ರಣ ಬೇಟೆಗಾರರು..


 

ಈ ಚಿತ್ರ ನೋಡ್ಲಿಕ್ಕೆ ಎಷ್ಟೊಂದು ಚಂದ ಅಲ....

ಇದೆಲ್ಲವು ಒಂದೇ ಸೀರಿಸ್ ನಲ್ಲಿ ದಕ್ಕಿದ ಬೇಟೆಯಾಗಿರಬಹುದು.ಆದರೆ ಈ ತಂಡಕ್ಕೆ ಇಂತಹದ್ದೊಂದು ಯಶಸ್ಸು ಸಿಗಲು,ತುಂಬಿ ತುಳುಕುವ ಆತ್ಮವಿಶ್ವಾಸ ನಮ್ಮ ಯುವ ಆಟಗಾರರ ನರನಾಡಿಯಲ್ಲಿ ಹರಿದಾಡಲು.. ಅದರ ಹಿಂದೆ ಹಲವು ದಶಕಗಳ ಪರಿಶ್ರಮ ಹಾಗೂ ಹಲವಾರು ಅತ್ಯದ್ಭುತ ಆಟಗಾರರ ಹಾಗೂ ನಾಯಕರುಗಳ ಕೊಡುಗೆಯೂ ಅಷ್ಟೇ ಇದೆ. 


ಹಿಂದೆ ಹೋದಲ್ಲಿ ಬಂದಲ್ಲಿ ನಿರಂತರವಾಗಿ ಕಪ್ ಗಳನ್ನು ಕೊಳ್ಳೆ ಹೊಡೆಯುತ್ತಿದ್ದ ಆಸ್ಟ್ರೇಲಿಯಾ ಎಂಬ ದೈತ್ಯ ತಂಡವನ್ನು ಬೆರಗುಗಣ್ಣಿನಿಂದ ಬೆದರಿಕೊಂಡೇ ನೋಡುವಾಗ,ನಮ್ಮ ತಂಡ ಕೂಡ ಹೀಗೆ ಜಿದ್ದಿಗೆ ಬಿದ್ದವರಂತೆ ಸರಣಿ ಗೆಲ್ಲುವುದು ಯಾವಾಗ,ಕಪ್ ಗಳ ಬೇಟೆಯಾಡುವುದು ಯಾವಾಗ ಎಂದು.. ಬಾಲ್ಯದಲ್ಲಿ ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟ್ ದೇವರು ಔಟ್ ಆದಾಗ ಟಿವಿ ಮುಂದೆ ಕನವರಿಸುತ್ತಿದ್ದ ಹುಡುಗ ನಾನು.


ನನ್ನಂತೆಯೇ ಹಲವರು ಇದ್ದರು.ನಮ್ಮೆಲ್ಲರ ಹಸಿವು ಹಾಗೂ ಆಧ್ಯಾತ್ಮ ಆವಾಗ ಬರೀ ಕ್ರಿಕೆಟ್ ಒಂದೇ ಆಗಿತ್ತು.ಮನೆಯಲ್ಲಿ ಬೈಸಿಕೊಂಡು ಗ್ರೌಂಡಿನಲ್ಲಿ ಬಿಸಿಲು ಮಳೆಯನ್ನು ಲೆಕ್ಕಿಸದೇ ಬ್ಯಾಟ್ ಬೀಸುತ್ತಾ ಕ್ರಿಕೆಟ್ ಆಡುತ್ತಿದ್ದೆವು,ಟಿವಿ ಮುಂದೆ ಕೂತಾಗ  ಭಾರತ ಗೆಲ್ಲಲ್ಲಿ ಎಂದು ಮುಗ್ಧವಾಗಿ ಪ್ರಾರ್ಥಿಸುತ್ತಿದ್ದೆವು ಮತ್ತು  ಆಸೆ ಕಣ್ಣುಗಳಿಂದಲೇ ಪಂದ್ಯ ನೋಡುತ್ತಿದ್ದೆವು. ಆದರೆ ಆಗಿದ್ದು ನಿರಾಸೆಯೇ ಹೆಚ್ಚು.ಆಸ್ಟ್ರೇಲಿಯಾದ ಪ್ರಾಬಲ್ಯ ತೊಂಬತ್ತರ ದಶಕದಲ್ಲಿ ಎಗ್ಗಿಲ್ಲದೇ ಮುಂದುವರಿದಿತ್ತು. ಅವರು ನಮ್ಮಲ್ಲಿಗೆ ಬಂದು ನಮ್ಮನ್ನೇ ಸೋಲಿಸಿ ಹೋಗುತ್ತಿದ್ದರು.. ಒಂದರ ನಂತರ ಒಂದು ವಿಶ್ವಕಪ್ ಗಳೆಲ್ಲವನ್ನು ಅವರು ಶಾಲೆಯಲ್ಲಿ ಮಕ್ಕಳು ಲೋಟವನ್ನು ಗೆದ್ದಂತೆ ಗೆದ್ದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. 


ನನ್ನಂತವರ ಆಸೆಗಳನ್ನು ತಕ್ಕ ಮಟ್ಟಿಗೆ ಶಾಂತಗೊಳಿಸಿದ್ದು ಮೊದಲ ಬಾರಿಗೆ ಬೆಂಗಾಲದ ರಾಜನೇ.ಆತ ಒಂದಷ್ಟು ಕಪ್ ಗಳನ್ನು ನಮ್ಮ ತಂಡಕ್ಕಾಗಿ ಗೆದ್ದು ಕೊಟ್ಟ.ನನಗೆ ಗಂಗೂಲಿ ಹಲವು ಕಾರಣಗಳಿಗಾಗಿ ಇಷ್ಟ. ಗದ್ದೆ ಇಲ್ಲವೇ ಗುಡ್ಡೆ ಗ್ರೌಂಡಿನಲ್ಲಿ ಆಟವಾಡುವ ನನ್ನಂತಹ ಹುಡುಗರಿಗೆ ಆಸ್ಟ್ರೇಲಿಯಾದ Sledging ಎಂದಿಗೂ ಹಿಡಿಸುತ್ತಿರಲಿಲ್ಲ.ಕಪ್ ಗೆಲ್ಲುವುದಕ್ಕಿಂತಲೂ ಅಧಿಕವಾಗಿ ಮೊದಲು ಅವರದ್ದೊಂದು ತಲೆಗೆ ಏರಿದ್ದ  ಪಿತ್ತವನ್ನು ಕೆಳಗಿಳಿಸುವ ನಾಯಕ ಹಾಗು ಅಂತಹ  ಆಟಗಾರನನ್ನೇ ಹೆಚ್ಚಿನ ನಾವೆಲ್ಲರೂ ಬಯಸಿದ್ದೆವು.ದಾದ ಅದನ್ನು ಬಹಳ ಸೊಗಸಾಗಿ ಮಾಡಿ ತೋರಿಸಿದ್ದ.ಜಗಳಕ್ಕೆ ಬರುವವರ ವಿರುದ್ಧ ತೋಳೇರಿಸಿ ಜಗಳಕ್ಕೆ ನಿಲ್ಲುತ್ತಿದ್ದ ಗಂಗೂಲಿಗೆಯೇ ನಾನು ಟಿವಿ ಮುಂದೆ ಕುಳಿತುಕೊಂಡು ಮೊದಲ ಬಾರಿಗೆ ಕ್ರಿಕೆಟ್ ವಿಶಲ್ ಹೊಡೆದದ್ದು. ಕೆಲವು ಗೆಲ್ಲಲಾಗದ ಕಪ್ ಗಳನ್ನು ಕೂಡ ಗೆದ್ದು ಹೃದಯ ಕೂಡ ಗೆದ್ದು ಬಿಟ್ಟ ಆ ಮಹಾರಾಜ.


ಮುಂದೆ ಬಂದದ್ದು ಬಹಳ Cool, Calm & Composed ನಾಯಕ ಮಹೇಂದ್ರ ಸಿಂಗ್ ದೋನಿ.ಗಂಗೂಲಿಗೆ ತದ್ವಿರುದ್ಧವಾದರೂ  ದೋನಿ ಮಾಡಿದ್ದೆಲ್ಲವೂ ಇತಿಹಾಸ.ICC ದೊಡ್ಡ ದೊಡ್ಡ ಕಪ್ ಗಳನ್ನೇ ಗೆದ್ದು ತೋರಿಸಿದ್ದು  ಮಾತ್ರವಲ್ಲ ತಂಡಕ್ಕೊಂದು ಅಚ್ಚುಕಟ್ಟಾದ ಶಿಸ್ತು ಕಲಿಸಿದ್ದು ಕೂಡ  ಅವನೇ.ಒಂದರ ಮೇಲೊಂದು ಕಪ್ ಗಳನ್ನು ನಿರಂತರವಾಗಿ ಗೆಲ್ಲುತ್ತಾ ಅದೊಂದು ಹಸಿವನ್ನು ಭಾರತೀಯ ಕ್ರಿಕೆಟ್ ನಲ್ಲಿ ಜೀವಂತವಾಗಿರಿಸಿದ್ದ ನಾಯಕನಿದ್ದರೆ ಅದು ದೋನಿ ಎಂಬ ನಾವಿಕನೇ.


ದೋನಿಯ ನಂತರ ಬಂದವನು ಹಾಗು ಸದ್ಯಕ್ಕೆ ವಿಶ್ವದ ಎಲ್ಲಾ ತಂಡಕ್ಕೆ ಸಿಂಹಸ್ವಪ್ನವಾಗಿರುವ ನಾಯಕ ಹಾಗೂ ಆಟಗಾರ ಎಂದರೆ ಅದು Run Machine ಕೊಹ್ಲಿ.ಅವನು ಎಂತಹ ಆಟಗಾರ ಎಂದರೆ ಬರೀ ಅವನ ಅತ್ಯದ್ಭುತ ಆಟ ಮಾತ್ರವಲ್ಲ ಅವನ On Field ವರ್ತನೆಯೇ ಎದುರಾಳಿ ಆಟಗಾರರಿಗೆ, ಅಂಪೈರ್ ಗಳಿಗೆ, ರೆಪ್ರಿಗಳಿಗೆ,ವಿದೇಶಿ ಮಾಧ್ಯಮದವರಿಗೆ,ಕಾಮೆಂಟೇಟರ್ ಗಳಿಗೆ ಮತ್ತು ಎದುರಾಳಿಯ ಹಿರಿಯ ಆಟಗಾರರಿಗೆ ಕೂಡ ಸಹಿಸಲು ಅಸಾಧ್ಯ. ಎಲ್ಲರ ಬೆವರಿಳಿಸಿ ಬಿಡುತ್ತಾನೆ ನಮ್ಮ ಕೊಹ್ಲಿ.ಅವನು ಕಣ್ಣ ಮುಂದೆ ಇದ್ದಷ್ಟು ಹೊತ್ತು ಅವನನ್ನು ವಿರೋಧಿಸುವವರ  ಎದೆಯಲ್ಲಿ ಸದಾ ಅವಲಕ್ಕಿ ಕುಟ್ಟಿದ ಅನುಭವವೇ.


ಗಂಗೂಲಿಯ Aggressiveness ಹಾಗೂ ದೋನಿಯ ಕಪ್ ಗೆಲ್ಲುವ ದಾಹ ಎರಡನ್ನೂ ಮೈಗೂಡಿಸಿಕೊಂಡ ಈ ಕೊಹ್ಲಿ BCCI ಯ ಕಪ್ ಇಡುವ ಕಪಾಟಿನ ಗಾತ್ರವನ್ನು ಕಾಲಕಾಲಕ್ಕೆ ಬಹಳ ಶ್ರದ್ಧೆಯಿಂದ ಹಿಗ್ಗಿಸುತ್ತಲೇ ಬಂದಿದ್ದಾನೆ.ಹೋದ ಕಡೆಯಲೆಲ್ಲಾ ಕಪ್ ನ ಬೇಟೆ ಅನವರತವಾಗಿ ಮುಂದುವರಿದಿದೆ.ಈಗ ಮತ್ತೊಮ್ಮೆ ಬಲಿಷ್ಟ ಇಂಗ್ಲೆಂಡ್ ನ ಎದುರಿನ Test,T20I ಮತ್ತು ODI ಮೂರನ್ನೂ ಕೂಡ ಬೇಟೆಯಾಡಿ ಆಗಿದೆ. ಹೌದು ನಾವೀಗ ಬರೀ ಬೇಟೆಗಾರರಲ್ಲ,ರಣ ಬೇಟೆಗಾರರು.ವಿಜಯದ ದಾಹ ಇನ್ನಿಲ್ಲದಂತೆ ಹೆಚ್ಚಾಗಿದೆ.. BCCI ಕಪ್ ಇಡುವುದಕ್ಕಾಗಿಯೇ  ಕಪಾಟುಗಳ ಮೇಲೆ ಕಪಾಟು ಮಾಡಿಸುತ್ತಲೇ ಇದೆ. 


ತಂಡದಲ್ಲಿ ನನ್ನ ನೆಚ್ಚಿನ ಆಟಗಾರ ಯಾವತ್ತಿಗೂ Hitman RoHiT sharma ನೇ ಆದರೂ ಕೊಹ್ಲಿ ಎಂಬ ಆಟಗಾರ ಹಾಗೂ ನಾಯಕನನ್ನು ಹೊಗಳುವ ಅವಕಾಶ ಸಿಕ್ಕಿದಾಗಲೆಲ್ಲ ನಾನು ಅದನ್ನು ಮಿಸ್ ಮಾಡಿಕೊಳ್ಳುವುದಕ್ಕೆ  ಬಯಸುವುದೇ ಇಲ್ಲ.ಕಾರಣ ಬಾಲ್ಯದಲ್ಲಿ ನನ್ನಂತವರು  ಕನವರಿಸಿದ್ದ ವಿರಾಟ ಕನಸನ್ನು ನಿಜ ಮಾಡಿ ತೋರಿಸಿದ್ದು ಈ ವಿರಾಟ್ ಕೊಹ್ಲಿಯೇ..


ಸದ್ಯಕ್ಕೆ ನಮ್ಮ ತಂಡದ ಬೆಂಚ್ ಸ್ಟ್ರೆಂತ್ ಎಷ್ಟಿದೆ ಎಂದರೆ.. ಒಬ್ಬ ಆಟಗಾರ ತಂಡದಿಂದ  ಗಾಯಾಳುವಾಗಿ ಹೊರಗೆ ಹೋದರೂ  ಅವನ ಬಗ್ಗೆ ಕನವರಿಸುವವರೇ ಇಲ್ಲ. ಕಾರಣ ಅಷ್ಟೊಂದು ಪ್ರತಿಭಾಶಾಲಿ ಆಟಗಾರರು ನಮ್ಮ ತಂಡದಲ್ಲಿ ತುಂಬಿ ತುಳುಕುತ್ತಿದ್ದಾರೆ. ಹಿಂದೆ ಸಚಿನ್ ತೆಂಡುಲ್ಕರ್ ಗಾಯಗೊಂಡು ತಂಡದಿಂದ ಹೊರಗೆ ಉಳಿದಾಗ.. ಆದಷ್ಟು ಬೇಗ ಸಚಿನ್ ಗುಣಮುಖವಾಗಿ ತಂಡಕ್ಕೆ ಮರಳಲಿ ಎಂದು ಪ್ರಾರ್ಥಿಸುವವರು, ಹೋಮ ಹವನ ಮಾಡುವವರು ಕೂಡ ನಮ್ಮ ದೇಶದಲ್ಲಿ ಇದ್ದರು. 


ಆದರೆ ಈಗ ಒಂದೇ  ಜಾಗಕ್ಕೆ ಕನಿಷ್ಟ ಪಕ್ಷ ಮೂವರು ಆಟಗಾರರಂತೆ ಇದ್ದಾರೆ. ತಂಡದಲ್ಲಿ ನಾಯಕರುಗಳು ಕೂಡ ಹಲವಾರು ಇದ್ದಾರೆ. ಯಾರು ಹೊರಗುಳಿದರೂ ತಲೆ ಕೆಡಿಸಿಕೊಳ್ಳಬೇಕಾಗಿಯೇ ಇಲ್ಲ. ಸದ್ಯದ ವಿಶ್ವ ಕ್ರಿಕೆಟ್ ನ ಲೆಜೆಂಡ್ ಗಳೆನಿಸುವ ರೋಹಿತ್ ಹಾಗೂ ಕೊಹ್ಲಿಯೇ  ಹೊರಗೆ ಉಳಿದರೂ ನಾವು ಯಾವುದೇ ತಂಡವನ್ನು ಸುಲಭವಾಗಿ ಸೋಲಿಸಬಲ್ಲೆವು. ಅದಕ್ಕೆ ಉತ್ತಮ ಉದಾಹರಣೆಯೇ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯ ವಿಜಯ.


ವಿಶ್ವ ಕ್ರಿಕೆಟ್ ನಲ್ಲಿ ಭಾರತದ Dominance ಎಷ್ಟರ ಮಟ್ಟಿಗೆ ಇದೆ ಎಂದರೆ ಸದ್ಯಕ್ಕೆ ಎರಡು ಪ್ರಬಲ ತಂಡಕ್ಕೆ ಆಗುವಷ್ಟು ಆಟಗಾರರು ಭಾರತದ ಒಂದೇ ತಂಡದಲ್ಲಿ ಇದ್ದಾರೆ.ಮುಂದೆ ಭಾರತ ತಂಡ ಇಂಗ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡುವ ಸಂದರ್ಭದಲ್ಲಿಯೇ  ಏಷ್ಯಾ ಕಪ್ ಕೂಡ ನಡೆಯುತ್ತದೆ. ಆದರೆ ಏಷ್ಯಾ ಕಪ್ ನಿಂದ ಕೂಡ ಹಿಂದೆ ಸರಿಯದೇ ಭಾರತದ ಮತ್ತೊಂದು ತಂಡವನ್ನು ಕೂಡ ಅಲ್ಲಿಗೆ ಕಳುಹಿಸುವ ಚಿಂತನೆ BCCI ಯ ಚಿಂತನ ವಲಯದಲ್ಲಿ ನಡೆಯುತ್ತಿದೆಯಂತೆ.ಆಹಾ...ಒಂದು ವೇಳೆ ಹಾಗೆ ಆದರೆ ಒಂದೇ ದೇಶದ ಎರಡು ತಂಡಗಳು ಬೇರೆ ಬೇರೆ ಪ್ರಕಾರದ ಕ್ರಿಕೆಟ್ ಅನ್ನು ಬೇರೆ ಬೇರೆ ಕಡೆಗಳಲ್ಲಿ ಆಡುವುದನ್ನು ನೋಡುವ ಸೌಭಾಗ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಲ್ಲದೇ ಬೇರೆ ಯಾರಿಗೆಲ್ಲ ಇರಲು ಸಾಧ್ಯ ಹೇಳಿ.


ಸದ್ಯದ ಈ ತಂಡಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲಿಯೇ ಬಗ್ಗು ಬಡಿದಾಗ ಅಲ್ಲಿನ ದಿಗ್ಗಜ ಬೌಲರ್ ಗ್ಲೆನ್ ಮೆಗ್ರಾಥ್ ನಮ್ಮ ತಂಡದ ಆಟಗಾರರ ಪ್ರತಿಭೆಯನ್ನು ಹೊಗಳುವ ಜೊತೆ ಜೊತೆಗೆ ಹೇಳಿದ ಈ ಮಾತೊಂದು ಕೇಳಲು ಬಹಳ ಹಿತವಾಗಿದೆ...


ಮೆಗ್ರಾಥ್ ಬೆರಗಿನಿಂದ  ಹೇಳುತ್ತಾನೆ..


" ಭಾರತದ ಈ ಯುವ ಆಟಗಾರರಿಗೆ ಭಯ ಅಂದರೆ ಏನೆಂದೇ ಗೊತ್ತಿಲ್ಲ..! " 


ನಮ್ಮ ತಂಡ ಇನ್ನಷ್ಟು ಗೆಲ್ಲಲಿ...ಗೆದ್ದಾಗಲೆಲ್ಲ,ದೇಶದ ತ್ರಿವರ್ಣವೊಂದು ಗ್ರೌಂಡಿನ ಪ್ರತೀ ಮೂಲೆಯಲ್ಲೂ ಕಣ್ಣಿಗೆ ತಂಪೆನಿಸುವಂತೆ ಸೊಗಸಾಗಿ ಹಾರಡಲಿ 🇮🇳


.....................................................................................


#Cricket_Review


Ab Pacchu 

Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..