ಕೈ ಮತ್ತು ಬಾಯಿಯನ್ನು ಘಮ್ಮೆನಿಸುವ ಕುಕ್ಕುದ ಚಂಡುರ್ಲಿ..

 





ಕಾಟುಮಾವು ಮರದಲ್ಲಿ ಕಾಯಿಯಾಗಿ ಇದ್ದುಕೊಂಡು,ಸೊನೆ ಸುರಿಸುತ್ತಿರುವಾಗ ಅದಕ್ಕೊಂದು ಬೆಲೆ ಆದರೆ.. ಮರದಲ್ಲಿಯೇ ಹಣ್ಣಾಗಿ ಹಾಗೇ ಗಾಳಿಗೆ ಪಟ ಪಟನೆ ಉದುರಿ,ಕೆಳಗೆ ಬಿದ್ದು ಹೋದ ಮೇಲೆಯೂ ಅದಕ್ಕೊಂದು ಬೇರೆಯೇ ಬೆಲೆ..ಕಮ್ಮಿ ಆದ ಉದಾಹರಣೆಗಳೇ ಇಲ್ಲ.


ಕೆಲವರಿಗೆ ಕಾಯಿ ಮಾವನ್ನು ಜಜ್ಜಿ ಅದರ ಮೇಲೆ ಹಾಗೇ ಮೆಣಸಿನ ಹುಡಿ ಹಾಗೂ ಉಪ್ಪನ್ನು ಉದುರಿಸಿಕೊಂಡು ಹುಳಿ ಮಾವನ್ನು ಸ್ವಲ್ಪ ಖಾರ,ಸ್ವಲ್ಪ ಹುಳಿಯಾಗಿ ತಿನ್ನಲು ಇಷ್ಟ. ಇನ್ನು ಕೆಲವರಿಗೆ ಮಾವಿನಕಾಯಿ ಚಿತ್ರಾನ್ನ ಪಂಚ ಪ್ರಾಣ.ಮಾವಿನಕಾಯಿಯ ಉಪ್ಪಿನಕಾಯಿ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ.ಮಂಗಳೂರಿನಲ್ಲಿ ಆದರೆ ಸೀಸನ್ ನಲ್ಲಿ ಗಂಜಿ ಚಟ್ನಿಗೂ ಮಾವಿನಕಾಯಿ ಚಟ್ನಿಯೇ ಬೇಕು... ಜಾತ್ರೆಯಲ್ಲಿ, ಆಟ(ಯಕ್ಷಗಾನ)ನಡೆಯುವಲ್ಲಿ ವರ್ಷ ಪೂರ್ತಿ ಸಿಗುವ ಚರ್ಮುರಿಗೂ ಹಸಿ ಹಸಿಯಾಗಿ ತುರಿಯಲು ವರ್ಷ ಪೂರ್ತಿಯೂ ಮಾವಿನ ಕಾಯಿಯೇ ಬೇಕು.ಆ ಚರ್ಮುರಿ ಮಾಡುವವರಿಗೆ ವರ್ಷ ಪೂರ್ತಿ ಅದು ಎಲ್ಲಿಂದ ಮಾವಿನಕಾಯಿ ಸಿಗುತ್ತದೋ ದೇವರಿಗೇ ಗೊತ್ತು.ಆದರೆ ಅವರ ಬಳಿ ಹೆಚ್ಚಾಗಿ ಎಲ್ಲಾ ಕಾಲದಲ್ಲೂ ಮಾವಿನಕಾಯಿ ಇದ್ದೇ ಇರುತ್ತದೆ. ಮಾವಿನಕಾಯಿಯ ಹಸಿ ಹಸಿ ತುರಿಯೊಂದು ಚರ್ಮುರಿಗೆ ಬೀಳದಿದ್ದರೆ ಅದೆಂತಹ ಚರ್ಮುರಿ ಅಲ್ವಾ.. ಅದನ್ನು ತುರಿಯುವುದನ್ನು ನೋಡುವುದೇ ಒಂದು ಚಂದ.


ಕಾಟುಮಾವು ಹಣ್ಣಾದಾಗ ಅದಕ್ಕೊಂದು ವಿಶೇಷವಾದ ಗೌರವ, ಮಾರ್ಯಾದೆ, ಮಾನದಿಗೆ.. ನಮ್ಮಲ್ಲಿ ಹಿಂದಿನಿಂದಲೂ ಕೊಡುತ್ತಲೇ ಬಂದಿದ್ದಾರೆ.ನಿಮಗೆ ಎಲ್ಲರಿಗೂ ಗೊತ್ತು ಮಾವು ಹಣ್ಣಾದಾಗ ಅದರಿಂದ ಹಲವಾರು ಖಾದ್ಯಗಳನ್ನು ಮಾಡಬಹುದು. ಅದರಲ್ಲಿ ಇಂದು ನಾನು ನಿಮಗೆ ತುಳುನಾಡಿನ ಒಂದು ಬಹಳ ಹಳೆಯ, ಅಷ್ಟೇ ಸಾಂಪ್ರದಾಯಿಕ ಹಾಗೂ ಎಲ್ಲರಿಗೂ ತುಂಬಾನೇ ಇಷ್ಟ ಆಗುವ ಒಂದು ಅಡುಗೆಯ  ಬಗ್ಗೆಯೇ  ಹೇಳ್ತೇನೆ. ಅದುವೇ ಕುಕ್ಕು ಚಂಡುರ್ಲಿ..ನಮ್ಮಲ್ಲಿ ಇದು ತುಂಬಾ ಅಂದರೆ ತುಂಬಾನೇ ಫೇಮಸ್.


#ಕುಕ್ಕು_ಚಂಡುರ್ಲಿ_ಮಾಡುವ_ವಿಧಾನ..


ಇದು ಮಾಡುವುದು ಕೂಡ ಬಹಳ ಸುಲಭ. ಇದಕ್ಕೆ ಬೇಯಿಸುವ  ಅವಶ್ಯಕತೆ ಅಥವಾ ಗ್ಯಾಸ್ ಸ್ಟೌವ್  ಬಳಕೆಯ ಅಗತ್ಯತೆ ಇಲ್ಲ.ಮೊದಲಿಗೆ ಐದಾರು ಕಾಟು  ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ಸುಲಿದು ಒಂದು ಪಾತ್ರೆಗೆ ಗೊರಟು ಸಹಿತ ಹಾಕಿ ಚೆನ್ನಾಗಿ ಕಿವುಚಿ ಇಟ್ಟುಕೊಳ್ಳಿ.ಬೇಕಾದರೆ ಸಿಪ್ಪೆಯಲ್ಲಿರುವ ಮಾವಿನ ರಸವನ್ನು ಕೂಡ ಚೆನ್ನಾಗಿ ಹಿಂಡಿಕೊಳ್ಳಿ.ಆದರೆ ಇದಕ್ಕೆ ಸಿಪ್ಪೆ ಬೇಕಾಗಿಲ್ಲ. ಗೊರಟು ಮಾತ್ರ ಬೇಕೆ ಬೇಕು.. ಗೊರಟು ಚೀಪಿ ಮಾವು ತಿನ್ನದಿದ್ದರೆ ಅದೆಂತಹ ಮಾವಿನ ಖಾದ್ಯ.


ನಂತರ ಮಿಕ್ಸರ್ ನಲ್ಲಿ ಒಂದು ಕಾಲು ಕಪ್ ತೆಂಗಿನತುರಿ(ಜಾಸ್ತಿ ಬೇಡ),ನಾಲ್ಕು ಬ್ಯಾಡಗಿ ಮೆಣಸು(ಖಾರ ಜಾಸ್ತಿ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳಿ),ಒಂದು ಎಸಳು ಬೆಳ್ಳುಳ್ಳಿ, ಒಂದು ಸ್ಪೂನ್ ಸಾಸಿವೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.


ನಂತರ ಈ ರುಬ್ಬಿದ ಮಿಶ್ರಣವನ್ನು ಕಿವುಚಿ ಇಟ್ಟಿರುವ ಮಾವಿನ ಹಣ್ಣಿಗೆ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಸಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಿಟ್ಟರೆ... ರುಚಿ ರುಚಿಯಾದ ಕುಕ್ಕು ಚಂಡುರ್ಲಿ ಸವಿಯಲು ಸಿದ್ಧ.ಇದು ಎಷ್ಟೊಂದು ಪರಿಮಳ.. ಎಷ್ಟೊಂದು ರುಚಿ ಎಂದರೆ...ಆಹಾ..ಎನ್ನುತ್ತಾ ಗೊರಟೆಯನ್ನು ಚೀಪಿಕೊಂಡು.. ಅದು ಮುಗಿದ ಮೇಲೆ  ಕೈ ಬೆರಳುಗಳನ್ನು ಕೂಡ ಚೀಪಿ ಚೀಪಿಯೇ ಎರಡು ಬಟ್ಟಲು ಗಂಜಿ ಊಟ ಮಾಡಿಸಿ  ಬಿಡಿಸುತ್ತದೆ ಈ ನಮ್ಮ ಕುಕ್ಕು ಚಂಡುರ್ಲಿ.


ಒಂದೊಳ್ಳೆಯ ಉಲ್ಲಾಸದ ಊಟದ ಮುಗಿದ ನಂತರವೂ ಕೈ ಬಾಯಿ ಅದೆಷ್ಟು ಘಮ್ಮೆನ್ನುತ್ತದೆ ಎಂದರೆ ಕಾಟು ಮಾವಿನಮರ ಹಣ್ಣು ಉದುರಿಸುವವರೆಗೂ ದಿನಾಲೂ ಬರೀ ಇದನ್ನೇ ತಿನ್ನುವ ಎಂದೇ ಮನಸ್ಸಾಗುತ್ತದೆ.ಮನೆಯಲ್ಲಿ ಅಮ್ಮ ಅಂತು ಏನಿದ್ದರೂ ಏನಿಲ್ಲದಿದ್ದರೂ ಕಾಟು ಮಾವಿನ ಖಾದ್ಯಗಳಿಗೆ ಎಂದಿಗೂ ನೋ ಎಂದು  ಹೇಳದೇ ಅನುದಿನವೂ ಕಾಟು ಮಾವಿಗೆ ಜೈ ಎನ್ನುವವಳೇ.. ಏಕೆಂದರೆ ಅವಳ ಸುಖ ಎಲ್ಲವೂ ಇರುವುದು ಬರೀ ಮಾವಿನ ಖಾದ್ಯದಲ್ಲಿಯೇ.


ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ ಹಾಗು ಕೊನೆಯಲ್ಲಿ ತೆಂಗಿನ ಎಣ್ಣೆಯ ಒಗ್ಗರಣೆ ಕೊಟ್ಟು ಚಂದದ ಅಲಂಕಾರ ಮಾಡಿ ಬಿಟ್ಟರೆ ಆವಾಗ ಅದು ಕುಕ್ಕು ಸಾಸಿಮಿ(ಸಾಸಿವೆ) ಎಂಬ ಮತ್ತೊಂದು ಸಾಂಪ್ರದಾಯಿಕ ಖಾದ್ಯ ಆಗಿ ಬಿಡುತ್ತದೆ.ಹೆಚ್ಚು ಕಡಿಮೆ ಎರಡೂ ಒಂದೇ..


ಸದ್ಯಕ್ಕೆ ಕಾಟು ಮಾವುಗಳು ಊರಿನ ಮರದಲ್ಲಿಯೂ ಕೂಡ ತುಂಬಾನೇ ಕಡಿಮೆ ಆಗಿ... ಮಾರ್ಕೆಟ್ ನಲ್ಲಿ ಕೆಜಿಗೆ ನೂರ ಐವತ್ತು.. ನೂರ ಎಂಬತ್ತು ರೂಪಾಯಿವರೆಗೆ ಬೆಲೆ ಇದೆ. ಕಾಟು ಮಾವಿನ ಮೇಲೆ ಪ್ರೀತಿ ಉಳ್ಳವರು, ಸಿಟಿಯಲ್ಲಿ ಇದ್ದರೂ ಕೂಡ... ರೇಟು ಎಷ್ಟೇ ಆಗಲಿ ಒಂದಷ್ಟು ಕಾಟು ಮಾವನ್ನು ತೊಟ್ಟೆಗಿಳಿಸಿಕೊಂಡು ಮನೆಗೆ ತಗೊಂಡು ಹೋಗಲು ಮರೆಯುವುದೇ ಇಲ್ಲ..ಮಾವು ಪ್ರೀತಿ ಅಂದರೆ ಅದೇ ಅಲ್ಲವೇ.. ಬಿಟ್ಟು ಬಿಡದ ಮಾಯೆ.


ಏನೇ ಹೇಳಿ ಮಾವಿನ ಸೀಸನ್ ನಲ್ಲಿ...ಕಾಟು ಮಾವಿನ ಉಪ್ಪು ಮುಂಚಿ, ಚಂಡುರ್ಲಿ, ಬಿಸಿ ಬಿಸಿ ಮಾವಿನ ಸಾರು,ಸಿಹಿ ಸಿಹಿ ರಸಾಯನ ಮಾಡಿ ತಿನ್ನದಿದ್ದರೆ ಅದು ನಾವು ಮಾವಿಗೆ ಮಾಡುವ ದ್ರೋಹ ಎಂದೇ ನಮ್ಮವರು ತಿಳಿದುಕೊಂಡು ಬಿಟ್ಟಿದ್ದಾರೆ. ನನಗಂತು ಅಂತಹ ದ್ರೋಹ ಎಸಗಲು ಎಂದಿಗೂ ಇಷ್ಟವಿಲ್ಲ...


ಹಾಗಾಗಿ ಸೀಸನ್ ನಲ್ಲಿ ಕೈ ಬಾಯಿ ಸಿಹಿ ಮಾಡಿಕೊಂಡು ಗೊರಟೆ ಚೀಪುವುದನ್ನು ಹಾಗೇ ಇಲ್ಲಿಯವರೆಗೆ ಮುಂದುವರಿಸಿಕೊಂಡು  ಬಂದಿದ್ದೇನೆ.ಅಂದ ಹಾಗೆ ನಿಮ್ಮೂರಿನ ಕಾಟು ಮಾವಿನ  ಮರದಡಿಯಲ್ಲಿಯೂ ಈಗಾಗಲೇ ಒಂದಷ್ಟು ಹಣ್ಣು ಬಿದ್ದಿರುತ್ತದೆ.ನೀವೂ ಕೂಡ ಕುಕ್ಕು ಚಂಡುರ್ಲಿಯನ್ನು ಮಾಡಿ ಕೈ ಬಾಯಿಯನ್ನು ಹಾಗೇ  ಘಮ್ಮೆನಿಸಿ ಬಿಡಿ..


.....................................................................................


#ಮಾ_ಅಂದರೆ_ಮಾವು


ab pacchu


moodubidire



Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!