ಕರಂಡೆ ಎಂಬ ರುಚಿಯಾದ ಉಪ್ಪಿನಕಾಯಿ..
ಇದು #ಕರಂಡೆಕಾಯಿ ಯದ್ದು.ಜೊತೆಗೆ ನಮ್ಮಲ್ಲಿ "ನಮ್ಮ ಊರ್ದ.. ನಮ್ಮ ನೀರ್ದ" ಎಂಬ ಉದ್ಘೋಷದ ಉಪ್ಪಿನಕಾಯಿ ಇದು.
ಇಷ್ಟೇ ದಕ್ಕಿದ್ದು.. ದಿನಾಲೂ ಇದನ್ನೇ ಆಹಾ.. ಎನ್ನುತ್ತಾ ಬೆರಳು ಚೀಪುವ ರೇಂಜಿಗೆ ತಿಂದು ಬಿಟ್ಟರೆ,ಬಾಟ್ಲಿಯದ್ದೂ ಸೇರಿ ನನಗಿದು ಒಂದು ವಾರಕ್ಕೆನೇ ಮುಗಿಯುವ ಸರಕು ಅಷ್ಟೇ..
ಕರಂಡೆ ಎಂದರೆ ಕವಳಿಕಾಯಿ.ಕರಾವಳಿ ಹಾಗೂ ಮಲೆನಾಡಿನ ಗುಡ್ಡ ಹತ್ತಿದರೆ ಬೇಕಾದಷ್ಟು ಸಿಗುತ್ತದೆ ಇದು.ಹಣ್ಣಾಗುವ ಮೊದಲು ಇದನ್ನು ಕೊಯ್ದು ಉಪ್ಪಿನಕಾಯಿ ಹಾಕಬಹುದು. ಹಣ್ಣು ಆದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಣ್ಣು ಕೂಡ ತಿನ್ನಬಹುದು.
ಈ ಗಿಡದಲ್ಲಿ ತುಂಬಾ ಮುಳ್ಳು ಕೂಡ ಇರುತ್ತದೆ. ಮತ್ತು ಕಾಯಿಯಲ್ಲಿ ಸಿಕ್ಕಾಪಟ್ಟೆ ಸೊನೆ ಸಹ ಇರುತ್ತದೆ.ಕಾಯಿ ಕೂಡ ತುಂಬಾನೇ ಹುಳಿ. ಹಾಗಾಗಿಯೇ ಉಪ್ಪಿನಕಾಯಿ ಮಾಡಲು ಹೇಳಿ ಮಾಡಿಸಿದ್ದು ಇದು.ಇದರ ಹೂವು ಮಲ್ಲಿಗೆಯಂತೆ ಕಾಣುತ್ತದೆ. ಇದನ್ನು Carissa Berry ಎಂದು ಕರೆಯುತ್ತಾರೆ.
ಈಗ ಇದರ ಉಪ್ಪಿನಕಾಯಿ ಮಾಡುವುದು ಹೇಗೆ ಎಂದು ನಿಮಗೆ ನಾನು ಬಹಳ ಸಿಂಪುಳ್ ಆಗಿ ಹೇಳಿಕೊಡುತ್ತೇನೆ.. ನಮ್ಮ ಪಾಕ ಪ್ರವಿಣೆ ಸರಳ ಆಂಟಿಯ ಹಾಗೆ. ಅವರು ಹಾಗೆಯೇ.. ತುಂಬಾ ಸರಳ ಆಗಿರುವ ಎಲ್ಲವನ್ನೂ ಬಹಳ ಸಿಂಪುಳ್ ಆಗಿಯೇ ಹೇಳಿಕೊಡುವುದು.
#ಮಾಡುವ_ವಿಧಾನ
ಸುಮಾರು ಒಂದು ಕೆ.ಜಿ ಯಷ್ಟು ಕರಂಡೆ ಕಾಯಿ ನಿಮ್ಮ ಬಳಿ ಇದ್ದರೆ ಈ ಕೆಳಗಿನಷ್ಟು ಸಾಮಾನು ಹಾಕಿ ಈ ಉಪ್ಪಿನಕಾಯಿ ಮಾಡಬಹುದು.
ಮೊದಲು ಕರಂಡೆಕಾಯಿಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಜಾರಿನಲ್ಲಿ ಉಪ್ಪು ಹಾಕಿ ಒಂದು ವಾರಗಳ ಕಾಲ ಉಪ್ಪು ಹೀರಲು ಬಿಟ್ಟು ಬಿಡಿ.ಆ ನಂತರ ಕಾಯಿಗಳೆಲ್ಲಾ ಚೆನ್ನಾಗಿ ಉಪ್ಪು ಹೀರಿಕೊಂಡ ಮೇಲೆ ಇದರಿಂದ ನಾವು ಉಪ್ಪಿನಕಾಯಿ ಮಾಡಬಹುದು.
ಇದಕ್ಕೆ ಬೇಕಾಗುವ ಮಸಾಲೆ ಕಡೆಯಲು.. ಸುಮಾರು ಕಾಲು ಕೆಜಿ ಮೆಣಸು(ಬ್ಯಾಡಗಿ),ಒಂದು ಹತ್ತು ಗಿಡ್ಡ ಮೆಣಸು(ಖಾರ ಬೇಕಾದರೆ ಜಾಸ್ತಿ ಬಳಸಿ), ಎಂಟು ಸ್ಪೂನ್ ಸಾಸಿವೆ, ಎರಡು ಸ್ಪೂನ್ ಜೀರಿಗೆ... ಇಷ್ಟನ್ನು ಚೆನ್ನಾಗಿ ಕಡೆದು ಮಸಾಲೆ ತಯಾರಿಸಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಒಗ್ಗರಣೆ ಇಡಬೇಕು. ಇದಕ್ಕೆ ಮತ್ತೆ ಸಾಸಿವೆ, ಸಿಪ್ಪೆ ತೆಗೆದ ಬೆಳ್ಳುಳ್ಳಿ,ಕರಿಬೇವು ಸೊಪ್ಪು, ಹಿಂಗು (ರುಚಿಗೆ ತಕ್ಕಷ್ಟು), ಹಾಗೂ ಸ್ವಲ್ಪ ಅರಶಿನ ಹಾಕಿ. ಒಗ್ಗರಣೆ ಆದ ನಂತರ ಅದನ್ನು ತಣಿಯಲು ಬಿಡಿ.ಆ ನಂತರ ಇದಕ್ಕೆ ಉಪ್ಪಿನಲ್ಲಿ ಹಾಕಿಟ್ಟ ಕರಂಡೆ ಹಾಗೂ ಕಡೆದಿಟ್ಟ ಮಸಾಲೆ ಸೇರಿಸಿದರೆ ನಮ್ಮ ತುಳುನಾಡಿನ ಬಹಳ ಸಿಂಪುಳ್ ಕರಂಡೆಕಾಯಿ ಉಪ್ಪಿನಕಾಯಿ ರೆಡಿ..
ನನಗಂತು ರೈಸಿನ ಪಕ್ಕದಲ್ಲಿಯೂ ಉಪ್ಪಿನಕಾಯಿ.. ಮೊಸರು ಗಂಜಿಗೂ ಉಪ್ಪಿನಕಾಯಿ...ಚಿತ್ರಾನ್ನ, ಮೊಸರನ್ನ, ನೀರ್ದೋಸೆ ಗೂ... ಯಾವುದಾದರೊಂದು ಉಪ್ಪಿನಕಾಯಿ ಇರಲೇ ಬೇಕು.ತಿಂಡಿಗಳ ಕಾರಣದಿಂದಾಗಿ ಉಪ್ಪಿನಕಾಯಿಗೆ ಬೆಲೆ ಅಲ್ಲ,ಉಪ್ಪಿನಕಾಯಿಯಿಂದಾಗಿಯೇ ನನ್ನಲ್ಲಿ ಸದಾ ಅವುಗಳಿಗೆ ಬೆಲೆ ಹೆಚ್ಚು ಆಗಿದೆ ಅಷ್ಟೇ..ಅಂದ ಹಾಗೆ ಎಷ್ಟೇ ಒಳ್ಳೆಯ ತೆಂಗಿನ್ಕಾಯಿ ಚಟ್ನಿ ಇದ್ದರೂ ಕೆಲವೊಮ್ಮೆ ಪುಳಿಯೋಗರೆಗೂ ಕೂಡ ಬೇಕು ಉಂದಿಷ್ಟು ಖಾರ ಖಾರದ ಉಪ್ಪಿನಕಾಯಿ.
ಅದು ಹಾಗೆಯೇ.. ತುಂಬಾ ಬೇಕೆನಿಸುವ,ಎಂದಿಗೂ ಬಿಡಲಾರದ ಉಪ್ಪಿನಕಾಯಿಯ Addiction ನನ್ನದು.. 😋 ಎಷ್ಟೇ ಹುಳಿ ಇದ್ದರೂ,ಖಾರವಿದ್ದರೂ ಖಡಕ್ ಆದ ಉಪ್ಪಿನಕಾಯಿ ಒಂದು ಜೊತೆ ಇದ್ದರೆ ಮನಸ್ಸಿಗೊಂದು ಅದೆನೋ ವಿವರಿಸಲಾರದ ಸುಖವಿದೆ.ಇಷ್ಟಿದ್ದರೆ ಮತ್ತೇನು ಬೇಕು... ಚೆನ್ನಾಗಿ ಬಾರಿಸಲು ಎಲೆ ಬೇಕು.. ಎಲೆಯ ತುದಿಗೆ ಒಂದಷ್ಟು ಉಪ್ಪಿನಕಾಯಿ ಸದಾ ಕೆಂಪಗೆ ಕಣ್ಣು ಕುಕ್ಕುವಂತಿರಬೇಕು,ಅನುಮತಿ ಇಲ್ಲದೆಯೂ ಬಾಯಲ್ಲಿ ನೀರೂರುವಂತಿರಬೇಕು.ಒಂದೊಳ್ಳೆಯ ಉಪ್ಪಿನಕಾಯಿ ಇದ್ದಾಗ ಬೆರಳು ಚೀಪಿ ಹಾಗೇ ಕಣ್ಣು ಮುಚ್ಚಿ ಆಹಾ ಎನ್ನುತ್ತಾ ಉಪ್ಪಿನಕಾಯಿ ಸವಿಯದಿದ್ದರೆ ಅದೆಂತಹ ಊಟ.. ಅದೆಂತಹ ಬಾಳು .. ಖಂಡಿತವಾಗಿಯೂ ಉಪ್ಪಿನಕಾಯಿಗೆ ಮಾಡುವ ದ್ರೋಹವೇ ಅದು...
ಪಚ್ಚು ಪಾಕಗಳು
Ab Pacchu
Moodubidire
Comments
Post a Comment