ಹೊಸ ವರ್ಷಕ್ಕೆ ಪ್ರಕೃತಿಯ ಬಂಗಾರದ ಸಿಂಗಾರ..

 



ಹಿಂದೂಗಳ ಯುಗಾದಿ/ಬಿಸು/ವಿಶು ಹಬ್ಬ ಬಂತೆಂದರೆ ಸಾಕು ಮಂಗಳೂರಿನಲ್ಲಿ ಇದೊಂದು ಗಿಡ ವರ್ಷ ಪೂರ್ತಿ ಬೋಳಾಗಿ ತನ್ನಷ್ಟಕ್ಕೆ ಸುಮ್ಮನಿದ್ದು ಯಾರಲ್ಲೂ ಅಷ್ಟಾಗಿ ಆಸಕ್ತಿ ಹುಟ್ಟಿಸದಿದ್ದರೂ ಸಹ,ಹೊಸ ವರ್ಷದ ಆರಂಭಕ್ಕೆ ತನ್ನ ಮೈಯ ಮೇಲೆ ಬಂಗಾರದ ಹೂಗಳನ್ನು ಸಿಕ್ಕಿಸಿಕೊಂಡು ಲವಲವಿಕೆಯಿಂದ ಹಬ್ಬಕ್ಕೆ ಶುಭಕೊರಲು ಸಿದ್ದವಾಗಿ ನಿಂತು ಬಿಡುತ್ತದೆ.


ಆಹಾ.. ಮೈ ಪೂರ್ತಿ ಬರೀ ಬಂಗಾರವೇ ಮುಚ್ಚಿದಂತೆ ಕಂಡು ಬರುವ ಇದರ ಹೆಸರು ಕೂಡ ಸ್ವರ್ಣ ಪುಷ್ಪ ಎಂದೇ ಆಗಿದೆ. ಭೂಮಿಗೆ ಬಂದ ಸಂದರ್ಭದಲ್ಲಿ ತನಗೆ ನೆರಳಿನ ಆಸರೆಯಿತ್ತ ಈ ಮರವನ್ನು ಲಕ್ಷೀ ದೇವಿ ಮನಸಾರೆ ಹರಸಿ,ಪ್ರೀತಿಯಿಂದ ಮೈದವಡಿದಳಂತೆ.ಅದಕ್ಕಾಗಿ ಇದರಲ್ಲಿ ಸ್ವರ್ಣದ ಹೂಗಳು ಅರಳಿದವು ಎಂಬ ಕಥೆ ಕೂಡ ಉಂಟು.ಇದು ಐಶ್ವರ್ಯದ ಸಂಕೇತ ಎಂಬ ನಂಬಿಕೆ ಸಹ ಇದೆ.

ಮಂಗಳೂರಿನಲ್ಲಿ ಇದಕ್ಕೆ ಕಕ್ಕೆ ಪೂ ಎಂದು ಹೇಳುತ್ತೇವೆ. ಇಷ್ಟೊಂದು ಬಂಗಾರವಾಗಿರುವ ಇದಕ್ಕೆ ಕಕ್ಕೆ ಎಂಬ ಹೆಸರು ಏತಕ್ಕೆ ಬಂತು ಎಂದು ಎಲ್ಲಾ ಲಾಜಿಕ್ ಗಳನ್ನು ಹಾಕಿ ನಾನು ಸೋತಿರುವೆ.ಕಕ್ಕೆ ಎಂದರೆ ತುಳುವಲ್ಲಿ ಕಾಗೆ ಎಂದು ಅರ್ಥ.
ಇದಕ್ಕೆ ಕೊನ್ನೆ ಹೂವು ಎಂಬ ಹೆಸರು ಕೂಡ ಇದೆ.ಇಂಗ್ಲಿಷ್ ನಲ್ಲಿ ಇದರ ಹೆಸರು ಇನ್ನೂ ಚಂದ.ಆ ಹೆಸರಿಗೆ ತಕ್ಕಂತೆಯೇ ಇದೆ ಈ ಮರ. ಆಂಗ್ಲ ಭಾಷೆಯಲ್ಲಿ Golden Shower Tree ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು Cassia fistula. ಕೊಂಡ್ರೈ ಎಂದು ತಮಿಳಿನಲ್ಲಿ ಕರೆಯುತ್ತಾರೆ.

ವಿಶೇಷ ಎಂದರೆ ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪವಂತೆ, ಕೇರಳಿಗರ ರಾಜ್ಯ ಪುಷ್ಪ ಕೂಡ ಹೌದು. ಮಲಯಾಳಿಗರ ವಿಶು ಕಣಿಯಲ್ಲಿ ಇದೊಂದು ಹೂವು ಮಲ್ಲಿಗೆಗಿಂತಲೂ ಹೆಚ್ಚಿನ ಗೌರವ ಹಾಗೂ ಪ್ರಮುಖ ಸ್ಥಾನ ಪಡೆಯುತ್ತದೆ.ವಿಶು ಸಂದರ್ಭದಲ್ಲಿ ಅಲ್ಲಿನ ಮಾರುಕಟ್ಟೆಯಲ್ಲಿ ಕೂಡ ಇದನ್ನು ಮಾರುವುದನ್ನು ನಾವು ಕಾಣುತ್ತೇನೆ.ಅಂದ ಹಾಗೆ ಈ ಹೂವು ಶಿವನಿಗೂ ಬಹಳ ಇಷ್ಟವಂತೆ.

ಹೇಗೆ ಮೇ ತಿಂಗಳಲ್ಲಿ ಮೇಫ್ಲವರ್ ದಾರಿ ಉದ್ದಕ್ಕೂ ಮರದ ಮೇಲೆ ಕೆಂಪು ಕೆಂಪಾಗಿ ಬರೀ ಹೂಗಳಿಂದಲೇ ತುಂಬಿಕೊಂಡು,ಕೆಳಗೊಂದು ರೆಡ್ ಕಾರ್ಪೆಟ್ ಹಾಸಿ ಬಿಟ್ಟರೆ ಹೇಗೆ ಸೊಗಸಾಗಿ ಕಾಣುತ್ತದೋ... ಹಾಗೇ ಈ ಕಕ್ಕೆ ಪೂ ದಾರಿಯ ಇಕ್ಕೆಲಗಳಲ್ಲಿ ಬಂಗಾರದ ಹೂಗಳನ್ನು ಹೊತ್ತು ನಿಂತರೆ ನೋಡಲು ಎರಡು ಕಣ್ಣು ಸಾಲದು.ಹಬ್ಬದ ಸಂಧರ್ಭದಲ್ಲಿ ಅಂತು ಕಣ್ಣಿಗೆ ಹಬ್ಬ.

ಈ ಪೋಟೋ ಒಂದು ತಿಂಗಳ ಹಿಂದೆ ಮಂಗಳೂರಿನ ಮಿಲಾಗ್ರಿಸ್ ಬಳಿ ಇರುವ ಮಣಿಪಾಲ್ ಡೆಂಟಲ್ ಸೈನ್ಸ್ ಕಾಲೇಜು ನ ಬಳಿ ಇರುವ ಮರ ಒಂದರದ್ದು.ನೀವು ನಂತೂರಿನಿಂದ ಕೆ.ಪಿ.ಟಿ ಹೋಗುವ ದಾರಿಯಲ್ಲಿ ಒಮ್ಮೆ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಅಲ್ಲಿ ಸ್ವಲ್ಪ ದೂರದವರೆಗೆ ಈ ಕಕ್ಕೆ ಹೂವಿನ ಗಿಡಗಳನ್ನು ಸಾಲಾಗಿ ನೆಟ್ಟಿದ್ದಾರೆ.ಈ ತಿಂಗಳಲ್ಲಿ ಆ ಮರಗಳಲ್ಲಿ ಬಂಗಾರದ ದಂಡೆಗಳನ್ನು ನೇತು ಹಾಕಿದಂತೆಯೇ ಕಾಣುತ್ತದೆ. ಕೆಲವು ಮರಗಳು ಮಧ್ಯೆ ಮಧ್ಯೆ ನಾಶ ಆಗಿದ್ದು ಬೇಜಾರು ತರಿಸಿದೆ.ಒಂದು ವೇಳೆ ನಂತೂರಿನಿಂದ ಕೆ.ಪಿ.ಟಿ ವರೆಗಿನ ರೋಡ್ ಬರೀ ಇದೇ ಗಿಡಗಳಿಂದ ಸಂಪೂರ್ಣವಾಗಿ ತುಂಬಿದ್ದರೆ... ಆಹಾ.. ಬಿಸು ಹೊತ್ತಿಗೆ ಆ  ದಾರಿ ಎಷ್ಟೊಂದು ಸ್ವರ್ಣಮಯ ಆಗಿರುತ್ತಿತ್ತು ಅಲ್ಲವೇ ಎಂದು ಒಮ್ಮೆ ಅನ್ನಿಸದೇ ಇರದು.

ಹೊಸ ವರ್ಷ ಬಂತೆಂದರೆ ಸಾಕು... ಈ ಹೂವಿನ ಮರ ಪ್ರತೀ ವರ್ಷವೂ ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಬಸ್ಸಿನಿಂದ ಹೊರಗೆ ಇಣುಕಿ ಇದರ ಸೊಬಗು ಸವಿಯುವುದೇ ನನ್ನ ಇಷ್ಟದ ಕೆಲಸವಾಗಿ ಬಿಡುವುದು.

ಏನೇ ಹೇಳಿ ನಮ್ಮವರ ಹಬ್ಬಕ್ಕೆ ಪ್ರಕೃತಿ ಕೂಡ ಬಹಳ ಶಿಸ್ತಿನಿಂದ, ತುಂಬಾ ಶ್ರದ್ಧೆಯಿಂದ ಅಂದವಾಗಿ ಸಿಂಗಾರಗೊಳ್ಳುವುದು ಎಷ್ಟೊಂದು ಚಂದ ಅಲ್ಲವೇ...

ನಮ್ಮ ಹಿಂದೂ ಹಬ್ಬಗಳಲ್ಲಿ ಪ್ರಕೃತಿಗೂ ತನ್ನದೇ ಆದ ಸ್ಥಾನವಿದೆ.ಹಬ್ಬದ ಜೊತೆ ಜೊತೆಗೆ ಆ ಪ್ರಕೃತಿಯೂ ಇನ್ನಷ್ಟು ಸೊಂಪಾಗಿ ಉಳಿಯಬೇಕು.ಆಗಲೇ ಹಬ್ಬವೊಂದು ಕಣ್ಣಿಗೂ  ಹಬ್ಬವಾಗುವುದು,ಮನಸ್ಸಿಗೂ ಮುದ ನೀಡುವುದು.

ಎಲ್ಲರಿಗೂ ಮುಂಚಿತವಾಗಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಚಾಂದ್ರಮಾನ ಯುಗಾದಿ ಆಚರಿಸುವವರಿಗೆ ಕೂಡ #ಯುಗಾದಿ_ಹಬ್ಬದ_ಶುಭಾಶಯಗಳು.. ಅದೇ ರೀತಿ ಸೌರಮಾನ ಯುಗಾದಿ ಆಚರಿಸುವ ನಮ್ಮೆಲ್ಲಾ ತುಳುವರಿಗೂ ಕೂಡ #ಬಿಸು_ಹಬ್ಬದ_ಶುಭಾಶಯಗಳು.ಎರಡು ಬಾರಿ ಹೋಳಿಗೆ ಪಾಯಸ ಹೊಡೆಯಲು ಒಂದೇ ಹಬ್ಬವನ್ನು ಎರಡೆರಡು ಬಾರಿ ನೀಡಿ ಖುಷಿ ಹೆಚ್ಚಿಸುವ ಈ ಪ್ರಕೃತಿಗೆ ಹಾಗೂ ನಮ್ಮ ಈ ವೈವಿಧ್ಯತೆಯ ಸಂಸ್ಕೃತಿಗೊಂದು ಧನ್ಯವಾದ ಮನಸ್ಸಿನಲ್ಲಿ ಅನವರತವೂ ಇರಲಿ.

.....................................................................................

#ಏನೋ_ಒಂದು

Ab Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ