ದೇವರು ಐಸ್‌ಕ್ಯಾಂಡಿ ಕೊಡಿಸಿದ್ದ..!
ನನಗೆ ಅಮ್ಮ ಇರಲಿಲ್ಲ.
ಎಲ್ಲರಂತೆ ಹುಟ್ಟುವಾಗ ಇದ್ದರು,ಆಮೇಲೆ ಇರಲಿಲ್ಲ.
ಅವಳಿಗೆನೋ ಅವಸರ,ಹಾಗಾಗಿ ನನ್ನನ್ನು ಅಪ್ಪನನ್ನು ಇಬ್ಬರನ್ನೂ ಬಿಟ್ಟು ಹಾಗೇ ಒಬ್ಬಳೇ ನಮ್ಮ ಬಾಳಿನಿಂದ ಎದ್ದು ಹೋಗಿದ್ದಳು.
ಆಗ ನಾನು ಪುಟ್ಟ ಹುಡುಗಿ.ಅಮ್ಮ ಎಂದರೆ ನನಗೆ ಯಾವತ್ತೂ ಅಸ್ಪಷ್ಟ ಚಿತ್ರವೇ.
ಅಮ್ಮ ಎಂಬ ಎರಡಕ್ಷರದಲ್ಲಿ.. ದೇವರು ಇದ್ದಾನೆ,ಅವಳೇ ಮೊದಲ ಗುರು,ಜೀವ - ಜೀವನ ನೀಡುವ ಜನನಿ.. ಎಂಬ ಎಲ್ಲವನ್ನು ಎಲ್ಲರಂತೆ ನಾನೂ ಕೇಳಿದ್ದೇನೆ,ಆದರೆ ಅವಳದ್ದೊಂದು ದಿವ್ಯ ಸಾಂಗತ್ಯ,ಸಾನಿಧ್ಯ ನನಗೆ ಎಂದಿಗೂ ದೊರೆತೇ ಇಲ್ಲ.
ನನಗೆ ಅಮ್ಮ ಇರಲಿಲ್ಲ ಅಷ್ಟೇ.. ಆದರೆ ನಾನು ಜೀವನದಲ್ಲಿ ಪ್ರೀತಿಯಿಂದ,ವಾತ್ಸಲ್ಯದಿಂದ,ಮಮತೆಯಿಂದ ಎಂದೂ ವಂಚಿತಳಾದವಳಲ್ಲ.
ಚಿಕ್ಕಂದಿನಲ್ಲಿ ಬಡತನವಲ್ಲ, ಕಡು ಬಡತನ ಇದ್ದದ್ದು ನಿಜವೇ,ಆದರೂ ನನ್ನ ಬಳಿ ಅಪ್ಪ ಎನ್ನುವವ ಒಬ್ಬ ಜಾದುಗಾರ ಇದ್ದ.
ಹಾಗಾಗಿ ನಾನು ಹುಟ್ಟುವಾಗಲೇ ಅದೆಷ್ಟೋ ಸಿರಿವಂತೆ.ಯಾಕೆಂದರೆ ಅಂತಹ ಅಪ್ಪ ಸುತ್ತ ಮುತ್ತ ಹತ್ತು ಹಳ್ಳಿಯಲ್ಲೂ ಹುಡುಕಾಡಿದರೂ ಸಿಗುವುದಿಲ್ಲ.
ನನ್ನ ಪಾಲಿನ ಕೈಗೆಟುಕುವ ನೀಲಿ ಆಕಾಶ,ನನ್ನ ಪಾಲಿನ ಖಾಲಿಯಾಗದ ಕರುಣೆಯ ಕಡಲು,ಪ್ರತ್ಯಕ್ಷವಾಗುವ ದೇವರು ಎಲ್ಲವೂ ನನ್ನ ಅಪ್ಪನೇ ಆಗಿದ್ದ.
ಬಚ್ಚಲು ಮನೆಯಲ್ಲಿ ತಾಯಿಯರಂತೆ ತನ್ನ ಕಾಲ ಮೇಲೆ ನನ್ನನ್ನು ಜೋಪಾನವಾಗಿ ಮಲಗಿಸಿಕೊಂಡು,ಹಂಡೆಯಲ್ಲಿ ಬಿಸಿ ನೀರು ಕಾಯಿಸಿಕೊಂಡು, ಒಂದೊಂದೇ ಚೊಂಬು ಹಬೆಯೇಳುವ ನೀರಲ್ಲಿ ನನಗೆ ಬೆಚ್ಚನೆಯ ಸ್ನಾನ ಮಾಡಿಸಿದ್ದು ನನ್ನ ಅಪ್ಪ.
ಚೆನ್ನಾಗಿ ಧೂಪ ಹಿಡಿದು,ಮೈ ಮೇಲೆ ಬೆಳ್ಳಗೆ ತೆಳ್ಳಗೆ ಪೌಡರ್ ಉದುರಿಸಿ,ತನಗೆ ತಿಳಿದಂತೆ ಶ್ರದ್ಧೆಯಿಂದ ಕಪ್ಪು ಕಾಡಿಗೆ ಹಚ್ಚಿ,ತಿದ್ದಿ ತೀಡಿ,ಕೆನ್ನೆಯ ಮೇಲೊಂದು ದೃಷ್ಟಿ ಬೊಟ್ಟು ಇಟ್ಟು,ಸ್ವಚ್ಛ ಬಟ್ಟೆಯಿಂದ ನನ್ನನ್ನು ಗಟ್ಟಿಯಾಗಿ ಕಟ್ಟಿ,ಮನೆಯ ಮೇಲಿನ ಪಕ್ಕಾಸಿಗೆ ಕಟ್ಟಿದ ಅವನದೊಂದು ದೊಡ್ಡ ಪಂಚೆಯ ಜೋಕಾಲಿಯಂತಹ ಬಟ್ಟೆಯ ತೊಟ್ಟಿಲಿನಲ್ಲಿ ನನ್ನನ್ನು ಇಟ್ಟು, ಅದನ್ನು ಹಾಗೇ ಕೈಯಿಂದ ತೂಗಿ,ತಾನು ಮಲಗದೇ ನನ್ನನ್ನು ಲಾಲಿ ಹಾಡಿ ಮಲಗಿಸಿದ್ದು ಕೂಡ ನನ್ನ ಅಪ್ಪನೇ.
ನನ್ನ ಅಪ್ಪ ಅಂತಹ ಅಧ್ಭುತ ಹಾಡುಗಾರ ಏನಲ್ಲ.ಆದರೂ ತನ್ಮಯತೆಯಿಂದ ಹಾಡುತ್ತಿದ್ದ,ಕೇವಲ ನನಗಾಗಿ.
ರಾತ್ರಿಯೆಲ್ಲಾ ತಾನು ನಿದ್ದೆ ಬಿಟ್ಟು,ನನ್ನನ್ನು ನಿದ್ದೆ ಮಾಡಿಸುತ್ತಿದ್ದ.
ನಾನು ಅಪ್ಪನನ್ನು ಬಿಗಿಯಾಗಿ ಹಿಡಿದುಕೊಂಡು ಅವನ ಬಿಸಿ ಅಪ್ಪುಗೆಯ ಕಾವಿನಲ್ಲಿ ಬೆಚ್ಚಗೆ ಮಲಗಿ ನಿದ್ರಿಸುತ್ತಿದ್ದೆ. ನಾನು ಮರಿ,ಅವನು ಹಕ್ಕಿ.
ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೂ ಚೆನ್ನಾಗಿ ಓದಿ ಮುಂದೆ ದೊಡ್ಡವರಾಗಿ ಏನೇನೋ ಆಗಬೇಕು ಎಂಬ ಆಸೆ ಇರುತ್ತದೆ.ಅದೇ ರೀತಿ ನನಗೂ ಇತ್ತು.
ಅಪ್ಪ ಕೂಡ ಒಂದು ದಿನ ನನ್ನಲ್ಲಿ ಕೇಳಿಯೇ ಬಿಟ್ಟ.. ಮಗಳೇ ದೊಡ್ಡವಳಾಗಿ ಏನು ಆಗ್ತೀಯ..? ಎಂದು.
ಅಪ್ಪ ನಾನು ಡಾಕ್ಟರ್ ಆಗ್ತೇನೆ... ಎಂದು ಮುಗ್ಧವಾಗಿ ಹೇಳಿ ಮುಗಿಸಿದ್ದೆ ನಾನು.
ಅಪ್ಪ ಕೂಡ ಹಾಗೇ ಮುಗ್ದವಾಗಿ ನಗುತ್ತಾ ನನ್ನ ಗಲ್ಲ ಸವರಿ,ಹಣೆಗೊಂದು ಬೆಚ್ಚನೆಯ ಮುತ್ತು ಕೊಟ್ಟು.. ಆಯ್ತು ಕಣಮ್ಮಾ... ನೀನು ಡಾಕ್ಟರೇ ಆಗ್ತೀಯಾ...ಮತ್ತು ನೋಡ್ತಾ ಇರು ನಿನ್ನನ್ನು ಡಾಕ್ಟರ್ ನಾನು ಮಾಡಿಸ್ತೇನೆ ಎಂದು ಹೇಳಿ... ಎಂದಿನಂತೆ ತನ್ನ ಹರಿದ ಬಟ್ಟೆ ಹಾಕಿಕೊಂಡು,ಕೈಯಲ್ಲಿ ಬುತ್ತಿ ಹಿಡಿದು,ಮಂಡೆಗೊಂದು ಬೈರಾಸು ಕಟ್ಟಿಕೊಂಡು,ಬರಿಗಾಲಲ್ಲಿ ಕೆಲಸಕ್ಕೆ ಎದ್ದು ಹೋಗಿದ್ದ!!
ಅಪ್ಪ ದಿನವಿಡೀ ಏನೂ ಕೆಲಸ ಮಾಡುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ.
ಒಂದು ದಿನ ಕೆಲಸಕ್ಕೆ ಹೋಗಿದ್ದ ಅಪ್ಪನನ್ನೇ ನಾನು ಹಿಂಬಾಲಿಸಿದೆ.
ಅಪ್ಪ ಒಂದು ಕಡೆ ಗಾರೆ ಕೆಲಸ ಮಾಡುತ್ತಿದ್ದ.
ಅಪ್ಪನನ್ನೇ ಹೋಗಿ ಕೇಳಿದೆ.. ಅಪ್ಪ ಏನು ಮಾಡುತ್ತಿದ್ದೀಯಾ ಇಲ್ಲಿ ನೀನು.. ಎಂದು.
ಕೆಲಸ ಮಾಡ್ತಾ ಇದ್ದೇನೆ ಕಣಮ್ಮಾ... ಒಂದು ದಿನ ನೀನು ದೊಡ್ಡ ಡಾಕ್ಟರ್ ಆಗಬೇಕಾದರೆ.. ಈಗಲೇ ನಾನು ತುಂಬಾ ದುಡ್ಡು ಕಾಸು ಎಲ್ಲ ಒಟ್ಟು ಮಾಡ್ಬೇಕು ಅಲ್ವಾ.. ಅದಕ್ಕಾಗಿ ಈಗಿಂದಲೇ ತುಂಬಾ ಕೆಲಸ ಮಾಡ್ಬೇಕು ನಾನು... ಎಂದು ಅಮಾಯಕನಂತೆ ಹೇಳಿ ಮುಗಿಸಿದ್ದ ನನ್ನ ಅಪ್ಪ.
ನಂತರ ಅಲ್ಲೇ ಸೈಕಲ್ ನಲ್ಲಿ ಹೋಗುತ್ತಿದ್ದ ತಣ್ಣನೆಯ ಐಸ್ ಕ್ಯಾಂಡಿ ಒಂದನ್ನು ಕೊಡಿಸಿ.. ಇನ್ನು ಮುಂದೆ ಯಾವತ್ತೂ ಕೆಲಸ ಮಾಡುವ ಜಾಗಕ್ಕೆಲ್ಲ ಬರಬೇಡ ಮಗಳೇ,ತುಂಬಾ ದೂಳು ಇರುತ್ತೆ.. ನಿನ್ನ ಆರೋಗ್ಯ ಹಾಳಾಗುತ್ತೆ ...ಎಂದು ನೆತ್ತಿ ಸವರಿದ್ದ.
ಮತ್ತೆ ಅಪ್ಪ ನಿನಗೇನೂ ಆಗಲ್ವಾ... ಎಂದು ಐಸ್ ಕ್ಯಾಂಡಿ ಚೀಪುತ್ತಲೇ ಕೇಳಿದ್ದೆ ನಾನು.
ನಾನು ನಿನಗಿಂತ ತುಂಬಾ ದೊಡ್ಡವನಲ್ವಾ.. ಹಾಗಾಗಿ ನನಗೇನೂ ಆಗದು.. ಎಂದು ನಗು ನಗುತ್ತಲೇ ಹೇಳಿ ನನ್ನನ್ನು ವಾಪಸ್ ಕಳುಹಿಸಿದ್ದ ನನ್ನ ಅಪ್ಪ.
ಆ ನಂತರ ಗೊತ್ತಾಯಿತು ಅಪ್ಪ ಗಾರೆ ಕೆಲಸ ಒಂದೇ ಅಲ್ಲ... ಯಾವುದೇ ಕೆಲಸ ಸಿಕ್ಕರೂ ಮಾಡುತ್ತಿದ್ದ ಎಂದು.ಹೌದು ನನಗಾಗಿ ಹಾಗೂ ನನ್ನನ್ನು ಡಾಕ್ಟರ್ ಮಾಡುವ ಸಲುವಾಗಿ.
ತೆಂಗಿನ ತೋಟಕ್ಕೆ ಬುಡ ಬಿಡಿಸಲು,ಗೊಬ್ಬರ ಹೊರಲು ಹೋಗುತ್ತಿದ್ದ,ಮಲ್ಪೆಯ ಪಡ್ಡಾಯಿ(ಕಡಲ ತೀರದಲ್ಲಿ)ಯಲ್ಲಿ ಚಿಕ್ಕ ಕಣ್ಣಿನ ಬಲೆಯಿಂದ ದೊಡ್ಡ ಮೀನುಗಳನ್ನು ಬಿಡಿಸುವ ಕೆಲಸ ಮಾಡುತ್ತಿದ್ದ,ತನ್ನ ಜೀವನದಲ್ಲಿ ಬಣ್ಣಗಳೇ ಇಲ್ಲದಿದ್ದರೂ ಕೆಲವೊಮ್ಮೆ ಆತ ಇತರರ ಗೋಡೆಗೆ ಬಣ್ಣ ಬಳಿಯುವ ಪೈಂಟರ್, ಇನ್ನೂ ಕೆಲವೊಮ್ಮೆ ಅಡುಗೆ ಭಟ್ಟರಿಗೆ ಸಹಾಯಕ,ಇನ್ನು ಕೆಲವೊಮ್ಮೆ ಮದುವೆ ಮನೆಯಲ್ಲಿ ಶ್ಯಾಮಿಯಾನ ಹಾಕುವವ... ಅಪ್ಪ ಎಲ್ಲವೂ ಮಾಡುತ್ತಿದ್ದ.. ನನಗಾಗಿ.
ನವರಾತ್ರಿಗೆ ಹುಲಿವೇಷ ಹಾಕಿ ಉಡುಪಿ ಕೃಷ್ಣ ಮಠದ ಎದುರು ಮೈ ಮರೆತು ಕುಣಿತಿದ್ದ ನನ್ನ ಅಪ್ಪ,ಆ ನಂತರ ಎಲ್ಲರ ಮನೆ ಮನೆಗೂ ಕೂಡ ಹೋಗಿ ಅಲ್ಲೂ ಜಿಗಿದು ನೆಗೆದು ಹಾರಿ ಕುಣಿದು ಕುಪ್ಪಳಿಸುತ್ತಿದ್ದ.
ಕುಣಿದು ದಣಿದು ಮನೆಗೆ ಸುಸ್ತಾಗಿ ಬಂದಾಗ.. ಅಪ್ಪ ಹುಲಿ ಹೇಗಿರುತ್ತೆ ಎಂದು ಕೇಳಿದಾಗ, ಅಪ್ಪ ಮನೆಯಲ್ಲಿ ಮತ್ತೊಮ್ಮೆ ಹುಲಿಯಂತೆ ಕುಣಿದು ತೋರಿಸುತ್ತಿದ್ದ.. ನನಗಾಗಿ.
ನನ್ನ ಅಪ್ಪ ಹಣ ಸಂಪಾದನೆಗಾಗಿ ಹುಲಿ ವೇಷ ಅಷ್ಟೇ ಹಾಕುತ್ತಿದ್ದ... ಆದರೆ ಅವನೊಳಗೆ ಇದ್ದದ್ದು ಬರೀ ಜಿಂಕೆ, ಹಸು,ಮೊಲಗಳಂತಹ ಸಾದು ಪ್ರಾಣಿಗಳೇ.ಅವ ಕಟು ಹೃದಯದವ ಅಲ್ಲ.ಕಟುಕನಂತು ಮೊದಲೇ ಅಲ್ಲ.
ಹೆಗಲ ಮೇಲೆ ಕುಳ್ಳಿರಿಸಿ ಜಾತ್ರೆಗೆ ಕರೆದು ಕೊಂಡು ಹೋಗುತ್ತಿದ್ದ ನನ್ನ ಅಪ್ಪ... ತೇರಿನ ಮೇಲಿರುವ ಕೃಷ್ಣನನ್ನು ಅದೆಷ್ಟೋ ಸಲ ಬಹಳ ಹತ್ತಿರದಿಂದ ತೋರಿಸಿದ್ದ.ನಾನು ಶ್ರದ್ಧೆಯಿಂದ ದೇವರನ್ನು ಕೈ ಮುಗಿದುಕೊಂಡು ನೋಡುತ್ತಿದ್ದರೆ.. ಅವನು ಹೆಗಲ ಮೇಲೆ ಕುಳಿತುಕೊಂಡ ನನ್ನ ಕಾಲುಗಳನ್ನು ಭದ್ರವಾಗಿ ಹಿಡಿದು ಕೊಂಡು ಆ ಜನರ ಗುಂಪಿನಲ್ಲಿ ಅತೀ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತಿದ್ದ.
ಅವನು ದೇವರನ್ನು ನೋಡಲೇ ಇಲ್ಲ.ಬಹುಶಃ ಮಕ್ಕಳಲ್ಲೇ ದೇವರು ಇರುತ್ತಾನೆ ಎಂದು ಹೇಳುತ್ತಾರೆ ಅಲ್ವಾ.. ಹಾಗಾಗಿ ಅವನ ಪಾಲಿನ ಮಗಳು,ಜೀವನ,ದೇವರು ಎಲ್ಲವೂ ನಾನೇ ಆಗಿದ್ದಿರಬೇಕು.ನನಗೂ ತೇರಿನ ಮೇಲೆ ಇರುವವ ಮಾತ್ರ ದೇವರು ಅಲ್ಲ,ನನ್ನನ್ನು ಹೊತ್ತುಕೊಂಡು ಬಡ ಫಕೀರನಂತೆ ಆ ಜಾತ್ರೆಯ ತುಂಬೆಲ್ಲ ಬರಿಗಾಲಲ್ಲಿ ತಿರುಗಾಡಿದವ,ಜೀವನದ ಪ್ರತೀ ಕ್ಷಣವೂ ಭದ್ರವಾಗಿ ನನ್ನ ಕೈ ಹಿಡಿದು ನಡೆಸಿದವ ಕೂಡ ಒಬ್ಬ ದೊಡ್ಡ ದೇವರೇ ಎಂದು ನನಗೆ ಆವತ್ತು,ಆ ಕ್ಷಣ ನಿಜವಾಗಿಯೂ ಗೊತ್ತಿರಲಿಲ್ಲ!!
ಅಪ್ಪ ಹೊಟ್ಟೆ ತುಂಬಾ ಊಟ ಮಾಡಿದ್ದು ನಾನು ನೋಡಿಯೇ ಇಲ್ಲ.ಆದರೆ ನಾನು ಖುಷಿಯಿಂದ ನಕ್ಕಾಗಲೆಲ್ಲ.. ಅವನು ಕೂಡ ಹೊಟ್ಟೆ ತುಂಬಿದಂತೆ ಸಮೃದ್ಧವಾಗಿ ನಕ್ಕು ಹಾಗೇ ಖಾಲಿ ಹೊಟ್ಟೆಯಲ್ಲಿಯೇ ಮಲಗಿ ಬಿಡುತ್ತಿದ್ದ.
ದೀಪಾವಳಿಗೆ ಅಪ್ಪ ಸುರುಸುರು ಕಡ್ಡಿ ತರುತ್ತಿದ್ದ... ನಾನು ಸುರುಸುರು ಕಡ್ಡಿಗೆ ಬೆಂಕಿ ಹಚ್ಚಿ ಮನೆಯ ಅಂಗಳದಲ್ಲಿ ಗಿರ ಗಿರ ಎಂದು ತಿರುಗಿಸಿದಾಗ ನನಗೆ ಕಿಡಿ ಹಾರದಂತೆ ಅಪ್ಪ ಬಹಳ ಜಾಗ್ರತೆ ವಹಿಸುತ್ತಿದ್ದ.ದೀಪಾವಳಿ ಕೇವಲ ನನಗೆ ಮಾತ್ರ,ಅಪ್ಪನಿಗಲ್ಲ. ಹಾಗಂತ ಅವನ ಬಾಳಿನಲ್ಲಿ ದೀಪಾವಳಿ ಇರಲಿಲ್ಲ ಎಂದು ಅಲ್ಲ, ನಾನು ಅವನ ತಮಾಷೆಗೆ ಬಿದ್ದು ಬಿದ್ದು ನಕ್ಕ ದಿನವೆಲ್ಲವೂ ಅವನ ಪಾಲಿಗೆ ದೀಪಾವಳಿ, ಸಂಕ್ರಾಂತಿ, ಯುಗಾದಿ, ಹೋಳಿ ಎಲ್ಲವೂ ಆಗಿತ್ತು. ಏಕೆಂದರೆ ಅವನ ಸಂತೋಷ ಇದ್ದದ್ದೇ ಹಬ್ಬಗಳಲ್ಲಿ ಅಲ್ಲ,ಕೇವಲ ನನ್ನ ಖುಷಿಯಲ್ಲಿ.
ಮನೆಯ ಎದುರೆ ತೆಂಗಿನ ಮರವೊಂದು ಇತ್ತು.ಅದರ ಕಾಯಿಗಳು ಅಂಗಳಕ್ಕೆ ಬೀಳದೆ ನೇರವಾಗಿ ನಮ್ಮ ಹೆಂಚಿನ ಮನೆಯ ಮೇಲೆಯೇ ಬೀಳುತ್ತಿತ್ತು.ನಮ್ಮದು ಹಳೆಯ ಮನೆ,ಹಾಗಾಗಿ ಹೆಂಚುಗಳು ಕೂಡ ಹಳೆಯದ್ದೇ.ತಿಂಗಳಿಗೆ ತೆಂಗಿನ ಕಾಯಿ ಬಿದ್ದು ಒಡೆದು ಹೋಗುತ್ತಿದ್ದ ಹೆಂಚಿಗೆ ಲೆಕ್ಕವೇ ಇರಲಿಲ್ಲ.
ಬೇಸಿಗೆ ಕಾಲದಲ್ಲಿ ಅಂತಹ ತೊಂದರೆ ಏನೂ ಆಗುತ್ತಿರಲಿಲ್ಲ. ಅಪ್ಪ ಆವಾಗ ಆ ಹೆಂಚುಗಳನ್ನು ಬದಲಾಯಿಸಲು ಕೂಡ ಹೋಗುತ್ತಿರಲಿಲ್ಲ,ಬದಲಿಗೆ ಮನೆಯೊಳಗೆ ಮಲಗಿಕೊಂಡೇ ಹೆಂಚು ತುಂಡಾಗಿ ಹೋಗಿ ಕಾಣುತ್ತಿದ್ದ ಮೇಲಿನ ಶುಭ್ರ ಆಕಾಶದ ಚಂದಿರ ನಕ್ಷತ್ರಗಳನ್ನು ನನಗೆ ಕೈ ತೋರಿಸಿ ಕಥೆ ಹೇಳುತ್ತಿದ್ದ. ಎಲ್ಲರಿಗೂ ಚಂದಿರನಲ್ಲಿ,ನಕ್ಷತ್ರಗಳಲ್ಲಿ ಸತ್ತವರು ಕಾಣಿಸುತ್ತಾರೆ ಅಂತೆ.. ಆದರೆ ನನಗೆ ಅವುಗಳಲ್ಲಿ ನನ್ನ ಅಮ್ಮನ ಮುದ್ದು ಮುಖ ಕಾಣಿಸಿದ ಯಾವುದೇ ನೆನಪುಗಳಿಲ್ಲ.. ಅಲ್ಲಿ ಬರೀ ನನ್ನ ಮುಗ್ಧ ಅಪ್ಪ ಇದ್ದರು.
ಅಪ್ಪನ ಕಥೆಗಳಲ್ಲಿ ರಾಜ ರಾಣಿ ಮಂತ್ರಿ ಆನೆ ಕುದುರೆ ಎಲ್ಲರೂ ಇರುತ್ತಿದ್ದರು. ಆದರೆ ನಾನು ಕಲ್ಪಿಸಿಕೊಳ್ಳುತ್ತಿದ್ದ ಅಪ್ಪನ ಕಥೆಯ ಒಳ್ಳೆಯ ರಾಜ, ಜನಾನುರಾಗಿ ಚಕ್ರವರ್ತಿ ಸಾಮ್ರಾಟ ಎಲ್ಲರೂ ಅಪ್ಪನಂತೆಯೇ ಇದ್ದರು. ಹೌದು ಕೇವಲ ನನ್ನ ಅಪ್ಪನಂತೆ ಮಾತ್ರ. ನನಗೆ ಒಳ್ಳೆಯದು ಎಂದು ಅನ್ನಿಸುವಂತಹ ಯಾವುದಕ್ಕೂ ಅಪ್ಪನನ್ನು ಹೊರತು ಬೇರೆ ಯಾವುದನ್ನೂ ನಾನು ಎಂದಿಗೂ ಕಲ್ಪಿಸಿ ಕೊಂಡವಳೇ ಅಲ್ಲ. ಏಕೆಂದರೆ ನನಗೆ ಒಳ್ಳೆಯದು ಎಂಬುದಕ್ಕೆ ಅಪ್ಪ ಎನ್ನುವ ಸಮಾನಾರ್ಥಕ ಪದ ಬಿಟ್ಟರೆ ಬೇರೆ ಯಾವ ಪದವೂ ಗೊತ್ತಿರಲಿಲ್ಲ.
ಮಳೆಗಾಲದಲ್ಲಿ ತುಂಡಾದ ಹೆಂಚುಗಳ ಜಾಗಕ್ಕೆ ಅಪ್ಪ ಅವರಿವರ ಬಳಿ ಕೇಳಿ ತುಂಡಾಗದ ಹಳೆಯ ಹೆಂಚುಗಳನ್ನು ನಮ್ಮ ಮನೆಯ ಸೂರಿಗೆ ಹಾಸುತ್ತಿದ್ದ.ಕೆಲವೊಮ್ಮೆ ಹೆಂಚು ಒಡೆದು ಹೋದ ಜಾಗಗಳಿಂದ ಧಾರಾಕಾರವಾಗಿ ನೀರು ಸೋರುತ್ತಿತ್ತು. ನಾನು ಚಿಕ್ಕದೊಂದು ಬಿದಿರಿನ ಏಣಿಯನ್ನು ನನ್ನ ಪುಟ್ಟ ಕೈಗಳಲ್ಲಿ ಮೇಲಿರುವ ಅಪ್ಪ ಬೀಳಬಾರದೆಂದು ಕೆಳಗಿನಿಂದಲೇ ಭದ್ರವಾಗಿ ಹಿಡಿದುಕೊಂಡರೆ.. ಅಪ್ಪ ನಿಧಾನವಾಗಿ ಆ ಏಣಿಯೇರಿ ಹೆಂಚುಗಳನ್ನು ಸರಿ ಮಾಡಿ ನೀರು ಬೀಳುವುದನ್ನು ನಿಲ್ಲಿಸುತ್ತಿದ್ದ.
ಆದರೆ ರಾತ್ರಿಯ ಜೋರು ಮಳೆ ಗಾಳಿಗೆ ಇಟ್ಟ ಹೆಂಚು ಸರಿಯಾಗಿ ಕುಳಿತುಕೊಳ್ಳದೆ ಇದ್ದರೆ ಅಥವಾ ಬೇರೆ ಕಡೆ ಇನ್ನೂ ಒಡೆದಿರುವ,ನಮಗೆ ಒಡೆದಿದೆ ಎಂದು ಗೊತ್ತೇ ಆಗದ ಹೆಂಚುಗಳಿದ್ದರೆ,ನೀರು ಮನೆಯ ತುಂಬೆಲ್ಲಾ ಮತ್ತೆ ಧಾರಾಕಾರವಾಗಿ ಸುರಿಯುತ್ತಿತ್ತು.ಆಗ ನಾನು ಮಲಗಿ ನಿದ್ರಿಸುತ್ತಿದ್ದ ಜಾಗದ ಮೇಲೆ ಅಪ್ಪ ನನ್ನ ಮೇಲೆ ನೀರು ಬೀಳಬಾರದೆಂದು ತನ್ನದೊಂದು ಇನ್ನೂ ತೂತಾಗದೇ ಇರುವ ಹಳೆಯ ಪಂಚೆಯೊಂದನ್ನು ಕಟ್ಟಿ ಬಿಡುತ್ತಿದ್ದ. ಆ ನಂತರ ಮನೆಯಲ್ಲಿ ನೀರು ಬೀಳುವ ಜಾಗಗಳಲ್ಲೆಲ್ಲಾ ಪಾತ್ರೆ ಹಿಡಿದು ಕೊಂಡು ಅತ್ತಿತ್ತ ಓಡಾಡಿ ರಾತ್ರಿ ಪೂರ ನಿದ್ರೆ ಕಳೆದುಕೊಳ್ಳುತ್ತಿದ್ದ. ಮನೆಯಲ್ಲಿ ಪಾತ್ರೆ ಇದ್ದದ್ದೇ ಸ್ವಲ್ಪ.. ಎಷ್ಟು ಜಾಗಗಳಿಗೆ ಪಾತ್ರೆ ಇಡಬಹುದು. ಹಾಗಾಗಿ ಜೋರಾಗಿ ನೀರು ಸೋರುವಲ್ಲೆಲ್ಲ ಇದ್ದ ಪಾತ್ರೆಗಳನ್ನೇ ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದ ಅಪ್ಪ ಮಳೆಗಾಲದಲ್ಲಿ ಕಳೆದುಕೊಂಡ ನಿದ್ರೆ ರಹಿತ ರಾತ್ರಿಗಳ ಲೆಕ್ಕ ನನ್ನಲ್ಲಿಲ್ಲ.
ಕಲಿಯುವುದರಲ್ಲಿ ನಾನು ಸ್ವಲ್ಪವಲ್ಲ, ಬಹಳ ಬುದ್ಧಿವಂತಳಾಗಿದ್ದೆ.
ಆದರೆ ಡಾಕ್ಟರ್ ಆಗುವುದು ಅಷ್ಟು ಸುಲಭವಿರಲಿಲ್ಲ.ಹೇಳಿ ಕೇಳಿ ಬಡವರು ನಾವು.
ಪಿಯುಸಿ ಆದ ನಂತರ ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೆನೋ ಬಂದಿತ್ತು.ಕೊನೆಗೆ ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜ್ ನಲ್ಲಿ ಇಂಜಿನಿಯರ್ ಸೀಟು ಕೂಡ ಸಿಕ್ಕಿತು. ಅಪ್ಪನಿಗೆ ಹೊರೆ ಆಗಬಾರದೆಂದು ಡಾಕ್ಟರ್ ಆಸೆ ಬದಿಗಿಟ್ಟು ,ಅಪ್ಪನಿಗೆ ತಿಳಿ ಹೇಳಿ ಇಂಜಿನಿಯರಿಂಗ್ ಸೇರಿಕೊಂಡೆ ನಾನು. ನನ್ನ ಖುಷಿಯೇ ಅವನ ಖುಷಿ, ನಿನಗೆ ಯಾವುದು ಸರಿ ಅನ್ನಿಸುವುದೋ ಅದನ್ನೇ ಮಾಡು ಮಗಳೇ.. ನನಗೆ ಯಾವುದೂ ಗೊತ್ತಾಗುವುದಿಲ್ಲ, ಒಟ್ಟಿನಲ್ಲಿ ನಿನ್ನ ಖುಷಿಯೇ ನನ್ನ ಖಷಿ ಎಂದು ಹೇಳಿ ಮುಗಿಸಿದ್ದ ಅವನು.
ಬೆಂಗಳೂರಿನಲ್ಲಿ ಕೂಡ ಸರ್ಕಾರಿ ಗರ್ಲ್ಸ್ ಹಾಸ್ಟೆಲ್ ಸೇರಿದೆ. ಹಲವಾರು ಸ್ಕಾಲರ್ಶಿಪ್ ಗಳು ಸಿಕ್ಕುತ್ತಿದ್ದವು.ಊರಿಗೆ ಸೆಮಿಸ್ಟರ್ ರಜೆಯಲ್ಲಿ ಬಂದಾಗಲೆಲ್ಲ ಅಪ್ಪ ಬೆವರಿನಿಂದ ಒದ್ದೆ ಆಗಿರುವ ಒಂದಷ್ಟು ಪರಿಶ್ರಮದ ನೋಟುಗಳನ್ನು ಮರೆಯದೇ ಕೈಯಲ್ಲಿ ಭದ್ರವಾಗಿಟ್ಟು ಕಳುಹಿಸುತ್ತಿದ್ದ.ಊರಿನ ಬಸ್ ಸ್ಟ್ಯಾಂಡ್ ವರೆಗೂ ಅವನೇ ನನ್ನ ಲಗೇಜ್ ಹೊತ್ತುಕೊಂಡು ಕೂಲಿಯಂತೆ ಬರುತ್ತಿದ್ದ. ಬೇಡ ಅಪ್ಪ.. ಹಾಗೆಲ್ಲ ಮಾಡಬೇಡ ಎಂದು ಹೇಳಿದರೆ... ಇದೆಲ್ಲ ನನ್ನ ದಿನನಿತ್ಯದ ಕೆಲಸಗಳೇ ಮಗಳೇ.. ದೊಡ್ಡ ಕಾಲೇಜಿಗೆ ಕಲಿಯಲು ಹೋಗುವ ನನ್ನ ಮಗಳ ಸೇವೆ ಮಾಡುವುದು ನನ್ನ ಸೌಭಾಗ್ಯ ಎಂದು ತಿಳಿಯುತ್ತೇನೆ ಎಂದು ಮತ್ತೆ ಮುಗ್ಧವಾಗಿ ಹೇಳುತ್ತಿದ್ದ.
ನಾನು ಅವನ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಮೇಲೆ ಬಸ್ ನಲ್ಲಿ ಕುಳಿತುಕೊಂಡು.. ಅಪ್ಪ.. ಟಾಟಾ ಬಾ.. ಬಾಯ್.. ಎಂದು ಹೇಳಿ, ಅವನಿಗೆ ಕೈ ಬೀಸಿ ಅಲ್ಲಿಂದ ಹೋಗುವವರೆಗೂ,ಅವನು ಬಸ್ ನಿಂದ ಹೊರಗೆ ಕಣ್ಣಲ್ಲಿ ನೀರು ತುಂಬಿಕೊಂಡು ಅಲ್ಲೇ ನಿಂತಿರುತ್ತಿದ್ದ.ಬಸ್ ಅಲ್ಲಿಂದ ಹೊರಡಲು ಶುರು ಮಾಡಿದ ಮೇಲೆ ನಾನು ಹಾಗೇ ಒಮ್ಮೆ ಎದ್ದು ಬಸ್ ನ ಹಿಂದಿನ ದೊಡ್ಡ ಗ್ಲಾಸ್ ಮೂಲಕ ನೋಡಿದರೂ... ಅಪ್ಪ ಇನ್ನೂ ಟಾಟಾ ಮಾಡುತ್ತಲೇ ನಾನು ಹೋಗುತ್ತಿರುವ ಬಸ್ಸ್ ಅನ್ನೇ ನೋಡುತ್ತಾ ಹಾಗೇ ನಿಂತಿರುತ್ತಿದ್ದ. ಹೌದು ನನಗೆ ಗೊತ್ತು ಬಸ್ ಅಲ್ಲಿಂದ ಕಣ್ಮರೆ ಆದರೂ ಅಪ್ಪ ಇನ್ನೂ ಕೆಲವು ಹೊತ್ತು ಖಂಡಿತವಾಗಿಯೂ ಅಲ್ಲೇ ಇರುತ್ತಿದ್ದ ಎಂದು.ಯಾಕೆಂದರೆ ಅವನ ಪಾಲಿನ ಜೀವನವೂ ನಾನೇ... ಜೀವವೂ ನಾನೇ ಆಗಿದ್ದೆ.
ಹೇಗೋ ಇಂಜಿನಿಯರಿಂಗ್ ಒಳ್ಳೆಯ ರೀತಿಯಲ್ಲಿಯೇ ಮುಗಿಯುತ್ತಾ ಬಂದಿತ್ತು.
ಕ್ಯಾಂಪಸ್ ಸೆಲೆಕ್ಷನ್ ಆಗಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು ನನಗೆ. ಖುಷಿಯಿಂದ ಕೈಯಲ್ಲಿ ಸ್ವೀಟ್ ಹಿಡಿದುಕೊಂಡು ಊರಿಗೆ ಓಡೋಡಿ ಬಂದಿದ್ದೆ.. ನನ್ನ ಅಪ್ಪನಿಗೆ ತಿನ್ನಿಸಲು.
ಆದರೆ ಅಪ್ಪ.. ಮನೆಯಲ್ಲಿ ಇರಲಿಲ್ಲ!
ಹುಡುಕಾಡಿದೆ..
ಊರಿಡೀ ಹುಡುಕಾಡಿದೆ..
ಇಲ್ಲ..
ಅಪ್ಪ ಎಲ್ಲೂ ಕಾಣಲೇ ಇಲ್ಲ!
ಪಕ್ಕದ ಮನೆಯವರು ಹೇಳಿದರು.
ಒಂದು ತಿಂಗಳು ಜಾಸ್ತಿ ಆಯಿತಮ್ಮ ನಿನ್ನ ಅಪ್ಪನನ್ನು ನೋಡದೇ.. ಎಲ್ಲಿ ಹೋಗಿದ್ದಾನೆ ಎಂದು ನಮಗೂ ಕೂಡ ಗೊತ್ತಿಲ್ಲ.
ಅಪ್ಪ ನನ್ನ ಪಾಲಿಗೆ ಬರೀ ಅಪ್ಪ ಆಗಿರಲಿಲ್ಲ... ನಾನು ಪ್ರತ್ಯಕ್ಷವಾಗಿ ಕಂಡ ಏಕೈಕ ದೇವರು ಎಂದರೆ ಅದು ಅವನೇ.
ಅಂತಹ ನನ್ನ ಅಪ್ಪ ಎಲ್ಲಿ ಹೋದನೋ.. ನನಗದು ಗೊತ್ತಾಗಲಿಲ್ಲ. ಎಲ್ಲಿ ಹುಡುಕಿದರೂ ಅವನು ಸಿಗಲಿಲ್ಲ. ಪೋಲಿಸ್ ಕಂಪ್ಲೈಂಟ್ ಕೂಡ ಇಟ್ಟೆ.ಅದೂ ಪ್ರಯೋಜನಕ್ಕೂ ಬರಲಿಲ್ಲ.
ನನ್ನನ್ನು ಬಿಟ್ಟು ಅಪ್ಪ ಎಲ್ಲಿಗೆ ಹೋಗಬಲ್ಲ...? ನನ್ನನ್ನು ಬಿಟ್ಟು ಹೋಗಲು ಅವನಿಗೆ ಸಾಧ್ಯವೇ?.. ಈ ಪ್ರಶ್ನೆಗಳನ್ನು ನನ್ನನ್ನು ಕ್ಷಣ ಕ್ಷಣವೂ ಕಾಡುತ್ತಿತ್ತು.
ನಮಗೆ ಉಡುಪಿಯಲ್ಲಿ ಹಿಂದೆ ಮುಂದೆ ಅಂತ ಯಾರೂ ಇರಲಿಲ್ಲ.ಅಪ್ಪನಿಗೆ ಅಂತ ಇದ್ದದ್ದು ನಾನು, ನನಗೆ ಅಂತ ಇದ್ದದ್ದು ಅಪ್ಪ ಅಷ್ಟೇ.ಕೊನೆಗೆ ನಾನು ಉಡುಪಿ ಬಿಟ್ಟು ಬೆಂಗಳೂರು ಸೇರಿದೆ.ಆಯ್ಕೆಯಾಗಿದ್ದ ಕಂಪನಿಯಲ್ಲಿಯೇ ಕೆಲಸ ಹಿಡಿದೆ.ಇರಲು ಅಲ್ಲೇ ಒಂದು ಪಿ.ಜಿ ಕೂಡ ಹಿಡಿದೆ.
ನನ್ನ ಕಂಪೆನಿಯಲ್ಲಿ ನನ್ನ ಜೊತೆಗೆಯೇ ಕೆಲಸ ಮಾಡುವ ಒಬ್ಬ ಹುಡುಗ ನನ್ನನ್ನು ತುಂಬಾ ಇಷ್ಟ ಪಟ್ಟ. ಮದುವೆ ಆಗುತ್ತೇನೆ ಎಂದ.ಅವನ ವಿನಂತಿಯಲ್ಲಿ ಪ್ರೀತಿಯಲ್ಲಿ ನಂಬಿಕೆ ವಿಶ್ವಾಸ ಎರಡೂ ಅಗಾಧವಾಗಿ ಕಂಡವು.ಅವನು ಮೋಸಗಾರ ಎಂದು ನನಗೆ ಅನಿಸಲಿಲ್ಲ.ಕೊನೆಗೆ ಅವನನ್ನೇ ಮದುವೆ ಆದೆ.
ಆದರೆ ಅಪ್ಪ ಕ್ಷಣ ಕ್ಷಣವೂ ನೆನಪಾಗುತ್ತಿದ್ದ.ಮದುವೆಯಾಗುವಾಗ ಅಪ್ಪ ಎನ್ನುವ ಜೀವ ಪಕ್ಕದಲ್ಲೇ ಇದ್ದರೆನೇ ಕಣ್ಣೀರು ಸುರಿಸುವ ಎಷ್ಟೋ ಹುಡುಗಿಯರು ಇದ್ದಾರೆ.ಅಂದು ಮದುವೆ ಮಂಟಪದಲ್ಲಿ ನಾನು ಕೂಡ ಅತ್ತಿದ್ದೆ.. ಮದುವೆಯಾಗಿ ತವರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದಕ್ಕಾಗಿ ಅಲ್ಲ....ನನ್ನ ಜೀವನದ ಮಹತ್ವದ ಘಟನೆಯೊಂದನ್ನು ಹಾಗೇ ವಿಜೃಂಭಣೆಯಿಂದ ಜರಗುವಾಗ.. ಪಕ್ಕದಲ್ಲಿ ನೀನೇ ಇಲ್ಲವಲ್ಲ ಅಪ್ಪ.. ಎಂದು ನಾನು ಇದ್ದ ಬದ್ಧ ನನ್ನೆಲ್ಲಾ ಕಣ್ಣೀರು ಸುರಿಸಿ ಬಿಟ್ಟಿದ್ದೆ.
ಜೀವನ ಮುಂದುವರಿದಿತ್ತು.
ಆದರೆ ನಾವಿಬ್ಬರು ದಂಪತಿಗಳು ನಮಗೆ ಒಂದೂ ಮಕ್ಕಳನ್ನು ಕೂಡ ಹುಟ್ಟಿಸಿಕೊಳ್ಳಲಿಲ್ಲ.
ಅದಕ್ಕೆ ಕಾರಣ ನನ್ನ ಅನಾರೋಗ್ಯ.
ಪ್ರತೀ ಹುಡುಗಿಯೂ ತನ್ನ ತಂದೆಯಂತಹ ಕೇರಿಂಗ್ ಹುಡುಗನೇ ತನಗೆ ಗಂಡನಾಗಿ ಸಿಗಬೇಕು ಎಂದು ಬಯಸುತ್ತಾಳೆ.
ನನಗೂ ಅಂತಹದ್ದೇ ಗಂಡನನ್ನು ದೇವರು ಕೊಡಿಸಿದ್ದ
ಆದರೆ ನನ್ನ ಆರೋಗ್ಯ ಮಾತ್ರ ನನ್ನಿಂದ ಕಸಿದುಕೊಂಡಿದ್ದ ಆ ದೇವರು.
ಮದುವೆಯಾದ ಮರು ದಿನವೇ ಕಿಡ್ನಿಯ ಸಮಸ್ಯೆಗೆ ತುತ್ತಾಗಿದ್ದೇನೆ ಎಂದು ನನಗೆ ಗೊತ್ತಾಗಿ ಬಿಟ್ಟಿತು.
ಆ ನಂತರ ಆಸ್ಪತ್ರೆಯೇ ನನ್ನ ಅತೀ ದೊಡ್ಡ ಸಂಗಾತಿ ಆಯಿತು.
ಡಯಾಲಿಸಿಸ್ ನಿರಂತರವಾಗಿ ಮುಂದುವರಿದಿತ್ತು.
ಆವಾಗವಾಗ ಆಸ್ಪತ್ರೆಯ ಭೇಟಿ ತಪ್ಪಿಸುವಂತಿರಲಿಲ್ಲ.
ಎಲ್ಲದರ ಮಧ್ಯೆಯು ಅಪ್ಪ ಒಬ್ಬ ಬಿಡದೇ ನೆನಪಾಗುತ್ತಿದ್ದ.
ಪ್ರತೀ ಕ್ಷಣವೂ ನನಗೆ ಸಾಂತ್ವನ ಹೇಳಲು ಅವನೊಬ್ಬ ಇರಬೇಕು ಎಂದು ಅನ್ನಿಸುತಿತ್ತು.
ವರ್ಷಗಳು ಉರುಳಿದವು.
ನನ್ನ ಗಂಡ ಬಹಳ ಒಳ್ಳೆಯ ಮನುಷ್ಯ,ಮಕ್ಕಳು ಮರಿ ಎಂದು ಯಾವುದನ್ನೂ ಆಲೋಚಿಸದೆ..ಕೇವಲ ನನ್ನ ಆರೈಕೆಗೆ ನಿಂತುಬಿಟ್ಟ. ನನ್ನಲ್ಲಿ ಧೈರ್ಯ ತುಂಬಿದ.
ಒಂದು ದಿನ ಊರಿನ ಪೋಲಿಸ್ ಸ್ಟೇಷನ್ ನಿಂದ ಕಾಲ್ ಬಂತು. ಆರ್ಜೆಂಟಾಗಿ ಊರಿಗೆ ಬನ್ನಿ.. ಈ ಕೂಡಲೇ ಹೊರಟು ಬನ್ನಿ.. ಎಂದು.
ಅಪ್ಪ ಸಿಕ್ಕಿದನೋ.. ಅಥವಾ ಅವನಿಗೇನಾದರೂ ಆಗಬಾರದ್ದು ಆಗಿ ಹೋಯಿತೇ ಎಂದು.. ಒಂದೂ ಗೊತ್ತಾಗದೇ ಹೃದಯ ಒಂದು ಕ್ಷಣ ಜೋರಾಗಿ ಬಡಿಯತೊಡಗಿತು.
ಅದೇ ಭಯದಿಂದ ಗಂಡನೊಡನೆ ಕಾರು ಏರಿ ಉಡುಪಿಗೆ ಹೋದೆ
ಊರಿಗೆ ಹೋದವಳೇ ಎದ್ದು ಬಿದ್ದು ಪೋಲಿಸ್ ಸ್ಟೇಷನ್ ಗೆ ಓಡಿದೆ.
ಆಗ ಅಲ್ಲಿ ಕುಳಿತುಕೊಂಡಿದ್ದ ನನ್ನ ಅಪ್ಪ..!
ಅದೇ ಹರಕಲು ಶರ್ಟು.. ಒಣಗಿದ ಮುಖ ...ಬರಿಗಾಲಿನ ಸಣ್ಣ ಶರೀರದ ದೊಡ್ಡ ಹೃದಯದ ನನ್ನ ದೇವರು.
ನನ್ನ ಕಣ್ಣೀರು ಧಾರಕಾರ.. ನನಗೆ ತಡೆದುಕೊಳ್ಳಲು ಆಗಲೇ ಇಲ್ಲ.
ಅಪ್ಪನಲ್ಲಿಯೇ ಕೇಳಿದೆ... ಎಲ್ಲಿದ್ದೆ ಅಪ್ಪ ಇಷ್ಟು ದಿನ...? ನನ್ನನ್ನು ಒಬ್ಬಳನ್ನೇ ಬಿಟ್ಟು ಎಲ್ಲಿಗೆ ಹೋಗಿದ್ದೆ ನೀನು..?
ಅವನು ಸುಮ್ಮನೆ ನಕ್ಕ..
ಅವನ ನಗುವಿಗೆ ನನ್ನ ಎಲ್ಲಾ ನೋವುಗಳನ್ನು ಗುಣ ಪಡಿಸುವ ಶಕ್ತಿ ಇದೆ.
ಹಾಗೇ ತಲೆ ಸವರಿ... ಹೇಗಿದ್ದೀಯಾ ಮಗಳೇ.. ಎಂದು ಕೇಳಿದ.
ಎಷ್ಟು ವರ್ಷಗಳಾಗಿದ್ದವು ನನ್ನ ಅಪ್ಪನ ಈ ಒಂದು ಅಧ್ಬುತ ಧ್ವನಿ ಕೇಳಿ..
ನಾನು ಚೆನ್ನಾಗಿದ್ದೆನೆ ಅಪ್ಪ... ಹೇಳು ಎಲ್ಲಿಗೆ ಹೋಗಿದ್ದೆ.. ಅಂದೆ.
ಮೊದಲು ಮನೆಗೆ ಹೋಗುವ ಮಗಳೇ.. ಎಂದ ಅಪ್ಪ.
ನಂತರ ಪೋಲಿಸ್ ಇನ್ಸ್‌ಪೆಕ್ಟರ್ ಗೆ ಒಂದು ಥ್ಯಾಂಕ್ಸ್ ಹೇಳಿ ನಮ್ಮ ಹಳೆಯ ಆ ಹಂಚಿನ ಮನೆಗೆ ಅಪ್ಪನೊಂದಿಗೆ ಮರಳಿದೆ.
ಹಳೆಯ ಮನೆ.. ಹಳೆಯ ನೆನಪು...
ಆ ಮನೆಯಲ್ಲಿ.. ಆ ನೆನಪುಗಳಲ್ಲಿ ಯಾವತ್ತೂ ಇದ್ದವರು ನಾನು ಮತ್ತು ನನ್ನ ಅಪ್ಪ ಇಬ್ಬರೇ...
ಅಪ್ಪನಲ್ಲಿ ಮತ್ತೆ ಕೇಳಿದೆ..
ಹೇಳು ಅಪ್ಪ.. ಎಲ್ಲಿ ಹೋಗಿದ್ದೆ ನೀನು?
ಅದೆಲ್ಲ ಈಗ ಯಾಕೆ ಮಗಳೇ,ಇನ್ನೊಮ್ಮೆ ಹೇಳ್ತೇನೆ.. ಎಂದು ಮತ್ತೊಮ್ಮೆ ಮುಗ್ಧವಾಗಿ ನಕ್ಕಿದ್ದ ನನ್ನ ಅಪ್ಪ.
ಅವನಿಗೆ ಹೇಳುವ ಮನಸ್ಸಿರಲಿಲ್ಲವೋ ಏನೋ.. ನಾನು ಇನ್ನಷ್ಟು ಅದನ್ನೇ ಕೇಳಿ ಅವನಿಗೆ ಬೇಜಾರು ಮಾಡುವುದು ಬೇಡ..ಒಟ್ಟಿನಲ್ಲಿ ಹೇಗೋ ಕೊನೆಗೂ ಸಿಕ್ಕಿಬಿಟ್ಟನಲ್ಲ..ಎಂದು ನಿರ್ಧರಿಸಿ....
- ಅಪ್ಪ.. ನೀನು ಮನೆ ಬಿಟ್ಟು ಹೋದ ಮೇಲೆ,ಇನ್ನು ನನಗೆ ನೀನು ಸಿಗುವುದೇ ಇಲ್ಲವೆಂದು ಅಂದುಕೊಂಡಿದ್ದೆ ನಾನು.. ನಿನಗಾಗಿ ಎಲ್ಲಾ ಕಡೆ ಹುಡುಕಾಡಿದೆ,ತುಂಬಾನೇ ಕಾದೆ.. ಕೊನೆಗೆ ನಿನ್ನ ಆಶೀರ್ವಾದ ಇಲ್ಲದೆ ಮದುವೆ ಕೂಡ ಮಾಡಿಕೊಂಡೆ ಅಪ್ಪ.. ನೀನು ಮದುವೆ ಮಂಟಪದಲ್ಲಿ ನನ್ನ ಪಕ್ಕವೇ ಇದ್ದಿದ್ದರೆ ನನ್ನನ್ನು ಮದುಮಗಳ ರೂಪದಲ್ಲಿ ನೋಡಿ ಎಷ್ಟು ಖುಷಿ ಪಡುತ್ತಿದ್ದೆಯೋ ಏನೋ..ಆದರೆ ಅಪ್ಪ ಆ ಭಾಗ್ಯ ನನಗೂ ಇರಲಿಲ್ಲ... ನಿನಗೂ ಇರಲಿಲ್ಲ....
ಎಂದು ಹೇಳಿ,ನಂತರ ನನ್ನ ಗಂಡನನ್ನು ಅಪ್ಪನಿಗೆ ಪರಿಚಯಿಸಿ,ಅಪ್ಪ ನೋಡು.. ಇವರೇ ನನ್ನ ಗಂಡ.. ಹೆಚ್ಚು ಕಡಿಮೆ ನಿನ್ನಂತೆಯೇ ನನ್ನನ್ನು ಚೆನ್ನಾಗಿ ನೋಡ್ಕೋತಾರೆ ಅಪ್ಪ.. ಅಂದೆ.
ನಂತರ ನನ್ನ ಅಪ್ಪ... ನನ್ನ ಗಂಡ ತುಂಬಾ ಹೊತ್ತು ಕಷ್ಟ ಸುಖ ಮಾತಾಡಿಕೊಳ್ಳ ತೊಡಗಿದರು. ನನ್ನ ಗಂಡನೆದುರು ಕೂಡ ಅಪ್ಪ ಕೆಲಸದವನಂತೆ ಕೈ ಕಟ್ಟಿ ನಿಂತಿದ್ದ. ಅದನ್ನು ನೋಡುವುದೇ ನನಗೆ ಬೇಜಾರು ಆಗುತ್ತಿತ್ತು. ಅದಕ್ಕೆ ಹೇಳಿದ್ದು ಅವನು ಮನುಷ್ಯನೇ ಅಲ್ಲ.. ದೇವರು ಎಂದು. ಆದರೆ ನನ್ನ ಗಂಡ ಒಳ್ಳೆಯವನು,ತನ್ನ ಮಾವನ ಕಟ್ಟಿದ ಕೈಯನ್ನು ಬಿಡಿಸಿಕೊಂಡು ಅಪ್ಪನೊಂದಿಗೆ ಹಾಗೇ ಮಾತಾಡುತ್ತಾ ಮನೆಯ ಅಂಗಳದತ್ತ ನಡೆದಿದ್ದ.
ನಾನು ಹಾಗೇ ಮನೆಯ ಗೋಡೆ.. ಆ ಮನೆಯ ಇಂಚು ಇಂಚು ಕೈಯಿಂದ ಮುಟ್ಟುತ್ತಾ,ನೆತ್ತಿನ ಮೇಲಿನ ಒಡೆದ ಹಾಗೂ ಇನ್ನೂ ಒಡೆಯದ ಹೆಂಚುಗಳನ್ನು ಮತ್ತೊಮ್ಮೆ ದಿಟ್ಟಿಸಿ ನೋಡುತ್ತಾ, ಹಳೆಯ ನೆನಪುಗಳಲ್ಲಿ ಹಾಗೇ ಮಿಂದೆದ್ದು ಬರುತ್ತಿದ್ದೆ.ಗೋಡೆ,ಹೆಂಚು,ಮನೆ, ಜಾಗಗಳು ಮಾತಾಡುವುದಿಲ್ಲ ನಿಜ.. ಆದರೆ ನಿರ್ಜೀವ ವಸ್ತುಗಳು ಕೂಡ ನಮ್ಮ ನೆನಪುಗಳನ್ನು ಮನುಷ್ಯರಿಗಿಂತಲೂ ಅದೆಷ್ಟೋ ತಾಜವಾಗಿ ಇಡಬಲ್ಲದು.
ಅವರಿಬ್ಬರ ಮಾತುಕತೆಯ ನಂತರ ನಾವು ಹೊರಡುವ ಸಮಯವಾಯಿತು... ನಾನು ಅಪ್ಪನಲ್ಲಿ ಹೇಳಿದೆ.. ಅಪ್ಪ ನಮ್ಮೊಂದಿಗೆ ಬೆಂಗಳೂರಿಗೆ ಬಂದು ಬಿಡಪ್ಪಾ..ನಿನಗೆ ಅಂತ ಯಾರು ಇದ್ದಾರೆ ಇಲ್ಲಿ...
ನನ್ನ ಗಂಡ ಕೂಡ ತುಂಬಾ ಕೇಳಿಕೊಂಡರು.
ಆದರೆ ಅದಕ್ಕೆ ಅಪ್ಪ ಹೇಳಿದ... ಇಲ್ಲ ಮಗಳೇ.. ನಿನ್ನನ್ನು ನಾನು ಆಡಿ ಎತ್ತಿ ಬೆಳೆಸಿದ ಮನೆ ಇದು.. ಈ ಮನೆಯ ಕಣ ಕಣದಲ್ಲೂ, ಈ ನೆಲದಲ್ಲೂ, ಈ ಮನೆಯ ಸೂರಿನಲ್ಲೂ ಬರೀ ನೀನೇ ಇದ್ದಿಯಾ... ನೀನು ಅತ್ತು, ನಕ್ಕು, ಹೆಜ್ಜೆ ಹಾಕಿದ ಈ ಮನೆಯನ್ನು ನಾನು ಹೇಗೆ ಅನಾಥ ಮಾಡಲಿ ಮಗಳೇ...?
ಅಪ್ಪನ ಪ್ರಶ್ನೆಗೆ ನನ್ನಲ್ಲಿ ಉತ್ತರಗಳಿಲ್ಲ.
ಮೌನವಾಗಿದ್ದ ನನ್ನಲ್ಲಿ ಅಪ್ಪನೇ ಹೇಳಿದ .. ನೀನೇ ಒಂದೆರಡು ದಿನ ಕುಳಿತು ಹೋಗಮ್ಮ... ಎಂದು.
ನನ್ನ ಅನಾರೋಗ್ಯದ ಬಗ್ಗೆ ಹೇಳಿದಾಗ.. ತುಂಬಾನೇ ವೇದನೆ ಪಟ್ಟುಕೊಂಡ ನನ್ನ ಅಪ್ಪ..
ದೇವರು.. ನಿನ್ನನ್ನು ಕೈ ಬಿಡಲಾರ ಮಗಳೆ.. ಅವನು ನಿನ್ನನ್ನು ಖಂಡಿತಾ ಇದರಿಂದ ಪಾರು ಮಾಡುತ್ತಾನೆ.. ನಾನು ನಿನಗಾಗಿ ದಿನಾಲೂ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ.. ನೀನು ಖುಷಿಯೇ ನನ್ನ ಸುಖ.. ಎಂದು ಹೇಳಿದ್ದ ಅಪ್ಪನ ಕಣ್ಣಲ್ಲೂ ನೀರು ಒಸರಿತ್ತು.
ಅಪ್ಪನ ಕಾಲು ಹಿಡಿದು ನಾನು ಮತ್ತು ನನ್ನ ಗಂಡ ಅವರಿಗೆ ನಮಸ್ಕಾರ ಮಾಡಿ,ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳಿದೆವು. ಅಪ್ಪ ಬೇಡ ಬೇಡ ಅಂದರೂ ಅವನ ನಡುಗುವ ಕೈಗೊಂದಿಷ್ಟು ಬೆಚ್ಚನೆಯ ನೋಟುಗಳನ್ನು ತುರುಕಿ ಬಂದಿದ್ದೆ. ಕಾರ್ ಅಲ್ಲಿಂದ ಮರೆ ಆಗುವವರೆಗೂ ಅಪ್ಪ ರೋಡ್ ಬದಿಯಲ್ಲಿ ನಿಂತುಕೊಂಡು ನಮ್ಮ ಕಾರನ್ನೇ ನೋಡುತ್ತಿದ್ದ. ಗೊತ್ತು ನಾವು ಹೋದ ಮೇಲೂ ಸ್ವಲ್ಪ ಹೊತ್ತು ಅವನು ಅಲ್ಲೇ ಖಂಡಿತವಾಗಿಯೂ ಇರುತ್ತಾನೆ.
ನನಗೆ ಆರೋಗ್ಯದ ಸಮಸ್ಯೆ ಇದ್ದರೂ ನನಗೆ ಅಪ್ಪನದ್ದೇ ಚಿಂತೆ ಹೆಚ್ಚಾಗಿತ್ತು. ಅಲ್ಲಿಂದ ಬರುವಾಗ ಪಕ್ಕದ ಮನೆಯವರಿಗೆ ನನ್ನ ನಂಬರ್ ಕೊಟ್ಟು.. ಅಪ್ಪನ ವಿಷಯ ಏನಾದರೂ ಇದ್ದರೆ ಹೇಳ್ತಾ ಇರಿ... ಅವರಿಗೇನಿದರೂ ತೊಂದರೆ ಇದ್ದರೆ ನನಗೆ ದಯವಿಟ್ಟು ತಿಳಿಸಿ.. ಎಂದು ಹೇಳಿ ಬಂದಿದ್ದೆ.
ಬೆಂಗಳೂರಿಗೆ ಮರಳಿದ ಮೇಲೆ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಾ ಹೋಯಿತು. ನೋವು ತೀವ್ರವಾಗತೊಡಗಿತು.
ಡಯಾಲಿಸಿಸ್ ಮತ್ತೆ ಮುಂದುವರಿದಿತ್ತು. ಕುಳಿತಲ್ಲಿಂದ ಮೇಲೆ ಏಳಲು ಕೂಡ ಕಷ್ಟ ಆಗತೊಡಗಿತು.ಗಾಲಿ ಕುರ್ಚಿ ಇಲ್ಲವೇ ಒಬ್ಬರ ಕೈ ಹಿಡಿದುಕೊಂಡೇ ಆಚೆ ಈಚೆ ಹೋಗ ಬೇಕಾದ ಪರಿಸ್ಥಿತಿ.
ಬದುಕು ಅಕ್ಷರಶಃ ನರಕ ಆಗಿತ್ತು ನನ್ನದು.
ಯಾವ ಜನ್ಮದಲ್ಲಿ ಯಾವ ತಪ್ಪು ಮಾಡಿದ್ದೆನೋ ಎಂದು ಅನ್ನಿಸುತ್ತಿತ್ತು.
ನೋವಾದಾಗ ಹೆಚ್ಚಾನವರು ಅಮ್ಮಾ.. ಎಂದು ಕೂಗುತ್ತಾರೆ. ಆದರೆ ಪ್ರತೀ ಸಲ ನೋವಾಗಿ ತಡೆದು ಕೊಳ್ಳಲು ಆಗದೇ ಕಣ್ಣೀರಾಗಿ ಕೂಗಿ ಕೊಳ್ಳುವಾಗಲೂ ನಾನು ಬರೀ ಅಪ್ಪಾ... ಎಂದೇ ಹೇಳುತಿದ್ದೆ.
ಅಪ್ಪ ಪ್ರತೀ ಕ್ಷಣವೂ ನೆನಪಾಗುತ್ತಿದ್ದ... ಬಿಡದೇ ಕಾಡುತ್ತಿದ್ದ.
ಅವನು ಯಾಕೆ ಮನೆ ಬಿಟ್ಟು ಹೋಗಿದ್ದ... ಎನ್ನುವುದು ನನಗೆ ಕೊನೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು.
ಡಯಾಲಿಸಿಸ್ ಮುಂದುವರಿದಿತ್ತು.
ಒಂದು ದಿನ ಊರಿನಿಂದ ನಮ್ಮ ಮನೆಯ ಪಕ್ಕದ ಮನೆಯವರಿಂದ ಕಾಲ್ ಬಂತು.
ಅರ್ಜೆಂಟಾಗಿ ಮನೆಗೆ ಬನ್ನಿ ಎಂದರು.
ಭಯದಿಂದಲೇ ಏನು ವಿಷಯ.. ಎಂದು ನಡುಗುತ್ತಲೇ ಕೇಳಿದೆ.
ಸ್ವಲ್ಪ ತಡವರಿಸಿದ ಅವರು...ಮರಣ ಆಗಿದೆ,ತಡ ಮಾಡದೇ ಬನ್ನಿ... ಎಲ್ಲರೂ ನಿಮಗಾಗಿಯೇ ಕಾಯುತ್ತಿದ್ದಾರೆ.. ಎಂದು ಹೇಳಿ ಪೋನ್ ಇಟ್ಟು ಬಿಟ್ಟಿದ್ದರು!!!
ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಯಿತು!
ಜೀವನದಲ್ಲಿ ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದ.. ಆಕಾಶದಂತೆ, ಕಡಲಿನಂತೆ ತನ್ನ ಅಪಾರ ಮಮತೆಯನ್ನು ನನಗೆ ಬಗೆ ಬಗೆದು, ಮೊಗೆ ಮೊಗೆದು ಕೊಟ್ಟ ಆ ನನ್ನ ಅಪ್ಪನೇ ಇನ್ನಿಲ್ಲ ಎಂಬ ಸತ್ಯ ನಾನು ಯಾವ ರೀತಿ ಅರಗಿಸಿಕೊಳ್ಳಲಿ..!
ಅತ್ತೆ..
ಬಿಕ್ಕಿ ಬಿಕ್ಕಿ ಅತ್ತೆ ನಾನು.
ನನ್ನ ಗಂಡ ನನಗೆ ಸಮಾಧಾನ ಮಾಡಿದ.
ಆದರೆ ಯಾರು ಸಮಾಧಾನ ಮಾಡಿದರೂ.. ಹೇಗೆ ಸಮಾಧಾನ ಮಾಡಿದರೂ.. ಎಷ್ಟೇ ಸಮಾಧಾನ ಮಾಡಿದರೂ... ನಾನು ಕಳೆದುಕೊಂಡಿದ್ದು ಒಬ್ಬ ಮನುಷ್ಯನನ್ನು ಅಲ್ಲ.. ಬರೀ ಒಬ್ಬ ತಂದೆಯನ್ನೂ ಕೂಡ ಅಲ್ಲ.. ನಾನು ಕಳೆದುಕೊಂಡದ್ದು ನನ್ನ ಪಾಲಿನ ದೇವರನ್ನು... ಹೇಗೆ ಸಮಾಧಾನ ಪಟ್ಟುಕೊಳ್ಳಲಿ ನಾನು?!!
ಕೊನೆಗೆ ಕಷ್ಟ ಪಟ್ಟು ಕಾರಿನಲ್ಲಿ ಕುಳಿತುಕೊಂಡು... ಮನಸ್ಸು ಗಟ್ಟಿ ಮಾಡಿಕೊಂಡು ಊರಿಗೆ ಗಂಡನೊಡನೆ ಹೊರಟೆ.
ನನಗೆ ಅಪ್ಪನ ಸತ್ತ ಮುಖ ನೋಡಲು ಇಷ್ಟವಿರಲಿಲ್ಲ. ಅವನು ಯಾವಾಗಲೂ ಅಯಾಯಕನಂತೆ ನಗುತ್ತಾ.. ಏನಾಯಿತು ಮಗಳೇ.. ಎಂದು ನನ್ನನ್ನು ಪ್ರೀತಿಯಿಂದ ಕೇಳುವ ಚಿತ್ರವೊಂದೇ ನನ್ನಲ್ಲಿ ಶಾಶ್ವತವಾಗಿ ಇರಬೇಕು ಎಂದು ಬಯಸಿದ್ದವಳು ನಾನು.
ಆದರೆ ಏನು ಮಾಡಲಿ ಅವನ ಪ್ರೀತಿಯ ಒಬ್ಬಳೇ ಮಗಳು ನಾನು. ಹೋಗಲೇ ಬೇಕಿತ್ತು.
ಕಾರಿನಲ್ಲೂ ಕೂಡ ಅತ್ತು ಅತ್ತು ನನ್ನ ಕಣ್ಣು ಮೂಗು ಕೆಂಪು ಕೆಂಪಾಗಿ ಬಿಟ್ಟಿದ್ದವು.
ಚಿಕ್ಕಂದಿನಲ್ಲಿ ಅಪ್ಪ ಕೊಡಿಸಿದ ಐಸ್ ಕ್ಯಾಂಡಿ, ನನ್ನನ್ನು ಹೆಗಲ ಮೇಲೆ ಕುಳ್ಳಿರಿಸಿ ಕೃಷ್ಣನ ತೇರಿನ ಹಿಂದೆ ಅಪ್ಪ ಬರಿಗಾಲಲ್ಲಿ ಮಾಡಿಸಿದ್ದ ನನ್ನದೊಂದು ಮೆರವಣಿಗೆ.. ಮನೆಯ ಒಡೆದ ಹಂಚು ಒಟ್ಟಿಗೆ ಸೇರಿ ರಿಪೇರಿ ಮಾಡಿದ್ದು..ನಾನು ಡಾಕ್ಟರ್ ಆಗಬೇಕೆಂದು ನನಗಿಂತ ಹೆಚ್ಚು ಹಂಬಲಿಸಿ ಅದಕ್ಕಾಗಿ ಪೈಸೆ ಪೈಸೆಯನ್ನು ಕೂಡ ಜೋಪಾನವಾಗಿ ಒಟ್ಟು ಮಾಡಿ ಇಟ್ಟುಕೊಳ್ಳುತ್ತಿದ್ದದ್ದು.. ಅವನು ಮಾಡಿಸಿದ ಸ್ನಾನ.. ಅವನ ಪಂಚೆಯ ತೊಟ್ಟಿಲು.. ಎಲ್ಲವೂ ಅತಿಯಾಗಿ ನೆನಪಾಗಿ ಬಿಟ್ಟಿತು.. ಮತ್ತೆ ಕಣ್ಣೀರು ಧಾರಕಾರ!
ಕಾರು ಮನೆ ತಲುಪಿತು.
ಮನೆಯ ಮುಂದೆ ತುಂಬಾ ಜನ ಸೇರಿದ್ದರು.
ಕೈ ಕಾಲು ನಡುಗಿ ಬಿಟ್ಟವು,ಹೃದಯ ಬಡಿತ ಹೆಚ್ಚಾಯಿತು.
ನನಗರಿವಿಲ್ಲದೇ ಗೋಳೋ ಎಂದು ಅತ್ತೆ..
ನನ್ನ ಮುಗಿಲು ಮುಟ್ಟಿದ ಆಕ್ರಂದನ ಕೇಳಿ ಎಲ್ಲರೂ ನನ್ನನ್ನೇ ನೋಡಿ ಅವರ ಕಣ್ಣುಗಳನ್ನು ತುಂಬಿಕೊಂಡು ಬಿಟ್ಟರು.
ನನ್ನ ಗಂಡ ನಿಧಾನವಾಗಿ ನನ್ನ ಕೈ ಹಿಡಿದುಕೊಂಡು ಮನೆಯ ಬಳಿ ಕರೆದುಕೊಂಡು ಹೋದ..
ಮನೆಯ ಅಂಗಳಕ್ಕೆ ಬಂದೆ..
ಅಪ್ಪ ಅಲ್ಲೇ ತಲೆ ತಗ್ಗಿಸಿ ನಿಂತಿದ್ದ!
ಅವನ ಎದುರಿನಲ್ಲಿ ಒಂದು ಶವವನ್ನು ಬಟ್ಟೆ ಹೊದ್ದು ಮಲಗಿಸಲಾಗಿತ್ತು..!!
ನನಗೆ ಅರ್ಥವಾಗಲಿಲ್ಲ..
ಆಶ್ಚರ್ಯವಾಯಿತು..!
ಶವದ ಬಳಿ ಹೋಗಿ ಅದರ ಮೇಲಿನ ಬಟ್ಟೆಯನ್ನು ಸರಿಸಿದೆ.
ಒಂದು ಹೆಂಗಸಿನ ಮೃತ ಶರೀರ..!
ಅಪ್ಪನನ್ನೇ ನೋಡಿದೆ.
ಅಪ್ಪ ನನ್ನನೇ ನೋಡುತ್ತಿದ್ದರು.
ಅಪ್ಪ.... ಯಾರು... ಯಾರಿದು ? ಎಂದು ತೊದಲುತ್ತಲೇ ಶವದತ್ತ ಕೈ ತೋರಿಸಿ ಕೇಳಿದೆ.
ಅಪ್ಪ ಕಣ್ಣೀರಾಗಿ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿದ್ದ.. ಅದು... ಅದು ನಿನ್ನ ಅಮ್ಮ ಮಗಳೇ..!!
ಆಕಾಶದಿಂದ ಧರೆಗಿಳಿದ ಸಿಡಿಲ ತುಂಡೊಂದು ನನ್ನನ್ನೇ ಹುಡುಕಿಕೊಂಡು ಬಂದು ನನಗೆ ಬಲವಾಗಿ ಹೊಡೆದಂತಿತ್ತು!
ಕ್ಷಣ ಕಾಲ ದಂಗಾಗಿ ಬಿಟ್ಟೆ..!!
ಮಾತೇ ಹೊರಡಲಿಲ್ಲ.
ನನ್ನ ಅಮ್ಮನೇ..?! ಅಪ್ಪನಲ್ಲಿ ಕೇವಲ ಮುಖಭಾವ ಪ್ರಕಟಿಸಿಯೇ ಕೇಳಿ ಬಿಟ್ಟೆ!
ಅಪ್ಪ ಹೌದು ಎಂಬಂತೆ ಮತ್ತೆ ತಲೆ ಅಲ್ಲಾಡಿಸಿದ.
ಹೆಣವನ್ನೇ ಮತ್ತೆ ನೋಡಿದ..
ಹೌದು.. ಹೋಲುತ್ತದೆ.
ನನ್ನ ಮುಖವನ್ನೇ ಹೋಲುತ್ತದೆ.!
ಅದು ಈಗ ಬರೀ ಹೆಣವಲ್ಲ..
ನನ್ನ ಅಮ್ಮ ಅದು.
ಸತ್ತು ಮಲಗಿದ ನನ್ನ ಅಮ್ಮ!
ಅಮ್ಮ ಅಂದರೆ ಅವರವರ ಪಾಲಿನ ದೇವರಂತೆ, ಮೊದಲ ಗುರುವಂತೆ.ಆದರೆ..ಆದರೆ ನನ್ನ ಪಾಲಿಗೆ ಅವಳದ್ದೊಂದು ಅಸ್ಪಷ್ಟ ಚಿತ್ರ ಎಂದಿಗೂ ನನ್ನ ಮನಸ್ಸಿನಲ್ಲಿ ಮೂಡಿರಲೇ ಇಲ್ಲ.
ಹಾಗಾಗಿ ಯಾವತ್ತಾದರೂ ಅವಳನ್ನು ಕಲ್ಪಿಸಿಕೊಳ್ಳುವುದು ಬಿಡಿ.... ಅವಳು ನನ್ನ ಕನಸಿನಲ್ಲೂ ಕೂಡ ಎಂದಿಗೂ ಅಮ್ಮ ಎಂಬ ಪಾತ್ರವಾಗಿ ನನ್ನ ಕನಸಿನಲ್ಲಿ ಇಳಿದವಳಲ್ಲ..ಮಾತ್ರವಲ್ಲ ನಾನು ಹುಟ್ಟುವಾಗಲೇ ಅವಳು ಸತ್ತಿದ್ದಳು ಎಂದೇ ಇಷ್ಟರವರೆಗೆ ತಿಳಿದುಕೊಂಡಿದ್ದೆ ನಾನು.
ಆದರೆ ಅವಳು ಸತ್ತಿರಲಿಲ್ಲ..!!
ಕೊನೆಗೂ ನನ್ನ ಅಮ್ಮ ನನಗೆ ಸಿಕ್ಕಳು... ಆದರೆ ಅದೂ ಕೂಡ ಸತ್ತ ಮೇಲೆಯೇ!!
ಅವಳು ಜೀವಂತ ಇದ್ದರೆ "ಅಮ್ಮಾ..." ಎಂದು ಎಲ್ಲರಂತೆ ಬಾಯಿ ತುಂಬಾ ಕರೆಯುತ್ತಿದ್ದೆ ನಾನು....ಏಕೆಂದರೆ ಎಷ್ಟಾದರೂ ಅವಳು ತನ್ನ ರಕ್ತ ಹರಿಸಿ ನನಗೆ ಜನ್ಮ ನೀಡಿದ ಅಮ್ಮ ಅವಳು.
ಯಾವಾಗಲೂ ಅಪ್ಪ... ಎಂದು ಕರೆದು ಗೊತ್ತಿದ್ದ ನನಗೆ ಅಮ್ಮ ಎಂದು ಕರೆದೇ ಅಭ್ಯಾಸವಿಲ್ಲ... ಒಂದು ವೇಳೆ ಅಮ್ಮ ಎಂದು ಕರೆಯಬೇಕೆನಿಸಿದರೂ... ಕೇಳಿಸಿಕೊಳ್ಳಲು ಈಗ ಅವಳೇ ಇಲ್ಲ..!!
ಯಾವ ಮಕ್ಕಳಿಗೂ ಈ ಸ್ಥಿತಿ ಬರಬಾರದು.
ಎಂದೂ ನೋಡದ ಹೆತ್ತ ಅಮ್ಮ.. ಕೊನೆಗೊಮ್ಮೆ ಸಿಗುತ್ತಾಳೆ,ಆದರೆ ಅದು ಹೆಣವಾಗಿ ಎಂದರೆ ಆ ಮಗುವಿಗೆ ಆಗುವ ನೋವು ಎಂತಹದ್ದು ಎಂದು ಬರೀ ನನಗಷ್ಟೇ ಗೊತ್ತು!
ಅಮ್ಮನ ಶವದೆದುರು ನಿಂತು ಕಣ್ಣೀರಾದೆ..!
ಗೊತ್ತಿಲ್ಲದೇ ಹಾಗೇ ನನ್ನಲ್ಲೊಂದು ಧಗಧಗಿಸುವ ಕ್ರೋಧ ಹುಟ್ಟಿಕೊಂಡಿತು... ಅಪ್ಪನ ಮೇಲೆ!!
ಹಾಗೇ ಕಣ್ಣೀರು ಒರೆಸಿಕೊಂಡು ಅಲ್ಲೇ ಇದ್ದ ಅಪ್ಪನಲ್ಲಿಯೇ ಸಿಟ್ಟಿನಿಂದಲೇ ಕೇಳಿದೆ.... ಅಪ್ಪಾ.. ಹೆತ್ತ ಅಮ್ಮ ಜೀವಂತ ಇದ್ದರೂ ಕೂಡ ಏಕೆ ನೀನು ನನಗೆ ಈ ವಿಷಯ ಯಾವತ್ತೂ ಹೇಳಲೇ ಇಲ್ಲ ..?!
ಇಂತಹ ಸತ್ಯವನ್ನು ಯಾವ ತಂದೆ ಆದರೂ ತನ್ನ ಮಕ್ಕಳಿಂದ ಮುಚ್ಚಿ ಇಡುತ್ತಾರೆಯೇ ಅಪ್ಪ..!!
ಯಾಕಪ್ಪ ಇಷ್ಟೊಂದು ದೊಡ್ಡ ದ್ರೋಹ ಮಾಡಿದೆ ನೀನು ಈ ನಿನ್ನ ಪ್ರೀತಿಯ ಮಗಳಿಗೆ...!
ನೀನು.. ನೀನು ನನ್ನ ಪಾಲಿನ ದೇವರು ಎಂದೇ ನಾನು ಸದಾ ತಿಳಿದಿದ್ದೆ ಅಪ್ಪ .. ಆದರೆ.. ಆದರೆ ಆ ದೇವರೇ ಇಂದು ನನ್ನ ಜೀವನದ ಬಹುದೊಡ್ಡ ಸತ್ಯವನ್ನು ನನ್ನಿಂದ ಮುಚ್ಚಿಟ್ಟು ಬಿಟ್ಟು... ಬದುಕಿರುವಾಗ ನನ್ನ ತಾಯಿಯನ್ನು ನನಗೆ ತೋರಿಸದೆ, ಈಗ ಸತ್ತ ಮೇಲೆ ಇಷ್ಟು ವರ್ಷಗಳ ನಂತರ ಇದೋ ನೋಡು ಮಗಳೇ ಇವಳೇ ನಿನ್ನ ತಾಯಿ ಎಂದು ತೋರಿಸಿ ನನಗೆ ಮೋಸ ಮಾಡಿ ಬಿಟ್ಟ...!
ಅಪ್ಪ... ನೀನು... ನೀನೂ ಒಬ್ಬ ಅಪ್ಪನೇ ಅಪ್ಪ?!!
ಎಂದು ಹೇಳಿ ತಡೆಯಲಾರದೇ ಗಳಗಳನೆ ಅತ್ತು ಬಿಟ್ಟೆ..!
ಅಪ್ಪ ಏನೂ ಮಾತಾಡಲಿಲ್ಲ..
ಹಾಗೇ ಬಂದು ಪಕ್ಕದಲ್ಲೇ ನಿಂತ.
ಅಪ್ಪ ನನ್ನ ಕಣ್ಣೀರು ಒರೆಸಿದ...!!
ನನ್ನ ಕೈ ಹಿಡಿದ...
ಮಗಳೇ ಬಾ.. ನಿನಗಿಂದು ನಾನು ಒಂದು ಸತ್ಯ ಹೇಳುತ್ತೇನೆ.. ಎಂದು ಹಾಗೇ ನನ್ನ ಕೈ ಹಿಡಿದುಕೊಂಡು ಮನೆಯೊಳಗೆ ಕರೆದು ಕೊಂಡು ಹೋದ..
ಅಪ್ಪನ ಮೇಲೆ ಅತಿಯಾದ ಸಿಟ್ಟು ಇದ್ದರೂ ಅವನ ಜೊತೆಗೆಯೇ ಯಾಂತ್ರಿಕವಾಗಿ ಮನೆಯೊಳಗೆ ಹೋದೆ.
ಕೈ ಹಿಡಿದ ಅಪ್ಪ ಮೊದಲ ಬಾರಿಗೆ ನನಗೆ ದೇವರಂತೆ ಕಾಣಲಿಲ್ಲ!
ಮನೆಯ ಒಂದು ಮೂಲೆಗೆ ಹೋಗಿ ನಿಂತ ನನ್ನ ಅಪ್ಪ ಕಥೆ ಹೇಳಲು ಶುರು ಮಾಡಿದ....
-ಮಗಳೇ.. ಎಲ್ಲರಿಗೂ ಇರುವಂತೆ ನಿನಗೂ ಅಮ್ಮ ಇದ್ದರು.
ಅಪ್ಪ ಕೂಡ ಎಂದಿನಂತೆ ಇದ್ದರು.
ಆದರೆ ನೀನೇ ಕೇಳಿದಂತೆ... " ನೀನು ಒಬ್ಬ ಅಪ್ಪನೇ.. " ಎಂದು ಈದೀಗ ತಾನೇ ಹೇಳಿದಂತೆ..... ನಿಜವಾಗಿಯೂ ನಿನ್ನ ಅಪ್ಪ... ನಾನಲ್ಲ ಅಮ್ಮ!!
ಹೊರಗೆ ಅಂಗಳದಲ್ಲಿ ಈಗ ಮಲಗಿದ್ದಾಳೆ ನೋಡು.. ಹೌದು ಅವಳು ನಿನ್ನ ನಿಜವಾದ ಅಮ್ಮನೇ..ಅದರಲ್ಲಿ ಸಂದೇಹವೇ ಇಲ್ಲ.
ಆದರೆ ಮಗಳೇ.... ಅವಳ ಗಂಡ ನಾನಲ್ಲಮ್ಮ...!!
ಹೌದು ನಾನು ನಿನ್ನ ಅಪ್ಪ ಅಲ್ಲ ..!!!
ನೀನು ನನ್ನ ತಂಗಿಯ ಮಗಳು ಕಣಮ್ಮಾ..!
ಹೊರಗೆ ಸತ್ತು ಮಲಗಿರುವ ಆ ನಿನ್ನ ಅಮ್ಮ ನನ್ನ ಪ್ರೀತಿಯ ತಂಗಿ ಆಗಿದ್ದವಳು.
ನನಗೆ ಅವಳೆಂದರೆ ಅದೆಷ್ಟೋ ಪ್ರೀತಿ.
ಅವಳ ಮೇಲೆ ಪ್ರಾಣವನ್ನೇ ಇಟ್ಟಿದ್ದವನು ನಾನು.
ಚಿಕ್ಕಂದಿನಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡ ನಾನು ನನ್ನ ತಂಗಿಗೆ ಅಣ್ಣ ಮಾತ್ರವಲ್ಲ ಅಪ್ಪನೂ ಆಗಿದ್ದೆ.. ಅಮ್ಮನೂ ಆಗಿದ್ದೆ.
ಆದರೆ ಒಂದು ದಿನ ನನ್ನ ತಂಗಿ ನನಗೆ ಗೊತ್ತಿಲ್ಲದೇ.. ಒಬ್ಬನನ್ನು ಹಾಗೇ ಪ್ರೀತಿಸಿ ಬಿಟ್ಟಳು.
ಅಷ್ಟು ಮಾತ್ರವಲ್ಲ ವಿವಾಹಕ್ಕೂ ಮೊದಲೇ ಗರ್ಭಿಣಿ ಕೂಡ ಆದಳು.
ನನಗೆ ವಿಷಯ ತಿಳಿಯಿತು.
ಪಕ್ಕದ ಊರಿಗೆ ಹೋಗಿ ಹುಡುಗನನ್ನು ಕಂಡು ದಯವಿಟ್ಟು ವಿವಾಹ ಮಾಡಿಕೊಳ್ಳಿ ಕೈ ಕಾಲು ಹಿಡಿದು ಕೇಳಿದೆ.
ಆದರೆ ಹುಡುಗ ಕೇಳಲೇ ಇಲ್ಲ...!
ನಿನ್ನ ಅಮ್ಮ ಕೊನೆಗೆ ನಿನ್ನನ್ನು ಹೆತ್ತೇ ಬಿಟ್ಟಳು.
ಹುಟ್ಟುವಾಗಲೇ ಯಾರಿಗೂ ಬೇಡವಾಗಿದ್ದ ಮಗು ಆಗಿದ್ದೆ ಅಮ್ಮ ನೀನು..
ನಿನ್ನ ಅಮ್ಮನಿಗೂ ನಿನ್ನ ಕಂಡರೆ ತಾತ್ಸಾರವೇ ಇತ್ತು... ಮಮಕಾರವಲ್ಲ!
ಆದರೆ ನನಗೆ ನೀನು ಎಲ್ಲವೂ ಆಗಿದ್ದೆ.
ನಿನ್ನ ನಗು ನನ್ನೆಲ್ಲಾ ನೋವು ಅಳಿಸಿ ಹಾಕುತ್ತಿತ್ತು.
ಒಂದು ದಿನ ನಾನು ಮನೆಯಲ್ಲಿ ಇರಲಿಲ್ಲ..
ನಿನ್ನ ಅಪ್ಪ ಆಗಬೇಕಾದವನು ಮನೆಗೆ ಬಂದು ನಿನ್ನ ಅಮ್ಮನನ್ನು ಕರೆದುಕೊಂಡು ಹೋಗಿದ್ದ.
ಮನೆಗೆ ಬಂದಾಗ ವಿಷಯ ಗೊತ್ತಾಯಿತು.
ಅವರ ಊರಿಗೆ ಓಡಿದೆ.
ಮನೆಗೆ ಬೀಗ ಹಾಕಿತ್ತು.
ಅಲ್ಲಿ ಇಲ್ಲಿ ಎಲ್ಲಿ ಹುಡುಕಾಡಿದರೂ ನಿನ್ನ ಅಪ್ಪ ಆಗಲಿ,ಅಮ್ಮ ಆಗಲಿ ನನಗೆ ಸಿಗಲಿಲ್ಲ..ಅವರು ಅದಾಗಲೇ ಊರು ಬಿಟ್ಟು ಹೋಗಿದ್ದರು ಎಂದು ಆಮೇಲೆ ತಿಳಿಯಿತು. ನಿನ್ನ ಅಮ್ಮ ಕೂಡ ಇಷ್ಟ ಪಟ್ಟೇ ಓಡಿ ಹೋಗಿದ್ದಾಳೆ ಎಂದು ನಾನೇ ಅರ್ಥ ಮಾಡಿಕೊಂಡು ಬಿಟ್ಟೆ.
ಅವರನ್ನು ಹುಡುಕುತ್ತಾ ಕುಳಿತುಕೊಂಡರೆ ನೀನು ಬಡವಾಗುತ್ತೀಯಾ ಎಂದು... ನಿನಗೆ ಅಪ್ಪ ಅಮ್ಮ ನಾನೇ ಆಗಲು ನಿರ್ಧರಿಸಿ ಬಿಟ್ಟೆ.
ಮಗಳೇ... ಅದಕ್ಕಾಗಿ ನಾನು.. ನಾನು ಮದುವೆ ಕೂಡ ಆಗಲಿಲ್ಲ.
ಏಕೆಂದರೆ ನನ್ನ ಪಾಲಿನ ಮಗಳು ಯಾವತ್ತಿಗೂ ನೀನೇ ಆಗಿದ್ದೆ.
ನಿಜವಾಗಿಯೂ ನೀನು ಬಂದ ಮೇಲೆ ನಾನು ಬಡವನಾದರೂ ಜೀವನದಲ್ಲಿ ಸುಖಿ ಆಗಿದ್ದೆ.
ಎಲ್ಲವೂ ಸೇರಿ ಇತ್ತು..
ಕಷ್ಟ ಪಟ್ಟು ನಿನ್ನನ್ನು ಇಂಜಿನಿಯರಿಂಗ್ ಗೆ ಕೂಡ ಸೇರಿಸಿದೆ.
ಇನ್ನೇನು ನಿನ್ನ ಕಾಲೇಜು ಮುಗಿಯಬೇಕು ಎನ್ನುವಷ್ಟರಲ್ಲಿ ಒಂದು ದಿನ ರೈಲ್ವೆ ಸ್ಟೇಷನ್ ನಲ್ಲಿ ನಿನ್ನ ಅಮ್ಮನನ್ನು ನಾನು ಮತ್ತೆ ಕಂಡೆ !!
ಎಷ್ಟಾದರೂ ನನ್ನ ಒಡಹುಟ್ಟಿದ ಪ್ರೀತಿಯ ತಂಗಿ ಅವಳು. ನಮ್ಮಿಬ್ಬರದ್ದು ಕರುಳ ಬಳ್ಳಿ ಸಂಬಂಧ. ಅವಳನ್ನು ನಾನು ಹೇಗೆ ತಾನೇ ಮರೆಯಲಿ.. ಹೇಗೆ ಜಿದ್ದಿಗೆ ಬಿದ್ದು ದ್ವೇಷಿಸಲಿ..
ಹತ್ತಿರ ಹೋಗಿ ತಂಗಿ.. ಎಂದು ಮಾತಾಡಿಸಿದೆ.
ನನ್ನನ್ನು ನೋಡಿದ ಕೂಡಲೇ... ಅಣ್ಣಾ... ನನ್ನನ್ನು ಕ್ಷಮಿಸಿಬಿಡಣ್ಣಾ.. ಎಂದು ಅಳುತ್ತಲೇ ನನ್ನ ಕಾಲು ಹಿಡಿದು ಕಣ್ಣೀರು ಸುರಿಸಿದ್ದಳು. ಅವಳು ಬಾಗಿದಾಗ.. ಅವಳು ತಲೆಯ ಮೇಲೆ ಹೊದ್ದುಕೊಂಡಿದ್ದ ಸೀರೆಯ ತುದಿ ಕೆಳ ಜಾರಿ.. ಅವಳ ಬೋಳು ತಲೆ ಕಂಡಿತ್ತು ನನಗೆ.
ತಂಗಿ ಏನು..ಏನಿದು... ಎಂದು ತೊದಲುತ್ತಲೇ ಕೇಳಿದ್ದೆ.
ನಿನಗೆ, ನನ್ನ ಮಗುವಿಗೆ.. ಮೋಸ ಮಾಡಿ ಓಡಿ ಬಂದಿದಕ್ಕಾಗಿ ದೇವರು ಕೊಟ್ಟ ದೊಡ್ಡ ಉಡುಗೊರೆ ಅಣ್ಣ ಇದು.. ಹೆಸರು ಕ್ಯಾನ್ಸರ್... ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಳು ನಿನ್ನ ಅಮ್ಮ..!
ಎಷ್ಟಾದರೂ ಅವಳು ನನ್ನ ತಂಗಿ.. ಅವಳನ್ನು ಆ ಸ್ಥಿತಿಯಲ್ಲಿ ನೋಡಿ ನನ್ನ ಕರುಳು ಚುರುಕ್ ಅಂದು ಬಿಟ್ಟಿತು ಕಣಮ್ಮಾ.
ನಿನ್ನ ಗಂಡ ಎಲ್ಲಿ ಅಮ್ಮ.. ಎಂದು ಕೇಳಿದೆ.
ಅವರು ಕೂಡ ಸತ್ತು ಬಿಟ್ಟರು... ಒಬ್ಬಳೇ ಈಗ.. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.. ಎಂದು ಹೇಳಿದ್ದಳು ನಿನ್ನ ಅಮ್ಮ.
ಆಗಲೇ ನಾನು ನಿರ್ಧರಿಸಿಬಿಟ್ಟೆ ಮಗಳೇ... ನಿನ್ನ ಅಮ್ಮನ ಬಳಿಯೇ ಇದ್ದು ಅವಳ ಜೀವನದ ಕೊನೆಯ ಕ್ಷಣಗಳಲ್ಲಿ ಅವಳ ಕಣ್ಣೀರು ಒರೆಸಬೇಕೆಂದು.. ಹಾಗಾಗಿ ನಾನು ಮತ್ತೆ ಮನೆಗೆ ಮರಳಲೇ ಇಲ್ಲ.ಒಂದು ದಿನ ನಿನ್ನ ನೆನಪು ಅತಿಯಾಗಿತ್ತು, ಹಾಗಾಗಿ ಓಡೋಡಿ ಆವತ್ತು ಊರಿಗೆ ಬಂದಿದ್ದೆ. ಮತ್ತೆ ನಿನ್ನ ಅಮ್ಮನ ಆರೋಗ್ಯ ಉಲ್ಬಣ ಆದಾಗ ಪುನಃ ಅವಳ ಬಳಿ ಆವಾಗವಾಗ ಹೋಗಿ ಬರುತ್ತಿದ್ದೆ. ನಿನ್ನೆ ನಿನ್ನ ಅಮ್ಮ ಕೊನೆಯುಸಿರೆಳೆದಳು.ಅವಳಿಗೆ ಯಾರೂ ಇಲ್ಲ. ಅವಳು ಕೂಡ ಇಲ್ಲೇ ನನ್ನೊಂದಿಗೆ ಆಡುತ್ತಾ ಬೆಳೆದವಳು,ಅದಕ್ಕಾಗಿ ಅವಳ ಅಂತಿಮ ಸಂಸ್ಕಾರಕ್ಕಾಗಿ ಇಲ್ಲಿಗೇ ತಂದು ಬಿಟ್ಟೆ.
ಹೌದು.. ನಿನಗೆ ನಿನ್ನ ಅಮ್ಮನ ವಿಷಯ ನಾನು ಚಿಕ್ಕಂದಿನಲ್ಲಿಯೇ ಹೇಳಬಹುದಿತ್ತು... ಆದರೆ ನಾನು ಹೇಳಲಿಲ್ಲ.. ಹೇಳುವುದಾದರೂ ಏನು ಎಂದು ಹೇಳಬಹುದಿತ್ತು ಮಗಳೇ... ನಿನ್ನ ಅಮ್ಮ ಚಿಕ್ಕಂದಿನಲ್ಲಿಯೇ ನಿನ್ನನ್ನು ಒಬ್ಬಳನ್ನೇ ಬಿಟ್ಟು ಓಡಿ ಹೋದಳು ಎಂದೇ? ಹಾಗೆ ಹೇಳಿ ನಿನಗೆ ಅವಳ ಬಗ್ಗೆ ತಿರಸ್ಕಾರ ಬರುವಂತೆ ಮಾಡಿ ಬಿಡಬೇಕಿತ್ತೇ ನಾನು?
ಮಗಳೇ..ನೀನು ನನಗೆ ಹುಟ್ಟಿದ ಮಗಳು ಅಲ್ಲದಿರಬಹುದು, ಆದರೆ ನಾನು ಅನು ಕ್ಷಣವೂ ನೀನೇ ನನ್ನ ಮಗಳೆಂದು ತಿಳಿದವನು..
ನಿನಗೆ ನಾನು ಎಂದಿಗೂ ಮೋಸ ಮಾಡಲಿಲ್ಲ ಮಗಳೇ..ನನ್ನನ್ನು ಕ್ಷಮಿಸಿಬಿಡು...!!
ಎಂದು ಹೇಳಿದ ಅಪ್ಪ ತಲೆ ತಗ್ಗಿಸಿ ನಿಂತು ಬಿಟ್ಟ!!
ಏನು ಹೇಳಲಿ ನಾನು..!
ನಿಜವಾಗಿಯೂ ನನ್ನೆದುರು ನಿಂತ ಅವನು ನನ್ನ ಅಪ್ಪನಲ್ಲ....ನಿಜವಾಗಿಯೂ ಆ ಕ್ಷಣಕ್ಕೆ ನನಗವನು ದೇವರಿಗಿಂತಲೂ ಮಿಗಿಲಾಗಿ ಬಿಟ್ಟಿದ್ದ.
ಅಳುತ್ತಲೇ ಅವನ ಬಳಿ ಓಡಿ ಹೋಗಿ.. ಅಪ್ಪಾ...ನನ್ನನ್ನು ಕ್ಷಮಿಸಿಬಿಡಪ್ಪ... ನಿನ್ನ ಹೊರತು ನನಗೂ ಯಾವ ಅಪ್ಪನೂ ಬೇಡ, ಅಮ್ಮನೂ ಬೇಡ... ಎಂದು ಹೇಳಿ ಅವನ ಕಾಲು ಹಿಡಿದು ನನ್ನ ಕಣ್ಣೀರಲ್ಲಿ ಅವನ ಪಾದ ತೊಳೆದು ಬಿಟ್ಟೆ.
ಆ ದಿನ ಅಮ್ಮನ ಅಂತ್ಯ ಸಂಸ್ಕಾರ ಎಲ್ಲಾ ಮುಗಿದು ನಂತರ ಮತ್ತೆ ಬೆಂಗಳೂರು ಸೇರಿದ್ದೆ ನಾನು.
ಎಲ್ಲರಿಗೂ ಅವರವರ ದೇವರುಗಳು,ಯಾರು ಯಾರೋ ಹೀರೋಗಳು ಇಷ್ಟ..
ಆದರೆ ನನ್ನ ಪಾಲಿನ ಹೀರೋ,ದೇವರು ಎಲ್ಲವೂ ನನ್ನ ಅಪ್ಪ ಒಬ್ಬನೇ ಆಗಿದ್ದ.
ಅವನ ತ್ಯಾಗ ಎಷ್ಟು ದೊಡ್ಡದು ಎಂದು ನನಗೆ ಮೊದಲ ಬಾರಿಗೆ ಅರಿವಾಯಿತು.
ನಂತರ ಕೆಲವೇ ದಿನಗಳಲ್ಲಿ ನನ್ನ ಆರೋಗ್ಯ ಹದಗೆಟ್ಟಿತು.
ಎರಡೂ ಕಿಡ್ನಿಯನ್ನು ಬದಲಾಯಿಸಿದ್ದರೆ ಬದುಕುವುದೇ ಕಷ್ಟ ಎಂದು ಡಾಕ್ಟರ್ ತಿಳಿಸಿದರು.
ನನ್ನ ಗಂಡ ಕಿಡ್ನಿ ಡೋನರ್ ಗಳನ್ನು ಸಂಪರ್ಕಿಸಿದ... ಯಾರೂ ಸಿಗಲಿಲ್ಲ.
ಜೀವನದ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದೆ ನಾನು.
ನನ್ನ ಗಂಡನಲ್ಲಿ ಹೇಳಿದೆ... ಕೊನೆಯ ಬಾರಿಗೆ ನನಗೆ ದೇವರ ದರ್ಶನ ಆಗದಿದ್ದರೂ ಪರವಾಗಿಲ್ಲ, ನನಗೆ ನನ್ನ ಅಪ್ಪನನ್ನು ಮಾತ್ರ ನೋಡಲೇಬೇಕು, ದಯವಿಟ್ಟು ಕರೆದುಕೊಂಡು ಬನ್ನಿ.. ಎಂದು ಹಠ ಹಿಡಿದೆ.
ವಿಷಯ ತಿಳಿದ ಅಪ್ಪ ಓಡೋಡಿ ಬೆಂಗಳೂರಿಗೆಯೇ ಬಂದು ಬಿಟ್ಟ.
ನನ್ನನ್ನು ಆ ಅವಸ್ಥೆಯಲ್ಲಿ ನೋಡಿ ಕಣ್ಣೀರು ಆದ... ಮಗಳೇ.. ದೇವರು ಇದ್ದಾನೆ ಕೈ ಬಿಡಲ್ಲ.. ನಮ್ಮ ಕೃಷ್ಣ ಏನಾದರೂ ಮಾಡ್ತಾನೆ,ನೀನು ಏನೂ ಟೆನ್ಶನ್ ಮಾಡ್ಬೇಡಮ್ಮ.. ಎಂದು ಸಮಾಧಾನ ಹೇಳಿದ್ದ ನನ್ನ ದೇವರಂತ ಅಪ್ಪ.
ಮರುದಿನವೇ ನನಗೆ ಕಿಡ್ನಿ ಡೋನರ್ ಸಿಕ್ಕಿ ಬಿಟ್ಟರು.
ಅಪ್ಪ ಅವನ ಒಂದು ಕಿಡ್ನಿಯನ್ನು ನನಗೆ ನೀಡಲು ನಿರ್ಧರಿಸಿ ಬಿಟ್ಟಾಗಿತ್ತು..!!
ನಾನು ಬೇಡ ಹೇಳಿದೆ..
ಅವನ ಕಾಲು ಹಿಡಿದೆ..!
ನೀನು ಬದುಕಿದರೆ ಅಲ್ಲಮ್ಮಾ... ನಾನೂ ಬದುಕುವುದು ಅಂದ.
ಕೊನೆಗೂ ಅಪ್ಪ ಕಿಡ್ನಿ ಕೊಟ್ಟ.
ನಾನೂ ಕೂಡ ಬದುಕಿದೆ...
ಹೇಗೋ ನರಕದಿಂದ ಪಾರಾಗಿದ್ದ ನಾನು.
ಅಪ್ಪ ನಕ್ಕು ಬಿಟ್ಟ.
ನಗು ನಗುತ್ತಲೇ ಊರಿಗೆ ಹಿಂದಿರುಗಿದ್ದ ಅವನು.
ಊರಿಗೆ ಹಿಂದಿರುಗಿದವನು ಮನೆಯಲ್ಲಿ ಕಾಲು ಜಾರಿ ಅವನ ತಲೆಯೇ ಒಡೆದು ಹೋಯಿತು!!
ನನ್ನ ಗಂಡ ಅಪ್ಪನನ್ನು ಬೆಂಗಳೂರಿನಲ್ಲಿಯೇ ಆಸ್ಪತ್ರೆಗೆ ಸೇರಿಸಿ ಬಿಟ್ಟರು.
ಅಪ್ಪ ತುಂಬಾ ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಟ, ಹೋರಾಟ ಎಲ್ಲವನ್ನೂ ಮಾಡಿ ಬಿಟ್ಟ.
ಕೃಷ್ಣ ನಲ್ಲಿ ಕೈ ಮುಗಿದು ಕೇಳಿದೆ... ಹೇಯ್ ಕೃಷ್ಣಾ... ದೇವರಂತ ನನ್ನ ತಂದೆಯನ್ನು ಉಳಿಸಿಕೊಡಪ್ಪಾ.. ಎಂದು.
ನನ್ನ ಅಪ್ಪ ಪ್ರಾರ್ಥಿಸಿದದ್ದರೆ ಖಂಡಿತಾ ಅವನು ಕೇಳಿದ್ದನ್ನು ಕೊಡುತ್ತಿದ್ದ. ಆದರೆ ಜೀವನದಲ್ಲಿ ದೇವರನ್ನು ನಾನು ಪ್ರಾರ್ಥಿಸಿದ್ದೆ ತುಂಬಾ ಕಡಿಮೆ... ಏಕೆಂದರೆ ನಾನು ನಂಬಿದ್ದ ದೇವರು ನನ್ನ ಅಪ್ಪ ಆಗಿದ್ದ ಮತ್ತು ನನ್ನ ಅಪ್ಪ ನಾನು ಕೇಳಿದ್ದ ಎಲ್ಲಾ ಕೊಡಿಸುತ್ತಿದ್ದ ಕಾರಣ ನನಗೆ ಕಾಣದ ದೇವರ ಅವಶ್ಯಕತೆಯೇ ಬಿದ್ದಿರಲಿಲ್ಲ.
ಆದರೂ ದೇವರ ಮುಂದೆ ಕೈ ಜೋಡಿಸಿ... ಕಣ್ಣೀರು ಹರಿಸಿ...ಕೊನೆಯ ಬಾರಿ ಎಂಬಂತೆ ಬೇಡಿ ಕೊಂಡಿದ್ದೆ... ನನಗಾಗಿ ಅಲ್ಲ, ನನ್ನ ಅಪ್ಪನಿಗಾಗಿ.
ಆದರೆ ಆ ಭಗವಂತನಿಗೆ ನನ್ನ ಕೂಗು ಕೇಳಲೇ ಇಲ್ಲ.
ಅಪ್ಟ ಜಾಸ್ತಿ ದಿನ ಬದುಕಲಿಲ್ಲ...!
ಕೊನೆಗೊಂದು ದಿನ ಕಣ್ಣು ಬಿಟ್ಟು ನನ್ನನು ನೋಡಿ.. ನೀನು ಸುಖವಾಗಿ ಇರಬೇಕು ಮಗಳೇ.. ಎಂದು ತೊದಲುತ್ತಲೇ ಹೇಳಿ ಆಸ್ಪತ್ರೆಯ ಬೆಡ್ ನಲ್ಲಿಯೇ ತನ್ನ ಉಸಿರು ಚೆಲ್ಲಿ ಬಿಟ್ಟಿದ್ದ ನನ್ನ ಅಪ್ಪ!!
ಸಾಯುವ ಮೊದಲೇ ಕೊನೆಯ ಬಾರಿಗೆ ವೈದ್ಯರಿಗೆ ಸ್ಪಷ್ಟವಾಗಿ ಸೂಚಿಸಿದ್ದನಂತೆ ನನ್ನ ಅಪ್ಪ... ನಾನು ಸಾಯುವ ಸಂಧರ್ಭವಿದ್ದರೆ.. ದಯವಿಟ್ಟು ನನ್ನದೊಂದು ಕಿಡ್ನಿಯನ್ನು ನನ್ನ ಮಗಳಿಗೆ ಹಸ್ತಾಂತರಿಸಿ ಬಿಡಿ ಎಂದು ಹೇಳಿ..ಪೇಪರ್ ಗೆ ಸಹಿ ಕೂಡ ಹಾಕಿದ್ದ.!
ಅವನ ಮೆದುಳು ನಿಷ್ಕ್ರಿಯವಾದ ಕೂಡಲೇ... ಇನ್ನು ಜಾಸ್ತಿ ಹೊತ್ತು ಬದುಕುವುದಿಲ್ಲ ಎಂದು ಅರಿತ ಡಾಕ್ಟರ್.. ಅಪ್ಪನ ಕಿಡ್ನಿಯನ್ನು ನನಗೆ ವರ್ಗಾಯಿಸಿ ಬಿಟ್ಟಿದ್ದರು.
ಕೊನೆಗೂ ತನ್ನ ಎರಡೂ ಕಿಡ್ನಿಯನ್ನೂ ನನಗೇ ಕೊಟ್ಟು... ನನಗೆ ಜೀವ.. ಜೀವನ ಎರಡನ್ನೂ ಕೊಟ್ಟು.. ತನ್ನ ಬಾಳಿನ ಆಟ ಮುಗಿಸಿ ನನ್ನ ಪಕ್ಕದಿಂದ ಹಾಗೇ ಸದ್ದೆ ಆಗದಂತೆ ಎದ್ದು ಹೋಗಿ ಬಿಟ್ಟಿದ್ದ ನನ್ನ ಅಪ್ಪ.
ಅಪ್ಪ ಸದಾ ಹೇಳುತ್ತಿದ್ದ... ಹೆದರಬೇಡ ಮಗಳೇ.. ಏನೂ ಆಗಲ್ಲ ಆ ದೇವರು ನಿನ್ನನ್ನು ಕಾಪಾಡುತ್ತಾನೆ.. ಎಂದು.
ಆದರೆ ನನ್ನನ್ನು ದೇವರು ಕಾಪಾಡಿದ್ದಾನೆ ಎಂದು ಎಂದಿಗೂ ನನಗೆ ಅನಿಸಲೇ ಇಲ್ಲ.
ಯಾಕೆಂದರೆ ಅಪ್ಪನೆಂಬ ದೇವರನ್ನು ಬಿಟ್ಟು ನಾನು ಬೇರೆ ಯಾವ ದೇವರನ್ನು ಇಲ್ಲಿಯವರೆಗೆ ನೋಡಿಯೇ ಇಲ್ಲ.
ಅವನು ನನ್ನನ್ನು ಹುಟ್ಟಿಸಲಿಲ್ಲ..
ಅವನ ದೇಹದ ರಕ್ತ ನನ್ನಲ್ಲಿ ಹರಿಯಲಿಲ್ಲ...
ಆದರೆ ನನ್ನ ಪಾಲಿಗೆ ಅವನಂತ ಶ್ರೇಷ್ಟ ಅಮ್ಮನಿಲ್ಲ... ಅವನಂತಹ ಶ್ರೇಷ್ಟ ಅಪ್ಪನಿಲ್ಲ.
ನನ್ನ ಅಪ್ಪ... ನನಗೆ ಎಲ್ಲವೂ ಆಗಿದ್ದರು.
ಆ ನಂತರ ನಾನು ಪ್ರತೀ ಕ್ಷಣವೂ ತುಂಬಾ ಅನಾಥೆ ಎಂದೇ ಅನ್ನಿಸಿ ಬಿಟ್ಟಿತ್ತು. .
ದೇವರು ಎಂಬುವವನು ಮೇಲೆ ಎಲ್ಲಾದರೂ ಇದ್ದರೆ ಅವನಲ್ಲಿ ನನ್ನದೊಂದು ಪ್ರಾರ್ಥನೆ ಇಷ್ಟೇ...
ಮುಂದಿನ ಜನ್ಮವೊಂದು ಇದ್ದರೆ...
ಆ ಜನ್ಮದಲ್ಲಿಯೂ ಕೂಡ ಅವರೇ ನನ್ನ ಅಪ್ಪ ಆಗಲಿ...ಅಷ್ಟೇ!!
.....................................................................................
#ಒಂದೊಂದು_ಕಥೆ..
Ab Pacchu
Moodubidire

Comments
Post a Comment