ಹಿಬುಲ ಎಂಬ ಕುಡಿಯುವ ಮತ್ತು ತಿನ್ನುವ ಮಿಲ್ಕು ಶೇಕು..
ಈ ಬೇಸಿಗೆ ಬಂತೆಂದರೆ ಸಾಕು ಎಲ್ಲರಿಗೂ ಅದೇನೋ ತೀರದ ದಾಹ.ಸದಾ ಏನಾದರೂ ತಣ್ಣಗೆ ಕುಡಿಯುತ್ತಿರಬೇಕು ಎಂದು ಅನ್ನಿಸಿಬಿಡುತ್ತದೆ.
ಇಂತಹ ಸಂದರ್ಭದಲ್ಲಿಯೇ ಹೆಚ್ಚಿನ ಸಾಫ್ಟ್ ಡ್ರಿಂಕ್ಸ್ ಗಳು ಗ್ರಾಹಕರ ಕಣ್ಣು ಕುಕ್ಕುವುದು.ಅದನ್ನು ಹಾಗೇ ಸ್ಟೈಲ್ ಆಗಿ ಕೈಯಲ್ಲಿ ಹಿಡಿದುಕೊಂಡು,ಬಾಯಿಗೆ ಸುರಿದುಕೊಂಡು ಬಿಟ್ಟರೆ ಥಂಡಾ ಥಂಡಾ ಕೂಲ್ ಕೂಲ್ ಎನ್ನುವ ಮನಸ್ಥಿತಿ ಎಂದೋ ನಮ್ಮದಾಗಿ ಬಿಟ್ಟಿದ್ದೆ.
ನನಗಂತು ಈ ಕೋಕ್, ಪೆಪ್ಸಿಗಳನ್ನು ಕುಡಿದು ಉಲ್ಲಾಸ ಹೊಂದುವ ಆಸಕ್ತಿ ಯಾವತ್ತಿಗೂ ತುಂಬಾನೇ ಕಡಿಮೆಯೇ.
ಊರಿನಲ್ಲಿ ಇದ್ದಾಗ ದೇಸಿ ಪಾನೀಯ,ದೇಸಿ ಪೇಯಗಳನ್ನೇ ಕುಡಿಯಬೇಕು ಎಂಬುವುದು ನನ್ನ ವಾದ.
ಆರೋಗ್ಯದ ದೃಷ್ಟಿಯಿಂದಲೂ ಅದೇ ಒಳ್ಳೆಯದು ಹಾಗೂ ದೇಸಿಯ ಪೇಯಗಳ ಸ್ವಾದ ಮತ್ತು ಆ ರುಚಿ ಈ ನೊರೆಯೇಳಿಸುವ ಬಣ್ಣದ ಸಾಫ್ಟ್ ಡ್ರಿಂಕ್ಸ್ ನಲ್ಲಿ ಎಂದಿಗೂ ಬರಲು ಸಾಧ್ಯವೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.
ಅಂಗಡಿಯಲ್ಲಿ ಎಂತಹ ಸಾಫ್ಟ್ ಡ್ರಿಂಕ್ಸ್ ಇದ್ದರೂ "ಅಣ್ಣಾ ಲೋಕಲ್ ಕೋಲ್ಡ್ ದಾಲ ಇಜ್ಜೆ.." ( ಲೋಕಲ್ ತಂಪು ಪಾನೀಯ ಯಾವುದು ಇಲ್ಲವೇ?) ಎನ್ನುವ ಮಾತು ಮಂಗಳೂರಿನಲ್ಲಿ ಅಂತು ಕೇಳಿಬರುವುದು ಸರ್ವೇ ಸಾಮಾನ್ಯ.
ಮಂಗಳೂರಿಗರ ಲೋಕಲ್ ಪಾನೀಯ ಎಂದರೆ ಅದು ಕಡುಗೆಂಪು ಬಣ್ಣದ ಪುನರ್ ಪುಳಿ,ಎಳನೀರು ಗಂಜಿಯ ಬೊಂಡ ಶರಬತ್ತು,ಬೊಂಡದ ಬಾವೆಯಿಂದಲೇ ಮಾಡಿದ ಮಿಲ್ಕು ಶೇಕು,ತಂಪಾದ ಎಳ್ಳು,ಪರಿಮಳದ ಕಾಮಕಸ್ತೂರಿ,ರುಚಿ ಎನಿಸುವ ಚಿಪ್ಪಡ್,ದಪ್ಪನೆಯ ಹಿಬುಲ,ಅಧಿಕ ಹಾಲು ಹಾಕಿ ಮಾಡುವ ತುಂಬಾ ತಂಪಿನ ಇಸುಬುಕೋಲ್ ಇತ್ಯಾದಿ ಇತ್ಯಾದಿ..
ಇವುಗಳಿಗೆ ಬೇಡಿಕೆ ನಮ್ಮಲ್ಲಿ ಎಂದೂ ಕಡಿಮೆ ಆಗಿಯೇ ಇಲ್ಲ.ಹಾಗಾಗಿ ನಮ್ಮಲ್ಲಿಯ ಅಂಗಡಿಗಳ ಪ್ರಿಡ್ಜ್ ಗಳಲ್ಲಿ ಹೆಚ್ಚಿನ ಸ್ಥಾನವನ್ನು ಇವುಗಳೇ ಇಂದಿಗೂ ಆಕ್ರಮಿಸಿಕೊಳ್ಳುತ್ತದೆ. ಬೆಲೆಯೂ ಕೂಡ ಕಡಿಮೆ.ದೇಹಕ್ಕೂ ಹಿತ. ಹಾಗಾಗಿ ಹೆಚ್ಚಿನವರಿಗೆ ಇವುಗಳೆಲ್ಲವೂ ಇಲ್ಲಿ ಎಲ್ಲಾ ಕಾಲದಲ್ಲೂ ಅಧಿಕ ಪ್ರೀಯವೇ ಆಗಿದೆ.
ಇಂದು ನಿಮಗೆ ನಾನು ತುಂಬಾ ವಿಶೇಷವಾದ ಮತ್ತು ನಮ್ಮ ತುಳುನಾಡಿನ ಅತ್ಯಂತ ಹಳೆಯ ಮತ್ತು ಅಷ್ಟೇ ಸಾಂಪ್ರದಾಯಿಕವಾದ ಮಿಲ್ಕ್ ಶೇಕ್ ಒಂದರ ಬಗ್ಗೆಯೇ ಹೇಳುತೇನೆ.. ಅದರ ಹೆಸರೇ ಹಿಬುಲ ಜ್ಯೂಸ್.
ಈ ಹಿಬುಲವನ್ನು ನಮ್ಮಲ್ಲಿ ತಿಬುಲ ಎಂದು,ಇಲ್ಲವೇ ಇಬ್ಬುಲ ಎಂದೂ ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಕರೆಯುತ್ತಾರೆ.
ಇದರಲ್ಲಿಯೂ ಹಲವಾರು ಪ್ರಭೇಧಗಳು ಇದ್ದು,ಇದರ ಗಾತ್ರ ಆಕಾರಗಳು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ಇರುತ್ತದೆ.
ಸಾಮಾನ್ಯವಾಗಿ Snap Melon ಎಂದು ಗುರುತಿಸಲ್ಪಡುವ ಇದು ಮಲೆನಾಡಿನಲ್ಲಿ ಇಬ್ಬಡ್ಲ ಹಣ್ಣು ಎಂದು ದೊಡ್ಡ ಗಾತ್ರದಲ್ಲಿಯೂ ಹಾಗೂ ಕೇರಳದಲ್ಲಿ ಪೊಟ್ಟು ವೆಳ್ಳರಿ ಎಂದು ಬಹಳ ಉದ್ದವಾದ ಆಕಾರದಲ್ಲಿ ಕಾಣಸಿಗುತ್ತದೆ.
ಆದರೆ ನಮ್ಮ ಮಂಗಳೂರಿನಲ್ಲಿ ಸಿಗುವ,ಇಲ್ಲಿಯೇ ಬೆಳೆಯುವ ಈ ಹಿಬುಲ ಮಾತ್ರ ಹೆಚ್ಚಾಗಿ ಚಿತ್ರದಲ್ಲಿ ತೋರಿಸುವಂತೆಯೇ ಸಣ್ಣ ಗಾತ್ರದಲ್ಲಿ ಇದ್ದು,ಸೌತೆಕಾಯಿಯ ರೂಪದಲ್ಲಿಯೇ ಇರುತ್ತದೆ. ನೋಡಲು ಮಾತ್ರವಲ್ಲ ಮುಟ್ಟಿ ನೋಡಲು ಕೂಡ ಬಹಳ ಚಂದ ನಮ್ಮ ಈ ಮಂಗಳೂರಿನ ಹಿಬುಲ.ಆದರೆ ಇಲ್ಲಿಯ ಹಿಬುಲ ಸೌತೆಕಾಯಿಯಂತೆ ಮೈ ಮೇಲೆ ಯಾವುದೇ ಗೆರೆಗಳನ್ನು ಹೊಂದಿರುವುದಿಲ್ಲ ಮಾತ್ರವಲ್ಲ ಯಾವುದೇ ಸಣ್ಣ ಸಣ್ಣ ಚುಕ್ಕೆ ಗಳು ಕೂಡ ಇದರಲ್ಲಿ ಇರದೆ,ಇದು ಸಂಪೂರ್ಣವಾಗಿ ಮಸುಕಲು ಬಿಳಿ ಬಣ್ಣ, ಇಲ್ಲವೇ ಕೆನೆ ಬಣ್ಣದಲ್ಲಿ ಇರುತ್ತದೆ ಮತ್ತು ಹೆಚ್ಚಾಗಿ ಇದು ಸಾಧಾರಣ ಗಾತ್ರದ ಸೌತೆಕಾಯಿಯ ಸೈಜಿನಲ್ಲಿಯೇ ಇರುತ್ತದೆ.ಕೆಲವೊಮ್ಮೆ ಅದಕ್ಕಿಂತಲೂ ಬಹಳ ಸಣ್ಣದಾದ ಗಾತ್ರದಲ್ಲಿಯೇ ನಮ್ಮಲ್ಲಿನ ಹಿಬುಲ ಕಂಡು ಬರುವುದು ಇದೆ.
ಸೌತೆಕಾಯಿ ರೂಪದಲ್ಲಿ ಇದ್ದರೂ ಸಹ ಇದು ಸೌತೆಕಾಯಿಯ ಜಾತಿಗೆ ಸೇರುವುದಿಲ್ಲ.ಇದು ಕರ್ಬೂಜದ ಪ್ರಭೇದಕ್ಕೆ ಸೇರುವ ಒಂದು ರೀತಿಯ ಹಣ್ಣು.ಇತರ ಮಿಲ್ಕ್ ಶೇಕ್ ಗಳನ್ನು ಮಾಡುವಂತೆ ಇದನ್ನೂ ಕೂಡ ಮಾಡಿದರೆ,ಇದರ ರುಚಿ ಕೂಡ ಹೆಚ್ಚು ಕಡಿಮೆ ಕರ್ಬೂಜದಂತೆಯೇ ಇರುತ್ತದೆ.
ಈ ಹಿಬುಲ ಸೀಸನ್ ಹಣ್ಣು. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಅಂದರೆ ಈಗ ಇದು ಮಾರ್ಕೆಟ್ ನಲ್ಲಿ ಉಂಟು. ಆ ನಂತರ ಕಣ್ಣಿಗೆ ಬೀಳುವುದೇ ಇಲ್ಲ.ಮುಂದಿನ ವರ್ಷಕ್ಕೆಯೇ ಕಾಯಬೇಕು.ಆದರೆ ನಮ್ಮ ಮಂಗಳೂರು, ಮೂಡುಬಿದಿರೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ, ಗೂಡಂಗಡಿಗಳಲ್ಲಿ ವರ್ಷ ಪೂರ್ತಿ ನಿಮಗೆ ಹಿಬುಲ ಜ್ಯೂಸ್ ಕುಡಿಯಲು ಸಿಗುತ್ತದೆ!.ಅವರು ಏನು ಮಾಡುತ್ತಾರೆ ಎಂದರೆ ಈ ಕರ್ಬೂಜ (Musk melon) ವನ್ನೇ ಹಿಬುಲ ಜ್ಯೂಸ್ ಎಂದು ಮಾಡಿ ಕೊಡುತ್ತಾರೆ. ರುಚಿ ಕೂಡ ಹೆಚ್ಚು ಕಡಿಮೆ ಒಂದೇ ರೀತಿ ಇದ್ದು ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ.
ಆದರೆ ಕರ್ಬೂಜವೇ ಬೇರೆ ಈ ಹಿಬುಲವೇ ಬೇರೆ. ಮಕ್ಕಳಿಗೆ ಬಿಡಿ,ದೊಡ್ಡವರಿಗೂ ಕೂಡ ಇದರ ಸ್ಪಷ್ಟವಾದ ವ್ಯತ್ಯಾಸ ಗೊತ್ತಿಲ್ಲದೇ ಇರುವುದು ಬಹಳ ಬೇಜಾರಿನ ವಿಷಯ. ಅಷ್ಟೇ ಏಕೆ ಮಂಗಳೂರಿನಲ್ಲಿಯೇ ಹಲವರಿಗೆ ಈ ಹಿಬುಲ ಎನ್ನುವ ಒಂದು ಹಣ್ಣು ಇದೆ ಮತ್ತು ಅದು ನಮ್ಮದೇ ನೆಲದಲ್ಲಿ ಬೆಳೆಯುವ ಹಣ್ಣು ಎನ್ನುವುದು ಕೂಡ ಹೆಚ್ಚಿನವರಿಗೆ ಗೊತ್ತಿಲ್ಲ. ಅವರೆಲ್ಲರಿಗೂ ಎಬೋಲ ಗೊತ್ತಿದೆ. ಆದರೆ ಹಿಬುಲ ಗೊತ್ತಿಲ್ಲ.
ಅಷ್ಟೇ ಏಕೆ.. ನನ್ನ ಕಾಲೇಜು ಸ್ನೇಹಿತರಲ್ಲಿ ಇದರ ಬಗ್ಗೆ ಹೇಳಿಕೊಂಡಾಗ ಇವನು ಯಾವುದರ ಬಗ್ಗೆ ಹೇಳುತ್ತಿದ್ದೇನೆ ಎಂದು ನನ್ನನ್ನು ಕೂಡ ವಿಚಿತ್ರವಾಗಿ ಅನ್ಯಗ್ರಹ ಜೀವೀಯಂತೆ ನೋಡಿದ್ದು ಕೂಡ ಇದೆ. ಆದರೆ ಚಿಪ್ಪಡ್ ಬಗ್ಗೆ ಹೇಳಿದರೆ ಅವರಿಗೆ ಗೊತ್ತು.ಅದು ಅದೇ Musk Melon. Google ಮಾಡಿದರೂ ನಿಮಗೆ ಹಿಬುಲದ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ. ಮಲೆನಾಡಿನ ಇಬ್ಬಡ್ಲ ಹಣ್ಣಿನ ಬಗ್ಗೆ ಆದರೂ ಮಾಹಿತಿ ಸಿಗುತ್ತದೆ ಆದರೆ ಮಂಗಳೂರಿನ ಹಿಬುಲ ಮಾತ್ರ ಇಂಟರ್‌ನೆಟ್ ನಲ್ಲಿಯೂ ಸಿಗುವುದೇ ಇಲ್ಲ.
ಆದರೆ ನಾನು ಚಿಕ್ಕಂದಿನಿಂದಲೂ ಇದನ್ನು ನೋಡುತ್ತಲೇ ಬೆಳೆದಿದ್ದೇನೆ. ಇದರ ರುಚಿಯನ್ನು ನಾನೂ ಸವಿದಿದ್ದೇನೆ ಮತ್ತು ನನ್ನ ಹಿರಿಯರುಗಳು ಹಾಗೂ ನಮ್ಮ ಊರವರು ಕೂಡ ಎಷ್ಟೋ ವರ್ಷಗಳಿಂದ ಈ ಹಿಬುಲವನ್ನು ಸವಿಯುತ್ತಲೇ ಬಂದಿದ್ದೇವೆ. ಮನೆಯಲ್ಲಿ ಇದ್ದಾಗ ನನ್ನ ಅಮ್ಮ ಇದನ್ನು ಬಹಳ ಶ್ರದ್ಧೆಯಿಂದ ಇಂದಿಗೂ ಮಾಡಿ ಕೊಡುತ್ತಾಳೆ ಮಾತ್ರವಲ್ಲ ಒಂದೆರಡು ಬಾರಿ ಇದನ್ನು ನಾವು ನಮ್ಮ ಜಾಗದಲ್ಲಿಯೇ ಬೆಳೆದಿದ್ದೇವೆ ಕೂಡ.
ನಮ್ಮ ಊರಿನಲ್ಲಿ ಹಿಂದೆ ಎಲ್ಲಾ ನಿರಂತರವಾಗಿ ಹಿಬುಲವನ್ನು ಬಹು ಪ್ರೀತಿಯಿಂದ ಅಕ್ಕರೆಯಿಂದ ಬೆಳೆಯುವವರನ್ನು ನಾನು ಕಂಡಿದ್ದೇನೆ ಮತ್ತು ಅವರ ತೋಟಕ್ಕೆ ಹೋದಾಗ ಎಷ್ಟೋ ಬಾರಿ ಬಳ್ಳಿಯಲ್ಲಿ ಬಿಟ್ಟಿರುವ ಆಕರ್ಷಕವಾಗಿ ಕಾಣುವ ಈ ಹಿಬುಲದ ಮೈದವಡಿ ಬಂದಿದ್ದೆನೆ ನಾನು.ನನ್ನ ಗೆಳೆಯರಿಗೆಯೇ ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಇರುವಾಗ ಈಗೀನ ಮಕ್ಕಳಿಗೆ ಹಿಬುಲದ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ ಹೇಳಿ..
ಹಿಬುಲವೊಂದು ನಮ್ಮ ನಡುವೆಯೇ ಇದ್ದು ಇಲ್ಲದಂತೆ ಆಗಿದೆ.ಹೆಚ್ಚಿನ ಮಕ್ಕಳಿಗೆ ಗೂಡಂಗಡಿಯಲ್ಲಿ ಸಿಗುವ ಕರ್ಬೂಜದಿಂದ ಮಾಡುವ ಜ್ಯೂಸೇ ಹಿಬುಲ ಜ್ಯೂಸ್ ಆಗಿದೆ ಇಂದು.ಅವರು ನಿಜವಾದ ಹಿಬುಲ ಜ್ಯೂಸ್ ಸವಿದೇ ಇಲ್ಲ. ಸೀಸನ್ ನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಸಹ ಒಮ್ಮೊಮ್ಮೆ ಕಂಡು ಬರುವ ಇದನ್ನು ಅವರು ಯಾವುದೋ ಬಿಳಿಯ ಬಣ್ಣದ ಸೌತೆ ಎಂದೇ ತಿಳಿದು ಬಿಡುತ್ತಾರೆಯೇ ಹೊರತು ಅದು ನಮ್ಮ ತುಳುನಾಡಿನ ಹಿಬುಲ ಎಂದು ಇಂದಿನ ಮಕ್ಕಳಿಗೆ ಗೊತ್ತೇ ಇಲ್ಲ.ಅಂತಹ ಹೆಚ್ಚಿನ ಮಕ್ಕಳನ್ನು ನಾನೇ ಸ್ವತಃ ನೋಡಿದ್ದೇನೆ.
ಹೆಚ್ಚಿನ ಎಲ್ಲಾ ಸಾಫ್ಟ್ ಡ್ರಿಂಕ್ಸ್ ಗಳ ಹೆಸರು ಬಾಯಿಪಾಠ ಗೊತ್ತಿರುವ ನಮ್ಮ ಮಕ್ಕಳಿಗೆ ಹಿಬುಲದ ಬಗ್ಗೆ ಗೊತ್ತಿಲ್ಲದೇ ಇರುವುದು ನಿಜವಾಗಿಯೂ ಬೇಸರ ಮೂಡಿಸುತ್ತದೆ. ಏಕೆಂದರೆ ಹಿಬುಲ ಜ್ಯೂಸ್ ಎನ್ನುವುದು ನಿಜವಾಗಿಯೂ "ನಮ್ಮ ಊರುದ, ನಮ್ಮ ನೀರ್ ದ" (ನಮ್ಮ ನೆಲದ) ಎಂದು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ತುಳುನಾಡಿನದ್ದೇ ಒಂದು ಜ್ಯೂಸ್ ಆಗಿದೆ. ಅದೂ ಕೂಡ ನಿನ್ನೆ ಮೊನ್ನೆಯಿಂದ ಅಲ್ಲ, ನೂರಾರು ವರ್ಷಗಳಿಂದಲೂ ಅದು ಇಲ್ಲಿಯೇ ಇತ್ತು, ಈಗಲೂ ಇದೆ.ನಮ್ಮವರ ಆಸಕ್ತಿ ಇತ್ತೀಚೆಗೆ ಅದರತ್ತ ಕೊಂಚ ಕಡಿಮೆ ಆಗಿದೆ ಅಷ್ಟೇ. ಏಕೆಂದರೆ ಮನೆಯ ಮಿಕ್ಸರ್ ನಲ್ಲಿ ಚಿಕ್ಕು,ಸೇಬು,ದಾಳಿಂಬೆ, ಮಸ್ಕ್ ಮೆಲನ್ ಗಳು ಮಾತ್ರ ಚೆನ್ನಾಗಿ ಗ್ರೈಂಡ್ ಆಗಿ ಜ್ಯೂಸ್ ಆಗುತ್ತಿದೆ.
ನಾನು ಈ ಹಿಬುಲ ಜ್ಯೂಸ್ ಬಗ್ಗೆ ಇಷ್ಟು ಹೇಳುವುದು ಏಕೆ ಎಂದರೆ ಈ ಜ್ಯೂಸ್ ಇನ್ನಿತರ ಮಿಲ್ಕ್ ಶೇಕ್ ಗಳಂತೆ ಇರದೆ ಅದನ್ನು ಮಾಡುವ ಕ್ರಮದಿಂದಲೇ ಅದು ಯಾರಿಗೇ ಆಗಲಿ ಬಾಯಲ್ಲಿ ನೀರು ತರಿಸುತ್ತದೆ.
ಸೀಸನ್ ನಲ್ಲಿ ಈ ಹಿಬುಲ ಮಾರ್ಕೆಟ್ ಗೆ ಬಂದಾಗ ಜ್ಯೂಸ್ ಅಂಗಡಿಯವರು ಆಗ ಮಾತ್ರ ನಿಜವಾದ ಹಿಬುಲವನ್ನೇ ಮಿಲ್ಕ್ ಶೇಕ್ ಮಾಡಿ ಕೊಡುತ್ತಾರೆ. ಆದರೆ ಮಾಡುವುದು ಮಾತ್ರ ಬೇರೆ ಹಣ್ಣಿನ ಮಿಲ್ಕ್ ಶೇಕ್ ಮಾಡಿದಂತೆ ಸಕ್ಕರೆ ಹಾಗೂ ಹಾಲು ಹಾಕಿಯೇ. ಹಾಗಾಗಿ ಇದು ಮತ್ತೆ ಕರ್ಬೂಜದ ರುಚಿಯನ್ನೇ ಕೊಡುತ್ತದೆ.ಸದ್ಯಕ್ಕೆ ಮೂಡುಬಿದಿರೆಯ ಪ್ರೂಟ್ಸ್ ಅಂಗಡಿಗಳಲ್ಲಿ ಈ ಹಿಬುಲ ಮಿಲ್ಕ್ ಶೇಕ್ ಗೆ 40 ರೂಪಾಯಿ ಇದೆ. ಹಿಬುಲ ಜ್ಯೂಸ್ ಕೂಡ ಒಂದು ಮಿಲ್ಕ್ ಶೇಕ್ ಆಗಿದ್ದರೂ ಸಹ,ಅದನ್ನು ಸಾಂಪ್ರದಾಯಿಕವಾಗಿ ತುಳುನಾಡಿನ ಶೈಲಿಯಲ್ಲಿಯೇ ಮಾಡುವುದು ಈ ರೀತಿ ಅಲ್ಲವೇ ಅಲ್ಲ.
ಇದನ್ನು ಕೂಡ ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ..
#ಹಿಬುಲ_ಜ್ಯೂಸ್_ಮಾಡುವ_ವಿಧಾನ..
ಈ ಸೌತೆಯಂತೆ ಕಾಣುವ ಹಿಬುಲ ಹಣ್ಣಾದಾಗ ಅದು ಸಿಪ್ಪೆ ಸಹಿತವಾಗಿ ಹಾಗೇ ಒಡೆದು ಬಿಡುತ್ತದೆ. ಆಗ ಇದು ಜ್ಯೂಸ್ ಮಾಡಲು ಸಿದ್ಧವಾಗಿದೆ ಎಂದೇ ಲೆಕ್ಕ ಮತ್ತು ನಾವು ಜ್ಯೂಸ್ ಮಾಡಲು ಅಂತಹ ಹಿಬುಲವನ್ನೇ ತೆಗೆದುಕೊಳ್ಳಬೇಕು.
ಮೊದಲು ಇದರನ್ನು ಸಿಪ್ಪೆ ಹಾಗೂ ಅದರ ಬೀಜವನ್ನು ತೆಗೆದು ಬಿಟ್ಟು.. ಕೇವಲ ಅದರ ಪಲ್ಪುಗಳನ್ನು ಮಾತ್ರ ಜ್ಯೂಸ್ ಗಾಗಿ ತೆಗೆದುಕೊಳ್ಳಬೇಕು.
ಇದಕ್ಕೆ ನಾವು ಸಕ್ಕರೆಯ ಬದಲಿಗೆ ಬೆಲ್ಲ ಹಾಕುತ್ತೇವೆ, ಅದೇ ರೀತಿ ಹಾಲಿನ ಬದಲು ತೆಂಗಿನಕಾಯಿಯ ಹಾಲು ಹಾಕುತ್ತೇವೆ.
ಸಿಹಿಗೆ ಬೇಕಾದಷ್ಟು ಬೆಲ್ಲವನ್ನು ತುರಿದು ಇಟ್ಟುಕೊಳ್ಳಿ, ಅದೇ ರೀತಿ ತೆಂಗಿನಕಾಯಿಯ ಗಟ್ಟಿ ಹಾಲು ಹಾಗೂ ತೆಳು ಹಾಲು ಕೂಡ ತೆಗೆದು ಇಟ್ಟುಕೊಳ್ಳಿ. ಮೊದಲ ಬಾರಿಗೆ ಕಡೆದಾಗ ಸ್ವಲ್ಪವೇ ಬರುವುದು ಗಟ್ಟಿ ಹಾಲು. ಅದನ್ನು ತೆಗೆದ ನಂತರ ಪುನಃ ಇನ್ನಷ್ಟು ನೀರು ಸೇರಿಸಿ ಕಡೆದಾಗ ಬರುವುದೇ ತೆಳು ಹಾಲು.
ಈಗ ನಾವು ಮೊದಲಿಗೆ ಈ ತೆಳು ಹಾಲಿನಲ್ಲಿಯೇ ಈ ಹಿಬುಲದ ಪಲ್ಪುಗಳನ್ನು, ಬೆಲ್ಲದ ತುರಿಯನ್ನು ಸೇರಿಸಿಕೊಂಡೇ ಮಿಕ್ಸರ್ ನಲ್ಲಿ ಕಡೆಯಬೇಕು. ಆ ನಂತರ ಗಟ್ಟಿ ಹಾಲನ್ನು ಸೇರಿಸಿಕೊಂಡು ಬಿಟ್ಟರೆ ಹಿಬುಲದ ಮಿಲ್ಕ್ ಶೇಕ್ ರೆಡಿ.
ಆದರೆ ಈ ಮಿಲ್ಕ್ ಶೇಕ್ ಅನ್ನು ಸೇವಿಸುವ ಕ್ರಮವೇ ಬೇರೆ. ಅದು ಇನ್ನೂ ಮಜವಾಗಿದೆ. ಇದನ್ನು ಕುಡಿಯುವುದು ಎಂದು ಹೇಳುವುದಕ್ಕಿಂತಲೂ ತಿನ್ನುವುದು ಎಂದು ಹೇಳಿದರೆ ಹೆಚ್ಚು ಸಮರ್ಪಕವಾಗಿ ಇರುವುದು. ಆದರೆ ಹೇಗೆ? ಹೌದು ಇದರಲ್ಲಿಯೇ ಇದರ ಗಮ್ಮತ್ತು ಇರುವುದು.
ಮಿಲ್ಕ್ ಶೇಕ್ ಆದ ನಂತರ ಒಂದು ಲೋಟಕ್ಕೆ ಹಾಕಿ ಅದರ ಮೇಲೆ ಹಾಗೇ ಈ ಅವಲಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಉದುರಿಸಿಕೊಂಡು.. ಆ ಅವಲಕ್ಕಿ ಹಿಬುಲದ ಜ್ಯೂಸ್ ನಲ್ಲಿ ನೆನೆದು ದಪ್ಪಗಾಗುತ್ತಾ ಬಂದಾಗ... ಸುರ್ ಪುರ್ರ್ ಎಂದು ಹಿಬುಲ ಜ್ಯೂಸ್ ಹೀರುತ್ತಾ, ನಡು ನಡುವಲ್ಲಿ ಅವಲಕ್ಕಿಯನ್ನು ತಿನ್ನುವುದು ಅದೊಂದು ತರಹದ ಸ್ವರ್ಗವೇ ಬಿಡಿ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು.
ನೀವೇ ಹೇಳಿ ಇಷ್ಟು ಸೊಗಸಾಗಿ ಯಾವ ಜ್ಯೂಸ್ ಅಂಗಡಿಯಲ್ಲಿ ನಿಮಗೆ ಹಿಬುಲ ಜ್ಯೂಸ್ ಮಾಡಿಕೊಡಲು ಸಾಧ್ಯ? ಅದಕ್ಕೆ ಹೇಳಿದ್ದು ಇಂದಿನ ಮಕ್ಕಳು ಈ ಸೌಭಾಗ್ಯದಿಂದ ವಂಚಿತರಾಗಿದ್ದಾರೆ ಎಂದು.
ಕೆಲವೊಬ್ಬರು ಈ ಅವಲಕ್ಕಿಯನ್ನು ತುಪ್ಪದಲ್ಲಿ ಹದವಾಗಿ ಹುರಿದು ರೋಸ್ಟ್ ಮಾಡಿಕೊಂಡು ಆ ನಂತರ ಹಿಬುಲಕ್ಕೆ ಸೇರಿಸಿಕೊಂಡು ಕುಡಿಯುತ್ತಾರೆ.ಅದೊಂತರಹ ಬೇರೆಯೇ ಮಜಾ. ಕೆಲವರಿಗೆ ಅದೂ ಕೂಡ ಇಷ್ಟವೇ.
ಅಂದ ಹಾಗೆ ಮತ್ತೊಂದು ವಿಷಯ ಏನೆಂದರೆ,ಕೆಲವರು ಈ ಜ್ಯೂಸ್ ಗೆ ಎಲಕ್ಕಿಯನ್ನೂ ಕೂಡ ಸೇರಿಸುತ್ತಾರೆ. ನಿಮಗೆ ಎಲಕ್ಕಿ ತುಂಬಾ ಇಷ್ಟ ಇದ್ದರೆ ಖಂಡಿತವಾಗಿಯೂ ಹಾಕಿಕೊಳ್ಳಿ. ಆದರೆ ನನ್ನಲ್ಲಿ ಕೇಳಿದರೆ ಬೇಡ ಎಂದೇ ಹೇಳುತ್ತೇನೆ. ಕೇವಲ ಹಿಬುಲ ಜ್ಯೂಸ್ ಮಾತ್ರವಲ್ಲ ಯಾವುದೇ ಜ್ಯೂಸ್ ಗೆ ಎಲಕ್ಕಿ ಹಾಕಬೇಡಿ. ಕಾರಣ ಇಷ್ಟೇ ಎಲಕ್ಕಿಯ ಪರಿಮಳ ಬಹಳ Intensive. ಅದು ಉಳಿದ ಎಲ್ಲಾ ಪ್ಲೇವರ್ ಗಳನ್ನು Dominate ಮಾಡಿ ಜ್ಯೂಸ್ ಕುಡಿಯುವಾಗ ನಮಗೆ ಎಲಕ್ಕಿಯ ಪ್ಲೇವರೇ ಜಾಸ್ತಿಯಾಗಿ ಬಾಯಿಗೆ ಸಿಗುತ್ತದೆ. ಎಲಕ್ಕಿ ಹಾಕುವುದರಿಂದ ನಮಗೆ ಯಾವತ್ತಿಗೂ ಜ್ಯೂಸ್ ನಲ್ಲಿರುವ ಮೂಲ ಹಣ್ಣಿನ ಪ್ಲೇವರ್ ಸರಿಯಾಗಿ ಸಿಗುವುದೇ ಇಲ್ಲ.ಹಾಗಾಗಿ ಯಾವುದೇ ಹಣ್ಣುಗಳ ಜ್ಯೂಸ್ ಗಳಲ್ಲಿ ಏಲಕ್ಕಿ ಹಾಕದೇ ಇರುವುದೇ ಒಳ್ಳೆಯದು ಎಂದು ನನ್ನ ಅಭಿಪ್ರಾಯ.
ಮತ್ತೊಂದು ವಿಷಯ ಹಿಂದೆ ಎಲ್ಲಾ ನಮ್ಮಲ್ಲಿ ಮಿಕ್ಸರ್ ನ ಬಳಕೆ ಇರಲಿಲ್ಲ. ಹಾಗಾಗಿ ಕೈಯಲ್ಲಿಯೇ ಹಿಬುಲದ ಪಲ್ಪುಗಳನ್ನು ಚೆನ್ನಾಗಿ ಕಿವುಚಿ, ಅದಕ್ಕೆ ಕೇವಲ ಗಟ್ಟಿ ಕಾಯಿ ಹಾಲನ್ನು ಮಾತ್ರ ಹಾಕಿ,ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ, ರುಚಿಗೆ ಒಂದು ಚಿಟಿಕೆ ಸ್ವಲ್ಪವೇ ಸ್ವಲ್ಪ ಉಪ್ಪು ಹಾಕಿ.. ರಸಾಯನದಂತೆ ಮಾಡಿ.. ಅದರ ಮೇಲೆಯೇ ಅವಲಕ್ಕಿಯನ್ನು ಹಾಕಿಕೊಂಡು.. ಆಹಾ.. ಎಂದು ಬಾಯಿ ಚಪ್ಪರಿಸುತ್ತಿದ್ದರು. ನಿಮಗೆ ಇಷ್ಟ ಆಗುವುದಾದರೆ ಈಗಲೂ ಈ ರೀತಿ ಮಾಡಿಕೊಳ್ಳಬಹುದು. ನೀರುದೋಸೆಗೆ, ಸೇಮೆದಡ್ಡೆಗೆ ಕೂಡ ಹಿಬುಲದ ರಸಾಯನ ಒಳ್ಳೆಯದಾಗುತ್ತದೆ.
ಹಣ್ಣಾಗುತ್ತಾ ಬರುವಾಗ ಬಳ್ಳಿಯಲ್ಲಿಯೇ ಸಿಪ್ಪೆ ಸಹಿತ ಒಡೆದುಕೊಂಡು ಒಂದೊಳ್ಳೆಯ ಪರಿಮಳ ಸುತ್ತಲೂ ಹೊರ ಸೂಸುವ ಈ ಹಿಬುಲ ಹಾಗೇ ತಿನ್ನಲು ನಿಜವಾಗಿಯೂ ಬಹಳ ಸಪ್ಪೆ. ಬೆಲ್ಲ ಹಾಗೂ ಕಾಯಿ ಹಾಲು ಬಿದ್ದಾಗಲೇ ಇದರ ರುಚಿ ಹೆಚ್ಚಾಗುವುದು ಮತ್ತು ಒಂದು ಸ್ವಾದದ ಪೇಯ ಆಗುವುದು. ಈ ಹಣ್ಣಿನ ಪರಿಮಳ ಕೂಡ ಮೂಗಿಗೆ ಬಹಳ ಹಿತ. ಬಳ್ಳಿಯಲ್ಲಿ ಇದು ಹಣ್ಣಾದಾಗ ಇಲ್ಲವೇ ಮಾರುಕಟ್ಟೆಯಲ್ಲಿ ನಡೆವಾಗ ಇದರ ಪರಿಮಳವೊಂದು ಹಾಗೇ ಬಂದು ಮೂಗಿಗೆ ಬಡಿದಾಗ ನಿಜವಾದ ಹಿಬುಲ ಪ್ರೇಮಿ ಇದರ ಜ್ಯೂಸ್ ಮಾಡಿ ಕುಡಿಯದೇ ಎಂದಿಗೂ ಇರಲಾರ.. ಅಂದ ಹಾಗೆ ಇದು ಹೆಚ್ಚಾಗಿ ಬಳಕೆ ಆಗುವುದು ಜ್ಯೂಸ್ ಮಾಡಲು ಮಾತ್ರ,ಹಾಗಾಗಿ ಇದನ್ನು ಸೌತೆಕಾಯಿಯಂತೆ ತರಕಾರಿ ಅಂಗಡಿಗಳಲ್ಲಿ ಮಾರಾಟ ಮಾಡದೇ ಹೆಚ್ಚಾಗಿ ಪ್ರೂಟ್ಸ್ ಅಂಗಡಿಗಳಲ್ಲಿ ಮಾರುತ್ತಾರೆ.
ಈ ಹಣ್ಣು ಅಷ್ಟೇ Delicate ಕೂಡ ಹೌದು. ಹಣ್ಣಾದಾಗ ಬಹಳ ಮೃದು ಆಗುವುದರಿಂದ ಸ್ವಲ್ಪ ಮುಟ್ಟಿದರೂ ನಜ್ಜು ಗುಜ್ಜಾಗಿ ಹೋಗುತ್ತದೆ. ಹಾಗಾಗಿ ಮಾರುಕಟ್ಟೆಯಿಂದ ಮನೆಗೆ ತರುವುದಾದರೆ ಮಗುವಿನಂತೆ ಜೋಪಾನವಾಗಿ ಎತ್ತಿಕೊಂಡು ಬರಬೇಕು. ನನಗಂತು ಇಂತಹ ಕೆಲಸಗಳೇ ಬಹಳ ಇಷ್ಟ. ಹಾಗಾಗಿ ಹಿಂದಿನಿಂದಲೂ ಮನೆಗೆ ಹಿಬುಲ ತರುವುದು ನಾನೇ.
ಸೀಸನ್ ನಲ್ಲಿ ಒಮ್ಮೆಯಾದರೂ ಹಿಬುಲ ಜ್ಯೂಸ್ ಕುಡಿಯದಿದ್ದರೆ ನನ್ನ ಮನಸ್ಸಿಗೆ ಮಾತ್ರವಲ್ಲ ಆತ್ಮಕ್ಕೂ ಸಮಾಧಾನವೇ ಇರುವುದಿಲ್ಲ. ಅದರಲ್ಲೂ ನಾನೇ ಮಾಡಿಕೊಂಡು ಕುಡಿಯುವುದರಲ್ಲಿ ಮತ್ತು ಮನೆಯವರಿಗೆಲ್ಲಾ ಮಾಡಿ ಕೊಡುವುದರಲ್ಲಿ ನನ್ನ ನಿಜವಾದ ಸುಖವಿದೆ.
ನವೆಂಬರ್,ಡಿಸೆಂಬರ್ ತಿಂಗಳ ನಂತರ ಹೆಚ್ಚಾಗಿ ಇದರ ಬೀಜ ಬಿತ್ತಿ ಇದನ್ನು ಬೆಳೆಯುತ್ತಾರೆ.ಇದರ ಬೀಜ ಗರ್ಬೀಜದ (ಒಂದು ರೀತಿಯ ಮಂಗಳೂರು ಸೌತೆಕಾಯಿ) ಬೀಜದಂತೆ ಸಣ್ಣದಾಗಿರುತ್ತದೆ. ಸಂಪೂರ್ಣ ಸಾವಯವ ಗೊಬ್ಬರದಿಂದಲೇ ಇದನ್ನು ಬೆಳೆಯಬೇಕಾಗುತ್ತದೆ ಮಾತ್ರವಲ್ಲ ಇದಕ್ಕೆ ಸೌತೆಕಾಯಿ ಬಳ್ಳಿಗಿಂತಲೂ ಅತೀ ಹೆಚ್ಚಿನ ಆರೈಕೆ ಬೇಕು. ಇಲ್ಲದಿದ್ದರೆ ಇದು ಚೆನ್ನಾಗಿ ಕಾಯಿಗಳನ್ನು ಕೊಡುವುದಿಲ್ಲ.ಪೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಲು ಅಪರೂಪಕ್ಕೆ ಎಂಬಂತೆ ಮಂಗಳೂರಿನ ಮಾರುಕಟ್ಟೆಯಲ್ಲಿ ಇದು ಕಾಣಲು ಸಿಗುವುದು.ಮಾರ್ಚ್ ತಿಂಗಳು ಮುಗಿಯುವುದರೊಳಗೆ ಇದು ಮುಗಿದೇ ಬಿಡುತ್ತದೆ.ನಂತರ ಕಾಣಿಸಿಕೊಳ್ಳುವುದು ಮುಂದಿನ ವರ್ಷವೇ.
ಮಂಗಳೂರಿನ ಹಿಬುಲ ಈ ಸೀಸನ್ ನಲ್ಲಿ ಮಾತ್ರ ಆಗುವುದು. ಉಳಿದ ದಿನಗಳಲ್ಲಿ ಅದು ಬೇರೆ ಜಿಲ್ಲೆಗಳಲ್ಲಿ ಬೆಳೆದ ಹಿಬುಲದ ಬೇರೆಯೇ ತಳಿ ಆಗಿರುತ್ತದೆಯೇ ಹೊರತು ಇಲ್ಲಿಯದ್ದಲ್ಲ.ಹಾಗಾಗಿ ಊರಿನ ಈ ಹಿಬುಲದ ಜ್ಯೂಸ್ ಅನ್ನೇ ಕುಡಿಯುಬೇಕೆಂಬ ಮಹದಾಸೆ ನಿಮಗೂ ಇದ್ದರೆ.. ನೀವು ಫೆಬ್ರವರಿ,ಮಾರ್ಚ್ ನಲ್ಲಿ ಇದನ್ನೊಮ್ಮೆ ಅತಿಯಾಗಿ ನೆನಪು ಮಾಡಿಕೊಳ್ಳಲೇಬೇಕು.
ಆದರೆ ವರ್ಷದಲ್ಲಿ ಒಮ್ಮೆ ಮಾತ್ರವಲ್ಲ ಎರಡು ಸಲ ಕೂಡ ಇದನ್ನು ಬೆಳೆಯುವವರಿದ್ದಾರೆ.ನಮ್ಮ ಊರಿನ ಪುತ್ತಿಗೆಯಲ್ಲಿಯೇ ಕೆಲವು ಕಡೆ ವರ್ಷಕ್ಕೆ ಎರಡು ಬೆಳೆ ಅಂದರೆ ಮಳೆಗಾಲದ ಬೆಳೆ ಮತ್ತು ಬೇಸಿಗೆಯ ಬೆಳೆಯನ್ನು ಕೂಡ ಮಾಡುತ್ತಾರೆ.ಹಾಗಿದ್ದರೂ ಈ ಬೇಸಿಗೆಯ ಬೆಳೆಯೇ ನಮ್ಮಲ್ಲಿ ಹೆಚ್ಚಾಗಿ ಮಾರುಕಟ್ಟೆಗೆ ಬರುವುದು.ಮಳೆಗಾಲದ ಕೊಯ್ಲು ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ನ ಪಿತೃಪಕ್ಷದ ಟೈಂ ನಲ್ಲಿ ಬಂದರೆ ,ಬೇಸಿಗೆ ಕಾಲದ್ದು ಫೆಬ್ರವರಿ, ಮಾರ್ಚ್ ಕೆಲವೊಮ್ಮೆ ಏಪ್ರಿಲ್ ನಲ್ಲಿ ಕೂಡ ಬರುವುದಿದೆ.
ಮಳೆಗಾಲದಲ್ಲಿ ಮೆಣಸು ಇಲ್ಲವೇ ಶುಂಠಿ ಸಾಲಿನ ನಡುವಲ್ಲಿ ಇದನ್ನು ಬಿತ್ತಿದರೆ ಬಹಳ ಚೆನ್ನಾಗಿ ಬೆಳೆ ಬರುತ್ತದೆ. ಬೇಸಿಗೆಕಾಲದ ಬೆಳೆಗೆ ಬೀಜವನ್ನು ಮಕರ ಸಂಕ್ರಾಂತಿ ಕಳೆದ ಕೂಡಲೇ ಬಿತ್ತುತ್ತಾರೆ.ಇದರ ಕೃಷಿ ಹೆಚ್ಚು ಕಡಿಮೆ ಸೌತೆಯಂತೆಯೇ ಇರುತ್ತದೆ. ಭೂಮಿಯಲ್ಲಿ ದರ(ಸಾಲು) ಮಾಡಿ ಇದರ ಬೀಜ ಬಿತ್ತಬಹುದು. ಆದರೆ ಸೌತೆಯಿಂದ ಬಹು ದೂರವೇ ಇದರ ಬೆಳೆಯನ್ನು ಬೆಳೆಯಬೇಕಾಗುತ್ತದೆ.ಇಲ್ಲದಿದ್ದರೆ ಪರಾಗಸ್ಪರ್ಶದಿಂದಾಗಿ ಸೌತೆಕಾಯಿಗಳು ಕೂಡ ಹಿಬುಲದಂತೆಯೇ ಆಗಿಬಿಡುವವು.
ಇದು ನಮ್ಮ ತುಳುನಾಡಿನ ಹಣ್ಣೇ ಆದರೂ ಈ ಅತೀ ವಿರಳ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ದುಡ್ಡು ಮಾಡುವ ಉಮೇದು ನಮ್ಮವರಲ್ಲಿ ಕೂಡ ಕಡಿಮೆ ಇದೆ. ಸದ್ಯಕ್ಕೆ ನಮ್ಮಲ್ಲಿ ಮೂಡುಬಿದಿರೆಯಲ್ಲಿ ಪುತ್ತಿಗೆ ಬಳಿ ಇದನ್ನು ಬೆಳೆಯುತ್ತಾರೆ. ಹಾಗಾಗಿ ಮೂಡುಬಿದಿರೆಯ ಕೆಲವೊಂದು ಪ್ರೂಟ್ಸ್ ಅಂಗಡಿಗಳಲ್ಲಿ ಇದು ಈಗಲೂ ಸಿಗುತ್ತದೆ.ಅದೇ ರೀತಿ ಜಿಲ್ಲೆಯಲ್ಲಿ ಬೇರೆ ಬೇರೆ ಭಾಗಗಳಲ್ಲಿ ಕೂಡ ಅಲ್ಲಲ್ಲಿ ಬೆಳೆಯುತ್ತಾರೆ. ಕೆಲವೊಮ್ಮೆ ಹೊರಗಿನ ಜಿಲ್ಲೆಯಿಂದ ಬರುವುದು ಕೂಡ ಇದೆ. ಆದರೆ ಅಂಗಡಿಯಲ್ಲಿ ಊರಿನದ್ದೇ ಹಿಬುಲ ಕೊಡಿ ಎಂದು ಕೇಳಿದರೆ ಇದನ್ನೇ ಕೊಡುತ್ತಾರೆ.ಸೀಸನ್ ನಲ್ಲಿ ಕೆಜಿಗೆ ನೂರು ರೂಪಾಯಿಗಿಂತಲೂ ಅಧಿಕ ಬೆಲೆಗೆ ಮಾರಾಟ ಆಗುವ ಇದು, ಈಗ ಕೊನೆಯ ಹಂತದಲ್ಲಿ ಬೆಲೆ ಕಡಿಮೆ ಆಗಿದ್ದು ಕೆಜಿ ಗೆ 80 ರೂಪಾಯಿ ಆಗಿದೆ.
ಮನೆಯಲ್ಲಿ ಹಿರಿಯರು ಇದ್ದರೆ ಅವರಿಗೆ ಈ ಹಿಬುಲದ ಮೇಲೆ ಅತಿಯಾದ ಪ್ರೀತಿ ಇದ್ದೇ ಇರುತ್ತದೆ,ಹಾಗಾಗಿ ಆ ಮನೆಯ ಮಕ್ಕಳಿಗೂ ಇದರ ಬಗ್ಗೆ ಗೊತ್ತಿದ್ದು ಹಿಬುಲದ ಮೇಲೊಂದು ಸೊಗಸಾದ ಬಾಂಧವ್ಯ ಚಿಕ್ಕಂದಿನಿಂದಲೂ ಮೂಡಿ ಬಿಡುತ್ತದೆ.ನಮ್ಮ ಮನೆಯಲ್ಲಿಯೇ ಇದನ್ನು ಮಾಡದಿದ್ದರೆ ನಮ್ಮ ಜನರೇಶನ್ ಹಾಗೂ ಮುಂದಿನ ಜನರೇಶನ್ ಗೆ ಇದರ ಬಗ್ಗೆ ಗೊತ್ತಾಗುವುದಾದರೂ ಹೇಗೆ ಹೇಳಿ. ನಮಗೆ ಡ್ರಾಗನ್ ಪ್ರುಟ್, ಕಿವಿ,ರುಂಬುಟಾನ್ ಗಳ ಬಗ್ಗೆ ಗೊತ್ತು,ಆದರೆ ಇಲ್ಲಿಯದ್ದೇ ಆದ ಹಿಬುಲದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ.
ನನ್ನ ದೊಡ್ಡಮ್ಮ ಒಬ್ಬರು ಫಲಿಮಾರಿನಲ್ಲಿ(ಉಡುಪಿ)ಇದ್ದಾರೆ. ಅವರಿಗೆ ಈ ಹಿಬುಲದ ಬೆಳೆಯ ಮೇಲೆ ಭಯಂಕರ ಪ್ರೀತಿ. ಪ್ರತೀ ವರ್ಷವೂ ಅವರು ಹಿಬುಲದ ಒಂದೆರಡು ಗಿಡ ಆದರೂ ಮಾಡಿ,ಹಿಬುಲವನ್ನು ಹಣ್ಣು ಮಾಡಿ.. ಅದಕ್ಕೆ ಕಾಯಿಹಾಲು, ಬೆಲ್ಲ ಹಾಕಿದ ಸೊಗಸಾದ ಜ್ಯೂಸ್ ಮಾಡಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಕುಡಿಯಲು ಕೊಟ್ಟು ಖುಷಿ ಪಡುತ್ತಾರೆ.
ನಂತರ ಹಣ್ಣಾದ ಹಿಬುಲದಿಂದ ಬೀಜವನ್ನು ಶ್ರದ್ಧೆಯಿಂದ ಬೇರ್ಪಡಿಸಿ ಮುಂದಿನ ವರ್ಷದಲ್ಲಿ ಬಿತ್ತುವುದಕ್ಕಾಗಿ ಬಹಳ ಆಸ್ಥೆಯಿಂದ ಬೆಳ್ಳಿ ಬಂಗಾರದಂತೆ ಜೋಪಾನವಾಗಿ ಡಬ್ಬದಲ್ಲಿ ಎತ್ತಿಡುತ್ತಾರೆ.. ಈ ರೀತಿಯಾಗಿ ಅಲ್ಲಿ ಒಂದು ಹಿಬುಲದ ಬೆಳೆ ವರ್ಷಂಪ್ರತಿ ನಳನಳಿಸಿದೆ.ಅಲ್ಲಿಗೆ ಹೋದಾಗಲೆಲ್ಲ ನಾನೂ ಕೂಡ ದೊಡ್ಡಮ್ಮ ಮಾಡಿ ಕೊಡುವ ಹಿಬುಲ ಜ್ಯೂಸ್ ಸವಿದವನೇ. ಅಲ್ಲಿಂದ ಮನೆಗೆ ಬಂದಾಗ ಮೂಡುಬಿದಿರೆಯ ಮಾರ್ಕೆಟ್ ನಲ್ಲಿ ಹಿಬುಲವೊಂದು ಮತ್ತೆ ನನ್ನ ಕಣ್ಣಿಗೆ ಬಿದ್ದರೆ ಪುನಃ ನನ್ನಲ್ಲಿ ಮತ್ತಷ್ಟು ಆಸೆಗಳು ಗರಿಗೆದರಿ.. ಹಣ್ಣಾದ ಹಿಬುಲವನ್ನು ಖರೀದಿಸಿ ಅದನ್ನು ಮಗುವಂತೆ ಜೋಪಾನವಾಗಿ ಎತ್ತಿಕೊಂಡು ಮನೆಗೆ ಹೋಗುವುದನ್ನು ನಾನು ಬಹಳ ನಾಜೂಕಾಗಿ ಇಂದಿಗೂ ಮಾಡುತ್ತಾನೆ.
ನನ್ನ ಆಸೆ ಇಷ್ಟೇ. ಯಾವುದೋ ವಿದೇಶಿ ಹಣ್ಣುಗಳು ಬಂದು ನಮ್ಮ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಬಿಕರಿ ಆಗುವಾಗ ನಮ್ಮ ನೆಲದ ಪ್ಲೇವರ್ ಹೊತ್ತ ಅತೀ ವಿರಳ ಹಿಬುಲದಂತ ಹಣ್ಣುಗಳು ಕೂಡ ಪ್ರೂಟ್ಸ್ ಅಂಗಡಿಯಲ್ಲಿ ಸ್ಥಾನ ಪಡೆದು ಕೊಂಡು ರಾರಾಜಿಸಲಿ ಎಂದು. ಆ ಮೂಲಕ ಹಿಬುಲ ಬೆಳೆಯುವ ನಮ್ಮೂರಿನ ರೈತರ ಜೇಬು ಆದರೂ ತಕ್ಕ ಮಟ್ಟಿಗೆ ಬಿಸಿ ಆಗಲಿ ಎಂಬುದೇ ಸದಾಶಯ..
ಎಲ್ಲಕ್ಕಿಂತ ಹೆಚ್ಚಾಗಿ ಇದರ ತಳಿಯೊಂದು ಮುಂದೆಯೂ ಉಳಿದುಕೊಂಡು,ಯಥೇಚ್ಛವಾಗಿ ಬೆಳೆದು ನಮ್ಮ ಜಿಲ್ಲೆ ಮಾತ್ರವಲ್ಲ ನಮ್ಮ ನಾಡಿನ ಮೂಲೆ ಮೂಲೆಗೂ ಹಿಬುಲ ತಲುಪಿ,ಈಗೀನ ಮಾತ್ರವಲ್ಲ ಮುಂದಿನ ಪೀಳಿಗೆಯ ಎಲ್ಲಾ ಮಕ್ಕಳು ಕೂಡ ಬೆಲ್ಲ ಮತ್ತು ಕಾಯಿಹಾಲು ಹಾಕಿಕೊಂಡು ಇದರದ್ದೊಂದು ಮಿಲ್ಕು ಶೇಕು ಮಾಡಿಕೊಂಡು, ಅದಕ್ಕೆ ಮೇಲಿನಿಂದ ಹಾಗೇ ಅವಲಕ್ಕಿಯನ್ನು ಉದುರಿಸುತ್ತಾ... ಸೊಗಸಾಗಿ,ರುಚಿ ರುಚಿಯಾಗಿ ಬಾಯಿ ಚಪ್ಪರಿಸುವ ಒಂದು ಸ್ವಾದದ ಸೌಭಾಗ್ಯ ಅವರಿಗೂ ಸಿಗಲಿ ಎಂಬುದೇ ನನ್ನಾಸೆ. ಖಂಡಿತವಾಗಿಯೂ ಹೀಗೆ ಆದಾಗ ಹಿಬುಲ ಅಳಿಯದೇ ಎಂದೆಂದಿಗೂ ಅಮರವಾಗುತ್ತದೆ ಮತ್ತು ಹಾಗೇ ಆಗಲಿ ಕೂಡ...
.....................................................................................
#ಏನೋ_ಒಂದು..
ab pacchu
moodubidire
Comments
Post a Comment