ಕುಕ್ಕು ಉಪ್ಪು ಮುಂಚಿ..
ಕುಕ್ಕು ಅಂದರೆ ಇಂಗ್ಲೀಷಿನ ಕುಕೂ(ಕೋಗಿಲೆ)ಖಂಡಿತವಾಗಿಯೂ ಅಲ್ಲ,ತುಳು ಭಾಷೆಯಲ್ಲಿ ಕುಕ್ಕು ಎಂದರೆ ಬಹುತೇಕ ಎಲ್ಲರಿಗೂ ಇಷ್ಟವಾಗುವ ಅದೇ ನಮ್ಮ ಸಿರಿ ಮಾವು.
ಇದೇನು ಅಂತಹ ರಾಯಲ್ ರೆಸಿಪಿ ಅಲ್ಲವೇ ಅಲ್ಲ.ಹಿಂದೆ ಹಸಿವು ಹೆಚ್ಚಾದಾಗ ಬಡವರ ಮನೆಯಲ್ಲಿ ಒಂದು ಹೊತ್ತಿಗೆ ಗಂಜಿಯ ತುತ್ತಿಗೆ ಬಾಯಿಗೆ ರುಚಿಯೆನಿಸಿದ್ದು ಈ ಕಾಟು ಮಾವಿನಿಂದ ಮಾಡುತ್ತಿದ್ದ ಉಪ್ಪು ಮುಂಚಿಯೇ. ಮುಂಚಿ ಎಂದರೆ ಮೆಣಸು.
ಮಾಡುವುದು ಕೂಡ ಬಹಳ ಸರಳ.ಒಂದೆರಡು ಒಣ ಮೆಣಸನ್ನು(ಬ್ಯಾಡಗಿ) ಬೆಂಕಿಯಲ್ಲಿ ಸುಟ್ಟುಕೊಂಡು ಅದನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಲ್ಲಿಯೇ ಚೆನ್ನಾಗಿ ಕಿವುಚಿ ಬಿಡಿ. ನಂತರ ಇದಕ್ಕೆ ಹಣ್ಣು ಮಾವು ಸೇರಿಸಬೇಕು.ಅದರಲ್ಲೂ ಎಲ್ಲಾ ಕಡೆ ಸಿಗುವ ಕಾಟು ಮಾವೇ ಬೇಕು.ಒಂದೆರಡು ಕಾಟು ಮಾವನ್ನು ಸಿಪ್ಪೆ ಸುಲಿದು ಅದನ್ನು ಕೂಡ ಈಗಾಗಲೇ ಕಿವುಚಿ ಇಟ್ಟಿದ್ದ ಉಪ್ಪು ಮತ್ತು ಮೆಣಸಿನೊಂದಿಗೆ ಸೇರಿಸಿ ಮತ್ತೊಮ್ಮೆ ಹದವಾಗಿ ಕಿವುಚಿ ಬಿಟ್ಟರೆ... ಬಿಸಿ ಗಂಜಿಗೆ "ಕುಕ್ಕು ಉಪ್ಪು ಮುಂಚಿ" ಒಂದು ಪರಿಮಳದ ಊಟವನ್ನು ಮಾಡಿಸಿ ಬಿಡುತ್ತದೆ.. ಈ ರೆಸಿಪಿ ಇಷ್ಟೇ. ಬೇಕಿದ್ದರೆ ನೀರುಳ್ಳಿಯನ್ನು ಕೂಡ ಕಟ್ ಮಾಡಿ ಹಾಕಿ ಕೊಳ್ಳಬಹುದು.ಮಾವಿನ ಸುಲಿದ ಸಿಪ್ಪೆಯನ್ನು ಬಿಸಾಡಬೇಡಿ. ಉಪ್ಪು ಮುಂಚಿ ಯೊಂದಿಗೆ ಸೇರಿಸಿಕೊಳ್ಳಿ.ಮಾವಿನ ರಸಭರಿತ ಗೊರಟೆ ಚೀಪುವಾಗ ಅಲ್ಲಲ್ಲಿ ಮಾವಿನ ಸಿಪ್ಪೆ ಕೂಡ ತಿನ್ನಲು ಸಿಕ್ಕರೆ ಒಂಥರಾ ಮಜವಾಗಿರುತ್ತದೆ.
ಇದನ್ನು ಯಾರೂ ಮಾಡಿ ಕೊಳ್ಳುವುದೇ ಇಲ್ಲ ಈ ಕಾಲದಲ್ಲಿ,ಆದರೆ ನನ್ನಂತಹ ಅಪ್ಪಟ್ಟ ಮಾವು ಪ್ರೇಮಿಗೆ ಮತ್ತು ನನ್ನ ಅಮ್ಮನಿಗೆ ವರ್ಷದಲ್ಲಿ ಒಮ್ಮೆಯಾದರೂ ಸುಟ್ಟ ಒಣಮೆಸಿನ ಘಮಕ್ಕೆ ಮಾವಿನ ರಸವನ್ನು ಜೊಡಿ ಮಾಡಿಸಿ ಹೊಟ್ಟೆಯೊಳಗಿಳಿಸದಿದ್ದರೆ ವರ್ಷದಲ್ಲಿ ಅದೇನೋ ತುಂಬಾ ಬೇಕೆನಿಸುವಂತಹದ್ದೊಂದನ್ನು ಕಳಕೊಂಡ ಭಾವವೇ ಅಧಿಕವಾಗುವುದು..
ಅದರಲ್ಲೂ ಮಧ್ಯಾಹ್ನದ ಊಟಕ್ಕಿಂತಲೂ, ಒಂದು ತುತ್ತನ್ನೂ ಬೆಳಿಗ್ಗೆಯಿಂದ ಹೊಟ್ಟೆಗೆ ಇಳಿಸದ ಅಮ್ಮನಿಗೆ ಬೆಳಗ್ಗಿನ ಎಲ್ಲಾ ಕೆಲಸ ಮುಗಿದ ಕೂಡಲೇ ಸುಮಾರು ಹತ್ತು ಗಂಟೆಯ ಹೊತ್ತಿಗೆ.. ಹಿಂದಿನ ದಿನದ ಗಂಜಿಗೆ ಈ ಕುಕ್ಕು ಉಪ್ಪು ಮುಂಚಿಗಿಂತ ಬೇರೆ ಯಾವುದೂ ರುಚಿಸುವುದೇ ಇಲ್ಲ.. ಬೇರೆ ಏನೇ ಇದ್ದರೂ ಬೇಲಿ ಬದಿಯಲ್ಲಿ ಬಿದ್ದಿರುವ ಒಂದೆರಡು ಕಾಟು ಮಾವು ಹೆಕ್ಕಿ,ಮೆಣಸು ಸುಟ್ಟು ಕೊಂಡು.. ಎಲ್ಲವನ್ನೂ ಚೆನ್ನಾಗಿ ಕಿವುಚಿ ಸುಖವಾಗಿ ಊಟ ಮಾಡುವುದರಲ್ಲಿಯೇ ಅವಳ ಸುಖವಿರುವುದು.
ಬೇಲಿಯಲ್ಲಿ,ಗುಡ್ಡದಲ್ಲಿ ಕಾಟು ಮಾವು ಎಂದಿನಂತೆ ಹೇರಳವಾಗಿ ಈಗಲೂ ಬೀಳುತ್ತದೆ.. ಆದರೆ ಹಿಂದಿನಂತೆ ಹೆಕ್ಕುವ ಕೈಗಳಿಗೆ ಬರ ಬಿದ್ದಿದೆ ಅಷ್ಟೇ.ಮಾವಿನ ಖಾದ್ಯ ಉದರಕ್ಕೆ ಒಳ್ಳೆಯದು... ಅದರಲ್ಲೂ ಕಾಟು ಮಾವು ಉದರದ ಜೊತೆ ಜೊತೆಗೆ ಒಮ್ಮೊಮ್ಮೆ ಆತ್ಮವನ್ನು ಕೂಡ ತೃಪ್ತಿ ಪಡಿಸುವಷ್ಟು ಒಳ್ಳೆಯದು.
#ಮಾ_ಅಂದರೆ_ಮಾವು 🧡💛
ab pacchu
moodubidire





Comments
Post a Comment