ಸಂಜೆಯ ಕಾಫಿಗೆ ಒಂದೊಳ್ಳೆಯ ಹಲಸಿನ ಸೋಂಟೆ
.
#ಸಂಜೆಯ_ಕಾಫಿಗೆ_ಒಂದೊಳ್ಳೆಯ_ಹಲಸಿನ_ಸೋಂಟೆ
ಈಗ ಸಂಜೆಯ ಕಾಫಿಗೆ ಕ್ರಿಸ್ಪೀ & ಸ್ಪೈಸಿ ಹಲಸಿನ ಸೋಂಟೆ ರೆಡಿ ಮಾಡಿಕೊಳ್ಳುವುದು ಹೇಗೆ ಎಂದು ನೋಡೋಣ ಆಯಿತಾ. ಇದು ಮಸಾಲೆ ಸೋಂಟೆ,ಹಾಗಾಗಿ ಲೈಟ್ ಆಗಿ ಖಾರ ಸ ಉಂಟು.
ಇದು ಮಾಡುವುದು ತುಂಬಾ ಅಂದ್ರೆ ತುಂಬಾನೇ ಸುಲಭ. ಇದಕ್ಕಿಂತ ಸುಲಭದ ಕುರುಕಲು ತಿಂಡಿಯೇ ನಮ್ಮಲ್ಲಿಲ್ಲ.
ಮೊದಲಿಗೆ ಚೆನ್ನಾಗಿ ಬಲಿತ ಹಲಸಿನ ಕಾಯಿಯ ಸೋಳೆಗಳನ್ನು ಉದ್ದಕ್ಕೆ ಸೀಳಿಕೊಂಡು ಕಟ್ ಮಾಡಿಕೊಳ್ಳಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಬಿಡಿ. ನಮ್ಮಲ್ಲಿ ತೆಂಗಿನೆಣ್ಣೆ ಬಳಕೆ ಜಾಸ್ತಿ. ಹಾಗಾಗಿ ನಾನು ಇದಕ್ಕೆ ಅದನ್ನೇ ಬಳಸಿದ್ದೇನೆ.ತೆಂಗಿನೆಣ್ಣೆಯ ಹಲಸಿನ ಸೋಂಟೆಯೇ ತುಂಬಾ ಚೆನ್ನಾಗಿರುತ್ತದೆ.
ಎಣ್ಣೆ ಕಾದ ನಂತರ ಈ ಹಲಸಿನ ಸೋಳೆಗಳನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕ್ರಿಸ್ಪಿ ಆಗುವಂತೆ ಕರಿಯಿರಿ.ಆ ನಂತರ ಎಣ್ಣೆಯಿಂದ ತೆಗೆದು ಬಿಡಿ.
ಈಗ ಒಂದು ಬೌಲ್ ಗೆ ಸ್ವಲ್ಪ ಉಪ್ಪಿನ ಹುಡಿ,ಸ್ವಲ್ಪ ಅರಶಿನ ಹುಡಿ,ಸ್ವಲ್ಪ ಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಕರಿದ ಹಲಸಿನ ಸೋಳೆಗಳನ್ನು ಈ ಮಿಕ್ಸ್ ಮಾಡಿ ಇಟ್ಟುಕೊಂಡಿರುವ ಮಸಾಲೆ ಹುಡಿಯೊಂದಿಗೆ ಹಾಗೇ ಮಿಕ್ಸ್ ಮಾಡಿ ಬಿಟ್ಟರೆ.. ಹಲಸಿನ ಮಸಾಲೆ ಸೋಂಟೆ ಸವಿಯಲು ಸಿದ್ದ.ತುಳು ಭಾಷೆಯಲ್ಲಿ ಇದಕ್ಕೆ ಸೋಂಟೆ ಎಂದು ಹೇಳುತ್ತೇವೆ. ಕನ್ನಡದಲ್ಲಿ ಇದಕ್ಕೆ ಹಲಸಿನ ಚಿಪ್ಸ್ ಅಂತ ಹೇಳ್ತಾರೆ.
ಖಾರ ಏನೂ ಹಾಕದೇ ಬರೀ ಉಪ್ಪು ಹಾಕಿ ಸಾದ ಹಲಸಿನ ಸೋಂಟೆ ಕೂಡ ಮಾಡಿಕೊಳ್ಳಬಹುದು.ಇದಕ್ಕೆ ಯಾವ ಬಣ್ಣವೂ ಇರುವುದಿಲ್ಲ.ಉಪ್ಪು ಮತ್ತು ಅರಶಿನದ ಹುಡಿ ಜೊತೆಗೆ ಮಿಕ್ಸ್ ಮಾಡಿದರೆ ಸ್ವಲ್ಪ ಹಳದಿ ಬಣ್ಣದಲ್ಲಿ ಇದು ಕಾಣುತ್ತದೆ. ಮೆಣಸಿನ ಹುಡಿ ಮತ್ತು ಉಪ್ಪಿನ ಹುಡಿ ಜೊತೆಗೆ ಮಿಕ್ಸ್ ಮಾಡಿದರೆ ಹೀಗೆ ಕೆಂಪು ಬಣ್ಣದಲ್ಲಿ ಕಾಣುತ್ತದೆ. ನಿಮಗೆ ಯಾವ ಪ್ಲೇವರ್ ಇಷ್ಟ ಆಗುತ್ತದೋ ಆ ಪ್ಲೇವರ್ ನಲ್ಲಿ ಮಾಡಿಕೊಂಡು ಇದನ್ನು ಒಂದು ದೊಡ್ಡ ಡಬ್ಬದಲ್ಲಿ ಹಾಕಿ ಸಂಗ್ರಹಿಸಿಟ್ಟು ಕೊಂಡರೆ ಬೇಕಾದಾವಾಗ ತೆಗೆದು ತಿನ್ನಬಹುದು.ಬರೀ ಒಂದು ಹಲಸಿನ ಕಾಯಿಯಿಂದಲೇ ನಾವು ಬೇಕಾದಷ್ಟು ಹಲಸಿನ ಸೋಂಟೆಗಳನ್ನು ಮಾಡಿಕೊಳ್ಳಬಹುದು.
ಮಳೆಗಾಲದ ಹದವಾದ ಮಳೆಗೆ,ಸಂಜೆಯ ಬಿಸಿ ಕಾಫಿಗೆ.. ತುಂಬಾನೇ ಆಪ್ತ ಎನಿಸುವ ಸಂಗಾತಿ ಇದು.ಹಲಸಿನ ಹಪ್ಪಳ, ಹಲಸಿನ ಸೋಂಟೆಯನ್ನು ಮಳೆ ಸುರಿವಾಗ ಕಾಫಿ ಜೊತೆ ಜೊತೆಗೆ ಕರ್ರುಂಕುರ್ರುಂ ಮಾಡದಿದ್ದರೆ ಅದೆಂತಹ ಮಳೆಗಾಲ ಎಂದು ಅನ್ನಿಸಿಬಿಡುವುದಿದೆ.ಬಿಲೀವ್ ಮಿ.. ಯಾವುದೇ ಪೊಟಾಟೋ ಚಿಪ್ಸ್ ಕೂಡ ಇದರ ಮುಂದೆ ಎಂದೆಂದಿಗೂ ಸಪ್ಪೆಯೇ.
ಪಚ್ಚು ಪಾಕಗಳು
Ab Pacchu
Moodubidire
Comments
Post a Comment