿತು. 


ಒಂದು ದಿನ ಒಬ್ಬ ಅಣ್ಣ ಬಡಿಸುವುದಕ್ಕಿಂತ ಮೊದಲು ಒಂದು ಲಾಡು ತಿಂದ. ಬಡಿಸುವುದಕ್ಕಾಗಿ ಸಿದ್ದನಾಗಿದ್ದ ನಾನು ಅವನು ಲಾಡು ತಿನ್ನುವುದನ್ನು ರಪ್ಪನೇ ನೋಡಿದೆ.ಕುತೂಹಲದಿಂದ  ನೇರವಾಗಿ ಅವನಲ್ಲಿಯೇ ಹೋಗಿ  ಕೇಳಿದೆ.. ಅಣ್ಣ ಹೀಗೆ ನಾವು ಬಡಿಸುವುದಕ್ಕಿಂತ ಮೊದಲೇ ಲಾಡು ತಿಂದ್ರೆ ತಪ್ಪಾಗಲ್ವಾ.. ಎಂದು.ಅದಕ್ಕೆ ಆ ಅಣ್ಣ ಹೇಳಿದೆ.. ಇಲ್ಲ.. ಇಲ್ಲ.. ನಾನು ಲಾಡು ಸಿಹಿಯಾಗಿ ಇದೆಯೇ ಇಲ್ಲವೇ ಎಂದು ಟೆಸ್ಟ್ ಮಾಡ್ತಾ ಇದ್ದೇನೆ ಇಲ್ಲಿ..ಅಂದ.


ಹಾಗೇ ಅವನು ಟೆಸ್ಟ್ ಮಾಡಿ ಮಾಡಿಯೇ ಒಂದೆರಡು ಲೋಟ ಪಾಯಸ,ಮೂರ್ನಾಲ್ಕು ಗ್ಲಾಸ್ ಮಜ್ಜಿಗೆ, ಹೋಗುವಾಗ ಬರುವಾಗ ಒಂದೆರಡು ಹಪ್ಪಳ, ನಾಲ್ಕೈದು ಪೋಡಿ ಟೇಸ್ಟ್ ಮಾಡಿ ಬಿಟ್ಟ.ಆ ನಂತರ ಅವನು ಊಟ ಮಾಡುವಾಗ ಹೆಚ್ಚೇನೂ ಬಡಿಸಿಕೊಳ್ಳದೇ ಟೆಸ್ಟ್ ಮಾಡುವಾಗ ಯಾವುದು ತಿಂದಿರಲಿಲ್ಲವೋ ಅದನ್ನು ಮಾತ್ರ ಬಡಿಸಿಕೊಂಡು ಊಟ ಮುಗಿಸಿದ.


ಅಂದರೆ ಅನ್ನ, ಸಾರು ಅಷ್ಟೇ.ಏಕೆಂದರೆ ಬಾಕಿ ಉಳಿದದ್ದನ್ನು  ಟೆಸ್ಟ್ ಮಾಡುವ ನೆಪದಲ್ಲಿ ಮೊದಲೇ ಚೆನ್ನಾಗಿ ಬಾರಿಸಿ ಹೊಟ್ಟೆ ತುಂಬಿ ಹೋಗಿತ್ತು ಅವನದ್ದು.ಅನ್ನವನ್ನು ಯಾರೂ ಅಷ್ಟೇನೂ ಟೇಸ್ಟ್ ಮಾಡುವುದಿಲ್ಲವಲ್ಲ ಹಾಗಾಗಿ ಊಟ ಮಾಡುವಾಗ ಅದನ್ನೊಂದನ್ನು ಮಾತ್ರ ಜಾಸ್ತಿ ಬಡಿಸಿಕೊಂಡಿದ್ದ.


ಆ ದಿನ ನನಗೆ ಜ್ಞಾನೋದಯ ಆಗಿದ್ದು ಏನೆಂದರೆ .. ಬಡಿಸುವುದಕ್ಕಿಂತ ಮೊದಲು ಬಡಿಸುವವನು ಕಡ್ಡಾಯವಾಗಿ ಟೇಸ್ಟ್ ನೋಡಿಯೇ ಬಡಿಸುವುದರಿಂದ....ಎಲ್ಲರಿಗೂ ಎಲ್ಲಾ ಐಟಂಗಳ ರುಚಿಯಾದ ಊಟ ಸಿಕ್ಕುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಕೊನೆಯ ಪಂಕ್ತಿಯಲ್ಲಿ ಊಟಕ್ಕೆ  ಕುಳಿತುಕೊಂಡರೂ ಬಡಿಸುವವನಿಗೆ ಮಾತ್ರ ಯಾವ ಐಟಂ ಕೂಡ ಮಿಸ್ ಆಗುವ ಚ್ಯಾನ್ಸ್ ಖಂಡಿತವಾಗಿಯೂ ಇರುವುದೇ ಇಲ್ಲವೆಂದು.ಈ ಮೊದಲು ನನ್ನ ದೊಡ್ಡ ಮಂಡೆಯ ಫ್ರೆಂಡ್ ಹೇಳಿದ್ದ ಲಾಜಿಕ್ ಅನ್ನು ನಾನು ಈ ರೀತಿಯೇ  ಬಡಿಸುವ ಮೂಲಕ ಮಕಾಡೆ ಮಲಗಿಸಿ ಬಿಟ್ಟಿದ್ದೆ. 


ಮತ್ತೊಂದು ಸಲ ಮತ್ತೊಬ್ಬ ಅಣ್ಣ.. ಇದೇ ರೀತಿ ಗೋಬಿ ಮಂಚೂರಿ,ಪಾಲಕ್ ಪನ್ನೀರ್ ಅನ್ನು ಮೊಗೆ ಮೊಗೆದು ಬಡಿಸಿಕೊಂಡು ಟೇಸ್ಟ್  ನೋಡ್ತಾ ಇದ್ದ. ನಾನು ಅವನಲ್ಲಿಯೂ ಕೂಡ ಇದೇ ಕುತೂಹಲದ ಪ್ರಶ್ನೆ ಕೇಳಿದ್ದೆ.. ಅಣ್ಣ ಹೀಗೆ ಮಾಡಿದ್ರೆ ತಪ್ಪಾಗಲ್ವಾ... ಎಂದು.


ಆಹಾ.. ಅವನ ಆ ಒಂದು ಉತ್ತರ ಚಾಣಕ್ಯ ನನ್ನು ಮೀರಿಸುವಂತೆ ಇತ್ತು. ಅವನೇ ನನ್ನ ಕಣ್ಣು ತೆರೆಸಿದ ನಿಜವಾದ  ಬಡಿಸುವ ಗುರು.ಆ ಅಣ್ಣ ನೋಡಿ ಎಷ್ಟು ಸೊಗಸಾಗಿ ಹೇಳಿದ್ದ ಎಂದು. ಅವನು ಅಂದು ನನಗೆ ಹೇಳಿದ್ದ....ಎಂತಹ ತಪ್ಪು.. ಈಗ ಒಂದು ವೇಳೆ ಇದರಲ್ಲಿ ವಿಷ ಇದ್ದರೆ ಇದನ್ನು ತಿನ್ನುವ ಅಷ್ಟೂ ಜನ ಸಾಯಲ್ವಾ... ಒಂದು ರೀತಿಯಲ್ಲಿ ಹೇಳಬೇಕೆಂದರೆ ಮೊದಲು ನಾವು ಎಲ್ಲದರ ಟೇಸ್ಟ್ ನೋಡಿ..ನಮ್ಮ ಪ್ರಾಣವನ್ನು ಪಣಕ್ಕಿಟ್ಟು  ಅವರ ಪ್ರಾಣವನ್ನು ಕಾಪಾಡುವ ನಾವೇ ಅವರುಗಳ ಪಾಲಿನ ನಿಜವಾದ ಜೀವದಾತರು.. ಪ್ರಾಣದಾತರು.. ಮಹಾಮಹಿಮರು.. ಎಂದೆಲ್ಲಾ ಹೇಳಿದ್ದ.


ಅವತ್ತೇ ನನಗೆ ನಾನು ಬಡಿಸುವವ ಎಂದು ಹೇಳಲು ಹೆಮ್ಮೆ ಆಯಿತು ಮತ್ತು ನಾನೂ ಕೂಡ ಹೀಗೆ ಟೇಸ್ಟ್ ನೋಡಿ ನೋಡಿಯೇ ಬಡಿಸುವ ಕಲೆಯನ್ನು ಹೆಚ್ಚು ಮಾಡುತ್ತಾ ಬಂದೆ.ನಂತರ ಊಟಕ್ಕೆ ಕುಳಿತಾಗ ಏನಾದರೂ ತಿಂದು ಏದ್ದೇಳಬೇಕು ಅಲ್ವಾ, ಇಲ್ಲದಿದ್ದರೆ ಮನೆಯವರು ನೋವು ಪಟ್ಟುಕೊಳ್ಳುತ್ತಾರೆ ಎಂದು... ಬರೀ ಅನ್ನ ಹಾಗೂ ಒಂಚೂರು ಸಾರು ಬಡಿಸಿಕೊಂಡು ಊಟ ಮುಗಿಸುತ್ತಿದ್ದೆ. 



ಈ ಬಡಿಸಲು ನಿಂತಾಗ ಬಡಿಸುವವರಿಗೆ ಹಲವಾರು ರೀತಿಯ ಕಿರಿಕಿರಿಗಳು ಇರುತ್ತದೆ.ಎಲ್ಲದಕ್ಕಿಂತ ದೊಡ್ಡ ಮಂಡೆ ಬೆಚ್ಚ ಎಂದರೆ ಈ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವ ಮಂಡೆಗೊಂದು ಮುಂಡಾಸ್ ಇಲ್ಲವೇ ಬೈರಾಸ್ ಕಟ್ಟಿಕೊಳ್ಳುವ ದೊಡ್ಡ ಮಂಡೆಯವರದ್ದು.ಒಬ್ಬರೇ ಇದ್ದರೆ ಅಂತಹ ತಾಪತ್ರಯ ಏನಿಲ್ಲ. ಮಾರ್ಗದರ್ಶನ ಮಾಡುವವರು ಹಲವಾರು ಆದಾಗಲೇ ಬಡಿಸುವವರಿಗೆ ಕಷ್ಟ ಆಗುವುದು. 


ಅವರ ಕೆಲಸ ಇಷ್ಟೇ.. ಈ ಐಟಂ ಅಷ್ಟು ಬಡಿಸು.. ಈ ಐಟಂ ಇಷ್ಟು ಬಡಿಸು ಅಂತ.. ಪದೇ ಪದೇ ಬಂದು ಹೇಳುವುದು.ಆದರೆ ಒಬ್ಬೊಬ್ಬರದ್ದು ಒಂದೊಂದು ಪ್ರಮಾಣ. ಬಡಿಸುವವ ಯಾರ  ಮಾತು ಕೇಳುವುದು..ಅವರು ಅವರಲ್ಲಿ ಸರಿಯಾದ  Understanding ಇಲ್ಲ.. ಅವರುಗಳಿಗೆ ಬಡಿಸುವ ಅನುಭವ ಅಂತು ಮೊದಲೇ ಇರುವುದಿಲ್ಲ. ಅವರ ಮನೆಯ ಫಂಕ್ಷನ್ ಅಲ್ವಾ.. ಹಾಗಾಗಿ ಅವರೆಲ್ಲರ ಮಾತಿಗೆ ಬೆಲೆ ಕೊಡಲೇ ಬೇಕಾಗುತ್ತದೆ. 


ಬಫೆಯಲ್ಲಿ  ಬಡಿಸುವುದು ದೊಡ್ಡ ವಿಷಯವಲ್ಲ.ಈ ಪಂಕ್ತಿಯಲ್ಲಿ ಬಡಿಸುತ್ತಾರೆ ಅಲ್ವಾ.. ಅದಕ್ಕೊಂದು ದೊಡ್ಡ ನೀತಿ ನಿಯಮವೇ ಉಂಟು. ಅಂದರೆ  ಉಪ್ಪಿನಕಾಯಿ ಎಲ್ಲಿ ಹಾಕಬೇಕು, ಪಲ್ಯ ಎಲ್ಲಿ ಹಾಕಬೇಕು, ಕೊದ್ದೆಲ್ ಎಲ್ಲಿ ಹಾಕಬೇಕು.. ಹೀಗೆ ಪ್ರತಿಯೊಂದು ಐಟಂಗಳಿಗೂ ಬಾಳೆ ಎಲೆಯಲ್ಲಿ ಒಂದೊಂದು ಸ್ಥಾನವನ್ನು ಹಿರಿಯರುಗಳು ಹಿಂದಿನಿಂದಲೂ ಫಿಕ್ಸ್ ಮಾಡಿ ಬಿಟ್ಟಿದ್ದಾರೆ. ಈಗಲೂ ಆ ನಿಯಮಗಳನ್ನೇ ಅನುಸರಿಸಿ ಪ್ರತಿಯೊಂದು ಐಟಂಗಳನ್ನು ನಿಗದಿ ಮಾಡಿದ ಆಯಾಯ ಸ್ಥಳದಲ್ಲಿಯೇ ಬಡಿಸಬೇಕು..


ಪಂಕ್ತಿ ಊಟದಲ್ಲಿ ಹೆಚ್ಚಾಗಿ ವಯಸ್ಸಾದ ಹಿರಿಯರು ಇದ್ದೇ ಇರುತ್ತಾರೆ. ಅವರುಗಳು ಎಂದೂ ನಿಯಮ ಮುರಿದವರಲ್ಲ. ಅವರ ಊಟದ ಎಲೆಯಲ್ಲಿ ಬಡಿಸುವವನು ಕೂಡ  ಬಡಿಸುವ ನಿಯಮ ಮುರಿಯುವುದು ಅವರಿಗೆ ಇಷ್ಟ ಆಗುವುದಿಲ್ಲ. ನನಗೆ ಚಿಕ್ಕಂದಿನಿಂದಲ್ಲಿ ಮೊದಲು ಮೊದಲು ಐಟಂಗಳಿಗೆ ಎಲೆಯಲ್ಲಿ ನಿಗದಿಯಾದ ಅವುಗಳ ಸರಿಯಾದ ಸ್ಥಳ  ಗೊತ್ತಾಗುತ್ತಿರಲಿಲ್ಲ..ಹಾಗಾಗಿ ಎಲ್ಲೆಲ್ಲೋ ಬಡಿಸುತ್ತಿದ್ದದ್ದು ಉಂಟು. ಆಗ ಅವರು ಒಮ್ಮೆಲೇ ತಲೆ ಎತ್ತಿ ನನ್ನನ್ನೇ  ನೋಡಿ... ಇವನು ಯಾವನು ಮರ್ರೆ ಎಂದು ಲುಕ್ಕು ಕೊಡುವುದು ಮಾತ್ರವಲ್ಲ.. ಊಟದ ಸಭೆಯಲ್ಲಿ ಜೋರಾಗಿ ಹೇಳಿ ಮರ್ಯಾದೆ ಕೂಡ ತೆಗಿದದ್ದು ಉಂಟು.ನಾನು ಎಷ್ಟೋ ಸಲ ಹಾಗೆ ಮಾಡಿ ಹಿರಿಯ ಜೀವಗಳಿಂದ ಚೆನ್ನಾಗಿ ಉಗಿಸಿಕೊಂಡದ್ದೇನೆ.ಹಾಗಾಗಿ ಈಗ ಎಲ್ಲವನ್ನೂ ಸರಿಯಾದ ಸ್ಥಳದಲ್ಲಿಯೇ ಬಡಿಸಲು ಕಲಿತಿದ್ದೇನೆ.



ಬಡಿಸುವಾಗ ಬೇರೆ ಎಲ್ಲ ಬಹಳ ಸುಲಭವಾಗಿ ಸುಲಲಿತವಾಗಿ ಬಡಿಸಿ ಬರಬಹುದು,ಆದರೆ ನೀರಿನಂತೆ ಹರಿದು ಹೋಗುವ ಈ ಟೊಮೆಟೋ ಸಾರು ಬಡಿಸುವುದೇ ಕಷ್ಟವೇ. ಹಿಂದೆ ಸಾರು ಬಡಿಸುವ ಸಮಯ  ಬಂದಾಗ ಹೆಚ್ಚಿನವರು ಹಿಂದೆ ಮುಂದೆ ನೋಡುತ್ತಿದ್ದಾಗ ಏಕೆ ಹೀಗೆ ಎಂದು ಅನಿಸಿತು.ಆವಾಗ ಒಬ್ಬ ಫ್ರೆಂಡ್ ಹೇಳಿದ... ಏಕೆಂದರೆ ಸಾರು ಬಡಿಸುವಾಗ ಬಹಳ ಜಾಗ್ರತೆ ಬೇಕು, ಓಟ್ರಾಸಿ ಓಡುತ್ತಾ ಸಾರು ಬಡಿಸಿದರೆ ಊಟ ಮಾಡುವವರ ಮೈ ಮೇಲೆ ಎಲ್ಲಾ ಚೆಲ್ಲುವ ಚ್ಯಾನ್ಸ್ ಇರುತ್ತದೆ ಎಂದು.


ಅದು ಹೌದು ಮಾತ್ರ, ಒಮ್ಮೆ ಒಬ್ಬರು ಅಂಕಲ್ ಗೆ  ನಾನು ಸಾರು ಬಡಿಸಿದಾಗ ಸಾರಿನಲ್ಲಿ ಇದ್ದ ಒಂದು ಟೊಮೆಟೋ ತುಂಡು ಅವರ ಬಿಳಿ ಬಣ್ಣದ ಶರಟಿನ ಜೇಬಿಗೆ ಹಾರಿ.. ಅವರು ಕೆಂಡಾ ಮಂಡಲ ಆಗಿ.. "ಸೈತೆ ಮಾರಿ.." (ಹುಡುಗನಿಗೆ ಸರಿಯಾಗಿ ಬಡಿಸ್ಲಿಕ್ಕೆ ಬರುವುದಿಲ್ಲ) ಎಂದು ಕೆಂಡಾಮಂಡಲ ಆಗಿದ್ದು ಈಗಲೂ ನನಗೆ ಸರಿಯಾಗಿ ನೆನಪಿದೆ. 



ಆ ನಂತರ ಎಲ್ಲವನ್ನೂ  ನಿರಂತರವಾಗಿ ಬಡಿಸಿ ಬಡಿಸಿ,ಹಾಗೇ ಅಭ್ಯಾಸ ಆಗಿ ಹೋಯಿತು. ನನಗೆ ಈ ಗುಜ್ಜೆ,ಗುಳ್ಳ, ಕೆಂಬುಡೆ ಹಾಕಿ ಮಾಡುವ ಕೊದ್ದೆಲ್ ಎಂದರೆ ಬಹಳ ಇಷ್ಟ. ಹೆಚ್ಚಾಗಿ  ಅದನ್ನೇ ಜಾಸ್ತಿಯಾಗಿ ಬಡಿಸಲು ಹೋಗುವುದರಿಂದ ನನಗೆ "ಕೊದ್ದೆಲ್ ಪಚ್ಚು "ಎನ್ನುವ ಬಿರುದೇ ಊರಿನಲ್ಲಿ ಸಿಕ್ಕಿತು. 


ಇನ್ನು ಪಂಕ್ತಿ ಊಟದಿಂದ ಬಫೆ ಊಟಕ್ಕೆ ಬಂದರೆ ಅಲ್ಲಿ ಬಡಿಸುವುದು ಸುಲಭವೇ ಆದರೂ ಅಲ್ಲಿ ಬಡಿಸುವವರಿಗೆ ಬುದ್ದಿವಾದ ಹೇಳುವವರು ಜಾಸ್ತಿ. ಅಪ್ಪಿ ತಪ್ಪಿ ಅವರ ಪ್ಲೇಟ್ ಗೆ ಸೌಟು  ತಾಗಿದರೆ.. ಬಡಿಸಲು ಒಂದು ಶಿಸ್ತು ಗೊತ್ತಿಲ್ಲ.. ಎಂದು ಬೈಯುತ್ತಾರೆ. ಆದರೆ ಅದರಲ್ಲಿ ಬಡಿಸುವವರ ತಪ್ಪಿಗಿಂತ ಪ್ಲೇಟ್ ಹಿಡಿಯುವವರ ತಪ್ಪು ಕೂಡ ಅಷ್ಟೇ ಇರುತ್ತದೆ. ಪ್ಲೇಟ್ ಅನ್ನು ಮೇಲೆ ಕೆಳಗೆ ಮಾಡುತ್ತಲೇ ಇದ್ದರೆ,ಬಡಿಸುವವನ ಸೌಟು ತಾಗದೇ ಇರುತ್ತದೆಯೇ.. ಪಂಕ್ತಿ ಊಟದಲ್ಲಿ ಆದರೆ ಎಲೆ ಒಂದೇ ಕಡೆ ಸ್ಥಿರವಾಗಿ ಇರುವುದರಿಂದ ಎಲೆಗೆ ಸೌಟು ತಾಗದಂತೆ ಚಂದ ಮಾಡಿ ಬಡಿಸುತ್ತಾ ಹೋಗಬಹುದು.


ಕೆಲವರು ಎರಡು ಮೂರು ಸಲ ಬಫೆಯಲ್ಲಿ  ಪಾಯಸ ಬಡಿಸಿಕೊಂಡು ಆದ ಮೇಲೆ ನಮಗೆ ಬುದ್ದಿ ಮಾತು ಹೇಳುವುದು ಉಂಟು... ಎಲ್ಲರಿಗೂ ಪಾಯಸ ಕೇಳಿ ಕೇಳಿ ಬಡಿಸ್ಬೇಕು ಆಯಿತಾ... ಸ್ವಲ್ಪ ಬಾಯಿ ಬಿಟ್ಟು ಮಾತಾಡ್ಬೇಕು ನೀವು ಹುಡುಗರು... ಅದಕ್ಕೆ ನಾವು ಅವರಲ್ಲಿಯೇ.. ಆಂಟಿ ನಿಮಗೆ ಇನ್ನೂ ಸ್ವಲ್ಪ ಪಾಯಸ ಬಡಿಸುವನಾ ಎಂದು ಕೇಳಿದರೆ.. ನಿಲ್ಲು ಮಾರಾಯ.. ತಟ್ಟೆಯಲ್ಲಿ ಇರುವ ಪಾಯಸ ಮೊದಲು ಖಾಲಿ ಆಗಲಿ,ಆಮೇಲೆ ಲೋಟದಲ್ಲಿ ಒಂಚೂರೇ  ಪಾಯಸ ಕುಡಿಯುವೆ ಎಂದು ಹೇಳಿ ರಪ ರಪ  ತಟ್ಟೆಯ ಪಾಯಸ ಖಾಲಿ ಮಾಡಿ, ಪಾಯಸ ಬಡಿಸುವವರಿಗೆ ಭಯಂಕರವಾಗಿ ಪ್ರೋತ್ಸಾಹಿಸಿ ಮನಗೆದ್ದ ಘಟನೆಗಳು ಕೂಡ ಸಾಕಷ್ಟು ಉಂಟು. ಅಂದರೆ ಬಡಿಸುವವರಿಗೆ ಬೇಜಾರು ಆಗಬಾರದು ಎಂದೇ ಅವರು ಬಡಸಿಕೊಳ್ಳುವುದೇ ಹೊರತು ಅವರಿಗಾಗಿ ಅಲ್ಲ.ಅಂತವರು ನನಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ.



ಬಫೆಯಲ್ಲಿ ದೊಡ್ಡ ಕಿರಿಕಿರಿ ಎಂತ ಗೊತ್ತುಂಟಾ ಯಾವುದೋ ಒಂದು ಮೈನ್ ಐಟಂ ಖಾಲಿ ಆಗುತ್ತಾ ಬರುವಾಗ ಅದಕ್ಕೆಯೇ  ಜನ ಮುತ್ತಿಗೆ ಬೀಳುವುದು. ಆವಾಗ ನಾವು ಸ್ವಲ್ಪ ನೋಡಿಕೊಂಡು ಕೈ ಚಿಕ್ಕದು ಮಾಡಿ ಸ್ವಲ್ಪ ಸ್ವಲ್ಪವೇ adjust ಮಾಡಿ ಬಡಿಸಬೇಕಾಗುತ್ತದೆ. ಆವಾಗಲೂ ಜನರು ಕ್ರೋಧಗೊಂಡು.. ಆಕ್ರೋಶ ಭರಿತರಾಗಿ.. ಹಾಕು ಮರ್ರೆ ಸ್ವಲ್ಪ... ಮನೆಯಿಂದ ತಂದು ಹಾಕಿದಾಗ ಹಾಗೆ ಮಾಡ್ತಾನೆ.. ಎಂದು ಉಗ್ರ ಉಗ್ರ ಆಗಿ ನಮ್ಮ ಮುಖಕ್ಕೆಯೇ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕಿ ಹೋಗುತ್ತಾರೆ. 




ಇನ್ನು ಬಡಿಸುವುದರಿಂದ ಮುಂದುವರಿದು ಕುಳಿತುಕೊಂಡು ಸೊಗಸಾಗಿ ಬಾರಿಸುವುದರತ್ತ ಗಮನ ಹರಿಸುವ.ಅದರಲ್ಲೂ ಪಂಕ್ತಿ ಭೋಜನದ ಕುರಿತೇ ವಿಶೇಷವಾಗಿ ಮಾತಾಡುವ.. 


ನಾವು ಯಾವತ್ತಾದರೂ ಒಬ್ಬರೇ ತುಂಬಾ ಅಪರಿಚಿತರ ಮದುವೆಗೋ,ಅಥವಾ ಯಾವುದೋ ಫಂಕ್ಷನ್ ಗೋ ಹೋದರೆ..ಗೆಳೆಯರು, ಗುರುತದವರು ಯಾರೂ ಇಲ್ಲದೇ.. ಒಬ್ಬರೇ ಏಕಾಂಗಿಯಾಗಿ ಕುಳಿತುಕೊಂಡು ಊಟ ಮಾಡಬೇಕಾಗುತ್ತದೆ. ಆಗ ನಮ್ಮ ಅಕ್ಕ ಪಕ್ಕ ಊಟಕ್ಕೆ ಕುಳಿತುಕೊಳ್ಳುತ್ತಾರೆ ನೋಡಿ ಕೆಲವೊಮ್ಮೆ ಅವರಷ್ಟು interesting character ಬೇರೆ ಯಾರೂ ಇರುವುದಿಲ್ಲ. ಅಲ್ಲೊಂದು ಪರಸ್ಪರ  ಸಂಹವನ ಸಾಧ್ಯ ಆದರೆ.. ಊಟದಷ್ಟೇ ಸೊಗಸು.. ಊಟ ಮಾಡಿದ ನೆನಪು ಕೂಡ.


ನನಗೆ ಹಿಂದಿನಿಂದಲೂ ಈ ಎಲೆಗೆ ತಿಳಿ ಸಾರು ಹಾಕಿಕೊಳ್ಳುವುದು ಅಂದರೆ ಭಯಂಕರ ಕಿರಿಕಿರಿ. ಅದು ಎಲೆಯ ಮೇಲೆ ಹಾಗೇ ಓಡಾಡಿ ಕೊನೆಗೇ  ನೆಲವನ್ನೇ ಸೇರುವುದು..ಚಿ. ಉದಯಶಂಕರ್ ಬರೆದಂತೆ.. "ಓಡುವ ನದಿ ಸಾಗರವ ಸೇರಲೆಬೇಕು,ನಾನು ನೀನು ಎಂದಾದರು ಸೇರಲೆ ಬೇಕು, ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು.." ಎಂದು ಸಾರು ಕೂಡ ಬಾಳೆ ಎಲೆ ಮೇಲೆ ಎಲ್ಲಾ ಕಡೆ ಒಡಾಡಿ ನೆಲ ಸೇರಲು ಹಾತೊರೆಯುತ್ತದೆ. ಅದನ್ನು ಕೈಯಲ್ಲಿಯೇ ತಡೆ ಒಡ್ಡುತ್ತಾ ಕೂತರೇ ಊಟ ಸಾಗದು. ಹಾಗಾಗಿ ನಾನು ಸಾರಿನ ಎದುರಿನಲ್ಲಿ ಪ್ರತೀ ಸಲವೂ ತಲೆಬಾಗಬೇಕಾಗಿ ಬರುತ್ತಿತ್ತು. 


ಒಮ್ಮೆ ಹೀಗೆ ಊಟಕ್ಕೆ ಕುಳಿತಾಗ ಅಜ್ಜ ಒಬ್ಬರು ನನ್ನ ಪಕ್ಕ ಕುಳಿತಿದ್ದರು. ಒಂದೊಂದೇ ಪದಾರ್ಥಗಳು ಬಂದವು. ನಂತರ ಅನ್ನ ಬಂತು. ಇನ್ನೇನು ಸಾರು ಬರಬೇಕಿತ್ತು. ನಾನು ಅಜ್ಜನನ್ನೇ ಗಮನಿಸುತ್ತಿದ್ದೆ. ಅಜ್ಜ ಅನ್ನದಲ್ಲಿ ಒಂದು ಕೋಟೆ ಕಟ್ಟಲು ಶುರು ಮಾಡಿದರು.."ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ

ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು..." ಹಾಡು ನೆನಪಿಗೆ ಬಂತು.


ಅಜ್ಜ ಅದು ಯಾಕೆ ಹಾಗೆ ಮಾಡುತ್ತಿದ್ದೀರಿ.. ಎಂದು ಮೆಲ್ಲನೆ ಅವರನ್ನೇ  ಕೇಳಿದೆ. ಅದಕ್ಕೆ ಅವರು ಹೇಳಿದರು... ನೋಡು ಮಗು ಈ ರೀತಿ ಅನ್ನದ ಕೋಟೆ ಮಾಡಿ ನಡುವಲ್ಲಿ ಸಾರಿಗೆ ಜಾಗ ಮಾಡಿ ಕೊಟ್ಟರೆ.. ಸಾರು ಎಲೆ ಮೇಲೆ ಓಡಾಡುವುದಿಲ್ಲ.. ಅಂದರು ಅಜ್ಜ.


ಆಹಾ.. ಜಲಸಂರಕ್ಷಣೆ ಮಾಡಿದಂತೆಯೇ ಸಾರು ಸಂರಕ್ಷಣೆಯ ಜಾಣ್ಮೆ ಹಾಗೂ ತಂತ್ರವದು. ನನಗೆ ಅವರ ಅನುಭವದ ಆ  ಟೆಕ್ನಿಕ್ ಹಿಡಿಸಿತು.. ಈಗಲೂ ಕೆಲವೊಮ್ಮೆ ಸುಮ್ಮನೆ ಅನ್ನದ ಕೋಟೆ ಕಟ್ಟುವಾಗ ಆ ಅಪರಿಚಿತ ಅಜ್ಜ ನೆನಪಾಗಿ ಬಿಡುವುದಿದೆ.


ನನಗೆ ಊಟಕ್ಕೆ ಕುಳಿತಾಗ ಕೆಲವೊಂದು ಐಟಂಗಳು  ತುಂಬಾನೇ ಇಷ್ಟ.ಕೇಳಿಯೇ ಮತ್ತಷ್ಟು ಹಾಕಿಸಿ ಕೊಳ್ಳುತ್ತೇನೆ. ಉಪ್ಪಿನಕಾಯಿ ನನಗೆ ಪಂಚ ಪ್ರಾಣ. ಅಂಗಡಿಯಿಂದ ತಂದು ಬಡಿಸುವ  ಉಪ್ಪಿನಕಾಯಿ ಸುತರಾಂ ಇಷ್ಟವಿಲ್ಲ.ಮನೆಯಲ್ಲಿಯೇ ಮಾಡಿ ಇಟ್ಟಂತಹ ಅಥವಾ ಫಂಕ್ಷನ್ ಗೆಂದೇ ಮಾಡುವ Instant ಉಪ್ಪಿನಕಾಯಿ ಆದರೂ ಓಕೆ..ಉಪ್ಪಿನಕಾಯಿ ಲೆಕ್ಕಕ್ಕಿಂತ ಅಧಿಕ ಸವಿಯಲು ಬಯಸುವ ಗಿರಾಕಿ ನಾನು.


ನಂತರ ಹಪ್ಟಳ, ಮಜ್ಜಿಗೆ ಗಳು ಖುಷಿ ಕೊಡುತ್ತದೆ. ಪದಾರ್ಥದಲ್ಲಿ ಗುಜ್ಜೆ ಹಾಕಿ ಮಾಡುವ ಎಲ್ಲವೂ ಇಷ್ಟ ಅದರಲ್ಲೂ ಫೇವರೆಟ್ ಎಂದರೆ ಗಟ್ಟಿಯಾದ ರುಚಿಯಾದ ಕೊದ್ದೆಲ್.ಬೇರೆ ಎಲ್ಲಾ ಇಷ್ಟವಿಲ್ಲ ಎಂದು ಅಲ್ಲ. ಬಡಿಸುವಾಗಲೇ ರುಚಿ ನೋಡಿ ನೋಡಿ ಹೊಟ್ಟೆ ಸಾಕಷ್ಟು ಭರ್ತಿಯಾಗುವುದರಿಂದ ಇನ್ನು ಪುನಃ ಊಟ ಮಾಡುವಾಗಲೂ ಅದನ್ನೇ ತಿಂದರೆ ಕೊನೆಗೆ ಎರಡು ಗ್ಲಾಸು ಮಜ್ಜಿಗೆ ನಾನು ಹೊಟ್ಟೆಯಲ್ಲಿ ಜಾಗ ಎಲ್ಲಿ ಹುಡುಕುವುದು ಎಂಬ ಚಿಂತನೆ ಹಾಗೂ ಮುಂಜಾಗರೂಕತೆ ನನ್ನದು ಅಷ್ಟೇ. 


ಊಟ ಮಾಡುವ ಕ್ರಮ ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ.ಅದಕ್ಕೆ  ನೀವು ಪಕ್ಕದಲ್ಲಿ ಕುಳಿತವರನ್ನು ಒಮ್ಮೆ ಹಾಗೇ ಗಮನಿಸಿ ನೋಡುವ ಮನಸ್ಸು ಮಾಡಬೇಕು. ಕೆಲವರು ಉಪ್ಪಿನಕಾಯಿಯನ್ನು ಪಾಯಸದೊಂದಿಗೆ ಬೆರೆಸಿ ಸವಿಯುತ್ತಾರೆ. ಕೆಲವರು ಪಾಯಸಕ್ಕೆ ಹೋಳಿಗೆಯನ್ನು ಜೋಡಿ ಮಾಡುತ್ತಾರೆ. ಇನ್ನು ಕೆಲವರು ಹೋಳಿಗೆಗೆ ಸ್ವಲ್ಪವೂ ಪಾಯಸ ತಾಗದಂತೆ  ಜಾಗತ್ರೆಯಲ್ಲಿ ಅದನ್ನು ಕೈಯಲ್ಲಿ ಹಿಡಿದುಕೊಂಡೇ  ತಿನ್ನುತ್ತಾರೆ.


ಇನ್ನು ಹಪ್ಪಳ ಇದೆಯಲ್ಲ.. ಅದನ್ನು ಮುರಿಯುವ ಸಂಭ್ರಮವೇ ಬೇರೆ. ನನಗೆ ಹಪ್ಪಳವನ್ನು ಕಡಲೆ ಕರಿಯೊಂದಿಗೆ ಪುಡಿ ಪುಡಿ ಮಾಡಿ ತಿನ್ನುವುದರಲ್ಲಿ ಸುಖ ಜಾಸ್ತಿ. ನೀವು ಕೇರಳಕ್ಕೆ ಹೋದರೆ ಅವರಿಗೆ ಪ್ರತಿಯೊಂದಕ್ಕೂ ಪುಡಿ ಮಾಡಿ ತಿನ್ನಲು ಹಪ್ಪಳ ಮತ್ತು ಬಾಳೆಹಣ್ಣು ಬೇಕೆ ಬೇಕು. ಅವರಿಗೆ ಅದರಲ್ಲೇ ಏನೋ ಒಂದು ಸ್ವರ್ಗ. ಅಲ್ಲಿ ಅವರು ಊಟದ ಕೊನೆಗೆ ಸಾರ್(ರಸಮ್) ಅನ್ನು ಕೈಯಲ್ಲಿ ತೀರ್ಥದಂತೆ ಕುಡಿದು.. ಆಹಾ..ಎನ್ನುವುದು ನೋಡಲು ಬಹಳ ಖುಷಿ ಕೊಡುತ್ತದೆ. 


ಪಂಕ್ತಿ ಊಟದಲ್ಲಿ ಕೆಲವೊಂದು ವಿಚಿತ್ರಗಳು ಜರುಗುತ್ತದೆ. ಅದು ಏನೆಂದರೆ ನೀವು ಬಡಿಸುವಾಗ ಸ್ವಲ್ಪವೇ ಸ್ವಲ್ಪ ಅನ್ನ ಹಾಕಿಸಿಕೊಂಡರೆ.. ನಿಮ್ಮ ಪಕ್ಕದವ ಕೂಡ... ಸಾಕು ಸಾಕು.. ಸ್ವಲ್ಪವೇ ಹಾಕಿ ಅನ್ನುತ್ತಾನೆ. ನೀವು ಪಾಯಸ ಬೇಡವೇ ಬೇಡ  ಎಂದು ಕೈ ಅಡ್ಡ ಹಿಡಿದರೆ,ನಿಮ್ಮ Next ನವನು ಕೂಡ ದಾಕ್ಷಿಣ್ಯಕ್ಕೆ ಬಿದ್ದು... ಬೇಡ ಬೇಡ ಪಾಯಸ ನನಗೂ ಬೇಡ ಅಂತಾನೆ.


ಆದರೆ ಅವನಿಗೇನು ಗೊತ್ತು ನಾನು ಬಡಿಸುವಾಗಲೇ ಸಾಕಷ್ಟು ಗ್ಲಾಸು ಪಾಯಸ ಸಪಾಯಿ ಮಾಡಿರುತ್ತೇನೆ ಎಂದು. ಅದಕ್ಕಾಗಿ ಪಂಕ್ತಿ ಊಟಕ್ಕೆ ಕುಳಿತಾಗ.. ನಾನು ಬೇಡ ಎಂದು ಹೇಳಿ.. ನನ್ನ ನಂತರದವನೂ ಕೂಡ ಬೇಡ ಎಂದು ಹೇಳುವ ಮೂಲಕ ಅವನು  ಐಟಂಗಳನ್ನು ಮಿಸ್ ಮಾಡಿಕೊಳ್ಳುವುದು ಯಾಕೆ  ಎಂದು... ಕೆಲವೊಮ್ಮೆ ನಾನು ಬೇರೆಯವರ ಹಿತಕ್ಕಾಗಿ ಎಲ್ಲಾ ಐಟಂಗಳನ್ನು ಬಡಸಿಕೊಳ್ಳುವುದು ಕೂಡ ಇದೆ. ನಮ್ಮಿಂದಾಗಿ ಬೇರೆಯವರಿಗೆ ಭೋಜನದಲ್ಲಿ ನಿರಾಸೆ ಆಗಬಾರದು.. ಏನಂತೀರಿ.


ನನಗಿಗಂತ ಮೊದಲಿನವ ಬೇಡ ಬೇಡ ಎಂದೂ ಚೂರೇ  ಚೂರು ಬಡಸಿಕೊಂಡರೂ ನಾನು ಮಾತ್ರ ನನಗೆ ಬೇಕಾದಷ್ಟು ಬಡಸಿಕೊಳ್ಳಲು ಹಿಂದೆ ಮುಂದೆ ನೋಡುವುದೇ ಇಲ್ಲ. ಅವನು ನನ್ನನ್ನೊಮ್ಮೆ ತಿರುಗಿ ನೋಡಿ ಇವ ಯಾವ ಸೀಮೆ ಬಕಾಸುರ ಅಂತ ತಿಳಿದರೂ ಕೂಡ. ಏಕೆಂದರೆ ನನಗೆ ನನ್ನ ನಂತರದವರ ಬಗ್ಗೆ ಕೂಡ  ಭಯಂಕರ ಕಾಳಜಿ ಇದೆ. ನಾನು ಸ ಬೇಡ ಹೇಳಿ, Next ನನ್ನ ನಂತರದವನು ಅದನ್ನು ನೋಡಿ ಅವನು  ಸ ಬೇಡ ಹೇಳಿ... ಅವನ ನಂತರದವನೂ ಕೂಡ ಬೇಡ ಹೇಳಿ... ಸುಮ್ಮನೆ ಇಡೀ ಸಾಲಿನ ಎಷ್ಟೊಂದು ಜನರಿಗೆ ನಿರಾಸೆ ಅಲ್ವಾ.ಹಾಗಾಗಿ ಅವರೆಲ್ಲರ ಹಿತ ಕಾಪಾಡಲು ನಾನು ಬಕಾಸುರನಂತೆ ಬಡಿಸಿಕೊಳ್ಳುತ್ತೇನೆ. 


ನಮ್ಮಲ್ಲಿ ಕೆಲವರು ಆಮೆ ಗತಿಯಲ್ಲಿ ಊಟ ಮಾಡುವವರು ಇದ್ದರೆ.. ಇನ್ನು ಕೆಲವರದ್ದು ಊಟದ ಎಲೆಯಲ್ಲಿ ನಾಗಾಲೋಟ. ಎಷ್ಟೇ ನಿಧಾನವಾಗಿ ಊಟ ಮಾಡುವವನು ಸಹ  ದೂರದಲ್ಲಿ ಪಾಯಸ ಬರುತ್ತಿರುವಾಗ ರಪ ರಪ ಊಟ ಮಾಡಿ ಎಲೆಯಲ್ಲಿ ಪಾಯಸಕ್ಕಾಗಿ ಜಾಗ ಮಾಡಿಕೊಡುವುದನ್ನು ನೋಡುವುದೇ ಒಂದು ಬಲು ಚಂದ.


ಪ್ಲಾಸ್ಟಿಕ್ ಲೋಟ ಬಂದ ಮೇಲೆ ದೂರದಲ್ಲಿ ಮಜ್ಜಿಗೆ ಬರುವುದನ್ನು ಕಂಡ ಕೂಡಲೇ ರಪ ರಪ ನೀರು ಕುಡಿದು.. ಅದರಲ್ಲಿ ಮಜ್ಜಿಗೆಯನ್ನು ಹಾಕಿಸಿಕೊಂಡು.. ಹಾಗೇ ನಿಧಾನವಾಗಿ ಮಜ್ಜಿಗೆ ಹೀರುವುದರಲ್ಲಿ ಕೆಲವರಿಗೆ ಖುಷಿ ಇದೆ. ಇನ್ನು ಕೆಲವರಿಗೆ ಅನ್ನದ ಮೇಲೆಯೇ ಮಜ್ಜಿಗೆ ಹಾಕಿಕೊಂಡು ಹಾಗೇ ಉಣ್ಣುವುದು ಇಷ್ಟ. ನನಗೆ ಎರಡೂ ಇಷ್ಟ. ಹಾಗಾಗಿ ಅನ್ನದ ಮೇಲೆಯೂ ಹಾಕಿಸಿಕೊಳ್ಳುತ್ತೇನೆ... ಗ್ಲಾಸನ್ನು ಕೂಡ ಮಜ್ಜಿಗೆಯಿಂದಲೇ ತುಂಬಿ ತುಳುಕಿಸುತ್ತೇನೆ. ಯಾವತ್ತೂ ಕ್ರಮ ತಪ್ಪಬಾರದು ಎನ್ನುವ   ಕ್ರಮ ನನ್ನದು.ಜಾಸ್ತಿಯಾಗಿ ಊಟದಲ್ಲಿ ನಾನು ಇಂತಹ ಕ್ರಮಗಳನ್ನು ತಪ್ಪಿಸುವುದೇ ಇಲ್ಲ. ಬೇರೆ ವಿಷಯಗಳಲ್ಲಿ ಶಿಸ್ತು ಸ್ವಲ್ಪ ಕಡಿಮೆ ಎಂಬ ದೂರು ಎಂದಿನಂತೆ  ಮನೆಗೆ ನಿರಂತರವಾಗಿ ಬರುತ್ತಲೇ ಇರುತ್ತದೆ  ಬಿಡಿ. 


ಪಕ್ಕಕ್ಕೆ ಕುಳಿತವರು ಅಪರಿಚಿತರಾದರೂ ಊಟದ ನಡು ನಡುವೆ ಅಧಿಕ ಪ್ರಸಂಗದ ಮಾತುಗಳಿಗೆ ಕೊರತೆ  ಏನು ಇರುವುದಿಲ್ಲ ಬಿಡಿ. ಅದರಲ್ಲೂ ಹೆಂಗಸರು ಪಕ್ಕದಲ್ಲಿ ಇದ್ದರೆ.. ಅವರು ತಮ್ಮ ತಮ್ಮಲ್ಲಿ ಮುದುವೆ ಹುಡುಗಿಗೆ ಹಾಕಿದ ಆಭರಣಗಳ ಬಗ್ಗೆಯೇ ಡೀಪ್ ಡಿಷ್ಕನ್ ಮಾಡುತ್ತಾ ಇರುತ್ತಾರೆ. ಅಜ್ಜ ಅಜ್ಜಂದಿರ ಪಕ್ಕ ಕುಳಿತುಕೊಂಡರೇ... ನಮ್ಮ ಕಾಲದಲ್ಲಿ ಮದುವೆ ಅಂದರೆ...ಎಂದು ರಾಗ ಎಳೆಯುತ್ತಾ  ಅವರ ಅಂದ ಕಾಲತ್ತಿಲ್ ನ ಹಳೆ ಶಿಲಾಯುಗದ ಮದುವೆಯ ಕಥೆಗಳನ್ನು ಹೇಳಲು ಶುರು ಮಾಡುತ್ತಾರೆ... 



ನೀವು ಯಾರ ಪಕ್ಕ ಬೇಕಾದರೂ ಊಟಕ್ಕೆ ಕುಳಿತುಕೊಳ್ಳಿ ಆದರೆ ಈ ಮದುವೆ ಬ್ರೋಕರ್ ಗಳ ಪಕ್ಕ ಊಟಕ್ಕೆ ಕುಳಿತುಕೊಳ್ಳಲೇ ಬಾರದು ಆಯ್ತಾ.. ಏಕೆಂದರೆ ಅವರಿಗೆ ಬರೀ ನಿಮಗೊಂದು ಹುಡುಗಿ ನೋಡುವೇ ಇಂಟ್ರೆಸ್ಟೇ ಇರುವುದು. ಅದರಲ್ಲೂ ಮದುವೆ ಮನೆಗೆ ಬಂದತ್ತ ಹುಡುಗಿಯತ್ತ ಕೈ ತೋರಿಸಿ... ಅಥವಾ ನಿಮ್ಮೆದುರು ಊಟಕ್ಕೆ ಕುಳಿತ ಚಂದದ ಹುಡುಗಿಯತ್ತ ಕೈ ತೋರಿಸಿ... ಇಕನಾ.. ನಿನಗೆ ಅವಳು ಆಗ್ಬಹುದಾ.. ಎಂದೆಲ್ಲಾ ಕೇಳಿ ಕೇಳಿಯೇ  ತಲೆ ತಿನ್ನುತ್ತಾರೆ.


ಒಂದು ಬಾರಿ ಹೀಗೆ ಆಯಿತು. ಆಗ ನಾನು ಹೈಸ್ಕೂಲ್ ನಲ್ಲಿ ಇದ್ದೆ ಎಂದು ನೆನಪು.ಅವಳೊಬ್ಬಳು ಎದುರಿಗೆ ಊಟಕ್ಕೆ ಕೂತಿದ್ದವಳು. ಈ ಬ್ರೋಕರ್  ಮಾವ  "ನಿನಗೆ ಆ ಹುಡುಗಿ ಆಗಬಹುದಾ.." ಎಂಬ ಜೋರಾಗಿ ಹೇಳಿದ್ದು ಅವಳ ಕಿವಿಗೂ ಸ್ಪಷ್ಟವಾಗಿ ಬಿದ್ದು.. ಅವಳು ತುಸು ನಾಚಿ.. ನಸುನಕ್ಕಿದ್ದೂ ಇದೆ.


ನನಗೆ ಆ ಕ್ಷಣವೇ ಬ್ರೋಕರ್ ಮಾವನ ಮೇಲೆ ವಿಪರೀತ ಸಿಟ್ಟು ಬಂದಿತ್ತಾದರೂ..ಹುಡುಗಿ ಚಂದ ಇದ್ದ ಕಾರಣ ಅಷ್ಟಾಗಿ ಏನನ್ನೂ ತೋರಿಸಿಕೊಳ್ಳದೇ.. ನೀವು ಒಮ್ಮೆ ಸುಮ್ನೆ ಇರಿ ಮಾಮ ಎಂದು ತಲೆ ತಗ್ಗಿಸಿ ಊಟ ಮಾಡಿದ್ದೆ. ಊಟ ಮುಗಿಯುವವರೆಗೂ ತಲೆ ಎತ್ತಲೇ ಇಲ್ಲ.ಊಟದ ನಂತರ ಆ ಹುಡುಗಿ ಎಲ್ಲಿ ಎಂದು ಹುಡುಕಿದರೂ ಅವಳು ಕಣ್ಣಿಗೆ ಬೀಳಲಿಲ್ಲ.ಒಂದೆಳೆ ಕಾಡಿಗೆಯ ಕಣ್ಣಿನ,ಉದ್ದ ಮೂಗಿನ ತುದಿಗೊಂದು ಚಂದದ ಮೂಗು ಬೊಟ್ಟಿನ ಆ ಹುಡುಗಿಯ ನೆನಪು ಈಗಲೂ ಊಟಕ್ಕೆ ಕೂತಾಗ ಒಮ್ಮೊಮ್ಮೆ ಬರುವುದಿದೆ. 


ತಾಯಿಯಂದಿರು ಲಾಡು ಹೋಳಿಗೆಗಳನ್ನು ಕರ್ಚೀಪು ಗಳಲ್ಲಿ  ಕಟ್ಟಿಕೊಂಡು ಮನೆಗೆ ಹೋಗುವುದು ನಮ್ಮಲ್ಲಿ ಇನ್ನೂ ನಿಂತಿಲ್ಲ.. ಹೆಚ್ಚಿನ ತಾಯಿಯಂದಿರು ಹಾಗೆಯೇ, ಹೌದು ಇನ್ನೂ ಹಾಗೆಯೇ ಇದ್ದಾರೆ.ಅವರು ಬದಲಾಗುವುದಿಲ್ಲ.ನನಗೆ ಊಟದ ಮನೆಯಲ್ಲಿ  ಅಂತಹ ತಾಯಂದಿರೇ ಅತೀ ಇಷ್ಟ. ಏಕೆಂದರೆ ನನ್ನ ಅಮ್ಮನೂ ಕೂಡ ಹಾಗೇ.. ನನಗೆ ಲಾಡು, ಹೋಳಿಗೆಳನ್ನು ಕಟ್ಟಿಕೊಂಡು ಬಂದವಳು.ಅವಳು ಸಿಹಿ ತಿನ್ನದೇ ನನ್ನ ಬಾಯಿ ಸಿಹಿ ಮಾಡಿದವಳು. 


ಊಟದ ಕುರಿತಾಗಿ ನಾನು  ಒಂದು ಮಾತು ಹೇಳಲೇ ಬೇಕು. ಅದು ಏನೆಂದರೆ, ಊಟಕ್ಕೆ ಕೂತಾಗ ಬೇರೆಯವರು ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎನ್ನುವುದು ಮುಖ್ಯವಲ್ಲ.. ನಿಮಗೆ ಎಷ್ಟು ಬೇಕೋ ಅಷ್ಟು ತಿನ್ನಿ, ಆದರೆ  ಬೇರೆಯವರಿಗೆ ಅಸಹ್ಯ ಆಗದಂತೆ ಸಭ್ಯವಾಗಿ ನಾಜೂಕಾಗಿ ತಿನ್ನಿ.. ಮಾತ್ರವಲ್ಲ ಎಲೆಗೆ ಎಷ್ಟೇ ಹಾಕಿಸಿಕೊಂಡರೂ ಒಂದು ಚೂರು ಉಳಿಸದೇ.. ಸಂಪೂರ್ಣ ಊಟ ಮಾಡಿಯೇ ಎದ್ದೇಳಿ.


ನನ್ನ ಪ್ರಕಾರ ಸ್ವಲ್ಪವೇ ಸ್ವಲ್ಪ ಹಾಕಿಸಿಕೊಂಡು.. ಅದರಲ್ಲಿ ಪುನಃ ಅರ್ಧ ಊಟದೆಲೆಯಲ್ಲಿಯೇ ಬಿಡುವವನಿಗಿಂತಲೂ.. ಎಲೆಗೆ ಎಷ್ಟೇ ಸಲ ಹಾಕಿಸಿಕೊಂಡರೂ,ಹಾಕಿಸಿದ ಎಲ್ಲವನ್ನೂ ಒಂದು ಅಗುಳು ಕೂಡ ಉಳಿಸದಂತೆ  ಖಾಲಿ ಮಾಡುವವನೇ ಯಾವಾಗಲೂ ಉತ್ತಮನು.


ಬೇಕಾದಷ್ಟೇ ಹಾಕಿಸಿಕೊಳ್ಳಿ.. ಊಟಕ್ಕೆ,ಅನ್ನಕ್ಕೆ ಗೌರವ ಕೊಡಿ.ಎಲೆಯ ಮಾರ್ಯದೆ ಉಳಿಸುವುದಕ್ಕಾಗಿ ಸಂಪೂರ್ಣ ಊಟ ಮಾಡಿ.ಎಲ್ಲೋ ಒಂದು ಕಡೆ ಓದಿದ್ದು ನೆನಪು.. " ಬಡಿಸುವ ಮೊದಲು ಇದ್ದ ಸ್ಥಿತಿಗೆ ಬಾಳೆ ಎಲೆಯನ್ನು ತರುವ ಶ್ರದ್ಧೆಯ ಯಾಗವೇ ಊಟ.."

ಆಹಾ.. ಎಷ್ಟು ಸೊಗಸಾಗಿ ಹೇಳಿದ್ದಾರೆ ಅಲ್ವಾ. 



ಊಟದ ಎಲೆಯಲ್ಲಿ ಅರ್ಧಕರ್ಧ ಬಿಟ್ಟು ಮೇಲೆಳುವಾಗ, ಊಟವೇ ಇಲ್ಲದೇ ದಿನ ನಿತ್ಯ ನರಳುವವರ ನೆನಪು ಒಮ್ಮೆ ಅತಿಯಾಗಲಿ. ಅನ್ನವನ್ನು ಅನ್ನಬ್ರಹ್ಮ ಎಂದೇ ಕರೆಯುತ್ತಾರೆ.. ಯಾರೂ ಅದನ್ನು ತುಳಿಯುವುದಿಲ್ಲ.ಊಟಕ್ಕಿಂತಲೂ ಮೊದಲು ಅಕ್ಕಿಯನ್ನಾಗಲಿ ಅನ್ನವನ್ನಾಗಲಿ ಪೂಜಿಸುವ ಸಂಪ್ರದಾಯ, ಸಂಸ್ಕೃತಿ ನಮ್ಮದು. ಏಕೆಂದರೆ ನಮಗೆ ಅನ್ನದಲ್ಲಿಯೇ ಭಗವಂತ ಇದ್ದಾನೆ. ಆ ಪೂಜ್ಯನೀಯ ಭಾವ ಸದಾ ಇರಲಿ. ಅನ್ನ ವೇಸ್ಟ್ ಮಾಡಬೇಡಿ. 


ಹೀಗೆ ಊಟಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಕಥೆಗಳು..ನಿಜವಾಗಿಯೂ ಬಡಿಸುವುದು ಮತ್ತು ಚೆನ್ನಾಗಿ ಬಾರಿಸುವುದು ಕೂಡ ಒಂದು ಕಲೆಯೇ ಆಗಿದೆ.


ಮೊದಲ ಸಲ ಪಂಕ್ತಿ ಊಟಕ್ಕೆ ಸರಿಯಾಗಿ ಬಡಿಸುವುದನ್ನು ಕಲಿಸಿದ ಎಲ್ಲಾ ಅಣ್ಣಂದಿರನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.ಅದರಲ್ಲೂ ಲಾಡು ಸಿಹಿ ಉಂಟೋ ಇಲ್ಲವೋ ಎಂದು ಪರೀಕ್ಷಿಸಲು ಲಾಡು ತಿಂದೆ ಎಂದ ಅಣ್ಣನನ್ನು ನಾನು ಜೀವನದಲ್ಲಿ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ಅಲ್ಲಾ  ಎಲ್ಲಾದರೂ ಕಹಿ ಲಾಡು ಊಟಕ್ಕೆ ಬಡಿಸುತ್ತಾರಾ..ಎಂಬ ಪ್ರಶ್ನೆ ಆವತ್ತು ನನಗೆ ಯಾಕೆ ಬರಲಿಲ್ಲ ಎಂದು ಇಂದಿಗೂ ನನಗೆ ಕಾಡುತ್ತಿದೆ. 


ಇನ್ನು ಬಡಿಸುವುದಕ್ಕಿಂತ ಮೊದಲೇ ಟೇಸ್ಟ್ ನೋಡುವುದರಿಂದ.. ಒಂದು ವೇಳೆ ಆಹಾರ ವಿಷವಾಗಿದ್ದರೆ.. ಅದೆಷ್ಟೋ ಮುಗ್ಧ ಜನರ ಪ್ರಾಣ ಉಳಿಸಿದ ಪುಣ್ಯ ನಮಗೆ ಬರುತ್ತದೆ... ಎಂದು ಹೇಳಿ  ಬಡಿಸುವುದಕ್ಕಿಂತ ಮೊದಲೇ ಕಡ್ಡಾಯವಾಗಿ ಎಲ್ಲವನ್ನೂ ಚೆನ್ನಾಗಿ ಬಾರಿಸಿ,ತಿಂದು ತೇಗಬೇಕು ಎಂದು ಬಡಿಸುವ ಮೊದಲ ಪಾಠ ಹೇಳಿ ಕೊಟ್ಟ ಆ ಒಬ್ಬ ಅಣ್ಣ  ಮಾತ್ರ ಯಾವಾಗಲೂ ನನ್ನ ಪಾಲಿನ ಮಹಾನು ಚಿಂತಕ,ತತ್ವಜ್ಞಾನಿ,ಹಾಗೂ ಬಡಿಸುವ ಕಲೆಯ ರೋಲ್ ಮಾಡೆಲ್ ಆಗಿದ್ದಾನೆ. 


ಈಗಲೂ ಊಟಕ್ಕಿಂತಲೂ ಮೊದಲು ಟೇಸ್ಟ್ ನೋಡಲು ಎಷ್ಟೋ ಹಪ್ಪಳ ಮುರಿಯುವಾಗ... ಗೋಬಿ ಮಂಚೂರಿ ಹಾಗೂ ಪೋಡಿಗಳನ್ನು ಖಾಲಿ ಮಾಡುವಾಗ ನನಗೆ ಆ ಅಣ್ಣನೇ ಅತಿಯಾಗಿ ನೆನಪಾಗುತ್ತಾನೆ. ಹೌದು ನಾನು ಕೂಡ ಈ ರೀತಿ ತಿಂದು ತಿಂದು ನನ್ನ ಪ್ರಾಣವನ್ನು ಪಣಕ್ಕಿಟ್ಟು ಎಷ್ಟೋ ಜನರ ಪ್ರಾಣ ಉಳಿಸಿದೆ ಎಂಬ ಹೆಮ್ಮೆ ನನಗೆ ಎಂದೆಂದಿಗೂ ಸದಾ ಇರುತ್ತದೆ. 


ನಾವು ಬರೀ ಬಡಿಸುವವರಲ್ಲ.. ಚೆನ್ನಾಗಿ ಬಾರಿಸುವವರೂ ಕೂಡ  ಹೌದು, ಅದೇ ರೀತಿ ಅಣ್ಣ ಹೇಳಿದಂತೆ ಬದುಕಿಸುವವರು ಕೂಡ  ಹೌದು.


ಆದರೆ ವಿಷಯ ಎಂತ ಗೊತ್ತುಂಟಾ.. ದೇವರ ದಯೆಯಲ್ಲಿ  ಇಲ್ಲಿಯವರೆಗೆ ಅಂತಹದ್ದೇನು ವಿಷ ಘಳಿಗೆ ಸಂಭವಿಸಿಲ್ಲ ಆಯ್ತಾ. ಹಾಗಾಗಿ ಬಡಿಸುವದಕ್ಕಿಂತ ಮೊದಲು ನಿರಂತರವಾಗಿ ಹಪ್ಪಳಗಳು ಎಂದಿನಂತೆ ಬಾಯೊಳಗೆ ಹುಡಿಯಾಗುತ್ತಲೇ ಇದೆ... ಪೋಡಿಗಳು ಕೂಡ ಹಾಗೇ ಸಪಾಯಿ ಆಗುತ್ತಲೇ ಇದೆ..


ಆದರೆ ಊಟಕ್ಕೆ ಕುಳಿತಾಗ ಮಾತ್ರ,ಕೇವಲ ಅನ್ನ ಸಾರು ಮಾತ್ರ ಬಡಿಸಿ ಕೊಳ್ಳುವ ನಮ್ಮಂತವರು ಇನ್ನೂ ಕೂಡ ಭೂಮಿಯಲ್ಲಿ ಅಲ್ಲಲ್ಲಿ ಇದ್ದಾರೆ.. 



ನಮ್ಮಂತೆ ಪ್ರಾಣವನ್ನು ಪಣಕ್ಕಿಟ್ಟು ಬಡಿಸುವ ಎಲ್ಲರಿಗೂ ಜಯವಾಗಲಿ.


.....................................................................................



#ವಿಷಯ_ಎಂತ_ಗೊತ್ತುಂಟಾ.. 


Ab Pacchu 

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ