ಉಪ್ಪಿನಕಾಯಿಯೇ ಊಟವಲ್ಲ, ಆದರೂ..
ಚಿತ್ರದಲ್ಲಿರುವುದು ಬೆಳ್ಳುಳ್ಳಿಯದ್ದು..
ಜಾತ್ರೆಗೆ ಹೋದಾಗ,ಯಾವುದೇ ಸಾಹಿತ್ಯ ಸಮ್ಮೇಳನ ಅಥವಾ ಕೃಷಿ ಮೇಳ, ಆಹಾರ ಮೇಳಕ್ಕೆ ಹೋದಾಗ ಅಲ್ಲಿರುವ ಉಪ್ಪಿನಕಾಯಿಯ ಸ್ಟಾಲ್ ಗಳಿಗೆ ನನ್ನನ್ನು ಬರ ಸೆಳೆದು ಅಪ್ಪಿಕೊಳ್ಳುವ ಅಯಸ್ಕಾಂತ ಶಕ್ತಿ ಯಾವತ್ತಿಗೂ ಕಡಿಮೆ ಆಗಿಯೇ ಇಲ್ಲ.
ಅವುಗಳನ್ನೇ ಹುಡುಕಿಕೊಂಡು ಹೋಗಿ ಆ ಸ್ಟಾಲ್ ಗಳ ಎದುರು ನಿಂತುಕೊಳ್ಳುವ ನನ್ನ ಉತ್ಸಾಹ ಕೂಡ ನಿನ್ನೆ ಮೊನ್ನೆಯದಲ್ಲ.
ಅಲ್ಲಿ ಹೋಗಿ ಹಾಗೇ ನಿಂತುಕೊಂಡು ಕಣ್ಣರಳಿಸಿ ಭರಣಿಯಲ್ಲಿ ತುಂಬಿಸಿಟ್ಟಿರುವ ಹೋಮ್ ಮೇಡ್ ಉಪ್ಪಿನಕಾಯಿಗಳನ್ನು ನೋಡುವಾಗ,ತಡೆಯಲು ಆಗದೆ ಬಾಯಲ್ಲಿ ಅದರಷ್ಟಕ್ಕೆ ನೀರೂರುವಾಗ.. ಹಾಗೇ ಎಲ್ಲಾ ವಿಧದ ಉಪ್ಪಿನಕಾಯಿಯನ್ನು ಒಮ್ಮೆ ಗಂಟು ಮೂಟೆ ಕಟ್ಟಿ ಮನೆಗೆ ಒಯ್ಯುವ ಎಂದೇ ಮನಸ್ಸಾಗುತ್ತದೆ.
ಹಾಗೆ ಏನಾದರೂ ಮಾಡಿದರೆ ಅಮ್ಮ ಮನೆಯಲ್ಲಿ ಖಂಡಿತ ಉಗಿದು ಉಪ್ಪಿನಕಾಯಿ ಹಾಕುತ್ತಾಳೆ ಎಂದು ಗೊತ್ತು ಹಾಗಾಗಿ ಒಂದೆರಡು ಬಾಟಲ್ ಗಳನ್ನು ಅಷ್ಟೇ ಖರೀದಿಸಿ ಮನೆಗೆ ಮರಳುತ್ತೇನೆ. ಯಾವುದೇ ಮೇಳಕ್ಕೂ ಹೋದರೂ ನನ್ನೊಡನೆ ಕೈ ಕೈ ಹಿಡಿದು ಮನಗೆ ನಡೆದು ಬರುವುದು ಉಪ್ಪಿನಕಾಯಿ ಒಂದೇ. ಉಪ್ಪಿನಕಾಯಿ ಯಾವತ್ತಿಗೂ ನನಗೆ ಕೈಕೊಡದ ಸಂಗಾತಿ.ತುಂಬಾ ಬೇಕೆನಿಸುವವಳು..
ಕೆಲವರಿಗೆ ಕೆಲವೊಂದರಲ್ಲಿ ಆಸಕ್ತಿ ಇರುತ್ತದೆ.ಆದರೆ ಜಾತ್ರೆಯ ಸಂತೆಯಲ್ಲಿ ಅಥವಾ ಯಾವುದೇ ಮಳಿಗೆಯಲ್ಲಿ ನನಗಂತು ಇಷ್ಟ ಆಗುವುದು ಈ ಉಪ್ಪಿನಕಾಯಿಯ ಅಂಗಡಿಗಳೇ. ಹೌದು ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ಸಂಗ್ರಹಿಸಿಟ್ಟು ಕೊಳ್ಳುವುದು ನನ್ನೊಂದು ಹವ್ಯಾಸ.. Of course ರುಚಿ ರುಚಿಯಾದ ಹವ್ಯಾಸ.
ಮಾವಿನ ಕಾಯಿ ಉಪ್ಪಿನಕಾಯಿ ಖಂಡಿತವಾಗಿಯೂ ಮೊದಲ ಸಾಲಿನಲ್ಲಿಯೇ ಇರುವುದು.ಅಮ್ಮ ಚಿಕ್ಕ ಚಿಕ್ಕ ಮಿಡಿಯಲ್ಲಿಯೇ ಉಪ್ಪಿನಕಾಯಿ ಮಾಡುತ್ತಾಳೆ.. ಅದೇ ರೀತಿ ಕಾಯಿ ದೊಡ್ಡದಿದ್ದರೆ ಹೋಳುಗಳ ಉಪ್ಪಿನಕಾಯಿ ಕೂಡ ಮಾಡುತ್ತಾಳೆ.
ನಾವುಗಳು ಗುಡ್ಡ ಹತ್ತಿ ಮಾವಿನಕಾಯಿ ಉದುರಿಸಿ,ಹೆಕ್ಕಿ ತಂದು ಅದನ್ನು ಅಮ್ಮನ ಕೈಗಿಟ್ಟರೆ ಸಾಕು.. ನಂತರ ಅವಳದ್ದೊಂದು ಮಹಾ ಯಾಗ ಬಹಳ ಶ್ರದ್ಧೆಯಿಂದ ಶುರುವಾಗುವುದು. ಆಹಾ... ಎಂತಹ ಶಿಸ್ತು, ಎಂತಹ ಪ್ರೀತಿ.. ಎಂತಹ ಮೋಹ.
ಅವಳು ಅದರದ್ದೊಂದು ಮೆಣಸಿನ ಮತ್ತು ಸಾಸಿವೆಯ ಮಸಾಲೆ ಅವಳಷ್ಟಕ್ಕೆ ಕಡೆಯುವಾಗ ಅದರದ್ದೊಂದು ಪರಿಮಳವೇ ಬಾಯಲ್ಲಿ ಅರ್ಧ ನೀರೂರಿಸಿ ಬಿಡುತ್ತದೆ.ಕೊನೆಗೊಂದು ಅದಕ್ಕೆ ಚಂದದ ಒಗ್ಗರಣೆ ಹಾಕಿ ಭರಣಿಯಲ್ಲಿ ಹಾಕಿಟ್ಟು ಗಟ್ಟಿಯಾಗಿ ಬಟ್ಟೆಯಿಂದ ಕಟ್ಟಿ ಬಿಟ್ಟರೆ, ವರ್ಷಗಟ್ಟಲೆ ಮಾವಿನ ಕಾಯಿ ಉಪ್ಪಿನಕಾಯಿ ಸವಿಯಬಹುದು.ಕೂಡಲೇ ಅದನ್ನು ಓಪನ್ ಮಾಡಿ ಸವಿಯುವಂತಿಲ್ಲ. ಅದು ಉಪ್ಪಿನಕಾಯಿಯ ಅಲಿಖಿತ ನಿಯಮ.
ಆದರೆ ಎಷ್ಟೋ ತಿಂಗಳು ಕಾದು ಆಮೇಲೆ ಉಪ್ಪಿನಕಾಯಿ ತಿನ್ನುವ ಶಿಸ್ತು ನನಗಂತು ಯಾವತ್ತೂ ಬಂದೇ ಇಲ್ಲ. ಉಪ್ಪಿನಕಾಯಿ ಆದ ಕೂಡಲೇ ಒಮ್ಮೆ ಸವಿಯದಿದ್ದರೆ ಮನಸ್ಸಿಗೆ ಏನೋ ಸಮಾಧಾನವಿಲ್ಲ. ಆ ನಂತರ ಅಮ್ಮನಿಗೆ ಒತ್ತಾಯ ಮಾಡಿ ಮಾಡಿ ಭರಣಿಯ ಬಾಯಿ ತೆಗೆಯಿಸಿ,ಉಪ್ಪಿನಕಾಯಿ ಹಾಕಿದ ಒಂದೇ ವಾರದಲ್ಲಿ ಅದನ್ನು ಸವಿಯುವುದೇ ನನ್ನ ಅಚ್ಚುಮೆಚ್ಚಿನ ಚೊರೆಪಟ್ ಕಾಯಕ. ಬೈಗುಳಗಳ ಸುರಿಮಳೆ ಎಂದಿನಂತೆ ಇದ್ದದ್ದೇ. ಉಪ್ಪಿನಕಾಯಿಯನ್ನು ಬೆರಳಲ್ಲಿ ನೆಕ್ಕಿಕೊಂಡು ಹಾಗೇ ಕಣ್ಣು ಮುಚ್ಚಿಕೊಂಡು ಚೀಪುವಾಗ ಯಾವ ಬೈಗುಳಗಳು ತಾನೇ ನಮಗೆ ನಾಟಲು ಸಾಧ್ಯ.
ಏನೇ ಹೇಳಿ ಉಪ್ಪಿನಕಾಯಿ ಮಾಡುವುದು ಒಂದು ತುಂಬಾನೇ ಬೇಕೆನಿಸುವ ಧ್ಯಾನ,ಕ್ರಮ ಬದ್ಧವಾದ ಯೋಗ ಹಾಗೂ ಶ್ರದ್ಧೆಯ ತಪಸ್ಸು ಇದ್ದಂತೆ. ನಮ್ಮೆಲ್ಲರ ತಾಯಂದಿರು ಎಂದಿಗೂ ಅದರಲ್ಲಿ ಎತ್ತಿದ ಕೈ.
ಎಲ್ಲರಿಗೂ ಚೆನ್ನಾಗಿ ಉಪ್ಪಿನಕಾಯಿ ಮಾಡಲು ಬರುವುದಿಲ್ಲ. ಅಮ್ಮ ಮನೆಯಲ್ಲಿ ಎಲ್ಲರಿಗೂ ಉಪ್ಪು ನೀರಲ್ಲಿ ಹಾಕಿಟ್ಟ ಮಾವಿನ ಭರಣಿಗೆ ಕೈ ಹಾಕಲು ಕೂಡ ಬಿಡುವುದಿಲ್ಲ. ಅವಳು ಹೇಳುತ್ತಾಳೆ.. ಕೆಲವರ ಕೈ ಗುಣ ಸರಿ ಇರುವುದಿಲ್ಲ, ಆವಾಗ ಮಾವು ನೀರು ಆಗುತ್ತದೆ, ಮೆದು ಆಗುತ್ತದೆ ಎಂದು. ಏನೋ ಅವಳ ನಂಬಿಕೆ. ಆದರೆ ಎಷ್ಟೋ ಸಲ ಅವಳ ಆ ನಂಬಿಕೆ ನಿಜವಾಗಿದ್ದು ಉಂಟು ಮಾತ್ರ.
ನನ್ನ ಚಿಕ್ಕಮ್ಮ ಈ ಅಂಬಡೆ(ಅಮಟೆ ಕಾಯಿ) ಯನ್ನು ಚೆನ್ನಾಗಿ ಕೆತ್ತಿ.. ಅದರ ಕೆತ್ತೆಯದ್ದೊಂದು ಪುಡಿ ಉಪ್ಪಿನಕಾಯಿ ಮಾಡುತ್ತಾರೆ. ನನಗೆ ಅದು ಬಹಳನೇ ಇಷ್ಟ. ಚಿಕ್ಕಮ್ಮ ಮನೆಗೆ ಬರುವುದಿದ್ದರೆ ನಾನು ಅವರಲ್ಲಿ ಹೇಳುವುದು ಅದೊಂದೇ... ಚಿಕ್ಕಮ್ಮ ಏನೂ ತಿಂಡಿ ಅದು ಇದು ಅಂತ ತರಬೇಡಿ, ಇದ್ದರೆ ನನಗೆ ಅಂಬಡೆ ಕೆತ್ತೆಯ ಪುಡಿ ಉಪ್ಪಿನಕಾಯಿ ತನ್ನಿ.. ಎಂದು. ಚಿಕ್ಕಮ್ಮನಿಗೆ ನಾನು ಬಾಯಿ ಬಿಟ್ಟು ಹೇಳಿದಿದ್ದರೂ ಅದನ್ನು ಮಾಡಿ, ದೊಡ್ಡ ಡಬ್ಬದಲ್ಲಿ ಹಾಕಿಕೊಂಡು ತರುವುದನ್ನು ಅವರು ಎಂದಿಗೂ ನಿಲ್ಲಿಸಿಲ್ಲ.
ನನ್ನ ಸಹೋದರಿಯೂ ಕೂಡ ಈ ಅಮಟೆಯ ಉಪ್ಪಿನಕಾಯಿ ಮಾಡುತ್ತಾಳೆ. ಅದರ ಸಣ್ಣ ಮಿಡಿಯಲ್ಲೂ, ದೊಡ್ಡ ಕಾಯಿಯಲ್ಲೂ ಅವಳು ಉಪ್ಪಿನಕಾಯಿ ಮಾಡುತ್ತಾಳೆ. ಅವಳು ಕೂಡ ಹಾಗೆಯೇ ಉಪ್ಪಿನಕಾಯಿ ಮಾಡಿದಾಗೆಲ್ಲ ನನ್ನನ್ನು ಮರೆಯುವುದಿಲ್ಲ. ನನಗಾಗಿ ಪ್ರೀತಿಯಿಂದ ಒಂದು ಡಬ್ಬ ಸಪರೇಟ್ ಆಗಿ ಎತ್ತಿಡುತ್ತಾಳೆ.
ನನ್ನ ದೊಡ್ಡಮ್ಮ ದೊಡ್ದ ದೊಡ್ಡ ಮಾವಿನ ಮಿಡಿಗಳ ಉಪ್ಪಿನಕಾಯಿ ಒಂದು ಮಾಡುತ್ತಾರೆ. ಗಂಜಿ ಊಟಕ್ಕೆ ಬಹಳ ಹಿತ ಅದು. ಒಂದೊಂದು ಮನೆಯ ಉಪ್ಪಿನಕಾಯಿ ಒಂದೊಂದು ರುಚಿ, ಸವಿದೇ ಅನುಭವಿಸಬೇಕು ಅದನ್ನೆಲ್ಲ.
ಕಾಲೇಜಿನಲ್ಲಿ ನನ್ನ ಫ್ರೆಂಡ್ ಒಬ್ಬ ಇದ್ದ. ಶೆಣೈ ಮಾಮ್ ಅಂತ. ಅವನ ಹೆಸರು ಸೂರಜ್ ಶೆಣೈ. ಆದರೆ ನಮಗೆಲ್ಲರಿಗೂ ಆತ ಪ್ರೀತಿಯ ಶೆಣೈ ಮಾಮ್. ಅವನು ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ತರುತ್ತಿದ್ದ.. ಅದರಲ್ಲಿ ಅವನ ಅಮ್ಮ ಮಾಡುತ್ತಿದ್ದ ಈ ಹಸಿ ಮೆಣಸಿನಕಾಯಿಯದ್ದೇ ಒಂದು ಉಪ್ಪಿನಕಾಯಿ ಇರುತ್ತಿತ್ತು .. ಆಹಾ.. ಆ ಖಾರ.. ಮತ್ತಷ್ಟು ಬೇಕು ಬೇಕು ಅಂತ ಹೇಳಿಸುತ್ತಿತ್ತು ಮತ್ತು ಚೆನ್ನಾಗಿ ನೀರು ಕೂಡ ಕುಡಿಸುತ್ತಿತ್ತು.
ಅಷ್ಟು ಮಾತ್ರವಲ್ಲ ಅವನ ಅಮ್ಮ ಬಿಂಬುಳಿಯ ಒಂದು ಉಪ್ಪಿನಕಾಯಿ ಕೂಡ ಮಾಡುತ್ತಿದ್ದರು ಅದು ಕೂಡ ಒಂಥರಾ ಹುಳಿ ಹುಳಿಯಾಗಿ ಚೆನ್ನಾಗಿರುತ್ತಿತ್ತು. ಕಾಲೇಜಿನಲ್ಲಿ ಫ್ರೆಂಡ್ಸ್ ತರುವ ಲಂಚ್ ಬಾಕ್ಸ್ ಗಳ ವಿವಿಧ ಮನೆಯ ಉಪ್ಪಿನಕಾಯಿ ಸವಿಯುವುದೇ ಒಂದು ವಿಶಿಷ್ಟ ಅನುಭವ.. ಶೇರಿಂಗ್ ಅನ್ನುವುದು ಇರದಿದ್ದರೆ ಅದೆಂತಹ ಊಟ. ಅದರಲ್ಲೂ ಉಪ್ಪಿನಕಾಯಿ ಶೇರಿಂಗ್ ಎನ್ನುವುದು ಇರದಿದ್ದರೆ.. ಅದೊಂದು ಎಂದಿಗೂ ಕಾಲೇಜಿನ ಸಪ್ಪೆ ಊಟ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಹುಣಸೆ ಹುಳಿಯ ಒಂದು ಉಪ್ಪಿನಕಾಯಿ ಮಾಡುತ್ತಿದ್ದರು. ಆಹಾ... ನಿಜವಾಗಿಯೂ ಈ ಹುಣಸೆಯ ಉಪ್ಪಿನಕಾಯಿಯ ಮಜವೇ ಬೇರೆ.ಎಲ್ಲದಕ್ಕಿಂತಲೂ ಮೊದಲು ಬಾಳೆ ಎಲೆಯ ತುದಿಗೆ ಹಾಕುತ್ತಿದ್ದ ಈ ಹುಣಸೆಯ ಉಪ್ಪಿನಕಾಯಿ ಬೇರೆ ಪದಾರ್ಥಗಳು ಬರುವ ಮೊದಲೇ ಸಪಾಯಿ ಆಗಿ ಬಿಡುತ್ತಿತ್ತು. ಉಪ್ಪಿನಕಾಯಿ ಪ್ರೇಮಿಗಳು ಹಾಗೆಯೇ... ಎಲೆಗೆ ಉಪ್ಪಿನಕಾಯಿ ಬಿದ್ದ ಕೂಡಲೇ.. ಉಪ್ಪಿನಕಾಯಿಯನ್ನು ನೆಕ್ಕಿ ನೆಕ್ಕಿಯೇ ಮಾಯ ಮಾಡುವ ಜಾದೂಗಾರರು.
ನಮ್ಮ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ, ಈ ಸೌತೆಕಾಯಿಯ ಒಂದು Instant ಉಪ್ಪಿನಕಾಯಿ ಮಾಡುತ್ತಾರೆ. ಅದು ಕೂಡ ಒಂಥರಾ ತಾಜಾ ಉಪ್ಪಿನಕಾಯಿಯ ಅನುಭವ.ಕಾಲೇಜ್ ದಿನಗಳಲ್ಲಿ ಕದ್ರಿ ಮಂಜುನಾಥನ ಅನ್ನ ಪ್ರಸಾದ ತಿನ್ನದೇ ಉಳಿದ ದಿನಗಳೇ ಬಹಳ ಕಡಿಮೆ ಇತ್ತು.
ಇನ್ನೂ ಹಲವಾರು ನಾನು ಮನಸಾರೆ ಸವಿದ ಉಪ್ಪಿನಕಾಯಿಗಳಿವೆ. ನನಗೆ ಈ ಕರಂಡೆ ಕಾಯಿ ಹಾಗೂ ಬೆಳ್ಳುಳ್ಳಿಯ ಉಪ್ಪಿನಕಾಯಿ ಕೂಡ ಬಹಳನೇ ಇಷ್ಟ. ಯಾವ ಮೇಳದಲ್ಲಿ ಕಂಡರೂ ಕೊಂಡು ತರುತ್ತೇನೆ. ಬೆಳ್ಳುಳ್ಳಿ ಉಪ್ಪಿನಕಾಯಿ ಜಾಸ್ತಿ ತಿಂದರೆ ಮನೆಯಲ್ಲಿ ಚೆನ್ನಾಗಿ ಬೈತಾರೆ. ದೇಹಕ್ಕೆ ಉಷ್ಣವಂತೆ. ಆದರೆ ಕೈ ಬೆರಳು ಮಾತ್ರ ಕೇಳುವುದಿಲ್ಲ..ಬೆರಳನ್ನು ಅದ್ದಿ ಅದ್ದಿ ಅರ್ಧ ಉಪ್ಪಿನಕಾಯಿಯೇ ಖಾಲಿ ಆಗಿರುತ್ತದೆ.ರೂಲ್ಸ್ ಎಲ್ಲಿ ಮುರಿಯದಿದ್ದರೂ ಉಪ್ಪಿನಕಾಯಿಯ ವಿಷಯ ಕ್ಕೆ ಬಂದಾಗ ನಮ್ಮಲ್ಲಿ ಹೆಚ್ಚಿನವರು ನಿಯಮಗಳನ್ನು ಗಾಳಿಗೆ ತೂರಿ ಉಪ್ಪಿನಕಾಯಿಯನ್ನು ಚೆನ್ನಾಗಿ ಬಾರಿಸುವವರೇ..
ನೋಡಿ ನಿಮಗೆ ಇವತ್ತು ನಾನು ಬಹಳ ಸಿಂಪುಳ್ ಹಾಗೇ ಬಹಳ ಬೇಗ ಕ್ಷಣಾರ್ಧದಲ್ಲಿ ತಯಾರಿಸಬಹುದಾದ ಬೆಳ್ಳುಳ್ಳಿಯ Instant ಉಪ್ಪಿನಕಾಯಿಯನ್ನೇ ಹೇಳಿ ಕೊಡ್ತೇನೆ ಆಯ್ತಾ.
ಎಷ್ಟು ಸುಲಭ ಅಂದರೆ ನಾಳೆಯೇ ನೀವು ಈ ಬೆಳ್ಳುಳ್ಳಿಯ Instant ಉಪ್ಪಿನಕಾಯಿ ಮಾಡಲು ಉತ್ಸುಕರಾಗುವಷ್ಟು ಇದು ಸುಲಭವಿದೆ.
#ಬೆಳ್ಳುಳ್ಳಿ_ಉಪ್ಪಿನಕಾಯಿ_ಮಾಡುವುದು_ಹೇಗೆ..
ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೇ..
ಒಂದು ಚಮಚ ಮೆಂತೆ,
ಒಂದು ಚಮಚ ಜೀರಿಗೆ,
ಎರಡು ಚಮಚ ಕೊತ್ತಂಬರಿ ಬೀಜ ...ಇವೆಲ್ಲವನ್ನು ಹದವಾಗಿ ಬಾಣಲೆಯಲ್ಲಿ ಹುರಿದುಕೊಳ್ಳಿ.ಆ ನಂತರ ಇದನ್ನು ಮಿಕ್ಸರ್ ನಲ್ಲಿ ಪುಡಿ ಮಾಡಿ ಹಾಗೇ ಪಕ್ಕದಲ್ಲಿ ಇಟ್ಟುಕೊಳ್ಳಿ.
ನಂತರ ಅದೇ ಬಾಣಲೆಗೆ ಒಗ್ಗರಣೆ ತಕ್ಕಷ್ಟು ಎಣ್ಣೆ ಹಾಕಿ. ಆ ನಂತರ ಎಣ್ಣೆ ಬಿಸಿಯಾದ ಮೇಲೆ ಒಂದು ಟೀ ಸ್ಪೂನ್ ಸಾಸಿವೆ, ಒಂದಷ್ಟು ಕರಿಬೇವು,ಒಂದು ಕಾಲು ಚಮಚ ಹಿಂಗು ಹಾಕಿ. ಸಾಸಿವೆ ಸಿಡಿದ ಮೇಲೆ ಕೊನೆಗೆ ಒಂದು ಮುಕ್ಕಾಲು ಕಪ್ ಸಿಪ್ಪೆ ಸುಲಿದ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿ ಬಿಡಿ.
ಇದಕ್ಕೆ ಮೀಡಿಯಂ ಸೈಜಿನ ಐದು ಬೆಳ್ಳುಳ್ಳಿಯ ಎಸಳುಗಳು ಸಾಕು. ನಂತರ ಬೆಳ್ಳುಳ್ಳಿ ಲೈಟ್ ಆಗಿ ಕಂದು ಬಣ್ಣ ಬರುವ ವರೆಗೆ ಹಾಗೇ ಎಣ್ಣೆಯಲ್ಲಿ ಹುರಿಯುತ್ತಾ ಇರಿ.ಬೇಕಾದರೆ ಒಂದೆರಡು ನಿಮಿಷ ಬಾಣಲೆಯ ಬಾಯಿ ಕೂಡ ಹಾಗೇ ಮುಚ್ಚಿಡಬಹುದು.
ನಂತರ ಒಂದು ಲಿಂಬೆ ಹಣ್ಣು ಗಾತ್ರದಷ್ಟು ದೊಡ್ಡ ಹುಣಸೆ ಹುಳಿಯನ್ನು, ನೀರು ಹಾಕಿ ಚೆನ್ನಾಗಿ ಕಿವುಚಿ ಅದರಿಂದ ಈ ಹುಣಸೆ ರಸವನ್ನು ತೆಗೆದು ಬಾಣಲೆಗೆ ಸೇರಿಸಬೇಕು..
ಆ ನಂತರ ಮೂರರಿಂದ ನಾಲ್ಕು ಚಮಚ ಅಚ್ಚ ಖಾರದ ಪುಡಿ(ಜಾಸ್ತಿ ಬೇಕಿದ್ದರೆ ಜಾಸ್ತಿ ಹಾಕಿ),
ಎರಡು ಸ್ಪೂನ್ ಉಪ್ಪು(ರುಚಿಗೆ ತಕ್ಕಷ್ಟು),
ಕಾಲು ಚಮಚದಷ್ಟು ಅರಶಿನ ಪುಡಿ ಹಾಕಿ.. ಎರಡು ಮೂರು ನಿಮಿಷ ಎಲ್ಲದರ ಹಸಿ ವಾಸನೆ ಹೋಗುವವರೆಗೆ ಎಲ್ಲವನ್ನೂ ಹಾಗೇ ಬಾಡಿಸಿಕೊಳ್ಳಿ.
ಇದಕ್ಕೆ ಸ್ವಲ್ಪ ಬೆಲ್ಲದ ಪುಡಿಯನ್ನು ಕೂಡ ಬೇಕಾದರೆ ಸೇರಿಸಿಕೊಳ್ಳಬಹುದು. ಕೆಲವರಿಗೆ ಅದು ಇಷ್ಟವಾಗಬಹುದು. ಆದರೆ ಇದು Optional.
ಕೊನೆಗೆ ಈ ಮೊದಲೇ ಹುರಿದು ಪುಡಿ ಮಾಡಿಟ್ಟಂತಹ ಮೆಂತೆ, ಜೀರಿಗೆ,ಕೊತ್ತಂಬರಿಯ ಪುಡಿಯನ್ನು ಕೂಡ ಸೇರಿಸಿ ಪುನಃ ಒಂದೆರಡು ನಿಮಿಷ ಹಾಗೇ ಬಾಡಸಿ ಬಿಟ್ಟರೆ ರುಚಿ ರುಚಿಯಾದ ಬೆಳ್ಳುಳ್ಳಿ ಉಪ್ಪಿನಕಾಯಿ ಯಾ ಗಾರ್ಲಿಕ್ ಪಿಕಲ್ ರೆಡಿ...
ಉಪ್ಪಿನಕಾಯಿಯಲ್ಲಿ ಹಲವಾರು ವಿಧ. ಲಿಂಬೆ, ನೆಲ್ಲಿ, ಮಿಶ್ರ ತರಕಾರಿ, ಕಂಚಿ ಕಾಯಿ,ಗುಜ್ಜೆ.. ಹೀಗೆ ಇನ್ನೂ ದೊಡ್ಡ ಲಿಸ್ಟೇ ಉಂಟು ಉಪ್ಪಿನಕಾಯಿಯದ್ದು. ಈಗ ಪ್ರತಿಯೊಂದರಿಂದಲೂ ಉಪ್ಪಿನಕಾಯಿ ಮಾಡಬಹುದು. ಮೀನಿನ ಉಪ್ಪಿನಕಾಯಿ ಕೂಡ ಬಂದಿದೆ..ಮಲೆನಾಡಿನ ಅಪ್ಪೆ ಮಿಡಿ ಉಪ್ಪಿನಕಾಯಿ ಅಂತು ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಅದನ್ನೇ ಹುಡುಕಿ ಎಷ್ಟೇ ಬೆಲೆ ಇದ್ದರೂ ಕೊಟ್ಟು ಬಾಯಿ ಚಪ್ಪರಿಸುವ ಉಪ್ಪಿನಕಾಯಿ ಪ್ರೇಮಿಗಳನ್ನು ನಾನೂ ಸಹ ನೋಡಿದ್ದೇನೆ. ಅದೇ ರೀತಿ ಜೀರಿಗೆ ಮಾವಿನ ಉಪ್ಪಿನಕಾಯಿ ಕೂಡ ಅಷ್ಟೇ ರುಚಿ.
ಎಂತಹ ಅತ್ಯಧ್ಭುತ ಸೈಡ್ಸ್ ಇದ್ದರೂ, ಎಣ್ಣೆ ಪ್ರೀಯರಂತು ಉಪ್ಪಿನಕಾಯಿಯಲ್ಲಿಯೇ ತಮ್ಮ ದೇವರನ್ನು ಕಾಣುತ್ತಾರೆ.
ಏನೇ ಹೇಳಿ.. ಯಾವುದೇ ರಾಸಾಯನಿಕ ಹಾಕದ ಮನೆಯಲ್ಲಿಯೇ ಮಾಡುವ ಉಪ್ಪಿನಕಾಯಿಗೆ ಎಂದಿಗೂ ರುಚಿ ಜಾಸ್ತಿ.
ಗೊತ್ತು... ಉಪ್ಪಿನಕಾಯಿಯೇ ಊಟವಲ್ಲ.ಆದರೂ... ನನಗಂತು ಉಪ್ಪಿನಕಾಯಿ ಇಲ್ಲದಿದ್ದರೆ ಅದೊಂದು ಊಟವೇ ಅಲ್ಲ.
ಊಟಕ್ಕಿಲ್ಲದ ಉಪ್ಪಿನಕಾಯಿ.. ಎಂದು ನಮ್ಮವರು ಸುಮ್ಮನೆ ಹೇಳಿದ್ದಲ್ಲ.. ಏನೇ ಹೇಳಿ ಬಾಳೆ ಎಲೆಯ ತುದಿಯಲ್ಲಿ ಒಂಚೂರು ಉಪ್ಪಿನಕಾಯಿ ಇದ್ದರೆ.. ಅದು ಆ ಬಾಳೆ ಎಲೆಗೂ ಒಂದು ಶೋಭೆ..ಮಾತ್ರವಲ್ಲ ನನ್ನಂತಹ ಉಪ್ಪಿನಕಾಯಿ ಪ್ರೇಮಿಗೂ ಕೂಡ ಏನೋ ಒಂದು ಸಮಾಧಾನ..ಭೋಜನ ಶುರು ಮಾಡಲು ಕೂಡ ಏನೋ ಒಂದು ಉಲ್ಲಾಸ,ಉತ್ಸಾಹದ ಸಂಭ್ರಮ..
.....................................................................................
#ಈ_ಜನುಮವೇ_ಆಹಾ_ದೊರಕಿದೆ_ರುಚಿ_ಸವಿಯಲು..
" ಪಚ್ಚು ಪಾಕಗಳು"
Ab Pacchu
Moodubidire
(https://phalgunikadeyavanu.blogspot.com)
Comments
Post a Comment