ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ..
ನಾವು ಎಷ್ಟು ಜನ ಹಾಕಿ ಕೊಳ್ಳುತ್ತೆವೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರಕೃತಿ ಮಾತ್ರ ಅದರದ್ದೇ ಆದ ಒಂದು ಚಂದದ ಟೈಂ ಟೇಬಲ್ ಅನ್ನು ತನಗೆ ತಾನೇ ಹಾಕಿಕೊಂಡು ಬಿಟ್ಟಿದೆ.
ಚಾಚೂ ತಪ್ಪದೇ ಅದನ್ನು ಪಾಲಿಸುವುದರಲ್ಲಿ ಪ್ರಕೃತಿ ಎಂದಿಗೂ ನಿಸ್ಸೀಮಳು."ಅವಳು" ಏಕೆಂದರೆ ಪ್ರಕೃತಿ ಎಂಬುವಳು ಎಲ್ಲದಕ್ಕಿಂತ ಜಾಸ್ತಿ ಮಾತೆ ಆಗಿದ್ದಾಳೆ.
ಅವಳಿಗೆ ಗಿಡಮರಗಳನ್ನು ಸುಂದರವಾಗಿ ಸಿಂಗರಿಸಲು ಗೊತ್ತು.ವಸಂತದಲ್ಲಿ ಎಲೆಗಳನೆಲ್ಲಾ ಬಣ್ಣ ಬಣ್ಣಗಳಲ್ಲಿ ಚಿಗುರಿಸಿ,ಶರತ್ಕಾಲದಲ್ಲಿ ಮತ್ತೆ ಅವುಗಳನ್ನು ಇನ್ನಷ್ಟು ಬಣ್ಣಗಳಲ್ಲಿ ಹಣ್ಣಾಗಿಸಲು ಪ್ರಕೃತಿ ಎಂಬ ಮಾತೆಗೆ ಬಹಳ ಚೆನ್ನಾಗಿ ಗೊತ್ತು.
ಮತ್ತೆ ಚಿಗುರುವ..ಮತ್ತೆ ಹಣ್ಣಾಗುವ ಟೈಂ ಟೇಬಲ್ ಅವಳು ಇಂದು ನಿನ್ನೆಯಿಂದ ಹಾಕಿಕೊಂಡದ್ದು ಅಲ್ಲ. ಭೂಮಿಯಲ್ಲೊಂದು ಅಂದದ ಪ್ರಕೃತಿ ಜನ್ಮ ತಳೆದಾಗಿನಿಂದಲೂ ಅದರ ಪಾಲನೆಯಲ್ಲಿ ಇಂದಿಗೂ ಒಂದು ಚೂರೂ ಲೋಪ ಅವಳು ಎಸಗಿಲ್ಲ ಹಾಗಾಗಿ ಪ್ರಕೃತಿ ಅದಕ್ಕೆ ದಂಡ ತೆರಬೇಕಾಗಿಲ್ಲ.ಕೋಪಗೊಂಡರೆ ಅವಳೇ ದಂಡ ವಿಧಿಸುತ್ತಾಳೆ ಅಷ್ಟೇ..
ವಸಂತಕಾಲ ಬಂದಾಗ ಗಿಡಮರಗಳು ಅದರಷ್ಟಕ್ಕೆ ಚಿಗುರುತ್ತದೆ.ಮರದ ಎಲೆಯ ಮೂಲ ಬಣ್ಣ ಯಾವುದೇ ಇರಲಿ ಆದರೆ ಬಾಲ್ಯ ಎಂಬ ಚಿಗುರೆಲೆಗೆ ಮಾತ್ರ ಸದಾ ಬಣ್ಣ ಬಣ್ಣದ ಹೋಳಿ ಆಡುವ ಸಂಭ್ರಮ. ಕೆಲವೊಮ್ಮೆ ಚಿಗುರೆಲೆಗೆ ಗಿಣಿ ಮರಿಯ ರೆಕ್ಕೆಯ ಬಣ್ಣ,ಇನ್ನೊಮ್ಮೆ ಮುಂಜಾನೆ ಸೂರ್ಯನ ಬೆಳಕಿಗೆ ನಾಗರಹಾವಿನ ಗೋಧಿಯ ಬಣ್ಣ,ಅವಳೆಂಬ ಇಷ್ಟದ ಹುಡುಗಿಯ ಪಲ್ಲುವಿನಲ್ಲಿರುವ ಪರ್ಪಲ್ಲು ಎಂಬ ತಿಳಿ ನೇರಳೆ ಬಣ್ಣ,ಕೆಲವೊಮ್ಮೆ ಅಣ್ಣ ಶಿಸ್ತಿನಿಂದ ದಿನಾಲೂ ಫಾರ್ಮಲ್ ಪ್ಯಾಂಟು ಮೇಲೆ ಹಾಕಿಕೊಳ್ಳುವ ಬೆಲ್ಟಿನ ಕಂದು ಬಣ್ಣ...ಹೀಗೆ ಬಣ್ಣ ಬಣ್ಣದ ಓಕುಳಿಯಲ್ಲಿ ಆಡಿದ ಹೆಚ್ಚಿನ ಎಲೆಗೆ ಯೌವನದಲ್ಲಿ ಮಾತ್ರ ಹಸಿರು ಗಾಜಿನ ಬಳೆಯದ್ದೇ ಬಣ್ಣ.
ಯೌವನ ಹೋಗಿ ಮುಪ್ಪು ಬಂದಾಗ ಶರತ್ಕಾಲದಲ್ಲಿ ಬಲಿತ ಎಲೆಗಳು ಹಣ್ಣೆಲೆ ಆದಾಗ, ಆಹಾ.. ಎಲೆಗಳಿಗೆ ಇಳಿ ವಯಸ್ಸಿಗೆ ರಂಗಿನಾಟವಾಡಲು ಪ್ರಕೃತಿಯಿಂದಲೇ ಮತ್ತೊಮ್ಮೆ ಬಣ್ಣ ಬಣ್ಣದ ರಂಗಿನಾವಕಾಶ.ಇನ್ನೇನು ಮರದದಿಂದ ಉದುರಬೇಕು ಎನ್ನುವಾಗ ಎಲೆಯ ತುಂಬೆಲ್ಲಾ ಮುತ್ತೈದೆಯ ಕೆನ್ನೆಯ ಅರಶಿನದ ಬಣ್ಣ,ಇಳಿ ಸಂಜೆಯ ಸೂರ್ಯನ ತಂಪಾದ ಕೆಂಪಿನ ಬಣ್ಣ.. ಕೊನೆಗೊಮ್ಮೆ ಮರಬಿಟ್ಟು ನೆಲ ಸೇರುವಾಗ ಹಲವು ಶೇಡುಗಳ ಬೂದಿ ಬಣ್ಣ..
ಕಾಲ ಕಾಲಕ್ಕೆ ಬಣ್ಣ ಬದಲಿಸುವ ಪ್ರಕೃತಿಯನ್ನು ನಿರಂತರವಾಗಿ ಗಮನಿಸುತ್ತಿದ್ದರೆ ಅದೊಂದು ಕಣ್ಣುಗಳಿಗೆ ಅನುದಿನದ ಹೋಳಿ. ನಾವು ಒಂದು ದಿನ ಆಡುತ್ತೇವೆ. ಪ್ರಕೃತಿ ವರ್ಷ ಪೂರ್ತಿ ಬರೀ ಹೋಳಿಯನ್ನೇ ಆಡುತ್ತದೆ.ನಾವು ಅದಕ್ಕಾಗಿ ತೆರೆದುಕೊಳ್ಳಬೇಕು.. ಬಳಿ ನಡೆದು ಅದರ ಮೈದವಡಬೇಕು, ಕೆಲವೊಂದು ಬಣ್ಣಗಳನ್ನು ನಮ್ಮದಾಗಿಸಿಕೊಳ್ಳಬೇಕು, ಸ್ವಲ್ಪ ಕಣ್ಣುಗಳಲ್ಲಿ ಇನ್ನು ಸ್ವಲ್ಪ ಮನಸ್ಸುಗಳಲ್ಲಿ ಹಿಡಿಸಿದಷ್ಟು ತುಂಬಿಸಿಕೊಂಡು ಹಿಂದಿರುಗಬೇಕು.
ಮಕ್ಕಳಿಗೆ ಹಳದಿ ಬಣ್ಣ ತೋರಿಸಬೇಕಿದ್ದರೆ ಪುಸ್ತಕದಲ್ಲಿರುವ ಯೆಲ್ಲೋ ಶರಟು, ಯೆಲ್ಲೋ ಕಾರು, ಯೆಲ್ಲೋ ಪಿಲ್ಲೋ, ಯೆಲ್ಲೋ ಗೋಡೆ ತೋರಿಸಬೇಡಿ. ಅರಶಿಣ ಬಣ್ಣದ ಹಣ್ಣಾದ ಮಾವು ತೋರಿಸಿ,ನೀಲಿಗೆ ಮೇಲೆ ಆಕಾಶವಿದೆ, ಕೆಳಗೆ ವಿಶಾಲ ಕಡಲು ಇದೆ,ಹಸಿರಿಗೆ ಪಚ್ಚೆ ಪೈರು ಇದೆ, ಕೆಂಪು ಬಣ್ಣಕ್ಕೆ ಸಂಜೆಯ ಸೂರ್ಯ ಇದ್ದಾನೆ, ಬೇಲಿಯಲ್ಲಿ ಅರಳಿ ನಿಂತ ದಾಸವಾಳ ಇದ್ದಾಳೆ, ಬಿಳಿಗೆ ಮಂಗಳೂರು ಮಲ್ಲಿಗೆ, ಮೈಸೂರು ಮಲ್ಲಿಗೆ ಇದೆ...ಹೀಗೆ ಸುತ್ತ ಮುತ್ತ ಎಲ್ಲವೂ ಇದೆ. ನೋಡಬೇಕು ದಿನವೂ ಅರಳಬೇಕು.
ಪಬ್ ಗಳ ನೊರೆ ನೊರೆ ಸೋಡಾ,ಬಿಯರ್ ಗಳಿಗಿಂತಲೂ ಮುಂಜಾನೆಯ ಎಲೆಯ ಮೇಲಿನ ತಂಪು ಅದೆಷ್ಟೋ ಚಂದ.. ಒಮ್ಮೆ ಹೋಗಿ ತುದಿ ಬೆರಳ ತಂಪು ಮಾಡಿಕೊಂಡು ಕೆನ್ನೆ ಮುಟ್ಟಿ ನೋಡಿ. ಬೆಳಿಗ್ಗೆ ಬರಿಗಾಲಲ್ಲಿ ಇಬ್ಬನಿ ಹಾಸಿದ ಹುಲ್ಲಿನಲ್ಲಿ ಒಮ್ಮೆ ನಡೆದು ಹಿತ ಅಂದರೇನು ಎನ್ನುವುದನ್ನು ಒಮ್ಮೆ ನಿಮಗೆ ನೀವೇ ಕಂಡುಕೊಂಡು ಬಿಡಿ,ಕಪ್ಪೆ ಜಿಗಿಯುವ ಕೆರೆಗೆ ಕಲ್ಲು ಬಿಸಾಡಿ ಒಂದರ ಮೇಲೆ ಒಂದು ಅಲೆಯ ಉಂಗುರ ಬಿಡಿಸಿ ಕಣ್ಣರಳಿಸಿ ಬಿಡಿ.
ನಗರ ಕಿಕ್ಕೇರಿಸಿ ಬೀಳಿಸುತ್ತದೆ.. ಆದರೆ ಪ್ರಕೃತಿ ನಶೆ ಇಳಿಸಿ ಕೇವಲ ಅರಳಿಸುತ್ತದೆ. ನಗರದಲ್ಲಿ ಇದ್ದರೆ ಮಕ್ಕಳೊಟ್ಟಿಗೆ ವೀಕೆಂಡ್ ನಲ್ಲಿ ಎ.ಸಿ ಮಾಲ್ ನಲ್ಲಿ ಸುತ್ತಾಡುತ್ತಾ ಐಸ್‌ಕ್ರೀಂ ಕರಗಿಸುವುದರಲ್ಲಿ ಅದೇನು ಸ್ವರ್ಗ ಇದೆಯೋ..ಒಮ್ಮೆ ಹಳ್ಳಿಯ ಹೊಳೆಗೆ ಇಳಿದು ನೋಡಿ.. ಅದು ಸದಾ ತಂಪು.ಒಮ್ಮೆ ಅನುಭವಿಸಿ ಬಿಡಿ.
ಮತ್ತೆ ವಸಂತ ಬಂದಿದೆ. ಪ್ರಕೃತಿ ಅರಳಿದೆ,ನನ್ನಿಷ್ಟದ ಮಾವು ಎಂದಿನಂತೆ ಟೈಂ ಟೇಬಲ್ ಅನುಸರಿಸಿ ಚಿಗುರಿದೆ. ಇಂದು ನೇರಳೆ.. ಮುಂದೆ ಕಡುಗೆಂಪು.. ನಂತರ ಬರೀ ಪಚ್ಚೆ ಎಲೆಗಳು. ಹೂಗಳು ಕಾಯಾಗಿ ಹಣ್ಣಾದಾಗ ಮತ್ತಷ್ಟು ಕಣ್ಣಿಗೆ ಮುದ ನೀಡುವ ಅರಶಿಣದ ಹಣ್ಣುಗಳು.ನೋಡುತ್ತಾ ನೋಡುತ್ತಾ ನನ್ನಲ್ಲಿ ದಿನ ದಿನವೂ ಹೋಳಿ.
ಸದ್ಯಕ್ಕೆ ಈ ಗಿಡದಲ್ಲಿ ಬರೀ ಎಲೆಗಳ ಓಕುಳಿ ಒಂದೇ ನೋಡಬಹುದು. ಗುಡ್ಡದ ಬಳಿಯ ಎತ್ತರದ ಮಾವು.. ಅದಾಗಲೇ ಕಾಟು ಮಾವುಗಳನ್ನು ಹಣ್ಣಾಗಿಸಿ ಜೋರು ಗಾಳಿಗೆ ನೆಲದ ತುಂಬೆಲ್ಲಾ ನನ್ನಿಷ್ಟದ ಕಾಟು ಮಾವುಗಳನ್ನು ಬೇಕಾದಷ್ಟು ಉದುರಿಸಿದೆ ಎಂದು ಸುದ್ದಿ ಬಂದಿದೆ. ಹೊರಗಿನ ಹಸಿರು ಸಿಪ್ಪೆ ಸುಲಿದರೆ.. ಒಳಗಿನ ರಸಭರಿತ ಹಳದಿ ಬಣ್ಣದ ಮಾವು ಅದೆಷ್ಟು ರುಚಿ.ನನಗಾಗಿಯೇ ಬಿದ್ದಿದೆ.ಹೋಗಿ ಎರಡೂ ಕೈ ತುಂಬುವಷ್ಟು ಹೆಕ್ಕಬೇಕು.. ಕೈ ಬಾಯಿ.. ಬರೀ ಮಾವು ಮಾಡಿಕೊಳ್ಳಬೇಕು.
.....................................................................................
#ಮಾ_ಅಂದರೆ_ಮಾವು
ab pacchu
moodubidire

Comments
Post a Comment