ಗುಡ್ಡದ ಜಾಡು,ಹಳ್ಳಿಯ ಹಾಡು..

 


ನೇರ ದಾರಿ ಹಿಡಿದು ಮನೆಗೆ ತಲುಪುದು ಅದ್ಯಾಕೋ ಎಂದಿಗೂ ಇಷ್ಟ ಆಗಿದ್ದೇ ಇಲ್ಲ. 


ದಿನಾ ನೋಡುತ್ತಾ ನಡೆಯುವ ಆ ಉದ್ದದ ದಾರಿಯ ಅಕ್ಕ ಪಕ್ಕದಲ್ಲಿ ಕೌತುಕಗಳು ಬೆರಗುಗಳು ಪ್ರತೀ ನಿತ್ಯವೂ ಘಟಿಸುವುದಿಲ್ಲ.


ಎಲ್ಲರ ಮನೆಯ ಬೇಲಿಯಲ್ಲಿ ಹಿಂದಿನಂತೆ ಈಗ ಕೆಂಪು ಲಂಗದ ದಾಸವಾಳ ಕಣ್ಣಿಗೆ ಬೀಳುವುದಿಲ್ಲ.ನಿರ್ಜೀವ ಸಿಮೆಂಟ್ ಕಾಂಪೌಂಡ್ ಗಳು ತಲೆ ಎತ್ತಿ ನಿಂತ ನಂತರ ಬೇಲಿಯ ಜೀವ ಸಂಕುಲ,ಪತ್ರೆ,ಬೇಲಿ ಹೂವುಗಳಿಗೆ ಕಾಂಪೌಂಡ್ ಗಳಲ್ಲಿ  ನಳನಳಿಸುವ ಭಾಗ್ಯವಿಲ್ಲ. 


ದೂರದಲ್ಲಿರುವ ಅಂಗಡಿಗೆ ಹೋಗಿ ಬರಲಿಕ್ಕೆ ಇದ್ದರೂ ಸಹ, ಬೇಗ ಹೋಗಿ ಬರಬಹುದಾದ ಟಾರು ರೋಡನ್ನು ಬಿಟ್ಟು ಸುತ್ತು ಬಳಸಿ ನಡೆದೇ ಹೋಗಬೇಕಾದ ಗುಡ್ಡದ ಕಾಲು ದಾರಿಯನ್ನು ಹಿಡಿಯುವುದು ನನಗಿಷ್ಟ.. 


ಗುಡ್ಡದ ದಾರಿಯಲ್ಲಿ ಟಾರು ಇಲ್ಲ. ಆದರೆ ತಂಪಿದೆ.


ಹೆಸರಿಲ್ಲದ ಅದೆಷ್ಟೋ ಕಾಡು ಹೂಗಳು ಮಣ್ಣಿನ ದಾರಿಯ ಇಕ್ಕೆಲಗಳಲ್ಲಿ ಅದರಷ್ಟಕ್ಕೆ ಅರಳಿ ನಡೆಯುವ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ,ಪಕ್ಷಿಗಳಿಗೂ ಕೂಡ ಬೇಧ ಭಾವ ಮಾಡದೇ ಶಿಸ್ತಿನಿಂದ ಸ್ವಾಗತ ಕೋರುತ್ತವೆ.


ಯಾರಾದರೂ ಕಿತ್ತು ಮುಡಿಯಲಿ ಎಂಬ ಹಂಬಲ ಕಾಡು ಹೂಗಳಿಗಿಲ್ಲ.ದುಂಬಿಗಳು ಹೂಗಳಿಗೆ ಜೋತು ಬಿದ್ದು ಹೊಟ್ಟೆ ಬಿರಿಯೇ ಅವುಗಳ ಮಕರಂದ ಹೀರಿ ಬಿಟ್ಟರೆ,ಹುಟ್ಟಿ ಅರಳಿದ್ದಕ್ಕೆ ಹೂವುಗಳಿಗೂ ಅದೆನೋ ಒಂದು ಸಾರ್ಥಕ್ಯ ಭಾವ.



ಎತ್ತರದ ಮರಗಳಲ್ಲೂ ಹೂ ಅರಳುತ್ತದೆ...ಸಣ್ಣ ಸಣ್ಣ ಹೂಗಳು. ಕಾಡ ಮರಗಳು ಕೂಡ ಮೆಲ್ಲಗೆ ಸದ್ದಿಲ್ಲದೆ ಹೂ ಉದುರಿಸಿ ಗುಡ್ಡದ ಮಣ್ಣಿನ ಹಾದಿಯನ್ನು ಸಹ ಹೂವಿನ ಹಾದಿಯನ್ನಾಗಿ ಮಾಡುತ್ತವೆ.


ಅಲ್ಲಿ ಯಾವ ರಾಜನೂ ನಡೆಯುವುದಿಲ್ಲ. ಆದರೂ ಅಲ್ಲೊಂದು ಸದಾ ಮರದ ತಂಪಿನಡಿಯಲ್ಲಿ ಕೆಂಪು ಹೂಗಳ,ಬಿಳಿ ಹೂಗಳ ಇಲ್ಲವೇ ಹಳದಿ ಹೂಗಳ ಕಾರ್ಪೆಟ್ ಯಾವಾಗಲೂ ಇರುತ್ತದೆ. 



ಒಂದಷ್ಟು ತಿನ್ನಬಹುದಾದ ಕಾಡು ಹಣ್ಣುಗಳ ಪರಿಚಯವಿದ್ದರೆ ಗುಡ್ಡದ ದಾರಿಯಲ್ಲಿ ಬಾಯಿ ರುಚಿಗೊಳಿಸುವ ಹಲವು ತಾಜಾ ಹಣ್ಣುಗಳಿವೆ.ಒಂದಷ್ಟು ಹಣ್ಣು ಕಿತ್ತು ಕೊಯ್ದು ಬಾಯಿಗೆ ಹಾಕಿಕೊಂಡು ಮೆಲ್ಲುತ್ತಾ ಹೋದರೆ ಬಾಯಿ ತುಂಬಾ ಅದೆನೋ ಅಪರೂಪದ ಸ್ವಾದದ ಜೊತೆ ಜೊತೆಗೆ ಬಾಲ್ಯದ ನೆನಪುಗಳು ಇನ್ನಿಲ್ಲದಂತೆ ಜೀವಂತ. 



ಗುಡ್ಡ ಇಳಿದರೆ ಮತ್ತೆ ಅಲ್ಲೇ ಒಂದಷ್ಟು ಹಂಚಿನ ಮನೆ.ಮನೆಯ ಮಾಡಿನ ಮೇಲೆ ಅಲ್ಲಲ್ಲೇ ಚದುರಿ ಹೋಗಿದ್ದರೂ ಕೂಡ ಆಕಾಶ ಮುಟ್ಟಲು ಹವಣಿಸುವ ಬಚ್ಚಲು ಮನೆಯ ಹೊಗೆ.ಅಡಿಕೆ ಸಿಪ್ಪೆಯದ್ದೋ.. ತೆಂಗಿನ ಸಿಪ್ಪೆಯದ್ದೋ,ಒಣ ತರಗೆಲೆಗಳದ್ದೋ ಅಥವಾ ಬೀಡಿ ಎಲೆಗಳದ್ದೋ  ಗೊತ್ತಿಲ್ಲ.. ಆದರೆ ಹಂಡೆ ಬಿಸಿ ಮಾಡಿದ ಹೊಗೆಗೆ ಒಂದೇ ಕಡೆ ನಿಲ್ಲುವ ಧಾವಂತ ಇಲ್ಲ. ಅದರದ್ದು ಬಿಡುಗಡೆಯ ಹಾದಿ.


ಆ ಹಳ್ಳಿ ಮನೆಗಳ ಪಕ್ಕವೇ ಉದ್ದಕ್ಕೆ ರೋಡು. ರೋಡ್ ನ ತುದಿ ತಲುಪಿ ಬಿಟ್ಟರೆ ಅಲ್ಲೇ ನಾನು ಹೋಗಬೇಕಾದ ಅಂಗಡಿ.ಅಂಗಡಿಗೆ  ಹೋಗಿ ಅಮ್ಮನ ಪಟ್ಟಿಯಲ್ಲಿರುವ ಸಾಮಾನುಗಳನ್ನು ಖರೀದಿಸಿ ಜೊತೆಗೆ ಒಂದು ತಂಪಾದ ಎಳ್ಳು ಜ್ಯೂಸ್ ಇಲ್ಲವೇ ಪುನರ್ ಪುಳಿ ಕುಡಿದು ಮತ್ತೆ ನಾನು  ನನ್ನ ಗುಡ್ಡದ ಹಾದಿ ಹಿಡಿಯಬೇಕು. ಮೈನ್ ರೋಡಿನಲ್ಲಿಯೇ ಸಾಗಬಹುದು.ಆದರೆ ಕಾಲುಗಳು ಕೇಳುವುದಿಲ್ಲ.ಅವುಗಳಿಗೆ ಮನಸ್ಸಿನ ಮಾತುಗಳು ಬಹಳ ಚೆನ್ನಾಗಿ ಗೊತ್ತಿವೆ.


ಗುಡ್ಡದ ಕೆಳಗಿರುವ ಮನೆಗಳ ಬೇಲಿ ಬದಿಯಲ್ಲಿ ಮಾವಿನ ಮರಗಳು ಫಲ ಹೊತ್ತು ನಿಂತಿವೆ. ನನಗೋ ಮಾವು ಎಂದರೆ ಮುಗಿಯದ ಆಸೆ. ಕಲ್ಲು ಬಿಸಾಡಿ ಒಂದಷ್ಟು ಹಣ್ಣು ಉರುಳಿಸಬಲ್ಲೆ.ಆದರೆ ಬೇರೆಯವರ ಮನೆ.ಆ ನಂತರ ಆ ಮನೆಗಳ ಹಂಚುಗಳ ಆಕ್ರಂದನ ಕೇಳಲು ಹಿತ ಎನಿಸುವುದಿಲ್ಲ.



ಅದೇ ಮರ ಗುಡ್ಡದ ಮೇಲೆ ಇದ್ದಿದ್ದರೆ ಎಷ್ಟೋ ಮಾವಿನ ಕಾಯಿಗಳು ನಾನೆಸೆಯುವ ಕಲ್ಲಿನ ಚೂಪು ನೋಟಕ್ಕೆ ಧರೆಗುರುಳುತ್ತಿದ್ದವು.ಹೀಗಾಗಿ ಬೇರೆಯವರ ಮನೆಯ ಮಾವು ಯಾವಾಗಲೂ ನಮಗೆ ಗಗನ ಕುಸುಮವೇ.


ಆದರೆ ಮಾವು ಕಣ್ಣಿಗೆ ಬಿದ್ದಾಗ ನಾನು ಸಂಕೋಚ, ನಾಚಿಕೆ ಎರಡನ್ನೂ ತ್ಯಜಿಸುತ್ತೇವೆ. ಮಾವು ಪ್ರೇಮಿಗಳು ಎಂದಿಗೂ ಇದೊಂದನ್ನು ಮಾಡಿದರೆ ಜೀವನ ಪೂರ್ತಿ ಬೇಕಾದಷ್ಟು ಮಾವು ಹುಳಿಯಾಗಿಯೂ ಸವಿಯಬಹುದು,ಗೊರಟೆ ಚೀಪಿ ಬಾಯಿ  ಸಿಹಿಯೂ ಮಾಡಬಹುದು. 


ಪ್ರತೀ ಬಾರಿಯೂ ಆ ಮನಗೆಳ ಮಾವು ಕಂಡಾಗ ಅಲ್ಲಿ ಯಾರಾದರೂ ಇರುವರೇ ಎಂದು ನೋಡುತ್ತೇನೆ. ಯಾರೂ ಕಣ್ಣಿಗೆ ಬೀಳದೇ ಇದ್ದಾಗ ಹಣ್ಣು ಕೀಳಲು ಮನಸ್ಸು ಬರುವುದಿಲ್ಲ.


ಕದಿಯುವ ಹಣ್ಣು ರುಚಿ ಆದರೂ ದೊಡ್ಡವನಾದ ಮೇಲೆ ಏಕೋ ಕೇಳಿ ಪಡೆದು ಹಣ್ಣು ಸವಿದರೆನೇ ಮನಸ್ಸಿಗೆ ಏನೋ  ಸಮಾಧಾನ.


ಮೊನ್ನೆ ಹೀಗೆ ಗುಡ್ಡದ ದಾರಿಯಲ್ಲಿ ಹೋಗುವಾಗ ಆ ಮನೆಗಳ ಮಾವಿನ ಮರದಲ್ಲಿ ಬೇಕಾದಷ್ಟು ಕಾಯಿಗಳು ತೊನೆದಾಡುತ್ತಿದ್ದವು. ನೋಡಿ ಆಸೆಯಾಯಿತು. ಯಾರೂ ಇರಲಿಲ್ಲ. ಅಂಗಡಿಗೆ ಹೋಗಿ ಪುನಃ ಅದೇ ದಾರಿಯಲ್ಲಿ ಹಿಂದಿರುಗುವಾಗ ಕೆಲವು ಮಕ್ಕಳು ಕಲ್ಲು ಎಸೆದು ಮಾವು ಉದುರಿಸುವ ಅತೀ ಉತ್ಸಾಹದ ಕಾಯಕದಲ್ಲಿದ್ದರು.


ಅದನ್ನು ನೋಡಿ ನಾನು ಕಣ್ಣರಳಿಸಿ ಅಲ್ಲಿಯೇ ನಿಂತುಕೊಂಡೆ. ಅವರೆನೋ ಮಾವು ಕೊಯ್ಯುತ್ತಿಲ್ಲ, ಬಂಗಾರವನ್ನೇ  ಕೊಯ್ಯುತ್ತಿದ್ದಾರೆ  ಎಂಬ ಭಾವ ನನ್ನಲ್ಲಿ.


ಆ ಹುಡುಗರು ನನ್ನನ್ನೇ  ನೋಡಿದರು. ಹಾಯ್.. ಎಂದೆ. ಅವರು ಕೂಡ ನಗುತ್ತಾ ಕೈ ಬೀಸಿದರು.


 "ಹಣ್ಣು ಸಿಹಿ ಉಂಟಾ.." ಕೇಳಿದೆ. ಅದಕ್ಕೆ ಅವರಲ್ಲಿ ಒಬ್ಬ ಹೇಳಿದ.. "ಇದರ ಕಾಯಿಯೇ ಬಹಳ ರುಚಿ.. ಸ್ವಲ್ಪವೂ ಹುಳಿ ಇಲ್ಲ.ಹಾಗೇ ಕಚ್ಚಿಕೊಂಡು ತಿನ್ನಬಹುದು.. ನಿಮಗೆ ಬೇಕಾ ಅಣ್ಣಾ..? ".


ನಮ್ಮ ಹಳ್ಳಿ ಜನರು ಮುಗ್ಧರು,ಅವರಾಗಿಯೇ ಬೇಕಾ ಎಂದು ಕೇಳುತ್ತಾರೆ. ಹಾಗಾಗಿ ನನಗೆ ಹಳ್ಳಿ ಮನಸ್ಸುಗಳು ಎಂದಿಗೂ ಇಷ್ಟ.


ಹೌದು ನನಗೂ ಒಂದು ಕಾಯಿ ಕೊಡಿ ಅಂದೆ.. ಅಷ್ಟೇ ರಪ ರಪ ಕಲ್ಲು ಬಿಸಾಡಿ ಒಂದಷ್ಟು ಮಾವು ಉದುರಿಸಿ ನನ್ನ ಕೈಗಿತ್ತರು.


ಅದರಲ್ಲಿ ಒಬ್ಬನಿಗೆ ಸಮಾಧಾನವೇ ಇಲ್ಲ. ಅಣ್ಣ ಕಾಯಿ ಕೆಳಗೆ ಬಿದ್ದು ಒಡೆದು ಹೋಗಿದೆ, ನಿಮಗೆ ನಾನು ಮರದ ಮೇಲಕ್ಕೆ ಹೋಗಿ ಕಾಯಿ ಕೊಯ್ದು ಕೊಡುತ್ತೇನೆ..ಎಂದು ಹೇಳಿ ಚಕ ಚಕನೆ ಒಂದು ದೋಂಟಿ(ದೋಟಿ) ಹಿಡಿದು ಮರವೇರಿ ನಾಲ್ಕೈದು ಮಾವಿನಕಾಯಿ ಕೊಯ್ದು ಒಂದು ತೊಟ್ಟೆಯಲ್ಲಿ ಹಾಕಿ ನನ್ನ ಕೈಗೆ ಕೊಟ್ಟ.ಬೇಡ ಎಂದು ಹೇಳದಿದ್ದರೆ ಇನ್ನಷ್ಟು ಕೊಯ್ದು ಕೊಡುವ ಉತ್ಸಾಹ ಆ ಮಕ್ಕಳಲ್ಲಿ ಎದ್ದು ಕಾಣುತ್ತಿತ್ತು. 



ಯಾರೇ ಬರಲಿ ತಮ್ಮಲ್ಲಿರುವುದನ್ನು ಕೊಟ್ಟು ಆ ಮೂಲಕ ಬೇರೆಯವರ ಖುಷಿಯಲ್ಲಿ ತಮ್ಮ ಸುಖ ಕಂಡುಕೊಳ್ಳುವುದೆಂದರೆ ಈ  ಹಳ್ಳಿಯ ಜೀವಗಳಿಗೆ ಅದೇನೋ ಸಂಭ್ರಮ.ಹಳ್ಳಿಯ ಹಾಡುಗಳೇ ಹಾಗೇ.. 


ಬಡತನ ಎನ್ನುವುದು ಅವರ ಕೊಡುವ ಕೈಗಳಿಗೆ ಎಂದಿಗೂ ಹಿಂಜರಿಕೆಯನ್ನು ಮೂಡಿಸಿಯೇ ಇಲ್ಲ. ಕೊಡಲು ಅವರಲ್ಲಿ ಇರುವುದಾದರೂ ಏನು.. ಅದೇ ನೈಸರ್ಗಿಕವಾಗಿ ಬೆಳೆದ ಫಲ, ಹಣ್ಣು, ತರಕಾರಿ, ಹೂವುಗಳು.. ಅದರ ಜೊತೆಗೆ ಒಂದಿಷ್ಟು  ಮುಗ್ಧ ಪ್ರೀತಿ ವಿಶ್ವಾಸ.



ನೀವೇ ಹೇಳಿ..ಗುಡ್ಡದ ಆ ಸ್ವರ್ಗದ ದಾರಿ,ಸದಾ ಪ್ರೀತಿ ವಿಶ್ವಾಸದಿಂದ ತುಂಬಿರುವ ಪಕ್ಕಾ ಹಳ್ಳಿ ಮನಸ್ಸಿನ ಜನ .. ಇವೆಲ್ಲಾ ಇರುವಾಗ ನಾನು ಹೇಗೆ ದೂರದ ಅಂಗಡಿಗೆ ಹೋಗಲು ಆ ನಿರ್ಜೀವ ಟಾರು ರೋಡು ಹಿಡಿಯಲಿ..?


ಗುಡ್ಡದ ಹಾದಿಯಲ್ಲಿ ಅರಳುವ ಕಾಡುಮಲ್ಲಿಗೆ ಇದೆ.. ಅದೇ ಹಳ್ಳಿ ಜನರಲ್ಲಿ ಅವರುಗಳ ಮನಸ್ಸೇ ಅರಳು  ಮಲ್ಲಿಗೆಯಾಗಿದೆ..ಇವರೆರಡೂ  ನನಗಿಷ್ಟ.




.....................................................................................



#ಏನೋ_ಒಂದು


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ