ದೃಷ್ಟಿಕೋನ ಮತ್ತು ದೃಷ್ಟಿಕೋಣ..!

 

ನಮ್ಮ ಸುತ್ತ ಮುತ್ತಲಿನ ಸಮಾಜದಲ್ಲಿ ದಿನ ನಿತ್ಯವೂ ಘಟನೆಗಳು ಘಟಿಸುತ್ತಲೇ ಇರುತ್ತದೆ. 


ಕೆಲವು ಒಳ್ಳೆಯದು,ಇನ್ನು ಕೆಲವು ಕೆಟ್ಟದು... ಮತ್ತು ಕೆಲವು ತುಂಬಾ ತುಂಬಾ ಕೆಟ್ಟದು. 


ಕೆಲವು ಬೆಳಕಿಗೆನೇ ಬರಲ್ಲ,ಇನ್ನು ಕೆಲವು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಜಗತ್ತಿನೆಲ್ಲೆಡೆ ಹಾಗೇ ಪಸರಿಸಿ ಬಿಡುತ್ತದೆ.ನಂತರ ಅದಕ್ಕೆ ಅಂಕೆಯೇ ಇಲ್ಲ. 



ಅದು ಬೇಕಿದ್ದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಇರಬಹುದು ಇಲ್ಲವೇ ಯಾವುದಾದರೂ ಒಂದು ಘಟನೆಗೆ ಸಂಬಂಧಿಸಿದ ವಿಷಯವೇ ಆಗಿರಬಹುದು.ಈ ಕಾಲದಲ್ಲಿ ಜಸ್ಟ್ ಅದು ಸೋಷಿಯಲ್ ಮೀಡಿಯಾಕ್ಕೆ ಬೇಕಾದ ಒಂದು  ಬಿಸಿ ಬಿಸಿಯಾದ ಗರಿ ಗರಿಯಾದ ಮಸಾಲೆ ದೋಸೆಯಂತಹ ಸರಕು ಅಷ್ಟೇ.


ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ ನಾವು ನೀವು ಮತ್ತು ಹೆಚ್ಚಿನ ಎಲ್ಲರು ಮಾಡುವುದು ಈ ಕೆಳಗಿನವುಗಳನ್ನೇ... 


ಆ ಕೂಡಲೇ ಈ ವಿಷಯಕ್ಕೆ ನಾವು  React ಮಾಡಬೇಕು.. 


ನಮ್ಮ ವಾಲಿನಲ್ಲಿಯೂ ಎಲ್ಲರಿಗಿಂತ ಮೊದಲು ಅದರ ಬಗ್ಗೆ ಬರೆದು ಕೊಳ್ಳಬೇಕು...


ಈ ವಿಷಯದ ಕುರಿತು ಯಾರಾದರೂ ಬರಹಗಾರ ಇಲ್ಲವೇ ನಾವೇ ಅತಿಯಾಗಿ ಇಷ್ಟ ಪಡುವ ನಮ್ಮ ನೆಚ್ಚಿನ ಬರಹಗಾರ ಬರೆದ ಬರಹವೊಂದನ್ನು ಶೇರ್ ಮಾಡಿ ಕೊಳ್ಳಬೇಕೆಂಬ ಆತುರತೆ ಹಾಗೂ ಹಪಾಹಪಿಯೇ ನಮ್ಮಲ್ಲಿ ಜಾಸ್ತಿಯಾಗಿ ಇರುತ್ತದೆಯೋ ವಿನಹ.. ಆ ಘಟನೆಯ ಸತ್ಯಾಸತ್ಯತೆ ನಮಗೆ ಬೇಕಾಗಿಯೂ ಇಲ್ಲ,ಅದರೆಡೆಗೆ ನಮ್ಮ ಲಕ್ಷ್ಯವೂ ಕೂಡ ಇರುವುದಿಲ್ಲ. 


ಆಯಿತು ನಾವು ರಪ ರಪ ಅದರ ಬಗ್ಗೆ ಬರೆದೋ ಇಲ್ಲ ಬೇರೆಯವರು  ಬರೆದುದನ್ನು ಶೇರ್ ಮಾಡಿಯೋ ಆಗಿರುತ್ತದೆ. ಅಲ್ಲಿಗೆ ನಮಗೂ ಬೇಕಾದಷ್ಟು ಲೈಕ್ಸ್, ಕಾಮೆಂಟ್ ಗಳು ಕೂಡ ಬರುತ್ತದೆ. ಅಲ್ಲಿಗೆ ಮನಸ್ಸು ನಿರಾಳ.. ಎಷ್ಟೋ ಜನರಿಗೆ ಎಲ್ಲರಿಗಿಂತ ಮೊದಲು ವಿಷಯ ತಲುಪಿಸಿದೆ ಎಂಬ ಖುಷಿ.


ಹೌದು...ಎಲ್ಲರಿಗಿಂತ ಮೊದಲು ಬರೆದದ್ದು, ಎಲ್ಲರಿಗಿಂತ ಮೊದಲು ಶೇರ್ ಮಾಡಿದ್ದು.. ಎಂಬುವುದೇ ಇಲ್ಲಿ ವಿಷಯಕ್ಕಿಂತಲೂ ಮುಖ್ಯವಾಗಿ ಬಿಡುವುದು. 


ಈಗ ಸದ್ಯಕ್ಕೆ ಇಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ... ಕೆಲವೊಮ್ಮೆ ಸಮಸ್ಯೆಗಳು ಬರದೇ ಇರಬಹುದು. ಆದರೆ ಕೆಲವೊಮ್ಮೆ ಹಾಗೆ ಆಗುವುದಿಲ್ಲ.ಒಂದೆರಡು ಗಂಟೆ ಇಲ್ಲವೇ ಒಂದೆರಡು ದಿನ ಬಿಟ್ಟು ನೋಡಿ.. ನಾವು ಏನು ಬರೆದಿರುತ್ತಿರೋ ಇಲ್ಲ ಶೇರು ಮಾಡಿ ಇರುತ್ತೆವೆಯೋ ಅದಕ್ಕೆ ತದ್ವಿರುದ್ಧವಾದ ವಾದವೊಂದು ಸಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುತ್ತದೆ.


ನಿಧಾನವಾಗಿ ಅಲೋಚಿಸಿ ನೋಡಿದರೆ...ಅರೆ ಆ ವಾದವೂ ಕೂಡ ಸರಿಯೇ ಇದೆಯಲ್ಲ ಎಂದೇ ಅನಿಸುತ್ತದೆ, ಮಾತ್ರವಲ್ಲ ಕೆಲವೊಮ್ಮೆ ಅದೇ ಸರಿಯಾಗಿರುತ್ತದೆ ಮತ್ತು ನಿಜ ಕೂಡ ಆಗಿರುತ್ತದೆ. 


ಹಾಗಾದರೆ ಇಲ್ಲಿ ತಪ್ಪು ಯಾರದ್ದು? 


ಖಂಡಿತವಾಗಿಯೂ ನಮ್ಮದೇ..! 


ಆದರೆ ವಿಷಯವನ್ನು ಹಂಚಿಕೊಂಡಿದಕ್ಕಾಗಿ ಅಲ್ಲ, ವಿಷಯವನ್ನು ಸರಿಯಾಗಿ ವಿಶ್ಲೇಷಿಸದೆ, ಬೇರೆ ಬೇರೆ ಆಯಾಮ ಹಾಗೂ ದೃಷ್ಟಿಕೋನಗಳಿಂದ ನೋಡದೇ ನಾವು ನಮ್ಮ ಮೂಗಿನ ನೇರಕ್ಕೆ ಶರಾ ಬರೆದಂತೆ ಇದೇ ಸತ್ಯ ಎಂದು ಹೇಳಿರುತ್ತೇವೆ ನೋಡಿ ಅದೇ ನಿಜವಾದ ತಪ್ಪು.. ಮಾತ್ರವಲ್ಲ ಇಲ್ಲಿ ನಾವು ಇನ್ನಷ್ಟು ಜನರು ಅದೇ ತಪ್ಪು ಮಾಡುವಂತೆ ಪ್ರೇರೆಪಿಸಿರುತ್ತೇವೆ. ನಾನು ಸೇರಿದಂತೆ ನಮ್ಮಲ್ಲಿ ಹೆಚ್ಚಿನವರು ಇದೇ ತಪ್ಪುಗಳನ್ನು ಮಾಡಿದವರೇ..


ಹೌದು ವಿಷಯದ ಬಗ್ಗೆ ಬರೆಯುವುದು, ಹಂಚಿಕೊಳ್ಳುವುದು ತಪ್ಪಲ್ಲ. ಆದರೆ ಹೆಚ್ಚಿನ ಸಂಧರ್ಭದಲ್ಲಿ ನಿಜವಾದ ಸತ್ಯಗಳು ನಮಗೆ ಗೊತ್ತೇ ಇರುವುದಿಲ್ಲ. ಏಕೆಂದರೆ ಅದು ನಮ್ಮ ಕಣ್ಣ ಮುಂದೆ ನಡೆದಿರುವುದಿಲ್ಲ. ನಾವು ಇಲ್ಲಿ ಬೇರೆ ಯಾರೂ ಹೇಳಿದ್ದನ್ನೇ ನಂಬಿಕೊಂಡೇ ನಮ್ಮ ವಿಷಯವನ್ನು ಪ್ರಸ್ತುತಿ ಪಡಿಸಬೇಕಾಗಿರುತ್ತದೆ.ಆದರೆ ಹೆಚ್ಚಿನ ಸಂಧರ್ಭದಲ್ಲಿ ನಮಗೆ ಸಿಕ್ಕಿರುವ ಮಾಹಿತಿ ರಾಜಕೀಯ ಪ್ರೇರಿತ ಇಲ್ಲವೇ,ಸಿದ್ಧಾಂತ ದ್ವೇಷ,ಜಾತಿ ಪ್ರೇಮ,ವ್ಯಕ್ತಿ ಪ್ರೇಮದಿಂದಾಗಿ ತಿರುಚಲ್ಪಟ್ಟಿರುತ್ತದೆ. ಹಾಗಾಗಿಯೇ ನಿಜವಾದ ಸತ್ಯ ತುಂಬಾ ದಿನಗಳ ನಂತರವೇ ಹೊರಗೆ ಬರುವುದು, ಕೆಲವೊಮ್ಮೆ ಬರುವುದೇ ಇಲ್ಲ..!


ಬ್ರೇಕಿಂಗ್ ಸುದ್ದಿಗಳನ್ನು ನೀಡುವ ಟಿ.ವಿ ಮಾಧ್ಯಮವನ್ನು ಸದಾ  ಟ್ರೋಲ್ ಮಾಡುವ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಆಗುವ ಅಧ್ವಾನಗಳಿಗೇನು ಕಡಿಮೆಯಿಲ್ಲ. 


ಘಟನೆಗಳಿಗೆ ಸಂಬಂಧಿಸಿದಂತೆ ನಾವು ಕೂಡ ಪ್ರತಿಕ್ರೀಯಿಸಲೇ ಬೇಕೆಂಬ ಭಾವನೆಯೇ ಕೆಲವೊಮ್ಮೆ ನಮ್ಮಿಂದಲೂ ತಪ್ಪುಗಳನ್ನು ಮಾಡಿಸುತ್ತದೆ.


ಆದರೆ ಎಂದಿಗೂ ನಾವು ಒಂದು ತಿಳಿದುಕೊಳ್ಳಬೇಕು, ಅದೇನೆಂದರೆ... ನಾವು React ಮಾಡಿದರೂ, ಮಾಡದೇ ಇದ್ದರೂ ನಮಗೆ ಹಾಗೂ ಸಮಾಜಕ್ಕೆ ಅದರಿಂದ ಅಂತಹ ನಷ್ಟವೇನೂ ಇಲ್ಲ.ಜಗತ್ತು ಅದರಷ್ಟಕ್ಕೆ ನಡೆಯುತ್ತದೆ. ನಮ್ಮ ಹಪಾಹಪಿಯಲ್ಲಿ ನಮ್ಮ ಅಮೂಲ್ಯ ಸಮಯ ಹಾಗೂ  ಸ್ವಾಸ್ಥ್ಯ ಅಷ್ಟೇ ಹಾಳು. 



ಹಂಚಿಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯ ಇದೆ.ಒಳ್ಳೆಯ ವಿಷಯಗಳನ್ನು ಕಲಿಯುವಂತಹದ್ದು ಹಾಗೂ ಕಲಿಸುವಂತಹದ್ದು ಕೂಡ ತುಂಬಾ ಇದೆ.ಕೆಲವರು ಚಂದಗೆ ಹೇಳಿಕೊಡುತ್ತಾರೆ.. ಅಲ್ಲಿ ಮನಸ್ಸು ಕೆರಳುವುದಿಲ್ಲ, ಜಸ್ಟ್ ಅರಳುತ್ತದೆ.


ನಮ್ಮ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ  ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕೂಡ ನಮ್ಮ ಕರ್ತವ್ಯವೇ ಆಗಿದೆ. ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ನಮಗೆ  ಗುರುತು ಪರಿಚಯವೇ ಇಲ್ಲದವರ ನಡುವೆ ಕಾಮೆಂಟ್ ನಲ್ಲಿ ಒಂದು ಮುಗಿಯದ ಪೆಟ್ಟ್ ಲಡಾಯಿಯೇ ದಿನ ಪೂರ್ತಿ ಮಾಡುತ್ತಲೇ ಇರಬೇಕಾಗುತ್ತದೆ.ನಮ್ಮ ಕೆಲಸಕ್ಕಿಂತಲೂ ಅದೇ ಒಂದು ದೊಡ್ದ ಕೆಲಸವಾಗುವುದು.ಕಾಮೆಂಟ್ ನಲ್ಲಿ ಜಗಳವಾಡುವವನಿಗೆ   ಅವನು ಹೇಳಿದ್ದು ಸರಿ.. ನಮಗೆ ನಾವು ಹೇಳಿದ್ದು ಸರಿ. ಟೋಟಲಿ ಆ ದಿನದ ಮೂಡ್ ಆಫ್. ಘಟನೆಯ ಸತ್ಯಾಸತ್ಯತೆ ಇಬ್ಬರಿಗೂ ಗೊತ್ತಿರುವುದಿಲ್ಲ. 


ಒಂದು ವಿಷಯ ಎಂತ ಗೊತ್ತುಂಟಾ... ಸಾಮಾಜಿಕ ಜಾಲತಾಣದಲ್ಲಿ ಹೇಗೆ ನಮ್ಮನ್ನು ಒಬ್ಬ ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲವೋ ಅದೇ ರೀತಿ... ನಮ್ಮ ಕಾಮೆಂಟ್ ನಿಂದ ಅಥವಾ ಪ್ರವಚನಗಳಿಂದ ಆತನನ್ನು ಕೂಡ ನಮಗೆ ಬದಲಾಯಿಸಲು ಸಾಧ್ಯವಾಗದು.ಕೊನೆಗೆ ಅದು ಎಲ್ಲಿಗೆ ಹೋಗಿ ಬಿಡುತ್ತದೆ ಎಂದರೆ ವಿಷಯದ ಸತ್ಯ ಯಾರಿಗೆ ಬೇಕು.. ಎದುರಿನವನ Ego ಗೆ ಪೆಟ್ಟು ಕೊಡಬೇಕು ಅಷ್ಟೇ.. ಎಂಬಲ್ಲಿಗೆ ಬಂದು ನಿಂತು ಬಿಡುತ್ತದೆ. 


ಹಾಗಂತ ನಾನು ಯಾವುದೇ ಘಟನೆಗಳಿಗೆ ಕೂಡಲೇ ಪ್ರತಿಕ್ರಿಯಿಸಲೇಬಾರದು ಎಂದು ಖಂಡಿತವಾಗಿಯೂ ಹೇಳಲಾರೆ.ಖಂಡಿತವಾಗಿಯೂ  ಪ್ರತಿಕ್ರೀಯಿಸಿ.. ಆದರೆ ಸಾಧ್ಯವಾದಷ್ಟು ಬೇರೆ ಬೇರೆ ದೃಷ್ಟಿಕೋನಗಳಿಂದ ಘಟನೆಯನ್ನು ವಿಮರ್ಷಿಸಿ ಎಂದಷ್ಟೇ ಹೇಳಲು ನಾನು ಬಯಸುತ್ತೇನೆ.ಇಲ್ಲದಿದ್ದರೆ ನಮಗೆಯೇ ಅನಗತ್ಯ ಮುಜುಗರ ಆಗುವುದು. 


ಕಾರಣ ಇಷ್ಟೇ ಮನುಷ್ಯನಿಗೆ ಸಾಮಾಜಿಕ ಜಾಲತಾಣದಲ್ಲಿಯೇ ಆಗಲಿ ಅಥವಾ ಅವನ ನಿಜ ಜೀವನದಲ್ಲಿ ಇಲ್ಲವೇ ಅವನ ಕುಟುಂಬದಲ್ಲಿಯೇ ಆಗಲಿ.. ಬೇರೆ ಬೇರೆ ದೃಷ್ಟಿಕೋನದಿಂದ ಒಂದು ವಿಷಯವನ್ನು ನೋಡುವುದರಿಂದ ಅವನ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.


ಹೌದು ದೃಷ್ಟಿಕೋನಗಳು ತುಂಬಾ ಮುಖ್ಯ. Perspective ಎಂದಿಗೂ ಇಟ್ಟುಕೊಳ್ಳಬೇಕು. 


ಬೇರೆ ಬೇರೆ ಕೋನಗಳಿಂದ ನೋಡುವಾಗ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ. 


ಗಂಡು ಮಕ್ಕಳಿಗೆ ಅಪ್ಪ ಸುಲಭವಾಗಿ ಅರ್ಥ ಆಗುವುದೇ ಇಲ್ಲ. ಕಾರಣ ಅಪ್ಪನ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತುಕೊಂಡು ಯೋಚಿಸುವುದನ್ನು ಮಗ ರೂಡಿಸಿಕೊಂಡಿಲ್ಲ. ಅಪ್ಪ ಬರೀ ಬೈತಾನೆ ಅಷ್ಟೇ. 


ಬೆಳೆದು ನಿಂತ ಮಗಳಿಗೆ ಅಮ್ಮನ ಬುದ್ದಿ ಮಾತು ರುಚಿಸುವುದಿಲ್ಲ,ಕಾರಣ ಹೆಣ್ಣು ಮಗುವನ್ನು ಹೆತ್ತ ತಾಯಿಯ ಸಂಕಟಗಳೇನು ಎಂದು ಅವಳು ತಾಯಿ ಆಗುವವರೆಗೂ  ತಾಯಿ ಸ್ಥಾನದಲ್ಲಿ ನಿಂತು ಮಗಳು ಕೂಡ ಯೋಚಿಸಿರುವುದಿಲ್ಲ. 


ತಂದೆ ತಾಯಿಯೂ ಕೂಡ ಹಾಗೆಯೇ.. ಮಕ್ಕಳ ಆಸಕ್ತಿಯ ಬಗ್ಗೆ ಅವರ ಸ್ಥಾನದಲ್ಲಿ ನಿಂತು ಯೋಚಿಸುವುದಿಲ್ಲ.. ಸುತ್ತ ಮುತ್ತಲಿನ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗುವಾಗ ನಮ್ಮ ಮಗ ಇಲ್ಲ ಮಗಳು ಕೂಡ ಅದೇ ಆಗಲಿ ಎಂದು ಯೋಚಿಸುತ್ತಾರೆ.. ಆದರೆ ಮಗನಿಗೆ ಬಣ್ಣದ ಬ್ರಶುಗಳು ಇಷ್ಟ, ಮಗಳಿಗೆ ಸರಿಗಮದ ಹಾಡು ಇಷ್ಟ... ಅದರಲ್ಲಿಯೇ ಅವರ ಜೀವ ಇದೆ ಎಂದು ಗೊತ್ತಾಗ ಬೇಕಾದರೆ, ತಂದೆ ತಾಯಿಯೂ ಕೂಡ ಕೆಲವೊಮ್ಮೆ ಮಕ್ಕಳ ಸ್ಥಾನದಲ್ಲಿ ನಿಂತು ಯೋಚಿಸಬೇಕಾಗುತ್ತದೆ. ಅಂತಹ ವ್ಯವಧಾನ ಎಲ್ಲಿದೆ ಹೇಳಿ.. ನಮ್ಮಲ್ಲಿ ಓದುವುದು ಕೇವಲ ದುಡ್ಡು ಮಾಡಲು ಅಷ್ಟೇ.. ಕಲೆ ಏನಿದ್ದರೂ ಪ್ರೀ ಟೈಂ ಅಲ್ಲಿ ಟೈಂ ಪಾಸ್ ಮಾಡಲು ಅನ್ನುವ ಮನಸ್ಥಿತಿ.ಒಂದು ಮಟ್ಟಿಗೆ ತಪ್ಪಿಲ್ಲ... ಆದರೆ ಈ ರೀತಿಯ ತಂದೆ ತಾಯಿಯ ಒತ್ತಡದಿಂದ ಬದುಕನ್ನು ಬರ್ಬಾದು ಮಾಡಿಕೊಂಡ ಮಕ್ಕಳ ಉದಾಹರಣೆಗಳು ಕೂಡ  ನಮ್ಮ ಸಮಾಜದಲ್ಲಿಯೇ ಬೇಕಾದಷ್ಟು ಇದೆ. 


ಪ್ರೀತಿ ಪ್ರೇಮವೂ ಹಾಗೇ.. ಅವನಿಗೆ ಅವಳು ಹಿಂದೆ ಸರಿ ಇದ್ದಳು, ಈಗ ಸರಿ ಇಲ್ಲ. ಅದೇ ರೀತಿ ಅವನಿಗೂ ಅವಳ ಬಗ್ಗೆ ಹತ್ತು ಹಲವು ಕಂಪ್ಲೈಂಟ್ ಗಳು. ಇಬ್ಬರೂ ಮತ್ತೊಬ್ಬರ ದೃಷ್ಟಿಕೋನದಿಂದ ನೋಡಲು ಬಯಸದೇ ತಮ್ಮದೇ ದೃಷ್ಟಿಕೋನದಿಂದ ಸಂಬಂಧ ಕಟ್ಟಲು ಬಯಸುತ್ತಾರೆ ಅಷ್ಟೇ. ಸಂಬಂಧ ಎದ್ದು ನಿಲ್ಲುವ ಬದಲು ಮುರಿದು ಬೀಳುತ್ತದೆ. 


ಗಂಡ ಹೆಂಡತಿಯೂ ಹಾಗೇ.. ಪರಸ್ಪರ ಜಾಗ ಬದಲಿಸಿಕೊಂಡು ಗಂಡನ ದೃಷ್ಟಿಯಿಂದ ಹೆಂಡತಿ ಅವನ ಕಷ್ಟಗಳನ್ನು ನೋಡುವುದಿಲ್ಲ, ಹೆಂಡತಿಯ ದೃಷ್ಟಿಯಿಂದ ಗಂಡ ಕೂಡ ಅವಳ ಸಮಸ್ಯೆ ಅರಿಯುವುದಿಲ್ಲ.. ಹಾಗಾಗಿ ಡಿವೊರ್ಸ್ ಗಳಲ್ಲಿ ದಾಂಪತ್ಯ ಕೊನೆಯಾಗುತ್ತದೆ. 


ಆಲೋಚಿಸುವುದರಿಂದ ಎಲ್ಲವನ್ನೂ ಸರಿ ಮಾಡಿ ಬಿಡಬಹುದು ಎಂದು ಹೇಳುತ್ತಿಲ್ಲ. ಆದರೆ ಬೇರೆ ಬೇರೆ ಆಯಾಮ ಗಳಿಂದ ಪರಿಸ್ಥಿತಿಯನ್ನು ಅವಲೋಕಿಸುವ ಮನಸ್ಸಿದ್ದರೆ ತಕ್ಕ ಮಟ್ಟಿನ ಡ್ಯಾಮೇಜುಗಳನ್ನು ಸರಿ ಮಾಡಬಹುದು.. 


ಮೇಲೆ ಹೇಳಿದ ಹೆಚ್ಚಿನ ಘಟನೆಗಳು ನಮ್ಮದೇ ಘಟನೆಗಳು. ನಮ್ಮ ಕಣ್ಣ ಮುಂದೆಯೇ ಘಟಿಸಿರುವಂತಹದ್ದು. ಆದರೂ ನಾವು ಅದನ್ನು ಬೇರೆ ಬೇರೆ ದೃಷ್ಟಿಕೋನದಿಂದ ವಿಶ್ಲೇಷಿಸಲು ಸೋತಿರುತ್ತೇವೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲೋ ಏನೋ ಒಂದು ಆಗಿದೆ ಎಂದಾದಾಗ.. ಅದರ ಬಗ್ಗೆ ನಮಗೆ ಎಷ್ಟು ಕರಾರುವಕ್ಕಾಗಿ  ಗೊತ್ತಿರಲು ಸಾಧ್ಯ ಹೇಳಿ..?




ನಾನು ಹೇಳುವುದು ಏನೆಂದರೆ ಬರೆಯಲೇಬೇಕು ಎಂಬ ಮನಸ್ಸು ಅತಿಯಾಗಿದ್ದರೆ.. ಆ ಘಟನೆಯನ್ನು ಬೇರೆ ಬೇರೆ ಆಯಾಮಗಳಿಂದ ವಿಶ್ಲೇಷಣೆಗೆ ಒಳಪಡಿಸಿಯೇ ಬರೆಯಿರಿ. ಇಲ್ಲದಿದ್ದರೆ ಇದೇ ಸರಿ ಎಂದು ನಮ್ಮ ಅಭಿಪ್ರಾಯದ ಮುದ್ರೆ ಒತ್ತಿದರೆ ಕೆಲವೊಮ್ಮೆ ತೀವ್ರವಾದ ಆಭಾಸ ಆಗುವುದು ಇದೆ. 


ಈಗ ಇನ್ನೊಂದು ಸಾಮಾಜಿಕ  ಘಟನೆಯನ್ನೇ  ತೆಗೆದುಕೊಳ್ಳುವ.. 


ಇತ್ತೀಚೆಗೆ ನಿಮ್ಮಲ್ಲಿ ಹೆಚ್ಚಿನವರು  ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನೋಡಿರುತ್ತೀರಾ.. ಅದರಲ್ಲಿ ಒಂದು ಮದುವೆಯ ದಬ್ಬಣದ ಸಂದರ್ಭದಲ್ಲಿ ಒಬ್ಬ ಕುದುರೆಯ ಮೇಲೆ ಹೋಗ್ತಾ ಇರ್ತಾನೆ. ಅವನ ಹಿಂದೆ ವಿದ್ಯುತ್ ದೀಪಗಳನ್ನು ಹೊತ್ತುಕೊಂಡು, ಜನರೇಟರ್ ಗಳನ್ನು ಎಳೆದುಕೊಂಡು ಕೆಲವರು ಹೋಗುತ್ತಿರುತ್ತಾರೆ. ಅದರಲ್ಲಿ ಒಬ್ಬಳು ಬಡ ತಾಯಿ ಕೂಡ ವಿದ್ಯುತ್ ದೀಪವನ್ನು ತಲೆಯಲ್ಲಿ ಹೊತ್ತುಕೊಂಡು, ತನ್ನ ಹೆಗಲಿನ ಜೋಳಿಗೆಯಲ್ಲಿ ಮಗುವನ್ನು ಕಟ್ಟಿಕೊಂಡು ಕುದುರೆಯ ಹಿಂದೆ  ಹೋಗುತ್ತಿರುತ್ತಾಳೆ. 


ನೋಡಿ ಈ ಒಂದೇ ಚಿತ್ರವನ್ನು ಹೇಗೆ ಬೇರೆ ಬೇರೆ ದೃಷ್ಟಿಕೋನದಿಂದ ನೋಡಬಹುದು ಎಂದು.. 


ನೀವು ತುಂಬಾ ಭಾವುಕ ಜೀವಿ ಆದರೆ... ಅದು ನಿಮಗೆ ಕರುಳು ಹಿಂಡುವ ದೃಶ್ಯ, ಶ್ರೀಮಂತಿಕೆಯನ್ನು ಈ ರೀತಿಯೂ ಪ್ರದರ್ಶೀಸಬೇಕೇ? ಆ ತಾಯಿಗೆ ಏಕೆ ಅಂತಹ ಕಷ್ಟದ ಕೆಲಸ ಕೊಟ್ಟದ್ದು.. ಅಲ್ಲಿ ಯಾರಿಗೂ ಮಾನವೀಯತೆಯೇ  ಇರಲಿಲ್ಲವೇ..? ಎಂಬ ಪ್ರಶ್ನೆ ಮೂಡುತ್ತದೆ. ಹೆಚ್ಚಿನವರು ಇದೇ ದೃಷ್ಟಿಕೋನದಿಂದ ನೋಡುತ್ತಾರೆ. ನಾನು ಕೂಡ ಈ ಪೋಟೋವನ್ನು ಹಂಚಿಕೊಂಡಿದ್ದೆ. ಮೊದಲಿಗೆ ನನ್ನ ದೃಷ್ಟಿಕೋನವು ಕೂಡ ಇದೆ ಆಗಿತ್ತು.



ಇನ್ನು ಕೆಲವರು ಹೇಳುತ್ತಾರೆ.. ಇಲ್ಲ ಆ ತಾಯಿಗೆ ಕೆಲಸವೇ ಕೊಡಬೇಕಿದ್ದರೆ ಬೇರೆ ಕೆಲಸ ಕೊಡಬಹುದಿತ್ತು, ಮದುವೆ  ಎಂದು ಹೇಳಿದ ಮೇಲೆ ಸಣ್ಣಪುಟ್ಟ ಬೇರೆ ಕೆಲಸ ಕೂಡ ಇದ್ದೇ ಇರುತ್ತದೆ. ಅದರ ಬದಲು ಈ ರೀತಿಯಾಗಿ ಅಷ್ಟು ದೂರ   ದೀಪ ಹೊತ್ತುಕೊಂಡು, ಜೊತೆಗೆ ಮಗುವನ್ನು ಇಟ್ಟುಕೊಂಡು ನಡೆಯುವ ಕೆಲಸ ಕೊಡಬೇಕಾಗಿರಲಿಲ್ಲ ಎಂದು ಕೆಲವರ ಅಭಿಪ್ರಾಯ.. ಈ ದೃಷ್ಟಿಕೋನವೂ ಕೂಡ ಸರಿಯೇ. ತಪ್ಪು ಎಂದು ಹೇಳಲು ಸಾಧ್ಯವಿಲ್ಲ. 



ಆದರೆ ಕೆಲವರು Practical ಆಗಿ ಯೋಚಿಸುತ್ತಾರೆ. ಇದರಲ್ಲಿ ಅಂತಹ ತಪ್ಪು ಏನಿಲ್ಲ.ಅವರು ದುಡಿದು ತಿನ್ನುತ್ತಿದ್ದಾರೆ, ಕದ್ದು ತಿನ್ನುತ್ತಿಲ್ಲ.. ಒಂದು ವೇಳೆ ಈ ಕೆಲಸ ಸಿಗದಿದ್ದರೆ ಅವರಿಗೆ ಒಂದು ಹೊತ್ತಿನ ಊಟವೂ ಸಿಗದೇ ಹೋಗುತ್ತಿತ್ತು ಎಂಬ ಬೇರೆಯೇ ದೃಷ್ಟಿಕೋನದಿಂದ ಈ ಘಟನೆಯನ್ನು ವಿಶ್ಲೇಷಿಸುತ್ತಾರೆ. ಈ ವಿಮರ್ಶೆ ತಪ್ಪು ಎಂದು ಯಾರೇ ಆಗಲಿ ಹೇಗೆ ಹೇಳಬಲ್ಲರು ಹೇಳಿ. ಈ ದೃಷ್ಟಿಕೋನವೂ ಕೂಡ ಅಷ್ಟೇ ಸರಿಯಾಗಿದೆ.



ನೋಡಿ ಒಂದೇ ಘಟನೆಯನ್ನು ಬೇರೆ ಬೇರೆ ಆಯಾಮಗಳಿಂದ ನೋಡಿದರೆ ಎಷ್ಟೊಂದು ವಿಷಯ ಹೊಳೆಯುತ್ತದೆ.ಆದರೆ ಹೆಚ್ಚಾಗಿ ನಾವು ಆ ಕೆಲಸ ಮಾಡುವುದೇ ಇಲ್ಲ. ಜಿದ್ದಿಗೆ ಬಿದ್ದು ಪೋಸ್ಟ್ ಗಳನ್ನು ಬರೆದು ಹಂಚುತ್ತೇವೆ. ಇಂತಹ ತಪ್ಪುಗಳನ್ನು ನಾನೂ ಸೇರಿದಂತೆ ಹೆಚ್ಚಿನವರು ಮಾಡಿದ್ದೇವೆ. 


ಇಲ್ಲಿ ಯಾವುದು ಸರಿ.. ಯಾವುದು ತಪ್ಪು ಅನ್ನುವುದಕ್ಕಿಂತಲೂ ಬೇರೆ ಬೇರೆ  ಕೋನಗಳಿಂದ ಘಟನೆಯನ್ನು ನೋಡುವ ದೃಷ್ಟಿಕೋನವನ್ನು ಬೆಳೆಸುವುದರಿಂದ ಅದು ಎಂದಿಗೂ ನಮಗೂ ಲಾಭದಾಯಕವೇ....ಹಾಗೂ ಸಮಾಜಕ್ಕೂ ಅಷ್ಟೇ ಹಿತ.ಘಟನೆಗಳಿಗೆ ಹಲವಾರು ಮುಖವಾಡ ಇದ್ದೇ  ಇರುತ್ತದೆ. ನಮಗೆ ಅದನ್ನು ಕಳಚಬೇಕು ಎಂಬ ಮನಸ್ಸಿದ್ದರೆ... ಎಲ್ಲಾ ದೃಷ್ಟಿಕೋನದಿಂದ ಯೋಚಿಸಿ ವಿಶ್ಲೇಷಣೆ ಮಾಡುವ ಕಲೆ ಗೊತ್ತಿರಲೇಬೇಕು. ಇದು ನಮ್ಮನ್ನು ಖಂಡಿತವಾಗಿಯೂ ಮುಂದೊಂದು ದಿನ ಒಳ್ಳೆಯ ಅಧ್ಯಯನಶೀಲರನ್ನಾಗಿ ಮಾಡಿ ಬಿಡಬಲ್ಲದು. 




ಕೋಣಗಳಂತೆ ಬೇರೆಯವರು ಹೇಳಿದ್ದನೇ  ನಂಬುವ,ಕೂಡಲೇ ಒಪ್ಪುವ ಬದಲು ನಮ್ಮ ತನವನ್ನು ಕೂಡ ಬೆಳೆಸಿಕೊಂಡು.. ತಕ್ಕ ಮಟ್ಟಿಗೆ ವಿಶ್ಲೇಷಣೆ ಮಾಡಿಯೇ  ಯಾವುದೇ ಘಟನೆಗೆ ಪ್ರತಿಕ್ರೀಯಿಸುವುದು ತುಂಬಾ ಒಳ್ಳೆಯದು ಎಂದೇ ನನ್ನ ಒಟ್ಟಾರೆ ಅಭಿಪ್ರಾಯ ಅಷ್ಟೇ.ದೃಷ್ಟಿಕೋನವಿರಲಿ.. ದೃಷ್ಟಿಕೋಣವಲ್ಲ..



.....................................................................................


#ಏನೋ_ಒಂದು... 


Ab Pacchu 

Moodubidire

photo - internet

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..