ಗಂಜಿಯ ಊಟಕ್ಕೆ ತೇರೆದ ಚಟ್ನಿ
ನೋಡಿ ಇದೇ ತೇರೆದ ಚಟ್ನಿ.
ಇದಕ್ಕೆ ಹುಳಿಗಾಗಿ ಪುನರ್ ಪುಳಿ ಎಲೆಯನ್ನು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಚಿಗುರೆಲೆಗಳನ್ನು ಹಾಕಿಕೊಂಡಿಲ್ಲ.
ಹಲವು ಬಗೆಯ ಎಲೆಗಳ ಚಿಗುರುಗಳನ್ನು(ಹುಳಿ ಇಲ್ಲವೇ ಒಗರು ರುಚಿ ಹೊಂದಿರುವ) ಹಾಕಿ ಕೂಡ ಚಿಗುರೆಲೆಗಳ ಚಟ್ನಿ ಮಾಡಿಕೊಂಡರೆ ಅದೂ ಕೂಡ ಬಾರೀ ರುಚಿ ಆಯ್ತಾ.
ಕಾಡು ಗುಡ್ಡಗಳಲ್ಲಿ ಇರುವ ಸೂಕ್ತ ಎಲೆಗಳನ್ನು ಆಯ್ದುಕೊಳ್ಳಲು ಗೊತ್ತಿದ್ದರೆ ಮಾತ್ರ ಅದನ್ನು ಮಾಡಲು ಹೋಗಿ.. ಇಲ್ಲದಿದ್ದರೆ ಎಂತೆಂತದೋ ವಿಷಕಾರಿ ಎಲೆಗಳನ್ನು ಹಾಕಿಕೊಂಡು ಚಟ್ನಿ ಮಾಡಿ ತಿಂದು ಸ್ವಯಂ ನೀವೇ ಮಟ್ಯಾಷ್ ಆಗಿ ಕಲಾಸ್ ಆಗುವ ಸಂಭವ ಜಾಸ್ತಿ ಇರುತ್ತದೆ.ಸರಿಯಾಗಿ ಗೊತ್ತಿಲ್ಲದಿದ್ದರೆ ಅದನ್ನೆಲ್ಲ ಮಾಡಿ ಸುಮ್ಮನೆ ಯಾಕೆ ಸಾಯುವುದು ಅಲ್ವಾ..
ಈಗ ಇದನ್ನು ಬಹಳ ಸುಲಭವಾಗಿ ಮಾಡುವುದನ್ನು ಹೇಗೆ ಎಂದು ನೋಡುವ..
#ತೇರೆದ_ಚಟ್ನಿ_ಮಾಡುವ_ವಿಧಾನ..
ಮೊದಲು ಒಂದಷ್ಟು ತೇರೆದ ಚಿಗುರುಗಳನ್ನು ಹಾಗೂ ಸ್ವಲ್ಪ ಪುನರ್ ಪುಳಿ ಚಿಗುರುಗಳನ್ನು ಕಿತ್ತು ತಂದು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು.ತೇರೆದ ಚಟ್ನಿಯ ಚಿಗುರು ಸ್ವಲ್ಪ ಜಾಸ್ತಿ ಇರಲಿ. ಹೇಳಿ ಕೇಳಿ ತೇರೆದ ಚಟ್ನಿ ಅಲ್ವಾ.. ಅದೇ ಕಮ್ಮಿ ಇದ್ದು ಪುನರ್ ಪುಳಿ ಎಲೆ ಜಾಸ್ತಿ ಇದ್ದರೆ ಆಗ ಇದು ಪುನರ್ ಪುಳಿ ಚಟ್ನಿಯಾಗುವ ಸಂಭವ ಅಧಿಕವಾಗಿರುತ್ತದೆ.ನಾವು ಹೆಸರಿಗೆ ಹೇಳಬಹುದು ಇದು ತೇರೆದ ಚಟ್ನಿ ಎಂದು,ಆದರೆ ಯಾವ ಎಲೆಯ ಪ್ರಮಾಣ ಜಾಸ್ತಿ ಇರುವುದೋ ರೂಲ್ಸ್ ಪ್ರಕಾರ ಅದೇ ಹೆಸರು ಚಟ್ನಿಯದ್ದಾಗಿರುತ್ತದೆ.
ಚಿಗುರುಗಳನ್ನು ಚೆನ್ನಾಗಿ ತೊಳೆದ ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆಯನ್ನು ಹಾಕಿ ಹದವಾಗಿ ಈ ಚಿಗುರೆಲೆಗಳನ್ನು ಮೆತ್ತಗೆ ಬಾಡಿಸಬೇಕು.ಹಸಿ ವಾಸನೆ ಸದ್ದಿಲ್ಲದೇ ಅಡುಗೆ ಮನೆಯಿಂದ ಗಾಯಬ್ ಆದರೆ ಸಾಕು.
ನಂತರ ಈ ಬಾಡಿಸಿದ ಚಿಗುರೆಲೆಯನ್ನು... 5 ಒಣ ಕೆಂಪು ಮೆಣಸು(ಬ್ಯಾಡಗಿ), ಬೆಳ್ಳುಳ್ಳಿ ಎರಡು ಎಸಳು,ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಶಿನದ ಹುಡಿ, ಒಂದು ಚಿಕ್ಕ ತುಂಡು ಬೆಲ್ಲ,ಸ್ವಲ್ಪ ತೆಂಗಿನ ತುರಿ,ಸ್ವಲ್ಪ ನೀರು.. ಇಷ್ಟನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಚಟ್ನಿ ಸ್ವಲ್ಪ ಗಟ್ಟಿ ಗಟ್ಟಿಯಾಗಿಯೇ ಇರಲಿ.ಅಷ್ಟೇ... ತುಳುನಾಡಿನ ವೆರೀ ಫೇಮಸ್ ತೇರೆದ ಚಟ್ನಿ ರೆಡಿ.
ತೇರೆದ ಗಿಡ ಎಲ್ಲರಿಗೂ ಸಿಗುವುದು ಸ್ವಲ್ಪ ಕಷ್ಟವೇ. ಹಾಗಾಗಿ ಬರೀ ಪುನರ್ ಪುಳಿ ಎಲೆಯಿಂದಲೇ ಒಂಥರಾ ಹುಳಿ ಹುಳಿಯಾದ ಚಟ್ನಿಯನ್ನು ಕೂಡ ಮಾಡಿಕೊಳ್ಳಬಹುದು.ನೀವು ಯಾವುದೇ ಚಟ್ನಿಗೆ ಪುನರ್ ಪುಳಿ ಎಲೆ ಹಾಕಿದರೆ ಬೇರೆ ಯಾವುದೇ ಹುಳಿ ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.ಬೇರೆ ಚಟ್ನಿಗೂ ಕೂಡ ಪುನರ್ ಪುಳಿ ಎಲೆಗಳನ್ನು ಬಳಸಬಹುದು ಆಯ್ತಾ. ಅದರಲ್ಲೂ ನುಂಗೆಲ್ ಮೀನ್ ಚಟ್ನಿಗೆ ಇದನ್ನು ಬಳಸಿ ಬಿಟ್ಟರೆ.. ಆಹಾ.. ಆ ಚಟ್ನಿಯೂ ಬಲು ರುಚಿ.
ಸದ್ಯಕ್ಕೆ ಈ ಶುದ್ಧ ಸಸ್ಯಾಹಾರಿ ತೇರೆದ ಚಟ್ನಿ ಮಾಡಿ ನೋಡಿ.. ಒಂದೊಳ್ಳೆಯ ಗಂಜಿ ಊಟಕ್ಕೆ ಹೇಳಿ ಮಾಡಿಸಿದ ರುಚಿಯಾದ ಹಾಗೂ ಅಷ್ಟೇ ಆರೋಗ್ಯಕರ ಚಟ್ನಿ ಇದು.
#ಪಚ್ಚು_ಪಾಕಗಳು
ಪಚ್ಚುಪಟಗಳು
ab
Comments
Post a Comment