ನಾನು ಇದ್ದಿದ್ದಕ್ಕೆ ಸರಿ ಹೋಯಿತು..
ವಿಷಯ ಎಂತ ಗೊತ್ತುಂಟಾ.. ಮೊನ್ನೆ ಒಂದು ಕಡೆ ಔತಣಕ್ಕೆ ಕರೆದಿದ್ದರು.ಕರೆಯದೇ ಇದ್ದರೂ ಹೋಗ್ತ ಇದ್ದೆ ಅದು ಬೇರೆ ವಿಷಯ.. ಬೇರೆ ಮಾತು.
ಏಕೆಂದರೆ ಜನ ಭಯಂಕರ ಗುರ್ತದವರು.ಬಹಳ ಬಹಳ ಬೇಕಾದವರು.ಹೋಗದಿದ್ದರೆ ಯಾಕೆ ಬರ್ಲಿಲ್ಲ ಅಂತ ಅವರದ್ದೊಂದು ವರ್ಷವಿಡೀ ಪಿರಿಪಿರಿ ಇರ್ತದೆ ಎಂದು ಗೊತ್ತುಂಟು.ಹಾಗಾಗಿ ಹೋಗಿದ್ದೆ.
ಸಂಬಂಧಿಕರ ಮನೆ ಅಲ್ಲ.ಆದರೂ ಅವರ ಮನೆಯಲ್ಲಿ ಎಲ್ಲರೂ ಪರಿಚಯದವರೇ.ಅದು ಬೇರೆ ಅವರು... ಬೇಗ ಬಂದು ವ್ಯವಸ್ಥೆ ಎಲ್ಲಾ ಸ್ವಲ್ಪ ನೀನೇ ನೋಡ್ಕೋ ಬೇಕು.. ಸ್ವಲ್ಪ ಮೈಂಟೇನ್ ಮಾಡು.. ಎಂದು ಸವಿನಯದ ವಿನಂತಿ ಬೇರೆ ಮಾಡಿದ್ದರು. ಆಯಿತು ನಾನಿರುವಾಗ ಟೆನ್ಶನ್ ಯಾಕೆ.. ಊಟ ಬಡಿಸುವುದರಿಂದ ಹಿಡಿದು ಎಲ್ಲವನ್ನೂ ಮೈಂಟೇನ್ ಮಾಡುವ.. ಎಂದು ಆಶ್ವಾಸನೆ ಬೇರೆ ಕೊಟ್ಟಿದ್ದೆ. ಹಾಗಾಗಿ ಸ್ವಲ್ಪ ಬೇಗನೇ ಹೋಗಿದ್ದೆ.
ಹೋದ ಕೂಡಲೇ ಅಲ್ಲಿ ಅವರ ಸಂಬಂಧಿಕರ ನಾಲ್ಕೈದು ಪುಟ್ಟ ಮಕ್ಕಳು ಇದ್ದರು.ಅವರಿಗೆ ಸ್ವಲ್ಪ Entertain ಮಾಡುವ ಅಂತ ಮನಸ್ಸು ಆಯಿತು.ಹಾಗೇ ಜಾದು ಎಲ್ಲ ಮಾಡಿ ತೋರಿಸಿ ಅವರನ್ನು ಮರುಳು ಮಾಡಿದೆ.ಜಾದು ಅಂದ್ರೆ ಅದೇ ಮಾಮೂಲಿ ದೇಹವನ್ನು ಎರಡು ಕಟ್ ಮಾಡುವುದು,ಮಕ್ಕಳನ್ನು ಗಾಳಿಯಲ್ಲಿ ತೇಲಿಸುವುದು..ಖಾಲಿ ಕೊಡಪಾನದಿಂದ ನಿರಂತರವಾಗಿ ನೀರು ಬರಿಸುವುದು.. ಶೂನ್ಯದಿಂದ ಪಾರಿವಾಳ ತರಿಸುವುದು.. ಇದೆಲ್ಲ ಅಲ್ಲ ಆಯ್ತಾ .
ಈ ಬೆರಳನ್ನು ಕಟ್ ಮಾಡಿ ಎಳೆದಂತೆ ಮಾಡಿ ನೋಡುವವರನ್ನು ಮಂಗ ಮಾಡುವುದು...ಈಗ ಮನಸ್ಸಿನಲ್ಲಿಯೇ ಒಂದು ನಂಬರ್ ಯೋಚಿಸು ಅಂತ ಹೇಳಿ ಅದಕ್ಕೆ, ಕೂಡಿಸಿ, ಕಳೆದು, ಗುಣಿಸಿ..ಕೊನೆಗೆ ಅವರು ಎಣಿಸಿದ ನಂಬರ್ ಹೇಳುವುದು, ಮತ್ತೆ ಕಣ್ಣಿನ ರೆಪ್ಪೆಯನ್ನು ಒಳಗಿನಿಂದ ಮೇಲಕ್ಕೆ ಎಳೆದು, ನಾಲಗೆ ಹೊರಗೆ ಹಾಕಿ ದೆವ್ವದಂತೆ ಮಾಡಿ ಮಕ್ಕಳಿಗೆ ಹೆದರಿಸುವುದು ಇದೆಲ್ಲಾ ಮಾಡಿದೆ.ಮಕ್ಕಳು ನನ್ನ ಈ ಎಲ್ಲಾ ಚಮತ್ಕಾರ ಕಂಡು ಮೂಕವಿಸ್ಮಿತರಾದರು.
ನಂತರ ಅಲ್ಲೇ ಟೇಬಲ್ ಮೇಲೆ ಶರ್ಬತ್ ಮಾಡಿ ಇಟ್ಟಿದ್ದರು.ಒಂದೆರಡು ಚಿಕ್ಕ ಪೋರರು ಶರ್ಬತ್ ಕೊಡ್ಲಿಕ್ಕೆ ನಿಂತಿದ್ದರು.ಒಂದು ಗ್ಲಾಸ್ ಕುಡಿದೆ. ಬಹಳ ಚೆನ್ನಾಗಿತ್ತು. ಇನ್ನಷ್ಟು ಬೇಕು ಅಂತ ಅನಿಸಿತು.ಇದು ಯಾಕೆ ಇಷ್ಟು ಕಡಿಮೆ ಸಕ್ಕರೆ ಹಾಕಿದ್ದೀರಿ.. ಅಂದೆ. ಇಲ್ವಲ್ಲಾ.. ಸಿಹಿ ಸರಿಯಾಗಿಯೇ ಇತ್ತು ಆವಾಗ.. ಅಪ್ಪ ಕೂಡ ನೋಡಿದ್ರು ಎಂದ ಒಬ್ಬ ಭಯಂಕರ ಜವಾಬ್ದಾರಿ ಹೊತ್ತ ಹುಡುಗ. ಇಲ್ಲ ಮರ್ರೆ ಎಷ್ಟು ಎಂತೆಂತಹ ಶರ್ಬತ್ ಕುಡೀಲೀಲ್ಲ ನಾನು, ಈಗ ನಾನೇ ನೋಡಿದೆ ಅಲ್ವಾ.. ಸಕ್ಕರೆ ಕಡಿಮೆ ಆಗಿದೆ,ಸ್ವಲ್ಪ ಸಕ್ಕರೆ ಹಾಕಿ ಅಂದೆ.
ನೋಡಿ ಮತ್ತೆ ಹೆಚ್ಚು ಕಡಿಮೆ ಆದ್ರೆ ನಮಗೆ ಗೊತ್ತಿಲ್ಲ.. ಎಂದು ಹೇಳಿ ಅಲ್ಲೇ ಕೆಳಗೆ ಇದ್ದ ದೊಡ್ಡ ಸಕ್ಕರೆ ಡಬ್ಬದಿಂದ ಇನ್ನಷ್ಟು ಸಕ್ಕರೆ ಸುರಿದು,ಈಗ ನೀವೇ ಟೇಸ್ಟ್ ನೋಡಿ ಅಂತೆ .. ಅಂದ ಒಬ್ಬ ಹುಡುಗ. ಮೂರ್ನಾಲ್ಕು ಗ್ಲಾಸ್ ಚೆನ್ನಾಗಿ ಶರಬತ್ತು ಕುಡಿದು.. ಹಾನ್.. ಈಗ ಸಿಹಿ ಸರಿಯಾಯಿತು ನೋಡು.. ನಾನು ಇದ್ದಿದ್ದಕ್ಕೆ ಸರಿ ಹೋಯಿತು.. ಇಲ್ಲದಿದ್ದರೆ ಎಲ್ಲರೂ ಚಪ್ಪೆ ಶರಬತ್ತೇ ಕುಡೀಬೇಕಿತ್ತು.. ಹಹ್ಹಾ ಹಹ್ಹಾ.. ಅಂದೆ.
ಅವರಲ್ಲಿ ಒಬ್ಬ ಪೋಕ್ರಿ ಹುಡುಗ ಇದ್ದ..ಅವನು ಕೂಡ ಒಂದು ಗ್ಲಾಸ್ ಶರಬತ್ತು ಕುಡಿದ.. ಆಮೇಲೆ ಹೇಳಿದ.. ಇಲ್ವಲ್ಲಾ... ಸಿಹಿ ಆವಾಗಲೇ ಸರಿ ಇತ್ತು, ಈಗ ಒಟ್ರಾಸಿ ಜಾಸ್ತಿ ಆಯಿತು..ನೀವು ಶರ್ಬತ್ ಹಾಳು ಮಾಡಿದ್ರಿ.. ಇನ್ನು ನಮ್ಗೆ ಬೈತಾರೆ... ಎಂದು ಅವನ ಅಪ್ಪನನ್ನೋ, ಮಾವನನ್ನೋ ಕರೆದುಕೊಂಡು ಬರಲು ಮನೆಯೊಳಗೆ ಓಡಿದ.. ಇಲ್ಲಿ ನಿಂತರೆ ಕೆಲಸ ಕೆಡುವುದೆಂದು ಮನಗಂಡು ನಾನು ಅಲ್ಲಿಂದ ನಂತರ ಹೊರಗಡೆಯೇ ಇದ್ದ ಅಡುಗೆ ಕೋಣೆಯತ್ತ ಮುಖ ಮಾಡಿದೆ.
ಅಡುಗೆ ಭಟ್ಟರು ಹಪ್ಪಳ ಕರೀತಾ ಇದ್ದರು.ಕೊನೆಯ ಹಂತದ ಅಡುಗೆ. ಒಂದೆರಡು ಹಪ್ಪಳಗಳನ್ನು ಹಾಗೇ ಬಾಯಲ್ಲಿ ಹುಡಿ ಮಾಡುತ್ತಾ.. ಭಟ್ರೆ ಮಜ್ಜಿಗೆ ಎಲ್ಲಿ.. ಇನ್ನೂ ಆಗ್ಲಿಲ್ವಾ.. ಕೇಳಿದೆ.
ಅಲ್ಲೇ ಉಂಟಲ್ಲಾ.. ಅಂತ ಒಂದು ದೊಡ್ದ ಪಾತ್ರೆಯನ್ನು ತೋರಿಸಿದರು. ಸೀದಾ ಅದರತ್ತ ಹೋಗಿ ಒಂದು ಲೋಟ ಮಜ್ಜಿಗೆ ಕುಡಿದೆ. ಖಾರ ಖಾರವಾಗಿ ಚೆನ್ನಾಗಿತ್ತು.ಇನ್ನಷ್ಟು ಬೇಕು ಅನಿಸಿತು.
ಭಟ್ರೆ ಇದು ಯಾಕೆ ಇದಕ್ಕೆ ಇಷ್ಟೊಂದು ಕಡಿಮೆ ಉಪ್ಪು ಹಾಕಿದ್ದೀರಿ ಅಂದೆ.. ಹೌದಾ.. ಅಂತ ಭಟ್ರು ಇನ್ನಷ್ಟು ಉಪ್ಪು ಸುರಿದು.. ಈಗ ಉಪ್ಪು ಸರಿಯಾಯಿತಾ ನೋಡಿ ಅಂತೆ.. ಅಂದರು. ಎರಡು ಮೂರು ಗ್ಲಾಸ್ ಮಜ್ಜಿಗೆ ಕುಡಿದು... ಹಾನ್ ಈಗ ಸರಿಯಾಯಿತು... ನಾನು ಇದ್ದಿದ್ದಕ್ಕೆ ಸರಿ ಹೋಯಿತು ...ಇಲ್ಲದಿದ್ದರೆ ಇವತ್ತು ಎಲ್ಲರೂ ಈ ಚಪ್ಪೆ ಮಜ್ಜಿಗೆಯನ್ನೇ ಕುಡೀಬೇಕಿತ್ತು ಭಟ್ರೆ.. ಹಹ್ಹಾ.. ಹಹ್ಹಾ ಅಂದೆ ನಗುತ್ತಲೇ.
ಭಟ್ಟರ Assistant ಒಬ್ಬ ಇದ್ದ. ಅವನಿಗೆ ಏನೋ ಒಂದು ಭಯಂಕರ ಡೌಟು ಬಂದು.. .ಒಂದು ಲೋಟದಲ್ಲಿ ಮಜ್ಜಿಗೆ ಹಾಕಿಕೊಂಡು ಕುಡಿದು ನೋಡಿದ.. ಆಮೇಲೆ ಹೇಳಿದ.. ಆಗಲೇ ಉಪ್ಪು ಸರಿಯಾಗಿತ್ತು ಅಲ್ವಾ... ಈಗ ಇದು ಲೆಕ್ಕಕ್ಕಿಂತ ಜಾಸ್ತಿ ಆಯಿತು.. ಇನ್ನು ಇದನ್ನು ದೇವರೇ ಕುಡೀಬೇಕು ಅಂದ.ಇನ್ನು ಅಲ್ಲಿ ಜಾಸ್ತಿ ಹೊತ್ತು ನಿಲ್ಲುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಮನಸಿಗೆ ಅನ್ನಿಸಿ ಅಲ್ಲಿಂದ ಹೊರ ಬಂದೆ.
ಊಟಕ್ಕೆ ಇನ್ನೂ ಸ್ವಲ್ಪ ಹೊತ್ತು ಇತ್ತು..ಬೋರ್ ಬೇರೆ ಆಗ್ತಾ ಇತ್ತು. ಹಾಗಾಗಿ ಹಾಗೇ ಮೇಲಕ್ಕೆ ಹಾರಿ ಚಪ್ಪರಕ್ಕೆ ಕಟ್ಟಿದ್ದ ನಾಲ್ಕೈದು ಪುಗ್ಗೆಗಳನ್ನು ಒಡೆದು ಹಾಕಿದೆ.ಅದೇ ರೀತಿ ಕಂಬಕ್ಕೆ ಕಟ್ಟಿದ್ದ ಪುಗ್ಗೆಯನ್ನು ಕೂಡ ಹೀಗೆ ಸುಮ್ಮನೆ ಟೈಂ ಪಾಸ್ ಗೆ ಕೈಯಿಂದ ಮುಟ್ಟಿ, ಕುಟ್ಟಿ ಒಡೆದು ಹಾಕಿದೆ.
ಅದನ್ನು ನೋಡಿದ ಒಬ್ಬ ಕುತಂತ್ರಿ ಬಾಲಕ... ಅಕ್ಕಾ... ಈ ಮಾಮ ಬೆಲೂನ್ ಎಲ್ಲಾ ಒಡೆದು ಹಾಕಿ ನಾವು ನಿನ್ನೆಯಿಂದ ಕಷ್ಟ ಪಟ್ಟು ಮಾಡಿದ ಡೆಕೋಷರನ್ ಎಲ್ಲಾ ಹಾಳು ಮಾಡಿ ಹಾಕ್ತಾ ಇದ್ದಾರೆ... ಅಂದ ಬೊಬ್ಬೆ ಹಾಕುತ್ತಾ ದೂರು ಕೊಡಲು ಓಡಿದ. ಅವನು ಏನಾದರೂ ಆವಾಗಲೇ ನನ್ನ ಕೈಗೆ ಸಿಕ್ಕಿದ್ದರೆ ಅವನು ಹಿಡಿದು ಚೆನ್ನಾಗಿ ಚಚ್ಚಿ ಬಾರಿಸುತ್ತಿದ್ದೆ.
ಅವನು ಹೋದವನೇ ಯಾರೋ ಒಬ್ಬಳು ಹುಡುಗಿಯನ್ನು ಕರೆದುಕೊಂಡು ಬಂದ. ನೋಡಲು ಬಹಳನೇ ಚೆನ್ನಾಗಿದ್ದಳು. ಆದರೆ ನನ್ನ ಕೈಯಲ್ಲಿ ಒಡೆದು ಹಾಕಲೆಂದು ನಾನು ಕಿತ್ತು ಹಾಕಿದ್ದ ಫ್ರೆಶ್ ಪುಗ್ಗೆಯನ್ನು ನೋಡಿ ಅವಳ ಕಣ್ಣು ಕೆಂಪಗಾಗಿತ್ತು. ಏನ್ರಿ.. ನಿಮ್ಗೆ ಭಾಷೆ ಗಿಷೆ ಏನೂ ಇಲ್ವಾ...ಅಂತ ಅವಳು ಬಾಯಿ ಬಿಟ್ಟು ಹೇಳಲಿಲ್ಲ.. ಅದರೆ ಅವಳ ಹಾವಭಾವ ಹೆಚ್ಚು ಕಡಿಮೆ ಹಾಗೆಯೇ ಇತ್ತು. ಪಾಪ YouTube ನೋಡಿ ಏನೋ ಒಂದು ಡಿಫರೆಂಟ್ ಡೆಕೋಷರನ್ ಮಾಡಿದ್ದಳೋ ಏನೋ.. ನನಗೆ ಮಾಡ್ಲಿಕ್ಕೆ ಏನು ಬೇರೆ ಕೆಲಸ ಇರಿಲಿಲ್ಲ. ಹಾಗಾಗಿ ಅಭ್ಯಾಸ ಬಲದಿಂದ ಸುಮ್ಮನೆ ಕೈಗೆ ಸಿಕ್ಕ ಪುಗ್ಗೆ ಗಳನ್ನು ಒಡೆದು ಹಾಕಿದ್ದೆ.ಆ ಹುಡುಗ ಒಬ್ಬನೇ ಸಿಗ್ಲಿ.. ಅವನಿಗೆ ಏನಾದರೂ ಒಂದು ಸರಿಯಾಗಿ ಮಾಡಲೇಬೇಕು.. ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಕೊಂಡು ಅಲ್ಲಿಂದ ಬೇರೊಂದು ಕಡೆಗೆ ತಿರುಗಿದೆ.
ಊಟ ಆದ ನಂತರ ಕೈ ತೊಳೆಯಲು ನೀರಿನ ವ್ಯವಸ್ಥೆ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಹೋದೆ.. ದೊಡ್ಡ ಡ್ರಮ್ ಏನೋ ಇತ್ತು. ಆದರೆ ನೀರು ತುಂಬಿಸಿ ಇಟ್ಟಿರಲಿಲ್ಲ. ಶೇ.. ಇಲ್ಲಿ ಒಬ್ಬರಿಗೂ ಜವಾಬ್ದಾರಿ ಇಲ್ಲ ಅಂದುಕೊಂಡು... ಅಲ್ಲಿಯೇ ಇದ್ದ ಟ್ಯಾಪ್ ಗೆ ಪೈಪ್ ಸಿಕ್ಕಿಸಿ,ಡ್ರಮ್ ಕಡೆಗೆ ಪೈಪ್ ನ ತುದಿ ಎಳೆದೆ. ಅಷ್ಟೇ... ನಲ್ಲಿಯ ಟ್ಯಾಪ್ ಕಟ್ಟಾಗಿ ಪೈಪ್ ಜೊತೆಗೆಯೇ ಬಂದಿತ್ತು !
ಪುಣ್ಯಕ್ಕೆ ಯಾರೂ ನೋಡಿಲ್ಲ ಎಂದುಕೊಂಡು ಅಲ್ಲೇ ಪೈಪು ಮತ್ತು ಟ್ಯಾಪ್ ಇಟ್ಟು ಮೆಲ್ಲ ಕಳ್ಳನಂತೆ ಮನೆಯ ಕಡೆಗೆ ಹೋಗಲು ತಿರುಗಿದೆ.ನನ್ನನ್ನೇ ಒಬ್ಬರು ಅಜ್ಜಿ ದುರುಗುಟ್ಟಿ ನೋಡುತ್ತಿದ್ದರು.. ಇವರು Confirm ಇವರ ಜಮದಗ್ನಿಯಂತಹ ಮಗನಿಗೋ.. ಮಗಳಿಗೋ ಈಗ ಹೇಳ್ತಾರೆ ಎಂದು ಅರ್ಥವಾಗಿ ಅಲ್ಲಿ ಒಂದೂ ಕ್ಷಣವೂ ನಿಲ್ಲದೇ,ಅಡುಗೆ ಮನೆಯಲ್ಲಿ ಪಾಯಸದ ಸಿಹಿ ಸರಿ ಇರಬಹುದೋ ಇಲ್ಲವೋ ಎಂದು ಚೆಕ್ ಮಾಡಲು ವೇಗವಾಗಿ ನಡೆಯ ತೊಡಗಿದೆ. ಅಜ್ಜಿ ಜೋರಾಗಿ ಯಾರು ಯಾರನ್ನೋ ಕರೆಯುತ್ತಿದ್ದರು..
...................................................................................
#ವಿಷಯ_ಎಂತ_ಗೊತ್ತುಂಟಾ..
ab pacchu
moodubidire

Comments
Post a Comment