ತುಳುವೆ ಪೆಲಕಾಯಿ ಎಂಬ ಹತ್ತಿಯಂತಹ ಹಲಸು..
ತುಳುವೆ ಪೆಲಕಾಯಿಗೆ ನಮ್ಮಲ್ಲಿ ಸಪರೇಟ್ ಫ್ಯಾನ್ ಬೇಸ್ ಇದೆ. ಅಂತಹ ಹಲವರಲ್ಲಿ ನಾನೂ ಕೂಡ ಒಬ್ಬ.ಪೆಲಕಾಯಿ ಎಂದರೆ ತುಳುವಲ್ಲಿ ಹಲಸಿನ ಹಣ್ಣು.
ಬರೀ ಕೈಯಲ್ಲಿಯೇ ನರಸಿಂಹ ದೇವರು ಹಿರಣ್ಯಕಶಿಪುವಿನ ಹೊಟ್ಟೆ ಬಗೆದಂತೆ ಈ ಹಣ್ಣಿನ ಉದರವನ್ನು ನಾವೂ ಕೂಡ ಸುಲಭವಾಗಿ ಬಗೆದು ಬಿಡಬಹುದು ಮಾತ್ರವಲ್ಲ ಒಂದೊಂದೇ ಸೋಳೆಗಳನ್ನು ಗುಳುಂ ಮಾಡುತ್ತಾ ಮಾಡುತ್ತಾ ಕೆಲವೊಮ್ಮೆ ಒಂದಿಡೀ ಹಣ್ಣನ್ನು ಒಬ್ಬರೇ ಮಾಯ ಮಾಡಿರುವುದು ಕೂಡ ನಮ್ಮ ಅರಿವಿಗೆ ಬಂದಿರುವುದಿಲ್ಲ.
ಹಿಂದೆ ಬಡತನ ಹೆಚ್ಚಿದ್ದಾಗ,ಹಸಿವು ಇನ್ನಿಲ್ಲದಂತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಈ ಹಲಸುಗಳೇ ಹೆಚ್ಚಿನವರ ಕೈ ಹಿಡಿದು ಮೇಲೆತ್ತಿದ್ದು.ಬಹುಶಃ ಅದಕ್ಕಾಗಿಯೇ ಹೇಳಿದ್ದು ಇರಬೇಕು " ಹಸಿದು ಹಲಸು ತಿನ್ನು - ಉಂಡು ಮಾವು ತಿನ್ನು ಎಂದು".ಇದು ಎಷ್ಟು ನಿಜ ಎಂದರೆ ತುಂಬಾ ಹಸಿದಾಗ ಹತ್ತು ಹದಿನೈದು ಹಲಸಿನ ಸೋಳೆ ಯನ್ನು ಹಾಗೇ ತಿಂದು ಬಿಟ್ಟರೆ ಹೊಟ್ಟೆ ಸಂಪೂರ್ಣ ಭರ್ತಿಯಾಗಿ ಬಿಡುತ್ತದೆ.ಮತ್ತೆ ಬೇರೇನು ಬೇಕು ಎಂದು ಅನಿಸುವುದಿಲ್ಲ.ಹಲಸಿ ಹಣ್ಣಿನ ಮಹಾತ್ಮೆ ತುಂಬಾ ದೊಡ್ಡದಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಅಂತು ಇದನ್ನು ತಮ್ಮ ರಾಷ್ಟ್ರೀಯ ಹಣ್ಣು ಎಂದು ಘೋಷಿಸಿ ಬಿಟ್ಟಿವೆ.
ಬರ್ಕೆ ಹಲಸಿಗೆ ಹೋಲಿಸಿ ನೋಡಿದರೆ ಈ ತುಳುವೆ ಹಲಸಿನ ಮರಗಳು ಹಳ್ಳಿಗಳಲ್ಲಿಯೂ ಕೂಡ ತುಂಬಾನೇ ಕಡಿಮೆ ಇದೆ.ಹೆಚ್ಚಾಗಿ ಬರ್ಕೆ ಮರವೇ ಎಲ್ಲಾ ಕಡೆ ಕಂಡು ಬರುವುದು. ಈ ತುಳುವೆ ಪೆಲಕಾಯಿ ಮರಗಳಲ್ಲಿಯೇ ಹಣ್ಣಾದಾಗ ಮಂಗಗಳ ಪಟಲಾಂ ಒಂದು ಎಲ್ಲಿದ್ದರೂ ಓಡೋಡಿ ಬಂದು ಈ ತುಳುವೆ ಹಣ್ಣುಗಳು ತಮ್ಮದೇ ಎಂದು ಬಾವುಟ ಊರಿ ಇಡೀ ಹಣ್ಣನ್ನು ಲಗಾಡಿ ತೆಗೆದು ಕೇವಲ ಗೂಂಜಿಯನ್ನು ಉಳಿಸಿ ಹೋಗುತ್ತವೆ.ಕೆಲವೊಮೆ ಆಸೆಯಿಂದ ಕೆಳಗೆ ನಿಂತಿರುವ ಹಸುಗಳ ಪಾಲಿಗೂ ಅಲ್ಪ ಸ್ವಲ್ಪ ಹಣ್ಣು ಮಂಗಗಳ ದೆಸೆಯಿಂದ ದಕ್ಕುವುದು ಇದೆ.ಹಲಸಿನ ಸೋಳೆಗಳಂತೆ ಈ ತುಳುವೆ ಹಲಸಿನ ಗೂಂಜಿಯನ್ನು ಕೂಡ ಉಪ್ಪು ನೀರಿನಲ್ಲಿ ಹಾಕಿಟ್ಟರೆ ಗಂಜಿ ಊಟಕ್ಕೆ ಅದರದ್ದೊಂದು ಚಟ್ನಿ.. ಆಹಾ ಅದೆಷ್ಟು ರುಚಿ,ತಿಂದವನೇ ಬಲ್ಲ.
ಹಣ್ಣೇ ಅದರಷ್ಟಕ್ಕೆ ಉದುರಿ ಬಿದ್ದಾಗ ಕೂಡ ಮನೆಯ ಹಸುಗಳಿಗೆ,ಊರ ಹಸುಗಳಿಗೆ ಕೂಡ ಅದೆನೋ ಉಲ್ಲಾಸ.ಮರದ ಕೆಳಗೆ ಅವುಗಳು ಒಡೋಡಿ ಬರುತ್ತವೆ. ಹಲಸಿನ ಕೆಳಗಿನ ರಚ್ಚೆ ಒಂದನ್ನು ಬಿಟ್ಟು ಬಾಕಿ ಎಲ್ಲಾ ಸೋಳೆಗಳನ್ನು ಈ ಹಸುಗಳು ಸಪಾಯಿ ಮಾಡಿ, ಮರದಡಿಯೇ ನಿಂತುಕೊಂಡು ಹೊಟ್ಟೆಯಲ್ಲಿ ಹಲಸಿನ ಹಣ್ಣು ಕರಗಿಸುತ್ತಾ ತನ್ನ ನಾಲಗೆಯನ್ನು ಹೊರಗೆ ಹಾಕಿ ಮೂಗು ನೆಕ್ಕುತ್ತಾ ಹಲಸಿನ ಮರಕ್ಕೆ ಧನ್ಯವಾದ ಹೇಳುವುದರಲ್ಲಿ ಮಗ್ನವಾಗಿರುತ್ತವೆ.
ಸಂಪೂರ್ಣ ಹಣ್ಣಾದಾಗ ಜಾಗ್ರತೆಯಿಂದ ನೆಲಕ್ಕೆ ಬೀಳದಂತೆ ಮರದಿಂದ ಇಳಿಸಿದರೆ ಈ ತುಳುವೆ ಹಣ್ಣು ತಿನ್ನಲು ಬಲು ರುಚಿ, ಇಲ್ಲದಿದ್ದರೆ ಒಂಥರಾ ಹುಳಿ ರುಚಿ ಬಂದು ರುಚಿ ಬಿಡುತ್ತದೆ. ತುಂಬಾ ಸಿಹಿ,ತುಂಬಾ ರುಚಿ ಮತ್ತು ಹತ್ತಿಯಂತೆ ಮೃದುವಾಗಿರುವ ಈ ಹಣ್ಣನ್ನು ಹಲ್ಲಿಲ್ಲದ ಮನೆಯ ದೊಡ್ಡ,ಅಜ್ಜ ಕೂಡ ಹಾಗೇ ಸುಲಭವಾಗಿ ತಿನ್ನಬಹುದು.
ತುಳುವೆ ಹಲಸಿಗೆ ಸಂಬಂಧಿಸಿದಂತೆ ನೆನಪುಗಳು ಹಲವು ನನ್ನಲ್ಲಿ.ಮರದ ಮೇಲೆಯೇ ಕುಳಿತುಕೊಂಡು ಒಂದಿಡೀ ಹಲಸನ್ನು ನಾನು ಒಬ್ಬನೇ ಎಷ್ಟೋ ಸಲ ಗುಳುಂ ಮಾಡಿದ್ದು ಸಹ ಇದೆ.ತುಳುವೆ ಪೆಲಕಾಯಿಗೆ ಮತ್ತು ತುಳುವರಿಗೆ ಸಂಬಂಧಿಸಿದಂತೆ ಒಂದು ಬಹಳ ಚಂದದ ಮಾತಿದೆ.ಅದೇನೆಂದರೆ "ತುಳುವೆರ್ನ ಮನಸ್ಸ್ ತುಳುವೆ ಪೆಲಕಾಯಿದ ಲಕನೇ ಮಸ್ತ್ ಮೆದು(ತುಳುವೆ ಹಲಸಿನಂತೆ ತುಳುವರ ಮನಸ್ಸು ಕೂಡ ತುಂಬಾನೇ ಮೃದು) " ಎಂಬ ಮಾತು ನಮ್ಮಲ್ಲಿ ಇದೆ.ತುಳುವರ ಹೆಸರಿನೊಂದಿಗೆಯೇ ತಳುಕು ಹಾಕಿಕೊಂಡಿರುವ ಈ ತುಳುವೆ ಹಲಸು ನಿಜಕ್ಕೂ ನಮಗೆ ಒಂದೊಳ್ಳೆಯ ಗೌರವ ಮೂಡಿಸಿದೆ.
ಈಗ ಅಲ್ಲಲ್ಲಿ ಇದರ ಕೆಲವು ಮರಗಳು ಇದ್ದರೂ ಹಲಸು ಅದರಲ್ಲು ಈ ತುಳುವೆ ಹಲಸನ್ನು ಇಷ್ಟ ಪಟ್ಟು ತಿನ್ನುವವರ ಸಂಖ್ಯೆ ಕಡಿಮೆ ಇದೆ ಎಂದೇ ನನಗೆ ಅನಿಸುತ್ತದೆ. ಏಕೆಂದರೆ ಒಂದೋ ಇದನ್ನು ಮಂಗಗಳೇ ತಿಂದು ಸಪಾಯಿ ಮಾಡುತ್ತವೆ, ಇಲ್ಲದಿದ್ದರೆ ಇದೂ ಕೂಡ ಪೆಜಕಾಯಿಯಂತೆ ತಿನ್ನುವವರಿಲ್ಲದೆ ಹಣ್ಣಾಗಿ ಕೊನೆಗೆ ಕೆಳಗೆ ಬಿದ್ದು ಕೊಳೆತೇ ಹೋಗುವುದು.ಕೆಳಗೆ ಬಿದ್ದಾಗ ಆಸೆಯಿಂದ ತಿನ್ನಲು ಹಿಂದಿನಂತೆ ಎಲ್ಲಾ ಕಡೆ ಈಗ ಹಸುಗಳು ಕೂಡ ಇಲ್ಲ.ಈ ರೀತಿಯಾಗಿ ತುಳುವೆ ಪೆಲಕಾಯಿ ಯಾರೂ ತಿನ್ನದೇ ಅನಾಥವಾಗಿ ಕೊಳೆದು ಹೋಗುವುದನ್ನು ನೋಡುವಾಗ ತುಂಬಾನೇ ಬೇಜಾರು ಆಗುತ್ತದೆ.
ಎಂತಹ ರುಚಿಯಾದ ದುಬಾರಿ ಹಣ್ಣುಗಳು ಮಾರ್ಕೆಟ್ ನಲ್ಲಿ ಇದ್ದರೂ ಕೂಡ ಸೀಸನ್ ನಲ್ಲಿ ಒಮ್ಮೆ ಆದರೂ ನಾವು ನಮ್ಮ ಲೋಕಲ್ ಹಣ್ಣುಗಳಾದ ಹಲಸು,ಮಾವುಗಳನ್ನು ತಿನ್ನುವ ಮನಸ್ಸು ಮಾಡುವುದು ಆರೋಗ್ಯಕ್ಕೂ ಕೂಡ ಯಾವತ್ತಿಗೂ ಒಳ್ಳೆಯದೇ..
.....................................................................................
#ಪೆಲಕಾಯಿ..
Ab Pacchu
Moodubidire
Comments
Post a Comment