ಬಳ್ಳಿಯಲ್ಲೊಂದು ಸೌತೆಕಾಯಿ ಬಿಟ್ಟಿದೆ..

 


ಈ ಸೌತೆಕಾಯಿಗೂ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ಒಂದು ಅವಿನಾಭಾವ ಸಂಬಂಧ ಇದೆ.


ಆದರೆ ಅಂತಹ ನಂಟಿನ ಸಂಬಂಧದ ಬಗ್ಗೆ ನನಗೆ ಮೊದಲು ಅಷ್ಟಾಗಿ ಗೊತ್ತಿರಲಿಲ್ಲ.ಎಲ್ಲಾ ಕಡೆಯಂತೆ ಅದು ನನಗೆ ಜಸ್ಟ್ ಸೌತೆಕಾಯಿ ಅಷ್ಟೇ ಆಗಿತ್ತು..



ಯಾವಾಗ ನಮ್ಮೂರು ಬಿಟ್ಟು ಬೆಂಗಳೂರು ಕಡೆಗೆ ಹೋದೆನೋ ಆವಾಗಲೇ ಗೊತ್ತಾಗಿದ್ದು ಈ ಸೌತೆಕಾಯಿಗೂ ನಮ್ಮ ಜಿಲ್ಲೆಗೂ ಇರುವ ಆ ಒಂದು ಸೊಗಸಾದ ಬೆಸುಗೆ.



ಅದೇನೆಂದರೆ ನಮ್ಮಲ್ಲಿ ಸೌತೆಕಾಯಿ ಎಂದು ಕರೆಸಿಕೊಳ್ಳುವ ಇದು ಹೊರಗಡೆ ಹೋದ ಕೂಡಲೇ "ಮಂಗಳೂರು ಸೌತೆಕಾಯಿ" ಎಂದೇ ಗುರುತಿಸಿಕೊಳ್ಳುತ್ತದೆ.ನಿಜವಾಗಿಯೂ ಮೊದಲಿದು ನನಗೆ ಗೊತ್ತಿರಲಿಲ್ಲ.ನಮ್ಮಲ್ಲಿ ಇದಕ್ಕೆ ಹಾಗೇ ಹೇಳುವುದೂ ಕೂಡ  ಇಲ್ಲ.



ಹಾಗಾದರೆ ನೀವು ಸೌತೆಕಾಯಿ ಎಂದು ಯಾವುದಕ್ಕೆ ಕರೆಯುತ್ತೀರಿ ಎಂದು ಬೆಂಗಳೂರಿನಲ್ಲಿ ತರಕಾರಿ ಮಾರುವವರಲ್ಲಿಯೇ ಕೇಳಿದರೆ ಅದಕ್ಕೆ ಅವರು "Cucumber" ಅನ್ನು ತೋರಿಸುತ್ತಾರೆ.ನಮ್ಮಲ್ಲಿ ಈ Cucumber ನ ಚಂದದ ಹೆಸರು  "ಮುಳ್ಳುಸೌತೆಕಾಯಿ " ಎಂದು. ತುಳುವಿನಲ್ಲಿ ಆದರೆ ತೆಕ್ಕರೆ ಇಲ್ಲವೇ ತೆಕ್ಕರ್ಪೆ.ಅದರ ಸಿಹಿಯಾದ, ರುಚಿಯಾದ ಖಾದ್ಯಗಳು ಕೂಡ  ಹಲವಾರು ಇದೆ. ಅದರಲ್ಲೂ "ಏಳ್ ಇರೆತ ತೆಕ್ಕರೆ"(ಏಳು ಎಲೆಯ ಮುಳ್ಳು ಸೌತೆ) ಊರಿನದ್ದೇ ಬಹಳ  ರುಚಿಯಾದ ತೆಕ್ಕರೆ ಎಂದು ಹೆಸರುವಾಸಿ.



ಇನ್ನು ಗೂಗಲ್ ಸರ್ಚ್ ಮಾಡುವಾಗ ಬರೀ ಸೌತೆಕಾಯಿ ಎಂದು ಹುಡುಕಿದರೇ ನಿಜವಾಗಿಯೂ ಮುಳ್ಳುಸೌತೆಕಾಯಿಯೇ(Cucumber)ಬರುವುದು. ಒಂದೋ ಮಂಗಳೂರು ಸೌತೆಕಾಯಿ ಇಲ್ಲದಿದ್ದರೆ ಸಾಂಬಾರ್ ಸೌತೆಕಾಯಿ ಎಂದೇ ನೀವು ಟೈಪಿಸಬೇಕು.ಆದರೆ ಮಂಗಳೂರಿಗೆ ಬಂದರೆ ಸೌತೆಕಾಯಿ ಎಂದರೆ ಅದು ಪದಾರ್ಥದ ಸೌತೆಕಾಯಿಯೇ ಆಗಿರುತ್ತದೆಯೇ ಹೊರತು ಅದು ಸಲಾಡ್ ನ ಸೌತೆಕಾಯಿ ಆಗಿರುವುದಿಲ್ಲ.



ಇವತ್ತು ನಾವು ಈ ಸೌತೆಕಾಯಿ ಇಲ್ಲವೇ ಮಂಗಳೂರು ಸೌತೆಕಾಯಿ ಬಗ್ಗೆಯೇ ಸ್ವಲ್ಪ ಮಾತಾಡೋಣ.ತುಳು ಭಾಷೆಯಲ್ಲಿ ಇದಕ್ಕೆ "ತೌತೆ" ಎಂದು ಹೇಳುತ್ತಾರೆ.ಮಲೆನಾಡು ಭಾಗದಲ್ಲಿ ಬಣ್ಣದ ಸೌತೆ, ಮಗೆಕಾಯಿ ಎಂದೆಲ್ಲ ಇದು ಗುರುತಿಸಿಕೊಳ್ಳುತ್ತದೆ.



ಹೇಗೆ ಮಂಗಳೂರು ಮಲ್ಲಿಗೆ, ಮಂಗಳೂರು ಹೆಂಚು ತಮ್ಮ ಹೆಸರಿನೊಂದಿಗೆ "ಮಂಗಳೂರು" ಅನ್ನು  ಸೇರಿಸಿಕೊಂಡೇ ಅಲ್ಲಲ್ಲಿ ಗುರುತಿಸಿಕೊಳ್ಳುತ್ತದೆಯೋ ಅದೇ ತರಹ ಮಂಗಳೂರನ್ನು ತನ್ನೊಂದಿಗೆ ಜೊತೆ ಮಾಡಿಕೊಂಡಿರುವ ಈ ಮಂಗಳೂರು ಸೌತೆಕಾಯಿ ಕೂಡ,ಹೊರಗಿನ ಜಿಲ್ಲೆಯಲ್ಲಿ ಮತ್ತು ಅಲ್ಲಿಯ ಮಾರುಕಟ್ಟೆಗಳಲ್ಲಿ ನಮ್ಮೂರಿನ ಹೆಸರಿನೊಂದಿಗೆ ಪ್ರತೀ ದಿನ ಗುರುತಿಸಿಕೊಂಡು ತರಕಾರಿ ಕೊಳ್ಳುವವರಿಗೆ ನಮ್ಮ ಊರನ್ನು ನೆನಪಿಸಿಕೊಡುತ್ತಲೇ ಇದೆ. 



ನಿಜ ಹೇಳಬೇಕೆಂದರೆ ಈ ಸೌತೆಕಾಯಿಗೆ ನಮ್ಮಲ್ಲಿ ಹೆಚ್ಚಿನ ಪ್ರಾಧಾನ್ಯತೆ ಖಂಡಿತವಾಗಿಯೂ ಉಂಟು. ಹಿಂದೆ ಎಲ್ಲಾ  ಈ ಸಾಗುವಳಿ ಇದ್ದ ಮನೆಯವರು ಯಾವ ತರಕಾರಿ ಮಾಡದಿದ್ದರೂ ಸೌತೆಕಾಯಿ ಒಂದನ್ನು ಮಾತ್ರ ಮರೆಯದೇ ತಮ್ಮ ಗದ್ದೆಯಲ್ಲಿ ಮಾಡುತ್ತಿದ್ದರು. ಸಣ್ಣಪುಟ್ಟ ಜಾಗ ಇದ್ದವರೂ ಕೂಡ ಅದರಷ್ಟಕ್ಕೆ ಹುಟ್ಟಿಕೊಳ್ಳುವ ಸೌತೆಕಾಯಿಯ ಗಿಡವನ್ನು ನೀರೆರೆದು ಪೋಷಿಸಿ ಬೇಕಾದಷ್ಟು ಸೌತೆಕಾಯಿ ಕೊಯ್ಯುತ್ತಿದ್ದರು. 



ಸುಗ್ಗಿಯ ಬೆಳೆ ತೆಗೆದ ನಂತರ ಗದ್ದೆಯ ನಡುವಲ್ಲಿ ಭೂಮಿಯ ಮೇಲಿರುವ ಎಲ್ಲಾ ಕಳೆಯನ್ನು, ಮಣ್ಣನ್ನು, ಒಣಗೆಲೆಯನ್ನು ಕೆರೆಸಿ ತೆಗೆದು  ಅದನ್ನು ಒಟ್ಟು ಮಾಡಿ ಅದಕ್ಕೆ ಬೆಂಕಿ ಕೊಟ್ಟು ಅದರಿಂದ ಒಂದು ಗೊಬ್ಬರ ಮಾಡುತ್ತಾರೆ. ಅದಕ್ಕೆ " ಸೂಂಟಾನ್" ಎಂದು ನಮ್ಮಲ್ಲಿ ಕರೆಯುತ್ತಾರೆ. ಇದು ತರಕಾರಿ ಬೆಳೆಯಲು  ಬಹಳ ಯೋಗ್ಯವಾದ ಗೊಬ್ಬರ.



ಈ ಸೂಂಟಾನ್ ಗೊಬ್ಬರದಲ್ಲಿ ಮಾಡಿದ ಊರಿನ ತರಕಾರಿಗಳಿಗೆ ಇಲ್ಲಿಯ ಅಂಗಡಿಗಳಲ್ಲಿ ಯಾವತ್ತೂ ಹೆಚ್ಚಿನ ಬೆಲೆಯೇ ಇರುವುದು. ಊರಿನ ಬೆಂಡೆ, ಊರಿನ ಅಲಸಂಡೆ ಎಂದು "ಊರು" ಎಂಬ ಪದವನ್ನು ಕಡ್ಡಾಯವಾಗಿ ಸೇರಿಸಿಯೇ ಅಂಗಡಿಯವರು ಇವುಗಳನ್ನು ಮಾರುತ್ತಾರೆ.



ಈ ರೀತಿಯ ಗೊಬ್ಬರದಿಂದ ಮಾಡಿದ ಊರಿನ ಬಿಳಿಯ ಬಣ್ಣದ ಉದ್ದದ ಬೆಂಡೆಗಂತು ನಮ್ಮಲ್ಲಿ ರಾಜ ಮರ್ಯಾದೆ. ಎಲ್ಲಕ್ಕಿಂತ ಅಧಿಕ ಬೆಲೆ ಅದಕ್ಕೆಯೇ ಇರುವುದು.ಹೆಚ್ಚಾಗಿ ಅದನ್ನು ಬೆಳೆದವರೇ ಮಾರ್ಕೆಟ್ ಗೆ ಹೋಗಿ ಅದನ್ನು ಸಂತೆಯಲ್ಲಿ ಮಾರುವುದು ಕೂಡ ಇದೆ.ಎಷ್ಟೇ ಬೆಲೆ ಇದ್ದರೂ ಈ ಊರಿನಲ್ಲಿಯೇ ಬೆಳೆದ ಬೆಂಡೆ, ಅಲಸಂಡೆ, ಬದನೆ, ಗುಳ್ಳ,ಪೀರೆ ಹಾಗೂ ಸೌತೆಗಳನ್ನು ಮುಗಿ ಬಿದ್ದು ಕೊಳ್ಳುವವರ ಸಂಖ್ಯೆ ಕೂಡ ನಮ್ಮಲ್ಲಿ ಸಾಕಷ್ಟೇ ಇದೆ. ಕಾರಣ ಸೂಂಟಾನ್ ಗೊಬ್ಬರದಿಂದ ಮಾಡಿದ ಊರಿನ ತರಕಾರಿಗಳಿಗೆ ಬಹಳ ರುಚಿ, ಹಾಗೂ ರಸಗೊಬ್ಬರ ಹಾಗೂ ಇನ್ನಿತರ ಕೀಟ ನಾಶಕಗಳಿಂದ ಮುಕ್ತವಾದ ಅದು ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು ಎಂಬ ಭಾವನೆ ನಮ್ಮ ಊರಿನ ಜನರದ್ದು.



ಹಿಂದೆ ಎಲ್ಲಾ ಈ ಸೌತೆಕಾಯಿ ಯನ್ನು ಬೆಳೆಯಲು ವಿಶಿಷ್ಟ ಕ್ರಮ ಒಂದು ಇತ್ತು. ಅದನ್ನು  ಈ ಬೆಂಡೆಕಾಯಿ,ಬದನೆ,ಗುಳ್ಳ, ಅಲಸಂಡೆ ಬೆಳೆದಂತೆ ಉದ್ದಕ್ಕೆ ಸಾಲಿನಲ್ಲಿ  ಬೆಳೆಯದೇ ಸೂಂಟಾನ್ ಗೊಬ್ಬರ ಮಾಡಿದ ಜಾಗದಲ್ಲಿ, ಎಲ್ಲಾ ಸೂಂಟಾನ್ ತೆಗೆದ ನಂತರ ಕೊನೆಗೆ ಉಳಿಯುವ ಸ್ವಲ್ಪ ಗೊಬ್ಬರವನ್ನು ಚೆನ್ನಾಗಿ ಹಾರೆಯಿಂದ  ಕೊಚ್ಚಿ, ಅದಕ್ಕೆ ನೀರು ಹಾಕಿ.. ಹಾಗೆಯೇ ಸ್ವಲ್ಪ ಹಟ್ಟಿ ಗೊಬ್ಬರದ ಗುಂಡಿಯ ಅಡಿಯಲ್ಲಿರುವ ಪುಡಿ ಗೊಬ್ಬರವನ್ನೂ ಸಹ ಹಾಕಿ.. ಆಮೇಲೆ ಅದರ ಮೇಲೆಯೇ  ಈ ಸೌತೆಕಾಯಿ ಬೀಜವನ್ನು  ಬಿತ್ತುತ್ತಿದ್ದರು. 



ಹಿಂದಿನ ವರ್ಷದ ಸೌತೆಕಾಯಿಗಳಿಂದ ತೆಗೆದಿರಿಸಿದ್ದ ಒಣಗಿಸಿದ  ಬೀಜಗಳನ್ನು ಹಾಗೇ  ಜೋಪಾನವಾಗಿ ವರ್ಷವಿಡೀ ಇಟ್ಟುಕೊಂಡು,ನಂತರ ಬೀಜ ಬಿತ್ತುವ ಸಂದರ್ಭದಲ್ಲಿ ಅವುಗಳನ್ನು ಪುನಃ ಹೊರಗೆ ತೆಗೆದುಕೊಂಡು,ಕೈಯಲ್ಲಿ ಹಿಡಿದುಕೊಂಡು ಭೂಮಿತಾಯಿ ಹಾಗೂ ಸೂರ್ಯ ದೇವರನ್ನು ಒಮ್ಮೆ ಕಣ್ಣು ಮುಚ್ಚಿ ಮನಸಾರೆ ಪ್ರಾರ್ಥಿಸಿ ಹಾಗೇ ಬೀಜ ಬಿತ್ತಿ ಬಿಡುತ್ತಿದ್ದರು.



ಪ್ರಕೃತಿ ಆರಾಧನೆ ನಮ್ಮಲ್ಲಿ ಜಾಸ್ತಿ. ಹೇಗೆ ವಿಶ್ವ ಪರಿಸರ ದಿನ, ವಿಶ್ವ ಭೂ ದಿನ ಇದೆಯೋ.. ಹಾಗೆ ಭೂಮಿ ತಾಯಿಯ ಪೂಜೆಗೆಂದೇ ನಮ್ಮಲ್ಲಿ ಒಂದು ಹಬ್ಬವೂ  ಇದೆ. ಅದರ ಹೆಸರೇ "ಕೆಡ್ಡೆಸ" ಎಂದು. ಅದು ಭೂಮಿ ತಾಯಿ ಋತುಮತಿ ಆಗುವ ದಿನ. ಅದು ಕೂಡ ಒಂದು ಬಹಳ ಸೊಗಸಾದ ಆಚರಣೆ. ಹೇಳುತ್ತಾ ಹೋದರೆ  ಅದುವೇ ಒಂದು ರಸವತ್ತಾದ ಲೇಖನ.ಹೀಗೆ ಪ್ರತಿಯೊಂದಕ್ಕೂ ಭೂಮಿ ತಾಯಿಗೆ ಕೈ ಮುಗಿದು ನಮಸ್ಕರಿಸಿ,ಬೀಜ ಬಿತ್ತುವುದೇ ನಮ್ಮಲ್ಲಿಯ ಒಂದು ಚಂದದ ಸಂಸ್ಕೃತಿ.. ಅದು ಬೇಕಿದ್ದರೆ ಬೆಳೆಯುವ ಬೆಳೆ ತುಂಬಾ ದೊಡ್ಡದೇ ಇರಲಿ ಅಥವಾ ಚಿಕ್ಕದೇ ಇರಲಿ ಕೈಯಲ್ಲಿ ಬೀಜ ಹಿಡಿದಾಗ ಮನಸ್ಸಿನ ಮೂಲೆಯಲ್ಲೊಂದು ಜಾಗ ದೇವರಿಗೆ ಸದಾ ಮಾಡಿಕೊಡಲೇ ಬೇಕು, ಮೇಲಿನ ಸೂರ್ಯದೇವ ಕೆಳಗಿನ ಭೂಮಿ ತಾಯಿಯ ನೆನಪು ಅತೀ ಆಗಲೇಬೇಕು. 



ಹೀಗೆ ಒಮ್ಮೆ ಸೌತೆಕಾಯಿಯ ಬೀಜ ಬಿತ್ತಿದ ಮೇಲೆ ನಂತರ ಅದಕ್ಕೆ ಬೇರೆನೂ ಹಾಕಬೇಕಾಗಿಲ್ಲ. ದಿನ ನಿತ್ಯವೂ ಚೆನ್ನಾಗಿ ನೀರು ಕೊಡುತ್ತಾ ಬಂದರೆ ಸಾಕು. ಗಿಡದ ಬುಡದಲ್ಲಿಯೇ ಫಲವತ್ತಾದ ಸೂಂಟಾನ್ ಗೊಬ್ಬರ ಇರುವುದರಿಂದ ಬೇರೆ ಗೊಬ್ಬರ ಬೇಡವೇ ಬೇಡ. ಆ ನಂತರ ಬೀಜದಿಂದ ಸಸಿ ಆಗಿ.. ಅದು ಬಳ್ಳಿಯಾಗಿ ಸುತ್ತಲೂ ಹರಡಿಕೊಂಡು ಮುಂದೆ ಅರಶಿನದ ಬಣ್ಣದ ಹೂ ಬಿಟ್ಟುಕೊಂಡು ಕೊನೆಗೆ ಅದುವೇ ಸೌತೆಕಾಯಿ ಆಗುವುದು. ಸೌತೆಯ ಬೀಜಗಳನ್ನು ಬಿತ್ತಿದಾಗ ತುಂಬಾ ಗಿಡಗಳು ಬಂದು ಬಿಟ್ಟರೆ,ಕೆಲವೇ ಕೆಲವು ಗಿಡಗಳನ್ನು ಉಳಿಸಿ ಹೆಚ್ಚಿನ ಎಳೆಯ ಗಿಡಗಳನ್ನು ಕಿತ್ತು ತೆಗೆದು ಹಿಂದೆ ಎಲ್ಲಾ ಅದನ್ನು ಪದಾರ್ಥಕ್ಕೆ ಕೂಡ ಬಳಸುತ್ತಿದ್ದದ್ದು  ಉಂಟು.


ಎಲ್ಲಾ ಹೂಗಳು ಸೌತೆಕಾಯಿ ನೀಡುವುದಿಲ್ಲ.ಹೆಚ್ಚಿನ ಹೂಗಳು ಹಾಗೇ ಬಿದ್ದು ಹೋಗುತ್ತವೆ. ಅದಕ್ಕೆ ನಾವು "ಮರ್ಲ್ ಪೂ" ಅಂತ ಹೇಳುತ್ತೇವೆ.ಅಂದರೆ ಹುಚ್ಚು ಹೂವು. ಅದರಲ್ಲಿ ಸೌತೆಕಾಯಿ ಆಗುವುದಿಲ್ಲ. ಸೌತೆಕಾಯಿ ಆಗುವ ಹೂಗಳು ಹೇಗಿರುತ್ತದೆ ಎಂದರೆ ಹೂವಿನ ಅಡಿಯಲ್ಲಿ ಸೌತೆಕಾಯಿ ಚಿಕ್ಕ ಮಿಡಿಗಳು ಇದ್ದು ಅದರ ಜುಟ್ಟಿನಲ್ಲಿ ಹೂ ಅರಳಿಕೊಂಡಿರುತ್ತದೆ. ಸೌತೆಯ ಮಿಡಿ ದೊಡ್ಡದಾದಂತೆ ಮಿಡಿಯ ತಲೆಯ ಮೇಲಿನ ಹೂ ಕಳಚಿಕೊಂಡು ಕೆಳಗೆ ಬಿದ್ದು..ಸೌತೆಕಾಯಿ ನಂತರ  ದೊಡ್ಡದಾಗುತ್ತಾ ಹೋಗುತ್ತದೆ.


ಬಾಲ್ಯದ  ಸೌತೆಕಾಯಿಗೆ ಕಡು ಹಸಿರು ಬಣ್ಣ ಇದ್ದು ಸುತ್ತಲೂ ಕೆಳಗಿನಿಂದ ಮೇಲಕ್ಕೆ ಬಿಳಿಯ ಬಣ್ಣದ ಉದ್ದ ಉದ್ದದ ಹಲವು ಅಸ್ಪಷ್ಟ  ನಾಮಗಳು ಇರುತ್ತದೆ. ಮುಂದೆ ಬೆಳೆದು ಯೌವನ ದಾಟಿ,ಹಣ್ಣಾಗುತ್ತಾ ವೃದ್ಧಾಪ್ಯಕ್ಕೆ ಬಂದಾಗ ಈ ಕಡು ಪಚ್ಚೆ ನಿಧಾನವಾಗಿ ಮಸುಕಾದ ಸಂಜೆ ಸೂರ್ಯನ ಬಣ್ಣಕ್ಕೆ ತಿರುಗಿ ಬಿಡುತ್ತದೆ ಹಾಗೂ ಬಿಳಿಯ ಅಸ್ಪಷ್ಟ ನಾಮ ಹಳದಿ ಬಣ್ಣಕ್ಕೆ ತಿರುಗಿ ಸ್ಪಷ್ಟವಾಗಿ ನಾಮ ಎಳೆದಂತೆಯೇ ಕಾಣಿಸುತ್ತದೆ. ಒಟ್ಟಿನಲ್ಲಿ ಪೂರ್ತಿ ಹಣ್ಣಾದಾಗ ನೋಡಲು ಈ ಮಂಗಳೂರು ಸೌತೆ ಕಾಯಿಯದು ಜೇನಿನ ಬಣ್ಣ.


ಹಿಂದೆ ಎಲ್ಲಾ ಈಗೀನಂತೆ ಪೈಪು ನೀರಿನ ವ್ಯವಸ್ಥೆ ಇಲ್ಲದೇ ಇದ್ದಾಗ ಬಾವಿಯಿಂದಲೇ ನೀರು ಸೇದಿ,ಹತ್ತಾರು ಕೊಡಪಾನ ನೀರನ್ನು ಹೊತ್ತುಕೊಂಡು ಹೋಗಿ ಗದ್ದೆಯಲ್ಲಿರುವ ಸೌತೆಕಾಯಿಗೆ ಬುಡಕ್ಕೆ ದಿನಾಲೂ ಶ್ರದ್ಧೆಯಿಂದ ಹಾಕುತಿದ್ದದ್ದು ಒಂದು ತಪಸ್ಸಿನಂತಹ ಶ್ರದ್ಧೆಯ ಕೆಲಸವೇ ಆಗಿತ್ತು.


ಈ ಸೌತೆಕಾಯಿಯಲ್ಲಿ ಗರ್ಬೀಜ ಅಂತ ಇನ್ನೊಂದು ಜಾತಿ ಇದೆ ಎಂದು ಅಮ್ಮ ಆವಾಗವಾಗ ಹೇಳುತ್ತಿದ್ದಳು. ಈ ಸೌತೆ ಮತ್ತು ಗರ್ಬೀಜದ ನಡುವಿನ ವ್ಯತ್ಯಾಸ ಏನೆಂದು ನನಗೆ ಮೊದಲು  ಸರಿಯಾಗಿ ಗೊತ್ತಾಗುತ್ತಿರಲಿಲ್ಲ.ಸೌತೆಯ ಮೇಲೆ ಅಸ್ಪಷ್ಟವಾದ  ನಾಮ ಇದ್ದು ಹಾಗೂ ಒಳಗಿನ ಬೀಜಗಳು ಅತೀ ಸಣ್ಣ ಇದ್ದರೆ ಅದು ಗರ್ಬೀಜವಂತೆ,ಸ್ವಲ್ಪ ದೊಡ್ಡ ಬೀಜ ಇದ್ದು ಸ್ಪಷ್ಟವಾದ ನಾಮಗಳಿದ್ದರೆ ಅದು ಸೌತೆ..ಹೇಗೆ ಈ ಬದನೆ ಮತ್ತು ಗುಳ್ಳ ಎರಡೂ ಬೇರೆ ಬೇರೆಯೋ.. ಅದೇ ರೀತಿ ಸೌತೆಕಾಯಿ ಮತ್ತು ಗರ್ಬಿಜ ಎರಡೂ ಕೂಡ  ಬೇರೆ ಬೇರೆಯಂತೆ.


ಬದನೆ ಮತ್ತು ಗುಳ್ಳದ ನಡುವಿನ ವ್ಯತ್ಯಾಸ ಏನೆಂದರೆ.. ಬದನೆ ಹಲವು ಬಣ್ಣಗಳಲ್ಲಿ ಹಲವು ಶೇಪ್ ಗಳಲ್ಲಿ ದೊರೆಯುತ್ತದೆ. ಆದರೆ ಗುಳ್ಳ ಒಂದೇ ಶೇಪ್ ಹಾಗೂ ಒಂದೇ ಬಣ್ಣ. ಹೆಚ್ಚಾಗಿ ಗುಳ್ಳ ಜಾಸ್ತಿ ಹಸಿರು ಬಣ್ಣ ಹೊಂದಿದ್ದು ರೌಂಡ್ ಆಗಿಯೇ  ಇರುತ್ತದೆ.ಗುಳ್ಳದ ಸಿಪ್ಪೆ ದಪ್ಪವಾಗಿದ್ದು ಮತ್ತು ಅದು ಪದಾರ್ಥಕ್ಕೆ ಬಹಳ ರುಚಿಯಾಗಿರುತ್ತದೆ. ಗುಳ್ಳದಲ್ಲಿ ಮುಳ್ಳು ಕೂಡ ಇರುತ್ತದೆ.ಉಡುಪಿಯ ಮಟ್ಟು ಗುಳ್ಳ ಪೇಟೆಂಟ್ ಕೂಡ ಪಡೆದುಕೊಂಡು ಬಹಳನೇ ಪ್ರಸಿದ್ಧವಾಗಿದೆ.ಮಾಮೂಲಿ ಬದನೆಯನ್ನು ಪದಾರ್ಥ ಮಾಡುವಾಗ ಜಾಸ್ತಿ ನೀರು ಬಿಟ್ಟುಕೊಡುತ್ತದೆ ಮತ್ತು ಅದರಲ್ಲಿ ಕನೇರು(ಒಗರು) ಕೂಡ ಸ್ವಲ್ಪ ಜಾಸ್ತಿ, ಹಾಗಾಗಿ ಗುಳ್ಳಕ್ಕೆ ಹೋಲಿಸಿದರೆ ಬದನೆ ರುಚಿ ಸ್ವಲ್ಪ ಕಡಿಮೆ.



ಈ ಸೌತೆಕಾಯಿಯ ರೀತಿಯಲ್ಲಿಯೇ ಇನ್ನೊಂದು ಬರುತ್ತದೆ. ಅದರ ಹೆಸರು ಹಿಬುಲ ಎಂದು. ಕೆಲವರು ತಿಬುಲ ಎಂದು ಕೂಡ ಹೇಳುತ್ತಾರೆ.ಇದಕ್ಕೆ ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ ಎಂದು ಕೂಡ ಹೇಳುತ್ತಾರೆ.ಕೆಲವು ಭಾಗಗಳಲ್ಲಿ ಮೆಕ್ಕೆ ಹಣ್ಣು, ಚಿಬ್ಬಳ್ಳು ಎಂದು ಕೂಡ ಹೇಳುತ್ತಾರೆ.ಕೇರಳದಲ್ಲಿ ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎಂದು ಕರೆಯುತ್ತಾರೆ ಅಂತೆ.ಇದರ ಬೀಜಗಳು ಕೂಡ ಗರ್ಬೀಜದ ಬೀಜದಂತೆ ಸಣ್ಣದಾಗಿ ಇರುತ್ತದೆ.ಕರಬೂಜದ ಪ್ರಬೇಧಕ್ಕೆ ಸೇರಿದ ಇದನ್ನು Snap Melon ಎಂದು ಇಂಗ್ಲಿಷ್ ನಲ್ಲಿ ಕರೆಯುತ್ತಾರೆ.ಇದೂ ಕೂಡ ಒಂದೊಂದು ಕಡೆ ಒಂದೊಂದು ಸೈಜಿನಲ್ಲಿ ಕಂಡುಬರುತ್ತದೆ.ಇದರಲ್ಲಿಯೂ ಕೂಡ ಹಲವಾರು ಉಪ ಪ್ರಬೇಧಗಳು ಇದೆ. ಹಣ್ಣಾದಾಗ ಇದು ಹಾಗೇ ಸಿಪ್ಪೆ ಸಹಿತ ಒಡೆದು ಹೋಗಿ ಸುತ್ತಲೂ ಒಳ್ಳೆಯ ಪರಿಮಳ ಹೊರ ಸೂಸುತ್ತದೆ. ಆವಾಗ ಇದು  ಜ್ಯೂಸ್ ಮಾಡ್ಲಿಕ್ಕೆ ಹೇಳಿ ಮಾಡಿಸಿದ್ದು.ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲಿ ಇದು ಕಂಡು ಬರುತ್ತದೆ.


 ಈ ಹಿಬುಲದ ಒಂದು ಬಹಳ ಪರಿಮಳದ ಜ್ಯೂಸ್ ಉಂಟಲ್ಲಾ  ಆಹಾ... ಯಾವುದೇ ಮಿಲ್ಕ್ ಶೇಕ್ ಗಿಂತಲೂ ಅದು ಕಡಿಮೆ ಇರುವುದಿಲ್ಲ. ಇದುವೇ ತುಳುನಾಡಿನ ಸಾಂಪ್ರದಾಯಿಕ ಹಾಗೂ ಅತೀ ಹಳೆಯ ಕಾಲದ ಮಿಲ್ಕ್ ಶೇಕ್. ಹಿಬುಲದಿಂದ ಹೆಚ್ಚಾಗಿ ಕೇವಲ ಜ್ಯೂಸ್ ಒಂದನ್ನೇ ಮಾಡುತ್ತಾರೆ. ಆದರೆ ಇಲ್ಲಿ ಮಿಲ್ಕ್ ಶೇಕ್ ನಂತೆ ಹಾಲು ಸಕ್ಕರೆ ಯಾವುದೂ ಹಾಕದೇ,ಹಣ್ಣಾದ ಹಿಬುಲದ ಪಲ್ಪಿಗೆ ತೆಂಗಿನಕಾಯಿ ಹಾಲು ಹಾಗೂ ತುರಿದ ಬೆಲ್ಲ ಹಾಕಿ ಜ್ಯೂಸ್ ಮಾಡುತ್ತಾರೆ. ಆ ನಂತರ ಅದನ್ನು ಲೋಟಕ್ಕೆ ಹಾಕಿಕೊಂಡು ಅದರ ಮೇಲೆ ಹಾಗೇ ಅವಲಕ್ಕಿಯನ್ನು ಉದುರಿಸಿಕೊಂಡು ತಿನ್ನುವ ಹಾಗೂ ನಡು ನಡುವೆ ಕುಡಿಯುವ ಅದರ ಮಜವೇ ಬೇರೆ.ಅದೊಂದು ತರಹದ ಸ್ವರ್ಗ.ಅನುಭವಿಸಿದವರಿಗೆ ಮಾತ್ರ ಗೊತ್ತು. 



ಈಗಿನ ಕಾಲದ ಮಕ್ಕಳಿಗೆ ಹಿಬುಲ ಅಂದರೆ ಏನೆಂದೇ ಗೊತ್ತಿಲ್ಲ.ಅದು ಸೀಸನ್ ನಲ್ಲಿ ಮಾತ್ರ ಆಗುತ್ತದೆ.ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ಸಿಗುತ್ತದೆ.ಆದರೆ ಮಂಗಳೂರಿನ ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ ವರ್ಷ ಪೂರ್ತಿ ಈ  ಹಿಬುಲ ಜ್ಯೂಸ್ ಸಿಗುತ್ತದೆ. ಅವರು ಏನು ಮಾಡುತ್ತಾರೆ ಎಂದರೆ ಈ ಕರ್ಬೂಜ (Musk melon) ಹಣ್ಣನ್ನೇ ಸಕ್ಕರೆ, ಹಾಲು ಹಾಕಿ ಹಿಬುಲ ಜ್ಯೂಸ್ ಎಂದು ವರ್ಷ ಪೂರ್ತಿ ಮಾಡಿ ಕೊಡುತ್ತಾರೆ. ಈಗೀನ ಪುಟ್ಟ ಮಕ್ಕಳು ಅದುವೇ ನಿಜವಾದ ಹಿಬುಲ ಎಂದು ತಿಳಿದಿದ್ದಾರೆ. ಅದರೇ ಹಿಬುಲ ಎನ್ನುವುದು ಬೇರೆಯೇ ಒಂದು ವಿಶಿಷ್ಟವಾದ ಸೌತೆಕಾಯಿಯನ್ನೇ ಹೋಲುವ ತರಕಾರಿ ಎಂದು ಅವರಿಗೂ ಕೂಡ ಗೊತ್ತಿಲ್ಲ.ಅದನ್ನು ಸಂಪ್ರದಾಯಕವಾಗಿ ರುಚಿ ರುಚಿಯಾಗಿ ಸವಿಯುವ ಭಾಗ್ಯ ನಮ್ಮ ಇಂದಿನಂತೆ ಮಕ್ಕಳಿಗೆ ಇಲ್ಲ ಎನ್ನುವುದು ಕೂಡ ಅಷ್ಟೇ ಬೇಜಾರಿನ ವಿಷಯವೇ.


ಅಪರೂಪಕ್ಕೆ ಸೀಸನ್ ನಲ್ಲಿ ಮಾರುಕಟ್ಟೆಗೆ ಬರುವ ಈ ಹಿಬುಲಕ್ಕೆ ಕೆಜಿ ಗೆ ಕೆಲವೊಮ್ಮೆ ನೂರರಿಂದ ನೂರ ಐವತ್ತು ರೂಪಾಯಿವರೆಗೂ ಇರುತ್ತದೆ. ನಾನಂತು ಹಳೆಯ ಶೈಲಿಯಲ್ಲಿಯೇ ಬೆಲ್ಲ ಕಾಯಿಹಾಲು ಹಾಕಿ ಕಡೆದು ಆ ನಂತರ  ಅವಲಕ್ಕಿ ಉದುರಿಸಿ ಸುರ್ ಪುರ್ ಎಂದು ಹಿಬುಲ ಜ್ಯೂಸ್ ಹೀರಲು ಎಂದಿಗೂ ಮರೆಯುವುದೇ ಇಲ್ಲ.ಏಕೆಂದರೆ ತಿನ್ನುವುದರಲ್ಲಿ ನನ್ನ ಸುಖಗಳು ಬರೀ  ಇಂತವುಗಳೇ.. ಅದು ಯಾವುದೇ  ಬಿರಿಯಾನಿಯಲ್ಲೂ ಇಲ್ಲ ಪಿಜ್ಜಾ ಬರ್ಗರ್ ಗಳಲ್ಲಿ ಅಂತು ಮೊದಲೇ ಇಲ್ಲ. 



ಈ ನಮ್ಮ ಸೌತೆಕಾಯಿ ಉಂಟಲ್ಲಾ ಇದನ್ನು ಬೆಳೆಯುವುದರಲ್ಲಿ ಇನ್ನೂ ಒಂದು ಗಮ್ಮತ್ತು ಉಂಟು. ಕೆಲವೊಮ್ಮೆ ಎಂತಹ ಸೂಂಟನ್ ಗೊಬ್ಬರ ಹಾಕಿದರೂ ಸೌತೆಕಾಯಿ ಆಗುವುದೇ  ಇಲ್ಲ.ಬಳ್ಳಿ ಉದ್ದಕ್ಕೆ ಸೋಮಾರಿಯಂತೆ ಊರು ತುಂಬಾ ಹರಡಿಕೊಂಡು ಹೋಗುತ್ತದೆ ಅಷ್ಟೇ.ಅದರ ಅರ್ಥ ಊರವರ ಕಣ್ಣು ನಮ್ಮ ಸೌತೆಕಾಯಿ ಗಿಡದ ಮೇಲೆ ಬಿದ್ದಿದೆ ಎಂದು. ಆಗ ಮನೆಯಲ್ಲಿ ಅಮ್ಮನಿಗೆ ಅದರದ್ದೇ ಚಿಂತೆ. ಆಗಲೇ ನನ್ನ ಕೈಚಳಕ ಕೆಲಸಕ್ಕೆ ಬರುವುದು. ಅದುವೇ  ಬೆಲ್ಚಪ್ಪ. ಕನ್ನಡದಲ್ಲಿ ಬೆದುರು ಬೊಂಬೆ ಅಂತ ಹೇಳ್ತಾರೆ.


ಒಂದು ದೊಡ್ಡ ಕೋಲನ್ನು ಗದ್ದೆಯಲ್ಲಿ ಊರಿ ಅದಕ್ಕೆ ಮೇಲೆ ಕೈಯಂತೆ ಇನ್ನೊಂದು ಅಡ್ಡ ಕೋಲನ್ನು ಕಟ್ಟಿ.. ಆ ನಂತರ ಅದಕ್ಕೆ ಹಳೆಯ ನನ್ನದೊಂದು ಶರಟು,ಹಾಗೂ ಪ್ಯಾಂಟು ತೊಡಿಸಿ ಬಿಟ್ಟರೆ ಬೆಲ್ಚಪ್ಪ ರೆಡಿ. ಪುನಃ ಬೆಲ್ಚಪ್ಪ ನನ್ನು ಇನ್ನಷ್ಟು ಕಟ್ಟುಮಸ್ತು ಮಾಡಲು.. ಆ ಶರಟು ಮತ್ತು  ಪ್ಯಾಂಟಿನೊಳಗೆ ಹುಲ್ಲು ಅದು ಇದು ಕಸ ಕಡ್ಡಿ ತುಂಬಿ ಬಿಡುತ್ತಿದ್ದೆ.ಕೊನೆಗೆ ಬೆಲ್ಚಪ್ಪನಿಗೊಂದು ಮಂಡೆ ಬೇಕಲ್ಲ. ಅದಕ್ಕೆ ಮನೆಯಲ್ಲಿ ಒಡೆದು ಹೋದ ಮಣ್ಣಿನ ಬಿಸಲೆ(ಪಾತ್ರ) ಗೆ ಸುಣ್ಣದಲ್ಲಿ ಚೆನ್ನಾಗಿ ಕಣ್ಣು ಬಾಯಿ, ಮೂಗು ಕಿವಿಯನ್ನು  ಶ್ರದ್ಧೆಯಿಂದ ಬಿಡಿಸುತ್ತಿದ್ದೆ. ನಾಲಗೆಯನ್ನು ಮಾತ್ರ ರಕ್ಕಸನಂತೆ ಬಹಳ ದೊಡ್ಡದಾಗಿ ಬರೆಯುತ್ತಿದ್ದೆ. ಆ ನಂತರ ಆ ಬಿಸಲೆಯನ್ನು ಕೋಲಿನ ತುದಿಗೆ ಸಿಕ್ಕಿಸಿ ಬಿಟ್ಟರೆ ಸಂಪೂರ್ಣವಾದ full pledged ಬೆಲ್ಚಪ್ಪ ರೆಡಿ.


ಅಮ್ಮ ಬೈಯುತ್ತಿದ್ದಳು.. ನಿನಗೆ ಭಾಷೆ ಉಂಟನಾ.. ಬೆಲ್ಚಪ್ಪ ಮಾಡುವುದು ಕಾಡು ಪ್ರಾಣಿಗಳು,ಹಂದಿಗಳು ಅದನ್ನು ನೋಡಿ ಬೆದರಿ ಜಾಗದ ಬಳಿ ಬರದೇ ಇರಲಿ ಅಂತ ಅಷ್ಟೇ ,ಈ ನಿನ್ನ ಪುಟ್ಟ ಸೌತೆ ಬಳ್ಳಿಗೆ ಯಾರಾದರೂ ಬೆಲ್ಚಪ್ಪ ಮಾಡ್ತಾರನಾ.. ಅಂತ ಞಕ್ಕ್ ಞೈ ಮಾಡುತ್ತಿದ್ದಳು.ನನಗೆ ಅದೆಲ್ಲಾ ಗೊತ್ತಿಲ್ಲ.. ನನಗೆ ಬೆಲ್ಚಪ್ಪ ಮಾಡಲು ಒಂದು ಕಾರಣ ಬೇಕು ಅಷ್ಟೇ.


ಏಕೆಂದರೆ ನನ್ನ ಪಾಲಿಗೆ ಅದೊಂದು ಭಯಂಕರ ಕ್ರಿಯೇಟಿವ್ ಕೆಲಸ.ಬೇಕಿದ್ದರೆ ಬಸಳೆ ದೊಂಪವೇ ಇರಲಿ..ಬೆಂಡೆ ಅಲಸಂಡೆಯ ಸಾಲು..ಸೌತೆಯ ಬಳ್ಳಿಯೇ ಇರಲಿ.. ಸರಿಯಾದ ಬೆಳೆ ಬರದಿದ್ದರೆ ನನಗೆ ಅಲ್ಲೊಂದು  ಬೆಲ್ಚಪ್ಪ ನನ್ನು ಸ್ಥಾಪನೆ ಮಾಡದಿದ್ದರೆ ರಾತ್ರಿಯೆಲ್ಲಾ ನಿದ್ದೆಯೇ ಬರುತ್ತಿರಲಿಲ್ಲ.ಶಾಲೆಗೆ ನಡೆದುಕೊಂಡು ಹೋಗುವಾಗ ಊರಲ್ಲಿ ಬೇರೆಯವರ ತೋಟದಲ್ಲಿ ಮತ್ತು ಗದ್ದೆಯ ನಡುವಲ್ಲಿ ಒಂಟಿಯಾಗಿ ನಿಂತಿರುವ ಹಲವು ಬೇರೆ ಬೇರೆ ರೀತಿಯ ಬೆಲ್ಚಪ್ಪ ನನಗೆ ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವೇ ಆಗಿತ್ತು.


ಅದನ್ನು ನೋಡಿದಾಗಲೆಲ್ಲ ನಾನೂ ಕೂಡ  ಒಂದು ಬೆಲ್ಚಪ್ಪ ಮಾಡಬೇಕಾಲ್ಲ ಎಂದು ಅನಿಸುತ್ತಿತ್ತು. ಆದರೆ ನಮಗೆ ಅಂತಹ ದೊಡ್ಡ ಸಾಗುವಳಿ ಏನೂ ಇಲ್ಲ.ಇದ್ದ ಜಾಗದಲ್ಲಿ ತರಕಾರಿ ಕೃಷಿ ಅಷ್ಟೇ ಮಾಡುತ್ತಿದ್ದರು. ಹಾಗಾಗಿ ಅಮ್ಮನ ತರಕಾರಿ ಕೃಷಿ ಸರಿಯಾಗಿ ಬರುತ್ತಿಲ್ಲ ಎಂದು ಗೊತ್ತಾದಾಗ, ಕೂಡಲೇ ನಾನು ತುಂಬಾ ಹೈಪರ್ Active ಆಗಿ ನನ್ನ ಕಲ್ಪನೆಯ ಬೆಲ್ಚಪ್ಪನನ್ನು ಮಾಡಿ ನಮ್ಮ ಜಾಗದಲ್ಲಿ, ತರಕಾರಿಯ ಸಾಲಿನ ಬುಡದಲ್ಲಿ ನಿಲ್ಲಿಸಿ ಬಿಡುತ್ತಿದ್ದೆ.


ಅದನ್ನು ನಂತರ ಹಾಗೇ ಬೇರೆ ಬೇರೆ Angle ನಿಂದ ನಾನೇ ನೋಡಿ ಸಂತೋಷ ಪಡುತ್ತಿದ್ದೆ. ನನಗೆ ಅಂತು ಈ ತರಕಾರಿ ಬೇಕಾದರೆ ಹಾಳಾಗಿ ಹೋಗಲಿ.. ಒಟ್ಟಿನಲ್ಲಿ ನನ್ನ ಬೆಲ್ಚಪ್ಪ ಚಂದ ಆಯಿತು ಅಲ್ವಾ.. ಅನ್ನೊದಷ್ಟೇ ನನ್ನ ಖುಷಿ ಆವಾಗ. ಆ ನಂತರ ದುಷ್ಟ ಹಕ್ಕಿಗಳು ಅದರ ಮುಖದ ಮೇಲೆ ಅಂದರೆ ಮಣ್ಣಿನ ಬಿಸಲೆಯ ಮೇಲೆಯೇ ಹಿಕ್ಕೆಗಳನ್ನು ಹಾಕಿ ಹಾಕಿ.. ಬೆಲ್ಚಪ್ಪನ ಮುಖವನ್ನು  ಸಂಪೂರ್ಣವಾಗಿ ಬಿಳಿ ಮಾಡುತ್ತಿದ್ದವು.


ಈ ಸೌತೆ ಬಳ್ಳಿಯಲ್ಲಿ...ಅದೇ ರೀತಿ  ಕೆಂಬುಡೆ(ಸಿಹಿಗುಂಬಳ),ಕುಂಬುಡ(ಬೂದುಗುಂಬಳ) ಬಳ್ಳಿಯಲ್ಲಿ ಫಲ ಹೋಗದಿದ್ದರೆ ಅಮ್ಮನದ್ದು ಅದಕ್ಕೆ ಬೇರೆಯೇ ಒಂದು ಸೂಪರ್ ತಂತ್ರ ಇತ್ತು. ಅದೂ ಕೂಡ ಬಹಳ ಸೊಗಸಾಗಿತ್ತು. ಅವಳು ಫಲದ ಬರದ  ಗಿಡಕ್ಕೆ ತಮ್ಮನ ಬಡಿಸುತಿದ್ದಳು. ತಮ್ಮನ ಅಂದರೆ ಕನ್ನಡದಲ್ಲಿ ಬೀಗರ ಊಟ ಅಂತ ಹೇಳಬಹುದು. 


ಅವಳು ಏನು ಮಾಡುತ್ತಿದ್ದಳು ಎಂದರೆ ಒಂದು ಸ್ವಲ್ಪ ಅನ್ನ,ಯಾವುದಾದರೂ ಸ್ವಲ್ಪ ಪದಾರ್ಥ, ಹಾಗೂ ಬೆಲ್ಲವನ್ನು...ಫಸಲು ಬರದ ಸೌತೆಯೋ ಇಲ್ಲ ಈ ಸಿಹಿಗುಂಬಳದ ಬಳ್ಳಿಯಲ್ಲಿರು ಒಂದು ಎಲೆಗೆ ಹಾಕಿ.. ಅವೆಲ್ಲವೂ ಆ ಎಲೆಯ ಒಳಗಿರುವಂತೆ ನೋಡಿಕೊಂಡು,ಆ ನಂತರ ಅದರ ಎಲೆಯ ತುದಿಯನ್ನು ಒಟ್ಟು ಮಾಡಿ, ದೇವರನ್ನು ಪ್ರಾರ್ಥಿಸಿ ಎಲೆಯ ತುದಿಯನ್ನು ಕಟ್ಟಿ ಬಿಡುತ್ತಿದ್ದಳು. ಏನೋ ಒಂದು ಅವಳ ನಂಬಿಕೆ. ನೀವು ನಂಬುತ್ತಿರೋ ಬಿಡುತ್ತಿರೋ ಆವಳು ಆ ತರಹದ ಮಾಡಿದಾಗಲೆಲ್ಲ... ನಮ್ಮ ಮನೆಯ ಬಳ್ಳಿಯ ತುಂಬೆಲ್ಲಾ ಸೌತೆಕಾಯಿಯೇ..ಕೆಂಬುಡೆಯೋ ಲೆಕ್ಕಕ್ಕಿಂತ ಜಾಸ್ತಿಯೇ ಆಗುತ್ತಿತ್ತು.


ನಮ್ಮ ಮನೆಯ ಹಿಂದೆ ಕೆಳಗಡೆ ಸಾಲು ಸಾಲಾಗಿ ಗದ್ದೆಗಳು.ನಮ್ಮದಲ್ಲ ಬೇರೆಯವರ ಗದ್ದೆಗಳು. ಅದರಲ್ಲಿ ಬತ್ತ ಎಲ್ಲಾ ಕೊಯ್ದ ಮೇಲೆ ಊರ ದನಗಳು ಮೇಯಲು ಹೋಗುತ್ತಿದ್ದವು. ಅವುಗಳು ಅಲ್ಲಲ್ಲಿ ಸೆಗಣಿ ಹಾಕುತ್ತವೆಯಲ್ಲಾ, ಅದು ಒಣಗಿದ ಮೇಲೆ ಅದರಲ್ಲಿರುವ ಪಸೆಗೆ ದನದ ಸೆಗಣಿಯಲ್ಲಿದ್ದ ಸೌತೆಕಾಯಿಯ ಬೀಜಗಳು ಸೊಂಪಾಗಿ ಬೆಳೆದು ನಿಲ್ಲುತ್ತಿದ್ದವು. ನನಗೆ ಅದನ್ನು ಕಂಡರೆ ಅದೆನೋ ಆಸೆ. ಹಾಗೇ ಸೆಗಣಿ ಸಹಿತವಾಗಿ ಆ ಗಿಡಗಳನ್ನು ಬಹಳ ಆಸಕ್ತಿಯಿಂದ ಅಷ್ಟೇ ಆಸ್ಥೆಯಿಂದ ತಂದು ಅದನ್ನೂ ಕೂಡ ಮನೆಯ ಜಾಗದಲ್ಲಿ ನೆಡುತ್ತಿದ್ದೆ.. ನಂತರ ಅಮ್ಮ ಅದರ ಆರೈಕೆ ಮಾಡಿ ಅದರಲ್ಲೂ ಬೇಕಾದಷ್ಟು ಸೌತೆಕಾಯಿಗಳನ್ನು ಆಗುವಂತೆ  ಮಾಡುತ್ತಿದ್ದಳು.


ಒಮ್ಮೆಯಂತು ನಾನು ತಂದ ಕೆಂಬುಡೆ ಗಿಡದಲ್ಲಿ ಬೇಕಾದಷ್ಟು ಕೆಂಬುಡೆ ಆಗಿ ಅಕ್ಕ ಪಕ್ಕದವರಿಗೆಲ್ಲಾ ಹಂಚಿದ್ದೆವು. ನಮ್ಮಲ್ಲಿ ಬೆಳೆದ ತರಕಾರಿಗಳನ್ನು ಮನೆಗೆ ಬಂದವರಿಗೆ ಇಲ್ಲವೇ ಅಕ್ಕ ಪಕ್ಕದವರಿಗೆ ಹಂಚುವ ಖುಷಿಯೇ ಬೇರೆ. ಅದೂ ಕೂಡ ಫ್ರೆಶ್ ಆಗಿ ಕೊಯ್ದೇ ಕೊಡುವುದು. ಅಮ್ಮ ನಮ್ಮ ಮನೆಗೆ ಕೊಯ್ದು ತಂದದಕ್ಕಿಂತ,ಶ್ರದ್ಧೆಯಿಂದ ಅವಳು ಮಾಡಿದ್ದ  ತರಕಾರಿಯನ್ನು  ಬೇರೆಯವರಿಗೆ ಹಂಚಿದ್ದೇ ಜಾಸ್ತಿ. ಅವಳ ಖುಷಿ ಸಂತೋಷಗಳು ಕೂಡ ಇಂತಹದ್ದೇ. 


ಹೇಗೆ ನಾವೆಲ್ಲಾ ಮಳೆಗಾಲಕ್ಕೆ ಮೊದಲೇ  ಉಪ್ಪಿನಕಾಯಿ, ಹಾಗೂ ಉಪ್ಪು ನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ, ಹಲಸಿನ ಸೋಳೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳುತ್ತೆವೆಯೋ.. ಹಾಗೆ ಬೆಳೆದ ಈ ಸೌತೆಕಾಯಿಗಳನ್ನು ಮನೆಯ ಅಟ್ಟಕ್ಕೆ ತೂಗು ಹಾಕುವ ಸಂಪ್ರದಾಯ ನಮ್ಮ ತುಳುನಾಡಿನಲ್ಲಿ ಇದೆ. ಅದನ್ನು ತೆಂಗಿನ ಸಿರಿಯಲ್ಲಿ ಒಂದೊಂದನ್ನೇ ಗಟ್ಟಿಯಾಗಿ ಕಟ್ಟಿ ಎಲ್ಲಾ ಸೌತೆಕಾಯಿಗಳನ್ನು ಒಂದೇ ಎತ್ತರದಲ್ಲಿ ಇರುವಂತೆ ಸಮನಾಂತರವಾಗಿ ಮನೆಯ ಮಾಡಿನಲ್ಲಿ ತೂಗು ಹಾಕಲಾಗುತ್ತದೆ. 




ಅದನ್ನು ನೋಡುವುದೇ ಒಂದು ಚಂದ. ಅದಕ್ಕಿಂತ ಸೊಗಸಾದ ಅಲಂಕಾರ ಮನೆಗೆ ಬೇರೆ ಯಾವುದೂ ಬೇಕಾಗಿಯೇ ಇಲ್ಲ.ಬಣ್ಣ ಬಣ್ಣದ ಪುಗ್ಗೆಗಳು ಕೂಡ ಮನೆಯ ಅಟ್ಟದಲ್ಲಿ ತೂಗುತ್ತಾ, ತೊನೆಯುವ ಜೇನಿನ  ಬಣ್ಣದ ಸೌತೆಕಾಯಿಗೆ ಎಂದಿಗೂ ಸಮವಾಗದು. 


ಅದನ್ನು ನೋಡುತ್ತಿದ್ದರೆ ಅದು ಹಾಗೆಯೇ ಇರಲಿ,ಪದಾರ್ಥಕ್ಕೆ ಬಳಸುವುದೇ ಬೇಡ ಎಂದು ಅನ್ನಿಸುವುದಿದೆ. ಆದರೆ ಮಳೆಗಾಲದಲ್ಲಿ ಮನೆಯ ಛಾವಣಿಯಲ್ಲಿ ತೂಗುವ ಒಂದೊಂದೇ ಸೌತೆಕಾಯಿ ಕೆಳಗಿಳಿದು ಬಂದು ನಮ್ಮ ಹೊಟ್ಟೆ ಹೊರೆಯುತ್ತದೆ. ಒಂದು ವಿಷಯ ನೆನಪಿರಲಿ ಊರಿನ ಗೊಬ್ಬರ ಬಳಸಿದ ಸೌತೆಕಾಯಿ ಮಾತ್ರ ಈ ರೀತಿ ವರ್ಷ ಪೂರ್ತಿ ಮನೆಯ ಅಟ್ಟಕ್ಕೆ ಕಟ್ಟಿ ತೂಗಿ ಬಿಡಬಹುದು.ರಸ ಗೊಬ್ಬರ ಬಳಸಿದ ಸೌತೆಕಾಯಿಗಳನ್ನು ಆ ರೀತಿ ಮಾಡಲು ಸಾಧ್ಯವಿಲ್ಲ ಏಕೆಂದರೆ ಅವುಗಳು ಬಹು ಬೇಗನೆ ಕೊಳೆತು ಹಾಳಾಗಿ ಬಿಡುತ್ತದೆ. 


ತುಳುನಾಡಿನಲ್ಲಿ ಮತ್ತು ಕೇರಳದಲ್ಲಿ ಸೌರಮಾನ ಯುಗಾದಿಗೆ ಹೆಚ್ಚಿನ ಪ್ರಾಶಸ್ತ್ಯತೆ ಉಂಟು.ಮೊದಲೇ ಹೇಳಿದಂತೆ ಇಲ್ಲಿ ಭೂಮಿ ತಾಯಿಗೂ, ಸೂರ್ಯ ದೇವನಿಗೂ ಹೆಚ್ಚಿನ ಪ್ರಾಶಸ್ತ್ಯ ಹಿಂದಿನಿಂದಲೂ ಇದೆ. ಹಾಗಂತ ಚಾಂದ್ರಮಾನ ಯುಗಾದಿ ಇಲ್ಲಿ  ಆಚರಿಸುವುದಿಲ್ಲ ಎಂದು ಅರ್ಥ ಅಲ್ಲ.ಎರಡನ್ನೂ ಒಟ್ಟಿಗೆ ಆಚರಿಸಿ ಖುಷಿ ಪಡುತ್ತೇವೆ.ಒಟ್ಟಿನಲ್ಲಿ  ಪರಮಾನ್ನ(ಪಾಯಸ) ಸೇವಿಸಲು ನಮಗೆರಡೆರಡು ಸದಾವಕಾಶ.ಯುಗಾದಿಯೇ ಇರಲಿ ಅಷ್ಟಮಿಯೇ ಇರಲಿ ಒಂದೇ ಹಬ್ಬ ಎರಡೆರಡು ಬಾರಿ ಆಚರಿಸಲು ಸಿಕ್ಕರೆ ಯಾರೂ ಬಿಡುತ್ತಾರೆ.. ಅದಕ್ಕೂ ಕೂಡ ಪುಣ್ಯ ಬೇಕು,ಭಾಗ್ಯ ಬೇಕು ಎಂದು ನನಗೇ ನಾನು ಅಂದುಕೊಂಡು ನಾನಂತು ಚೆನ್ನಾಗಿ ಸಿಹಿ ಊಟ ಬಾರಿಸಿಯೇ ಬಿಡುತ್ತೇನೆ ಈಗಲೂ.. 



ನಮ್ಮಲ್ಲಿ ಸೌರಮಾನ ಯುಗಾದಿಯನ್ನು "ಬಿಸು ಪರ್ಬ" ಎಂದು ಹೇಳಿದರೆ, ಕೇರಳದವರು ಅದನ್ನು "ವಿಶು" ಅಂತ ಹೇಳ್ತಾರೆ. ಚಾಂದ್ರಮಾನ ಯುಗಾದಿಯ ನಂತರ ಬರುತ್ತದೆ ಇದು.ಒಟ್ಟಿನಲ್ಲಿ ತುಳುವರ  ಹೊಸ ವರ್ಷ ಅದು. ಅದರಲ್ಲಿ "ಬಿಸು ಕಣಿ  ಇಡುವುದು" ಅಂತ ಒಂದು ಸಂಪ್ರದಾಯ ಇದೆ. ಅದರಲ್ಲಿ ಹೆಚ್ಚಾಗಿ ಮಾವಿನಕಾಯಿ, ಗುಜ್ಜೆದ ಕಲ್ಲಿಗೆ(ಎಳೆಯ ಹಲಸು), ಚಿನ್ನ, ಬೆಳ್ಳಿ, ಹಣ, ಬಾಳೆಹಣ್ಣು,ತೆಂಗಿನಕಾಯಿ, ಮನೆಯಲ್ಲಿಯೇ ಬೆಳೆದ ತರಕಾರಿ,ಕನ್ನಡಿ.. ಎಲ್ಲಾ ದೇವರ ಮುಂದೆ, ದೀಪದ ಮುಂದೆ ಇಟ್ಟು ಪ್ರಾರ್ಥಿಸುವ ಕ್ರಮ ಉಂಟು.


ಈ ಮನೆಯಲ್ಲಿ ಬೆಳೆದ ತರಕಾರಿ ಉಂಟಲ್ಲಾ... ಅದರಲ್ಲಿ ಹೆಚ್ಚಾಗಿ ನಮ್ಮ ಜೇನು ಬಣ್ಣದ ಸೌತೆಕಾಯಿ ಒಂದು ಇದ್ದೇ ಇರುತ್ತದೆ..ಸೌತೆಕಾಯಿ ಬಿಸು ಕಣಿಯಲಿ ತನ್ನದೊಂದು ಸ್ಥಾನವನ್ನು ಹಿಂದಿನಿಂದಲೂ ಭದ್ರ ಪಡಿಸಿಕೊಂಡು ಬಿಟ್ಟಿದೆ. ಏಕೆಂದರೆ ಅದು ಇಲ್ಲಿಯೇ ಹುಟ್ಟಿ ಬೆಳೆದು...ಇತರ ಯಾವುದೇ ತರಕಾರಿಗಳು ಇಲ್ಲದ ಸಂದರ್ಭದಲ್ಲಿಯೂ ಸಹ ನಮ್ಮನ್ನು ವರ್ಷ ಪೂರ್ತಿ ಪೊರೆದ ಒಂದು ಅತೀ ವಿಶಿಷ್ಟವಾದ ತರಕಾರಿ.




ಈ ಸೌತೆಕಾಯಿಯಿಂದ ಮಾಡುವ ಅಡುಗೆ ಹೇಗೆ ಎಂದರೆ ಅದು ಉಳಿದೆಲ್ಲಾ ತರಕಾರಿಗಳ ಜೊತೆ ಹಾಗೇ  ಹೊಂದಿಕೊಂಡು ಹೋಗುವ ಒಂದು ಸರಳವಾದ ತರಕಾರಿ. ಅದನ್ನು ಗುಜ್ಜೆ(ಹಲಸು) ಹಾಗೂ ಬಸಳೆಯೊಂದಿಗೆ  ಸೇರಿಸಿ ಕೂಡ ಪದಾರ್ಥ ಮಾಡುತ್ತಾರೆ. ರಸಂ ಮಾಡಿದಂತೆ ತೆಂಗಿನಕಾಯಿ ಹಾಕದೇ ಈ ಸೌತೆಕಾಯಿಯನ್ನು ತೆಳುವಾಗಿ slice ಗಳಂತೆ ತುಂಡರಿಸಿ, ಖಾರ ಖಾರವಾಗಿ ಸಾರು ಮಾಡಿ ಬೆಳ್ಳುಳ್ಳಿ, ಮೆಣಸಿನ ಒಗ್ಗರಣೆ ಕೊಟ್ಟರೆ ಆಹಾ... ಅದು ಕೂಡ ಬಹಳ ರುಚಿ.


ಇನ್ನು ಸೌತೆಕಾಯಿಯ ಮಜ್ಜಿಗೆ ಹುಳಿ, ಬೀಜದ ತಂಬುಳಿ,ಸೌತೆಕಾಯಿ ಸಾಂಬಾರ್ ಎಲ್ಲಾ ನಿಮಗೆ ಗೊತ್ತೇ ಇದೆ. ಈ ಸೌತೆ ಕಾಯಿಯನ್ನು ದೊಡ್ಡ ದೊಡ್ದ ತುಂಡುಗಳನ್ನಾಗಿ ಕಟ್ ಮಾಡಿ.. ಗುಜ್ಜೆ, ಕೆಂಬುಡೆ, ಗುಳ್ಳ ಹಾಕಿ ಮಾಡುವ ಕೊದ್ದೆಲ್ ಗೆ ಕೂಡ ಹಾಕುತ್ತಾರೆ. ಈ ಕೊದ್ದೆಲ್ ಅಂತು ನನಗೆ ತುಂಬಾನೇ ಇಷ್ಟ.ಈ ದೇವಸ್ಥಾನಗಳ ಅನ್ನಸಂತರ್ಪಣೆಗೆ ಕೆಲವೊಮ್ಮೆ ದಿಡೀರಾಗಿ ಆಗಿ ಈ ಸೌತೆಕಾಯಿಯನ್ನು ತುಂಬಾ ಸಣ್ಣದಾಗಿ ಕೊಚ್ಚಿ ಒಂದು ಖಾರದ ಉಪ್ಪಿನಕಾಯಿ ಮಾಡುತ್ತಾರೆ ಅದೂ ಕೂಡ ಒಂಥರಾ ರುಚಿ.ಅಪರೂಪಕ್ಕೆ ತಿನ್ನಲು ಒಳ್ಳೆಯದಾಗುತ್ತದೆ. 

ಮಳೆಗಾಲದಲ್ಲಿ ಸೌತೆಕಾಯಿ, ಹಾಗೂ ಮೊಳಕೆ ಬರಿಸಿದ ಹೆಸರು ಕಾಳಿಗೆ  ಹಲಸಿನ ಬೀಜ ಹಾಕಿ ಮಾಡುವ ಪದಾರ್ಥವು ಕೂಡ  ಬಹಳ ರುಚಿ.


ತಂಪು ಪ್ರಕೃತಿಯ ಈ ಸೌತೆಕಾಯಿ ಪಿತ್ತನಿವಾರಕ ಗುಣ ಹೊಂದಿದ್ದು ವರ್ಷವಿಡೀ ಬಳಸಬಹುದು. ಮಧುಮೇಹಿಗಳ ಆರೋಗ್ಯಕ್ಕೂ ಕೂಡ  ಇದು ಉತ್ತಮವಂತೆ.



ಹೆಸರಿನಲ್ಲಿಯೇ ಮಂಗಳೂರನ್ನು ಹೊತ್ತುಕೊಂಡಿದ್ದರೂ ಸಹ  ಮಂಗಳೂರಿನಲ್ಲಿಯೇ ಸೌತೆಕಾಯಿ ಬೆಳೆಯುವ ಉಮೇದು ಕಡಿಮೆ ಆಗಿದೆ ಈಗ.ಇಲ್ಲಿಯ ಮಾರುಕಟ್ಟೆಗೆ ಹೊರಗಿನಿಂದಲೇ ಸೌತೆಕಾಯಿ ಸಪ್ಲೈ ಆಗುತ್ತದೆ.


ರಸಾಯನಿಕ ಗೊಬ್ಬರ ಹಾಕುವ ಅಂಗಡಿಯ ಸೌತೆಕಾಯಿ ಸಪ್ಪೆ ಎನ್ನುವ ಅಮ್ಮನ ಕಂಪ್ಲೈಟು ನಿನ್ನೆ ಮೊನ್ನೆಯದಲ್ಲ, ಅವಳಿಗೆ ಎಲ್ಲವನ್ನೂ ಅವಳ ಕೈಯಾರೆ ಬೆಳೆದು ಅವಳು ಕೊಯ್ದರೆ  ಅಷ್ಟೇ ಅವಳಿಗದು ರುಚಿಯಾದ ತರಕಾರಿ.ಮಾರ್ಕೆಟ್ ತರಕಾರಿಗಳು ನನಗೂ ಇಷ್ಟವಿಲ್ಲ. ಬೇಕಿದ್ದರೆ ಉಪ್ಪಿನಕಾಯಿ, ಮೊಸರು, ಚಟ್ನಿ, ನೀರಲ್ಲಿ ಹಾಕಿದ ಮಾವು ಇದ್ದರೂ ಸಾಕು.. ಅದನ್ನು ತಿಂದೇ ಆಹಾ ಎನ್ನುತ್ತಾ  ಊಟ ಮಾಡಿ ಎದ್ದೇಳಬಲ್ಲೆ ನಾನು. 


ಅಂದಹಾಗೆ ಮತ್ತೆ ಮನೆಯ ಬಳ್ಳಿಯಲ್ಲೊಂದು ಅದರಷ್ಟಕ್ಕೆ ಹೇಳದೆ ಕೇಳದೆ ಸೌತೆಕಾಯಿ ಒಂದು ಹುಟ್ಟಿಕೊಂಡಿದೆ. ಹಳೆಯ ನೆನಪುಗಳು ನನ್ನಲ್ಲಿ ಮತ್ತೆ ಜೀವಂತ.ನಾನೇ ಮಾಡಿ ನಿಲ್ಲಿಸಿದ್ದ  ಎಷ್ಟೋ ಹಳೆಯ ಬೆಲ್ಚಪ್ಪಗಳು ಮತ್ತೊಮ್ಮೆ ಮನಸ್ಸಿನಲ್ಲಿ ಬಂದು.. ಎಂದಿನಂತೆ ಅವುಗಳು ತಮ್ಮ ಎರಡೂ  ತೋಳುಗಳನ್ನು ಪಕ್ಕಕ್ಕೆ ಹಾಗೇ ಚಾಚಿ ಕೊಂಡು.. ನನ್ನನ್ನು ಇನ್ನೊಮ್ಮೆ ಮಾಡಲಾರೆಯಾ ಎಂದು ನನ್ನಲ್ಲಿ ಕೇಳುತ್ತಿವೆ,ಬಿಟ್ಟು ಬಿಡದೇ  ಅಂಗಲಾಚುತ್ತಿವೆ...




.....................................................................................



#ಏನೋ_ಒಂದು..


ab pacchu

moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..