ಬಾಳು ಕೊಡುವವನು...

 

ಊರಿನಲ್ಲಿ ಹೆಂಗಸರ ಆಕ್ರಂಧನವೊಂದು ಮುಗಿಲು ಮುಟ್ಟಿತ್ತು..


ಅದೂ ಇತ್ತೀಚಿನ ದಿನಗಳಲ್ಲಿ  ನಿತ್ಯವೂ ತಾರಕಕ್ಕೇರಿತ್ತು.

ನಿಲ್ಲುವ ಲಕ್ಷಣ ಯಾವ Angle ನಿಂದ ಕೂಡ ಕಂಡು ಬರುತ್ತಿಲ್ಲ.

ಹೋದಲ್ಲಿ ಬಂದಲ್ಲಿ,ಅಲ್ಲಲ್ಲಿ ಸಿಕ್ಕಲ್ಲಿ... ಅಷ್ಟೇ ಏಕೆ ಬಸ್ ಸ್ಟ್ಯಾಂಡ್ ಅಲ್ಲಿ ನನ್ನಷ್ಟಕ್ಕೆ ನಾನು ಆರಾಮ್ ಸೇ ಮೊಟ್ಟೆ ಪಪ್ಸು ತಿನ್ನುತ್ತಾ.. ಕಬ್ಬು ಜ್ಯೂಸ್ ಕುಡಿಯುತ್ತಿದ್ದರೂ ಕೂಡ ಅಲ್ಲಿಗೆ ಬಂದ ಪರಿಚಯದ ಹೆಂಗಸರದ್ದು ಸದಾ ಒಂದೇ ಗೋಳು..

ಅದೇ..

ನೀನೊಂದು ಮದುವೆ ಆಗ್ಬೇಕು ಮರಾಯ,ನೀನೊಂದು ಆದಷ್ಟು ಬೇಗ ಮದುವೆ ಆಗಲೇಬೇಕು.. ಎಂಬ ಆಕ್ರೋಶ ಭರಿತ ಕೂಗು, ಪ್ರೀತಿಯ ಬೆದರಿಕೆ..ಅಕ್ಕರೆಯ ಬೇಡಿಕೆ.. ನಿರಂತರವಾಗಿ ಮುಂದುವರಿದಿತ್ತು.

ಆದರೆ ಅದೊಂದು ಭಯಂಕರ ಕಿರಿಕಿರಿ ಮರ್ರೆ.

ಸದ್ಯಕ್ಕೆ ಅವರ ಕೈಗೆ ಸಿಗದ ಹಾಗೆ ಊರಲ್ಲಿ ಓಡಬೇಕಾದ ಹೀನಾಯ ಪರಿಸ್ಥಿತಿ ಮತ್ತು ಅನಿವಾರ್ಯತೆ ಬಂದೊದಗಿದೆ ನನಗೆ.

ನನಗೆ ಮದುವೆ ಆಗ್ಲಿಕ್ಕೆ ಇಷ್ಟ ಇಲ್ಲ ಅಂತ ಏನೂ ಇಲ್ಲ,ಆದರೆ ಏನೋ ಸದ್ಯಕ್ಕೆ ಅದರೆಡೆಗೆ ಇನ್ನೂ ಮನಸ್ಸು ಮಾಡಿರಲಿಲ್ಲ ಅಷ್ಟೇ.

ಚಿಕ್ಕಂದಿನಲ್ಲಿ ಕೆಲವರಿಗೆ ಡಾಕ್ಟರ್ ಆಗಬೇಕು.. ಇಂಜಿನಿಯರ್ ಆಗಬೇಕು ಎಂದು ಕನಸುಗಳಿರುತ್ತದೆ.

ನನಗೆ ದೊಡ್ಡವನಾಗಿ ಒಂದು ಮದುವೆ ಆಗಬೇಕು ಎಂದು ಕನಸಿತ್ತು ಅಷ್ಟೇ.. ಬೇರೆ ಏನೂ ಅಂತಹ ಕನಸುಗಳಿರಲಿಲ್ಲ.

ಎದುರಿಗೆ ಸಿಕ್ಕವರೆಲ್ಲ ಮದುವೆಯಾಗು ಎಂಬ ಬಿಟ್ಟಿ ಸಲಹೆ ಕೊಟ್ಟಾಗಲೆಲ್ಲ,ಶೇ... ನನಗೊಂದು ಲವ್ವರ್  ಆದರೂ ಇದ್ದಿದ್ದರೆ ಅವಳಿಗೆ ನಾನು ಬಾಳು ಕೊಡ್ಬಹುದಿತ್ತು ಅಂತ ಆವಾಗಲೆಲ್ಲ ಅನ್ನಿಸುತ್ತಿತ್ತು.

"ನಿನ್ನ ಬಾಳೇ ನೆಟ್ಟಗೆ ಇಲ್ಲ... ಇನ್ನು ನೀನು ಬೇರೆಯವರಿಗೆ ಏನು  ಬಾಳು ಕೊಡ್ತಿಯಾ,ಎಂತ ಸಾವ ನಿನ್ನದು.. "ಎಂದು ನನ್ನ ಬುದ್ಧಿಯೇ ನನಗೆ ಛೀಮಾರಿ ಹಾಕಿ ನನ್ನ ಎರಡೂ ಕೈಯನ್ನು ಕಟ್ಟಿ ಹಾಕಿ ಜೀವನದಲ್ಲಿ ನಾನೊಬ್ಬ ಶ್ರೇಷ್ಠ ಲವ್ವರ್ ಬಾಯ್ ಆಗುವುದನ್ನು ತಡೆ ಹಿಡಿದಿತ್ತು.

ಅದೂ ಅಲ್ಲದೇ ನೆಲ ನೋಡಿಕೊಂಡೇ ಹೋಗಿ ಬರುವವನಿಗೆ ಯಾವ ಹುಡುಗಿ ಸೆಟ್ ಆಗ್ತಾಳೆ ಹೇಳಿ.

ಯಾಕೋ ನಾನು ಈ ಫೀಲ್ಡ್ ಅಲ್ಲಿ ಇನ್ನೂ ಪಳಗಿಲ್ಲ ಅಂತಾನೇ ತುಂಬಾ ಸಲ ಅನ್ನಿಸುತ್ತಿತ್ತು.

ಎಂತೆಂತವರೆಲ್ಲಾ ಲವ್ ಮಾಡಿದ್ದಾರೆ.. ನಾನೇ ದೊಡ್ಡ ವೇಸ್ಟ್ ಬಾಡಿ.. ಎಂದು ಫೀಲ್ ಆಗಿ ಬಹಳ ಬೇಜಾರ್ ಆಗುತ್ತಿತ್ತು.

ಮನೆಯ ಟಿವಿಯಲ್ಲಿ ರವಿಮಾಮ,ಅನಂತ್ ನಾಗ್ ಪಿಚ್ಚರ್ ಬಂದಾಗಲೆಲ್ಲ ನನಗೂ ಪ್ರೇಮಪಕ್ಷಿಯಾಗಿ ಹಾರಾಡಬೇಕು.. ಪ್ರೇಮ ಖೈದಿಯಾಗಿ ಯಾರದ್ದಾದರೂ ಹೃದಯದಲ್ಲಿ ಬಂಧಿಯಾಗಬೇಕು ಎಂದು ಅನ್ನಿಸುತ್ತಿತ್ತು.

ರವಿಮಾಮ ಪ್ರೇಯಸಿ ಮೇಲೆ ದ್ರಾಕ್ಷಿ ಹಣ್ಣು ಎಲ್ಲಾ ಸುರೀತಾರೆ. ನಮ್ಮ ಊರಲ್ಲಿ ದ್ರಾಕ್ಷಿ ಇಲ್ಲ.ಅಂಗಡಿಯಲ್ಲಿ ಕಾಸು ಕೊಟ್ಟು ತೆಗೆದುಕೊಳ್ಳಬೇಕು.ನನಗೆ ಆ ರೀತಿ ಹಣ ವೇಸ್ಟ್ ಮಾಡ್ಲಿಕ್ಕೆ ಇಷ್ಟ ಇಲ್ಲ. ನನಗೆ ಏನಾದರೂ ಲವ್ ಸೆಟ್ ಆದರೆ ನಾನು ಈ  ಹಲಸಿನ  ಹಣ್ಣು ಇಲ್ಲ ಅನನಾಸು ಹಣ್ಣುಗಳನ್ನು ಟ್ರೈ ಮಾಡಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧರಿಸುತ್ತಿದ್ದೆ.ಆದರೆ ಸ ಒಂದೂ ಲವ್ ಸೆಟ್ ಆಗುವ ಯಾವುದೇ ಲಕ್ಷಣಗಳು ಡೀಪಾಗಿ ಗೋಚರಿಸುತ್ತಿರಲಿಲ್ಲ...

ಯಾಕೋ ಹುಡುಗಿಯರ ಹತ್ತಿರ ಹೋಗಲಿಕ್ಕೂ ಭಯ ನನಗೆ.

ಇನ್ನು ನನಗೆ ಲವ್ ಸೆಟ್ ಆಗುವುದು ಹೇಗೆ ಹೇಳಲಿ.

ಆವತ್ತು ಊರಿನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದ ಕ್ಷಣ..

ವಾರ ಪೂರ್ತಿ ಸಡಗರದ ಜಾತ್ರೆ.

ಆ ದಿನ ಬೆಳಿಗ್ಗಿನ ತಿಂಡಿಗೆ ಇಡ್ಲಿ ಸಾಂಬಾರ್ ಮಾಡಿದ್ದರು.

ನಾನು ಸಾಲಾಗಿ ಕುಳಿತವರಿಗೆ ಇಡ್ಲಿ ಬಡಿಸುತ್ತಾ ಹೋಗುತ್ತಿದ್ದೆ.

ಅವಳು ನನ್ನ ಹಿಂದೆಯೇ ಸಾಂಬಾರ್ ಬಡಿಸುತ್ತಾ ಬರುತ್ತಿದ್ದಳು.

ನಾನು ಮುಂದೆ ಮುಂದೆ ..

ಅವಳು ಬಾಲ್ದಿಯಲ್ಲಿ ಸಾಂಬಾರ್ ಹಿಡಿದು ನನ್ನ ಹಿಂದೆ ಹಿಂದೆ..

ಒಂದು ಕಾರ್ನರ್ ನಲ್ಲಿ ಇಡ್ಲಿ ಪಾತ್ರೆ ಹಿಡಿದು ತಿರುಗುವಾಗ ಅವಳನ್ನೇ ನೋಡಿದೆ..

ಹುಡುಗಿ ಚಂದ ಇದ್ದಳು.

ಯಾಕೆ ನಾನು ಇವಳಿಗೆ ಬಾಳು ಕೊಡಬಾರದು ಅಂತ ಮನಸ್ಸಿಗೆ ರಪ್ಪನೆ ಅನ್ನಿಸಿತು.

ಇವಳೇ ನನ್ನ ಹನ್ನೊಂದು ಮಕ್ಕಳಿಗೆ ತಾಯಿಯಾಗಿ.. ಮನೆಯ ಕ್ರಿಕೆಟ್ ಟೀಮ್ ಗೆ ನಾನೇ ಕೋಚ್, ಅವಳೇ ಮ್ಯಾನೇಜರ್ ಆಗಿ.. ಊರು ತುಂಬಾ ಟ್ರೋಪಿ ನಾವೇ ಯಾಕೆ ನಿರಂತರವಾಗಿ ಗೆಲ್ಲಬಾರದು.. ಎಂದು ನಾನು ದೀರ್ಘವಾಗಿ ನನ್ನಲ್ಲೇ ಯೋಚಿಸಿದೆ.

ಎಲ್ಲರಿಗೆ ಬಡಿಸಿದ ನಂತರ... ಬಡಿಸಿದವರು ಎಲ್ಲರೂ  ಕೊನೆಯಲ್ಲಿ ತಿಂಡಿಗೆ ಕುಳಿತುಕೊಂಡೆವು.

ದೇವರ ಆಟ ಬಲ್ಲವರಾರು... ಅವಳು ನನ್ನ ಪಕ್ಕವೇ ಬಂದು ಕುಳಿತುಕೊಂಡಳು.

ಎರಡು ಇಡ್ಲಿ ಮೇಲೆ ಹೊಗೆಯೇಳುವ ಬಿಸಿ ಸಾಂಬಾರ್ ಬಿತ್ತು.

ಹಾಗೆ ಬೆರಳುಗಳಲ್ಲಿಯೇ ಕಿವುಚಿ ಸಾಂಬಾರ್ ಗೂ ಇಡ್ಲಿಗೂ ಒಂದೊಳ್ಳೆಯ ನಂಟಸ್ತಿಕೆ ಮಾಡಿದೆ.

ಧೈರ್ಯ ಮಾಡಿ ಮೆಲ್ಲನೆ ಅವಳತ್ತನೇ ನೋಡಿದೆ.

ಅವಳೂ ನನ್ನನ್ನು ನೋಡಿದಳು.

ನೋಡಿ ನಕ್ಕಳು.

ನಾನೇ ಕೇಳಿದೆ..

- ನಿಮ್ಮನ್ನು ನಾನು ಯಾವತ್ತೂ ಊರಿನಲ್ಲಿ ನೋಡಿಯೇ ಇಲ್ಲವಲ್ಲ.

ಅದಕ್ಕ ಅವಳು..ಆದರೆ ನಿಮ್ಮ ಬಗ್ಗೆ ನನಗೆ ಚೆನ್ನಾಗಿಯೇ ಗೊತ್ತು, ನೀವು ಸೋಂಟೆ ಸುರೇಶ್ ಅಲ್ವಾ ಅಂದಳು..?

ನನಗೆ ಆಶ್ಚರ್ಯವಾಯಿತು. ಅರೆ.. ಇವಳಿಗೆ ಹೇಗೆ ನನ್ನ ಹೆಸರು ಇಷ್ಟು ಸರಿಯಾಗಿ ಗೊತ್ತು ಎಂದು.

ನನ್ನ ಹೆಸರು ಸುರೇಶ್ ಹೌದು.

ಆದರೆ ಅದು ಸೋಂಟೆ ಸುರೇಶ್ ಎಂದು ಆಗಲಿಕ್ಕೆ ಒಂದು ಸಣ್ಣ ಚರಿತ್ರೆ ಕೂಡ ಇದೆ.

ನಾನು ಚಿಕ್ಕಂದಿನಲ್ಲಿ ಶಾಲಾ ರಜಾ ದಿನಗಳಲ್ಲಿ ಊರಿನಲ್ಲಿ ಹೋಮ್ ಫುಡ್ ಮಾಡುತ್ತಿದ್ದ ಮನೆಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದೆ. ಚಿಕ್ಕ ಪುಟ್ಟ ಖರ್ಚಿಗೆ ಆಗುವಷ್ಟು ಹಣ ಸಿಗುತ್ತಿತ್ತು.

ಅಲ್ಲಿ ಸೇಮೆ,ಚಕ್ಕುಲಿ,ಮಿಕ್ಷರ್,ಕಾರಕಡ್ಡಿ, ಸೋಂಟೆ ಎಲ್ಲಾ ಮಾಡುತ್ತಿದ್ದರು.

ನಾನು ತಿಂಡಿ ಮಾಡುವಾಗಲೇ ಯಾರಿಗೂ ಗೊತ್ತಾಗದಂತೆ ಕಳ್ಳನ ಹಾಗೆ ತಿಂಡಿಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದೆ.

ಆದರೆ ಒಂದು ದಿನ ಸೋಂಟೆ ತಿನ್ನುವಾಗ ಸಿಕ್ಕಿ ಹಾಕಿಕೊಂಡು ಬಿದ್ದೆ.

ಆ ದಿನದಿಂದ ನನ್ನ ಜೊತೆ ಇದ್ದ ಹುಡುಗರು ನನಗೆ ಸೋಂಟೆ ಸುರೇಶ್ ಅಂತ ಕರೆಯ ತೊಡಗಿದರು.

ಊರಿನಲ್ಲಿ ಕೂಡ ಅದೇ ಫೇಮಸ್ ಆಯಿತು.

ಜಸ್ಟ್ ಸುರೇಶ್ ಅಂದರೆ ಪಕ್ಕನೇ  ಯಾರಿಗೂ ಗೊತ್ತಾಗುವುದಿಲ್ಲ.

ಸೋಂಟೆ ಸುರೇಶ್ ಅಂತ ಇನಿಶಿಯಲ್ ಸೇರಿಸಿ ಹೇಳಿದರೆ ಅದು ಕನ್ಫರ್ಮ್ ನಾನೇ.

ನನಗೂ ಈ ಹೆಸರೇ ಇಷ್ಟವಾಯಿತು.

ಯಾರಾದರೂ ನೀನು ಸುರೇಶಾ..? ಎಂದು ಕೇಳಿದರೆ, ಇಲ್ಲ ಇಲ್ಲ.. ನಾನು ಸೋಂಟೆ ಸುರೇಶ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದೆ.

ಆದರೆ ನನ್ನ ಭಯಂಕರ ಫೇಮಸ್ ಹೆಸರೊಂದು ಈ ರೀತಿಯಾಗಿ ಊರಿನ ಹುಡುಗಿಯರ ವಲಯದಲ್ಲೂ ಕೂಡ ಹರಿದಾಡಿದ್ದು.. ಅವರು ಕೂಡ ಅದೇ ನನ್ನನ್ನು ಅದೇ ಹೆಸರಿನಿಂದ ಗುರುತಿಸಿರುವುದು ನನಗೆ ಆಶ್ಚರ್ಯದ ಜೊತೆಗೆ ಬಹಳ ಆನಂದ ಉಂಟು ಮಾಡಿತು.

- ಹೌದು ನಾನು ಸೋಂಟೆ ಸುರೇಶ್..ಪರವಾಗಿಲ್ಲ ನಿಮಗೆ ಕೂಡ ನನ್ನ ಬಗ್ಗೆ ಬಹಳ ಚೆನ್ನಾಗಿಯೇ ಗೊತ್ತಿದೆ.. ಅಂದೆ.

ಅವಳು ನಕ್ಕಳು.

ಸಾಂಬಾರ್ ಜೊತೆಗೆ ಇಡ್ಲಿ ತುಂಡರಿಸಿ ತಿನ್ನಲು ಶುರು ಮಾಡಿದಳು.

ಅಂದ ಹಾಗೆ ನಿಮ್ಮ ಹೆಸರು ನನಗೆ ಗೊತ್ತಾಗಲಿಲ್ಲ ಅಂದೆ..

ನನ್ನ ಹೆಸರು ಸುಧಾ.. ಅಂದಳು.

ಓಹ್ ಸುಧಾರಿಕೆಯ ಸುಧಾ ..ಅಂದೆ.

ಅಂದ್ರೆ..?

ಅಂದರೆ ನೀವು ಈ ಬಡಿಸುವುದರಲ್ಲಿ ಎಲ್ಲಾ ಆಸಕ್ತಿಯಿಂದ ಸೇರಿಕೊಳ್ತೀರಿ, ಎಲ್ಲವನ್ನೂ ಬಹಳ  ಬಹಳ ಚೆನ್ನಾಗಿ ಸುಧಾರಿಕೆ ಮಾಡ್ತೀರಿ ಅಲ್ವಾ... ಹಾಗಾಗಿ ನಿಮಗೂ ಏನಾದರೂ ಅದೇ ತರಹದ ಇನಿಷಿಯಲ್ ನನ್ನ ಹಾಗೆ ಇರಬಹುದು ಎಂದು ಜಸ್ಟ್ ಕೇಳಿದೆ.. ಎಂದು ಹೇಳಿದೆ.

ಅವಳು ಇಡ್ಲಿ ತಿನ್ನುತ್ತಾ ನಕ್ಕಳು.

ಹಾಗೇನಿಲ್ಲ.. ಹೋದಲ್ಲಿ ಬಂದಲ್ಲಿ ಬಡಿಸಲು ಸೇರುತ್ತೇನೆ.. ನಮ್ಮ ಊರಿನ ಫಂಕ್ಷನ್ ಅಲ್ವಾ..ಹಾಗಾಗಿ ಏನಾದರು ಒಂದು ಅಳಿಲು  ಸೇವೆ... ಅಂದಳು.

ಆ ದಿನದಿಂದ ನಾನು ಊರಿನ ಎಲ್ಲಾ ಜಾತ್ರೆ, ಕೋಲ,ಯಕ್ಷಗಾನ ಎಲ್ಲದಕ್ಕೂ ತಪ್ಪದೇ ಹೋದೆ.

ಅವಳೂ ಅಲ್ಲಿಗೆ  ಬರುತ್ತಿದ್ದಳು.

ಬಡಿಸಲು ಕೂಡ ಸೇರುತ್ತಿದ್ದಳು.

ಕೆಲವೊಮ್ಮೆ ನಾನು ಪಾಯಸ ಬಡಿಸುವಾಗ..

ಅವಳು ಹೋಳಿಗೆ ಬಡಿಸುತ್ತಿದ್ದಳು.

ಅವಳು ಅನ್ನ ಬಡಿಸಿದರೆ..

ನಾನು ಅನ್ನದ ಮೇಲೆ ಮಜ್ಜಿಗೆ ಎರೆಯುತ್ತಿದ್ದೆ.

ಹೀಗೆ ಹೋದಲ್ಲಿ ಬಂದಲ್ಲಿ ಬಡಿಸಿ ಬಡಿಸಿ  ನಮ್ಮದ್ದೊಂದು ಭಯಂಕರ  ಫ್ರೆಂಡ್ ಶಿಪ್ ಆಯಿತು.

ಎಲ್ಲರೂ ಫಂಕ್ಷನ್ ಗೆ  ಎಂದು ಹೋದರೆ.... ನಾನು ಬಡಿಸಲು, ಅದರಲ್ಲೂ ಅವಳೊಂದಿಗೆ ಬಡಿಸಲು ಅವಕಾಶ ಸಿಗುತ್ತದೆ ಎಂದೇ ಹೋಗುತ್ತಿದ್ದೆ.

ನಂತರ ಫೋನ್ ನಂಬರ್ ಎಲ್ಲಾ Exchange ಆಯಿತು.

ನನಗೆ ಸ ಗೊತ್ತಿಲ್ಲದೇ ಹೃದಯದಲ್ಲಿ ಅವಳ ಸಲುವಾಗಿ ಗಿಲಿ ಗಿಲಿ, ಪುಕ ಪುಕ ಎಲ್ಲಾ ಉಂಟಾಯಿತು.

ಆದರೆ ಹೇಳ್ಲಿಕ್ಕೆ ಧೈರ್ಯ ಬರಲಿಲ್ಲ..

ಯಾವಾಗಲಾದರೂ ಒಂದು ಫೈನ್ ಡೇ ಹೇಳುವ ಅಂತ ನನ್ನಷ್ಟಕ್ಕೆ ನಾನಿದ್ದೆ.

ಆ ನಂತರದ ದಿನಗಳಲ್ಲಿ ಎಲ್ಲಾದರೂ ಫಂಕ್ಷನ್ ಇದ್ದರೆ ಕೆಲವೊಮ್ಮೆ ನಾನು.. ಇನ್ನು ಕೆಲವೊಮ್ಮೆ ಅವಳು ಪರಸ್ಪರ ಒಬ್ಬರಿಗೊಬ್ಬರು ಹೇಳಿಯೇ ಒಟ್ಟಾಗಿಯೇ ಹೋಗುತ್ತಿದ್ದೆವು, ಒಟ್ಟಾಗಿ ಬಡಿಸುತ್ತಿದ್ದೆವು..

ಆ ಒಂದು ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ.

ಆವತ್ತು ನಾನು ಪಲಾವ್ ಬಡಿಸುತ್ತಿದ್ದೆ.

ಅವಳು ನನ್ನ ಹಿಂದಿನಿಂದ ಪಲಾವ್ ಮೇಲೆ ಒಂದು ಸೌಟಿನಲ್ಲಿ ಸಲಾಡ್ ಸುರಿಯುತ್ತಾ ಬರುತ್ತಿದ್ದಳು.

ಪಲಾವ್ ಬಡಿಸುವಾಗಲೇ ನಾನು ದೃಡ ನಿರ್ಧಾರ ಮಾಡಿದ್ದೆ ಏನೇ ಆಗಲಿ ಇವತ್ತು ನಾನು ನನ್ನ ಲವ್ ಬಗ್ಗೆ ಅವಳಲ್ಲಿ ಹೇಳುವುದು ಎಂದು.

ಆದರೆ ಅವಳೇ ಹೇಳಿದಳು... ಸೋಂಟೆ ಸುರೇಶ್.. ನಿಮ್ಮ ಬಳಿ ನನಗೆ ಏನೋ ಒಂದು ಹೇಳ್ಲಿಕ್ಕೆ ಉಂಟು ಅಂತ.

ಒಹೋ.. ಇವಳಿಗೆ ಸ ಕನ್ಫರ್ಮ್ ಆಗಿ ನನ್ನ ಮೇಲೆ ಲವ್  ಎಲ್ಲಾ ಆಗಿರಬೇಕು.. ಎಂದು ಅಂದುಕೊಂಡೆ.

ಕೊನೆಗೆ ಪಲಾವ್ ತಿನ್ನಲು ಒಟ್ಟೊಟ್ಟಿಗೆ ಕುಳಿತುಕೊಂಡಾಗ ಅವಳು ಮೆಲ್ಲನೆ ಕಿವಿ ಬಳಿ ಬಂದು ಉಸುರಿದಳು...

- ವಿಷಯ ಎಂತ ಗೊತ್ತುಂಟಾ ಸೋಂಟೆ ಸುರೇಶ್... ನನಗೆ ಮದುವೆ ಪಿಕ್ಸ್ ಆಗಿದೆ, ಮದುವೆಗೆ ಅಡುಗೆ ಎಲ್ಲಾ ನಾವೇ ಮಾಡುವುದು,ಹೊರಗಿನ ಕ್ಯಾಟರಿಂಗ್ ನವರಿಗೆ ಎಲ್ಲಾ  ಕೊಡ್ತಾ ಇಲ್ಲ...ಆದ್ದರಿಂದ ನೀನು  ಬಡಿಸ್ಲಿಕ್ಕೆ ಎಲ್ಲಾ ತಪ್ಪದೇ ಸೇರ್ಬೇಕು..ಹೇಳಿ ಕೇಳಿ ನೀನು ಚಂದ ಬಡಿಸ್ತೀಯಾ..ಬಡಿಸುವುದರಲ್ಲಿ ನಿನಗೆ ಊರಿನಲ್ಲಿ ಒಳ್ಳೆಯ ಹೆಸರಿದೆ.ಅದರಲ್ಲಿ ನೀನು ಎತ್ತಿದ ಕೈ," ಟೆನ್ಶನ್ ಮಾಡ್ಬೇಡಿ ಬಡಿಸ್ಲಿಕ್ಕೆ ನಮಗೆ ಸೋಂಟೆ ಸುರೇಶ್ & ಗ್ಯಾಂಗ್ ಹೆಲ್ಪ್ ಮಾಡ್ತಾರೆ..." ಎಂದು ನಾನು ನನ್ನ ಅಪ್ಪನಿಗೆ ಆಶ್ವಾಸನೆ ಕೂಡ ಕೊಟ್ಟಿದ್ದೇನೆ... ಪ್ಲೀಸ್ ಮಿಸ್ ಮಾಡ್ಬೇಡ... ನನ್ನ ಮಾತು ಉಳಿಸು,ಮರ್ಯಾದೆ ಉಳಿಸು.. ಎಂದು ಹೇಳಿ ಮುಗಿಸಿದಳು.

ಈ ರೀತಿಯಾಗಿ ಪಲಾವ್ ತಿನ್ನುವ ನಡುವಲ್ಲಿ  ನನ್ನ ಲವ್ ಒಂದು ಮಟ್ಯಾಶ್ ಆಯಿತು.

ಕೊನೆಗೂ ಅವಳಿಗೆ ಬೇಜಾರು ಮಾಡುವುದು ಬೇಡ ಎಂದು ಇವತ್ತು ಬಹಳ ಬೇಗನೇ  ಮದುವೆ ಮನೆಗೆ ಬಂದಿದ್ದೇನೆ..

ಅವಳಲ್ಲಿ ವಧುವಿನ ಕೋಣೆಯಲ್ಲಿ ಸಿಂಗಾರಗೊಳ್ಳುತ್ತಿದ್ದಾಳೆ.

ನಾನಿಲ್ಲಿ ಮದುವೆ ಮನೆಗೆ ಬಂದವರಿಗೆ ತಿಂಡಿ ಬಡಿಸಲು ಸಿದ್ಧವಾಗಿದ್ದೇನೆ.

ಅಡುಗೆ ಭಟ್ರು ಉಪ್ಪಿಟ್ಟು ಶೀರ ಮಾಡಿದ್ದರು.

ನಾನು ಶೀರ ಬಡಿಸುತ್ತಾ ಹೋಗುತ್ತಿದ್ದೆ.

ಹಿಂದಿನಿಂದ ಒಬ್ಬಳು ಹುಡುಗಿ ಉಪ್ಪಿಟ್ಟು ಬಡಿಸುತ್ತಾ ಬರುತ್ತಿದ್ದಳು.

ಬಡಿಸಿ ತಿರುಗುವಾಗ ಒಂದು ಕಾರ್ನರ್ ನಲ್ಲಿ ಅವಳನ್ನೇ ನೋಡಿದೆ..

ಹುಡುಗಿ ಚಂದ ಇದ್ದಳು...

ಕೊನೆಯಲ್ಲಿ ಒಟ್ಟಿಗೆ ತಿಂಡಿ ತಿನ್ನುವಾಗ ನಿಮ್ಮ ಹೆಸರೇನು ಎಂದು ಬಹಳ ಆತ್ಮ ವಿಶ್ವಾಸದಿಂದ ಕೇಳಿದೆ.

ಅವಳು ನುಲಿಯುತ್ತಾ ನಗುತ್ತಾ ನನ್ನ ಹೆಸರು ಉಮಾ.. ಎಂದು ಹೇಳಿದಳು.

ಆಗಲೇ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿದೆ...

ಏನೇ ಆಗಲಿ.. ಈ ಉಪ್ಪಿಟು ಉಮಾ ಗೆ ನಾನೊಂದು ಬಾಳು ಕೊಡಲೇಬೇಕು ಎಂದು.....

.....................................................................................

#ಇಷ್ಟೇ_ಕಥೆ

Ab Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ