ಸುಂದರ ಹೊಡೆತಗಳ ಆಟಗಾರ ಈ ಶರ್ಮರ ಹುಡುಗ..



ಬಹಳ ಸುಂದರವಾಗಿ ಸ್ಟ್ರೈಟ್ ಡ್ರೈವ್ ಹಾಗೂ ಕವರ್ ಡ್ರೈವ್ ಗಳನ್ನು  ಬಾರಿಸುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್..ಬ್ಯಾಕ್ ಫುಟ್ ಹೊಡೆತಗಳ ಆಟಗಾರ ತಂಡದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್...ಕಣ್ಣುಗಳನ್ನು ಪಿಳಿ ಪಿಳಿ ಮಾಡುತ್ತಾ ಕ್ರೀಸ್ ನಿಂದ ಒಂದಷ್ಟು ಮುಂದಕ್ಕೆ ಬಂದು ಗಗನ ಚುಂಬಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಬಂಗಾಲದ ದೊರೆ ಆಫ್ ಸೈಡಿನ ಗಾಡ್ ಸೌರವ್ ಗಂಗೂಲಿ... ಬಾಲ್ ಇರುವುದೇ ನನಗೆ ಗ್ರೌಂಡಿನ ಮೂಲೆ ಮೂಲೆಗೆ ಅಟ್ಟಲು ಎಂದು ಮನ ಬಂದಂತೆ  ದಾಂಧಲೆ ಮಾಡಿ ಕ್ರಿಕೆಟ್ ರಸಿಕರ ಮನತಣಿಸಿದ ವಿರೇಂದ್ರ ಸೆಹ್ವಾಗ್....ಎದ್ದು ಬಿದ್ದು ಆಟವಾಡಿ ಹೃದಯ ಗೆದ್ದ ಎಡಗೈ ಒಪನರ್ ಗೌತಮ್ ಗಂಭೀರ್... ರೊಚ್ಚಿಗೆದ್ದು ಆಡುತ್ತಿದ್ದ ಮುದ್ದು ಮುಖದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ... ಇವರೆಲ್ಲರ ನಂತರ ತಂಡದಲ್ಲಿ ನನಗೆ ಅತಿಯಾಗಿ ಇಷ್ಟ ಆದ ಆಟಗಾರ ಎಂದರೆ ಅದು ನಮ್ಮ ಶರ್ಮರ ಹುಡುಗ ರೋಹಿತ್.



2007 ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಕಣ್ಣಿಗೆ ಬಿದ್ದ ಈ ರೋಹಿತ್ ಶರ್ಮ ಆ ನಂತರ ಅದ್ಯಾಕೋ ಗೊತ್ತಿಲ್ಲ ಇನ್ನಿಲ್ಲದಂತೆ ಇಷ್ಟವಾಗುತ್ತಾ ಹೋದ. ಅವನದೊಂದು ಆ Lazy Elegance ಜೊತೆ ಜೊತೆಗೆ Quality of Cricket Shots ಗಳು ಕಣ್ಣಿಗೆ ಹಬ್ಬವಾಗಿ ಕಾಣಲು ಆ ನಂತರ ಅದೇ ಬಿಡದೇ ಕಾಡಲು ಶುರುವಾಯಿತು.





ನನಗೆ ಕ್ರಿಕೆಟ್ ನಲ್ಲಿ ಯಾರೇ ಇರಲಿ ಅದೊಂದು Art Form ಎಂಬಂತೆ ತುಂಬಾನೇ ಕಲಾತ್ಮಕತೆಯಿಂದ ಬ್ಯಾಟು ಬೀಸುವ ಆಟಗಾರರು ಬಲು ಬೇಗ ಇಷ್ಟ ಆಗಿ ಬಿಡುತ್ತಾರೆ.ಆ ಕಾರಣಕ್ಕಾಗಿಯೇ ರೋಹಿತ್  ಇನ್ನಿಲ್ಲದಂತೆ ಇಷ್ಟವಾಗಿದ್ದು. 


ವಿದೇಶಿ ವೇಗದ ಬೌಲರ್ ಗಳ ಬೌನ್ಸರ್ ನ ಎದುರು ಭಾರತೀಯ ಬ್ಯಾಟ್ಸ್‌ಮನ್ ಗಳು ತತ್ತರಿಸುತ್ತಿದ್ದ ಸಮಯದಲ್ಲಿ,ಬಾಲ್ ಅನ್ನು ಹೆಲ್ಮೆಟ್ ಗೆ ಬಡಿಸಿಕೊಂಡೋ ಇಲ್ಲವೇ ಸುಮ್ಮನೆ ಬಗ್ಗಿ ಕೂರುವ ಬದಲು,ಬೌನ್ಸರ್ ಇರುವುದೇ ಸುಲಭವಾಗಿ ಫುಲ್ ಮಾಡಿ ಗ್ರೌಂಡಿನಿಂದ ಹೊರಗಡೆ ಸಿಕ್ಸರ್ ಗೆ ಅಟ್ಟಲು ಎಂದು ಬಹಳ ಸೊಗಸಾಗಿ ಕೇವಲ ಒಂದೆರಡು ಬಾರಿ ಅಲ್ಲ ಪದೇ ಪದೇ ಮಾಡಿ  ತೋರಿಸಿದ್ದು ಮಾತ್ರವಲ್ಲ... ತಾನು ಬ್ಯಾಟ್ ಹಿಡಿದಾಗ ಯಾವ ಬೌಲರ್ ಕೂಡ ಬೌನ್ಸರ್ ಎಸೆಯಲು ಎರಡೆರಡು ಬಾರೀ ಹಿಂದೆ ಮುಂದೆ ಯೋಚಿಸಬೇಕು ಎನ್ನುವಂತೆ ಮಾಡಿದ್ದು ಇದೇ ನಮ್ಮ ರೋಹಿತ್ ಶರ್ಮ.ರೋಹಿತ್ ಬ್ಯಾಟ್ ಬೀಸುವಾಗ ಯಾವ ಬೌಲರ್ ಕೂಡ ಅಷ್ಟಾಗಿ ತನ್ನ ಬತ್ತಳಿಕೆಯಿಂದ ಬೌನ್ಸರ್ ಎಂಬ ವಿಶೇಷ ಅಸ್ತ್ರವನ್ನು ಪ್ರಯೋಗಿಸಲು ಈಗೀಗ  ಅಷ್ಟಾಗಿ ಮನಸ್ಸು ಮಾಡುವುದಿಲ್ಲ.ಕಾರಣ ಅವರಿಗೂ ಗೊತ್ತು,ವಿಶ್ವ ಕ್ರಿಕೆಟ್ ನಲ್ಲಿ ಹಿ ಇಸ್ ಎ ವೇರಿ ಗುಡ್ ಫುಲ್ಲರ್ ಆಫ್ ದ ಬಾಲ್ ಎಂದು. 


Hitman ಎಂದು ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ರೋಹಿತ್ ಹಲವಾರು ಸಾಧನೆಗಳನ್ನು ಮಾಡಿದ್ದಾನೆ,ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ್ದಾನೆ,ಡ್ಯಾಡಿ ಹಂಡ್ರೆಡ್ಸ್ ಗಳನ್ನು ಬೇಕಾದಷ್ಟು ಸಲ ಹೊಡೆದಿದ್ದಾನೆ.


ಯಾರಾದರೂ ನೂರು ಹೋಡೆದರೆ ತೃಪ್ತಿ ಆಗುತ್ತದೆ.ಆದರೆ ರೋಹಿತ್ ನೂರು ಹೊಡೆದ ನಂತರ ಅವನು ಇನ್ನೂರು ಹೊಡೆಯದಿದ್ದರೆ ತುಂಬಾನೇ ನಿರಾಶೆಯಾಗುತ್ತದೆ ಎಂದರೆ ಅದು ರೋಹಿತ್ ಎಂಬ ಆಟಗಾರ ಅವನ ಆಟಕ್ಕೆ ಸೆಟ್ಟು ಮಾಡಿರುವ ಟ್ರೆಂಡು.ನನಗೆ ಆತ ಈಡನ್ ಗಾರ್ಡನ್ ನಲ್ಲಿ ಅಂದು ಏಕದಿನದಲ್ಲಿ 264 ರನ್ ಹೊಡೆದಾಗ ಖುಷಿಗಿಂತ, ಶೇ.. ಈತ  ಏಕೆ 300 ರನ್ ಹೊಡೆಯಲಿಲ್ಲ ಎಂದು ಬೇಜಾರು ಆಗಿತ್ತು.


ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ.ಆಗ ಟೀಮ್ ಇಂಡಿಯಾದ ಕೋಚ್ ಆಗಿದ್ದಂತಹ ಸ್ವತಃ ಡಂಕನ್ ಪ್ಲೆಚರ್ ಕೂಡ ಅಂದು ರೋಹಿತ್ ವಿಶ್ವ ದಾಖಲೆಯ 264 ಹೊಡೆದು ಡ್ರೆಸಿಂಗ್ ರೂಮ್ ಗೆ ಬಂದಿದ್ದರೂ ಸಹ  ತಮ್ಮ ನಿರಾಸೆಯನ್ನು ವ್ಯಕ್ತಿ ಪಡಿಸಿ.."ಶುರುವಲ್ಲಿ ಸ್ವಲ್ಪ ವೇಗವಾಗಿ ಆಡಿದ್ದರೆ ನೀನು ಇಂದು 300 ಹೊಡೆಯಬಹುದಿತ್ತು.. " ಎಂದು ಹೇಳಿದ್ದನ್ನು ಸ್ವತಃ ರೋಹಿತ್ ಶರ್ಮ ಸಂದರ್ಶನವೊಂದರಲ್ಲಿ ಹೇಳಿ ನೆನಪಿಸಿಕೊಳ್ಳುತ್ತಾನೆ. 


ಹೌದು ಅಂದು ರೋಹಿತ್ ಮೊದಲ 100 ರನ್ ಗಳಿಸಲು  ತೆಗೆದುಕೊಂಡ ಬಾಲ್ ಗಳ ಸಂಖ್ಯೆ ಕೂಡ 100 ಆಗಿತ್ತು.ಒಂದು ವೇಳೆ ಅಲ್ಲಿ ಸ್ವಲ್ಪ ವೇಗವಾಗಿ ಆಡಿದ್ದರೆ ಖಂಡಿತವಾಗಿಯೂ ಡಂಕನ್ ಪ್ಲೆಚರ್ ಹೇಳುವಂತೆ 300 ರನ್ ಹೊಡೆಯುವುದು ರೋಹಿತ್ ಗೆ ಕಷ್ಟ ಸಾಧ್ಯ ಆಗುತ್ತಿರಲಿಲ್ಲ.ನಂತರ ತಾನಾಡಿದ ಉಳಿದ 73 ಬಾಲ್ ಗಳಲ್ಲಿ ಅಂದು 164 ರನ್ ಹೊಡೆದು ಚಚ್ಚಿ ಬಿಸಾಕಿದ್ದ ರೋಹಿತ್ !


ಹಿಟ್ ಮ್ಯಾನ್ ಅಂದರೆ ಹಾಗೆಯೇ.ಅವನು ಎಲ್ಲರಿಗೂ ಸುಲಭಕ್ಕೆ ಎಟುಕದ ಗಗನ ಕುಸುಮ ಎನಿಸುವ ಏಕದಿನದಲ್ಲೊಂದು ತ್ರಿಶತಕ,ಟಿ ಟ್ವೆಂಟಿಯಲ್ಲೊಂದು ದ್ವಿಶತಕದ ಕನಸುಗಳನ್ನು ನೋಡುಗನೆದೆಯಲ್ಲಿ ಗರಿಗೆದರುವಂತೆ ಮಾಡುತ್ತಾನೆ.ಇಂತಹ ಸಾಧನೆಯನ್ನು ಮಾಡಿದರೆ ಅದು ರೋಹಿತ್ ಒಬ್ಬನೇ ಎಂದು ಅನೇಕ ವಿದೇಶಿ ಕ್ರಿಕೆಟ್ ದಿಗ್ಗಜರು ಎಷ್ಟೋ ಸಲ ಮನಸ್ಸು ಬಿಚ್ಚಿ ಹೇಳಿ ಕೂಡ ಆಗಿದೆ.ಹಿಟ್ ಮ್ಯಾನ್ ಮೇಲಿರುವ Expectations ಗಳು ಎಂದಿಗೂ ಇಂತವುಗಳೇ.






ತುಂಬಾ Cool, Calm & Composed ಆಗಿ ಕಂಡು ಬರುವ ರೋಹಿತ್ ಒಳ್ಳೆಯ ನಾಯಕ ಕೂಡ ಹೌದು.ಐಪಿಎಲ್ ಸಾಧನೆಯೇ ಅದಕ್ಕೆ ಸಾಕ್ಷಿ.ಐದು ಐಪಿಎಲ್ ಟ್ರೋಫಿ ಗಳನ್ನು ಎತ್ತಿ ಹಿಡಿದು ಜಯದ ನಗೆ ಬೀರಿದ ಏಕೈಕ ನಾಯಕ ಅಂದರೆ ಅದು ಅವನೇ.


ಆರಂಭಿಕ ದಿನಗಳಲ್ಲಿ ಯುವರಾಜ್ ಸಿಂಗ್ ತನ್ನ ಕ್ರಿಕೆಟ್ ಆಟದ ಕ್ರಶ್ ಎಂದು ಹೇಳಿಕೊಂಡ ರೋಹಿತ್ ಇಂದು ಹಲವಾರು ಯುವ  ಆಟಗಾರರಿಗೆ ತಾನೇ ಸ್ವತಃ ರೋಲ್ ಮಾಡೆಲ್. ತಂಡದ ಕಿರಿಯ ಆಟಗಾರರಿಗೆ ನೆಚ್ಚಿನ ಭಾಯ್.ರೋಹಿತ್ ಬಗ್ಗೆ ಅವರೆಲ್ಲರಿಗೂ ವಿಶೇಷವಾದ ಪ್ರೀತಿ. 






ಸದ್ಯಕ್ಕೆ ಕೊಹ್ಲಿ ಮತ್ತು ರೋಹಿತ್ ತಂಡದಲ್ಲಿ ಹಿರಿಯಣ್ಣನ ತರಹ ಇದ್ದಾರೆ.ಪ್ಲೇಯಿಂಗ್ ಲೆಜೆಂಡ್ಸ್ ಅವರಿಬ್ಬರು.ನನ್ನಲ್ಲಿ ನೀವು ನಿನಗೆ ಕೊಹ್ಲಿ ಒಳ್ಳೆಯ ಆಟಗಾರನಾ ಅಥವಾ ರೋಹಿತ್ ಒಳ್ಳೆಯ ಆಟಗಾರನಾ.. ಎಂದು ಕೇಳಿದರೆ ನಾನು ಖಂಡಿತವಾಗಿಯೂ  ಕೊಹ್ಲಿಯೇ ರೋಹಿತ್ ಗಿಂತಲೂ ಒಳ್ಳೆಯ ಆಟಗಾರ ಎಂದು ನೇರವಾಗಿ ಹೇಳಬಲ್ಲೆ. ಆದರೆ ಅವರಿಬ್ಬರಲ್ಲಿ ಯಾರು ನಿನಗೆ ಇಷ್ಟ ಎಂದು ಕೇಳಿದರೆ ಮನಸ್ಸು ಎಂದಿಗೂ ಶರ್ಮರ ಹುಡುಗನ ಹೆಸರೇ ಹೇಳುತ್ತದೆ. ಯಾಕೋ ಗೊತ್ತಿಲ್ಲ ಕೆಲವೊಮ್ಮೆ ಅತಿಯಾದ ಉದಾಸೀನದ ಮಾರಿಯಂತೆ ಕಂಡು ಬಂದರೂ ಕೂಡ ನನಗೆ ರೋಹಿತ್ ಶರ್ಮನೇ ಇಷ್ಟ.


ರೋಹಿತ್ ಆಡುತ್ತಿದ್ದಷ್ಟು ಹೊತ್ತು ಟಿವಿ ಮುಂದೆ ಕೂರುವ, ಮೊಬೈಲ್ ಗೆ ಕ್ಷಣ ಬಿಡದೇ ಜೋತು ಬೀಳುವ ಎಂದು ಆಗುತ್ತದೆ. ಆದರೆ ಅವನು ಔಟಾದರೆ ಹಿಂದೆ ಸಚಿನ್ ಔಟಾಗಿ ಹೋಗುತ್ತಿದ್ದಾಗ ಆಗುತ್ತಿತ್ತಲ್ಲ ಆದೇ  ತರಹದ ನಿರಾಸೆಯ ಫೀಲ್ ಇನ್ನಿಲ್ಲದಂತೆ ಆವರಿಸಿ ಬಿಡುತ್ತದೆ.




ಭಾರತೀಯ ಹಿರಿಯ ಆಟಗಾರರು ಹಾಗೂ ವಿಶ್ವದ ಕ್ರಿಕೆಟ್ ದಿಗ್ಗಜರು ರೋಹಿತ್ ನ Effortless ಹೊಡೆತಗಳಿಗಾಗಿ ಅವನನ್ನು ವಿಶೇಷವಾಗಿ ಕೊಂಡಾಡುತ್ತಾರೆ. ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಹಾಗೂ ಲಕ್ಷ್ಮಣ್ ನ ನೆಚ್ಚಿನ ಆಟಗಾರ ರೋಹಿತ್. ಸುನೀಲ್ ಗಾವಸ್ಕರ್ ಈ ರೋಹಿತ್ ಶರ್ಮ ಒಂಥರಾ ಸೆಹ್ವಾಗ್ ಮತ್ತು ವಿವಿಯನ್ ರಿಚರ್ಡ್ಸ್ ನ ಸಮ್ಮಿಲನ ಇದ್ದ ಹಾಗೆ ಎಂದು ಹೇಳುತ್ತಾರೆ.ಸ್ವತಃ ರನ್ ಮೆಶೀನ್ ಕೊಹ್ಲಿ ಕೂಡ ಪ್ರಶಂಸಿಲು ಅವಕಾಶ ಸಿಕ್ಕಾಗಲೆಲ್ಲ ರೋಹಿತ್ ಅನ್ನು ಮನಸಾರೆ ಹಾಡಿ ಹೊಗಳಿದ್ದಾನೆ.ಒಮ್ಮೆ ಇರ್ಫಾನ್ ಪಠಾಣ್ ಹೇಳಿದ ಈ ಮಾತು ಎಷ್ಟು ಸೊಗಸಾಗಿದೆ ನೋಡಿ..


" Sometime I feel Rohit is not a cricketer, but a poet. He bats as smooth as butter, like a poem. The bowlers don’t even realise that he is slamming, and he keeps on slamming.."



ಶರ್ಮರ ಹುಡುಗ ಇನ್ನಷ್ಟು ಚಂದ ಮಾಡಿ ಆಡಲಿ.ಕಲಾತ್ಮಕತೆಯ ಕವರ್ ಡ್ರೈವ್,ಕ್ವಿಕ್ ಆದ ಸ್ಕ್ವೇರ್ ಕಟ್,ನಯವಾದ ಲೆಗ್ ಗ್ಲಾನ್ಸ್, ನಯನ ಮನೋಹರ ಸ್ಟ್ರೈಟ್ ಡ್ರೈವ್, ಎಂದಿನಂತೆ ನೀರು ಕುಡಿದಷ್ಟು ಸುಲಭದ ಫುಲ್ ಶಾಟ್ ಇನ್ನಷ್ಟು ಹೊರ ಹೊಮ್ಮಲಿ..


ಕ್ರಿಕೆಟ್ ಅನ್ನು ಕ್ರಿಕೆಟ್ ಅಂತೆ ಕಾಣುವ,ಅದರ ಕಲಾತ್ಮಕತೆಯನ್ನು ಆರಾಧಿಸುವ ಯಾವುದೇ ಕ್ರಿಕೆಟ್ ಅಭಿಮಾನಿ ರೋಹಿತ್ ಮಾತ್ರವಲ್ಲ ಯಾವುದೇ ಆಟಗಾರನನ್ನು ಎಂದಿಗೂ  ದ್ವೇಷಿಸಲಾರ.ಬಹುಶಃ ಇಂದು ಐಪಿಎಲ್ ಎಂಬುವುದೇ ಇರದಿದ್ದರೆ, ಇದ್ದರೂ ಐಪಿಎಲ್ ನಲ್ಲಿ ರೋಹಿತ್ ನಾಯಕನಾಗಿ ಅಷ್ಟೊಂದು ಕಪ್ ಗಳನ್ನು ಗೆಲ್ಲದಿದ್ದರೆ... ಖಂಡಿತವಾಗಿಯೂ ಇಂದು ರೋಹಿತ್ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಷ್ಟೇ ಇಷ್ಟ ಆಗುತ್ತಿದ್ದ! 


ಸುಂದರ ಹೊಡೆತಗಳ ಓಪನರ್, ಏಕದಿನ ಪಂದ್ಯ ಒಂದರಲ್ಲಿ ಅತ್ಯಧಿಕ 264  ರನ್ನುಗಳ ಹೊಳೆ ಹರಸಿದ ಬ್ಯಾಟ್ಸ್‌ಮನ್,ಮೂರು ಬಾರಿ ಏಕದಿನದಲ್ಲಿ ದ್ವಿಶತಕದ ಸಾಧನೆ, ವಿಶ್ವ ಕಪ್ ಒಂದರಲ್ಲಿ ಐದು ಶತಕಗಳ ಅಮೋಘ ಪರಾಕ್ರಮ,ಕ್ರಿಕೆಟ್ ನ ಮೂರು ಫಾರ್ಮೆಟ್ ಗಳಲ್ಲೂ ಕೂಡ ಶತಕದ ಗೊಂಚಲು,ಇನ್ನೂ ಹತ್ತು ಹಲವಾರು ನೆನಪಿಡಲಾಗದ  ದಾಖಲೆಗಳು,ಭಾರತದಲ್ಲಿ Rhinoceros ಗಳ ರಾಯಭಾರಿ,ತನ್ನದು ಯಾವಾಗಲೂ 45 ನೇ ನಂಬರ್ ಜೆರ್ಸಿ ಎಂದು ಹೇಳಿಕೊಂಡು ಸದ್ಯಕ್ಕೆ ಫಾರ್ಮ್ ನ ಉತ್ತುಂಗದಲ್ಲಿ ಒಡ್ಡೋಲಗ ನಡೆಸುತ್ತಿರುವ ನನ್ನಿಷ್ಟದ ಆಟಗಾರ  Rohith Gurunath Sharma ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. 


#Happy_Birthady_RoHit 💙🎉🎂

Hitman_fan_Ab_Pacchu



#Cricket

Ab Pacchu

Moodubidire

(https://phalgunikadeyavanu.blogspot.com) 

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..