ಚಿರಂಜೀವಿ.. !

 

.



                                   #ಚಿರಂಜೀವಿ..!



ಬಸ್ಸ್ ವೀಂಡೋ ಸೀಟಿನ ಗಾಳಿ ಸದಾ ತಂಪು..


ಆದರೆ ಅದನ್ನು ಅನುಭವಿಸಲು ಮನಸ್ಸು ಮಾತ್ರ  ಪ್ರಶಾಂತವಾಗಿರಬೇಕು!


ಮನಸ್ಸು ಕ್ಷೋಭೆಗೆ ಒಳಗಾಗಿದ್ದರೆ ಯಾವುದೂ ಹಿತವೆನಿಸುವುದಿಲ್ಲ..!!


ಕೊಟ್ಟರೆ ಒಂದು ಚೊಂಬು ಸಿಹಿ ಕೂಡ ಕಹಿ... ಒಂದು ತೊಟ್ಟು ಅಮೃತ ಕೂಡ ವಿಷ ಅನಿಸುವುದು ಆವಾಗಲೇ!


ದಿನಾಲೂ ಬಸ್ಸಿನಲ್ಲಿ ಹೋಗುವಾಗ ಬೇರೆಯವರಿಗೆ ಏನು ಅನಿಸುತ್ತದೋ ನನಗದು ಗೊತ್ತಿಲ್ಲ.


ಬಸ್ ವಿಂಡೋದಿಂದ ಕೆಲವರಿಗೆ ಹೊರಗಿನ ಪ್ರಪಂಚ ಇಷ್ಟ ಆಗಬಹುದು.


ಇನ್ನು ಕೆಲವರಿಗೆ ತಮ್ಮ ಕಿವಿಗೆ ಅಷ್ಟೇ ಕೇಳಿಸುವ ಹಾಡು.. ಪಕ್ಕದಲ್ಲಿರುವ ಗೆಳೆಯನ ಹಾಸ್ಯದ ಮಾತು, ಗೆಳತಿಯ ಪಿಸು  ಮಾತು ಇಷ್ಟ ಆಗಬಹುದು. 


ಆದರೆ ನನಗೆ ಈ ರೀತಿ ಎಲ್ಲ ಆಗುವುದಿಲ್ಲ..


ನದಿ ಮೇಲಿನ ಬ್ರಿಡ್ಜ್ ಮೇಲೆ ನಮ್ಮ ಬಸ್ ಹೋಗುವಾಗಲೆಲ್ಲ....


ಬ್ರಿಡ್ಜ್ ಮುರಿದು ಬಸ್ ನದಿಗೆ ಬಿದ್ದು ದೊಡ್ಡ Accident ಆಗಬಾರದೇ ಎಂದೇ ಪ್ರತೀ ಸಲ ಅನಿಸುತ್ತದೆ..!!


ಯಾರೂ ಕೂಡ ಸಾಯದೇ ನಾನೊಬ್ಬ,ಹೌದು ನಾನೊಬ್ಬ ಮಾತ್ರ ಹಾಗೇ ಸತ್ತು ಹೋಗಿಬಿಡಬೇಕು ಎಂದು ನಾನು ಪ್ರತೀ ಸಲ ಬಯಸುತ್ತೇನೆ!


ದೇವರಲ್ಲಿ ಹಾಗೇ ಆಗಲಿ ಎಂದು ಶ್ರದ್ಧೆಯಿಂದ ಅನುದಿನವೂ ಕೈ ಮುಗಿದು ಕೇಳುತ್ತೇನೆ..


ಆದರೆ ಅವನಿಗೆ ಅದು ಎಲ್ಲಿ ಕೇಳುತ್ತದೆ?


ಕೆಲವೊಮ್ಮೆ ಅವನಿಗೆ ಕಿವಿಯೂ ಕೇಳುವುದಿಲ್ಲ..


ಕಣ್ಣೂ ಕಾಣುವುದಿಲ್ಲ..!


ಅವನು ಕಣ್ತೆರೆದು ನೋಡುವಂತಿದ್ದರೆ.. ಯಾರಿಗೂ ನೋವು  ಎನ್ನುವುದೇ ಇರುತ್ತಿರಲಿಲ್ಲ ಇಲ್ಲಿ!


ಹೌದು ದೇವರಿಗೆ ನನ್ನ ಮನವಿ ಎಂದೂ ತಲುಪಿಲ್ಲ..


ಹಾಗಾಗಿ ಬ್ರಿಡ್ಜ್ ಇನ್ನೂ ಮುರಿದಿಲ್ಲ..


ನಾನು ಹೋಗುವ ಬಸ್ಸ್ ಕೂಡ ನದಿಯಲ್ಲಿ ಎಂದೂ  ಮುಳುಗಿಲ್ಲ..!


ಬ್ರಿಡ್ಜ್ ಹಳೆಯದಾದರೂ ಬಲಿಷ್ಟವಾಗಿಯೇ ಇದೆ. 


ಆದರೆ ನಾನು ಬಲಿಷ್ಟವಾಗಿಲ್ಲ ಅಷ್ಟೇ!


ಒಳಗೂ.. ಹೊರಗೂ! 


ಈ ರೀತಿ ಎಲ್ಲಾ ಆದರೂ ಒಂದು ಅಪಘಾತ ಆಗಿ ಪ್ರಾಣ ಹೋಗಲಿ ಎನ್ನುವುದು ನನ್ನ ಪ್ರಾರ್ಥನೆ ಮಾತ್ರವಲ್ಲ.. ಅದು ನನ್ನ ಬಹುದಿನದ ಮನವಿ,ಕೊನೆಯ ಕೋರಿಕೆ,ಪ್ರತಿ ನಿತ್ಯದ ಬೇಡಿಕೆ,ಮುಕ್ತಿಯ ಮಾರ್ಗ.. ಎಲ್ಲವೂ ಹೌದು..! 


ಸಾಯಲು ಆಸೆ ಎಂದಲ್ಲ...


ಬದುಕುವ ಮನಸ್ಸಿಲ್ಲ..! 


ಆತ್ಮಹತ್ಯೆ ಮಹಾ ಪಾಪವಂತೆ...


ಆದರೆ ದಿನಾವೂ ನರಳಿ ನರಳಿ ಬದುಕುವುದು ಅದೆಂತಹ ಸ್ವರ್ಗ?


ಮನೆಯ ಮೇಲೆ ಜೋರಾಗಿ ಸಿಡಿಲು ಬಡಿಯುವಾಗ ಅಂಗಳದಲ್ಲಿ,ಗದ್ದೆಯಲ್ಲಿ,ಇಲ್ಲವೇ ಗುಡ್ಡದ ಮೇಲೆ ಹೋಗಿ ಹಾಗೇ ಕೋಲ್ಮಿಂಚಿಗೆ ಮೈಯೊಡ್ಡಿ ಆಸೆಯಿಂದ ನಿಂತು ಕೊಳ್ಳುತ್ತೇನೆ...


ಹಾಳಾದ ಸಿಡಿಲು... ನನಗೆ ಬಡಿಯುವುದೇ ಇಲ್ಲ!


ಫಲ ಕೊಡುವ ಮನೆಯ ಎರಡು ತೆಂಗಿನ ಮರವನ್ನಷ್ಟೇ ಅದು  ಸುಟ್ಟು ಹಾಕಿ ಸುಮ್ಮನೆ ಎದ್ದು ಹೋಗಿದೆ ಅಷ್ಟೇ..!


ನನ್ನ ಮೇಲೆ ಅದರ ದೃಷ್ಟಿಯೂ ಬಿದ್ದಿಲ್ಲ.. 


ಅದರ ಕೈಯಿಂದ ಕೂಡ ಆಗುವುದು ಅಷ್ಟೇ..! 


ಸಿಡಿಯಲು ನನಗೆ ಬಡಿಯದಿದ್ದರೂ ನಾನು ಮಾತ್ರ ಒಳಗೊಳಗೆ ಇನ್ನೂ ಸುಡುತ್ತಲೇ ಇದ್ದೇನೆ..ಆದರೆ ಇನ್ನೂ ಬೂದಿಯಾಗಿಲ್ಲ!


ಒಂದು ದಿನ ಆಗುತ್ತೇನೆ..


ಆದರೆ ಅಷ್ಟರವರೆಗೆ  ಕಾಯುವ ಅಂತಹ ತಾಳ್ಮೆ,ಅಷ್ಟೊಂದು ವ್ಯವಧಾನ ನನಗಿಲ್ಲ!


ಒಡಲೊಳಗೆ ದಿನಾ ಸುಡುವವನಿಗೆ ಸಿಡಿಲು ಕೂಡ  ಬಡಿಯುವುದಿಲ್ಲವೆನೋ..?!


ನನ್ನೊಳಗೊಂದು ಸದಾ ಸಿಡಿಲು..


ನನಗಷ್ಟೇ ಬಡಿಯುತ್ತದೆ..


ಆದರೆ ನನ್ನನ್ನು ಸುಟ್ಟು ಬೂದಿ ಮಾಡುತ್ತಿಲ್ಲ!


ಅಂದು ಶುಕ್ರವಾರ.


ದೇವಿ ಲಕ್ಷೀಯದ್ದೇ  ದಿನ.


ಬೆಳೆದು ನಿಂತ ಮಗಳು ಎಂದಿನಂತೆ..ದೇವರಿಗೆ ಕೈ ಮುಗಿದು... ಕಾಲೇಜಿಗೆ ಹೋಗಿ ಬರುತ್ತೇನೆ ಅಪ್ಪ ... ಎಂದು ನಗು ನಗುತ್ತಲೇ ಹೇಳಿ ಕೈ ಬೀಸಿ ಕಾಲೇಜ್ ಗೆ ಹೋಗಿದ್ದಳು.


ತಡ ರಾತ್ರಿ ಕಾಲೇಜ್ ನಿಂದ ಮನೆಗೆ ಕೂಡ ಬಂದಿದ್ದಳು 


ಆದರೆ ಅವಳಲ್ಲಿನ ಬೆಲೆ ಕಟ್ಟಲಾಗದ ಶೀಲ ಎನ್ನುವುದು ಮಾತ್ರ ಇನ್ನಿಲ್ಲದಂತೆ ಅಪಹರಣವಾಗಿತ್ತು!! 


ನಾನು ಒಬ್ಬ ಹೆಣ್ಣು ಮಗುವಿನ ತಂದೆ..


ತುಂಬಾ ಪ್ರೀತಿಯಿಂದ ಅವಳನ್ನು ನನ್ನ ಕೈಯಾರೆ ಆಡಿಸಿ ಬೆಳೆಸಿದ್ದೆ. 


ಮನೆಯ ಮಗನಿಗಿಂತಲೂ ಹೆಚ್ಚಿನ ಪ್ರೀತಿಯನ್ನು ಅವಳಿಗೆಯೇ  ಧಾರೆ ಎರೆದಿದ್ದೆ. 


ಮಗಳ ಕಣ್ಣೀರನ್ನು ನೋಡಿ ಎಷ್ಟು ಎಂದು ನಾನು ಸಹಿಸಿಕೊಳ್ಳಲಿ..! 


ಕೊನೆಗೆ ಮಗಳು ಅಪಮಾನ ಸಹಿಸಿಕೊಳ್ಳಲು ಆಗದೆ ಕುಗ್ಗಿ ಹೋಗಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಳು.


ದೇವರು ದೊಡ್ಡವನು.. 


ಅವಳು ಸಾಯಲಿಲ್ಲ! 


ನಾನೇ ತಪ್ಪಿಸಿದೆ...


ಒಂದು ಕಡೆ ಕುಳ್ಳಿರಿಸಿ ಚಂದಗೆ ಬುದ್ಧಿವಾದ ಹೇಳಿದೆ.


ಆದರೆ ಸಮಾಧಾನ.?


ಏನೆಂದು ಸಮಾಧಾನ ಹೇಳಲಿ.. 


ಯಾವ ರೀತಿಯಾಗಿ ಸಮಾಧಾನ ಹೇಳಲಿ!


ನನ್ನ ಮಗಳ ತಪ್ಪಾದರೂ ಏನಿತ್ತು? 


ಯಾರೋ ನೀಚ ಕಾಮಂಧರ ವಾಂಛೆಗೆ ನನ್ನ ಮುಗ್ಧ ಮಗು ಬಲಿಯಾಗಿತ್ತು..!


ಸಮಾಜ ನಮ್ಮನ್ನು.. ನನ್ನ ಮಗಳನ್ನು ನೋಡುವ ದೃಷ್ಟಿ ಬದಲಾಯಿತು..!


ನಾನಾದರೂ ಸಹಿಸಿಕೊಳ್ಳಬಲ್ಲೆ..


ಆದರೆ ನನ್ನ ಮಗಳು?


ಎಳೆಯ ಪ್ರಾಯ..


ಮುಗ್ಧ ಮನಸ್ಸು.. 


ಹೇಗೆ ತಾನೇ ಸಹಿಸುತ್ತಾಳೆ.. 


ಅವಳು ಕಾಲೇಜ್ ಬಿಟ್ಟಳು..


ಕೊನೆಗೆ ನಮ್ಮೆಲ್ಲರಲ್ಲಿ ಮಾತು ಕೂಡ ಬಿಟ್ಟಳು..!


ಮನೆಯ ಕೋಣೆಯ ನಾಲ್ಕು ಗೋಡೆಗಳ ನಡುವೆ ಕಣ್ಣೀರಿನೊಂದಿಗೆ ಅವಳಷ್ಟಕ್ಕೆ ಅವಳನ್ನು ಬಂಧಿ ಮಾಡಿಕೊಂಡಳು..!


ಮನೆಯ ಹೆಣ್ಣು ಲಕ್ಷೀ ಇದ್ದಂತೆ..


ನಮ್ಮ ಮನೆಯ ಲಕ್ಷೀ, ಸರಸ್ವತಿ, ಕಾಳಿ ಎಲ್ಲವೂ ಅವಳೇ ಆಗಿದ್ದಳು..


ಆದರೆ ಯಾರದ್ದೋ ಕ್ಷಣ ಮಾತ್ರದ ತೃಷೆಗೆ ಅವಳು ಆ ಒಂದು  ದಿನದಿಂದ ಬರೀ ಮೌನಿ ಆದಳು!


ನಾನು... ನಾನು ಒಬ್ಬ ಹೆಣ್ಣು ಮಗಳ ಅಪ್ಪ..


ಅವಳ ಕಣ್ಣೀರು ಸುರಿಸುವುದನ್ನು ಎಷ್ಟು ಎಂದು ನೋಡಲಿ..! 


ಸಾಯುವುದು ಬೇಡ ಮಗಳೇ ಎಂದು ಬಾರಿ ಬಾರಿ ಅವಳಿಗೆ ಹೇಳಿದವನಿಗೂ ಕೂಡ... 


ಇಲ್ಲ.. ಕೊನೆಗೊಮ್ಮೆ ಎಲ್ಲರೂ ಒಟ್ಟಿಗೆ ಸಾಮೂಹಿಕವಾಗಿಯೇ ಸತ್ತು ಹೋಗಿ ಬಿಡುವುದೇ ಒಳ್ಳೆಯದೆಂದು,ಈ ನೋವಿಗೆ ಅದೇ ಶಾಶ್ವತವಾದ ಮದ್ದು ಎಂದು.. ಯಾವುದೋ ವಿಷ ಘಳಿಗೆಯಲ್ಲಿ ಅನ್ನಿಸಿ ಬಿಟ್ಟಿತು. 


ಆದರೆ ಅದನ್ನು ಯಾರಿಗೂ ನಾನು ಹೇಳಲಿಲ್ಲ..! 


ಬೇಗನೆ ಸತ್ತು ಸ್ವರ್ಗ ಸೇರಬಹುದಾದ ವಿಷದ ಬಾಟಲಿಯೊಂದನ್ನೇ ಹುಡುಕಿದೆ..


" ಸ್ವರ್ಗಕ್ಕೆ ಒಂದೇ ಗೇಣು.. " ಎಂಬ ಚಂದದ ಲೇಬಲ್ ಕೂಡ ಅಂಟಿಸಿದ್ದರು.


ಅದೇ ವಿಷದ ಬಾಟಲ್ ಇಷ್ಟ ಆಯಿತು.


ಕೊಂಡು ಮನೆಗೆ ತಂದೆ..! 


ಆ ದಿನ ವಿಷದ ಬಾಟಲಿಯಿಂದ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಅನ್ನಕ್ಕೆ,ಪಲ್ಯಕ್ಕೆ ಬೇಕಾದಷ್ಟು ವಿಷ ಶ್ರದ್ಧೆಯಿಂದ ಬೆರೆಸಿದೆ..!!


ಸಾವಿಗಾಗಿ ಸಿಧ್ಧತೆ.. .


ಸ್ವರ್ಗಕ್ಕಾಗಿಯೇ  ಭೋಜನ.


"ಸ್ವರ್ಗಕ್ಕೆ ಒಂದೇ ಗೇಣು.. " ಬಾಟಲಿ ಲೇಬಲ್  ನನ್ನನ್ನು ನೋಡಿ ಅಣಕಿಸಿತು.


ಎಲ್ಲರನ್ನೂ ಸಾಯಿಸಿ... ನಾನೂ ಸತ್ತು... ಮಗಳ ನೋವಿನ ಬದುಕಿಗೊಂದು ಮುಕ್ತಿ ಹಾಡುವ ನಿರ್ಧಾರಕ್ಕೆ ನಾನು ಬಂದು ಆಗಿತ್ತು! 


ಆ ದಿನ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು.


ನಾನು,ಪ್ರೀತಿಸಿಯೇ ಮದುವೆ ಆದ ನನ್ನ ಪ್ರೀತಿಯ ಮಡದಿ,ಮುದ್ದಿನ ಮಗಳು,ಬೆಳೆದು ನಿಂತ ಹರೆಯದ ಮಗ,ವಯಸ್ಸಾದ ಅಪ್ಪ ಮತ್ತು ಜನ್ಮ ನೀಡಿದ ಅಮ್ಮ..!


ಎಲ್ಲರ ತಟ್ಟೆಯಲ್ಲಿ ವಿಷವಿತ್ತು.


ಮತ್ತು ವಿಷದ ತುತ್ತು ನಿಧಾನಕ್ಕೆ ಹೊಟ್ಟೆಗಿಳಿದಿತ್ತು! 


ಆ ರಾತ್ರಿ ಮನೆಯಲ್ಲಿನ ರಕ್ತ ವಾಂತಿ,ಆ ಕೂಗು,ಮಿತಿ ಮೀರಿದ ನೋವಿನ ಆಕ್ರಂಧನ ಕೇಳಿಸಿಕೊಂಡ ಪಕ್ಕದ ಮನೆಯವರೆಲ್ಲರೂ  ಓಡೋಡಿ ಬಂದರು. 


ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೂ ಸೇರಿಸಿದರು..


ಪಾಪಿ ಚಿರಾಯು..


ನಾನು ಬದಕುಕಿದೆ..


ಆದರೆ ವಿಧಿ ಏನೆಂದರೆ..ನಾನೊಬ್ಬನೇ ಬದುಕಿದೆ..!! 


ಬಾಕಿ ಎಲ್ಲರೂ ಸತ್ತರು...!!! 


ಬೇಗನೇ ಸತ್ತು ಸ್ವರ್ಗ ಸೇರಿಸಬಹುದಾದ ವಿಷ ಅವರೆಲ್ಲರನ್ನೂ ಬಹಳ ಶಿಸ್ತಿನಿಂದಲೇ ಒಂದೇ ಗೇಣಿನಲ್ಲಿ ಸ್ವರ್ಗಕ್ಕೆ ಸೇರಿಸಿತು...ಆದರೆ ಅದು ನನಗೆ ಮೋಸ ಮಾಡಿ.. ನನ್ನನ್ನು ಒಬ್ಬನನ್ನೇ.. ಬದುಕು ಮಗನೇ ಎಂದು ಹುಡುಕಿ ಹುಡುಕಿ ನನ್ನನ್ನೇ ಉಳಿಸಿ ಬಿಟ್ಟಿತು! 


ದೇವರು ದೊಡ್ಡವನು ಎಂದು ನನಗೆ ಆ ರಾತ್ರಿ ಅನಿಸಲೇ ಇಲ್ಲ!


ಯಾವ ಸುಖ ಅನುಭವಿಸಲು ನನ್ನನ್ನು ಒಬ್ಬನನ್ನೇ ಉಳಿಸಿದೆ ಎಂದು ಬಾರಿ ಬಾರಿ ಅವನಲ್ಲಿ ಕೇಳಿದೆ.


ಅವನು ಪ್ರತಿಯೊಂದಕ್ಕೂ ಉತ್ತರಿಸುತ್ತಿದ್ದರೆ.. ಕಣ್ಣು ಬಿಟ್ಟು ನೋಡುತ್ತಿದ್ದರೆ.. ನಾನು ಇಂದು ಇಷ್ಟೊಂದು ಕಣ್ಣೀರೇ ಆಗುತ್ತಿರಲಿಲ್ಲ..!


ನಾನೇ ಹೋಗಿ ಹೇಳಬೇಕಾದವರ ಮುಂದೆ ಎಲ್ಲವನ್ನೂ ಹೇಳಿ ನನ್ನ ತಪ್ಪನ್ನು ಒಪ್ಪಿಕೊಂಡೆ.. 


ನನ್ನ ತಪ್ಪಿಗೆ ತಕ್ಕ ಶಿಕ್ಷೆ ಕೂಡ ಆಯಿತು. 


ಕೊನೆಗೊಂದು ದಿನ ಇಷ್ಟವಿಲ್ಲದಿದ್ದರೂ ಬಿಡುಗಡೆಯೂ ಆಯಿತು.


ಯಾವ ಬಂಧನದಿಂದ ಬಿಡುಗಡೆ ಎಂದು ನನಗೆ ಗೊತ್ತೇ ಆಗಲಿಲ್ಲ..! 


ನನ್ನ ಪಾಲಿಗೆ ಹೊರಗೆ ಇರುವುದು,ಒಳಗೆ ಇರುವುದು ಎರಡೂ ಬಂಧನವೇ..


ಹೆಚ್ಚಿನ ವ್ಯತ್ಯಾಸ ಏನೂ ಇಲ್ಲ!!


ಯಾವ ಶಿಕ್ಷೆ,ಯಾವ ಬಂಧನದ ಬಿಡುಗಡೆಯೂ... ನನ್ನ ನೋವನ್ನು ಸುಲಭವಾಗಿ ಶಮನ ಮಾಡದು.


ಎಂದಿಗೂ...! 


ಬದುಕುವುದಕ್ಕೆ ಕಾರಣಗಳು ಬೇಕು.. 


ಸಾಯುವುದಕ್ಕೆ ನೋವುಗಳು ಸಾಕು..! 


ಅದರಲ್ಲೂ ಇಂತಹ ನೋವು ಒಂದು ಇದ್ದು ಬಿಟ್ಟರೆ .. ಅಂತಹ ಬದುಕು ಇನ್ನೇತಕೆ ಬೇಕು?!


ಫಿಲೋಸಪಿ ಮಾತುಗಳು ಕೇಳಲು,ಹೇಳಲು ಬಹಳ ಚಂದ..


ಸ್ವಂತ ಮಗಳೇ ಒಂದು ದಿನ ಕಾಲು ಹಿಡಿದು.. "  ಅಪ್ಪಾ.. ನನ್ನನ್ನು ಕೊಂದು ಹಾಕಪ್ಪ... ನನಗೆ ಬದುಕುವ ಮನಸ್ಸಿಲ್ಲ.." ಎಂದು ಕಣ್ಣೀರಾಗಿ ಹೇಳಿ ಬಿಟ್ಟರೆ ಯಾವ ತಂದೆ ಆದರೂ ತನ್ನ ನೋವನ್ನು ಎಷ್ಟು ಎಂದು ಸಹಿಸಿಕೊಳ್ಳ ಬಲ್ಲ ನೀವೇ ಹೇಳಿ!


ಈಗ ಬಸ್ ನಲ್ಲಿಯೇ ಇದ್ದೇನೆ..


ವಿಂಡೋ ಪಕ್ಕವೇ ಕುಳಿತುಕೊಂಡಿದ್ದೇನೆ.


ವಿಂಡೋ ಸೀಟಿನ ಗಾಳಿ ಸದಾ ತಂಪು ಎಂದು ನನಗೆ ಅನಿಸುತ್ತಿಲ್ಲ..


ಕಾರಣ ಮನಸ್ಸು ಪ್ರಶಾಂತವಾಗಿಲ್ಲ..!


ಕಡಲಿನ ಅಲೆಗಳ ಪ್ರಕ್ಷುಬ್ಧತೆ... ಕಡಲಾಳದ ನಿಶಬ್ಧತೆ ಎರಡೂ ನನ್ನಲ್ಲಿಯೇ ಇದೆ..!


ಆವಾಗವಾಗ ಮನಸ್ಸಿನಲ್ಲಿ ಏಳುವ ಅಲೆಗಳು ಅಪ್ಪಳಿಸಿ ಅಪ್ಪಳಿಸಿ ನನಗೆ ಕೇಳುತ್ತಿದೆ... 


ಎಲ್ಲರನ್ನು ಕೊಂದು ಇನ್ನೂ ಏತಕೆ ಬದುಕಿರುವೆ ನೀನು?


ಸರಿಯಾದ ಪ್ರಶ್ನೆಯೇ ಅದು..


ನನ್ನ ಪಾಲಿನ ಉತ್ತರ ನಾನೇ ಹೇಳಬೇಕು....!


ವಿಧಿ ನನಗೆ ಮೋಸ ಮಾಡಿದೆ..


ನನ್ನನ್ನು ಉಳಿಸಿದೆ..!


ಹೌದು ಎಲ್ಲರನ್ನೂ ಕಿತ್ತುಕೊಂಡು ಬರೀ ನನ್ನನ್ನು ಒಬ್ಬನನ್ನೇ ಉಳಿಸಿದೆ!


ಕೆಲವರ ಬಾಳಿನಲ್ಲಿ ವಿಧಿ ಉಳಿಸಿ ಬಿಟ್ಟರೆ ಅದು ಅವರಿಗೆ ಮರು ಜೀವನ..


ನನ್ನ ಬಾಳಿನಲ್ಲಿ ವಿಧಿ ಉಳಿಸಿದ್ದೇ ನನಗದು ಮಾಡಿದ ಎರಡನೇ ಅತೀ ಘೋರ ಅನ್ಯಾಯ!


ಎಷ್ಟು ವಿಚಿತ್ರ ಅಲ್ವಾ ಬಾಳು..


ಕೆಲವರು ಬದುಕುವುದಕ್ಕಾಗಿಯೇ ಬದುಕುತ್ತಾರೆ...ಆದರೂ ಬದುಕುವುದಿಲ್ಲ! 


ಕೆಲವರು ಸಾಯುವುದಕ್ಕಾಗಿಯೇ ಬದುಕುತ್ತಾರೆ... ಆದರೂ ಸಾಯುವುದಿಲ್ಲ!! 


ನಮ್ಮ ನಿರ್ಧಾರಕ್ಕೆ ಬದುಕು ಕೆಲವೊಮ್ಮೆ ತಲೆ ಬಾಗುವುದೇ ಇಲ್ಲ.


ನನ್ನ ಆಸೆಯೇ ಮಗನಿಗೂ ಇತ್ತು.. "ಅಪ್ಪ.. ಕೆಲಸ ಸಿಕ್ಕಿದ ಕೂಡಲೇ.. ನಾವು ದೊಡ್ಡದೊಂದು ಮನೆ ಕಟ್ಟುವ.. ಅಕ್ಕನ ಮದುವೆ ಕೂಡ ಗ್ರ್ಯಾಂಡ್ ಆಗಿ ಮಾಡುವ ಅಪ್ಪ.." ಎಂದು ಮುಗ್ಧವಾಗಿ ಹೇಳಿದ್ದ ನನ್ನ ಬೆಳೆದು ನಿಂತ ಜವಾಬ್ದಾರಿಯ ಮಗ.


ನನ್ನ ಮಡದಿ ಅಂದು  " ಇವರೇ.. ನಿಮಗೆ ಶ್ಯಾವಿಗೆ ಪಾಯಸ ತುಂಬಾ ಇಷ್ಟ ಅಲ್ವೇ .. ಈ ರಾತ್ರಿಗೆ ಶ್ಯಾವಿಗೆ ಪಾಯಸವೇ ಮಾಡಲೇ ನಾನು.." ಎಂದು ಪ್ರೀತಿಯಿಂದ ಕೇಳಿದ್ದಳು.ಅವಳಿಗೆ ನನ್ನ ಸುಖವೇ ಅವಳ ಸುಖವಾಗಿತ್ತು.ವಿಪರ್ಯಾಸ ಏನೆಂದರೆ ಅವಳನ್ನು ವಿಷ ತಿನ್ನಿಸಿಯೇ ಕೊಂದವನು ನಾನು! 



ಅಪ್ಪ ಅಮ್ಮನಿಗೆ ಕಾಶಿ ವಿಶ್ವನಾಥ ಪದೇ ಪದೇ ನೆನಪಾಗುತ್ತಿದ್ದ ..."  ಮಗನೇ ಅಶ್ವತ್ಥಾಮ... ಒಮ್ಮೆ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕರೆದುಕೊಂಡು ಹೋಗಲಾರೆಯಾ ನಮ್ಮನ್ನು ..ನಮ್ಮಪ್ಪ ವಿಶ್ವನಾಥನನ್ನು ಒಮ್ಮೆ ಕೊನೆಯ ಬಾರಿಗೆ ನೋಡಿಕೊಂಡು ಹಾಗೇ ಇಬ್ಬರೂ ಸುಖವಾಗಿ ಪ್ರಾಣ ಬಿಡುತ್ತೇವೆ.. ನಮ್ಮಾಸೆ ಎಂದು ಪೂರೈಸುವೆ ಅಶ್ವತ್ಥಾಮ .. " ಎಂದು ಪದೇ ಪದೇ ಹೇಳುತ್ತಿದ್ದರು ನನ್ನ ಅಪ್ಪ ಮತ್ತು ಅಮ್ಮ. 


ನಾನು ಯಾರ ಆಸೆ ಪೊರೈಸಿದ್ದೆ ಎಂದು ನನಗೇ ಗೊತ್ತಾಗಲಿಲ್ಲ!


ಯಾರು ಸುಖವಾಗಿ ಸತ್ತರೋ..?


ನಾನಂತು ಸುಖವಾಗಿ ಬದುಕಿ ಉಳಿದಿಲ್ಲ!


ಕ್ಷಣ ಕ್ಷಣವೂ ಸತ್ತು ಸತ್ತು ಬದುಕುತ್ತಿದ್ದೇನೆ. 


ಬಸ್ ಅದರಷ್ಟಕ್ಕೆ ಗಾಳಿ ಸೀಳಿಕೊಂಡು ಮುಂದೆ ಮುಂದೆ ಹೋಗುತ್ತಿದೆ..


ಕೊನೆಯ ನಿರ್ಧಾರಕ್ಕೆ ಬಂದವನೇ ವೀಂಡೋ ಸೀಟಿನಿಂದ ಎದ್ದು  ಬಸ್ಸಿನ ಡೋರ್ ನಲ್ಲಿ ಬಂದು  ನಿಂತು ಕೊಂಡಿದ್ದೇನೆ ಈಗ. 


ಮುಂದೆ ನದಿಯ ಮೇಲಿನ ಅದೇ ಹಳೆಯ ಬ್ರಿಡ್ಜ್ ಮೇಲೆಯೇ  ಬಸ್ ಹೋಗುತ್ತದೆ. 


ನನಗೆ ಚೆನ್ನಾಗಿ ಗೊತ್ತಿದೆ... ಬ್ರಿಡ್ಜ್ ಮುರಿಯುವುದಿಲ್ಲ..ನಾನು ಸದಾ ಎನಿಸಿದಂತೆ ಅಲ್ಲಿ ಅಂತಹ ಯಾವುದೇ Accident ಕೂಡ ಎಂದಿಗೂ ಆಗುವುದಿಲ್ಲ.. 


ಅದಕ್ಕಾಗಿ ನದಿ ಹತ್ತಿರವಾದಾಗ ನಾನೇ ಬಸ್ ಡೋರಿನಿಂದ ಕೆಳಗೆ ರಭಸವಾಗಿ ಹರಿಯುವ ನದಿಗೆ ಜಿಗಿದು ಬಿಡುತ್ತೇನೆ..!


ಈ ಬಾಳಿಗೊಂದು ಶಾಶ್ವತವಾದ ಮುಕ್ತಿ ಹಾಡುತ್ತೇನೆ..!!


ಈ ಬಾಳಿಗೆ ಅದೇ ನನ್ನ ಉತ್ತರ...!


ಇದೇ ನನ್ನ ಕಟ್ಟ ಕಡೆಯ ನಿರ್ಧಾರ!!


ಮುಂದಿನ ಬಾಗಿಲಿನಲ್ಲಿ ಇದ್ದ ಬಸ್ ಕಂಡಕ್ಟರ್ ನನ್ನನ್ನು ನೋಡಿ ಸಿಟ್ಟಿನಿಂದ ಜೋರಾಗಿಯೇ ನನಗೇ ಕೂಗಿ ಹೇಳ್ತಾ ಇದ್ದಾನೆ.. 


" ಮೇಲೆ ಬನ್ನಿ.. ಯಾಕೆ... ಡೋರ್ ನಲ್ಲಿ ನೇತಾಡಿ ಸಾಯ್ತೀರಾ..." 


ಕಂಡಕ್ಟರ್ ಗೆ ಏನು ಗೊತ್ತು...


ನಾನು ನೇತಾಡಿ ಸಾಯಲ್ಲ... ಕೆಳಗೆ ಹಾರಿಯೇ ಸಾಯ್ತೇನೆ ಎಂದು.. !


ಕೊನೆಗೂ ನನ್ನ ಆಸೆಯಂತೆ ಬಸ್ ಬ್ರಿಡ್ಜ್ ಮೇಲೆ ಬಂದೇ ಬಿಟ್ಟಿತು..!!


ಅಂದಹಾಗೆ... ದೇವರ ದಯೆಯಿಂದ ನನಗೆ ಈಜು ಬರುವುದಿಲ್ಲ..!!


ಬ್ರಿಡ್ಜ್  ಬಂತು..


ಕಣ್ಣು ಮುಚ್ಚಿ ನದಿಗೆ ಹಾರಿಯೇ ಬಿಟ್ಟೆ ...!!


ಕೆಲವೇ ಕ್ಷಣಗಳಲ್ಲಿ ಅಂತಹ ರಭಸವಾಗಿ ಹರಿಯುವ ನದಿಯಿಂದಲೂ ಯಾರೋ ಒಬ್ಬರು ನನ್ನನ್ನು ದಡಕ್ಕೆ ಎಳೆದು ತಂದು ಹಾಕಿ ಬಿಟ್ಟರು..!! 


ನನಗೆ ಜೀವನದಲ್ಲಿ ಸಾಯುವ ಭಾಗ್ಯವೇ ಇಲ್ಲ..!!


ಅದ್ಯಾಕೆ ಇಷ್ಟೊಂದು ಪಾಪಿ ನಾನು..?! 




.....................................................................................


#ಇಷ್ಟೇ_ಕಥೆ .!


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ