ಪರಿಸರದ ಕಥೆ
ಓದುತ್ತಾ ಓದುತ್ತಾ ನಾವು ಕೂಡ ತೇಜಸ್ವಿ ಯವರೊಂದಿಗೆ ಕೈಯಲ್ಲೊಂದು ಕೋವಿ ಹಿಡಿದು ಕಾಡು,ಬೆಟ್ಟ ಗುಡ್ಡದ ನೆತ್ತಿಯಲ್ಲಿ ಶಿಕಾರಿಗೆ ಹೋದಂತೆ,ಮುನ್ನುಗುವ ಕಾಡು ಹಂದಿಗೆ ಇನ್ನಿಲ್ಲದಂತೆ ಅಲ್ಲಲ್ಲಿ ತಡಕಾಡಿದಂತೆ,ಬೇಟೆಯ ಹಿಂದೆಯೇ ಎದ್ದು ಬಿದ್ದು ಕೋವಿ ಹಿಡಿದು ಓಡಿದಂತೆಯೇ ಭಾಸವಾಗಿ ಬಿಡುತ್ತದೆ.
ಶಿಕಾರಿಗೆ ಬಿದ್ದ ಕಾಡು ಕೋಳಿ,ಕಾಡು ಕುರಿ,ಕಾಡು ಹಂದಿಯ ರುಚಿಗಿಂತಲೂ ಪೂ.ಚಂ.ತೇ ಯವರ ಬರಹದ ರುಚಿಯೇ.. ಆಹಾ.. ಎನ್ನುವಷ್ಟು ಸೊಗಸಾಗಿದೆ.ರುಚಿಯಾಗಿದೆ. ಇದು ಬಾಯಿ ಚಪ್ಪರಿಸುಕೊಂಡು ಓದುವಂತಹ ಪುಸ್ತಕ.
ಅವರ ಬರಹದಲ್ಲಿ ಅದೇನು ಜಾದು ಇದೆಯೋ ನನಗದು ಗೊತ್ತಿಲ್ಲ.ಆದರೆ ಒಂದೊಳ್ಳೆಯ ಓದುಗ ಆದವರು ಒಮ್ಮೆಯೂ ಅವರನ್ನು ಓದಿಲ್ಲದಿದ್ದರೆ ಖಂಡಿತವಾಗಿಯೂ ಲೈಫಿನಲ್ಲಿ ಬಹಳ ರಸವತ್ತಾದದ್ದೊಂದನ್ನು ಮಿಸ್ ಮಾಡಿಕೊಂಡಿದ್ದಾರೆ ಎಂದೇ ನನಗನಿಸಿ ಬಿಡುತ್ತದೆ.ಕನಿಷ್ಟ ಪಕ್ಷ ಒಮ್ಮೆ ಆದರೂ ಅವರ ಪುಸ್ತಕಗಳ ಮೈದವಡಬೇಕು.ಒಮ್ಮೆ ಓದಿದರೆ ಅವರನ್ನು ಅವರ ಪುಸ್ತಕಗಳೇ ಮತ್ತಷ್ಟು ಓದಿಸಿ ಬಿಡುತ್ತದೆ.ಅತೀ ಸರಳ, ಅತೀ ಸುಂದರ ಪೂ.ಚಂ.ತೇ ಯವರ ಬರಹಗಳು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಪೂ.ಚಂ.ತೇ ಯವರನ್ನು ಜಾಸ್ತಿ ಓದಿಲ್ಲ.ಇದು ಸೇರಿದಂತೆ ಒಂದೆರಡು ಪುಸ್ತಕಗಳು ಅಷ್ಟೇ.ಇದನ್ನು ಓದಬೇಕು ಎಂದು ಬಹಳ ದಿನಗಳಿಂದಲೇ ಗುರುತು ಮಾಡಿ ಇಟ್ಟುಕೊಂಡಿದ್ದೆ.ಇವತ್ತು ಓದಿ ಮುಗಿಸಿದ ನಂತರ ಅದೆನೋ ಹಿತವೆನಿಸುವ ಸಂತೃಪ್ತಿಯ ಭಾವ.
ಕಾಡಿನ ಬುಡದಲ್ಲೊಂದು ಮನೆ ಮಾಡಿಕೊಂಡು ತನ್ನ ಕಿವಿ(ನಾಯಿ),ಶಿಕಾರಿಯ ಕೋವಿ, ಕೆಲಸಗಾರರಾದ ಮಾರ,ಪ್ಯಾರ, ಮಾಸ್ತಿ, ಭೈರ ಹಾಗೂ ಸುತ್ತಲಿನ ಕಾಡು,ಕಾಡೊಳಗಿನ ಹಂದಿ,ಉಡ,ನೂರಾರು ಪಕ್ಷಿಗಳೊಂದಿಗೆ ಅವರದ್ದೊಂದು ಪರಿಸರದ ಕಥೆ,ಪ್ರಕೃತಿಯ ಕಥೆಗಳನ್ನು ಓದುವವರಿಗೆ ಒಂಥರಾ ರಸದೌತಣವಿದ್ದಂತೆ.
ಅವರಿಗೆ ಎದುರಾದ ಹಲವಾರು ಸನ್ನಿವೇಶಗಳನ್ನು ರುಚಿಕಟ್ಟಾಗಿ ಬರೆದು ಹಾಕಿದ್ದಾರೆ ಪೂ.ಚಂ.ತೇ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಹಾಸ್ಯ ಪ್ರಜ್ಞೆ ಇದೆಯಲ್ಲ,ಕೆಲವೊಂದು ಸಂದರ್ಭಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ಮಾಡಿ ಬಿಡುತ್ತದೆ.141 ಪೇಜ್ ಗಳ ಪುಸ್ತಕ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ನಂತರ ಅನಿಸುವುದು... ಶೇ ಇನ್ನೂರು, ಮುನ್ನೂರು ಪೇಜ್ ಆದರೂ ಇರಬಾರದಿತ್ತೇ ಇದು ಎಂದು.
ನೀವೆಲ್ಲ ಹೆಚ್ಚಿನವರು ಈ ಪುಸ್ತಕವನ್ನು ಓದಿಯೇ ಇರ್ತೀರಾ.ಒಂದು ವೇಳೆ ಯಾರಾದರೂ ಓದಿಲ್ಲದಿದ್ದರೆ ಖಂಡಿತವಾಗಿಯೂ ಓದಿ.. ಸಂಜೆಗೆ ಇಷ್ಟವಾಗುವ ಬಿಸಿ ಕಾಫಿ, ಸುಟ್ಟ ಹಲಸಿನ ಹಪ್ಪಳದಂತೆ.. ಪರಿಸರದ ಕಥೆಯೂ ಕೂಡ ಕ್ಷಣ ಕಾಲ ನಿಮ್ಮನ್ನು ಕಾಡಿನೊಳಗೆ ಒಂದು ಸುತ್ತು ಸೊಗಸಾಗಿ ಸುತ್ತಿಸಿ.. ಮತ್ತೆ ನಿಮ್ಮ ಮನೆಯ ಅಂಗಳಕ್ಕೆಯೇ ತಂದು ಬಿಡುತ್ತದೆ.ಓದಿ ಹಗುರವಾಗುವ,ಓದಿದಕ್ಕಾಗಿ ಕನವರಿಸುವ, ಪದೇ ಪದೇ ಮೆಲುಕು ಹಾಕುವ ಭಾವ ಮಾತ್ರ ಎಂದಿನಂತೆ ಶಾಶ್ವತ.
ಪುಸ್ತಕ - #ಪರಿಸರದ_ಕಥೆ
ಲೇಖಕ - #ಕೆ_ಪಿ_ಪೂರ್ಣಚಂದ್ರ_ತೇಜಸ್ವಿ
Book_Reveiw
ab pacchu

Comments
Post a Comment