ಗೋಳಿಬಜೆ ಕಟ್ಟಿಗೂ ಸೈ ಮಲ್ಲಿಗೆಯ ಚೆಂಡಿಗೂ ಜೈ..

 


ಎಲೆಗಳಿಗೂ ಒಬ್ಬ ರಾಜ ಎಂದು ಇದ್ದರೆ ಅದು ಬಹುಶಃ ಬಾಳೆ ಎಲೆಯೇ ಇರಬೇಕು.


ಪಟ್ಟಿ ಮಾಡುತ್ತಾ ಹೋದರೆ ಅದರ ಕಾರ್ಯವ್ಯಾಪ್ತಿಯೇ ಬಹಳ ವಿಸ್ತಾರವಾದದ್ದು.ಎಲೆಗಳ ವಿಷಯ ಬಂದಾಗ ಪ್ರತಿಯೊಂದಕ್ಕೂ ಅದುವೇ ಬೇಕು.ಹುಟ್ಟಿನಿಂದ ಸಾವಿನವರೆಗೂ ಅದರದ್ದೊಂದು ಕೊಡುಗೆ ನಮ್ಮ ಜೀವನದಲ್ಲಿ ಬಹಳಷ್ಟಿದೆ. 


ಬಾಳೆ ಎಲೆಗೆ ಹೋಲಿಸಿದರೆ ಈ ಗಿಡದ ಎಲೆಯೆನೋ ತುಂಬಾ  ಸಣ್ಣದೇ..


ಆದರೆ ಬಳಕೆ ಮತ್ತು ಉಪಯೋಗದಲ್ಲಿ ಬಾಳೆ ಎಲೆಗೂ ಕೂಡ ಈ ಗಿಡದ ಎಲೆಗಳು ತಕ್ಕ ಮಟ್ಟಿಗೆ ಆರೋಗ್ಯಕರ ಪೈಪೋಟಿಯನ್ನು ನಮ್ಮಲ್ಲಿ ನಿರಂತರವಾಗಿ ಕಾಲಕಾಲಕ್ಕೆ ನೀಡುತ್ತಲೇ ಬಂದಿದೆ. 


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(ಮಂಗಳೂರು+ಉಡುಪಿ) ಬಾಳೆ ಎಲೆಗೆ ಮತ್ತೊಂದು ಪರ್ಯಾಯ ಎಲೆ ಅಂತ ಇದ್ದರೆ ಅದು ಎಂದಿಗೂ ಇದುವೇ ಆಗಿದೆ.ಇದರ ಹೆಸರು ಉಪ್ಪಳಿಗೆ. ಕೆಲವು ಕಡೆ ತಂದೇವು ಎಂದು ಕೂಡ ಹೇಳುತ್ತಾರೆ.



ಇದರ ಹದ ಬಲಿತ ಎಲೆಗಳು ಪಚ್ಚೆ ಪಚ್ಚೆಯಾಗಿ ನೋಡಲು ಬಹಳ ಆಕರ್ಷಕ.ಎಲೆಗಳ ಆಕಾರ ಕೂಡ ನೋಡಲು ಚಂದ ಇದ್ದು,ಬಡಗು ತಿಟ್ಟಿನ ಯಕ್ಷಗಾನದ ಪಗಡೆಯಂತೆ(ಕಿರೀಟ) ತೋರುತ್ತದೆ.ಇದು  ನಮ್ಮಲ್ಲಿ  ಬಾಳೆ ಎಲೆಯಂತೆಯೇ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಅನಾದಿ ಕಾಲದಿಂದಲೂ ಬಳಕೆಯಾಗುತ್ತಲೇ ಇದೆ. 


ಇಂದಿಗೂ ನಮ್ಮ ಹಳ್ಳಿಯಲ್ಲಿ ಬಾಳೆ ಎಲೆಯನ್ನು ಬಿಟ್ಟರೆ ತಿಂಡಿಯನ್ನು ಸುತ್ತಿಕೊಡುವುದು ಈ ಉಪ್ಪಳಿಗೆಯ ಎಲೆಯಿಂದಲೇ.ಹೂವಿನ ಕಟ್ಟೆಯಲ್ಲಿ ಮಲ್ಲಿಗೆ ಚೆಂಡು(ದಂಡೆ) ಅನ್ನು ಕೂಡ ಇದರಲ್ಲಿ ಒಪ್ಪವಾಗಿ ಸುತ್ತಿ ಕೊಟ್ಟರೆ ನೋಡಲು ಅದೆನೋ ಚಂದ,ಮನಸ್ಸಿಗೆ ಮುದ. 


ಅಪ್ಪ ಸಂಜೀವಣ್ಣನ ಹೋಟೆಲ್ ನಿಂದ ತರುತ್ತಿದ್ದ ಗೋಳಿಬಜೆ(ಮಂಗಳೂರು ಬಜ್ಜಿ)ಕಟ್ಟಿನಲ್ಲಿ ಉಪ್ಪಳಿಗೆ ಎಲೆಯೊಂದು ಸದಾ ಗೋಳಿಬಜೆಗಳನ್ನು ತಬ್ಬಿಕೊಂಡೇ ಇರುತ್ತಿತ್ತು.ಕಟ್ಟನ್ನು ಬಿಡಿಸಿ ಎಲೆಯಲ್ಲಿ  ಹಿಡಿದುಕೊಂಡೆ ಗೋಳಿಬಜೆಯನ್ನು ಎಲೆಯ ತುದಿಯಲ್ಲಿಯೇ ಇರುತ್ತಿದ್ದ ಕಾಯಿ ಚಟ್ನಿಯೊಂದಿಗೆ ತಿನ್ನುತ್ತಿದ್ದೆವು.ಸಂಜೀವಣ್ಣ ಈಗ ಹೋಟೆಲ್ ನಡೆಸುವುದಿಲ್ಲ.ಆದರೂ ಊರಿನ ಬೇರೆ ಚಿಕ್ಕ ಪುಟ್ಟ ಹೋಟೆಲ್ ಗಳಲ್ಲಿ ತಿಂಡಿ ಕಟ್ಟಿ ಕೊಡಲು ಉಪ್ಪಳಿಗೆ ಎಲೆಯ ಬಳಕೆ ಇಂದಿಗೂ ನಿಂತಿಲ್ಲ. 


ಮೂಡುಬಿದಿರೆಗೆ ಹೋದರೆ ಹೂವಿನ ಅಂಗಡಿಯವರು ಮಲ್ಲಿಗೆ ಇಲ್ಲವೇ ಅಬ್ಬಲಿಗೆ ದಂಡೆ ಕಟ್ಟಿ ಕೊಡಲು ಒಂದಷ್ಟು ರಾಶಿ ಉಪ್ಪಳಿಗೆ ಎಲೆಯನ್ನು ತಮ್ಮ ಅಂಗಡಿಯಲ್ಲಿ ಸದಾ ಪೇರಿಸಿ ಇಟ್ಟಿರುತ್ತಾರೆ. ಇಂದಿಗೂ ಬಾಳೆ ಎಲೆಯ ಜೊತೆ ಜೊತೆಯಲ್ಲಿಯೇ ಉಪ್ಪಳಿಗೆ ಎಲೆ ಹೂವಿನ ಅಂಗಡಿಯಲ್ಲಿ ಒಂದೊಳ್ಳೆಯ ಸಹಬಾಳ್ವೆ ನಡೆಸಿದೆ.ಬಾಳೆಎಲೆ  ಪ್ರಥಮ ಸ್ಥಾನದಲ್ಲಿ ರಾಜ ಮರ್ಯಾದೆಯನ್ನು  ಪಡೆದರೆ, ಅದರ ನಂತರ ಸ್ಥಾನ ಈ ಉಪ್ಪಳಿಗೆಯದ್ದು. 


ಇತ್ತೀಚೆಗೆ ಸಣ್ಣ ಪುಟ್ಟ ಫಾಸ್ಟ್-ಫೂಡ್‌ ಅಂಗಡಿಯವರು ಕೂಡ ಎಗ್ ರೈಸ್ ಇಲ್ಲವೇ ಕಬಾಬು ಕಟ್ಟಿಕೊಡಲು ಇದೇ ಉಪ್ಪಳಿಗೆ ಎಲೆಯನ್ನು ನೆಚ್ಚಿಕೊಂಡಿದ್ದಾರೆ.ಅದನ್ನು ಕಂಡಿದ್ದೇನೆ ಕೂಡ. 



ಹೇಗೆ ಬಾಳೆ ಎಲೆ ಊಟದೆಲೆಯಾಗಿ ಪ್ರಾಮುಖ್ಯತೆ ಪಡೆದಿದೆಯೋ ಅದೇ ರೀತಿ ನಮ್ಮಲ್ಲಿ ಉಪ್ಪಳಿಗೆ ಎಲೆಯೂ ಕೂಡ ಭೋಜನದಂತಹ ಸ್ಥಾನವನ್ನು ಪಡೆಯದಿದ್ದರೂ ಅವಕಾಶ ಸಿಕ್ಕಿದಾಗಲೆಲ್ಲ ಸಣ್ಣಪುಟ್ಟ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಅದರಲ್ಲೂ ಗದ್ದೆ ಕೆಲಸ ಮಾಡುವವರಿಗೆ ಹತ್ತು ಗಂಟೆಯ ತಿಂಡಿಗೆ, ಮನೆಯ ಒಡತಿ ತರುವ ಸಜ್ಜಿಗೆ, ಬಜಿಲ್,ಅರೆಪುದಡ್ಡೆ(ಪುಂಡಿ,ಕಪ್ಪರೊಟ್ಟಿ),ಗಟ್ಟಿ.. ಮುಂತಾದ ತಿಂಡಿಗಳಿಗೆ,ಗದ್ದೆ ಬದಿಯ ಪಕ್ಕದಲ್ಲಿಯೇ ಹುಲುಸಾಗಿ ಬೆಳೆದಿರುವ ಉಪ್ಪಳಿಗೆಯ ಎಲೆಗಳನ್ನು ಕಿತ್ತು, ಸ್ವಲ್ಪ ನೀರು ಹಾಕಿ ತೊಳೆದು ಬಿಟ್ಟರೆ ಅದೇ ಅವರಿಗೆ ತಿಂಡಿ ತಿನ್ನುವ ಹಸಿರು ಪ್ಲೇಟು.


ಅದೇ ಗದ್ದೆಯ ಪುಣಿಯಲ್ಲಿ ಕುಳಿತುಕೊಂಡು ಬಿಸಿ ಚಹಾ ಹೀರುತ್ತಾ ಊರಿನ ಕಥೆಗಳನ್ನು ಞಕ್ಕ್ ಞೈ ಮಾಡುತ್ತಾ ಕೆಲಸಗಾರರು ಉಪ್ಪಳಿಗೆ ಎಲೆಯಲ್ಲಿಯೇ ಅಚ್ಚುಕಟ್ಟಾಗಿ ತಿಂಡಿ ತಿಂದು ಮುಗಿಸುತ್ತಾರೆ. ಈ ಉಪ್ಪಳಿಗೆಯ  ಎಲೆಯಿಂದಾಗಿ  ಮನೆಯೊಡತಿಗೂ ಪ್ಲೇಟ್ ತೊಳೆಯುವ ಕೆಲಸವಿಲ್ಲ ಅದೇ ರೀತಿ ಬಾಳೆ ತೊಟಕ್ಕೆ ಹೋಗಿ ಬಾಳೆ ಎಲೆ ಕೊಯ್ಯುವ ಕಿರಿಕಿರಿಯೂ  ಇಲ್ಲ. 


ಬಾಳೆ ಎಲೆಯ ರೀತಿಯಲ್ಲಿಯೇ ತುಳುನಾಡಿನ ವಿಶೇಷವಾದ ಖಾದ್ಯಗಳನ್ನು ತಯಾರಿ ಮಾಡುವಲ್ಲಿ ಉಪ್ಪಳಿಗೆಯ ಎಲೆ ಕೂಡ ತನ್ನ ಸಹಕಾರವನ್ನು ಬೇಕಾದಷ್ಟು ಕಡೆಗಳಲ್ಲಿ ಸಾಕಷ್ಟು ನೀಡಿದೆ. 


ಅದರಲ್ಲಿ ಮುಖ್ಯವಾಗಿ ಉಪ್ಪಳಿಗೆ ಎಲೆಯ ಗಟ್ಟಿ. ಗಟ್ಟಿ ಎಂದರೆ ಕಡುಬು. ಅಮ್ಮ ಅದರದ್ದೊಂದು ಎಲೆಗಳನ್ನು ಕಿತ್ತುಕೊಂಡು ಬಂದು ತೆಳುವಾಗಿ ಅಕ್ಕಿ ಹಿಟ್ಟನ್ನು ಎಲೆಯ ಪೂರ್ತಿ ಸವರಿ ಆ ನಂತರ ಎಲೆಯನ್ನು ಮಡಚಿ,ಹಬೆಯಲ್ಲಿ ಪತ್ರೋಡೆಯಂತೆ ಬೇಯಿಸಿ ಬಿಟ್ಟರೆ ಉಪ್ಪಳಿಗೆಯ ಗಟ್ಟಿ ರೆಡಿ. 


ತುಳುನಾಡ್ ನಲ್ಲಿ ಎಲೆ ಗಟ್ಟಿಗಳು ತುಂಬಾನೇ ಫೇಮಸ್. ಗೋಳಿ,ಪೊಂಗರ್,ಗೋ ಸಂಪಾಯಿ,ಪೊನ್ನೆ,ಹೆಬ್ಬಲಸು, ಅರಶಿನ,ಬಾಳೆ, ಉಪ್ಪಳಿಗೆ.. ಹೀಗೆ ಹಲವು ಎಲೆಗಳಿಂದ ಇಲ್ಲಿ ಆರೋಗ್ಯಕರವಾದ ಎಲೆ ಗಟ್ಟಿಗಳನ್ನು ಮಾಡುತ್ತಾರೆ.ಅದರಲ್ಲಿ ನನ್ನ ಅಮ್ಮನಿಗೆ ಅತೀ ಇಷ್ಟವಾದ ಗಟ್ಟಿ ಎಂದರೆ ಈ ಬಾಳೆ ಎಲೆಯ ಗಟ್ಟಿ ಮತ್ತು ಉಪ್ಪಳಿಗೆ ಎಲೆಯ ಗಟ್ಟಿ. ನನಗೆ ಗೋಳಿ ಎಲೆಯ ಗಟ್ಟಿ ಕೂಡ ತುಂಬಾ ಇಷ್ಟ. 


ಈ ಎಲ್ಲಾ ಗಟ್ಟಿಗಳು ಪೊಟ್ಟು ಗಟ್ಟಿಗಳು. ಅಂದರೆ ಬೆಲ್ಲ ಕಾಯಿ ಹಾಕಿ ಮಾಡದ ಸಿಹಿ ಇರದ ಗಟ್ಟಿಗಳು. ಕನ್ನಡದಲ್ಲಿ ಸಪ್ಪೆ ಗಟ್ಟಿ ಎಂದು ಹೇಳಬಹುದು. ಆದರೂ ಈ ಸಪ್ಪೆ ಗಟ್ಟಿಗಳನ್ನೇ  ಏಕೆ ಮಾಡುತ್ತಾರೆ ಎಂದರೆ ಮನೆಯಲ್ಲೊಂದು ಖಾರದ ಬಂಗುಡೆ ಗಸಿಗೆ ಚಂದದ ಜೋಡಿ ಮಾಡಲು. ಬಂಗುಡೆ ಗಸಿ ಇದ್ದರೆ... ಬಾಳೆ ಎಲೆ ಗಟ್ಟಿ, ಉಪ್ಪಳಿಗೆ ಗಟ್ಟಿ ಸರಾಗವಾಗಿ ಹಾಗೆ ಹೊಟ್ಟೆಯೊಳಗೆ  ಇಳಿದು ಬಿಡುತ್ತದೆ. 



ಗಟ್ಟಿಗಳ ರಾಜ ಯಾವತ್ತಿದ್ದರೂ ಅದು ಅರಶಿನದ ಸಿಹಿ ಗಟ್ಟಿಯೇ. ಅದರ ಪರಿಮಳಕ್ಕೆ ಯಾರೂ ಕೂಡ ಸ್ಪರ್ಧೆ ನೀಡಲು ಸಾಧ್ಯವೇ ಇಲ್ಲ.ಅದರ  ಹಬೆಯಾಡುವ ಅಟ್ಟಿಯ ಬಾಯಿ ಮುಚ್ಚಳ ತೆಗೆದೊಡನೆ ಮನಸ್ಸಿಗೆ ಮಾತ್ರವಲ್ಲ ಹೃದಯಕ್ಕೂ, ಆತ್ಮಕ್ಕೂ ಅದೆನೋ ಉಲ್ಲಾಸ. ಅದೆಲ್ಲ ಪದಗಳಿಗೆ ಸಿಗುವುದಿಲ್ಲ,ವಿಶ್ಲೇಷಣೆಗೂ ನಿಲುಕುವುದಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು ಮತ್ತು ಅದಕ್ಕಾಗಿ ಅಮ್ಮ ಅರಶಿನದ ಗಟ್ಟಿ ಮಾಡುವಾಗ ಅಡುಗೆಯ ಕೋಣೆಯಲ್ಲಿಯೇ ಅತ್ತಿಂದಿತ್ತ ಲಗಾಟೆ ಹೊಡೆಯುತ್ತಿರಬೇಕು. ಅರಶಿನದ ಗಟ್ಟಿ ಬಿಟ್ಟರೆ ನಂತರದ ಒಂದು ಪರಿಮಳದ ಗಟ್ಟಿ ಇದ್ದರೆ ಅದು ಉಪ್ಪಳಿಗೆಯ ಎಲೆಯ ಗಟ್ಟಿಯೇ.ಅಷ್ಟೊಂದು ಪರಿಮಳವಿಲ್ಲ ಆದರೂ ರುಚಿ ಬಹಳ ಮತ್ತು ದೇಹಕ್ಕೆ ತಂಪು. 


ಅಮ್ಮನಿಗೆ ಈ ಉಪ್ಪಳಿಗೆ ಎಲೆಯ ಮೇಲೆ ಮೋಹ ಮಾತ್ರವಲ್ಲ ಏನೇನೋ ನಂಬಿಕೆಗಳನ್ನು ಈ ಗಿಡದ ಎಲೆಗಳ ಸುತ್ತ ಕಟ್ಟಿಕೊಂಡಿದ್ದಳು.ಅವಳು ಹೇಳುತ್ತಾಳೆ ಈ ಉಪ್ಪಳಿಗೆಯ ಎಲೆಯ ಮಧ್ಯ ಭಾಗದಲ್ಲಿ ಔಷಧೀಯ ಗುಣಗಳು ಮಾತ್ರವಲ್ಲ ಸ್ವಲ್ಪ ಮಟ್ಟಿಗೆ ಬೆಲ್ಲದ ಅಂಶ ಕೂಡ ಇದೆಯಂತೆ, ಹಾಗಾಗಿ ಅದರ ಎಲೆಯಲ್ಲಿ ಮಾಡಿದ ಗಟ್ಟಿ ರುಚಿ ಜಾಸ್ತಿ ಎಂದು ಅವಳದ್ದೊಂದು ನಂಬಿಕೆ.ಅದೆನೋ ನನಗೆ ಗೊತ್ತಿಲ್ಲ.ಅವಳು ನಂಬಿಕೆಯಲ್ಲಿಯೇ ಬದುಕುವವಳು. ಅದರಲ್ಲಿಯೇ ಸುಖಿ.ಜಾಸ್ತಿ ಪ್ರಶ್ನಿಸಿ ಅವಳ ಚಂದದ ನಂಬಿಕೆಗಳನ್ನು ಅಲುಗಾಡಿಸಲು ನನಗೂ ಇಷ್ಟವಿಲ್ಲ. 


ಇದೇ ಉಪ್ಪಳಿಗೆಯ ಎಲೆಗೆ ಸಂಬಂಧಿಸಿದಂತೆ ಅವಳಲ್ಲಿ ಇನ್ನೂ ಒಂದು ವಿಚಿತ್ರವಾದ ನಂಬಿಕೆ ಇತ್ತು.ನಿಜವಾಗಿಯೂ ತುಂಬಾನೇ ವಿಚಿತ್ರವಾದದ್ದು.ಅವಳ ಕೈ ಹಿಡಿದು ಗದ್ದೆ ಬದಿಯಲ್ಲಿ ಇಲ್ಲವೇ ಗುಡ್ಡೆಯಲ್ಲಿ ಕಟ್ಟಿಗೆ ಹೆಕ್ಕಲು ಹೋಗುವಾಗ ಅಲ್ಲೇನಾದರೂ ಚಂದದ ಉಪ್ಪಳಿಗೆಯ ಎಲೆಗಳು ಕಣ್ಣಿಗೆ ಬಿದ್ದರೆ ನಾನು "ಅಮ್ಮ.. ನೋಡು ಎಷ್ಟು ಚಂದ ಚಂದದ ಎಲೆ ಉಂಟು, ನಾಳೆ ಇದರ ಗಟ್ಟಿ ಮಾಡುವನಾ..?" ಎಂದು ಹೇಳಿದರೆ, ಅಮ್ಮ ಗದರಿ ನನ್ನ ಬಾಯಿ ಮುಚ್ಚಿಸುತ್ತಿದ್ದಳು.


ಅವಳ ಪ್ರಕಾರ ಒಳ್ಳೆಯ ಎಲೆಗಳ ಮುಂದೆ ಹಾಗೇ ಹೇಳಬಾರದಂತೆ, ಹಾಗೆ ಹೇಳಿದರೆ ಮರುದಿನ ಬರುವಾಗ ಅದರ ಹೆಚ್ಚಿನ ಎಲೆಗಳು ಒಟ್ಟೆ ಒಟ್ಟೆಯಾಗಿ(ತೂತು)ನಮಗೆ ಗಟ್ಟಿ ಮಾಡಲು ಸಿಗುವುದೇ ಇಲ್ಲವಂತೆ,ಮಾಡುವುದಿದ್ದರೆ ಕಂಡ ಕೂಡಲೇ ಎಲೆಗಳನ್ನು ಕಿತ್ತುಕೊಂಡು ಬಿಡಬೇಕು, ಇಲ್ಲದಿದ್ದರೆ ಎಲೆಯ ಎದುರು ಏನೂ ಹೇಳದೆ ಸುಮ್ಮನಿದ್ದು ಮರುದಿನ ಬಂದು ಬೇಕಾದಷ್ಟು ಎಲೆಗಳನ್ನು ಕಿತ್ತು ಕೊಂಡು ಹೋಗಿ ಗಟ್ಟಿ ಮಾಡಿ ತಿನ್ನಬೇಕಂತೆ.


ಉಪ್ಪಳಿಗೆಯ ಎಲೆಗಳು ನಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತವೆಯೇ..? ಅಥವಾ ನಾವು ಅದರ ಎಲೆ ಕಿತ್ತು ಗಟ್ಟಿ ಮಾಡಿಕೊಳ್ಳುವುದು ಅದಕ್ಕೆ ಅಸೂಯೆ ಆಗುತ್ತದೆಯೇ..? ನೋವು ಕೊಡುತ್ತದೆಯೇ ? ಅದು ನನಗೆ ಗೊತ್ತಿಲ್ಲ. ಆದರೆ ಅಮ್ಮ ಅದನ್ನೇ ಎಷ್ಟೋ ವರ್ಷಗಳಿಂದ ಶ್ರದ್ಧೆಯಿಂದ ನಂಬಿ ಕೊಂಡು ಬಂದಿದ್ದಾಳೆ.


ಅಚ್ಚರಿಯೆಂದರೆ  ಎಷ್ಟೋ ಸಲ ಆ ರೀತಿ "ನಾಳೆ ಈ ಎಲೆಗಳಿಂದ ಗಟ್ಟಿ ಮಾಡಬೇಕು.." ಎಂದು ಹೇಳಿದ ಮರುದಿನ ಎಲೆ ಕೊಯ್ಯಲೆಂದು ಹೋದಾಗ ಚಂದದ ಉಪ್ಪಳಿಗೆಯ ಎಲೆಗೆ ಕೆಲವೊಮ್ಮೆ ಒಟ್ಟೆ ಬಿದ್ದು ತೂತು ಆಗಿದ್ದು ನಾನು ಕೂಡ ಹೆಚ್ಚಾಗಿ ಗಮನಿಸಿದ್ದೇನೆ. ಅದನ್ನು ಕಂಡಾಗ ಅಮ್ಮನಿಗೆ ಅದೆನೋ ಸಂತಸ.." ನೋಡು ನಾನು ಹೇಳ್ಲಿಲ್ಲವಾ..ಹಾಗೆಲ್ಲ ಹೇಳಿದರೆ ಹೀಗೆಯೇ ಆಗ್ತದೆ ಎಂದು.." ತನ್ನ ನಂಬಿಕೆ ಫಲಿಸಿದ್ದಕ್ಕೆ ಅವಳು ಖುಷಿ ಪಡುತ್ತಾಳೆ.


ಪ್ರಕೃತಿಯ ಗುಟ್ಟು ಅವಳಷ್ಟು ನನಗೆ ಗೊತ್ತಿಲ್ಲ.ಅದೆಲ್ಲವನ್ನು ಪ್ರೂವ್ ಮಾಡಲೂ ಕೂಡ ಸಾಧ್ಯವಿಲ್ಲ. ಅದರೆ ಏಕೋ ಅವಳು ಹೇಳಿದಂತೆಯೇ ಕೇಳುವ ಪ್ರಕೃತಿ ನನಗೆ ಯಾವಾಗಲೂ ಮುಗಿಯದ ಸೋಜಿಗವೇ. ಹಾಗಾಗಿ ಅಮ್ಮನ ಎಲ್ಲಾ ಪ್ರಕೃತಿಯ ನಂಬಿಕೆಗಳನ್ನು ನಾನು ಬೆರಗು ಗಣ್ಣಿನಿಂದ ನೋಡಿ ಅಚ್ಚರಿ ಪಡುತ್ತೇನೆ.. ಮಾತ್ರವಲ್ಲ ಅಂತಹ ನಂಬಿಕೆಗಳನ್ನು ನಾನು ಕೂಡ ನಂಬುತ್ತೇನೆ,ಗೌರವಿಸುತ್ತೇನೆ.ಏನೋ ಗೊತ್ತಿಲ್ಲ.. ಅವುಗಳಲ್ಲಿ ವಿವರಿಸಲಾಗದ ಸುಖವಿದೆ.ಜಾಸ್ತಿ ಪ್ರಶ್ನಿಸಿದರೆ ನೆಮ್ಮದಿಯಿಲ್ಲ. 


ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ದಾರಿ ಮಧ್ಯೆ ಎಲ್ಲಾದರೂ ಈ ಉಪ್ಪಳಿಗೆಯ ಚಂದದ ಎಲೆಗಳು ಕಣ್ಣಿಗೆ ಬಿದ್ದಾಗ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಗಟ್ಟಿ ಮಾಡ್ಲಿಕ್ಕೆ ಇಲ್ಲದಿದ್ದರೂ ಅಮ್ಮ ಹೇಳಿದಂತೆ ಆಗುತ್ತದೆಯೋ ಇಲ್ಲವೋ ಎಂದು ಟೆಸ್ಟ್ ಮಾಡ್ಲಿಕ್ಕೆ "ಓಹ್.. ಎಲೆ ಬಹಳ ಚಂದ ಉಂಟು, ನಾಳೆ ಈ  ಎಲೆಗಳಿಂದ ಗಟ್ಟಿ ಮಾಡುವುದೇ.." ಎಂದು ಸುಮ್ಮನೆ ಎಲೆಗಳಿಗೆ ಕೇಳುವಂತೆ ಜೋರಾಗಿ ಹೇಳಿ ಶಾಲೆಗೆ ಹೋಗುತ್ತಿದ್ದೆ.


ನಾನು ಸುಳ್ಳು ಹೇಳಿದ್ದು ಅದಕ್ಕೂ ಗೊತ್ತೋ ಏನೋ.. ಮರು ದಿನ  ಯಾವ ಎಲೆಗೂ ಒಟ್ಟೆ ಬಿದ್ದಿರುವುದೇ ಇಲ್ಲ. ಅಮ್ಮನಿಗೆ ಹೇಳಿದರೆ ನಗುತ್ತಾಳೆ. " ಸುಳ್ಳು ಸುಳ್ಳು ಹೇಳಿದರೆ ಆಗುದಿಲ್ಲ...ನಿಜ ಗಟ್ಟಿ ಮಾಡ್ಲಿಕ್ಕೆ ಇದ್ದಾಗ ಹೇಳಿದರೆ ಮಾತ್ರ ಮರುದಿನದ ಎಲೆಯಲ್ಲಿ ಒಟ್ಟೆ ಬೀಳುದು.. "ಎಂದು ಹೇಳಿ ಬಾಯಿ ತುಂಬಾ ನಗುತ್ತಾಳೆ. ಸತ್ಯ ಸುಳ್ಳುಗಳನ್ನು ಕೂಡ  ಅರ್ಥ ಮಾಡಿಕೊಳ್ಳುವ ಈ ಉಪ್ಪಳಿಗೆ ಎಲೆಗಳನ್ನು ಕಂಡಾಗಲೆಲ್ಲ ಬಾಲ್ಯದಿಂದಲೂ ನನ್ನ ಮುಖದಲ್ಲೊಂದು ಪ್ರಶ್ನಾರ್ಥಕ ಚಿಹ್ನೆ ಎದ್ದೇಳುವುದು ಇಂದಿಗೂ ನಿಂತಿಲ್ಲ. 



ನಮ್ಮಲ್ಲಿ ಪತ್ರೋಡೆಯನ್ನು ಎರಡು ರೀತಿಯಲ್ಲಿ ಮಾಡುತ್ತಾರೆ. ಕೆಸುವಿನ  ಎಲೆಯ ಮೇಲೆ ಮಸಾಲೆ ಹಚ್ಚಿ ಅದರ ಮೇಲೆ ಇನ್ನೊಂದು ಎಲೆ ಇಟ್ಟು ಅದಕ್ಕೂ  ಮಸಾಲೆಯನ್ನು ಹಚ್ಚುತ್ತಾ ಈ ರೀತಿಯಾಗಿ ಮಸಾಲೆಯ ಎಲೆಗಳ ಲೇಯರ್ ಗಳನ್ನು ಹೆಚ್ಚಿಸುತ್ತಾ ಪತ್ರೋಡೆಯನ್ನು ಮಾಡಿ ಹಬೆಯಲ್ಲಿ ಇಟ್ಟು ಬೇಯಿಸುತ್ತಾರೆ. ಮತ್ತೊಂದು ವಿಧಾನದಲ್ಲಿ ಕೆಸುವಿನ ಎಲೆಯನ್ನು ಸಣ್ಣಗೆ ಕೊಚ್ಚಿ ಆ ನಂತರ ಅದನ್ನು ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ ಈ ಉಪ್ಪಳಿಗೆಯ ಎಲೆಯಲ್ಲಿ ಕಡಬುವಿನಂತೆ ಕಟ್ಟಿ ಬೇಯಿಸಲು ಇಡುತ್ತಾರೆ. ಈ ರೀತಿಯಾಗಿ ಪತ್ರೊಡೆಯ ಜೊತೆಗೆ ಉಪ್ಪಳಿಗೆಯ ಎಲೆಗೂ ಸಾಂಗತ್ಯ ಇದೆ.


ಅಷ್ಟು ಮಾತ್ರವಲ್ಲ ಕೆಲವು ಕಡೆ ಈ ಪೆಲಕಾಯಿ ಗಟ್ಟಿ(ಹಲಸಿನ ಹಣ್ಣಿನ ಕಡುಬು) ಮಾಡುವಾಗ ಈ ಉಪ್ಪಳಿಗೆಯ ಎಲೆಯನ್ನೇ ಕಡುಬು ಮಾಡಲು ಬಳಸುತ್ತಾರೆ. ಆದರೆ ಹೆಚ್ಚಾಗಿ ತೆಕ್ಕಿ(ಸಾಗುವಾನಿ) ಮರದ ಎಲೆ ನಮ್ಮಲ್ಲಿ ಪೆಲಕಾಯಿ ಗಟ್ಟಿ ಮಾಡಲು ಬಳಸುವುದು.ಹಾಗೆ ಮಾಡಿದಾಗ ಗಟ್ಟಿಗೆ ಚೆನ್ನಾಗಿ ಕೆಂಪು ಬಣ್ಣವೂ ಕೂಡ ಬರುತ್ತದೆ. ಆದರೆ ಸಾಗುವಾನಿಯ ಎಲೆ ಇರದ ಕಡೆಗಳಲ್ಲಿ ಈ ಉಪ್ಪಳಿಗೆಯ ಎಲೆ " ತಾನು ಇದ್ದೇನೆ.. Don't Worry.. ನನ್ನನ್ನು ಬಳಸಿ..." ಎನ್ನುವ ಮೂಲಕ  ಪ್ರತಿಯೊಂದಕ್ಕೂ ತನ್ನ ಸಹಾಯ ಹಸ್ತ ಚಾಚುತ್ತದೆ. ಈ ರೀತಿಯಾಗಿ ಹಲಸಿನ ಕಡುಬಿನಲ್ಲೂ ಕೂಡ ಪಾಲು ಪಡೆದು ಉಪ್ಪಳಿಗೆಯ ಎಲೆ ಧನ್ಯವಾಗುತ್ತದೆ. 

ಹಿಂದೆ ಎಲ್ಲಾ ಈ ಪ್ಲಾಸ್ಟಿಕ್ ತೊಟ್ಟೆಯ ಬಳಕೆ ಕಡಿಮೆ ಇರುವಾಗ ಮೀನು ಮಾರುವವರು ಕೂಡ ಇದರ ಎಲೆಯಲ್ಲಿಯೇ ಮೀನು ಕಟ್ಟಿ ಕೊಡುತ್ತಿದ್ದರು ಎಂದು ಮನೆಯಲ್ಲಿ, ಊರಲ್ಲಿ ಹಲವರು ಹೇಳಿದ್ದನ್ನು ಕೂಡ ಕಂಡಿದ್ದೇನೆ. 


ಉಪ್ಪಳಿಗೆಯ ಗಿಡದಿಂದ ಕೆಂಪಾದ ಅಂಟಿನಂತಹ ಒಂದು ದ್ರವ ಬರುತ್ತದೆ. ನಮ್ಮ ದೇಹದಲ್ಲಿ ಕುರಿ(ಕುರ) ಆದಾಗ ಅದರ ಈ ಅಂಟನ್ನು ಈ ಕುರದ ಸುತ್ತಲೂ ಲೇಪಿಸಿದರೆ,ಕುರದ ಗಡ್ಡೆಯೇ ಕಿತ್ತುಕೊಂಡು ಹೊರಗೆ ಬರುತ್ತದೆ ಎಂದು ಅಮ್ಮ ಹೇಳುತ್ತಾಳೆ.ಈ ರೀತಿಯಾಗಿ ಆರೋಗ್ಯ ಕ್ಷೇತ್ರದಲ್ಲಿಯೂ ತಕ್ಕ ಮಟ್ಟಿಗೆ ಉಪ್ಪಳಿಗೆಯ  ಗಿಡ ಕೈಯಾಡಿಸಿದೆ. 


ಇದರ ಗಿಡವು ಕೋಲಿನಂತೆ ಉದ್ದಕ್ಕೆ ಹೋಗುವುದರಿಂದ ಗೇರುಬೀಜ ಕೊಯ್ಯಲು ಸಣ್ಣ ಪುಟ್ಟ ದೋಟಿ ಮಾಡಲು ಇದು ಸಹಾಯಕ. ಅಷ್ಟೇನೋ ಗಟ್ಟಿಯಿಲ್ಲದ ಹಾಗೂ ಭಾರವಿಲ್ಲದ ಇದರ ಕೋಲನ್ನು  ಮನೆಯ ಬಸಳೆ ದೊಂಪದಲ್ಲಿ ಚಪ್ಪರದ ಮೇಲಿನ ಚೌಕಟ್ಟಿನ ಖಾಲಿ ಜಾಗ ಭರ್ತಿ ಮಾಡಲು ಕೂಡ ಬಳಸುತ್ತಾರೆ. ಇದು ದೊಡ್ಡದಾಗಿ ಬೆಳೆದಾಗ ಮರಮಟ್ಟುಗಳಾಗಿ ಬಳಕೆ ಆಗುವುದು ಕೂಡ ಇದೆ. ಎಲೆಯನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ. ಇದರ ಅಂಟನ್ನು ಹಿಂದೆ ಗೋಂದು ಆಗಿ ಉಪಯೋಗಿಸುತ್ತಿದ್ದರು ಎಂದು ಹೇಳುತ್ತಾರೆ. 



ಈ ಉಪ್ಪಳಿಗೆಯ ಗಿಡ ನಮ್ಮ ಕರಾವಳಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಸೆರಗಿನಲ್ಲಿ ಬೇಕಾದಷ್ಟು ಅದರಷ್ಟಕ್ಕೆ ಆಗುತ್ತದೆ. ಇದೊಂದು ಕಾಡು ಗಿಡ. ಬಾಳೆಯಂತಹ ಹಮ್ಮು ಬಿಮ್ಮು ಘನತೆ ಗೌರವ ಅದಕ್ಕೆ ಇಲ್ಲ. ಗಾಳಿ ಮಳೆಗೆ ತನ್ನಿಷ್ಟದ ಹಾಡು ಹಾಡುತ್ತಾ ಹಾಗೇ ಬೆಳೆದು ನಿಲ್ಲುತ್ತದೆ ಉಪ್ಪಳಿಗೆ.ಮಾನವ ಕೈ ಚಾಚಿ ನೀನು ನನಗೆ ಬೇಕು ಎಂದಾಗಲೆಲ್ಲ.. ಯಾವತ್ತೂ ತನ್ನನ್ನು ತಾನು ಸಮರ್ಪಿಸಿಕೊಳ್ಳುವಲ್ಲಿ ಅದು ಯಾವತ್ತೂ ಹಿಂದು ಮುಂದೆ ನೋಡಿಯೇ ಇಲ್ಲ.ಮಕರಂಗ ಪೆಲ್ಟಟಾ(Macaranga Peltata)ಎಂಬುವುದು ಇದರ  ಸಸ್ಯಶಾಸ್ತ್ರೀಯ ಹೆಸರು.


ನನ್ನ ಆಸೆ ಇಷ್ಟೆ. ಈ ಹೋಟೆಲ್ ಗಳಲ್ಲಿ ತಿಂಡಿಗಳನ್ನು ಕಟ್ಟಲು ಪ್ಲಾಸ್ಟಿಕ್ ಬದಲು ಬಾಳೆ ಎಲೆಯನ್ನು ಬಳಸುವುದು ಕೆಲವರಿಗೆ ಕಷ್ಟ ಆಗುವುದಾದರೆ.. ಈ ಬೇಕಾದಷ್ಟು ಸ್ವಾಭಾವಿಕವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಉಪ್ಪಳಿಗೆಯನ್ನು ಬಳಕೆ ಮಾಡುವುದು ನಿಜವಾಗಿಯೂ ಎಷ್ಟೋ ಉತ್ತಮ. ಬಾಳೆ ಎಲೆಗಿಂತ ಎಷ್ಟೋ Flexible ಇರುವ ಇದನ್ನು ಕಟ್ಟು ಕಟ್ಟಲು ಬಾಡಿಸಬೇಕಾಗಿಯೂ ಇಲ್ಲ.ಇದರ ಎಲೆ ಸಾಕಷ್ಟು ದಪ್ಪ ಕೂಡ ಇರುವುದರಿಂದ ಬೇಗನೇ ಹರಿಯುವುದು ಸಹ ಇಲ್ಲ. 


ಅಷ್ಟು ಮಾತ್ರವಲ್ಲ ಯಾವುದಾದರೂ ರೀತಿಯಲ್ಲಿ ಎಲೆಯ ಬಳಕೆಯನ್ನು ತಿಂಡಿ ಪೊಟ್ಟಣಗಳ ಕಟ್ಟು ಕಟ್ಟುವುದಕ್ಕೆ ಬಳಸುವುದರಿಂದ ಸಾಧ್ಯ ಆದಷ್ಟು ಪ್ಲಾಸ್ಟಿಕ್ ಭೂಮಿ ಸೇರುವುದು ಕೂಡ ಕಡಿಮೆ ಆಗುತ್ತದೆ. ನಮ್ಮೂರ ಹಳ್ಳಿಯ ಸಣ್ಣಪುಟ್ಟ ಹೋಟೆಲ್ ಗಳಲ್ಲಿ, ಹೂವಿನ ಕಟ್ಟೆಗಳಲ್ಲಿ ಈಗಲೂ ಉಪ್ಪಳಿಗೆಯ ಎಲೆಯ ಬಳಕೆ  ಎಂದಿನಂತೆ ಇದೆ. ಸದ್ಯಕ್ಕೆ ಜಾಸ್ತಿಯೇ ಆಗಿದೆ.ಏಕೆಂದರೆ ಬಾಳೆ ಎಲೆಯನ್ನು ಬೇರೆಯವರಿಂದ ಖರೀದಿಸುವುದಾದರೆ ಅದಕ್ಕೂ ಕೂಡ ಈಗ ಕಾಸು ಕೊಡಬೇಕಾಗುತ್ತದೆ. ಆದರೆ ಅಂತಹ ಗತ್ತು ಹಾಗೂ ಭಾಗ್ಯ ಉಪ್ಪಳಿಗೆಯ ಎಲೆಗೆ ಇಲ್ಲದೇ ಇರುವುದರಿಂದ ಹೂ ಅಂಗಡಿಯವರು ಹಾಗೂ ಹೋಟೆಲ್ ನವರು  ಇಂದಿಗೂ ಈ ಉಪ್ಪಳಿಗೆ ಎಲೆಯನ್ನು ಬಳಸುವುದರಲ್ಲಿಯೇ ಸುಖಿಯಾಗಿದ್ದಾರೆ.ಆದರೆ ನಗರದ ಹೋಟೆಲ್ ನಲ್ಲಿ ಬಾಳೆ ಎಲೆಯೂ ಇಲ್ಲ, ಉಪ್ಪಳಿಗೆ ಎಲೆಯೂ ಇಲ್ಲ..ಯಾವ ಎಲೆಯೂ ಇಲ್ಲ.. ಯಥೇಚ್ಛವಾದ ಪ್ಲಾಸ್ಟಿಕ್ ಬಳಕೆ ಬೇಸರ ತರಿಸುತ್ತದೆ. 



ಮನೆಗೆ ಹೋಗುವ ಗುಡ್ಡದ ದಾರಿಯಲ್ಲಿ ಹಾಗು ಮನೆಯ ಸುತ್ತ ಮುತ್ತ ಯಾವಾಗಲೂ ಉಪ್ಪಳಿಗೆ ಎಲೆಗಳು "ಸದಾ ನಿಮ್ಮ ಸೇವೆಯಲ್ಲಿ" ಎಂಬಂತೆ ತಲೆ ಎತ್ತಿ ನಿಂತಿರುತ್ತದೆ. ಹೋಗುವಾಗ ಬರುವಾಗ ದಾರಿ ಮಧ್ಯದಲ್ಲಿ ಅದರ ನೆತ್ತಿ ಸವರಿಯೇ ಹೋಗುತ್ತೇನೆ ನಾನು. ಏಕೆಂದರೆ ನನ್ನ ಬಾಲ್ಯದ ನೆನಪಿನಲ್ಲಿ ಅವುಗಳ ಹಚ್ಚ ಹಸಿರು ಹಾಗೂ ಅದರ ಗಟ್ಟಿಯ ಪರಿಮಳ ಕೂಡ ಬೇಕಾದಷ್ಟು ಇದೆ. 


ಈಗಲೂ ಕೆಲವೊಮ್ಮೆ ನಾನು ಬೇಕು ಬೇಕಂತಲೇ ಅಮ್ಮನ ಉಪ್ಪಳಿಗೆಯ ಎಲೆಯ ನಂಬಿಕೆಯನ್ನು ಟೆಸ್ಟ್ ಮಾಡಲು,ಆ ಎಲೆಗಳ ಬಳಿ ನಡೆದು ಹೋಗುವಾಗ.. " ಓಹ್.. ಎಲೆ ಚಂದ ಉಂಟು, ನಾಳೆ ಇದರಿಂದ ಮನೆಯಲ್ಲಿ ಗಟ್ಟಿ ಮಾಡುವುದೇ.." ಎಂದು ಎಲೆಗೂ ಕೇಳುವಂತೆ ಸುಮ್ಮನೆ ಹೇಳಿ ಹೋಗುತ್ತೇನೆ.


ಉಪ್ಪಳಿಗೆಯ ಎಲೆಗಳೆಲ್ಲವೂ ತುಂಬಾ ಬುದ್ದಿವಂತವು...ನಾನು ಹೇಳಿದ್ದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂದು ತಮ್ಮ ತಮ್ಮಲ್ಲಿಯೇ ಆ ದಿನ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದು ಎಲೆಯನ್ನು ಒಟ್ಟೆ ಮಾಡಬೇಕೋ,ಬೇಡವೋ ಎಂಬ ಒಮ್ಮತ ತೀರ್ಮಾನಕ್ಕೆ ಬಂದಿರುತ್ತವೆ. 


ಉಪ್ಪಳಿಗೆಯ ಎಲೆಗಳ ಒಮ್ಮತದ ನಿರ್ಧಾರ ಏನು ಆಗಿರಬಹುದು ಎಂದು ತಿಳಿಯುವ ಕುತೂಹಲ ನನ್ನಲಿಯೂ ಕೂಡ ಅಧಿಕವಾಗಿಯೇ ಇರುವುದರಿಂದ.. ಮರುದಿನ ಅದೇ ದಾರಿಯಲ್ಲಿ ಹೋಗುವಾಗ ಸುಮ್ಮನೆ ಅವುಗಳತ್ತ ನೋಡಿ, ಅವುಗಳ ಒಗ್ಗಟ್ಟು ಕಂಡು ನಸು ನಗುತ್ತೇನೆ.ಅವುಗಳು ಇಂದಿಗೂ  ಅಮ್ಮನ ನಂಬಿಕೆಯನ್ನು ಹುಸಿ ಮಾಡಿಲ್ಲ.ಪ್ರಕೃತಿಯ ಬೆರಗುಗಳ ಮುಂದೆ ನಾವೆಲ್ಲರೂ ಸದಾ ಸಣ್ಣವರು.


ಗೋಳಿಬಜೆಯ ಕಟ್ಟಿನಲ್ಲೂ,ಮಲ್ಲಿಗೆಯ ಚೆಂಡಿನ ಜೊತೆಯಲ್ಲೂ  ಇರುವ ಉಪ್ಪಳಿಗೆಯ ಎಲೆಗಳಿಗೆ.... ನನ್ನಲ್ಲಿ ಪರಿಮಳದ ಜೊತೆ ಜೊತೆಗೆ ರುಚಿಯಾದ  ನೆನಪುಗಳು ಇಂದಿಗೂ ಹಲವಾರು.



.....................................................................................



#ಏನೋ_ಒಂದು..


Ab Pacchu

Moodubidire


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..