ಭಕ್ತಿಯ ಜೊತೆಗೆ ಭಯವೂ ಇರಲಿ..




ಮನೆಯ ಹಿಂದೆ ಒಂದು ಗುಡ್ಡ ಇದೆ.ಅದರಲ್ಲಿ ರಾಹು ಗುಳಿಗ ದೈವದ ಕಲ್ಲು ಕೂಡ ಉಂಟು.

ಅದು ಅಲ್ಲಿ ಪ್ರಾಕೃತಿಕವಾಗಿಯೇ ಎಷ್ಟೋ ಸಮಯದಿಂದ ಇನ್ನೂ ಹಾಗೆಯೇ ಇದೆ.ಯಾವಾಗ ಬೇಕಾದರೂ ಆ ಗುಡ್ಡದ ಬಳಿ ಸುತ್ತಾಡಬಹುದು.ಆದರೆ ಮಧ್ಯಾಹ್ನದ ಹೊತ್ತು ಆ ಗುಡ್ಡ ಸುತ್ತ ಸುತ್ತಾಡಲು ನಮಗೆ ಮಾತ್ರವಲ್ಲ ಮನೆಯ ಹಸುಗಳಿಗೆ ಕೂಡ ಯಾರ ಮನೆಯಲ್ಲೂ ಬಿಡುವುದೇ ಇಲ್ಲ.ಕಾರಣ ಅಲ್ಲಿರುವ  ದೈವದ ಮೇಲಿನ ಭಕ್ತಿಯ ಜೊತೆಗೆ ಅಷ್ಟೇ ಭಯ..

ಬೈಲು ಬದಿಯಲ್ಲೊಂದು ಕಲ್ಲುಟ್ಟಿ(ಕಲ್ಲುರ್ಟಿ)ದೈವದ ಸಾನವೊಂದು ಇದೆ.ಅಮ್ಮ ದನಕ್ಕೆ ಹುಲ್ಲು ತರಲು ಹೋಗುವಾಗ  ಕಾಲಿನಲ್ಲಿರುವ ಚಪ್ಪಲಿಯನ್ನು ಕೆಳಗಿಟ್ಟು ತುಂಬಾ ದೂರದಿಂದಲೇ ಪ್ರತೀ ನಿತ್ಯವೂ ಕಲ್ಲುಟ್ಟಿಗೆ ಶ್ರದ್ಧೆಯಿಂದ ಕೈ ಮುಗಿಯುತ್ತಾಳೆ.ಹಾಗೆ ಮಾಡದಿದ್ದರೆ ಅವಳಿಗೆ ಆ ದಿನ ನಿದ್ದೆಯೇ ಬರುವುದಿಲ್ಲ. ಕಷ್ಟ ಅಂತ ಬಂದಾಗ ದೇವರಿಗಿಂತ ಮೊದಲು ಅವಳಿಗೆ ನೆನಾಪುಗುವುದೇ ಬೈಲಿನ ಕಾರಣಿಕದ ಕಲ್ಲುಟ್ಟಿ.ದೈವಕ್ಕೊಂದು ಚೆಂಡು ಮಲ್ಲಿಗೆ ಹೂವು ಹೇಳಿ ಬಿಟ್ಟರೆ ಸಾಕು.. ಅವಳು ಆ ಕ್ಷಣಕ್ಕೆ ಎಷ್ಟೋ ನಿರಾಳ. ಕಾರಣ ಅವಳ ಸಮಸ್ಯೆಗಳಿಗೆ ಪರಿಹಾರ ಕ್ಷಣ ಮಾತ್ರದಲ್ಲಿ ಆಗುವುದು ಈ ದೈವಗಳಿಂದಲೇ ಎಂದು ಅವಳು ದೃಢವಾಗಿ ನಂಬಿದ್ದಾಳೆ.ಹೌದು ದೈವ ಅಂದರೆ ಅವಳಿಗೆ ಎಂದಿಗೂ  ಮುಗಿಯದ ನಂಬಿಕೆಯೇ ಆಗಿದೆ. 

ಬೆಟ್ಟದ ತುದಿಯಲ್ಲಿ ಎಲ್ಲರಿಗಿಂತ ಎತ್ತರದಲ್ಲಿ ರಾಜನ್ ದೈವವಾಗಿ ಕೊಡಮಂದಾಯ ಇದ್ದಾನೆ.ಊರಲ್ಲಿ ಯಾರೇ ಇರಲಿ ಒಳ್ಳೆಯ ಕೆಲಸ ಮಾಡುವಾಗ ಇಲ್ಲವೇ ಮನೆಯಿಂದ ಹೊರಗಿಳಿದು ಹೋಗುವಾಗ ಮನೆಯ ದೈವ ದೇವರ ಜೊತೆಗೆ,ಫಲ್ಗುಣಿ ದಡದಲ್ಲಿರುವ ಊರ ದೇವರು ಗೋಪಾಲಕೃಷ್ಣ,ಫಲ್ಗುಣಿಯ ನಡುವಲ್ಲಿಯೇ ಇರುವ ಪಂಚಲಿಂಗೇಶ್ವರ ದೇವರ ಜೊತೆ ಜೊತೆಗೆ... ಎತ್ತರದ ಬೆಟ್ಟದಲ್ಲಿರುವ ಕೊಡಮಂದಾಯ ಕೂಡ ಮನಸ್ಸಿಗೆ ಅತಿಯಾಗಿಯೇ ನೆನಪಾಗುತ್ತಾನೆ..ಇಲ್ಲೊಂದು ವಿವರಿಸಲಾಗದ ಭಕ್ತಿ ಇದೆ ಮತ್ತು ಅದು ಊರಿನ ಎಲ್ಲರಲ್ಲೂ ಹೆಚ್ಚು ಕಡಿಮೆ ಆ ಭಕ್ತಿ ಹಾಗೆಯೇ ಇದೆ. 

ಇಂತಹದ್ದೇ ನಂಬಿಕೆ,ಕಥೆಗಳು ತುಳುನಾಡಿನ ಹಳ್ಳಿ ಹಳ್ಳಿಯಲ್ಲೂ ಇದೆ.ದೈವಗಳ ಹೆಸರುಗಳು ಬದಲಾಗಬಹುದು ಅಷ್ಟೇ.ಇದೆಲ್ಲ ಯಾಕೆ ಹೇಳಿದೆ ಎಂದರೆ ತುಳುನಾಡಿನಲ್ಲಿರುವ ಪ್ರತಿಯೊಬ್ಬರಿಗೂ ದೈವ ಎಂದರೆ ಬರೀ ಆರಾಧನೆ ಮತ್ತು ನಂಬಿಕೆ ಮಾತ್ರವಲ್ಲ.. ಅದೊಂದು ವಿಶಿಷ್ಟವಾದ ಭಯ ಮಿಶ್ರಿತ ಭಕ್ತಿ ಕೂಡ ಹೌದು. 

ಭಯ ಎಂದರೆ ಸುಖಾಸುಮ್ಮನೆ ಹೆದರಿಸಲು ಯಾರೋ ಒಬ್ಬರು ಹುಟ್ಟಿಸಿದ ಭಯವಲ್ಲ ಇದು.ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದಾಗ ಶಿಕ್ಷೆ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ ಎಂದು ಅಂತರಂಗದೊಳಗೆ ಅದರಷ್ಟಕ್ಕೇ ಮೂಡಿದ ಭಯವಿದು.ಅಂತಹ ತಪ್ಪುಗಳು ನನ್ನಿಂದ ಆಗಬಾರದು,ಅದರಲ್ಲೂ ದೈವಕ್ಕೆ ನನ್ನಿಂದ ಅಪಚಾರವಾಗಬಾರದು ಎಂಬ ಭಯವೇ ನಮ್ಮಲ್ಲಿ ಹೆಚ್ಚಿನ ತಪ್ಪುಗಳು ಸಮಾಜದಲ್ಲಿ ಆಗದಂತೆ ಮಾಡಿ ಬಿಡುತ್ತದೆ.

ನ್ಯಾಯ ತೀರ್ಮಾನಕ್ಕೆ ದೈವದ ಕೊಡಿಯಡಿಗೆ ಹೋದರೆ ಸಾಕು..ನಂತರ ಅದಕ್ಕಿಂತ ದೊಡ್ಡ ಕೋರ್ಟೇ ಬೇಕಾಗಿಲ್ಲ ನಮ್ಮವರಿಗೆ.ಅಲ್ಲಿ ಹೆಚ್ಚಾಗಿ ತಪ್ಪು ಮಾಡಿದವನು ದೈವದ ಭಯದಿಂದಲೇ ತನ್ನ ತಪ್ಪು ಕೂಡಲೇ ಒಪ್ಪಿಕೊಂಡು ಬಿಡುತ್ತಾನೆ. ಸಮಸ್ಯೆ ಹೆಚ್ಚು ಕಡಿಮೆ ಅಲ್ಲಿಗೆ ಪರಿಹಾರ ಆದಂತೆಯೇ.ಒಂದು ವೇಳೆ ದೈವ ಕೊಟ್ಟ ತೀರ್ಪನ್ನು ಪ್ರಶ್ನಿಸಿ ಇಲ್ಲವೇ ದೈವದ ಮಾತನ್ನು ತುಳಿದು ಮುಂದೆ ಹೋಗಿದ್ದೇ ಆದರೆ,ಆ ತರಹ ಮಾಡಿ ಉದ್ದಾರ ಆದವರ ಕಥೆಗಳೇ ನಮ್ಮಲ್ಲಿ ಇಲ್ಲ.ಇದ್ದರೆ ಅದು ಕೇವಲ ಅವನತಿಯ ಕಡೆಗೆ ಮುಖ ಮಾಡಿದ ಹಾದಿಗಳು!

ಕೆಲವು ಕಡೆ ದೈವದ ಹೆಸರು ಕೂಡ ಹೇಳುವುದಿಲ್ಲ.. "ಆಯೆ ಉಲಯಿಡ್ ಮಂಚಡ್ ಕುಲ್ಲೊಂದಿನಾಯೆ ತುವೊನಡ್.."(ಒಳಗೆ ಮಂಚದ ಮೇಲೆ ಕುಳಿತುಕೊಂಡವನು ನೋಡಿ ಕೊಳ್ಳಲಿ)ಅಂತ ಹೇಳಿ ಬಿಡುವುದು ಇದೆ. ದೈವದ ಹೆಸರು ಹೇಳಿ ಏನಾದರೂ ಶಪಿಸಿಬಿಟ್ಟರೆ..ಅಲ್ಲಿಗೆ ಅರ್ಧ ಜೀವ -ಮತ್ತು  ಜೀವನವೇ ಬರ್ಬಾದ್ ಆದಂತೆಯೇ ಲೆಕ್ಕ.ತಪ್ಪು ಮಾಡಿದವನಿಗೆ ಭಯ ಅನ್ನುವುದು ಅಲ್ಲಿಂದಲೇ ಶುರು ಆಗಿ ಬಿಡುವುದು. 

ಇಷ್ಟೆಲ್ಲ ಭಯ ಭಕ್ತಿ ಇರುವವರು ದೈವದ ವಿಷಯದಲ್ಲಿ ಏನೇ ಮಾಡಬೇಕಾದರೂ ಹತ್ತು ಬಾರಿ ಆಲೋಚಿಸುತ್ತಾರೆ.ಕಾರಣ ಇಷ್ಟೇ.. ಇಲ್ಲಿ ಪರಿಹಾರವೂ ಕ್ಷಿಪ್ರವಾಗಿ ಸಿಗುತ್ತದೆ, ಅದೇ ರೀತಿ ದುಪ್ಪಟ್ಟು ಶಿಕ್ಷೆಯೂ ಕೂಡ.. 

ದೈವಕ್ಕೆ ಸಂಬಂಧ ಪಟ್ಟ ಭಯ ಮತ್ತು ಭಕ್ತಿಯ ಬಗ್ಗೆಯೇ ಇಷ್ಟೆಲ್ಲ ಯಾಕೆ ಹೇಳಿದ್ದು ಎಂದರೆ  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದೈವದ ಮೊಗ(ಮುಖ) ವೊಂದನ್ನು ಹಿಡಿದುಕೊಂಡ ಚಿತ್ರವೊಂದು ಕಣ್ಣಿಗೆ ಬಿದ್ದಾಗ ನಿಜವಾಗಿಯೂ ತುಂಬಾನೇ ಆಶ್ಚರ್ಯವಾಯಿತು ಹಾಗೂ ಅಷ್ಟೇ ಬೇಸರ ಕೂಡ ಆಯಿತು. ಏಕೆಂದರೆ ಈ ರೀತಿ ಪೋಟೋ ತೆಗೆಸಿಕೊಂಡು ಪೋಸ್ಟ್ ಮಾಡುವ ಧೈರ್ಯ ನನ್ನ ಪ್ರಕಾರ ಯಾವ ತುಳುವರಿಗೂ ಬರಲಿಕ್ಕಿಲ್ಲ ಎಂದೇ ನನ್ನ ಭಾವನೆ.ಏಕೆಂದರೆ ಧೈವ ಎಂದರೆ ಎಷ್ಟು ಭಕ್ತಿ ಇದೆಯೋ ಇಲ್ಲಿ ಅದಕ್ಕಿಂತ ಎರಡು ಪಟ್ಟಿನ ಭಯವೂ ನಮ್ಮಲ್ಲಿ ಅಧಿಕವಾಗಿಯೇ ಇದೆ. 

ದೈವದ ಜೊತೆಗೆ ಸೆಲ್ಫಿ.. ದೈವದ ಪೋಟೋಕ್ಕೆ Dj ಹಾಡು Editing ಕೂಡ ಎಂದಿಗೂ ಸಹ್ಯ ಅನಿಸುವುದೇ ಇಲ್ಲ.ಹಾಗಂತ ದೇವರಿಗೆ ಮಾಡಬಹುದೇ ಎಂದು ಕೇಳಿದರೆ.. ಖಂಡಿತವಾಗಿಯೂ ದೇವರಿಗೂ ಕೂಡ Dj ಮಾಡಬಾರದು ಎಂದೇ ನನ್ನ ವೈಯಕ್ತಿಕ ಅಭಿಪ್ರಾಯ. 

ದೇವರೇ ಆಗಲಿ.. ದೈವವೇ ಆಗಲಿ ಎರಡಕ್ಕೂ ಅದರದ್ದೇ ಆದ ಆರಾಧನಾ ಕ್ರಮ ಇದೆ.ಹೀಗೆಯೇ ಇರಬೇಕು ಎಂಬ ಚೌಕಟ್ಟು ಹಾಗೂ ಹಿಂದಿನ ಕಾಲದಿಂದ ಬಂದ ಸಂಪ್ರದಾಯಗಳಿವೆ. ಎರಡನ್ನೂ ಅದಕ್ಕೆ ಸಂಬಂಧಪಟ್ಟ ಹಾಗೆ ಮಾಡಿದರೆನೇ ಚಂದ ಮತ್ತು ಅದುವೇ ಸರಿಯಾದದ್ದು.ನಮ್ಮಲ್ಲಿ ಆಡಂಬರ ಜಾಸ್ತಿ ಆಗುತ್ತಾ ಹೋದಂತೆ ಭಕ್ತಿ ಏನೋ ಮೊದಲೇ ಕಮ್ಮಿ ಆಗಿತ್ತು.. ಆದರೆ ಈಗೀಗ ಇದ್ದ ಅಲ್ಪ ಸ್ವಲ್ಪ ಭಯವೂ ಕೂಡ ವೇಗವಾಗಿ ಕಡಿಮೆ ಆಗುತ್ತಿದೆ.ಅದರಿಂದಲೇ ಇಂತಹ ಪ್ರಸಂಗಗಳು ಹೆಚ್ಚಾಗುತ್ತಿರುವುದು

ನಮ್ಮೂರಿನ ಗುಡ್ಡೆಯಲ್ಲಿರುವ ರಾಹು ಗುಳಿಗನ ಕಲ್ಲಿನ ಬಳಿ  ಊರವರು ಮತ್ತು ಅದಕ್ಕೆ ಸಂಬಂಧ ಪಟ್ಟವರು ಒಮ್ಮೆ ಮಾತ್ರ ಹೋಗುತ್ತೇವೆ.ಅದು ಆಟಿ ಅಮಾವಾಸ್ಯೆಯ ಸಮಯದಲ್ಲಿ. ಸಹಜ ಪ್ರಕೃತಿಯ ನಡುವಿನಲ್ಲಿ ಅಲ್ಲಿ ನಡೆಯುವ ಆರಾಧನೆ ಸರಳ ಮತ್ತು ಅಷ್ಟೇ ಚಂದವೂ ಹೌದು. ಅಲ್ಲಿಗೆ ಹೋಗಲು ಕೂಡ ದಾರಿ ಮಾಡಿಕೊಂಡೇ,ಬಲ್ಲೆಯನ್ನು ಕತ್ತರಿಸಿಕೊಂಡು, ಬಳ್ಳಿಗಳನ್ನು ಪಕ್ಕಕ್ಕೆ ಸರಿಸಿಕೊಂಡೇ ಹೋಗಬೇಕು.

ಹೋಗಲು ಅಷ್ಟು ದುರ್ಗಮ ಜಾಗ ಅದು. ಏಕೆಂದರೆ ಬೇರೆ ದಿನ ದೈವದ ಭಯದಿಂದ ಅಲ್ಲಿ ಯಾರೂ ಸುಳಿಯುವುದೇ ಇಲ್ಲ. ಅಲ್ಲಿಗೆ ಹೋಗಿ ತಲುಪಿದ ಮೇಲೆ ಭಕ್ತಿಯ ಜೊತೆಗೆ ಪ್ರಕೃತಿಯ ನಡುವಲ್ಲಿ ಮನಸ್ಸಿಗೆ ಏನೋ ಒಂದು ದಿವ್ಯವಾದ ನೆಮ್ಮದಿ.ತುಳುನಾಡಿನಲ್ಲಿ ದೈವಗಳಿಂದಾಗಿ ಹಾಗೂ ನಾಗರಾಧನೆಯಿಂದಾಗಿ ಸ್ವಲ್ಪ ಪ್ರಕೃತಿ ಉಳಿದಿದೆ ಎನ್ನುವುದು ಕೂಡ ಅಷ್ಟೇ ಸತ್ಯ. ಅದಕ್ಕಾಗಿ ದೈವಾರಾಧನೆಯು ಹಾಗೇ  ಸಹಜವಾಗಿ,ಪ್ರಾಕೃತಿಕವಾಗಿ ನಡೆದರೆನೇ ಚಂದ ಎಂದು ನನ್ನ ಅನಿಸಿಕೆ. ಹೇಳಿ ಕೇಳಿ ಅದೊಂದು ಪ್ರಕೃತಿ ಆರಾಧನೆಯೂ ಕೂಡ ಹೌದು.


ಮೇಲ್ನೋಟಕ್ಕೆ ದೈವಾರಾಧನೆಯ ಬಗ್ಗೆ ನನಗೂ ಎಲ್ಲರಂತೆಯೇ ಎಷ್ಟು ಬೇಕೋ ಅಷ್ಟೇ ಗೊತ್ತಿರುವುದರಿಂದ ಅದರ ಆರಾಧನಾ ಕ್ರಮದ ಬಗ್ಗೆ ಅದು ಹೀಗೆಯೇ ಇರಬೇಕು ಇದು ಹೀಗೆಯೇ ಆಗಬೇಕು ಎಂದು ಹೆಚ್ಚಿಗೆ ಏನು ನಾನು ಹೇಳಲಾರೆ.ಆದರೆ ದೈವವನ್ನು ನಂಬುವ ಒಬ್ಬ ಸಾಮಾನ್ಯ ಭಕ್ತನಾಗಿ ನನಗೆ ಭಾವನೆಗಳು ಇಷ್ಟೇ. ದೈವಕ್ಕೆ ಸಂಬಂಧಿಸಿದಂತೆ ನನ್ನಂತಹ ಹಲವರ ಭಾವನೆಗಳು ಇಂದಿಗೂ ಭಯ ಮಿಶ್ರಿತ ಭಕ್ತಿಯಿಂದಲೇ ಕೂಡಿದೆ.ಮತ್ತು ಅದು ಎಂದಿಗೂ ಒಳ್ಳೆಯ ಭಯವೇ ಆಗಿದೆ.ತಪ್ಪು ಆಗದಂತೆ  ತಡೆಯುವ ಭಯವದು. ಭಕ್ತಿಯೊಂದಿಗೆ ಆ ಭಯ ಇನ್ನೂ ಹಾಗೇ ಉಳಿಯಲಿ.ಅದಕ್ಕೆ ದಕ್ಕೆ ಆಗಬಾರದು ಎಂದಾದರೆ  ಸಾಮಾಜಿಕ ಜಾಲತಾಣದಲ್ಲಿ ಆಗಲಿ ಅಥವಾ ಆರಾಧನೆಯಲ್ಲಿಯೇ ಆಗಲಿ ದೈವಾರಾಧನೆಯ ವಿಕೃತಿ ಮೆರೆದಾಡವುದು ಖಂಡಿತವಾಗಿಯೂ ಬೇಡ. ಏಕೆಂದರೆ ಇದು ಒಂದಿಬ್ಬರ ನಂಬಿಕೆಯಲ್ಲ.. ತುಳುನಾಡಿನ ಎಷ್ಟೋ ಹಿರಿಯರುಗಳ ಕಿರಿಯರುಗಳ ನಂಬಿಕೆ ಕೂಡ ಹೌದು.ನಂಬಿಕೆಗೆ ಯಾರೂ ಕೂಡ ಅಪಚಾರ ಎಸಗುವುದು ಎಂದಿಗೂ ಬೇಡ. ಆ  ಅರಿವು ಮೊದಲು ನಮ್ಮಲ್ಲಿಯೇ ಮೂಡಬೇಕು.

ಯಾವ ಆರಾಧನೆಯೇ ಆಗಲಿ ಅದು ಪ್ರಾಕೃತಿಕವಾಗಿ,ಪ್ರಕೃತಿಗೆ ಪೂರಕವಾಗಿ ಇದ್ದರೆನೇ ಅದು ಚಂದ.ಮತ್ತು ನಮ್ಮ ದೈವಾರಾಧನೆ ಕೂಡ ಅಂತಹ ಒಂದು ಆರಾಧನೆಯೇ ಆಗಿದೆ.ಆದರೆ ಈಗ ಜನರು ಸ್ವಲ್ಪ ಅನುಕೂಲವಾಗಿ ಕಾಲ ಕಾಲಕ್ಕೆ ಆಡಂಬರ,ಶ್ರೀಮಂತಿಕೆ ಹೆಚ್ಚಾಗಿದೆ ಎನ್ನುವುದು ಸುಳ್ಳಲ್ಲ. ಹಾಗಂತ ಎಲ್ಲಾ ಶ್ರೀಮಂತಿಕೆಯನ್ನು ತಡೆಯುವುದೂ ಕೂಡ ಅಸಾಧ್ಯವೇ.ಬದಲಾವಣೆ ಜಗದ ನಿಯಮ.ಆದರೂ ತುಳುನಾಡಿನಲ್ಲಿ ಏನೇ ಹೆಚ್ಚಾದರೂ,ಏನೇ ಕಡಿಮೆ ಆದರೂ.. ದೈವಗಳಿಗೆ ಸಂಬಂಧಿಸಿದಂತೆ ಆ ಭಯ ಭಕ್ತಿ ಮಾತ್ರ ಎಂದೆಂದಿಗೂ ಹಾಗೇ ಉಳಿಯಲಿ. 

ಏಕೆಂದರೆ ಇಲ್ಲಿಯ ಕಾರಣಿಕ ಪುರುಷರು ಕಷ್ಟದಲ್ಲಿ ಇದ್ದಾಗ ಕಾಲ ಕಾಲಕ್ಕೆ ನಮ್ಮ ಕಣ್ಣೀರು ಒರೆಸುವವರು ಕೂಡ ಹೌದು....ಅದೇ ರೀತಿ ತಪ್ಪಿ ನಡೆದಾಗ ಸಿಕ್ಕಾಪಟ್ಟೆ ಕಣ್ಣೀರು ಸುರಿಸುವಂತೆ ಮಾಡುವವರು ಕೂಡ  ಹೌದು.. ಎನ್ನುವುದು ಅಷ್ಟೇ ಸತ್ಯ..!

.....................................................................................

#ಏನೋ_ಒಂದು 

Ab Pacchu 
Moodubidire

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!