ನಾನು ಒಳ್ಳೆಯವನಾ..?

 


ಅವನು ನನ್ನ ಫ್ರೆಂಡ್. 


ನನ್ನ ರೂಮ್ ಮೇಟ್ ಕೂಡ ಹೌದು. 


ಅವನು ಬರೀ ಒಳ್ಳೆಯವನಲ್ಲ.


ತುಂಬಾ ತುಂಬಾ ಒಳ್ಳೆಯವನು. 


ಅವನು ಯಾವತ್ತೂ ನನ್ನ ಜೊತೆ ಜಗಳವಾಡಿದವನಲ್ಲ. 


ಆದರೆ ಆ ದಿನ ಆ ರಾತ್ರಿ ನನ್ನ ಕೆನ್ನೆಗೆರಡು  ಜೋರಾಗಿ ಬಾರಿಸಿಯೇ ಬಿಟ್ಟಿದ್ದ..! 


ಏಕೆ...? ಎಂದು ಕೆನ್ನೆ ಒರೆಸಿಕೊಂಡು ಅವನಲ್ಲಿಯೇ ಕೇಳಿದ್ದೆ ನಾನು. 


ನೀನು ನನ್ನ ಪರ್ಸಿನಿಂದ ದುಡ್ಡು ಕದ್ದಿದ್ದೀಯ.. ನನಗೆ ಗೊತ್ತು ನೀನೇ ಕದ್ದಿದ್ದು ಎಂದು,ನೀನು ಹೀಗೆ ಮಾಡುತ್ತೀ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ.. ಎಂದು ನನ್ನ ಶರ್ಟಿನ ಕಾಲರ್ ಹಿಡಿದು ಮತ್ತೆ ನನ್ನ ಕೆನ್ನೆಗೆರಡು ಬಿಟ್ಟ!


ನಾನು ಏನೂ ಹೇಳಲಿಲ್ಲ.


ಅವನೆದುರು ನಿಂತೇ ಇದ್ದೆ. 


ಅವನ ಕೋಪ ಕಡಿಮೆ ಆಗುವವರೆಗೂ ನನಗೆ ಹೊಡೆಯುತ್ತಲೇ ಇದ್ದ..


ಅವನು ಹೊಡೆದು ಹೊಡೆದು ನನ್ನ ಕೆನ್ನೆ ಕೆಂಪಗಾಗಿ ಹೋಗಿತ್ತು.


ಅವನ ಬೆರಳಿನಚ್ಚು ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. 


ಅವನು ನನ್ನ ಶರ್ಟು ಕೂಡ ಹರಿದು ಹಾಕಿದ.


ನಾನು ಯಾವುದೇ ಪ್ರತೀರೋಧ ತೋರಲಿಲ್ಲ. 


ಸುಮ್ಮನೆ ನಿಂತೇ ಇದ್ದೆ. 


ಕೊನೆಗೊಮ್ಮೆ ಕಾಲಿನಿಂದ ನನ್ನನ್ನು ಒದ್ದು, ರೂಮಿನಿಂದ ನನ್ನನ್ನು ಹೊರಗೆ ಹಾಕಿ, ರೂಮಿನ ಬಾಗಿಲು ಹಾಕಿಯೇ ಬಿಟ್ಟಿದ್ದ ನನ್ನ ಆ  ಗೆಳೆಯ...! 


ಆ ರಾತ್ರಿ ನಾನು ಬೀದಿಯಲ್ಲಿ ನಿಂತಿದ್ದೆ.


ಜೋರು ಮಳೆ ಬಿಡದೇ ಸುರಿಯುತ್ತಿತ್ತು. 


ನಿಜ ಹೇಳಬೇಕೆಂದರೆ ನಾನು ಅವನ ಹಣವನ್ನು ಕದ್ದಿರಲಿಲ್ಲ. 


ಆದರೆ ಅದನ್ನು ಅವನಿಗೆ ಹೇಳಬೇಕು ಎಂದು ನನಗೆ ಆ ಕ್ಷಣ ಅನ್ನಿಸಿರಲಿಲ್ಲ. 


ನನಗೆ ಮಾತ್ರ ಗೊತ್ತಿದ್ದ ಸತ್ಯ ಏನೆಂದರೆ.. ನಾನು ಆ ರಾತ್ರಿ  ನನ್ನ ಗೆಳೆಯ ಹಣ ನಿಜವಾಗಿಯೂ ಕದ್ದಿರಲಿಲ್ಲ.. 


ಹೌದು ಕೇವಲ ಆ ರಾತ್ರಿ ಮಾತ್ರ ನಾನು ಅವನ ಹಣ ಕದ್ದಿರಲಿಲ್ಲ..!


ಆದರೆ...ಅದಕ್ಕಿಂತ ಹಿಂದೆ ಎಷ್ಟೋ ಸಲ ಹಣ ಕದ್ದಿದ್ದೆ..!!


ಹೌದು ತುಂಬಾ ಸಲ ಅವನ ಹಣವನ್ನು ಕದ್ದಿದ್ದೆ ನಾನು..


ಬರೀ ಹಣ ಮಾತ್ರ ಕದ್ದಿರಲಿಲ್ಲ.. 


ಅವನ ಬಂಗಾರದ ರಿಂಗ್ ಒಂದನ್ನು  ಕೂಡ ಕದ್ದಿದ್ದೆ. 


ಆದರೆ ಅದು ಅವನಿಗೆ ಗೊತ್ತಿರಲಿಲ್ಲ.. ಎಲ್ಲೋ ಅವನೇ ಕಳೆದು ಕೊಂಡಿರಬಹುದು ಎಂದು ಸುಮ್ಮನಾಗಿದ್ದ,ಏಕೆಂದರೆ ಅವನು ನನ್ನನ್ನು ನಂಬಿದ್ದ. 



ಅವನ ಹೆಸರು ವಿಲಾಸ್. 


ನನ್ನ ಗೆಳೆಯ.. ನನ್ನ ರೂಮೇಟ್


ಆದರೆ ಅವನು ಶ್ರೀಮಂತ.


ಅದೇ.... 


ಅದೇ ಅವನ ಏಕೈಕ ತಪ್ಪು..! 


ಅವನು ಶ್ರೀಮಂತನಾಗಿ ಇದ್ದದ್ದೇ..ಶ್ರೀಮಂತನಾಗಿ ಹುಟ್ಟಿದ್ದೇ ಅವನ ಜೀವನದ ಅತೀ ದೊಡ್ಡ ತಪ್ಪು. 


ಚಿಕ್ಕಂದಿನಿಂದಲೂ ನನಗೊಂದು ಹವ್ಯಾಸ ಇತ್ತು. 


ಕೆಲವರಿಗೆ ಹವ್ಯಾಸ ಎಂದರೆ... ಪುಸ್ತಕ ಓದುವುದು ,ನಾಣ್ಯ - ಸ್ಟ್ಯಾಂಪ್ ಸಂಗ್ರಹ ಮಾಡುವುದು ,ಟ್ರೆಕ್ಕಿಂಗ್ ಹೋಗುವುದು .. ಹೀಗೆ ಏನೋ ಒಂದು ಮಾಡುವ ಹವ್ಯಾಸ ಇರುತ್ತದೆ. 


ಆದರೆ ನಾನು ಚಿಕ್ಕಂದಿನಿಂದಲೇ  ಹಣ ಕದೀತಾ ಇದ್ದೆ.


ಹೌದು ಕದಿಯುವುದು ನನ್ನ ಹವ್ಯಾಸ. 


ಆದರೆ ಬರೀ ಶ್ರಿಮಂತರ ಪರ್ಸುಗಳಿಂದ ಮಾತ್ರ ಹಣ ಕದೀತಾ ಇದೆ. 


ಏಕೆಂದರೆ ನಾನು ಬಡವನಾಗಿದ್ದೆ..!


ಆದರೆ ನಾನು ಬಡವ ಎಂಬ ಕಾರಣಕ್ಕಾಗಿಯೇ  ನಾನು ಹಣ ಕದೀತಾ ಇರಲಿಲ್ಲ. 


ಶ್ರಿಮಂತರ ಮಕ್ಕಳ ಹಣದ ಮದ,ದರ್ಪ ನನಗೆ ಎಂದಿಗೂ ಹಿಡಿಸುತ್ತಿರಲಿಲ್ಲ. 


ಅವರು ಕೂಡ ಅಳುವುದು.. ಪೇಚಾಡುವುದನ್ನು ನೋಡಲು ನಾನು ಹಾತೊರೆಯುತ್ತಿದ್ದೆ.. ಅದಕ್ಕಾಗಿ ಕ್ಷಣ ಕ್ಷಣವೂ ಕಾತರಿಸುತ್ತಿದ್ದೆ. 


ಹಾಗಂತ ಅವರ ಕದ್ದ ಹಣದಲ್ಲಿ ನಾನು ಎಂದಿಗೂ ಮಜಾ ಮಾಡಿದವನಲ್ಲ.


ಬೀದಿ ಬದಿಯಲ್ಲಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ ವೃದ್ಧ ಭಿಕ್ಷುಕರಿಗೆ ಕದ್ದ ಹಣವನ್ನು ಹಾಕಿ ನಾನು ಮನೆ ಸೇರುತ್ತಿದ್ದೆ. ಆ ರಾತ್ರಿಯೆಲ್ಲ ನನಗೊಂದು ದಿವ್ಯ ನಿದ್ದೆ ಬರುತ್ತಿತ್ತು. 


ಯಾವ ದಿನ ಒಬ್ಬ ಶ್ರಿಮಂತನ ಮಗ ಹಣ ನನ್ನಿಂದಾಗಿ  ಕಳೆದುಕೊಂಡು ಅಳುತ್ತಾನೋ...ಆ ದಿನವೇ ನನಗೆ ನೆಮ್ಮದಿಯ ನಿದ್ದೆ. 


ಬಾಕಿ ದಿನಗಳಲ್ಲಿ ನಾನು ಆ ದಿನಕ್ಕಾಗಿ ಚಡಪಡಿಸುತ್ತಿದ್ದೆ. 


ಕದಿಯುವುದಕ್ಕಾಗಿ ಹೊಂಚು ಹಾಕುತ್ತಿದ್ದೆ... 


ಕದಿಯುವುದು ನನಗೆ ಬರೀ ಸುಖ ಕೊಡುತ್ತಿರಲಿಲ್ಲ.. 


ಶ್ರೀಮಂತ ಮಕ್ಕಳ ಕಣ್ಣೀರು ನನಗೆ ವಿಕೃತವಾದ ಆನಂದವನ್ನೇ ತರುತ್ತಿತ್ತು.


ಆದರೆ ಬರೀ ಆ ಆನಂದಕ್ಕಾಗಿಯೇ  ನಾನು ಹಾಗೆ ಮಾಡುತ್ತಿದ್ದೆನೇ..?


ಇಲ್ಲ...!


ಖಂಡಿತವಾಗಿಯೂ ಇಲ್ಲ.. 


ಇನ್ನೂ ಒಂದು ಬಲವಾದ  ಕಾರಣವಿತ್ತು. 


ಚಿಕ್ಕಂದಿನಲ್ಲಿ ಸ್ಕೂಲ್ ನಲ್ಲಿ ನಾನು ಕದಿಯದೇ ಇದ್ದರೂ ಶ್ರೀಮಂತರ ಮನೆಯ ಹುಡುಗ ಒಬ್ಬ,ಅವನ ಹಣ ನಾನೇ ಕದ್ದೇ ಎಂದು ಸುಳ್ಳು ಆರೋಪ ಮಾಡಿದ್ದ. 


ನಾನು ಬಡವನಾಗಿದ್ದೆ.. ಹರಿದ ಬಟ್ಟೆ ಹಾಕಿದ್ದೆ ನಿಜ..ಆದರೆ ನಾನು ಕಳ್ಳತನ ಮಾಡುವವರ ಮನೆಯ ಮಗ ಆಗಿರಲಿಲ್ಲ.ನನ್ನ ಅಪ್ಪ ಅಮ್ಮ ನಾನು ಕೂಡ ಚೆನ್ನಾಗಿ ಕಲಿತು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಕಷ್ಟ ಪಟ್ಟು ಬೆವರು ಸುರಿಸಿ,ರಕ್ತ ಹರಿಸಿಯೇ ಯಾರು ಯಾರೋ ಮನೆಯಲ್ಲಿ ದುಡಿದು ಒಂದೊಳ್ಳೆಯ ಸ್ಕೂಲ್ ಗೆ ಸೇರಿಸಿದ್ದರು ನನ್ನನ್ನು. 


ಆ ದಿನ ಸ್ಕೂಲ್ ನ ಎಲ್ಲಾ ಮಕ್ಕಳು ನನಗೆ ಅಪಮಾನ ಮಾಡಿದರು. 


ನನ್ನನ್ನು ಕಳ್ಳ ಕಳ್ಳ ಎಂದು ಕರೆದರು. 


ಕೊನೆಗೆ ಆ ಶಾಲೆ ಬಿಡುವವರೆಗೂ ನನ್ನನ್ನು ಆ ಶಾಲೆಯ ಎಲ್ಲಾ ಮಕ್ಕಳು ಕಳ್ಳ ಎಂದೇ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. 


ಅವತ್ತೇ ನಿರ್ಧರಿಸಿದ್ದೆ.. 


ಇನ್ನು ಮುಂದೆ ನಾನು ನಿಜವಾಗಿಯೂ ಕದೀಯುತ್ತೇನೆ ಎಂದು. 


ಅವಮಾನ ಮಾಡಿದ ಶ್ರಿಮಂತರ ಮಕ್ಕಳದ್ದೇ ದುಡ್ಡು ಕದಿಯುತ್ತೇನೆ  ಎಂದು.


ಈ ರೀತಿಯಾಗಿ ನಾನು ಚಿಕ್ಕಂದಿನಿಂದಲೂ ಕದಿಯಲು ಆರಂಭಿಸಿದೆ. 


ಕದ್ದ ಹಣವನ್ನು ಭಿಕ್ಷುಕರ ತಟ್ಟೆಗೆ ಹಾಕಲು ನಾನು ಎಂದಿಗೂ  ಮರೆಯುತ್ತಿರಲಿಲ್ಲ. 


ದಿನಾಲೂ ಅವರ ತಟ್ಟೆಗೆ ಬೀಳುತ್ತಿದ್ದ ಐದು ರೂಪಾಯಿ, ಹತ್ತು ರೂಪಾಯಿಗಳನ್ನು ನೋಡಿ ವೃದ್ಧ ಭಿಕ್ಷುಕರು.. ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಪ್ಪ ಎಂದು ಮನಸಾರೆ ಹರಸುತ್ತಿದ್ದರು. ಆದರೆ ಅದರ ಬಗ್ಗೆ ನನಗೆ ಅಂತಹ ಯಾವುದೇ ಆಸಕ್ತಿ ಇರಲಿಲ್ಲ. ಏಕೆಂದರೆ ನನ್ನ ಉದ್ದೇಶವೇ ಬೇರೆ ಇದ್ದದ್ದು,ಭಿಕ್ಷುಕರಿಗಾಗಿ ಹಣ ಕದಿಯುವವ ನಾನಗಿರಲಿಲ್ಲ.. 


ಆದರೂ ಅವರ ಕಣ್ಣುಗಳಲ್ಲಿ ನನ್ನ ಬಗ್ಗೆ ಆಶೀರ್ವಾದದ ಭಾವವಿತ್ತು. 


ಆದರೆ ನನ್ನ ಕಣ್ಣಿನಲ್ಲಿ... ಮನಸ್ಸಿನಲ್ಲಿ.. ಶ್ರಿಮಂತ ಮಕ್ಕಳ ಬಗ್ಗೆ ಬರೀ ದ್ವೇಷ ಒಂದೇ ನೆಲೆಸಿತ್ತು. 


ಅವರ ಜೇಬಿನಿಂದ, ಬ್ಯಾಗ್ ನಿಂದ ಹಣ ತೆಗೆಯಲು ಆಗದಿದ್ದರೆ ನಾನು ಇನ್ನೂ ದೊಡ್ಡದು ಏನಾದರೂ ಕದಿಯಲು ಪ್ರಯತ್ನಿಸುತ್ತಿದ್ದೆ. 


ಹೌದು.. ನಾನು ಚಿಕ್ಕಂದಿನಲ್ಲಿಯೇ ಚಿನ್ನಕ್ಕೆ ಹೊಂಚು ಹಾಕಿದ್ದೆ. 


ನೆನಪಿದೆ.. ಅವರುಗಳ ಎಳೆಯ ಚಿನ್ನದ ಸರಗಳನ್ನು ಹಲವು ಬಾರಿ ನಾನು ಅವರಿಗೆ ಗೊತ್ತಾಗದಂತೆ ಎಗರಿಸಿದ್ದೆ. 


ಅದನ್ನು ತೆಗೆದು ಕೊಂಡು ಹೋಗಿ ಸೇತುವೆಯಿಂದ ಕೆಳಗೆ ರಭಸವಾಗಿ  ಹರಿಯುವ ನದಿಗೆ ಎಸೆದು ..ಹಹ್ಹಾ.. ಹಹ್ಹಾ.. ಎಂದು ಗಹಗಹಿಸಿ ನಕ್ಕಿದ್ದೆ..


ಕೆಲವೊಮ್ಮೆ ಕದಿಯಲು ಏನೂ ಸಿಗುತ್ತಿರಲಿಲ್ಲ. 


ಆದರೆ ನಾನು ಪ್ರಯತ್ನ ನಿಲ್ಲಿಸುತ್ತಿರಲಿಲ್ಲ. 


ರಾತ್ರಿಯಲ್ಲು ನನಗೆ ಬರೀ ಕದಿಯುವ ಕನಸುಗಳೇ ಬೀಳುತ್ತಿದ್ದವು. 


ಕೊನೆಗೆ ಏನೂ ಸಿಗದೇ ಇದ್ದಾಗ.. ಆ ಮಕ್ಕಳ ಕಂಪಾಸ್ ಬಾಕ್ಸ್, ಲಂಚ್ ಬಾಕ್ಸ್ ಕದ್ದು ಅದನ್ನು ನಾನು ನದಿಗೆ ಎಸೆದು ಮನೆಗೆ ಹೋಗಿದ್ದೆ. 


ನನ್ನ ಹೆಚ್ಚಿನ ಕಳ್ಳತನಕ್ಕೆ ಸಾಕ್ಷಿ ಆ ಸೇತುವೆ ಮತ್ತು ಆ ನದಿ. 


ಆದರೆ ನನಗೆ ಗೊತ್ತು ಅವುಗಳು ಎಂದೂ ಸಾಕ್ಷಿ ಹೇಳಲಾರವು..! 


ಆ ನಂತರವೂ  ನಾನು ಈ ರೀತಿಯಾಗಿಯೇ ಹೈಸ್ಕೂಲ್, ಪಿಯುಸಿ, ಡಿಗ್ರಿ ಗಳಲ್ಲಿ, ನನಗೆ ಆಗದ  ಹೆಚ್ಚಿನ ಶ್ರೀಮಂತರ ಮಕ್ಕಳ ಪರ್ಸಿನಿಂದ ಹಣ ಕದಿಯುವುದನ್ನು ನಿಲ್ಲಿಸಲಿಲ್ಲ. 


ಆದರೆ ಒಮ್ಮೆಯೂ ಎಲ್ಲಿಯೂ ನಾನು ಸಿಕ್ಕಿ ಬಿದ್ದಿರಲಿಲ್ಲ. 


ಅದೇ ರೀತಿ ಕದ್ದ ಒಂದೇ ಒಂದು ರೂಪಾಯಿಯನ್ನು ಸಹ ನಾನು ನನಗಾಗಿ ಎಂದಿಗೂ ಬಳಸಿಕೊಂಡಿದ್ದು ಕೂಡ ಇಲ್ಲ. 


ಆನಂದ.. 


ವಿಕೃತವಾದ ಆನಂದ ದೊರೆಯುತ್ತಿತ್ತು ನನಗೆ.


ಮತ್ತು ನನಗೆ ಅದೊಂದೇ ಜೀವನದ ಪರಮ ಸಂತೋಷವಾಗಿತ್ತು. 



ಕದ್ದ ದಿನ ಕಾಲೇಜಿನ ಟಾಯ್ಲೆಟ್ ಗೆ ಹೋಗಿ,ಬಾಗಿಲು ಹಾಕಿಕೊಂಡು ನಲ್ಲಿಯಲ್ಲಿ ಜೋರಾಗಿ ನೀರು ಬಿಟ್ಟುಕೊಂಡು ಒಬ್ಬನೇ ನಿಂತು ನಿಮಿಷ ಗಟ್ಟಲೆ ಗಹಗಹಿಸಿ ನಗುತ್ತಿದ್ದೆ.ನಲ್ಲಿಯ ಜೋರಾದ ನೀರಿನ ಶಬ್ಧಕ್ಕೆ ನನ್ನ ನಗುವಿನ ಶಬ್ಧ ಹೊರಗೆ ಯಾರಿಗೂ ಕೇಳಿಸುತ್ತಿರಲಿಲ್ಲ.. ನಾನು ಈ ರೀತಿ ನಕ್ಕು ಹಗುರವಾಗುತ್ತಿದ್ದೆ. 


ನಕ್ಕಾಗ ಆನಂದ ಇಮ್ಮಡಿಯಾಗುತ್ತಿತ್ತು.. 


ಮತ್ತಷ್ಟು ಕದಿಯಬೇಕು ಎಂಬ ಹುಮ್ಮಸ್ಸು ಮತ್ತಷ್ಟು ಬೆಳೆಯುತ್ತಿತ್ತು. 


ನಿಜ ಹೇಳಬೇಕೆಂದರೆ ನನ್ನೊಳಗೆ ಒಬ್ಬ ರಾವಣ.. ಅಥವಾ ಒಬ್ಬ ದುರ್ಯೋಧನ ಎಂದಿಗೂ ಇರಲಿಲ್ಲ.


ಬಹುಶಃ ಅವರು ಇಬ್ಬರೂ ನನ್ನೊಳಗೆ ಒಟ್ಟಿಗೆ ಇದ್ದಿರಬೇಕು ಅಂತ ಹಲವು ಸಲ ನನಗೆ ಅಟ್ಟಹಾಸಗೈದು ನಗುವಾಗ ಅನ್ನಿಸುತ್ತಿತ್ತು.. 


ನಾನು ಹೆಚ್ಚಾಗಿ ಒಬ್ಬನೇ ಇರುತ್ತಿದ್ದೆ. 


ನನಗೆ ಗೆಳೆಯರು ಇರಲಿಲ್ಲ. 


ಮಕ್ಕಳು ಚಿಕ್ಕಂದಿನಿಂದಲೂ ದೊಡ್ಡವನಾಗಿ ಅದು ಆಗಬೇಕು.. ಇದು ಬೇಕು.. ಡಾಕ್ಟರ್ ಆಗಬೇಕು.. ಇಂಜಿನಿಯರ್ ಆಗಬೇಕು.. ಪೋಲಿಸ್ ಆಗಬೇಕು ಎಂದು ಕನಸು ಕಾಣುತ್ತಾರೆ. 


ನಾನು ಕೂಡ ಕನಸು ಕಂಡಿದ್ದೆ. 


ಜೀವನ ಪೂರ್ತಿ ಕೇವಲ ಒಂದೇ ಕನಸು ಕಂಡಿದ್ದೆ. 


ನನ್ನನ್ನು ಕಳ್ಳ ಎಂದು ಅಪಮಾನ ಮಾಡಿದ್ದ ಈ ಶ್ರೀಮಂತರ ಮಕ್ಕಳ ನಗುವನ್ನು ದಿನಾಲೂ ಕದಿಯಬೇಕು.. ಹೇಗೆ ಕದಿಯಬೇಕು.. ಎಲ್ಲಿ ಕದಿಯಬೇಕು.. ಏನು ಕದಿಯಬೇಕು..ಎಷ್ಟು ಕದಿಯಬೇಕು.. ಹಹ್ಹಾ.. ಹಹ್ಹಾ.. ಇಷ್ಟೇ.. ಬರೀ ಇಷ್ಟೇ ನನ್ನ ಕನಸುಗಳು..


ನಾನು ಕನಸಿನಲ್ಲೂ ರಾವಣನಂತೆ.. ದುರ್ಯೋಧನನಂತೆ ಬರೀ  ಅಟ್ಟಹಾಸ ಗೈದು ನಗುತ್ತಿದ್ದೆ.


ಹೌದು ನಾನು ಟಾಯ್ಲೆಟ್ ನ ನಾಲ್ಕು ಗೋಡೆ ಮತ್ತು ಜೋರಾಗಿ ಹರಿಯುತ್ತಿದ್ದ ಆ ನಲ್ಲಿ ನೀರಿನ ಶಬ್ಧದೊಳಗೆ ನಗುವುದನ್ನು ಬಿಟ್ಟರೆ... ಮನಸಾರೆ ನಗುತ್ತಿದ್ದದ್ದು ಬರೀ ಕನಸಿನಲ್ಲಿ ಮಾತ್ರ. 


ನಿಜ ಜೀವನದಲ್ಲಿ ನಾನು ಎಂದೂ ನಕ್ಕವನಲ್ಲ. 


ಎಲ್ಲರ ಎದುರು ನನಗೆ ಮನಸಾರೆ ನಗಲು ಬರುವುದಿಲ್ಲ. 


ನಗುವಿಗಿಂತ ದೊಡ್ಡ ಆಭರಣವಿಲ್ಲ.. ಎಂದು ಕನ್ನಡ ಪ್ರಾಧ್ಯಾಪಕರು ಒಮ್ಮೆ  ಪಾಠದ ನಡುವೆ ಹೇಳಿದ್ದಾಗ ನಾನು ಒಮ್ಮೆ ನಕ್ಕಿದ್ದು ನೆನಪಿದೆ. 


ಏಕೆಂದರೆ ನನ್ನ ಪಾಲಿಗೆ ಅದು ಸುಳ್ಳು ಆಗಿತ್ತು.. ಆಭರಣ ಕದ್ದರೆ ಮಾತ್ರ ನನ್ನನ್ನು ನಗು ಆವರಿಸುತ್ತಿತ್ತು.. ಅಟ್ಟಹಾಸಗೈಯುತ್ತಿತ್ತು.. ನನ್ನೊಳಗೆ ವಿಜೃಂಭಿಸುತ್ತಿತ್ತು. ನನಗೆ ಕದ್ದ ಶ್ರೀಮಂತ ಮಕ್ಕಳ ಆಭರಣಗಳೇ ನಗು.. ಹಹ್ಹಾ.. ಹಹ್ಹಾ..


ನಕ್ಕಿದ್ದು ಮಾತ್ರವಲ್ಲ...ನಾನು ಅತ್ತಿದ್ದು ಕೂಡ ಇಲ್ಲ.


ನಾನು ಬೇರೆಯವರನ್ನು ಅಳಿಸುವವನು....ಕಣ್ಣೀರು ಸುರಿಸುವವನು.. ಅವರ ನೋವ ಕಂಡು ಮನಸ್ಸಿನಲ್ಲಿಯೇ ನಗುವವನು..


ಹೌದು ಆವಾಗಲೇ ನಾನು ಒಳಗೊಳಗೆ ಮನಸಾರೆ ನಗುವವನು.. ಹಹ್ಹಾ.. ಹಹ್ಹಾ.. 



ಹ್ಞೂ.. ಕೊನೆಗೊಮ್ಮೆ ನನ್ನ ಕಾಲೇಜು ಕೂಡ ಮುಗಿಯಿತು.


ಓದುವುದರಲ್ಲಿ  ಬಹಳ ಹುಶಾರು ಇದ್ದೆ ನಾನು. 


ಹಾಗಾಗಿ ಓದು ಮುಗಿದ ಕೂಡಲೇ  ಕೆಲಸ ಕೂಡ ಸಿಕ್ಕಿತು. 


ಆವಾಗ ನನಗೆ ರೂಮ್ ಮೇಟ್ ಆಗಿ ಸಿಕ್ಕಿದ್ದೇ ಈ ವಿಲಾಸ್.


ವಿಲಾಸ್ ನನಗೆ ಡಿಗ್ರಿಯಲ್ಲಿ ಕ್ಲಾಸ್ ಮೇಟ್.


ಶ್ರೀಮಂತರ ಮನೆಯ ಹುಡುಗ.


ಆದರೆ ಯಾವತ್ತೂ ನನ್ನನ್ನು ಆ Default ಶ್ರೀಮಂತಿಕೆಯ ದರ್ಪದಿಂದ ಕಂಡವನಲ್ಲ.


ಹಾಗಾಗಿ ಅವನೇ.. ನನ್ನ ರೂಮ್ ಮೇಟ್ ಆಗ್ತೀಯಾ.. ಅಂತ ನನ್ನಲ್ಲಿ ಕೇಳಿಕೊಂಡಾಗ,ಅವನ ಜೊತೆ ರೂಮ್ ಮಾಡಿಕೊಂಡು ಸಿಟಿಯಲ್ಲಿ ಕಂಪೆನಿಯ ಕೆಲಸಕ್ಕೆ ಹೋಗತೊಡಗಿದ್ದೆ ನಾನು. ನನ್ನದು ಅವನದ್ದು ಒಂದೇ ಕಂಪನಿ. 


ನಿಜವಾಗಿಯೂ ವಿಲಾಸ್ ತುಂಬಾ ಸಹಾಯ ಮಾಡುತ್ತಿದ್ದ.


ನನ್ನ ಹೆಚ್ಚಿನ ಖರ್ಚು ವೆಚ್ಚಗಳನ್ನು  ಅವನೇ ನೋಡಿಕೊಳ್ಳುತ್ತಿದ್ದ.


ನಾನು ಬೇಡ ಎಂದರೂ ಅವನೇ ಪರ್ಸಿನಿಂದ ಹಣ ತೆಗದು ಹೋದಲೆಲ್ಲಾ ನನಗಿಂತ ಮೊದಲೇ ನನ್ನ ಖರ್ಚಿನ ಹಣವನ್ನು ಸೇರಿಸಿಯೇ ಪಾವತಿ ಮಾಡುತ್ತಿದ್ದ.


ಗೆಳೆತನದಲ್ಲಿ ಹಣದ ಲೆಕ್ಕಾಚಾರ ಇರಬಾರದು ಎಂದು ಹೇಳುತ್ತಿದ್ದ ವಿಲಾಸ್.


ಅವನಂತಹ  ಶ್ರೀಮಂತರ ಮನೆಯ ಹುಡುಗನನ್ನು ನಾನು ಎಂದೂ ನೋಡಿರಲಿಲ್ಲ.


ಆದರೆ ಒಂದು ದಿನ ವಿಲಾಸ್ ಬಾಯಿ ತಪ್ಪಿಯೋ ಅಥವಾ ಬೇಕಂತಲೆಯೋ.. ಏನಾದರೂ ನಿನಗೆ ಖರ್ಚು ಮಾಡುವುದು ನಾನೇ ಅಲ್ಲವೇ.. ಎಂದು ಹೇಳಿಕೊಂಡು ಬಿಟ್ಟಿದ್ದ.


ಅಷ್ಟೇ..!


ನನ್ನೊಳಗೆ ಸುಪ್ತವಾಗಿದ್ದ... ಗುಪ್ತವಾಗಿದ್ದ ರಾವಣ, ದುರ್ಯೋಧನರು ಮತ್ತೆ ಜೀವಂತ ಆಗಿ ಬಿಟ್ಟರು. 


ನಾನು ಯಾರ ಅಪಮಾನವನ್ನು ಆದರೂ ಸಹಿಸಬಲ್ಲವನಾಗಿದ್ದೆ..ಯಾರಾದರೂ ಎರಡು ಏಟು ಕೊಟ್ಟರೂ ಅದನ್ನು ತಿಂದು ಸುಮ್ಮನೆ ಹಿಂತಿರುಗಿ ಬರುವವನಾಗಿದ್ದೆ.


ಆದರೆ ಶ್ರಿಮಂತರ ಮಕ್ಕಳ ಈ ಹಣದ ಮದ, ಮತ್ತು ಬಡವರ ಮಕ್ಕಳನ್ನು ಅವರು ನೋಡುವ ದೃಷ್ಟಿಕೋನ ನನಗೆ ಎಂದೂ ಹಿಡಿಸುತ್ತಿರಲಿಲ್ಲ.


ಕೆಲಸಕ್ಕೆ ಸೇರಿದ ಮೇಲೆ ನಾನು ಕೂಡ ಏನು ಬಡವನಾಗಿ ಉಳಿದಿರಲಿಲ್ಲ.


ವಿಲಾಸ್ ಗೆ ಎಷ್ಟು ಸಂಬಳ ಕಂಪನಿ ಕೊಡುತ್ತಿತ್ತೋ ಅಷ್ಟೇ ಸಂಬಳ ನನಗೂ ಕೊಡುತ್ತಿತ್ತು.


ಆದರೆ ಅವನು ಹುಟ್ಟಿನಿಂದಲೇ ಶ್ರೀಮಂತನಿದ್ದ.


ಹಾಗಾಗಿ ನನ್ನ ಪಾಲಿನ ಖರ್ಚನ್ನು ನೋಡಿಕೊಳ್ಳುವುದು ಅವನಿಗದು ಪ್ರತಿಷ್ಠೆಯ ವಿಷಯವಾಗಿತ್ತು.


ಯಾವಾಗ ವಿಲಾಸ್ ನ ಮಾತು ನನಗೆ ತೀವ್ರವಾಗಿ ನಾಟಿತೋ.. ಆ ದಿನದಿಂದಲೇ ನಾನು ಅವನ ಹಣವನ್ನು  ರೂಮ್ ನಲ್ಲಿ ಇರುವಾಗ ಕದಿಯಲು ಶುರುಮಾಡಿ ಬಿಟ್ಟೆ..! 


ವಿಲಾಸ್ ಗೆ ಗೊತ್ತೇ ಆಗುತ್ತಿರಲಿಲ್ಲ. 


ಏಕೆಂದರೆ ಅವನ ಬಳಿ ಎಷ್ಟು ಹಣ ಇದೆ ಎಂದು ಅವನಿಗೆಯೇ ಗೊತ್ತಿರುತ್ತಿರಲಿಲ್ಲ. 


ಅವನ ಮುಖದಲ್ಲಿ ಕಳೆದುಕೊಂಡಿದುದರ ಬಗ್ಗೆ ಯಾವುದೇ ಚಿಂತೆ ಇರದೇ ಇರುವುದನ್ನು, ನೋಡಿ ನನಗೆ ಚಿಂತೆ ಹೆಚ್ಚಾಯಿತು.. 


ಆಗಲೇ ನನಗೆ ಅವನ ಬಂಗಾರದ ರಿಂಗ್ ಮೇಲೆ ಕಣ್ಣು ಬಿದ್ದದ್ದು. 


ಒಂದು ದಿನ ವಿಲಾಸ್ ಮಲಗಿದ್ದಾಗ ಉಪಾಯ ಮಾಡಿ ಅದನ್ನು ಎಗರಿಸಿದ್ದೆ. 


ಆ ದಿನ ಮಾತ್ರ... ವಿಲಾಸ್ ನಿಜವಾಗಿಯೂ ನೀರಿನಿಂದ ತೆಗೆದ ಮೀನಿನಂತೆ ವಿಲ ವಿಲ ಆಗಿ ಬಿಟ್ಟಿದ್ದ. 


ಏಕೆಂದರೆ ಅವನಿಗೆ ಅವನ  ಅಮ್ಮ ಪ್ರೀತಿಯಿಂದ ಮಾಡಿಸಿ ಹಾಕಿದ್ದ ಉಂಗುರವಂತೆ ಅದು. 


ಎಷ್ಟು ಬೇಕಾದರೂ ಬೇರೆ ಉಂಗುರಗಳನ್ನು ಮಾಡಿಸಿ ಹಾಕಿಕೊಳ್ಳುವ ತಾಕತ್ತು ಅವನಿಗೆ ಇತ್ತು. 


ಆದರೆ ಆ ಉಂಗುರದ ಮೇಲೆಯೇ ಅವನಿಗೆ ವಿಶೇಷ ಪ್ರೀತಿ ಏಕೆ ಎಂದರೆ...ಅದು ಅವನ ಅಮ್ಮ ಸಾಯುವುದಕ್ಕಿಂತ ಮೊದಲು ಅವಳ ಉಂಗುರವನ್ನು ಕರಗಿಸಿ ಅದರಿಂದಲೇ ಇನ್ನೊಂದು ಉಂಗುರ ಮಾಡಿ ಅದನ್ನು ವಿಲಾಸ್ ಬೆರಳಿಗೆ ಹಾಕಿದ್ದು ಅಂತೆ. ಅದಕ್ಕಾಗಿ ಸತ್ತ  ಅಮ್ಮನ ನೆನಪಿಗಾಗಿ ವಿಲಾಸ್ ಆ ಉಂಗುರವನ್ನು ಬಹಳ ಜೋಪಾನವಾಗಿಯೇ ತನ್ನೊಂದಿಗೆ ಇಟ್ಟುಕೊಂಡಿದ್ದ. 



ಆದರೆ ಯಾವಾಗ ಉಂಗುರ ಕಳೆದು ಹೋಯಿತೋ.. ವಿಲಾಸ್ ಬರೀ ಅಳಲಿಲ್ಲ.. ಮುಗಿಲು ಮುಟ್ಟುವಂತಹ ಆಕ್ರಂಧನವನ್ನೇ  ಮಾಡಿ ಬಿಟ್ಟಿದ್ದ ರೂಮಿನಲ್ಲಿ. 


ಎಲ್ಲೋ ಕಳೆದು ಹೋಗಿರಬೇಕು.. ಇಬ್ಬರೂ ಸೇರಿ ಹುಡುಕುವ ವಿಲಾಸ್.. ನಿನ್ನ ಜೊತೆಗೆ ನಾನಿದ್ದೇನೆ... ಎಂದು ಅವನಿಗೆ ನಾನು ಆ ಕ್ಷಣ ಸಮಾಧಾನ ಮಾಡಿದ್ದೆನಾದರೂ... ಟಾಯ್ಲೆಟ್ ನೊಳಗೆ ಸೇರಿಕೊಂಡ ನಾನು ಮತ್ತೆ ಬಾಗಿಲು ಹಾಕಿಕೊಂಡು ಜೋರಾಗಿ ಗಹಗಹಿಸಿ ನಕ್ಕಿದ್ದೆ...ನನ್ನೊಳಗಿನ  ರಾವಣ.. ದುರ್ಯೋಧನರು ಮತ್ತೆ ಕಾಣಿಸಿಕೊಂಡು ಅಟ್ಟಹಾಸ ಗೈದಿದ್ದರು.. ಹಹ್ಹಾ.. ಹಹ್ಹಾ.. ಎಂದು. 


ಆ ದಿನ ನನಗೆ ಮತ್ತೆ ಆನಂದ ದೊರೆತಿತ್ತು. 


ಹೌದು ಅದೊಂದು ವಿಕೃತವಾದ ಆನಂದ. 


ವಿಲಾಸ್ ನ ಕಣ್ಣೀರನ್ನು ನೆನೆದು ನೆನೆದು ಆ ಆನಂದ ಮತ್ತಷ್ಟು ತೀವ್ರವಾಗುತ್ತಾ ಹೋಗಿ ಮನಸ್ಸು ಹಗುರವಾಗುತ್ತಾ ಹೋಗಿತ್ತು. 


ಹೌದು ನನ್ನ ಹವ್ಯಾಸ ಈಗ ಬರೀ ಹವ್ಯಾಸ ಆಗಿರಲಿಲ್ಲ.. 


ಅದು ನನಗೆ ಈಗ Addiction ಆಗಿತ್ತು!


ಅವತ್ತೇ ನಿರ್ಧರಿಸಿದ್ದೆ ಈ ವಿಲಾಸ್ ಗೆ ನೋವು ಕೊಡಬೇಕಾದರೆ ಅವನ ಹಣ ಕದಿಯಬಾರದು.. ಅವನಿಗೆ ಪ್ರೀತಿ ಪಾತ್ರ ವಸ್ತುಗಳನ್ನೇ ಕದಿಯಬೇಕು ಎಂದು. 


ಆ ಕಾರಣಕ್ಕಾಗಿ ನಾನು ಆ ದಿನದಿಂದ ವಿಲಾಸ್ ನ  ಹಣ ಕದಿಯುವುದನ್ನು ನಿಲ್ಲಿಸಿಬಿಟ್ಟೆ.ಬೇರೆ ಏನು ಕದಿಯಲಿ ಎನ್ನುವುದನ್ನು ಅನುದಿನವೂ  ಕನಸು ಕಾಣತೊಡಗಿದೆ. 


ಆದರೆ ವಿಲಾಸ್ ನ ಕದ್ದ ಉಂಗುರವನ್ನು ನಾನು ಎಂದಿನಂತೆ ಈ ಬಾರಿ ಯಾವ ನದಿಗೂ ಬಿಸಾಡಿರಲಿಲ್ಲ... 


ಅದು ನನ್ನಲ್ಲಿಯೇ ಇತ್ತು..


ನನ್ನ ಪರ್ಸ್ ನೊಳಗೆ ಅಡಗಿಸಿ ಇಟ್ಟಿದ್ದೆ. 


ಊರಿಗೆ ಹೋದಾಗ ಆ ನನ್ನ ನದಿಯ ಸೇತುವೆಯಿಂದಲೇ ಅದನ್ನೂ ಕೂಡ ನದಿಗೆ ಎಸೆಯಬೇಕು ಎಂದು ನಿರ್ಧರಿಸಿದ್ದೆ. 


ಎಂದೂ ಬತ್ತದ ಆ ನದಿಯ ತಳಭಾಗ ಒಂದು ದಿನ ಸಂಪೂರ್ಣ ಖಾಲಿ ಆದಾಗ ನನ್ನ ಚರಿತ್ರೆ ಹೇಳಬಲ್ಲದು. 


ಆದರೆ ಆ ಚರಿತ್ರೆ ನನಗಷ್ಟೇ ಗೊತ್ತು..! 


ಹಾಗಾಗಿ ಸುದ್ದಿಯಾಗುವ ಯಾವುದೇ ದಿಗಿಲು ನನ್ನಲ್ಲಿ ಇಲ್ಲ. 


ಆದರೆ ಯಾಕೋ ಗೊತ್ತಿಲ್ಲ ಆ ದಿನ ರಾತ್ರಿ, ನಾನು ಅವನ ಹಣ ಕದ್ದೆ ಎಂದು, ನನಗೆ ಹೊಡೆದು ನನ್ನನ್ನು ರೂಮ್ ನಿಂದ ಹೊರ ಹಾಕ್ಕಿದ್ದ ವಿಲಾಸ್ ಗೆ,ನನ್ನ ಮೇಲೆ ಅಂತಹ ಸಂದೇಹ ಬರಲು ಕಾರಣ ಏನೆಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. 


ರೂಮ್ ನಿಂದ ಹೊರ ಬಿದ್ದವನೇ.. ಆ ಮಳೆಯಲ್ಲಿ ನೆನೆಯುತ್ತಾ ಹೋಗಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ. 


ನನ್ನ ಬಳಿ ಬೈಕ್ ಇರಲಿಲ್ಲ.


ಮಳೆ ಬಿಡಲಿ ಎಂದು ಕಾಯುತ್ತಾ ಅಲ್ಲೇ ಬಸ್ ಸ್ಟ್ಯಾಂಡ್ ನೊಳಗೆಯೇ ನಿಂತಿದ್ದೆ ನಾನು. 


ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದ ಅರ್ಧ ಗಂಟೆಯ ಒಳಗೆಯೇ ವಿಲಾಸ್ ತನ್ನ ಬೈಕ್ ನಲ್ಲಿ ನನ್ನನ್ನು ಹುಡುಕಿಕೊಂಡು ಬಂದಿದ್ದ. 


ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದ ನನ್ನನ್ನು ನೋಡಿ... ಬೈಕ್ ನಿಲ್ಲಿಸಿದವನೇ ಅಳುತ್ತಲೇ ಓಡಿ ಬಂದು ನನ್ನ ಕೈ ಕಾಲು ಹಿಡಿದು Sorry ಹೇಳಿದ್ದ ವಿಲಾಸ್. 


ಏಕೆ Sorry..? ಎಂದು ತಣ್ಣನೆ ಕೇಳಿದ್ದೆ ನಾನು. 


ಅದಕ್ಕೆ ವಿಲಾಸ್ ಕಣ್ಣೀರಾಗಿ ಹೇಳಿದ್ದ... 


- ನನ್ನನ್ನು ಕ್ಷಮಿಸು.. ನೀನು ನನ್ನ ಹಣ ನಿಜವಾಗಿಯೂ ಕದ್ದಿರಲಿಲ್ಲ ಉಲ್ಲಾಸ್.


ನಾನು ಯಾವುದೋ ಕೆಟ್ಟ ಕೋಪದಲ್ಲಿ ನಿನ್ನ ಮೇಲೆ ರೇಗಿ ಬಿಟ್ಟೆ.. ಜಗಳ ಮಾಡಿ ಬಿಟ್ಟೆ.. ನಿನಗೆ ಹೊಡೆದೂ  ಕೂಡ ಬಿಟ್ಟೆ. 



ಆದರೆ ನೀನು ಹೋದ ನಂತರ ನನ್ನ ಹಣ ನಮ್ಮ ರೂಮಿನಲ್ಲಿಯೇ ಸಿಕ್ಕಿ ಬಿಟ್ಟಿತ್ತು ನನಗೆ. 


ನೀನು ಮಾಡದ ತಪ್ಪಿಗೆ ನಿನಗೆ ಅನ್ಯಾಯವಾಗಿ ಹೊಡೆದೆನಲ್ಲಾ.. ಎಂದು ತುಂಬಾನೇ ಪಶ್ಚಾತಾಪ ಪಟ್ಟೆ ಉಲ್ಲಾಸ್. 


ನಿನ್ನನ್ನು ಕಾಲೇಜ್ ದಿನಗಳಿಂದ ನೋಡಿದ್ದೇನೆ ನಾನು..ನೀನು ನಿನ್ನಷ್ಟಕ್ಕೆ ಸೈಲೆಂಟ್ ಆಗಿ ಇರುತ್ತಿದ್ದವನು.. ಯಾರ ತಂಟೆಗೂ ಹೋದವನಲ್ಲ.ಒಬ್ಬ ಗೆಳೆಯನಾಗಿ ನಿನ್ನನ್ನು ನಾನು ನಿಜವಾಗಿಯೂ ಈ ರೀತಿಯಾಗಿ ನಡೆಸಿಕೊಳ್ಳಬಾರದಿತ್ತು. I'm Really sorry.. 


ನನ್ನ ಅಮ್ಮನ ಉಂಗುರ ಕಳೆದುಕೊಂಡ ನಂತರ ನನಗೆ ಯಾರೇ ಸಮಾಧಾನ ಹೇಳಿದ್ದರೂ ನನಗೆ ಸಮಾಧಾನವೇ ಆಗಿರಲಿಲ್ಲ ಉಲ್ಲಾಸ್.. ಆದರೆ ನೀನು ಸಮಾಧಾನ ಹೇಳಿದ್ದೇ ನೋಡು.. ಆಗಲೇ ನನಗೆ ಸಮಾಧಾನ ಆಗಿದ್ದು.


ದಯವಿಟ್ಟು ನನ್ನನ್ನು ಕ್ಷಮಿಸು... ಇನ್ನು ಮುಂದೆ ಯಾವತ್ತೂ ಈ ರೀತಿ ಆಗುವುದಿಲ್ಲ, Promise.. ಎಂದು ಹೇಳಿ ಮತ್ತಷ್ಟು ದೀನನಾಗಿ ನನ್ನಲ್ಲಿ ಕ್ಷಮೆ ಯಾಚಿಸಿದ್ದ ವಿಲಾಸ್. 


ನನ್ನ ಜೀವನದಲ್ಲಿ ಯಾರೂ ಆ ರೀತಿ ನನ್ನಲ್ಲಿ ಕ್ಷಮೆ ಕೇಳಿರಲಿಲ್ಲ.ಅದರಲ್ಲೂ ನಾನು ತುಂಬಾನೇ ದ್ವೇಷಿಸುವ ಶ್ರಿಮಂತರ ಮಕ್ಕಳಿಂದ ಅದನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. 


ನಿಜವಾಗಿಯೂ ಅವನಲ್ಲಿ ತಪ್ಪಿತಸ್ಥ ಭಾವನೆ ಅಧಿಕವಾಗಿತ್ತು. ಅವನ ಪಶ್ಚಾತಾಪದಲ್ಲಿ ಒಂಚೂರು ಮೋಸವಿರಲಿಲ್ಲ. 


ನಿಜವಾಗಿಯೂ ವಿಲಾಸ್ ಒಳ್ಳೆಯವನೇ.. 


ಈಗ ಕ್ಷಮಿಸು ಗೆಳೆಯ ಎಂದು ನನ್ನಲ್ಲಿ ಕೇಳುತ್ತಿದ್ದಾನೆ. 


ಆದರೆ ನಿಜವಾಗಿಯೂ ಜೀವನದಲ್ಲಿ ಕ್ಷಮೆ ಕೇಳಬೇಕಾಗಿದ್ದು ಯಾರು? 


ನಾನೋ ಅಥವಾ ಅವನೋ..?! 


ವಿಲಾಸ್ ನ ವರ್ತನೆಗೆ ನಾನು ಕರಗಿ ಬಿಟ್ಟೆ. 


ಆಯಿತು ಬಿಡು ವಿಲಾಸ್.. ಏನೋ Miss Understanding ಆಗಿದೆ ಅಷ್ಟೇ, ಅದಕ್ಕೆ ಯಾಕೆ Sorry.. ನಿನ್ನದು ಏನೂ ತಪ್ಪಿಲ್ಲ... ಅಂದೆ. 


ಅದನ್ನು ಕೇಳಿ ಸಂತೋಷದಿಂದ ಹಾಗೇ ನನ್ನನ್ನು ಬಾಚಿ ತಬ್ಬಿಕೊಂಡಿದ್ದ ವಿಲಾಸ್. 


ಅವತ್ತು ನನಗೆ ಲೈಫಿನಲ್ಲಿ ಒಬ್ಬ ಬಹಳ ಒಳ್ಳೆಯ ಗೆಳೆಯ ಸಿಕ್ಕಿದ್ದ.. 


ನಿಜವಾಗಿಯೂ ಆ ನಂತರ ವಿಲಾಸ್  ನನಗೆ ಬಹಳನೇ ಹತ್ತಿರವಾಗುತ್ತಾ ಹೋದ. 


ನನಗೆ ನಿಜವಾದ ಸ್ನೇಹ ಅಂದರೆ ಏನು ಎಂದು ತೋರಿಸಿದವನೇ ಈ ವಿಲಾಸ್. 


ಅವನು ನನ್ನನ್ನು ಅವನ ಊರಿಗೆ ಕೂಡ  ಕರೆದುಕೊಂಡು ಹೋದ. 


ಅವನ ಅಪ್ಪನಿಗೆ ನನ್ನನ್ನು ಹೆಮ್ಮೆಯಿಂದ ಪರಿಚಯಿಸಿದ.. 


ಅಪ್ಪ.. ಇವನು ನನ್ನ ಫ್ರೆಂಡ್ ಉಲ್ಲಾಸ್.. ಇವನು 24 ಕ್ಯಾರೆಟ್ ಗೋಲ್ಡ್ ತರ ಶುದ್ಧ ಬಂಗಾರದ  ಮನಸ್ಸಿನ ಜನ.. ಒಂಚೂರು ಕಪಟವಿಲ್ಲ... ಮೋಸವಿಲ್ಲ.. ಅಂದ. 


ನನ್ನ ಮೇಲೆ ವಿಲಾಸ್ ಇಟ್ಟಿದ್ದ ಸ್ನೇಹಕ್ಕೆ, ನಂಬಿಕೆಗೆ.. ನನಗೆ ನನ್ನ ಬಗ್ಗೆಯೇ ಮೊದಲ ಬಾರಿ ಅಸಹ್ಯ ಅನಿಸಿತು. 


ನಾನು ಅಂದುಕೊಂಡಂತೆ ಅವನ ಅಪ್ಪ ಕೂಡ ಕೆಟ್ಟ ಶ್ರೀಮಂತ ಆಗಿರಲಿಲ್ಲ. 


ಊರಿನ ಹೆಚ್ಚಿನ ಜನರಿಗೆ ಕೆಲಸ ಕೊಟ್ಟಿದ್ದರು ಅವರ ಅಪ್ಪ. 


ದಾನ ಧರ್ಮ ಎಲ್ಲಾ ಬೇಕಾದಷ್ಟು ಮಾಡಿ ಊರಿನವರ ಅಭಿವೃದ್ಧಿಗೆ ಕೂಡ ಕಾರಣವಾಗಿದ್ದ ವಿಲಾಸ್ ನ ಆ ಧರ್ಮಾತ್ಮ ಅಪ್ಪ ನನಗೆ ಆ ದಿನ ಹೇಳಿದ್ದರು...


- ಮಗನೇ ಉಲ್ಲಾಸ್... ನಾವು ಕೂಡ ಚಿಕ್ಕಂದಿನಲ್ಲಿ ಬಡವರೇ ಆಗಿದ್ದವರು..ತುಂಬಾ ಕಷ್ಟ ಪಟ್ಟೇ ನಾನು ಮೇಲೆ ಬಂದೆ. ಆದರೆ ನಡೆದು ಬಂದ ದಾರಿ ನಾನು ಎಂದೂ ಮರೆತಿಲ್ಲ.ಇಂದು ನಾನು ಶ್ರೀಮಂತ ಆಗಿರಬಹುದು.ಆದರೆ ಎಲ್ಲಿಯವರೆಗೆ ನನ್ನ ಊರಿನ ಜನರು ಬಡವರಾಗಿಯೇ ಉಳಿಯುತ್ತಾರೋ ಅಲ್ಲಿಯವರೆಗೆ ನಾನೂ ಕೂಡ ಒಬ್ಬ ಬಡವನೇ.ನನಗೆ ನನ್ನ ಜನರು ಉದ್ದಾರ ಆಗಬೇಕು. ಇದರಿಂದ ನನಗೇನು ಲಾಭವಿಲ್ಲ.ನಾನು ರಾಜಕಾರಣಿ ಅಲ್ಲ.ಆದರೆ ಬೇರೆಯವರ ಮುಖದಲ್ಲಿ ನಮ್ಮಿಂದಾಗಿ ಮೂಡುವ ಒಂದು ಆನಂದ ಇದೆಯಲ್ಲ...ಅದನ್ನು ಯಾವ ದುಡ್ಡು, ಬಂಗಾರದಿಂದಲೂ ಅಳೆಯಲು ಸಾಧ್ಯವಿಲ್ಲ.ಜೀವನದಲ್ಲಿ ನೀನು  ಶ್ರೀಮಂತನೇ ಆಗು ಅಥವಾ ಬಡವನೇ ಆಗು..ಆದರೆ ಯಾವಾಗ ನೀನು ಬೇರೆಯವರ ಮುಖದಲ್ಲೊಂದು ನಗುವಿಗೆ, ಅವರ ಸಂತೋಷಕ್ಕೆ ಕಾರಣನಾಗುತ್ತಿಯೋ ಆಗ ನಿನಗಿಂತ ದೊಡ್ಡ ಶ್ರೀಮಂತ ಈ ಜಗತ್ತಿನಲ್ಲಿಯೇ ಇರುವುದಿಲ್ಲ ಉಲ್ಲಾಸ್.... ಎಂದು ಹೇಳಿ ಬಿಟ್ಟಿದ್ದರು ವಿಲಾಸ್ ನ ಅಪ್ಪ. 


ಅವತ್ತೇ ಕೊನೆ.. ನನ್ನ ಎಲ್ಲಾ ವಿಕೃತ ಆನಂದದ ಕೆಲಸವನ್ನು ನಾನು ನಿಲ್ಲಿಸಿ ಬಿಟ್ಟಿದ್ದೆ.


ಮಾತ್ರವಲ್ಲ ಹಣ ಕದಿಯುವ... ಬೇರೆಯವರ ಕಣ್ಣೀರು ಕಂಡು ಒಳಗೊಳಗೆ ನಗುವ ವಿಕೃತ ಆನಂದದ ಕನಸು ನನಗೆ ಮತ್ತೆ ಎಂದೂ ಬೀಳಲೇ ಇಲ್ಲ.


ಮನುಷ್ಯ ಯಾವಾಗ ಒಳ್ಳೆಯವನಾಗಲು ಶುರು ಆಗುತ್ತಾನೋ ಆವಾಗ ಅವನಿಗೆ ತಾನು ಮಾಡಿದ ತಪ್ಪುಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತದೆ. 


ನಾನು ಒಂದು ಬಹಳ ದೊಡ್ಡದೇ  ತಪ್ಪು ಮಾಡಿದ್ದೆ. 


ಅದುವೇ ವಿಲಾಸ್ ನ ಅಮ್ಮನ ಉಂಗುರ!


ಅವನ ಅಮ್ಮ ಪ್ರೀತಿಯಿಂದ ಅವನಿಗೆ ಕೊಟ್ಟ ಚಿನ್ನದ ಉಂಗುರ. 


ಅದು ನನ್ನ ಬಳಿಯೇ ಇತ್ತು. 


ಆದರೆ ಅದನ್ನು ನಾನು ವಿಲಾಸ್ ಗೆ ಹೇಗೆ ಹಿಂದಿರುಗಿಸಲಿ? 


ಅವನು ನನ್ನನ್ನು ದೇವರು ಎಂದೇ ತಿಳಿದುಕೊಂಡಿದ್ದಾನೆ. 


ಅವನದೇ ಚಿನ್ನದ ರಿಂಗು  ಕದ್ದಿದ್ದರೂ ಅವನ ಅಪ್ಪನಿಗೆ ನಾನು ಅಪ್ಪಟ ಬಂಗಾರ  ಎಂದೇ  ಪರಿಚಯಿಸಿದ್ದ. 


ಈಗ ನಾನು ಅವನ ಅಮ್ಮನ ಉಂಗುರ ಅವನಿಗೆ ಮರಳಿಸಿ... ನಾನೇ ಅವನ ಉಂಗುರ ಕದ್ದದ್ದು ಎಂದು ಹೇಳಿ ಬಿಟ್ಟರೆ... ಅವನು ನನ್ನ ಬಗ್ಗೆ ಇಲ್ಲಿಯವರೆಗೆ ಇಟ್ಟು ಕೊಂಡಿದ್ದ ಅಭಿಪ್ರಾಯ ಏನಾಗಿಬಿಡುತ್ತದೆ..?! 


ಇಲ್ಲ... 


ನನಗೆ ವಿಲಾಸ್ ನ ಸ್ನೇಹ.. ಅವನ ಆ ನಿಷ್ಕಲ್ಮಶ ನಂಬಿಕೆ ಕಳೆದುಕೊಳ್ಳಲು ಎಂದಿಗೂ ಇಷ್ಟವಿರಲಿಲ್ಲ..


ಏಕೆಂದರೆ ಅಂತಹ ಎಲ್ಲವನ್ನೂ ನಾನು ಮೊದಲ ಬಾರಿಗೆ ನೋಡುತ್ತಿದ್ದೆ... ಹಾಗು ಅನುಭವಿಸುತ್ತಿದ್ದೆ. 


ಹಾಗಾಗಿ ಅವನ ಆ ಉಂಗುರ ನನ್ನಲ್ಲಿಯೇ ಉಳಿಯಿತು! 


ಅದನ್ನು ಯಾವುದೇ ರೀತಿಯಲ್ಲಿ ವಿಲಾಸ್ ಗೆ ಹಿಂದಿರುಗಿಸಿ, ಅವನ ಕಾಲು ಹಿಡಿದು ಕ್ಷಮೆ ಹೇಳುವ ಧೈರ್ಯ ನನಗೆ ಬರಲೇ ಇಲ್ಲ..



ಆದುದರಿಂದ ಆ ದಿನದಿಂದ ನಾನು ನಿಧಾನವಾಗಿ ಕುಗ್ಗುತ್ತಾ ಹೋದೆ... 


ಪಶ್ಚಾತಾಪದ ಬೇಗುದಿಯಲ್ಲಿ ನಾನು ನಿಧಾನವಾಗಿ ಸುಡತೊಡಗಿದೆ.


ಏಕೆಂದರೆ ಅದನ್ನು ನಾನು ಹಿಂದಿರುಗಿಸಬೇಕು ಎಂದು ನನಗೆ ಗೊತ್ತಿತ್ತು... ಆದರೆ ನನ್ನಿಂದ ಆಗುತ್ತಿರಲಿಲ್ಲ. 


ಮುಂದೆ ವಿಲಾಸ್ ಮಾತು ಮಾತಿಗೂ ನನಗೆ ಆ ಒಂದು ರಾತ್ರಿ ಹೊಡೆದಿದ್ದಕ್ಕಾಗಿ ಕ್ಷಮೆ ಕೇಳುತ್ತಿದ್ದ.. ಉಲ್ಲಾಸ್ ನಾನು ನಿನಗೆ ಆ ದಿನ ಹಾಗೆ ಮಾಡಬಾರದಿತ್ತು... ಎಂದು ಪದೇ ಪದೇ ಹೇಳುತ್ತಿದ್ದ. ಅವನು ಕ್ಷಮೆ ಕೇಳಿ ಕೇಳಿಯೇ ದೊಡ್ಡವನಾಗಿ ಬಿಟ್ಟ. 


ಆದರೆ ನಾನು ಮಾಡಿದ ತಪ್ಪಿಗೆ ಒಮ್ಮೆಯೂ ಕ್ಷಮೆ ಕೇಳಲು ಆಗದೆ ಕುಗ್ಗುತ್ತಲೇ  ಹೋದೆ.. ಹೇಳಿಕೊಳ್ಳಲು ಆಗದೆ ಒಳಗೊಳಗೆ ಪಟ್ಟುಕೊಳ್ಳುವ ಪಶ್ಚಾತಾಪ, ಬದುಕನ್ನು ಬಹಳ ಘೋರ ಮಾಡಿ ಬಿಡುತ್ತದೆ..! ತಡೆದು ಕೊಳ್ಳಲು ಸಾಧ್ಯವೇ.. ಉರಿದು ಉರಿದು ಬೂದಿ ಆಗಲೇ ಬೇಕು! 


ಅದರಲ್ಲೂ ವಿಲಾಸ್ ಪ್ರತೀ ಬಾರಿ ತನ್ನ ತಾಯಿಯನ್ನು ನೆನಪಿಸಿಕೊಂಡು... ನನ್ನ ಅಮ್ಮ ಅಷ್ಟು ಪ್ರೀತಿಯಿಂದ ಮಾಡಿಸಿಕೊಟ್ಟಿದ್ದ ಉಂಗುರವನ್ನೇ ಇಟ್ಟುಕೊಳ್ಳಲು ಆಗದೇ.. ಬೇಜವಾಬ್ದಾರಿಯಿಂದ ಅದನ್ನು  ಕಳೆದುಕೊಂಡ ನಾನು ಎಂತಹ ಮಗ... ಎಂದು ನನ್ನಲ್ಲಿಯೇ ಹೇಳಿ,ಬೇಜಾರು ಪಟ್ಟುಕೊಳ್ಳುವಾಗ... ನೇರವಾಗಿ ನನ್ನ ಹೃದಯಕ್ಕೆ ಬಲವಾಗಿ ಚೂರಿಯಿಂದ ತಿವಿದಂತಹ ಅನುಭವ ಆಗುತ್ತಿತ್ತು ನನಗೆ. 


ಆದರೆ ವಿಲಾಸ್ ನ ಅಮ್ಮನ ಉಂಗುರ ಆವಾಗಲೂ ಬೆಚ್ಚಗೆ ನನ್ನ ಪರ್ಸಿನೊಳಗೆಯೇ ಮಲಗಿ ನಿದ್ರಿಸುತ್ತಿತ್ತು!! 


ಆ ದಿನ ನಾವಿಬ್ಬರು ರೋಡ್ ಪಕ್ಕ ಕಬ್ಬಿನ ಜ್ಯೂಸ್ ಕುಡಿಯಲು ಬೈಕ್ ನಿಲ್ಲಿಸಿದ್ದೆವು. 


ನಾನು ಕಬ್ಬಿನ ಜ್ಯೂಸ್ ಕುಡಿಯುತ್ತಿದ್ದೆ. 


ರೋಡ್ ನಲ್ಲಿ ಯಾರಿಗೋ ಸೈಡ್ ಕೊಡಲು ಹೋದ ಒಂದು ದೊಡ್ದ ಟಿಪ್ಪರ್ ರೋಡ್ ನ ಕೆಳಗೆ ನಿಂತಿದ್ದ ನನ್ನ ಮೇಲೆಯೇ ವೇಗವಾಗಿ ಹರಿದು ಬಂದಿತ್ತು. 


ಹಿಂದೆ ತಿರುಗಿ ಜ್ಯೂಸ್ ಕುಡಿಯುತ್ತಿದ್ದ ನಾನು ನೋಡಿರಲಿಲ್ಲ. 


ಆದರೆ ಟಿಪ್ಪರ್ ನನ್ನತ್ತ ಬರುವುದನ್ನು ವಿಲಾಸ್ ಗಮನಿಸಿದ್ದ.


ಉಲ್ಲಾಸ್...ಎಂದು ಜೋರಾಗಿ ಕೂಗಿ ನನ್ನನ್ನು ಪಕ್ಕಕ್ಕೆ ದೂಡಿ ಬಿಟ್ಟಿದ್ದ ವಿಲಾಸ್.


ಕೈಯಲ್ಲಿದ್ದ ಕಬ್ಬಿನ ಜ್ಯೂಸ್ ಗ್ಲಾಸ್ ಎಲ್ಲಿಯೋ ಹೋಗಿ ಬಿದ್ದು ಬಿಟ್ಟಿತ್ತು... ನಾನು ಕೂಡ ಅಷ್ಟು ದೂರಕ್ಕೆ ಹೋಗಿ ಬಿದ್ದೆ.. ಬಟ್ಟೆಯೆಲ್ಲಾ ಕೊಳೆ ಆಗಿತ್ತು.ಕೈ ತರಚಿತ್ತು. ಆದರೆ ವಿಲಾಸ್ ನಿಂದಾಗಿ ಅಂದು ನನ್ನ ಪ್ರಾಣ ಉಳಿದಿತ್ತು.. ಇಂದು ನಾನು ಜೀವಂತ ಬದುಕಿದ್ದರೆ ಅದಕ್ಕೆ ಕಾರಣ ವಿಲಾಸ್. ಹೌದು ವಿಲಾಸ್ ಮಾತ್ರ...


ಆದರೆ ವಿಲಾಸ್...? 


ನಾನು ಇರಬೇಕಾದ ಜಾಗದಲ್ಲಿ ಅವನು ಇದ್ದ..ಟಿಪ್ಪರ್ ನ ಚಕ್ರಗಳ ಅಡಿಯಲ್ಲಿ ಸಿಕ್ಕಿ ಬಿದ್ದ ಅವನ ದೇಹದ ಪ್ರಾಣ ಕ್ಷಣ ಮಾತ್ರದಲ್ಲಿಯೇ ಅಲ್ಲಿಂದ ಹಾರಿ ಹೋಗಿತ್ತು..!! 


ದೂರದಲ್ಲಿ ಬಿದ್ದಿದ್ದ ನಾನು ಎದ್ದು ನಿಂತು,ಟಿಪ್ಪರ್ ನ ಅಡಿಯಲ್ಲಿ ಬಿದ್ದಿದ್ದ ವಿಲಾಸ್ ನ ದೇಹವನ್ನೇ ನೋಡುತ್ತಾ ಎಷ್ಟೋ  ಹೊತ್ತು ಹಾಗೇ ನಿಂತಿದ್ದೆ..! 



ಸತ್ಯ ಒಪ್ಪಿಕೊಳ್ಳಲು ಕಷ್ಟ ಆಗಿತ್ತು. 


ಆದರೆ ನನ್ನ ಗೆಳೆಯ ವಿಲಾಸ್ ನನ್ನನ್ನು ಬಿಟ್ಟು ಹೊರಟು ಹೋಗಿ ತುಂಬಾ ಹೊತ್ತು ಆಗಿತ್ತು... ಪಾಪಿ ನಾನು.. ಹಾಗಾಗಿ ಸಾಯದೇ ಉಳಿದುಕೊಂಡು ಬಿಟ್ಟೆ...!!




ಈಗ ನಾನು ಗಂಧದ ಹಾರ ಹಿಡಿದುಕೊಂಡು ವಿಲಾಸ್ ನ ಮನೆಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದೇನೆ.. ಗೆಳೆಯನ ಕೊನೆಯ ದರ್ಶನಕ್ಕಾಗಿ..!! 


ಹಾಗೇ ನಿಂತುಕೊಂಡಿದ್ದ ನನಗೆ ನನ್ನ ಕಥೆಯೊಂದು ಬೇಡ ಬೇಡ ಎಂದರೂ ಈ ರೀತಿಯಾಗಿ ನೆನಪಾಗಿ ಬಿಟ್ಟಿತ್ತು. 


ಜನರು ಒಬ್ಬೊಬ್ಬರೇ ಮುಂದೆ ಸಾಗತೊಡಗಿದರು.ನಾನೂ  ಗಂಧದ ಮಾಲೆ ಹಿಡಿದುಕೊಂಡು ಮುಂದೆ ಮುಂದೆ ಸರತಿ ಸಾಲಿನಲ್ಲಿ ಸಾಗತೊಡಗಿದೆ. 


ಊರಿನ ಜನರೆಲ್ಲಾ ಸೇರಿದ್ದರು ಅಲ್ಲಿ. 


ವಿಲಾಸ್ ನ ಅಪ್ಪ ಧರ್ಮಾತ್ಮ.ಅವರ ಮಗನ ಸಾವಿಗೆ ಇಡೀ ಊರೇ ಕಂಬನಿ ಮಿಡಿದಿತ್ತು. 


ಅಲ್ಲೊಂದು ಸಮಾಧಾನ ಪಡಿಸಲಾಗದ ಆಕ್ರಂದನ ಇತ್ತು. 


ವೇದನೆಯ ಅಣೆಕಟ್ಟೆಯ ಕಟ್ಟೆ ಒಡೆದು.. ಕಣ್ಣೀರು ಧಾರಕಾರ.


ನಾನು ಯಾವತ್ತೂ ಅತ್ತವನಲ್ಲ.


ಬೇರೆಯವರ ಕಣ್ಣೀರಲ್ಲಿ ಆನಂದ...ಬರೀ  ವಿಕೃತ ಆನಂದ ಕಂಡವನು ನಾನು. 


ಕೊನೆಗೂ ನನ್ನ ಸರದಿ ಬಂತು... 


ನಿಧಾನವಾಗಿ ವಿಲಾಸ್ ನ ಮೃತ ದೇಹದ ಬಳಿ ನಡೆದೆ. 


ನನ್ನನ್ನು ಕಂಡು ವಿಲಾಸ್ ನ ಅಪ್ಪ ನನ್ನ ಬಳಿ ಓಡಿ ಬಂದು ನನ್ನನ್ನು ಅಪ್ಪಿಕೊಂಡು ಮತ್ತಷ್ಟು ಜೋರಾಗಿ ಅತ್ತರು.. 


ನೋಡು.... ನೋಡು ಉಲ್ಲಾಸ್... ನಿನ್ನ ಗೆಳೆಯ... ಅವನ ಈ ವೃದ್ಧ ಅಪ್ಪನನ್ನು ಈ ರೀತಿಯಾಗಿ ಒಬ್ಬನನ್ನೇ  ಬಿಟ್ಟು.. ಒಂಟಿ ಮಾಡಿ ಹೊರಟು ಹೋದ... ಎಂದು ಬಿಕ್ಕಿ ಬಿಕ್ಕಿ ಅತ್ತರು ವಿಲಾಸ್ ನ ಅಪ್ಪ .. 


ಪುತ್ರ ಶೋಕಂ ನಿರಂತರಂ... ಎಂದು ಎಲ್ಲೋ ಹೇಳಿದ್ದು ಕೇಳಿದ್ದೆ. 


ಆದರೆ ಇಂದು ವಿಲಾಸ್ ನ ಅಪ್ಪನ ಕಣ್ಣೀರಲ್ಲಿ ಅದನ್ನು ಜೀವಂತವಾಗಿ ಕಂಡೆ ನಾನು. 


ಆದರೂ ನಾನು ಸ್ವಲ್ಪವೂ ಅಳಲೇ ಇಲ್ಲ. ಏಕೆಂದರೆ ನನಗೆ ಅತ್ತು ಗೊತ್ತಿಲ್ಲ.. ಅಳಿಸಿ ಗೊತ್ತು. 


ವಿಲಾಸ್ ನ ಅಪ್ಪನಿಗೆ ನನಗೆ ತಿಳಿದಂತೆ ಸಮಾಧಾನ ಮಾಡಿದೆ. 


ನಾನು ಆದರೂ ಏನು ಸಮಾಧಾನ ಮಾಡಲಿ... 


ಅವರ ಜೀವದ ಭಾಗವನ್ನೇ ಅವರು ಕಳೆದುಕೊಂಡು ನಿಂತಿದ್ದರು. 


ಊರಿಗೆಲ್ಲಾ ಉಪಕಾರ ಮಾಡಿದ ದೊಡ್ಡ ಮನುಷ್ಯನಿಗೆ ದೇವರು ಒಳ್ಳೆಯ ಉಪಕಾರವನ್ನೇ ಮಾಡಿದ್ದ..! 


ಗಂಧದ ಮಾಲೆ ಹಿಡಿದು ವಿಲಾಸ್ ನ ಶವದ ಬಳಿ ನಿಂತೆ. 


ವಿಲಾಸ್ ನ ಮುಖವನ್ನೇ ನೋಡಿದ್ದೆ. 


ಈ ವಿಲಾಸ್ ಜೀವನದಲ್ಲಿ ನನ್ನನ್ನು ಎಷ್ಟೊಂದು ನಂಬಿದ್ದ. 


ನನಗೆ ಜೀವನದಲ್ಲಿ ನಂಬಿಕೆ ಅಂದರೆ ಏನು... ಸ್ನೇಹ ಅಂದರೆ ಏನು ಎಂದು ಕಲಿಸಿದ್ದೇ ಈ ವಿಲಾಸ್. 


ಗಂಧಧ ಮಾಲೆ ಅವನ ಹೆಣದ ಮೇಲೆ ಇಟ್ಟು ಅಲ್ಲಿಂದ ಮೌನವಾಗಿ ಹಿಂದಿರುಗಲು ಶುರುಮಾಡಿದೆ.. 


ಮನಸ್ಸಿನಲ್ಲಿ ವಿಲಾಸ್ ಆ ರಾತ್ರಿ ಹೇಳಿದ್ದ ಈ ಮಾತು ಒಂದೇ ಅತಿಯಾಗಿ ನೆನಪಾಗಿ ಬಿಟ್ಟಿತು... 


" ನನ್ನ ಅಮ್ಮನ ಉಂಗುರ ಕಳೆದುಕೊಂಡಾಗ ಯಾರೂ ಸಮಾಧಾನ ಹೇಳಿದರೂ ನನಗೆ ಸಮಾಧಾನ ಆಗಿರಲಿಲ್ಲ ಉಲ್ಲಾಸ್... ಆದರೆ ನೀನು ಸಮಾಧಾನ ಹೇಳಿದ್ದೇ ನೋಡು.. ಆಗಲೇ ನನಗೆ ಸಮಾಧಾನವಾಗಿದ್ದು.." 


ನನ್ನ ಪರ್ಸಿನ ಒಳಗೆ ಬೆಚ್ಚಗೆ ಕೂತಿದ್ದವಿಲಾಸ್ ನ ಅಮ್ಮನ ಉಂಗುರ ಒಮ್ಮೆ ಹಾಗೇ ಉಸಿರೆಳೆದುಕೊಂಡು ಜೋರಾಗಿ ನಕ್ಕು ಬಿಟ್ಟಂತೆ ಭಾಸವಾಯಿತು...!!


ಅದುರಿ ಹೋದೆ ನಾನು..! 


ನಾನು ಅದೆಂತಹ ಪಾಪಿ ಎಂದರೆ... ನನ್ನ ತಪ್ಪನ್ನು ಹೇಳಿಕೊಂಡು ಕ್ಷಮೆ ಕೇಳೋಣ ಎಂದರೆ ಕ್ಷಮಿಸಿಬೇಕಾದವನೇ ಜೀವಂತವಿಲ್ಲ..


ಭಗವಂತ ನನ್ನ ತಪ್ಪುಗಳಿಗೆ ಸರಿಯಾದ ಶಿಕ್ಷೆಯನ್ನೇ ಕೊಟ್ಟಿದ್ದ..! 


ಜೀವಾವಧಿ ಶಿಕ್ಷೆಗೆ ಆದರೂ ಇಂತಿಷ್ಟು ವರ್ಷಗಳ ಸಜೆ ಎಂದು ಇದೆಯಂತೆ.. ಆದರೆ ಜೀವನ ಪರ್ಯಂತ ಪಶ್ಚಾತಾಪದಿಂದಲೇ ನರಳಬೇಕಾದವನಿಗೆ ಮುಕ್ತಿ ಎಲ್ಲಿದೆ..!!


ಅದು ಶಾಶ್ವತ ನರಕ..! 


ಪರ್ಸಿನಲ್ಲಿದ್ದ ವಿಲಾಸ್ ನ ಉಂಗುರವನ್ನು  ಹೊರಗೆ ತೆಗೆದು  ಕೈಯಲ್ಲಿ ಹಿಡಿದುಕೊಂಡು ಅದನ್ನೇ ದಿಟ್ಟಿಸಿ ನೋಡತೊಡಗಿದೆ.... 


ಮತ್ತೊಮ್ಮೆ ಕೊನೆಯ ಬಾರಿಗೆ ಹಿಂದೆ ತಿರುಗಿ ಗೆಳೆಯ ವಿಲಾಸ್ ನತ್ತ ನೋಡಿದೆ.. 


ಅವನ ಶವವನ್ನು ನಾಲ್ವರು ಚಟ್ಟದಲ್ಲಿಟ್ಟು ಹೊತ್ತುಕೊಂಡು ಹೋಗುತ್ತಿದ್ದರು.


ಹೊತ್ತುಕೊಂಡು ಹೋಗುತ್ತಿದ್ದ ಚಟ್ಟದಿಂದ ವಿಲಾಸ್ ಕೈ ಬೆರಳೊಂದು  ಹೊರಗೆ ಇಣುಕಿ ನನ್ನನ್ನೇ... ಬಾ  ಉಲ್ಲಾಸ್... ಎಂದು ಕರೆದಂತಾಯಿತು..


ಒಮ್ಮೆಲೇ ನನ್ನ ಆತ್ಮವನ್ನು ಹಿಡಿದು ಅಲುಗಾಡಿಸಿದಂತಹ ಅನುಭವ....! 


ಕೈಯಲ್ಲಿದ್ದ ವಿಲಾಸ್ ನ ಉಂಗುರದ ನೆನಪಾಗಿ.. 


ಆ ಉಂಗುರ ಹಿಡಿದುಕೊಂಡು,ಜನರು ಹೊತ್ತುಕೊಂಡು ಹೋಗುತ್ತಿದ್ದ ವಿಲಾಸ್ ನ ಶವದತ್ತ ವೇಗವಾಗಿ ಓಡತೊಡಗಿದೆ..!!


ಮೊದಲ ಬಾರಿಗೆ ನನ್ನೊಳಿಗಿದ್ದ ರಾವಣ, ದುರ್ಯೋಧನರು  ನನ್ನನ್ನೇ ನೋಡಿ ಜೋರಾಗಿ ಅಟ್ಟಹಾಸಗೈದು ನಗುವಂತೆ  ಭಾಸವಾಯಿತು..!!


ಹಹ್ಹಾ... ಹಹ್ಹಾ...


ಹಿಹ್ಹಿ.... ಹಿಹ್ಹಿ.... 


ಕಣ್ಣಲ್ಲಿ ಜಾರಿದ ಹನಿಯೊಂದನ್ನು ಹಾಗೇ ಒರೆಸಿಕೊಂಡು, ಕೈಯಲ್ಲಿದ್ದ ಉಂಗುರ ಹಿಡಿದುಕೊಂಡು,ವೇಗವಾಗಿ ವಿಲಾಸ್ ನ ಶವದತ್ತಲೇ ಓಡುತ್ತಲ್ಲಿದ್ದೆ ನಾನು ..!


.....................................................................................


#ಇಷ್ಟೇ_ಕಥೆ ! 


Ab Pacchu 

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ