ಅನ್ನ ಕಡಿಮೆ ಸಾಕು ಇದ್ದಾಗ ಬಿಸಿ ಬಿಸಿ ಗುಜ್ಜೆ ಕಜಿಪು..
ಊಟಕ್ಕೆ ಒಂದೊಳ್ಳೆಯ ಗುಜ್ಜೆ ಕಜಿಪು(ಹಲಸಿನ ಪದಾರ್ಥ) ತಟ್ಟೆಯಲ್ಲಿ ಇದ್ದರೆ ಅನ್ನಕ್ಕಿಂತ ಗುಜ್ಜೆ ಕಜಿಪೇ ಜಾಸ್ತಿ ಬೇಕು ಎಂದೆನಿಸುತ್ತದೆ.
ಹಲಸಿನ ಸೋಳೆಗಳು ಸ್ವಲ್ಪ ಬಲಿತ ನಂತರ ಹಾಗೇ ಅದನ್ನು ಪೆಲತರಿ(ಬೋಳೆ/ಬೀಜ) ಸಹಿತ ಎಲ್ಲವನ್ನು ಕೊಚ್ಚಿ ಮಾಡುವ ಸೊಗಸಾದ ಒಂದು ಗುಜ್ಜೆ ಕಜಿಪು ಉಂಟಲ್ಲಾ .. ಕೇವಲ ಊಟಕ್ಕೆ ಮಾತ್ರವಲ್ಲ ಮಳೆಗಾಲದಲ್ಲಿ ಆವಾಗವಾಗ ಬೇಕೆನಿಸಿದಾಗ ಒಂದು ದೊಡ್ಡ ಬೌಲ್ ನಲ್ಲಿ ಹಾಕಿಕೊಂಡು ಬಿಸಿ ಬಿಸಿಯಾಗಿ ತಿನ್ನುತ್ತಿದ್ದರೆ ಅದರದ್ದೊಂದು ಮಜಾನೇ ಬೇರೆ.
ಗುಜ್ಜೆ ಕಜಿಪು ಇದ್ದಾಗ ಅನ್ನ ಅದರ ಮುಂದೆ ಯಾವತ್ತೂ ತಲೆ ಬಾಗುತ್ತದೆ.ದಕ್ಷಿಣ ಕನ್ನಡದ ಕೆಲವು ಮನೆಯಲ್ಲಿ ಕೇವಲ ಹಾಗೇ ತಿನ್ನಲೆಂದೇ ಗುಜ್ಜೆ ಕಜಿಪು ಮಾಡುತ್ತಾರೆ.ಆ ರೀತಿಯ ಒಂದು ಮನೆಗಳಲ್ಲಿ ನನ್ನದೂ ಒಂದು ಮತ್ತು ನಾನು ಹೇಳಿ ಕೇಳಿ ಗುಜ್ಜೆ ಕಜಿಪಿನ ಅತೀ ದೊಡ್ಡ ಪ್ರೇಮಿಯು ಹೌದು.
ಬಾಲ್ಯ ಎಂಬ ಮಿಡಿ ಹಲಸಿಗೆ,ಯೌವನ ಎಂಬ ಕಾಯಿ ಹಲಸಿಗೆ ಹಾಗೂ ವೃದ್ಧಾಪ್ಯ ಎಂಬ ಪೆಲಕಾಯಿಗೆ(ಹಣ್ಣು ಹಲಸು) ಅದರದ್ದೇ ಆದ ಉಪಚಾರಗಳನ್ನು ಆಯಾಯ ಕಾಲದಲ್ಲಿ ಸರಿಯಾಗಿ ಮಾಡಿದರಷ್ಟೇ ಹಲಸಿನ ಜೀವನ ಧನ್ಯವಾಗುವುದು,ನಮ್ಮ ಬಾಳಿನ ರುಚಿ ಹೆಚ್ಚಾಗುವುದು.
ಹಲಸು ಬಾಲ್ಯ ಎಂಬ ಕಲ್ಲಿಗೆ (ಮಿಡಿ) ಆಗಿದ್ದಾಗ ಅದರ ಸಿಪ್ಪೆ ತೆಗೆದು ತಲೆಗೆ ಗೂಟ ಹೊಡೆದು ಇಡಿಯಾಗಿ ಅದನ್ನು ಕೊಚ್ಚಿ ಅದರದ್ದೊಂದು ಪಲ್ಯ ಮಾಡಬೇಕು..ಕಲ್ಲಿಗೆಗಿಂತ ಸ್ವಲ್ಪ ದೊಡ್ಡದು ಆಗಿ ಯೌವನಾವಸ್ಥೆಗೆ ಬಂದಾಗ ಅದನ್ನು ಕಟ್ ಮಾಡಿ ಕೊದ್ದೆಲ್ ಗೆ(ಸಾಂಬಾರ್)ಮಿಕ್ಸಡ್ ವೆಜಿಟೇಬಲ್ ಆಗಿ ಬಳಸಬೇಕು.. ನಂತರ ಯೌವನಕ್ಕೆ ಹಲಸು ಬಂದಾಗ ಸಮಯವಿದ್ದರೆ ಹಲಸಿನ ಸೋಂಟೆ(ಚಿಪ್ಸ್),ಹಲಸಿನ ಹಪ್ಪಳ ಮಾಡುವುದಕ್ಕೆ ನಾವು ಮನಸ್ಸು ಮಾಡಬೇಕು..ಹಣ್ಣಾಗಿ ಘಮ ಘಮಿಸುವ ವೃದ್ಧಾಪ್ಯ ಸ್ಥಿತಿಗೆ ಹಲಸು ತಲುಪಿದಾಗ ತಿನ್ನುವುದರ ಜೊತೆ ಜೊತೆಯಲ್ಲಿಯೇ ಪೆಲಕಾಯಿ ಗಟ್ಟಿ(ಹಲಸಿನ ಕಡುಬು),ಹಲಸಿನ ದೋಸೆ,ಪಾಯಸ,ಮಣ್ಣಿ,ಅಪ್ಪ,ಮುಳುಕ ಮಾಡಿಕೊಂಡು ಬಾಯಿ ಸಿಹಿ ಮಾಡಿಕೊಳ್ಳಬೇಕು.ಉಪ್ಪಿಡ್ ಪಚ್ಚಿರ್(ಉಪ್ಪು ನೀರಿನಲ್ಲಿ ಹಾಕಿಟ್ಟ ಹಲಸಿನ ಸೋಳೆ)ಹಾಕಿಟ್ಟ ಭರಣಿಯಲ್ಲಿ ಸ್ವಲ್ಪ ಜಾಗ ಇದ್ದರೆ ತುಳುವೆ ಹಲಸಿನ ಗೂಂಜಿ ಗೂ ಕೂಡ ಅಲ್ಲಿಯೇ ಸ್ವಲ್ಪ ಸ್ಥಳಾವಕಾಶ ಕೊಟ್ಟರೆ ಮಳೆಗಾಲಕ್ಕೆ ಗಂಜಿ ಊಟಕ್ಕೆ ಒಂದೊಳ್ಳೆಯ ರುಚಿಯಾದ ಚಟ್ನಿ ಕೂಡ ಮಾಡಿಕೊಂಡು ಬಾಯಿ ಚಪ್ಪರಿಸಬಹುದು.
ಉಪ್ಪಡ್ ಪಚ್ಚಿರ್ ಮಾಡುವ ಮೊದಲ ಅದರದ್ದೊಂದು ಈ ರೀತಿಯಾದ ಪಲ್ಯ ಉಂಟಲ್ಲ.. ಅದು ಮಾಡದಿದ್ದರೆ ನಿಜವಾಗಿಯೂ ಅದು ಬಹು ಉಪಕಾರಿ ಹಲಸಿಗೆ ನಾವು ಮಾಡುವ ಅವಮಾನವೇ ಸರಿ.ಇದೇ ಮಾಡಿ ತಿನ್ನದಿದ್ದರೆ ಬೇರೆ ಏನೇ ಮಾಡಿ ತಿಂದರೂ ಅದೇನೋ ಮನಸ್ಸಿಗೂ ಕೂಡ ಒಂಚೂರು ಸಮಾಧಾನವಾಗದು.ಚಿತ್ರದಲ್ಲಿರುವ ಹಲಸಿನ ಸೋಳೆಗಳು ಇನ್ನೂ ಎಳೆಯದ್ದು. ಹಾಗಾಗಿ ಎಲ್ಲವನ್ನೂ ಕೊಚ್ಚಿ ಗುಜ್ಜೆ ಕಜಿಪು ಮಾಡಿದ್ದು.ಚೆನ್ನಾಗಿ ಬಲಿತ ಬರೀ ಸೋಳೆಗಳಿಂದಲೇ ಮಾಡುವ ಗುಜ್ಜೆ ಕಜಿಪು..ಆಹಾ ಅದು ಇನ್ನೂ ಬಲು ರುಚಿ.
ಹದವಾದ ಮಳೆ ಹೊರಗೆ ಸುರಿಯುತ್ತಿರಲು,ಪ್ಲೇಟ್ ತುಂಬಾ ಬಿಸಿ ಬಿಸಿ ಗುಜ್ಜೆದ ಕಜಿಪು ಇದ್ದರೆ ತಕ್ಕ ಮಟ್ಟಿಗೆ ನಾವೂ ಕೂಡ ಸ್ವರ್ಗಕ್ಕೆಯೇ ಕಿಚ್ಚು ಹಚ್ಚಬಹುದು.ಮಳೆ ಬರದಿದ್ದರೂ ಹೊಟ್ಟೆಗೆ ಕಿಚ್ಚು ಹಚ್ಚಬಹುದು ಒಟ್ಟಿನಲ್ಲಿ ಅನ್ನದ ತಟ್ಟೆಯಲ್ಲಿ ಅನ್ನಕ್ಕಿಂತ ಜಾಸ್ತಿ ಗುಜ್ಜೆದ ಕಜಿಪು ಇರಬೇಕು ಅಷ್ಟೇ..
(ಗುಜ್ಜೆ ಕಜಿಪು ಮಾಡುವುದು ಹೇಗೆ?
ಇದಕ್ಕಾಗಿ ಒಂದು ಇಡೀ ಹಲಸಿನಕಾಯಿ ತೆಗೆದುಕೊಳ್ಳಿ.ಕಾಯಿ ಚೆನ್ನಾಗಿ ಬಲಿತರಬೇಕು ಆದರೆ ಹಣ್ಣಾಗಿರಬಾರದು.
ಒಂದು ವೇಳೆ ಹಲಸಿನ ಸೋಳೆಗಳು ತುಂಬಾ ಚಿಕ್ಕದಿದ್ದು ಎಳೆಯದ್ದಾಗಿದ್ದರೆ ಬೀಜ ಹಾಗೂ ಸೋಳೆಗಳನ್ನು ಒಟ್ಟಿಗೆ ಕಟ್ ಮಾಡಿ ಬೇಯಿಸಿ.ಹಲಸಿನ ಸೋಳೆಗಳು ತುಂಬಾ ದೊಡ್ಡದಿದ್ದು ಚೆನ್ನಾಗಿ ಬಲಿತಿದ್ದರೆ ಅದರ ಬೋಳೆ(ಬೀಜ) ಹಾಗೂ ಸೋಳೆಯನ್ನು ಮೊದಲೇ ಬೇರೆ ಬೇರೆ ಮಾಡಿಬಿಡಿ.ಹೀಗೆ ಮಾಡಿ ಪದಾರ್ಥ ಮಾಡಿದರೆ ಕೂಡ ಚೆನ್ನಾಗಿರುತ್ತದೆ.
ಮೊದಲು ಬೇರ್ಪಡಿಸಿದ ಹಲಸಿನ ಬೋಳೆಯನ್ನು(ಬೀಜ) ಉಪ್ಪು ಹಾಕಿ ಬೇಯಿಸಿ.ಬೋಳೆ ಬೇಯಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಅದನ್ನು ಮೊದಲು ಬೇಯಿಸಿ.ಅದು ಬೆಂದ ನಂತರ ಅದಕ್ಕೆ ಹಲಸಿನ ಸೋಳೆಗಳನ್ನು ಹಾಕಿ ಬೇಯಿಸಿ. ಹಲಸಿನ ಸೋಳೆಗಳನ್ನು ತುಂಬಾ ಜಾಸ್ತಿ ಬೇಯಿಸಬೇಡಿ. ಎಷ್ಟು ಬೇಕೋ ಅಷ್ಟೇ ಸಾಕು. ಇಲ್ಲದಿದ್ದರೆ ಹಲಸಿನ ಸೋಳೆಗಳು ಜಾಸ್ತಿ ಬೆಂದು ಪೂರ್ತಿ ಕರಗಿ ಹೋಗುತ್ತದೆ...
ಎಲ್ಲಕ್ಕಿಂತ ಮೊದಲು ನಾವು ಮಸಾಲೆಯನ್ನು ಸಿದ್ದ ಪಡಿಸಬೇಕು.
ಹಲಸಿನ ಪದಾರ್ಥಕ್ಕೆ ತೆಂಗಿನಕಾಯಿ ತುರಿ ಜಾಸ್ತಿ ಬೇಕು ,ಖಾರ ಕಡಿಮೆ ಇರಬೇಕು. ಹಾಗಾಗಿ ಇದಕ್ಕೆ ಎರಡು ಗಡಿ ತೆಂಗಿನಕಾಯಿ ತುರಿ(ಒಂದಿಡೀ ತೆಂಗಿನಕಾಯಿ)ಇಲ್ಲವೇ ಒಂದೂವರೆ ಗಡಿ ತೆಂಗಿನಕಾಯಿ ತುರಿಯನ್ನು ತೆಗೆದುಕೊಳ್ಳಿ.ಐದರಿಂದ ಆರು ಖಾರ ಇಲ್ಲದ ಮೆಣಸು ಬೇಕು.ಬ್ಯಾಡಗಿ ಮೆಣಸು ಓಕೆ. ಇದನ್ನು ಹುರಿದು ಇಟ್ಟುಕೊಳ್ಳಿ.
ಮೂರು ಸ್ಪೂನ್ ಕೊತ್ತಂಬರಿ ಹಾಗೂ ಒಂದೂವರೆ ಸ್ಪೂನ್ ಜೀರಿಗೆಯನ್ನು ಬಾಣಲೆಯಲ್ಲಿ ಹುರಿದು ಇಟ್ಟುಕೊಳ್ಳಿ. ಅರ್ಧ ಸ್ಪೂನ್ ಹುರಿಯದ ಹಸಿ ಜೀರಿಗೆ ಕೂಡ ಬೇಕು. ನಾಲ್ಕೈದು ಎಸಳು ಬೆಳ್ಳುಳ್ಳಿ ಹಾಗೂ ಅರಶಿನ ಹುಡಿ ಬೇಕು.
ಮೊದಲು ಹುರಿದ ಬ್ಯಾಡಗಿ ಮೆಣಸು, ಹುರಿದ ಮೂರು ಸ್ಪೂನ್ ಕೊತ್ತಂಬರಿ, ಹುರಿದ ಒಂದೂವರೆ ಸ್ಪೂನ್ ಜೀರಿಗೆ,ಹಸಿ ತೆಂಗಿನತುರಿ, ಅರಶಿನ ಪುಡಿಯನ್ನು ಮಿಕ್ಸರ್ ಗೆ ಹಾಕಿ ಗ್ರೈಂಡ್ ಮಾಡಿ.. ನಂತರ ಅರ್ಧ ಸ್ಪೂನ್ ಹಸಿ ಜೀರಿಗೆ ಹಾಗೂ ಹಸಿ ಬೆಳ್ಳುಳ್ಳಿಯನ್ನು ಹಾಕಿ ಕೊನೆಯಲ್ಲಿ ಎಲ್ಲವನ್ನೂ ಚೆನ್ನಾಗಿ ರುಬ್ಬಿ ಮಸಾಲೆ ರೆಡಿ ಮಾಡಿಟ್ಟುಕೊಳ್ಳಿ.
ಈಗ ಹಲಸಿನ ಬೋಳೆ ಮತ್ತು ಹಲಸಿನ ಸೋಳೆ ಬೆಂದ ನಂತರ ಈ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ. ಉಪ್ಪು ನೋಡಿ,ಬೇಕಿದ್ದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಬಿಡಿ.
ಈಗ ಕೊನೆಯಲ್ಲಿ ಒಗ್ಗರಣೆ ಹಾಕಬೇಕು. ಗುಜ್ಜೆ ಕಜಿಪಿಗೆ ತೆಂಗಿನೆಣ್ಣೆಯ ನೀರುಳ್ಳಿಯದ್ದೇ ಒಗ್ಗರಣೆ ಹಾಕಿದರೆನೇ ಚಂದ. ಒಂದು ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಗೂ ಒಂದು ಇಡೀ ಚಿಕ್ಕ ನೀರುಳ್ಳಿಯನ್ನು ಕಟ್ ಮಾಡಿ ಹಾಕಿ. ನೀರುಳ್ಳಿ ಚೆನ್ನಾಗಿ ಹೊಂಬಣ್ಣ ಬಂದ ಮೇಲೆ ಈ ಒಗ್ಗರಣೆಯನ್ನು ಗುಜ್ಜೆ ಕಜಿಪಿಗೆ ಹಾಕಿ. ಇಷ್ಟು ಮಾಡಿದರೆ ತುಳುನಾಡಿನ ಗುಜ್ಜೆ ಕಜಿಪು ರೆಡಿ.
ನೀವು ಮಸಾಲೆ ಕಡೆಯಲು ಯಾವ ಪದಾರ್ಥ ಬೇಕಾದರೂ ಹಾಕಿಕೊಳ್ಳಿ.. ಆದರೆ ಗುಜ್ಜೆ ಕಜಿಪು ಮಾಡುವಾಗ ಈ ಮೂರು ವಿಷಯವನ್ನು ಗಮನದಲ್ಲಿ ಇಟ್ಟುಕೊಂಡರೆ.. ರುಚಿ ರುಚಿಯಾದ ಗುಜ್ಜೆ ಕಜಿಪು ರೆಡಿ ಆಗುತ್ತದೆ.
1.ಖಾರ ಕಮ್ಮಿ ಇರಲಿ.
2.ತೆಂಗಿನ ತುರಿ ಜಾಸ್ತಿ ಇರಲಿ.
3.ಕೊನೆಯಲ್ಲಿ ತೆಂಗಿನೆಣ್ಣೆಯಲ್ಲಿ ನೀರುಳ್ಳಿಯ ಒಗ್ಗರಣೆ ಇರಲಿ.
ಮತ್ತೊಂದು ವಿಷಯ ಇದರ ಪದಾರ್ಥವನ್ನು ಚಿಕ್ಕ ಪಾತ್ರೆಯಲ್ಲಿ ಮಾಡದೇ ದೊಡ್ಡ ತೊಂದುರು(ಇಡ್ಲಿ ಪಾತ್ರೆ) ನಲ್ಲಿಯೇ ಮಾಡುವುದು ನಮ್ಮಲ್ಲಿ ವಾಡಿಕೆ.ಯಾಕೆಂದರೆ ಇದರ ಪದಾರ್ಥ ಸ್ವಲ್ಪ ಸ್ವಲ್ಪ ಯಾರೂ ಕೂಡ ಮಾಡುವುದೇ ಇಲ್ಲ.ಮನೆಯಲ್ಲಿ ಸಾದಾರಣ ಗಾತ್ರದ ಒಂದು ಗುಜ್ಜೆಯಿಂದ ಪದಾರ್ಥ ಮಾಡುವುದಾದರೂ ಅದಕ್ಕೆ ಇಡ್ಲಿ ಪಾತ್ರೆಯೇ ಬೇಕು.ಇದರಲ್ಲಿ ಪೂರ್ತಿ ಗುಜ್ಜೆ ಕಜಿಪು ಮಾಡಿಟ್ಟರೆ ಇಡೀ ದಿನ ಮನೆಯವರು ತಿನ್ನುತ್ತಲೇ ಇರಬಹುದು
ಹಿಂದೆ ನಮ್ಮಲ್ಲಿ ಎಲ್ಲಾ ಕಡೆ ಗುಜ್ಜೆ ಕಜಿಪು ಮಾಡುತ್ತಿದ್ದರು. ಈಗ ಕಡಿಮೆ ಆಗಿದೆ. ಅದನ್ನು ಸಿದ್ದ ಪಡಿಸಲು ಅಂದರೆ ಹಲಸಿನ ಸೋಳೆಯನ್ನು ಕಟ್ ಮಾಡಿ ಬೇರ್ಪಡಿಸಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಬಿಟ್ಟರೆ.. ಬಹಳ ರುಚಿಯಾದ ಪದಾರ್ಥ ಇದು. ಅದರಲ್ಲೂ ಸಕ್ಕರೆ ಖಾಯಿಲೆಯವರಿಗೆ ಇದು ಬಹಳ ಒಳ್ಳೆಯದಂತೆ...ಹಲಸಿನಕಾಯಿ ಇದ್ದರೆ ಸೀಸನ್ ನಲ್ಲಿ ಮತ್ತು ವರ್ಷದಲ್ಲಿ ಒಮ್ಮೆ ಮಾಡಿ ತಿನ್ನಲು ಎಂದೂ ಮರೆಯಬೇಡಿ..)
.....................................................................................
#ಪೆಲಕಾಯಿ
Ab Pacchu
Moodbidri
Comments
Post a Comment