ದೋಸೆ ಇಲ್ಲದ ದೋಷಪೂರ್ಣ ಬಾಳು..

 

ಕೆಲವೊಂದು ತಿಂಡಿಗಳೇ ಹಾಗೇ...

ದಿನಾಲೂ ತಿಂದರೂ ಎಂದಿಗೂ ಒಂಚೂರು ಬೋರು ಹೊಡಿಸದೇ ಇನ್ನೂ ಸ್ವಲ್ಪ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಸೆಯನ್ನು ಇನ್ನಿಲ್ಲದಂತೆ ಹೆಚ್ಚು ಮಾಡಿ ಬಿಡುತ್ತದೆ.

ತಯಾರಿಗೆ ಬೇಕಾದ ಹಿಟ್ಟಿನ ಆಧಾರದಲ್ಲಿ ಇಡ್ಲಿ ಮತ್ತು ದೋಸೆ ಬಹುಶಃ ಸಹೋದರ - ಸಹೋದರಿಯರು ಇರಬೇಕು ಎಂದು ನನಗನಿಸುತ್ತದೆ.

ಬಿಸಿ ಕಾವಲಿ ಮೇಲೆ ಬಿದ್ದಾಗಲೆಲ್ಲ ಚುಂಯ್ಯ್ ಎನ್ನುವ ಸದ್ದು ಮಾಡುತ್ತಲೇ,ಮಾತಾಡುತ್ತಾ ಮಾತಾಡುತ್ತಾ ಪೂರ್ಣ ರೂಪ ಪಡೆಯೋ ದೋಸೆ ನನ್ನ ಪ್ರಕಾರ ಹೆಣ್ಣೇ ಇರಬೇಕು.

ಇಡ್ಲಿ ಪಾತ್ರೆಯೊಳಗಿದ್ದು,ಮಾತು ಕಡಿಮೆ- ಬೇಯುವುದು ಜಾಸ್ತಿ ಎನ್ನುವ ಬಾಳು ಬದುಕುವ ಇಡ್ಲಿ ಖಂಡಿತವಾಗಿಯೂ ಪುರುಷನೇ ಬಿಡಿ.

ಬರೀ ಮಾತು ಜಾಸ್ತಿ ಎಂಬ ಕಾರಣಕ್ಕಾಗಿ ಹೇಳಲಿಲ್ಲ..

ಅಲಂಕಾರ ಮಾಡಿಕೊಳ್ಳುವ ಬಗೆಯನ್ನು ಕೂಡ ನೀವು ಸ್ವಲ್ಪ ಗಮನಿಸಿ ನೋಡಬೇಕು.

ಇಡ್ಲಿ ಮಹಾಶಯನ ಗಾತ್ರ ಸ್ವಲ್ಪ ದೊಡ್ಡದು ಚಿಕ್ಕದು ಆಗಬಹುದು ಬಿಟ್ಟರೆ ಆ ಶೇಪು,ಆ ರೂಪು.. ಬಿಳಿ ಪಂಚೆಯಂತಹ  ಅವನದ್ದೊಂದು ವೇಷಭೂಷಣ ಹೆಚ್ಚಾಗಿ ಬದಲಾಗಿಯೇ  ಇಲ್ಲ.ಬಹುಶಃ ಇಡ್ಲಿ ಮಲ್ಲಿಗೆ ಬಿಳುಪಿನಲ್ಲಿ ಇರದಿದ್ದರೆ ಅದು ಇಡ್ಲಿ ಎಂದು ಒಪ್ಪಲು ಕೂಡ ಮನಸ್ಸಿಗೂ ಒಂಥರಾ ಕಸಿವಿಸಿ.ಇಡ್ಲಿ ಹೇಗಿರಬೇಕೋ ಹಾಗೇ ಇದ್ದರೆನೇ ಚಂದ.

ಆದರೆ ದೋಸೆ ಹಾಗಲ್ಲ..

ಹಲವು ರೂಪದಲ್ಲಿ,ಅದೆಷ್ಟೋ ಹೆಸರಿನಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ನಾರಿಯಂತೆಯೇ ಕಂಡಾಪಟ್ಟೆ ಅಲಂಕಾರದಲ್ಲಿ ಗುರುತಿಸಿಕೊಳ್ಳುವ ದೋಸೆ... ಖಂಡಿತವಾಗಿಯೂ ಸ್ತ್ರೀಯೇ ಇರಬೇಕು.

ಸೆಟ್ ದೋಸೆ, ರವಾ ದೋಸೆ, ಆನಿಯನ್ ದೋಸೆ,ತುಪ್ಪ ದೋಸೆ.. ಅಬ್ಬಬ್ಬಾ ಪಟ್ಟಿ ಬೆಳೆಯುತ್ತಾ ಹೋದಂತೆ ಶತಕವನ್ನು ದಾಟಿ ಮುನ್ನುಗುವ ತವಕ ದೋಸೆ ಪ್ರಪಂಚದ್ದು.

ವಿಶ್ವಕ್ಕೆ ದೋಸೆ ಎಂಬುವುದು ಅದು ಭಾರತದ್ದೇ ಕೊಡುಗೆ.ಅದರಲ್ಲೂ ಪಕ್ಕಾ ಸೌತ್ ಇಂಡಿಯನ್ ಡಿಶ್ ಇದು.

ದೋಸೆಗಳಲ್ಲಿ ನೀರುದೋಸೆ ಎಲ್ಲಾ ದೋಸೆಗಳ ಮುತ್ತಜ್ಜಿ ಇರಬೇಕು.ಮಸಾಲೆದೋಸೆ ರಾಣಿಯರ ರಾಣಿ ಮಹಾರಾಣಿಯಂತವಳು ಎಂದು ನನಗನಿಸುತ್ತದೆ.ನನಗಂತು ಎರಡೂ ಇಷ್ಟ.ಹೇಳಿ ಕೇಳಿ ಇವೆರೆಡರ ತವರೂರು ಕೂಡ ನಮ್ಮೂರು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯೇ ಆಗಿರುವುದು ಹೇಳಿಕೊಳ್ಳಲು ಅದೆನೋ ಹೆಮ್ಮೆ. ಏಕೆಂದರೆ ಇಂದು ವಿಶ್ವದ ಯಾವುದೇ ಮೂಲೆಯಲ್ಲಿ ಈ ಎರಡು ದೋಸೆ ಅದಾಗಲೇ ಎಷ್ಟೊಂದು ಫೇಮಸ್ ಆಗಿ ಬಿಟ್ಟಿದೆ ಎಂದರೆ,ದೋಸೆ ವಲಯದಲ್ಲಿ ಇವರೆಡರ ಹವಾ,ಸದ್ದು ಯಾವಾಗಲೂ ಜೋರಾಗಿ ಇದ್ದದ್ದೇ.

ನೀವು ತುಳುನಾಡಿನವರಾಗಿದ್ದರೆ ಮನೆಯ ಕಾವಲಿಯಲ್ಲಿ ಮೂಡುವ ದೋಸೆ ಯಾವತ್ತೂ ಹೆಚ್ಚಾಗಿ  ಅದು  ನೀರುದೋಸೆಯೇ ಆಗಿರುತ್ತದೆ.ಅದಕ್ಕಾಗಿಯೇ ಆ ಸಪರೇಟು ಕಬ್ಬಿಣದ ಕಾವಲಿ.ನೀರುದೋಸೆಯ ನಂತರವೇ ಉದ್ದಿನ ದೋಸೆ ಹಾಗೂ ಬಾಕಿ ಎಲ್ಲಾ ದೋಸೆಗಳಿಗೆ ತಕ್ಕ ಮಟ್ಟಿನ ಸ್ಥಾನಮಾನ ನಮ್ಮಲ್ಲಿ.ತುಳು ಭಾಷೆಯಲ್ಲಿ ನೀರುದೋಸೆಗೆ ತೆಲ್ಲವ್ ಎಂದು ಹೇಳುತ್ತೇವೆ. 

ಅಪ್ಪಟ ಮತ್ಸ್ಯಾಹಾರಿಗಳಿಗೆ,ನಿಜ ಕುಕ್ಕುಟಾಹಾರಿಗಳಿಗೆ ಮಾತ್ರವಲ್ಲ.. ಕಾಯಿ ಹಾಲು, ರಸಾಯನ, ಕಾಯಿತುರಿ ಮತ್ತು ಬೆಲ್ಲ ಕಾಂಬಿನೇಶನ್ ಹಾಗೂ ಚಟ್ನಿಯೊಂದಿಗೆ ಸವಿಯಲು ಶುದ್ಧ ಸಸ್ಯಾಹಾರಿಗಳಿಗೆ ಕೂಡ ಈ ನೀರುದೋಸೆ ಎಂದರೆ ಬಹಳನೇ ಇಷ್ಟ.ಕೆಲವರು ಮಸಾಲೆ ಹಾಕಿ ಕೆಂಪು ನೀರುದೋಸೆ ಕೂಡ ಮಾಡುತ್ತಾರೆ. ಅದೂ ಕೂಡ ನೋಡಲು ಚಂದವೇ.ಚಿಕನ್ ಸುಕ್ಕ, ಪುಳಿಮುಂಚಿ,ಮೊಟ್ಟೆ ಕರಿಯ ಆಪ್ತಮಿತ್ರ ಈ ತೆಳ್ಳಗಿನ ಬೆಳ್ಳಗಿನ ನೀರುದೋಸೆ. 

ಉದ್ದಿನಬೇಳೆಯ ಹಂಗಿಲ್ಲದ ನೀರುದೋಸೆ ಸಾದ ಸೀದಾ ಅತೀ ಸರಳ ತಿಂಡಿ. ಬಡವರ ಬಂಧು ಮಾತ್ರವಲ್ಲ ಅನಾದಿ ಕಾಲದಿಂದಲೂ ಪ್ರತೀ ಮನೆಯ ಅಜ್ಜಿಯೇ ಅವಳು.ನೀರು ದೋಸೆ ಕಾವಲಿ ಮೇಲೆ ಬಿದ್ದಾಗಲೆಲ್ಲ ಉಳಿದೆಲ್ಲಾ ದೋಸೆಗಳಿಗಿಂತ ದೊಡ್ಡದೊಂದು ಚುಂಯ್ಯ್  ಸೌಂಡು ಮಾಡಿಯೇ ತನ್ನ ಆಗಮನದ ಸೂಚನೆಯನ್ನು, ಕಾವಲಿಗೆ ಬೀಳುವ ತನ್ನದೊಂದು ಪ್ರತೀ  ಲೆಕ್ಕವನ್ನು ಚಾಚೂ ತಪ್ಪದೇ ಅಡುಗೆ ಕೋಣೆಯಿಂದಲೇ ಮನೆಯ ಹಾಲ್ ನಲ್ಲಿರುವವರಿಗೂ,ಪಕ್ಕದ ಮನೆಯವರಿಗೂ ನಿರಂತರವಾಗಿ ಕೊಡುತ್ತಲೇ ಇರುತ್ತದೆ.ಲೆಕ್ಕ ಮಾಡುವ ಪುರುಸೊತ್ತು ಮತ್ತು  ಇಂಟ್ರೆಸ್ಟು ಇರಬೇಕು ಅಷ್ಟೇ.

ದೀಪಾವಳಿ ಬಂದಾಗ ಉದ್ದಿನ ದೋಸೆಗೆ ರಾಜ ಮರ್ಯಾದೆ.ದೀಪಾವಳಿಯ ಹೆಚ್ಚಿನ ದಿನ ಬರೀ ಅದೇ.ಉದ್ದು ಉದಾಸೀನ ಹೆಚ್ಚು ಮಾಡುತ್ತದೆ ಅಂತೆ. ಅಂದರೆ ಜಡ ಕಾರಕ. ಹಾಗಾಗಿ ಹಬ್ಬದ ದಿನಗಳಲ್ಲಿ ಮನೆ ಮಕ್ಕಳು ಊರಿಡೀ ಸುತ್ತಾಡಲು ಹೋಗುವುದಕ್ಕಿಂತ ಈ ಉದ್ದಿನ ದೋಸೆ ತಿಂದಾದರೂ ಜಡ ಹೆಚ್ಚಿಸಿಕೊಂಡು ಸಾಧ್ಯ ಆದಷ್ಟು ಮನೆಯಲ್ಲಿಯೇ ಇರಲಿ,ಒಂದು ವೇಳೆ ಮನೆಯ ಹೊರಗೆ ಇದ್ದರೂ ಆದಷ್ಟು ಬೇಗ ಮನೆ ಸೇರಲಿ ಎಂಬ ಅತ್ಯಧ್ಭುತ ಕಾರಣವನ್ನು.... ಮನೆಯ ಹಿರಿಯರು ದೀಪಾವಳಿಗೆ ಉದ್ದಿನ ದೋಸೆಯನ್ನೇ ಏಕೆ ಮಾಡಬೇಕು ಎಂಬ ತರ್ಕದ ಪ್ರಶ್ನೆಗೆ ಬಹಳ ಸೊಗಸಾಗಿ ಉತ್ತರಿಸುತ್ತಾರೆ.

ಉದ್ದಿನ ದೋಸೆಗೆ  ಬಂಗುಡೆ ಗಸಿ.. ಆಹಾ ಅತ್ಯಧ್ಭುತ ಕಾಂಬಿನೇಶನ್.ಉದ್ದಿನ ದೋಸೆಯದ್ದು ಯಾವಾಗಲೂ ಇಂಗು ಗುಂಡಿಯ ಸ್ವಭಾವ.ಎಷ್ಟೇ ಗಸಿ ಹಾಕಿದರೂ ಮಾಯ ಮಾಡಿ, ಅಮ್ಮ ಇನ್ನೊಂಚೂರು ಗಸಿ ಹಾಕಮ್ಮ ಎಂದು ಹೇಳಿಸುತ್ತದೆ.

ನೀರುಳ್ಳಿ ಸಣ್ಣಗೆ ಕೊಚ್ಚಿ ಹಾಕಿ ಮಾಡುವ ನೀರುಳ್ಳಿ ದೋಸೆ ಇಲ್ಲವೇ ಉತ್ತಪ್ಪ ಕೆಲವರಿಗೆ ಬಹಳ ಇಷ್ಟ.ಅದೆನೋ ಅದೊಂದೇ ದೋಸೆಯನ್ನು ಬಹಳ ಆಸೆ ಪಟ್ಟು ತಿನ್ನುವವರು ಕೂಡ ಹಲವಾರು ಜನ ಇದ್ದಾರೆ.

ಹಲಸಿಹಣ್ಣಿನ ಮುಳುಕ, ಕಡುಬು ನಮ್ಮಲ್ಲಿ ತುಂಬಾನೇ ಫೇಮಸ್. ಅದರದ್ದೊಂದು ಅಂದ ಚಂದದ ಪರಿಮಳದ ಪೆಲಕಾಯಿಯ ಘಮದ ಆ ದೋಸೆ... ಆಹಾ... ಬಾಯಿ ಇದ್ದವನಿಗೆ ನೀರೂರಲೇಬೇಕು.ತೆಂಗಿನೆಣ್ಣಿಯೋ.. ತುಪ್ಪವೋ.. ಬೆಣ್ಣೆಯೋ ಬಿದ್ದರೆ ಹಲಸಿನ ಹಣ್ಣಿನ ದೋಸೆಯ ಜನ್ಮ ಅಲ್ಲಿಗೆ ಸಾರ್ಥಕ. ತಿನ್ನುವವ ಸದಾ ಸ್ವರ್ಗದ ಬಾಗಿಲನ್ನು ತಟ್ಟುವ ಅತಿಥಿ.

ಮುಳ್ಳುಸೌತೆಗೆ ಕೇವಲ ಮಣ್ಣಿ ಮಾತ್ರವಲ್ಲ ದೋಸೆಯಾಗುವ ಭಾಗ್ಯ ಕೂಡ ನಮ್ಮಲ್ಲಿ ಇದೆ.ಸ್ವಲ್ವವೇ ಸ್ವಲ್ಪ ಮೈಲ್ಡ್ ಸಿಹಿ ಹೊಂದಿರುವ ಆ ದೋಸೆ ಕೂಡ ನಾಲಗೆಗೆ ಬಹಳ ರುಚಿ. ಅದರಲ್ಲೂ ನಮ್ಮಲ್ಲಿಯೇ ಬೆಳೆಯುವ ಏಳು ಎಲೆಯ "ಎಳ್ ಇರೆತ ತೆಕ್ಕರೆ" ಇದಕ್ಕೆ ಹೇಳಿ ಮಾಡಿಸಿದ್ದು.

ಇನ್ನು ಮಸಾಲೆದೋಸೆಯ  ಬಗ್ಗೆ ನಾನು ಎಷ್ಟು ಹೇಳಿದರೂ ಅದು ಕಡಿಮೆಯೇ ಬಿಡಿ.ನಿರುದೋಸೆಯಂತೆ ಅದೂ ಕೂಡ  ನನ್ನ ಇಷ್ಟದ ದೋಸೆಯೇ ಹೌದು.

ಮಂಗಳೂರಿನಲ್ಲಿ ಹಿಂದೆ ಹೋಟೆಲ್ ಗೆ ಹೋದರೆ ಅತೀ ದೊಡ್ಡ ಬರ್ತಡೆ ಟ್ರೀಟ್ ಎಂದರೆ ಈ ಮಸಾಲೆದೋಸೆಯೇ ಆಗಿತ್ತು. ಆಹಾ.. ಅದೆಂತಹ ರಾಜ ಮರ್ಯಾದೆ ಅದಕ್ಕೆ. ಈಗ ಈ ಬೇರೆ ಬೇರೆ North Indian Dishes,Chinese,ನ್ಯೂಡಲ್ಸ್,ಪಿಜ್ಜಾ ಗಿಜ್ಜಾ, ಬರ್ಗರ್ ಗಿರ್ಗರ್ ಗಳು ಹೋಟೆಲ್ ಮೆನು ಕಾರ್ಡಿನಲ್ಲಿ ರಾರಾಜಿಸಿ  ಮಸಾಲೆ ದೋಸೆ ಅಷ್ಟಾಗಿ ಕಣ್ಣಿಗೆ ಕಾಣಿಸದಿದ್ದರೂ.... ಒಂದೊಳ್ಳೆಯ ಮಸಾಲೆದೋಸೆಯನ್ನು  ಎಲ್ಲಿದ್ದರೂ  ಹುಡುಕಿಕೊಂಡು ಹೋಗಿ ಸವಿಯುವ ನನ್ನಂತಹ ಮಸಾಲೆದೋಸೆ ಪ್ರೇಮಿಗಳು ಅಲ್ಲಲ್ಲಿ ಇನ್ನೂ ಜೀವಂತವಾಗಿಯೇ ಇದ್ದಾರೆ.

ಹೊಂಬಣ್ಣದಲ್ಲಿ ಎಷ್ಟು ಬೇಕೋ ಅಷ್ಟೇ ಗರಿಗರಿಯಾಗಿ ಬಿಸಿ ಬಿಸಿಯಾಗಿ ಇರುವ  ಮಸಾಲೆದೋಸೆ ಪಕ್ಕ ಒಂಚೂರು ತೆಂಗಿನಚಟ್ನಿ,ಮತ್ತೊಂಚೂರು ಸಾಂಬಾರು, ಒಳಗೆ ಬಂಗಾರ ಬಣ್ಣದ ಬಾಜಿ ಇರುವಾಗ... ನನಗಂತು ಬೇರೆ ದೊಡ್ಡ ತಿಂಡಿಗಳ ಹೆಸರು ಮನಸ್ಸಿನಿಂದಲೇ ಅದೆಷ್ಟೋ ದೂರ ಹಾರಿ ಹೋಗಿ ಬಿಟ್ಟಿರುತ್ತದೆ.

ಮಸಾಲೆ ದೋಸೆಯನ್ನು ಒಂಚೂರು ಚೂರೇ ಮುರಿದುಕೊಂಡು ಒಮ್ಮೆ ಸ್ವಲ್ಪ ಚಟ್ನಿಯೊಂದಿಗೆ, ಮತ್ತೊಮ್ಮೆ ಬಿಸಿ  ಸಾಂಬಾರ್ ನೊಂದಿಗೆ, ಇನ್ನೊಮ್ಮೆ ದೋಸೆಯ ನಡುವಿನ ಬಾಜಿಯೊಂದಿಗೆ ನಿಧಾನವಾಗಿ ತಿನ್ನುತ್ತಾ ಹತ್ತು ಇಪ್ಪತ್ತು ನಿಮಿಷ ಹೇಗೋ ಬರೀ ದೋಸೆಯ ಮುಂದೆಯೇ ಧ್ಯಾನ ಮಾಡುತ್ತಾ ಕಳೆದು ಬಿಡಬಹುದು. ಹರಟೆ ಹೊಡೆಯುವ ಗೆಳೆಯ ಇದ್ದರೆ, ಕೈಯಲ್ಲಿ ಹಿಡಿಯಲು ಬಿಸಿ ಕಾಫಿ ಇರುವ ಲೋಟವಿದ್ದರೆ ನನ್ನಂತವನಿಗೆ ಅದು ತಿಂದು ಮುಗಿಸಲು ಬರೋಬ್ಬರಿ ಅರ್ಧ ಗಂಟೆ ಬೇಡುವ ಮಹಾನು ತಿಂಡಿ.

ಮೈಸೂರಿನದ್ದೇ ಹೆಸರಿನಲ್ಲಿ ರಾರಾಜಿಸುವ ಮೈಸೂರು ಮಸಾಲೆ ದೋಸೆ ಕೂಡ ಇದೆ. ಒಳಗೊಂದು ಕೆಂಬಣ್ಣದ ಚಟ್ನಿಯನ್ನು  ತೆಳುವಾಗಿ ಹದವಾಗಿ ಸವರಿಯೇ ಮಸಾಲೆದೋಸೆ ಮಾಡಿ ಕೊಡುತ್ತಾರೆ. ಅದೊಂತರಹ ಬೇರೆಯೇ ಟೇಸ್ಟು. ಕೆಲವರಿಗೆ ಅದೂ ಇಷ್ಟ.

ಇಷ್ಟೆಲ್ಲಾ ಹೇಳಿ... ದಾವಣಗೆರೆಯ ಬೆಣ್ಣೆದೋಸೆ ಬಗ್ಗೆ ನಾನು ಒಂದು ಮಾತು ಹೇಳದಿದ್ದರೆ ಖಂಡಿತವಾಗಿಯೂ ದಾವಣಗೆರೆಯ ಜನ ನನಗೆ ಹೊಡೆಯಲು ಓಡೋಡಿ ಬರಬಹುದು. ಅಷ್ಟೊಂದು ಫೇಮಸ್ ಮಾತ್ರವಲ್ಲ ಜನ ಮುಗಿ ಬಿದ್ದು ಅದನ್ನು ತಿನ್ನುವುದು  ಹಾಗೂ ಅದರ ರುಚಿ ರುಚಿಯಾದ ಕಥೆಗಳನ್ನು ಬಾಯಿ ಚಪ್ಪರಿಸಿಕೊಂಡು ಹೇಳುವುದು ಅದರಲ್ಲೂ ದಾವಣಗೆರೆಯ ಜನರು  ಬಹು ಪ್ರೀತಿಯಿಂದ ಎದೆ ತಟ್ಟಿಕೊಂಡು ಬೆಣ್ಣೆ ದೋಸೆ ನಮ್ಮೂರ ದೋಸೆ ಎಂದು ಹೇಳುವುದನ್ನು ನೋಡುವಾಗ ಯಾರಿಗೇ ಆಗಲಿ ಅವರ ಬೆಣ್ಣೆ ದೋಸೆಯ ಪ್ರೀತಿಯ ಮೇಲೆ ಗೌರವ ಮೂಡದೇ ಇರದು. ಕರಾವಳಿಗರಿಗೆ ಹೇಗೆ ನಿರುದೋಸೆಯೋ.. ಹಾಗೇ ದಾವಣಗೆರೆಯವರಿಗೆ ಬೆಣ್ಣೆದೋಸೆ.

ಮೆಂತೆ ಹಾಕಿದ ಮೆಂತೆದೋಸೆ,ಒಂದೆರಡು ದೋಸೆಗಳ ಸೆಟ್ಟು ದೋಸೆ, ಖಾಲಿ ದೋಸೆ,ಸಾದಾ ದೋಸೆ,ಸುರ್ನೋಲಿ ದೋಸೆ,ಹೀರೆಕಾಯಿ ದೋಸೆ,ತರಕಾರಿ ದೋಸೆ,ಚೀಸ್,ಬಟರ್,ಗಾರ್ಲಿಕ್, ಮೊಟ್ಟೆ ದೋಸೆ,ಗೋಧಿ ದೋಸೆ,ರಾಗಿ ದೋಸೆ,ನವಧಾನ್ಯಗಳ ದೋಸೆ,ಪಾಲಕ್ ದೋಸೆ,ರವಾ ದೋಸೆ, ಕೋನ್ ದೋಸೆ,ಪ್ಲೇನ್ ದೋಸೆ,ಪೇಪರ್ ದೋಸೆ,Stuffed ದೋಸೆ... ಅಬ್ಬಬ್ಬಾ ಒಂದೇ ಎರಡೇ,ದೋಸೆಯಲ್ಲಿ ಸಾಧ್ಯತೆಗಳು ಹಲವಾರು.

ನೀವೇ ಒಂದು ಡಿಫರೆಂಟ್ ದೋಸೆ ಮಾಡಿ ಅದಕ್ಕೊಪ್ಪುವ ಒಂದು ಚಂದದ ಹೆಸರಿಡುವ ಲಿಬರ್ಟಿ ನಿಮಗೆ ದೋಸ ಸಾಮ್ರಾಜ್ಯ ಯಾವತ್ತೋ ದಯಪಾಲಿಸಿದೆ.ದೋಸೆ ಕ್ರಿಯೆಟಿವಿಟಿಗೆ ಕಿಚ್ಚು ಹಚ್ಚೆಂದ ಸರ್ವಜ್ಞ.

ಹೇಗೆ ಮಲೆನಾಡಿನಲ್ಲಿ ವಿವಿಧ ಬಗೆಯ ತಂಬುಳಿಗಳನ್ನು ಮಾಡುತ್ತಾರೋ ಹಾಗೇ ದೋಸೆಯಲ್ಲಿ ಕೂಡ ಸಿಕ್ಕಾಪಟ್ಟೆ ವೆರೈಟಿ ಮಾಡಬಹುದು.ಹೋದ ಕಡೆಗಳಲ್ಲಿ ನಿಮಗೆ ತಿನ್ನದ ಹೊಸ ಹೊಸ ದೋಸೆಗಳು ಸಿಕ್ಕೇ ಸಿಗುತ್ತದೆ.

ತಿಂಡಿಯೊಂದರಲ್ಲಿಯೇ ಬೇಕಾದಷ್ಟು ವಿಧ ಮಾಡಬಹುದು ಎಂದು ತೋರಿಸಿಕೊಡುವ ತಿಂಡಿ ಇದ್ದರೆ ಅದು ಖಂಡಿತವಾಗಿಯೂ ಈ ದೋಸೆಯೇ ಆಗಿದೆ.

ದೋಸ ಕ್ಯಾಂಪ್ ಗಳ ಮುಂದೆ ಹೋಗಿ ನಿಂತು ಬಿಟ್ಟರೆ ಕೆಲವು ಕಡೆ ನೂರು ವೆರೈಟಿಯ ದೋಸೆಯನ್ನು ಸೂಚಿಸುವ ಪಟ್ಟಿಗಳು ಕೂಡ ಇದೆ.ಸುಮ್ಮನೆ ಕಣ್ಣರಳಿಸಿ ಬಾಯಗಲಿಸಿ ಓದುತ್ತಾ ಹೋಗುವ ನಮಗೆ ದೋಸೆ ದುನಿಯಾ ಬೆರಗು ಮೂಡಿಸದೇ ಇರದು.

ಏನೇ ಹೇಳಿ ವೃತ್ತಾಕಾರದಲ್ಲಿ ಪೂರ್ಣತ್ವವನ್ನು ಸಾರುವ ಈ ದೋಸೆ ನನಗಂತು ಜೀವ.

ಬದಲಾವಣೆ ಜಗದ ನಿಯಮ ಎನ್ನುವ ಪಾಠ ಸಾರುವ ಈ ದೋಸೆಗಳು ಕಾಲಕಾಲಕ್ಕೆ ಹೊಸ ಹೊಸ ರೂಪದಲ್ಲಿ ಅವತಾರ ಎತ್ತಿ ಮನುಷ್ಯನ ಬಾಯಿ ಚಪಲವನ್ನು ತೀರಿಸುತ್ತಲೇ ಬಂದಿದೆ..

ನೀವೇ ಹೇಳಿ... ಒಂದೊಳ್ಳೆಯ ತಿಂಡಿ ಪ್ರೀಯರು,ಹೃದಯಕ್ಕೆ ಬಹು ಬೇಗ ಕನೆಕ್ಟ್ ಆಗುವ ಈ ದೋಸೆಯನ್ನು ಹೇಗೆ ತಾನೇ ಸಾರಾಸಗಟಾಗಿ ನಿರಾಕರಿಸಬಲ್ಲರು...

ಅಮ್ಮನಿಗೆ ತುಂಬಾ ಕೆಲಸವಿದ್ದಾಗ ಮನೆಯಲ್ಲಿ ನೀರುದೋಸೆ ಅಪ್ಪನೇ ಮಾಡುವುದು.. ನೀರುದೋಸೆ ತುಂಬಾ ಸಿಂಪುಳ್ ದೋಸೆ ಅನಿಸಿದರೂ ಒಲೆಯ ಪಕ್ಕವೇ ಆತುಕೊಂಡು ಬಹಳ ಶ್ರದ್ಧೆಯಿಂದ ಮಾಡಬೇಕಾದ ದೋಸೆ ಅದು.

ಮನೆಯಲ್ಲಿ ಕೆಲವೊಮ್ಮೆ ನನಗೂ  ನೀರು ದೋಸೆ ಮಾಡುವ  ಭಯಂಕರ ಹುಮ್ಮಸ್ಸು,ಉಮೇದು ಬರುವುದು ಉಂಟು.

ಹೌದು ಕೆಲವೊಮ್ಮೆ ನಾನೂ ಕೂಡ ದೋಸೆ ಮಾಡಲು ಸೌಟು ಹಿಡಿಯುತ್ತೇನೆ.

ಕಾವಲಿಯ ಮೇಲೆ ಓಡಾಡುತ್ತಾ ಚುಂಯ್ಯ್ ಎಂದು ಸದ್ದು ಮಾಡುವ ನೀರುದೋಸೆಗೆ ಅಂಕುಶ ಹಾಕಲು ಕಾವಲಿಯ ಬಿಸಿ ಒಂದೇ ಹದಕ್ಕೆ ಇರಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲೇ ತುಂಬಾ ಹೊತ್ತು ನಿಲ್ಲುವ ತಾಳ್ಮೆಯೂ ಬೇಕು.

ತಾಳ್ಮೆಯ ಕೊರತೆ,ಶಿಸ್ತಿನ ಕೊರತೆ ನನ್ನಲ್ಲಿ ಇಲ್ಲ ಎಂದು ನನಗೆ  ಅನಿಸುವುದು ಅಪ್ಪ ಜೋರಾಗಿ ಬೊಬ್ಬೆ ಹಾಕಿ " ಅಯೇ ಬಂದ ಲಗಾಡಿ ದೆಪ್ಪರೆನೇ ದೋಸೆ ಮಲ್ಪರೆ ಪೋತಿನಿ (ಅವ ದೋಸೆ ಹಿಟ್ಟು ಹಾಳು ಮಾಡ್ಲಿಕ್ಕೆಯೇ ಹೋದದ್ದು)" ಎಂದು ಹೇಳಿದಾಗಲೇ.

ಉದಾಸೀನ ಹೆಚ್ಚಾದಾಗ ಅಪ್ಪನಿಗೋ ಅಮ್ಮನಿಗೋ ಸೌಟು ವರ್ಗಾಯಿಸಿ ಕೈಯಲ್ಲೊಂದು ನಾನು ಒಟ್ರಾಸಿ ಅತಿಯಾಗಿ ಕಾಯಿಸಿ ಮಾಡಿದ ಕ್ರಿಸ್ಪಿ ನೀರುದೋಸೆಯನ್ನು ಕರ್ರುಂ ಕುರ್ರುಂ ಎಂದು ತಿನ್ನುತ್ತಾ ಬರುವುದೇ ನನ್ನ ನೀರುದೋಸೆ ಮಾಡುವ ಅತೀ ದೊಡ್ಡ ಸಾಧನೆ ಆಗಿ ಹೋಗಿದೆ.

ಈ ನೀರುದೋಸೆ ಕಾವಲಿಯಲ್ಲಿಯೇ ತುಂಬಾ ಹೊತ್ತು ಬಿಸಿಯಾಗಿ  ಕ್ರಿಸ್ಪಿ ಆದರೆ.. ಅದನ್ನು ಬಾಯಲ್ಲಿ ಹಾಗೇ ರೊಟ್ಟಿಯಂತೆ ಕಚ್ಚಿಕೊಂಡು ತಿನ್ನುವುದು ಎಂದರೆ ನನಗೆ ಬಹಳನೇ ಇಷ್ಟ.ಅದನ್ನು ಮಾಡುವುದಕ್ಕಾಗಿಯೇ,ಅಂತಹ ಪ್ರಯೋಗಗಳಿಗಾಗಿಯೇ ನಾನು ಅಷ್ಟು ಉಮೇದಿನಲ್ಲಿ ನಾನೆರಡು ದೋಸೆ ಹಾಕುತ್ತೇನೆ ಅಪ್ಪ ..ಎಂದು ಸೌಟು ಹಿಡಿಯುವುದು ಅಷ್ಟೇ..ನನ್ನ ಕೆಲಸ ಆದ ನಂತರ ಎಂದಿನಂತೆ ಬೈಸಿಕೊಂಡು ಕಾವಲಿ ಬಳಿಯಿಂದ ಎದ್ದು ಬರುತ್ತೇನೆ.

ನಮ್ಮ ಮನೆಯಲ್ಲಿಹೆಚ್ಚಾಗಿ  ಡೈಲಿ ನೀರುದೋಸೆಯೇ. ಮೂಡುಬಿದಿರೆಯಲ್ಲಿ  " ಸೀಸೆರ್ನ ಹೋಟೆಲ್" ಅಂತ ಜೈನ್ ಪೇಟೆಯಲ್ಲಿ ಒಂದು  ಹಳೆಯ ಹೋಟೆಲ್ ಇದೆ.ಸ್ಪಾಂಜ್ ನಂತೆ ಇರುವ ಆ ದೋಸೆ ನನಗೆ ಬಹಳ ಇಷ್ಟ.ಈ ವಾರಾಂತ್ಯದಲ್ಲಿ ಒಮ್ಮೆ ಅಲ್ಲಿಗೆ ಹೋಗಿ ಒಂದಷ್ಟು ದೋಸೆ ಹಾಗೂ ಒಂದೆರಡು ಬಟಾಟೆ ಅಂಬಡೆಗಳನ್ನು ಈ ಸರ್ತಿಯೂ  ಹೊಡೆಯಬೇಕು,ಮಸಾಲೆ ದೋಸೆ ಮೆಲ್ಲಲು ಎಂದಿನಂತೆ ಪಡಿವಾಳ್ಸ್ ಹೋಟೆಲ್ ಇದೆ.ಇನ್ನು ಅಪರೂಪಕ್ಕೊಮ್ಮೆ ಸುರ್ನೋಲಿ ಎಂಬ ಹಳದಿ ಬಣ್ಣದ ಇನ್ನೊಂದು ರುಚಿಯಾದ ದೋಸೆ ತಿನ್ನಲು ಬೆಳುವಾಯಿ - ಬನ್ನಡ್ಕ ನಡುವಿನ ಕೆಸರ್ ಗದ್ದೆ ಎಂಬ ಪುಟ್ಟ ಊರಿನಲ್ಲಿರುವ ಸ್ವಾತಂತ್ರ್ಯ ಪೂರ್ವದಷ್ಟು ಹಳೆಯದಾದ ವಾಸಪ್ಪೆರ್ನ ಹೋಟೆಲ್ ಕೂಡ ಒಂದಿದೆ.

ಏನೇ ಹೇಳಿ... ದೋಸೆ ಪ್ರೀಯರ ಅಭ್ಯಾಸಗಳು, ಹವ್ಯಾಸಗಳು ಎಂದಿಗೂ ಇಂತವೇ..

ಹುಡುಕಿಕೊಂಡು ಹೋಗಿ ದೋಸೆ ತಿನ್ನುವುದು...ರುಚಿ ಚೆನ್ನಾಗಿದ್ದರೆ ನೀವೂ ತಿನ್ನಿ ಎಂದು ಇತರರಿಗೆ ಹೇಳುವುದು.

ಕಾವಲಿಯೊಳಗಿನ ಪುಟ್ಟ ದೋಸೆ ವಿಶ್ವರೂಪ ದರ್ಶನ ಮಾಡಿಸುತ್ತಲೇ,ತನ್ನ ರೂಪಗಳನ್ನು ಹೆಚ್ಚಿಸುತ್ತಲೇ ಬೆರಗು ಮೂಡಿಸುವುದರಲ್ಲಿಯೇ ಬ್ಯುಝಿ ಆಗಿದೆ.

ನಾವು ಕೂಡ ಜೀವನದಲ್ಲಿ ಎಷ್ಟೇ ಬ್ಯುಝಿ ಆಗಿದ್ದರೂ... ಏನೇ ತಿಂದರೂ,ತಿನ್ನದೇ ಇದ್ದರೂ... ಕನಿಷ್ಟ ಪಕ್ಷ  ತಿಂಗಳಿಗೊಮ್ಮೆ ಆದರೂ ಒಂದೊಳ್ಳೆಯ ಮಸಾಲೆದೋಸೆಯನ್ನು ಇಷ್ಟ ಪಟ್ಟು ತಿನ್ನುವಷ್ಟು ಬಿಡುವು ನಮಗಿಲ್ಲದೇ ಹೋದರೆ ಅದೊಂದು ಎಂತಹ ದೋಸೆಯೇ ಇಲ್ಲದ ದೋಷ ಪೂರ್ಣ ಬಾಳು ಅಲ್ಲವೇ..


.....................................................................................

#ಈ_ಜನುಮವೇ_ಆಹಾ_ದೊರಕಿದೆ_ರುಚಿ_ಸವಿಯಲು..

Ab Pacchu
Moodubidire



Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..