ತುಳು ಭಾಷೆ ಮತ್ತು ನಮ್ಮ ಮಂಗಳೂರು ಆಕಾಶವಾಣಿ...
ಮಂಗಳೂರು ಅಂದ ತಕ್ಷಣ ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು,ಪುರತಾನ ದೇವಾಲಯಗಳು,ಬಂದರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹೇಗೆ ಮಂಗಳೂರಿನವರಿಗೆ ಅತಿಯಾಗಿ ನೆನಪಾಗುತ್ತದೋ ಅಷ್ಟೇ ನೆನಪಾಗುವ ಹಾಗೂ ನೆನಪಾಗಲೇಬೇಕಾದ ಒಂದು ಸಂಸ್ಥೆ ಎಂದರೆ... ಅದು ಆಕಾಶವಾಣಿ ಮಂಗಳೂರು.
ಮಂಗಳೂರನ್ನೇ ತನ್ನ ಹೆಸರಿನಲ್ಲಿ ಇಟ್ಟುಕೊಂಡು ಸದಾ ಗುರುತಿಸಲ್ಪಡುವ ಮಂಗಳೂರು ಆಕಾಶವಾಣಿ ಮಂಗಳೂರಿಗರ ಹೆಮ್ಮೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಅದೂ ಕೂಡ ದೂರದರ್ಶನ ಎಲ್ಲರ ಕೈಗೆ ಕೈಗೆಟುಕದ ಕಾಲದಲ್ಲಿ,ಹೊಸ ಹೊಸ FM ಚಾನೆಲ್ ಗಳು ಗಾಳಿಯಲ್ಲಿ ಪ್ರಸರಣಗೊಳ್ಳದ ಸಮಯದಲ್ಲಿ... ಮನರಂಜನೆಯ ಜೊತೆ ಜೊತೆಗೆ ಜ್ಞಾನದ ದಾಹವನ್ನು ಇಲ್ಲಿನವರಿಗೆ ತಕ್ಕ ಮಟ್ಟಿಗೆ ತಣಿಸಿದ್ದು ಇದೇ ಮಂಗಳೂರು ಆಕಾಶವಾಣಿ.
ನ್ಯೂಸ್ ನಿಂದ ಹಿಡಿದು ಸಂಗೀತ,ಯಕ್ಷಗಾನ, ಮಾತುಕತೆ,ಕ್ರಿಕೆಟ್ ಕಾಮೆಂಟರಿ,ನಾಟಕ,ಕೃಷಿರಂಗ.. ಕಾರ್ಯಕ್ರಮಗಳ ಮೂಲಕ ನಮ್ಮಲ್ಲಿ ಮನೆ ಮನೆಯನ್ನು ಮುಟ್ಟಿದ್ದು ಇದೇ 100.3 Mega Hertz Frequency ಯಲ್ಲಿ ಬರುತ್ತಿದ್ದ ನಮ್ಮ ಮಂಗಳೂರು ಆಕಾಶವಾಣಿ.
ಮಂಗಳೂರು ಆಕಾಶವಾಣಿ ಎಂದರೆ ಹಲವು ನೆನಪುಗಳು.ಮಂಗಳೂರಿನಲ್ಲಿರುವ ಎತ್ತರದ ಗುಡ್ಡಗಳಲ್ಲಿ ಒಂದಾದ ಕದ್ರಿ ಹಿಲ್ಸ್ ನಲ್ಲಿ ಇರುವ ಆಕಾಶವಾಣಿ ಹಾಗೂ ಅದರದ್ದೊಂದು ಉದ್ದದ ಟವರ್ ಮಂಗಳೂರಿನಲ್ಲಿರುವ ಎಲ್ಲರಿಗೂ ಬಹಳ ಚಿರಪರಿಚಿತ.
ಅದರ ಒಳಗೆ ಏನಿರಬಹುದು, ಹೇಗೆ ಅಷ್ಟು ದೂರದವರೆಗೆ ಆಕಾಶವಾಣಿ ಎಲ್ಲರಿಗೂ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿಸುತ್ತದೆ ಎಂದು ತಿಳಿಯುವ ಕುತೂಹಲ ನನಗೆ ಚಿಕ್ಕಂದಿನಿಂದಲೂ ಬಹಳನೇ ಇತ್ತು.
ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಮೇಲಿನ ಜೋಗಿಮಠ ದ ಕಡೆಯಿಂದ ನಡೆದು,ಕದ್ರಿ ಗುಡ್ಡದಿಂದ ಕೆಳಗಿಳಿದು ಹೋಗುವ ಮೊದಲು ಪ್ರತಿನಿತ್ಯವೂ ಆಕಾಶವಾಣಿಯ ಅಂಗಳದೊಳಗೊಂದು ಇಣುಕಿ ಹಾಕಿಯೇ ಹೋಗುತ್ತಿದ್ದೆ. ಆಕಾಶವಾಣಿಯ ಆ ಕಾಂಪೌಂಡ್ ನಲ್ಲಿ ಅಂತಹದ್ದು ಏನೂ ಇರದಿದ್ದರೂ ಅಲ್ಲೊಂದು ಆಕರ್ಷಣೆ ಅತಿಯಾಗಿಯೇ ಇತ್ತು.
ಮುಂದೆ ಕಾಲೇಜನಲ್ಲಿ ನಮ್ಮ ಉಪನ್ಯಾಸಕರು ತರಗತಿಯ ನಮ್ಮನೆಲ್ಲಾ ಮಂಗಳೂರು ಆಕಾಶವಾಣಿ ನೋಡಲು ಕರೆದುಕೊಂಡು ಹೋದಾಗ.. ಅಲ್ಲಿ ಹೋಗಿ ಎಲ್ಲವನ್ನೂ ಕಣ್ಣಾರೆ ಕಂಡಿದ್ದೆವು.Text book ನಲ್ಲಿದ್ದ AM, FM modulation ಗಳ ಬಗ್ಗೆ ಅಲ್ಲಿಯವರು ಬಹಳ ಚಂದ ಮಾಡಿ ವಿವರಿಸಿದ್ದರು.ಈಗಲೂ ಆ ಕೋಣೆಗಳು,ಅಲ್ಲಿನ Console, ಆ Acoustic room ನ ಗೋಡೆಗಳು..ಕಣ್ಣ ಮುಂದೆಯೇ ಇದೆ.
ಬರೀ ಕೇಳಿಯೇ Imagine ಮಾಡಿಕೊಳ್ಳುತ್ತಿದ್ದ ಆಕಾಶವಾಣಿಯ ನಿರ್ವಾಹಕರುಗಳನ್ನು ಮೊದಲ ಬಾರಿಗೆ ನೇರವಾಗಿ ನೋಡಿದ್ದೆ. ಮುದ್ದು ಮೂಡುಬೆಳ್ಳೆ,ಮಾಲಾತಿ ಆರ್.ಭಟ್,ಶಕುಂತಲಾ ಆರ್. ಕಿಣಿ.. ಮುಂತಾದವರನ್ನು ನೋಡಿದ್ದೆ ಎಂದು ನೆನಪು. "ಮಾತುಕತೆಯ" ಅಜ್ಜ ಎಂದೇ ಫೇಮಸ್ ಆಗಿದ್ದ ಕುಶಾಲಿನ ಮಾತುಗಳನ್ನಾಡಿ ಮಂಗಳೂರಿಗರನ್ನು ರಂಜಿಸಿದ್ದ ಕೆ.ಆರ್ ರೈ ಯವರು ಮಾತ್ರ ಎಷ್ಟು ಹುಡುಕಿದರೂ ಕಣ್ಣಿಗೆ ಬಿದ್ದಿರಲಿಲ್ಲ,ಅವರು ಅದಾಗಲೇ ತೀರಿಕೊಂಡಿದ್ದರೆಂದು ಆಮೇಲೆ ಗೊತ್ತಾಯಿತು.ಚಿಕ್ಕಂದಿನಲ್ಲಿ ಮಂಗಳೂರು ಆಕಾಶವಾಣಿಯನ್ನು ಅತೀ ಇಷ್ಟ ಆಗುವಂತೆ ಮಾಡಿದ್ದು ಅವರ ಮಾತುಗಳೇ.
ತುಳುವೇ ಪ್ರಮುಖ ಭಾಷೆಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನ ಆವಾಗವಾಗ ತುಳುವಿನಲ್ಲೊಂದು ಕಾರ್ಯಕ್ರಮ ಮೂಡಿ ಬಂದು ತುಳು ಭಾಷಿಗರ ಮನ ತಣಿಸುತ್ತಿತ್ತು ನಮ್ಮ ಮಂಗಳೂರು ಆಕಾಶವಾಣಿ.ಅದರಲ್ಲೂ ಮನೆಯ ಹಿರಿಯರು ಈ ಪಾರ್ದನ,ಸಂದಿ,ತುಳು ನಾಟಕ, ತುಳು ಯಕ್ಷಗಾನಕ್ಕೆ ಕಾದು ಕುಳಿತುಕೊಂಡು ಕೇಳುತ್ತಿದ್ದ ಕಾಲ ಕೂಡ ಇತ್ತು.ತುಳುವಿನಲ್ಲಿ ಭಾಷಣ,ಕಬಿತೆ(ಕವಿತೆ),ಸುತ್ತ ಮುತ್ತಲಿನ ಪ್ರಾದೇಶಿಕ ವಾರ್ತೆಗಳನ್ನು ಕೂಡ ಕೇಳಲು ಖುಷಿಯಾಗುತ್ತಿತ್ತು.
ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ತುಳು ಸಂಗೀತಗಳನ್ನು ಹೆಚ್ಚಾಗಿ ಕೇಳಿಸಿದ್ದು ಇದೇ ಮಂಗಳೂರು ಆಕಾಶವಾಣಿ.FM ಆವಾಗ ಇನ್ನೂ ಬಂದಿರಲಿಲ್ಲ.
"ಮೋಕೆದ ಸಿಂಗಾರಿ ಉಂತುದೆ ವೈಯಾರಿ.. ", "ಕೆಮ್ಮಲೆತ ಬ್ರಹ್ಮ.. ", "ಎಕ್ಕ ಸಕ್ಕ.." "ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಡುಯೆ.." ಮುಂತಾದ ಹಲವಾರು ಬಹಳ ಇಷ್ಟವಾಗುವ ತುಳು ಹಾಡುಗಳನ್ನು ನಮಗೆಲ್ಲ ಮೊದಲ ಬಾರಿಗೆ ಕೇಳಿಸಿದ್ದು ಮಾತ್ರವಲ್ಲ, ನಾವು ಕೂಡ ರಾಗವಾಗಿ ಹಾಡುವಂತೆ ಮಾಡಿದ್ದು ಇದೇ ಆಕಾಶವಾಣಿಯ ಪ್ರಾದೇಶಿಕ ಕಾರ್ಯಕ್ರಮಗಳ ಅಡಿಯಲ್ಲಿ ಬರುತ್ತಿದ್ದ ತುಳುವಿನ ಕಾರ್ಯಕ್ರಮಗಳು.
ಕೇವಲ ತುಳು ಮಾತ್ರವಲ್ಲ ಸ್ಥಳೀಯ ಭಾಷೆಗಳಾದ ಕೊಂಕಣೆ, ಬ್ಯಾರಿ ಭಾಷೆಗಳ ಕಾರ್ಯಕ್ರಮ ಕೂಡ ಬರುತ್ತಿತ್ತು. ಯುವವಾಣಿ, ವನಿತಾವಾಣಿ, ಬಾಲವೃಂದ ದಲ್ಲಿ ಕೂಡ ತುಳುವಿನ ಕಂಪು ಪಸರಿಸಿತ್ತು.
ಮಂಗಳೂರು ಆಕಾಶವಾಣಿ ಎಂಬುವುದು ಹೋಗಿ" "ನಮ್ಮ ಆಕಾಶವಾಣಿ" ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣ ಆಗಿದ್ದೂ ಕೂಡ ಅದರಲ್ಲಿ ಬರುತ್ತಿದ ಇಂತಹ ಕಾರ್ಯಕ್ರಮಗಳೇ.
ಆದರೆ ಇತ್ತೀಚೆಗೆ ಪ್ರಸಾರ ಭಾರತಿ ದೆಹಲಿ ಆಕಾಶವಾಣಿಗಳಲ್ಲಿ ಇಲ್ಲಿಯವರೆಗೆ ಇರುತ್ತಿದ್ದ ಸ್ಥಳೀಯ ಭಾಷೆಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದ್ದು, ರಾಜ್ಯದ 13 ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದ ಸ್ಥಳೀಯ ಭಾಷೆಗಳ ಕಾರ್ಯಕ್ರಮ ರದ್ದು ಪಡಿಸಿ ಬೆಂಗಳೂರು ಕೇಂದ್ರದಿಂದ ಮಾತ್ರ ಪ್ರಸಾರ ಮಾಡಬೇಕು ಎಂಬ ಆದೇಶ ಹೊರಡಿಸಿದೆಯಂತೆ ಎಂಬ ಸುದ್ದಿ ಕೂಡ ಬಂದಿತ್ತು. ಮಾತ್ರವಲ್ಲ ಆಕಾಶವಾಣಿ ಮಂಗಳೂರಿನಲ್ಲಿ ಈ ನಿರ್ಧಾರವನ್ನು ಇದಾಗಲೇ ಕಾರ್ಯರೂಪಕ್ಕೆ ಬಂದಿದ್ದು ಆದರೆ ಸ್ವತಃ ಮಂಗಳೂರು ಆಕಾಶವಾಣಿಯೇ ಈ ನೀತಿಯನ್ನು ವಿರೋಧಿಸಿದೆ ಎಂದು ಸಹ ತಿಳಿದು ಬಂದಿತ್ತು.
ಮಂಗಳೂರು ಆಕಾಶವಾಣಿಯೇ ಸ್ಥಳೀಯ ಭಾಷೆಗಳ ಕಾರ್ಯಕ್ರಮ ಬೇಕು ಎಂದು ಹೇಳುತ್ತದೆ.. ಆದರೆ ಅದರ ಅಗತ್ಯತೆ ಇರುವ ನಾವು ತುಳುನಾಡಿನ ಜನರೇ ಇಂತಹದ್ದೊಂದು ವಿಷಯ ಹೊರ ಬಂದಾಗ ಇದೊಂದು ಏನೂ ವಿಷಯವೇ ಅಲ್ಲ ಎಂದು ಸುಮ್ಮನಿದ್ದೇವು.ಹೆಚ್ಚಿನವರಿಗೆ ಈ ರೀತಿ ಒಂದು ಆಗುತ್ತಿರುವುದರ ಬಗ್ಗೆ ಸರಿಯಾದ ಮಾಹಿತಿಯೇ ಇರಲಿಲ್ಲ.
ಬಹುಶಃ ಪ್ರಸಾರ ಭಾರತಿಗೆ ಸ್ಥಳೀಯ ಭಾಷೆಗಳ ಕಾರ್ಯಕ್ರಮಗಳನ್ನು ನಿಲ್ಲಿಸಲು ಅದರದ್ದೇ ಇದ ಕಾರಣಗಳು ಇರಬಹುದು.ಆದರೆ ಈಗಲೂ ನಾಡಿನ ಹಲವು ಮೂಲೆಗಳಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಇಷ್ಟ ಪಟ್ಟು ಕೇಳುವವರು ಇದ್ದಾರೆ. ಖಂಡಿತವಾಗಿಯೂ ಅವರಿಗೆಲ್ಲ ಈ ನಿರ್ಧಾರ ಒಂದು ಕಾರ್ಯರೂಪಕ್ಕೆ ಬಂದರೆ ತುಂಬಾ ನಿರಾಸೆ ಆಗಬಹುದು.
ಈಗಲೂ ನಮ್ಮಲ್ಲಿನ ಎಷ್ಟೋ ಮನೆಗಳಲ್ಲಿ ಟಿ.ವಿ ಇದ್ದರೂ ಸಹ ದೊಡ್ಡ,ಅಜ್ಜ ಮುಂತಾದ ಹಿರಿಯರು ಮಾತ್ರವಲ್ಲ ಅಪ್ಪ ಅಮ್ಮ ಕೂಡ ತುಳುವಿನ ಕಾರ್ಯಕ್ರಮಕ್ಕಾಗಿ ಆಕಾಶವಾಣಿಯನ್ನೊಮ್ಮೆ ತಿರುಗಿಸುತ್ತಾರೆ.ಅವರಿಗೆಲ್ಲಾ ಚಿಕ್ಕಂದಿನಿಂದಲೂ ಕೇಳಿ ಕೇಳಿ ಅಭ್ಯಾಸ. ಹಾಗಾಗಿ ದಿನದಲ್ಲಿ ಸ್ವಲ್ಪ ಹೊತ್ತು ಆದರೂ ಬಾನುಲಿಯ ಧ್ವನಿ ಕಿವಿಗೆ ಬಿದ್ದರೆ ಅವರಿಗೆ ಅದೆನೋ ಸಮಾಧಾನ.
ತುಳು ಕಾರ್ಯಕ್ರಮಗಳನ್ನು ಅದರಲ್ಲೂ ಒಳ್ಳೊಳ್ಳೆಯ ತುಳು ಹಾಡುಗಳನ್ನು ಮೊದಲ ಬಾರಿಗೆ ಕಿವಿಗೆ ಮುಟ್ಟಿಸಿದ್ದು ಈ ಮಂಗಳೂರು ಆಕಾಶವಾಣಿಯೇ.ಸ್ಥಳೀಯ ಪ್ರತಿಭೆಗಳಿಗೆ ಒಂದೊಳ್ಳೆಯ ವೇದಿಕೆ ಕೂಡ ಇದೇ ನಮ್ಮ ಮಂಗಳೂರು ಬಾನುಲಿ ಕಲ್ಪಿಸಿತ್ತು.
ಇನ್ನು ಮುಂದೆ ನಮ್ಮ ನೆಚ್ಚಿನ ಮಂಗಳೂರು ಆಕಾಶವಾಣಿಯಲ್ಲಿ ತುಳು ಭಾಷೆಯ ಪ್ರಾದೇಶಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂಬ ವಿಷಯ ಕಿವಿಗೆ ಬಿದ್ದಾಗ ನಿಜವಾಗಿಯೂ ಬೇಸರ ಆಗಿತ್ತು. .
ತುಂಬಾ ನೋವಿನ ಸಂಗತಿಯೇ ಆಗಿತ್ತು ಅದು.ಹೆಚ್ಚಿನ ತುಳುವರೇ ಇದರ ಬಗ್ಗೆ ಧ್ವನಿ ಎತ್ತದಿದ್ದರೆ ಇನ್ನು ಬೇರೆ ಯಾರು ಇದರ ಬಗ್ಗೆ ಮಾತಾಡಲು ಸಾಧ್ಯ ಹೇಳಿ..?
ಆದರೆ ಕೆಲವು ಜನ ಇದರ ಬಗ್ಗೆ ಧ್ವನಿ ಎತ್ತಿದ್ದರು ಕೂಡ....
ದೇಶದ ಹಾಗೂ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಕೂಡ ಪ್ರಾದೇಶಿಕ ಕಾರ್ಯಕ್ರಮಗಳು ಬೇಕು ಎಂಬ ಧ್ವನಿ ತೀವ್ರವಾಗಿ ಕೇಳಿ ಬಂದಿತ್ತು.
ಸದ್ಯದ ಮಾಹಿತಿಯಂತೆ ಪ್ರಸಾರ ಭಾರತಿ ತಾನು ಆ ರೀತಿ ಹೇಳಿಯೇ ಇಲ್ಲ,ಸ್ಥಳೀಯ ಭಾಷೆಗಳ ಕಾರ್ಯಕ್ರಮಗಳನ್ನು ರದ್ದು ಮಾಡುವ ಯಾವುದೇ ಯೋಜನೆ ತನಗಿಲ್ಲ ಎಂದು ತಿಳಿಸಿದೆ.
ಒಂದು ವೇಳೆ ಇದುವೇ ನಿಜವಾಗಿದ್ದರೆ,ಖಂಡಿತವಾಗಿಯೂ ಇದಕ್ಕಿಂತ ಸಂತೋಷದ ವಿಷಯ ಬೇರೆನಿಲ್ಲ..
ಒಟ್ಟಿನಲ್ಲಿ ನಮ್ಮ ಮಂಗಳೂರು ಬಾನುಲಿಯಲ್ಲಿ ಹಿಂದಿನಂತೆ ಎಂದಿನಂತೆ.. ಮುಂದೆಯೂ ತುಳು ಭಾಷೆಯ ಪ್ರಾದೇಶಿಕ ಕಾರ್ಯಕ್ರಮಗಳು ನಿರಂತರವಾಗಿ ಮೂಡಿ ಬರಲಿದೆ.
ಆದರೆ ಮುಂದಿನ ದಿನಗಳಲ್ಲಿ ಪ್ರಸಾರ ಭಾರತಿ ಪುನಃ ತನ್ನ ರಾಗ ಬದಲಾಯಿಸಿದರೆ... ಆಗ ಮಂಗಳೂರು ಆಕಾಶವಾಣಿಯ ಜೊತೆ ಜೊತೆಗೆಯೇ ಧ್ವನಿ ಏರಿಸಬೇಕಾದ ಅಗತ್ಯತೆ ಹಾಗೂ ಜವಾಬ್ದಾರಿ ಸಮಸ್ತ ತುಳುವರಿಗೂ ಕೂಡ ತುಂಬಾನೇ ಇದೆ.
.....................................................................................
#ಏನೋ_ಒಂದು
Ab Pacchu
Moodubidire
Comments
Post a Comment