ಪಡ್ಡಾಯಿ
ಫಾರಿನ್ ಸೆಂಟಿಗೆ ಆಸೆಗಳನ್ನು ಹುಟ್ಟಿಸುವ ತಾಕತ್ತು ಇದೆಯೋ ಇಲ್ಲವೋ ಗೊತ್ತಿಲ್ಲ,ಆದರೆ ಅದು ದುರಾಸೆಗಳನ್ನು ಹುಟ್ಟಿಸುತ್ತಾ,ಅದನ್ನೇ ಮತ್ತಷ್ಟು ಬೆಳೆಸುತ್ತಾ ಪೋಷಿಸುತ್ತಾ ಹೋದರೆ.. ತಮಗೆ ಮಾತ್ರವಲ್ಲ ಸುತ್ತ ಮುತ್ತಲಿನವರಿಗೂ ಒಂದು ರೇಂಜಿಗೆ ತಾಪತ್ರಯ ತಪ್ಪಿದ್ದಲ್ಲ!
ಒಳ್ಳೆಯ ಜೆಂಜಿ ಕಜಿಪು(ಏಡಿ ಗಸಿ) ತಿಂದು ಅದರೊಟ್ಟಿಗೆ ಒಂದೆರಡು ಬಾಟ್ಲಿ ಕಳಿ(ಸೇಂದಿ) ಏರಿಸಿ ಸುಖ ನಿದ್ದೆಗೆ ಜಾರಿದ ಬೋಟು ಧಣಿಯದ್ದೇ ಕೊಲೆಯಾಗುತ್ತದೆ.... ಅದೂ ಕೂಡ ಕೆಲಸದವನ ಮನೆಯಲ್ಲಿ!
ಆ ನಂತರ ಒಂದರ ಮೇಲೆ ಒಂದು ಕೊಲೆ ಆಗುತ್ತಲೇ ಹೋಗುತ್ತದೆ..!
ಮೀನು ಹಿಡಿಯುವ ಪ್ರತೀ ಕಡಲ ಮಕ್ಕಳಿಗೂ ಒಂದು ಆಸೆ ಇರುತ್ತದೆ.. ತನ್ನದೇ ಸ್ವಂತದ ಒಂದು ಬೋಟು,ಸ್ವಂತದ ಬಲೆ,ಮೀನು ಹಿಡಿಯಲು ಒಂದಷ್ಟು ಕಸುಬು ಗೊತ್ತಿರುವ ಜನ,ದೋಣಿ ತುಂಬಾ ತಾಜಾ ಮೀನು..ಕೊನೆಗೆ ಕೈ ತುಂಬಾ ಎಣಿಸಲು ದುಡ್ಡು.
ಅವೆಲ್ಲ ಲಕ್ಷ, ಕೋಟಿಗಳನ್ನು ಎಣಿಸುವ ಸಿರಿವಂತ ಧಣಿಗಳಿಗೆ ದಕ್ಕುವ ಕನಸುಗಳಷ್ಟೇ.ಆದರೆ ಕೆಲವೊಮ್ಮೆ ಅಂತಹದ್ದೊಂದು ಆಸೆ ಹುಟ್ಟಿದರೆ,ಬೇಡ ಎಂದು ಇದ್ದಾಗ ಸಹ ಯಾರಾದರೂ ಆ ರೀತಿಯ ಕನಸುಗಳನ್ನು ಹುಟ್ಟಿಸಿದರೆ.. ಆ ಕನಸುಗಳು ನನಸಾಗುವ ಸಾಧ್ಯತೆಗಳು ತುಂಬಾ ಹೆಚ್ಚಾಗುತ್ತಾ ಹೋಗಿ ಕೊನೆಗೊಮ್ಮೆ ಕೈಗೆ ಬಂದ ಆ ತುತ್ತೇ ಬಾಯಿಗೆ ಬರದೇ ಹೋದಾಗ... ಮನಸ್ಸು ತಣ್ಣಗೆ ದೊಡ್ಡ ಕ್ರೌರ್ಯ ಮಾಡಲು ಹಿಂದೆ ಮುಂದೆ ನೋಡುವುದೇ ಇಲ್ಲ.ಆವಾಗ ಕಡಲ ಬಳಿಯೇ ರಕ್ತ ನದಿಯಂತೆಯೇ ಹರಿಯುತ್ತದೆ.ಇಲ್ಲಿರುವುದು ಇಂತಹದ್ದೇ ಕಥೆ!
ತುಳುನಾಡಿನ ದೈವಗಳು ಎಂದಿಗೂ ಸತ್ಯವನ್ನೇ ಹೇಳುತ್ತದೆ.ತಪ್ಪು ಮಾಡಲು ಹೇಳುವುದೂ ಇಲ್ಲ,ಸೂಚಿಸುವುದು ಕೂಡ ಇಲ್ಲ.ದೈವ ಹೇಳಿದ್ದನ್ನೇ ತಪ್ಪಾಗಿ ಅರ್ಥಮಾಡಿಕೊಂಡು ಕ್ಷಮಿಸಲು ಅಸಾಧ್ಯವಾದ ತಪ್ಪು ಮಾಡಿ ಆ ನಂತರ ದೈವವೇ ತಮ್ಮ ಕೈಯಿಂದ ಮಾಡಿಸಿದ್ದು ಎಂದು ಹೇಳಿದರೆ.. ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.ಶಿಕ್ಷೆಯಂತು ಕಟ್ಟಿಟ್ಟ ಬುಟ್ಟಿ.
William Shakespeare ನ Macbeth ನಾಟಕ ಆಧಾರಿತ ಈ ತುಳು ಮೂವಿಯ ಕಥೆಯನ್ನು ಯಕ್ಷಗಾನ ಹಾಗೂ ದೈವಾರಾಧನೆಯ ಮೂಲಕವೇ ಹೇಳಿದ್ದು.. ಅದರಲ್ಲೂ ಅವುಗಳನ್ನು ಎಷ್ಟು ಬೇಕೋ ಅಷ್ಟು ಬಹಳ ಸೊಗಸಾಗಿ ಮತ್ತು ಅಷ್ಟೇ ಅರ್ಥವತ್ತಾಗಿ ಬಳಸಿಕೊಂಡಿದ್ದು ಇಷ್ಟವಾಯಿತು.
Macbeth ಕಥೆ ಗೊತ್ತಿದ್ದರೂ ಈ ಚಿತ್ರ ಏಕೆ ರಾಷ್ಟ್ರ ಪ್ರಶಸ್ತಿಯನ್ನು ಬಾಚಿ ಕೊಂಡಿತು ಎಂದು ತುಂಬಾ ಕುತೂಹಲ ಇತ್ತು.ಕೊನೆಗೂ ನೋಡಿದೆ. "ಪಡ್ಡಾಯಿ" ನಿರಾಸೆ ಮೂಡಿಸಲಿಲ್ಲ.
Macbeth ಅನ್ನು ಹಲವಾರು ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ.ಮೊನ್ನೆಯಷ್ಟೇ ಬಂದ Fahadh Faasil ಅಭಿನಯದ ಮಲಯಾಳಂ ನ Joji ಕೂಡ ತುಂಬಾ ಇಷ್ಟವಾಗಿತ್ತು.ಆದರೆ ತುಳುವಿನ ಪ್ಲೇವರ್ ನಲ್ಲಿ ಮೂಡಿ ಬಂದ ಪಡ್ಡಾಯಿ ಸಹ ಇಲ್ಲಿಯ ಅಭಿರುಚಿಗೆ ತಕ್ಕಂತೆ ಅಷ್ಟೇ ಚೆನ್ನಾಗಿದೆ.
2018 ರಲ್ಲಿ ಬಂದಂತಹ ಈ ತುಳು ಮೂವಿಯನ್ನು Abhaya Simha ಅವರು ನಿರ್ದೇಶಿಸಿದ್ದಾರೆ.Manikanth Kadri ಸಂಗೀತ ಮೂವಿಯ ಕಥೆಗೆ ಪೂರಕವಾಗಿದೆ.Gopinath Bhat, Mohan Sheni, Bindu Rakshidhi, Chandrahas Ulla ಮುಂತಾದವರ ತಾರಾಗಣವಿದೆ.
ಇಂತಹ ಚಿತ್ರಗಳು ತುಳು ಚಿತ್ರರಂಗಕ್ಕೆ ಒಂದೊಳ್ಳೆಯ ಹೆಸರು ಖಂಡಿತವಾಗಿಯೂ ತಂದು ಕೊಡಬಲ್ಲದು.ಆದಾಗಲೇ ಪ್ರಶಸ್ತಿ ಗಳಿಸುವ ಮೂಲಕ ಸಾಕಷ್ಟು ಹೆಸರು ತಂದು ಕೊಟ್ಟಿದೆ ಕೂಡ.ಇನ್ನಷ್ಟು ಇಂತಹ ಮತ್ತು ಇದಕ್ಕಿಂತ ಒಳ್ಳೆಯ ಚಿತ್ರಗಳು ಕೂಡ ಮುಂದೆಯೂ ತುಳು ಭಾಷೆಯಲ್ಲಿ ಮೂಡಿ ಬರಲಿ ಎಂದು ತುಳು ಚಿತ್ರಗಳ ಅಭಿಮಾನಿಯಾಗಿ ನನ್ನದೂ ಕೂಡ ಒಂದು ಆಸೆ ಅಷ್ಟೇ.
ಈ Crime Drama ಮೂವಿ Prime ನಲ್ಲಿ ಇದೆ. ಸದ್ಯಕ್ಕೆ YouTube ನಲ್ಲಿ ಕೂಡ ನೋಡಲು ಸಿಗುತ್ತದೆ.ಸುಮಾರು ಒಂದೂವರೆ ಗಂಟೆಗಳ ಈ ಮೂವಿಯನ್ನು ಕೊನೆಯವರೆಗೂ ನೋಡುವ ತಾಳ್ಮೆ ಇದ್ದರೆ ಇದು ನಿಮಗೂ ಇಷ್ಟ ಆಗಬಹುದು..
Movie_Review
Ab Pacchu

Comments
Post a Comment